close logo

ಸನಾತನಧರ್ಮದ ಮಾತೃಶಕ್ತಿ ಆರಾಧನಾ ಪರಂಪರೆ – 3

ಸ್ತ್ರೀಶಕ್ತಿ ವೈಭವ

ಕಾಳಿಕಾ: ಯಾವುದೇ ರೀತಿಯ ಸೃಷ್ಟಿ ಇಲ್ಲದಿದ್ದಾಗ, ಸೂರ್ಯ ಚಂದ್ರ ಭೂಮಿಯೇ ಮೊದಲಾದ ಗ್ರಹಗಳೂ ಇಲ್ಲದಿದ್ದಾಗ ಕತ್ತಲೆಯು ಮಾತ್ರ ಇತ್ತು; ಆ ಕತ್ತಲೆಯಿಂದಲೇ ಎಲ್ಲವೂ ಮೂಡಿಬಂತು; ಆ ಮೂಲಭೂತ ಕತ್ತಲೆಯೇ ಕಾಳಿ ಅಥವಾ ಮಹಾಕಾಳಿ; ಎಲ್ಲದರ ಸೃಷ್ಟಿಕಾರಕಳೂ, ಸಂರಕ್ಷಕಳೂ ಆದ ಪ್ರಕೃತಿ ಮಾತೆ, ಮೂಲ ಪ್ರಕೃತಿ ಎನ್ನುತ್ತಾರೆ ಶಾಕ್ತ-ತಾಂತ್ರಿಕರು. ಆದಿಮಾತೆ ದುರ್ಗಾ ದೇವಿಯಿಂದ ಒಡಮೂಡಿ ಬಂದ ಕಾಳಿಕಾದೇವಿ ಕೆಡುಕನ್ನು ನಾಶ ಮಾಡಿ ಮುಗ್ಧರನ್ನು ಸಂರಕ್ಷಿಸಿದ ದೇವ ರಕ್ಷಕಿ, ದೇವಮಾತೆ, ಜಗನ್ಮಾತೆ; ಮೋಕ್ಷದಾಯಕಿಯೂ ಆದ ಈಕೆ ಕಾಲ, ಬದಲಾವಣೆ, ಸೃಷ್ಟಿ, ನಾಶ ಮತ್ತು ಮರಣಗಳಿಗೂ ಪ್ರತೀಕ. ಈಕೆ ದೇವೀ ಮಹಾತ್ಮೆಯ ಪ್ರಕಾರ ಚಂಡ, ಮುಂಡ, ರಕ್ತಬೀಜಾಸುರರನ್ನು; ಲಿಂಗಪುರಾಣದ ಪ್ರಕಾರ ದಾರುಕಾಸುರನನ್ನು; ಯೋಗಿನೀ ತಂತ್ರದ ಪ್ರಕಾರ ಕೋಲಾಸುರ, ಘೋರಾಸುರರನ್ನು ಮರ್ದಿಸಿದವಳು. ಈ ದೇವಿಯನ್ನು ಉಪಾಸಿಸುವ ಮಂತ್ರಗಳು – ಓಂ ಕ್ರೀಂ ಕಾಳಿಕಾಯೈನಮಃ; ಓಂ ಹ್ರೀಂ ಶ್ರೀಂ ಕ್ಲೀಂ ಆದ್ಯ ಕಾಳಿಕಾ ಪರಮೇಶ್ವರೀ ಸ್ವಾಹಾ; ಕ್ರೀಂ ಕ್ರೀಂ ಕ್ರೀಂ ಹ್ರೀಂ ಹ್ರೀಂ ದಕ್ಷಿಣೇ ಕಾಳಿಕೇ ಕ್ರೀಂ ಕ್ರೀಂ ಕ್ರೀಂ ಹ್ರೀಂ ಹ್ರೀಂ ಹೂಂ ಹೂಂ ಸ್ವಾಹಾʼ

ತಾರಾ: ತಾರಾ ದೇವಿ “ಏಕಜಾತಾ, ಉಗ್ರತಾರಾ, ನೀಲ ಸರಸ್ವತೀ, ತೀಕ್ಷ್ಣಕಾಂತಾ, ಮಹೋಗ್ರಾ, ಕಾಮೇಶ್ವರೀ, ಚಾಮುಂಡಾ, ವಜ್ರತಾರಾ, ಭದ್ರಕಾಳೀ” ಎನ್ನುವ ಹೆಸರುಗಳಲ್ಲಿ ಸ್ಮಶಾನದಲ್ಲಿ ಅಥವಾ ದೇವಾಲಯದಲ್ಲಿ ಪೂಜಿತಳು, ಕಾಳಿಕಾ ಪುರಾಣದ ಪ್ರಕಾರ “ದೇವತೆಗಳು ಶುಂಭ, ನಿಶುಂಭರಿಂದ ಸೋತು ಸ್ವರ್ಗದಿಂದ ಹೊರಬೀಳಬೇಕಾಯಿತು. ಅವರು ಹಿಮಾಲಯದಲ್ಲಿ ಆಶ್ರಯವನ್ನು ಪಡೆದು ದೇವಿಯನ್ನು ಕುರಿತು ತಪಸ್ಸು ಮಾಡಿದರು. ಮಾತಂಗಿಯ ರೂಪದಲ್ಲಿದ್ದ ಶಿವನ ಪತ್ನಿಯ ದೇಹದಿಂದ ಮೂಡಿಬಂದು ದೇವತೆಗಳ ಕಷ್ಟವನ್ನು ಪರಿಹರಿಸಿದ ಸುಂದರ ರೂಪೀ ಮಹಾ ಸರಸ್ವತಿಯೇ (ಉಗ್ರ)ತಾರಾ”. ಒಂದು ಕಥೆಯ ಪ್ರಕಾರ ಹಯಗ್ರೀವ ಎಂಬ ರಾಕ್ಷಸನು ದೇವತೆಗಳನ್ನು ಅಮರಾವತಿಯಿಂದ ಓಡಿಸಿ ಎಲ್ಲಾ ವ್ಯವಸ್ಥಿತ ರೀತಿ ನೀತಿಗಳನ್ನು ಅಸ್ತವ್ಯಸ್ತಗೊಳಿಸಿದ; ಬ್ರಹ್ಮನ ಬಳಿಗೆ ಹೋದ ದೇವತೆಗಳನ್ನು ಕರೆದುಕೊಂಡು ಬ್ರಹ್ಮ ಕಾಳಿಕಾ ದೇವಿಯ ಬಳಿಗೆ ಹೋದ; ಕಾಳಿಕಾ ದೇವಿಯ ತನ್ನ ಮೂರನೇ ಕಣ್ಣಿನಿಂದ ಸೃಜಿಸಿದ ತಾರಾದೇವಿ ಹಯಗ್ರೀವನನ್ನು ಸಂಹರಿಸಿ ದೇವತೆಗಳ ಸಂಕಷ್ಟವನ್ನು ಪರಿಹರಿಸಿದಳು, ವ್ಯವಸ್ಥೆಯನ್ನು ಪ್ರತಿಷ್ಠಾಪಿಸಿದಳು.

ಇನ್ನೊಂದು ಕಥೆಯ ಪ್ರಕಾರ “ಎಲ್ಲೆಲ್ಲೂ ನೀರು ಇತ್ತು. ಮಧು ಮತ್ತು ಕೈಟಭರ ಮೃತ ಶರೀರದ ತುಣುಕುಗಳಿಂದ ಭೂರಾಶಿಯು ಸೃಷ್ಟಿಗೊಂಡಿತು. ಜೀವಿಗಳ ಸೃಷ್ಟಿಗೆ ಬೇಕಾಗಿದ್ದ ಸೂರ್ಯನನ್ನು ಸೃಷ್ಟಿಸಲು ಮಹಾಶಕ್ತಿಯು ತಾರಾ ರೂಪವನ್ನು ತಳೆದಳು, ದಕ್ಷಿಣೇಶ್ವರನ ರೂಪವನ್ನು ತಳೆದಿದ್ದ ಮಹಾದೇವನ ಶಕ್ತಿಯೊಂದಿಗೆ ತಾರಾ ದೇವಿಯ ಬೆಳಕು, ಶಾಖ ಮತ್ತು ಚೈತನ್ಯವನ್ನು ಉತ್ಪಾದಿಸುವ ಸಾಮರ್ಥ್ಯವೂ ಸೇರಿಕೊಂಡು ಶಕ್ತಿ ವಲಯಗಳು, ಶಕ್ತಿ ಕಾಯಗಳು, ಶಾಖ, ಬೆಳಕು, ಪ್ರಾಣವನ್ನು ಎಲ್ಲಾ ಇರುವಿಕೆಗಳಿಗೆ ಕೊಡುವ ನಿತ್ಯ ಅಸ್ತಿತ್ವದಲ್ಲಿರುವ ಸೂರ್ಯ ಇವುಗಳ ಸೃಷ್ಟಿ ಆಯಿತು, ನಂತರ ತಾರಾ ದೇವಿಯು ಪ್ರಪಂಚದಲ್ಲಿ ಎಲ್ಲಾ ರೀತಿಯ ಹಸಿರುಸಂಪತ್ತು ಮತ್ತು ಸಸ್ಯಗಳನ್ನು‌ ಉಂಟುಮಾಡಲು ಷೋಡಷೀ ದೇವಿಯ ರೂಪವನ್ನು ತಳೆದಳು. ಭೂಮಿಯ ಒಳಗೆ ಬಿದಿರುಗೋಲನ್ನು ಇಟ್ಟಳು. ತನ್ನ ಕಮಂಡಲದಿಂದ ಅದರಲ್ಲಿ ಒಂದು ಹನಿ ನೀರನ್ನು ಹಾಕಿದಳು. ಅದರಿಂದ ಸಸ್ಯ ಪ್ರಪಂಚ, ಎಲ್ಲಾ ಬಗೆಯ ಕಾಡುಗಳು, ಮರಗಳು ಉಂಟಾದವು, ಪ್ರಕೃತಿ ವೃದ್ಧಿಗೊಂಡಿತು”.

ಮಾಯೆಯನ್ನು ಉಂಟುಮಾಡುವವಳೂ ಮತ್ತು ಮಾಯೆಯಿಂದ ಪಾರುಮಾಡುವವಳೂ ತಾರಾ ದೇವಿಯೇ ಎನ್ನುತ್ತದೆ ಬೃಹದ್‌ ನೀಲತಂತ್ರ. ನೋಡುವುದಕ್ಕೆ ಅತ್ಯಂತ ಭೀಕರವಾಗಿದ್ದರೂ ಅಪಾರವಾದ ಕರುಣೆ, ದಯೆ, ರಕ್ಷಣೆಗಳಿಗೆ ಪ್ರತೀಕವಾದ ಈ ದೇವಿಯು ಕೆಡುಕನ್ನು ಉಂಟು ಮಾಡುವ ಎಲ್ಲಾ ದೌಷ್ಟ್ಯಗಳು, ಸಂಕಷ್ಟಗಳು ಮತ್ತು ಭಯಂಕರವಾದ ಅಪಾಯಗಳಿಂದ ಭಕ್ತರನ್ನು ಸಂರಕ್ಷಿಸುವವಳು. ಮುಕ್ತಿಕಾರಕ ಆಗುವ ಅಪಾರ ಜ್ಞಾನದಾಯಕಳೂ ಆದ ತಾರಾ ದೇವಿಯ ಉಪಾಸನಾ ಮಂತ್ರ: “ಹ್ರೀಂ ಶ್ರೀಂ ಹೂಂ ಫಟ್;‌ ಓಂ ಹ್ರೀಂ ಶ್ರೀಂ ಹೂಂ ಫಟ್; ಶ್ರೀಂ ಹ್ರೀಂ ಶ್ರೀಂ ಹೂಂ ಫಟ್; ಐಂ ಓಂ ಸ್ತ್ರೀಂ ಹೂಂ ಫಟ್”.

