(ಚಿತ್ರಕೃಪೆ : ಆನಂದ ಕುಮಾರಸ್ವಾಮಿಯವರ Introduction to Indian Art ಪುಸ್ತಕದಿಂದ ಆಯ್ದ ಚಿತ್ರಣ)
ಆನಂದ ಕುಮಾರಸ್ವಾಮಿಯವರು ಸಂಶೋಧನೆ, ವಸ್ತುಸಂಗ್ರಹ, ಬರವಣಿಗೆ ಇವುಗಳಲ್ಲೇ ಇಡೀ ಜೀವನವನ್ನು ಸವೆಸಿದವರು. ನಾಲ್ಕೈದು ದಶಕಗಳ ಅವರ ಬೌದ್ಧಿಕ ವ್ಯವಸಾಯದ ಪರಾಮರ್ಶೆ ಮಾಡಿದರೆ, ಅವರು ಸಾಧಿಸಿದ ಗುರಿ ಅದಕ್ಕಾಗಿ ಅವರು ಆಯ್ದುಕೊಂಡ ಮಾರ್ಗ ಎಲ್ಲವೂ ಈಗ ಸುಲಭದಲ್ಲಿ ಗ್ರಾಹ್ಯವಾಗುತ್ತದೆ.
ಇಂದು ಬೌದ್ಧಿಕ ಕ್ಷತ್ರಿಯ ಎಂಬ ಪರಿಕಲ್ಪನೆ ಜನಪ್ರಿಯವಾಗಿದೆ. ಭಾರತೀಯ ವಿಷಯಗಳ ಬಗ್ಗೆ ತಪ್ಪು ಮಾಹಿತಿ, ದುರುದ್ದೇಶ ಪೂರ್ವಕ ಸುಳ್ಳು ಮಾಹಿತಿ, ದೂಷಣೆ ಇತ್ಯಾದಿಗಳು ಜಗತ್ತಿನ ನಾನಾ ಕಡೆಗಳಲ್ಲಿ ಪಸರಿಸುತ್ತಿರುವಾಗ, ಅವುಗಳನ್ನು ಸಮರ್ಥವಾಗಿ ಎದುರಿಸುವುದು ಬೌದ್ಧಿಕ ಕ್ಷತ್ರಿಯರ ಒಂದು ಪ್ರಮುಖ ಕೆಲಸ. ಈ ನಿಟ್ಟಿನಲ್ಲಿ ಆನಂದ ಕುಮಾರಸ್ವಾಮಿಯವರು 100 ವರ್ಷ ಹಿಂದೆ ಇದ್ದ ಬೌದ್ಧಿಕ ಕ್ಷತ್ರಿಯ. ತಮ್ಮ ಜೀವನವಿಡೀ ಕುಮಾರಸ್ವಾಮಿ ಮಾಡಿದ್ದು ಇದೇ ಕೆಲಸವನ್ನೇ ಎಂದರೂ ತಪ್ಪಲ್ಲ.
ಕುಮಾರಸ್ವಾಮಿಯವರು ನಿರ್ದಿಷ್ಟವಾದ ಉದ್ದೇಶ ಮತ್ತು ಓದುಗವಲಯವನ್ನು ಕಣ್ಣಮುಂದೆ ಇಟ್ಟುಕೊಂಡೇ ತಮ್ಮ ಎಲ್ಲಾ ಬರವಣಿಗೆಗಳನ್ನು ಮಾಡಿರುವುದು. ವಿವಿಧ ದೇಶಗಳ ವಿದ್ವಾಂಸ ವಲಯದ ನಡುವೆಯೇ ತಮ್ಮ ಜೀವನ ಕಳೆದ ಸ್ವಾಮಿಯವರಿಗೆ, ಪಾಶ್ಚಾತ್ಯ ವಿದ್ವಾಂಸರು ಸ್ವಯಂ ಪಾಶ್ಚಿಮಾತ್ಯ ಮತ್ತು ಉಳಿದ ಜಗತ್ತಿನ ಬಗ್ಗೆ ಹೊಂದಿದ್ದ ಪೂರ್ವಾಗ್ರಹಗಳು, ಅಪೂರ್ಣ ಮಾಹಿತಿ, ತಪ್ಪು ತಿಳುವಳಿಕೆ ಇವೆಲ್ಲದರ ನೇರ ಪರಿಚಯವಿತ್ತು.
ಉದಾಹರಣೆಗೆ, ಬೋಸ್ಟನ್ನಿನ ಮ್ಯೂಸಿಯಂನಲ್ಲಿ ಕ್ಯುರೇಟರ್ ಆಗಿ ಸ್ವಾಮಿಯವರು ಕೆಲಸ ಪ್ರಾರಂಭಿಸಿದಾಗ ಅಲ್ಲಿ ಅಂತರಾಷ್ಟ್ರೀಯ ಜರ್ನಲ್‌ಗಳು, ಎನ್ಸೈಕ್ಲೋಪೀಡಿಯಾಗಳನ್ನು ನೋಡುತ್ತಿದ್ದರು. ಆಗಿನ ಕಾಲದ ಎನ್ಸೈಕ್ಲೋಪೀಡಿಯಾಗಳಲ್ಲಿ ಯಾವುದೇ ವಿಷಯಗಳ ಎಂಟ್ರಿ ಇರಲಿ, ಅವು ಬರೀ ಪಶ್ಚಿಮ ದೇಶಗಳ ಬಗೆಗೆ ಇರುತ್ತಿದ್ದವು. ಕಲೆ, ಶಾಸ್ತ್ರ, ಜನಜೀವನ ಇತ್ಯಾದಿ ಯಾವುದೇ ವಿಷಯಗಳಲ್ಲೂ ಪೂರ್ವ ದೇಶಗಳ, ಮುಖ್ಯವಾಗಿ ಭಾರತದ, ಪ್ರಸ್ತಾಪವೇ ಇರುತ್ತಿರಲಿಲ್ಲ.
ಆಗ ಕುಮಾರಸ್ವಾಮಿ ಮಾಡಿದ ಮೊದಲ ಕೆಲಸವೆಂದರೆ ಬ್ರಿಟಾನಿಕ ಎನ್ಸೈಕ್ಲೋಪೀಡಿಯಾದಲ್ಲಿ ಭಾರತದ ಹಾಗು ಪೂರ್ವ ದೇಶಗಳ ವಿಷಯವನ್ನು ಸೇರಿಸಿದ್ದು. ಭಾರತ ಮತ್ತು ಇಂಡೋನೇಷಿಯದಲ್ಲಿ ಲೋಹದ ಆಭರಣಗಳು, ಭಾರತೀಯ ನೃತ್ಯ, ಭಾರತ ಮತ್ತು ಶ್ರೀಲಂಕದ ಕಲೆ ಮತ್ತು ವಾಸ್ತು ಶಿಲ್ಪ, ಕಸೂತಿ ಕಲೆ ಮುಂತಾದ ಲೇಖನಗಳನ್ನು ಬರೆದರು. ಪ್ರಾಥಮಿಕ ಮಾಹಿತಿಯ ಹಂತದಲ್ಲಿರುವ ಈ ವಿಷಯಗಳು, ನಮಗೆ ಇಂದು ಓದಿದರೆ ಅಷ್ಟು ಮುಖ್ಯವೇನಿಸದಿರಬಹುದು. ಆದರೆ ಭಾರತೀಯ ವಿಷಯಗಳು ಆ ಪುಸ್ತಕಗಳಲ್ಲಿ ಪ್ರವೇಶ ಪಡೆದದ್ದು ಅಲ್ಲಿಂದಲೇ ಎಂಬುದು ಮುಖ್ಯ.
ಇಂತಹ ಕೊರತೆಗಳಲ್ಲದೆ, ವಿದೇಶಿ ವಿದ್ವಾಂಸರಲ್ಲಿ ಭಾರತಿಯ ಕಲೆ ಮತ್ತು ವಿಚಾರಗಳ ಬಗ್ಗೆ ಸಾಕಷ್ಟು ದೋಷಪೂರಿತ ಅಭಿಪ್ರಾಯಗಳಿದ್ದವು. ಭಾರತೀಯರಿಗೆ ಸೌಂದರ್ಯಪ್ರಜ್ಞೆಯೇ ಇಲ್ಲ, ಕಲಾಕೃತಿಗಳೆಂದರೆ ಮುದ ನೀಡುವಂತಿರಬೇಕು, ಆದರೆ ಹಿಂದೂ ದೇವಾಲಯಗಳ ಕಾಳಿ ಇತ್ಯಾದಿ ಶಿಲ್ಪಗಳು ಭೀಭತ್ಸವಾಗಿವೆ ಇತ್ಯಾದಿ ಏನೇನೋ ಅಭಿಪ್ರಾಯಗಳನ್ನು ತಮ್ಮ ಮೂಗಿನ ನೇರಕ್ಕೆ ನಿಶ್ಚಯಿಸಿಕೊಂಡಿದ್ದರು ಪಾಶ್ಚಾತ್ಯ ವಿದ್ವಾಂಸರು.
