close logo

ಪದಗತಿ ಪದಸಂಸ್ಕೃತಿ – ಆಶಯ ನುಡಿ

ಪದಸಂಸ್ಕೃತಿ ಎನ್ನುವುದು ಭಾಷೆಯ ವಿವಿಧಮುಖಿ ಸಾಧ್ಯತೆಗಳನ್ನು ಒಳಗೊಳ್ಳುವ ಒಂದು ಪರಿಕಲ್ಪನೆ. ಭಾಷೆಯ ಪ್ರಮುಖ ಅಭಿವ್ಯಕ್ತಿಗಳು ಗದ್ಯ, ಪದ್ಯ., ಕವನ, ಕವಿತೆ, ಪದ್ಯ, ಗೀತೆ ಇವೆಲ್ಲ ಸಮಾನಾರ್ಥಕಗಳು. ಇವುಗಳ (ಗದ್ಯ, ಪದ್ಯ) ಸಂಕಲನವೇ ಕಾವ್ಯ. ಅಥವಾ ಸಾಹಿತ್ಯ. ಕಾವ್ಯದ ಮಹತ್ವವನ್ನು ಕುರಿತು ಚಿಂತಿಸುವ ಕಾವ್ಯಮೀಮಾಂಸೆ ಪದಗಳ ಬಳಕೆಯ ರೀತಿಯನ್ನು ಕುರಿತ ಜಿಜ್ಞಾಸೆಯೇ ಆಗಿದೆ.

ಪದಗಳಿಗೆ ತನಗೆ ತಾನೇ ಅರ್ಥ ಇರುವುದಿಲ್ಲ. ವಾಕ್ಯರಚನೆಯಲ್ಲಿ ಪದಗಳ ಸ್ಥಾನವನ್ನು ಅವಲಂಬಿಸಿ ಪದಗಳು ಬೇರೆ ಬೇರೆ ಅರ್ಥಗಳನ್ನು ಕೊಡುತ್ತವೆ. ಕವಿತೆಯೊಂದಕ್ಕೆ ಅದು ನಿರೂಪಿತವಾಗುವ ಮಾರ್ಗ ಅಂದರೆ ಛಂದಸ್ಸು ಕಲ್ಪಿಸುವ ಸಂಸ್ಕೃತಿ ಇರುತ್ತದೆ. ಛಂದಸ್ಸಿನ ಚೌಕಟ್ಟಿನಲ್ಲಿ ಗಹನವಾದ ವಿಷಯವನ್ನು ಸಾಧ್ಯವಾದಷ್ಟು ವಿಸ್ತಾರವಾಗಿ ಹೇಳುವ ಸಾಧ್ಯತೆಯನ್ನು ಗುರುತಿಸುವುದು ಕಾವ್ಯವನ್ನು ಅರ್ಥಮಾಡಿಕೊಳ್ಳುವ ಒಂದು ಬಗೆ. ಕಾವ್ಯದಲ್ಲಿ ಇರುವ ರೂಪಕ, ಉಪಮಾನಗಳೇ ಮೊದಲಾದ ಅಲಂಕಾರಗಳು ಕಾವ್ಯದ ಸತ್ವವನ್ನು ಪ್ರಕಾಶ ಪಡಿಸುವುದನ್ನು ಗ್ರಹಿಸುವುದು ಕಾವ್ಯವನ್ನು ಅರ್ಥಮಾಡಿಕೊಳ್ಳುವ ಒಂದು ರೀತಿ.

ಪದಸಂಸ್ಕೃತಿ ಎಂದಾಗ ಪದಗಳ ಮೂಲಕ ಮೂಡಿ ಬರುವ ಸಂಸ್ಕೃತಿ ಎನ್ನುವ ಅರ್ಥ ಒಂದು ರೀತಿಯದು. ಪದಗಳ ಹಿನ್ನೆಲೆಯಲ್ಲಿರುವ ಸಂಸ್ಕೃತಿ ಎನ್ನುವ ಅರ್ಥ ಇನ್ನೊಂದು ರೀತಿಯದು. ಪದಗಳು ಒಂದು ಕವಿತೆಯ ರೂಪ ತಳೆದಾಗ ಪದಸಂಸ್ಕೃತಿಯು ಕವಿ ಕಟ್ಟಿಕೊಡುವ ಅಥವಾ ಕವಿಯ ಮೂಲಕ ನಿರ್ದಿಷ್ಟ ಗಡಿರೇಖೆಗಳಿಗೆ ಸೀಮಿತವಾಗದ ಪದಗಳ ರೂಪವನ್ನು ಪಡೆದ ಸಂಸ್ಕೃತಿ. ಅದನ್ನು ಗ್ರಹಿಸಲು ಕವಿಯ ಪರಿಸರದ ಗ್ರಹಿಕೆ ಪೂರಕ. ಕವಿತೆಯ ಓದುಗ ಕವಿತೆಯ ಮೂಲಕ ಚಿತ್ರಿಸಿಕೊಳ್ಳುವ ಸಂಸ್ಕೃತಿಯೂ ಪದಸಂಸ್ಕೃತಿಯೇ. ಕವಿತೆಯ ವಸ್ತುವಿನ ಆಯ್ಕೆಗೊಂದು ಉದ್ದೇಶ ಇರುತ್ತದೆ. ಅದು ರೂಪಿಸುವ ಸಂಸ್ಕೃತಿಯೊಂದು ಇರುತ್ತದೆ. ಕವಿಯ ಮೇಲೆ ಇರುವ ಪ್ರಭಾವಗಳು ಕವಿತೆಗೆ ಒಂದು ಸಾಂಸ್ಕೃತಿಕ ಪ್ರಭಾವಳಿಯನ್ನು ಕಟ್ಟಿಕೊಡುತ್ತವೆ. ಅದು ಅವನ ಕಾಲದ ಅವನ ಸಮಾಜದ ಸಂಸ್ಕೃತಿ. ಕವಿಯ ವೈಯಕ್ತಿಕ ತುರ್ತಿನಿಂದ ಮತ್ತು ಸ್ವ ವಿಮರ್ಷೆಯಿಂದ ರೂಪುಗೊಂಡ ಸಂಸ್ಕೃತಿ. ಇದೂ ಪದಸಂಸ್ಕೃತಿಯೆ.

ಕಾವ್ಯವನ್ನು ಕಟ್ಟುವ ಅಥವಾ ಅರ್ಥಮಾಡಿಕೊಳ್ಳುವ ಬಗೆ ಯಾವುದು ಎಂಬುದು ಕಾವ್ಯಮೀಮಾಂಸೆಯ ಒಂದು ಮುಖ್ಯ ಪ್ರಶ್ನೆ. ಇದಕ್ಕೆ ʼಭಾಷೆ ರೂಢಿಗತವಾದ ಅರ್ಥವನ್ನು ಹೊಂದಿರುತ್ತದೆ. ಅದೇ ಅರ್ಥದಲ್ಲಿ ಕಾವ್ಯ ರೂಪುಗೊಳ್ಳಬೇಕು, ನಮಗೆ ಇಷ್ಟ ಬಂದ ಅರ್ಥವನ್ನು ಭಾವಿಸಬಾರದು ಎಂಬುದುʼ ಒಂದು ಉತ್ತರ. ರೂಢಿಗತ ಅರ್ಥವು ವ್ಯಂಗ್ಯ, ವಿಡಂಬನೆ ಅಥವಾ ಅರ್ಥವಿಸ್ತಾರದ ಸಾಧ್ಯತೆಯನ್ನು ಹೊಂದಿದ್ದಾಗ ರೂಢಿಗತ ಅರ್ಥ ಒಳಗೊಳ್ಳುವ ಧ್ವನ್ಯಾರ್ಥವನ್ನು ಗಮನಕ್ಕೆ ತಂದುಕೊಳ್ಳಬೇಕಾಗುತ್ತದೆ ಎಂಬುದು ಇನ್ನೊಂದು ಉತ್ತರ.

