close logo

ಆನಂದ ಕೆಂಟಿಷ್ ಕುಮಾರಸ್ವಾಮಿ – ಸನಾತನಿ ಚಿಂತಕನ ಕಿರುಪರಿಚಯ

“ನಾನು ಯಾವುದೇ ಹೊಸ ವಿಚಾರವನ್ನೂ ಹೇಳಿಲ್ಲ” ಎಂದು ತಮ್ಮ ಜೀವಿತದ ಕಟ್ಟಕಡೆಯ ಭಾಷಣದಲ್ಲಿ ಆನಂದ ಕುಮಾರಸ್ವಾಮಿ(1877-1947) ಯವರು ಹೇಳಿದ್ದರು. ಸಾವಿರಾರು ಪುಟಗಳಷ್ಟು ಬರವಣಿಗೆ ಮಾಡಿರುವ ವ್ಯಕ್ತಿಯೊಬ್ಬ ಹೀಗೆ ಹೇಳುವುದು ಕುತೂಹಲಕರವಾಗಿದೆ.

ವೈಜ್ಞಾನಿಕ ಆವಿಷ್ಕಾರ, ಆಧುನಿಕತೆಯ ದಾಂಗುಡಿ, ಪರಂಪರೆಯ ಬಗೆಗೆ ಏಳುತ್ತಿದ್ದ ಪ್ರಶ್ನೆಗಳು ಇತ್ಯಾದಿ ಸಾಂಸ್ಕೃತಿಕ ಆಲೋಡನೆಯ ಸಂದರ್ಭದಲ್ಲಿ ತಮ್ಮ ಬರವಣಿಗೆಯನ್ನು ಮಾಡಿದ ಕುಮಾರಸ್ವಾಮಿಯವರು, ಮೇಲಿನ ಮಾತನ್ನು ಹೇಳಿದ್ದು, ಅವರು ಪ್ರತಿಪಾದಿಸುತ್ತಿದ್ದ ವಿಚಾರಗಳ ಮುಂದುವರಿಕೆಯಾಗಿಯೇ ತೋರುತ್ತದೆ.

ತಮ್ಮ ಜೀವನದುದ್ದಕ್ಕೂ ಸಾಂಪ್ರದಾಯಿಕ ವಿಚಾರಗಳನ್ನು ಪ್ರತಿಪಾದಿಸುತ್ತಿದ್ದ ಕುಮಾರಸ್ವಾಮಿಯವರು, ಅವುಗಳಲ್ಲಿ ಶಾಶ್ವತ ಸತ್ಯಗಳಿವೆ, ಅವನ್ನು ವೈಯಕ್ತಿಕ ಮಟ್ಟದಲ್ಲಿ ಸಾಧಿಸಿಕೊಳ್ಳುವುದು ಮನುಷ್ಯನ ಏಳ್ಗೆಗೆ ಶ್ರೇಯಸ್ಕರ ಮತ್ತು ಮನುಷ್ಯನ ಒಟ್ಟು ಅವಶ್ಯಕತೆ ಮತ್ತು ಆನಂದಕ್ಕೂ ಅವುಗಳೇ ಹೇತು ಎಂದು ಬಲವಾಗಿ ನಂಬಿದ್ದರು.

ಸಂಪ್ರದಾಯವನ್ನು ನಂಬುವ ,ಆಶ್ರಯಿಸುವ ಅಥವ ಪ್ರತಿಪಾದಿಸುವ ಯಾವುದೇ ವ್ಯಕ್ತಿಯೂ, ತನ್ನ ಸಂಪ್ರದಾಯವನ್ನು ನೆಚ್ಚಿರುತ್ತಾನೆ. ಅದರಂತೆ ನಡೆದುಕೊಳ್ಳುತ್ತಿರುತ್ತಾನೆ. ಯಾರಿಗಾದರೂ ಇನ್ನಾವುದೇ ಸಂಪ್ರದಾಯದಲ್ಲಿ ವಿಶೇಷವಾದ ಆಸಕ್ತಿ ಇದ್ದು ಅದನ್ನು ಅಧ್ಯಯನ ಮಾಡಿದ್ದರೆ ಆ ಸಂಪ್ರದಾಯಗಳಲ್ಲೂ ಒಂದಷ್ಟು ವಿಷಯ ತಿಳಿದಿರುತ್ತದೆ. ಇನ್ನುಳಿದಂತೆ ಎಲ್ಲರಿಗೂ, ಸಾಮಾನ್ಯ ಜ್ಞಾನ ಎಂಬ ಮಟ್ಟದಲ್ಲಿ ಮಾತ್ರ ವಿಭಿನ್ನ ಸಂಪ್ರದಾಯಗಳ ಪರಿಚಯವಿರುತ್ತದೆ.

