close logo

ಪು. ತಿ. ನ ಅವರ  ಸತ್ಯಾಯನ ಹರಿಶ್ಚಂದ್ರ – ಯಕ್ಷ ರೂಪಕದ ವಿಶ್ಲೇಷಣೆ  – 2

ಪು. ತಿ. ನ ಅವರ  ಸತ್ಯಾಯನ ಹರಿಶ್ಚಂದ್ರ – ಯಕ್ಷ ರೂಪಕದ ವಿಶ್ಲೇಷಣೆ  – 1

ವಿಶ್ವಾಮಿತ್ರನ ಸ್ವಮೌಲ್ಯಮಾಪನ

ಇಲ್ಲಿ ವಿಶ್ವಾಮಿತ್ರ ಸ್ವಮೌಲ್ಯಮಾಪನದ ಭಾಗವಾಗಿ ತನಗೆ ತಾನೇ ಮೊದಲು ಕೇಳಿಕೊಳ್ಳುವುದು – “ನನ್ನ ನೆಲೆ ಈಗ ಯಾವುದು?” ಎಂದು. ಅವನಿಗೆ ಕಾಣುತ್ತಾ ಇದೆ ಅವನು ಯಾರ ಮಾತಿಗೆ ಬೆಲೆ ಕೊಟ್ಟು ಹರಿಶ್ಚಂದ್ರನನ್ನು ಪರೀಕ್ಷಿಸಲು ಬಂದಿದ್ದಾನೆಯೋ ಉಮಾಪತಿಯನ್ನೂ ತಾನು ನೆನೆಯುತ್ತಿಲ್ಲ, ಅಷ್ಟೇ ಅಲ್ಲ ಯಾವ ದೇವರನ್ನೂ ಸ್ಮರಿಸುತ್ತಿಲ್ಲ; ಹೋಗಲಿ, ಯಜ್ಞ ಯಾಗಗಳನ್ನಾದರೂ ಮಾಡುತ್ತಿದ್ದಾನೆಯೇ ಎಂದರೆ ಅದೂ ಇಲ್ಲ; ತಾನು ನೇತೃತ್ವ ವಹಿಸಿ ಶಿಷ್ಯರ ಮೂಲಕವಾದರೂ ಮಾಡಿಸುತ್ತಿದ್ದಾನೆಯೇ ಎಂದರೆ ಅದೂ ಇಲ್ಲ; ತ್ರಿಶಂಕುವಿಗಾಗಿ ಸೃಜಿಸಿದ ಹೊಸ ಸ್ವರ್ಗದಲ್ಲಾದರೂ ಇದ್ದಾನೆಯೇ ಎಂದರೆ ಅದೂ ಇಲ್ಲ; ಬದಲಿಗೆ ಅವನ ಚಿತ್ತರಥ ಸ್ಮಶಾನದ ಕಡೆಗೆ ಹೊರಟಿದೆಎಂದು. ಆಗ ಅವನಲ್ಲಿ ಮೂಡುವ ಪ್ರಶ್ನೆ: “ನನ್ನಿಗೆ ಹರಿಶ್ಚಂದ್ರ ನಿಲ್ಲುತ್ತಾನೆಯೋ ನಿಲ್ಲುವುದಿಲ್ಲವೋ ನನಗೆ ಯಾಕೆ ಅದು ವಿಷಯವಾಗಬೇಕು? ಅವನನ್ನು ಕಾಡಿದ್ದರಿಂದ ನನಗೆ ಸಿಗುವ ಬೆಲೆ, ಮರ್ಯಾದೆ, ಮಹತ್ವವಾದರೂ ಯಾವುದು?” ಹರಿಶ್ಚಂದ್ರನಿಗಾದರೋ ತೆತ್ತೂ ತೆತ್ತೂ, ಅಳಲನ್ನು ಉಂಡೂ ಉಂಡೂ ಋಷಿತೇಜ ಬೆಳೆಯುತ್ತಿದೆ; ತನಗಾದರೋ ಸುಮ್ಮ ಸುಮ್ಮನೆ ಋಷಿ ವಸಿಷ್ಠನ ಜೊತೆ ಛಲಕ್ಕೆ ನಿಂತೆ ಎನ್ನುವ ಚಿಂತೆ, ಖೇದ ಬೆಳೆಯುತ್ತಿದೆ ಎಂಬುದೂ ಅವನಿಗೆ ಕಾಣುತ್ತಿದೆ.

ಸ್ವಶೋಧದ ಮೂರನೆಯ ಹಂತದಲ್ಲಿ ಅವನಲ್ಲಿ ಹುಟ್ಟಿಕೊಳ್ಳುವ ಮುಂದಿನ ಪ್ರಶ್ನೆ: “ಹಾಗಾದರೆ ಮನುಷ್ಯನ ಮಿತಿಯ ಬಗೆಗಿನ ನನ್ನ ಅರಿವಿನ ದೃಷ್ಟಿಯೇ ಮಲಿನವೇ=ಸಂಕುಚಿತವೇ? ಅವನು ದಿಟಕ್ಕೂ ಬೈರಾಗಿಯೇ? ಅವನಿಗೆ ಆಸೆ ಕಿಲುಬು ಇಲ್ಲವೇ? ಅವನ ಗಟ್ಟಿತನದ ಮುಂದೆ ಅಳುಕು, ಎಳಸಿಕೆ ನಿಲ್ಲವೇ?” ಹೀಗೆಲ್ಲಾ ಕೇಳಿಕೊಂಡ ಪ್ರಶ್ನೆಗಳಿಗೆ ವಿಶೇಷ ಅರ್ಥವೇನೂ ಹುಟ್ಟಿಕೊಂಡಿಲ್ಲ ಎನ್ನುವಂತೆನನ್ನ ಕೈ ತಪ್ಪಿ ಹೋಗಿರುವ ಇವನನ್ನು ಹುಸಿ ಹೇಳುವ ಹಾಗೆ ಏನು ಮಾಡಬೇಕು?” ಎಂದೇ ವಿಶ್ವಾಮಿತ್ರ ಯೋಚಿಸುತ್ತಾನೆ. ಸಂದರ್ಭದಲ್ಲಿ ನಕ್ಷತ್ರಿಕ ವಿಶ್ವಾಮಿತ್ರನಿಗೆಹರಿಶ್ಚಂದ್ರನನ್ನು ಹೀಗೆ ನೀನು ಕಾಡುವುದು ನನಗೆ ಸರಿಯೆನಿಸಿಲ್ಲಎಂದು ಆಕ್ಷೇಪಿಸುತ್ತಾನೆ. ‘ಋಷಿಗಳಿಬ್ಬರು ಹೋರೆ ತುಳಿವ ನೆಲವಾದನು ಇವ’; ನೀವಿಬ್ಬರು ಹರಿಶ್ಚಂದ್ರನನ್ನು ಕಾಲಡಿಯ ನೆಲ ಮಾಡಿಕೊಂಡಿದ್ದೀರಿಎಂದು ನೇರವಾಗಿಯೇ ದೂರುತ್ತಾನೆ

ಆಗಲೋಭದಿಂದ ಇದನೆಲ್ಲ ಮಾಡಿಸಿದೆನು ಎಂಬೆಯಾ? ಕ್ರೌರ್ಯವ ತೋರಲು ಆಸೆಯೇ ನನಗೆ?” ಎಂದು ವಿಶ್ವಾಮಿತ್ರ ನಕ್ಷತ್ರಿಕನನ್ನು ಕೇಳುತ್ತಾನೆ. ನಕ್ಷತ್ರಿಕ ಇದು ಲೋಭದ ಮಾತಲ್ಲ, ತಪಸ್ವಿಗೆ ತಕ್ಕುದಲ್ಲದ ಮಾತು ಎನ್ನುತ್ತಾನೆ. ಅದಕ್ಕೆ ಪ್ರತಿಕ್ರಿಯೆಯಾಗಿ ತಾನು ಏಕೆ ಬದಲಾಗುತ್ತಿಲ್ಲ ಎನ್ನುವುದಕ್ಕೆ ಸಮರ್ಥನೆಯನ್ನು ವಿಶ್ವಾಮಿತ್ರ ಕೊಟ್ಟುಕೊಳ್ಳುವ ಚಿತ್ರವನ್ನು ಪು.ತಿ.. ಮುಂದಿಡುತ್ತಿದ್ದಾರೆ. “ಸತ್ವಶಾಲಿಗಳೊಡನೆ ನಿಸ್ವಾರ್ಥಿಗಳ ಜತೆಗೆ| ಹೋರಾಡಲೊಳ್ಳಿತೈ ಮೌಲ್ಯಾಭಿಕಾಂಕ್ಷಿಗೆ” (ಪು.ತಿ.. ಸಂಚಯ, ಪು.೧೮೮); ಇಂಥ ಹೋರಾಟಗಳ ಮೂಲಕ ಸತ್ವಶಾಲಿಗಳ ನಡೆ ನುಡಿಗಳೇ ಅವರೊಂದಿಗೆ ನೇತ್ಯರ್ಥಕವಾಗಿ ಸ್ಪರ್ಧೆಗೆ ನಿಲ್ಲುವವರ ಮನೋಬುದ್ಧಿಗಳನ್ನು ತುಂಬಿಬಿಡುತ್ತವೆ, ಮೂಲಕ ಹೋರಾಡುವವರು ಸಹ ಸತ್ವಶಾಲಿಗಳಾಗುತ್ತಾ ಹೋಗುತ್ತಾರೆ. ಇದು ವಿಶ್ವಾಮಿತ್ರ ತನ್ನ ಸ್ವಶೋಧನೆಯಿಂದ ಕಂಡುಕೊಂಡ ಮೂಲಭೂತ ಸಂಗತಿ. ಕೆಸರಿನಲ್ಲಿರುವವರೊಡನೆ ಗುದ್ದಾಡುವುದಕ್ಕಿಂತ ಗಂಧದವನೊಡನೆ ಗುದ್ದಾಡುವುದು ಲೇಸು ಎಂಬುದೊಂದು ಗಾದೆ ಮಾತು 

ಘನವ್ಯಕ್ತಿತ್ವದ ಪ್ರಕಟಣೆ

ಪು.ತಿ.. ಅವರ ಪ್ರಕಾರ ವಿಶ್ವಾಮಿತ್ರ ಸ್ವ ಇಚ್ಛೆಯಿಂದ ತನ್ನ ಮೌಲ್ಯಮಾಪನ ಮಾಡಿಕೊಳ್ಳ ಬಯಸಿಯೇ ಹರಿಶ್ಚಂದ್ರನ ಸತ್ವ ಪರೀಕ್ಷೆಗೆ ಹೊರಟಿದ್ದ:

ನೆಲೆನಿಂತವನು ಆತ, ಬೆಲೆ ಬಲ್ಲ ಧೀಮಂತ|

ಹಸುವೊಂದ ಮುಂದೊಡ್ಡುತಾ ಬ್ರಹ್ಮರ್ಷಿ ನನ್ನ|

ಕ್ಷಾತ್ರವನು ಶಮಿಸಿ ಗೆಲವಾಂತನೀ ಮೊದಲು|

ಈಗಳೀ ಹುಸಿಕನನೆ ಸತ್ಯಸಂಧನೆನಿಸೆ|

ದೇವರಿದಿರೊಳೆ ಪಣವ ತೊಟ್ಟಿಹನು ಮಹಿಮ|

ಅರಿತಿಹನು ಮಾಮುನಿ ಎನ್ನ ದೌರ್ಬಲ್ಯಗಳ|

ಅಂತೆಯೇ ತುದಿಮುಟ್ಟಲೆನ್ನ ಮೇಲ್ಮೆಯ ಛಲವ” (ಪು.ತಿ.. ಸಂಚಯ, ಪು.೧೮೮)

