ಶ್ರೀಮತಿ ಸಹನಾ ವಿಜಯಕುಮಾರ್ ಅವರ ಕೃತಿ
If you have integrity, nothing else matters.
If you don’t have integrity, nothing else matters.
— Alan K. Simpson
ಉತ್ಥಾನ ಮತ್ತು ಅವಸಾನಗಳ ನಡುವಿನ ವ್ಯತ್ಯಾಸ ಇಷ್ಟೇ!
I. ಪ್ರಸ್ತಾವನೆ
ಶ್ರೀಮತಿ ಸಹನಾ ವಿಜಯಕುಮಾರ್ ಅವರ ಮೂರನೇ ಕೃತಿ ‘ಅವಸಾನ’ವು ಒಂದು ಸಾಮಾಜಿಕ ಕಾದಂಬರಿಯಾಗಿದೆ. ಸಮಾಜವು ವ್ಯಕ್ತಿ – ಕುಟುಂಬ – ಸಂಸ್ಥೆಗಳೆಂಬ ವಿಭಿನ್ನ ಗಾತ್ರದ ಘಟಕಗಳಿಂದ ಕೂಡಿರುತ್ತದೆ. ಹಾಗೆ ನೋಡಿದರೆ ಇಡೀ ಸಮಾಜವು ನಮ್ಮ ದೇಹವನ್ನೇ ಪ್ರತಿನಿಧಿಸುತ್ತದೆ — ಪುರುಷಸೂಕ್ತದ ಹಾಗೆ. ದೇಹದ ಎಲ್ಲ ಅಂಗಗಳೂ ಒಟ್ಟಾಗಿ ಸರಿಯಾಗಿ ಕೆಲಸ ಮಾಡಿದರೆ ಮಾತ್ರವೇ ಸ್ವಾಸ್ಥ್ಯ ಇರುವಂತೆ, ಸಮಾಜದ ಈ ಘಟಕಗಳೂ ತಂತಮ್ಮ ನೆಲೆಯಲ್ಲಿ ಕರ್ತವ್ಯಪಾಲನೆಯನ್ನು ಮಾಡಿದಾಗಲೇ ಅದಕ್ಕೂ ಸ್ವಾಸ್ಥ್ಯ ಎಂಬುದಿರುತ್ತದೆ. ಆದರೆ, ಇದು ಕೇವಲ ಆಶಯವೇ, ಆದರ್ಶವೇ ಅಥವಾ ವಾಸ್ತವ ಸತ್ಯವೇ? ಕಾದಂಬರಿಯಲ್ಲಿ ಈ ಪ್ರಶ್ನೆಯನ್ನು ಪರೀಕ್ಷೆಗೆ ಒಡ್ಡಲಾಗುತ್ತದೆ.
ಸಮಾಜವು ಜಡವಾದುದಲ್ಲ; ಅದು ಒಂದು ಜೀವಂತ ಸಂರಚನೆಯಾಗಿದೆ. ಜೀವಪ್ರಭೇದಗಳಲ್ಲಿ ಸಸ್ಯ ಮತ್ತು ಪ್ರಾಣಿಸಂಕುಲಗಳಿವೆ. ಸಸ್ಯ ಸಂಕುಲದಲ್ಲಿ ಬೇರು [ಮೂಲ] ಜೀವನಾಡಿ. ಈ ಮೂಲ ಅಥವಾ ಬೇರು ಭದ್ರವಾಗಿದ್ದರೆ ಮಾತ್ರ ಕಾಂಡ, ಶಾಖಾ, ಪತ್ರ, ಪುಷ್ಪ ಮತ್ತು ಫಲಗಳು ಉಳಿದಿರುತ್ತವೆ, ಇಲ್ಲವಾದರೆ ಇಲ್ಲ — ಹಾಗಾದಾಗ ಅದು ವೃಕ್ಷದ ಅವಸಾನ. ಮನುಷ್ಯಪ್ರಾಣಿಯ ಸಮಾಜದಲ್ಲಿ ಯಾವುದು ಅಂತಹ ಮೂಲ? ಹಿರಿಯ ತಲೆಮಾರುಗಳೊಡನೆಯ ಬಾಂಧವ್ಯವೋ ಅಥವಾ ತಲತಲಾಂತರದಿಂದ ಬಂದ ಮೌಲ್ಯಗಳೋ? ಬಾಂಧವ್ಯವನ್ನು ಬೆಸೆಯುವ ಸಂವೇದನೆಗಳೋ ಅಥವಾ, ಅವು ನೀಡುವ ಸಂಸ್ಕಾರಗಳೋ, ಬೆಳೆಸುವ ಚಿಂತನೆಗಳೋ? , ಈ ಎಲ್ಲ ಮೂಲಗಳು ಪ್ರಚೋದಿಸುವ ಚಿಂತನೆಗಳಿಂದ ಉದಿಸುವ ಅನುಷ್ಠಾನಗಳಲ್ಲಿ ಅಂತರ್ವಿರೋಧ ಮೂಡಿದರೆ? ಅಂತರ್ವಿರೋಧವು ಸಂಘರ್ಷಕ್ಕೆ ಎಳೆಸಿದರೆ ಮೌಲ್ಯಗಳ ಗತಿ ಏನು? ಇಂತಹ ಮೌಲ್ಯಗಳ ಮೌಲ್ಯವೇನು? ಎಂಬ ಪ್ರಶ್ನೆ ಬರುತ್ತದೆ.
ಇಲ್ಲಿ ಬೇರನ್ನು (ವಂಶದ ಹಿರಿಯರು) ಕಳೆದೂ ಸಂತಾನ ಉಳಿಯಬಹುದು; ಹಿರಿಯರ ಜೊತೆಗೆ ಮೌಲ್ಯವೇ ಕಳೆದುಹೋದರೆ ಏನಾಗಬಹುದು? ಅದು ವ್ಯಕ್ತಿಯಿಂದ ಮೊದಲಾಗಿ ರಾಷ್ಟ್ರದ ವರೆಗೆ ಎಲ್ಲದರ ಅವಸಾನ. ಈ ಕುರಿತಾಗಿ ಕಾದಂಬರಿಯ ಪ್ರಮುಖ ಪಾತ್ರವಾದ ಗಂಗಾಬಾಯಿ ಎಂಬ ಸಾಧ್ವೀಮಣಿಯ ಪ್ರಶ್ನೆಯ ಮೂಲಕ ಪ್ರಮುಖವಾದ ಈ ತಾತ್ತ್ವಿಕ ವಿಚಾರವನ್ನು ಕಾದಂಬರಿಯ ವಸ್ತುವಿಗೆ ಬೆಸೆಯಲಾಗಿದೆ. ಈ ಮೌಲ್ಯಗಳನ್ನು ಪಾತ್ರಗಳು ಗ್ರಹಿಸುವ ವೈವಿಧ್ಯಗಳು ಅನಾವರಣಗೊಳ್ಳುತ್ತ ಕಾದಂಬರಿಯು ಬೆಳೆಯುತ್ತದೆ. ಹೇಗೆ ಎಂಬುದನ್ನು ನೋಡೋಣ.
II. ಕಥಾಸಾರ
ತಾತ್ತ್ವಿಕ ಚರ್ಚೆಗೆ ಇಳಿಯುವ ಮೊದಲು, ಕಾದಂಬರಿಯ ಕಥಾಹಂದರವನ್ನು ಸಂಕ್ಷಿಪ್ತವಾಗಿ ಪರಿಚಯಿಸುವುದು ಸೂಕ್ತ. ಮುಂದಿನ ವಿಶ್ಲೇಷಣೆಯು ಕಾದಂಬರಿಯನ್ನು ಓದದ ವಾಚಕರಿಗೂ ಅರ್ಥವಾಗಲಿ ಎಂಬ ಉದ್ದೇಶದಿಂದ ಇದನ್ನು ಇಲ್ಲಿ ನೀಡಲಾಗುತ್ತಿದೆ.
ಸೊಲ್ಲಾಪುರ ಎಂಬ ಚಿಕ್ಕ ಪಟ್ಟಣದಲ್ಲಿ ಬಾಬುರಾವ್ ಮೋಹಿತೆ ಎಂಬ ಉದ್ಯಮಿಯ ಕುಟುಂಬದ ಕಥೆಯಾಗಿ ಆತನ ಹಠಮಾರಿತನ – ಕೀಳರಿಮೆ – ಉದ್ಯಮದ ನಷ್ಟ – ಕ್ರಿಯಾಹೀನತೆ – ತನ್ನವರ ಮೇಲೆ ತೋರುವ ದರ್ಪ ಮತ್ತು ಅಸಹಕಾರ – ತತ್ಕಾರಣವಾಗಿ ಮಗನ ವಿಶಾಲ ನಲ್ಲಿ ತಲೆಯೆತ್ತುವ ರೋಷ, ತಿರಸ್ಕಾರಗಳು – ಸಂಘರ್ಷ – ವಿಶಾಲನ ತಾಯಿ ಗಂಗಾಬಾಯಿಯ ಅಸಹಾಯಕತೆ – ಮಗ ವಿಶಾಲನ ಮಹತ್ವಾಕಾಂಕ್ಷೆ – ಆತನಿಗೆ ದೊರೆಯುವ ಸಹೃದಯಿ ಮಾಸ್ತರರ ಸಹಾಯ – ವಿಶಾಲನು ಸ್ಥಾಪಿಸಿ ನಡೆಸುವ ಸರ್ಕ್ಯೂಟ್ ಬೋರ್ಡ್ ವಿನ್ಯಾಸ ಮತ್ತು ಉತ್ಪಾದನಾ ಕಂಪನಿ – ಸೊಸೆ ಸುಲಭಾ ಹಾಗೂ ಆಕೆಯ ತವರಿನ ಚಿತ್ರಣ ಒಂದು ಕಡೆಯಿದೆ.
ಬೊಂಬಾಯಿಯ ಕಾಮಾಠಿಪುರ, ಅಲ್ಲಿನ ವೇಶ್ಯಾವಾಟಿಕೆ, ವೇಶ್ಯೆಯರ ಬದುಕಿನ ಅನಿವಾರ್ಯತೆಗಳು, ಭಾವಹೀನವಾದ ಅವರ ಬದುಕು, ಅವರುಗಳ ಶೋಷಣೆಯ ಮೂಲಕ ಹೊಟ್ಟೆಹೊರೆದುಕೊಳ್ಳುವ ಇಡೀ ಒಂದು ವ್ಯವಸ್ಥೆ, ದಿಕ್ಕು ದೆಸೆಯಿಲ್ಲದೆ ಬೆಳೆಯುವ ಅವರ ಮಕ್ಕಳ ಚಿತ್ರಣ ಮತ್ತೊಂದು ಕಡೆಯಿದೆ. ಇವೆರೆಡರ ನಡುವೆ ಕಾಮಾಠಿಪುರದ ಸೇವಾಸಂಸ್ಥೆ, ವೃದ್ಧಾಶ್ರಮ, ಆತ್ಮಾರಾಮರ ಅನಾಥಾಶ್ರಮಗಳು ಬರುತ್ತವೆ. ಅನಾಥಾಶ್ರಮದಲ್ಲಿ ಪಾಂಡುರಂಗ ವಿಠ್ಠಲನೇ ತಾಯಿ-ತಂದೆಯಾಗಿ ಪೊರೆಯುತ್ತಾನೆಂದು ಪರಿಭಾವಿಸಿ ಬೆಳೆಯುವ ಮಕ್ಕಳು, ಆಶ್ರಮದ ಭಯಮುಕ್ತ ಬದುಕು, ಭಕ್ತಿಯ ಅಭಿವ್ಯಕ್ತಿ ಮತ್ತು ವಾರಿಕರಿ ಸಂಪ್ರದಾಯ, ಆ ಮೂಲಕವಾಗಿ ಅಂತರ್ಗತವಾಗಿಸಿಕೊಳ್ಳುವ ಸೇವಾಭಾವ ಮೊದಲಾದ ವಿಚಾರಗಳು ಕಾದಂಬರಿಯನ್ನು ಆವರಿಸಿಕೊಂಡಿವೆ.
ಕಾದಂಬರಿಯ ಆರಂಭವೂ ಸತ್ಯನ ಪ್ರವೇಶದಿಂದ ಆಗುತ್ತದೆ ಮತ್ತು ಮುಕ್ತಾಯವೂ ಅವನ ನಿರ್ಗಮನದಿಂದಲೇ ಆಗುತ್ತದೆ. ಸತ್ಯ ಎಂಬ ಯುವಕನ ಪಾತ್ರವು ಈ ಎರಡೂ ಪ್ರಪಂಚಗಳನ್ನು ಬಂಧಿಸುವ ಸಾಮಾನ್ಯ ಎಳೆಯಾಗಿ ಚಿತ್ರಿಸಲ್ಪಟ್ಟಿದೆ — ಅಸಭ್ಯ ಪ್ರಪಂಚವೆಂಬ ಕಾಮಾಠಿಪುರದ ಝೋಪಡಿಯಿಂದ, ದೀದಿ ಎಂಬ ಸಮಾಜಸೇವಕಿಯ ಸಂಸ್ಥೆಯ ಮೂಲಕ, ಆತ್ಮಾರಾಮರ ಅನಾಥಾಶ್ರಮಕ್ಕೆ ಬಂದ ಸತ್ಯನು, ಅಲ್ಲಿಂದ ಸಭ್ಯ ಸಮಾಜದ ವಿದ್ಯಮಾನಗಳಲ್ಲಿ ಸಕ್ರಿಯ ಪಾತ್ರವಾಗಿ ತೊಡಗಿಕೊಳ್ಳುವ ಆತನ ಯಾತ್ರೆಯೇ ಕಾದಂಬರಿಯ ಬೆನ್ನೆಲುಬು.
III. ಎರಡು ಧ್ರುವಗಳು — ಕಾದಂಬರಿಯ ರಚನಾ ವಿನ್ಯಾಸ
ಅವಸಾನವು ಸಮಕಾಲೀನ ಸಮಾಜದ ಪರೀಕ್ಷೆಗೆ ಎರಡು ಧ್ರುವಗಳನ್ನು ಆಯ್ದುಕೊಂಡಿದೆ. ಅದನ್ನು ನಾವು ‘ಸಭ್ಯ’ ಸಮಾಜ ಮತ್ತು ‘ಅಸಭ್ಯ’ ಸಮಾಜ ಎಂದು ಸ್ಥೂಲವಾಗಿ ಗುರುತಿಸಬಹುದು. ಸಮಾನಾಂತರವಾದ ಎರಡು ಸಮಾಜಗಳನ್ನು ಹಿಡಿದು ಒಂದನ್ನು ಮತ್ತೊಂದಕ್ಕೆ ಸಂವಾದಿಯಾಗಿ ತರಲಾಗಿದೆ ಮತ್ತು ಸಾಮಾನ್ಯ ಎಳೆಯೊಂದರ ಮೂಲಕ ಎರಡನ್ನೂ ಬಂಧಿಸಲಾಗಿದೆ. ಈ ಎಲ್ಲ ವಿದ್ಯಮಾನಗಳ ಪರಿಸರಗಳು ತಮ್ಮಿಂದ ತಾವೇ ಸ್ವತಂತ್ರ ಘಟಕಗಳೆನ್ನಿಸಿದ್ದಾಗ್ಯೂ Watertight compartments ಅಲ್ಲ; ಸಂವಹನವಿದೆ.
‘ಸಭ್ಯ‘ ಸಮಾಜದ ಚಿತ್ರಣ
ಈ ‘ಸಭ್ಯ’ ಸಮಾಜದಲ್ಲಿ ಕುಟುಂಬಗಳಿವೆ ಮತ್ತು ಅವುಗಳೊಳಗೆ ವ್ಯಕ್ತಿಗಳಿದ್ದಾರೆ. ಆ ವ್ಯಕ್ತಿಗಳ ವ್ಯಕ್ತಿತ್ವಗಳೇ ಪಾತ್ರಗಳಾಗಿವೆ. ಈ ಕುಟುಂಬಗಳಲ್ಲಿ ವಿವಿಧ ಬಗೆಗಳಿವೆ. ಅಂತರ್ವಿರೋಧ, ವಿರೋಧಾಭಾಸ ಮತ್ತು ಮೌಲ್ಯಸಂಘರ್ಷಗಳಿಂದ ಕೂಡಿದ ಕುಟುಂಬಗಳಿಗೆ ಬಾಬುರಾವ್ – ಗಂಗಾಬಾಯಿ, ಅವರ ಮಗ ವಿಶಾಲ್ ಹಾಗೂ ಆತನ ಪತ್ನಿ ಸುಲಭಾ ಪ್ರತಿನಿಧಿಯಾಗಿದ್ದಾರೆ. ಇದಕ್ಕೆ ಸಂವಾದಿಯಾಗಿ ಸುಹೃದಭಾವ ಹಾಗೂ ಮೌಲ್ಯಸಾಮ್ಯ-ಸ್ವೀಕೃತಿಗಳಿರುವ ಕುಟುಂಬಗಳಿಗೆ ಸುಲಭಾಳ ತವರಿನ ಸಮೀರ, ಅವನ ತಾಯಿ, ಅತ್ತಿಗೆ ಮತ್ತು ತಂದೆಯರಿದ್ದಾರೆ. ವಿಶಾಲನ ಬುದ್ಧಿಪ್ರಾಧಾನ್ಯದ ವ್ಯವಹಾರ ಪ್ರೇರಿತ ನೀತಿ ನಿರ್ಧಾರಗಳಿಗೆ ಸಂವಾದಿಯಾಗಿ ಭಾವಪ್ರಧಾನತೆಯೇ ದಿಗ್ದರ್ಶಿಯಾದ ಸಮೀರನ ಕುಟುಂಬವಿದೆ.