ತ್ರಿಪುರ ಸುಂದರಿ: ತ್ರಿಪುರ ರಹಸ್ಯದ ಪ್ರಕಾರ “ಆದಿಯಲ್ಲಿ ಏಕಮಾತ್ರಳಾಗಿ ಇದ್ದ ವಿಶ್ವ-ಪ್ರಜ್ಞೆಯ ರೂಪಿಯೂ ಸ್ವಾವಲಂಬಿಯೂ ಆದ ತ್ರಿಪುರಸುಂದರಿ ದೇವಿಯು ಸೃಷ್ಟಿಸಬೇಕು ಎಂದುಕೊಂಡಳು. ಆ ಆಸೆಯಿಂದ ಜ್ಞಾನ, ಜ್ಞಾನದಿಂದ ಕ್ರಿಯೆ ಉಂಟಾಯಿತು. ಅವಳ ಮೂರು ಮುಖದ ನೋಟದಿಂದ ಹುಟ್ಟಿಕೊಂಡ ಮೂರು ದೈವಗಳನ್ನು ದೇವಿ ಈಕ್ಷಿಸಿದುದರಿಂದ ಅವರು ಶಕ್ತಿವಂತರಾದರು, ಸತ್ಯವಂತರಾದರು. ಎಲ್ಲ ಚರಾಚರಗಳ ಆತ್ಮ ಆಗಿರುವ ಪರಮೇಶ್ವರಿಯು ತನ್ನ ಸ್ವಾತಂತ್ರ್ಯ‌ದಿಂದಾಗಿಯೇ ಮಾಯೆ ಎನ್ನಿಸಿಕೊಂಡಿದ್ದಾಳೆ. ಎಲ್ಲೆಲ್ಲೂ ವ್ಯಾಪ್ತ ಆಗಿರುವ ದೇವಿ ತರ್ಕಾತೀತಳು, ಪ್ರಶ್ನಾತೀತಳು. ಸೃಷ್ಟಿಯು ಆಕೆಯ ಲೀಲೆ. ಆಕೆಯ ಹೊರತಾಗಿ ಬೇರೆ ಯಾರೂ ಪೂಜಿತರಾಗುವವರು ಇಲ್ಲ, ಬಯಸಿದ ಫಲಗಳನ್ನು ಕೊಡುವವರು ಇಲ್ಲ”

ಶ್ರೀಕುಲ-ಶಾಕ್ತಪಂಥದಲ್ಲಿ ಅತ್ಯಂತ ಹೆಚ್ಚು ಪ್ರಮುಖಳಾದ ಮಹಾ ವಿದ್ಯಾ ದೇವಿ ಎಂದೂ, ಶ್ರೀವಿದ್ಯೆಯಲ್ಲಿ ಮೂಲಭೂತ ದೇವಿ ಎಂದೂ, ಬ್ರಹ್ಮಾಂಡ ಪುರಾಣದಲ್ಲಿ ಆದಿ ಪರಾಶಕ್ತಿ ಎಂದೂ, ತ್ರಿಪುರ ಉಪನಿಷತ್ತಿನಲ್ಲಿ ಅ, ಕ, ಥ ಎಂಬ ಮೂರು ಅಕ್ಷರಗಳಲ್ಲಿ ಸ್ಥಿತಳಾಗಿರುವ ವಿಶ್ವದ ಆತ್ಯಂತಿಕ ಶಕ್ತಿ ಎಂದೂ ಮಾನ್ಯಳಾಗಿರುವ ತ್ರಿಪುರ ಸುಂದರಿ ದೇವಿಯು ರಾಜರಾಜೇಶ್ವರೀ, ಷೋಡಷೀ, ಕಾಮಾಕ್ಷೀ ಮತ್ತು ಲಲಿತಾ ಎನ್ನುವ ಹೆಸರಿನಲ್ಲಿಯೂ ಆರಾಧಿತಳಾಗಿದ್ದಾಳೆ. ಬ್ರಹ್ಮ, ವಿಷ್ಣು ಮತ್ತು ಶಿವ ಇವರನ್ನು ಆಳುವ ಆತ್ಯಂತಿಕ ಪ್ರಜ್ಞೆ ಎಂದು ವರ್ಣಿತಳಾಗಿರುವ ಲಲಿತಾ ತ್ರಿಪುರಸುಂದರಿ ದೇವಿಯ ಆದೇಶದಂತೆ ವಾಸಿನೀ, ಕಾಮೇಶ್ವರೀ, ಅರುಣಾ, ವಿಮಲಾ, ಜಯನೀ, ಮೋದಿನೀ, ಸರ್ವೇಶ್ವರೀ, ಕೌಲಿನೀ ಎಂಬ 8 ವಾಗ್ದೇವಿಯರಿಂದ ಲಲಿತಾ ಸಹಸ್ರನಾಮವು ರಚಿತಗೊಂಡಿದೆ ಎನ್ನುತ್ತದೆ ಬ್ರಹ್ಮಾಂಡಪುರಾಣದ ಲಲಿತೋಪಾಖ್ಯಾನ.

ಪದ್ಮಪುರಾಣ, ನಾರದ ಪುರಾಣ, ತಂತ್ರರಾಜ, ತಂತ್ರಸಿದ್ಧಗಳು ದೇವಿಯು “ಗೋಪಾಲ, ಕಾಮರಾಜ ಗೋಪಾಲ, ಮನ್ಮಥ ಗೋಪಾಲ, ಕಂದರ್ಪ ಗೋಪಾಲ, ಮಕರಕೇತನ ಗೋಪಾಲ, ಮನೋಭವ ಗೋಪಾಲ” ಎನ್ನುವ ಆರು ಪುರುಷಕೃಷ್ಣರೂಪಿ ಎಂದರೆ “ದೇವಿಯು ಭಂಡಾಸುರನನ್ನು ಮರ್ದಿಸಿದುದು ಕೆಡುಕಿನ ಮೇಲೆ ಒಳಿತು ಪಡೆದ ಗೆಲುವು; ಭಂಡಾಸುರ ಶಿವನನ್ನು ಕುರಿತು ತಪಸ್ಸು ಮಾಡಿ ಅಮರ ಆಗಬಹುದಾದ ರೀತಿಯ ವರವನ್ನು ಪಡೆದು ದೈವಿಕ ಕ್ರಮವನ್ನು ಕೆಡಿಸಲು ಆರಂಭಿಸಿದ್ದ; ಅವನ ವಿನಾಶಾತ್ಮಕ ಧಾಳಿಯನ್ನು ಎದುರಿಸಲು ದೇವತೆಗಳನ್ನು ಒಳಗೊಂಡು ವಿಷ್ಣು ಮತ್ತು ಶಿವ ಲಲಿತಾ ತ್ರಿಪುರ ಸುಂದರಿಯ ಸಹಾಯವನ್ನು ಕೇಳಿದರು; ಉದಾರಿಯೂ ಸುಂದರ ರೂಪಿಯೂ ಆಗಿದ್ದ ಲಲಿತಾ ತ್ರಿಪುರ ಸುಂದರಿಯು ಉಗ್ರರೂಪವನ್ನು ತಾಳಿ ತನ್ನ ದೈವಿಕ ಸಹಚರಿಯರ, ಶಕ್ತಿಯುತ ವಿವಿಧ ಆಯುಧಗಳ ಸಹಾಯದಿಂದ ಭಂಡಾಸುರನನ್ನು ಸಂಹರಿಸಿದಳು, ದೈವಿಕ ಸುವ್ಯವಸ್ಥೆಯನ್ನು ಪುನರ್ಪ್ರತಿಷ್ಠಾಪಿಸಿದಳು” ಎನ್ನುತ್ತದೆ ದೇವಿಯ ವಾತ್ಸಲ್ಯ, ಕೃಪೆ, ವಿವೇಕ, ಅಗಾಧವಾದ ಶಕ್ತಿಗಳ ಮಹತ್ವವನ್ನು ಹೇಳುವ ಲಲಿತಾ ಸಹಸ್ರನಾಮ.

ಯುಕ್ತ ಆಸೆಗಳ ಪೂರೈಕೆ, ಉತ್ಕೃಷ್ಟ ಅಭಿವೃದ್ಧಿ, ಸೂಕ್ತ ರಕ್ಷಣೆ, ಸೃಜನಶಿಲತೆ, ಆಧ್ಯಾತ್ಮಿಕ ಜ್ಞಾನ ಇವುಗಳಿಗಾಗಿ ದೇವಿಯನ್ನು ಆರಾದಿಸುವ ಮಂತ್ರ “ಐಂ ಕ್ಲೀಂ ಸೌಃ ಸೌಃ ಕ್ಲೀಂ ಐಂ; ಹ್ರೀಂ ಶ್ರೀಂ ಕ್ಲೀಂ ಪರಾಪರೇ ತ್ರಿಪುರೇ ಸರ್ವಮೀಪ್ಸಿತಂ ಸಾಧಯ ಸ್ವಾಹಾ; ಹ್ರೀಂ ಶ್ರೀಂ ಕ್ಲೀಂ ತ್ರಿಪುರಾಮದನೇ ಸರ್ವ ಶುಭಂ ಸಾಧಯ ಸ್ವಾಹಾ”

ಭುವನೇಶ್ವರಿ: ಮಹಿಷಾಸುರನನ್ನು ಮರ್ದಿಸಿ ಲೋಕವನ್ನು ಸಂರಕ್ಷಿಸಿದ ಆದಿ ಪರಾಶಕ್ತಿಯ ಪರಿಪೂರ್ಣ ಪ್ರಕಟ ರೂಪ ಆದ ಭುವನೇಶ್ವರಿಯೇ ತ್ರಿ-ಭುವನೇಶ್ವರಿ, ನವ ದುರ್ಗೆಯರಲ್ಲಿ ಒಬ್ಬಳಾದ ಕೂಷ್ಮಾಂಡ ದೇವಿ; ಸೃಷ್ಟಿತವಾಗಬಹುದಾದ ಎಲ್ಲಾ ಪ್ರಪಂಚಗಳ ಸಾರವನ್ನು ತನ್ನ ಸ್ವರೂಪವನ್ನಾಗಿ ಹೊಂದಿದ ಈಕೆ ಎಲ್ಲಾ ಪ್ರಪಂಚಗಳ ದೇವಮಾತೆ; ಆಕೆಯ ಪದತಲದಲ್ಲಿಯ ಬ್ರಹ್ಮ, ವಿಷ್ಣು, ರುದ್ರರು ಈಕೆಯ ಎಲ್ಲಾ ಸೃಷ್ಟಿಸುವಿಕೆಗೆ ಸಾಕ್ಷೀಭೂತರು; ಭೂಃ, ಭುವಃ, ಮತ್ತು ಸ್ವಃ ಎನ್ನುವ ಮೂರು ಲೋಕಗಳ ಒಡತಿ, ನಾಯಕಿ ಆದ ಈಕೆಯ ಎರಡು ರೂಪಗಳು ಮಾಯೆ ಮತ್ತು ನಿರ್ಗುಣ ಬ್ರಹ್ಮನ್;‌ ಈಕೆ ಎಲ್ಲಾ ರೀತಿಯ ಭೌತಿಕ ಮತ್ತು ಶಾಶ್ವತವಾದ ಸೌಖ್ಯಗಳನ್ನು ಕೊಡುವವಳು; ಮನುಷ್ಯರು ಅನುಭವಿಸುವ ಸುಖ-ದುಃಖಗಳು ಆಕೆಯ ಲೀಲಾ ವಿನೋದ ಎಂದು ಭುವನೇಶ್ವರೀ ದೇವಿಯನ್ನು ವರ್ಣಿಸುತ್ತಾರೆ.