ಆದರೆ ಕುಮಾರಸ್ವಾಮಿಯವರು ಸಾಂಪ್ರದಾಯಿಕತೆಯನ್ನು ಪ್ರತಿಪಾದಿಸುತ್ತಿದ್ದುದು ಕೇವಲ ಈ ನೆಲೆಯಿಂದ ಅಲ್ಲ. ಅವರಿಗೆ, ಹೆಚ್ಚು ಕಡಿಮೆ ಜಗತ್ತಿನ ಎಲ್ಲಾ ಸಂಪ್ರದಾಯಗಳಲ್ಲೂ ಸಮಾನವಾಗಿಯೇ ಪ್ರವೇಶವಿತ್ತು. ಈ ಅಪರೂಪದ ಸಾಮರ್ಥ್ಯದಿಂದಾಗಿ, ಸಾಂಪ್ರದಾಯಿಕ ಜ್ಞಾನದ ತಾತ್ವಿಕತೆಯನ್ನು ಮತ್ತು ಅವು ಎಲ್ಲೆಡೆಯೂ ಹೇಗೆ ದೇಶೀಯ ರೂಪಗಳಲ್ಲಿ ತೋರಿಕೊಂಡವು ಎಂಬುದನ್ನು ವಿಷದವಾಗಿ ತಿಳಿಯಪಡಿಸಿದರು. ವಿಭಿನ್ನ ಸಂಪ್ರದಾಯಗಳ ಮೇಲ್ಮೈನ ವಿವರಗಳು ಹೇಗೆ ಒಂದೇ ಅಥವ ಸಮಾನವಾದ ಪ್ರಜ್ಞಾವಂತಿಕೆಯನ್ನು ಹೊಂದಿವೇ ಎಂದು ಅವರು ತೋರಿಸಿಕೊಡುತ್ತಿದ್ದರು.

ಕುಮಾರಸ್ವಾಮಿಯವರ ವಿದ್ಯಾಭ್ಯಾಸ ವಿಜ್ಞಾನದ ಹಿನ್ನೆಲೆಯದ್ದು. ಅವರ ವಿಜ್ಞಾನದ ಓದು ಅವರ ಕಲೆ ಮತ್ತು ತಾತ್ವಿಕ ವಿಚಾರಗಳ ಬರವಣಿಗೆಯಲ್ಲಿ ಬಹಳ ಸಹಕಾರ ಮಾಡಿವೆ. ಒಂದು ವಿಷಯವನ್ನು ವಸ್ತುನಿಷ್ಠವಾಗಿ ನೋಡುವುದು ವಿಜ್ಞಾನದ ಮೂಲಭೂತ ಲಕ್ಷಣವಾಗಿರುವುದರಿಂದ, ವಿಷಯಗಳಿಗೆ ನಿರ್ದಿಷ್ಟವಾದ ವ್ಯಾಖ್ಯಾನ ಕೊಡುವುದು ಅನಿವಾರ್ಯ. ಈ ಗುಣವನ್ನು ಕುಮಾರಸ್ವಾಮಿ ಮೈಗೂಡಿಸಿಕೊಂಡಿದ್ದರು. ಹಾಗಾಗಿ ಕಲೆಯಂತಹ ವ್ಯಕ್ತಿನಿಷ್ಠ ವಿಚಾರದಲ್ಲೂ ಪರಿಭಾಷೆ ಮತ್ತು ಪರಿಕಲ್ಪನೆಗಳಿಗೆ ಕುಮಾರಸ್ವಾಮಿ ಬಹಳ ನಿರ್ದಿಷ್ಟವಾದ ಮತ್ತು ’ಸರಿ’ ಎನ್ನಬಹುದಾದ ವ್ಯಾಖ್ಯಾನವನ್ನು ಮಾಡಿದ್ದಾರೆ. ಅವರು ಪರಿಕಲ್ಪನೆಗಳಿಗೆ ಮಾಡುವ ವ್ಯಾಖ್ಯಾನಗಳನ್ನಷ್ಟೇ ಓದಿ ಮನನ ಮಾಡಿದರೂ ಕಲೆ ಮತ್ತು ತಾತ್ವಿಕತೆಯ ಹಲವಾರು ವಿಚಾರಗಳು ನಮ್ಮಲ್ಲಿ ಸುಲಭವಾಗಿ ಮನೆಮಾಡುತ್ತವೆ.

