ಚಿಂತನ ಧಾರೆ
ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಇದ್ದ ಚಿಂತನೆ ಮತ್ತು ಪೂಜಾ ಪರಂಪರೆಯನ್ನು ವಿದ್ವಾಂಸರು ವಿಭಿನ್ನವಾದ ಮತ್ತು ಸಮಾನಾಂತರವಾದ ವೈದಿಕ, ಅವೈದಿಕ ಎಂದು ವರ್ಗೀಕರಿಸಿದರೆ ಮನುಸ್ಮೃತಿಗೆ ಬಹಳ ವ್ಯಾಪಕವಾದ ಅರ್ಥವಿವರಣೆಯನ್ನು ಮೊಟ್ಟಮೊದಲಿಗೆ ಕೊಟ್ಟ ಕಲ್ಲುಭಟ್ಟನು ವೈದಿಕ, ತಾಂತ್ರಿಕ ಎಂದು ವಿಭಾಗಿಸಿದ್ದಾನೆ. ಮೊದಲನೆಯದು ಪುರುಷ-ಕೇಂದ್ರಿತ ಸಾಮಾಜಿಕ ವ್ಯವಸ್ಥೆ ಆಧಾರಿತ, ಎರಡನೆಯದು ಸ್ತ್ರೀ-ಕೇಂದ್ರಿತ ಫಲವಂತಿಕೆ ಆಧಾರಿತ ಎನ್ನುತ್ತಾನೆ. ನಮ್ಮ ದೇಶದ ಅತ್ಯಂತ ಪ್ರಾಚೀನವಾದ ಪವಿತ್ರವಾದ ದಾಖಲೆಗಳಾದ ವೇದಗಳು ಪುರುಷ ದೈವಗಳಿಗೆ ಪ್ರಾಮುಖ್ಯತೆಯನ್ನು ಕೊಟ್ಟಿದ್ದಂತೆ ಅದಿತಿ, ಉಷಸ್, ಭೂದೇವಿ, ವಾಗ್ದೇವಿ, ವಾಕ್, ಸರಸ್ವತೀ, ಪೃಥ್ವೀ, ಶ್ರದ್ಧಾ, ನಿರಿತಿ (annihilator)ಯರಿಗೂ ವಿಶೇಷ ಸ್ಥಾನಮಾನವನ್ನು ಕೊಟ್ಟಿವೆ. ಅವರನ್ನು ಇಂದ್ರ, ಅಗ್ನಿ ಮತ್ತು ಸೋಮ – ಇವರಿಗೆ ಕೊಟ್ಟಷ್ಟೇ ಗೌರವದಿಂದ ಕಂಡಿವೆ. ಈ ದೇವಿಯರನ್ನು ಸ್ತ್ರೀ, ಪುರುಷ ಎರಡೂ ಅಲ್ಲದ ಪ್ರಜಾಪತಿ, ಪುರುಷ, ಬ್ರಹ್ಮನ್ ರ ಅಂಶಗಳಿಗೆ ಸಮಾನ ಎಂದು ಪರಿಗಣಿಸಿವೆ. ಉಪನಿಷತ್ತುಗಳು ಸ್ತ್ರೀ ಮತ್ತು ಪುರುಷ ತತ್ತ್ವಗಳಿಗೆ ಸಮಾನ ಮಹತ್ವ ಕೊಟ್ಟು ಸ್ತ್ರೀ ಪರದೈವವನ್ನು ಪ್ರಕೃತಿ ಎಂದು ಹೆಸರಿಸಿ ವಾಸ್ತವತೆಯು ಪ್ರಕೃತಿ ಮತ್ತು ಪುರುಷ ತತ್ತ್ವಗಳ ನಡುವಿನ ಸಾಮರಸ್ಯತೆ, ಹೊಂದಾಣಿಕೆಯನ್ನು ಒಳಗೊಳ್ಳುತ್ತದೆ ಎನ್ನುತ್ತವೆ. ಕೇನ ಉಪನಿಷತ್ತಿನಲ್ಲಿ ಬ್ರಹ್ಮ ತತ್ತ್ವಕ್ಕೆ ಸಮಾನವಾಗಿ ಉಮಾ ಪರಿಗಣಿತ ಆಗಿದ್ದಾಳೆ.
ಋಗ್ವೇದದ ದಶಮ ಮಂಡಲದ 125ನೇ ಮಂತ್ರದಲ್ಲಿ 3-8 ರ ವರೆಗಿನ ಸಾಲುಗಳನ್ನು ದೇವೀ ಸೂಕ್ತ ಎನ್ನುತ್ತಾರೆ. ಅದು ದೇವಿಯ ಒಂದು ರೀತಿಯ ಸ್ವ-ಘೋಷಣೆ “ನಾನು ರಾಣಿ, ನಿಧಿಗಳ ಸಂಗ್ರಾಹಕಿ, ಅತ್ಯಂತ ಹೆಚ್ಚು ವಿಚಾರಪರಳು, ಆರಾಧನಾ ಮಹತ್ವವನ್ನು ಗುರುತಿಸುವವರ ಸಾಲಿನಲ್ಲಿ ನಾನು ಪ್ರಥಮಳು. ಇರಲು ಮತ್ತು ವಾಸಿಸಲು ನನಗೆ ದೇವತೆಗಳು ಅನೇಕ್ತ ಸ್ಥಳಗಳನ್ನು ಒದಗಿಸಿ ನನ್ನನ್ನು ಪ್ರತಿಷ್ಠಾಪಿಸಿದ್ದಾರೆ. ನನ್ನ ಮೂಲಕ ಮಾತ್ರ ಎಲ್ಲರೂ ತಮಗೆ ದೊರೆತ ಆಹಾರವನ್ನು ತಿನ್ನಲು ಸಾಧ್ಯ; ನೋಡಲು, ಉಸಿರಾಡಲು, ಮುಚ್ಚುಮರೆಯಿಲ್ಲದೆ ಮಾತಾಡಿದುದನ್ನು ಕೇಳಲು ಸಾಧ್ಯ. ಗೊತ್ತಿರಲೀ ಗೊತ್ತಿಲ್ಲದಿರಲಿ ನಾನು ವಿಶ್ವದ ಸಾರ. ದೇವತೆಗಳೂ, ಮನುಷ್ಯರೂ ಸ್ವಾಗತಿಸ ಬಹುದಾದ ಸತ್ಯವನ್ನು ಘೋಷಿಸುವವಳು