ಈಕೆಯನ್ನು ಪ್ರಸಿದ್ಧಿ, ಧೈರ್ಯ, ಆತ್ಮ ವಿಶ್ವಾಸ, ಸಮಸ್ಯಾ ನಿವಾರಣೆ, ವ್ಯಾಮೋಹ ಮತ್ತು ಭ್ರಮೆಗಳ ನಿವಾರಣೆ ಇವುಗಳಿಗಾಗಿ “ಆಂ ಹ್ರೀ ಕ್ರೋಂ; ಆಂ ಶ್ರೀಂ ಹ್ರೀಂ ಕ್ಲೀಂ ಕ್ಲೀಂ ಹ್ರೀಂ ಶ್ರೀ ಕ್ರೋಂ; ಓಂ ಹ್ರೀಂ ಶ್ರೀಂ ಕ್ಲೀಂ ಭುವನೇಶ್ವರಯೈ ನಮಃ” ಎನ್ನುವ ಮಂತ್ರಗಳಿಂದ ಆರಾಧಿಸುತ್ತಾರೆ.

ಭೈರವಿ: ಶಿವನ ಮೇಲೆ ಕುಳಿತಿರುವ ದೇವಿಯೂ, ದಕ್ಷಿಣಾ ಮೂರ್ತಿಯ ಪತ್ನಿಯೂ ಎನ್ನಿಸಿಕೊಂಡ ಈಕೆ ಅದ್ಭುತ ಅಥವಾ ಅತಿಯಾದ ಭಯಾನಕತೆಯ ಭಾವವನ್ನು ಹುಟ್ಟಿಸುವವಳಾಗಿ ಭೈರವಿ. ಚಂಡ ಮುಂಡರನ್ನು ಸಂಹರಿಸಲು ಸಹಾಯಕಳಾದ ಈಕೆಯೇ ತ್ರಿಪುರ ಭೈರವಿ, ರಾಜರಾಜೇಶ್ವರೀ. ತ್ರಿಪುರವು ಪ್ರಜ್ಞೆಯ ಕ್ರಿಯಾಶೀಲತೆ, ಕನಸುಗಾರಿಕೆ ಮತ್ತು ಗಾಢ ನಿದ್ರಾವಸ್ಥೆ ಎಂಬ ಮೂರು ಸ್ತರಗಳ ಪ್ರತಿನಿಧಿ. ಈಕೆ ಯಾವಾಗಲೂ ತ್ರಿಪುರಿಯೇ. ತ್ರಿಪುರಗಳನ್ನು ಮೀರಿದರೆ ವ್ಯಕ್ತಿ ಬ್ರಹ್ಮತ್ವವನ್ನು ಪಡೆಯುತ್ತಾನೆ. ಈಕೆ ಮೂಲಾಧಾರ ಚಕ್ರದಲ್ಲಿ ಸ್ಥಿತಳಾಗಿ ಕಾಮರೂಪಿ, ತಲೆಕೆಳಗಾದ ತ್ರಿಕೋನದ ರೂಪದಲ್ಲಿ ಸೃಷ್ಟಿಕರ್ತೃ, ಮೂಲ ತ್ರಿಕೋನದ ಮೂರು ಬಿಂದುಗಳಿಂದ ರೂಪುಗೊಳ್ಳುವ ಮೂರು ಬಾಹುಗಳು ಈಕೆಯ ಇಚ್ಛಾ ಶಕ್ತಿ, ಜ್ಞಾನಶಕ್ತಿ, ಕ್ರಿಯಾಶಕ್ತಿಗಳ ಸೂಚಕ; ತ್ರಿಪುರ ಭೈರವಿಯು ಸುಪ್ತಶಕ್ತಿ ಆಗಿದ್ದರೆ, ತ್ರಿಪುರ ಸುಂದರಿಯು ಸುಪ್ತ ಶಕ್ತಿಯನ್ನು ಪ್ರಕಟಮಾಡುವ ಚಲನಾತ್ಮಕ ಮೂಲಶಕ್ತಿ; ಅದು ಅಂತಿಮವಾಗಿ ಸಹಸ್ರಾರಚಕ್ರದಲ್ಲಿ ಸಂಪೂರ್ಣವಾಗಿ ಸಾಕ್ಷಾತ್ಕಾರಗೊಳ್ಳುತ್ತದೆ ಎಂದು ಶಾಕ್ತ-ತಾಂತ್ರಿಕರು ನಂಬುತ್ತಾರೆ.

ಭೈರವಿಯು ತನ್ನ ಮಕ್ಕಳಂತಿರುವ ಭಕ್ತರಿಗೆ ಒಳ್ಳೆಯದನ್ನು ಮಾಡುವವಳು ಎನ್ನುವ ಅರ್ಥದಲ್ಲಿ ಶುಭಂಕರೀ, ಒಳ್ಳೆಯ ತಾಯಿ; ಅಧಾರ್ಮಿಕರಿಗೆ, ಕ್ರೂರಿಗಳಿಗೆ ರಕ್ತಪಾತ ಮಾಡಿಯಾದರೂ ಶಿಕ್ಷೆ ಕೊಡುವವಳಾಗಿ ಅವಳು ಎಲ್ಲಾ ರೀತಿಯ ಹಿಂಸೆಗಳಿಗೂ ತಾಯಿಯೇ. ಭೈರವಿಗೆ ಸಹಾಯಕರಾಗಿರುವ 64 ದೇವತೆಗಳೇ (Deities) ಯೋಗಿನಿಯರು; ಭೈರವಿಯು ಆ 64 ಯೋಗಿನಿಯರ ನಾಯಕಿ; ಭೈರವಿಗೆ ಸಹಾಯಕ ಆಗುವ 52 ಪಟುತ್ವಗಳೇ ಭೈರವರು. 56 ಕಲೆಗಳು (kalve), 52 ಭೈರವರು, 64 ಯೋಗಿನಿಯರು ಒಟ್ಟುಗೂಡಿ ದುಷ್ಟರನ್ನು ಸದೆ ಬಡಿಯುವವರು, ಭಕ್ತರಿಗೆ ಒಳ್ಳೆಯದನ್ನು ಉಂಟುಮಾಡುವವರು.

ದೌಷ್ಟ್ಯಗಳಿಂದ ರಕ್ಷಣೆ, ನೇತ್ಯರ್ಥಕ ಪ್ರಭಾವಗಳಿಂದ ರಕ್ಷಣೆ, ಮಾನಸಿಕ ಬಲ, ಶಕ್ತಿ, ಧೈರ್ಯ, ಶಾಂತಿ, ನೆಮ್ಮದಿ, ತೃಪ್ತಿ ಮತ್ತು ಯೋಗ್ಯ ಸಂತಾನ, ಇಂದ್ರಿಯನಿಗ್ರಹ, ವಾಗ್‌ ಸಿದ್ಧಿಗಳಿಗಾಗಿ ದೇವಿಯ ಆರಾಧನಾ ಮಂತ್ರಗಳು “ಓಂ ಹ್ರೀಂ ಭೈರವೀ ಕಲೌಂ ಹ್ರೀಂ ಸ್ವಾಹಾ; ಹಸ್ತ್ರೈಂ ಹಸ್ಕ್‌ ಲ್ರೀಂ ಹಸ್ತ್ರೌಂಃ; ಹಸೈಂ ಹಸಕರೀಂ ಹಸೈಂ”.

ಛಿನ್ನಮಸ್ತಾ: ಮಹಾದೇವಿಯ ಒಂದು ರುದ್ರ ರೂಪ ತನ್ನ ಕತ್ತರಿಸಿದ ತಲೆಯನ್ನು ತಾನೇ. ತನ್ನ‌ ಕೈಯಲ್ಲಿ ಹಿಡಿದು ರತಿ-ಮನ್ಮಥರ ಜೋಡಿಯ ಮೇಲೆ ನಿಂತಿರುವ ಛಿನ್ನಮಸ್ತಾ, ಛಿನ್ನ ಮಸ್ತಿಕಾ, ಪ್ರಚಂಡ ಚಂಡಿಕಾ ಅಥವಾ ಜೋಗಣಿ ಮಾ ತನ್ನನ್ನೇ ಬಲಿಕೊಟ್ಟು ಭಕ್ತರನ್ನು ಸಂರಕ್ಷಿಸುವ ಶ್ರೇಷ್ಠ ಮಾತೆ. ಪ್ರಣತೋಷಿಣೀ ತಂತ್ರ ಹೇಳುವಂತೆ ದೇವಿಯು ಮಾತೃ ವಾತ್ಸಲ್ಯದ ರೂಪವಾದ ವೀರ ರಸ, ಭಯಾನಕ ರಸ ಮತ್ತು ಶೃಂಗಾರ ರಸಗಳ. ಲೈಂಗಿಕ ಶಕ್ತಿ ಮತ್ತು ಲೈಂಗಿಕ ಸಂಯಮಗಳ, ಪ್ರಾಣ ಕೊಡುವುದರ ಮತ್ತು ಪ್ರಾಣ ತೆಗೆಯುವುದರ; ತಾತ್ಕಾಲಿಕತೆ, ನಾಶ, ಪುನರ್ಸೃಷ್ಟಿ, ಅಮರತೆ, ಜಾಗೃತ ಕುಂಡಲಿನೀ ಶಕ್ತಿ ಮತ್ತು ಅದರ ಆಧ್ಯಾತ್ಮಿಕ ಸಾಕ್ಷಾತ್ಕಾರ ಇವುಗಳ ಪ್ರತೀಕ; ಕೊಡುವವಳೂ ಅವಳೇ ಪಡೆಯುವವಳೂ ಅವಳೇ; ಆಹಾರವೂ ಅವಳೇ, ಆಹಾರ ಸ್ವೀಕರಿಸುವವಳೂ ಅವಳೇ; ಅವಳೇ ಅನ್ನಪೂರ್ಣೆ, ಅವಳೇ ಶಾಖಾಂಬರಿ; ರಕ್ಷಕಿಯೂ ಅವಳೇ, ಭಕ್ಷಕಿಯೂ ಅವಳೇ; ಅವಳೇ ಯಜ್ಞ, ಅವಳೇ ಹವಿಸ್ಸು; ಅದ್ಭುತವೂ ಅವಳೇ, ಭೀಭತ್ಸವೂ ಅವಳೇ; ಅವಳೇ ಕಾಮಿ, ಅವಳೇ ಯೋಗಿನಿ; ಅವಳೇ ಸೃಷ್ಟಿಕರ್ತೃ, ಅವಳೇ ಲಯಕರ್ತೃ; ಅವಳೇ ಬಂಧಕಾರಕಿ, ಅವಳೇ ಮೋಕ್ಷದಾಯಕಿ.

ಕತ್ತರಿಸಿದ ತಲೆಯು ಅವಳ ಕಡೆಗೇ ಮುಖಮಾಡಿಕೊಂಡಿರುವಂತೆ ಕೆತ್ತನೆಗೊಂಡಿರುವ ದೇವಿಯ ಶಿಲ್ಪವು ನಾವು ನಮ್ಮ ಒಳಗಡೆಯೇ ವಾಸ್ತವತೆಯನ್ನು ಕಂಡುಕೊಳ್ಳಬೇಕೆಂಬುದನ್ನು ಸೂಚಿಸುತ್ತದೆ; ಅವಳ ಕುತ್ತಿಗೆಯಿಂದ ಹೊರಹೊಮ್ಮಿದ ರಕ್ತದ ಮೂರು ಧಾರೆಗಳು, ಅವಳು ತನ್ನ ಕಾಲಲ್ಲಿ ಮೆಟ್ಟಿರುವ ರತಿ-ಮನ್ಮಥರು ಕುಂಡಲಿನಿಯು ಸಹಸ್ರಾರದಲ್ಲಿ ತಲೆಯೊಡೆದು ಹೊರಹೊಮ್ಮಿರುವುದರ ಸೂಚಕ ಆಗಿದೆ ಎನ್ನುತ್ತಾರೆ.

