close logo

ಕನ್ನಡದಲ್ಲಿ ತಿರುಪ್ಪಾವೈ ಲೇಖನಮಾಲೆ – ಪಾಶುರಂ 24

ಚಿತ್ರಕೃಪೆ : ಕೇಶವ್ ವೆಂಕಟರಾಘವನ್ (ಪಾಶುರಂ – 24)

ಶ್ರೀ ನೀಳಾ  ದೇವೈ ನಮಃ

ತಿರುಪ್ಪಾವೈ ಲೇಖನಮಾಲೆಯ ಹಿಂದಿನ ಲೇಖನಗಳನ್ನು ಈ ಕೆಳಗೆ  ಓದಬಹುದು :

24 ಪಾಶುರಂ 

ಅನ್ರಿವ್ವುಲಗ ಮಳಂದಾಯ್! ಆಡಿಪೋಟ್ರಿ

ಚ್ಚೆನ್ರಂಗುತ್ತೆನ್ನಿಲಂಗೈಶೆತ್ತಾಯ್! ತಿಱಲ್ ಪೋಟ್ರಿ

ಪೊನ್ರಚ್ಚೆಗಡ ಮುದೈತ್ತಾಯ್ ! ಪುಗಳ್ ಪೋಟ್ರಿ

ಕನ್ರು ಕುಣಿಲಾ ವೆಱಿಂದಾಯ್ ! ಕಳಲ್ ಪೋಟ್ರಿ

ಕುನ್ರುಕುಡೈಯಾ ವೆಡುತ್ತಾಯ್ ! ಗುಣಂ ಪೋಟ್ರಿ

ವೆನ್ರು ಪಗೈಕ್ಕೆಡುಕ್ಕುಂ ನಿನ್ ಕೈಯಿಲ್ ವೇಲ್ ಪೋಟ್ರಿ

ಏನ್ರೆನ್ರುನ್ ಶೇವಗಮೇ ಯೇತ್ತಿಪ್ಪಱೈ ಕೊಳ್ವಾನ್

ಇನ್ರಿಯಾಂ ವಂದೋಂ ಇರಂಗೇಲೋ ರೆಂಬಾವಾಯ್ ॥

ಶ್ರೀಯುತ ಕೌಶಿಕರ ಕನ್ನಡ ಭಾಷಾಂತರ ಹೀಗಿದೆ :

