close logo

ಪು. ತಿ. ನ ಅವರ  ಸತ್ಯಾಯನ ಹರಿಶ್ಚಂದ್ರ – ಯಕ್ಷ ರೂಪಕದ ವಿಶ್ಲೇಷಣೆ  – 1

ಕಾವ್ಯಮೀಮಾಂಸಕಾರ ಪು.ತಿ.

ಪು.ತಿ.ನ.ರವರು ಅನೇಕ ಕವನ ಸಂಕಲನಗಳನ್ನು, ಪ್ರಬಂಧ ಸಂಕಲನಗಳನ್ನು, ಕಾವ್ಯಮೀಮಾಂಸಾ ಕೃತಿಗಳನ್ನು ಮತ್ತು ಗೀತನಾಟಕಗಳನ್ನು ರಚಿಸಿದ್ದಾರೆ. ಅವರನ್ನು ವಿಶೇಷವಾಗಿ ಗುರುತಿಸುವುದು ೧) ಗೀತನಾಟಕಕಾರರನ್ನಾಗಿ. ೨) ಕಾವ್ಯಮೀಮಾಂಸಾಕಾರರನ್ನಾಗಿ. ಲಯಬದ್ಧವಾಗಿ ತೂಗಾಡುವ ಅಮೂರ್ತ ಸಂಗೀತ ರೂಪಗಳ ಕನಸನ್ನು ಅವರು ಯಾವಾಗಲೂ ಕಾಣುತ್ತಿದ್ದರು; ಎಚ್ಚರವಾಗುತ್ತಿದ್ದಂತೆ ಅದಕ್ಕೆ ಪದಗಳ ತೊಡಿಗೆಯನ್ನು ತೊಡಿಸಿ ಧನ್ಯತೆಯನ್ನು ಅನುಭವಿಸುತ್ತಿದ್ದರು ಎನ್ನುತ್ತಾರೆ ಹೆಚ್.ಎಸ್. ವೆಂಕಟೇಶಮೂರ್ತಿಯವರು. ಪ್ರಾಪಂಚಿಕವಾದ ಎಲ್ಲಾ ಸಂಗತಿಗಳಲ್ಲಿ ರಸಾನುಭೂತಿ ಸಾಧ್ಯ; ವ್ಯಕ್ತಿ ತೀವ್ರವಾದ ಪ್ರಾಪಂಚಿಕ ಸಂವೇದನಾ ಆವೇಗಗಳನ್ನು ಅನುಭವಿಸುತ್ತಾ ಅವುಗಳ ಚೌಕಟ್ಟಿನಿಂದ ಮತ್ತು ಬಂಧದಿಂದ ಅರಿವು ಮತ್ತು ಪ್ರಜ್ಞೆಯಿಂದ ಹೊರಗೆ ನಿಂತಾಗ ಪರಮ ವಾಸ್ತವತೆಯ ದರ್ಶನ ಅವನಿಗೆ ಸಾಧ್ಯವಾಗುತ್ತದೆ, ಆನಂದಾನುಭೂತಿ=ರಸಾನುಭೂತಿ ಉಂಟಾಗುತ್ತದೆ; ಇದೇ ಕವಿಯ ಕಾವ್ಯ ರಚನೆಯ ಮತ್ತು ಸಹೃದಯನ ಕಾವ್ಯ ಆಸ್ವಾದದ ಅಂತಿಮ ಉದ್ದೇಶ – ಎನ್ನುವುದು ಪು.ತಿ.ನ.ರವರ ಕಾವ್ಯಮಿಮಾಂಸೆಯ ಸಾರಾಂಶ. ಪು.ತಿ.ನ.ರವರ ಕಾವ್ಯ ಮೀಮಾಂಸೆಯ ಪಾರಿಭಾಷಿಕ ಶಬ್ದಗಳು – “ಭವನಿಮಜ್ಜನ ಚಾತುರ್ಯ, ಭವನಿಮಜ್ಜನ ನಿಮಗ್ನತೆ ಮತ್ತು ಭವನಿಮಜ್ಜನ ಲಘಿಮಾ ಕೌಶಲ.”

ಕಾವ್ಯಸ್ವಧರ್ಮ:

ಪು.ತಿ.ನ. ಅವರಿಗೆ ರಸವೇ ಕಾವ್ಯದ ಸ್ವಧರ್ಮ; ರಸ ಎಂಬುದು ಮನಸ್ಸನ್ನು ಒಂದು ರೀತಿಯ ಸ್ವಾಸ್ಥ್ಯಕ್ಕೆ ತರುವ, ಸ್ವಾಸ್ಥ್ಯದ ಹದದಲ್ಲಿ ಮನಸ್ಸು ನಿಲ್ಲುವಂತೆ ಮಾಡುವ, ಸ್ವಾಸ್ಥ್ಯದ ಆಳ ವಿಸ್ತಾರವನ್ನು ಹೆಚ್ಚಿಸುವ ಮನಸ್ಥಿತಿ; ಮುಕ್ತನಿಂದ ಮುಮುಕ್ಷುವಿಗೆ ಹರಿಯುವ ಸಮ್ಮೋದಲಹರಿ; ಈ “ಸಮ್ಮೋದಲಹರಿ”ಯಲ್ಲಿ ಪ್ರಜ್ಞೆಯು ನಿರುಪಾಧಿಕ ಸಂವೇದನೆಯಾಗಿರುತ್ತದೆ (=ನಿರ್ಬಂಧಗಳಿಗೆ ಒಳಪಟ್ಟಿರುವುದಿಲ್ಲ); ನಮ್ಮ ಇರುವಿಕೆ ಪ್ರಸನ್ನವಾಗಿರುತ್ತದೆ, ಕಾಮಕ್ರೋಧಾದಿಗಳು ಉಪಶಮನಗೊಂಡಿರುತ್ತವೆ.

ಪು.ತಿ.ನ. ರವರಿಗೆ ಕಾವ್ಯವು ಅನುಭವಾತ್ಮಕ ಲೋಕಕ್ಕೆ ಹೊರತಾದದ್ದು ಅಲ್ಲ; ಕವಿಯ ಪ್ರತಿಭೆ ತನ್ನ ಮೋಹಕ ಶಕ್ತಿಯಿಂದ ಪ್ರತ್ಯಕ್ಷವಾದ ಪ್ರತೀಕವೊಂದನ್ನು (=ಕಣ್ಣಿಗೆ ಕಾಣುವ ಸಂಗತಿಯನ್ನು) ಭಾವಪ್ರತೀಕವಾಗಿ (=ಮನಸ್ಸಿನಲ್ಲಿಯ ಒಂದು ಕಲ್ಪನೆಯಾಗಿ) ಮಾರ್ಪಡಿಸುತ್ತದೆ, ಅಸಂಭಾವ್ಯ ಸಂದರ್ಭಗಳನ್ನು “ಪೆಡಸು ದಾರಿಯಲ್ಲಿಯ ಕ್ಷೇಮಸ್ಥಾನ”ಗಳನ್ನಾಗಿ (=ಕಠಿಣವಾದ ದಾರಿಯಲ್ಲಿ ದೊರೆಯುವ ಒಳ್ಳೆಯ ಪರಿಣಾಮಗಳನ್ನಾಗಿ) ನಿರ್ಮಿಸಿ “ಭವದ ಮರ್ಮ” (=ಪ್ರಾಪಂಚಿಕ ಬದುಕಿನ ಸಾರ, ಸ್ವಭಾವ)ವನ್ನು ತೋರುತ್ತದೆ, ಜಗತ್ತಿನ “ಅಶಿವತೆ”ಯನ್ನು (=ಕೆಡುಕನ್ನು, ಕೆಟ್ಟ ಭಾವವನ್ನು) ಕಳೆಯುತ್ತದೆ, ಜಗತ್ತನ್ನು ರಮ್ಯವಾಗಿ ತೋರಿಸುತ್ತದೆ; ಕವಿಯ ಗುರಿ ಭವೋದ್ವೇಗ ಪ್ರಚೋದನೆ ಆಗಿರದೆ “ಭವಾವೇಗ ಪ್ರಶಮನ” (=ಸಮಾಧಾನಪಡಿಸುವುದು) ಆಗಿದೆ; ಜನರ ಆಸೆ ಆಕಾಂಕ್ಷೆಗಳು ರಸಾನುಭವದ ದೇವಸ್ತರಕ್ಕೇರಿದಷ್ಟೂ ಆ ದೇಶ ಸುಸಂಸ್ಕೃತ ಎನ್ನಿಸಿಕೊಳ್ಳುತ್ತದೆ, ಗಮನಾರ್ಹ ಆಗುತ್ತದೆ.