ಬಾಬುರಾಯರ ಮಲತಾಯಿ ಮತ್ತು ಮಲ ಸಹೋದರರ ಸ್ವಾರ್ಥಪರತೆ ಮತ್ತು ಶೋಷಣೆ-ದಬ್ಬಾಳಿಕೆಗಳ ಪಾತ್ರಗಳಿಗೆ ಸಂವಾದಿಯಾಗಿ ಕರ್ತವ್ಯಪರತೆ ಮತ್ತು ಪ್ರೀತ್ಯಾದರಗಳನ್ನು ಆಚರಿಸುವ ಗಂಗಾಬಾಯಿಯ ತವರಿನ ಸಹೋದರರಿದ್ದಾರೆ. ಸ್ವಾರ್ಥ ದಬ್ಬಾಳಿಕೆಗಳನ್ನು ಗುರುತಿಸಿಯೂ ಭಾವ ಮತ್ತು ಬುದ್ಧಿಗಳ ಸಮನ್ವಯವನ್ನು ಬಾಬೂರಾಯರ ಹಾಗೆ ಸಾಧಿಸದೇ ಹೋದರೆ ಏನಾಗಬಹುದು? ಈ ಅಸಂಬದ್ಧ ನಡೆಗೆ ಸಂವಾದಿಯಾಗಿ ಸುಲಭಾಳ ತಂದೆ, ವಿಶಾಲನ ಸ್ನೇಹಿತರಿಗಿರುವಂತೆ ಹೊಣೆ ಹೊತ್ತು ನಡೆಸುವ ತಂದೆಯರಿದ್ದಾರೆ.
ತಮ್ಮ ಆಂತರ್ಯದಲ್ಲಿ ಸೌಹಾರ್ದಭಾವದಿಂದ ಸಶಕ್ತವಾಗಿ ಅಥವಾ ಅಂತರ್ವಿರೋಧ-ಸಂಘರ್ಷಗಳಿಂದ ದುರ್ಬಲವಾಗಿ ಕೌಟುಂಬಿಕ ಸ್ವರೂಪವನ್ನು ತಕ್ಕಮಟ್ಟಿಗೆ ಉಳಿಸಿಕೊಂಡಿರುವ ಪೂರ್ಣ ಕುಟುಂಬಗಳ ಜತೆಗೇ, ಒಂದು ಕಾಲದಲ್ಲಿ ಸಭ್ಯ ಸಮಾಜದ ಭಾಗವಾಗಿದ್ದು ಈಗ ಒಡೆದು ಹೋದ ಕುಟುಂಬಗಳಿವೆ. ಭಾವವೇ ಪ್ರಧಾನವಾಗಿರಬೇಕಾದ ಕಡೆಯಲ್ಲಿ ವ್ಯವಹಾರ ಪ್ರಾಧಾನ್ಯತೆಯು ಇಣುಕಿದಾಗ ಪರಿಣಾಮ ಏನಾಗುತ್ತದೆ? ಅದು ಕುಟುಂಬ ವ್ಯವಸ್ಥೆಯ ಅವಸಾನ! ಈ Decline — ಕ್ಷೀಣಿಸುವ ಪ್ರಕ್ರಿಯೆಗೆ ಸಿಲುಕಿದ ಕುಟುಂಬಗಳ ಚಿತ್ರಣ ಕಾದಂಬರಿಯಲ್ಲಿದೆ.
ಒಂದು ಕಾಲದಲ್ಲಿ ಸಂಘಟಿತವಾಗಿದ್ದ ಕುಟುಂಬಗಳು ವಿಘಟಿತವಾಗಿ, ಇಲ್ಲಿ ಕುಟುಂಬ ಎನ್ನುವುದು ಕೇವಲ ಭೂತಕಾಲದ ಪ್ರೇತಛಾಯೆಯಾಗಿ ಕಾಣುತ್ತದೆ. ಅದೊಂದು ನೆನಪು ಮಾತ್ರ — ಬದುಕಿದ್ದೂ ಸತ್ತಂತಿರುವ ಹಲವಾರು ವೃದ್ಧರ ವೃದ್ಧಾಶ್ರಮದಲ್ಲಿ!
ಲಿಯೋ ಟಾಲ್ ಸ್ಟಾಯ್ ಅವರ ಪ್ರಖ್ಯಾತ ಕಾದಂಬರಿ ಅನ್ನಾ ಕರೆನಿನಾ ದಲ್ಲಿ ಹೇಳಿದಂತೆ ” all happy families are alike; every unhappy family is unhappy in its own way” ಎಂಬ ಹಾಗೆ, ಒಬೊಬ್ಬರದ್ದು ಒಂದೊಂದು ಬಗೆಯ ಕಥೆ-ಕಾರಣಗಳಿದ್ದರೂ ಕೂಡಾ ಪರಿಣಾಮ ಮಾತ್ರ ಏಕರೂಪವಾಗಿದೆ. ಎಲ್ಲರೂ ಪರಿತ್ಯಕ್ತರು — ಜೀವನ ಸಂಧ್ಯೆಯಲ್ಲಿ! ಇದು ಬದುಕಿನ ಧ್ಯೇಯವೇ (ಜಿಜೀವಿಷ) ಕಂಡಂಥ ಅವಸಾನವೇ? ತನ್ನವರೆಂದು ತಿಳಿದವರ ತಿರಸ್ಕಾರದ ನಡುವೆ ಸಂಬಂಧವೇ ಇಲ್ಲದವರು ಬಂದು ಅಕ್ಕರೆ ತೋರುವ ವಿರೋಧಾಭಾಸದಲ್ಲಿ ಇರುವ ಪ್ರಕ್ರಿಯೆಯನ್ನು ಕೂಡಾ ಸಾಂದರ್ಭಿಕವಾಗಿ ಸಂವಾದಿಯಾಗಿ ತರಲಾಗಿದೆ. ಇದು ಈ ಪ್ರಪಂಚದಲ್ಲಿರುವ ಜೀವಪ್ರೀತಿಯ ದರ್ಶನವೂ ಹೌದು.
ಸಭ್ಯ ಎಂಬ ಈ ಸಮಾಜದೊಳಗೆ ಅಸಭ್ಯತೆಯ ಮೃಗೀಯ ಕ್ರೌರ್ಯವೂ ಗೋಮುಖ ವ್ಯಾಘ್ರವಾಗಿ ಅಸ್ತಿತ್ವದಲ್ಲಿರುತ್ತದೆ. ಸೂಕ್ತ ಬಲಿ ಸಿಕ್ಕಿದಾಗ ಪ್ರಕಟವಾಗುತ್ತದೆ. ಅದು ನೇತ್ರಾಳಿಗೆ ಆದಂತೆ! ಅದು ಅಸಭ್ಯ ಜಗತ್ತಿನಿಂದ ಸಭ್ಯ ಜಗತ್ತಿಗೆ ಇರಬಹುದಾದ ಪರಿವರ್ತನೆಯ ಸಾಧ್ಯತೆಯೇ ಕಂಡ ಅವಸಾನ.
ಈ ಸಭ್ಯ ಸಮಾಜ ಎಂದು ಗುರುತಿಸಿಕೊಂಡಿರುವಲ್ಲಿ ಚಟುವಟಿಕೆಗಳು ಹಗಲಿನಲ್ಲಿ ನಡೆಯುತ್ತವೆ. ರಾತ್ರಿಗಳಲ್ಲಿ ನಿಯಮದಂತೆ ಸುಪ್ತಾವಸ್ಥೆಗೆ ಜಾರುವುದು ಇಲ್ಲಿನ ಲಕ್ಷಣವಾಗಿದೆ. ರುಖುಮಾಬಾಯಿ ಎಂಬ ಪಾತ್ರದ ಸಂಸಾರದ ಕಥೆಯಲ್ಲಿ ಬಡವರ ಮನೆಯ ಹೆಣ್ಣು ಸೊಸೆಯಾಗಿ ಹೊಂದಿಕೊಂಡು ಹೋಗಬಹುದೆಂಬ ವಿಶ್ವಾಸದ ಅವಸಾನವಿದೆ. ಗೋಗಟೆ ಸಾಹೇಬರ ಸಂಸಾರದ ತಲ್ಲಣವಿದೆ. ಈ ಬಗೆಯ ಸಂಘರ್ಷಗಳು ಏರ್ಪಡುವುದೇಕೆ ಎಂಬ ಪ್ರಶ್ನೆಗೆ ಉತ್ತರವು ವಿಶಾಲನ ಕಂಪನಿಯ ಸರ್ಕ್ಯೂಟ್ ಬೋರ್ಡ್ ವಿನ್ಯಾಸ ಮತ್ತು ಉತ್ಪಾದನೆಗಳ ವಿವರಗಳಲ್ಲಿ ಸಾಂಕೇತಿಕ ರೀತಿಯಿಂದ ಅಭಿವ್ಯಕ್ತಿಗೊಂಡಿದೆ. ಸಂಘರ್ಷಗಳ ಹಿಂದಿನ ಮಾನವ ಮನೋಭಾವವು ಮೋಟಾರಾಮನೆಂಬ ಮನೆಯಾಳಿನ ಮುಗ್ಧವಾದರೂ ಗಹನವಾದ ಮಾತುಗಳಲ್ಲಿದೆ.
‘ಅಸಭ್ಯ‘ ಸಮಾಜದ ಚಿತ್ರಣ
‘ಸಭ್ಯ’ ಸಮಾಜಕ್ಕೆ ಮತ್ತೊಂದು ಧ್ರುವದಲ್ಲಿ ‘ಅಸಭ್ಯ’ ಎಂದು ಸಭ್ಯರಿಂದ ಗುರುತಿಸಲ್ಪಟ್ಟಿರುವ ಮತ್ತು ‘ಸಭ್ಯ’ರಿಂದಲೇ ಬಹುಮಟ್ಟಿಗೆ ತನ್ನ ಜೀವಮೂಲವನ್ನು ಪಡೆದುಕೊಳ್ಳುವ ಪ್ರಪಂಚವಿದೆ. ಸಭ್ಯ ಸಮಾಜದಲ್ಲಿ ಇರುವಂತೆ ಈ ಪ್ರಪಂಚದಲ್ಲಿ ಕುಟುಂಬಗಳಿಲ್ಲ; ಕೇವಲ ವ್ಯಕ್ತಿಗಳಿದ್ದಾರೆ. ಈ ವ್ಯಕ್ತಿಗಳು ಹೆಣ್ಣುಗಳು. ಸಭ್ಯ ಸಮಾಜದಲ್ಲಿ ನಾವು ಕಂಡಂತೆ ವೃದ್ಧಾಪ್ಯದ ಬದಲಿಗೆ ಇವರುಗಳು ಯೌವ್ವನದಲ್ಲಿಯೇ ತಮ್ಮವರಿಂದ ದೈಹಿಕ-ಮಾನಸಿಕವಾಗಿ ಪರಿತ್ಯಕ್ತರಾದವರು!
ಸಭ್ಯ ಸಮಾಜದ ತೆವಲುಗಳನ್ನು ತಣಿಸುವ ಸೂಳೆಯರೆಂಬ ಬೆಲೆವೆಣ್ಣುಗಳು ಮತ್ತು ಅವರಿಗೆ ಬೇಕಿದ್ದೋ ಬೇಡದ್ದೋ ಆಗಿ ಹುಟ್ಟಿದ ತಂದೆಯರೇ ಇಲ್ಲದ ಮಕ್ಕಳುಗಳು ಇಲ್ಲಿನ ಪ್ರಮುಖ ಪಾತ್ರಗಳಾಗಿವೆ.ಸೂಳೆಯರನ್ನು ಬಳಸಿಕೊಂಡು ಹೊಟ್ಟೆ ಹೊರೆಯುವ ಉಪಜೀವಿಕೆಗಳು ಹಾಗೂ ಸೂಳೆಯರನ್ನು ಅನುಭವಿಸಿ ಕರಗಿ ಹೋಗುವ ವಿಟರ ಟೋಳಿ, ಮತ್ತು ಅವರನ್ನು ಉದ್ದರಿಸಲೆಂದೇ ಸೃಷ್ಟಿಯಾದ ಸಂಘ-ಸಂಸ್ಥೆ ಸೇವಾಕರ್ತರು ಈ ಪ್ರಪಂಚದ ಭಾಗಗಳು.ಇದು ಬೆಳಗಿನಲ್ಲಿ ಮಲಗಿ ಕತ್ತಲೆಯಲ್ಲಿ ಗರಿಗೆದರುವ ಜಗತ್ತು! ಇಲ್ಲಿ ವ್ಯವಹಾರವೇ ಪ್ರಧಾನ ಮತ್ತು ಭಾವವು ಗೌಣ ಅಥವಾ ಅನಪೇಕ್ಷಣೀಯ! ಒಂದು ವೇಳೆ ವ್ಯವಹಾರದ ಬದಲಿಗೆ ಭಾವಪ್ರಾಧಾನ್ಯತೆಯೇ ಮುನ್ನೆಲೆಗೆ ಬಂದರೆ ಇಲ್ಲಿ ಏನಾಗುತ್ತದೆ? ಆಗ ಜೀವಕ್ಕೂ, ವೃತ್ತಿಗೂ ಏಕ ಕಾಲದಲ್ಲಿ ಕುತ್ತು ಬರುತ್ತದೆ. ಚಂದ್ರಾ ಎಂಬ ವೇಶ್ಯೆಗೆ ಮತ್ತು ಕರಿ ಟೋಪಿಯ ಗಂಡಿಗೆ ಆದಂತೆ!
ಈ ಪ್ರಪಂಚದಲ್ಲಿ ಸಂಬಂಧಗಳಿಗೆ ಬೆಲೆಯಿಲ್ಲ ಹಾಗೂ ಸಂತಾನಗಳನ್ನು ಕುರಿತಾಗಿ ವಿಶೇಷ ಆಶೋತ್ತರಗಳಿಲ್ಲ. ಇಲ್ಲಿ ಅಸ್ಮಿತೆ-ಅಸ್ತಿತ್ವ ಎಂಬುದಿಲ್ಲ; ಅವಸಾನವೇ ಸ್ವತಃ ಜನ್ಮತಾಳುತ್ತದೆ ಎಂದೆನಿಸುತ್ತದೆ. ಈ ಪರಿಸರದಲ್ಲಿ ಹುಟ್ಟಿಯೂ ಸಾಮಾನ್ಯ ವಿಧಿಯನ್ನು ಮೀರಲು ಸಾಧ್ಯವೇ? ಚಂದ್ರಾ ಎಂಬ ಹೆಸರಿನ ಸೂಳೆಯ ಮಗ, ಮುನ್ನಾ ಎಂಬ ಬಾಲಕನು ‘ಸತ್ಯ’ ಎಂಬ ‘ಸತ್ಯಕಾಮನಾಗಿ’ ಬೆಳೆಯುವ ಸಾಧ್ಯತೆಯಿದೆ — ಎಲ್ಲ ನಿಯಮಗಳಿಗೂ ಅಪವಾದವಿರುವಂತೆ! ಹಾಗೆ ಆದಾಗ, ಅದು ಅವಸಾನದ ಅವಸಾನ! ಅವಸಾನದ ಅವಸಾನದಲ್ಲಿ ಮರುಹುಟ್ಟಿದೆ! ಇಂತಹ ಪ್ರಕ್ರಿಯೆಯೇ ಪ್ರಪಂಚದ ವಿಸ್ಮಯ ಹಾಗೂ ಇಂತಹ ವ್ಯಕ್ತಿತ್ವಗಳೇ ಸಮಾಜದ ಅಮೃತ ಬಿಂದುಗಳು. ಅದರ ಸಮಗ್ರ ಚಿತ್ರಣವು ಕಾದಂಬರಿಯಲ್ಲಿದೆ.