ಇಂತಹ ಸಮಸ್ಯೆಯ ನಿವಾರಣೆಯಲ್ಲಿಯೇ ಸ್ವಾಮಿಯವರ ಎಲ್ಲಾಬರಹಗಳೂ ಮೂಡಿಬಂದಿರುವುದು. ಬಹುತೇಕ ಬರಹಗಳಲ್ಲಿ ನೇರವಾಗಿಯೇ ಇಂಥ ತಪ್ಪುಗಳನ್ನು ತಿದ್ದುವ ಕೆಲಸವನ್ನು ಕೈಗೊಂಡಿದ್ದ ಸ್ವಾಮಿ, ತಮ್ಮ ಉಳಿದ ಬರಹಗಳಲ್ಲೂ ಇದೇ ಕೆಲಸಕ್ಕೆ ಪೂರಕವಾದ ವಿಚಾರಗಳನ್ನೇ ಕೈಗೆತ್ತಿಕೊಂಡಿದ್ದಾರೆ. ಪಾಶ್ಚಾತ್ಯರಿಗೆ ಇದ್ದ ಈ ಅಜ್ಞಾನದ ಜೊತೆಗೆ, ಕಾರಣಾಂತರಗಳಿಂದ ನಮ್ಮಲ್ಲಿಯೇ ಇದ್ದ ಪಂಡಿತರಿಗೂ ಭಾರತೀಯತೆ, ಕಲಾತತ್ತ್ವ ಮುಂತಾದ ವಿಷಯಗಳಲ್ಲಿ ಸ್ಪಷ್ಟತೆಯನ್ನು ಒದಗಿಸುವುದು ಸ್ವಾಮಿಯವರ ಕೆಲಸವಾಯಿತು. ಪ್ರಸ್ತುತ ಸಂದರ್ಭದಲ್ಲಂತೂ ಇಂತಹ ವಿಚಾರಗಳಲ್ಲಿ ಪಾಶ್ಚಾತ್ಯ ಪೌರಾತ್ಯ ಎಂಬ ಬೇಧವಿಲ್ಲದೆ, ಎಲ್ಲರಿಗೂ ಇವು ಪರಾಮರ್ಶನೆಗೆ ಉಪಯುಕ್ತವಾಗಿವೆ.
ಅವರ ಕೆಲಸಕ್ಕೆ ಅನುಗುಣವಾಗಿ ಅವರಿಗಿದ್ದ ದೊಡ್ಡ ವರವೆಂದರೆ ಹಲವು ಪ್ರಾಚೀನ ಭಾಷೆಗಳ ಆಳವಾದ ಪರಿಚಯ. He was never satisfied with secondary sources ಎಂದು ವಿದ್ಯಾನಿವಾಸ್ ಮಿಶ್ರಾರವರು ಸ್ವಾಮಿಯವರ ಬಗ್ಗೆ ಹೇಳಿದ್ದಾರೆ. ಆದರೆ secondary source ಗಳನ್ನು ತಾನು ನೆಚ್ಚುವುದಿಲ್ಲ ಎಂದು ಯಾರೇ ನಿರ್ಧರಿಸಿದರೂ, ಹಲವಾರು ವಿಷಯಗಳಲ್ಲಿ ಅವರ ಅಧ್ಯಯನವನ್ನು ನಿಲ್ಲಿಸಿಯೇ ಬಿಡಬೇಕಾಗುತ್ತದೆ. ಆದರೆ ಸ್ವಾಮಿಯವರು ಸಂಸ್ಕೃತ, ಪಾಲಿ, ಗ್ರೀಕ್, ಲ್ಯಾಟಿನ್ ಸೇರಿದಂತೆ ಹತ್ತಾರು ಭಾಷೆಗಳಲ್ಲಿ ಆಳವಾದ ಪಾಂಡಿತ್ಯವನ್ನು ಹೊಂದಿದ್ದರು. ಈ ಎಲ್ಲಾ ಭಾಷೆಗಳ ಪ್ರಾಚೀನ ಗ್ರಂಥಗಳನ್ನು ನಿಘಂಟಿನ ಸಹಾಯವೂ ಇಲ್ಲದೆ ಓದುತ್ತಿದ್ದರು. ಈ ಸಾಮರ್ಥ್ಯದಿಂದಲೇ ಅವರು ಪಾರಿಭಾಷಿಕ ಶಬ್ದಗಳಿಗೆ ಅತ್ಯಂತ ನಿಖರವಾದ ಅರ್ಥಗಳನ್ನು ಹೇಳಿದ್ದಾರೆ, ಅಲ್ಲದೆ ಬೇರಾವುದೇ ವಿದ್ವಾಂಸರು ಲೇಖನಗಳಲ್ಲಿ ತಪ್ಪನ್ನು ಬರೆದಿದ್ದಾಗ ಪದ-ಪದಗಳ ಸೂಕ್ಷ್ಮ ವ್ಯತ್ಯಾಸ ಮತ್ತು ಅನುವಾದದ ಸಣ್ಣ ತಪ್ಪುಗಳನ್ನೂ ತೋರಿಸಿ ತಿದ್ದಿದ್ದಾರೆ.ಆಗಿನ ಕಾಲದ ಜರ್ನಲ್ಗಳಲ್ಲಿ ಸ್ವಾಮಿಯವರ ಹಲವು ಲೇಖನಗಳು ಹಿಂದೆ ಅದೇ ಜರ್ನಲ್ನಲ್ಲಿ ಯಾರೋ ಬರೆದ ಲೇಖನದ ಇಂಥ ತಪ್ಪುಗಳನ್ನು ಸರಿಪಡಿಸುವುದಕ್ಕೇ ಮೀಸಲಾಗಿವೆ. ಇಲ್ಲೆಲ್ಲಾ ಅವರಿಗಿದ್ದ ಪ್ರಥಮ ಆದ್ಯತೆ ವಿದೇಶಿಯರಿಗೆ ಪೌರಾತ್ಯ ಪರಿಕಲ್ಪನೆಗಳನ್ನು ಸರಿಯಾಗಿ ಅರ್ಥ ಮಾಡಿಸುವುದು.
Define and proceed ಎಂಬ ಮಾತಿದೆ. ಯಾವುದೇ ವಿಷಯವನ್ನು ಅಧ್ಯಯನ ಮಾಡುವಾಗ, ಆ ವಿಷಯದ ಒಳಗಿನ ಪರಿಕಲ್ಪನೆಗಳನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುವುದು ಅನಿವಾರ್ಯ. ಅಧ್ಯಯನದ ಪ್ರತಿ ಹಂತದಲ್ಲೂ, ವಿಷಯ ಸ್ಪಷ್ಟತೆ ಬಂದಂತೆ, ಪರಿಕಲ್ಪನೆಗಳು ಸ್ಫುಟಗೊಳ್ಳುತ್ತಲೂ, ವ್ಯಾಖ್ಯಾನವು ಸ್ಪಷ್ಟತೆಯನ್ನು ಪಡೆಯುತ್ತಲೂ ಹೋಗುತ್ತವೆ.
ಪರಿಕಲ್ಪನೆಗಳ ಸ್ಪಷ್ಟ ವ್ಯಾಖ್ಯಾನ, ಅಧ್ಯಯನವನ್ನು ಸುಲಭಗೊಳಿಸುವುದಲ್ಲದೆ, ಅಧ್ಯಯನ ದಾರಿತಪ್ಪದಂತೆಯೂ ನೋಡಿಕೊಳ್ಳುತ್ತದೆ. ಒಂದು ವಿಷಯವನ್ನು ಯಾರು ಹೇಗೆ ವ್ಯಾಖ್ಯಾನಿಸುತ್ತಾರೆ ಎನ್ನುವುದು, ಆ ವ್ಯಕ್ತಿಗೆ ಆ ವಿಷಯದ ಮೇಲಿರುವ ಹಿಡಿತ ಮತ್ತು ಸ್ಪಷ್ಟತೆಯನ್ನು ತೋರಿಸುತ್ತದೆ. ಸರಿಯಾದ definition ಎಂಬುದು ಯಾವುದೇ ವಿಷಯದ ಆಳವಾದ ಅಧ್ಯಯನಕ್ಕೆ ಮೊದಲ ಹೆಜ್ಜೆ. ಸಾಂಸ್ಕೃತಿಕ ಅಧ್ಯಯನದಂತದಹ ಕ್ಷೇತ್ರದಲ್ಲಂತೂ ಇದು ನಿರ್ಣಾಯಕ ಪಾತ್ರವನ್ನೇ ವಹಿಸುತ್ತದೆ. (ಭಾರತದಲ್ಲಿ ಈಗಲೂ ಧರ್ಮ ಮತ್ತು ರಿಲಿಜನ್‌ಗಳ ಅರ್ಥಗೊಂದಲದ ಚರ್ಚೆ ನಡೆಯುತ್ತಲೇ ಇದೆ.)