ಸಾಂಸ್ಕೃತಿಕ ಚಿಂತನೆಗಳ ದೃಶ್ಯಾತ್ಮಕತೆ:

ಪು.ತಿ.ನ. ಸ್ವಾತಂತ್ರ‍್ಯಪೂರ್ವದಲ್ಲಿ ಜನಿಸಿದವರು. ಸ್ವಾತಂತ್ರ್ಯ ಪೂರ್ವದ ಮತ್ತು ಸ್ವಾತಂತ್ರ್ಯೋತ್ತರ ಭಾರತದಲ್ಲಿಯ ಸಾಂಸ್ಕೃತಿಕ ಸ್ಥಿತ್ಯಂತರಗಳನ್ನು ಕಣ್ಣಾರ ಕಂಡವರು. ಅವರನ್ನು ಘಾಸಿಪಡಿಸಿದುದು ನಮ್ಮ ಅದ್ಭುತವಾದ, ಶ್ರೀಮಂತವಾದ ಸಾಂಸ್ಕೃತಿಕ ಪರಂಪರೆಯ ಭವ್ಯತೆಯನ್ನು ನಾವು ಅರ್ಥ ಮಾಡಿಕೊಳ್ಳುವುದರಲ್ಲಿ ಸೋಲುತ್ತಿರುವುದು; ಪರಕೀಯರದನ್ನು ಬಾಚಿ ತಬ್ಬಿಕೊಳ್ಳಲು ಧಾವಿಸುತ್ತಿರುವುದು; ವಿಜ್ಞಾನದ ಅದ್ಭುತ ಕಾಣಿಕೆಗಳಂತೆ ಪರಕೀಯರ ಎಲ್ಲಾ ಚಿಂತನೆಗಳೂ ನಡಾವಳಿಗಳೂ ಪ್ರಶ್ನಾತೀತವಾಗಿ ಸರ್ವಶ್ರೇಷ್ಠ ಎಂದು ಅವುಗಳನ್ನು ಹಾಡಿ ಹೊಗಳಿ ಹರಸುತ್ತಿರುವುದು. ಇಂಥ ಪರಿಸ್ಥಿತಿಯಿಂದ ನಮ್ಮನ್ನು ನಾವೇ ಪಾರುಮಾಡಿಕೊಳ್ಳಬೇಕು, ಇದಕ್ಕೆ ಆಗಬೇಕಾದದ್ದು ನಮ್ಮ “ಸಾಂಸ್ಕೃತಿಕ ಚಿಂತನೆಗಳನ್ನು” ವರ್ತಮಾನಕ್ಕೆ ಅನ್ವಯವಾಗುವಂತೆ “ದೃಶ್ಯಾತ್ಮಕಗೊಳಿಸುವುದು” ಎಂದು ಪು.ತಿ.ನ. ಭಾವಿಸಿದಂತೆ ತೋರುತ್ತದೆ. ಇದಕ್ಕೆ ಸಾಕ್ಷಿ ಅವರು “23 ಗೀತನಾಟಕ(ರೂಪಕ)”ಗಳನ್ನು ರಚಿಸಿರುವುದು. ಇವುಗಳಲ್ಲಿ ಒಂದು ಸತ್ಯಾಯನ ಹರಿಶ್ಚಂದ್ರ.

ಡಿಕನ್ಸ್ಟ್ರ ಕ್ಷನ್:

“ಡಿ-ಕನ್‌ಸ್ಟ್ರಕ್ಷನ್” ಎಂಬುದೊಂದು ಸಿದ್ಧಾಂತ. ವರ್ತಮಾನಕ್ಕೆ ಹೊಂದಿಕೆಯಾಗುವಂತೆ ಹಳೆಯ ನಿಲುವುಗಳಿಗೆ ಹೊಸ ರೂಪವನ್ನು ಸುಭದ್ರವಾದ ನೆಲೆಗಟ್ಟಿನಲ್ಲಿ ಕೊಡುವುದು ಈ ಸಿದ್ಧಾಂತದ ಸಾರಾಂಶ. ಇದಕ್ಕೆ ಅತ್ಯುತ್ತಮ ಉದಾಹರಣೆಗಳು ರಾಘವಾಂಕನ ಹರಿಶ್ಚಂದ್ರ ಕಾವ್ಯ ಮತ್ತು ಪು.ತಿ.ನ. ಅವರ “ಸತ್ಯಾಯನ ಹರಿಶ್ಚಂದ್ರ”. ಹರಿಶ್ಚಂದ್ರನನ್ನು ಅತ್ಯಂತ ಗಂಭೀರವಾಗಿ ಪರಿಭಾವಿಸಿದವನು ರಾಘವಾಂಕನೇ. ಶಿವನ ಆರಾಧನೆಯನ್ನು ತನ್ನ ಅಂತರಂಗ ಮತ್ತು ಬಹಿರಂಗದ ನಡೆಯನ್ನಾಗಿಸಿಕೊಂಡು ಸಾಧಾರಣ ವ್ಯಕ್ತಿತ್ವದ ಹರಿಶ್ಚಂದ್ರ ಹೇಗೆ ಘನವ್ಯಕ್ತಿತ್ವವನ್ನು ಸಿದ್ಧಿಸಿಕೊಂಡ ಎಂಬುದನ್ನು ರಾಘವಾಂಕ ತನ್ನ ಹರಿಶ್ಚಂದ್ರ ಕಾವ್ಯದಲ್ಲಿ ಹತ್ತಾರು ಆಯಾಮಗಳಲ್ಲಿ ಬಹಳ ಚೆನ್ನಾಗಿ ಕಟ್ಟಿಕೊಟ್ಟಿದ್ದಾನೆ. ಅದೇ ಕಥೆಯನ್ನೇ ಪು.ತಿ.ನ.ರವರು ಕೈಗೆತ್ತಿಕೊಂಡಿದ್ದಾರೆ. ಶಿವತತ್ತ್ವದ ಪ್ರತೀಕವಾಗಿ ಹರಿಶ್ಚಂದ್ರ ರೂಪುಗೊಂಡದ್ದು ಬರಿಯ “ನೀತಿಬೋಧಕ ಕಥೆ”ಯಲ್ಲ, ಪ್ರತಿಯೊಬ್ಬ ಮನುಷ್ಯನಿಗೂ ಇದು ಸಾಧ್ಯ ಎಂಬುದನ್ನು ಪ್ರತಿಪಾದಿಸಿದ ಕಥೆಯಿದು ಎಂದು ಇದನ್ನು ಪು.ತಿ.ನ. ಪುನರ್ ನಿರೂಪಿಸಿದ್ದಾರೆ.

