close logo

ಸನಾತನಧರ್ಮದ ಮಾತೃಶಕ್ತಿ ಆರಾಧನಾ ಪರಂಪರೆ -2

ಶಕ್ತಿಪೀಠಗಳ ಮಹತ್ವ 

ಶಿವ ಸತಿಯ ಶವವನ್ನು ಏಕೆ ಹೊತ್ತುಕೊಂಡು ನಿಲ್ಲಲ್ಲಿ ನಿಲ್ಲಲಾರದೆ ತಿರುಗಿದ; ಸತಿಯ ದೇಹದ ತುಣುಕುಗಳು ಬಿದ್ದ ಸ್ಥಳಗಳು ಶಕ್ತಿಕೇಂದ್ರಗಳು ಯಾಕೆ ಆಗುತ್ತವೆ ಎನ್ನುವುದನ್ನು ಕಾಳಿಕಾ ಪುರಾಣದ 5, 6, 14, 16, 18ನೇ ಅಧ್ಯಾಯಗಳು ಸ್ಪಷ್ಟ ಪಡಿಸುತ್ತವೆ: “ಶಿವ ಕಳೆದುಕೊಂಡ ಪತ್ನಿ ಅಂತಿಂಥವಳಲ್ಲ. ಈಶ್ವರನ ಹೊರತಾಗಿ ಬ್ರಹ್ಮನನ್ನೂ ಒಳಗೊಂಡಂತೆ ಬ್ರಹ್ಮನೊಂದಿಗೆ ಇದ್ದವರೆಲ್ಲ ಕಾಮನ ಬಾಣಗಳಿಗೆ ಗುರಿಯಾಗಿ ಕಾಮಾವೇಶಕ್ಕೆ ಒಳಗಾಗಿದ್ದುದರಿಂದ ಈಶ್ವರ ಹೆಂಡತಿಯನ್ನು ಸ್ವೀಕರಿಸದಿದ್ದರೆ ಮಧ್ಯ ಮತ್ತು ಅಂತ್ಯದಲ್ಲಿ ಸೃಷ್ಟಿ ಹೇಗಾಗಲು ಸಾಧ್ಯ? ಬೇರೆ ಯಾರಿಂದಲೂ ಸಾಧ್ಯವಿಲ್ಲದ ತಾರಕಾಸುರನ ವಧೆಯು ಹೇಗೆ ಸಾಧ್ಯ? ಎಂದು ಬ್ರಹ್ಮ ಯೋಚಿಸಿದ. ಕಾಮನ ಹೊರತಾಗಿ ಮತ್ತೆ ಯಾರೂ ಈಶ್ವರನನ್ನು ಅವನ ತಪಸ್ಸಿನಿಂದ ವಿಚಲಿತಗೊಳಿಸಲಾರರು ಎಂದು ತಿಳಿದು ಕಾಮನಿಗೆ ಈಶ್ವರನಲ್ಲಿ ಕಾಮಾಕಾಂಕ್ಷೆ ಉಂಟಾಗುವಂತೆ ಮಾಡು; ಅದಕ್ಕಾಗಿ ಈಶ್ವರ ಎಲ್ಲಿಗೆ ಹೋದರೂ ಬಿಡದೆ ಸತತವಾಗಿ ಅವನನ್ನು ಹಿಂಬಾಲಿಸು ಎಂದು ಆದೇಶಿಸಿದ. ಅದಕ್ಕೆ ಅವನು ಈಶ್ವರನು ಆಕರ್ಷಿತ ಆಗಬಹುದಾದ ಸ್ತ್ರೀಯನ್ನು ಸೃಷ್ಟಿಮಾಡು, ನಾನು ನೀನು ಹೇಳಿದಂತೆ ಮಾಡುತ್ತೇನೆ ಎಂದ. ಆಗ ಬ್ರಹ್ಮ ಸಾವಿತ್ರಿ, ಸಂಧ್ಯಾ, ಉಮಾ ಎಂದು ಕರೆಸಿಕೊಳ್ಳುವ ಮಹಾಮಾಯೆಯಾದ ವಿಷ್ಣುಮಾಯೆಯ ಹೊರತಾಗಿ ಮತ್ತೆ ಯಾರೂ ಈಶ್ವರನನ್ನು ಆಕರ್ಷಿಸಲಾರರು ಎಂದು ತಿಳಿದು ನೀನು ವಿಶ್ವರೂಪಿಣಿಯನ್ನು ಆರಾಧಿಸಿ ನಿನ್ನ‌ ಮಗಳಾಗುವಂತೆ ಬೇಡಿಕೊ ಎಂದು ದಕ್ಷನಿಗೆ ಹೇಳಿದ”. 