ಮಂಗಳವು ಮೂಲೋಕಗಳನಳೆದ ಪದಯುಗಕೆ 

ಮಂಗಳವು ಲಂಕೆಯಸುರರ ತೊಡೆದ ಭುಜಬಲಕೆ 

ಮಂಗಳವು ಕರುವತ್ಸನನ್ನೊಗೆದ, ದುರುಳ ಶಕಟನನೊದ್ದ ಕೈ|| 

ಪಾದುಕೆ ಮಂಗಳವು ಗಿರಿಯ ಕೊಡೆಯಾಗಿಸಿದ ಸದ್ಗುಣಕೆ 

ಮಂಗಳವು ಅರಿವಿಜಯಿ, ಕರದ ವೇಲಾಯುಧಕೆ 

ಹಿಂಗದೆಂದು ನಿನ್ನ ಪಾಡಿಸೇವಿಪ್ಪೆಮ್ಮ, ಪೊರೆಯೈಯ ನೀಲಕಾಯ|| 

23ನೇ  ಪಾಶುರದಲ್ಲಿ ಗೋದಾದೇವಿಯು, ಪರಮಾತ್ಮನನ್ನು ಶ್ರೀನೃಸಿಂಹರೂಪಿಯಾಗಿ ಕಂಡು, ಆ ರೂಪದ ವೈಭವವನ್ನು, ಪ್ರಹ್ಲಾದನ ಭಕ್ತಿಯನ್ನು ಕಂಡು ಬೆರಗಾಗಿ, ಗುಹೆಯಲ್ಲಿನ ಸಿಂಹವನ್ನು ವರ್ಣಿಸುತ್ತಾಳೆ. ಹೀಗೇ ಮುಂದೆ  ಗೋಪಕನ್ಯೆಯರು ಆರ್ದ್ರವಾಗಿ ಕರೆಯುತ್ತಿರುವುದನ್ನು ಕೇಳಿ ಶ್ರೀಕೃಷ್ಣನು ತನ್ನ ವಾಸಸ್ಥಾನದಿಂದ ಹೊರಟು ಈ ಕನ್ಯೆಯರು ಇರುವೆಡೆಗೆ ನಡೆದು ಬರುವನು. ಈ ಸಮಯದಲ್ಲಿ ಅವನ ನಡಿಗೆಯ ಅಂದ, ಅವನ ಸೌಂದರ್ಯ ಮತ್ತು ವೀರ್ಯ ತೇಜಸ್ಸು – ಇವುಗಳನ್ನು ಕಂಡು ಆನಂದಿತರಾಗಿ ತಾವು ಬಂದಿರುವ ಉದ್ದೇಶವನ್ನೇ ಮರೆತು ಅವನಿಗೆ ಮಂಗಳ ಹಾಡಲು ತೊಡಗುತ್ತಾರೆ. ಹಾಗೆಯೇ ಕೊನೆಯಲ್ಲಿ ತಾವು ಬಂದ ಕೆಲಸವೇನೆಂಬುದನ್ನು ಜ್ಞಾಪಿಸಿಕೊಳ್ಳುತ್ತಾರೆ. 

ಮಂಗಳಾಶಾಸನವೆಂದರೆ ಆಶೀರ್ವಾದವೆಂದರ್ಥ. ಗೋಪಿಯರು ಪರಮಾತ್ಮನ ಸೌಂದರ್ಯ-ಸೌಕುಮಾರ್ಯಕ್ಕೆ ವಿವಶರಾಗಿ, ಅವನ ಪಾದಗಳನ್ನು ಕೈಗಳಿಂದ ಹಿಡಿದು ತಲೆಯಮೇಲಿಟ್ಟುಕೊಂಡು ಮಂಗಳವನ್ನು ಆಶ್ವಾಸಿಸಿದ್ದು ಈ ಪದ್ಯದಲ್ಲಿ ನಿಬದ್ಧವಾಗಿದೆ. ಆಂಡಾಳ್ ತಂದೆಯವರಾದ ವಿಷ್ಣುಚಿತ್ತರು ಭಗವಂತನಿಗೆ “ತಿರುಪಲ್ಲಾಂಡು” ಎಂದು ಮಂಗಳಾಶಾಸನ ಮಾಡಿದರೆ, ಅವರಂತೆಯೇ ಮಗಳು ಸಹ ವಿಷ್ಣುವಿನ ಅಡಿದಾವರೆಗಳಿಗೆ ಮೊದಲು ಮಂಗಳ ಹಾಡಿದ್ದಾಳೆ. 

ಗೋಪಕನ್ಯೆಯರು ಆರು ರೀತಿಗಳಲ್ಲಿ ಮಂಗಳಹಾಡಿದ್ದಾರೆ.

