ಒಬ್ಬ ವ್ಯಕ್ತಿ ಜೀವಮಾನದಲ್ಲಿ ಓದಲಾಗದಷ್ಟನ್ನು ಕುಮಾರಸ್ವಾಮಿ ಬರೆದಿದ್ದಾರೆ ಎಂಬ ಮಾತು ಅವರ ಓದುಗ ವಲಯದಲ್ಲಿ ಪ್ರಚಲಿತವಿದೆ. ತಮ್ಮ ಹದಿನೇಳನೇ ವಯಸ್ಸಿನಿಂದಲೇ ಬರವಣಿಗೆಯನ್ನು ಶುರು ಮಾಡಿದ್ದ ಕುಮಾರಸ್ವಾಮಿಯವರು ತಮ್ಮ ಕೊನೆಯ ದಿನಗಳವರೆಗೂ, ಅಂದರೆ ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಾಹಿತ್ಯ ಕೃಷಿ ಮಾಡಿದ್ದಾರೆ.
ಮೊದಲು ತಮ್ಮ ಪದವಿ ಮತ್ತು ವೃತ್ತಿಗೆ ಸಂಬಂಧಿಸಿದ ಭೂಗರ್ಭಶಾಸ್ತ್ರ- ಖನಿಜ ಶಾಸ್ತ್ರದಲ್ಲಿ ಬರವಣಿಗೆಗಳನ್ನು ಮಾಡುತ್ತಿದ್ದರು. ನಂತರ ಸುಮಾರು 1904-5 ರಿಂದ ಸಾಂಸ್ಕೃತಿಕ ಮತ್ತು ತಾತ್ವಿಕ ವಿಷಯಗಳಲ್ಲಿ ನಿರಂತರ ಬರವಣಿಗೆ ಮತ್ತು ಪ್ರಕಟಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.
1900 ರಿಂದ 1947 ರವರೆಗೆ ಧರ್ಮ, ಅಧ್ಯಾತ್ಮ, ಕಲೆ, ಸಂಸ್ಕೃತಿ ಇನ್ನಿತರ ವಿಷಯಗಳಲ್ಲಿ ಜಗತ್ತಿನಾದ್ಯಂತ ಯಾವೆಲ್ಲಾ ಜರ್ನಲ್‌ಗಳು ಇದ್ದವೋ, ಹೆಚ್ಚುಕಡಿಮೆ ಅವೆಲ್ಲದರಲ್ಲೂ ಸ್ವಾಮಿಯವರ ಒಂದಾದರೂ ಬರಹ ಪ್ರಕಟವಾಗಿಯೇ ಇವೆ.
ಲೇಖನಗಳು, ಅನುವಾದಗಳು, ವಾದ-ಪ್ರತಿವಾದ, ತಿದ್ದುಪಡಿ ಹೀಗೆ ಎಲ್ಲಾ ರೀತಿಯಲ್ಲೂ ಅವರು ತೊಡಗಿಸಿಕೊಂಡಿದ್ದರು. ಅಷ್ಟೊಂದು ದೀರ್ಘಾವದಿಯಲ್ಲಿ ಬರಹಗಳನ್ನು ಮಾಡಿರುವುದರಿಂದ, ಕುಮಾರಸ್ವಾಮಿಯವರ ಒಟ್ಟು ಬರಹ ಸಾವಿರಾರು ಪುಟಗಳಿಷ್ಟಿವೆ ಎಂಬುದು ಆಶ್ಚರ್ಯವೇನಲ್ಲ. ಕುಮಾರ ಸ್ವಾಮಿಯವರನ್ನು ಓದಬಯಸುವವರಿಗೆ ಅವರ ಬರಹಗಳ ಪರಿಚಯವನ್ನು ಕೆಳಗೆ ಕೊಡಲಾಗಿದೆ.