“ದಕ್ಷ ಯಾವ ರೀತಿಯ ಆಹಾರವನ್ನೂ ಸೇವಿಸದೆ ಕ್ಷೀರ ಸಾಗರದ ಉತ್ತರದ ದಂಡೆಯಲ್ಲಿ ಮೂರು ಸಾವಿರ ವರ್ಷಗಳವರೆಗೆ ವಿಷ್ಣುಮಾಯೆಯಾದ ಅಂಬಿಕೆಯನ್ನು ಕುರಿತು ತೀವ್ರವಾಗಿ ತಪಸ್ಸು ಮಾಡಿದ. ಮಂದಾರ ಪರ್ವತಕ್ಕೆ ಹೋದ ಬ್ರಹ್ಮ ಜಗನ್ಮಯಿಯೂ, ಜಗದ್ಧಾತ್ರಿಯೂ, ಯೋಗನಿದ್ರೆಯೂ, ಮೇಧಾ, ಸ್ವಧಾ, ಪುಷ್ಟಿ, ಮೈತ್ರೀ, ಕರುಣಾ, ಶಾಂತಿ, ಕಾಂತಿಯೂ, ಎಲ್ಲರ ಹೃದಯದ ಅಂತರ್ಜ್ಯೋತಿಯೂ ಆದ ವಿಷ್ಣುಮಾಯೆಯನ್ನು ಕುರಿತು ಸತತವಾಗಿ ನೂರು ವರ್ಷಗಳ ವರೆಗೆ ಪ್ರಾರ್ಥನೆ ಮಾಡಿದ. ದೇವಿ ಪ್ರತ್ಯಕ್ಷಳಾದಾಗ ಹೇಗೆ ಕೇಶವನಿಗೆ ಲಕ್ಷ್ಮಿಯಂತೆ ಮನಮೋಹಕಳಾಗಿರುವೆಯೋ ಹಾಗೆಯೇ ಈಶ್ವರನಿಗೂ ಸ್ವ ಇಚ್ಛೆಯಿಂದ ಆಗು ಎಂದು ಬೇಡಿಕೊಂಡ. ದೇವಿಯು ಲೋಕ ಕಲ್ಯಾಣಾರ್ಥವಾಗಿ ದಕ್ಷನ ಸುಂದರ ಮಗಳಾಗಿ ಜನಿಸಿ ಈಶ್ವರನು ತನ್ನ‌ ಹೃದಯದೊಳಗಿನ ವಿದ್ಯೆ ಎಂದು ತನ್ನನ್ನು ಪ್ರಿಯ ಅರ್ಧಾಂಗಿಯಾಗಿ ಸ್ವೀಕರಿಸುವಂತೆ ಮಾಡುವೆ ಮತ್ತು ಅವನನ್ನು ತನ್ನ ವಶವರ್ತಿ ಮಾಡಿಕೊಳ್ಳುವೆ ಎಂದು ಹೇಳಿ ಅದೃಶ್ಯಳಾದಳು. ತಪಸ್ಸು ಮಾಡುತ್ತಿದ್ದ ದಕ್ಷನ ಮುಂದೆಯೂ ಪ್ರತ್ಯಕ್ಷಳಾಗಿ ಅವನು ಕೋರಿಕೊಂಡಂತೆ ಅವನ ಮಗಳಾಗಿ ಜನಿಸಲು ಒಪ್ಪಿಕೊಂಡಳು ಮತ್ತೆ ಜನಿಸಿ ಸತಿ ಎಂದು ಹೆಸರು ಪಡೆದಳು”. 