  1. ಮೊದಲು ತ್ರಿವಿಕ್ರಮ ಪಾದವನ್ನು ಉದ್ದೇಶಿಸಿ ಮಂಗಳಾಶಾಸನ ಮಾಡುತ್ತಾರೆ. ಭಕ್ತ ಪ್ರಹ್ಲಾದನ ಮೊಮ್ಮಗನಾದ ಬಲಿಚಕ್ರವರ್ತಿಯಿಂದ ಮೂರು ಲೋಕಗಳನ್ನೆಲ್ಲಾ ತನ್ನ ಪಾದಗಳಿಂದ ಅಳೆದು ಇಂದ್ರನಿಗೆ ಕೊಟ್ಟು ಕಳಿಸಿ, ಮಹಾಬಲಿಯ ದಾನವನ್ನು ಮೆಚ್ಚಿ ಅನುಗ್ರಹ ಮಾಡಿದ ವಾಮನರೂಪಿಗೆ ಆಗ ಯಾರೂ ಮಂಗಳ ಹಾಡಲಿಲ್ಲವಾದ್ದರಿಂದ, ಅದನ್ನು ಜ್ಞಾಪಿಸಿಕೊಂಡು ಗೋಪಿಯರು ಮಂಗಳವನ್ನು ಆಶ್ವಾಸಿಸಿದರು.
  2. ಶತ್ರುಗಳಿಂದ ತುಂಬಿದ್ದ ಲಂಕೆಗೆ ತಾನಾಗಿ ತೆರಳಿ, ಶತೃ ಸಂಹಾರಕನಾಗಿ, ತನ್ನ ಪತ್ನಿಯಾದ ಸೀತಾದೇವಿಯನ್ನು ರಕ್ಷಿಸಿ, ಭಕ್ತ ವಿಭೀಷಣನಿಗೆ ಪಟ್ಟಾಭಿಷೇಕ ಮಾಡಿ, ಲಂಕಾ ವಿಧ್ವಂಸನದಲ್ಲಿ ತೋರಿದ ವಿಕ್ರಮ ಕೃತ್ಯಕ್ಕೆ  ಮಂಗಳವನ್ನು ಹಾಡುತ್ತಾರೆ.
  3. ಶೈಶವಾವಸ್ಥೆಯಲ್ಲಿ ಅತಿ ಗೂಢವಂಚಕನಾಗಿ ಬಂದ ಶಕಟನನ್ನು ಕಂಡು, ತನ್ನ ಕಾಲಿನಿಂದ ಒದ್ದು ಹುಡಿ ಹುಡಿಯಾಗುವ ಹಾಗೆ ನಾಶಗೊಳಿಸಿ ನಮ್ಮೆಲ್ಲರಿಗೂ ಜೀವದಾನ ಮಾಡಿದ ಮಹೋಪಕಾರಕ್ಕೆ ಮಂಗಳಾಶಾಸನವೊಂದನ್ನು ಬಿಟ್ಟು ಬೇರೆ ಪ್ರತ್ಯುಪಕಾರವನ್ನು ಕಾಣೆವು ಎಂದು ಹಾಡುತ್ತಾರೆ.
  4. ಇಂತಹ ಶಕಟ ಭಂಜನಕ್ಕಿಂತ, ಮಹಾ ಕ್ರೂರಿಯಾದ, ವತ್ಸಾಸುರನನ್ನು ಕವಣೆ ಕಲ್ಲೆಸೆಯುವ ಹಾಗೆ ಮೇಲಕ್ಕೆ ಎಸೆದು ಅವನೊಡನೆ ಮರದ ಮೇಲಿದ್ದ ಧೇನುಕಾಸುರನನ್ನು ಕೆಳಗೆ ಬೀಳಿಸಿ ಸಂಹಾರ ಮಾಡಿದ ನಿನಗೆ ಆದ ಆಯಾಸವನ್ನು ಸಹಿಸಲಾರೆವು, ಸ್ವಾಮಿ! ಆ ನಿನ್ನ ಅಸದೃಶ ಪಾದಗಳಿಗೆ ಮಂಗಳವಾಗಲಿ ಎನ್ನುತ್ತಾರೆ.
  5. ಗೋವರ್ಧನ ಪರ್ವತವನ್ನು ಛತ್ರಿಯಂತೆ ಎತ್ತಿ ಹಿಡಿದು, ಅದರ ಕೆಳಗೆ ಆಶ್ರಿತರನ್ನು – ಕೈ ಸೋತುಹೋಗುವವರೆಗೂ ಹಿಡಿದುಕೊಂಡು ರಕ್ಷಿಸಿದ ಮಹಾನುಭಾವನ ಮಹೋಪಕಾರಕ್ಕೆ ಮಂಗಳವೆನ್ನುತ್ತಾರೆ.
  6. ಶ್ರೀಕೃಷ್ಣನ ಸರ್ವಪ್ರಕಾರ ಪ್ರಭಾವವನ್ನು ಹೇಳಿದಲ್ಲಿ ಎಲ್ಲಿ ದೃಷ್ಟಿದೋಷವಾದೀತೋ! ಎಂಬ ಶಂಕೆಯಿಂದ ಅವನ ಪ್ರಭಾವವನ್ನು ಹೇತಿರಾಜನಲ್ಲಿ ಆರೋಪಿಸಿ (ಪ್ರಕೃತ ವೇಲಾಯುಧದಲ್ಲಿ ಹೇತಿರಾಜನ ಆವೇಶವಾಗಿದೆಯೆಂದು ತಿಳಿಯತಕ್ಕದ್ದು) ಮಂಗಳಾಶಾಸನ ಮಾಡುತ್ತಾರೆ.