ಒಂದು ಸಂಸ್ಕೃತಿಯ ಪಾರಿಭಾಷಿಕ ಪದವನ್ನು ಇನ್ನೊಂದು ಸಂಸ್ಕೃತಿಯವನಿಗೆ ಅರ್ಥಮಾಡಿಸುವುದು ಪ್ರಯಾಸದ ಕೆಲಸ. ಅಪಾರ್ಥವಾಗುವ ಸಂಭವವೇ ಹೆಚ್ಚು. ಅಂತಲ್ಲಿ, ಶಬ್ದಗಳಿಗೆ ಸರಿಯಾದ ವಿವರಣೆ ನೀಡಲು, ಆ ಎರಡೂ ಸಂಸ್ಕೃತಿ ಮತ್ತು ಭಾಷೆಗಳ ಪರಿಚಯ ಇದ್ದವರಿಗೆ ಮಾತ್ರ ಸಾಧ್ಯವಾಗುತ್ತದೆ. ಆಗ ಪದಗಳಿಗೆ ಅರ್ಥ ಮಾತ್ರವಲ್ಲದೇ, ಸರಿಯಾದ ವಿವರಣೆಯನ್ನೂ ಕೊಡಬಹುದು.
ಈ ವಿಷಯದಲ್ಲಿ ಕುಮಾರಸ್ವಾಮಿ ಪಂಟ ಎಂದೇ ಹೇಳಬೇಕು. ಅವರ ವಿಜ್ಞಾನದ ಓದಿನ ಹಿನ್ನೆಲೆ ಇಲ್ಲಿ ಬಹಳ ಸಹಾಯ ಮಾಡಿದೆ, ಹಲವಾರು ಸಂಸ್ಕೃತಿ ಮತ್ತು ಭಾಷೆಗಳ ಆಳವಾದ ಪರಿಚಯವಿದ್ದ ಕುಮಾರಸ್ವಾಮಿ, ಪರಿಕಲ್ಪನೆಗಳ ಅರ್ಥ ನಿರೂಪಣೆಯನ್ನು ಬಹಳ ಸಮರ್ಥವಾಗಿ ಮಾಡುತ್ತಿದ್ದರು. ಅವು ಕೇವಲ ಪದಗಳ ಅನುವಾದವಾಗಿರದೆ, ಆ ಪರಿಕಲ್ಪನೆಯ ಸರಿಯಾದ ಪರಿಚಯಿಸುವಿಕೆಯಾಗಿರುತ್ತಿದ್ದವು. ಕೆಲವೊಮ್ಮೆ ಅವರು ಪಾರಿಭಾಷಿಕ ಪದಗಳಿಗೆ ಕೊಡುವ ವ್ಯಾಖ್ಯಾನ ಮತ್ತು ಪರಿಕಲ್ಪನೆಗಳನ್ನು ಸ್ಪಷ್ಟವಾಗಿ ವಿವರಿಸುವ ರೀತಿ ಆ ಇಡೀ ಲೇಖನದಷ್ಟೇ ಮಹತ್ತ್ವದ್ದಾಗಿರುತ್ತವೆ. ಮತ್ತು ಆ ಸ್ಪಷ್ಟತೆಯ ಕಾರಣದಿಂದ ಅವೆಲ್ಲಾ ಬಹಳ ಸರಳವಾಗಿ ಅರ್ಥವಾಗುತ್ತವೆ.
- ದ್ರವ್ಯ ಮತ್ತು ಚೇತನಗಳ ಅವಿನಾಭಾವವನ್ನು ಹೇಳಲು ‘each is both’ ಎಂಬ ಅದ್ಭುತ ಪದಪುಂಜವನ್ನು ಬಳಸಿದ್ದಾರೆ. ಬಂಗಾಳದ ಕಾವ್ಯವೊಂದನ್ನು ಅನುವಾದಿಸುವಾಗ ಬಳಸಿರುವ ಈ ಪದಪುಂಜದ ಶಕ್ತಿಗೆ ಸಾಟಿಯೇ ಇಲ್ಲ.
- ಕಲೆ ಎಂದರೇನು’ ಎಂಬ ಬಗ್ಗೆ ಹಲವಾರು ವ್ಯಾಖ್ಯಾನವನ್ನು ಸ್ವಾಮಿ ನೀಡಿದ್ದಾರೆ.
- ’art is making things in right way’ ಎಂಬ, ಸರಳಸೂತ್ರದಂತಹ ವ್ಯಾಖ್ಯಾನವನ್ನು ಹಲವು ಕಡೆ ಸ್ವಾಮಿ ಕೊಟ್ಟಿದ್ದಾರೆ.
- ಅದಲ್ಲದೆ ಆಯಾ ಲೇಖನದ ಸಂದರ್ಭಕ್ಕೆ ತಕ್ಕಂತೆ, ಕಲೆಯನ್ನು ವ್ಯಾಖ್ಯಾನಿಸುತ್ತಾ ’art is the controlled and rhythmic expression of emotion’ ಎಂದು ಹೇಳಿದ್ದಾರೆ.
- ಯಾವುದೇ ಕಲಾಪ್ರಕಾರಕ್ಕೂ ತಾತ್ವಿಕವಾಗಿ ಹೊಂದುವಂತೆ, ಕಲೆ ಎಂದರೆ ‘symbolic expression of subjective experience’ ಎಂದು ಬರೆದಿದ್ದಾರೆ. ಕಲೆಗೆ ಇದಕ್ಕಿಂತ ನಿಷ್ಕೃಷ್ಟವಾಗಿ ಲಕ್ಷಣ ಹೇಳುವುದು ಕಷ್ಟಸಾಧ್ಯ.
– ತತ್ತ್ವಶಾಸ್ತ್ರ ಮತ್ತು ಅಧ್ಯಾತ್ಮದಲ್ಲಿ ಆಸಕ್ತರು, ’being and becoming’ ಎಂಬುದನ್ನು ಕೇಳಿಯೇ ಇರುತ್ತಾರೆ. ಜನನ-ಮರಣ ಮತ್ತು ಮೋಕ್ಷಗಳ ಬಗ್ಗೆ ಪಾರಂಪರಿಕ ಜ್ಞಾನ ಏನಿತ್ತು ಎಂಬ ಬಗ್ಗೆ ಚನ್ನಾಗಿ ಅರಿವಿದ್ದ ಸ್ವಾಮಿಯವರು, ‘birth is an opportunity’ ಎನ್ನುತ್ತಿದ್ದರು. ಹಾಗಾಗಿ becoming ಬಗ್ಗೆಅವರ ನಿಲುವು ಸ್ಪಷ್ಟವಿತ್ತು. ‘Becoming is a royal procession’ ಎಂಬ ಚೇತೋಹಾರಿ ಮಾತನ್ನು ಸ್ವಾಮಿ ಬರೆದಿದ್ದಾರೆ. ‘Becoming is the epiphany of being’ ಎಂದೂ ಹೇಳಿದ್ದಾರೆ.
– ಇದರ ಮುಂದುವರಿಕೆಯಾಗಿ, ಮೋಕ್ಷ ಎಂದರೆ ‘end of becoming’ ಎಂಬ ಬಹು ಮಹತ್ವದ ಮಾತನ್ನು ಹೇಳಿದ್ದಾರೆ. ಪಾರಂಪರಿಕ ದೃಷ್ಟಿಯಲ್ಲಿ ಮನುಷ್ಯನ ಅಂತಿಮ ಗುರಿ, ಅಧ್ಯಾತ್ಮದ ನೇತಿ ಕ್ರಮ ಇತ್ಯಾದಿಗಳ ಅರಿವಿರುವವರಿಗೆ, ‘end of becoming’ ಎಂಬ ಮಾತಿನ ಮಹತ್ವ ತಾನಾಗಿಯೇ ಅರಿವಾಗುತ್ತದೆ.