ಹರಿಶ್ಚಂದ್ರ ಎದುರಿಸಿದ ಸಂದರ್ಭಗಳಾವುವೂ ನಮಗಾರಿಗೂ ಎದುರಾಗದ ಸಂದರ್ಭಗಳಲ್ಲ. ಅನೇಕರು ನಮ್ಮ ವಿಧಿ, ನಮ್ಮ ಕರ್ಮ ಎಂದು ಅವುಗಳನ್ನು ತೆಪ್ಪಗೆ ಸ್ವೀಕರಿಸಿ ಬಿಡುತ್ತಾರೆ. ಗಾಂಧೀಜಿಯಂತಹವರು ಇಂಥ “ಸಂದರ್ಭಗಳು ಹುಟ್ಟುಹಾಕುವ ಪಂಥಾಹ್ವಾನವನ್ನು ಗುರುತಿಸುತ್ತಾರೆ”, ಸ್ವೀಕರಿಸುತ್ತಾರೆ, ಸುತ್ತಲಿನವರಿಗೆ ಮನಗಾಣಿಸುತ್ತಾರೆ, ಪ್ರಜ್ಞಾವಂತ ಪಡೆಯೊಂದನ್ನು ರೂಪಿಸುತ್ತಾರೆ, ಬದುಕಿಗೆ “ಸೃಜನಶೀಲ” ಹೊಸ ಆಯಾಮಗಳನ್ನು ಕೊಟ್ಟುಕೊಳ್ಳುವಂತೆ ಮಾಡುತ್ತಾರೆ. ನಮ್ಮ ಸಾಂಸ್ಕೃತಿಕ “ಪರಂಪರೆಯ ಘನ ಉದ್ದೇಶ”ವೇ ಅದು ಎಂಬುದನ್ನು ಪು.ತಿ.ನ. ಸತ್ಯಾಯನ ಹರಿಶ್ಚಂದ್ರದಲ್ಲಿ “ಸಾವಿನ ಜಿಜ್ಞಾಸೆ ಮತ್ತು ಬದ್ಧತೆಯ ವ್ಯಕ್ತಿತ್ವಗಳ” ಚಿತ್ರಣದ ಮೂಲಕ ಗಮನಕ್ಕೆ ತರುತ್ತಾರೆ.

 ಯಕ್ಷಗಾನ ಮತ್ತು ಸತ್ಯಾಯನ ಹರಿಶ್ಚಂದ್ರ:

ಪು.ತಿ.ನ. ಬರೆದ ಅನೇಕ ಗೀತನಾಟಕಗಳಲ್ಲಿ ರಂಗಕ್ಕೆ ಏರಿದವುಗಳು ಕೆಲವು ಮಾತ್ರ. ಅವುಗಳಲ್ಲಿ ಮುಖ್ಯವಾದವುಗಳು ಎರಡು. ಒಂದು ಗೋಕುಲ ನಿರ್ಗಮನ, ಇನ್ನೊಂದು ಸತ್ಯಾಯನ ಹರಿಶ್ಚಂದ್ರ. “ಸತ್ಯಾಯನ ಹರಿಶ್ಚಂದ್ರ” ಒಂದು ಯಕ್ಷರೂಪಕ. ರಂಗಭೂಮಿಯಲ್ಲಿ ರಂಜಿಸುವ ದೃಶ್ಯ-ಶ್ರಾವ್ಯ ಕಲಾಕೃತಿಗಳಲ್ಲಿ ಯಕ್ಷಗಾನವೂ ಒಂದು. ವೀರರಸ ಪ್ರಧಾನವಾದ ಯಕ್ಷಗಾನದ ಕಥಾವಸ್ತು ಪೌರಾಣಿಕ. ಇತ್ತೀಚೆಗೆ ಅದು ಸಾಮಾಜಿಕ ಮುಖವನ್ನು ಪಡೆದಿದೆ. ಇದರಲ್ಲಿ ಮೊದಲು ಗಾನ, ಆನಂತರ ಗಾನದೊಂದಿಗೆ ನೃತ್ಯ, ನೃತ್ಯದ ನಂತರ ಮಾತು ಮೂಡಿಬರುತ್ತದೆ. ಮಾತು ಒಂದು ರೀತಿಯಲ್ಲಿ ಉಪನ್ಯಾಸದಂತೆ ಅಥವಾ ಚರ್ಚೆಯಂತೆ ಇರುತ್ತದೆ. ಮಾತುಕತೆ ಇಬ್ಬರ ಅಥವಾ ಇಬ್ಬರಿಗಿಂತ ಹೆಚ್ಚಿನವರ ಸಂಗಡ ನಡೆದಾಗ ಒಮ್ಮೊಮ್ಮೆ ಮಾತ್ರ ಸಂಭಾಷಣೆ ನಾಟಕೀಯವಾಗುತ್ತದೆ. ಮಾತು ಆರಂಭವಾದಾಗ ಅಭಿನಯಿಸಿ ತೋರಿಸುವ ಪ್ರಸಂಗದ ಹಿನ್ನೆಲೆಯನ್ನು ಕಲಾವಿದ ಹೇಳಿ ಅನಂತರ ಆ ಕ್ಷಣದಲ್ಲಿ ಮುಖಾಮುಖಿಯಾಗುವ ಸಂದರ್ಭದ ಬಗೆಗೆ ಒಂದು ಸೂಚನೆ ಕೊಡುತ್ತಾನೆ. ಅನಂತರ ಕಥೆ ಮುಂದುವರೆಯುತ್ತದೆ.

ಸಾಮಾನ್ಯವಾಗಿ ನಿರ್ದಿಷ್ಟವಾದ ಸಮಸ್ಯೆಯ ಕೇಂದ್ರದ ಸುತ್ತ ಯಕ್ಷಗಾನದ ಕಥಾ ನಡಿಗೆ ಇರುತ್ತದೆ. ಕೊನೆಯಲ್ಲಿ ಸಮಸ್ಯಾ ಪರಿಹಾರ ಸುಖಾಂತವಾಗಿರಲೀ ದುಃಖಾಂತವಾಗಿರಲೀ ಹಾಗೆ ಯಾಕೆ ಆಯಿತು ಎನ್ನುವ “ವಿಶ್ಲೇಷಣೆ” ಇರುತ್ತದೆ. ಆ ವಿಶ್ಲೇಷಣೆಯಲ್ಲಿ ಹೀಗೆ ಆಗಬೇಕಿತ್ತು, ಹೀಗೆ ಆಗಬಾರದಿತ್ತು ಎನ್ನುವ ಅಂಶಗಳೂ ಇರುತ್ತವೆ. ಈ ಗತಿಯಲ್ಲಿಯೇ ಇರುವ ಸತ್ಯಾಯನ ಹರಿಶ್ಚಂದ್ರದ ಮಾತುಗಳು ಛಂದೋಬದ್ಧ; ಆದ್ದರಿಂದ ಅವುಗಳನ್ನು ಹಾಡಬಹುದು. ಹಾಗೆಯೇ ನೃತ್ಯದಲ್ಲಿ ಅಭಿನಯಿಸಿಯೂ ತೋರಿಸಬಹುದು. ಸಂಭಾಷಣೆಗಳಂತೆ ಮಾತಾಡಿಕೊಳ್ಳಬಹುದು, ಜಿಜ್ಞಾಸೆ ನಡೆಸಬಹುದು, ಸ್ವಗತದಂತೆ ಆಂತರಂಗಿಕ ಸ್ಥಿತಿಗತಿಯ ವಿಶ್ಲೇಷಣೆಯನ್ನು ಸಹ ಮಾಡಿಕೊಳ್ಳಬಹುದು. ಒಂದು ಯಕ್ಷಗಾನ-ಪ್ರಕಾರದ ಪ್ರಾರಂಭದಲ್ಲಿ “ಕೋಡಂಗಿ ಕುಣಿತ” ಇರುತ್ತದೆ. ಪು.ತಿ.ನ. ತಮ್ಮ ಈ ರೂಪಕದಲ್ಲಿ ನಾಂದಿ ಶ್ಲೋಕದ ನಂತರ ಕೋಡಂಗಿಯ ಪಾತ್ರವನ್ನು ರಂಗಕ್ಕೆ ಕರೆತರುತ್ತಾರೆ. ಸಂಸ್ಕೃತ ನಾಟಕದ “ಸೂತ್ರಧಾರನ ಕೆಲಸ, ಯಕ್ಷಗಾನದ ಪ್ರಥಮ ವೇಷಧಾರಿಯ ಕೆಲಸ ಇವುಗಳೆರಡನ್ನು” ಇಲ್ಲಿ ಪು.ತಿ.ನ. ಕೋಡಂಗಿಯಿಂದ ಮಾಡಿಸಿದ್ದಾರೆ. ಈ ಎಲ್ಲ ಅರ್ಥಗಳಲ್ಲಿ “ಸತ್ಯಾಯನ ಹರಿಶ್ಚಂದ್ರ” ಯಕ್ಷರೂಪಕ ಆಗಿದೆ.   