ಈಶ್ವರನನ್ನು ತನ್ನ ವಶವರ್ತಿಯಾಗಿಸಿಕೊಳ್ಳುವೆ ಎನ್ನುವ ವಿಷ್ಣುಮಾಯೆ, ಯೋಗನಿದ್ರೆ ಎಂದೆನ್ನಿಸಿಕೊಳ್ಳುವ ಜಗನ್ಮಯೀ ಯಾರು ಎಂಬುದನ್ನೂ ಕಾಳಿಕಾ ಪುರಾಣ ವಿವರಿಸುತ್ತದೆ: “ಅವ್ಯಕ್ತ ಆಗಿರುವುದನ್ನು ಸತ್ವ, ರಜಸ್ಸು, ತಮೋ ಗುಣಗಳ ಪ್ರತ್ಯೇಕ ರೂಪಗಳಲ್ಲಿ ಯಾವುದು ವ್ಯಕ್ತವಾಗಿಸುವುದೋ ಅದೇ ವಿಷ್ಣುಮಾಯೆ”; “ಪುರುಷನಿಂದ ಪ್ರತ್ಯೇಕಗೊಂಡು ಬ್ರಹ್ಮಾಂಡದ ಕೆಳಗೆ, ಮಧ್ಯ ಮತ್ತು ಆಂತರ್ಯದಲ್ಲಿ ಯಾವುದು ಇದೆಯೋ ಅದೇ ಯೋಗನಿದ್ರೆ”; “ಜ್ಞಾತ ಪ್ರಪಂಚದ ಎಲ್ಲದರ ಹಿಂದಿನ ಸೃಷ್ಟಿ ಶಕ್ತಿ ಆಗಿರುವವಳು, ಮಂತ್ರ-ರಹಸ್ಯಗಳನ್ನು ಪ್ರಕಟಪಡಿಸುವವಳು, ಯೋಗಿಗಳ ಹೃದಯದಲ್ಲಿ ಸತ್ವ ವಿದ್ಯೆ ಮತ್ತು ಪರಮಾನಂದ ಸ್ವರೂಪಿ ಆಗಿರುವವಳು, ಹಾಗೂ ವೈಷ್ಣವೀ ವಿದ್ಯೆಯ ರೂಪದಲ್ಲಿ ಯೋಗಿಗಳಿಗೆ ಮೋಕ್ಷಕಾರಕಳು, ಸಂಸಾರಿಗಳಿಗೆ ಸಂಸಾರ-ಬಂಧಕಾರಕಳು ಆಗಿರುವವಳೇ ಜಗನ್ಮಯೀ”. 

“ಬ್ರಹ್ಮ ಮತ್ತು ವಿಷ್ಣು ಇಬ್ಬರೂ ಶಿವನನ್ನು ಲೋಕಹಿತಾರ್ಥವಾಗಿ ಭೂಲೋಕದ ರಾಕ್ಷಸರನ್ನು ಕೊಲ್ಲುವ ಮಗನನ್ನು ಪಡೆಯುವುದಕ್ಕಾಗಿ ಮದುವೆಯಾಗಬೇಕು ಎಂದು ಕೋರಿಕೊಂಡಾಗ ಅವನು ಹೇಳಿದುದು ನಾನು ಮದುವೆಯಾಗಬಹುದಾದ ಯೋಗಿನಿಯೂ, ಕಾಮರೂಪಿಯೂ, ನನ್ನ ವೀರ್ಯದ ಒಂದು ಅಂಶವನ್ನಾದರೂ ತನ್ನ ಗರ್ಭದಲ್ಲಿ ಧರಿಸುವ ಸಾಮರ್ಥ್ಯ ಇರುವವಳೂ ಆಗಿರುವ ಸ್ತ್ರೀ ಯಾರಾದರೂ ಇದ್ದರೆ ಹೇಳಿ; ನಾನು ಧ್ಯಾನಾಸಕ್ತನಾಗಿದ್ದಾಗ ಅವಳು ಧ್ಯಾನಾಸಕ್ತಳಾಗಿರಬೇಕು, ನಾನು ಭೋಗಾಸಕ್ತನಾದಾಗ ಅವಳೂ ಭೋಗಾಸಕ್ತಳಾಗಿರಬೇಕು ಎಂದು. ಶಿವ ಮದುವೆಯಾದ ಸತಿ ಶಿವ ಬಯಸಿದವಳೂ, ಅವನಲ್ಲಿ ಸಂಪೂರ್ಣವಾಗಿ ತನ್ಮಯಳಾಗಿದ್ದ ಹೆಂಡತಿಯೂ ಆಗಿದ್ದಳು. ಮದುವೆಯಾದ ನಂತರ ಶಿವ ಸತಿಯನ್ನು ಒಂದು ಕ್ಷಣವೂ ಬಿಡಲಾರದವನಾಗಿದ್ದ. ಅವಳೊಡನೆ ಹಿಮಾಲಯದ ಸುಂದರ ನಿಕುಂಜಗಳಲ್ಲಿ, ಗುಹೆಗಳಲ್ಲಿ ಹಗಲೂ ರಾತ್ರಿ ಸುಖಿಸಿದ್ದ. ಹಿಮಾಲಯದ ಶಿಖರದಲ್ಲಿ ಮನೆ ಮಾಡಿದಾಗಲೂ ಶಿವ ಅಲ್ಲಿಯೂ ಅವಳೊಡನೆ ದೇವತೆಗಳ ಲೆಕ್ಕದಲ್ಲಿ ಹತ್ತು ಸಾವಿರ ವರ್ಷಗಳ ಕಾಲ ಸುಖಿಸಿದ್ದ. ಸತಿಯಲ್ಲಿಯೇ ಮನಸ್ಸನ್ನಿಟ್ಟ ಶಂಭುವಿಗೆ ಹಗಲು ರಾತ್ರಿಗಳು ಗೊತ್ತಾಗಲಿಲ್ಲ. ಈ ರೀತಿಯ ಅನುಬಂಧವನ್ನು ಸತಿಯ ಬಗ್ಗೆ ಹೊಂದಿದ್ದುದರಿಂದ ಅವಳು ಮರಣ ಹೊಂದಿದ್ದಾಳೆ ಎಂದು ಗೊತ್ತಾದರೂ ಅವಳ ಮೃತ ಶರೀರವನ್ನು ತನ್ನ ಮೈಮೇಲೆ ಇರಿಸಿಕೊಂಡು ದುಃಖದ ಆವೇಗವನ್ನು ತಡೆಯಲಾರದೆ ಜಗತ್ತಿನ ಮೂಲೆ ಮೂಲೆಯನ್ನು ತಿರುಗಿದುದು ಸಹಜವೇ”. 