ಅವರ ಎಲ್ಲ ಲೇಖನ ಅಥವ ಬರಹಗಳನ್ನು ಪಟ್ಟಿ ಮಾಡುವುದು ಈ ಲೇಖನದ ವಿಷಯವಲ್ಲ, ಆದರೂ ಸ್ಥೂಲವಾಗಿ ಅವರ ಪ್ರಮುಖ ಕೃತಿಗಳ ಯಾದಿ ಇದಾಗಿದೆ. ಪುಸ್ತಕರೂಪದಲ್ಲಿಯೇ ನೇರವಾಗಿ ಪ್ರಕಟವಾದ ಕುಮಾರಸ್ವಾಮಿಯವರ ಬರಹ ಕಡಿಮೆ. ಸಾಮಾನ್ಯವಾಗಿ ಅವರ ಬರಹಗಳು ಲೆಖನ ರೂಪದಲ್ಲಿ ಜರ್ನಲ್ ಗಳಲ್ಲಿ ಬಂದು, ನಂತರ ವಿಷಯಾಧಾರಿತವಾಗಿ ಪುಸ್ತಕಗಳಾಗಿ ಪ್ರಕಟಗೊಂಡವು.
ಅವರ ಬರಹಗಳನ್ನು ಓದುವುದು ಒಂದೆಡೆಯಾದರೆ, ಹೀಗೆ ಕಾಲಾನುಕಾಲಕ್ಕೆ ಬೇರೆ ಬೇರೆ ದೇಶದ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಅವರ ಬರಹಗಳು ಎಷ್ಟಿವೆ, ಎಲ್ಲಿ ಸಿಗುತ್ತವೆ ಎಂದು ಹುಡುಕುವುದೇ ಕಷ್ಟಕರವಾಗಿತ್ತು. ಅವರ ಮಗ ರಾಮ ಕುಮಾರಸ್ವಾಮಿ, ದೊರೈ ರಾಜ ಮತ್ತು ಇನ್ನಿತರರು ಲಭ್ಯವಿರುವ ಅವರ ಬರಹಗಳ ಪಟ್ಟಿಯನ್ನು ಆಗಾಗ ಮಾಡಿದ್ದರಾದರೂ ಅವೆಲ್ಲಾ ಅಪೂರ್ಣವೇ ಆಗಿವೆ ಏನ್ನುವುದಂತೂ ಸತ್ಯ.
ಹೀಗಾಗಿ ಸ್ವಾಮಿಯವರ ಬರಹಗಳ ಅಷ್ಟೂ ವಿವರಗಳನ್ನು ಕಲೆ ಹಾಕಲು IGNCA (INDIRA GANDHI NATIONAL CENTER FOR THE ARTS) ನಿರ್ಧರಿಸಿ, ಆ ಕೆಲಸವನ್ನು ಜೇಮ್ಸ್ ಎಸ್ ಕ್ರೌಚ್ (JAMES S CROUCH) ರವರಿಗೆ ಒಪ್ಪಿಸಿತು. ಅದರ ಫಲವೇ 2002 ಪ್ರಕಟವಾದ ‘A BIBLIOGRAPHY OF ANANDA KENTISH COOMARASWAMY’ ಪುಸ್ತಕ.
ಐನೂರು ಪುಟಗಳ ಈ ಪುಸ್ತಕದಲ್ಲಿ ಸ್ವಾಮಿಯವರ ಬರಹಗಳ ಪಟ್ಟಿಯಲ್ಲದೆ ಇನ್ನೇನೂ ಇಲ್ಲ. ಆದರೆ ಒಬ್ಬ ಸಂಶೋಧನಾ ವಿದ್ಯಾರ್ಥಿಗೆ ಸುಮ್ಮನೆ ಈ ಪುಸ್ತಕವನ್ನು ಅವಲೋಕಿಸುವುದೂ ಒಂದು ಶಿಕ್ಷಣವೇ ಸರಿ.