ವಿಶ್ವಾಮಿತ್ರ ಮತ್ತು ವಸಿಷ್ಠರ ನಡುವೆ ಘರ್ಷಣೆ ಮೊದಲಿಗೆ ಪ್ರಾರಂಭವಾದದ್ದು ತನಗೆ ಮತ್ತು ತನ್ನ ಅಪರಿಮಿತ ಸೈನ್ಯಕ್ಕೆ ಅತಿಶಯವಾದ ಊಟೋಪಚಾರ ಮಾಡಲು ವಸಿಷ್ಠರಿಗೆ ಸಹಕಾರಿಯಾಗಿದ್ದ, ದೇವತೆಗಳು ವಸಿಷ್ಠರಿಗೆ ನೀಡಿದ್ದ, ನಂದಿನಿ ಹಸುವನ್ನು ಬಲಾತ್ಕಾರದಿಂದ ತನ್ನ ವಶ ಮಾಡಿಕೊಳ್ಳಲು ವಿಶ್ವಾಮಿತ್ರ ಘೋರ ಯುದ್ಧವನ್ನು ಮಾಡಲು ಸಿದ್ಧನಾದಾಗ. ಆಗ ವಸಿಷ್ಠ ಹಸುವನ್ನೇ ವಿಶ್ವಾಮಿತ್ರನ ಮುಂದೆ ಅವನೊಂದಿಗೆ ಹೋರಾಡಲು ಬಿಟ್ಟು ವಿಶ್ವಾಮಿತ್ರನ ಕ್ಷಾತ್ರಅಹಂಕಾರವನ್ನು ಮಣಿಸಿದ್ದ. ಈಗ ಹರಿಶ್ಚಂದ್ರನನ್ನು ಮುಂದಿಟ್ಟು ಶಿವನ ಮತ್ತು ವಿಧಿಯ ಸ್ವರೂಪಜ್ಞಾನವನ್ನು ಪಡೆಯುವಂತೆ ಮಾಡುತ್ತಿದ್ದಾನೆಯೇ? ಎಂದು ಕೇಳಿಕೊಂಡಾಗ ವಿಶ್ವಾಮಿತ್ರನಿಗೆವಸಿಷ್ಠ ತನ್ನಲ್ಲಿ ಯಾವುದೋ ದಿವ್ಯ ಛಲವನ್ನು ಉರುಬಿ ಹೊತ್ತಿಸುತ್ತಿದ್ದಾನೆಎಂದು ಹೊಳೆಯುತ್ತದೆ. ಅದು ಯಾವುದು ಎಂದು ವಿವೇಚಿಸ ಬಯಸುತ್ತಾನೆ. ತನ್ನಅರಿವನ್ನು, ಪ್ರಜ್ಞೆಯನ್ನು ವಿಸ್ತರಿಸುವ ಪ್ರಶ್ನೆಗಳಿಗೆ ಉತ್ತರಗಳನ್ನು ಶೋಧಿಸುತ್ತಾ ಹೋಗುತ್ತಾನೆ”. ಪು.ತಿ.. ಅವರ ಪ್ರಕಾರ ಹರಿಶ್ಚಂದ್ರನ ಘನ ವ್ಯಕ್ತಿತ್ವದ ಪ್ರಕಟಣೆಗೆ ಮಾತ್ರವಲ್ಲ ವಿಶ್ವಾಮಿತ್ರನ ವ್ಯಕ್ತಿತ್ವದ ಘನತೆ ಮಿಗಿಲಾಗುತ್ತಾ ಹೋಗುವಂತಾಗಲೂ ವಸಿಷ್ಠನೇ ಕಾರಣನಾಗುತ್ತಾನೆ

ವಿಶ್ವಾಮಿತ್ರನ ಎದುರಾಳಿಹರಿಶ್ಚಂದ್ರನಲ್ಲ, ವಸಿಷ್ಠನೂ ಅಲ್ಲ ಬದಲಿಗೆ ವಿಶ್ವಾಮಿತ್ರನೇ. ವಿಶ್ವಾಮಿತ್ರ ಹರಿಶ್ಚಂದ್ರನನ್ನು ಪರೀಕ್ಷೆ ಮಾಡುತ್ತಾ ತನ್ನನ್ನೂ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾನೆ: 

ಆವ ಸತ್ವದೊಳರಸು ಪ್ರಭುತೆಯನೆ ತೊರೆದ?|

ಚಂಡಾಳಗಾಳಾಗಿ ಕುಲಮದವ ತೊರೆದ?|

ಸಿರಿ ನೀಗಿ ಕಂಡವಗೆ ಸತಿ ಸುತರ ಮಾರುತ್ತ|

ತೊರೆದನಭಿಮಾನವನು ಮಮತೆಗಳನೊತ್ತರಿಸಿ?|

ಇವನ ಶೋಧಿಸುವೆಸಕ ಶೋಧಿಸುವುದೆನ್ನನೂ|

ಕಾಮವೇನುಂಟಿವನೊಳಾ ಸ್ಥೈರ್ಯವೈರಿ?” (ಪು.ತಿ.. ಸಂಚಯ, ಪು.೧೮೮)

ಹರಿಶ್ಚಂದ್ರಸಿರಿ ಮದ, ಪ್ರಭುತ್ವದ ಮದ, ಸತಿಸುತಮೋಹ ಮತ್ತು ಕುಲಮದಗಳನ್ನು ಒತ್ತರಿಸಿದ್ದುಯಾವ ಸತ್ವದಿಂದ? ಎಂದು ಕೇಳಿಕೊಂಡು ಹರಿಶ್ಚಂದ್ರ ಏನನ್ನು ಸಾಧಿಸುತ್ತಿದ್ದಾನೋ ಅದು ಏನು, ಸಾಧಿಸುತ್ತಿರುವುದು ಹೇಗೆ ಎಂಬುದನ್ನು ತಿಳಿಯುತ್ತಾ ವಿಶ್ವಾಮಿತ್ರ ತನ್ನ ಅರಿವನ್ನೂ, ತನ್ನ ಸಾಧ್ಯತೆಯನ್ನೂ, ತನ್ನ ಇತಿಮಿತಿಗಳನ್ನೂ ಮನಗಾಣುತ್ತಾನೆ

ಪರೀಕ್ಷೆ

ವಿಶ್ವಾಮಿತ್ರ ತನ್ನ ಸ್ವಶೋಧನೆಯ ಭಾಗವಾಗಿಯೇ ಹರಿಶ್ಚಂದ್ರನನ್ನು ವಿಶಿಷ್ಠವಾದ ಪರೀಕ್ಷೆಗೆ ಒಳಪಡಿಸುತ್ತಾನೆ. ಪರೀಕ್ಷೆಯ ಮುಖ್ಯ ಭಾಗ ಅತಿಯಾದ ದುಃಖಗಳನ್ನು ತಂದೊಡ್ಡುವುದು. “ಮನುಷ್ಯನಿಗೆ ಅಳಲುಗಳು ಬಂದಾಗಲೇ ಅವನ ವ್ಯಕ್ತಿತ್ವದ ಬೆಲೆ ನಿರ್ಧಾರಿತವಾಗುವುದು; ಅವನು ಮೌಲ್ಯಗಳಿಗೆ ಬದ್ಧತೆಯನ್ನು ತೋರುವ ಸಾಧ್ಯತೆ, ಸಾಮರ್ಥ್ಯಗಳು ಪ್ರಕಟವಾಗುವುದೇ ಅವನಿಗೆ ಅಳಲುಗಳು ಎದುರಾದಾಗಎಂದು ನಿರ್ಣಯಿಸಿದ ವಿಶ್ವಾಮಿತ್ರ ನೆವವೇ ಇಲ್ಲದೆ ಮನುಷ್ಯರನ್ನು ಪೀಡಿಸಿ ಸಂತೋಷ ಪಡುವ ಬೇತಾಳಗಳ ಅಶುಭ ಜಾಲದಲ್ಲಿ ಹರಿಶ್ಚಂದ್ರನನ್ನು ಕೆಡಹುತ್ತೇನೆ ಮತ್ತು ಮನುಷ್ಯರಿಗೆ ಉಂಟಾಗುವ ಸಂತಾಪಗಳನ್ನು ತಮ್ಮ ಅಂಕೆಯಲ್ಲಿಟ್ಟುಕೊಂಡು ಶುಭಗಳನ್ನು ಹರಡಲು ಆಶಿಸುವ ತಪಸ್ವಿಗಳ ಸಹಾಯದಿಂದ ಅವನಲ್ಲಿ ಶುಭದ ಆಕಾಂಕ್ಷೆಗಳ ಲೋಭ ಉಂಟಾಗುವಂತೆ ಮಾಡುತ್ತೇನೆ. ಆಗ ಹರಿಶ್ಚಂದ್ರ ಹೇಗೆ ನಡೆದುಕೊಳ್ಳುತ್ತಾನೆ, ನಾನು ಎಣಿಸಿದ ಹಾಗೋ, ವಸಿಷ್ಠ ಎಣಿಸಿದ ಹಾಗೋ, “ಬರಿ ಛಲಕೆ ನಡೆವನೊ ಪರಮಾರ್ಥ ಶಿವ ಛಲಕೊನೋಡುತ್ತೇನೆ ಎಂದು ಹೇಳಿಕೊಳ್ಳುತ್ತಾನೆ.  

ರೀತಿಯ ಪರೀಕ್ಷೆಯ ಕಲ್ಪನೆ ಪು.ತಿ.. ಅವರದೇ. ಪರೀಕ್ಷೆಯ ರೂಪು ರೇಷೆಯನ್ನು ನಿರ್ಧರಿಸಿದ ಮೇಲೆ ಪರೀಕ್ಷೆಯಲ್ಲಿ ಗೆದ್ದರೆ ಏನು, ಸೋತರೆ ಏನು ಎನ್ನುವ ಪ್ರಶ್ನೆ ವಿಶ್ವಾಮಿತ್ರನಲ್ಲಿ ಹುಟ್ಟಿಕೊಳ್ಳುತ್ತದೆ:  

ಇವ ಗೆಲ್ಲೆ ಋಷಿ ಗೆಲುವ. ನಾ ಸೋತೆನೆನಲಾರೆ

ಇವ ಸೋಲಲವ ಸೋಲ್ವ. ನಾ ಗೆದ್ದೆನೆನಲಾರೆ

ಸಾಮಾನ್ಯನಪ್ಪನಂದನಿವಾರ್ಯ ದುರ್ಬಲ!” (ಪು.ತಿ.. ಸಂಚಯ, ಪು.೧೮೯

ಹರಿಶ್ಚಂದ್ರ ಗೆದ್ದರೆ ಗೆದ್ದದ್ದು ವಸಿಷ್ಠ, ಸೋತರೆ ಮನುಷ್ಯನ ಸಾಮಾನ್ಯತೆ, ದೌರ್ಬಲ್ಯಗಳು ಕಾರಣ. ವಸಿಷ್ಠನೂ ಸೋತವನಲ್ಲ, ನಾನೂ ಸೋತವನಲ್ಲ. ಪಂಥದ ವಿಷಯವನ್ನು ಇಟ್ಟವನು ವಸಿಷ್ಠ, ನಾನು ಅದನ್ನು ಪರೀಕ್ಷಿಸುವುದಕ್ಕೆ ಹೊರಟವನು ಅಷ್ಟೇ’ – ಎಂದುಕೊಳ್ಳುವ ವಿಶ್ವಾಮಿತ್ರ ತನ್ನ ಪರೀಕ್ಷೆಯ ಸೋಲು ಗೆಲುವುಗಳ ಪರಿಣಾಮವನ್ನು ಹೀಗೆ ತನ್ನದೇ ಆದ ರೀತಿಯಲ್ಲಿ ವಿಶ್ಲೇಷಣೆ ಮಾಡಿ ಸಮಚಿತ್ತತೆಯನ್ನು ಕಾಯ್ದುಕೊಳ್ಳುವ ರೀತಿಯನ್ನೂ ಕಂಡುಕೊಳ್ಳುತ್ತಾನೆ. ಅದರಿಂದಾಗಿ ಹರಿಶ್ಚಂದ್ರನನ್ನು 

ಅತಿ ಕಟು ಪರೀಕ್ಷೆಗೂ ಅಳವಡಿಸದೆಯೆ ಬಿಡೆ

ನರನಳಲ ತಾಳದೆಯೆ ಮೌಲ್ಯಗಳನುದ್ಧರಿಸ

ಕನಿಕರಕೆ ಪಾತ್ರನೇ ಧ್ಯೇಯಾಭಿಗಮನ ರತ?| 

ಬರಿ ಛಲಕೆ ನಡೆವನೊ ಪರಮಾರ್ಥ ಶಿವ ಛಲಕೊ|…..ಪರಿಕಿಸುವೆ|”(ಪು.ತಿ.. ಸಂಚಯ, ಪು.೧೮೯೧೯೦); “ಮೌಲ್ಯ ಪ್ರಯೋಗದೊಳು ಸಲ್ಲದರೆಮನಸುಎಂದೂ ನಿರ್ಣಯಿಸುತ್ತಾನೆ. ಇದು ವಿಶ್ವಾಮಿತ್ರನ ಮೌಲ್ಯೋದ್ಧರಣದ ಮಾರ್ಗದಲ್ಲಿ ಗಮನಾರ್ಹ ಹೆಜ್ಜೆ.