ನಾನೇ. ತನ್ನ ಶಕ್ತಿ ಮೀರಿ ಮನುಷ್ಯ ಎಲ್ಲವನ್ನೂ ಪ್ರೀತಿಸುವಂತೆ ಮಾಡುವವಳು, ಅವನನ್ನು ಪೋಷಿಸುವವಳು, ಅವನನ್ನು ಬ್ರಹ್ಮನ್ ಅನ್ನು ತಿಳಿಯುವ ಋಷಿಯನ್ನಾಗಿಸುವವಳೂ ನಾನೇ. ಬಾಣವು ರುದ್ರನ ಬಿಲ್ಲಿನಿಂದ ಹೊರಬಿದ್ದು ಭಕ್ತಿಯನ್ನು ದ್ವೇಷಿಸುವವರನ್ನು ಹೊಡೆಯುವಂತೆ ಮಾಡುವವಳೂ, ಯುದ್ಧವನ್ನು ಪ್ರಚೋದಿಸುವವಳೂ ಮತ್ತು ಆದೇಶಿಸುವವಳೂ ನಾನೇ. ಪೃಥ್ವಿ ಮತ್ತು ಸ್ವರ್ಗವನ್ನು ಸೃಷ್ಟಿಸಿದವಳು ಮತ್ತು ಅವುಗಳಲ್ಲಿ ಆಂತರಿಕ ನಿಯಂತ್ರಣಕಾರಳಾಗಿ ಇರುವವಳು, ಪ್ರಪಂಚದ ಶೃಂಗಕ್ಕೆ ತಂದೆಯಾದ ಆಕಾಶವನ್ನು ಕರೆತರುವವಳು ನಾನೇ. ನನ್ನ ಮನೆ ನೀರು, ನಾನು ಸಮುದ್ರದಲ್ಲಿ ತಾಯಿಯಾಗಿ ಇರುತ್ತೇನೆ. ಶಾಶ್ವತವಾದ ಮತ್ತು ಅನಂತವಾದ ಪ್ರಜ್ಞೆ ನಾನೇ. ಇನ್ನೊಂದು ಹಿರಿದಾದ ಇರುವಿಕೆಯ ಅಗತ್ಯವಿಲ್ಲದೆ ನನ್ನ ಇಚ್ಛೆಯಿಂದಲೇ ಎಲ್ಲ ಪ್ರಪಂಚಗಳನ್ನು ಸೃಷ್ಟಿಸುತ್ತೇನೆ. ನನ್ನ ದೇಹದ ಮೂಲಕ ಎಲ್ಲವೂ ಪ್ರಕಟಗೊಳ್ಳುವಂತೆ ಮಾಡುತ್ತೇನೆ. ಅಸ್ತಿತ್ವದಲ್ಲಿರುವ ಎಲ್ಲದರಲ್ಲೂ ಅವುಗಳ ಪರಮ ಆತ್ಮವಾಗಿ ತಾಯಿಯಂತೆ ವಾಸಿಸುತ್ತೇನೆ ಮತ್ತು ವ್ಯಾಪಿಸುತ್ತೇನೆ, ಎಲ್ಲದರಲ್ಲೂ ವಾಸಿಸುವುದು ನನ್ನ ಹಿರಿಮೆ.”
ಶಾಕ್ತಸಿದ್ಧಾಂತ
ಶಾಕ್ತ ಸಿದ್ಧಾಂತದಲ್ಲಿ ಶಕ್ತಿಯೇ ಪರಮ ವಾಸ್ತವತೆ, ಆಧ್ಯಾತ್ಮಿಕ ವಾಸ್ತವತೆ ಅಥವಾ ಪರದೈವ. ಅದು ರೂಪಕಾತ್ಮಕ ಭಾಷೆಯಲ್ಲಿ ಸ್ತ್ರೀ. ಎಲ್ಲಾ ಸೃಷ್ಟಿ, ಸ್ಥಿತಿ, ಲಯಗಳ ಮೂಲಾಧಾರ, ಆತ್ಯಂತಿಕ ಸತ್ಯವಾದ ಆದಿಮಾತೆಯ ಮಾತೃತ್ವದ ಮೂರ್ತ ರೂಪಗಳು ಕಾಳೀ, ದುರ್ಗೀ, ಭವಾನೀ, ಚಾಮುಂಡೀ, ಸರಸ್ವತೀ, ಲಕ್ಷ್ಮೀ, ಪಾರ್ವತೀ, ತ್ರಿಪುರಸುಂದರೀ ಇತ್ಯಾದಿ ಸ್ತ್ರೀದೈವಗಳು; ಈ ದೈವಗಳು ಭೂಮಿಯಲ್ಲಿ ಮನುಷ್ಯ ಜೀವನದ ಮೇಲೆ ಹಿರಿದಾದ ಪರಿಣಾಮವನ್ನು ಉಂಟುಮಾಡುವ ಶಕ್ತಿಪೀಠಗಳಲ್ಲಿ ಪೂಜಿತರಾಗಿ ಆರಾಧನಾ ಪರಂಪರೆಯನ್ನು ಜಾಗೃತವಾಗಿ ಇರಿಸಿವೆ. ಶಾಕ್ತಪಂಥವು ಒಳಗೊಳ್ಳುವ ತಂತ್ರಪಂಥವು ದೇಹದ ಮೂಲಾಧಾರದಲ್ಲಿ ಅಡಗಿರುವ ದೈವಿಕ ಸ್ತ್ರೀಶಕ್ತಿಯೇ ಕುಂಡಲಿನಿ, ಇದನ್ನು ಮಂತ್ರ, ಯಂತ್ರ, ನ್ಯಾಸ, ಮುದ್ರೆಗಳು ಮತ್ತು ಕುಂಡಲಿನೀ ಯೋಗದ ಕೆಲವು ಅಂಶಗಳಿಂದ ಜಾಗೃತಗೊಳಿಸಿ ಆಧ್ಯಾತ್ಮಿಕ ಪರಿಪೂರ್ಣತೆಯನ್ನು ಪಡೆಯಬೇಕು; ಇದು ವ್ಯಕ್ತಿಯನ್ನು ಬ್ರಹ್ಮಾಂಡದ ಪ್ರತೀಕವಾದ ಆದಿ ಮಾತೆಯೊಂದಿಗೆ ವಿಲೀನಗೊಳಿಸುವ ಸಾಧನಾ ಪ್ರಕ್ರಿಯೆ ಆಗಿದೆ ಎನ್ನುತ್ತದೆ. ಶಾಕ್ತ ದೇವತಾಶಾಸ್ತ್ರದಲ್ಲಿ ಬ್ರಹ್ಮನ್ ಜಡ ಶಕ್ತಿ, ಮಾತೃಶಕ್ತಿಯು ಚಲನಾತ್ಮಕ ಬ್ರಹ್ಮನ್.
