close logo

ಸನಾತನಧರ್ಮದ ಮಾತೃಶಕ್ತಿ ಆರಾಧನಾ ಪರಂಪರೆ – 4

ಮಾತೃಆರಾಧನಾ ಪ್ರಸ್ತುತತೆ

ಸ್ತ್ರೀಯ ಫಲವಂತಿಕೆ, ಮಾತೃತ್ವ ಮತ್ತು ಚೈತನ್ಯಗಳನ್ನು ಪ್ರಧಾನವಾಗಿ ಪೂಜ್ಯಭಾವ ಮತ್ತು ಭಕ್ತಿಯಿಂದ ಭಾವಿಸುವ ದೈವೀ ಆರಾಧನೆಯ ಶಾಕ್ತ-ತಂತ್ರಪಂಥದ ಎಳೆಗಳು ಜಗತ್ತಿನಾದ್ಯಂತ ಅತ್ಯಂತ ಪ್ರಾಚೀನಕಾಲದಿಂದಲೂ ಸಾಮಾಜಿಕ ರೂಢಿಗಳಲ್ಲಿ ಕಾಣಸಿಗುತ್ತವೆ. ನಮ್ಮ ದೇಶದಲ್ಲಿಯೂ ಅವು ಇದ್ದುದಕ್ಕೆ ಅತ್ಯಂತ ಪ್ರಾಚೀನವಾದ ವಾಸ್ತುಶಿಲ್ಪಾತ್ಮಕ ಪುರಾವೆಯಾಗಿ ಕ್ರಿಸ್ತ ಪೂರ್ವ 9000-8000 ಅವಧಿಯ Paleolithic ಯುಗದ ಬಾಘರ್‌ ಶಿಲೆಯು ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ದೊರೆತಿದೆ.

ಕ್ರಿಸ್ತಪೂರ್ವದ ಶಾಕ್ತಪಂಥೀಯ ಶಿಶು ಸಂರಕ್ಷಕ ಶಕ್ತಿ ದೇವತೆಗಳು ಪ್ರಧಾನವಾಗಿ ರಣದೇವಿಯರಾಗಿ ಕಾಣಿಸಿಕೊಂಡದ್ದು 5ನೇ ಶತಮಾನದ ಗುಪ್ತರ ಕಾಲದಲ್ಲಿ. ಗುಪ್ತರ ರಾಜಕೀಯ ವಲಯವನ್ನು ಸಾಮ್ರಾಜ್ಯ ಎಂದು ಕರೆಯುತ್ತಾರೆ. ಯುದ್ದ ಮಾಡಿದ ಹೊರತೂ ರಾಜ್ಯವೊಂದು ಸಾಮ್ರಾಜ್ಯವಾಗಿ ವಿಸ್ತಾರವಾಗಲು ಸಾಧ್ಯವಿಲ್ಲ ಎನ್ನುವುದೊಂದು ವಾಸ್ತವ. ರಾಜ್ಯವಿಸ್ತರಣೆಗೆ ಯುದ್ಧ ಸಹಕಾರಿಯಾದರೂ ವಿಸ್ತಾರವಾದ ಭೂಪ್ರದೇಶದ ಆಡಳಿತ ಸುಗಮವಾಗಿ ಸಮಾಧಾನಕರವಾಗಿ ಇರಬೇಕಾದರೆ ರಾಜ್ಯದ ಆಡಳಿತದ ರೀತಿ ನೀತಿಗಳು ಮಾತೃತ್ವ ಭಾವವನ್ನು ಹೊಂದಿರುವುದು ಅತ್ಯವಶ್ಯ. ಈ ಹಿನ್ನೆಲೆಯಲ್ಲಿ ಶಕ್ತಿದೇವತೆಗಳು ಬರಿಯ ರಣದೇವಿಯರಾಗಿರದೆ ಆಶ್ರಿತರನ್ನು ಪ್ರೀತಿ ವಾತ್ಸಲ್ಯಗಳಿಂದ ಪೋಷಿಸುವ ಮಾತೆಯರೂ ಆದದ್ದು ಸಹಜ. 

ಅಗಾಧ ಸೃಷ್ಟಿ, ಲಯ ಶಕ್ತಿಯ ಸೂಚಕ ಆದ ಮಾತೃ ದೇವತೆಗಳು ಜನಪ್ರಿಯ ದೇವತೆಗಳು. ನವರಾತ್ರಿಯ ಆಚರಣೆಯಲ್ಲಿ ದುರ್ಗಾ ದೇವಿಯ ವಿವಿಧ ಸಂರಕ್ಷಕ ರೂಪಗಳ ಪೂಜೆಯೇ ಪ್ರಮುಖವಾದದ್ದು. ದಿನನಿತ್ಯದ ಸ್ಮಾರ್ತ ಪೂಜೆಯಲ್ಲಿ ದೇವಿಯನ್ನು ಪ್ರತಿನಿಧಿಸುವ ಮುದ್ರೆಗಳಿಗೆ, ಸ್ಮಾರ್ತ ಹೋಮ ಹವನಗಳಲ್ಲಿ ಮಂಡಲಕ್ಕೆ ವಿಶೇಷ ಮಹತ್ವ ಇದೆ. ಅನೇಕ ದೇವಸ್ಥಾನಗಳಲ್ಲಿ ದೈನಂದಿನ ಪೂಜೆಯಲ್ಲಿ ವಾದ್ಯಗೋಷ್ಠಿಯೊಂದಿಗೆ ದೇವಿಯ ಸೂಚಕ ಆದ ಬಲಿಪೀಠಗಳಿಗೆ ಬಲಿ ಹಾಕುವ ಪದ್ಧತಿ ಇದೆ.  ಅನೇಕ ಹಳ್ಳಿಗಳಲ್ಲಿ ಚಂಡಿ, ಕಾಳಿ ಮುಂತಾದ ದೇವಿಯರನ್ನು ಗ್ರಾಮ ರಕ್ಷಕ ದೇವಿಯರು ಎಂದೂ, ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸಿ ವ್ಯಕ್ತಿಯ ಹಿತವನ್ನು ಕಾಪಾಡುವವರು ಎಂದೂ ಪೂಜಿಸುತ್ತಾರೆ. ಈ ದೇವಿಯರ ಆರಾಧನೆ ಸಂತಾನ ಪ್ರಾಪ್ತಿ ಮತ್ತು ಸಂರಕ್ಷಣೆ, ಮರಣ, ರೋಗಭಯ ಮತ್ತಿತರ ಪೀಡಾ ನಿವಾರಣೆ, ಪ್ರಾಕೃತಿಕ ಪೀಡೆಗಳಿಂದ ಗ್ರಾಮಕ್ಕೆ ಉಂಟಾಗಬಹುದಾದ ಅಹಿತಗಳ ನಿವಾರಣೆ ಮುಂತಾದವುಗಳಿಗಾಗಿ ಈಗಲೂ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದೆ.  