ಶಿವಛಲ

ವಿಶ್ವಾಮಿತ್ರನ ಪರೀಕ್ಷೆ ರಾಘವಾಂಕನೂ ಗಮನಿಸುವಂತೆ ಹರಿಶ್ಚಂದ್ರ ವಿಶ್ವಾಮಿತ್ರನಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಂತೆ ವೀರಬಾಹುಕನಿಗೆ ಕೊಟ್ಟ ಮಾತನ್ನು ಸಹ ಉಳಿಸಿಕೊಳ್ಳುತ್ತಾನೆಯೋ ಇಲ್ಲವೋ ಎಂಬುದಕ್ಕೆ ಸೀಮಿತವಾಗಿಲ್ಲ. ಆದರೆ ಅದು ಪು.ತಿ.. ಅವರಿಗೆ ಹರಿಶ್ಚಂದ್ರಶಿವಮೌಲ್ಯನಿಧಿಯ ಕಡೆಗೆಮುಂದುವರೆಯುತ್ತಾನೆಯೋ ಇಲ್ಲವೋ ಎಂಬುದಕ್ಕೆ ಸಂಬಂಧಿಸಿದುದು. ರುದ್ರಭೂಮಿ ಶಿವಮೌಲ್ಯನಿಧಿಗೆ ಒಂದು ರೂಪಕ. ರುದ್ರಭೂಮಿಯನ್ನು (=ಶಿವಮೌಲ್ಯನಿಧಿಯನ್ನು) ಕಾಯುವವರು ಇಬ್ಬರು. ಅವರಿಬ್ಬರಲ್ಲಿ ಭಯಾನಕವಾದ ಕೆಡುಕುಗಳನ್ನು ಉಂಟುಮಾಡುವ ಬೆಂತರಗಳ ಸಮೂಹವೂ ಒಂದು. ಮನುಷ್ಯನ ಒಂದು ಸ್ವಭಾವ ಎಲ್ಲಾ ಚೆನ್ನಾಗಿದ್ದಾಗ ದೇವರನ್ನು ಕೊಂಡಾಡುವುದು; ಅವನೆಣಿಸಿದಂತೆ ಅವನಿಗೆ ಸುಖ ಸಂತೋಷಗಳು ದೊರೆಯದೇ ಹೋದರೆ ದೇವರಿಂದ ವಿಮುಖ ಆಗುವುದು

ನೆವವಿಲ್ಲದೆಯೇಕಾಡುವ ಬೆಂತರಗಳುಮನುಷ್ಯರನ್ನುದೈವವಿಮುಖವಾಗಿಸುವುದರಲ್ಲಿ ಗಮನಾರ್ಹ ಪಾತ್ರವನ್ನು ವಹಿಸುತ್ತವೆ, ಮೂಲಕ ಶಿವಮೌಲ್ಯನಿಧಿಯ ಕಡೆಗೆ ಮನುಷ್ಯರು ಮುಂದರಿಯದಂತೆ ಅವರನ್ನು ತಡೆದು ಶಿವಮೌಲ್ಯನಿಧಿಯನ್ನು ರಕ್ಷಿಸುತ್ತವೆ. ಬೆಂತರಗಳನ್ನು ತಮ್ಮ ವಶದಲ್ಲಿರಿಸಿಕೊಳ್ಳಲು ತಪಸ್ಸುಮಾಡುವ ಮುನಿಗಳ ಪಡೆಯೂ ಶಿವಮೌಲ್ಯನಿಧಿಯನ್ನು ಕಾಯುವವರೇ. ಮುನಿಗಳು ಕೆಡುಕುಗಳಿಂದ ಪಾರಾಗುವ ಕಲ್ಪಗಳನ್ನು ಮಾಡುವುದರ ಮೂಲಕ ಪ್ರಾಪಂಚಿಕ ಜೀವನವು ಸುಖದಾಯಕವೇ ಎಂಬ ಭರವಸೆಯನ್ನು ಹುಟ್ಟಿಸುತ್ತಾರೆ. ದೈವಬಲದ ಬದಲಿಗೆಪುರುಷಬಲದ ಬಗ್ಗೆ ವಿಶ್ವಾಸ, ಭರವಸೆಗಳನ್ನು ಮೂಡಿಸುತ್ತಾರೆ, ಹಾಗೆ ಮಾಡಿ ಮನುಷ್ಯರನ್ನುದೈವವಿಮುಖರನ್ನಾಗಿಸುತ್ತಾರೆ. ಶಿವಮೌಲ್ಯನಿಧಿಯ ಕಡೆಗೆ ಮನುಷ್ಯರು ಮುಂದರಿಯದಂತೆ ಅವರನ್ನು ತಡೆದು ಶಿವಮೌಲ್ಯನಿಧಿಯನ್ನು ರಕ್ಷಿಸುತ್ತಾರೆ. ಇವರಿಬ್ಬರ ರಕ್ಷಣಾಪಡೆಯನ್ನು ಭೇದಿಸಿ ಮುಂದೆ ಹೋಗುವವನಿಗೆ ಮಾತ್ರ ಶಿವಮೌಲ್ಯನಿಧಿ ಲಭ್ಯ. ಇದನ್ನು ಪುತಿನಶಿವಛಲಎನ್ನುತ್ತಾರೆ. ಶಿವಛಲದ ಮುಖ್ಯಾಂಶಕೆಥಾರಿಸಿಸ್”. ಪು.ತಿ.. ರಾಘವಾಂಕನ ಚೌಕಟ್ಟಿನಲ್ಲಿಯೇ ಹೊಸ ಹೊಸ ಸಂಗತಿಗಳನ್ನು ಮುನ್ನೆಲೆಗೆ ತರ ಬಯಸುತ್ತಾರೆ

ಕೆಥಾರಿಸಿಸ್

ಶೋಧ್ಯರು ನಾವೆಲ್ಲ, ಶೋಧ್ಯಂ ನಾನೈಎಂದುಕೊಂಡಿರುವ ವಿಶ್ವಾಮಿತ್ರ ಹರಿಶ್ಚಂದ್ರನನ್ನು ವಚನಭ್ರಷ್ಠ ಮಾಡಲೇಬೇಕೆಂದು ಛಲ ತೊಟ್ಟಿದ್ದಾನೆ; ಛಲವನ್ನು ಬಿಡದೆ ಇದ್ದುದರಿಂದ ಮೊದಲಿಗೆ ತನ್ನ ಮನಸ್ಸು ಕ್ಷುಬ್ಧವಾಗಿತ್ತು ಎನ್ನುತ್ತ ತನ್ನ ಛಲದ ಸ್ವರೂಪವನ್ನು ಗಮನಿಸಿದ್ದಾನೆ

ಬೋಧ್ಯಂ ದಮ ಶಮಗಳ ದುರ್ಗಮ ಪಥದಿ

ಮರುಕವು ಛಲವೂ ಅಹಂತೆಯೆರಡು ಮುಖ|

ಅಶುಚಿಯವಂ ಸೂಕ್ಷ್ಮಗಳಿವ ಕಳೆವನಕ|” (ಪು.ತಿ.. ಸಂಚಯ, ಪು.೨೧೩)

ದಮ ಶಮಗಳ ಮಾರ್ಗದಲ್ಲಿ ಇರುವವನುಛಲಕ್ಕಾಗಿ ಛಲವನ್ನು ಒಪ್ಪಿಟ್ಟುಕೊಂಡರೆ ಅದು ಅಹಂಕಾರದ ಹೊರತಾಗಿ ಮತ್ತೇನೋ ಆಗಿರುವುದಿಲ್ಲ; ಹಾಗೆಯೇ ಮಮತೆಯ ಭಾವಕ್ಕೆ ಒಳಗಾಗಿ ಇನ್ನೊಬ್ಬರಿಗಾಗಿ ತನ್ನ ದಮ ಶಮದದಾರಿಯಿಂದ ಸ್ವಲ್ಪ ದೂರ ಸರಿಯುತ್ತೇನೆಎಂದುಕೊಳ್ಳುವುದೂಅಹಂಕಾರವೇ; ಇಂಥಅಶುಚಿಯ ಸೂಕ್ಷ್ಮಗಳನ್ನು ಅರಿತು ಅವುಗಳನ್ನು ಕಳೆದುಕೊಳ್ಳುವವರೆಗೂ ಮನಸ್ಸು ಕ್ಷುಬ್ಧವಾಗಿಯೇ ಇರುತ್ತದೆ ಎಂಬ ಬೋಧೆ ತನಗೆ ಆಗಿರುವುದನ್ನು ಕಂಡುಕೊಂಡಿದ್ದಾನೆ; ತ್ರಿಶಂಕುವಿನ ಸಂದರ್ಭದಲ್ಲಿ ಅವಿವೇಕದ ಮರುಕ ಸಲ್ಲದು ಎಂಬುದನ್ನು ಅರ್ಥಮಾಡಿಸಿ ವಸಿಷ್ಠ ಅಂಥ ಮರುಕವನ್ನು ತನ್ನಿಂದ ಹೊರಹಾಕಿಸಿ ತನ್ನನ್ನು ಶುದ್ಧೀಕರಿಸಿದ ಹಾಗೆ ಈಗಲೂ ತನ್ನನ್ನು ಶುದ್ಧೀಕರಿಸಿದ ಎಂದುಕೊಂಡಿದ್ದಾನೆ ವಿಶ್ವಾಮಿತ್ರ

ಹರಿಶ್ಚಂದ್ರ ಮತ್ತು ವಿಶ್ವಾಮಿತ್ರ ಇಬ್ಬರೂ ತಂತಮ್ಮ ಅಂತರಂಗವನ್ನು ಶೋಧಿಸಿಕೊಳ್ಳುತ್ತಾ ತಮ್ಮ ಛಲದ ಇತಿಮಿತಿಗಳನ್ನು ಗುರುತಿಸುತ್ತಾ ಶುದ್ಧೀಕರಣಕ್ಕೆ ಒಳಪಡುವ ಚಿತ್ರವನ್ನು ಪು.ತಿ.. ಇಲ್ಲಿ ಕಟ್ಟಿಕೊಡುತ್ತಿದ್ದಾರೆ. ಮೂಲಕಪ್ರೇಕ್ಷಕರ, ಓದುಗರ ಮನಸ್ಸಿನ ಶುದ್ಧೀಕರಣ ಸಾಧ್ಯತೆಯನ್ನು ಸೂಚಿಸುತ್ತಿದ್ದಾರೆ. ಅರಿಸ್ಟಾಟಲನ ಪ್ರಕಾರ ಉತ್ತಮ ಕಾವ್ಯದ ಘನ ಉದ್ದೇಶ ಕೆಥಾರಿಸಿಸ್=ಅಂತರಂಗದ ಶುದ್ಧೀಕರಣ; ದುರಂತ ನಾಯಕರ ಚಿತ್ರ ಇದನ್ನು ಸಾಧಿಸಲು ಅತ್ಯುತ್ತಮ ಸಾಧನೋಪಾಯ; ಅದರಿಂದಲೇ ದುರಂತ ನಾಟಕಗಳೂ ರಸಾನುಭವವನ್ನುಂಟುಮಾಡುವವೇ. “ರಸೋತ್ಪತ್ತಿಸುಂದರವಾದುದರ ಮೂಲಕವೇ ಉಂಟಾಗುತ್ತದೆ ಎಂದೇನಿಲ್ಲ. ನಾವು ಸ್ತುತಿಸುವ ನಮ್ಮಸುಂದರ ದೇವಿಯರು ಮಹಿಷಾಸುರ ಮರ್ದಿನಿಯಂತಹಕಡು ಮರ್ದಿನಿಯರೇ!”  

ಶಿವತತ್ತ್ವ ರಹಸ್ಯ (=ಸಾವಿನ ಜಿಜ್ಞಾಸೆ): 

ಪು.ತಿ.. ಅವರ ವಿಶ್ವಾಮಿತ್ರನಂತೆ ಹರಿಶ್ಚಂದ್ರನೂ ತನ್ನ ನೆಲೆಯ ವಿಶ್ಲೇಷಣೆಯನ್ನು ಮಾಡಿಕೊಳ್ಳುತ್ತಾಶಿವಮೌಲ್ಯನಿಧಿಯನ್ನು ಕುರಿತು ಚಿಂತಿಸುತ್ತಾನೆ. ಇವನು ಚಂಡಾಲನ ದಾಸನಾಗಿ ರುದ್ರಭೂಮಿಯನ್ನು ಕಾಯುವ ಆಳು ಆಗಿರುವುದರಿಂದ ಇವನ ಸ್ವಶೋಧನೆಯ ಒಂದು ಮುಖ್ಯ ಭಾಗಲಯ ತತ್ತ್ವವಾದ ಶಿವ ಅಂದರೆ ಮೃತ್ಯುವನ್ನು ಕುರಿತ ಜಿಜ್ಞಾಸೆಯೇ. ಇದೂ ಪು.ತಿ.. ಅವರ ಚಿಂತನವಿಶೇಷವೇ

ಇದು ರುದ್ರಭೂಮಿ. ಜೀವನ ಜಲನಿಧಿಯೆಲ್ಲೆ| ಇದರಂಚೊಳು ಹಗಲಿರುಳೂ ಕಾದಿಹೆನಿಲ್ಲೆ|

ಹೊಳಲಿನ ಬಾಳಲೆಯಲೆಯಂತಿಲ್ಲಿಗೆ ಬಡಿದು| ಮರಳುತ್ತಿದೆ ತನು ತನುಗಳನೀದಡಕೆಸೆದು

ಬಳಕೆಯೊಳೂ ಬತ್ತದು ಇದರಾಶ್ಚರ್ಯ| ಇಂತಸು ಭೂತವ ಭುಂಜಿಸಿ ಬಿಸುಡುವ ಕಾರ್ಯ

ಕಾಣದ ಕಣ್, ಕೇಳದ ಕಿವಿ, ನುಡಿಯದ ಬಾಯಿ| ನಿಶ್ಚಲವಾದಂಗಗಳೀ ಚಿತಿಕಾ ಶಾಯಿ

ವಿಸ್ಮಯವನು ತರುವನಲ(=ಪ್ರಾಣ) ಧ್ಯಾನಿಪ ಬಗೆಗೆ| ನಿದ್ರಿಸುವೊಲೆ ಇವನಿದ್ದರು ನಿದ್ರೆಯಿದಲ್ಲ

ತಾಯಿಯ ತೆರದಾತ್ಮದ ಕಾಪೀ ಮೈಗಿಲ್ಲ| ಮುದ ರೋದನಗಳ ತೆರೆ ಭವ ಜಲಧಿಯೊಳೇಳೆ

….ಧಾವಿಸುತಿರುವೀ ಆತ್ಮಕೆ ನಾಳೆ| ಎಲ್ಲಹುದಾವಾಲಿಂಗನ ಚುಂಬನದೊಳಗೆ

ವೇಗಕೆ ನಡೆ ತಡೆ? ನಿಲುಗಡೆ ಎಲ್ಲಿವಗೆ?||” (ಪು.ತಿ.. ಸಂಚಯ, ಪು.೧೯೪)