ಶಾಕ್ತ-ದೇವತಾಶಾಸ್ತ್ರವನ್ನು ವಿವರಿಸುವ ದೇವೀ ಭಾಗವತ ಪುರಾಣದ 7ನೆಯ ಭಾಗವಾಧ ದೇವೀ ಗೀತವು ದೇವಿಯನ್ನು ಆದಿಮಾತೆಯೆಂದೂ, ಭುವನ ಸುಂದರಿಯೆಂದೂ, ಭುವನೇಶ್ವರೀ ಎಂದೂ ವರ್ಣಿಸಿದೆ. ಇಲ್ಲಿ ದೇವಿಯು “ನಾನು ಮೂರ್ತರೂಪೀ ಹಾಗೂ ಅತೀತ ದೈವಿಕತೆ; ಬ್ರಹ್ಮ, ವಿಷ್ಣು, ಮಹೇಶ್ವರ ಮತ್ತು ಸರಸ್ವತೀ, ಲಕ್ಷ್ಮೀ, ಪಾರ್ವತೀ ಸಹ ಆಗಿದ್ದೇನೆ; ಸೂರ್ಯ, ನಕ್ಷತ್ರ, ಚಂದ್ರ, ಎಲ್ಲಾ ಪ್ರಾಣಿಗಳೂ ಪಕ್ಷಿಗಳೂ ಆಗಿದ್ದೇನೆ; ಬಹಿಷ್ಕೃತಳೂ, ಕಳ್ಳಿಯೂ, ಭಯಂಕರ ಕೃತ್ಯಗಳನ್ನು ಮಾಡುವ ನೀಚಳೂ ಆಗಿದ್ದೇನೆ, ಶ್ರೇಷ್ಠ ವ್ಯಕ್ತಿಗಳ ಅತ್ಯುತ್ಕೃಷ್ಟ ಕ್ರಿಯೆಗಳೂ ಆಗಿದ್ದೇನೆ; ನಾನೇ ಶಿವನ ಸ್ತ್ರೀ ಮತ್ತು ಪುರುಷ ರೂಪ; ಹೆಸರು ಮತ್ತು ಹೆಸರು ಸೂಚಿಸುವ ಚರಾಚರಗಳ ನಡುವಿನ ಅಂತರವನ್ನು ನನ್ನ ಪವಿತ್ರ ಅಕ್ಷರ ಹ್ರೀಮ್ ಮೀರುತ್ತದೆ; ಇದು ಸರ್ವ ದ್ವೈತಾತೀತ ಪೂರ್ಣತೆ, ಅನಂತತೆ, ಸಚ್ಚಿದಾನಂದ; ಯಾರು ನನ್ನನ್ನು ಕಾಲ-ದೇಶಾತೀತ ದೇವಿಯಂತೆ ಧ್ಯಾನಿಸುತ್ತಾರೋ ಅವರು ಅವರ ಆತ್ಮ ಮತ್ತು ನನ್ನ ನಡುವಿನ ಐಕ್ಯತೆ, ಏಕತೆಯನ್ನು ಮನನ ಮಾಡಿಕೊಂಡು ನನ್ನಲ್ಲಿ ವಿಲೀನಗೊಳ್ಳುತ್ತಾರೆ; ಯಾರು ನಾನೇ ಬ್ರಹ್ಮನ್, ನಾನೇ ಪ್ರಪಂಚದ ಸೃಷ್ಟಿಕರ್ತೃ, ವ್ಯಕ್ತಿಯ ಆತ್ಮ ಮತ್ತು ನನ್ನ ಬ್ರಹ್ಮನ್ ಸ್ವರೂಪ ಎರಡೂ ಒಂದೇ ಎಂದು ತಿಳಿಯುತ್ತಾರೋ ಅವರು ಮುಕ್ತರಾಗುತ್ತಾರೆ” ಎಂದು ಹೇಳುತ್ತಾಳೆ.
ಉಲ್ಲೇಖಿತ ಶಕ್ತಿಪೀಠಗಳು
ಪೌರಾಣಿಕ ಏಕ ದೇವಿ ಶಾಕ್ತ ಸಿದ್ಧಾಂತವು ಒಂದೇ ದೇವಿಯ ಅನೇಕ ರೂಪಗಳಾಗಿ ಶಕ್ತಿ-ದೇವತೆಗಳ ಇರುವಿಕೆಯನ್ನು ಮಾನ್ಯ ಮಾಡುತ್ತದೆ. ಕಾಳಿ, ಅಂಬಿಕಾ, ವಿಂಧ್ಯ ವಾಸಿನೀ, ಶಾರದಾ, ಲಲಿತಾ, ಗೌರೀ, ಶಿವದೂತಿ, ತ್ರಿಪುರ ಭೈರವೀ, ಭುವನೇಶ್ವರೀ, ಮಾತಂಗೀ, ಮೀನಾಕ್ಷೀ, ಯೋಗನಿದ್ರಾ, ಯೋಗಮಾಯಾ, ಸರ್ವಮಂಗಳಾ ಮತ್ತಿತರ ಪರಾಶಕ್ತಿ(ಆದಿಶಕ್ತಿ)ಯ ಅವತಾರಗಳ (ವಿವಿಧರೂಪಗಳ) ಆವಾಸ ಸ್ಥಾನ(ಶಕ್ತಿಪೀಠ)ಗಳ ಸಂಖ್ಯೆ 4ರಿಂದ 108. ಅಷ್ಟಶಕ್ತಿ ಮತ್ತು ವಾರಾಹಿ ತಂತ್ರಗಳು ಕಾಮಾಖ್ಯ (ಕಾಮರೂಪ), ಪೂರ್ಣೇಶ್ವರೀ (ಪೂರ್ಣಗಿರಿ), ವಿಮಲಾ (ಪುರಿ), ತ್ರಿಪುರಮಾಲಿನೀ (ಜಲಂಧರ) ಎಂಬ 4 ಪೀಠಗಳನ್ನು, ಆದಿ ಶಂಕರಾಚಾರ್ಯರ ಅಷ್ಟಾದಶ ಶಕ್ತಿಪೀಠ ಸ್ತೋತ್ರವು 18 ಪೀಠಗಳನ್ನು, ದೇವೀ ಭಾಗವತ ಪುರಾಣ, ಪೀಠನಿರ್ಣಯತಂತ್ರ, ಬೆಂಗಾಲಿ ಪಂಚಾಂಗ, ವಿಶುದ್ಧ ಸಿದ್ಧಾಂತ ಪಂಜಿಕಾಗಳು 51 ಪೀಠಗಳನ್ನು, ಶಿವಚರಿತವು 51 ಮಹಾಪೀಠಗಳ ಜೊತೆಗೆ 25 ಉಪಪೀಠಗಳನ್ನು, ಮಹಾಪೀಠ ಪುರಾಣವು 52 ಪೀಠಗಳನ್ನು, ಬ್ರಹ್ಮಾಂಡ ಪುರಾಣವು 64 ಪೀಠಗಳನ್ನು ಉಲ್ಲೇಖಿಸುತ್ತವೆ.