ಅವರ ಒಟ್ಟು ಬೌದ್ಧಿಕ ಚಟುವಟಿಕೆ ಹೀಗೆ ರೂಪುಗೊಳ್ಳಲು ಅವರ ಹಿನ್ನೆಲೆಯೂ ಕಾರಣ. ಯೋಗಾಯೋಗವೆಂಬಂತೆ ಅವರು ಹುಟ್ಟಿದ ಪಂಡಿತ ಮನೆತನ, ಮತ್ತು ಅವರಿಗೆ ಎಳೆವೆಯಲ್ಲಿಯೇ ಸಿಕ್ಕ ಪ್ರಪಂಚದ ಎಕ್ಸ್ಪೋಶರ್, ಗಹನವಾದ ಮತ್ತು ಅವ್ಯಾಹತವಾದ ಅಧ್ಯಯನ, ಇವೆಲ್ಲಕ್ಕೂ ಅನುಕೂಲಕರವಾಗಿ ದೈವದತ್ತವಾಗಿ ಬಂದ ನೆನಪಿನ ಶಕ್ತಿ ಮತ್ತು ಮೇಲ್ನೋಟಕ್ಕೆ ವಿಬ್ಭಿನ್ನವಾಗಿ ಕಾಣುವ ವಿವರಗಳ ಒಳಗಿನ ಸಮಾನ ಅಂಶಗಳನ್ನು, ಸಂಬಂಧಗಳನ್ನು ಕಾಣುವ ಸಹಜ ಶಕ್ತಿ, ಇವುಗಳೆಲ್ಲಾ ಅವರಿಗೆ ತಮ್ಮ ಜೀವಿತದ ಕೆಲಸವನ್ನು ನಿರ್ವಹಿಸಲು ಬಹಳ ಸಹಾಯ ಮಾಡಿದವು.

ವೈಯಕ್ತಿಕ ಹಿನ್ನೆಲೆ

ಶ್ರೀಲಂಕದಲ್ಲಿ ಪೊನ್ನಂಬಲ ಮನೆತನ ಬಹಳ ಪ್ರಭಾವಶಾಲಿಯಾದ ಮನೆತನ.(1) ರಾಜಕೀಯವಾಗಿಯೂ ಪ್ರಭಾವಿಗಳಾಗಿದ್ದ ಆ ಮನೆತನದ ಮುತ್ತು ಕುಮಾರಸ್ವಾಮಿಯವರ ಮಗನಾಗಿ ಆನಂದ ಕುಮಾರಸ್ವಾಮಿ ಜನಿಸಿದರು.ತಂದೆ ಮುತ್ತು ಕುಮಾರಸ್ವಾಮಿಯವರು ಕೂಡ ಅಗಾಧ ಪಾಂಡಿತ್ಯ ಹೊಂದಿದ್ದವರೆ. ಅವರು ಬೌದ್ಧಮತದ ತಜ್ಞರಾಗಿದ್ದರು. ಬೌದ್ಧ ಮತದ ಕುರಿತು ಬರವಣಿಗೆಗಳನ್ನೂ ಅವರು ಮಾಡಿದ್ದಾರೆ. ಕುಮಾರಸ್ವಾಮಿಯವರ ತಾಯಿ ಎಲಿಜ಼ಬೆಥ್ ಬೀಬಿ ಆಂಗ್ಲ ಮನೆತನದವರಾಗಿದ್ದರು. (2)(3)