“ಸತಿಯ ಮೃತ ದೇಹವನ್ನು ಶಿವನಿಂದ ಬೇರ್ಪಡಿಸಿದ ಹೊರತೂ ಶಿವನಿಗೆ ಅವಳು ಮರಣ ಹೊಂದಿರುವುದನ್ನು ಒಪ್ಪಿಕೊಳ್ಳಲೇ ಬೇಕಾದ ಅನಿವಾರ್ಯತೆ ಉಂಟಾಗುತ್ತಿರಲಿಲ್ಲ. ಅವಳು ಪುನರ್ಜನ್ಮವನ್ನು ಪಡೆದರೂ ಅವಳನ್ನು ತನ್ನ ಹೆಂಡತಿಯನ್ನಾಗಿ ಶಿವ ಸ್ವೀಕರಿಸಿ ತಾರಕಾಸುರನನ್ನು ಕೊಲ್ಲುವ ಮಗನನ್ನು ಪಡೆಯಲೂ ಸಾಧ್ಯವಿರಲಿಲ್ಲ. ಶಿವ ಅಷ್ಟೊಂದು ದೀರ್ಘಕಾಲ ಸತಿಯೊಡನೆ ರತಿಸುಖವನ್ನು ಅನುಭವಿಸಿದರೂ ಲೋಕಕಲ್ಯಾಣವನ್ನು ಮಾಡುವ ಮಗುವಿನ ಜನನದ ಸೂಚನೆಯೇ ಕಂಡು ಬಂದಿರಲಿಲ್ಲ. ಆದ್ದರಿಂದ ಬ್ರಹ್ಮ, ವಿಷ್ಣು ಇಬ್ಬರೂ ಸೇರಿ ಸತಿಯ ಅಂಗಗಳನ್ನು ಕತ್ತರಿಸುವ ನಿರ್ಣಯವನ್ನು ತೆಗೆದುಕೊಂಡರು. ಆದರೆ ಸತಿಯ ಅಂಗಗಳು ಕೆಳಗೆ ಬಿದ್ದರೂ ಅವು ಬಿದ್ದ ಜಾಗದಲ್ಲೆಲ್ಲ ಆ ಅಂಗಗಳಲ್ಲೆ ಸತಿಯನ್ನು ಇಡಿಯಾಗಿ ಭಾವಿಸುತ್ತ ಶಿವ ಅಲ್ಲಿಯೇ ಲಿಂಗರೂಪಿಯಾಗಿ ನೆಲೆಯೂರಿಬಿಟ್ಟ.” ಎನ್ನುತ್ತದೆ ಕಾಳಿಕಾಪುರಾಣ. (ಕಾಳಿಕಾ ಪುರಾಣ-ಅನು: ಬಿ.ಎನ್.‌ ಶಾಸ್ತ್ರಿ ಪು.97, ಅಧ್ಯಾಯ 18, ಶ್ಲೋಕ 37-46; ಯತ್ರ ಯತ್ರಾಪತನ್‌ ಸತ್ಯಾಸ್ತದಾ ಪಾದಾದಯೋ ದ್ವಿಜಾಃ| ತತ್ರ ತತ್ರ ಮಹಾದೇವಃ ಸ್ವಯಂ ಲಿಂಗ ಸ್ವರೂಪದೃಕ್|‌ ತಸ್ಯೌ ಮೋಹಸಮಾಯುಕ್ತಃ ಸತೀಸ್ನೇಹವದಾನುಗಃ|| 46) ಇದು ಶಕ್ತಿಪೀಠವು ದೇವಿಯ ಆವಾಸ ಸ್ಥಾನ ಆಗಿದ್ದರೂ ಅದು ಮಹಾದೇವನ ಆವಾಸಸ್ಥಾನವೂ ಏಕೆ ಆಗುತ್ತದೆ ಎನ್ನುವುದಕ್ಕೆ ಒಂದು ವಿವರಣೆ.