ಸ್ಕಂದ ಪುರಾಣದ ಶಂಕರ ಸಂಹಿತೆ ಮತ್ತು ಆದಿ ಶಂಕರಾಚಾರ್ಯರ ಅಷ್ಟಾದಶ ಶಕ್ತಿಪೀಠ ಸ್ತೋತ್ರ ಉಲ್ಲೇಖಿಸುವ ಒಟ್ಟಾರೆ ಶಕ್ತಿಪೀಠಗಳು – ಶಂಕರೀ ಪೀಠ (ಲಂಕಾ), ಕಾಮಕೋಠಿ ಪೀಠ (ಕಂಚಿ), ಕ್ರೌಂಚ ಪೀಠ (ಮೈಸೂರು), ಶೃಂಕಲಾ ಪೀಠ (ಪ್ರಾದ್ಮುನ್ಯೀ, ಬಂಗಾಳ), ಯೋಗಿನೀ ಪೀಠ (ತೆಲಂಗಾಣಾ), ಶ್ರೀಶೈಲ ಪೀಠ (ಆಂಧ್ರಪ್ರದೇಶ), ಶ್ರೀ\ಮಹಾಲಕ್ಷ್ಮಿ ಪೀಠ (ಕೊಲ್ಲಾಪುರ, ಮಹಾರಾಷ್ಟ್ರ), ಮೂಲಪೀಠ (ಮುಹುರ್, ಮಹಾರಾಷ್ಟ್ರ), ಉಜ್ಜೈನಿ ಪೀಠ (ಮಧ್ಯಪ್ರದೇಶ), ಪುಷ್ಕರಿಣೀ ಪೀಠ (ಪೀತಂಪುರ, ಆಂಧ್ರಪ್ರದೇಶ), ಒಡ್ಯಾಣ ಪೀಠ (ಒರಿಸ್ಸಾ), ದ್ರಾಕ್ಷಾರಾಮ ಪೀಠ (ದ್ರಾಕ್ಷಾರಾಮ, ಆಂಧ್ರಪ್ರದೇಶ), ಕಾಮರೂಪ ಪೀಠ (ಕಾಮಾಖ್ಯಾ), ಪ್ರಯಾಗ ಪೀಠ (ಪ್ರಯಾಗ ರಾಜ್), ಜ್ವಾಲಾಮುಖೀ ಪೀಠ (ಕಾಂಗ್ರಾ, ಹಿಮಾಚಲಪ್ರದೇಶ), ಗಯಾ ಪೀಠ (ಬಿಹಾರ), ವಾರಣಾಸಿ\ವಿಶಾಲಾಕ್ಷಿ ಪೀಠ (ಕಾಶಿ), ಶಾರದಾ\ಸರಸ್ವತಿ ಪೀಠ (ಶಾರದಾ ಕಾಶ್ಮೀರ), ಸಿಂಹಿಕಾ ಪೀಠ (ಲಂಕಾ), ಮಣಿಕಾ ಪೀಠ (ದಕ್ಷವತಿ), ಷಡ್ಕಲಾ ಪೀಠ (ಆಂದ್ರಪ್ರದೇಶ), ವಿಜಯಾ ಪೀಠ (ವಿಜಯಪುರ), ಪದ್ಮಾಕ್ಷೀ ರೇಣುಕಾ ಪೀಠ (ಕವಡೇ ಪುರಿ), ಕುಚಾನಂದಾ ಪೀಠ (ಸಾಲಗ್ರಾಮ),. ಸರಲಾ ಪೀಠ (ಝಾರ್ ಖಂಡ), ಭದ್ರೇಶ್ವರೀ ಪೀಠ (ಹರ್ಮ್ಯಗಿರಿ), ಮಹಾಯೋಗಿ ಪೀಠ (ಅಹಿಚ್ಛತ್ರ), ಕನ್ಯಕಾ ಪೀಠ (ಕನ್ಯಾಕುಬ್ಜ),. ಅಭಿರಾಮೀ ಪೀಠ (ಪದ್ಮಗಿರಿ, ದಿಂಡುಗಲ್).