– ಯೋಗ’ ಎಂದರೆ ಕೇವಲ ವ್ಯಾಯಾಮವಲ್ಲ ಅದು – ‘most practical preparation for any undertaking’ ಎನ್ನುವ ಕುಮಾರಸ್ವಾಮಿ, ’ಯೋಗಃಕರ್ಮಸುಕೌಶಲಂ’ ಎನ್ನುವದನ್ನು ‘dexterity in action’ ಎಂದು ನಿಚ್ಚಳವಾಗಿ ಅನುವಾದಿಸಿದ್ದಾರೆ.
– ’ರಸ’ ಎಂಬುದನ್ನು ’aesthetic experience’ ಮತ್ತು ’ideal beauty’ ಎಂದು ಬರೆದಿದ್ದಾರೆ.
– ‘ತಪಸ್ಸು’ ಎನ್ನುವುದನ್ನು ’incandescence’ ಮತ್ತು ‘passion’ ಎಂದಿದ್ದಾರೆ. ಇದು ತಪಸ್ಸನ್ನು ಸ್ವಾಮಿಯವರು literal and figurative ಆಗಿ ಅನುವಾದಿಸಿರುವ ಬಗೆ.
– ಲೀಲೆಯನ್ನು ’unmotivated manifestation’ ಎಂದಿದ್ದಾರೆ.
– ಬದುಕಿಗೆ ಯಾವ ಪರಮಾರ್ಥವೂ ಇಲ್ಲಎನ್ನುವ ನಾಸ್ತಿಕ/ಚಾರ್ವಾಕರನ್ನು, ಚಮತ್ಕಾರಿಕವಾಗಿ ’nothing-morists’ ಎಂದು ಕರೆದಿದ್ದಾರೆ.
– ಕಲಾನುಭವದಲ್ಲಿ ಉತ್ತಮ ಕನಿಷ್ಟವೆಂಬುದಿಲ್ಲ, ರಸಾನುಭವವೀವ ಎಲ್ಲ ಕಲೆಗಳೂ ಸಮಾನವೇ ಎಂಬುದು ಸಾಮಾನ್ಯವಾಗಿ ಎಲ್ಲರೂ ಒಪ್ಪುವ ಮಾತು. ಸಂಕೀರ್ಣ ಕಲಾಕೃತಿಯೊಂದು ಕಲಾಸೋಪಾನದಲ್ಲಿ ಸರಳ ಕಲಾಕೃತಿಗಿಂತ ಮೇಲೇನೂ ಇರುವುದಿಲ್ಲ. ಕುಮಾರಸ್ವಾಮಿಯವರು ಇದನ್ನು ನಿರೂಪಿಸಲು ರೇಖಾಗಣಿತದ ಉದಾಹರಣೆಯನ್ನು ತೆಗೆದುಕೊಳ್ಳುತ್ತಾರೆ. “ಸಣ್ಣ ವೃತ್ತ ಮತ್ತು ದೊಡ್ಡ ವೃತ್ತಗಳ ನಡುವೆ ವ್ಯತ್ಯಾಸವಿರುವುದು ಗಾತ್ರದಲ್ಲೇ ಹೊರತು ವೃತ್ತತ್ತ್ವದಲ್ಲಲ್ಲ. ಎರಡೂ ವೃತ್ತಗಳೇ.” (There are no degrees of beauty; the most complex and the simplest expression remind us of one and the same state .A mathematical analogy is found if we consider large and small circles, these differ only in their content, not in their circularity)
ಇವು ಸ್ವಾಮಿಯವರ ಬರಹಗಳ ಸರಳತೆ ಮತ್ತು ಸ್ಪಷ್ಟ ವ್ಯಾಖ್ಯಾನಗಳಿಗೆ ಒಂದೆರಡು ಉದಾಹರಣೆಗಳಷ್ಟೆ. ಕುಮಾರಸ್ವಾಮಿಯವರ ಎಲ್ಲಾ ವ್ಯಾಖ್ಯಾನಗಳ ಪಟ್ಟಿಯೊಂದನ್ನು ಸಿದ್ಧಮಾಡಿಕೊಂಡು, ಅದನ್ನು ಮನನ ಮಾಡಿದರೆ, ಅವರ ಬರಹಗಳ ಓದು, ಮುಕ್ಕಾಲುವಾಸಿ, ಮುಗಿದಂತೆಯೇ.
ಸ್ಮರ್ತವ್ಯ
ಆನಂದ ಕುಮಾರಸ್ವಾಮಿಯವರನ್ನು ಸ್ವಲ್ಪವೇ ಓದಿದವರೂ ಗಮನಿಸುವ ಅಂಶವೆಂದರೆ ಅವರು ತಮ್ಮ ಪ್ರತಿ ಲೇಖನದಲ್ಲೂ ಕೊಡುವ ಅವ್ಯಾಹತ ಅಡಿಟಿಪ್ಪಣಿಗಳು. ಅಡಿಟಿಪ್ಪಣಿಗಳಲ್ಲದೆ ಲೇಖನಗಳಲ್ಲೂ ಹತ್ತಾರು ಉಲ್ಲೇಖಗಳನ್ನು ಅವರು ಮಾಡುತ್ತಾರೆ. ಕೆಲವು ಲೇಖನಗಳಲ್ಲಂತೂ ಲೇಖನದ ಗಾತ್ರಕ್ಕಿಂತ ಟಿಪ್ಪಣಿಗಳ ಗಾತ್ರವೇ ಹೆಚ್ಚಿದೆ. ಎಷ್ಟೋ ಬಾರಿ ಒಂದು ವಿಷಯಕ್ಕೆ ಇಷ್ಟೆಲ್ಲಾ ಟಿಪ್ಪಣಿ ಏಕೆ ಅವಶ್ಯಕ ಎಂಬ ಅನುಮಾನವೂ ಬರುತ್ತದೆ. ಇದನ್ನೆಲ್ಲಾ ಅವರು ಮಾಡಿರುವುದು ತಮ್ಮ ಪಾಂಡಿತ್ಯ ಪ್ರದರ್ಶನ್ನಕ್ಕಂತೂ ಅಲ್ಲ. ಹಾಗದರೆ ಇದರ ಕಾರಣವೇನು.
ಸಾಂಪ್ರದಾಯಿಕವಾಗಿ ಸ್ಮರ್ತವ್ಯ ಎಂಬುದು ಬಹಳ ಮುಖ್ಯವಾದ ವಿಷಯ. ಯಾವುದೇ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಅಥವ ಬರೆಯತ್ತಿದ್ದಾಗ ಅಥವ ಮಾತನಾಡುತ್ತಿದ್ದಾಗ ಅಲ್ಲಿ ಬರುವ ಶಾಸ್ತ್ರ ವಿವರಗಳು ಅಥವ ಇನ್ಯಾವುದೇ ವಿವರಗಳನ್ನು ವಿವಿರಿಸಿ ವಿಶದಪಡಿಸಿ ಮುಂದುವರೆಯುವುದು ವಾಡಿಕೆ. ಇದರಿಂದ ಶ್ರೋತೃಗಳ ವಿಷಯಜ್ಞಾನ ಮತ್ತು ಶಾಸ್ತ್ರಜ್ಞಾನ ಹೆಚ್ಚುತ್ತದೆ, ಮತ್ತು ಶಾಸ್ತ್ರ ಸಂರಕ್ಷಣೆಯೂ ಆಗುತ್ತದೆ, ಮತ್ತು ವಿಷಯದ ಹರಹೂ ಕೂಡ ತಿಳಿಯಪಡುತ್ತದೆ. ಈ ಕಾರಣಗಳಿಂದಲೇ ನಮ್ಮ ಪಾರಂಪರಿಕ ಪಂಡಿತರುಗಳು ಬರೆದ ರಾಮಾಯಣ ಮಹಾಭಾರತದ ಅಥವ ಇನ್ಯಾವುದೇ ಗ್ರಂಥಗಳ ಟೀಕೆ ಟಿಪ್ಪಣಿಗಳನ್ನು ಓದಿದರೆ, ಅಯಾಚಿತವಾಗಿ ನಮಗೆ ಆ ಪಠ್ಯದ ಜೊತೆಗೆ ಇನ್ನೂ ಹಲವು ವಿಷಯಗಳು ಅರಿವಾಗುತ್ತವೆ. ಇದು ನೇರವಾದ ಉದ್ದೇಶವಲ್ಲದಿದ್ದರೂ ಆನುಷಂಗಿಕವಾಗಿ ಸಾಧಿತವಾಗುವ ಪ್ರಯೋಜನ. ಇದು ಸ್ವಾಮಿಯವರ ಬರಹಗಳನ್ನು ಓದುವಾಗ ಆಗುವ ಅನುಕೂಲ. ಅಲ್ಲದೆ ಸಾಮಾನ್ಯವಾಗಿ ದೇಶೀಯ ಪಂಡಿತರುಗಳ ಓದಿನಿಂದ ನಮ್ಮ ಪರಂಪರೆಯ ಹಲವು ಆಯಾಮಗಳ ಪರಿಚಯವಾದರೆ, ಸ್ವಾಮಿಯವರ ಬರಹಗಳ ಓದಿನಿಂದ ಜಗತ್ತಿನ ಬೇರೆಬೇರೆ ಸಂಪ್ರದಾಯಗಳ ಪರಿಚಯವೂ ಅಗುತ್ತದೆ.