ಹರಿಶ್ಚಂದ್ರ ರುದ್ರಭೂಮಿಯಲ್ಲಿದ್ದಾನೆ ಎಂಬುದರ ಅರ್ಥ ಸಾವು ಬದುಕಿನ ನಡುವಿನ ಗಡಿಯಲ್ಲಿ ಇದ್ದಾನೆ ಎಂದು. ಸತ್ತವರನ್ನು ಬದುಕಿರುವವರು ರುದ್ರಭೂಮಿಗೆ ತರುತ್ತಾರೆ. ಒಬ್ಬರದು ಸತ್ತ ದೇಹ, ಇನ್ನೊಬ್ಬರದು ಬದುಕಿರುವ ದೇಹ. ರುದ್ರಭೂಮಿಗೆ ಬರುವ ದೇಹದ (=ಹೊಳಲು=ಪುರ) ಹುಟ್ಟು ಸಾವುಗಳು ನಿರಂತರವಾಗಿ ಘಟಿಸುತ್ತಿದೆ, ಆದರೂ ಇವುಗಳ ರಹಸ್ಯ ಗೊತ್ತಾಗಿಲ್ಲ, ಬದಲಿಗೆ ಅವು ಆಶ್ಚರ್ಯದ ಸಂಗತಿಗಳಾಗಿಬಿಟ್ಟಿವೆ. ಅಸುವು (=ಪ್ರಾಣತತ್ತ್ವವು) ಭೂತವ (= ಪಂಚ ಭೂತಗಳ ಮೂಲಕ) ಭುಂಜಿಸಿ (=ಅನುಭವಗಳನ್ನು ಅನುಭವಿಸಿ) ಕೊನೆಗೆ ಬಿಸುಡುವುದು (= ದೇಹ ಮನಸ್ಸು ಬುದ್ಧಿಗಳ ಮೂಲಕ ಪಡೆದುದನ್ನೆಲ್ಲ ದೇಹದೊಂದಿಗೆ ಬಿಸಾಕಿ ಪ್ರಾಣ ಹೊರಟು ಹೋಗುತ್ತದೆ). ಇಂತಹ ಪ್ರಾಣತತ್ತ್ವವನ್ನು ಅಂಗಾಂಗಗಳ ಮೂಲಕವೇ ರುದ್ರನ ಉಪಾಸಕರು ಧ್ಯಾನಿಸುತ್ತಾರೆ. ಬಗೆಯೂ ವಿಸ್ಮಯಕಾರಕವೇ

ಇದರ ಜೊತೆಗೆ ದೇಹ ಸತ್ತನಂತರ ಪ್ರಾಣಕ್ಕೆ ಆತ್ಮದ ಕಾಪು(=ರಕ್ಷಣೆ) ಇಲ್ಲ; ಮುಂದೆ ಯಾವುದರ ಆಲಿಂಗನ, ಚುಂಬನಗಳಿಂದ ಆತ್ಮದ ಭವಜಲಧಿಯಲ್ಲಿ ಮುದ ಅಥವಾ ರೋದನಗಳ ತೆರೆಗಳು ಏಳೇಳುತ್ತವೆ ಮತ್ತೆ ಅವುಗಳ ವೇಗಕ್ಕೆ ನಡೆತಡೆಒಡ್ಡು ಉಂಟಾಗುತ್ತದೆ, ಎಲ್ಲಿ ಇದಕ್ಕೆ ನಿಲುಗಡೆ ದೊರೆಯುತ್ತದೆ, ಯಾವುದೂ ಗೊತ್ತಿಲ್ಲ. ಸತ್ತ ನಂತರ ದೇಹದ ಪಂಚಭೂತಗಳು ಪ್ರಕೃತಿಯ ಪಂಚಭೂತಗಳಲ್ಲಿ ಸೇರಿಹೋಗುತ್ತವೆ ಎಂಬುದು ಮಾತ್ರ ಗೊತ್ತಾಗುತ್ತದೆ. ಆನಂತರ ಆತ್ಮ, ಪ್ರಾಣಗಳ ಆಸರೆ, ತೃಷೆಗಳ ಗತಿ ಏನು? ಯಾವುದರಿಂದ ಅವುಗಳ ಪೂರೈಕೆಯಾಗುತ್ತದೆ? ಉತ್ತರ ಗೊತ್ತಿಲ್ಲ. “ಗೊತ್ತಿರುವುದು ವಿಧಿಯ ಪಾತ್ರಎಂದುಕೊಳ್ಳುತ್ತಾನೆ ಹರಿಶ್ಚಂದ್ರ. ಇದು ಅವನ ಸ್ವಶೋಧನೆಯ ಒಂದು ಮುಖದ ಜಿಜ್ಞಾಸೆ

ವಿಧಿಯ ಸ್ವರೂಪ

ರುದ್ರಭೂಮಿಯಲ್ಲಿ ಎಲ್ಲಾ ಮಾನ, ಮರ್ಯಾದೆ, ಗೌರವ, ಖಿಲ್ಲತ್ತುಗಳನ್ನು ಕಳೆದುಕೊಂಡು ದೀನನಾಗಿ ನಿಂತ ಹರಿಶ್ಚಂದ್ರನ ಎರಡನೆಯ ಮುಖದ ಜಿಜ್ಞಾಸೆಯು ಸಹಜವಾಗಿಬದುಕಿನಲ್ಲಿಯ ವಿಧಿಯ ಪಾತ್ರಕ್ಕೆ ಸಂಬಂಧಿಸಿದುದೇ. ರಾಜಸೂಯ ಯಾಗವನ್ನು ಮಾಡಿದ ಹರಿಶ್ಚಂದ್ರನಿಗೆ ಕೊಡುತ್ತೇನೆ, ಕೊಡಬಲ್ಲೆ ಎಂಬಹಮ್ಮಿನ ಮುದ”, “ತ್ಯಾಗದ ಮದಉಂಟಾಗುತ್ತದೆ. ಬಯಕೆಯ ಮಿತಿಯನ್ನು ಮೀರಿದಸಿರಿಯ ಹೊಣರು ದಾನಮದಆಗುತ್ತದೆ. ವೇಳೆಗೆ ವಿಧಿಯಿಂದ ಚೋದಿತನಾಗಿ ತಪಸ್ವಿ ಬಂದು ದಾನ ಕೇಳಿದರೆ ಎಲ್ಲವನ್ನೂ ಕೊಡಲು ಸಿದ್ಧನಾಗಿಬಿಡುತ್ತಾನೆ. ಈಗ ಅದನ್ನು ವಿಮರ್ಶಿಸಿಕೊಳ್ಳುತ್ತಾ ಹರಿಶ್ಚಂದ್ರ ತನ್ನನ್ನೇ ಕೇಳಿಕೊಳ್ಳುತ್ತಾನೆಅರಿ ಷಡ್ವರ್ಗವನ್ನು ಗೆದ್ದವನಲ್ಲ, ಧರ್ಮವನ್ನು ಪಾಲಿಸಲೇ ಬೇಕೆಂಬ ಹಟವಿದ್ದವನೂ ಅಲ್ಲ, ಸತ್ಯಕ್ಕೆ ಬದ್ಧನಾಗಿರಬೇಕೆಂಬ ಹುರುಡೂ ಇದ್ದವನಲ್ಲ, ಸುತನ ಮೋಹದಿಂದಾಗಿ ವರುಣನಿಗೆ ಕೊಟ್ಟ ಮಾತನ್ನು ನಡೆಸದೆ ರೋಗಕ್ಕೆ ಒಳಗಾಗಿದ್ದೆ, ಅಂತಹ ನಾನು ತಪಸ್ವಿಗೆ ಕೊಟ್ಟ ಮಾತನ್ನು ನಡೆಸಲು ಯಾಕೆ ಛಲ ತೊಟ್ಟೆ

ಅತಿಶಯ ವಿಭವೋನ್ನತಿಯಿಂ ದೀನತೆಗೆ

ಅಸದೃಶ ಸಂಸ್ಕೃತಿ ಸುಖದಿಂ ವಿಷಮತೆಗೆ

ಆ ದೊರೆತನದಿಂದೀ ಅಂತ್ಯಜನಾಳ್ತನಕೆ

ಆ ಅರಮನೆಯಿಂದೀ ಪ್ರೇತನಿಕೇತನಕೆ” – ಇಳಿದ ಪ್ರಕ್ಷೇಪಣೆಗೆ ಯಾವ ಎಡೆಯಲ್ಲಿ ನಿಲುವು? (ಪು.ತಿ.. ಸಂಚಯ, ಪು.೧೯೬) ಪ್ರಶ್ನೆಗೆ ಅವನು ಕಂಡುಕೊಂಡ ಉತ್ತರ – “ಯಾವುದೋಸತ್ ತೃಷ್ಣೆತನ್ನಲ್ಲಿ ಇತ್ತು, ಅದರಿಂದಾಗಿ ತಾನು ಅರಸನಾಗಿ ಸದ್ವಂಶದಲ್ಲಿ ಹುಟ್ಟಿದೆ, ಎಲ್ಲ ವೈಭವದಿಂದ ಮೆರೆದೆ, ದೈವಕೃಪೆಯನ್ನೂ ಪಡೆದೆ; ಈಗಲಾದರೋ ಸತಿ, ಸುತ, ರಾಜ್ಯ, ಗುರುಜನ, ಪರಿಜನ, ನೇಹಿಗರು, ಬೆಳ್ಗೊಡೆ ಚಾಮರ ವಾಹನ ವೈಭವಗಳೊಂದಿಗೆ ಬರುವಾಗ ಹೋಗುವಾಗ ಸಂಭ್ರಮಿಸುವ ಜನಗಳು ಯಾರೂ ಇಲ್ಲ. ಇಂಥ ಬದುಕು ವಿಧಿಯ ಇಚ್ಛೆಗೆ ಅನುಗುಣವಾಗಿಯೇ ಇದೆ. ಯಾವುದೋ ಧರ್ಮರಹಸ್ಯವನ್ನು ಬಿಚ್ಚಿಡುವುದಕ್ಕಾಗಿಯೇ ವಿಧಿ ಕೆಲಸಮಾಡುತ್ತಿದೆ”. ಹೀಗೇ ಯಾಕಾಗಬೇಕು, ನನಗೇ ಹೀಗೆ ಯಾಕಾಗಬೇಕು ಎಂದೆಲ್ಲಾ ಪ್ರಶ್ನಿಸದೆ ವಿಧಿಗೆ ಕಟ್ಟುಬಿದ್ದು, ಅದಕ್ಕೆ ತಲೆವಾಗಿ ನಡೆದುಕೊಳ್ಳುತ್ತಿದ್ದೇನೆ ಈಗ ಎಂದು ಹರಿಶ್ಚಂದ್ರ ಹೇಳಿಕೊಳ್ಳುತ್ತಾನೆ

ತನ್ನ ನಿಲುವಿಗೆ ಪೂರಕವಾದ ಕಾಶಿ ನಗರದ ಕಡೆಗೆ ಹರಿಶ್ಚಂದ್ರನ ವಿಶ್ಲೇಷಣೆ ಮುಂದುವರೆಯುತ್ತದೆ. ಅವನಿಗೆ ತಾನು ನಿಂತಕಾಶಿ ನಗರದಲ್ಲಿ ಬಗೆ ಬಗೆ ಜೀವನ ರೀತಿಗಳು ಆಕರ್ಷಕವಾಗಿ ಇವೆ; ಅವುಗಳಿಗೆ ತಕ್ಕ ಹಾಗೆ ಪ್ರಜೆಗಳು ನಾನಾ ರೀತಿಯ ಸಂವೇದನೆಗಳನ್ನು ಹೊಂದಿದ್ದಾರೆ; ಅವು ಪರಸ್ಪರ ಸಂಘರ್ಷಿಸುವುದರಿಂದ ರಾಗ ದ್ವೇಷಗಳೂ ಬಗೆ ಬಗೆಯ ರೂಪಗಳನ್ನು ಪಡೆದಿವೆ; ಅವು ಸ್ಥಿರವಾಗಿಯೂ ಉಳಿದುಬಿಟ್ಟಿವೆ; “ಇಂಥ ಸ್ಥಳದಲ್ಲೇಎಲ್ಲವನ್ನೂ ಕಳೆದುಕೊಂಡುತ್ಯಾಗಿಯು ಪ್ರಶಾಂತಿಯನ್ನು ಪಡೆಯುತ್ತಾನೆ, “ಪ್ರಶಾಂತಿಯೇ ಆಗಿಬಿಡುತ್ತಾನೆ ಎಂಬುದು ಕಾಣುತ್ತಿದೆ. ಇಂಥ ತ್ಯಾಗಭೋಗದ ಸಮರಸ ಇರವು (=ಇರುವಿಕೆ, ಜೀವನರೀತಿ) ಎಷ್ಟು ಆಕರ್ಷಕ ಎಂದು ಹರಿಶ್ಚಂದ್ರ ಆಶ್ಚರ್ಯಪಡುತ್ತಾನೆ. ಕಾಶಿ ಆಗಲೂ ಮತ್ತು ಈಗಲೂ ತ್ಯಾಗ ಮತ್ತು ಭೋಗದ ಸಮರಸ ಇರುವಿಕೆಗೆ ಒಂದು ಸಂಕೇತವಾಗಿದೆ, ಮೋಕ್ಷ ಪಡೆಯ ಬಯಸುವವರಿಗೆ ಬದುಕಿನ ಅಂತಿಮ ನೆಲೆ ಆಗಿದೆ.