ಮಾಹಿತಿ ಸಂಗ್ರಹ, ಆಕರ ಪರಿಶೀಲನೆ, ಕಾರ್ಯಸಮಗ್ರತೆಗಳಿಗೆ ಈ ಪುಸ್ತಕ ಕೈಗನ್ನಡಿಯಾಗಿದೆ. ಇಪ್ಪತು ವರ್ಷಗಳ ಶ್ರಮ ಈ ಪುಸ್ತಕದ ಹಿಂದಿದೆ. ಹಲವು ದೇಶಗಳ ಗ್ರಂಥಾಲಯ, ಪತ್ರಿಕಾ ಕಛೇರಿಗಳಿಗೆ ಜೇಮ್ಸ್ ತಾವೇ ಭೇಟಿ ಕೊಟ್ಟು, ಕುಮಾರಸ್ವಾಮಿಯವರ ಲಭ್ಯವಿರುವ ಎಲ್ಲಾ ಬರಹಗಳನ್ನೂ ಗುಡ್ಡೆ ಹಾಕಿದ್ದಾರೆ. ಇದರಲ್ಲಿ ಒಟ್ಟು ಐದು ವಿಭಾಗಗಳಿವೆ :
- ಸ್ವಾಮಿಯವರ ಒಟ್ಟು 95 ಪುಸ್ತಕಗಳು. ಪುಸ್ತಕದ ಪ್ರಕಟಣಾ ವಿವರಗಳು, ವಿಷಯ ಸೂಚಿ ಮತ್ತು ಆ ಕೃತಿಗೆ ಬಂದ ವಿಮರ್ಶೆಗಳು.
- ಬೇರೆ ಬೇರೆ ಪುಸ್ತಕಗಳಿಗೆ ಸ್ವಾಮಿ ಬರೆದಿರುವ 96 ಲೇಖನಗಳು, ಲೇಖನದ ವಿಷಯ ಮತ್ತು ಸಂದರ್ಭ ಸೂಚಿ.
- ಪತ್ರಿಕೆ, ನಿಯತಕಾಲಿಕೆ ಇತ್ಯಾದಿಗಳಲ್ಲಿ ಪ್ರಕಟಗೊಂಡ ಸ್ವಾಮಿಯವರ 909 ಲೇಖನಗಳು. ಲೇಖನದ ವಿಷಯ ಮತ್ತು ಸಂದರ್ಭ ಸೂಚಿ.
- ಇತರ ಪ್ರಕಟಣೆಗಳು 3
- ಸ್ವಾಮಿಯವರ ಬಗ್ಗೆ ಇತರರು ಉಲ್ಲೇಖಿಸಿರುವ, ವಿಮರ್ಶಿಸಿರುವ 216 ಬರಹಗಳು ಮತ್ತು ಅದರ ಸಂದರ್ಭ ಸೂಚಿ.
ಮೇಲ್ನೋಟಕ್ಕೆ ಈ ಪುಸ್ತಕ ಸಪ್ಪೆ ಎನಿಸಬಹುದಾದರೂ, ಗಂಭೀರ ವಿದ್ವಾಂಸನೊಬ್ಬನ ಬರಹದ ಹರಹು (ಸನಾತನ ಧರ್ಮ, ಕಲಾತತ್ವ, ತತ್ವಶಾಸ್ತ್ರ, ಅಧ್ಯಾತ್ಮ, ವಿಜ್ಞಾನ, mythology ಇತ್ಯಾದಿ) ಮತ್ತು ಅದರ ಮಹತ್ವವನ್ನು ಅರಿತ ವಿದ್ವಾಂಸನೊಬ್ಬ, ಅವನ್ನೆಲ್ಲಾ ಕಲೆ ಹಾಕಲು ಪಟ್ಟಿರುವ ಶ್ರಮದ ಬಗ್ಗೆ ಮೆಚ್ಚುಗೆ ಮೂಡದಿರದು. ಪ್ರತಿಯೊಂದು ಲೇಖನದ ಪ್ರಕಟಣೆಯ ವರ್ಷ, ಸಂದರ್ಭ,ಮರುಪ್ರಕಟಣೆ ಇತ್ಯಾದಿಗಳನ್ನೊಳಗೊಂಡ ಸಂಪೂರ್ಣ ಮಾಹಿತಿಯನ್ನುಒದಗಿಸಿದ್ದಾರೆ. ಕುಮಾರಸ್ವಾಮಿಯವರನ್ನು ಸಮಗ್ರವಾಗಿ ಓದಬಯಸುವವರಿಗೆ ಸುಲಭವಾದ ಗೈಡ್ ಈ ಪುಸ್ತಕ .(ಈ ಪುಸ್ತಕ ಅಮೇಜ಼ಾನ್ ಮತ್ತಿತರೆಡೆ ಲಭ್ಯವಿದೆ.)