ಹಾಗಾದರೆ ಈ ಕತ್ತಲೆಯ ಪ್ರಪಂಚದಿಂದ ಬಿಡುಗಡೆ ಇದೆಯೇ? ಈ ಅವಸಾನವನ್ನು ಮೆಟ್ಟಿ ಉತ್ಥಾನದ ಮಾರ್ಗಕ್ಕೆ ಹೊರಳುವ ಬಗೆ ಹೇಗೆ? ಒಳಗಿನ ವ್ಯವಸ್ಥೆಯು ಸಹಕಾರಿ ಅಲ್ಲದ ಕಾರಣ ಹೊರಗಿನ ಒಂದು ಶಕ್ತಿ ಬೇಕು. ವಾಸ್ತವದ ನೆಲೆಯಿಂದ ನೋಡಿದಾಗ ಕಾದಂಬರಿಯಲ್ಲಿ ದೀದಿಯ ಸ್ವಯಂಸೇವಾ ಸಂಸ್ಥೆಯನ್ನು ಹಾಗೂ ಆತ್ಮಾರಾಮರ ಆಶ್ರಮಗಳನ್ನು ಪರಸ್ಪರ ಸಂವಾದಿಗಳಾಗಿ ತರಲಾಗಿದೆ. ಸ್ವಯಂಸೇವಾ ಸಂಸ್ಥೆಗೆ ಅದೊಂದು ವ್ಯಾವಹಾರಿಕ ಉದ್ಯೋಗ — ಹಾಗಾಗಿ ಸೇವೆಯಲ್ಲಿ ಸಮರ್ಪಣೆ ಇರಬೇಕೆಂದೇನೂ ಇಲ್ಲ. ಉದಾತ್ತ ಸೇವೆಯಲ್ಲಿ ತೊಡಗಿಕೊಂಡಾಗ್ಯೂ ಲೈಂಗಿಕ ಶೋಷಣೆಯು ತೋರಿಕೊಂಡು, ಅದಕ್ಕೆ ದೀದಿಯೇ ಬಲಿಯಾಗಿ, ದೀದಿಯ ಸೇವಾಸಂಸ್ಥೆಯು ಸೇವಾಧ್ಯೇಯದ ಅವಸಾನವನ್ನು ಪ್ರತಿನಿಧಿಸುತ್ತದೆ. ನಿರಪೇಕ್ಷ, ನಿಸ್ವಾರ್ಥ, ನಿರಹಂಕಾರ ಭಾವಗಳ ಆವಾಹನೆಯ ಮೂಲಕ, ಭಕ್ತಿ ಮಾರ್ಗದ ಸ್ವೀಕಾರದಿಂದ ಸೇವಾ ಸಮರ್ಪಣೆಗೆ ತೊಡಗಿಸುವ ಆತ್ಮಾರಾಮರ ಆಶ್ರಮವು ಉತ್ಥಾನದ ಮಾರ್ಗವನ್ನು ತೋರಿಸುತ್ತದೆ.
IV. ವಾರಿಕರಿ ಸಂಪ್ರದಾಯ — ಒಂದು ಪರಿಚಯ
ಕಾದಂಬರಿಯ ಆಧ್ಯಾತ್ಮಿಕ ಬೆನ್ನೆಲುಬಾಗಿ ನಿಲ್ಲುವ ವಾರಿಕರಿ ಸಂಪ್ರದಾಯದ ಸ್ವಲ್ಪ ಪರಿಚಯ ಇಲ್ಲಿ ಅವಶ್ಯಕ. ಮಹಾರಾಷ್ಟ್ರೇತರ ಓದುಗರಿಗೆ ಈ ಹಿನ್ನೆಲೆ ತಿಳಿಯದಿದ್ದರೆ ಕಾದಂಬರಿಯ ಅಂತ್ಯಭಾಗದ ಮಹತ್ತ್ವ ಅರ್ಥವಾಗಲಾರದು.
ವಾರಿಕರಿ ಸಂಪ್ರದಾಯವು ಮಹಾರಾಷ್ಟ್ರದ ಪಂಢರಾಪುರದ ವಿಠ್ಠಲ (ಪಾಂಡುರಂಗ, ವಿಠೋಬ) ದೇವರ ಭಕ್ತಿ ಪರಂಪರೆ. ೧೩ನೇ ಶತಮಾನದ ಜ್ಞಾನೇಶ್ವರ, ನಾಮದೇವ, ಏಕನಾಥ ಮತ್ತು ೧೭ನೇ ಶತಮಾನದ ತುಕಾರಾಮ ಮೊದಲಾದ ಸಂತ ಕವಿಗಳ ಅಭಂಗಗಳ ಮೂಲಕ ಈ ಪರಂಪರೆ ಮಹಾರಾಷ್ಟ್ರದ ಮನೆಮನೆಯಲ್ಲಿ ಬೇರೂರಿದೆ. ‘ವಾರಿಕರಿ’ ಎಂದರೆ ವರ್ಷಕ್ಕೆ ಎರಡು ಬಾರಿ ಪಂಢರಾಪುರಕ್ಕೆ ವಾರಿ (ಪಾದಯಾತ್ರೆ) ಹೋಗುವವರು. ಭಕ್ತ ಕುಂಬಾರ ಚಿತ್ರದ ಕೊನೆಯ ಭಾಗದಲ್ಲಿ ಬೇರೆ ಬೇರೆ ದಿಕ್ಕುಗಳಿಂದ ವಾರಿಕರಿಯ ಜನವಾಹಿನಿಗಳು ಹರಿದು ಒಂದು ಸೇರಿ ನದಿಯ ರೀತಿಯಲ್ಲಿ ಮುಂದುವರಿಯುವ ಅಪೂರ್ವ ಚಿತ್ರಣವಿದೆ.
ಈ ಸಂಪ್ರದಾಯದ ತಾತ್ತ್ವಿಕ ಮೂಲ ಜಾತಿ-ಲಿಂಗ-ಸ್ಥಾನಮಾನಗಳನ್ನು ಭಕ್ತಿಯ ಮೂಲಕ ಅತಿಕ್ರಮಿಸುವ ಸಮಾನತೆ. ಪಂಢರಾಪುರದ ವಿಠ್ಠಲನು ತನ್ನ ಸೊಂಟಕ್ಕೆ ಕೈ ಇಟ್ಟು ನಿಂತ ಭಂಗಿಯಲ್ಲಿ ಎಲ್ಲರನ್ನೂ ಸ್ವಾಗತಿಸುತ್ತಾನೆ — ಯಾರನ್ನೂ ತಿರಸ್ಕರಿಸದ ದೇವರ ಪ್ರತಿಮೆ. ಎಲ್ಲ ಜೀವಗಳಲ್ಲಿ ವಿಠ್ಠಲನನ್ನು ಕಾಣುವ ಸೇವಾಭಾವವೇ ಇಲ್ಲಿನ ಕೇಂದ್ರ ಬಿಂದು — ಇನ್ನೊಬ್ಬರ ಸೇವೆಯೇ ಭಗವಂತನ ಪೂಜೆ.
ಕಾದಂಬರಿಯಲ್ಲಿ ಆತ್ಮಾರಾಮರ ಆಶ್ರಮವು ಈ ಸಂಪ್ರದಾಯದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ. ಅಲ್ಲಿ ಬೆಳೆಯುವ ಮಕ್ಕಳು ಪಾಂಡುರಂಗ ವಿಠ್ಠಲನನ್ನೇ ತಾಯಿ-ತಂದೆಯಾಗಿ ಭಾವಿಸಿ ಬೆಳೆಯುತ್ತಾರೆ. ಪಂಢರಾಪುರದ ಯಾತ್ರೆಯು ಆಶ್ರಮದ ಮಕ್ಕಳಿಗೆ ಆತ್ಮಸಂಸ್ಕಾರದ ಶಾಲೆ. ಸತ್ಯನ ಆಂತರಿಕ ದೃಢತೆ, ಅವನ ‘ಕಾಮನ್ ಗ್ರೌಂಡ್’ — ಇದೇ ಆಶ್ರಮ ಮತ್ತು ವಾರಿಕರಿ ಸಂಸ್ಕಾರದ ಫಲ. ಮುನ್ನಾ ಎಂಬ ಬಾಲಕನಲ್ಲಿ ಆತನ ತಾಯಿಯಿಂದ ಬಿತ್ತಲ್ಪಟ್ಟ ಮೌಲ್ಯದ ಬೀಜವು ಅಂಕುರಿಸಿ ಬೆಳೆಯುತ್ತಾ ‘ಸತ್ಯ’ನೆಂದಾಗುವ ಪ್ರಕ್ರಿಯೆಯಲ್ಲಿ ಅವನತ ಜೀವವೊಂದು ಉನ್ನತ ಧ್ಯೇಯಕ್ಕೆ ತೆತ್ತುಕೊಳ್ಳುವ ಪ್ರಕ್ರಿಯೆಯು ಆತ್ಮಾರಾಮರ ಆಶ್ರಮದಲ್ಲಿ ಸಾಕಾರವಾಗುತ್ತದೆ. ಅದು ಆಶ್ರಮದ ಅಂಗಣದಲ್ಲಿ ಎತ್ತರೆತ್ತರಕ್ಕೆ ಬೆಳೆದು ಹಸಿರಿನಿಂದ ತುಂಬಿ ಕಂಗೊಳಿಸುವ ವೃಕ್ಷರಾಜಿಯ ಪ್ರತಿಮಾರೂಪದಲ್ಲಿ ಬಣ್ಣಿಸಲ್ಪಟ್ಟಿದೆ.ಇಲ್ಲಿ ಬಿಡುಗಡೆಯಿದೆ, ಅವಸಾನದ ಅವಸಾನವಿದೆ ಮತ್ತು ಉತ್ಥಾನದ ದಿಕ್ಸೂಚಿಯೂ ಇದೆ.
V. ಸರ್ಕ್ಯೂಟ್ ಬೋರ್ಡ್ — ಕಾದಂಬರಿಯ ಕೇಂದ್ರ ಪ್ರತಿಮೆ
ಅವಸಾನ ಕಾದಂಬರಿಯ ಅತ್ಯಂತ ವಿಶಿಷ್ಟ ಮತ್ತು ಬೌದ್ಧಿಕವಾಗಿ ಪ್ರಭಾವಶಾಲಿ ಲಕ್ಷಣವೆಂದರೆ ಅದು ಸರ್ಕ್ಯೂಟ್ ಬೋರ್ಡನ್ನು ಕೇವಲ ಒಂದು ವ್ಯಾವಹಾರಿಕ ಸಂಸ್ಥೆಯ ಭಾಗವಾಗಿ ಚಿತ್ರಿಸದೆ, ಅದನ್ನು ಕಾದಂಬರಿಯ ಸಮಾಜ ಮತ್ತು ತಾತ್ತ್ವಿಕ ಆಶಯಗಳ ಸಂಪೂರ್ಣ ರೂಪಕವನ್ನಾಗಿ ಪರಿವರ್ತಿಸಿರುವ ರೀತಿ. ಈ ಸರ್ಕ್ಯೂಟ್ ಬೋರ್ಡಿನ ಪ್ರತಿಮಾತ್ಮಕ ಅನ್ವಯವನ್ನು ಕುರಿತೇ ಒಂದು ದೀರ್ಘ ಪ್ರಬಂಧವನ್ನು ರಚಿಸಬಹುದು! ಸಾಹಿತ್ಯದ ಗೆಲುವಿರುವುದು ಇಂತಹ ಅಭಿವ್ಯಕ್ತಿಗಳಲ್ಲಿ. ಸಂಕ್ಷಿಪ್ತವಾಗಿ ಇಲ್ಲಿ ನೋಡೋಣ.
ಸರ್ಕ್ಯೂಟ್ ಬೋರ್ಡ್ ಎಂದರೇನು?
ಸರ್ಕ್ಯೂಟ್ ಬೋರ್ಡ್ (Printed Circuit Board) ಎಂಬುದು ವಿದ್ಯುನ್ಮಾನ ಘಟಕಗಳನ್ನು ಅಳವಡಿಸಿ ಸಂಪರ್ಕಿಸುವ ತಳಹದಿ. ಇದರಲ್ಲಿ ಅನೇಕ ಪದರುಗಳು (Layers) ಇರುತ್ತವೆ — ಪ್ರತಿ ಪದರವೂ ತನ್ನದೇ ವಿದ್ಯುತ್ ಮಾರ್ಗಗಳನ್ನು ಒಳಗೊಂಡಿರುತ್ತದೆ. ಬೋರ್ಡಿನ ಮೇಲೆ ಕೂರುವ ಎಲೆಕ್ಟ್ರಾನಿಕ್ ಉಪಕರಣಗಳು ನಿರ್ದಿಷ್ಟ ಕಾರ್ಯಗಳನ್ನು ನಿರ್ವಹಿಸುತ್ತಾ ಪರಸ್ಪರ ಸಂವಹಿಸುತ್ತವೆ.
ಇಲ್ಲಿ ಅತ್ಯಂತ ಪ್ರಮುಖವಾದ ಅಂಶವೆಂದರೆ Grounding (ಭೂ ಸಂಪರ್ಕ). ಗ್ರೌಂಡಿಂಗ್ ಎಂಬುದು ಸರ್ಕ್ಯೂಟಿನ ಎಲ್ಲ ಭಾಗಗಳನ್ನು ಒಂದೇ ಸಾಮಾನ್ಯ ಶೂನ್ಯ-ವೋಲ್ಟೇಜ್ ಆಧಾರಕ್ಕೆ ಜೋಡಿಸುವ ಪ್ರಕ್ರಿಯೆ. ಇದು ಅಪಾಯಕಾರಿ ವಿದ್ಯುತ್ ಉಲ್ಬಣಗಳಿಂದ (Power Surge) ಘಟಕಗಳನ್ನು ರಕ್ಷಿಸುತ್ತದೆ, ಸ್ಥಿರ ಕಾರ್ಯನಿರ್ವಹಣೆಯನ್ನು ಖಾತ್ರಿಪಡಿಸುತ್ತದೆ. Common Ground ಇಲ್ಲದ ಸರ್ಕ್ಯೂಟ್ — Floating Circuit — ಯಾವಾಗ ಬೇಕಾದರೂ ಸ್ಫೋಟಗೊಳ್ಳಬಹುದು.
ಸಮಾಜ ಎಂಬ ಒಂದು ಸರ್ಕ್ಯೂಟ್ ಬೋರ್ಡ್
ವಿವಿಧ ಭಾಗಗಳು ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ವ್ಯವಸ್ಥಿತರೂಪದಲ್ಲಿ ಆಯೋಜನೆಗೊಂಡು, ಒಂದರೊಡನೆ ಮತ್ತೊಂದು ಸೂಕ್ತ ರೀತಿಯಲ್ಲಿ ಸಂವಹಿಸುತ್ತ, ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಆಡುವ ರಂಗಸಜ್ಜಿಕೆಯೇ ಈ ಸರ್ಕ್ಯೂಟ್ ಬೋರ್ಡ್ ಎಂಬ ಚಿತ್ರಣವನ್ನು ಮೇಲೆ ನೋಡಿದೆವು. ಸಮಾಜದ ಪ್ರತಿಯೊಂದು ಘಟಕವೂ ತನ್ನಿಂತಾನೇ ಒಂದು ಸರ್ಕ್ಯೂಟ್ ಬೋರ್ಡ್ ಆಗಿರುತ್ತದೆ. ಸಮಾಜವೇ ಒಂದು ಸಂಕೀರ್ಣ ರೀತಿಯ ಸರ್ಕ್ಯೂಟ್ ಬೋರ್ಡ್. ಕುಟುಂಬವೂ ಒಂದು ಸರ್ಕ್ಯೂಟ್ ಬೋರ್ಡ್.
ಅದರಲ್ಲಿ ಎಷ್ಟು ಪದರುಗಳು ಇರುತ್ತವೆ ಎಂಬುದು ಆಯಾ ಕುಟುಂಬದ, ಸಂಬಂಧ ಸಂಕೀರ್ಣದ ಸಂರಚನೆಯನ್ನು ಅನುಸರಿಸುತ್ತದೆ. ಒಂದೊಂದು ತಲೆಮಾರಿಗೆ ಒಂದೊಂದು ಪದರ. ಒಂದೊಂದು ಸಂಬಂಧದ ನೆಲೆಯೂ ಒಂದೊಂದು ಪದರವೇ. ಈ ಪದರಗಳ ನಡುವಿನ ಸಂವಹನದ ಸಂಪರ್ಕ ಸೇತುಗಳೇ Printed Wired Network. ಬೋರ್ಡಿನ ಮೇಲೆ ಕೂರುವ ಎಲೆಕ್ಟ್ರಾನಿಕ್ ಉಪಕರಣದ ಭಾಗಗಳೇ ವ್ಯಕ್ತಿತ್ವಗಳು-ಪಾತ್ರಗಳು.