ಶಕ್ತಿಪೀಠಗಳ ಸ್ಥಳ, ಅಲ್ಲಿಯ ದೇವಿ ಮತ್ತು ಶಿವನ ಹೆಸರುಗಳನ್ನು ಅನುಕ್ರಮವಾಗಿ ಹೇಳುವ ಒಂದು ಪಟ್ಟಿ ಹೀಗಿದೆ: 1 ಅಮರನಾಥ, ಮಹಾಮಾಯಾ, ತ್ರಿಸಂಧ್ಯೇಶ್ವರ 2. ಅಟ್ಟಹಾಸ, ಫುಲ್ಲಾರ, ವಿಶ್ವೇಶ 3. ಕೇತುಗ್ರಾಮ, ಬಹುಲಾ, ಭೀರುಕ್ 4. ವಕ್ರೇಶ್ವರ, ಮಹಿಷಮರ್ದಿನಿ, ವಕ್ರನಾಥ 5. ಉಜ್ಜೈನಿ, ಅವಂತೀ, ಲಂಬಕರ್ಣ 6. ಭವಾನಿಪುರ, ಅಪರ್ಣಾ, ವಾಮನ 7. ಜೈಪುರ, ವಿರಜಾ, ವರಾಹ 8. ಅಲಿಭಾಗ್, ಶ್ರೀ ರೇಣುಕಾ (ಆದಿ ಮಾಯಾ), ಭೈರವ 9. ನೇಪಾಳ, ಗಂಡಕೀ ಚಂಡೀ, ಚಕ್ರಪಾಣಿ 10. ನಾಸಿಕ್, ಭದ್ರಕಾಳೀ, ವಿಕೃತಾಕ್ಷ 11. ಪಾಕೀಸ್ಥಾನ, ಕೊಟ್ಟಾರೀ, ಭೀಮಲೋಚನ 12. ನಾರ್ತಿಯಾಂಗ್, ಜಯಂತೀ, ಕ್ರಮಧೀಶ್ವರ 13. ಬಾಂಗ್ಲಾದೇಶ, ಜಹೋರೇಶ್ವರೀ, ಚಂಡ 14. ಕಾಂಗ್ರಾ, ಸಿದ್ಧಿದಾ, ಉನ್ಮತ್ತ ಭೈರವ 15. ಕಲ್ಕತ್ತಾ, ಕಾಳಿಕಾ, ನಕುಲೇಶ್ವರ 16. ಕಾಮಗಿರಿ, ಕಾಮಾಖ್ಯಾ, ಉಮಾನಂದ (ಭೈರವಾನಂದ) 17. ಕಂಕಾಲಿತಾಲ, ದೇವಗರ್ಭಾ, ರುರು 18. ಕನ್ಯಾಕುಮಾರಿ\ ಯುನ್ನಾನ್ (ಚೀನಾ)\ ಚತ್ತೋಗ್ರಾಮ (ಬಾಂಗ್ಲಾದೇಶ); ಶರ್ವಾಣೀ, ನಿಮೀಶ 19. ನಾಗರಕೋಟ್, ಜಯದುರ್ಗಾ, ಅಭೀರು 20. ಕಿರೀಟಕೋನ್, ವಿಮಲಾ, ಸಂವರ್ತ 21. ಕೃಷ್ಣನಗರ (ಪಶ್ಚಿಮ ಬಂಗಾಳ), ಕುಮಾರೀ, ಘಂಟೇಶ್ವರ 22. ಜಲ್ಪೈಗುರಿ (ಪಶ್ಚಿಮಬಂಗಾಳ), ಭ್ರಾಮರೀ, ಅಂಬರ 23. ಮಾನಸ್ (ಚೀನಾ), ದಾಕ್ಷಾಯಣೀ, ಅಮರ 24. ಮಣಿಬಂಧ್ (ರಾಜಾಸ್ಥಾನ), ಗಾಯತ್ರೀ, ಸರ್ವಾನಂದ 25. ಮಿಥಿಲಾ (ನೇಪಾಳ), ಉಮಾ, ಮಹೋದರ 26. ನೈನತಿವು (ಶ್ರೀಲಂಕಾ), ಇಂದ್ರಾಕ್ಷೀ (ಭುವನೇಶ್ವರೀ), ರಕ್ಷಕೇಶ್ವರ 27. ನೇಪಾಳ, ಮಹಾಶಿರ, ಕಪಾಲಿ 28. ಬಾಂಗ್ಲಾದೇಶ, ಭವಾನೀ, ಚಂದ್ರಶೇಖರ 29. ಪಂಚಸಾಗರ್ (ಉತ್ತರಖಾಂಡ), ವಾರಾಹಿ, ಮಹಾರುದ್ರ 30. ಪ್ರಭಾಸ, ಚಂದ್ರಭಾಗಾ, ವಕ್ರತುಂಡ 31. ಪ್ರಯಾಗರಾಜ್, ಲಲಿತಾ, ಭವ 32. ಸ್ಥಾಣೇಶ್ವರ (ಕುರುಕ್ಷೇತ್ರ), ಸಾವಿತ್ರಿ (ಭದ್ರಕಾಳೀ), ಸ್ಥಾಣು 33. ಮೈಹರ್ (ಮಧ್ಯಪ್ರದೇಶ), ಶಿವಾನಿ, ಚಂಡ 34. ಸೈಂತಿಯಾ (ಪಶ್ಚಿಮಬಂಗಾಳ), ನಂದಿನೀ, ನಂದಿಕೇಶ್ವರ 35. ರಾಜಮಹೇಂದ್ರಿ, ಭುವನೇಶ್ವರೀ (ವಿಶ್ವೇಶ್ವರೀ), ವತ್ಸನಾಭ\ದಂಡಪಾಣಿ 36. ಹಿಮಾಚಲಪ್ರದೇಶ, ಮಹಿಷಾಸುರಮರ್ದಿನೀ, ಕ್ರೋಧೇಶ 37. ಶೋನ್ ದೇಶ (ಮಧ್ಯಪ್ರದೇಶ), ನರ್ಮದಾ, ಭದ್ರಸೇನ 38. ಶ್ರೀಶೈಲ, ಭ್ರಮರಾಂಬಿಕಾ, ಮಲ್ಲಿಕಾರ್ಜುನ 39. ಶುಚೀಂದ್ರಂ, ನಾರಾಯಣೀ, ಸಂಹರ 40. ಸುಗಂಧಾ (ಬಾಂಗ್ಲಾದೇಶ), ಸುಗಂಧಾ, ತ್ರಯಂಬಕ 41. ಉದಯಪುರ (ತ್ರಿಪುರ), ತ್ರಿಪುರಸುಂದರಿ, ತ್ರಿಪುರೇಶ 42. ಉಜ್ಜಯಿನಿ (ಮಂಗಲಕೋಟ್, ಪಶ್ಚಿಮ ಬಂಗಾಳ), ಮಂಗಲಚಂಡಿಕಾ, ಕಪಿಲಾಂಬರ 43. ವಾರಣಾಸಿ, ವಿಶಾಲಾಕ್ಷೀ\ಮಣಿಕರ್ಣೀ, ಕಾಲಭೈರವ 