ಇದು ಸಮಗ್ರವಾದ ಮಾಹಿತಿಯಾದರೆ, ವಿಷಯಾಧಾರಿತವಾಗಿ ಕುಮಾರಸ್ವಾಮಿಯವರ ಬರಹಗಳನ್ನು ಓದಬಯಸುವವರು ಮೊದಲು ‘Essays In National Idealism’ ಮತ್ತು ’The Dance of Shiva’ ಪುಸ್ತಕಗಳಿಂದ ಶುರು ಮಾಡಬಹುದು.
ಇವೆರಡೂ ಪುಸ್ತಕಗಳು ಸರಳವಾಗಿಯೂ ಇವೆ ಮತ್ತು ಸ್ವಾಮಿಯವರ ಒಟ್ಟು ಬರಹಗಳಿಗೆ ದಿಕ್ಸೂಚಿಯಾಗಿಯೂ ಇವೆ. ಅವರ ನಂತರದ ಹಲವು ಲೇಖನ ಮತ್ತು ಪುಸ್ತಕಗಳು ಇಲ್ಲಿನ ವಿಷಯಗಳ ಮುಂದುವರಿಕೆಯಾಗಿಯೇ ಇವೆ. ಹಾಗಾಗಿ ಈ ಎರಡೂ ಪುಸ್ತಕಗಳು ಸ್ವಾಮಿಯವರ ಉಳಿದ ಬರವಣಿಗೆಗಳಿಗೆ ಮುಂದೀವಿಗೆಯಂತೆ. ಅವರ ನಂತರದ ಹಲವು ಕೃತಿಗಳು ಘನವಾಗುತ್ತಾ ಹೋಗುತ್ತವಾದರೂ ಅವೆಲ್ಲದರ ಬೀಜರೂಪ ಈ ಪುಸ್ತಕಗಳಲ್ಲಿವೆ. ಮುಖ್ಯವಾಗಿ ವಿದೇಶಿ ವಿದ್ವಾಂಸರನ್ನು ಕಣ್ಣ ಮುಂದಿಟ್ಟುಕೊಂಡು ಇವುಗಳನ್ನು ಬರೆದಿದ್ದಾರಾದರೂ ನಮ್ಮ ಓದಿಗೂ ಇವು ಒದಗುತ್ತವೆ.
ಕುಮಾರಸ್ವಾಮಿಯವರ ಬಹು ಮಹತ್ವದ ಕೊಡುಗೆಯೆಂದರೆ ಸಾಂಪ್ರದಾಯಿಕ ಕಲಾತತ್ತ್ವದ ಕುರಿತು ಅವರು ಮಾಡಿರುವ ಬರಹಗಳು. ಹಲವಾರು ವಿದೇಶಿ ವಿದ್ವಾಂಸರು ಇಂದಿಗೂ ಆ ಬರಹಗಳನ್ನು ಆಕರವಾಗಿ ಬಳಸುತ್ತಾರೆ. ಕಲಾತತ್ತ್ವದ ಬಗ್ಗೆ ಅವರು ಬರೆದ ನೂರಾರು ಲೇಖನಗಳಲ್ಲಿ ಯಾವುದನ್ನು ಓದಬೇಕು ಎಂಬುದಕ್ಕೆ ತಮ್ಮ ಕೊನೆಗಾಲದ ಹೊತ್ತಿಗೆ ಮರುಪ್ರಕಟವಾದ ’Figures of Speech or Figures of Thought’ ಪುಸ್ತಕದ ಒಂದು ಆವೃತ್ತಿಗೆ ಮುನ್ನುಡಿ ಬರೆಯುತ್ತಾ ಸ್ವಾಮಿಯವರೇ ಒಂದು ಸಲಹೆ ನೀಡಿದ್ದಾರೆ.