ಯಾವ ಯಾವ ಪದರಗಳಲ್ಲಿ ಎಲ್ಲಿಂದ ಎಲ್ಲಿಗೆ ವಿದ್ಯುನ್ಮಾನ ಸಂದೇಶವನ್ನು ಹೊತ್ತ ವಿದ್ಯುತ್ ಹರಿವು ಆಗಬೇಕು? ಈ ವಿದ್ಯುತ್ ಶಕ್ತಿ ಎಂಬ ಭಾವದ ಕಣಗಳು ಸಂತೋಷ-ಸೌಹಾರ್ದದ ಪಾಸಿಟ್ರಾನ್ ಕಣಗಳೋ ಅಥವಾ ನಕಾರಾತ್ಮಕ-ಪ್ರತ್ಯಾತ್ಮಕ ನೆಗೆಟಿವ್ ಎಲೆಕ್ಟ್ರಾನುಗಳೋ? ಬೋರ್ಡುಗಳನ್ನು ಸುವ್ಯವಸ್ಥಿತವಾಗಿ ನಡೆಸುವ ಶಕ್ತಿ ಯಾವುದಿರಬೇಕು? ಬದುಕಿನಲ್ಲಿಯೂ ಎಲ್ಲದಕ್ಕೂ ಒಂದು ನಿರೋಧಕ (Resistor) ಮತ್ತು ಧಾರಕಗಳ (Capacitor) ನಿಯಂತ್ರಣ ಬೇಕಲ್ಲ! ಅವು ಸೌಜನ್ಯದ ಮಿತಿಯನ್ನು, ಶಿಸ್ತು-ಸಂಯಮ, ಶೀಲ-ಅಶ್ಲೀಲ, ಸ್ವೀಕೃತ ಮತ್ತು ಅಸ್ವೀಕೃತಗಳ ಎಲ್ಲೆಗಳನ್ನು ನಿರ್ಧರಿಸುವ ಪ್ರತಿನಿಧಿಗಳಲ್ಲವೇ?
ಲೇಖಕಿಯು ಬಹಳ ಎಚ್ಚರಿಕೆಯಿಂದ Grounding ಮಾಡುವ ಪ್ರಕ್ರಿಯೆಯನ್ನು ಉಲ್ಲೇಖಿಸಿದ್ದಾರೆ. Common Ground ಎಂದರೇನು? ಅದೇ ಸರ್ವಾಂಗೀಕೃತ ಮೌಲ್ಯ ಸಮುಚ್ಚಯ — ಧರ್ಮದ ನೆಲೆಯಲ್ಲಿ ಸ್ಥಿತವಾಗಿರತಕ್ಕದ್ದು. ಆಗ ಯಾವುದೇ ಭಾಗಕ್ಕೆ ಎಷ್ಟೇ ಪ್ರಖರ ವಿದ್ಯುತ್ ಹರಿದರೂ ಆ Ground ಅವನ್ನು ಸಮತುಲಿತಗೊಳಿಸಿ ಕಾರ್ಯವೈಖರಿಯಲ್ಲಿ ಸಮನ್ವಯ ಸಾಧಿಸುತ್ತದೆ. ಇಲ್ಲದೇ ಹೋದರೆ ಭಾಗಗಳು ಕೆಟ್ಟೂ ಹೋಗಬಹುದು, ಸುಟ್ಟೂ ಹೋಗಬಹುದು.
ಮೂರು ಸರ್ಕ್ಯೂಟ್ ಸಂರಚನೆಗಳು
ಬಾಬುರಾಯರ ಅವಿಭಕ್ತ ಕುಟುಂಬದಲ್ಲಿ ಒಂದೊಂದು ಭಾಗಕ್ಕೆ ಒಂದೊಂದು ಮಟ್ಟದ Grounding — ಏಕರೂಪತೆಯಿಲ್ಲದ Split Grounding ಅಲ್ಲಿದೆ. ಅಂತೆಯೇ ಮೌಲ್ಯಗಳಲ್ಲಿ ಅಗಾಧವಾದ ವ್ಯತ್ಯಾಸ ಮತ್ತು ತತ್ಕಾರಣವಾಗಿ ಅಸಮತೋಲನವಿದೆ. ಧರ್ಮಪ್ರಜ್ಞೆಯ ಸಾಮಾನ್ಯ ಮೌಲ್ಯ ಎಂಬುದು ಕೇವಲ ಬಾಬೂರಾಯರ ಚಿಕ್ಕ ಭಾಗಕ್ಕೆ ಮೀಸಲು! ಅದನ್ನು ನಿರ್ವಹಿಸಲು ಹಿರಿಯನಾಗಿ ಬಾಬೂರಾಯರು ಸೋತದ್ದು ‘ಅವಸಾನ’ದ ಬೀಜಾಂಕುರಕ್ಕೆ ಕಾರಣವಾಗುತ್ತದೆ. ಉದ್ಯಮ ಮುಚ್ಚಿದಾಗ ಉಳಿದದ್ದೇನು? ಬೋಳು ಬೋಳಾದ ಸರ್ಕ್ಯೂಟ್ ಬೋರ್ಡ್! ಅದು ಪುನಃ Split Grounding ನ ಪಾಲಾಯಿತು — ಮಗನದ್ದೇ ಬೇರೆ, ತಂದೆಯದ್ದೇ ಬೇರೆ. ಅದೇ ಮೌಲ್ಯ ಪಲ್ಲಟ; ಅದೇ ಅವಸಾನ.
ಸುಲಭಾಳ ತವರಿನ ಮನೆಯ ಸರ್ಕ್ಯೂಟ್ ಬೋರ್ಡ್ ಒಂದೇ ಮೌಲ್ಯದ Ground ಗೆ ಬೆಸುಗೆಯಾಗಿದೆ. ಅಲ್ಲಿಯೂ ಕ್ಯಾನ್ಸರ್ ಕಾಯಿಲೆಯಿಂದ ಅವರ ಕುಟುಂಬದ ಮೌಲ್ಯ ಮತ್ತು ತಾಳ್ಮೆಗಳನ್ನು Power Surge ಮತ್ತು Outage ವಿಪರೀತಗಳಿಗೆ ಒಡ್ಡಲಾಗಿದೆ. ಆದರೆ ಅದು ನಲುಗುವುದಿಲ್ಲ. ಕಾರಣ? ಅಲ್ಲಿ ನಿರೀಕ್ಷೆಗಳಿಲ್ಲ; ಕೇವಲ ಕೈಂಕರ್ಯವಿದೆ — ಪ್ರೀತ್ಯಾದರಗಳ ಸೇವಾಭಾವ. ಸತ್ಯನ ರೀತಿಯಲ್ಲಿ ಇದು Common Ground ಸಾಧಿಸಿರುವ ವ್ಯವಸ್ಥೆ!
ಬೊಂಬಾಯಿಯ ವೇಶ್ಯಾವಾಟಿಕೆಯ ಕಾಮಾಠಿಪುರದಲ್ಲಿನ ನಿರಂತರ ಬದಲಾಗುವ ಭಾಗಗಳಿರುವ ಮುರುಕಲು ಸರ್ಕ್ಯೂಟ್ ಬೋರ್ಡಿಗೆ Grounding ಎಂಬುದೇ ಇಲ್ಲ. ಅದು ಒಂದು Floating Circuit — ಯಾವಾಗ ಬೇಕಾದರೂ ಸಿಡಿದು ಹೋಗಬಹುದು. Grounding ಇಲ್ಲದ ಈ ಭಾಗದಲ್ಲಿಯೂ ಅಪವಾದ ಎಂಬಂತೆ ಕ್ಷೀಣವಾದ ದುರ್ಬಲ Grounding ಅನ್ನು ತಾಯಿಯಿಂದ ಪಡೆದು ಬಂದ ಸತ್ಯನು, ಆಶ್ರಮದಲ್ಲಿ ಅದನ್ನು ಪ್ರವರ್ಧಿಸಿಗೊಂಡು, ದೋಷಗ್ರಸ್ತ Grounding ಪರಿಸರಗಳಲ್ಲಿ ಹರಿದಾಡುತ್ತಾ ಅದನ್ನು ಸರಿಪಡಿಸುವ ಕರ್ಮದಲ್ಲಿ ತೊಡಗುವ ಚಿತ್ರಣ ಕಾದಂಬರಿಯಲ್ಲಿದೆ. ಮೌಲ್ಯಗಳ ಅವಸಾನವನ್ನು ತಡೆಯುವ ಪ್ರಯತ್ನವೊಂದನ್ನು ವೇಶ್ಯೆಯೆಂಬ ಅಸಹಾಯಕ ಹೆಣ್ಣು ತನ್ನ ಅಸ್ವಾಭಾವಿಕ ಪರಿಸರದಲ್ಲಿ ಸಾಕಾರ ಮಾಡಬಲ್ಲಳಾದರೆ “ಸಭ್ಯ“ ಜಗತ್ತಿನ ಚಚ್ಚೌಕ ಮೂಲೆಗಳ ಮನೆಯಲ್ಲಿರುವ ಕುಟುಂಬಗಳಿಗೇಕೆ ಸಾಧ್ಯವಾಗಬಾರದು? ಹಾಗಾಗದಿದ್ದರೆ ಪರಿಣಾಮ ಏನಾಗುತ್ತದೆ ಎಂಬುದನ್ನು ವಿವರಿಸಲು ವೃದ್ಧಾಶ್ರಮದ ಅಸಂಖ್ಯ ದೃಷ್ಟಾಂತಗಳಿವೆ.
ನಮ್ಮ ಜೀವನವೂ ಸಹಾ ಎಲೆಕ್ಟ್ರಾನಿಕ್ ಸರ್ಕ್ಯೂಟ್ ಬೋರ್ಡಿನಂತೆ ಕೆಲಸ ಮಾಡಿದ್ದಾಗ್ಯೂ ಅಲ್ಲಿ ಒಂದು ವ್ಯತ್ಯಾಸವಿದೆ. ಬದುಕೆಂಬುದು ಚಲನಶೀಲತೆಯನ್ನೂ ಅವಾಹಿಸಿಕೊಂಡಿರುವ ಕಾರಣ ನಿರಂತರ ಬದಲಾವಣೆಯ Power Surge ಮತ್ತು Outage ಎದುರು ಮೌಲ್ಯಗಳ ಸ್ಥಿರತೆಯನ್ನು ಕಾಯ್ದುಕೊಂಡು ತನ್ನ ಕೆಲಸವನ್ನು ನಿರ್ವಹಿಸಬೇಕಾದ ವಿಶೇಷವಾದ ಸರ್ಕ್ಯೂಟ್ ಬೋರ್ಡ್ ನಮ್ಮ ಬದುಕು! ಅದರ ಜೊತೆಗೆ We don’t choose our blood relations — ಹಾಗಾಗಿ ಬದುಕಿನಲ್ಲಿ Proto–Pilot–Production ಎಂಬ ಯೋಜನಾಬದ್ಧ ಹಂತಗಳಲ್ಲಿ ಕುಟುಂಬದ ಸರ್ಕ್ಯೂಟ್ ಬೋರ್ಡ್ ಅನ್ನು ಕಟ್ಟಲಾಗದು. ಅದರ ಸಾಧಕ ಬಾಧಕಗಳನ್ನು ಗ್ರಹಿಸಿ, ನಿಗ್ರಹಿಸಿ, ಅಳವಡಿಸಿಕೊಳ್ಳುವುದು ಕ್ಷೇಮಕರವಾದ ನಡಿಗೆ. ಈ Dynamic Circuit board ವ್ಯವಸ್ಥೆಯಲ್ಲಿ ವಿಶಾಲನೂ ಸೇರಿ ಹಲವರ ಸಂಪೂರ್ಣ ವ್ಯಕ್ತಿತ್ವದ ವೈಶಾಲ್ಯ ಅನಾವರಣಗೊಳ್ಳುತ್ತದೆ.
VI. ಪಾತ್ರ ವಿಶ್ಲೇಷಣೆ
ಎಷ್ಟೊಂದು ಪಾತ್ರಗಳು ಬರುತ್ತವೆಯಾದರೂ ಕೆಲವು ಮಾತ್ರವೇ ಪ್ರಮುಖ ಭೂಮಿಕೆಯನ್ನು ಪಡೆದಿವೆ. ಜಿಜ್ಞಾಸೆಯ ದೃಷ್ಟಿಯಿಂದ ಉದಾಹರಣೆಗಳನ್ನು ಗಮನಿಸೋಣ.
ವಿಶಾಲ್ — ಸಂಕೀರ್ಣ ಪಾತ್ರ
ವಿಶಾಲ್‌ನದ್ದು ಸಂಕೀರ್ಣವಾದ ಪಾತ್ರ. ಸರಿ-ತಪ್ಪುಗಳ, ಧರ್ಮಾಧರ್ಮಗಳ ಜಿಜ್ಞಾಸೆಯನ್ನು ಹೊರತುಪಡಿಸಿ ನೋಡಿದರೆ ಪಾತ್ರವು ಅತ್ಯಂತ ವಾಸ್ತವಿಕ, ಸ್ವಾಭಾವಿಕ ಮತ್ತು ನೈಜತೆಯ ಚೌಕಟ್ಟಿನಲ್ಲಿ ಬಹಳ ಪ್ರಭಾವಶಾಲಿಯಾಗಿ ಮೂಡಿ ಬಂದಿದೆ. ನಮ್ಮೆಲ್ಲರೊಳಗೆ ವಿಶಾಲ್ ಇರುತ್ತಾನೆ; ಅವನಂತೆಯೇ ಧರ್ಮಸಂಕಟದ ಪರಿಸ್ಥಿತಿಗಳು ಬಂದಿರುತ್ತವೆ. ಆ ಒತ್ತಡದಲ್ಲಿ ಏನೋ ನಿರ್ಧಾರಗಳನ್ನು ಮಾಡಿರುತ್ತೇವೆ. ಆದಾಗ್ಯೂ ಕೊನೆಯಲ್ಲಿ ಅವನ ಮೇಲೆ ಬರುವ ಆರೋಪವು ಜಿಜ್ಞಾಸೆಯ ದೃಷ್ಟಿಯಿಂದ ಉತ್ಪ್ರೇಕ್ಷೆ ಎನಿಸಬಹುದಾದರೂ ಗಂಗಾಬಾಯಿಯಂಥ ಭಾವಜೀವಿಗಳಿಗೆ ಆ ಬಗೆಯ ಆಲೋಚನೆಯನ್ನು ಭರಿಸುವ ಶಕ್ತಿ ಇರುವುದಿಲ್ಲ ಎಂಬುದೂ ಅಷ್ಟೇ ಸತ್ಯ. ಹಾಗೇಕೆ ?ಎಂಬ ಪ್ರಶ್ನೆ ಮೂಡುತ್ತದೆ.