ತಾನು ವಾಸಿಸುವರುದ್ರಭೂಮಿಯಲ್ಲಿ ಅವನಿಗೆ ಅಂತಿಮವಾಗಿ ಕಾಣುವುದು – “ಸುಡುವ ಬೆಂಕಿ, ಸುಟ್ಟುಹೋಗುವ ವ್ಯಕ್ತಿ”(=ನಾನು=ಅಹಂಕಾರ) – ಇವೆರಡೇ ಸತ್ಯ ಎನ್ನುವುದು; ಅವನ ಪಾಲಿಗೆ ನಿಘೃಣ ವಿಪ್ರನ ಮನೆಯಲ್ಲಿ ದುಡಿಯುವ ಹೆಂಡತಿ, ತಾಯಿಯ ಇದಿರೇ ತಿರಿದು ಅಳಲುವ ಮಗ ತೋರಿಕೆಯ ಸತ್ಯ ಎನ್ನುವುದು. ಅವರಿಗಾಗಿ ಅವನು ಏನೂ ಮಾಡಲಾರ; ಇದು ಸತ್ಯಸ್ಯ ಸತ್ಯ! ಹೀಗೆ ಹರಿಶ್ಚಂದ್ರ ಹಲವು ಮುಖದಅಹಂಕಾರವನ್ನು ಕಳೆದುಕೊಂಡುಮೌಲ್ಯೋದ್ಧರಣದ ಹಾದಿಯಲ್ಲಿ ಇದ್ದಾನೆ ಎನ್ನುತ್ತಾರೆ ಪು.ತಿ..

ಮೌಲ್ಯೋದ್ಧರಣ ಮತ್ತು ಮೃತಸಂಸ್ಕಾರ

ಪುತಿನರವರಿಗೆ ಮೌಲ್ಯ ಎಂದರೆ ಧರ್ಮಾರ್ಥಕಾಮಮೋಕ್ಷ ಪುರುಷಾರ್ಥಗಳೇ. ಮೌಲ್ಯೋದ್ಧರಣ ಎಂದರೆ ಮೋಕ್ಷವೇ; “ಜೀವಕಾಮ ಆತ್ಮಕಾಮ ಆಗುವುದೇ”. ಉದ್ಧರಣಹಾದಿಯಲ್ಲಿ ಅತ್ಯಂತ ಕಠಿಣವಾದ ತೊಡಕು ಆತ್ಮೀಯರ ಸಾವು. ಹರಿಶ್ಚಂದ್ರನಿಗೆ ಮೊದಲು ಎದುರಾಗುವುದು ಮಗನ ಸಾವು. ಅನಂತರ ಹೆಂಡತಿಯ ತಲೆ ಕಡಿಯಬೇಕಾಗಿ ಬಂದ ಪ್ರಸಂಗ. ಅವನು ಕಾಯುವ ರುದ್ರಭೂಮಿಯಲ್ಲಿ ತೆರ ಕೊಡದೆ ಯಾರಿಗೂ ಮೃತಸಂಸ್ಕಾರ ಮಾಡಲು ಅವಕಾಶವಿಲ್ಲ. ಹೆಣದ ಮೇಲಿನ ವಸ್ತ್ರ, ಹೆಣದೊಂದಿಗೆ ಇಡುವ ಅಕ್ಕಿ ಮತ್ತು ವಿತ್ತ ಅವನ ಒಡೆಯನಿಗೆ ಸಲ್ಲಬೇಕಾದದ್ದು. ಅದನ್ನು ಅವನು ಯಾವ ನೆವವನ್ನೂ ಹೇಳದೆ ಸಲ್ಲಿಸಲೇ ಬೇಕು. ಇದು ಹರಿಶ್ಚಂದ್ರ ಮತ್ತು ಅವನನ್ನು ಕೊಂಡುಕೊಂಡ ಚಂಡಾಲ ಒಡೆಯನ ನಡುವಿನ ಮುರಿಯಬಾರದ ಮತ್ತು ಮುರಿಯಲಾಗದ ಒಪ್ಪಂದ, “ನನ್ನಿ”. 

ಹರಿಶ್ಚಂದ್ರನಿಗೆ ಮಗ ಹುಟ್ಟಿದಾಗ ತನ್ನ ವಂಶ ಮುಂದುವರೆಯಿತು, ತಾನು ಸಾವನ್ನು ಗೆದ್ದೆ ಎಂಬ ಉಲ್ಲಾಸ ಉಂಟಾಗಿತ್ತು. ಈಗಲಾದರೋ ಮಗ ಹಾವು ಕಚ್ಚಿ ಸತ್ತುಹೋಗಿದ್ದಾನೆ. ಅಪ್ಪುಗೆಯ ನಲಿವೂ ಸಹ ಅವನ ಪಾಲಿಗೆ ಇಲ್ಲದಂತಾಗಿದೆ; ಜೊತೆಗೆ ಅವನಿಗೆ ಸಲ್ಲಿಸಬೇಕಾಗಿರುವ ಕೊನೆಯ ಋಣಮೃತ ಸಂಸ್ಕಾರ ಅದನ್ನೂ ಸಲ್ಲಿಸಲಾಗದ ಕಾರ್ಪಣ್ಯ ಉಂಟಾಗಿದೆ. ನಿಷ್ಕರುಣಿ ವಿಪ್ರನ ಮನೆಯ ದಾಸಿಯಾದ ಚಂದ್ರಮತಿಯದು ಬರಿಗೈ. ಇದು ಅತ್ಯಂತ ಬಿಕ್ಕಟ್ಟಿನ ಒಂದು ಪ್ರಸಂಗ. ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವುದೋ ಎಂದು ಚಿಂತೆ ದುಃಖ ವ್ಯಾಕುಲಗಳಿಂದ ಒದ್ದಾಡಿಕೊಳ್ಳುತ್ತಿದ್ದಾಗ ಹರಿಶ್ಚಂದ್ರನಿಗೆ ಕಾಣುವುದು ಮೃತ್ಯು ಎಂಬುದು ಜೀವಿಗಳ ಸಾವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿರುವ ಯೋಗಿ ಮತ್ತು ಜೀವಿಗಳ ಪ್ರಾಣವನ್ನು ಜೀರ್ಣಿಸಿಕೊಳ್ಳುವವನಾಗಿ ಭೋಗಿಎಂಬ ತತ್ತ್ವ ದರ್ಶನ

ಮೃತ ಸಂಸ್ಕಾರದ ಸಮಸ್ಯೆ

ಗ್ರೀಕ್ ನಾಟಕಕಾರರು ಮೃತ ಸಂಸ್ಕಾರದ ಸಮಸ್ಯೆಯನ್ನು ಗಮನಿಸಿದ್ದಾರೆ. ಅಂತಿಗೊನೆ ನಾಟಕದಲ್ಲಿಸತ್ತವನಿಗೆ ಮೃತ ಸಂಸ್ಕಾರ ಕೊಡಲು ಅಧಿಕಾರಶಾಹಿಯು ಬಿಡದ ಸಮಸ್ಯೆಯನ್ನು ಚರ್ಚಿಸಿದ್ದಾರೆ. ಇದನ್ನು ಪು.ತಿ.. ಬಳಸಿಕೊಂಡಂತೆ ಕಾಣುತ್ತದೆ. ಸತ್ತ ಮಗನಿಗೆ ಸಂಸ್ಕಾರ ಮಾಡದಿದ್ದರೆ ಅವನು ಇಲ್ಲಿಯೂ ಸಲ್ಲದೆ ಪರಲೋಕದಲ್ಲಿಯೂ ಸಲ್ಲದೆ ಬೆಂತರ=ಪ್ರೇತಾತ್ಮ ಆಗಿಬಿಡುತ್ತಾನೆ; ಸಂಸ್ಕಾರ ಮಾಡಬೇಕು ಎಂದರೆತೆರ ಪಡೆಯದೆಯೆ ಸಂಸ್ಕಾರಮಾಡಲು ಚಂದ್ರಮತಿಗೆ ಬಿಡಬೇಕು; ಹಾಗೆ ಮಾಡಿದರೆ ತನ್ನಒಡೆಯನನ್ನು ವಂಚಿಸಿದಂತೆಆಗುತ್ತದೆ; ಅಷ್ಟೇ ಅಲ್ಲ ಕೊಟ್ಟ ಮಾತಿಗೆ ಬದ್ಧನಾಗಿ ಉಳಿಯದೆ ಆತ್ಮ ವಂಚನೆಯನ್ನೂ ಮಾಡಿಕೊಂಡಂತೆ ಆಗುತ್ತದೆ; “ಸಂಸ್ಕಾರ ಮಾಡದಿದ್ದರೆಮಗನಿಗೆ ಸಲ್ಲಬೇಕಾದಋಣ ಸಂದಾಯಮಾಡದೆವಂಚನೆಮಾಡಿದಂತಾಗುತ್ತದೆ ಎಂದು ಮೃತ ಸಂಸ್ಕಾರದ ಸಮಸ್ಯೆಯನ್ನು ಪು.ತಿ.. ಇಲ್ಲಿ ಮುಂದಿಡುತ್ತಾರೆ

ಗ್ರೀಕ್ ನಾಟಕದಲ್ಲಿ ಆದಂತೆ ಇಲ್ಲಿ ವಂಚನೆಯಿಂದ ಸಂಸ್ಕಾರ ಮಾಡಲು ಹರಿಶ್ಚಂದ್ರನಾಗಲೀ, ಚಂದ್ರಮತಿಯಾಗಲೀ ಯೋಚಿಸುವುದಿಲ್ಲ. ಅದರಿಂದ ಗ್ರೀಕ್ ನಾಟಕಗಳಲ್ಲಿ ಕಂಡುಬರುವ ಮುಂದಿನ ಸಮಸ್ಯೆಗಳು ಇಲ್ಲಿ ಹುಟ್ಟಿಕೊಳ್ಳುವುದಿಲ್ಲ. ಬಡವ ಎಂದುನಿಯಮವನ್ನು ಮೀರಲು ಬರುವುದಿಲ್ಲ”, ಮೃತ ಸಂಸ್ಕಾರ ಆಗಬೇಕು ಎಂದಾದರೆ ತೆರಬೇಕಾದ ತೆರವನ್ನು ತೆರಲೇ ಬೇಕು ಎಂದು ಹರಿಶ್ಚಂದ್ರ ಯೋಚಿಸಿದರೆ ಚಂದ್ರಮತಿ ಇನ್ನೊಂದು ರೀತಿ ಅವನಿಗೆ ಪೂರಕವಾಗಿಯೇ ಯೋಚಿಸುತ್ತಾಳೆ. ಕುಲವಂತೆಯಾದ ಚಂದ್ರಮತಿ ಒಬ್ಬಳೇ ಶವ ಸಂಸ್ಕಾರ ಮಾಡಲು ಬಂದಿದ್ದಾಳೆ ಎಂದು ಮರುಕ ತೋರಿದವನಿಗೆ ಅವಳು ಹೇಳುತ್ತಾಳೆಸಂದ ಸೌಭಾಗ್ಯದ ನೆನಪಿನ ಅಗತ್ಯ ಇಲ್ಲ; ತಾವು ವಿಧಿಗೆ ಸಿಕ್ಕಿ ಬಿರುಗಾಳಿಗೆ ಸಿಕ್ಕಿದ ತರಗೆಲೆ, ಪ್ರವಾಹದ ಹೊಡೆತಕ್ಕೆ ಸಿಕ್ಕಿದ ಮರಗಳಂತೆ ಆಗಿದ್ದರೂ ಅದು ತಾವೇ ಇಚ್ಛಿಸಿ ಪಡೆದದ್ದು, ಹಿಂದಿನ ಜನ್ಮದ ಕರ್ಮವನ್ನು ಅನುಭವಿಸಿಯೇ ತೀರಬೇಕಲ್ಲ ಎನ್ನುತ್ತಾಳೆ; ತನ್ನ ಒಪ್ಪಿಗೆಯಿಂದಲೇ ಹರಿಶ್ಚಂದ್ರನು ಧರ್ಮವನ್ನು ನಂಬಿದ್ದಾನೆ, ಮಮತೆಯೆಲ್ಲವನ್ನು ವಚನದ ರಕ್ಷಣೆಗಾಗಿ ತೆತ್ತಿದ್ದಾನೆ; ಅವನನ್ನು ನಿಂದಿಸಬೇಕಾಗಿಲ್ಲ ಎನ್ನುತ್ತಾಳೆ