ಸ್ವಾಮಿಯವರು ಪ್ರಧಾನವಾಗಿ ಸಾಂಪ್ರದಾಯಿಕ ವಿಚಾರಗಳನ್ನು ಒಪ್ಪುತ್ತಿದ್ದ ಮತ್ತು ಪ್ರತಿಪಾದಿಸುತ್ತಿದ್ದ ವ್ಯಕ್ತಿ. ಪಾರಂಪರಿಕ ವಿಚಾರಧಾರೆಗಳ ಒಂದು ಲಕ್ಷಣವೆಂದರೆ ವ್ಯಕ್ತಿಯ ಅಭಿಪ್ರಾಯ ಎಂಬುದಕ್ಕಿಂತಲೂ ಅನೂಚಾನವಾಗಿ ನಡೆದುಕೊಂಡು ಬಂದದ್ದರ ಮೇಲೆ ಹೆಚ್ಚು ಅವಧಾರಣೆಯನ್ನು ಕೊಡುವುದು. ಸರಿಯಾಗಿ ನೋಡಿದರೆ ಸಂಪ್ರದಾಯ ಎಂಬುವಲ್ಲಿ ವೈಯಕ್ತಿಕ ಅಭಿಪ್ರಯ ಎಂಬುದು ಇರುವುದೇ ಇಲ್ಲ.ವಿಷಯಗಳು ವ್ಯಕ್ತಿನಿಷ್ಠವೇ ಆಗಿದ್ದರೂ ಆದಷ್ಟೂ ವಸ್ತುನಿಷ್ಠತೆಯನ್ನು ಸಾಧಿಸಲು ಸಂಪ್ರದಾಯಗಳು ಪ್ರಯತ್ನಿಸುತ್ತವೆ. ಆ ರೀತಿ ಮಾಡಲು ಸಂಪ್ರದಾಯದ ಅವಿಚ್ಛಿನ್ನತೆ ಮುಖ್ಯ. ಪುಡಿಪುಡಿಯಾದ ವಿಚಾರಗಳಿಂದ ಸಾಂಪ್ರದಾಯಿಕತೆ ಉಳಿಯುವುದಿಲ್ಲ. ಹಾಗಾಗಿ ತಾನು ಪ್ರತಿಪಾದಿಸುತ್ತಿರುವ ವಿಚಾರಗಳು ತಾನು ವೈಯಕ್ತಿಕವಾಗಿ ವ್ಯಕ್ತಪಡಿಸುತ್ತಿರುವ ಅನಿಸಿಕೆಗಳಲ್ಲ, ಅವುಗಳಿಗೆ ದೀರ್ಘಕಾಲದ ಮತ್ತು ವಿಶಾಲವಾದ ತಳಹದಿ ಇದೆ ಎಂದು ಸ್ಥಾಪಿಸುವುದು ಕುಮಾರಸ್ವಾಮಿಯವರಿಗೆ ಬಹಳ ಮುಖ್ಯವಾಗಿತ್ತು. ಅಲ್ಲದೆ ತಾನು ಪ್ರತಿಪಾದಿಸುತ್ತಿರುವ ಪಾರಂಪರಿಕ ವಿಚಾರಗಳು ದೇಶಕಾಲಗಳ ಮಿತಿಯನ್ನು ಮೀರಿ ಎಲ್ಲೆಡೆಯೂ ತೋರಿಕೊಂಡಿರುವ ಸನಾತನ ಮೌಲ್ಯಗಳು ಎಂಬುದನ್ನು ಅವರು ತಮ್ಮ ಎಲ್ಲಾ ಲೇಖನಗಳಲ್ಲೂ ಪುನರುಚ್ಚರಿಸಿದ್ದಾರೆ. ಹಾಗಾಗಿಯೇ ಒಂದು ವಿಷಯದ ಪ್ರತಿಪಾದನೆಯಲ್ಲಿ ಆ ಸಂಪ್ರದಾಯದ ಪ್ರಾಚೀನ ಆಕರಗಳ ಉಲ್ಲೇಖವನ್ನು ಮಾಡುವುದರೋಡನೆ, ಮೇಲ್ನೋಟಕ್ಕೆ ಬೇರೆಬೇರೆ ಎಂದು ಕಾಣುವ ವಿಭಿನ್ನ ಸಂಸ್ಕೃತಿಗಳಿಂದ ಮೂಲ ವಿಚಾರಗಳನ್ನು ಅವರು ಕೊಡುತ್ತಾರೆ.
ಅವರು ಒಂದು ವಿಷಯವನ್ನು ಮಂಡಿಸುವಾಗ ಅದರ ಬಗ್ಗೆ ಲಭ್ಯವಿರುವ ಎಲ್ಲಾ ಆಕರಗಳನ್ನೂ ಕೊಡುತ್ತಾರೆ, ಮತ್ತು ಇವು ನನ್ನ ಗಮನಕ್ಕೆ ಬಂದವು ಮಾತ್ರ ಇನ್ನೂ ಇರಬಹುದು ಎಂದು ಹೇಳುವುದನ್ನು ಮರೆಯುವುದಿಲ್ಲ. ಒಂದು ವಿಷಯ ನಿರೂಪಣೆಗೆ ಒಂದೆರಡು ಉದಾಹರಣೆ ಕೊಟ್ಟರೆ ಸಾಕಲ್ಲವೇ ಎಂದು ಹಲವರಿಗೆ ಅನಿಸಬಹುದು. ಆದರೆ ಸ್ವಾಮಿಯವರ ಉದ್ದೇಶವಿರುವುದು ತಾನು ಪ್ರತಿಪಾದಿಸುತ್ತಿರುವ ವಿಚಾರ ಪರಂಪರೆಯಲ್ಲಿ ಎಲ್ಲೋ ಒಂದೆರಡು ಕಡೆ ಅಪವಾದ ರೂಪವಾಗಿ ಅಥವ ಅಪರೂಪಕ್ಕೆ ಬರುವ ವಿಚಾರಗಳಲ್ಲ. ಅವು ಆಗಿನ ಕಾಲದ ನಿಯಮವೇ ಆಗಿತ್ತು ಮತ್ತು ಆಗ ಈ ವಿಚಾರ ಸರ್ವಸಾಧಾರಣವಾಗಿತ್ತು ಎಂದು ನಿರೂಪಿಸುತ್ತಿದ್ದರು. ಅಂದರೆ ಆ ಕಾಲದಲ್ಲಿ ಇದು typical ಎಂಬುದು ಅವರ ಉಲ್ಲೇಖಗಳಿಂದ ಸ್ಪಷ್ಟವಾಗುತ್ತಿತ್ತು.
ಇದಕ್ಕೆ ಒಳ್ಳೆಯ ಉದಾಹರಣೆಯೆಂದರೆ ಅವರ ’Picture Showmen’ ಲೇಖನ.
ತೊಗಲುಗೊಂಬೆ, ಗೊಂಬೆಯಾಟದಂತಹ ಪ್ರದರ್ಶನ ಕಲೆಗಳು ಜಗತ್ತಿನೆಲ್ಲೆಡೆ ಇವೆ. ಜಾವ ಮತ್ತು ಬಾಲಿ ದೇಶಗಳಲ್ಲಿ ’ವಯಂಗ್ ಬೇಬರ್’ ಎಂದು ಕರೆಯಲ್ಪಡುವ ಮತ್ತು ಪರ್ಶಿಯಾದಲ್ಲಿ ’ಸೂರತ್ ಖ್ವಾನ್’ ಎಂದು ಕರೆಯಲ್ಪಡುವ ಒಂದು ಕಲೆಯ ವೈಶಿಷ್ಟ್ಯವೇನೆಂದರೆ. ಅಲ್ಲಿ ಸೂತ್ರಧಾರನೊಬ್ಬ ಚಿತ್ರಪಟಗಳನ್ನು ಮತ್ತು ಚಿತ್ರಗಳ ಸುರುಳಿಯನ್ನು ಹಿಡಿದುಕೊಂಡು ಅದರಲ್ಲಿರುವ ಕಥೆಯನ್ನು ನೆರದವರಿಗೆ ವಿವರಿಸುತ್ತಾ ಹೋಗುತ್ತಾನೆ.