ಶಾಕ್ತ-ತಂತ್ರ ಸಾಧನೆ

ಮಾರ್ಕಂಡೇಯ ಪುರಾಣದ ದೇವೀ ಮಹಾತ್ಮೆಯು ಶಾಕ್ತಪಂಥೀಯ ಶಕ್ತಿ- ಮಾತೃಕೆಗಳ ತಾತ್ವಿಕ ಆಧ್ಯಾತ್ಮಿಕ ಮಹತ್ವ ಮತ್ತು ದೇವಿಯ ಆರಾದನಾ ಕ್ರಮ ಇತ್ಯಾದಿಗಳ ಪ್ರತಿಪಾದನೆಗಾಗಿಯೇ ಮೀಸಲಾಗಿದೆ. “ಆದಿಮಾತೆಯು ಜಗತ್ತಿನ ಮೂಲಭೂತ ಆಧಾರ ತತ್ತ್ವ ಆಗಿದ್ದರೂ ಆದಿಮಾತೆಯ ಅಗಾಧ ಶಕ್ತಿಯು ಮನುಷ್ಯನ ದೇಹದಲ್ಲಿ ಪ್ರತಿಷ್ಠಾಪಿತ ಆಗಿದೆ. ಆ ಶಕ್ತಿ ಕೇಂದ್ರಗಳೇ ಮೂಲಾಧಾರ, ಸ್ವಾಧಿಷ್ಠಾನ ಮಣಿಪೂರ ಇತ್ಯಾದಿ ಚಕ್ರಗಳು. ಮೂಲಾಧಾರದಲ್ಲಿರುವ ಕುಂಡಲಿನೀ ಶಕ್ತಿಯನ್ನು ಜಾಗೃತಗೊಳಿಸಿ ಅದು ಶಿರದಲ್ಲಿರುವ ಸಹಸ್ರಾರ ಚಕ್ರವನ್ನು ತಲುಪುವಂತೆ ಮಾಡಿದರೆ ಆದಿಮಾತೆಯ ಅಪಾರ ಶಕ್ತಿಯ ಅನುಭವ ಪ್ರತಿಯೊಬ್ಬರಿಗೂ ಉಂಟಾಗುತ್ತದೆ. ಆ ಸಾಧ್ಯತೆ ಆದಿಮಾತೆಯ ಸೃಷ್ಟಿ ಸ್ಥಿತಿ ಲಯ ಶಕ್ತಿಯನ್ನು ಗಳಿಸಿಕೊಂಡ ಸಾಧ್ಯತೆಯೇ ಆಗಿರುತ್ತದೆ. ಅದು ವೈಯಕ್ತಿಕ ಮಿತಿಗಳನ್ನು ಮೀರಿದ ಸಾಧ್ಯತೆಯಾಗಿ ಪರಮ ಸ್ವಾತಂತ್ರ್ಯದ ಪ್ರತೀಕ ಆದ ಮುಕ್ತಿಯೇ ಆಗಿರುತ್ತದೆ” ಎಂದು ಶಾಕ್ತ ತಂತ್ರ ಪಂಥಾನುಯಾಯಿಗಳು ನಂಬುತ್ತಾರೆ. ಸಾಧನಾ ಕ್ರಮವನ್ನು ಗುರುಮುಖೇನ ತಿಳಿದು ಅನುಸರಿಸಬೇಕು ಎನ್ನುತ್ತಾರೆ. 