Overton Window ಎಂಬ ಪರಿಕಲ್ಪನೆಯಿದೆ — ಒಂದು ವಿಚಾರವು ಅಸ್ವೀಕೃತಿಯಿಂದ ಸ್ವೀಕೃತಿಯ ಕಡೆಗೆ ಕ್ರಮಿಸುವ ಹಂತಗಳನ್ನು ಅಲ್ಲಿ ಮಂಡಿಸಲಾಗಿದೆ. ಇಂದು ಅಸ್ವೀಕೃತವಾದದ್ದು ಮುಂದೆ ಅದೇ ಅನಿವಾರ್ಯ ಎಂದೆನ್ನಿಸುವ ಹಂತಕ್ಕೆ ಒಂದು ಬಿಡುತ್ತದೆ. ಸಮಾಜವು ಅದನ್ನು ಸಹಜ ಎಂಬಂತೆ ಸ್ವೀಕರಿಸಿಯೂ ಬಿಡುತ್ತದೆ. ಹೋಟೆಲುಗಳಲ್ಲಿ ತಿನ್ನುವುದು ನಿಷಿದ್ಧ ಎಂಬ ಮನಸ್ಥಿತಿಯಿಂದ ಮನೆಯೊಳಗೆ ಅಡುಗೆಮನೆಯೇ ಬೇಕಿಲ್ಲ; ಹೊರಗಿನಿಂದ ತರಿಸಿ ದಿನವೂ ಆಹಾರ ಪೂರೈಕೆ ಮಾಡಿಕೊಳ್ಳಬಹುದೆಂದ ಮನಸ್ಥಿತಿಗೆ ಸಮಾಜವಿಂದು ಬಂದಿರುವುದು ಈ overton Window ದ ಒಂದು ಉದಾಹರಣೆ. ಇಂತಹ ಮೌಲ್ಯದೊಳಗೆ ಕಂಡುಬಂದ ಬದಲಾವಣೆಯ ಪ್ರಕ್ರಿಯೆಯಲ್ಲಿ ವಿಶಾಲನ ಪ್ರಯತ್ನವು ಸೋಲನ್ನು ಕಂಡಿತು. ಗಂಗಾಬಾಯಿ ಅದನ್ನು ಸ್ವೀಕರಿಸುವ ಹಂತಕ್ಕೆ ಬೆಳೆದೇ ಇರಲಿಲ್ಲ. ಆ ವಿಷಯದ ರಹಸ್ಯ ಕಾದಂಬರಿಯ ಕೊನೆಯಲ್ಲಿ ತೆರೆದುಕೊಳ್ಳುತ್ತದೆ. ನಿರ್ದಿಷ್ಟ ಕ್ಷಮತೆಯ ಸರ್ಕ್ಯೂಟ್ ಬೋರ್ಡುಗಳ ವ್ಯವಹಾರದಲ್ಲಿ ನಿರಪೇಕ್ಷ ಮೌಲ್ಯಗಳ ಪ್ರತಿನಿಧಿಯಾದ ಸತ್ಯನ ಬೆಂಬಲದಿಂದ ಗೆಲ್ಲುವ ವಿಶಾಲ್, ಚಲನಶೀಲವಾದ ಬದುಕಿನ ಸರ್ಕ್ಯೂಟ್ ಬೋರ್ಡಿನಲ್ಲಿ ಸತ್ಯನೊಂದಿಗೆ Common Ground ಸಾಧಿಸಲಾರದೆ ಹತಪ್ರಭನಾಗುತ್ತಾನೆ.
ನಿರ್ಣಯವೊಂದರ ಸರಿ-ತಪ್ಪುಗಳ ಹಿಂದಿನ ವಿಶ್ಲೇಷಣೆಯಲ್ಲಿ ಸಮರ್ಥನೆಯು ಗೆಲ್ಲಬಹುದು ಅಥವಾ ಸೋಲಬಹುದು. ಆದರೆ, ಆಳದಲ್ಲಿ ಇಳಿದು ನೋಡಿದಾಗ ನಿರ್ಧಾರವೊಂದರ ಹಿಂದಿನ ಪ್ರೇರಣೆಯೊಂದೇ ನಿಜವಾದ ಸರಿ-ತಪ್ಪುಗಳ ಮಾನದಂಡವೇ ಹೊರತು ಬೌದ್ಧಿಕ ಚತುರತೆಯ ಸಮರ್ಥನೆಗಳಲ್ಲ ಎಂಬುದರ ಅರಿವು ನಮಗಿರಬೇಕು. ತಂದೆ ಬಾಬುರಾಯರ ಕುರಿತಾದ ವಿಶಾಲನ ಭವಿಷ್ಯದ ಯೋಜನೆಗಳು ಮತ್ತು ಅದನ್ನು ಪ್ರಭಾವಿಸಿದ ಮೂಲ ಪ್ರೇರಣೆಗೆ ಹೆಚ್ಚು ಪ್ರಾಧಾನ್ಯತೆ ಕೊಟ್ಟು ವಿಶ್ಲೇಷಿಸಿದಾಗ ವಿಭಿನ್ನವಾದ ಅಭಿಪ್ರಾಯ ಮೂಡುತ್ತದೆ. ಈ ಜಿಜ್ಞಾಸೆಯು ಕಾದಂಬರಿಯ ಪ್ರಮುಖ ವೈಶಿಷ್ಟ್ಯ.
ಸತ್ಯ — ‘ನಿತ್ಯವೂ ಅವತರಿಪ ಸತ್ಯಾವತಾರ‘
ಸತ್ಯನದ್ದು ಆದರ್ಶವನ್ನು ಅದರ ಉತ್ಕೃಷ್ಟ ನೆಲೆಯಲ್ಲಿ ಪ್ರತಿನಿಧಿಸುವ ಪಾತ್ರ. ಅಯನ್ ರ್ಯಾಂಡ್‌ಳ Romantic Realism ಅನ್ನು ಬಿಂಬಿಸುವ ಪಾತ್ರ.
ಕುವೆಂಪು ಅವರ ಕವಿತೆಯ ‘ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲ್ಲಿ — ನಿತ್ಯವೂ ಅವತರಿಪ ಸತ್ಯಾವತಾರ’ ಎಂಬ ಸಾಲು ಅವನ ಪಾತ್ರಕ್ಕೆ ಅನ್ವರ್ಥವಾಗಿ ಅನ್ವಯಿಸುತ್ತದೆ. ಕವಿತೆಯ ಚರಣವೊಂದರಲ್ಲಿ “’ಮೂಡಿ ಬಂದೆನ್ನಾ ನರರೂಪ ಚೇತನದಿ ನಾರಾಯಣತ್ವಕ್ಕೆ ದಾರಿ ತೋರಾ.. ನಿತ್ಯವೂ ಅವತರಿಪ ಸತ್ಯಾವತಾರ” ಎಂದು ಬರುತ್ತದೆ. ಬಾಬುರಾಯರ ಮನೆಯಲ್ಲಿ ನಿತ್ಯ ಹಾಜರಾಗುವ ಸತ್ಯನ ಚರ್ಯಗಳು ನೀಡುವ ಸಂದೇಶ ಅಂತೆಯೇ ಇದೆ. ನರನ ಪ್ರತಿನಿಧಿಯಾಗಿ ವಿಶಾಲ್ ಮತ್ತು ಉಳಿದವರನ್ನು ಪರಿಗಣಿಸಿದರೆ ನರನಿಂದ ನಾರಾಯಣತ್ವಕ್ಕೆ ಏರಬೇಕಾದ ನಿರಪೇಕ್ಷ ಆದರ್ಶ ಸತ್ಯ ಎಂಬ ಪಾತ್ರವೇ ಆಗಿದೆ. ಅವನು ನೇರವಾಗಿ ಮನೆಯ ಮುಖ್ಯದ್ವಾರದ ಮುಂಬಾಗಿಲಿನಿಂದಲೇ ಪ್ರವೇಶಿಸುತ್ತಾನೆ.
ವಿಠ್ಠಲನ ವಾರಿಕರಿ ಸಂಪ್ರದಾಯದಲ್ಲಿ ಬೆಳೆದೊಬ್ಬ ಕಿರಿಯ ವೈದ್ಯ ಸ್ನೇಹಿತನಿದ್ದಾನೆ — ಪ್ರಸ್ತುತ ಆಸ್ಟ್ರೇಲಿಯಾದಲ್ಲಿದ್ದಾನೆ. ಪ್ರತ್ಯಕ್ಷವಾಗಿ ಅವನ ಸೇವಾಮನೋಭಾವ, ನಿರ್ವ್ಯಾಜ ಪ್ರೀತಿ ಮತ್ತು ವಿಧೇಯ ನಡವಳಿಕೆಯನ್ನು ಕಂಡಿರುವ ನನಗೆ ಸತ್ಯನ ಪಾತ್ರವು ವಾರಿಕರಿ ಹಿನ್ನೆಲೆಯಿಂದ ಬಂದದ್ದು ಆಶ್ಚರ್ಯ ಎನಿಸಲಿಲ್ಲ. ಸತ್ಯನ ಹಾಗೇ ನನ್ನ ಗೆಳೆಯ ವಿಠ್ಠಲ್ ಸುಲಭವಾಗಿ ಬೇರೆಡೆ ತಿನ್ನುವುದಿಲ್ಲ.
ಗಂಗಾಬಾಯಿ — ಕಾದಂಬರಿಯ ನೈತಿಕ ಕೇಂದ್ರ
ಗಂಗಾಬಾಯಿ ಕಾದಂಬರಿಯ ಸಾಧ್ವೀಮಣಿ. ಕಷ್ಟವನ್ನು ಕಹಿಯಾಗಿ ಅನುಭವಿಸದೆ, ಪ್ರತ್ಯರ್ಪಣೆ ಇಲ್ಲದ ಪ್ರೀತಿಯನ್ನು ಉಳಿಸಿಕೊಂಡ ಆಕೆಯ ಅಸ್ತಿತ್ವವೇ ಕಾದಂಬರಿಯ ನೈತಿಕ ಮಾನದಂಡ. ಆಕೆ ನಿಷ್ಕ್ರಿಯಳಾದ ಪಾತ್ರ ಅಲ್ಲ — ಆಕೆಯ ನೋವು, ಆಕೆಯ ಪ್ರಶ್ನೆಗಳು, ಆಕೆಯ ನಿರಾಕರಣೆಗಳು ಸಕ್ರಿಯ ನೈತಿಕ ನಿಲುವುಗಳು ಬಹಳ ಮಾರ್ಮಿಕವಾಗಿ ಬಿಂಬಿಸಲ್ಪಟ್ಟಿವೆ. ಆಕೆಯ ಮೂಲಕ ಕಾದಂಬರಿಯ ಮಹಾ ಪ್ರಶ್ನೆ ಏಳುತ್ತದೆ — ಎಲ್ಲರಿಗೂ ಪೋಷಣೆ ನೀಡಿದ ಬೇರು ತಾನೇ ಮಣ್ಣಿಲ್ಲದೆ ಉಳಿದಾಗ ಏನಾಗುತ್ತದೆ?
VII. ಪ್ರತಿಮೆಗಳು, ಅಭಿವ್ಯಕ್ತಿ ಮತ್ತು ನಿರೂಪಣಾ ಶಕ್ತಿ
ಅಭಿವ್ಯಕ್ತಿಯ ಭಾಗವಾಗಿ ಬಳಸಿಕೊಂಡಿರುವ ಪ್ರತಿಮೆಗಳು ಈ ಕಾದಂಬರಿಯ ಸಾಹಿತ್ಯಕ ಶಕ್ತಿ ಎನ್ನಬಹುದು. ಆರಂಭದಲ್ಲಿಯೇ ಬರುವ ‘ಬಣ್ಣ ಹೊಡೆಸಿಕೊಂಡಿದ್ದರೂ ತನ್ನ ಶೈಥಿಲ್ಯವನ್ನು’ ತೋರಿಸುವ ಕಟ್ಟಡವು ಅವಸಾನದ ಹಾದಿಯಲ್ಲಿರುವಂತೆ, ಒಳಗೂ-ಹೊರಗೂ! ತೋರಿಕೆ ಮತ್ತು ಆಂತರಿಕ ಸತ್ಯದ ನಡುವಿನ ಅಂತರವೇ ಕಾದಂಬರಿಯ ಕೇಂದ್ರ ಕಾಳಜಿ — ಈ ಚಿತ್ರದ ಮೂಲಕ ಅದು ಮೊದಲ ಪುಟದಲ್ಲೇ ಪ್ರಕಟವಾಗುತ್ತದೆ.
ಪ್ರಣವ ಸರ್ಕ್ಯೂಟ್ ಬೋರ್ಡ್ ಕಂಪನಿಯ ದೊಡ್ಡ ಎದ್ದು ಕಾಣುವ ಅಕ್ಷರಗಳು ಓರೆಕೋರೆಗಳಿಲ್ಲದಂತೆ ಬರೆಸಲ್ಪಟ್ಟಿರುವುದು ಅದರ ಒಡೆಯ ವಿಶಾಲನ ವ್ಯಕ್ತಿತ್ವವನ್ನು ಬಿಂಬಿಸುವ ಹಾಗೆ! ನೇರ-ನಿಷ್ಠುರ!
ಕುಟುಂಬ ಇರುವ ಸಭ್ಯ ಸಮಾಜದಲ್ಲಿ taken for granted ಆಗಿರುವ ಆ ಕುಟುಂಬವನ್ನು ಪುಸ್ತಕದಲ್ಲಿ ಮಾತ್ರ ಕಾಣುತ್ತ, ಗೋಡೆಯ ಮೇಲೆ ಪ್ರಕ್ಷೇಪಿಸುತ್ತ ಕನಸು ಕಾಣುವ ಮುನ್ನಾ! ಕುಟುಂಬಗಳ ಸಂರಚನೆಯು ಅವನಿಗೆ ಕನಸಿನಲ್ಲಿ ಬದಲಾಗುತ್ತಿದ್ದರೆ ವೃದ್ಧಾಶ್ರಮದ ನಿವಾಸಿಗಳಿಗೆ ಪ್ರತ್ಯಕ್ಷ ಅನುಭವವೇ ಆಗಿರುತ್ತದೆ. ಈ ವ್ಯತ್ಯಾಸವನ್ನು ಬಹಳ ಚೆನ್ನಾಗಿ ಬಣ್ಣಿಸಲಾಗಿದೆ.
ಸರ್ಕ್ಯೂಟ್ ಬೋರ್ಡಿನ ಸಂರಚನೆಯೇ ಪ್ರತೀಕವಾದ ವಿಚಾರವನ್ನು ಪ್ರತ್ಯೇಕ ವಿಭಾಗದಲ್ಲಿ ಪರಿಗಣಿಸಿದ್ದೇವೆ.
ಮುನ್ನಾನ ಕೈಗಡಿಯಾರ — ಕಾಲ ಮತ್ತು ಮಾರ್ಗದರ್ಶನದ ಪ್ರತೀಕ
ಮುನ್ನಾನಿಗೆ ಸಿಕ್ಕಿದ ಅವನ ತಾತ್ಕಾಲಿಕ ಬಾಬಾ ಮೊದಲಿಗೇ ಅವನಿಗೊಂದು ಕೈ ಗಡಿಯಾರ ತಂದು ಕೊಡುವುದು ಒಂದು ಪ್ರಭಾವಶಾಲಿ ಪ್ರತೀಕ. ಕಾಲನ ಪರಿಧಿಯಲ್ಲಿ ಆ ಬಾಬಾ (ತಂದೆಯು) ಮುನ್ನಾನನ್ನು ಪ್ರಪಂಚಕ್ಕೆ ತಂದದ್ದು ಮಾತ್ರ ಉಳಿಯುತ್ತದೆ. ಮುನ್ನಾ ಆ ಗಡಿಯಾರವನ್ನು ತಿರುಗಿಸಿ ಬಳಸಲು ಕಲಿತನಾದರೂ ಅದನ್ನು ತೋರಿಸಲು ಪುನಃ ಆತನಿಗೆ ಬಾಬಾ ಅವರ ಭೇಟಿಯಾಗಲೀ ಮಾರ್ಗದರ್ಶನವಾಗಲೀ ಸಿಗುವುದೇ ಇಲ್ಲ. ಅಲ್ಲಿ ಅವನು ತಬ್ಬಲಿ! ತನ್ನ ಕಾಲದ ಗತಿಯನ್ನು ತಾನೊಬ್ಬನೇ ನಿರ್ಧರಿಸುವ ಅನಿವಾರ್ಯತೆ ಅವನಿಗೊದಗುತ್ತದೆ.
ಕಥಾ ನಿರೂಪಣೆ :
ನಿರೂಪಣೆಯ ದೃಷ್ಟಿಯಿಂದ ನೋಡಿದಾಗ ಪ್ರತಿಯೊಂದು ಸನ್ನಿವೇಶ-ಸಂದರ್ಭದ ವಿವರಣೆಗೆ ಸೂಕ್ತವಾದ ಪರಿಸರ-ಪಾತ್ರ-ವೇದಿಕೆಯನ್ನು ಪ್ರಭಾವಶಾಲಿಯಾಗಿ ಕಟ್ಟಿಕೊಟ್ಟು ಬೆಳೆಸುವ ಕಾರಣದಿಂದ ಓದುಗನು ಆ ಸನ್ನಿವೇಶದ ಭಾಗವೇ ಆಗುವಷ್ಟು ತನ್ಮಯತೆಯನ್ನು ಸಾಧಿಸಲು ನೆರವಾಗುತ್ತದೆ. ವಿಶಾಲನು ತಂದೆಗೆ ಉಣ್ಣಿಸಿ ಹಾಲು ಕುಡಿಸಲು ಪ್ರಯತ್ನಿಸಿ, ಸೋತು ನಂತರ ಅವರ ಮೇಲೆ ಪ್ರಹಾರ ಮಾಡುವ ವಿವರಣೆಯಲ್ಲಿ ನಾನು ಸ್ವತಃ ಉದ್ದಿಗ್ನತೆಯನ್ನು ಅನುಭವಿಸುವ ಮಟ್ಟಿಗೆ ಸ್ವಾಭಾವಿಕವಾಗಿ ಬಣ್ಣಿಸಲ್ಪಟ್ಟಿದೆ. ಇದು ಕೇವಲ ಒಂದು ಉದಾಹರಣೆ ಮಾತ್ರ.