ಸೂರತ್ ಖ್ವಾನ್ ಶುರು ಮಾಡುವಾಗ ಸೂತ್ರಧಾರ ’ರಾಕ್-ಎ-ಹಿಂದ್’ ಎಂಬ, ಮಂತ್ರದಂತಹ, ಸಾಲುಗಳನ್ನು ಹೇಳಿ ಆಟ ಶುರುಮಾಡುತ್ತಾನೆ. ’ರಾಕ್-ಎ-ಹಿಂದ್’ಎಂದರೆ ’ಭಾರತೀಯ ರೀತಿ’ ಎಂದಷ್ಟೇ ಕೆಲವರು ಗುರುತಿಸುತ್ತಿದ್ದರು. ಕುಮಾರಸ್ವಾಮಿ ’ರಾಕ್’ ಎಂಬುದು ’ರಾಗ’ದಿಂದ ಬಂದಿರಬಹುದು ಎಂದು ಅಂದಾಜಿಸಿ, ’ರಾಕ್-ಎ-ಹಿಂದ್’ ಎಂದರೆ ’ಭಾರತೀಯ (ರೀತಿಯ) ಹಾಡುಗಬ್ಬ’ ಇದು ಎಂದು ಹೇಳುತ್ತಾರೆ.
ಈ ಒಟ್ಟು ಕಲಾಪ್ರಕಾರವೇ ಹೇಗೆ ಭಾರತಮೂಲದಿಂದ ಬಂದಿರಬಹುದು ಎಂಬುದನ್ನು ಸಾಧಾರವಾಗಿ PICTURE SHOWMEN ಲೇಖನದಲ್ಲಿ ವಿವರಿಸಿದ್ದಾರೆ ಸ್ವಾಮಿ. ಅದನ್ನು ವಿಶದಪಡಿಸಲ್ಲು ಭಾರತೀಯ ವಾಜ್ಞ್ಮಯದಲ್ಲಿ ಎಲ್ಲೆಲ್ಲಿ ಇಂತಹ, ಚಿತ್ರಗಳನ್ನು ಹಿಡಿದು ಕಥೆಯನ್ನು ವಿವರಿಸುವ, ಉಲ್ಲೇಖಗಳು ಬರುತ್ತವೆ ಎಂಬುದನ್ನು ವಿವರವಾಗಿ ತೋರಿಸಿದ್ದಾರೆ.
*ಪತಂಜಲಿ ಮಹಾಭಾಷ್ಯದಲ್ಲಿ ,ವ್ಯಾಕರಣದ, ಒಂದು ಸೂತ್ರವನ್ನು (3.1.26) ವಿವರಿಸಲು ಕಂಸವಧೆಯನ್ನು ಚಿತ್ರದ ಮೂಲಕ ವಿವರಿಸುವ ಉದಾಹರಣೆಯನ್ನು ತೆಗೆದುಕೊಳ್ಳಲಾಗಿದೆ.
*ಜೈನ ಪ್ರಾಕೃತ ಗ್ರಂಥಗಳಲ್ಲಿ ’ಮಂಖ’ ಎಂದು ಕರೆಯಲ್ಪಡುವವರು ನಟ, ನೃತ್ಯಪಟುಗಳೊಡನೆ ಇರುತ್ತಿದ್ದ ಉಲ್ಲೇಖಗಳಿವೆ. ಅಲ್ಲದೆ ಮಂಖಲೀಪುತ್ರ ಎಂಬ ಉಪನಾಮಗಳು ಇದ್ದವರೂ ಇದ್ದಾರೆ. ಇವರ ಕೆಲಸ, ಚಿತ್ರಗಳನ್ನು ತೋರಿಸುತ್ತಾ ಕಥೆ ಹೇಳುವುದು.
*ಚಿತ್ರಪಟಗಳನ್ನು ತೋರಿಸುತ್ತಾ ಊರೂರು ತಿರುಗುತ್ತಿದ್ದ ಯಾಚಕರ ಉಲ್ಲೇಖ ಸಂಸ್ಕೃತ ಸಾಹಿತ್ಯದಲ್ಲಿ ’ಚಿತ್ರಫಲಕವ್ಯಗ್ರಹಕರಭಿಕ್ಷುವಿಶೇಷ’ ಎಂದು ಬರುತ್ತದೆ.
*ಹೇಮಚಂದ್ರನ ’ತ್ರಿಶಷ್ಠಿಶಲಾಕಪುರುಷಚರಿತ್ರ’ ಎಂಬ ಜೈನ ಕಾವ್ಯದಲ್ಲೂ ಋಷಭನಾಥನ ಜನ್ಮವೃತ್ತಾಂತವನ್ನು ಚಿತ್ರಪಟಗಳ ಮೂಲಕ ಒಬ್ಬ ಹೇಳುತ್ತಾ ಹೋದಾಗ, ಅಲ್ಲಿ ನೆರದವರು ಒಬ್ಬೊಬರೂ ಹೇಗೆ ಪ್ರತಿಕ್ರಿಯಿಸಿದರು ಎಂಬುದು ಬರುತ್ತದೆ.
*ಕೆಲವು ಉಲ್ಲೇಖಗಳಲ್ಲಿ ಇಂಥ picture showmen ಗಳನ್ನು ’ಯಮಪಟ್ಟಕ’ ಎಂದು ಕರೆದಿದ್ದಾರೆ. ಮನುಷ್ಯನ ಒಳಿತು ಕೆಡಕುಗಳ ಎಲ್ಲ ದಾಖಲೆಗಳನ್ನೂ ಚಿತ್ರಗಳ ಮೂಲಕ ತೋರಿಸಿ, ಯಮಲೋಕದಲ್ಲಿ ಅವನ ಸ್ಥಿತಿ ಏನಾಗುತ್ತದೆ ಎಂದು ಹೇಳುವ ’ಯಮಪಟ’ವನ್ನು ಹಿಡಿದವನು ಯಮಪಟ್ಟಕ.
*ವಿಶಾಖದತ್ತನ ’ಮುದ್ರಾರಾಕ್ಷಸ’ ನಾಟಕದಲ್ಲಿ, ರಾಕ್ಷಸಾಮಾತ್ಯನ ಪತ್ತೆ ಹಚ್ಚಲು, ಚಾಣಕ್ಯನಿಂದ ನಿಯೋಜಿತನಾದ ನಿಪುಣಕ, ಇಂಥ ಯಮಪಟ್ಟಕ ವೇಷವನ್ನೇ ಧರಿಸಿ ಊರೂರು ತಿರುಗಿ ಅಮಾತ್ಯನ ಪತ್ತೆ ಹಿಡಿಯುವ ಕಥೆ ಪ್ರಸಿದ್ಧವೇ ಆಗಿದೆ.
*ಬಾಣಭಟ್ಟನ ’ಹರ್ಷಚರಿತ’ದಲ್ಲಿ ಸಂತೆಯಲ್ಲಿ ಪ್ರದರ್ಶನದಲ್ಲಿ ನಿರತನಾದ ಯಮಪಟ್ಟಕನ ಉಲ್ಲೇಖವಿದೆ.
*’ಪ್ರಬಂಧಚಿಂತಾಮಣಿ’ಯಲ್ಲೂ ಚಿತ್ರ ಪ್ರದರ್ಶನದ ಮೂಲಕ ದುಡಿಮೆ ಮಾಡುತ್ತಿದ್ದವರ ಉಲ್ಲೇಖವಿದೆ.
*ಚೀನಾದಲ್ಲಿ ಕೂಡ ರಸ್ತೆಗಳಲ್ಲಿ ಚಿತ್ರಸುರುಳಿಗಳನ್ನು ಹಿಡಿದು ಅವುಗಳ ಬಗೆಗೆ ವಿವರಗಳನ್ನು ಜೋರಾಗಿ ಸಾರುತ್ತಾ ಓಡಾಡುತ್ತಿದ್ದ ವ್ಯಕ್ತಿಗಳ ಉಲ್ಲೇಖವಿದೆ.