44. ತಮ್ಲುಕ್ (ಪಶ್ಚಿಮಬಂಗಾಳ), ಕಪಾಲಿನೀ\ಭೀಮರೂಪಾ\ಭರ್ಗಭೀಮಾ, ಸರ್ವಾನಂದ 45. ವಿರಾಟ ನಗರ (ರಾಜಾಸ್ಥಾನ), ಅಂಬಿಕಾ, ಅಮೃತಾಕ್ಷ 46. ವೃಂದಾವನ (ಉತ್ತರ ಪ್ರದೇಶ), ಉಮಾ, ಭೂತೇಶ 47. ಜಲಂಧರ (ಪಂಜಾಬ್), ತ್ರಿಪುರಮಾಲಿನೀ, ಭೀಷಣ 48. ಝಾರ್ ಖಂಡ, ಜಯದುರ್ಗಾ, ಬೈದ್ಯನಾಥ 49. ಕಾಂಚೀಪುರ, ಕಾಮಾಕ್ಷೀ, ಏಕಾಂಬರೇಶ್ವರ 50. ಜೋಗಾದ್ಯ (ಪಶ್ಚಿಮ ಬಂಗಾಳ), ಜೋಗಾದ್ಯಾ, ಕ್ಷೀರಕಂಠಕ, 51. ಪೀತಪುರಮ್ (ಆಂಧ್ರಪ್ರದೇಶ), ಪುರುಹೋತಾ, ದೂರ್ವಾಸ 52. ಅನರ್ಟ್ (ಗುಜರಾತ್), ಅಂಬಾ, ಬಟುಕ್ ಭೈರವ್ 53. ಶಕ್ತಿನಗರ (ಉತ್ತರಪ್ರದೇಶ), ಜ್ವಾಲಾ. ರುದ್ರ 54. ಚಂಡಿಕಾಸ್ಥಾನ (ಬಿಹಾರ), ಚಂಡಿಕಾ, ಚಾಂಡಾಲ 55. ದಂತೇವಾಡ (ಛತ್ತೀಸಘರ್), ದಂತೇಶ್ವರೀ, ಕಪಾಲ ಭೈರವ 56. ನದಿಯಾ ದುಬ್ರಾಜ್ ಪುರ (ಪಶ್ಚಿಮ ಬಂಗಾಳ), ಮಹಿಷಾಸುರ ಮರ್ದಿನೀ, ಭೈರವ 57. ಪುರುಷೋತ್ತಮಪುರ (ಒರಿಸ್ಸ), ತಾರ ತಾರಿಣೀ, ತುಂಬೇಶ್ವರ 58. ನಲ್ಹಟಿ (ಪಶ್ಚಿಮ ಬಂಗಾಳ), ಕಾಳಿಕಾ, ಜೋಗೇಶ 59. ಕತ್ರಾ\ರುದ್ರಸುಂದರಿ (ಜಮ್ಮು ಕಾಶ್ಮೀರ), ವೈಷ್ಣವದೇವೀ, ಹನುಮಂತ ಭೈರವ 60. ಮಂಕಚರ್ (ಅಸ್ಸಾಂ), ದೇವಿ, ದೇವ 61. ಪುರಿ, ವಿಮಲಾ, ಜಗನ್ನಾಥ 62. ತಿರುಕಚರ್ (ತಮಿಳುನಾಡು), ಅಂಜನಾಕ್ಷೀ, ಮರುಂದೇಶ್ವರ\ಔಷಧೇಶ್ವರ 63. ಅಲೀಪುರುದುವರ್ (ಪಶ್ಚಿಮ ಬಂಗಾಳ), ಜಯಂತೀ, ಕ್ರಮಧೀಶ್ವರ 64. ಸಿಲ್ಹೆಟ್ (ಬಾಂಗ್ಲಾದೇಶ್), ಮಹಾಲಕ್ಷ್ಮೀ, ಶಂಬರಾನಂದ 65. ಢಾಕಾ, ಢಾಕೇಶ್ವರೀ\ಕಾತ್ಯಾಯನೀ\ಮಹಿಷಾಸುರಮರ್ದಿನೀ, ಶಿವ 66. ರಾಂಪುರಹತ್ (ಪಶ್ಚಿಮ ಬಂಗಾಳ), ತಾರಾ, ಚಂದ್ರಚೂಡ ಭೈರವ 67. ಸೀತಾಪುರ್ (ಪಶ್ಚಿಮಬಂಗಾಳ), ಲಲಿತಾ, ನಿಮೇಶ್ವರ 68. ಚಿಂತಪೂರ್ಣೀ (ಝಾರ್ ಖಂಡ), ಛಿನ್ನಮಸ್ತಿಕಾ, ರುದ್ರ ಮಹಾದೇವ 69. ಗೌಹಾತಿ, ದೀರ್ಘೇಶ್ವರೀ, ಮಣಿಕರ್ಣೇಶ್ವರ 70. ಬಲರಾಮಪುರ (ಉತ್ತರಪ್ರದೇಶ), ಪಟ್ಟೇಶ್ವರೀ, ಕಾಲ ಭೈರವ 71. ಪಾವ್ ಘರ್\ಪಾವ್ ಘಡ್ (ಗುಜರಾಥ್), ಮಹಾ ಕಾಳಿಕಾ, ಬಟುಕ್ ಭೈರವ 72. ಅರ್ರಾಹ್ (ಅಸ್ಸಾಂ), ಅರಣ್ಯಾಣೀ, ಭೂಮ ಭೈರವ 73. ನೇಪಾಲ ಗಂಜ್, ದುರ್ಗಾ, ಜುಂಗೇ ಮಹಾದೇವ
ದಕ್ಷಯಜ್ಞ
ಎಲ್ಲಾ ಪುರಾಣಗಳ ಪ್ರಕಾರ ದಕ್ಷ ಯಜ್ಞಕ್ಕೂ ಶಕ್ತಿಪೀಠಗಳ ಅಸ್ತಿತ್ವ(ಉಗಮ)ಕ್ಕೂ ಸಂಬಂಧ ಇದೆ. ಅವು ಹೇಳುವ ಕಥೆಗಳ ಸಾರಾಂಶ: “ಬ್ರಹ್ಮ ವಿಶ್ವವನ್ನು ನಿರ್ಮಿಸಲು ಆದಿ ಶಕ್ತಿಯ ಸಹಾಯವನ್ನು ಬಯಸಿದ. ಆದಿಶಕ್ತಿ ಶಿವನ ಸಂಗವನ್ನು ಬಿಟ್ಟು ಬಂದಳು, ಬ್ರಹ್ಮ ಮತ್ತು ಆದಿಶಕ್ತಿ ಇಬ್ಬರೂ ಸೇರಿ ವಿಶ್ವವನ್ನು ನಿರ್ಮಿಸಲು ಆರಂಭಿಸಿದರು. ಅದು ಮುಕ್ತಾಯವಾದ ನಂತರ ಆದಿಶಕ್ತಿ ತನ್ನ ಮನೆಗೆ ಹಿಂತಿರುಗಬೇಕೆಂದುಕೊಂಡಳು. ಆಗ ದಕ್ಷ ಅವನ ಮಗಳಾಗಿ ಜನಿಸುವ ವರ ಕೊಡಬೇಕೆಂದು ಆಕೆಯನ್ನು ಪ್ರಾರ್ಥಿಸಿದ. ಶಿವನನ್ನು ಮದುವೆಯಾಗಬೇಕೆಂಬ ಪೂರ್ವಯೋಜಿತ ಉದ್ದೇಶದಿಂದ ದಕ್ಷನ ಮಗಳಾಗಿ ಸತಿ ಎಂಬ ಹೆಸರಿನಿಂದ ಜನಿಸಿದಳು. ದಕ್ಷಬ್ರಹ್ಮನ ಅತ್ಯಂತ ಪ್ರೀತಿಪಾತ್ರ ಕಿರಿಯ\ ಹಿರಿಯ ಮಗಳಾದ ಸತಿ ಶಿವನ ಹೆಂಡತಿ ತಾನಾಗಬೇಕೆಂದು ಆಶಿಸಿದಳು. ದಕ್ಷನಿಗೆ ತಾನು ಪ್ರಜಾಪತಿ, ತನ್ನ ಮಗಳು ರಾಜಕುಮಾರಿ, ಶಿವ ಸಾಧಾರಣವಾದ ಜೀವನವನ್ನು ನಡೆಸುವವನು. ಕೆಳವರ್ಗದವರೊಂದಿಗೆ ವಾಸಿಸುವವನು, ಹುಲಿ ಚರ್ಮ ಅವನ ವಸ್ತ್ರ, ಮೈತುಂಬಾ ಬಳಿದುಕೊಂಡ ಬೂದಿ ಅವನ ದೇಹಾಲಂಕಾರ, ಅವನ ವಾಸಸ್ಥಾನ ಕೈಲಾಸ ಪರ್ವತ. ಅವನಿಗೆ ಒಳ್ಳೆಯವರು ಕೆಟ್ಟವರು ಎಂಬ ಭೇದಭಾವ ಇಲ್ಲ. ಅವನನ್ನು ಆಶ್ರಯಿಸಿದವರಿಗೆಲ್ಲ ಅವನು ವರದಾಯಕ. ಭೂತ, ಪಿಶಾಚಿ, ಬೇತಾಳಗಳೇ ಮೊದಲಾದವರು ಅವನ ಅನುಯಾಯಿಗಳು. ಅವನು ಉದ್ಯಾನವನಗಳಲ್ಲಿ ಸುಖವಾಗಿ ಓಡಾಡಿದಂತೆ ಸ್ಮಶಾನದಲ್ಲೂ ಓಡಾಡುವವನು, ಅಂಥ ಶಿವ ತನಗೆ ಅಳಿಯ ಆಗುವುದು ತನ್ನ ದೊಡ್ಡಸ್ಥಿಕೆಗೆ ಕುಂದು ಎಂಬ ಭಾವನೆ. ಹೀಗೆ ತೋರಿಕೆಗೆ ಶಿವ ಇದ್ದರೂ ಅವನು ಪರದೈವ ಎಂದು ತಿಳಿದಿದ್ದ ಸತಿ ತೀವ್ರವಾದ ತಪಸ್ಸನ್ನು ಮಾಡಿ ಶಿವನನ್ನು ಒಲಿಸಿಕೊಂಡಿದ್ದಳು. ಸತಿಯದು ಇಂಥ ದೃಢ ನಿಶ್ಚಯ ಆಗಿದ್ದುದರಿಂದ ಅವಳನ್ನು ದಕ್ಷ ಶಿವನಿಗೆ ಮದುವೆಮಾಡಿಕೊಟ್ಟ”.
“ಒಮ್ಮೆ ಬ್ರಹ್ಮ ಮಾಡುತ್ತಿದ್ದ ಯಜ್ಞಕ್ಕೆ ಎಲ್ಲರೂ ಮೊದಲೇ ನೆರೆದಿದ್ದರು. ದಕ್ಷ ಮಾತ್ರ ತಡವಾಗಿ ಬಂದ. ಬ್ರಹ್ಮ ಮತ್ತು ಶಿವ ಈ ಇಬ್ಬರ ಹೊರತಾಗಿ ಉಳಿದವರೆಲ್ಲ ಎದ್ದು ನಿಂತು ದಕ್ಷನಿಗೆ ಗೌರವ ತೋರಿದರು. ಬ್ರಹ್ಮ ತನ್ನಪ್ಪ, ಯಜ್ಞ ದೀಕ್ಷಿತ, ಆದ್ದರಿಂದ ಅವನು ಎದ್ದು ನಿಲ್ಲದಿದ್ದರೆ ಪರವಾಗಿಲ್ಲ ಎಂದುಕೊಂಡ ದಕ್ಷನಿಗೆ, ಹೆಣ್ಣು ಕೊಟ್ಟ ಮಾವ ಎಂದಾದರೂ ಅಳಿಯ ಆದ ಶಿವ ತನಗೆ ಗೌರವ ತೋರಲಿಲ್ಲ ಎನ್ನುವುದನ್ನು ಸಹಿಸಿಕೊಳ್ಳಲು ಆಗಲಿಲ್ಲ. ಈ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ಬೃಹಸ್ಪತಿ ಸ್ತವ ಎನ್ನುವ ಯಾಗ ಮಾಡಲು ನಿರ್ಧರಿಸಿ ಶಿವ, ಸತಿಯರನ್ನು ಬಿಟ್ಟು ಎಲ್ಲರನ್ನೂ ಆಹ್ವಾನಿಸಿದ. ಸ್ಕಂದ ಪುರಾಣದ ಪ್ರಕಾರ ಶಿವನನ್ನು ಕರೆಯದ ಯಜ್ಞಕ್ಕೆ ತಾವೂ ಬರುವುದಿಲ್ಲ ಎಂದು ಬ್ರಹ್ಮ, ವಿಷ್ಣು ಇಬ್ಬರೂ ನಿರಾಕರಿಸಿದರು. ಯಜ್ಞಕಾರ್ಯ ನಿರ್ವಹಿಸುತ್ತಿದ್ದ ದಧೀಚಿಗೆ ಹನ್ನೆರಡು ಆದಿತ್ಯರಿಗೆ ಹವಿಸ್ಸು ಕೊಟ್ಟಮೇಲೆ ಶಿವನಿಗೆ ಮತ್ತು ಸತಿಗೆ ಹವಿಸ್ಸು ಇಟ್ಟಿಲ್ಲ ಎಂಬುದು ತಿಳಿಯಿತು. ವೈಯಕ್ತಿಕ ಕಾರಣಗಳಿಗಾಗಿ ವೇದದ ಕ್ರಮವನ್ನು ಉಲ್ಲಂಘಿಸಬಾರದು ಎಂದು ದಕ್ಷನಿಗೆ ಹೇಳಿದ. ದಕ್ಷ ದಧೀಚಿಯ ಮಾತನ್ನು ಒಪ್ಪಿಕೊಳ್ಳದೇ ಇದ್ದುದರಿಂದ ಅವನೂ ಯಜ್ಞಶಾಲೆಯಿಂದ ಹೊರಟುಹೋದ”.