 ನಾಂದಿ:

ಈ “ಸತ್ಯಾಯನ ಹರಿಶ್ಚಂದ್ರ” ಗೇಯ ರೂಪಕವು

“ಭೂ ಭೋಗ ಭುವದ ಸೊಗ ಸುವರ್ ಲೋಕದ ಹರ್ಷ|

ಶೈವ ಗುಣ-ಮೌಲ್ಯಾವಲಂಬಿಯೆನಲರಿತು|

ಕೇಡುಗಳ ಕಾಪೊಳ್ ಇಹ ಕ್ಷೇಮನಿಧಿಯನು ತುಡುಕಿ|

ಇಹಕೆ ಬೆಲೆಗಳ ತರುವ ಮಹಿಮರನು ಕುರಿತು|

ಮನ ಮಾತುಗೊಳ್ಳುತಿರೆ ಪಾತ್ರ ವೇಷವ ಧರಿಸೆ|

ಸಾಕ್ಷಿಯಂದದಿ ಜನತೆ ವೀಕ್ಷಿಸಲ್ ನೆರೆಯೆ|

ಚಾಕ್ಷುಷ ಕ್ರತುವಿದನು ಹದುಳದೊಳು ನಡೆಸೆಂದು|

ವಾಕ್ಪತಿಗೆ ನುತಿಯೆರೆವೆ ಎಡರುಗಳು ಹರಿಯೆ|” ಎಂಬ ನಾಂದಿ ಪದ್ಯದಿಂದ ಆರಂಭವಾಗುತ್ತದೆ.

ಭಾರತೀಯರು ಜಗತ್ತನ್ನು ಭೂಲೋಕ, ಭುವರ್ಲೋಕ, ಸುವರ್ಲೋಕ ಎಂದು ಮೂರಾಗಿ ವಿಭಾಗಿಸಿದ್ದಾರೆ. ಇವುಗಳ ಒಳಿತು ಮೌಲ್ಯವನ್ನು ಅವಲಂಬಿಸಿದೆ. “ಕೇಡುಗಳನ್ನೂ ರಕ್ಷೆಯಾಗಿಸಿಬಿಡುವ ಕ್ಷೇಮನಿಧಿ”ಯೇ ಈ ಮೌಲ್ಯ. ಈ “ಮೌಲ್ಯ” ಕೇವಲ ಮನಸ್ಸಿನ ಮಾತುಗಳಲ್ಲ, ವೇಷವನ್ನು ಧರಿಸಿ ರಂಗದ ಮೇಲೆ ಕಾಣಿಸಿಕೊಳ್ಳುವ “ಪಾತ್ರಗಳು”. ಈ ಪಾತ್ರಗಳು ಹೀಗೇ ಇವೆ ಎಂಬುದಕ್ಕೆ ಅವರನ್ನು ನೋಡುವ ವೀಕ್ಷಕರೇ ಸಾಕ್ಷಿಗಳು. ಮೌಲ್ಯದ ಪ್ರತೀಕಗಳಾಗಿ ಕಾಣಿಸಿಕೊಳ್ಳುವುದು ಮತ್ತು ಅವರ ನಡೆ ನುಡಿಗಳಿಗೆ ಸಾಕ್ಷೀಭೂತರಾಗುವುದು ಎರಡೂ “ಚಾಕ್ಷುಷ ಯಜ್ಞ”. ಮೌಲ್ಯಾಧಾರಿತ ನಡೆ ಮತ್ತು ಅಂತಹ ನಡೆಯನ್ನು ಗೌರವಿಸುವುದು ಎರಡೂ “ಯಜ್ಞ”ವೇ= ಸಂಕಲ್ಪವೇ, ದೃಢ ವ್ರತವೇ; ಮನೋ ಬುದ್ಧಿ ದೇಹಗಳನ್ನು ಅದಕ್ಕಾಗಿ ಮೀಸಲಿರಿಸುವ “ಬದ್ಧತೆಯೇ!” – ಎಂದೆನ್ನುವ ಈ ನಾಂದಿ ಪದ್ಯದ ಮೂಲಕ ಹರಿಶ್ಚಂದ್ರ ಕೇವಲ ಪುರಾಣ ಪುರುಷ ಅಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಾರೆ ಪು.ತಿ.ನ.

ಕೋಡಂಗಿ:

ಈ ಗೇಯ ರೂಪಕ ದೃಶ್ಯಾತ್ಮಕವಾಗಿ ಕೋಡಂಗಿಯ ಪ್ರವೇಶದಿಂದ ಆರಂಭವಾಗುತ್ತದೆ.

“ದಿವದಿಂದಿಳಿದೆನು ನಾ ಕೋಡಂಗಿ| ದೇವರೆ ತೊಡಿಸಿದರೆನಗೀ ಅಂಗಿ|

ಕೊಕ್ಕಿನ ಕುಲಾವಿ ಸೊಪ್ಪಿನ ಬರಲು| ಮನ ಮನವ ಬಡಿದು ಕಸವ ಗುಡಿಸಲು|

ಛಟ ಛಟ ಸೊಯ್ ಸೊಯ್ ಗುನ್ನರೆ ಗುಂ ಗುಂ|

ಭೂರಂಗವಿದಾಗಲಿ ಶಿವರಂಗಂ| ಹಸಗೈಯಲಿ ಕಣ್, ಕಿವಿಯ ಮೃದಂಗಂ|

ಆಗಲಿ ಭವಭಂಗಂ ರಸಸಂಗಂ| ಅಂತಶ್ಶಿವ ಬಿಜಗೈಯಲಿ ಹೊರಗೆ|

ಸಾಕ್ಷಿಯಕ್ಷಿಯಿಂದಾಟವ ಬೆಳಗೆ| ಆತನೊಪ್ಪಿತಕೆ ಯಕ್ಷರೂಪಕ|

ಸರ್ವ ಋದ್ಧಿಕರ ಮೌಲ್ಯೋದ್ಬೋಧಕ| ಜರುಗುವುದೈ……..” ಎಂದು ಕೋಡಂಗಿ ತನ್ನನ್ನೂ, ನಾಟಕದ ಉದ್ದೇಶವನ್ನೂ ಪರಿಚಯಿಸುತ್ತಾನೆ.

ಈ ಕೋಡಂಗಿ ಕೋಡನ್ನು ಅಂಗಿಯನ್ನಾಗಿ ಹೊಂದಿರುವವನು. “ಕೋಡು” ಎಂದರೆ ಕೊಂಬು. ಇದಕ್ಕೆ ಎರಡು ಕೆಲಸ – ಒಂದು “ಆತ್ಮರಕ್ಷಣೆ”, ಇನ್ನೊಂದು ತಾನು “ಮಿಗಿಲು” ಎನ್ನುವ ಧ್ವಜ ಆಗುವುದು. ಈ ಕೋಡಂಗಿಯು ದೇವರು ತೊಡಿಸಿದ ಅಂಗಿ ತೊಟ್ಟಿದ್ದಾನೆ. ಅವನು ಮಿಗಿಲು ಎಂದು ಧ್ವಜ ಹಾರಿಸುವುದು “ದೈವತ್ವ”ವನ್ನು. ಅವನು ಬಂದಿರುವುದು ದಿವದಿಂದ. ದಿವ ಎಂದರೆ ಜ್ಯೋತಿ ಎಂದೂ ಅರ್ಥವಿದೆ, ಸ್ವರ್ಗ ಎಂದೂ ಅರ್ಥವಿದೆ. ಅಂದರೆ ಅವನು “ಬೆಳಕಿನ ಸ್ವರ್ಗ”ದ ಅಸಾಮಾನ್ಯವಾದ ಅಪರಿಮಿತವಾದ ಸುಖದ ಮಾರ್ಗದರ್ಶಕ “ಪ್ರತಿನಿಧಿ”ಯಾಗಿ ಬಂದಿದ್ದಾನೆ. ಅಂತಹ ಸುಖ ಸುಮ್ಮನೆ ದೊರಕುವುದಿಲ್ಲ. ಅದಕ್ಕಾಗಿ ಮನಸ್ಸನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು. ನಿರ್ದಾಕ್ಷಿಣ್ಯವಾಗಿ ಮನಸ್ಸಿನ ಎಲ್ಲ ಕಸ ಕಡ್ಡಿಗಳನ್ನು ಛಟ್ ಛಟ್, ಸೊಯ್ ಸೊಯ್ ಎಂದು ಗುಡಿಸಿ ಬಿಸಾಕಬೇಕು. ಕೋಡಂಗಿ ಅದರ ಸೂಚಕವಾಗಿ ಬರಲನ್ನು ತಂದಿದ್ದಾನೆ. ಅವನು ತಂದಿರುವ “ಬರಲು”(=ಪೊರಕೆ) “ಸೊಪ್ಪಿನದು”, ಜೀವೋತ್ಕರ್ಷ ಸೂಚಕವಾದದ್ದು.