ಪದ(ಶಬ್ದ) ಮತ್ತು ಅರ್ಥದ ನಡುವಿನ ಸಂಬಂಧವೇನು ಎಂಬುದು ಸಹ ಕಾವ್ಯಮೀಮಾಂಸೆಯ ಒಂದು ಮುಖ್ಯವಾದ ಪ್ರಶ್ನೆಯೇ. ಮಾತಾಡುವವನ ಉದ್ದೇಶವನ್ನು ಹೇಳುವ ಉಚ್ಚಾರಣೆಯ ರೀತಿಯೇ ಶಬ್ದ ಅಥವಾ ಪದ; ಶಬ್ದದ ಅರ್ಥ ಉಚ್ಚರಿಸುವವನ ಉದ್ದೇಶಕ್ಕೆ ಸಂಬಂಧಪಟ್ಟದ್ದು; ಶಬ್ದಕ್ಕೂ ಅದರ ಅರ್ಥಕ್ಕೂ ಕಾರಣ-ಕಾರ್ಯ ಸಂಬಂಧ ಇದೆ; ಪದಗಳು ಯಾವ ಅರ್ಥವನ್ನು ಸ್ಫುರಿಸುತ್ತವೆಯೋ ಅದರ ಮೂಲಕ ನಾವು ತಿಳಿದುಕೊಂಡದ್ದು ಏನು ಎಂಬುದು ಅನುಭವವೇದ್ಯ; ಅರ್ಥಾಭಿವ್ಯಕ್ತಿ, ಭಾವಾಬಿವ್ಯಕ್ತಿಗಳ ಸೌಂದರ್ಯ ಕಾವ್ಯ(ಸಾಹಿತ್ಯ)ದ ಮೌಲ್ಯವನ್ನು ಹೆಚ್ಚಿಸುತ್ತದೆ, ಎಂಬುದು ಒಂದು ಗ್ರಹಿಕೆ. ಪದ-ಅರ್ಥ, ಪದದ ಸೂಚಿತ ಅರ್ಥ, ಪದದ ವಿಸ್ತೃತ ಅರ್ಥ ಎನ್ನುವ ಮೂರು ರೀತಿಯ ಸಂಬಂಧ ಪದ ಮತ್ತು ಅರ್ಥದ ಮಧ್ಯೆ ಇದೆ; ಕಾವ್ಯ(ಸಾಹಿತ್ಯ)ದಲ್ಲಿ ಪದಗಳು ವಾಚ್ಯಾರ್ಥವನ್ನು ಮೀರಿದ ಸುಂದರವಾದ ಮತ್ತು ಹೆಚ್ಚು ಸೊಗಸಾದ ಹೊಸ ಅರ್ಥವನ್ನು ಪದಗಳು ಮೂಡಿಸುತ್ತವೆ ಎಂಬುದು ಪದಗಳು ಪಡೆಯುವ ಗಮನಾರ್ಹ ಆಯಾಮ.

ಅರ್ಥರಹಿತವಾಗಿ ಪದವಿರಬಹುದೇ ಎಂಬುದೊಂದು ಪ್ರಶ್ನೆ. ನಾವು ಕೇವಲ ಪದಗಳನ್ನು ಮಾತ್ರ ಉಚ್ಚರಿಸುತ್ತಿರುವುದಿಲ್ಲ. ಒಂದು ವಾಕ್ಯವಾಗಿ ಅಥವಾ ವಾಕ್ಯಸರಣಿಯಾಗಿ ನಮ್ಮ ಮಾತು (ಉಚ್ಚರಿಸುವ ಪದಗಳ ಬಳಕೆ) ಇರುತ್ತದೆ. ನಾವು ಭಾವಿಸಿದ ಅರ್ಥವನ್ನು ನಾವು ಬಳಸಿದ ಪದಗಳು ಕೊಡದೇ ಇರಬಹುದು, ಅಷ್ಟೇ. ಸಾಹಿತ್ಯ(ಕಾವ್ಯ)ವು ಕವಿಗೆ ತೃಪ್ತಿ, ಸಮಾಧಾನ ಕೊಟ್ಟರೆ ಸಾಲದು, ಅದು ಓದುಗನಿಗೂ ಪ್ರಿಯವಾಗಬೇಕು. ಕೃತಿಯನ್ನು ಓದಿದ ನಂತರ ಅವನು ತನ್ನದೇ ಆದ ಅನ್ನಿಸಿಕೆಗಳನ್ನು ರೂಪಿಸಿಕೊಳ್ಳುವುದಕ್ಕೆ, ರೂಢಿಸಿಕೊಳ್ಳುವುದಕ್ಕೆ ಕೃತಿ ಪ್ರೇರಕ, ಪೂರಕ, ಪೋಷಕ ಆಗಬೇಕು. ಪದಗಳ ಬಳಕೆಯ ವ್ಯಾಪ್ತಿಯನ್ನು ಹಿಗ್ಗಿಸಿದಷ್ಟೂ ಅವು ಹೇಳುವ ಅರ್ಥದ ದೃಷ್ಟಿಯಿಂದ ಅವು ಹೆಚ್ಚು ಹೆಚ್ಚು ಶ್ರೀಮಂತ ಆಗುತ್ತವೆ. ಪದಗಳಿಗೆ ವಾಚ್ಯಾರ್ಥ, ರೂಢಿಯಿಂದ ದೊರಕುವ ಅರ್ಥ-ವಿಸ್ತಾರ ಮತ್ತು ಸಾಂದರ್ಭಿಕವಾಗಿ ಪಡೆಯುವ ಸೂಚ್ಯಾರ್ಥಗಳು ಹೆಚ್ಚು ಹೆಚ್ಚು ಇದ್ದಷ್ಟೂ ಕಾವ್ಯ ಹೆಚ್ಚು ಹೆಚ್ಚು ಮಾನ್ಯ ಆಗುತ್ತಾ ಹೋಗುತ್ತದೆ. 