“ತನ್ನ ಅಪ್ಪ ಭವ್ಯವಾದ ಯಜ್ಞವನ್ನು ಮಾಡುತ್ತಿದ್ದಾನೆ ಎನ್ನುವುದನ್ನು ಅಶ್ವಿನೀ ದೇವತೆಗಳಿಂದ ತಿಳಿದ ಸತಿ ತವರುಮನೆಯವರೊಂದಿಗೆ, ಬಂಧು ಬಾಂಧವರೊಂದಿಗೆ ಯಜ್ಞದ ಸಂಭ್ರಮವನ್ನು ಅನುಭವಿಸಬೇಕು, ತವರಿನವರು ಕರೆಯಲೇ ಬೇಕೆಂಬ ಬಿಗುಮಾನ ಬೇಕಿಲ್ಲ ಎಂದು ನಂದಿಯನ್ನು ಜೊತೆ ಮಾಡಿಕೊಂಡು ಶಿವನ ಅಸಮ್ಮತಿಯನ್ನು ಮೀರಿ ಯಜ್ಞಕ್ಕೆ ಹೋದಳು. ಅಪ್ಪ, ಅಮ್ಮ, ಸೋದರಿಯರೇ ಮೊದಲಾದವರಿಂದ ತಿರಸ್ಕೃತಳಾದಳು. ತನಗೆ ಮತ್ತು ತನ್ನ ಕಾರಣದಿಂದಾಗಿ ಶಿವನಿಗೆ ಅವಮರ್ಯಾದೆ ಆದುದನ್ನು ಸಹಿಸದೆ ಮುಂದಿನ ಜನ್ಮದಲ್ಲಿ ಶಿವನಿಗೆ ಮರ್ಯಾದೆಯನ್ನು ದೊರಕಿಸಿ ಕೊಡುವ ಹೆಂಡತಿ ಆಗಬೇಕೆಂದು ಆತ್ಮಾಹುತಿ ಮಾಡಿಕೊಂಡಳು. ಇದನ್ನು ತಿಳಿದ ಶಿವ ಅತಿಯಾದ ದುಃಖ ಮತ್ತು ಸಿಟ್ಟಿನಿಂದ ವೀರಭದ್ರನ ಅವತಾರದಲ್ಲಿ ದಕ್ಷನ ಯಜ್ಞವನ್ನು ಧ್ವಂಸಗೊಳಿಸಿದ, ದಕ್ಷನ ತಲೆಯನ್ನು ಕತ್ತರಿಸಿಹಾಕಿದ, ಎಲ್ಲವನ್ನೂ ಸುಟ್ಟುರುಹುವ ತನ್ನ ಮೂರನೆಯ ಕಣ್ಣನ್ನು ತೆರೆದ, ಸರ್ವ ವಿನಾಶಕಾರೀ ತಾಂಡವ ನೃತ್ಯ ಮಾಡಲಾರಂಭಿಸಿದ. ಆದರೂ ಅವನ ಕೋಪ ತಣಿಯಲಿಲ್ಲ, ಸತಿಯ ಮರಣದ ದುಃಖ ಕೊನೆಗಾಣಲಿಲ್ಲ”.
“ಅವಚಿ ಹಿಡಿದುಕೊಂಡುಬಿಟ್ಟಿದ್ದ ಸತಿಯ ಮೃತ ದೇಹದ ಅವಶೇಷಗಳನ್ನು ಹೊತ್ತುಕೊಂಡು ಜಗತ್ತಿನ ಮೂಲೆ ಮೂಲೆಯನ್ನೂ ತಿರುಗಿದ ಶಿವನಿಗೆ ಅವಳ ಹೊರತಾಗಿ ಮತ್ತೆ ಯಾವುದರ ಕಡೆಗೂ ಗಮನವೇ ಇರಲಿಲ್ಲ. ಇದರಿಂದ ಹೆದರಿದ ದೇವತೆಗಳು ವಿಷ್ಣುವಿನ ಮೊರೆ ಹೋದರು. ಹರನ ಧ್ವಂಸ ಕಾರ್ಯವನ್ನು ತಡೆಯಬೇಕೆಂದು ಮನವಿ ಮಾಡಿದರು. ಸತಿಯೊಂದಿಗಿನ ಅಂಟನ್ನು ಕತ್ತರಿಸಿ ಹಾಕಿದರೆ ಶಿವನ ದುಃಖ ಆರಬಹುದು ಎಂದು ವಿಷ್ಣು ಅವನನ್ನು ದುಃಖರೂಪೀ ವ್ಯಾಮೋಹದಿಂದ ಪಾರುಮಾಡಲು ಸತಿಯ ಇರುವಿಕೆಯ ಸೂಚಕ ಆಗಿದ್ದ ಅವಳ ಅವಶೇಷವನ್ನು ತನ್ನ ಸುದರ್ಶನ ಚಕ್ರದಿಂದ ತುಂಡು ತುಂಡು ಮಾಡಿದ. ಆ ತುಂಡುಗಳು ಭೂಲೋಕದ ಯಾವ ಯಾವ ಸ್ಥಳಗಳಲ್ಲಿ ಉದುರಿದವೋ ಅಲ್ಲೆಲ್ಲ ಶಕ್ತಿ ಕೇಂದ್ರಗಳ ಉಗಮ ಆಯಿತು. ಅವೆಲ್ಲ ಆಧ್ಯಾತ್ಮಿಕ ಮಹತ್ವ ಪಡೆದ ಪುಣ್ಯಕ್ಷೇತ್ರಗಳಾಗಿ ರೂಪುಗೊಂಡವು”.
…ಮುಂದುವರೆಯುವುದು
Feature Image credit: istockphoto.com
Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.