ಗೋದೆಯ ಕುಲ ವಂದಿಮಾಗಧರ ಕುಲ (ವೇಯರ್ ಕುಲಂ). ತಂದೆ ವಿಷ್ಣುಚಿತ್ತರು ಪಲ್ಲಾಂಡು ಹಾಡಿದರೆ, ಇವಳು ಭಗವಚ್ಚರಣಗಳಿಗೆ ಮಂಗಳ ಹಾಡುವಳು. ತಂತ್ರಶಾಸ್ತ್ರದಂತೆ ಪರಮನ ಪವಿತ್ರ ಚರಣಗಳೆರಡೂ ಜ್ಞಾನ ಮತ್ತು ಭಕ್ತಿ ಸ್ಥಾನ. ಶ್ರೀಕೃಷ್ಣನೇ ನಡೆದು ಬಂದಾಗ ಅವಳಿಗೆ ಮೊದಲಿಗೆ ಕಂಡದ್ದು ಅವನ ಎರಡು ಪಾದಗಳು. ಬಲಪಾದ ಜ್ಞಾನ. ಎಲ್ಲಾ ಜೀವರುಗಳ ಸ್ವರೂಪ ಕೂಡುವ ಸ್ಥಾನ. ಎಡಪಾದ-ಭಕ್ತಿ. ಅವರೆಲ್ಲರೂ ಅವನಿಗೆ ಸೇರಿದವರು. ಅವರ ಸ್ವಭಾವ ಪರಿಪಕ್ವಗೊಂಡು ಕೂಡುವ ಸ್ಥಾನ. ಅವೆರಡೂ ಆಶ್ರಯಣಕ್ಕೆ ಯೋಗ್ಯವಾದವು. ಅವು ಶಾಶ್ವತವಾಗಿರಲಿ ಎಂದು ಹಾಡುತ್ತಾರೆ.