ಸಾಧಕರು ಇಚ್ಛಿಸಿದ ಹೆಣ್ಣನ್ನು ಮತ್ತು ಅನುಕೂಲಕರವಾಗಿ ಇಲ್ಲದವರನ್ನು ತಮ್ಮ ವಶ ಪಡಿಸಿಕೊಳ್ಳಲು; ಐಶ್ವರ್ಯ ಮತ್ತು ಹಿರಿಮೆಯನ್ನು ಪಡೆಯಲು, ತಮಗೆ ಬೇಡದವರಿಗೆ ತೊಂದರೆಯನ್ನು ಉಂಟುಮಾಡಲು, ದ್ವೇಷ ಸಾಧಿಸಲು ಅಥವಾ ಮರಣವನ್ನು ಉಂಟುಮಾಡಲು, ಕಾವ್ಯಾತ್ಮಕ ವಾಕ್‌ ಶಕ್ತಿಯನ್ನು ತಮ್ಮದನ್ನಾಗಿಸಿಕೊಳ್ಳಲು, ಅಸಾಧಾರಣ ಸಿದ್ಧಿಗಳನ್ನು ಪಡೆಯಲು, ಸಾಂಸಾರಿಕ ಭ್ರಾಂತಿಗಳಿಂದ ಪಾರಾಗಿ ಆಧ್ಯಾತ್ಮಿಕ ಆತ್ಮಸಾಕ್ಷಾತ್ಕಾರ ಅಥವಾ ಮೋಕ್ಷವನ್ನು ಪಡೆಯಲೂ ಸಹ ಛಿನ್ನಮಸ್ತಾ ದೇವಿಯನ್ನು ನಾಭಿಯಲ್ಲಿರುವ ಮಣಿಪೂರ ಚಕ್ರದಲ್ಲಿ ಅಥವಾ ಹಣೆಯ ಹುಬ್ಬುಗಳ ಮಧ್ಯೆ ಇರುವ ಆಜ್ಞಾ ಚಕ್ರದಲ್ಲಿ “ಓಂ ಹೂಂ ಸ್ವಾಹಾ ಓಂ;  ಶ್ರೀಂ ಹ್ರೀಂ ಕ್ರೀಂ ಐಂ ವಜ್ರ ವೈರೋಚನೀಯೇ ಹುಂ ಹುಂ ಫಟ್‌ ಸ್ವಾಹಾ; ಶ್ರೀಂ ಹ್ರೀಂ ಹೂಂ ಐಂ ವಜ್ರವೈರೋಚನೀಯೇ ಶ್ರೀಂ ಹ್ರೀಂ ಹೂಂ ಐಂ ಸ್ವಾಹಾ; ಹೂಂ ಶ್ರೀಂ ಹ್ರೀಂ ಐಂ ವಜ್ರವೈರೋಚನೀಯೇ ಹೂಂ ಹೂಂ ಫಟ್‌ ಸ್ವಾಹಾ; ಹ್ರೀಂ ಹೂಂ ಐಂ ವಜ್ರವೈರೋಚನೀಯೇ ಹುಂ ಫಟ್‌ ಸ್ವಾಹಾ” ಎಂಬ ಮಂತ್ರದಿಂದ ಆರಾಧಿಸುತ್ತಾರೆ.

ಧೂಮಾವತಿ: ಮುದುಕಿಯೂ, ಕುರೂಪಿಯೂ, ಅಪವಿತ್ರ ಸಂಗತಿಗಳೊಂದಿಗೆ ಗುರುತಿಸಲ್ಪಡುವ ಧೂಮಾವತಿಯು ಪ್ರಳಯ ಕಾಲದ ನಂತರ ಮತ್ತು ಹೊಸ ಸೃಷ್ಟಿಯ ಮೊದಲು ಇರುವ ಶೂನ್ಯತೆಯಲ್ಲಿ ಪ್ರಕಟಗೊಳ್ಳುವವಳು. ಮೃದು ಹೃದಯದವಳು, ಬಯಸಿದುದನ್ನೆಲ್ಲಾ ಈಡೇರಿಸುವ ವರದಾಯಕಳು, ಫಲದಾಯಕಳು, ನಿದ್ರೆ, ಮರೆವು, ಭ್ರಮೆ, ಮಂಕುತನಗಳ ಪ್ರಾಪಂಚಿಕ ಆಲೋಚನೆಗಳನ್ನೆಲ್ಲಾ ಇಲ್ಲವಾಗಿಸಿ ಆತ್ಯಂತಿಕ ಜ್ಞಾನ ದಾಯಕಳು ಮತ್ತು ಮೋಕ್ಷಕಾರಕಳು.

ನಾರದ ಪಾಂಚರಾತ್ರ ಮತ್ತು ಪ್ರಣತೋಷಿಣಿ ತಂತ್ರದ ಪ್ರಕಾರ ಒಮ್ಮೆ ಸತಿ (ಪಾರ್ವತಿ) ಆಹಾರ ಕೊಡು ಎಂದು ಶಿವನನ್ನು ಕೇಳಿದಳು; ಅವನು ಕಾಯಲು ಹೇಳಿದ; ತನ್ನ ಅತೀವ ಹಸಿವೆಯನ್ನು ತಾಳಲಾರದೆ ಸತಿ ಅವನನ್ನೇ ತಿಂದುದರಿಂದ ಅವಳು ವಿಧವೆಯಾದಳು ಮತ್ತು ಪ್ರಪಂಚದಿಂದ ಪುರುಷ-ಅಂಶವನ್ನೇ ಕಿತ್ತುಹಾಕಿದಳು; ಮಹಾಕಾಲ ಆದ ಶಿವನನ್ನೇ ತಿಂದವಳಾಗಿ ಧೂಮಸ್ವರೂಪ ಪಡೆದಳು; ಅದರಿಂದಾಗಿ ಧೂಮಾವತಿ ಕಾಲಾತೀತ, ದೇಶಾತೀತ, ನಾಮ ರೂಪಾತೀತ.

ಬಡತನ, ಘೋರ ನಿರಾಸೆ, ಅತಿಯಾದ ದುಖಗಳನ್ನು ಪ್ರತಿನಿಧಿಸುವ ಧೂಮಾವತೀ ದೇವಿ ವೈದಿಕ ದೇವತೆ ನಿರುತ್ತಿ ಮತ್ತು ಅಲಕ್ಷ್ಮಿಯೂ ಹೌದು. ದುರದೃಷ್ಟದ ಅನುಭವದ ಮೂಲಕ ಅದೃಷ್ಟದ ಹಾಗೂ ಯಾವುದಕ್ಕೂ ಅಂಟಿಕೊಳ್ಳದ ಮನಸ್ಥಿತಿಯ ಮಹತ್ವವನ್ನು ಮನಗಾಣಿಸುವ ಈಕೆ ಆತ್ಯಂತಿಕ ಸತ್ಯದ ಅರಿ-ಕ್ಷಯ-ಕಾರಕಳು ಮತ್ತು ಜ್ಞಾನ ಕಾರಕಳು. ಈಕೆಯನ್ನು ಆರಾಧಿಸುವ “ಧೂಮ್‌ ಧೂಮ್‌ ಧೂಮಾವತೀ ಸ್ವಾಹಾ”; “ಧೂಂ ಧೂಂ ಧೂಮಾವತೀ ಠಃ ಠಃ”; “ಧೂಂ ಧೂಂ ಧುರ್‌ ಧುರ್‌ ಧೂಮಾವತೀ ಕ್ರೋಂ ಫಟ್‌ ಸ್ವಾಹಾ”; “ಓಂ ಧೂಂ ಧೂಮಾವತೀ ದೇವದತ್ತ ಧಾವತಿ ಸ್ವಾಹಾ” ಮಂತ್ರಗಳು ಬದುಕಿನ ನೇತ್ಯರ್ಥಕ ಸಂಗತಿಗಳು ಮತ್ತು ಮರಣದಿಂದ ಪಾರುಮಾಡುತ್ತವೆ ಎಂಬ ನಂಬಿಕೆ ಇದೆ.

ಬಗಲಮುಖಿ: ಧಾರಣ ಶಕ್ತಿಗಳ ಮೂಲಾಧಾರ ಮತ್ತು ಪ್ರಜ್ಞೆಯ ಸಾಕಾರ ರೂಪ; ಭಕ್ತರ ತಪ್ಪು ಗ್ರಹಿಕೆಗಳನ್ನು ಪುಡಿ ಪುಡಿ ಮಾಡುವ ಮತ್ತು ಭ್ರಮೆಗಳನ್ನು ಹೊಡೆದೋಡಿಸುವ, ದೈತ್ಯ ಅಥವಾ ಪ್ರಾಕೃತಿಕ ವಿಕೋಪವನ್ನು ನಾಶಮಾಡಿ ಆಶ್ರಿತರನ್ನು ರಕ್ಷಿಸುವ, ದೈವಿಕ ಸಾಮರ್ಥ್ಯ, ಸಿದ್ಧಿ, ಯಶಸ್ಸುಗಳನ್ನು ಕೊಡುವ ಬಗಲಮುಖಿ ದೇವಿಯನ್ನು ಪೀತಾಂಬರೀ ಎಂದೂ ಕರೆಯುತ್ತಾರೆ. ಸ್ವತಂತ್ರ ತಂತ್ರದಲ್ಲಿ ದೇವಿಗೆ ಹೊಂದಿಕೊಂಡಂತೆ ಒಂದು ಕಥೆ ಇದೆ: ಒಮ್ಮೆ ಭಯಂಕರವಾದ ಸುಂಟರಗಾಳಿ ಇಡೀ ಭೂಮಂಡಲವನ್ನೇ ಅಲ್ಲೋಲ ಕಲ್ಲೋಲ ಮಾಡಿತು. ಆಗ ವಿಷ್ಣು ಶಿವನ ಸಹಾಯವನ್ನು ಕೇಳಿದ. ಶಿವ ಹರಿದ್ರಾ ಸರೋವರದ ಬಳಿ ಬಗಲಾಮುಖಿ ದೇವಿಯನ್ನು ಕುರಿತು ತಪಸ್ಸು ಮಾಡಲು ಸಲಹೆ ನೀಡಿದ. ವಿಷ್ಣುವಿನ ತಪಸ್ಸಿಗೆ ಒಲಿದ ದೇವಿ ಹರಿದ್ರಾ ಸರೋವರದಿಂದ ಎದ್ದುಬಂದು ಸುಂಟರಗಾಳಿಯನ್ನು ನಿಯಂತ್ರಿಸಿದಳು. ಇನ್ನೊಂದು ಕಥೆಯ ಪ್ರಕಾರ ಮದನ ಎನ್ನುವ ದೈತ್ಯ ತಾನು ಆಡಿದುದೆಲ್ಲ ಸತ್ಯ ಆಗುವಂಥ ವಾಕ್‌ ಸಿದ್ಧಿಯ ವರವನ್ನು ಸಂಪಾದಿಸಿ ದುರುಪಯೋಗ ಮಾಡಿಕೊಳ್ಳಲಾರಂಭಿಸಿದ. ಅವನ ಹಿಂಸೆಯನ್ನು ತಾಳಲಾಗದ ದೇವಾನುದೇವತೆಯರು ಬಗಲಮುಖೀ ದೇವಿಗೆ ಮೊರೆಯಿಟ್ಟರು. ದೇವಿಯು ಅವನ ನಾಲಿಗೆಯನ್ನೇ ಕಿತ್ತುಹಾಕಿ ಅವನ ಶಕ್ತಿಯನ್ನು ಸ್ತಂಭನಗೊಳಿಸಿದಳು.