ತಂದೆಯ ಮರಣಾನಂತರ ವಿದೇಶದಲ್ಲಿ ಓದನ್ನು ಮುಂದುವರೆಸಿದ ಕುಮಾರಸ್ವಾಮಿ, ಭೂಗರ್ಭಶಾಸ್ತ್ರದಲ್ಲಿ ಪದವಿಯನ್ನು ಪಡೆದು ನಂತರ ಕೆಲ ವರ್ಷಗಳು field work ಕೂಡಾ ಮಾಡಿದ್ದರು.ಆದರೆ ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಕಲಾತ್ಮಕ ವಿಚಾರಗಳು ಅವರ ಮೂಲ ತುಡಿತವಾದ್ದರಿಂದ ಆ ವಿಷಯಗಳ ಅಧ್ಯಯನ ಮತ್ತು ಪ್ರಸರಣದಲ್ಲಿಯೇ ತಮ್ಮ ಜೀವಿತವನ್ನು ಸವೆಸಿದರು.

ಕುಮಾರಸ್ವಾಮಿಯವರ ಜೀವನದ ಬಗ್ಗೆ ಸಾಮಾನ್ಯ ತಿಳುವಳಿಕೆ ಬಯಸುವವರಿಗೆ – ಬಿ. ಶ್ರೀನಿವಾಸರಾವ್ ಅವರ ’ಆನಂದ ಕುಮಾರಸ್ವಾಮಿ’ (ಭಾರತ-ಭಾರತಿ ಪುಸ್ತಕಮಾಲೆ) ಮತ್ತು ಸಾ. ಕೃ. ರಾಮಚಂದ್ರ ರಾಯರ ’ಕಲಾತತ್ತ್ವಮಹರ್ಷಿ ಆನಂದ ಕುಮಾರಸ್ವಾಮಿ’ ಈ ಎರಡು ಪುಸ್ತಕಗಳು ಸಹಾಯ ಮಾಡುತ್ತವೆ.

ಜೀವನದುದ್ದಕ್ಕೂ ಸಾಂಪ್ರದಾಯಿಕ ವಿಷಯಗಳನ್ನು ಜಗತ್ತಿಗೆ ಮತ್ತು ವಿಶೇಷವಾಗಿ ಪಾಶ್ಚಾತ್ಯರಿಗೆ ಅರ್ಥ ಮಾಡಿಸುವ ಕಾಯಕದಲ್ಲಿ ಅವರು ತೊಡಗಿದ್ದರು.ಸನಾತನ ಧರ್ಮ ಮತ್ತು ಭಾರತೀಯ ಕಲಾತತ್ತ್ವವನ್ನು ವಿದೇಶಿ ವಿದ್ವತ್ ವಲಯಕ್ಕೆ ಅವರಷ್ಟು ಪರಿಣಾಮಕಾರಿಯಾಗಿ ತಲುಪಿಸಿದವರು ವಿರಳ.  ಹದಿನೇಳನೇ ವಯಸ್ಸಿನಿಂದಲೆ ಬರವಣಿಗೆಯಲ್ಲಿ ತೊಡಗಿದ್ದ ಕುಮಾರಸ್ವಾಮಿ ಅವರು, ತಮ್ಮ ಜೀವನದುದ್ದಕ್ಕೂ ನಿರಂತರವಾಗಿ ಲೇಖನ ಕೃಷಿ ಮಾಡಿದ್ದಾರೆ.