ಭಾರತೀಯ ಕಾವ್ಯಮೀಮಾಂಸೆಯು ವಾಸ್ತವಿಕವಾಗಿ ಕಾವ್ಯ-ವಸ್ತು-ಕೇಂದ್ರಿತವಾದದ್ದು ಅಲ್ಲ. ಅದು ಅಭಿವ್ಯಕ್ತಿ ಕೇಂದ್ರಿತವಾದದ್ದು. ಪದಗಳು ರೂಪಿಸುವ, ಪುನರ್ರೂಪಿಸುವ, ನಿರ್ದೇಶಿಸುವ ಮತ್ತು ಪರಿಕಲ್ಪಿಸುವ ವಾಸ್ತವತೆ ಭಾರತೀಯ ಕಾವ್ಯಮೀಮಾಂಸೆಗೆ ಮುಖ್ಯವಾದದ್ದು. ಭಾರತೀಯರಿಗೆ ವಾಸ್ತವತೆ ನಾಮ-ರೂಪ ರಹಿತ. ಅದರ ಮೊದಲ ಮೂರ್ತರೂಪ ವಾಕ್‌ (ಓಂಕಾರ). ಅದು ನಾಮರೂಪಗಳಾಗಿ ವೈವಿಧ್ಯಮಯವಾಗಿ, ನಿರಂತರವಾಗಿ ತೋರಿಬರುತ್ತಲೇ ಇರುತ್ತದೆ. ವಾಕ್‌ನಿಂದಾಗಿ ಅರ್ಥ ಹುಟ್ಟಿಕೊಳ್ಳುತ್ತದೆ; ಅರ್ಥದಿಂದಾಗಿ ವಾಕ್‌ ಶಕ್ತಿ ಆವಿರ್ಭವಿಸುತ್ತದೆ, ವಿಸ್ತರ ಮತ್ತು ವಿಸ್ತಾರಗೊಳ್ಳುತ್ತದೆ.

ರಸೋ ವೈ ಸಃ ಎನ್ನುವುದು ಛಾಂದೋಗ್ಯ‌ ಉಪನಿಷತ್ತಿನ ಮಾತು. ಪರಮವಾಸ್ತವತೆ ರಸವೇ ಆಗಿದೆ. ಯಾವುದು ರಸ? ಮನಸ್ಸು ಬುದ್ಧಿಗಳನ್ನು ಆರ್ದ್ರಗೊಳಿಸುವುದು ರಸವಾದೀತು. ಆರ್ದ್ರತೆಯು ಕೋಮಲ, ಮೃದುತ್ವ, ಬಂಧದೊಂದಿಗಿನ ವಿಕಸಿತ ಚಲನೆಗಳ ಸೂಚಕ ಆದೀತು. ಅಸಂತೋಷಕಾರಕ ಅನಗತ್ಯ ಸ್ಥಿತಿಗಳನ್ನು ಧ್ವಂಸಗೊಳಿಸಿ ಸಂತೋಷಕಾರಕ ಹೊಸ ಸ್ಥಿತಿಯ ಸ್ಥಾಪನೆಯೂ ಆದೀತು. ವಾಕ್‌ ಇಂಥ ರಸ ಆಗಬಲ್ಲುದು. ಕಾಳಿದಾಸನ ಕಾವ್ಯದ ಒಂದು ಶ್ಲೋಕ “ವಾಗರ್ಥಾವಿವ ಸಂಪೃಕ್ತೌ ವಾಗರ್ಥಃ ಪ್ರತಿಪತ್ತಯೇ ಜಗತಃ ಪಿತರೌ ವಂದೇ ಪಾರ್ವತೀ ಪರಮೇಶ್ವರೌ”. ವಾಕ್‌ ಮತ್ತು ಅದರೊಂದಿಗಿನ ಅರ್ಥ ಮಾತಾಪಿತೃ ವಾತ್ಸಲ್ಯವುಳ್ಳದ್ದು ಎನ್ನುವ ಭಾವ ಈ ಶ್ಲೋಕದ್ದು. 