“This is not a systemic treatise: each of the seventeen chapters deals with some particular aspect or application of the traditional theory of art, and is complete in itself; a certain amount of repetition has been therefore inevitable. But if not systemic, the subject matter of the whole is consistently one and the same, and no other than that of my “Christian and oriental philosophy of art” And” transformation of nature in art “. And I think I may say that whoever makes use of these three books and of the sources referred to in them will have a fairly complete view of the doctrine about art that the greater part of mankind has accepted from prehistoric times until yesterday.”
ಹಾಗಾಗಿ ಮೇಲೆ ಹೆಸರಿಸಿರುವ ’Figures of Speech or Figures of Thought’, ’Christian and Oriental Philosophy of Art’ ಮತ್ತು ‘Transformation of Nature in Art’ ಈ ಮೂರು ಪುಸ್ತಕಗಳ ಅಧ್ಯಯನ ಮಾಡಿದರೆ, ಆದಿಕಾಲದಿಂದ ಜಗತ್ತಿನ ಬಹುಪಾಲು ಜನಾಂಗಗಳು ಒಪ್ಪಿಕೊಂಡು ಬಂದಿರುವ ಕಲಾಸಿದ್ಧಾಂತದ ಅವಲೋಕನ ಮಾಡಿದಂತೆ.
(ಈ ಮಾತುಗಳನ್ನು ಓದಿದಾಗ, ಇಷ್ಟೇ ಸಾಕಾ? ಎಂಬ ಭಾವ ಬರಬಹುದು. ಆದರೆ ಕುಮಾರಸ್ವಾಮಿಯವರು ತಮ್ಮ ಬರಹಗಳಲ್ಲಿ ಹೇರಳವಾಗಿ ಆಕರಗ್ರಂಥಗಳ ಉಲ್ಲೇಖಗಳನ್ನು ಮಾಡಿದ್ದಾರೆ. ಅಲ್ಲದೆ ಅಡಿಟಿಪ್ಪಣಿಗಳಲ್ಲೆಲ್ಲಾ ಬೇರೆಬೇರೆ ಸಂಸ್ಕೃತಿಯ ಮೂಲ ಗ್ರಂಥಗಳನ್ನು ಉದ್ಧರಿಸಿದ್ದಾರೆ. ಇದನ್ನೆಲ್ಲಾ ಓದುವುದೆಂದರೆ ಈ ವಿಷಯದಲ್ಲಿ ಸಮಗ್ರವಾದ ಅಧ್ಯಯನ ನಡೆಸಿದಂತೆ)
ಇದಲ್ಲದೆ ವಿಷಯಾಧಾರಿತವಾಗಿ ಕುಮಾರಸ್ವಾಮಿಯವರ ಚಿಂತನೆಯ ತುಣುಕುಗಳನ್ನು ಓದಬಯಸುವವರಿಗೆ, ದೊರೈ ರಾಜ ಅವರು ” Wisdom of Ananda Coomaraswamy” ಎಂಬ ಪುಸ್ತಕವನ್ನು ಸಂಕಲಿಸಿದ್ದಾರೆ. ಇದು ಸ್ವಾಮಿಯವರನ್ನು ಹೊಸದಾಗಿ ಓದಲು ಶುರುಮಾಡುವವರಿಗೆ ಸುಲಭದ ಆಯ್ಕೆ. ಸಮಾಜ, ಕಲೆ, ಸಂಸ್ಕೃತಿ, ಧರ್ಮ ಇತ್ಯಾದಿ ಹಲವು ವಿಷಯಗಳಲ್ಲಿ ಕುಮಾರಸ್ವಾಮಿಯವರ ಮಾತುಗಳನ್ನು ಅವರ ಬರಹಗಳಿಂದ ಆಯ್ದು ಕೊಟ್ಟಿದ್ದಾರೆ. ಮೂಲ ಲೇಖನದ ಪಟ್ಟಿಯನ್ನು ಕಡೆಯಲ್ಲಿ ನೀಡಿದ್ದಾರೆ. ಆಸಕ್ತರು ಯಾದೃಚ್ಛಿಕವಾಗಿ ಯಾವುದೇ ಪುಟವನ್ನು ಓದಿ ನಂತರ ಅದರ ಮೂಲ ಲೇಖನವನ್ನು ಓದಬಹುದು.