ಇಂದು ನಾವು ಬೌದ್ಧಿಕ ಕ್ಷತ್ರಿಯ ಎಂಬ ಪರಿಕಲ್ಪನೆಯನ್ನು ಆಗಾಗ ಬಳಸುತ್ತಿರುತ್ತೇವೆ. ಅದಕ್ಕೆ ಮೆರು ಉದಾಹರಣೆಯಾಗಿ ಕುಮಾರಸ್ವಾಮಿ ನಿಲ್ಲುತ್ತಾರೆ.

ಕೇವಲ ಲೇಖನಕಾರ್ಯವಲ್ಲದೇ, ಹಲವಾರು ಪ್ರಾಚೀನ ವಸ್ತು-ವಿಷಯಗಳ ದಾಖಲೀಕರಣವನ್ನು ಕುಮಾರಸ್ವಾಮಿ ಮಾಡಿದ್ದರು. ತಾವು ಕ್ಯುರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಬಾಸ್ಟನ್ ವಸ್ತುಸಂಗ್ರಹಾಲಯದಲ್ಲಿ, ಭಾರತ ಮತ್ತು ಶ್ರೀಲಂಕಾದ ಅಸಂಖ್ಯಾತ ಪ್ರಾಚ್ಯವಸ್ತುಗಳನ್ನು ಸಂಗ್ರಹಿಸಿ ಇಡುವಲ್ಲಿ ಕುಮಾರಸ್ವಾಮಿಯವರು ವಹಿಸಿದ ಆಸ್ಥೆ ಬಹಳ ಮಹತ್ವದ್ದು. ಅವರ ಪ್ರಯತ್ನದಿಂದಲೇ ಪಾಶ್ಚಾತ್ಯ ವಿದ್ವದ್ವಲಯಕ್ಕೆ ಭಾರತೀಯಯತೆಯ ಇಂತಹ ಆಯಾಮಗಳು ಪರಿಚಯವಾಗಿದ್ದು. ಅವರ ಕಾರ್ಯದ ಮಹತ್ವ ಮತ್ತು ವಿಸ್ತಾರದ ಕುರಿತಾಗಿ ಮುಂದಿನ ಲೇಖನಗಳಲ್ಲಿ ತಿಳಿಸಲಾಗುವುದು.

ಕುಮಾರಸ್ವಾಮಿಯವರನ್ನು ಓದಲು ಮೊದಲುಮಾಡುವವರಿಗೆ ಎದುರಾಗುವ ಸಮಸ್ಯೆಗಳು ಕೆಲವಿವೆ. ಅಗಾಧವಾದ ಬರಹ ರಾಶಿಯೂ ಕೆಲವರನ್ನು ಉತ್ಸಾಹಗುಂದಿಸಬಹುದು. ಆದರೆ ತಾತ್ವಿಕ ತಳಹದಿಯ ಮೇಲೆ ಬರವಣಿಗೆಗಳನ್ನು ಅವರು ಮಾಡಿರುವುದರಿಂದ ಆ ತತ್ತ್ವಗಳ ಮನನ ಮಾಡಿದರೆ ಉಳಿದಂತೆ ಅವರ ಬರಹಗಳ ವಿಸ್ತಾರದ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ.

ಏಕೆಂದರೆ ಸ್ವಾಮಿಯವರು ಸಾವಿರಾರು ಲೇಖನಗಳನ್ನು ಬರೆದಿದ್ದಾರೆಂಬುದು ನಿಜವಾದರೂ, ಅವರ ಎಲ್ಲಾ ಬರಹಗಳು ಯಾವ ತಾತ್ವಿಕತೆಯ ಮೇಲೆ ನಿಂತಿದೆ ಎಂಬುದನ್ನು ಕೇವಲ ಐದಾರು ಪುಟಗಳಷ್ಟು ಚೊಕ್ಕ ಟಿಪ್ಪಣಿಯಿಂದ ವಿಶದೀಕರಿಸಿಕೊಂಡುಬಿಡಬಹುದು. ಆದರೇ ಆ ತತ್ತ್ವ ಎಷ್ಟು ಸರ್ವದೇಶೀಯ ಮತ್ತು ಸಾರ್ವಕಾಲಿಕ ಎಂಬುದನ್ನು ನಿರೂಪಿಸಲು ಅವರಿಗೆ ಒದಗಿ ಬಂದಿರುವ ಪಾಂಡಿತ್ಯ ಮಾತ್ರ ಅಸಾಧಾರಣವಾದ್ದು.