ಬರಲಿನ ಒಂದು ಕೆಲಸ ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳುವುದು. ಹೊರಗಿನ ಕಸ ಕಡ್ಡಿಗಳನ್ನು ತೆಗೆಯುವುದು ಯಾಕೆ? ಅದರ ಅಂತಿಮ ಉದ್ದೇಶ “ಭವದ ರಂಗ”ವನ್ನು “ಶಿವ(=ಮಂಗಳ)ರಂಗ”ವನ್ನಾಗಿಸುವುದು. ಅದು ಹೇಗೆ ಸಾಧ್ಯ? ಕಣ್ಣು ಹಸನಾದುದನ್ನು ಕಾಣುವಂತಾದಾಗ; ಭವವು ಭಂಗಗೊಳ್ಳುವುದಕ್ಕೆ, “ರಸದ(=ಪರಬ್ರಹ್ಮನ)ಸಂಗ”ದಲ್ಲಿ ಇರುವುದಕ್ಕೆ ಕಿವಿ ಮೃದಂಗ(=ಪಕ್ಕವಾದ್ಯ) ಆದಾಗ; ಒಳಿತಿನ ಭಾವವಾದ ಹರನಿಗೆ “ಸಾಕ್ಷಿಯಾಗಿ”, ಪರಮ ವಾಸ್ತವಿಕತೆಯ ಪ್ರತೀಕವಾಗಿ “ಅಂತರಂಗದ ಶಿವ” ಬಿಜಯಗೈದಾಗ, ಬಹಿರಂಗದ ಒಳಿತಾದಾಗ”; ಹಾಗೆ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡಾಗ. ಈ ಅರ್ಥದಲ್ಲಿ “ಸರ್ವ ಋದ್ಧಿಕರ ಮತ್ತು ಮೌಲ್ಯ ಉದ್ಬೋಧಕ”ವಾದ ಈ ಆಶಯವನ್ನು ಹೊಂದಿರುವ ಯಕ್ಷರೂಪಕ ಇದು ಎಂದು ಕೋಡಂಗಿಯ ಮಾತುಗಳಿಂದ ಪು.ತಿ.ನ. “ಸತ್ಯಾಯನ ಹರಿಶ್ಚಂದ್ರ” ರೂಪಕವನ್ನು ಪರಿಚಯಿಸುತ್ತಾರೆ.

ಸತ್ಯಾಯನ:

ಪು.ತಿ.ನ.ರವರು ಈ ರೂಪಕವನ್ನು ಸತ್ಯಾಯನ ಎಂದು ಗಮನಿಸುತ್ತಾರೆ. ಸತ್ಯದ ಮಾರ್ಗ ಸತ್ಯಾಯನ. ರಾಘವಾಂಕ ತನ್ನ ಹರಿಶ್ಚಂದ್ರ ಕಾವ್ಯದಲ್ಲಿ ಹರನೆಂಬದೇ ಸತ್ಯ, ಸತ್ಯವೆಂಬುದೇ ಹರನು ಎನ್ನುತ್ತಾನೆ. ಅವನಿಗೆ “ಸತ್ಯ” ಎಂಬುದು ಮಾರ್ಗವಲ್ಲ, ಅದೊಂದು “ನಿಶ್ಚಿತವಾದ ನೆಲೆ”. ಸಂಕಷ್ಟಗಳಿಗೆ ತುತ್ತಾದರೂ ಸುಳ್ಳನ್ನಾಡಲು ಒಪ್ಪದ ಹರಿಶ್ಚಂದ್ರನ ವ್ಯಕ್ತಿತ್ವದಿಂದ ಪ್ರಭಾವಿತರಾದ ಗಾಂಧೀಜಿ ತಮ್ಮ ಆತ್ಮಕಥೆಯನ್ನು ಸತ್ಯದೊಂದಿಗಿನ ನನ್ನ ಪ್ರಯೋಗಗಳು ಎಂದು ಹೆಸರಿಸುತ್ತಾರೆ. ಅವರಿಗೆ “ಪ್ರಯೋಗಕ್ಕೆ ಒಳಪಡುವ ಮೂಲವಸ್ತು ಸತ್ಯ”. ಅದು ರೂಪಾಂತರಕ್ಕೆ ಒಳಪಡಬಲ್ಲುದು. ಪು.ತಿ.ನ. ಹರಿಶ್ಚಂದ್ರನ ಬಗೆಗಿನ ತಮ್ಮ ಕೃತಿಯನ್ನು ಯಕ್ಷರೂಪಕ ಎಂದು ಗಮನಿಸಿ ರಾಘವಾಂಕ ಮತ್ತು ಗಾಂಧೀಜಿ ಇಬ್ಬರೂ ಪರಿಕಲ್ಪಿಸಿಕೊಂಡ ಸತ್ಯವನ್ನು ಸಮನ್ವಯಿಸಲು ಪ್ರಯತ್ನಿಸಿದ್ದಾರೆ. ಯಕ್ಷ ಎನ್ನುವುದಕ್ಕೆ “ಖೇಚರ=ಗಗನ ಸಂಚಾರಿ” ಎಂಬ ಅರ್ಥವೂ ಇದೆ.

ಆಟವನ್ನು ಬೆಳಗಲು “ಅಂತಶ್ಶಿವನು ಬಿಜಯಗೈಯಲಿ ಹೊರಗೆ” ಎನ್ನುತ್ತಾನೆ ಕೋಡಂಗಿ. ಪು.ತಿ.ನ. ಅವರಿಗೆ ಶಿವ ಅಂತರಂಗದಲ್ಲಿ ಯಾವಾಗಲೂ ಇರುವವನು. ಆಗ ಅವನಿಗೆ ರೂಪಗಳು ಇರುವುದಿಲ್ಲ. ಅವನು ಹೊರಗೆ ಬಂದರೆ ಬಂದ ಕಾಲ ದೇಶಗಳಿಗನುಗುಣವಾಗಿ ಅವನಿಗೆ ರೂಪಗಳು ಉಂಟಾಗುತ್ತವೆ. ಬಿಜಯಗೈಯಬೇಕು ಎನ್ನುವ ಶಬ್ದವನ್ನು ರಾಜ ಮಹಾರಾಜರಂಥ ಉನ್ನತ ಸ್ತರದಲ್ಲಿರುವವರನ್ನು ಬರಮಾಡಿಕೊಳ್ಳುವಾಗ ಬಳಸುತ್ತೇವೆ. ಇದು ಬರಮಾಡಿಕೊಳ್ಳುವವರ ಸಂಭ್ರಮ, ಗೌರವಾದರ, ವಿನಯವಂತಿಕೆ-ವಿಧೇಯತೆ, ಎಚ್ಚರ-ಜಾಗೃತಿ, ಹಿನ್ನೋಟ-ಮುನ್ನೋಟಗಳ ವೈಭವವನ್ನು ಸೂಚಿಸುತ್ತದೆ. ಹೀಗೆ ಪು.ತಿ.ನ. ಹರಿಶ್ಚಂದ್ರನ ಕಥಾನಕವನ್ನು ಗಮನಿಸುವ ರೀತಿ ವಿಭಿನ್ನ.