ಈ ಮೇಲಿನ ಉದಾಹರಣೆಗಳನ್ನು ಮೂಲಕ ಕುಮಾರಸ್ವಾಮಿಯವರು, ಹೇಗೆ ಯಮಪಟ್ಟಕ ವೃತ್ತಿ ಪ್ರಾಚೀನ ಭಾರತದಲ್ಲಿ ಸರ್ವಸಾಧಾರಣವಾಗಿತ್ತುಎಂಬುದನ್ನು ಮತ್ತು ಪರ್ಶಿಯಾದ ಸೂರತ್ ಖ್ವಾನ್ ಕಲಾಪ್ರಕಾರಕ್ಕೆ ಇದರಿಂದಲೇ ಸ್ಪೂರ್ತಿ ದೊರೆತಿದೆ ಎಂಬುದನ್ನೂ ತೋರಿಸಿದ್ದಾರೆ. ತನ್ನ ಗಮನಕ್ಕೆ ಬಂದ ಆಕರಗಳು ಇವು, ಇನ್ನೂ ಹೆಚ್ಚು ಉಲ್ಲೇಖಗಳು ಇರಬಹುದು ಎಂಬ ಮಾತಿನೊಂದಿಗೆ ಲೇಖನವನ್ನು ಮುಗಿಸುತ್ತಾರೆ. ಅಂದರೆ ಇಂಥ ಆಚರಣೆ ಎಲ್ಲೋ ಅಪರೂಪಕ್ಕೆ ಒಂದೆರಡು ಕಡೆ ಉಲ್ಲೇಖಿತವಾಗಿರುವ ಸಂಗತಿಯಲ್ಲ, ಆಗಿನ ಕಾಲದ ಸಾಮನ್ಯ ಕಲಾಪ ಇದಾಗಿತ್ತು ಎಂಬುದನ್ನು ಸ್ಥಾಪಿಸುವುದು ಸ್ವಾಮಿಯವರ ರೀತಿ.
ಮೇಲಿನ ಲೇಖನದ ಮೂಲಕ ಸ್ವಾಮಿಯವರು ಭಾರತದಿಂದ ಹೋದ ಪ್ರೋಟೋಟೈಪ್ (PROTOTYPE) ಒಂದು ಹೇಗೆ ಬೇರೆ ದೇಶಗಳ ಕಲಾವಿಕಾಸದಲ್ಲಿ ಸಹಾಯ ಮಾಡಿದವು ಎಂಬ ವಿಚಾರವನ್ನು ಹೇಳಿದ್ದಾರೆ.
ಪ್ರೋಟೋಟೈಪ್ – ‘ಮೂಲಮಾದರಿ’ ಎಂಬುದು ಸಾಂಸ್ಕೃತಿಕ ವಿಕಾಸದಲ್ಲಿ ಬಹಳ ಮುಖ್ಯವಾದ ಪರಿಕಲ್ಪನೆ. ಯಾವುದೇ ಪರಿಕರ, ವಸ್ತು, ಪದ್ಧತಿ, ಏನೇ ಇರಲಿ ಅದು ಯಾವುದೋ ಒಂದು ಜಾಗದಲ್ಲಿ ಜನ್ಮ ತಳೆದಿರುತ್ತದೆ. ತೀರಾ ಮೂಲಭೂತವಾದ, ಸರ್ವದೇಶೀಯ ವಿಷಯಗಳಲ್ಲಿ ಇದು ಎಲ್ಲಿ ಹೇಗೆ ಹುಟ್ಟಿತು ಎಂದು ಕಂಡುಕೊಳ್ಳುವುದು ಕಷ್ಟಕರ. ಆದರೂ ಚಕ್ರ, ಬೆಂಕಿ, ಲಿಪಿಯಂತಹ ಆವಿಷ್ಕಾರಗಳೂ ಎಲ್ಲಿ ಆದವು ಎಂಬುದನ್ನೂ ಪ್ರಾಕ್ತನ ಸಂಶೋಧಕರು ಅಂದಾಜಿಸುತ್ತಾರೆ.
ಆ ಹಂತ ದಾಟಿ, ಮನುಷ್ಯ ಸಂಸ್ಕೃತಿ ರೂಪುಗೊಂಡ ನಂತರ ಅಥವ ರೂಪುಗೊಳ್ಳುವ ಹಂತದಲ್ಲಿ, ಎಷ್ಟೋ ವಿಷಯಗಳು ಎಲ್ಲೋ ಹುಟ್ಟಿ ಇನ್ನೆಲ್ಲಿಗೋ ಪ್ರಯಾಣ ಮಾಡಿ ಅಲ್ಲಿಯ ಪರಿಸರಕ್ಕೆ ತಕ್ಕಂತೆ ಬೆಳವಣಿಗೆ ಹೊಂದಿರುತ್ತವೆ. ಇಂಥ ವಿಷಯಗಳಲ್ಲಿ ತೀರಾ ನಿಷ್ಕೃಷ್ಟವಾಗಿ, ಇದು ಇಂಥ ಮೂಲದಿಂದಲೇ ಬಂದಿದೆ ಎಂದು ಹೇಳುವುದು ಸಾಧ್ಯವಿಲ್ಲವಾದರೂ, ಬಹುಮಟ್ಟಿಗೆ ಸರಿಯಾಗಿಯೇ ಮೂಲವನ್ನು ಊಹಿಸಬಹುದು.
ಯಾವುದೇ ಪರಿಕರ, ಪದ್ಧತಿ, ಕಲಾಪ್ರಕಾರ ಇತ್ಯಾದಿಗಳು ರೂಪುಗೊಳ್ಳುವುದು ಮನುಷ್ಯನ ಚಿಂತನೆಯಿಂದ. ಬೇರೆಲ್ಲಾ ವಿಷಯಗಳಲ್ಲಿ ಹೇಗೆ ಪ್ರೋಟೋಟೈಪ್‌ಗಳು (ಮೂಲಮಾದರಿ) ಕಾಣಿಸಿಕೊಳ್ಳುತ್ತವೆಯೋ, ಹಾಗೇ, ಒಂದು ಕಲಾ ಸನ್ನಿವೇಶ ಅಥವ ಪಾತ್ರದಲ್ಲೂ ಪ್ರೋಟೋಟೈಪ್‌ಗಳಿದ್ದು, ಅವು ಬೇರೆಡೆಗಳಿಗೆ ಪ್ರಯಾಣ ಮಾಡಿರುತ್ತವೆ. ಅಲ್ಲಿನ ಪರಿಸರ-ಕೌಶಲಕ್ಕೆ ತಕ್ಕಂತೆ ಅವು ಅಲ್ಲಿ ರೂಪತಳೆಯುತ್ತವೆ.
ಇಂಥ ಮಾದರಿಗಳನ್ನು ಗುರುತಿಸುವುದರ ಮೂಲಕ, ವಿಶ್ವದ ಬೇರೆಬೇರೆ ಕಲಾಪಗಳ ಹಿಂದಿರುವ ತತ್ತ್ವಗಳನ್ನು ಕಂಡುಕೊಳ್ಳಬಹುದಲ್ಲದೆ ಭಾರತೀಯ ಚಿಂತನೆ ಹೇಗೆಲ್ಲಾ ಪ್ರಯಾಣಿಸಿದೆ, ಉಳಿದವರನ್ನು ಹೇಗೆ ಪ್ರಭಾವಿಸಿದೆ ಎಂಬುದನ್ನೂ ಅರಿಯಬಹುದು.
ಪ್ರೋಟೋಟೈಪ್‌ಗಳು ತಾವು ಹೋದ ಜಾಗದಲ್ಲಿ ಮೂಲಮಾದರಿಗಿಂತ ಉನ್ನತಮಟ್ಟವನ್ನೂ ತಲುಪಬಲ್ಲವು. ಭಾರತದಿಂದ ಈ ರೀತಿ ಹೋದ ಕಲ್ಪನೆಗಳು ಬೇರೆಬೇರೆ ರೂಪಗಳನ್ನು ಚನ್ನಾಗಿಯೇ ಪಡೆದಿವೆ. ಆದರೆ ಸಾಮಾನ್ಯವಾಗಿ ಭಾರತೀಯ ಕಲ್ಪನೆಗಳು, ಇಲ್ಲಿಯೇ ಅತ್ಯಂತ ವೈವಿಧ್ಯಮಯವಾದ ಫಲವತ್ತತೆಯನ್ನು ಕಾಣುವುದರಿಂದ ಅದನ್ನು ಮೀರಿಸುವ ಮಟ್ಟವನ್ನು ಬೇರೆಡೆ ನೋಡುವುದು ಕಷ್ಟ . ಆದರೆ ಇಲ್ಲಿನದಕ್ಕಿಂತ ಭಿನ್ನವಾದ ಉದ್ದೇಶ ಅಥವ ರೂಪದಲ್ಲಿ ಅವನ್ನು ದುಡಿಸಿಕೊಂಡಿರುವುದನ್ನು ಕಾಣಬಹುದು.