ವಚನಪಾಲನೆ-ಸಾವಿನ ಜಿಜ್ಞಾಸೆ

ಅತಿಯಾದ ದೀನಾವಸ್ಥೆಗೆ ಇಳಿದಿದ್ದ ಹರಿಶ್ಚಂದ್ರನಿಗೆ ರುದ್ರಭೂಮಿಯಲ್ಲಿದ್ದ ಉಪಾಸಿಯು ಈಗಾಗಲೇ ಸಂಗ್ರಹವಾಗಿರುವ ಹೆಣದ ಮೇಲಿನ ವಸ್ತ್ರ, ಅಕ್ಕಿ ಮತ್ತು ವಿತ್ತವನ್ನು ಕೊಟ್ಟರೆ ಅವನ ಮಗನನ್ನು ಕಚ್ಚಿದ ಹಾವಿನ ವಿಷವನ್ನು ಹೊರಹಾಕಿ ಮಗನ ಪ್ರಾಣ ಉಳಿಸುವ ಕಲ್ಪವೊಂದನ್ನು ಮಾಡುತ್ತೇನೆ ಎಂಬ ಭರವಸೆಯನ್ನು ಕೊಡುತ್ತಾನೆ. ವಚನಪಾಲನೆಯ ನನ್ನಿಛಲವನ್ನು ಹಿಡಿದು ಕುಲವನ್ನು ಕಮರಲು ಬಿಡಬೇಕೋ ಬೇಡವೋ ಎಂಬ ಸಂದಿಗ್ಧಕ್ಕೆ ಸಿಕ್ಕಿ ಮತ್ತೆ ವಿಲ ವಿಲ ಒದ್ದಾಡುತ್ತಾನೆ ಹರಿಶ್ಚಂದ್ರ. ಆಗ ಚಂದ್ರಮತಿಯ ಮೂಲಕ ಹರಿಶ್ಚಂದ್ರನಿಗೆ ಮತ್ತೊಂದು ದರ್ಶನವಾಗುತ್ತದೆ. “ನನ್ನಿಗೆ ನಿಲ್ಲದೆ ಮಗನ ಪ್ರಾಣವನ್ನು ಉಳಿಸಿಕೊಂಡರೆ ಪುನರ್ಜನ್ಮ ಪಡೆದ ಮಗ ಪಡೆಯುವುದು ಪ್ರಾಣ ಎಂಬುದು ಮಾತ್ರ ನಿಶ್ಚಿತ, ಹಿಂದಿನ ಜನ್ಮದ ಮಗನೇ ಅವನಾಗಿರುತ್ತಾನೆಯೇ ಎಂಬುದು ಗೊತ್ತಿಲ್ಲ. ಅದೇ ಮಗನೇ ಆಗಿರುತ್ತಾನೆ ಎಂದಾದರೂ ಅವನು ಏನಾಗಿರುತ್ತಾನೆ? ವಚನಭ್ರಷ್ಠನ ಮಗ ಆಗಿರುತ್ತಾನೆ

ದೈವಕರುಣೆಯಿಂದ ಯಜ್ಞಕ್ಕೆ ಆಹುತಿಯಾಗದೆ ಉಳಿದ ಮಗನಿಗೆ ಬರುವವಚನಭ್ರಷ್ಠನ ಮಗಎಂಬ ನಿಂದೆ, ಲೋಕಾಪವಾದವನ್ನು ನಿರ್ಲಕ್ಷಿಸಿದರೂ ತಮ್ಮ ಮಗ ಯಾವತ್ತೂ ಸಾಯುವುದೇ ಇಲ್ಲವೇ? ಸಾಯದೇ ಉಳಿಯುತ್ತಾನೆ ಎಂದಾದರೂ ಅವನಿಗೆ ಯಾವ ವೈಭವ ದೊರೆಯುತ್ತದೆ? ವಿಪ್ರನ ಮನೆಯ ತೊತ್ತಿನ ಬದುಕೇ ಅಲ್ಲವೇ! ಇದಕ್ಕಿಂತ ಸತ್ತ ಮಗನಿಗೆ ಸದ್ಗತಿ ದೊರೆಯುವಂತೆ ನೋಡಿಕೊಳ್ಳುವುದೇ ಯೋಗ್ಯವಾದದ್ದುಎಂದು. ಚಂದ್ರಮತಿಯ ದರ್ಶನವನ್ನು ತನ್ನದನ್ನಾಗಿಸಿಕೊಂಡ ಹರಿಶ್ಚಂದ್ರ ರಾಜನಿಂದರುದ್ರಭೂಮಿಕರ ವಿನಾಯಿತಿಪಡೆಯಲು ಚಂದ್ರಮತಿಯನ್ನು ರಾಜನ ಬಳಿಗೆ ಕಳುಹಿಸುತ್ತಾನೆ. ರಾಜನಿಂದ ಪರಿಹಾರ ಸಿಗುತ್ತದೆ ಎಂಬ ವಿಶ್ವಾಸವೇನೂ ಇಲ್ಲದ ಅವನು ಅವಳು ಬರುವವರೆಗೆ ದುಃಖಾಗ್ನಿಯಿಂದ ಸತ್ತ ಮಗನಿಗೆ ಸಂಸ್ಕಾರ ಮಾಡುತ್ತಿರುವೆ ಎಂದು ಹೇಳಿಕೊಂಡು ಸಮಸ್ಯೆಯನ್ನೂ, ಪರಿಸ್ಥಿತಿಯನ್ನೂ ಎದುರಿಸುತ್ತಾನೆ.

ಶಿವದೇರು

ಹೀಗೆಮೌಲ್ಯೋದ್ಧರಣದ ಹಾದಿಯಲ್ಲಿ ಹರಿಶ್ಚಂದ್ರ ಮತ್ತು ಚಂದ್ರಮತಿಯರುಮುಂದುವರೆಯುತ್ತಿರುವುದನ್ನುಪು.ತಿ.. “ಶಿವದೇರುಎನ್ನುತ್ತಾರೆ. ಶಿವದೇರಿನಲ್ಲಿ ಎದುರಾದ ಅತ್ಯಂತ ಆಘಾತಕಾರಿ ಸಂಗತಿ ಅರಮನೆಗೆ ಹೋದ ಚಂದ್ರಮತಿಯನ್ನು ರಾಜಕುಮಾರನ ರಕ್ತವನ್ನು ಹೀರುತ್ತಿದ್ದ ಶಾಕಿನಿ ಎಂದು ನಿರ್ಣಯಿಸಿ ಅವಳಿಗೆ ಮರಣದಂಡನೆಯನ್ನು ರಾಜ ವಿಧಿಸಿದುದು. ರಾಜಾಜ್ಞೆಯನ್ನು ಪಾಲಿಸಿದರೆ ಹರಿಶ್ಚಂದ್ರನನ್ನು ಋಣಮುಕ್ತನನ್ನಾಗಿಸುತ್ತೇನೆ ಎಂದು ವೀರಬಾಹು ಆಮಿಷ ಒಡ್ಡುತ್ತಾನೆ. ಆಮಿಷಕ್ಕೆ ಒಳಗಾಗದೆ ಹರಿಶ್ಚಂದ್ರ ಸುಮ್ಮನೆ ನಿಂತಾಗ ರಾಜಾಜ್ಞೆಯನ್ನು ಪಾಲಿಸುತ್ತಿಲ್ಲ ಎಂದು ರಾಜನಿಗೆ ದೂರು ಹೇಳುತ್ತೇವೆ ಎಂದು ರಾಜಭಟರು ಹೊರಡುತ್ತಾರೆ

ಆಗ ಹರಿಶ್ಚಂದ್ರಯೌವನದಲ್ಲಿ ಬೇರೆ ಯಾವುದರಿಂದಲೂ ತೃಪ್ತವಾಗದ ಮನಸ್ಥಿತಿ, ಖಾಲಿ ಜಾಗ ತುಂಬಲು ಏನೋ ಬೇಕಾಗಿದೆ ಎಂಬ ಅರಕೆ, ಇನ್ನೊಂದು ಆಸರೆ ಬೇಕು ಎಂಬ ಹುಡುಕುವಿಕೆ ಇವೆಲ್ಲ ಇದ್ದಾಗ ʼನಂದನವನದ ಕಂಪಿನಂತೆʼ, ಆಸೆಗಳ ಪೂರೈಕೆಯ ನಿಧಿಯಂತೆ, ಕಾತರಗಳನ್ನೆಲ್ಲ ʼಶಮಿಸುವ ಅಮೃತದಂತೆʼ ನನ್ನ ಕೈ ಹಿಡಿದು ಒಡಲು ಎರಡು, ಮನಸ್ಸು ಒಂದು ಎಂಬಂತೆ ನನ್ನೊಂದಿಗೆ ಇದ್ದೆ; ಅತ್ತಿತ್ತ ಸುಳಿದರೂ ಧರ್ಮವನ್ನು ಬಿಡದಂತೆ ನನ್ನನ್ನು ಎಚ್ಚರದಲ್ಲಿ ಇರಿಸಿದ್ದೆ; ಸುಖ ದುಃಖಗಳು ಬುದ್ಧಿಯನ್ನು ಕೆಡಿಸದಂತೆ ಪರಸ್ಪರ ಒಬ್ಬರನ್ನೊಬ್ಬರು ನೆಮ್ಮಿ ಬದುಕಿದೆವು; ಸಕಲ ಭಾಗ್ಯ ಭೋಗಗಳನ್ನು ಅನುಭವಿಸಿಯೂ ಭಾವನೆಗಳಲ್ಲಿ ಮೃದುವಾಗಿ, ನೇಹದಲ್ಲಿ ದೃಢವಾಗಿ ದಿನ ದಿನಕೂ ಬದುಕಿದೆವು; ʼನೆಲದ ಉಪ್ಪಿನ ಕಡುತ್ವವನ್ನು ಕಳೆದುಕೊಂಡು ಮುಗಿಲಿನ ರುಚಿಯನ್ನುʼ ಭಾವಿಸುವಂತೆ ನಮ್ಮ ನೋವುಗಳು ನಮ್ಮನ್ನು ಮಾಗಿಸಿದವು; ಬಾಹ್ಯ ಸಿರಿ ಭೋಗಗಳು ಕಳೆದುಹೋದರೂ ನೀನೇ ನನ್ನ ಸಿರಿ, ನಿಧಿ ಎಲ್ಲವೂ ಆದಂತೆ ಇದ್ದೆ, ಎಂಥ ಗತಿ ಬಂದರೂನಿನ್ನಿಂದಾಗಿನಾನು ವಸುಮತಿಯಅರಸನೇ ಆಗಿದ್ದೆಎಂದು ತನ್ನ ದಾಸತ್ವದ ಹಿಂದಿನ ದಿನಗಳ ದಾಂಪತ್ಯದ ಸೊಗವನ್ನು ನೆನಪಿಸಿಕೊಳ್ಳುತ್ತಾನೆ. (ಪು.ತಿ.. ಸಂಚಯ, ಪು.೨೧೭). ಇಂಥ ಚಂದ್ರಮತಿಯನ್ನು ಕೊಂದು ಯಾವ ಹದುಳವನ್ನು ಪಡಲಿ? ಚಂದ್ರಮತಿಯನ್ನು ಕೊಲ್ಲುವುದು ಅನ್ಯಾಯ, ಕ್ರೌರ್ಯ; ಅದು ವಚನ ಪಾಲನೆಯ ವಿಷಯ ಅಲ್ಲ ಎಂದು ಹರಿಶ್ಚಂದ್ರ ಗೋಳಾಡುತ್ತಾನೆ

ಸಮಸ್ಯೆಯನ್ನು ಬಗೆಹರಿಸಲು ಹರಿಶ್ಚಂದ್ರನಿಗೆ ಚಂದ್ರಮತಿತೋರುವ ದಿಕ್ಸೂಚಿಆಳಿಗೆ ಆಜ್ಞಾಪಾಲನೆ ಮಾತ್ರ ಕರ್ತವ್ಯ; ಅಧಿಕಾರ ಇದ್ದವರಿಗೆ ಮಾತ್ರ ಸರಿ ತಪ್ಪುಗಳನ್ನು ವಿವೇಚಿಸಿ ನಿರ್ಣಯ ಸ್ವೀಕರಿಸುವ, ನ್ಯಾಯಯುತವಾದದ್ದನ್ನು ಮಾತ್ರ ಪಾಲಿಸಲೇ ಬೇಕಾದ ಹೊಣೆಗಾರಿಕೆ, ಜವಾಬ್ದಾರಿ ಎನ್ನುವಹೊಸ ಮಾತು”. ಘಟ್ಟದಲ್ಲಿ ಹರಿಶ್ಚಂದ್ರ, ಚಂದ್ರಮತಿಯ ಸಾಮಾಜಿಕ ರೂಢ್ಯಾತ್ಮಕ ಚಿಂತನೆಗಿಂತ ವಿಭಿನ್ನವಾಗಿ ಮತ್ತು ಹೆಚ್ಚುಮೂಲಭೂತವಾಗಿ ಸಾವನ್ನು ಕುರಿತು ಚಿಂತಿಸುತ್ತಾನೆ”. ಗ್ರಹಿಕೆಯ ನೆಲೆಯಲ್ಲಿ ಚಂದ್ರಮತಿಗೆ ಕೊಟ್ಟಿದ್ದ ಮರಣದಂಡನೆಯ ರಾಜಾಜ್ಞೆಯನ್ನು ಪಾಲಿಸಲು ಮುಂದಾಗುತ್ತಾನೆ. ಹರಿಶ್ಚಂದ್ರ ಚಂದ್ರಮತಿಯನ್ನು ತನ್ನ ಹೆಂಡತಿ ಎಂಬ ಭಾವದಿಂದ ನೋಡುವುದರ ಬದಲಾಗಿ ಜೀವ ಎಂದು ಪರಿಕಲ್ಪಿಸುತ್ತಾನೆ. ಚಂದ್ರಮತಿಯ ವ್ಯಕ್ತಿತ್ವ ಈಗ ಎಲ್ಲ ಪಾಶಗಳಿಂದ ಬಿಡಿಸಿಕೊಂಡ ಜೀವಾತ್ಮ ಎಂದು ಅರ್ಥಮಾಡಿಕೊಳ್ಳುತ್ತಾನೆ. ಅದನ್ನು ಹೇಳಿಕೊಳ್ಳುತ್ತಾ ಅವಳು ಮುಕ್ತಿಯ ನೆಲೆಯನ್ನು ತಲುಪಲು ತಾನು ಸಾಧನ ಎಂದು ಅವಳ ತಲೆ ಕತ್ತರಿಸಲು ಸಿದ್ಧನಾಗುತ್ತಾನೆ.