ಶಾಕ್ತ ಪಂಥೀಯ ದಶ ಮಹಾ ವಿದ್ಯಾ ದೇವಿಯರು

ಭಯಾನಕತೆ, ಭೀಬತ್ಸತೆಯಿಂದ ಹಿಡಿದು ಪರಮ ಸೌಂದರ್ಯದ ವರೆಗೆ ಸೃಷ್ಟಿಯ ವಿವಿಧ ಭಾವಗಳನ್ನು ಅಭಿವ್ಯಕ್ತ ಪಡಿಸುವ, ಆಧ್ಯಾತ್ಮಿಕ ಸಾಧನೆಯಲ್ಲಿ ಮಾರ್ಗದರ್ಶಿ ಮತ್ತು ಸ್ಫೂರ್ತಿದಾಯಕರಾಗುವ, ಆಂತರಂಗಿಕ ಸತ್ಯಗಳ ದರ್ಶನವನ್ನು ಮಾಡಿಸುವ ಪರಮ ಜ್ಞಾನಿಗಳೇ ಆದಿಮಾತೆಯ ಪ್ರಮುಖ ಹತ್ತು ರೂಪಗಳಾದ ದಶ ಮಹಾ ವಿದ್ಯಾ ದೇವಿಯರು. ದಶಮಹಾವಿದ್ಯಾದೇವಿಯರ ಸ್ಪಷ್ಟ ಪರಿಕಲ್ಪನೆಯು ಶಿವಪುರಾಣದಲ್ಲಿ(V.50) ದೊರೆಯುತ್ತದೆ. ಅಲ್ಲಿಯ ಕಥೆಯ ಪ್ರಕಾರ “ದುರ್ಗಮಾ‌ ಎಂಬ ರಾಕ್ಷಸನು ಬ್ರಹ್ಮನಿಂದ ಪಡೆದ ವರದಿಂದ ನಾಲ್ಕೂ ವೇದಗಳನ್ನು ತನ್ನ ವಶಕ್ಕೆ ಪಡೆದು ಇಡೀ ವಿಶ್ವವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ. ಇದರಿಂದ ಅನೇಕ ವರ್ಷಗಳ ಕಾಲ ಭಯಂಕರ ಬರಗಾಲ ಉಂಟಾಯಿತು. ಚರಾಚರ ವಿಶ್ವ ತತ್ತರಿಸಿತು. ದೇವತೆಗಳು ವಿಶ್ವವನ್ನು ಕಾಪಾಡಬೇಕೆಂದು ದೇವಿಯನ್ನು ಪ್ರಾರ್ಥಿಸಿದರು”. 

“ದೇವಿಯು ಬರವನ್ನು ಕೊನೆಗಾಣಿಸಿದಳು, ಜಲಾಶಯಗಳನ್ನು ನೀರಿನಿಂದ ತುಂಬಿಸಿದಳು. ರಾಕ್ಷಸನನ್ನು ಸಂಹರಿಸಿದಳು, ವೇದಗಳನ್ನು ದೇವತೆಗಳಿಗೆ ದೊರಕಿಸಿಕೊಟ್ಟಳು. ಈ ಕಾರ್ಯದಲ್ಲಿ ಆಕೆಗೆ ಸಹಾಯಕರಾಗಿ ಆಕೆಯ ದೇಹದಿಂದ ಆಕೆಯೇ ಒಡಮೂಡಿಸಿದವರೇ ದಶಮಹಾವಿದ್ಯಾದೇವಿಯರು. ದುರ್ಗಮಾ ರಾಕ್ಷಸನನ್ನು ಕೊಂದವಳಾಗಿ ದೇವಿ ದುರ್ಗಾ ಎನ್ನಿಸಿಕೊಂಡಳು”. ದೇವೀ ಭಾಗವತದಲ್ಲೂ ಇದೇ ರೀತಿಯ ಕಥೆ ಇದೆ. ವೇದಗಳ ಸಂರಕ್ಷಣೆಗೆ ಸಂಬಂಧ ಪಟ್ಟ ಕಥೆ ಇದಾಗಿದ್ದು ಮಂತ್ರ ತಂತ್ರಗಳ ಬಳಕೆಯ ಆಯಾಮದಿಂದ ವೈದಿಕ ತಾತ್ವಿಕ ಜ್ಞಾನವನ್ನು ಅನುಭವಾತ್ಮಕ ಜ್ಞಾನವನ್ನಾಗಿಸಿ ಖಿಲ ಆಗುತ್ತಿದ್ದ ವೇದದ ಮಹತ್ವವನ್ನು ಎತ್ತಿಹಿಡಿದುದರ ಸೂಚಕ ಕಥೆಯೂ ಆಗಿದೆ. ಈ ಹಿನ್ನೆಲೆಯಲ್ಲಿ ದೇವಿಯ ದಶರೂಪಿಗಳು ಸಹಜವಾಗಿ ಮಹಾವಿದ್ಯಾದೇವಿಯರು.