ಗೋಪಿಯರ ಪ್ರಾರ್ಥನೆಯಂತೆ ಶ್ರೀಕೃಷ್ಣನು ಸಿಂಹಾಸನಾಸೀನನಾಗಲು, ಅವರು ಆತನ ಪಾದಗಳಿಗೆ ವಂದಿಸಿ ಮಂಗಳಾಶಾಸನ ಮಾಡುವರು.  ತ್ರಿವಿಕ್ರಮನ ಪಾದಗಳಿಗೆ, ರಾವಣರಾಜ್ಯ ಪ್ರವೇಶಿಸಿ ಲಂಕೆಯನ್ನು ನಾಶಪಡಿಸಿದ ಶ್ರೀರಾಮನಿಗೆ ಮಂಗಳವಾಗಲಿ. ಶಕಟಾಸುರನನ್ನು ನಾಶವಾಗುವಂತೆ ಒದ್ದವನೇ ನಿನ್ನ ಕೀರ್ತಿಗೆ ಮಂಗಳವಾಗಲಿ. ಕರುವಾಗಿ ಬಂದ ವತ್ಸಾಸುರನನ್ನು ಕವಣೆ ಕಲ್ಲಾಗಿ ಮಾಡಿ, ಮರದ ಮೇಲಿದ್ದ ಕಪಿತ್ಥ ಸುರನ ಮೇಲೆ ಆ ಕಲ್ಲನ್ನು ಬೀಸಿ, ಆ ಇಬ್ಬರೂ ಅಸುರರನ್ನು ಸಂಹರಿಸಿದವನೇ ನಿನ್ನ ದಿವ್ಯ ಪಾದಗಳಿಗೆ ಮಂಗಳವಾಗಲಿ. ಇಂದ್ರನು ಸುರಿಸಿದ ಮಳೆಗೆ ಗೋವರ್ಧನ ಬೆಟ್ಟವನ್ನೇ ಕೊಡೆಯಂತೆ ಹಿಡಿದು ಗೋಕುಲವನ್ನ ಕಾಪಾಡಿದವನೇ, ನಿನ್ನ ಕಲ್ಯಾಣ ಗುಣಗಳಿಗೆ ಮಂಗಳವಾಗಲಿ. ಶತ್ರುಗಳನ್ನು ಜಯಿಸಿ ದ್ವೇಷವನ್ನೇ ನಾಶಪಡಿಸುವ ನಿನ್ನ ವೇಲಾಯುಧಕ್ಕೆ ಮಂಗಳವಾಗಲಿ. ಹೀಗೆ ನಿನ್ನ ವೀರ ಚರಿತ್ರೆಯನ್ನು ಸ್ತುತಿಸಿ ಅದನ್ನೇ ನಮ್ಮ ಪುರುಷಾರ್ಥವನ್ನಾಗಿ ಹೊಂದಲು ಬಂದ ನಮ್ಮೆಲ್ಲರ ಮೇಲೆ ಕೃಪೆ ತೋರು ಎನ್ನುತ್ತಾರೆ.

ವಾಮನ, ರಾಮ-ಕೃಷ್ಣಾವತಾರಗಳ ವರ್ಣನೆ ಇಲ್ಲಿದೆ. ಈ ಅವತಾರಗಳ ನಂತರ ಯಾರೂ ಮಂಗಳ ಹಾಡಲಿಲ್ಲ. ಆದ್ದರಿಂದ ಅಂದು ನಡೆದ ಅವತಾರ ಕಾರ್ಯಗಳಿಗೆ ‘ಇಲ್ಲಿ’ ಮಂಗಳ ಹಾಡುತ್ತಾಳೆ.   ಪರಮಾತ್ಮನ ನಡಿಗೆ , ಬಲ, ಕೀರ್ತಿ, ಪಾದ, ಗುಣ ಹಾಗೂ ವೇಲಾಯುಧಗಳಿಗೆ ಗೋಪಿಯರೊಡನೆ ರಕ್ಷೆ ಇಡುತ್ತಾಳೆ . ಇಲ್ಲಿ ಪಾದ ವೈಭವವೇ ಪ್ರಧಾನವಾದದ್ದು. ತ್ರಿವಿಕ್ರಮನಾಗಿ ಮೊದಲನೇ ಪಾದದಿಂದ “ಸರ್ವೇಶ್ವರತ್ವ”, ಎರಡನೆಯದರಿಂದ “ ಸರ್ವಾಶ್ರಯತ್ವ” ಮತ್ತು ಮೂರನೆಯದರಿಂದ “ಸರ್ವರಕ್ಷಕತ್ವ” ವನ್ನು ಭಗವಂತನು ಪ್ರದರ್ಶಿಸಿದ. ನಾಲಿಗೆಗೆ ಷಡ್ರಸಗಳನ್ನು ಒದಗಿಸಿದಂತೆ ಷಡ್ವಿಷಯಕ ಮಂಗಳಾಶಾಸನವನ್ನು ಮಾಡಿದ್ದಾರೆ.