ಆದರೆ ಕುಮಾರಸ್ವಾಮಿಯವರಿಗೆ ಬಹಳ ಆತ್ಮೀಯರೇ ಈ ಪುಸ್ತಕವನ್ನು ಸಂಕಲಿಸಿದ್ದರೂ, ಒಳಗಿನ ಹೂರಣದ ಆಯ್ಕೆ ಬಹಳ ಸಾಧಾರಣವಾಗಿದೆ. ಸುಮ್ಮನೆ ಸ್ವಾಮಿಯವರ ಚಿಂತನೆಗಳ ಮೇಲುಸ್ತರದ ಪರಿಚಯಕ್ಕಾಗಿ ಇದನ್ನು ಓದಬಹುದು ಅಷ್ಟೇ.
ಸ್ವಾಮಿಯವರ ಮಗ ರಾಮ ಕುಮಾರಸ್ವಾಮಿಯವರು ಸಂಪಾದಿಸಿರುವ “The Essential Ananda K. Coomaraswamy” ಎಂಬ ಗ್ರಂಥದಲ್ಲಿ, ಸ್ವಾಮಿಯವರ ಹಲವು ಪುಸ್ತಕಗಳಿಂದ ಆಯ್ದ ಇಪ್ಪತ್ತು ಲೇಖನಗಳಿವೆ. ಅವರು ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಪುಸ್ತಕಗಳ ಲೇಖನಗಳು ಇಲ್ಲಿರುವುದರಿಂದ, ಅವರ ಒಟ್ಟು ಚಿಂತನೆಯ ಜಾಡು ಹಿಡಿಯಲು ಕೂಡ ಇದು ಉಪಯುಕ್ತ. ಕುಮಾರಸ್ವಾಮಿಯವರ ಸಂಪೂರ್ಣ ಬರಹಗಳ ಓದಿನ ಅವಶ್ಯಕತೆ ಇಲ್ಲದ, ಸಾರಭೂತವಾಗಿ ಅವರ ಚಿಂತನೆಗಳನ್ನು ತಿಳಿದರೆ ಸಾಕು ಎನ್ನುವವರಿಗೆ ಈ ಪುಸ್ತಕ ಬಹು ಉಪಯುಕ್ತ.
ಸಾಂಪ್ರದಾಯಿಕ ಮತ್ತು ಪಾರಂಪರಿಕ ಜ್ಞಾನವನ್ನು ಸಂಪೂರ್ಣವಾಗಿ ನೆಚ್ಚಿದ್ದ ಸ್ವಾಮಿಯವರು ಸಹಜವಾಗಿಯೇ ವೇದಗಳ ಕುರಿತು ಬೇಕಾದಷ್ಟು ಬರಹಗಳನ್ನು ಮಾಡಿದ್ದಾರೆ. ಮಂತ್ರಗಳ ಅನುವಾದದಿಂದ ಹಿಡಿದು, ಅವುಗಳ ಒಳಾರ್ಥ, ಅವುಗಳ ಅನುವಾದ ಮತ್ತು ಅರ್ಥೈಸುವಿಕೆಯಲ್ಲಿ ಆಗುವ ತಪ್ಪುಗಳು, ವೇದಗಳಲ್ಲಿ ಬರುವ ಪರಿಕಲ್ಪನೆಗಳು ಇತ್ಯಾದಿಗಳ ಕುರಿತು ಗಂಭೀರ ಲೇಖನಗಳನ್ನು ಸ್ವಾಮಿ ಬರೆದಿದ್ದಾರೆ. ಅಂಥ ಬರಹಗಳು ಸಾಕಷ್ಟು ಸಂಖ್ಯೆಯಲ್ಲಿವೆಯಾದರೂ, ಅವುಗಳಲ್ಲಿ ಪ್ರಮುಖವಾದವನ್ನು ವಿದ್ಯಾನಿವಾಸ್ ಮಿಶ್ರರವರು ಸಂಕಲಿಸಿ ‘Perception of Vedas’ ಎಂಬ ಪುಸ್ತಕವನ್ನು ಹೊರತಂದರು. IGNCA ಇದನ್ನು 2000 ರಲ್ಲಿ ಪ್ರಕಟಿಸಿದೆ. ಸ್ವಾಮಿಯವರ ವೈದಿಕ ಮತ್ತು ತಾತ್ವಿಕ ವಿಚಾರಗಳನ್ನು ಓದಬಯಸುವವರಿಗೆ ಈ ಪುಸ್ತಕ ಒಳ್ಳೆಯ ಆಯ್ಕೆ.