ಬೃಹದ್ಧರ್ಮ ಪುರಾಣವು ಕಾಳೀ, ತಾರಾ, ಷೋಡಷೀ, ಭುವನೇಶ್ವರೀ, ಭೈರವೀ, ಛಿನ್ನಮಸ್ತಾ, ಸುಂದರೀ, ಬಗಲಾಮುಖೀ, ಧೂಮಾವತೀ, ಮಾತಂಗೀ ದೇವಿಯರೇ ಮಹಾವಿದ್ಯಾದೇವಿಯರು ಎನ್ನುತ್ತದೆ (ಬೃಹದ್ಧರ್ಮ ಪುರಾಣ, ಮಧ್ಯ ಭಾಗ). ʼಮಹಾನಿರ್ವಾಣತಂತ್ರʼದ 4ನೇ ಅಧ್ಯಾಯದ 11-14ರವರೆಗಿನ ಶ್ಲೋಕಗಳಲ್ಲಿ ಶಿವ ತನ್ನ ಸಂಗಾತಿ ಆದಿ ಪರಾಶಕ್ತಿಗೆ “ನಾವೂ (ತ್ರಿಮೂರ್ತಿಗಳು) ಮತ್ತು ಎಲ್ಲಾ ಜ್ಞಾನವೂ ನಿನ್ನಿಂದಲೇ ಜನಿತವಾದದ್ದು; ನಿನಗೆ ಇಡೀ ಪ್ರಪಂಚ ಸಹಿತವಾಗಿ ಎಲ್ಲವೂ ಗೊತ್ತು,; ಆದರೆ ಜಗತ್ತಾಗಲೀ ನಮ್ಮಲ್ಲಿ ಯಾರಾದರಾಗಲೀ ನಿನ್ನನ್ನು ಅರಿಯಲು ಸಾಧ್ಯವಿಲ್ಲ; ನೀನೇ ಕಾಳೀ, ತಾರಿಣೀ, ದುರ್ಗಾ, ಷೋಡಷೀ, ಭುವನೇಶ್ವರೀ; ನೀನೇ ಧೂಮಾವತೀ, ಬಗಲಮುಖೀ, ಭೈರವೀ, ಛಿನ್ನಮಸ್ತಾ: ನೀನೇ ಅನ್ನಪೂರ್ಣಾ, ಸರಸ್ವತೀ, ಲಕ್ಷ್ಮೀ. ನೀನು ಎಲ್ಲಾ ಶಕ್ತಿರೂಪಗಳ ಮತ್ತು ಎಲ್ಲಾ ದೈವಗಳ ಪ್ರತೀಕ” ಎಂದು ಹೇಳಿದ ವಿಷಯ ಇದೆ.  

ದೇವಿ ಹೊರಹೊಮ್ಮಿಸಿದ ರೂಪಗಳಲ್ಲಿ 32 ಮಹಾಶಕ್ತಿಗಳೂ, 64 ದಿವ್ಯಶಕ್ತಿಗಳೂ, ಅಸಂಖ್ಯಾತ ಶಕ್ತಿಗಳೂ ಇದ್ದರು ಎನ್ನುವ ದೇವೀ ಭಾಗವತವು ಕಾಳಿಕಾ, ತಾರಿಣೀ, ಬಾಲಾ, ತ್ರಿಪುರ ಭೈರವೀ, ರಮಾ, ಬಗಲಾ, ಮಾತಂಗೀ, ತ್ರಿಪುರಸುಂದರೀ, ಕಾಮಾಕ್ಷೀ, ಕುಲಜಾ, ಜಂಭಿನೀ, ಮೋಹಿನೀ, ಛಿನ್ನಮಸ್ತಾ, ಗುಹ್ಯಕಾಳೀ ದೇವಿಯರ ಹೆಸರನ್ನು ಉಲ್ಲೇಖಿಸುತ್ತದೆ, (7.28.55-57) 