ಕಥೆಯು ಮಹಾರಾಷ್ಟ್ರದಲ್ಲಿ ನಡೆಯುವುದರಿಂದ ಮರಾಠಿ ಪದಗಳಾದ ನಾಷ್ಟಾ, ಆಯಿ, ಬಾಬಾ, ದೀದಿ, ಮಾವಶಿ, ಕಾಕಾ, ತ್ರಾಸ, ಚಲಾ, ಅಚಾನಕ್ ಮೊದಲಾದ ಪದಗಳನ್ನು ಕಟ್ಟುನಿಟ್ಟಾಗಿ ಬಳಸಲಾಗಿದೆ. ಈ ಕಾರಣದಿಂದ ಪ್ರಾದೇಶಿಕವಾಗಿ ಕಾದಂಬರಿಯು ವಾಚಕರನ್ನು ಅಲ್ಲಿ ಪ್ರತಿಷ್ಠಾಪಿಸುತ್ತದೆ.
ವಿಠ್ಠಲನ ವಾರಿಕರಿ ಯಾತ್ರೆ, ಆಶ್ರಮದ ಕಲಾಪಗಳು, ವೃದ್ಧಾಶ್ರಮದ ವಿವರ, ಎಲ್ಲವೂ ಆಪ್ತವಾಗುತ್ತವೆ. ಅದರೊಟ್ಟಿಗೆ ಬರುವ ಭಕ್ತಿ-ಆಧ್ಯಾತ್ಮ-ಶ್ರದ್ಧೆ ಮತ್ತು ಆ ಮೂಲಕ ಸರ್ವರಲ್ಲಿಯೂ ವಿಠ್ಠಲನ ಕಾಣುವ ಸೇವೆ ಮಾಡುವ ಮನೋಭೂಮಿಕೆಯನ್ನು ಬೆಳೆಸುವ ಪ್ರಕ್ರಿಯೆಗಳು ಮನಸ್ಸಿಗೆ ಮುದ ನೀಡುತ್ತವೆ. ಆಶ್ರಮ – ವಿಠ್ಠಲ – ಪೂಜೆ – ಅಲ್ಲಿನ ಬದುಕು – ಪಂಢರಾಪುರ ಪ್ರವಾಸ ಎಂಬ ‘ಎಲ್ಲರೊಳಗೊಂದಾಗುವ’ ಪ್ರಕ್ರಿಯೆಯು ಇಡೀ ಸಮಾಜವೆಂಬ ಸರ್ಕ್ಯೂಟ್ ಬೋರ್ಡಿನ Common Grounding ಆಗಿದೆ.
ವೇಶ್ಯೆಯರ ಬದುಕು ಮನಸ್ಸನ್ನು ಖಿನ್ನತೆಗೆ ದೂಡಿದರೂ ಸಹಾ ನೈಜತೆ-ಸಹಜತೆಗಳ ಕಾರಣದಿಂದ ಮನಸ್ಸಿನಲ್ಲಿಳಿಯುತ್ತದೆ. ಬಹಳ ಹಿಂದೆ ದೂರದರ್ಶನದಲ್ಲಿ ಉಮಾಶ್ರೀ ವೇಶ್ಯೆಯಾಗಿ ಮತ್ತು ಲೋಹಿತಾಶ್ವ ಒಬ್ಬ ವಿಟನಾಗಿ ನಟಿಸಿದ್ದ ಕಿರು ಚಿತ್ರ ಅಥವಾ ಧಾರಾವಾಹಿ ಬಂದಿತ್ತು. ಅದರಲ್ಲಿನ ಸಂಭಾಷಣೆಗಳು, ಪ್ರಶ್ನೆಗಳು ಮತ್ತು ಅಂತ್ಯ ನನ್ನನ್ನು ಬಹಳ ದಿನ ಕಾಡಿದ್ದವು. ಆ ಮಸುಕು ನೆನಪು ಮತ್ತೆ ಇಲ್ಲಿ ಜೀವ ಪಡೆಯಿತು.
VIII. ಕಾಲಾತೀತ ಪ್ರಶ್ನೆಗಳು — ಅಯನ್ ರ್ಯಾಂಡ್ ಮತ್ತು ಗಾರ್ಸಿಯಾ ಮಾರ್ಕ್ವೆಜ್ ಮತ್ತು ಅವಸಾನ.
ಪ್ರಾಪಂಚಿಕ ದೃಷ್ಟಿ ಇದ್ದವರಿಗೆ ಈ ಕಾದಂಬರಿಯಲ್ಲಿನ ವಿದ್ಯಮಾನಗಳು ಕಂಡು ಕೇಳರಿಯದ ವಸ್ತು-ವಿಚಾರ, ಕಥೆ ಅಥವಾ ಅನುಭವಗಳೇನಲ್ಲ. ಇವೇ ವಸ್ತುಗಳನ್ನಾಧರಿಸಿ ಕೆಲವಾರು ಸಿನಿಮಾಗಳು ಕೂಡಾ ಬಂದಿವೆ. ಹಾಗಾದರೆ ಈ ಕಾದಂಬರಿಯ ವಿಶೇಷವೇನು?
ಖ್ಯಾತ ಕಾದಂಬರಿಕಾರ ಗಾರ್ಸಿಯಾ ಮಾರ್ಕ್ವೆಜ್ ಹೇಳುತ್ತಾನೆ —
‘ಈ ಪ್ರಪಂಚದಲ್ಲಿ ಹೊಸದಾದ ಕಥೆಗಳು ಎಂಬುವುದೇನಿಲ್ಲ. ಎಲ್ಲ ಬಗೆಯ ಕಥೆಗಳೂ ಒಂದಲ್ಲಾ ಒಂದು ರೀತಿಯಲ್ಲಿ ಬಂದು ಹೋಗಿರುತ್ತವೆ. ಹೊಸತನ ಇರುವುದು ಆ ಮಾನವ ಅನುಭವಗಳನ್ನು, ಸಂವೇದನೆಗಳನ್ನು ಅಭಿವ್ಯಕ್ತಿಸುವ ಮತ್ತು ನಿರೂಪಿಸುವ ವಿಧಾನಗಳಲ್ಲಿ.’
ಈ ಮಾನದಂಡದಿಂದ ನೋಡಿದಾಗ ಅವಸಾನ ಕಾದಂಬರಿಯು ಸಮಕಾಲೀನ ಸಮಾಜದ ಇಡೀ ಚಿತ್ರಣವನ್ನು ವಸ್ತುನಿಷ್ಠವಾಗಿ ಕಟ್ಟಿಕೊಡುತ್ತದೆ. ಸಮಾಜದ ಪ್ರತಿಯೊಂದು ಚಿಕ್ಕ ಅಥವಾ ದೊಡ್ಡ ಘಟಕಗಳನ್ನು ಏಕಪಕ್ಷೀಯವಾಗಿ ನಿಲ್ಲಿಸುವ ಬದಲು ಸಂವಾದಿಗಳ ಜತೆಗೇ ಬೆಳೆಸುವ ಮೂಲಕ ವಾಸ್ತವವನ್ನು ಅನಾವರಣಗೊಳಿಸುತ್ತದೆ. ಸಮಗ್ರತೆಯನ್ನು ಕಾಯ್ದುಕೊಂಡ ಈ ಅಭಿವ್ಯಕ್ತಿಯು ಕಾದಂಬರಿಯ ನೆಲೆಯನ್ನು ಭದ್ರಗೊಳಿಸುತ್ತದೆ. ಅದು ಭಾವ ಪ್ರವಾಹವಿದ್ದಾಗ್ಯೂ ನಿರಪೇಕ್ಷ ತಟಸ್ಥ ವರ್ಣನಾ ವಿಧಾನ. ಪ್ರತಿಮಾತ್ಮಕ ಅಭಿವ್ಯಕ್ತಿಯ ಮೂಲಕ ಕಥಾನಿರೂಪಣೆ ಮಾಡಲಾಗಿದೆ.
ಅಭಿವ್ಯಕ್ತಿ ಮತ್ತು ನಿರೂಪಣೆಯನ್ನು ಮೀರಿದ ಮತ್ತೊಂದು ಗುಣ ಕಾದಂಬರಿಗೆ ಇರಬೇಕೆಂಬುದು ಖ್ಯಾತ ಲೇಖಕಿ ಮತ್ತು ಪ್ರಖರ ಚಿಂತಕಿ ಅಯನ್ ರ್ಯಾಂಡಳ ಅಭಿಪ್ರಾಯ. ವಿಕ್ಟರ್ ಹ್ಯೂಗೋ ಅನ್ನು ಉಲ್ಲೇಖಿಸುತ್ತ ಆಕೆ ಹೀಗೆ ಹೇಳುತ್ತಾಳೆ — “ತನ್ನ ಕಾಲಘಟ್ಟವನ್ನು ಮೀರಿ ನಿಲ್ಲಲು ಸೋಲುವಂಥ ಪುಸ್ತಕವನ್ನು ಬರೆಯುವ ಬದಲು ಲೇಖನಿಯನ್ನು ಮುರಿದು ಬಿಸುಡುವುದು ಸೂಕ್ತ” ಎನ್ನುತ್ತಾನಂತೆ ಹ್ಯೂಗೋ. ತನ್ನ ಕಾಲಘಟ್ಟಕ್ಕೆ ಸೀಮಿತವಾಗುವ ಕೃತಿ ‘ನಿಯತಕಾಲಿಕೆ’ ಆಗಬಹುದೇ ವಿನಃ ಕಾದಂಬರಿ ಆಗಲಾರದು ಎನ್ನುತ್ತಾಳೆ ರ್ಯಾಂಡ್. ಈ ಮಾತುಗಳನ್ನು ಶ್ರೀ ಭೈರಪ್ಪನವರೂ ತಮ್ಮ ಚಿಂತನ “ನಾನೇಕೆ ಬರೆಯುತ್ತೇನೆ” ಎಂಬ ಪುಸ್ತಕದಲ್ಲಿ ಪ್ರತಿಧ್ವನಿಸಿದ್ದಾರೆ.
ಅಯನ್ ರ್ಯಾಂಡಳ ಪ್ರಕಾರ — ಕಾದಂಬರಿಯ ವಸ್ತು ಯಾವುದೇ ಆಗಿರಲಿ, ಅದು ಮಾನವನ ಜೀವನವನ್ನು ಕಾಲಾತೀತವಾಗಿ ಪ್ರಭಾವಿಸುವ ಭಾವನೆಗಳು, ಮೂಲಭೂತ ಸ್ವಭಾವ, ಹೊಯ್ದಾಟಗಳು, ಧರ್ಮಸಂಕಟಗಳು, ಅಂತರ್ವಿರೋಧಗಳು, ಮೌಲ್ಯ ನಿಷ್ಠೆ ಮೊದಲಾದ ಅಂಶಗಳನ್ನು ಪ್ರತಿಪಾದಿಸುವಂತಿರಬೇಕು. ಹೇಗಿದ್ದೇವೆ ಎಂದಷ್ಟೇ ತೋರಿಸುವುದು ಕಾಲಾತೀತ ಸೃಷ್ಟಿಯಲ್ಲ; ಹೇಗಿರಬಹುದು ಮತ್ತು ಹೇಗೆ ಇರಬೇಕು ಎಂಬ ನೈತಿಕ ನಿಷ್ಠೆ ಹಾಗೂ Integrity ಎಂಬ ಉನ್ನತ ಆದರ್ಶವನ್ನು ಪ್ರತಿಪಾದಿಸುವುದು ಕಾಲಾತೀತ ಸೃಷ್ಟಿ ಆಗಬಹುದು ಎನ್ನುತ್ತಾಳೆ.
ಈ Integrity ಎಂಬ ನೈತಿಕ ನಿಷ್ಠೆ ಮತ್ತು ಆದರ್ಶಗಳನ್ನು ಪ್ರತಿನಿಧಿಸುವ ಪಾತ್ರಗಳ ಚಿತ್ರಣದಲ್ಲಿ ಅವಸಾನ ಕಾದಂಬರಿಯು ಹಲವಾರು ಕಾಲಾತೀತ ಪ್ರಶ್ನೆಗಳನ್ನೆತ್ತುತ್ತದೆ:
ತಾಯಿಯು ಮಗನಿಗೆ ಸೇರಿದವಳೋ? ಅಥವಾ ಗಂಡನಿಗೋ?
ಗಂಡನಾದವನನು ಹೆಂಡತಿಗೆ ಸೇರಿದವನೆ ಅಥವಾ ಆತನ ವಿವಾಹಪೂರ್ವದ ಕುಟುಂಬಕ್ಕೋ?
ಸಂಬಂಧ ನಿರ್ವಹಣೆ ಮತ್ತು ಕರ್ತವ್ಯ ನಿಷ್ಠೆಯಲ್ಲಿ ಆದ್ಯತೆ ಯಾವುದಕ್ಕೆ?
ಧರ್ಮ ಯಾವುದು? ಕರ್ತವ್ಯ ಯಾವುದು?
ಪ್ರೀತಿ ಎಂಬುದು ಸ್ಥಾಯೀ ಭಾವವೋ?
ಸಂಸ್ಕಾರದ ಮೂಲವೇನು? ರಕ್ತದ ಗುಣವೇ? ಪರಿಸರವೇ? ಸ್ವಯಂ ಆಯ್ಕೆಯೇ?
ಮೌಲ್ಯ ಸಂಘರ್ಷ ಏಕೆ ಬರುತ್ತದೆ?
ಈ ಎಲ್ಲ ಪ್ರಶ್ನೆಗಳು ಎಂದಿಗೂ ಮಾನವ ಸಮಾಜವನ್ನು ದೇಶ-ಕಾಲಾತೀತವಾಗಿ ಬಾಧಿಸುತ್ತಲೇ ಬಂದಿವೆ. ಅವಸಾನ ಕಾದಂಬರಿಯು ಈ ಪ್ರಶ್ನೆಗಳನ್ನು ಪುನಃ ಮುನ್ನೆಲೆಗೆ ತರುತ್ತದೆ. ಸರ್ಕ್ಯೂಟ್ ಬೋರ್ಡಿನ ಕಾರ್ಯವಿಧಾನ ಮತ್ತು ವಿನ್ಯಾಸವನ್ನು ಈ ಪ್ರಶ್ನೆಗಳಿಗೆ ಆರೋಪಿಸುತ್ತ ನಿಮ್ಮ ನಿಮ್ಮ ಉತ್ತರಗಳನ್ನು ಹುಡುಕಿಕೊಳ್ಳಬಹುದು.
ಗಾರ್ಸಿಯಾ ಮಾರ್ಕ್ವೆಜ್ ನ ಪ್ರಕಾರ ಪ್ರತಿಯೊಬ್ಬರ ಬದುಕಿಗೂ ಮೂರು ಕೇಂದ್ರೀಕೃತ ವೃತ್ತಗಳಿವೆ ಎನ್ನುತ್ತಾನೆ — Public, Private ಮತ್ತು Secret. ಈ Secret ಎಂಬ ಅಂತರಂಗದಲ್ಲಿ ನಮ್ಮನ್ನು ನಿರ್ದೇಶಿಸುವ ‘ನಾನು’ ಎಂಬ ಭಾವವು ಹೇಗೆ ಧರ್ಮ ಮತ್ತು ಆದರ್ಶಗಳನ್ನು ಮೀರಿ ನಮ್ಮ Private ಮತ್ತು Public ನಲ್ಲಿನ ವ್ಯಕ್ತ ನಡವಳಿಕೆಯನ್ನು ನಿರ್ದೇಶಿಸುತ್ತದೆ ಎಂಬುದು ಕಾದಂಬರಿಯ ಕೊನೆಯಲ್ಲಿ ಪ್ರಕಟವಾಗುತ್ತದೆ. ಸ್ವಾಭಾವಿಕವಾಗಿಯೇ, ಕಾದಂಬರಿಯ ಬಹುತೇಕ ಎಲ್ಲ ಪ್ರಮುಖ ಪಾತ್ರಗಳ ವ್ಯಕ್ತಿತ್ವ ಭಂಜನದ ಪ್ರಮುಖ ಕಾರಣವಾಗಿ ಈ ‘ನಾನು’ವಿನ ನಿರ್ದೇಶದ ಪರಿಣಾಮವು ಕಾದಂಬರಿಯ ಕೊನೆಯಲ್ಲಿ ತನ್ನ ಪಾತ್ರವನ್ನು ವಹಿಸಿದೆ. ಮೌಲ್ಯಸಂಘರ್ಷದ ಮೂಲ ಇಲ್ಲಿರುತ್ತದೆ.