‘KRISHNA’S FLUTE’ ಎಂಬ ತಮ್ಮ ಒಂದು ಲೇಖನದಲ್ಲಿ ಸ್ವಾಮಿ ಇಂತಹ ಒಂದು ಮೂಲ ಮಾದರಿಯನ್ನು ಗುರುತಿಸುತ್ತಾರೆ.
ಕೃಷ್ಣನ ಕೊಳಲಿನ ನಾದ ಗೊಪಿಕೆಯರು, ಬಾಲಕರು ಸೇರಿದಂತೆ ಎಲ್ಲ ಮನುಷ್ಯರಲ್ಲಿ, ಅಷ್ಟೇಕೆ, ಪ್ರಾಣಿಗಳಲ್ಲೂ ಒಂದು ದಿವ್ಯ ತಳಮಳವನ್ನು ಉಂಟುಮಾಡುತ್ತದೆ. ತಾವು ಈ ಲೋಕದಲ್ಲಿ ಹೊಂದಿರುವ ಎಲ್ಲಾ ಸ್ವತ್ತುಗಳನ್ನೂ ಮೀರಿಸುವ, ಆ ಪೂರ್ಣಾನುಭವದ ಬಯಕೆಯ ತುಮುಲ, ಮನುಷ್ಯರಲ್ಲಿ ಆ ಕೊಳಲಿನ ನಾದದಿಂದ ಉಂಟಾಗುತ್ತದೆ.
ಎಲ್ಲವನ್ನೂ ಬಿಟ್ಟು ಕೃಷ್ಣನ ಕೊಳಲಿನ ಕರೆಗೆ ಓಗೊಟ್ಟು, ಕದಂಬ ವೃಕ್ಷದ ಕೆಳಗೆ ವೇಣುವಾದನ ಮಾಡುತ್ತಿರುವ ಕೃಷ್ಣನ ಬಳಿ ಹೋಗಿ ಮೈಮರೆಯುತ್ತಾರೆ. ಕದಂಬ ವೃಕ್ಷದಿಂದಲೇ ಕಾದಂಬರಿಯಂಥ ಮೈಮರೆಸುವ ದ್ರವ್ಯ (ಹೆಂಡ) ಬರುತ್ತದೆಂಬುದು ಸಾಂಕೇತಿಕ.
ಇಂಥ, ಅನುಭವದ ರುಚಿ ಹತ್ತಿದಾಗ ಇರುವುದೆಲ್ಲವನ್ನೂ ಬಿಟ್ಟು ಅದರ ಹಿಂದೆ ಹೋಗುವ, ಈ ಕೃಷ್ಣನ ಕೊಳಲಿನ ಮೂಲಮಾದರಿಯೇ ‘PIED PIPER’ ಕಲ್ಪನೆಗೆ ಸ್ಪೂರ್ತಿ ಎಂದು ಕುಮಾರಸ್ವಾಮಿ ಹೇಳುತ್ತಾರೆ. ಅಲ್ಲೂ ಕೊನೆಗೆ, ಊರಿನ ಮಕ್ಕಳು, ತಮ್ಮ ಮನೆಮಠವನ್ನು ಮರೆತು, ಜೋಗಿಯ ಕಿಂದರಿ ನಾದದ ಹಿಂದೆ, ಬೆಟ್ಟದ ಕಡೆಗೆ ಹೋಗುವ ಸನ್ನಿವೇಶವಿದೆ.
ಇಹದಿಂದ ಪರದ ಕಡೆಗೆ ಸೆಳೆದೊಯ್ಯುವ ಒಂದು ನಾದದ ಕಲ್ಪನೆ, ಇಲ್ಲಿ ಕೃಷ್ಣಲೀಲೆಯ ರೂಪದಲ್ಲಿ, ದಿವ್ಯ ಕಥಾನಕವಾದರೆ, ಅಲ್ಲಿ ನೀತಿಪಾಠದ ರೂಪವನ್ನು ಪಡೆದುಕೊಂಡಿದೆ.
ಈ ಎರಡು ಲೇಖನದ ಉದಾಹರಣೆ ಮತ್ತು ಒಟ್ಟಾರೆ ಸ್ವಾಮಿಯವರ ಬರಹದ ಶೈಲಿ ಇವುಗಳನ್ನೆಲ್ಲಾ ನೋಡಿ ನಾವು ತೀರ್ಮಾನಿಸಬಹುದಾದ ಅಂಶಗಳೆಂದರೆ –
*ಸ್ವಾಮಿಯವರಿಗೆ ವಿವಿಧ ಸಂಸ್ಕೃತಿ ಮತ್ತು ಭಾಷೆಗಳಲ್ಲಿಅಗಾಧ ಪಾಂಡಿತ್ಯವಿತ್ತು
*ಮೇಲ್ನೋಟಕ್ಕೆ ಬೇರೆಬೇರೆಯಾಗಿ ಕಾಣುವ ಅಂಶಗಳಲ್ಲಿ ಸಮಾನ ತತ್ತ್ವ ಯಾವುದು ಎಂಬುದನ್ನು ಅವರು ತೋರಿಸಿಕೊಡುತ್ತಿದ್ದರು
*ಯಾವುದೇ ವಿಷಯ ಪ್ರತಿಪಾದನೆಯಲ್ಲಿ ಅನುಮಾನಕ್ಕೆ ಎಡೆಮಾಡಿಕೊಡದಂತೆ ಆಕರಗಳನ್ನು ಒದಗಿಸುತ್ತಿದ್ದರು
ಇದರ ಭಾಗವಾಗಿಯೇ ಅವರು ಕೆಲವು ಕ್ಲಾಸಿಕ್ ಪಠ್ಯಗಳ ಅನುವಾದಗಳನ್ನೂ ಮಾಡಿದ್ದಾರೆ, ಆದರೆ ಕುಮಾರಸ್ವಾಮಿಯವರ ಅನುವಾದಗಳು ಸಪ್ಪೆ ಎಂದೇ ಹೇಳಬೇಕು. ವಿಷಯವನ್ನು ಯಥಾವತ್ತಾಗಿ ಮೂಲ ಅರ್ಥಕ್ಕೆ ಬಾಧೆ ಬರದಂತೆ ಇನ್ನೊಂದು ಭಾಷೆಯವರಿಗೆ ತಿಳಿಯುವಂತೆ ಬಹಳ ಎಚ್ಚರಿಕೆಯಿಂದ ಅನುವಾದಗಳನ್ನು ಮಾಡಿದ್ದಾರೆ. ಆದರೆ ಆ ಎಚ್ಚರದ ಕಾರಣದಿಂದ ಆ ಬರಹಗಳು ಬಹಳ ಗೊಡ್ಡು ಅಥವ ಡ್ರೈ ಆಗಿವೆ. ಅಲ್ಲದೆ ಸ್ವಾಮಿಯವರು ಯಾವೆಲ್ಲಾ ಬರಹಗಳನ್ನು ಯಾವೆಲ್ಲಾ ಭಾಷೆಗಳಿಗೆ ಅನುವಾದ ಮಾಡಿದ್ದಾರೋ ಅವೆಲ್ಲಾ ಈಗ ಹಲವಾರು ಬೇರೆಬೇರೆಯವರೂ ಅನುವಾದ ಮಾಡಿದ್ದಾಗಿದೆ, ಅವುಗಳಲ್ಲಿ ಹಲವು ಸ್ವಾಮಿಯವರದಕ್ಕಿಂತ ಸರಳ ಮತ್ತು ಓದಿಸಿಕೊಳ್ಳುವ ಗುಣ ಹೊಂದಿವೆ, ಹಾಗೆಂದು ಅವುಗಳೂ ಕೂಡ ಮೂಲನಿಷ್ಠೆಯನ್ನು ಕುಂದುಗೊಳಿಸಿಲ್ಲ. ಪರಿಕಲ್ಪನೆಗಳನ್ನು ಅನುವಾದಿಸಿ ಹೇಳುವುದರಲ್ಲಿ ಕುಮಾರಸ್ವಾಮಿ ತೋರಿರುವ ಬ್ರಿಲಿಯನ್ಸ್ ಕೃತಿಗಳ ಅನುವಾದದಲ್ಲಿ ಮಾಯವಾಗಿದೆ.
Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.