ಹ್ರೀಂ ಕ್ಲೀಂ ಹ್ರೀಂ ಬಗಲಮುಖಿ ಠಃ; ಓಂ ಹ್ಲೀಂ ಬಗಲಮುಖಿ ದೇವೈ ಹ್ಲೀಂ ಓಂ ನಮಃ; ಓಂ ಆಂ ಹ್ಲೀಂ ಕ್ರೋಂ ಹುಂ ಫಟ್‌ ಸ್ವಾಹಾ; ಓಂ ಹ್ರೀಂ ಬಗಲಮುಖಿ ಸರ್ವ ದುಷ್ಟಾನಾಂ ವಾಚಂ ಮುಖಂ ಪದಂ ಸ್ತಂಭಯ ಜಿಹ್ವಾಂ ಕೀಲಯ ಬುದ್ಧಿಂ ವಿನಾಶಾಯ ಹ್ರೀಂ ಓಂ ಸ್ವಾಹಾ” ಎಂಬ ಬಗಲಮುಖೀ ಮಂತ್ರದಿಂದ ಉಪಾಸನೆ ಮಾಡುವವರ ದೇಹ, ಮನಸ್ಸು ಮತ್ತು ಆತ್ಮದಲ್ಲಿ ಭಾವಾತ್ಮಕ ಶಕ್ತಿ ಹರಿದು ಶಾಂತಿ ಮತ್ತು ಯಶಸ್ಸಿನ ಮಾರ್ಗವು ತೋರುತ್ತದೆ ಎಂದು ಹೇಳುತ್ತಾರೆ.

ಮಾತಂಗೀ: ಮಾತಂಗಿ ದೇವಿ ಮಾಲಿನ್ಯ, ಅಪವಿತ್ರತೆ, ಕೆಳ ಸ್ತರದ ಸಾಮಾಜಿಕತೆಗಳಿಗೆ ಪ್ರತೀಕ. ಕೊಳಕು ಕೈಯಿಂದ ತಿಂದು ಬಿಟ್ಟ ಆಹಾರವನ್ನು ನೈವೇದ್ಯವಾಗಿ ಪಡೆಯುವ ಉಚ್ಛಿಷ್ಟ ಚಾಂಡಾಲಿನೀ; ಸರಸ್ವತಿಯ ಅಂಶ ಆಗಿದ್ದು ವಾಕ್‌, ಸಂಗೀತ, ಕಲೆ ಮತ್ತು ಜ್ಞಾನಗಳ ವಿದ್ಯಾ ದೇವಿ. ಈಕೆಯನ್ನು ಪೂಜಿಸುವುದರಿಂದ ಶತ್ರುಗಳ ಮೇಲೆ ಹಿಡಿತ ಇಟ್ಟುಕೊಳ್ಳುವ, ಜನರನ್ನು ತಮ್ಮ ಕಡೆಗೆ ಆಕರ್ಷಿಸಿಕೊಳ್ಳುವ, ಕಲೆಗಳ ಮೇಲೆ ಪ್ರಭುತ್ವವನ್ನು ಪಡೆಯುವ, ಅತ್ಯಂತ ಹಿರಿದಾದ ಜ್ಞಾನವನ್ನು ಪಡೆಯುವ ಅಸಾಧಾರಣ ಶಕ್ತಿ ದೊರೆಯುತ್ತದೆ ಎನ್ನುತ್ತಾರೆ. ದೇವೀ ಭಾಗವತವು ಈಕೆಯನ್ನು ಶಾಖಾಂಬರಿ ದೇವಿಯ ಒಂದು ರೂಪ ಎನ್ನುತ್ತದೆ.

ಶಕ್ತಿ ಸಮಾಗಮ ತಂತ್ರದ ಪ್ರಕಾರ ಒಮ್ಮೆ ವಿಷ್ಣು ಮತ್ತು ಲಕ್ಷ್ಮಿಯರು ಶಿವ, ಪಾರ್ವತಿಯರನ್ನು ನೋಡಲು ಹೋದರು; ಪಾರ್ವತಿ ಒಳ್ಳೆಯ ಔತಣವನ್ನು ನೀಡಿದಳು; ಊಟ ಮಾಡುತ್ತಿರುವಾಗ ಸ್ವಲ್ಪ ಆಹಾರ ನೆಲಕ್ಕೆ ಬಿತ್ತು; ಅದರಿಂದ ಸುಂದರ ಕನ್ಯೆಯು ಸರಸ್ವತಿಯ ಒಂದು ರೂಪವಾಗಿ ಮೂಡಿ ಬಂದಳು; ಅವರು ತಿಂದು ಬಿಟ್ಟದ್ದನ್ನು ಕೊಡಲು ಕೇಳಿಕೊಂಡಳು; ನಾಲ್ವರೂ ಅವಳಿಗೆ ತಾವು ತಿಂದು ಉಳಿದುದನ್ನು ಪ್ರಸಾದವಾಗಿ ಕೊಟ್ಟರು; ಅದರಿಂದ ಅವಳಿಗೆ ದೈವತ್ವ ಪ್ರಾಪ್ತಿಯಾಯಿತು; ಈಕೆಗೆ ಭಕ್ತರಿಗೆ ವರವನ್ನು ನೀಡುವ ಶಕ್ತಿ ಸಾಮರ್ಥ್ಯ ಉಂಟಾಗಲಿ; ಈಕೆಯನ್ನು ಯಾರು ಆರಾಧಿಸುತ್ತಾರೋ ಅವರ ಭೌತಿಕ ಆಕಾಂಕ್ಶೆಗಳು ಈಡೇರಲಿ, ಈಕೆಯ ಭಕ್ತರು ತಮ್ಮ ಶತ್ರುಗಳ ಮೇಲೆ ಹಿಡಿತ ಸಾಧಿಸಲಿ ಎನ್ನುವ ವರವನ್ನು ಶಿವ ಈಕೆಗೆ ನೀಡಿದ; ಈಕೆಯೇ ಉಚ್ಚಿಷ್ಟ ಮಾತಂಗಿನೀ

ಪ್ರಣತೋಷಿಣಿ ತಂತ್ರ ಮತ್ತು ನಾರದ ಪಾಂಚರಾತ್ರಗಳ ಪ್ರಕಾರ “ಒಮ್ಮೆ ಪಾರ್ವತಿಯು ತನ್ನ ತವರು ಮನೆಗೆ ಹೋಗಬೇಕೆಂದು ಆಶಿಸಿದಳು, ಶಿವನ ಅನುಮತಿಯನ್ನು ಕೇಳಿದಳು. ಅವನು ಕೆಲವು ದಿನಗಳು ಮಾತ್ರ ಅಲ್ಲಿ ಇದ್ದು ಹಿಂತಿರುಗಬೇಕು ಎಂದ. ಅವಳು ಅನೇಕ ದಿನಗಳು ಕಳೆದರೂ ಹಿಂತಿರುಗಲಿಲ್ಲ. ಶಿವ ಆಭರಣ ಮಾರಾಟಗಾರನ ವೇಷದಲ್ಲಿ ಪಾರ್ವತಿಗೆ ಆಭರಣಗಳನ್ನು ಮಾರಾಟಮಾಡಿದ ಅದಕ್ಕೆ ಪ್ರತಿಯಾಗಿ ಅವಳು ತನ್ನೊಡನೆ ಕೂಡಬೇಕೆಂದು ಕೇಳಿದ. ಇದರಿಂದ ಜಿಗುಪ್ಸೆಗೊಂಡ ಪಾರ್ವತಿ ಶಾಪ ಕೊಡಬೇಕೆಂದುಕೊಂಡಳು. ಆದರೆ ಅವನು ಶಿವ ಎಂಬುದನ್ನು ತಿಳಿದು ಸಕಾಲದಲ್ಲಿ ಅವನ ಕಾಮಾಕಾಂಕ್ಷೆಯನ್ನು ಈಡೇರಿಸುತ್ತೇನೆ ಎಂದು ಹೇಳಿದಳು”.

“ಸಂಜೆ ಪಾರ್ವತಿ ಬೇಟೆಗಾರ್ತಿಯ ವೇಷದಲ್ಲಿ ಶಿವನ ಮನೆಗೆ ಹೋದಳು. ಕಾಮಚೋದಕ ನೃತ್ಯವನ್ನು ಮಾಡಿದಳು. ತಪಸ್ಸು ಮಾಡಲು ಅವನಲ್ಲಿಗೆ ಬಂದಿದ್ದೇನೆ ಎಂದು ಹೇಳಿದಳು. ಅವಳನ್ನು ತನ್ನ ಹೆಂಡತಿ ಎಂದು ಗುರುತಿಸಿದ ಶಿವ ಎಲ್ಲರ ತಪಸ್ಸಿಗೂ ತಾನೇ ಫಲವನ್ನು ಕೊಡುವವನು ಎಂದು ತಾನೇ ಚಾಂಡಾಲನಾಗಿ ಅವಳೊಂದಿಗೆ ಸುಖಿಸಿದ. ಪಾರ್ವತಿಯು ತನ್ನ ಈ ಚಾಂಡಾಲಿನಿ ವೇಷವು ಅಮರವಾಗಿ ಉಳಿಯುವ ವರವನ್ನು ಶಿವನಿಂದ ಪಡೆದಳು. ಈಕೆಯೇ ಚಾಂಡಾಲಿನಿ (ರಾಜಾ ಮಾತಂಗಿನಿ)”. ಈಕೆ ಶ್ಯಾಮಲಾ ದಂಡಕ ಮತ್ತು ಮತಂಗ ತಂತ್ರಗಳ ಪ್ರಕಾರ ಮತಂಗ ಋಷಿಯ ಮಗಳಾದ ಮಾತಂಗಿ; ಸ್ವತಂತ್ರ ತಂತ್ರದ ಪ್ರಕಾರ ಮತಂಗ ಋಷಿಯ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷ ಆದ ತ್ರಿಪುರಸುಂದರಿಯ ಕಣ್ಣಿನ ಕಿರಣಗಳಿಂದ ಉದ್ಭವಿಸಿದ ರಾಜಾ ಮಾತಂಗಿನಿ”.