ಪಾಶ್ಚಾತ್ಯ ಲೋಕದಲ್ಲಿ ಸಾಹಿತ್ಯ(ಗದ್ಯ, ಪದ್ಯ)ವೂ ಒಳಗೊಂಡಂತೆ ಎಲ್ಲಾ ಕಲಾ ಪ್ರಕಾರಗಳಲ್ಲಿ ಪ್ರಾತಿನಿಧಿಕತೆ(ಧ್ವನಿ) ಮುಖ್ಯವೋ, ಅಭಿವ್ಯಕ್ತಿ(ರೀತಿ) ಮುಖ್ಯವೋ ಎಂಬ ಜಿಜ್ಞಾಸೆ ʼಕಾವ್ಯ(ಸಾಹಿತ್ಯ) ಹೇಗಿರಬೇಕು ಎನ್ನುವ ಪ್ರಶ್ನೆಯನ್ನು ಸಮಕಾಲೀನವಾಗಿಸಿದೆ. “ಕಲೆಯ ಮಾಧ್ಯಮದಲ್ಲಿ ಅನುಭವಾತ್ಮಕ ಕುತೂಹಲವು ಪಡೆಯುವ ಸಾಮಾಜಿಕ ಬದ್ಧತೆ, ಸಮಾಜಕ್ಕೆ ತೋರುವ ಪ್ರತಿಕ್ರಿಯೆ, ವೈಯಕ್ತಿಕವಾಗಿ ಒಳಗಾಗುವ ಬದಲಾವಣೆ ಇವುಗಳೆಲ್ಲ ಸೌಂದರ್ಯಾನುಭವಕ್ಕೆ ಸಂಬಂಧಿಸಿದವುಗಳೇ. ಆತ್ಮರತಿ ಮತ್ತು ದುರಾಸೆಗಳ ಬಿಕ್ಕಟ್ಟುಗಳನ್ನು ಎದುರಿಸಲು, ಸಹನೆ ಮತ್ತು ಶ್ರದ್ಧೆಯಿಂದ ಬದುಕಲು ಕಾವ್ಯವು ಮುಂದುಮಾಡುವ ಸೀಮೆರಹಿತ ಸಾಧ್ಯತೆಗಳ ಓದು ಸಹಾಯಕ”.

“ಕವಿಯ ಕೆಲಸ ತನ್ನಲ್ಲಿ ಹುದುಗಿರುವುದಕ್ಕೆ ಸಮರ್ಥನೀಯ ಅಭಿವ್ಯಕ್ತಿಯನ್ನು ಕೊಡುವುದು. ಆ ಪ್ರಯತ್ನವನ್ನು ಅರ್ಥಮಾಡಿಕೊಳ್ಳುವುದು ಮತ್ತು ಆಸ್ವಾದಿಸುವುದು ಓದುಗನ ಕೆಲಸ. ಪದಗಳನ್ನು ಬಿಡಿ ಬಿಡಿಯಾಗಿ ಮೆಚ್ಚಿಕೊಳ್ಳುವುದು ಮತ್ತು ಆ ಮೂಲಕ ಬದುಕಿನ ಬಗೆಗಿನ ತನ್ನ ಆಸ್ಥೆಯನ್ನು ಜೀವಂತವಾಗಿ ಇರಿಸಿಕೊಳ್ಳುವುದು, ಸಂಸ್ಕೃತಿಯೊಂದರಲ್ಲಿ ಆಸಕ್ತನಾಗಿರುವುದು ಓದುಗನ ತುರ್ತು”.