ಇದೇ ಕಾರಣಕ್ಕೆ ಅವರ ಹಲವು ಬರವಣಿಗೆಗಳು ತುಂಬಾ ಪುನರಾವರ್ತನೆ ಆಗುತ್ತಿದೆ ಎಂಬ ಭಾವವನ್ನು ಕೊಡುತ್ತವೆ. ಅವರೇ ಇದನ್ನು ಕೆಲವು ಬಾರಿ ಹೇಳಿದ್ದರು. ಅಲ್ಲದೆ ಸಂಪ್ರದಾಯವನ್ನು ಅತಿಯಾಗಿ ನೆಚ್ಚಿಕೊಳ್ಳುವ ಅವರ ಮನಸ್ಥಿತಿಯಿಂದಾಗಿ ಕೆಲವು ವಿಚಾರಗಳಲ್ಲಿ ಅವರು ಎಡವಿದ್ದಾರೆ ಕೂಡ. ಅವರ ವಿವಿಧ ಲೇಖನಗಳ ಓದು ಮುಂದುವರೆದಂತೆ ಇವೆಲ್ಲಾ ತಾನೇತಾನಾಗಿ ಸ್ಪಷ್ಟವಾಗುತ್ತದೆ.

ಸ್ವಾಮಿಯವರ ಬರಹಗಳ ಅಗಾಧತೆಗೆ ಹೋಲಿಸಿದರೆ, ಅವರ ಜನಪ್ರಿಯತೆ ಕಡಿಮೆ ಎಂದೇ ಹೇಳಬಹುದು.’ನನ್ನ ಬರಹಗಳು ಕೇವಲ ಐದು ಜನರಿಗೆ ಉಪಯೋಗವಾದರೆ ಅಷ್ಟೇ ಸಾಕು’ ಎಂದು ಸ್ವಾಮಿ ಗೆಳೆಯರ ಬಳಿ ಹೇಳುತ್ತಿದ್ದರಂತೆ. ಅಲ್ಲದೆ ಅವರ ಬರಹಗಳು ವಿದ್ವದ್ವಲಯಕೇಂದ್ರಿತವಾಗಿದ್ದರಿಂದ, ಆ ವಿಷಯಗಳಲ್ಲಿ ತೇಲ್ನೋಟದ ತಿಳುವಳಿಕೆ ಸಾಕು ಎನ್ನುವವರಿಗೆ ಸ್ವಾಮಿಯವರ ಅವಶ್ಯಕತೆ ಅಷ್ಟಾಗಿ ಬರುವುದಿಲ್ಲ. ಅದೇನೆ ಇದ್ದರೂ ಸಾಂಸ್ಕೃತಿಕ ಅಧ್ಯಯನ, ಭಾರತೀಯತೆ ಇತ್ಯಾದಿ ವಿಷಯಗಳ ಅನುಸಂಧಾನದ ಆಸಕ್ತಿ ಈಗ ಹೆಚ್ಚಾಗಿ ಇರುವುದರಿಂದ, ಸ್ವಾಮಿಯವರ ಬರಹಗಳ ಓದು ಬಹು ಪ್ರಯೋಜನಕಾರಿಯಾಗುತ್ತದೆ.