ಕಲಾಕೃತಿ:

ರೂಪಕದ ಪ್ರಾರಂಭದಲ್ಲಿಯೇ ಹಳೆ ಕತೆ ಎಂದು ಬೇಸರಿಸದಿರಿ, ಈ ಜಗತ್ತಿನಲ್ಲಿ ಬೇರೆ ಬೇರೆ ರೀತಿಯ ಜೋಡಣೆಯ ಹೊರತಾಗಿ ಹೊಸತು ಎನ್ನುವುದು ಇಲ್ಲವೇ ಇಲ್ಲ. ಬೇರೆ ಬೇರೆ ರೀತಿಯ “ಆಕರ್ಷಕ ಜೋಡಣೆಯೇ ಕಲೆಯ ಐಸಿರಿ” ಎನ್ನುತ್ತಾರೆ ಪು.ತಿ.ನ. ಅವರಿಗೆ ಕೃತಿಯೊಂದು ಕಲಾಕೃತಿಯಾದಾಗಲೇ ಅದಕ್ಕೆ ಮನ್ನಣೆ ದೊರೆಯುವುದು; ಯಾವ ಕೃತಿಯು ರಸಾನುಭೂತಿಯನ್ನುಂಟು ಮಾಡುತ್ತದೆಯೋ ಅದು ಕಲಾಕೃತಿ. ಇದು ಅವರ ಕಾವ್ಯ ಮೀಮಾಂಸೆಯ ಒಂದು ಮುಖ್ಯ ಸಾರ. ಈ ರೂಪಕದ ಪ್ರಾರಂಭದ ರಂಗಸ್ಥಲ ಸ್ಮಶಾನ. ಮಸಣದ ರುದ್ರೋಪಾಸಿಗಳು ಒಂದು ಕಡೆ, ಭೀಕರ ಬೆಂತರಗಳ ಪಡೆ ಇನ್ನೊಂದು ಕಡೆ ನವ ವೇಷದಲ್ಲಿ ನವ ನರ್ತನ ಗಾನ ಮಾಡುತ್ತಿದ್ದಾರೆ ಎನ್ನುತ್ತಾನೆ ಕೋಡಂಗಿ. ಮಸಣದಲ್ಲಿಯ “ರುದ್ರನ ಉಪಾಸಕರು” ಮೃತ್ಯುಂಜಯನಲ್ಲಿ ಲೀನವಾಗ ಬಯಸುವವರು. “ಬೇತಾಳಗಳ ಕೆಲಸ” ದಿನನಿತ್ಯದ ಪ್ರಾಪಂಚಿಕ ಆಸೆ ಆಕಾಂಕ್ಷೆಗಳ ಕಡೆಗೆ ನಮ್ಮನ್ನು ಸೆಳೆಯುವುದು. ಹಾಗೆ ಸೆಳೆಯಲು ಅವು ಹೊಸ ಹೊಸ ವೇಷ ಧರಿಸುತ್ತವೆ, ಹೊಸ ಹೊಸ ರಾಗಗಳನ್ನು ಹಾಡುತ್ತವೆ. ಈ ಎರಡೂ ಪಡೆಗಳ ಆಶಯ ವಿಭಿನ್ನ ಆಗಿರುವುದರಿಂದ ಅವುಗಳ ನಡುವೆ ತಿಕ್ಕಾಟ ನಡೆಯುತ್ತಿರುತ್ತದೆ. ಆಗ ಸಹಜವಾಗಿ “ವೀರ ರಸವೇ ಪ್ರಧಾನ”.  ಹರಿಶ್ಚಂದ್ರ ರಾಜನಾಗಿ ಕ್ಷತ್ರಿಯ. ಅವನ ವ್ಯಕ್ತಿತ್ವದ ಸಾರ ಸಹಜವಾಗಿ ವೀರರಸವೇ.

ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಎಲ್ಲಾ ರಸಗಳು ಅಂತಿಮವಾಗಿ ಶಾಂತ ರಸವೇ ಆಗಿಬಿಡುತ್ತವೆ, ಅದು ಬ್ರಹ್ಮಾನುಭೂತಿಯೇ ಆಗಿರುತ್ತದೆ. ಹರ ಇಂತಹ ಬ್ರಹ್ಮಾನುಭೂತಿಗೆ ಪ್ರತೀಕ. ಈ ಅರ್ಥದಲ್ಲಿ ರಾಘವಾಂಕ ಹೇಳುವಂತೆ “ಸತ್ಯವೆಂಬುದೇ ಹರ, ಹರನೆಂಬುದೇ ಸತ್ಯ”. ಪು.ತಿ.ನ. ಅವರಿಗಾದರೋ “ಸೂಳ್ ಋತವಾದ ಆತ್ಮಗಾಂಭೀರ್ಯವೇ ವೀರರಸವಾಗಿ ಉಳಿದ ರಸಗಳೆಲ್ಲ ಜಾನ=ಜ್ಞಾನಕ್ಕೆ ಅಧೀನ ಆದಾಗ ಎಲ್ಲಾ ದೃಶ್ಯಗಳ ಸಾರವೂ ಮೌಲ್ಯೋದಯವೇ” (ಪುತಿನ ಸಂಚಯ, ಪು.೧೮೪) ಆಗಿರುತ್ತದೆ. ತಮ್ಮ ಕೃತಿಯು ನಡೆ ಮತ್ತು ನುಡಿಗಳೆರಡೂ ಒಳಿತೇ ಆಗಿಬಿಡುವ ಬೀರದ ಮೂಲಕ ಮೌಲ್ಯೋದಯವನ್ನು ತೋರಿಸುವ ರಸಾನುಭೂತಿಯನ್ನುಂಟು ಮಾಡುತ್ತದೆ ಎಂದು ಪು.ತಿ.ನ. ಕೋಡಂಗಿಯಿಂದ ಹೇಳಿಸುತ್ತಾರೆ.

ರಾಘವಾಂಕನ ಹರಿಶ್ಚಂದ್ರ ಕಾವ್ಯದ ರೀತಿಯಲ್ಲೇ ಈ ರೂಪಕದ ನಿರ್ವಹಣೆಯೂ ಇದೆ. ಹರಿಶ್ಚಂದ್ರ ಕಾವ್ಯದಲ್ಲಿ ಶಿವನಿಗೂ ಹರಿಶ್ಚಂದ್ರನಿಗೂ ಸಂಬಂಧ ಬರುವುದು ಹರಿಶ್ಚಂದ್ರ ಶಿವಾರಾಧಕ ಆಗಿರುವುದರಿಂದ. ಸತ್ಯಾಯನ ಹರಿಶ್ಚಂದ್ರದಲ್ಲಿ ಶಿವ ವಿಶ್ವವನ್ನು ಅನುಗ್ರಹಿಸಬೇಕು ಎಂದುಕೊಂಡಿರುವುದರಿಂದ ಸಂಬಂಧ ರೂಪುಗೊಳ್ಳುತ್ತದೆ. ಇಲ್ಲಿ ಶಿವ ಇಂದ್ರನ ಸಭೆಗೆ ಮುನಿಗಳೊಂದಿಗೆ ಬಂದುದರಿಂದ ಆ ಸಭೆ ದಿವ್ಯರ ಸಭೆ ಆಗಿಬಿಟ್ಟಿದೆ. ಸುರರು ಅತಿಶಯವಾದ, ಅಪರಿಮಿತವಾದ, ವೈವಿಧ್ಯಮಯವಾದ ಭೋಗಿಗಳು. ಅವರ ಸಭೆಗೆ ಶಿವ ಬಂದಾಗ ಭೋಗ ಯೋಗವಾಗಿಬಿಡುತ್ತದೆ. ಇಂತಹ ಸಭೆಗೆ ಇಂದ್ರಿಯಜ್ಞಾನ ಪ್ರಾಧಾನ್ಯತೆಯುಳ್ಳ ಭೂಮಿಯಿಂದ ಅದರ ಇತಿಮಿತಿಗಳನ್ನು ಮೀರಿ ಬರಬಹುದಾದವರು ಯಾರಾದರೂ ಇದ್ದಾರೆಯೇ ಎಂಬ ಶಿವನ ಪ್ರಶ್ನೆ ಅತ್ಯಂತ ಸಹಜ. ಆ ಪ್ರಶ್ನೆಯೇ ಅಂತಹ ಸಾಧ್ಯತೆ ಮನುಷ್ಯರಿಗೆ ಇದೆ ಎನ್ನುವ ಉತ್ತರವನ್ನೂ ಸೂಚಿಸುತ್ತದೆ. ಹೀಗೆ ರಾಘವಾಂಕ ಇಂದ್ರನ ಸಭೆಯಲ್ಲಿ ಹರಿಶ್ಚಂದ್ರನ ಪ್ರಸ್ತಾಪ ಮಾಡಿಸುವುದಕ್ಕೆ ಪು.ತಿ.ನ. ಸತ್ಯಾಯನ ಹರಿಶ್ಚಂದ್ರದಲ್ಲಿ ಹೆಚ್ಚಿನ ವ್ಯಾಪ್ತಿಯನ್ನು ಕೊಟ್ಟಿದ್ದಾರೆ.