“ಶಿವನ ಸೋದರಿಯಾದ ಕೌರೀ ಬಾಲಳು ಭೂತ ಪಿಶಾಚಗಳೊಂದಿಗೆ ಇರುವುದು, ಸ್ಮಶಾನದಲ್ಲಿ ವಾಸಿಸುವುದೇ ಮೊದಲಾದ ಶಿವನ ರೀತಿ ರಿವಾಜುಗಳನ್ನು ದ್ವೇಷಿಸುತ್ತಿದ್ದಳು. ಅದನ್ನು ಶಿವ ನಿರ್ಲಕ್ಷಿಸಿದ. ಪಾರ್ವತಿಯು ಮಾತ್ರ ಸಹಿಸದೆ ವಾರಣಾಸಿಯಲ್ಲಿ ಕೆಳ ಜಾತಿಯಲ್ಲಿ, ಅಸ್ಪೃಷ್ಯರ ಸ್ಥಳದಲ್ಲಿ ಜೀವಮಾನ ಪರ್ಯಂತ ಇರು ಎಂದು ಕೌರೀ ಬಾಲಳಿಗೆ ಶಾಪ ಕೊಟ್ಟಳು. ಕೌರೀ ಬಾಲಾ ವಾರಣಾಸಿಗೆ ಬಂದವರ ಯಾತ್ರೆ ತನ್ನನ್ನು ಪೂಜಿಸದೆ ಫಲಪ್ರದ ಆಗಬಾರದು ಎನ್ನುವ ವರವನ್ನು ಶಿವನಿಂದ ಬೇಡಿ ಪಡೆದಳು. ಕೆಳ ಮತ್ತು ಮೇಲು ವರ್ಗದವರಿಬ್ಬರೂ ಈಕೆಯನ್ನು ಪೂಜಿಸುವುದರಿಂದ ಮಲಿನತೆ ಎನ್ನುವುದಕ್ಕೂ ದೈವಿಕತೆಯ ಗೌರವ ದೊರೆತಂತಾಯಿತು” ಎನ್ನುತ್ತದೆ ಮಾತಂಗೀ ದೇವಿಗೆ ಸಂಬಂಧಿಸಿದ ಒಂದು ಕಥೆ..

ನಾನಾ ಅವಯವ ತಂತ್ರವು ಮಾತಂಗಿ ದೇವಿಯನ್ನು ಅರಣ್ಯ-ಜ್ಞಾನಿ, ಅರಣ್ಯ- ಪುನರುತ್ಪಾದಕಿ ಅರಣ್ಯವಾಸಿ ಹಾಗೂ ಅರಣ್ಯಚರಿ; ಮನಸ್ಸಿನ ಭಾವನೆಯನ್ನು ಮಾತಾಗಿಯೂ, ಮಾತನ್ನು ಮನಸ್ಸಿನ ಭಾವವನ್ನಾಗಿಯೂ ಭಾಷಾಂತರಿಸುವ ಈಕೆ ಮಂತ್ರಗಳ ಅಧಿದೇವಿ ಎನ್ನುವ ಭಾವದಲ್ಲಿ ಮಂತ್ರಿಣೀ, ಆಧ್ಯಾತ್ಮಿಕ ಗುರು ಎನ್ನುತ್ತದೆ. ಮಾತಂಗಿಯನ್ನು ವಿಘ್ನ ನಿವಾರಕ ಗಜಾನನನ ತಾಯಿ ಎಂದೂ ಹೇಳುತ್ತಾರೆ. ಇಬ್ಬರೂ ಅತ್ಯುನ್ನತ ಜ್ಞಾನಕ್ಕೆ ಸಂಬಂಧಿಸಿದವರು.  ಮಲಿನತೆಯ ಬಗೆಗಿನ ತಿರಸ್ಕಾರ, ಹೇಸಿಕೆಯ ಭಾವವನ್ನು ಕಳೆದುಕೊಂಡು ಎಲ್ಲದರಲ್ಲೂ ದೈವೀ ಭಾವವನ್ನು ಕಾಣುವುದಕ್ಕೆ. ಎಲ್ಲಾ ಸೀಮಿತ ಬುದ್ಧಿ, ಭಾವ, ಕ್ರಿಯೆಗಳನ್ನು ಮೀರಿ ಮುಕ್ತಿಯನ್ನು ಪಡೆಯುವುದಕ್ಕೆ ಸಹಾಯಕವಾಗುವ ಈಕೆಯ ಧ್ಯಾನ ಮಂತ್ರ ಏಕಾಕ್ಷರ ಆದ ಐಂ ಅಷ್ಟೇ. ದೀರ್ಘವಾದ ಮಂತ್ರ “ಓಂ ಹ್ರೀಂ ಐಂ ನಮೋ ಭಗವತೀ ಉಚ್ಚಿಷ್ಟ ಚಾಂಡಾಲೀ ಶ್ರೀ ಮಾತಂಗೇಶ್ವರೀ ಸರ್ವ ಜನ ವಶಂಕರೀ ಸ್ವಾಹಾ”

ಕಮಲಾ: ಶಿವಪುರಾಣದ ಪ್ರಕಾರ ಅತ್ಯಂತ ಸುಂದರಿ, ಹೆಚ್ಚು ಸಶಕ್ತ ಮತ್ತು ಹೆಚ್ಚು ದೈವಿಕತೆ ಉಳ್ಳ ಕಮಲಾ ದೇವಿ ಇಹದಲ್ಲಿ ಸುಖ ಸಂತೋಷ, ಶಾಂತಿ, ಸಮಾಧಾನ ಮತ್ತು ಸಮೃದ್ಧಿಯನ್ನು ಉಂಟುಮಾಡುವವಳು, ಯೋಗಕ್ಷೇಮವನ್ನು ನೋಡಿಕೊಳ್ಳುವವಳು. ಭೃಗು ಋಷಿಯ ಅಥವಾ ಶಿವ ಮತ್ತು ಶಕ್ತಿಯರ ಮಗಳಾದ ಈಕೆ ಪರದಲ್ಲಿ ಮುಕ್ತಿಯನ್ನೂ ಕೊಡುವವಳು. ವ್ಯಕ್ತಿಯ ದೇಹದಲ್ಲಿರುವ ಏಳೂ ಚಕ್ರಗಳನ್ನು ಜಾಗೃತಗೊಳಿಸಿ ಸ್ತ್ರೀಚೈತನ್ಯದ ಧರ್ಮವನ್ನು ಪ್ರೇರೇಪಿಸಿ ವ್ಯಕ್ತಿಯನ್ನು ಉನ್ನತಿಯ ಮಾರ್ಗದಲ್ಲಿ ಇರಿಸಬಲ್ಲವಳು. ಈಕೆಯ ಕೈಯಲ್ಲಿ ಸದಾ ಇರುವ ಕಮಲ ಈಕೆಯ ಫಲವಂತಿಕೆ ಸಾಮರ್ಥ್ಯದ ಸೂಚಕ; ಕೆಸರಿನಿಂದ ಒಡಮೂಡಿದ ಕಮಲದ ಹೂವಿಗೆ ಕೆಸರಿನ ಸೋಂಕು ಹೇಗೆ ಇರುವುದಿಲ್ಲವೋ ಹಾಗೆ ಈಕೆಯನ್ನು ಆರಾಧಿಸುವ ವ್ಯಕ್ತಿ ಸಂಸಾರದಲ್ಲಿದ್ದೂ ಅದಕ್ಕೆ ಅಂಟಿಕೊಳ್ಳದೆ ಇರಬಲ್ಲ; ಅತ್ಯಂತ ಅಚ್ಚುಕಟ್ಟಾಗಿರುವ ಕಮಲದ ದಳಗಳು ವಿಶ್ವ ಅತ್ಯಂತ ವ್ಯವಸ್ಥಿತ, ಸಮರಸ ಎನ್ನುವುದರ ಸೂಚಕ ಎನ್ನುತ್ತಾರೆ.

ಆರ್ಥಿಕವಾಗಿ ಮತ್ತು ಮಾನಸಿಕವಾಗಿ ದುಸ್ಥಿತಿಯಲ್ಲಿದ್ದಾಗ, ಮಾಡುವ ಕಾರ್ಯಗಳೆಲ್ಲಾ ನಿಷ್ಫಲ ಆಗುತ್ತಿದ್ದಾಗ, ಮಕ್ಕಳಿಲ್ಲದ ಬೇಗೆ ಇದ್ದಾಗ ಪರಿಸ್ಥಿತಿಯ ಸುಧಾರಣೆಗಾಗಿ ಈಕೆಯನ್ನು ಪೂಜಿಸಲು ಒದಗಿ ಬರುವ ಮಂತ್ರ “ಓಂ ಶ್ರೀಂ ಕಮಲಾತ್ಮಿಕಾ ಶ್ರೀಂ ಸ್ವಾಹಾ”. ಭೌತಿಕ ಸೌಖ್ಯ ಮತ್ತು ಆಧ್ಯಾತ್ಮಿಕ ಸಾಧನೆಯಲ್ಲಿ ಯಶಸ್ಸು ಬಯಸುವವರಿಗೆ ಸಾಧನ ಮಂತ್ರಗಳು – ಓಂ ಹ್ರೀಂ ಅಷ್ಟ ಮಹಾಲಕ್ಷ್ಮೈ ನಮಃ; ಸ್ಕ್ಲ್ರೀಂ(ಸ್ಕ್‌ ಲ್ರೀಂ) ಹಮ್‌;  ಐಂ ಶ್ರೀಂ ಹ್ಲೀಂ ಕ್ಲೀಂ ಶ್ರೀಂ ಕ್ಲೀಂ ಶ್ರೀಂ; ಶ್ರೀಂ ಕ್ಲೀಂ ಶ್ರೀಂ ನಮಃ; ಓಂ ಹ್ರೀಂ ಹಮ್‌ ಹಾಂ ಗ್ರೇಂ ಕ್ಷೋಂ ಕ್ರೋಂ ನಮಃ: ನಮಃ ಕಮಲವಾಸಿನೈ ಸ್ವಾಹಾ.

ಈ ಮಹಾವಿದ್ಯಾದೇವಿಯರಲ್ಲಿ ಕಾಳಿಕಾ ದೇವಿಯು ಪರಮ ಶಕ್ತಿಗೆ, ತಾರಾದೇವಿಯು ವಾಕ್-ಶಕ್ತಿಗೆ, ತ್ರಿಪುರಸುಂದರಿಯು ಪರಮ ಸೌಂದರ್ಯ ಮತ್ತು ಪರಮಾನಂದಕ್ಕೆ, ಭುವನೇಶ್ವರಿಯು ಪರಮ ವ್ಯಾಪಕತೆಗೆ, ಭೈರವಿಯು ಉಜ್ವಲ ಆಕರ್ಷಣೆಗೆ, ಛಿನ್ನಮಸ್ತಾದೇವಿಯು ದಮನಕಾರೀ ಶಕ್ತಿಗೆ, ಧೂಮಾವತಿ ದೇವಿಯು ಸುಪ್ತ ಜಡತ್ವಕ್ಕೆ, ಬಗಲಮುಖೀ ದೇವಿಯು ಸ್ತಂಭನ ಶಕ್ತಿಗೆ‌, ಮಾತಂಗಿ ದೇವಿಯು ಉತ್ತಮ ಅಭಿವ್ಯಕ್ತಿಗೆ, ಕಮಲಾ ದೇವಿಯು ಸಾಮರಸ್ಯತೆ ಮತ್ತು ಹೊಂದಾಣಿಕೆಗೆ ಒಂದು ಪ್ರತೀಕ ಆಗಿ ವಾಸ್ತವತೆಯ ದಿಗ್-ದರ್ಶಕರು ಆಗಿದ್ದಾರೆ; ವಾಸ್ತವತೆಯ ಅಗಾಧತೆಯ ಅನುಭವವನ್ನು ಪಡೆದು ಅನುಭಾವಿಗಳಾಗಲು ಮಾರ್ಗದರ್ಶಕರಾಗಿದ್ದಾರೆ ಎಂದೆನ್ನಬಹುದು.