ಯಾಜ್ಞವಲ್ಕ್ಯರು ಬೃಹದಾರಣ್ಯಕ ಉಪನಿಷತ್ತಿನಲ್ಲಿ ಈ ‘ನಾನು’ವಿನ ವಿಚಾರವನ್ನು ಬಹಳ ಮಾರ್ಮಿಕವಾಗಿ ಹೇಳುತ್ತಾರೆ — ಹೃದಯದ ಒಳಗೆ ಕೂತು ನಿರ್ದೇಶಿಸುವ ಅಂತರ್ಯಾಮಿಯ ಸ್ವರೂಪ ಯಾರ ಕಣ್ಣಿಗೂ ಕಾಣುವುದಿಲ್ಲ, ಆದರೆ ಅದು ಎಲ್ಲವನ್ನೂ ನಡೆಸುತ್ತಿರುತ್ತದೆ. ಕಾದಂಬರಿಯಲ್ಲಿ ವಾಚ್ಯವಾಗಿ ಬರುವ ಈ ‘ನಾನು’ವಿನ ಸಂದರ್ಭವು ಮತ್ತಷ್ಟು ಆಯಾಮಗಳಲ್ಲಿ ವಿಸ್ತರಿಸಬೇಕಾಗಿತ್ತೇನೋ ಎಂಬ ಭಾವ ನನಗೆ ಮೂಡಿದ್ದು ಎಷ್ಟು ಸಮಂಜಸ ಎಂದು ನನಗೇ ತಿಳಿಯಲಿಲ್ಲ. ಇನ್ನಷ್ಟು ಬೆಳೆಯಬೇಕಿತ್ತು; ಆಗ ಓದುಗರ ಆಂತರ್ಯಕ್ಕೆ ಹೆಚ್ಚು ತಟ್ಟುತ್ತಿತ್ತು ಎಂದು ನನ್ನ ಭಾವನೆ.
ಅಭಿವ್ಯಕ್ತಿ, ನಿರೂಪಣೆಯ ನಾವೀನ್ಯತೆ, ಆದರ್ಶಗಳ ಪರಿಪ್ರೇಕ್ಷೆಯಲ್ಲಿ ಪಾತ್ರಗಳ ಸ್ವರೂಪ ಹಾಗೂ ದೇಶಕಾಲಗಳನ್ನು ಆವರಿಸುವ ಪ್ರಶ್ನೆಗಳನ್ನು ಕಥಾಹಂದರದ ಭಾಗವಾಗಿಸುವ ಈ ಕಾದಂಬರಿಯು ಬಹು ಕಾಲಕ್ಕೆ ಸಲ್ಲುವ ಶ್ರೇಣಿಯಲ್ಲಿ ನಿಲ್ಲುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ವಾಚಿಸಲು ಕನ್ನಡದ ಓದುಗರು ಉಳಿದಿರಬೇಕಷ್ಟೆ!
IX. ತುಲನಾತ್ಮಕ ಓದು — ‘ತತ್ರಾಣಿ’ ಮತ್ತು ‘ಹಳ್ಳ ಬಂತು ಹಳ್ಳ’
ಅವಸಾನ ಒಂದು ಉತ್ಕೃಷ್ಟ ಸಾಹಿತ್ಯಕೃತಿ. ಸಮಕಾಲೀನ ಸಮಾಜದ ಜೀವ-ಭಾವಗಳ ಭಿತ್ತಿಚಿತ್ರ. ಈ ಕಾದಂಬರಿಯನ್ನು ದೀಪಾ ಜೋಶಿ ಅವರ ‘ತತ್ರಾಣಿ’ ಹಾಗೂ ಶ್ರೀನಿವಾಸ ವೈದ್ಯರ ‘ಹಳ್ಳ ಬಂತು ಹಳ್ಳ’ ಎಂಬ ಎರಡು ಕಾದಂಬರಿಗಳ ಜತೆಯಲ್ಲಿ ಓದಿ, ತೂಗಿ ನೋಡಬೇಕು. ಸಾಹಿತ್ಯಾಸಕ್ತರಿಗೆ ಅದೊಂದು ಗಂಭೀರವಾದ ಒಳನೋಟವನ್ನು ನೀಡಬಲ್ಲದು. ತತ್ರಾಣಿ ಮತ್ತು ಹಳ್ಳ ಬಂತು ಹಳ್ಳ ಕಾದಂಬರಿಗಳು ಅವಸಾನ ಕಾದಂಬರಿಯ ಸಭ್ಯ ಸಮಾಜದ ವಿಸ್ತೃತ ಮುಖಗಳು.
ಹಳ್ಳ ಬಂತು ಹಳ್ಳವು 20ನೇ ಶತಮಾನದ ಆದಿಭಾಗದಲ್ಲಿ ನಡೆದು ಸ್ವಾತಂತ್ರ್ಯ ಬಂದ ನಂತರದ ವರ್ಷದಲ್ಲಿ ಕೊನೆಯಾಗುತ್ತದೆ. ಕುಟುಂಬವೊಂದರ ಏರುಪೇರುಗಳಲ್ಲಿ, ತಲ್ಲಣಗಳಲ್ಲಿ ಹೇಗೆ ಸರ್ಕ್ಯೂಟ್ ಬೋರ್ಡಿನ Common Ground ಇದ್ದ ಕಾರಣ ಆ ಕುಟುಂಬಗಳು ಸಾಲು ಸಾಲು ಆಹವಗಳನ್ನು ದಾಟಿದವು ಎಂಬುದರ ಅಂತಃಸ್ಪರ್ಶಿ ಚಿತ್ರಣ ಅಲ್ಲಿದೆ. ವಾಸುದೇವಾಚಾರ್ಯರಂಥ ಸಮರ್ಥ ವ್ಯಕ್ತಿತ್ವಗಳ ಜತೆಗೆ ಹೊರಲೋಕದ ಬೆಳವಣಿಗೆಗಳು-ಬದಲಾವಣೆಗಳು ಅಲ್ಲಿ ಸಂಸಾರವೊಂದರ ಸ್ಥಿತಿಗತಿಗಳನ್ನು ಪ್ರಭಾವಿಸುತ್ತವೆ. ಹಳ್ಳ ಎಂಬುದೇ ಒಂದು ಪ್ರತೀಕವಾಗಿ ಬಳಕೆಯಾಗಿದೆಯಾದರೂ ಅದು ಪ್ರತೀಕವಾಗಿ ತೀರ ಪ್ರಭಾವಶಾಲಿಯಾಗಿಲ್ಲ. ಕಾದಂಬರಿಯಾಗಿ ಸಮರ್ಥವಾದ ಕೃತಿ. ಆ ಕಾಲಘಟ್ಟವನ್ನು ಮೀರಿ ಪ್ರಸ್ತುತವಾಗಬಲ್ಲದೇ? ಎಂದರೆ ಆಂಶಿಕವಾಗಿ ಎಂದು ಹೇಳಬಹುದು. ಒಳ್ಳೆಯ ಓದು, ಹದವಾದ ಭಾಷೆ, ಸ್ವಾಭಾವಿಕವಾದ ವ್ಯಕ್ತಿತ್ವಗಳ ಬಣ್ಣನೆ ಮತ್ತು ಭಾವಪೂರ್ಣವಾದ ನಿರೂಪಣೆ. ಗಂಗಾಬಾಯಿಗಿಂತ ಪ್ರಬುದ್ಧಳಾದ ತುಳಸೀಬಾಯಿಯ ಪಾತ್ರವಿದೆ. ಬಹುಕಾಲ ಕಾಡುವ ಕಥಾನಕ.
ತತ್ರಾಣಿಯು ಸ್ವಾತಂತ್ರ್ಯೋತ್ತರ ಕಾಲಘಟ್ಟದ್ದು. ಭುಜಂಗಾಚಾರ್ಯರೆಂಬ ಚಿಕ್ಕ ಬಾಲಕನೊಬ್ಬ ಇಡೀ ಸಂಸಾರದ ಭಾರವನ್ನು ಹೊತ್ತು ನಡೆಸುವ ಸಂಪೂರ್ಣವಾದ, ವಿಸ್ತಾರವಾದ ಜೀವನ ಚಿತ್ರದ ಕೌಟುಂಬಿಕ ಕಥಾನಕವಿದೆ. ಸಾಹಿತ್ಯಕ ತಂತ್ರಗಳನ್ನು ಎಲ್ಲಿಯೂ ಬಳಸದಿದ್ದರೂ ಸಹಾ ಪ್ರತ್ಯಕ್ಷದರ್ಶಿಯ ನಿರೂಪಣೆಯ ಆಧಾರದ ಮೇಲೆ ರಚಿಸಿದ ಈ ಕಾದಂಬರಿಯ ಓದು ಬಹಳ ಆಪ್ತವಾಗುತ್ತದೆ. ಭುಜಂಗಾಚಾರ್ಯರ ಜೀವನ ಪ್ರೀತಿ ಮತ್ತು ಸರ್ಜನಶೀಲತೆ, ಮಾನವೀಯ ಸಂವೇದನೆ ಮತ್ತು ಸಹಕರಿಸುವ ಕುಟುಂಬ, ಒಬ್ಬೊಬ್ಬ ಕುಟುಂಬದ ಸದಸ್ಯರೂ ತಂತಮ್ಮ ಮಿತಿಯಲ್ಲಿ ಮಾಡುವ ತ್ಯಾಗ, ಸಮಷ್ಟಿ ದೃಷ್ಟಿಯ ಮನೋಭಾವ, ಮತ್ತು ಹಿರಿಯಳಾದ ತಾಯಿಯ ನಿಸ್ಪಕ್ಷಪಾತ ನಿಲುವು — ಈ ಎಲ್ಲ ಕಾರಣಗಳಿಂದ Common Ground ಇದ್ದು ಈ ಸರ್ಕ್ಯೂಟ್ ಬೋರ್ಡ್ ಸಹಾ ಹಳೆಯದಾದರೂ, ಶಿಥಿಲವಾದರೂ ಕಾರ್ಯ ನಿರ್ವಹಿಸುತ್ತದೆ. ರಹಸ್ಯವೊಂದನ್ನು ಕೊನೆಯ ತನಕ ಬಿಟ್ಟುಕೊಡದೆ ಬೆಳೆದ ಕಥೆಯು, ಸಾಹಿತ್ಯಕ ತಂತ್ರಗಳಿಲ್ಲದೆಯೂ ಹಿಡಿದಿಟ್ಟು ಓದಿಸಿಕೊಂಡ ಕೆಲವೇ ಕೃತಿಗಳಲ್ಲಿ ತತ್ರಾಣಿ ಅಗ್ರಶ್ರೇಣಿಯದ್ದು. A powerful narration. ಆದರೆ ಕಥೆಯ ಪಾತ್ರ ಮತ್ತು ಘಟನಾವಳಿಗಳು ಆ ಸ್ವಾತಂತ್ರ್ಯೋತ್ತರದ 30-40 ವರ್ಷಗಳ ಕಾಲಘಟ್ಟಕ್ಕೆ ಸೀಮಿತವಾಗಿ ಬಿಡುತ್ತವೆ ಎಂಬುದು ಅದರ ಲಕ್ಷಣ.
ಇವೆರಡಕ್ಕೂ ಪೂರಕವಾಗಿ ಮತ್ತು ಸ್ವತಂತ್ರವಾಗಿ ಅದೇ ಬಗೆಯ ಕುಟುಂಬದ ಕಥೆ ಮತ್ತು ಸಮಾಜದ ಮುಖಗಳನ್ನು ಬಳಸಿದರೂ ಕೂಡಾ, ಕಾಮಾಠಿಪುರದ ವೇಶ್ಯೆಯರ ‘ಅಸಭ್ಯ’ ಪ್ರಪಂಚವನ್ನು ತರುವುದರ ಜತೆಗೆ, ಅವುಗಳನ್ನು ಕಾಲಾತೀತವಾದ ಮಾನವ ಜೀವನದ ಪ್ರಶ್ನೆಗಳಿಗೆ ಸಂವಾದಿಯನ್ನಾಗಿಸುವುದರ ಕಾರಣ ದೇಶಕಾಲಗಳನ್ನು ವ್ಯಾಪಿಸುವ ಕೃತಿಯಾಗಿ ಅವಸಾನವು ನಿಲ್ಲುತ್ತದೆ. ಮೇಲಿನ ಎರಡೂ ಕಾದಂಬರಿಗಳಿಗಿಂತ ಭಿನ್ನವಾಗಿ ಪ್ರತಿಮೆ-ಪ್ರತೀಕಗಳನ್ನು ಪ್ರಭಾವಶಾಲಿಯಾಗಿ ಬಳಸಿರುವುದು ಇಲ್ಲಿನ ವೈಶಿಷ್ಟ್ಯ. ರಹಸ್ಯವೊಂದರ ಎಳೆ ಉದ್ದಕ್ಕೂ ಬಂದು ಕೊನೆಯಲ್ಲಿ ಸ್ಫೋಟಗೊಳ್ಳುವಾಗ ಪಾಲ್ಗೊಂಡ ವ್ಯಕ್ತಿತ್ವಗಳು ಭಂಜಿಸಲ್ಪಡುತ್ತವೆ. ಸಮಕಾಲೀನ ಸಮಾಜದ ವಿವರಗಳು ಕೇವಲ ಪ್ರಾತಿನಿಧಿಕ ಮಾತ್ರ. ಈ ಕಥೆಯನ್ನು ಯಾವುದೇ ಶತಮಾನದಲ್ಲಿಟ್ಟು ಪರೀಕ್ಷಿಸಬಹುವಾಗಿದೆ. ಅವುಗಳಿಲ್ಲದೆಯೂ ಕಥಾ ಹಂದರ ತನ್ನ ಪ್ರಾಮುಖ್ಯತೆಯನ್ನು ಕಾಯ್ದುಕೊಳ್ಳುತ್ತದೆ. ಇದು ಕಾದಂಬರಿಯ ಗೆಲುವು.
X. ಕೆಲವು ಕೊರತೆಗಳು
ಹಾಗಾದರೆ ಈ ಕಾದಂಬರಿಯಲ್ಲಿ ಯಾವ ಕುಂದುಗಳೂ ಇಲ್ಲವೇ? ಕೆಲವನ್ನು ಪಟ್ಟಿ ಮಾಡಬಹುದು.
ಮೊದಲಿಗೆ ಪುಸ್ತಕದ ವಿನ್ಯಾಸ ಸ್ವಲ್ಪ ಕಿರಿಕಿರಿ ಮಾಡುತ್ತದೆ. ಪೂರ್ಣವಾಗಿ ಹರಡಿಕೊಳ್ಳದ ಪುಸ್ತಕವನ್ನು ಬೆರಳಿನಲ್ಲಿ ಒತ್ತಿ ಹಿಡಿದು ಓದುವುದು ‘ತ್ರಾಸದಾಯಕ’.
ಎರಡನೆಯದಾಗಿ ವಾಕ್ಯರಚನೆಗಳು ಕೆಲವೊಮ್ಮೆ ಗೊಂದಲಕ್ಕೆ ನೂಕುತ್ತವೆ. ಸಹಜ ಮಾತಿನ ಧಾಟಿ ಎಂಬ ಸಮರ್ಥನೆ ಕೊಟ್ಟಾಗ್ಯೂ ಅದು ಕಾದಂಬರಿಯ ನಿರೂಪಣೆಗೆ ಅವಶ್ಯಕ ಎಂದೇನಿಲ್ಲ. ಇದೊಂದು ಅನುಪಯುಕ್ತ ಪ್ರಯೋಗ ಎನ್ನಬಹುದು.
ಮೂರನೆಯದಾಗಿ ಮುನ್ನಾ ಆಡುವ ಮಾತುಗಳು ಕೆಲವೊಮ್ಮೆ ವಯಸ್ಸಿಗೆ ಮೀರಿದ್ದು ಎನಿಸುತ್ತವೆ. ಕೆಲವು ಸಂದರ್ಭಗಳಲ್ಲಿ ಅವನ ವಯಸ್ಸಿನ ಅಂದಾಜು ಸಿಗದಿರುವ ಕಾರಣ ಸ್ವಲ್ಪ ಮಟ್ಟಿಗೆ ಗೊಂದಲಕ್ಕೆ ದೂಡುತ್ತದೆ.