ಭಾವಾರ್ಥ: ಇಲ್ಲಿ ಆಚಾರ್ಯರ ವರ್ಣನೆಯೂ ಸೇರಿದೆ. ಆಚಾರ್ಯನೂ ವಾಮನನಂತೆಯೇ, ಜೀವಾತ್ಮ ಭಿಕ್ಷುವಾಗಿ ಮೂರನ್ನು ಬೇಡುತ್ತಾರೆ.

  1. ಶ್ರೀ ರಹಸ್ಯತ್ರಯ 2. ಶ್ರೀ ತತ್ವತ್ರಯ, 3. ಷಟ್ಕತ್ರಯ

ಆಚಾರ್ಯರು ಆಶ್ರಿತರಾದವರಿಗೆ ಅಭಯವಿತ್ತು, ಪ್ರಪತ್ತಿಯಿಂದ ಪರಮಾತ್ಮನನ್ನು ವಶೀಕರಿಸಿ ನಂತರ ಇಬ್ಬರನ್ನೂ ಕೂಡಿಸುವ ತ್ರಿವಿಕ್ರಮರಾಗುವರು. ಈ ಮೂಲಕ ಜೀವಾತ್ಮರನ್ನು ಭಗವಂತನಿಗೆ ಶರಣಾಗಿಸುವರು. ಆಚಾರ್ಯರು ಕರ್ಮ ಜನ್ಮಚಕ್ರದಿಂದ ಜೀವಾತ್ಮನನ್ನು ಮುಕ್ತಗೊಳಿಸಿ ಕ್ಷಮಾಗುಣ, ಆಶ್ರಿತ ಸಂರಕ್ಷಣೆಯನ್ನು ಪ್ರದರ್ಶಿಸಿ ತ್ರಿದಂಡಧಾರಿಯಾಗುತ್ತಾರೆ. ಇಂತಹ ಆಚಾರ್ಯರು ಶಕಟವೆನ್ನುವ ಮನೋರಥವನ್ನು ನೆರವೇರಿಸಲು ಅದರ ಎರಡು ಚಕ್ರಗಳಾದ ಅಹಂಕಾರ-ಮಮಕಾರಗಳನ್ನು ನಾಶಪಡಿಸುವರು. ವೇದ ಪ್ರಮಾಣದಿಂದ ಪರಪಕ್ಷ ದ್ವೇಷವನ್ನು ಹೋಗಲಾಡಿಸುವರು. 

ಪ್ರಪಂಚವು ಎಲ್ಲೆಯುಳ್ಳದ್ದು. ಪರಮಾತ್ಮ ಎಲ್ಲೆ ಇಲ್ಲದವ. ಆದ್ದರಿಂದ ಪರಮಾತ್ಮನೇ ಪ್ರಪಂಚನಾಗಿರುವನು. ಪ್ರಪಂಚ ಸತ್ಯವಾದದ್ದು. ಅದರಲ್ಲಿರುವ ಜೀವತತ್ವವೂ ಸತ್ಯ. ಈ ಸತ್ಯ ವಸ್ತುಗಿಂತಲೂ ಸತ್ಯವಾದದ್ದು ಪರಮಾತ್ಮ ಎನ್ನುವ ಭಾವ ಇಲ್ಲಿ ವ್ಯಕ್ತವಾಗಿದೆ. 