ತಮ್ಮ ಜೀವಮಾನವಿಡೀ ಇಂತಹ ಕೆಲಸಗಳಲ್ಲಿಯೇ ಮಗ್ನರಾಗಿದ್ದರೂ, ಕುಮಾರಸ್ವಾಮಿಯವರು ಕುಡುಮಿಯಂತೆ ಬದುಕಿದವರಲ್ಲ. ಅವರ ಜೀವನ ಸಿನಿಮೀಯ ರೀತಿಯದ್ದಾಗಿತ್ತು. ಹಲವಾರು ದೇಶಗಳ ಅತ್ಯಂತ ಪ್ರಭಾವಿ ವ್ಯಕ್ತಿಗಳು ಅವರಿಗೆ ಗೆಳೆಯರಾಗಿದ್ದರು. ನಾಲ್ಕು ಮದುವೆಯಾಗಿದ್ದರು. ಐಶಾರಾಮಿ ಬದುಕು ಮತ್ತು ಅರ್ಥಿಕ ಸಂಕಷ್ಟ ಎರಡನ್ನೂ ನೋಡಿದ್ದರು. ಅವರ ಜೀವನದಲ್ಲಿ ನಡೆದ ಕೆಲವು ಘಟನೆಗಳಿಂದಲೇ(ವಿಚ್ಛೇದನ, ಮಗನ ಅಕಾಲಿಕ ಸಾವು ಇತ್ಯಾದಿ) ಅವರ ಕೊನೆಕೊನೆಯ ಬರಹಗಳು ಗಂಭೀರವಾದವು ಎಂದು ಕೆಲವು ವಿಮರ್ಶಕರು ಹೇಳಿದ್ದಾರೆ.

ಒಟ್ಟಿನಲ್ಲಿ ತುಂಬು ಜೀವನ ನಡೆಸಿದ ಕುಮಾರಸ್ವಾಮಿ, ತಮ್ಮ ಕೊನೆಗಾಲದಲ್ಲಿ ಭಾರತಕ್ಕೆ ಬಂದು ನೆಲೆಸಿ, ಆಧ್ಯಾತ್ಮಿಕ ಜೀವನ ನಡೆಸಬೇಕೆಂದಿದ್ದರು.

’ನಾನು ಯಾವೆಲ್ಲಾ ತತ್ತ್ವಗಳ ಬಗ್ಗೆ ಇಷ್ಟು ವರ್ಷ ಬೌದ್ಧಿಕ ಆಲೋಡನೆಯನ್ನು ಮಾಡಿದ್ದೇನೋ ಅದರಲ್ಲಿ ಒಂದಂಶವನ್ನಾದರೂ ಅನುಭವವೇದ್ಯ ಮಾಡಿಕೊಳ್ಳಲು ಸ್ವತಂತ್ರ ಭಾರತಕ್ಕೆ ಮರಳುತ್ತೇನೆ’ ಎಂದು ತಮ್ಮ ಕಡೆಯ ಭಾಷಣದಲ್ಲಿ ಕುಮಾರಸ್ವಾಮಿ ಹೇಳಿದ್ದರು.

ಆದರೆ 1947 ರ ಸೆಪ್ಟೆಂಬರ್ 9 ರಂದು ಬೋಸ್ಟನ್ ನಲ್ಲಿ ಹಠಾತ್ತನೆ ಅವರ ಮರಣವಾಯಿತು. ಅವರ ಅಸ್ಥಿಯನ್ನು ಅವರ ಮಗ ಗಂಗೆಯಲ್ಲಿ ವಿಸರ್ಜಿಸಿದರು.

ಒಟ್ಟಾರೆಯಾಗಿ ಬೌದ್ಧಿಕ ಜಿಜ್ಞಾಸೆಗೆ ಭರಪೂರ ಸಾಮಗ್ರಿ ಒದಗಿಸಿರುವ ಆನಂದ ಕುಮಾರಸ್ವಾಮಿ ಲೋಕಕ್ಕೆ ಸ್ವಾಗತ. ಅವರ ಬರಹಗಳ ವಿಸ್ತಾರ, ಅದರ ಇಂದಿನ ಪ್ರಸ್ತುತತೆ ಇತ್ಯಾದಿಗಳನ್ನು ಮುಂದೆ ಚರ್ಚಿಸಲಾಗುವುದು.

Bibliography

  1. https://en.wikipedia.org/wiki/Ponnambalam%E2%80%93Coomaraswamy_family
  2. https://en.wikipedia.org/wiki/Muthu_Coomaraswamy
  3. https://en.wikipedia.org/wiki/Ananda_Coomaraswamy

Feature Image Credit: wikipedia.org

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.