 “ನಮ್ಮ ಬದುಕು ಅರ್ಥವಂತಿಕೆ ಅರ್ಥರಹಿತತೆಗಳ ನಡುವೆ ಓಡಾಡುತ್ತಿರುತ್ತದೆ. ನಮ್ಮ ಕಾಲಘಟ್ಟದಲ್ಲಿ ವಸ್ತುಗಳು ಮತ್ತು ಸಂಗತಿಗಳೊಂದಿಗಿನ ಸಂಬಂಧ ಅನಿಶ್ಚಿತ; ಗುರಿಗಿಂತಲೂ ಅನುಸರಿಸುವ ಪ್ರಕ್ರಿಯೆಗೆ ಹೆಚ್ಚಿನ ಆದ್ಯತೆ. ಕಾವ್ಯದಂತೆ ನಮ್ಮ ಬದುಕೂ ನಾವೇ ಕೆತ್ತಿಕೊಂಡ ಭವಿಷ್ಯವಾಣಿ. ಅದು ನಮ್ಮೆಲ್ಲರ ಕಾಲದೇಶಾತ್ಮಕ ಬದುಕಿನ ರೀತಿಯೇ  ಆಗಿದ್ದುಸಾರ್ವತ್ರಿಕ”.

“ಕಲೆಯ ಮಾಧ್ಯಮದಲ್ಲಿ ಸ್ವಂತಿಕೆಯು ಹೇಗೆ ಪುನರ್ರೂಪಿತ ಆಗಿದೆ ಎಂಬುದಕ್ಕೆ ಕಲೆಯು ಸಂಬಂಧಿಸಿದುದೇ ವಿನಾ ಕಲಾವಿದನ ದೈವದತ್ತ ಪ್ರತಿಭೆಗೆ ಸಂಬಂಧಿಸಿದುದು ಅಲ್ಲ. ಪದ್ಯದ ಹಿಂದೆ ಪೂರ್ವ-ಸಿದ್ಧವಾದ ಯಾವ ಕಲ್ಪನೆಯೂ ಇಲ್ಲ. ಇರುವುದು ಕೇವಲ ಪದಗಳು, ಪದಗುಚ್ಛಗಳು ಅಷ್ಟೇ. ಸಾಮಾನ್ಯವಾಗಿ ಪದ್ಯಕ್ಕೆ ಸಾಂಸ್ಕೃತಿಕ ಅಥವಾ ಐತಿಹಾಸಿಕ ಸಾಂದರ್ಭಿಕತೆ ಮಾತ್ರ ಇರುತ್ತದೆ. ಅದಕ್ಕಿಂತ ಹೆಚ್ಚಾಗಿ ನಾವು ಗಮನಿಸಬೇಕಾದದ್ದು ನಮ್ಮ ಮುಂದೆ ಪದ್ಯವೊಂದು ಇದೆ. ಪದಗಳಿಗೆ ಬಿಡಿ ಬಿಡಿಯಾಗಿ ಮತ್ತು ಇತರ ಪದಗಳೊಂದಿಗೆ ಹೊಂದಿಕೊಂಡ ಹಾಗೆ ತಮ್ಮದೇ ಆದ ಗುಣವಿಶೇಷಣಗಳು ಇವೆ. ಅವು ಸೂಚಿಸುವ ವಸ್ತುವಿನ ಮೇಲೆ ಯಾವ ಅಸಾಮಾನ್ಯಕೋನದಿಂದ ಬೆಳಕು ಬೀಳುತ್ತಿರುತ್ತದೆ ಎಂಬುದು ಸಾಹಿತ್ಯದ ಯಾವುದೇ ಪ್ರಕಾರದಲ್ಲಿ ಮುಖ್ಯವಾದದ್ದು”.

“ಪದಗಳು ಒಳಗೊಳ್ಳುವ ಕಲ್ಪನೆ-ಪರಿಕಲ್ಪನೆಗಳೊಂದಿಗೆ ಅವು ನಮ್ಮಲ್ಲಿ ಮೂಡಿಸುವ ದೃಶ್ಯ ಮತ್ತು ನಾದಗಳೂ ಸಹ ಮುಖ್ಯವಾದದ್ದು. ಕವನವೊಂದರ ವಾಚನ ಮತ್ತು ಗಾಯನ ಪರಸ್ಪರ ಪೂರಕವಾಗಿ ಪರಿಣಾಮಕಾರಿ. ಕಿವಿಯ ಮೇಲೆ ಬೀಳದ ಪದಗಳು, ಆತ್ಮೀಯವಾಗಿ ಸ್ಪರ್ಷಿಸದ ಪದಗಳು ಎರಡೂ ಒಂದೇ, ಅರ್ಥಹೀನ”. 