ಸಪ್ತಮಾತೃಕೆಯರು

ಶಕ್ತಿ ದೇವಿಯರೆಲ್ಲ ಮೂಲಭೂತವಾಗಿ ಮಾತೆಯರೇ. ಮಾತೃಕಾ ಎನ್ನುವ ಸಂಸ್ಕೃತ ಪದದ ಮೂಲ ಧಾತು ಮಾತರ್‌ ಅಥವಾ ಮಾತೃ. ಭಾರತ ಮಾತ್ರವಲ್ಲದೆ ಇಡೀ ದಕ್ಷಿಣ ಏಷ್ಯಾದ ಒಂದು ರೀತಿಯ ಅನನ್ಯತೆ ಅಲ್ಲಿಯ ಜನ ಸಮುದಾಯ ಗೌರವಿಸುವ, ಪೂಜಿಸುವ, ಆರಾಧಿಸುವ ಮಾತೃತ್ವದ ಪರಿಕಲ್ಪನೆ. ಮಕ್ಕಳಿಗೆ ಸಂಬಂಧಿಸಿದ ಪೀಡಾ ಕಾರಕರೂ ಮತ್ತು ಪೀಡಾನಿವಾರಕರೂ ಆಗಿ ಪೂಜಿತರಾಗಿದ್ದ‌ ಪೌರಾಣಿಕ ಮಾತೃ ದೇವತೆಗಳು (ಮಾತೃಕೆಯರು) ಮೊದಲಿಗೆ ತಾಂತ್ರಿಕ ಆರಾಧನಾ ಶಕ್ತಿದೇವತೆಗಳಾದರು, ಶೈವಪಂಥದ ಒಳಗೆ ವಿಲೀನಗೊಂಡರು. ಆನಂತರ ನಿರ್ದಿಷ್ಟ ಮಾತೃ ದೇವತೆಗಳಾಗಿ ಮಾನ್ಯರಾದರು, ಅವರಿಗೆ ಪ್ರತ್ಯೇಕ ಪ್ರತ್ಯೇಕ ಪುರುಷ ದೈವದೊಂದಿಗೆ ಸಂಬಂಧ ಕಲ್ಪಿತವಾಯಿತು. ಮಹಾಭಾರತದ ಆರಣ್ಯಕ ಪರ್ವವು (219.9) ಮಕ್ಕಳಿಗೆ ಹಿತವನ್ನು ಉಂಟುಮಾಡುವುದಕ್ಕಾಗಿ ವಿವಿಧ ಸ್ಥಳಗಳಲ್ಲಿ ಮಾತೃಕೆಯರು ನೆಲೆಸಿರುತ್ತಾರೆ; ಅವರು ಲೋಕ ಮಾತೃಗಳು; ಕಾಕೀ, ಹಲಿಮಾ, ರುದ್ರಾ, ಬೃಹಲೀ, ಆರ್ಯಾ, ಪಲಾಲಾ, ಮಿತ್ರಾ ಎನ್ನುವ ಶಿಶುಮಾತೃಗಳಲ್ಲಿ ಆರ್ಯಾ ಶಿಶುಮಾತೆಗೆ ಪ್ರಮುಖ ಸ್ಥಾನ ಇರುವುದನ್ನು ಹೇಳುತ್ತದೆ..

ಶಾಕ್ತ ಸಿದ್ಧಾಂತದಲ್ಲಿ ಅತ್ಯಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿರುವ ಮಾತೃಕೆಯರನ್ನು ಸಪ್ತ ಮಾತೃಕೆಯರು ಎಂದು ಬಹು ಮಟ್ಟಿಗೆ ಗಮನಿಸಿದ್ದರೂ ಮಾತೃಕೆಯರ ಸಂಖ್ಯೆ ಬೇರೆ ಬೇರೆ ಚಿಂತನ ಆಕರಗಳಲ್ಲಿ ಬೇರೆ ಬೇರೆಯೇ ಆಗಿದೆ. ಎಲ್ಲಾ ಮಾತೃಕೆಯರ ವರ್ಣನೆಯನ್ನು ಮಹಾಭಾರತ, ವರಾಹ ಪುರಾಣ, ಅಗ್ನಿ ಪುರಾಣ, ಮತ್ಸ್ಯ ಪುರಾಣ, ವಿಷ್ಣು ಧರ್ಮೋತ್ತರ ಪುರಾಣ, ಮಾರ್ಕಂಡೇಯ ಪುರಾಣದ ದೇವೀ ಮಹಾತ್ಮೆಯಲ್ಲೂ; ಅಂಶುಮದ್‌ ಭೇದ ಆಗಮ, ಸುರ ಭೇದ ಆಗಮ, ಪೂರ್ವ ಕರ್ಣ ಆಗಮ, ರೂಪಮಂದನ ಆಗಮಗಳಲ್ಲಿಯೂ ಕಾಣಬಹುದು.

ದೇವೀ ಮಹಾತ್ಮೆಯು ವರ್ಣಿಸುವ ಸಪ್ತ ಮಾತೃಕೆಯರು – 1. ಬ್ರಹ್ಮನ ಶಕ್ತಿ ಮತ್ತು ಅಸಿತಾಂಗ ಭೈರವನ ಪತ್ನಿ ಆದ ಬ್ರಾಹ್ಮೀ 2. ವಿಷ್ಣುವಿನ ಶಕ್ತಿ ಮತ್ತು ಕ್ರೋಧ ಭೈರವನ ಪತ್ನಿ ಆದ ವೈಷ್ಣವೀ       3. ಶಿವನ ಶಕ್ತಿ ಮತ್ತು ರುರು ಭೈರವನ ಪತ್ನಿ ಆದ ಮಾಹೇಶ್ವರೀ (ರೌದ್ರೀ, ರುದ್ರಾಣೀ, ಮಹೇಶೀ, ಶಿವಾನೀ) 4. ಇಂದ್ರನ ಶಕ್ತಿ ಮತ್ತು ಕಪಾಲಭೈರವನ ಪತ್ನಿ ಆದ ಇಂದ್ರಾಣೀ (ಐಂದ್ರೀ, ಮಹೇಂದ್ರೀ, ವಜ್ರೀ) 5. ಕಾರ್ತಿಕೇಯನ ಶಕ್ತಿ ಮತ್ತು ಚಂಡ ಭೈರವನ ಪತ್ನಿ ಆದ ಕೌಮಾರೀ (ಕುಮಾರೀ, ಕಾರ್ತೀಕೀ, ಕಾರ್ತಿಕೇಯಿನೀ, ಅಂಬಿಕಾ) 6. ವಿಷ್ಣುವಿನ ವರಾಹಾವತಾರದ ಶಕ್ತಿ ಮತ್ತು ಉನ್ಮತ್ತ ಭೈರವನ ಪತ್ನಿ ಆದ ವಾರಾಹೀ (ವೈರಾಲೀ, ವೇರಲ್‌, ದಂಡಿನೀ, ಧನದೈ ದೇವೀ) 7. ವಿಷ್ಣುವಿನ ಅವತಾರವಾದ ನರಸಿಂಹನ ಶಕ್ತಿ ಮತ್ತು ಸಂಹಾರ ಭೈರವನ ಪತ್ನಿ ಆದ ನಾರಸಿಂಹೀ (ಪ್ರತ್ಯಾಂಗೀರ).

ಮಾತೃಕಾ ಗುಚ್ಛ

ದೇವೀ ಪುರಾಣವು ಸಪ್ತ ಮಾತೃಕೆಯರಲ್ಲದೆ 16 ಮಾತೃಕೆಯರ ಒಂದು ಗುಚ್ಛ ಮತ್ತು 6 ಇತರ ವಿಧದ ಮಾತೃಕೆಯರನ್ನು ಲೋಕ ಮಾತೃ ಎಂಬ ಪರಿಕಲ್ಪನೆಯ ಅಡಿಯಲ್ಲಿ ಪರಿಚಯಿಸುತ್ತದೆ. ಶಲ್ಯಪರ್ವವು ಸ್ಕಂದನನ್ನು ಪೋಷಿಸಿದ ಯುವತಿಯರೂ, ಸುಂದರಿಯರೂ, ಉತ್ಸಾಹಿಗಳೂ ಆದ 92 ಮಾತೃಕೆಯರ ಹೆಸರನ್ನು ಹೇಳಿ ಅಪಾಯಕಾರಿಯಾದ ಉದ್ದುದ್ದದ ಉಗುರುಗಳನ್ನೂ, ಹಲ್ಲುಗಳನ್ನೂ ಹೊಂದಿರುವ ಹೆಸರಿಸದ ಮಾತೃಕೆಯರು ಇನ್ನೂ ಇದ್ದಾರೆ; ಅವರೆಲ್ಲರೂ ಶತ್ರುಗಳ ಮನಸ್ಸಿನಲ್ಲಿ ಭಯ ಹುಟ್ಟಿಸಿ ಇಂದ್ರನಷ್ಟೇ ಭಯಂಕರವಾಗಿ ಯುದ್ಧ ಮಾಡುತ್ತಾರೆ; ವಿವಿಧ ವಿದೇಶೀ ಭಾಷೆಯನ್ನು ಮಾತಾಡುತ್ತಾರೆ; ಸುಲಭಗಮ್ಯ ಅಲ್ಲದ ಗುಹೆ, ಪರ್ವತ, ಕಾಡು, ನದಿದಂಡೆ, ಸ್ಮಶಾನವೇ ಮೊದಲಾದ ಸ್ಥಳಗಳಲ್ಲಿ ವಾಸಿಸುತ್ತಾರೆ; ಅವರಲ್ಲಿ ಬಾಲಕೃಷ್ಣನನ್ನು ಕೊಲ್ಲಲು ಬಂದ ಪೂತನಿಯೂ ಒಬ್ಬಳು ಎನ್ನುತ್ತದೆ.

ದೇವೀ ಮಹಾತ್ಮೆ, ದೇವೀ ಭಾಗವತ ಪುರಾಣ, ವಾಮನ ಪುರಾಣಗಳು ಶುಂಭ ನಿಷುಂಭರ ಸಂಹಾರದ ಸಂದರ್ಭದಲ್ಲಿ ಬ್ರಹ್ಮ, ಶಿವ, ಸ್ಕಂದ, ವಿಷ್ಣು, ರುದ್ರ, ಇಂದ್ರರ ದೇಹಗಳಿಂದ ಹೊರಬಂದ ಶಕ್ತಿ-ಮಾತೃಕೆಯರು ಮೂರ್ತ ರೂಪವನ್ನು ತಾಳಿ ಚಂಡಿಕಾ ದೇವಿಯ ಜೊತೆಗೆ ಸೇರಿಕೊಂಡ ರಣರಂಗದ ದೇವಿಯರು ಹಾಗೂ ದೈತ್ಯರನ್ನು ಸಂಹರಿಸಿ ಅವರ ರಕ್ತ ಹೀರಿ ಕುಣಿಯುವ ಶಕ್ತಿಗಳು ಎಂದು ವರ್ಣಿಸುತ್ತವೆ. ಮತ್ಸ್ಯ ಪುರಾಣವು “ನೆಲಕ್ಕೆ ಬಿದ್ದ ತನ್ನ ಪ್ರತಿಯೊಂದು ಹನಿ ರಕ್ತದಿಂದಲೂ ಇನ್ನೊಬ್ಬ ಅಂಧಕಾಸುರನನ್ನು ಉಂಟುಮಾಡುತ್ತಿದ್ದ ಮೂಲ-ಅಂಧಕಾಸುರನೊಡನೆ ಯುದ್ಧ ಮಾಡಲು ಶಿವ  ಸೃಷ್ಟಿ ಮಾಡಿದ ಈ ಮಾತೃಕೆಯರು ಅಸುರನ ರಕ್ತ ನೆಲಕ್ಕೆ ತಾಗುವ ಮೊದಲೇ ಹೀರಿ ಶಿವನಿಗೆ ಸಹಾಯ ಮಾಡಿದರು; ಯುದ್ಧಾನಂತರ ಈ ಮಾತೃಕೆಯರು ರಾಕ್ಷಸರು, ಮನುಷ್ಯರು, ದೇವತೆಗಳು ಎಂಬ ಭೇದವಿಲ್ಲದೆ ಎಲ್ಲರನ್ನೂ ನಾಶಮಾಡಲು ಆರಂಭಿಸಿದರು; ಇವರನ್ನು ಶಾಂತಗೊಳಿಸಲು ವಿಷ್ಣುವಿನ ಅವತಾರ ಆದ ನರಸಿಂಹ 32 ಸೌಮ್ಯ ದೇವತೆಯರನ್ನು ಸೃಷ್ಟಿ ಮಾಡಿ ರಕ್ಷಿಸುವ ಕಾರ್ಯ ಮಾಡಬೇಕೆಂದು ಆದೇಶಿಸಿದ; ಅದರಿಂದ ಮನುಷ್ಯರು ಅವರನ್ನು ಪೂಜಿಸಲು ಆರಂಭಿಸಿದರು; ಯುದ್ಧ ನಡೆದ ಸ್ಥಳದಲ್ಲಿ ಶಿವ ಮಾತೃಕೆಯರೊಡನೆ ನೆಲೆಯೂರಿದ” ಎನ್ನುತ್ತದೆ.