ಜಿಜ್ಞಾಸೆ:

ರಾಘವಾಂಕನಂತೆ ಪು.ತಿ.ನ. ಸಹ ವಸಿಷ್ಠ ಕೌಶಿಕರ ನಡುವಿನ ಜಿಜ್ಞಾಸೆಯಾಗಿಯೇ ಸಮಸ್ಯೆಯನ್ನು ಮುಂದಿಡುತ್ತಾರೆ. ಪು.ತಿ.ನ. ಅವರಿಗೂ ಮುಖ್ಯ ಪಾತ್ರಗಳು ವಿಶ್ವಾಮಿತ್ರ ಮತ್ತು ಹರಿಶ್ಚಂದ್ರರೇ. ಇಬ್ಬರೂ ಕ್ಷತ್ರಿಯರೇ. ವಸಿಷ್ಠ ಹೇಗೆ ಬ್ರಹ್ಮಜ್ಞಾನಿಗಳಾದರೋ ಗೊತ್ತಿಲ್ಲ. ಅದರ ಪ್ರಸ್ತಾಪವು ವಿಶೇಷವಾಗಿ ಬರುವುದಿಲ್ಲ. ಆದರೆ ಕೌಶಿಕ ಬ್ರಹ್ಮಜ್ಞಾನಿಯಾಗಲು ಮಾಡಿದ ಸಾಹಸ ಮಾತ್ರ ವಿಶೇಷವಾಗಿಯೇ ಪುರಾಣಗಳಲ್ಲಿ ಪ್ರಸ್ತಾಪಿತವಾಗಿದೆ. ಅವನು ಭೂ-ನೆಲೆಯಿಂದ ಬ್ರಹ್ಮತ್ವದ ನೆಲೆಗೆ ತನ್ನ ವ್ಯಕ್ತಿತ್ವವನ್ನು ವಿಕಸಿಸಿಕೊಂಡವನು. ಅದರಿಂದ ಸಹಜವಾಗಿ ಅವನನ್ನೇ ಶಿವ ಕೇಳುವುದು ದಿವ್ಯರ ಸಭೆಯಲ್ಲಿ ಸ್ಥಾನ ಪಡೆಯಬಹುದಾದವರು ಭೂಮಿಯಲ್ಲಿ ಯಾರಿದ್ದಾರೆ ಎಂದು. ಕ್ಷತ್ರಿಯನಾದ ಅವನಿಗೆ ತನ್ನ ಸಿದ್ಧಿಯ ಬಗೆಗೆ ಸಹಜವಾಗಿ ಪ್ರತ್ಯೇಕವಾದ ಗೌರವಾದರ. ಅವನು ತನ್ನ ಪರಿಶ್ರಮದ ಅಳತೆಯಲ್ಲಿಯೇ ಭೂಲೋಕದವರನ್ನು ಕಂಡಾಗ ಅವನಿಗೆ ದಿವ್ಯತ್ವದ ಮಟ್ಟಕ್ಕೆ ಏರಬಹುದಾದವರು ಯಾರೂ ಕಾಣದೆ ಇದ್ದರೆ ಅದೂ ಸಹಜವೇ. ವಸಿಷ್ಠ ಅಂತಹವನೊಬ್ಬ ಇದ್ದಾನೆ, ಅವನೇ ಹರಿಶ್ಚಂದ್ರ ಎಂದಾಗ ಹುಸಿಕ, ಸುತಮೋಹಿ, ಭವಿಯಾದ ಹರಿಶ್ಚಂದ್ರ ಅದು ಹೇಗೆ ದಿವ್ಯರ ಸಾಲಿಗೆ ಸೇರುತ್ತಾನೆ, ಸಾಧ್ಯವೇ ಇಲ್ಲ, ಅದನ್ನು ಪ್ರಮಾಣೀಕರಿಸುತ್ತೇನೆ ಎಂದು ವಿಶ್ವಾಮಿತ್ರ ಸಾರುತ್ತಾನೆ. ಆನಂತರ ಮುಂದಿನ ದೃಶ್ಯಾವಳಿಗಳು ತೆರೆದುಕೊಳ್ಳುತ್ತಾ ಹೋಗುತ್ತವೆ.

ಕೌಶಿಕನ ಒಂದು ದೌರ್ಬಲ್ಯ “ವಿವೇಚನಾರಹಿತ ಮರುಕ” ಎನ್ನುವುದರೊಂದಿಗೆ ಅದು ವಾಸ್ತವವನ್ನು ಅರಿಯಲು ಅವನಿಗೆ ತೊಡಕಾಗುತ್ತದೆ ಎಂದು ವಸಿಷ್ಠ ವಿಶ್ವಾಮಿತ್ರನನ್ನು ಎಚ್ಚರಿಸುತ್ತಾರೆ. ಆ ಮೂಲಕ ವಿಶ್ವಾಮಿತ್ರ ತನ್ನ ಛಲದ ನಡೆಯನ್ನು ಹೇಗೆ ರೂಪಿಸಿಕೊಳ್ಳಬೇಕು ಎಂದು ಮಾರ್ಗದರ್ಶನ ಮಾಡುತ್ತಾನೆ. ಹಿಂದೆ ಹರಿಶ್ಚಂದ್ರ ತನ್ನ ಜಲೋದರ ರೋಗವನ್ನು ನಿವಾರಿಸಿಕೊಳ್ಳಲು ತನ್ನ ಮಗನನ್ನೆ ಬಲಿಕೊಡುವುದಾಗಿ ಮಾತು ಕೊಟ್ಟು ದೈವದಿಂದ ರೋಗಮುಕ್ತನಾಗಿದ್ದ. ಆದರೆ ಮಾತಿಗೆ ತಪ್ಪಿದ. ಅದರಿಂದಾದ ದೈವಕೋಪದಿಂದ ಪಾರಾಗಲು ಒಂದು ಯಾಗವನ್ನು ಮಾಡಿದ. ಅದಕ್ಕೆ ತನ್ನ ಮಗನ ಬದಲಿಗೆ ಇನ್ನೊಬ್ಬನನ್ನು ಬಲಿ ಪಶುವನ್ನಾಗಿ ಮಾಡಿಕೊಂಡ. ಆ ಯಾಗವನ್ನು ನಡೆಸಿಕೊಡಲು ವಿಶ್ವಾಮಿತ್ರನೂ ಬಂದಿದ್ದ. ಬಲಿಪಶುವಾಗಿದ್ದ ಹುಡುಗನ ಬಗೆಗೂ ಮತ್ತು ಹರಿಶ್ಚಂದ್ರನ ಬಗೆಗೂ ವಿಶ್ವಾಮಿತ್ರನಿಗೆ ಮರುಕ. ಇಬ್ಬರನ್ನೂ ಅವನು ತನ್ನ ತಪೋಬಲದಿಂದ ಪಾರುಮಾಡುತ್ತಾನೆ.