ಇವು ಪಾಶ್ಚಾತ್ಯಕಾವ್ಯಮೀಮಾಂಸೆಯ ಸಾರ.

ಈ ಎಲ್ಲ ಆಶಯಗಳನ್ನು ತಮ್ಮದೇ ಆದ ರೀತಿಯಲ್ಲಿ ಆಂಶಿಕವಾಗಿ ಒಳಗೊಳ್ಳುವ ಪದ ಮತ್ತು ಪದ್ಯಗಳ -ಕವನ, ಕವಿತೆ, ದಾಸರಪದ, ವಚನ, ತ್ರಿಪದಿ, ಸಿನೆಮಾ ಮತ್ತು ಜನಪದಗೀತೆಗಳ- ಅರ್ಥವಿವರಣೆಯನ್ನು ಮೈಸೂರು ಆಕಾಶವಾಣಿ ಎಫ್.‌ಎಂ. 100.6 ರಲ್ಲಿ ಹೇಳುವ ಸದವಕಾಶ 15 ಮಂದಿ ವಿದ್ವಾಂಸರ ನಡುವೆ ನನಗೂ ದೊರೆತಿತ್ತು. ಅದರ ಸಂಕಲನ ಪದಗತಿ-ಪದಸಂಸ್ಕೃತಿ. ಮೈಸೂರು ಆಕಾಶವಾಣಿ ಎಫ್.‌ಎಂ. 100.6 ಎರಡು ವರ್ಷಗಳ ಕಾಲ ಬೆಳಗ್ಗೆ 10 ನಿಮಿಷಗಳ ಕಾಲ ಪ್ರತಿನಿತ್ಯ ಪ್ರಸಾರ ಮಾಡಿದ ರಾಜ್ಯಮಟ್ಟದ ಸರಣಿ ಕಾರ್ಯಕ್ರಮ ಪದಸಂಸ್ಕೃತಿ.  ಈ ಕಾರ್ಯಕ್ರಮದ ನಾಲ್ಕು ಭಾಗಗಳಲ್ಲಿ ಒಂದನೆಯದು ಕನ್ನಡದ ಎರಡು ಪದಗಳನ್ನು ಪರಿಚಯಿಸುವುದು. ಎರಡನೆಯದು ಕನ್ನಡದ ಎರಡು ಪದಗಳ ತಪ್ಪು- ಪ್ರಯೋಗವನ್ನು ತೋರಿಸಿಕೊಡುವುದು. ಮೂರನೆಯದು ಯಾವುದಾದರೂ ಕನ್ನಡ ಗೇಯಕ್ಕೆ ಅರ್ಥವಿವರಣೆಯನ್ನು ಕೊಡುವುದು. ನಾಲ್ಕನೆಯದು ಅರ್ಥವಿವರಣೆ ಕೊಡುವುದಕ್ಕೆ ಮುನ್ನ ಆ ಗೇಯದ ಗಾಯನ. 

ಪದಗತಿ-ಪದಸಂಸ್ಕೃತಿ ಸಂಕಲನದಲ್ಲಿ ನಾನು ಆಕಾಶವಾಣಿಯಲ್ಲಿ ಗೇಯಗಳಿಗೆ ಹೇಳಿದ ಅರ್ಥವಿವರಣೆ ಮಾತ್ರ ಇದೆ. ಆಕಾಶವಾಣಿಯಲ್ಲಿ ನಾನು ಅರ್ಥವಿವರಣೆ ಹೇಳದಿದ್ದ ಕೆಲವು ಗೇಯಗಳನ್ನು ಅವುಗಳ ಅರ್ಥಮಹತ್ವದಿಂದಾಗಿ ಸೇರಿಸಿಕೊಂಡಿದ್ದೇನೆ. 65 ಗೇಯಗಳ ಒಟ್ಟು ವಿವರಣೆಯನ್ನು 1. ಮನುಷ್ಯತ್ವದ ಘನತೆ, 2. ಭಗವಂತ, 3. ಜೀವನ ರೀತಿ, 4. ಭಾವಯಾನ ಎನ್ನುವ ನಾಲ್ಕು ವಿಭಾಗಗಳಲ್ಲಿ ಜೋಡಿಸಿದ್ದೇನೆ.

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.