ವಿಷ್ಣು ಧರ್ಮೋತ್ತರ ಪುರಾಣವು ಈ ಮಾತೃಕೆಯರು ದ್ವೇಷ, ಜಂಬ, ಕೋಪ ಮುಂತಾದ ನೇತ್ಯರ್ಥಕ ಗುಣಗಳ ಪ್ರತೀಕ ಎಂದರೆ ವರಾಹ ಪುರಾಣವು ತಪೋ ನಿರತಳಾದ ವೈಷ್ಣವಿಯ ಅನ್ಯಮನಸ್ಕತೆಯಿಂದ ಹುಟ್ಟಿದ ಮಾತೃಕೆಯರು ಯುದ್ಧರಂಗದಲ್ಲಿ ದೇವತೆಗಳ ಸಹಾಯಕರಾಗಿ ಹಿತವಾದ ಕಾರ್ಯವನ್ನು ಮಾಡುವವರು ಎನ್ನುತ್ತದೆ. ಭಾಗವತ ಪುರಾಣವು ಮಾತೃಕೆಯರ ಜೊತೆಗೆ ಭೂತ, ಪ್ರೇತ, ಪಿಶಾಚಿ, ಡಾಕಿನಿಯರೇ ಮೊದಲಾದವರನ್ನೂ ವಿಷ್ಣು ಸೃಷ್ಟಿಸಿದ; ಪೀಡಕರಾದ ಮಾತೃಕೆಯರಿಂದ ಬಾಲ ಕೃಷ್ಣನನ್ನು ಕಾಪಾಡಬೇಕು ಎಂದು ಗೋಪಿಯರು ಪ್ರಾರ್ಥಿಸಿದರು ಎನ್ನುತ್ತದೆ.

ಮಹಾಭಾರತದ ಒಂದು ಅಧ್ಯಾಯವು ಇಂದ್ರನು ಸ್ಕಂದನನ್ನು ಕೊಲ್ಲಲು ಕಳುಹಿಸಿಕೊಟ್ಟ ಲೋಕ ಮಾತೆಯರಿಗೆ ಸ್ಕಂದನನ್ನು ಕಂಡಾಗ ಮಾತೃ ಭಾವನೆ ಜಾಗೃತ ಆಗಿ ಅವರು ಅವನನ್ನು ಕೊಲ್ಲುವ ಬದಲು ಸಂರಕ್ಷಿಸಿ ಸಾಕುತ್ತಾರೆ ಎನ್ನುತ್ತದೆ. ಇನ್ನೊಂದು ಅಧ್ಯಾಯವು ಇಂದ್ರ ವಜ್ರಾಯುಧದಿಂದ ಸ್ಕಂದನನ್ನು ಹೊಡೆದಾಗ ಸ್ಕಂದನಿಂದ ಒಡಮೂಡಿದ ಇತರರ ಮಕ್ಕಳನ್ನು ಕದಿಯುವ ಕಾಕಿ, ಹಲಿಮಾ, ಮಾಲಿನೀ, ಬೃಹಾಲೀ, ಆರ್ಯಾ, ಪಲಾಲಾ, ವೈಮಿತ್ರಾ ಎನ್ನುವ 8 ಭಯಂಕರ ದೇವಿಯರನ್ನು ಸ್ಕಂದ ತನ್ನ ಮಾತೆಯರು ಎಂದು ಸ್ವೀಕರಿಸಿ ಸಾತ್ವಿಕರನ್ನಾಗಿಸಿದ ಎನ್ನುತ್ತದೆ. ಮತ್ತೊಂದು ಅಧ್ಯಾಯವು “ಸಪ್ತರ್ಷಿಯರಲ್ಲಿ ಆರು ಋಷಿಯರು ತಮ್ಮ ಹೆಂಡತಿಯೇ ಸ್ಕಂದನ ನಿಜವಾದ ತಾಯಿ ಎಂದು ತಮ್ಮ ಹೆಂಡತಿಯನ್ನು ತ್ಯಜಿಸಿದರು; ತಮ್ಮನ್ನು ಅವನ ತಾಯಿಯರು ಎಂದು ಸ್ವೀಕರಿಸಬೇಕು ಎಂದು ಬೇಡಿಕೊಂಡ ಋಷಿಪತ್ನಿಯರನ್ನು ಸ್ಕಂದ ತನ್ನ ತಾಯಿಯರು ಎಂದು ಒಪ್ಪಿಕೊಂಡು ಅವರು ಮಹಾದೇವಿಯರು ಎಂದು ಪೂಜಿತರಾಗಲಿ ಎನ್ನುವ ವರವನ್ನೂ ನೀಡಿದ; 16 ವರ್ಷ ಆಗುವವರೆಗೂ ಮಕ್ಕಳನ್ನು ಹಿಂಸಿಸಬಹುದು ಎಂದು ಅನುಮತಿಯನ್ನು ಕೊಟ್ಟು ಆನಂತರ ಅವರು ಆ ಮಕ್ಕಳ ರಕ್ಷಕರಾಗಬೇಕೆಂದು ಆದೇಶಿಸಿದ” ಎನ್ನುತ್ತದೆ.

ಮಾತೃಕೆಯರನ್ನು ತಾಂತ್ರಿಕರ 64 ಅಥವಾ 81 ಯೋಗಿನಿಯರ ಗುಚ್ಛದಲ್ಲಿ‌ ಸೇರ್ಪಡೆ ಮಾಡುವ ಒಂದು ತಂತ್ರಪ್ರಕಾರವು ಕ್ಷುದ್ರ ಕ್ರೂರಿ ದೇವತೆಗಳಾದ ಯೋಗಿನಿಯರು ರಾಕ್ಷಸರೊಂದಿಗೆ ಹೋರಾಡುವಾಗ ದುರ್ಗಾ ದೇವಿಗೆ ಸಹಾಯಕರಾದವರು; ಎಂಟು ಮಾತೃಕೆಯರ ಎಂಟೆಂಟು ರೂಪಗಳು ಒಟ್ಟು 64 ಅಥವಾ ಒಂಬತ್ತು ಮಾತೃಕೆಯರ ಒಂಬತ್ತೊಂಬತ್ತು ರೂಪಗಳು ಒಟ್ಟು 81 ರೂಪಗಳೇ ಈ ಯೋಗಿನಿಯರು ಎನ್ನುತ್ತದೆ. ಯೋಗಿನಿಯರನ್ನೂ ಮಂಡಲ ಮತ್ತು ಚಕ್ರದ ರೂಪದಲ್ಲಿ ಸಾಂಕೇತಿಕವಾಗಿ ಪರಿಗಣಿಸುವ ರೂಢಿಯೂ ಇದೆ. ಮಹಾಭಾರತದ ಶಲ್ಯ ಪರ್ವವು ಮಾತೃದೇವತೆಗಳನ್ನು ಯಾಮ್ಯಃ, ರೌದ್ರ್ಯಃ, ಸೌಮ್ಯಃ, ಕೌಬೇರ್ಯಃ, ವಾರುಣ್ಯಃ, ಮಾಹೇಂದ್ರ್ಯಃ, ಆಗ್ನೇಯ್ಯಃ, ವಾಯುವ್ಯಃ, ಕೌಮಾರ್ಯಃ, ಬ್ರಾಹ್ಮ್ಯಃ ಎಂದು ವರ್ಗೀಕರಿಸುತ್ತದೆ. ಇದೇ ರೀತಿಯ ವರ್ಗೀಕರಣವನ್ನು ತಂತ್ರ ಪಂಥವು ಯೋಗಿನಿಯರನ್ನು ಮಾತೃ ದೈವವೊಂದರ ಕುಲಕ್ಕೆ ಸೇರಿದವುಗಳಾಗಿ ವರ್ಗೀಕರಿಸಲು ಬಳಸಿಕೊಂಡಿದೆ. ಈ ವರ್ಗೀಕರಣದಲ್ಲಿ ದಿಗ್ದೇವಿಯರೂ ಮಾತೃದೇವತೆಗಳೆನಿಸಿಕೊಂಡಿದ್ದಾರೆ.

ತಾಂತ್ರಿಕ ಸಂಪ್ರದಾಯದಲ್ಲಿ ದೇವತೆಗಳಿಗೂ ಅವುಗಳನ್ನು ಆವಾಹಿಸಿಕೊಳ್ಳಲು ಪೂರಕ ಆಗುವ ಶಬ್ದೋಚ್ಚಾರಕ್ಕೂ ಅಂಟು ನಂಟು; ಮಾತೃ ತತ್ತ್ವಕ್ಕೂ ಭಾಷೆಯಲ್ಲಿರುವ ಸ್ವರಾಕ್ಷರ ಮತ್ತು ವ್ಯಂಜನಾಕ್ಷರಗಳಿಗೂ ಸಂಬಂಧ ಉಂಟು; ಸಂಸ್ಕೃತದ 51 ಅಕ್ಷರಗಳನ್ನು 51 ಮಾತೃಕೆಯರು ಪ್ರತಿನಿಧಿಸುತ್ತಾರೆ. ಅದರಿಂದಲೇ ದೇವಿಯರ ಆರಾಧನೆಯಲ್ಲಿ ಮಾಂತ್ರಿಕ ಶಕ್ತಿಯನ್ನು ಹೊಂದಿದೆ ಎಂದೆನ್ನುವ ನಿರ್ದಿಷ್ಟ ಅಕ್ಷರಗಳ ಜೋಡಣೆಯ ಜಪ-ತಪ ಅತ್ಯಂತ ಮುಖ್ಯವಾದದ್ದು. ತಾಂತ್ರಿಕ ಆರಾಧನೆಯ ಹೃಲ್ಲೇಖ ಮಾತೃಕಾ ನ್ಯಾಸವು ಮಾತೃಕೆಯರ  ಶಕ್ತಿ ಸೂಚಕ ಎಲ್ಲಾ ಅಕ್ಷರಗಳನ್ನು ಭುವನೇಶ್ವರಿಯ ಬೀಜಾಕ್ಷರವಾದ ಹ್ರೀಂ ನೊಂದಿಗೆ ಒಟ್ಟುಗೂಡಿಸಿ ದೇಹದ ವಿವಿಧ ಅಂಗಗಳಲ್ಲಿ ಆವಾಹಿಸಿಕೊಳ್ಳುವುದಕ್ಕೆ ಸಂಬಂಧಿಸಿದುದು ಆಗಿದೆ.

Feature Image Credit: istockphoto.com

ಮಾತೃಶಕ್ತಿ ಆರಾಧನಾ ಸರಣಿ

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.