ನಾಲ್ಕನೆಯದಾಗಿ ಚಂದ್ರಾಳು ಕರಿ ಟೋಪಿಯವನ ಭೇಟಿಗೆ ಹೋಗುವ ಚಿತ್ರಣ ಸಮಂಜಸವಾಗಿ ಮೂಡಿಬಂದಿಲ್ಲ. ಆಕೆ ತನ್ನ ಕೋಣೆಯಿಂದ ಹೊರಹೋಗಿ ನಿಂತದ್ದೆಲ್ಲಿ? ಭೇಟಿಯಾದದ್ದೆಲ್ಲಿ? ಮುನ್ನಾ ಕಂಡದ್ದೇನು? ಆತನು ಧಾಂಡಿಗರ ಕೈಗೆ ಸಿಕ್ಕಿದ್ದು ಹೇಗೆ? ಚಂದ್ರಾಳ ಹಿನ್ನೆಲೆಯೂ ಬಂದಿಲ್ಲ ಮತ್ತು ಆಕೆಯ ಸಾವು ಕೂಡಾ ಅವಸರವಸರವಾಗಿ ಬಂದಂತಿದೆ. ಕೆಮ್ಮುತ್ತಿದ್ದವಳು ಖಾಯಿಲೆಗೆ ಬಿದ್ದದ್ದು – ಉಲ್ಬಣಗೊಂಡದ್ದು – ಇತ್ಯಾದಿಗಳ ಕಾಲಾನುಕ್ರಮಣಿಕೆ ಬರಬೇಕಿತ್ತು. ಇಲ್ಲಿ ತುಸು ಸಾವಧಾನದ ಅವಶ್ಯಕತೆ ಇದೆ ಎಂದೆನಿಸಿತು.
ಐದನೆಯದಾಗಿ ‘ನಾನು’ವಿನ ಸಂದರ್ಭವು ಮತ್ತಷ್ಟು ಆಯಾಮಗಳಲ್ಲಿ ವಿಸ್ತರಿಸಬೇಕಾಗಿತ್ತು. ಯಾಜ್ಞವಲ್ಕ್ಯರ ಬೃಹದಾರಣ್ಯಕ ಉಪನಿಷದ್ ದೃಷ್ಟಿಕೋನ ಬಹಳ ಗಹನ — ಈ ಗಹನ ವಸ್ತುವನ್ನು ತಂದದ್ದು ಸೂಕ್ತ, ಆದರೆ ಅದನ್ನು ಇನ್ನಷ್ಟು ಬೆಳೆಸಿದ್ದರೆ ಓದುಗರ ಆಂತರ್ಯಕ್ಕೆ ಹೆಚ್ಚು ತಟ್ಟುತ್ತಿತ್ತು.
ಆರನೆಯದಾಗಿ ಮನಿಷಾಳ ಮದುವೆ ಮುರಿದ ಕಾರಣವಾದ ಭಾವೀ ವರನ ನಡತೆಯ ಪ್ರಸಂಗದಲ್ಲಿ ನಾವೀನ್ಯತೆ ಇಲ್ಲದ್ದು ಒಂದು ಚಿಕ್ಕ ಕೊರತೆ. ಅವಾಸ್ತವ ಎಂದಲ್ಲ; ಆದರೆ ಕ್ಲೀಷೆಯಾಗಿ ಭಾಸವಾಗುತ್ತದೆ.
ಇವೆಲ್ಲವೂ ಸಣ್ಣ ಪುಟ್ಟ ಕೊರತೆಗಳೇ ಹೊರತು ಕಾದಂಬರಿಯ ಒಟ್ಟಾರೆ ಸಾಧನೆಗೆ ಅವು ತೊಡಕಾಗುವುದಿಲ್ಲ. ಅವು ಕಾದಂಬರಿ ಇನ್ನೂ ಹೆಚ್ಚು ಶ್ರೇಷ್ಠವಾಗಬಹುದಾಗಿದ್ದ ಸ್ಥಳಗಳನ್ನು ತೋರಿಸುತ್ತವೆ, ಅಷ್ಟೇ.
XI. ವ್ಯಕ್ತಿಗತ ಪ್ರತಿಧ್ವನಿ
ನನ್ನ ಅನುಭವವನ್ನೇ ಕ್ರೋಡೀಕರಿಸಿ ನೋಡಿದಾಗ ಅವಸಾನದ ಓದು ಒಂದು ವಿಶಿಷ್ಟ ಪ್ರತ್ಯಭಿಜ್ಞೆಯ ಅನುಭವ ನೀಡಿತು. ಸಾಹಿತ್ಯ ವಿಮರ್ಶೆ ಎನ್ನುವುದು ಕೇವಲ ಬೌದ್ಧಿಕ ವ್ಯಾಯಾಮ ಅಲ್ಲ — ಒಳ್ಳೆಯ ಕಾದಂಬರಿ ಓದುಗನ ಜೀವನ ದರ್ಶನಕ್ಕೆ ಕನ್ನಡಿ ಹಿಡಿಯುತ್ತದೆ. ಆ ಮಾತು ಇಲ್ಲಿ ಎಷ್ಟು ಸತ್ಯ ಎಂಬುದನ್ನು ನೋಡೋಣ.
ಅವಸಾನ ಓದುವಾಗ ಕೆಲಮಟ್ಟಿಗೆ ಬಾಬುರಾಯರನ್ನು ಹೋಲುವ ನನ್ನ ತಂದೆ ನೆನಪಾದರು —ತನಗಿದ್ದ ಕೀಳರಿಮೆಯಿಂದಾಗಿ ತನ್ನ ಕ್ರೋಧವನ್ನು ತನ್ನವರ ಮೇಲೆಯೇ ಹರಿಸುತ್ತಿದ್ದ, ತನ್ನ ಮನೆಯವರನ್ನೇ ಬಲಿ ಮಾಡಿದ ವ್ಯಕ್ತಿ ಹಾಗೂ ಕೀಳರಿಮೆಯಿಂದ ತನ್ನವರನ್ನೇ ದಂಡಿಸುತ್ತಿದ್ದ ಮತ್ತು ಶೋಷಕರನ್ನು ಓಲೈಸುತ್ತಿದ್ದ ಬಂಧುವೊಬ್ಬರ ವಿಪರ್ಯಾಸ ನೆನಪಾಯಿತು.
ನಮ್ಮ ಹಣಕಾಸಿನ ಪರಿಸ್ಥಿತಿ ಬದಲಾದಂತೆ ತಾವೂ ಬದಲಾದ ಬಂಧುವರ್ಗ ಮತ್ತು ಬದಲಾಗದೇ ಉಳಿದ ಬಂಧುವರ್ಗ — ಈ ಎರಡೂ ನೆನಪಾದವು. ವಿಶಾಲನ ಮಾಸ್ತರರನ್ನು ಬಹುಮಟ್ಟಿಗೆ ಹೋಲುವ ನನ್ನ ಮಾಸ್ತರ್, ತಕ್ಕ ಸಮಯದಲ್ಲಿ ಮಾರ್ಗ ತೋರಿದ ಅವರ ಮಹೋನ್ನತ ವ್ಯಕ್ತಿತ್ವ ಸದಾ ಹಚ್ಚಹಸಿರು.
ಸತ್ಯನನ್ನು ಹೋಲುವ ವಿಠ್ಠಲ್ ಎಂಬ ನನ್ನ ಗೆಳೆಯ — ವಾರಿಕರಿ ಪರಂಪರೆಯಲ್ಲಿ ಬೆಳೆದ, ಈಗ ಆಸ್ಟ್ರೇಲಿಯಾದಲ್ಲಿ ವೈದ್ಯನಾಗಿರುವ ವ್ಯಕ್ತಿ — ಅವನ ಸೇವಾಮನೋಭಾವ, ನಿರ್ವ್ಯಾಜ ಪ್ರೀತಿ, ನಮ್ರತೆ ಎಲ್ಲವೂ ನೆನಪಾದವು. ಸತ್ಯನ ಹಾಗೆ ನನ್ನ ಗೆಳೆಯ ವಿಠ್ಠಲ್ ಸಹ ಸುಲಭವಾಗಿ ಬೇರೆಡೆ ತಿನ್ನುವುದಿಲ್ಲ — ಇದೊಂದು ಚಿಕ್ಕ ವಿಷಯ ಅನ್ನಿಸಿದರೂ ಇದರ ಹಿಂದಿನ ಮೌಲ್ಯ ಚಿಕ್ಕದೇನಲ್ಲ.
ಸಮರಸದ Common Ground ನಿಂದ Split Ground ಆದ ನನ್ನ ದೊಡ್ಡಮ್ಮನ ಮನೆ ಸಿಡಿದು ಹೋದದ್ದು, ಮತ್ತು Split Ground ಅನ್ನು Common Ground ಗೆ ತರುವಾಗ ಎದುರಿಸುವ ಕಷ್ಟದ ಸವಾಲುಗಳು — ಇವು ಓದುತ್ತಿದ್ದಂತೆ ನನ್ನ ಜೀವನದ ಪ್ರತ್ಯಕ್ಷ ಅನುಭವಗಳಾಗಿ ಮೈದಳೆದವು. ಆ ಬದಲಾವಣೆ ಎಷ್ಟು ನಿಧಾನ, ಎಷ್ಟು ಸೂಕ್ಷ್ಮ ಮತ್ತು ಎಷ್ಟು ಆಯಾಸದಾಯಕ ಎಂಬುದನ್ನು ಅನುಭವಿಸಿದಾಗ ಮಾತ್ರ ತಿಳಿಯುತ್ತದೆ.ಕುಟುಂಬಗಳೊಳಗಿನ ಹಿರಿಯ-ಕಿರಿಯರ ಸಂಘರ್ಷಗಳು — ಎಲ್ಲವೂ ಕಣ್ಣ ಮುಂದೆ ಓದುತ್ತ ಹೋದಂತೆ ಜೀವಂತವಾದವು.
ಮುನ್ನಾನ ರೀತಿಯಲ್ಲಿ ಅವಹೇಳನಕ್ಕೆ ಒಳಗಾಗುತ್ತಿದ್ದ ಮತ್ತು TB ಯಿಂದಾಗಿ ಚಿಕ್ಕಂದಿನಲ್ಲಿಯೇ ತೀರಿಕೊಂಡ ನನ್ನ ಗೋಲಿ ಆಟದ ಗೆಳೆಯ ರಾಜ ನೆನಪಾದ. ಅವನನ್ನು ನಾನು ಗೊಲಿಯಲ್ಲಿ ಸೋಲಿಸಿ, ಅವನಿಗೆ ಅದನ್ನೇ ಮಾರಿ ಒಂದಷ್ಟು ರುಪಾಯಿ ಕೂಡಿಸಿ ಇಟ್ಟುಕೊಂಡಿದ್ದೆ. ಕ್ಷಯ ಉಲ್ಬಣವಾಗಿ ಆಟಕ್ಕೆ ಬಾರದ 2-3 ವಾರಗಳಲ್ಲಿಯೇ ಅವನು ತೀರಿಹೋದ. ಅದು ತಿಳಿದ ದಿನ ಅವನಿಂದ ಹತ್ತು, ಐದು, ಇಪ್ಪತ್ತೈದು ಪೈಸೆಗಳಿಗೆ ಮಾರಿದ್ದ ಗೋಲಿಯಗಳಿಕೆಯ ಕಾಸಿನ ಚೀಲ ನನ್ನಲ್ಲಿತ್ತು. ಅದನ್ನು ನೋಡುತ್ತ ಕುಳಿತಿದ್ದ ನನಗೆ ನಮ್ಮಮ್ಮ ಅದನ್ನು ಮರುದಿನ ಆಂಜನೆಯನ ಗುಡಿಯಲ್ಲಿಟ್ಟು ದೀಪ ಹಚ್ಚಿ ಬಾ ಎಂದಳು. ಆ ರಾಜನ ನೆನಪು ಇನ್ನೂ ಮಾಸಿ ಹೋಗಿಲ್ಲ. ಸೂಕ್ತ ಮಣ್ಣಿನ ಆಸರೆಯು ಸಿಕ್ಕಿದ್ದಿದ್ದರೆ ಅವನ ಬೇರು ಏನು ಮಾಡುತ್ತಿತ್ತೋ ಎಂಬ ಪ್ರಶ್ನೆ ಮನದಲ್ಲಿ ಮೂಡಿತು.
ಈ ಎಲ್ಲವನ್ನೂ ಕಂಡುಂಡು ಕಾಣುತ್ತಿರುವ ನನಗೆ ಅವಸಾನದ ಓದು ಹೊಸ ರೀತಿಯ ಒಳನೋಟವನ್ನು ಜೀವನ ದರ್ಶನ ಎಂಬುದಷ್ಟೇ ಅಲ್ಲದೆ, ಸಾಹಿತ್ಯಕ ಮತ್ತು ತಾತ್ತ್ವಿಕ ಚಿಂತನೆಗೆ ಅವಕಾಶವನ್ನೂ ಕಲ್ಪಿಸಿ ಪ್ರಭಾವಿಸಿದೆ. ಮೂರು ನೂರಾ ಐವತ್ತು ಪುಟಗಳ ಕಾದಂಬರಿಯ ಗಂಭೀರ ಓದು ಒಂದು ಅಪೂರ್ವ ಅನುಭೂತಿಯನ್ನು ನೀಡಬಲ್ಲದು.
XII. ಉಪಸಂಹಾರ
ಅವಸಾನ ಒಂದು ಉತ್ಕೃಷ್ಟ ಸಾಹಿತ್ಯಕೃತಿ. ಸಮಕಾಲೀನ ಸಮಾಜದ ಜೀವ-ಭಾವಗಳ ಭಿತ್ತಿಚಿತ್ರ. ಸರ್ಕ್ಯೂಟ್ ಬೋರ್ಡಿನ ವಿನ್ಯಾಸ ಮತ್ತು ವಿಧಾನದ ಮೂಲಕ ಸಮಾಜ ಮತ್ತು ಮಾನವ ಸಂಬಂಧಗಳ ಸ್ವರೂಪವನ್ನು ಬಿಡಿಸಿ ತೋರಿಸಿದ ರೀತಿ ಅನನ್ಯ. ಕಾಲಾತೀತ ಮಾನವ ಪ್ರಶ್ನೆಗಳನ್ನು ಸಮಕಾಲೀನ ಸಂದರ್ಭದಲ್ಲಿ ಹೊಸ ತೀವ್ರತೆಯಿಂದ ಕೇಳುವ ಈ ಕಾದಂಬರಿ ದೇಶಕಾಲಗಳನ್ನು ಮೀರಿ ಬಾಳುವ ಕೃತಿಯಾಗಿ ನಿಲ್ಲುತ್ತದೆ.
ಗಾರ್ಸಿಯಾ ಮಾರ್ಕ್ವೆಜ್ ನೆನಪಿಸುವಂತೆ ಹೊಸ ಕಥೆ ಯಾವುದೂ ಇಲ್ಲ — ಆದರೆ ಅವಸಾನ, ಹಳೆಯ ಕಥೆಯನ್ನು ಹೊಸ ತೀಕ್ಷ್ಣತೆಯಿಂದ ಮತ್ತು ಸಾಹಿತ್ಯಕ ತಂತ್ರಗಳ ಗಹನತೆಯನ್ನು ಬಳಸಿ ಕೇಳುವ ಪ್ರಶ್ನೆ :
ನಮ್ಮನ್ನು ಒಟ್ಟಿಗೆ ಬಂಧಿಸುವುದು ಯಾವುದು? ನಮ್ಮನ್ನು ಬೇರ್ಪಡಿಸುವುದು ಯಾವುದು? ಮತ್ತು ಎಲ್ಲವೂ ಬೇರ್ಪಟ್ಟ ನಂತರ — ಮರುಹುಟ್ಟಿನ ಸಾಧ್ಯತೆ ಇದೆಯೇ?
ಅವಸಾನದ ಉತ್ತರ, ಸತ್ಯ ಎಂಬ ಪಾತ್ರದ ಮೂಲಕ, ಮುಗ್ಧವೂ ಅಲ್ಲ, ಭಾವಪ್ರಧಾನವೂ ಅಲ್ಲ — ಆದರೆ ತನ್ನ ಶಾಂತ ರೀತಿಯಲ್ಲಿ ಮೂಲಭೂತ: ಹೌದು. ಅವಸಾನದ ಅವಸಾನ ಸಾಧ್ಯ. ಅದರ ಅವಶೇಷದಲ್ಲಿ ಏನೋ ಮರಳಿ ಹುಟ್ಟಬಹುದು. ಇದು ನಮ್ಮೊಳಗೂ ಅನುರಣಿಸಿದರೆ ಆಗ ಅದು ಸಾಹಿತ್ಯದ ಗೆಲುವು, ಸಂವೇದನೆಯ ಗೆಲುವು ಮತ್ತು ಸಾಹಿತಿಯ ಗೆಲುವು.
Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.