ಪ್ರತಿಬಂಧಕ ದಶಮಹಾವಿದ್ಯಾ ದೇವಿಯರು

ದೇವೀ ಪುರಾಣದಲ್ಲಿ “ದಕ್ಷ ತಾನು ಮಾಡಲು ನಿಶ್ಚಯಿಸಿದ ಯಾಗಕ್ಕೆ ಮಗಳು ಸತಿ ಮತ್ತು ಅಳಿಯ ಶಿವ ಇವರನ್ನು ಹೊರತು ಪಡಿಸಿ ಎಲ್ಲರನ್ನೂ ಕರೆದ. ಕರೆಯದಿದ್ದರೂ ತಾನು ಯಜ್ಞಕ್ಕೆ ಹೋಗಲೇಬೇಕೆಂದು ಹಟಮಾಡಿದ ಸತಿಯನ್ನು ಶಿವ ತಡೆದ. ಅವಳು ಹತ್ತು ರೌದ್ರ ಮೂರ್ತರೂಪ ತಳೆದಳು. ಅವಳ ರೌದ್ರತೆಯನ್ನು ಕಂಡು ಹೆದರಿದ ಶಿವ ದಕ್ಷನ ಯಜ್ಞಕ್ಕೆ ಹೋಗಲು ಅನುಮತಿ ಕೊಟ್ಟ” ಎನ್ನುವ ಕಥೆ ಇದೆ. ಶಾಕ್ತ ಮಹಾ ಭಾಗವತ ಪುರಾಣ, ಬೃಹದ್ಧರ್ಮ ಪುರಾಣ, ಕಾಳಿಕಾ ಪುರಾಣಗಳಲ್ಲಿ ಇದರ ಮುಂದುವರೆದ ಭಾಗವಾಗಿ “ಶಿವ ಸತಿಯ ಉಗ್ರರೂಪಕ್ಕೆ ಹೆದರಿ ಓಡಿಹೋಗಲು ಪ್ರಯತ್ನಿಸಿದ, ಸತಿ ತನ್ನ ಆ ದಶ ರೂಪಗಳಿಂದ ಎಲ್ಲಾ ದಿಕ್ಕುಗಳನ್ನು ಪ್ರತಿಬಂಧಿಸಿದಳು” ಎನ್ನುವ ವಿಷಯ ಇದೆ. “ಒಮ್ಮೆ ಶಿವ ಪಾರ್ವತಿಯರು ಪಾರ್ವತಿಯ ತಂದೆಯ ಮನೆಯಲ್ಲಿದ್ದರು, ಶಿವ ತಾನು ಅಲ್ಲಿಂದ ಹೊರಡುವೆ ಎಂದು ಪಾರ್ವತಿಯನ್ನು ಹೆದರಿಸಿದ. ಪಾರ್ವತಿ ಎಷ್ಟು ಅನುನಯಿಸಿದರೂ ಶಿವ ತಲೆಬಾಗಲಿಲ್ಲ. ಅವನನ್ನು ತಡೆಯಲು ಪಾರ್ವತಿ ಹತ್ತು ರೂಪಗಳನ್ನು ಧರಿಸಿ ಶಿವ ಹೊರಹೋಗದಂತೆ ಎಲ್ಲಾ ದಿಕುಗಳನ್ನೂ ಪ್ರತಿಬಂಧಿಸಿದಳು. ಪ್ರತಿಯೊಂದು ರೂಪದಲ್ಲೂ ತನ್ನ ಸಾರಭೂತ ಶಕ್ತಿ-ಸತ್ಯವನ್ನು ಪ್ರಕಟಪಡಿಸಿದಳು. ಶಿವ ಅವಳ ಮೇಲ್ಗೈಯನ್ನು ಒಪ್ಪಿಕೊಳ್ಳಲೇಬೇಕಾಯಿತು” ಎನ್ನುವ ಕಥೆಯೂ ಇದೆ. ಇವು ಸ್ತ್ರೀಶಕ್ತಿಯ ಮೇಲ್ಗೈಯನ್ನು ಮತ್ತು ಶಕ್ತಿಯ ಸರ್ವರಕ್ಷಕ ಭಾವವನ್ನು ಎತ್ತಿಹಿಡಿಯುವ ಕಥೆಗಳು.

ಪಾರ್ವತೀ ದೇವಿ ಅಥವಾ ಆದಿಮಾತೆ ಅಥವಾ ಆದಿ ಪರಾಶಕ್ತಿಯು ಲೋಕಕಲ್ಯಾಣಕ್ಕಾಗಿ ಎತ್ತಿದ ಅವತಾರಗಳೇ ದಶ ಮಹಾ ವಿದ್ಯಾ ದೇವಿಯರು; ಇವರೊಂದಿಗೆ ದೇವಿಯು ಲೋಕ ಕಂಟಕರೂ ದೇವತೆಗಳ ಪೀಡಕರೂ ಆದ ಶುಂಭ, ನಿಶುಂಭ, ಚಂಡ, ಮುಂಡ, ರಕ್ತಬೀಜ, ಭಂಡಾಸುರ ಮೊದಲಾದ ರಾಕ್ಷಸರನ್ನು ಸಂಹರಿಸಿದಳು ಎನ್ನುವ ಕಥೆಗಳು ವಿನಾಶಾತ್ಮಕ ಆದ ದೌಷ್ಟ್ಯದ ಎಲ್ಲಾ ರೂಪಗಳನ್ನು ನಿವಾರಿಸಿ ಸೃಜನಶೀಲ ಆದ ಅಂದರೆ ಫಲವಂತಿಕೆ, ತಾಯ್ತನಗಳಿಗೆ ಪ್ರತೀಕ ಆದ ಒಳಿತನ್ನು ಎತ್ತಿಹಿಡಿದಳು ಎಂದು ಹೇಳುವ ಕಥೆಗಳು. ಇವು ಸ್ತ್ರೀಶಕ್ತಿಯ ಮಹಿಮೆಯನ್ನು ಕೊಂಡಾಡುವ ಸಾಹಿತ್ಯವೂ ಆಗಿದೆ. ಅವರನ್ನು ಶಿವನ ಪತ್ನಿಯರು ಎಂದು ಕೆಲವೊಮ್ಮೆ ಗುರುತಿಸಿದ್ದರೂ ಶಿವನದು ಅವರೊಂದಿಗೆ ಎರಡನೆಯ ಸ್ಥಾನವೇ. 

Feature Image Credit: istockphoto.com

ಮಾತೃಶಕ್ತಿ ಆರಾಧನಾ ಸರಣಿ

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.