ಇಲ್ಲಿ ಪು.ತಿ.. ಸಾವನ್ನು ಕುರಿತ ಭಾರತೀಯರ ಮೂಲಭೂತ ನಿಲುವೊಂದನ್ನು ಪ್ರಸ್ತಾಪಿಸುತ್ತಿದ್ದಾರೆ. “ಭಾರತೀಯರಿಗೆ ಸಾವಿನ ಅಂತಿಮ ಅತ್ಯುನ್ನತ ಪರಿಣಾಮ ಮೂಲಸ್ಥಾನವನ್ನು ಸೇರುವುದು.” ಪು.ತಿ.. ವಿಶಿಷ್ಟಾದ್ವೈತಿಗಳು. “ವಿಶಿಷ್ಟಾದ್ವೈತದ ಪ್ರಕಾರಜೀವಗಳಿಗೆ ಪ್ರಾಪಂಚಿಕ ವೈವಿಧ್ಯಮಯ ಅನುಭವಗಳು ತಮ್ಮ ತಮ್ಮ ಮೂಲಸ್ಥಾನವು ವಿಶಿಷ್ಟಅದ್ವೈತ ಆದ ಭಗವಂತನೇ ಎಂಬುದನ್ನು ಮನಗಾಣಿಸಿಕೊಡುತ್ತವೆ, ಆಗ ಜೀವಗಳು ತಮ್ಮ ಎಲ್ಲಾ ಪ್ರತ್ಯೇಕತೆಯನ್ನೂ ಕಳೆದುಕೊಂಡು ಭಗವಂತನಲ್ಲಿ ಸೇರಿಹೋಗುತ್ತವೆ. ಇದನ್ನು ವಿವಿಧ ಅನುಭವಗಳ ಮೂಲಕ ಸಾಧ್ಯಗೊಳಿಸಿಕೊಳ್ಳಲು ಭಗವಂತ ಜೀವಿಗಳಿಗಾಗಿ ಪ್ರಪಂಚವನ್ನು ಸೃಷ್ಟಿಮಾಡುತ್ತಾನೆ, ಜೀವಿಗಳನ್ನು ಪ್ರಪಂಚಕ್ಕೆ ಕಳುಹಿಸಿಕೊಡುತ್ತಾನೆ. ಅದೇಪ್ರಥಮ ಹುಟ್ಟು”. ಅನಂತರ ಪಡೆದ ಅನುಭವಗಳ ಪರಿಣಾಮವನ್ನು ಅನುಭವಿಸಲು ಜನ್ಮಾಂತರಗಳು. ದೇವರೇ ಅಂತಿಮ ಗತಿ ಎಂಬ ಅನನ್ಯ ಭಾವ ಜೀವಿಗಳಲ್ಲಿ ಉಂಟಾಗುವವರೆಗೂ ಜನ್ಮಾಂತರಗಳು ಮುಂದುವರೆಯುತ್ತಿರುತ್ತವೆ. ಬೇರೆ ಏನನ್ನೂ ಭಾವಿಸದೆ, ಚಿಂತಿಸದೆ ದೈವಕ್ಕೆ ಸಂಪೂರ್ಣವಾಗಿ ಶರಣಾಗತನಾಗಿ, ದೈವಕ್ಕೆ ಎಲ್ಲವನ್ನೂ ಸಮರ್ಪಿಸಿ ಬದುಕನ್ನು ನಡೆಸುವ ಹಂತವನ್ನು ತಲುಪಿದಾಗ ಸಾವು ಜೀವಿಯನ್ನು ಅದರ ಮೂಲಸ್ಥಾನಕ್ಕೆ ಒಯ್ಯುತ್ತದೆ ಎನ್ನುತ್ತದೆ ವಿಶಿಷ್ಟಾದ್ವೈತ

ಪುರಂದರ ದಾಸರು ತಮ್ಮ ಸಕಲೈಶ್ವರ್ಯವನ್ನು ದಾನ ಮಾಡಿ ದಾಸ ದೀಕ್ಷೆ ಪಡೆದು ಊಂಛವೃತ್ತಿ ಹಿಡಿದ ಮೇಲೆ ಬರೆದಆದದ್ದೆಲ್ಲ ಒಳಿತೇ ಆಯಿತುಎಂಬ ಕೃತಿಯಲ್ಲಿ ಹೆಂಡತಿಯ ಕಾರಣದಿಂದಾಗಿ ತನಗೆ ವೈರಾಗ್ಯ ಸಾಧ್ಯವಾಯಿತು ಎಂದು ಹೇಳಿಕೊಳ್ಳುವ ಹಾಗೆ ಇಲ್ಲಿ ಹರಿಶ್ಚಂದ್ರ ತಾನೂ ಯಾವ ಯಾವ ಬಂಧಗಳನ್ನೆಲ್ಲ ಕಳಚಿಕೊಂಡೆ ಎಂದು ಹೇಳಿಕೊಳ್ಳುತ್ತಾನೆ:

ರಾಜ್ಯವಿತ್ತಂದು ನೀ ಪಟ್ಟಕ್ಕೆ ಮೊದಲೆಂತೊ ಅಂತೆ ಆದೆ

ಸುತನಳಿಯೆ ಮಗ ಹುಟ್ಟ ಮೊದಲೆಂತೊ ಹದಕೆ ಹೋದೆ|

ಸತಿಯಳಿಯೆ ನಿನಗಹುದು ಮದುವೆಗೂ ಮೊದಲಿನಾ ಪೂರ್ವಸ್ಥಿತಿ|

ಬಳಿಕಾಳುತನ ತೀರೆ ಹುಟ್ಟ ಮುನ್ನಿನ ನೆಲೆಗೆ ನಿನ್ನ ಪ್ರಗತಿ” (ಪು.ತಿ.. ಸಂಚಯ, ಪು.೨೧೮)

ರಾಜ್ಯವನ್ನು ಕೊಟ್ಟೆ, ಪಟ್ಟಕ್ಕೆ ಬರುವ ಮೊದಲಿನ ಸ್ಥಿತಿ ತನ್ನದಾಯಿತು; ಮಗ ಸತ್ತ, ಮಗ ಹುಟ್ಟದೇ ಇದ್ದ ಸ್ಥಿತಿ ತನ್ನದಾಯಿತು; ಸತಿಯು ಅಳಿಯುತ್ತಾಳೆ, ಆಗ ಮದುವೆಯ ಮೊದಲು ಹೇಗೆ ಇದ್ದೆನೋ ಸ್ಥಿತಿ ತನ್ನದಾಗುತ್ತದೆ; ಸತಿ ಮೊದಲು ಮೂಲಸ್ಥಾನಕ್ಕೆ ಹಿಂದಿರುಗುತ್ತಾಳೆ, “ಅಶಿವಶಕ್ತಿಯನ್ನು ಭಿನ್ನಿಸಿ=ಹೊಡೆದುಹಾಕಿಅವಳ ಬೆನ್ನ ಹಿಂದೆ ತಾನೂ ಹೋಗುತ್ತೇನೆ ಎಂದು ಹೇಳಿಕೊಳ್ಳುತ್ತಾನೆ. “ಹೋಗೆನ್ನ ಜೀವವೇ ಹೋಗು ನೀ ಹೊತ್ತಿನತ್ತತ್ತ| ಮುನ್ನ ಮುನ್ನಂತಾಗೆ ಹೋಗಾದಿಮೂಲದತ್ತಎಂದು ಹಾರೈಸಿ ಹೆಂಡತಿಯ ಸಾವಿನ ಪ್ರಸಂಗವನ್ನೂ ಹರಿಶ್ಚಂದ್ರ ಜೀರ್ಣಿಸಿಕೊಳ್ಳುತ್ತಾನೆ!

ನರಕುಲದ ಗೆಲುವು

ಹರಿಶ್ಚಂದ್ರ ಜೀವಕಾಮವನ್ನು ಆತ್ಮಕಾಮವನ್ನಾಗಿ ಸಂಪೂರ್ಣವಾಗಿ ರೂಪಾಂತರಿಸಿದ ಘಟ್ಟದಲ್ಲಿ ವಿಶ್ವಾಮಿತ್ರ, ರಾಜ, ವೀರಬಾಹುಕ, ವಿಪ್ರ, ಉಪಾಸಿಗಳು ಎಲ್ಲರೂ ಬಂದು ಹರಿಶ್ಚಂದ್ರ ಚಂದ್ರಮತಿಯ ತಲೆ ಕಡಿಯುವುದನ್ನು ತಡೆಯುತ್ತಾರೆ. ವಿಶ್ವಾಮಿತ್ರ – 

ಸೃಷ್ಟಿಯಿದೆಲ್ಲವು ಅಚ್ಚಚ್ಚರಿಗೊಳೆ| ಕೇಡನೆ ಛಲಿಸುತ ಸರಿದೆಯಲ

ಮುನಿಗೂ ಮಿಕ್ಕಿನ ಧೈರ್ಯದೊಳೆಲೆ ದೊರೆ| ಶುಭಾಶುಭಂಗಳ ತೊರೆದೆಯಲ” (ಪು.ತಿ.. ಸಂಚಯ, ಪು.೨೨೦

ಅಪ್ರಾಕೃತವೈ ನಿಮ್ಮೆಸಕ| ಆದರು ಎನಿಪುದು ಪ್ರಾಕೃತಿಕ

ಆವುದತಿ ಕಠಿಣ ದುರ್ ಗ್ರಾಹ್ಯವೊ ಅದೆ| ಸರಳವೆನಿಸಿತು ಆಗದೆ ಕೃತಕ|……| 

ಎಲ್ಲ ಅಳಿದರು ಮಾತುಳಿಯಲಿ ಎಂ|ದೇರಿಸುತಾತ್ಮದ ಬೆಲೆ..|

ನಿನ್ನೊಳು ಗುರು ಕಂಡುದ ನಾ ಕಾಣದ| ದಿವ್ಯ ಛಲವ ನಾನೆಲ್ಲರೊಳು

ಕಂಡದ ಕುದರಿಸಲೇರುವೆ ತಪದೊಳು|……| ಕಾಂಬೆನು ತಾರಕಮಂತ್ರವನು

ಎಲ್ಲ ಮಾನವಗು ಜಡವ ಬಿಡಿಸಿ |ನ್ನರಿವನು ತಹ ಶಿವ ತಂತ್ರವನು|” ಎನ್ನುತ್ತಾನೆ. (ಪು.ತಿ.. ಸಂಚಯ, ಪು.೨೨೧)

ಜಗತ್ತೆಲ್ಲವೂ ಆಶ್ಚರ್ಯ ಪಡುವಂತೆ ಹರಿಶ್ಚಂದ್ರ ಕೇಡನ್ನೇ ಬದಿಗೆ ಸರಿಸುತ್ತಾ ಮುಂದುವರೆದದ್ದು ಮುನಿಗೂ ಸಾಧ್ಯವಾಗದ ಧೈರ್ಯ. ಶುಭ ಅಶುಭಗಳನ್ನೆಲ್ಲ ಅವನಿಗೆ ತರಿಯಲು ಸಾಧ್ಯವಾದದ್ದು ಕಡಿಮೆ ದೊಡ್ಡ ಸಂಗತಿಯಲ್ಲ. ಇದು ಅಪ್ರಾಕೃತವಾದರೂ ಪ್ರಾಕೃತವೇ. ಅತಿ ಕಠಿಣ, ದುರ್ ಗ್ರಾಹ್ಯ ಎಂದರೂ ಕೃತಕವಾಗದೆ ಸರಳವಾದದ್ದೆ. ಎಲ್ಲ ಅಳಿದರೂಸತ್ವಉಳಿಯಲಿ ಎಂಬ ದಿವ್ಯ ಛಲದಿಂದ ಆತ್ಮದ ಬೆಲೆ=ಗೌರವವನ್ನು ಹರಿಶ್ಚಂದ್ರ ಮತ್ತು ಚಂದ್ರಮತಿ ಮೇಲಕ್ಕೆತ್ತಿದ್ದಾರೆ. ಇದನ್ನು ಎಲ್ಲರಲ್ಲೂ ಕಂಡು ಕುದುರಿಸಲು ತಾನು ತಪಸ್ಸು ಮಾಡುತ್ತೇನೆ ಎನ್ನುತ್ತಾನೆ ವಿಶ್ವಾಮಿತ್ರ. ಪ್ರಸಂಗದ ನಂತರವೇ ವಿಶ್ವಾಮಿತ್ರ ಗಾಯತ್ರಿ ಮಂತ್ರದ ದ್ರಷ್ಟಾರನಾದ, ಹರಿಶ್ಚಂದ್ರನಂತೆ ವಿಶ್ವಾಮಿತ್ರನೂ ಆತ್ಮದ ಗೌರವವನ್ನು ಹೆಚ್ಚಿಸಿಕೊಂಡ ಮತ್ತು ನರಕುಲದ ಘನತೆಯನ್ನು ಮತ್ತಷ್ಟು ಪ್ರಕಾಶ ಪಡಿಸಿದ ಎಂದು ಪು.ತಿ.. ಹೇಳುತ್ತಾರೆ