ಕೊನೆಯದಾಗಿ ರೋಜರ್ ಲಿಪ್ಸಿ (Roger Lipsey) ಯವರು ಸಂಪಾದಿಸಿರುವ ’Coomaraswamy Trilogy’ ಎಂದೇ ಪ್ರಸಿದ್ಧಿ ಪಡೆದಿರುವ ’Coomaraswamy 1: Selected Papers on Traditional Art and Symbolism’, ’Coomaraswamy 2: Selected Papers on Metaphysics’ ಮತ್ತು ’Coomaraswamy: His Life and Work’ ಈ ಮೂರು ಪುಸ್ತಕಗಳು ಕುಮಾರಸ್ವಾಮಿಯವರ ಓದನ್ನು ಸಂಪೂರ್ಣಗೊಳಿಸುತ್ತವೆ. ಅವರ ಎಲ್ಲಾ ಮಹತ್ವದ ಲೇಖನಗಳೂ ಈ ಸಂಕಲನದಲ್ಲಿ ಸೇರಿವೆ. ಅಲ್ಲದೆ ಈ ಮೊದಲಿನ ಪುಸ್ತಕಗಳಲ್ಲಿ ಇರದಿದ್ದ ಮತ್ತು ಅಪ್ರಕಟಿತವಾಗಿಯೇ ಉಳ್ದಿದಿದ್ದ ಕೆಲವು ಲೇಖನಗಳೂ ಈ ಸಂಕಲನದಲ್ಲಿವೆ. ಈ ಮೂರು ಪುಸ್ತಕಗಳ ಓದು, ಕುಮಾರಸ್ವಾಮಿಯವರ ಜೀವನ-ಸಾಧನೆ-ಬರಹ ಅಷ್ಟನ್ನೂ ಓದುಗರಿಗೆ ಒದಗಿಸಿಕೊಡುತ್ತವೆ.
ಸುಯೋಗದಿಂದ ಈ ಎಲ್ಲಾ ಪುಸ್ತಕಗಳೂ ಅಂತರ್ಜಾಲದಲ್ಲಿ ಉಚಿತವಾಗಿ ಲಭ್ಯವಿದೆ. ಕೆಳಗೆ ಕೊಟ್ಟಿರುವ ಲಿಂಕ್ ಗಳ ಮೂಲಕ ಅವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
- Essays In National Idealism
- The Dance of Shiva
- Christian and Oriental Philosophy of Art
- Transformation of Nature in Art
- Figures of Speech or Figures of Thought
- Wisdom of Ananda Coomaraswamy
- The Essential Ananda Coomaraswamy
- Perception of Vedas
- Coomaraswamy 1: Selected Papers on Traditional Art and Symbolism
- Coomaraswamy 2: Selected Papers on Metaphysics
- Coomaraswamy: His Life and Work
ಆನಂದ ಕುಮಾರಸ್ವಾಮಿ ಅರುಣ್ ಭರದ್ವಾಜ್ ರವರ ಆನಂದ ಕುಮಾರಸ್ವಾಮಿ ಸರಣಿಯ ಮೊದಲ ಲೇಖನ ಇಲ್ಲಿದೆ.
Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.