ತಂದೆ ನಿನ್ನಯ ಪಾದ ಸಂದರುಶನದಿಂದಾ –

ನಂದವಾಯಿತು ಎನಗೆ ಅಮರೇಂದ್ರನೆ

ವೃಂದಾರಕರಂದು ಇತ್ತ ತ್ರಿವಿಧ ಶಾಪದಿ ಈ ವ –

ಸುಂಧರೆ ಎಂಬೊ ಮಹಾ ಕಾರಾಗೃಹ

ಬಂಧನದಲಿ ಸಿಲ್ಕಿ ದೈತ್ಯರ ವಶನಾಗಿ

ಅಂಧಕಾರವೆಂಬೊ ಅಜ್ಞಾನದಿ

ವೃಂದ ದುಃಖಗಳುಂಡು ಬಂಧು ಬಳಗ ಮಿತ್ರ –

ರಿಂದ ಬಾಹಿರನಾಗಿ ಸಕಲ ದೋಷ –

ವೃಂದಗಳಿಗೆ ನಾನು ಮಂದಿರ ಸ್ಥಾನನಾಗಿ

ನಿಂದಿತನಾದೆ ನೈಜ ಜನರಿಂದ

ಮಂದಹಾಸದಿ ಮಾತ ನಡಿಸಿಕೊಳ್ಳದೆ ಮುಖ್ಯ

ಬಂಧುನಾದ ಹರಿಗೆ ವಿಮುಖನಾಗಿ

ಅಂಧಕನಾಗಿ ಈ ಭೂ ಪ್ರದೇಶವೆಂಬೊ

ಅಂಧಂತಮಸ್ಸಿನಲ್ಲಿ ನೊಂದು ದುಃಖ –

ದಿಂದ ದಾಂಟುವುದಕ್ಕೆ ಇನ್ನು ಸಂದೇಹ ಉಂಟೆ

ಕಂದು ಕಂಧಾರನ್ನ ಪ್ರೀತ್ಯಾಸ್ಪದನೆ

ಇಂದ್ರನಾಮಕ ಗುರುವಿಜಯವಿಟ್ಠಲನ್ನ 

ತಂದು ತೋರಿಸು ಎನಗೆ ತಡ ಮಾಡದೆ  –  ಶ್ರೀ ಮೊದಲಕಲ್ಲು ಶೇಷದಾಸಾರ್ಯ ವಿರಚಿತ 

                                                                    (ಗುರುವಿಜಯವಿಟ್ಠಲ ಅಂಕಿತ) 

(ವಿಷಯ ಸಂಗ್ರಹ : “ತಿರುಪ್ಪಾವೈ ರಸಸ್ವಾಧಿನಿ” – ಬರೆದವರು ವಿದ್ವಾನ್ ವೇದಾಂತ  ಸಾರಜ್ಞ

   ಶ್ರೀ ಎಸ್. ಕೃಷ್ಣಾತಾತಾಚಾರ್ಯ )

(1) ಗಮಕ ಕವಿತಾ ವನಜ ಭಾಸ್ಕರ , ಗಮಕ ರತ್ನಾಕರ ಶ್ರೀಯುತ ಬಿ.ಎಸ್ .ಎಸ್ ಕೌಶಿಕ್  ರವರ  ಶ್ರೀಮದಾಂಡಾಳ್ ಮಹಾ ವೈಭವಂ -ತಿರುಪ್ಪಾವೈ – ಮೂಲ, ಕನ್ನಡ ತಾತ್ಪರ್ಯ , ಷಟ್ಪದಿ, ಭಾವಾರ್ಥ , ಚೌಪದಿ )

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

IndicA Today - Website Survey

Namaste,

We are on a mission to enhance the reader experience on IndicA Today, and your insights are invaluable. Participating in this short survey is your chance to shape the next version of this platform for Shastraas, Indic Knowledge Systems & Indology. Your thoughts will guide us in creating a more enriching and culturally resonant experience. Thank you for being part of this exciting journey!


Please enable JavaScript in your browser to complete this form.
1. How often do you visit IndicA Today ?
2. Are you an author or have you ever been part of any IndicA Workshop or IndicA Community in general, at present or in the past?
3. Do you find our website visually appealing and comfortable to read?
4. Pick Top 3 words that come to your mind when you think of IndicA Today.
5. Please mention topics that you would like to see featured on IndicA Today.
6. Is it easy for you to find information on our website?
7. How would you rate the overall quality of the content on our website, considering factors such as relevance, clarity, and depth of information?
Name

This will close in 10000 seconds