“ಮರುಕ ತೋರುವವನದು ಮತ್ತು ಮರುಕಕ್ಕೆ ಒಳಪಡುವವನದು ವಿಭಿನ್ನಸ್ತರಗಳು”. ಮರುಕ ತೋರುವವನು ಮೇಲಿನ ಸ್ತರದಲ್ಲಿ ನಿಲ್ಲುತ್ತಾನೆ, ಮರುಕಕ್ಕೆ ಒಳಪಡುವವನು ಕೆಳಸ್ತರದಲ್ಲಿರುತ್ತಾನೆ. ಅವನಿಗೆ ಸ್ವತಂತ್ರವಾಗಿ ತನ್ನ ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಸಾಮರ್ಥ್ಯ, ಸಾಧ್ಯತೆ ಇರುವುದಿಲ್ಲ ಎಂದು ಮರುಕ ತೋರುವವನು ತಿಳಿದಿರುತ್ತಾನೆ, ಹಾಗೆ ತಾನು ತಿಳಿದದ್ದು ಸತ್ಯ ಎಂದು ನಂಬಿರುತ್ತಾನೆ. ಅವನು ತೋರುವ ಮರುಕದ ಲಾಭವನ್ನು ಪಡೆದಿರುವವರು ಅವನಿಂದ ತಾವು ಉಪಕೃತ ಎಂದು ಸಹಜವಾಗಿ ಕೃತಜ್ಞತೆ ತೋರುತ್ತಾರೆ. ಇದರಿಂದಾಗಿ ಮರುಕಕ್ಕೆ ಒಳಗಾದವರ ನಿಜ-ಸತ್ವ ಏನೆಂಬುದು ಮರುಕ ತೋರುವವನಿಗೆ ಗೊತ್ತಾಗದಿರುವ ಸಾಧ್ಯತೆ ಇರುತ್ತದೆ. ಹೀಗೆ ಮರುಕ ವಿವೇಚನಾರಹಿತ. ಇದನ್ನು ಸೂಚಿಸುವುದರ ಮೂಲಕ ವಿಶ್ವಾಮಿತ್ರನಿಗೆ ಅವನು ಏನು ತಿಳಿದಿದ್ದಾನೆಯೋ ಅದನ್ನು ತಾನೇ ಸ್ವತಃ ಒರೆಗೆ ಹಚ್ಚಿಕೊಳ್ಳುವಂತೆ ವಸಿಷ್ಠ ಮಾಡುತ್ತಾನೆ ಎಂದು ಪು.ತಿ.ನ. ಹೊಸ ದೃಷ್ಟಿಕೋನದಿಂದ ಹರಿಶ್ಚಂದ್ರನ ಪ್ರಸಂಗವನ್ನು ವಿಶ್ಲೇಷಿಸುತ್ತಿದ್ದಾರೆ.

ದಿವ್ಯತೆಯನ್ನು ಪಡೆಯುವುದಕ್ಕೆ ಶಮ, ದಮಗಳುಳ್ಳ ತಪಸ್ಸನ್ನೇ ಆಚರಿಸಬೇಕು ಎನ್ನುವುದನ್ನು ಇಲ್ಲಿ ಪು.ತಿ.ನ. ನಿರಾಕರಿಸುತ್ತಿದ್ದಾರೆ. ರಾಜಸೂಯ ಯಾಗ ಕ್ಷತ್ರಿಯನ ಅತಿಶಯವಾದ ತ್ಯಾಗ, ವೈರಾಗ್ಯ, ಸುಸ್ಥೈರ್ಯ, ದೈವಭಕ್ತಿಗಳಿಗೆ ಪ್ರತೀಕ ಎನ್ನುತ್ತಿದ್ದಾರೆ. ಒಬ್ಬೊಬ್ಬರಿಗೆ ಒಂದೊಂದು ಮಾರ್ಗ ಎಂದೂ ಸೂಚಿಸುತ್ತಿದ್ದಾರೆ. “ಸ್ಪರ್ಧೆ ಯಾವಾಗಲೂ ಬಾಹುಬಲ ಮತ್ತು ಮನೋಬಲಗಳ ನಡುವೆಯೇ” ಎಂಬುದನ್ನೂ ಪ್ರಸ್ತಾಪಿಸುತ್ತಿದ್ದಾರೆ.

ಜೀವ ಕಾಮ:

ಪು.ತಿ.ನ. ಅವರ ಯಕ್ಷರೂಪಕದಲ್ಲಿ ಹರಿಶ್ಚಂದ್ರನ ವಿಷಯ ಪ್ರಸ್ತಾಪಿತವಾಗುವುದು ಅವನು ರುದ್ರಭೂಮಿಯ ಚಂಡಾಲನ ದಾಸನಾಗಿ ಅವನು ಹೇಳಿದಂತೆ ಕೇಳುವ ದುಸ್ಥಿತಿಗೆ ಇಳಿದಿರುವ ಘಟ್ಟದಲ್ಲಿ. ಅಲ್ಲಿಯವರೆಗಿನ ಘಟನಾವಳಿಗಳನ್ನೆಲ್ಲಾ ಸಂಕ್ಷಿಪ್ತವಾಗಿ ಹೇಳಿ ಮುಗಿಸಿಬಿಡುತ್ತಾರೆ ಪು.ತಿ.ನ. ವಿಶ್ವಾಮಿತ್ರ ಹರಿಶ್ಚಂದ್ರನಿಂದ ಹೇಗೆ ಎಲ್ಲವನ್ನೂ ಪಡೆದು ಹರಿಶ್ಚಂದ್ರನನ್ನು ನಿರ್ಗತಿಕನನ್ನಾಗಿ ಮಾಡಿದ; ಹೆಂಡತಿ, ಮಗ ಮತ್ತು ತನ್ನನ್ನೂ ಮಾರಾಟಮಾಡಿಕೊಂಡು ಹೇಗೆ ದುಸ್ಥಿತಿಗೆ ಇಳಿದ ಎನ್ನುವುದು ಪು.ತಿ.ನ. ಅವರಿಗೆ ಮುಖ್ಯ ಅಲ್ಲ. ಕ್ಷತ್ರಿಯನಾದವನಿಗೆ ಏಳು ಬೀಳುಗಳು ಅತ್ಯಂತ ಸಹಜ ಸಾಧ್ಯತೆ. ರಾಜ್ಯರಕ್ಷಣೆಗಾಗಿ ಸುಳ್ಳು ಹೇಳುವುದು ಸಹ ಸಹಜ ಸಾಧ್ಯತೆ. ಆದರೆ ವೈಯಕ್ತಿಕ ಸುಖ ಸೌಲಭ್ಯಕ್ಕಾಗಿ ಅವನು ಸುಳ್ಳು ಹೇಳುವಂತೆ ಮಾಡಬಹುದಾ ಎಂದು ವಿಶ್ವಾಮಿತ್ರ ಯೋಚಿಸುವುದು ಪು.ತಿ.ನ. ಅವರಿಗೆ ಮುಖ್ಯ. ಪ್ರತಿಯೊಬ್ಬರಿಗೂ ಸಹಜವಾಗಿ ಅವರವರ “ಸ್ವ-ಅಸ್ತಿತ್ವ ಅತ್ಯಂತ ಮುಖ್ಯ”ವಾದದ್ದು. ಇದನ್ನು ಪು.ತಿ.ನ. “ಜೀವಕಾಮ” ಎಂದು ಕರೆಯುತ್ತಾರೆ. ಪು.ತಿ.ನ. ಅವರಿಗೆ ಆಗಬೇಕಾದದ್ದು “ಮೌಲ್ಯೋದ್ಧಾರ”. ಅಂದರೆ ಜೀವಕಾಮವು “ಸಾಕ್ಷಿಪ್ರಜ್ಞೆ”ಯ ಪ್ರತೀಕವಾದ “ಆತ್ಮಕಾಮ”ವಾಗಿಬಿಡಬೇಕು. ಆ ದೃಷ್ಟಿಯಿಂದ ವಿಶ್ವಾಮಿತ್ರ ತನ್ನ ನಡಾವಳಿಯನ್ನು ಪ್ರಶ್ನಿಸಿಕೊಂಡ ಸಂದರ್ಭ ರಾಘವಾಂಕನಲ್ಲಿ ಇಲ್ಲ.

ಮುಂದುವರೆಯುವುದು

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.