ಪು.ತಿ.. ನರಕುಲದ ಗೆಲುವಿನ ಮೂರು ಮುಖದ ಆಯಾಮಗಳನ್ನು ಗಮನಿಸುತ್ತಾರೆ: ಒಂದನೆಯದುಧರ್ಮಿಷ್ಟ ತಕ್ಕವ ಪೊರೆಯೆಎಂದು ವಿಶ್ವಾಮಿತ್ರನು ರಾಜತ್ವವನ್ನು ಹರಿಶ್ಚಂದ್ರನಿಗೆ ಹಿಂದಿರುಗಿಸುತ್ತಾನೆ. ಎರಡನೆಯದು ಉಪಾಸಿಗಳು ಸ್ವಾಭಿಮಾನದ ಹಾನಿಯನ್ನು ಸಹಿಸದ ಮಹನೀಯರಿಂದಲೇ ಪ್ರಾಪಂಚಿಕತೆಗೆ, ಪ್ರಪಂಚಕ್ಕೆ ಬೆಲೆ; ಅವರುಶಿವ ಮೌಲ್ಯವನ್ನು ಎಲ್ಲಾ ಕಡೆ ಪಸರಿಸುತ್ತಾರೆಎಂದು ಹರಿಶ್ಚಂದ್ರನನ್ನು ಗೌರವದಿಂದ ಕಾಣುತ್ತಾರೆ. ಮೂರನೆಯದು – 

ಯಮನನೆ ಶಮದೊಳೆದುರಿಸಿ

ನಿಂತೆಯೊ ಋಷಿಸಮ್ಮತ

ಹುದುಲಿನಿರವೊಳು ಶಿವನ ಗಟ್ಟಿಯ

ನೆಲದಿ ಕದಲೆನು ಎನ್ನುತ” (ಪು.ತಿ.. ಸಂಚಯ, ಪು.೨೨೩) – ಹರಿಶ್ಚಂದ್ರ ರುದ್ರಭೂಮಿಯಂಥ ಮರಳಿನ ಜಾಗದಲ್ಲಿ ನೆಲದಿಂದ ಕದಲೆನು ಎಂದು ಗಟ್ಟಿಯಾಗಿ ಕಾಲೂರಿ ನಿಂತು ಯಮನನ್ನೇ (= ಮಗನ ಮತ್ತು ಹೆಂಡತಿಯ ಸಾವಿನ ಪ್ರಸಂಗಗಳನ್ನು) ಶಮದಿಂದ ಎದುರಿಸಿದ, “ಮೃತ್ಯುಂಜಯತ್ವವನ್ನುಎತ್ತಿ ಹಿಡಿದ ಎಂದು ಅಭಿನಂದಿಸುತ್ತಾರೆ.  

ಶಿವದರ್ಶನ

ಹರಿಶ್ಚಂದ್ರನ, ವಿಶ್ವಾಮಿತ್ರನ ಮತ್ತು ನರಕುಲದ ಮೌಲ್ಯೋದ್ಧರಣ ಆಯಿತು ಎಂಬುದರ ಒಂದು ಸಂಕೇತ ಶಿವದರ್ಶನ. “ವಸಿಷ್ಠನ ಪಂಥಾಹ್ವಾನವೇ ಹರಿಶ್ಚಂದ್ರನನ್ನು ಅರ್ಥಮಾಡಿಕೊಳ್ಳಬೇಕಾದರೆ ಶಿವನನ್ನೇ ಅರ್ಥಮಾಡಿಕೊಳ್ಳ ಬೇಕಾಗುತ್ತದೆ ಎಂಬುದು ಆಗಿತ್ತು; ಹರಿಶ್ಚಂದ್ರ ಸದಾ ಶಿವನಲ್ಲೇ ಮಗ್ನನಾಗಿ ಶಿವನ ಪ್ರತೀಕ ಎಂಬಂತೆ ಇದ್ದುದರಿಂದ ಅಂತಿಮವಾಗಿ ಶಿವನ ಸಾಕ್ಷಾತ್ಕಾರ ಆಯಿತು ಎಂದು ರಾಘವಾಂಕ ಹೇಳುತ್ತಾನೆ. ಪು.ತಿ.. ಸಹ ಹರಿಶ್ಚಂದ್ರನಿಗೆ ಶಿವನ ಸಾಕ್ಷಾತ್ಕಾರ ಆಯಿತು ಎನ್ನುತ್ತಾರೆ. ಏಕೆಂದರೆಎಲ್ಲಿ ಮಹಿಮರ ಸಂಗಮ| ಅಲ್ಲಿ ಸನ್ನಿಧಿಸುವನು ಶಂಭು| ಶೋಭಿಸಲು ಜಡ ಜಂಗಮ” (ಪು.ತಿ.. ಸಂಚಯ, ಪು.೨೨೩); ನಯ, ಋದ್ಧಿ, ಸಂಯಮಗಳಿಗೆ ಜಯವಾದಾಗ, ಜಡವಾದದ್ದು (=ರೂಢಿಗತವಾದದ್ದು) ಜಂಗಮವಾಗಿ (=ಚೈತನ್ಯಯುತವಾಗಿ) ಶೋಭಿಸಿದಾಗ, ಮಹಿಮರ (=ವಿಶ್ವಾಮಿತ್ರನಂತಹ ಚಲನಶೀಲ ತಪಸ್ವಿಗಳ) ಸಂಗಮ ಆದಾಗ ಅಲ್ಲಿ ಶಿವಸನ್ನಿಧಿ (=ಮೃತ್ಯುಂಜಯ=ಸೃಜನಶೀಲತೆ=ಕಲೆ=ರಸ=ಆನಂದ) ಸಹಜವಾಗಿ ಉಂಟಾಗುತ್ತದೆ ಎನ್ನುತ್ತಾರೆ.  

ಹರಿಶ್ಚಂದ್ರನಿಗೂ ಶಿವನಿಗೂ ಯಾಕೆ ಅಂಟು ನಂಟು ಎನ್ನುವ ಪ್ರಶ್ನೆಗೆ ಉತ್ತರ ಎನ್ನುವ ಹಾಗೆ ಪು.ತಿ.. ಹರಿಶ್ಚಂದ್ರನಿಂದ ಮಾಡಿಸುವ ಶಿವಸ್ತುತಿ ಇದೆ

ಫಾಲಾಗ್ನಿ ರುದ್ರೋಗ್ರ ಗರಳೋಗ್ರ ಸರ್ವೋಗ್ರ ಭಸ್ಮೋಗ್ರ ಬಹಿರುಗ್ರ ಅಂತಶ್ಶಿವ

ವಿಷಯ ವಿಷಮ ಭೀಮ ಕಾಮಕರಾಳನೆ ಸಾಧು ವಿಷದ ಸ್ವಾಮಿ ಮಹಾದೇವಪು.೨೨೮

ಶಿವನ ಎಲ್ಲಾ ಅಂಶಗಳುಗರಳ, ಭಸ್ಮ, ಹಣೆಗಣ್ಣು, ಬಾಹ್ಯ ಸಂಗತಿಗಳಿಗೆ ತೋರುವ ವಿಮುಖತೆಎಲ್ಲವೂ ಉಗ್ರ = ಅತ್ಯಂತ ಅತಿಶಯವಾದದ್ದು = ಒಂದು ಧೃವದಲ್ಲಿ ನಿಲ್ಲುವಂತಹುದು. ಹರಿಶ್ಚಂದ್ರ ತನ್ನ ಬಿಕ್ಕಟ್ಟಿನ ಪ್ರಸಂಗಗಳಿಗೆಲ್ಲಾ ತೋರುವ ಪ್ರತಿಕ್ರಿಯೆಯು ಹಾಗೆಯೇ ಉಗ್ರ. “ಹರಿಶ್ಚಂದ್ರನ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಗಳೆಲ್ಲ ಹಣೆಗಣ್ಣಿನ ಉರಿ ಕೊಂಡು (=ಜ್ಞಾನಾಗ್ನಿಯಲ್ಲಿ) ದಹಿಸಿಹೋಗಿವೆ”; ಭವದ ಅನುಭವಗಳೆಲ್ಲ ಶಿವದ ಅನುಭವಗಳು ಆಗಿಬಿಟ್ಟಿವೆ (=ಮಂಗಳಭಾವಗಳಾಗಿಬಿಟ್ಟಿವೆ); ತನ್ನಪ್ರತ್ಯೇಕವಾದ ಉಳಿವನ್ನು (=ಅಸ್ತಿತ್ವವನ್ನು) ಅರಿಯದೆಯೇ ಶಿವದೊಳಗೆ ಒಂದಾಗಿಬಿಟ್ಟಿವೆ”. ರುದ್ರಭೂಮಿಯಲ್ಲಿ ಒಳಗೆ ಹೊರಗೆ ಎರಡನ್ನೂ ಹೊಂದಿಸಿ ಹರಿಶ್ಚಂದ್ರ ಧೀರನಾಗಿದ್ದಾನೆ. ಅದರಿಂದಲೇ ಕೃತಿ ಮತ್ತು ಹರಿಶ್ಚಂದ್ರ ಎರಡೂ ಸತ್ಯ ಅಯನ = ಶಿವನ ಅಯನ = ಹರಿಶ್ಚಂದ್ರನ ಅಯನ = ಸತ್ಯಾಯನ ಹರಿಶ್ಚಂದ್ರ

ಹರಿಶ್ಚಂದ್ರನಿಗೂ ವರ್ತಮಾನದ ನಮಗೂ ಯಾಕೆಅಂಟು ನಂಟು”? ಎನ್ನುವುದನ್ನು ಪು.ತಿ.. ವಸಿಷ್ಠನ ಮಾತುಗಳ ಮೂಲಕ ವಿವರಿಸುತ್ತಾರೆ. ಎಲ್ಲಾ ಮನುಷ್ಯರಲ್ಲೂಧೃತಿ, ಸ್ಥಾಣು ಸ್ಥಲಗಳು ಇವೆ; ಇವುಗಳ ಸಾತ್ವಿಕ ಬಲದಿಂದ ಎಲ್ಲರೂ ಎಲ್ಲಾ ಆಪತ್ತುಗಳನ್ನು ಎದುರಿಸಿ ನಿಲ್ಲಬಲ್ಲರು; ಅಂತಹವರ ನೆಲೆ ಸಹಜವಾಗಿ ದಿವ್ಯರ ಸನಿಹ”ವೇ ಎನ್ನುತ್ತಾರೆ ಪು.ತಿ.. (ಪು.೨೨೫) ವಸಿಷ್ಠ ಇನಕುಲದ ಪುರೋಹಿತ; ಅವನ ಮತ್ತು ವಿಶ್ವಾಮಿತ್ರನ ಪಂಥಾಹ್ವಾನದಿಂದಾಗಿ ಆದದ್ದುಇನಕುಲದ ಮೂಲಕ ಇಳೆಗೆ ಬೆಲೆಬಂದದ್ದು. ಇನ ಎಂದರೆ ಸೂರ್ಯ. ಸೂರ್ಯನ ಕೆಲಸವೇ ಇರುವುದನ್ನು ಹೊಳೆಯಿಸುವುದು, ಕತ್ತಲನ್ನು=ಅಜ್ಞಾನವನ್ನು=ಅರೆ ತಿಳುವಳಿಕೆಯನ್ನು, ಭ್ರಮೆಯನ್ನು ಹೋಗಲಾಡಿಸುವುದು. “ಸೂರ್ಯನಿಂದಾಗಿರಾತ್ರಿಯ ಜಡತೆ ಹೋಗುತ್ತದೆ, ಮರೆಮಾಚುವಿಕೆಗಳೆಲ್ಲಾ ಬಯಲಾಗುತ್ತವೆ; ಸಂತೋಷ, ಉಲ್ಲಾಸ, ಸೌಂದರ್ಯಾನುಭವದ ಸುಖ, ಮೋದ = ಆನಂದ = ರಸಾನುಭವ ಆಗುತ್ತದೆ. ಒಬ್ಬನ ಬದುಕಿನ ಅತ್ಯುತ್ತಮ ಘಳಿಗೆ ರಸಾನುಭೂತಿಯೇ. ಇದು ಪು.ತಿ.. ರವರ ಕಾವ್ಯಮೀಮಾಂಸೆಯ ಸೂತ್ರ, ಸಿದ್ಧಾಂತವೂ ಹೌದು, ಸತ್ಯಾಯನ ಯಕ್ಷ ರೂಪಕದ ಸಾರವೂ ಹೌದು.

ಆಧಾರ: “ಸತ್ಯಾಯನ ಹರಿಶ್ಚಂದ್ರ”, ಪುತಿನ ಸಂಚಯ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು, ೨೦೧೦

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.