ಭಾರತದಾದ್ಯಂತ ಗುಡ್ಡ, ಬೆಟ್ಟ, ನದೀ ತೀರ, ದಟ್ಟ ಅರಣ್ಯ ಮುಂತಾದ ಸಹಜ ಪ್ರಾಕೃತಿಕ ಸ್ಥಳಗಳಲ್ಲಿ ಇರುವ ಭಕ್ತಿ ಕೇಂದ್ರಿತ ಶಕ್ತಿಪೀಠಗಳು ಭಾರತೀಯರನ್ನು ಸಾಮಾಜಿಕವಾಗಿ, ಧಾರ್ಮಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಒಂದುಗೂಡಿಸುವ ಪ್ರಮುಖ ಪ್ರೇರಕ ಶಕ್ತಿ ಆಗಿರುವುದರ ಜೊತೆಗೆ ಪ್ರಾಕೃತಿಕ ಸಂಪತ್ತಿನ ಸದುಪಯೋಗವಾಗುವುದರಲ್ಲಿ ಮತ್ತು ಅದರ ಸಂರಕ್ಷಣೆಯಾಗುವುದರಲ್ಲಿಯೂ ಪ್ರಮುಖ ಪಾತ್ರ ವಹಿಸಿವೆ. ವ್ಯಕ್ತಿಯ ಬದುಕನ್ನು ಸುಂದರ ಅಥವಾ ಅಸುಂದರಗೊಳಿಸುವುದರಲ್ಲಿ ಅವನ ಸುತ್ತಲಿನ ಪರಿಸರಕ್ಕೆ ಅದರದೇ ಆದ ಪಾತ್ರ ಇರುವುದನ್ನು ಭಯ ವಿಧೇಯತೆ ಗೌರವ ಕೃತಜ್ಞತೆಗಳಿಂದ ಒಪ್ಪಿಕೊಳ್ಳಲು ಸಾಧ್ಯ ಆಗುವುದು ಸ್ವಾಭಾವಿಕ ಪ್ರಾಕೃತಿಕ ಪರಿಸರವನ್ನು ಭಕ್ತಿಭಾವದಿಂದ ಪರಿಭಾವಿಸಿದಾಗ ಮಾತ್ರ ಎಂಬುದೂ ಒಂದು ವಾಸ್ತವ ಸಂಗತಿ.

ಮಾತೃಕೆಗಳ ಆವಾಸಸ್ಥಾನಗಳು ಏಕೆ ಶಕ್ತಿಪೀಠಗಳಾಗಿವೆ ಎಂಬುದನ್ನು ಶಿವನ ಹಿನ್ನೆಲೆಯಲ್ಲಿಯೇ ವಿವರಿಸಿರುವುದು ಗಮನಾರ್ಹ. ವಾಸ್ತವಿಕತೆಯ ಮೂರು ಮುಖಗಳು ಸೃಷ್ಟಿ, ಸ್ಥಿತಿ, ಲಯ. ಶಿವ ಲಯಕರ್ತೃ. ಸೃಷ್ಟಿ, ಸ್ಥಿತಿ ಕಾರ್ಯಗಳಷ್ಟೇ ಜವಾಬ್ದಾರಿಯುತವಾದದ್ದು ಲಯ ಕಾರ್ಯ. ಉಳಿಸುವ, ಬೆಳೆಸುವ ಮಾತೃಭಾವ ಹಿನ್ನೆಲೆಯಲ್ಲಿ ಇರದಿದ್ದರೆ ಸೃಷ್ಟಿ, ಸ್ಥಿತಿಯಂತೆ ಲಯಕಾರ್ಯವೂ ಅರ್ಥಪೂರ್ಣವಾದದ್ದು ಆಗುವುದಿಲ್ಲ. ಇದಕ್ಕೆ ಪೂರಕವಾದದ್ದು ದಕ್ಷಯಜ್ಞದ ಕಥೆ. ವೈಯಕ್ತಿಕ ಮತ್ತು ಸಾಮುದಾಯಿಕ ಒಳಿತನ್ನು ಆಶಿಸಿ ಮಾಡುವ ಯಜ್ಞ ಮಾತೃಭಾವದ ಹಿನ್ನೆಲೆಯ ಒಂದು ಕರ್ಮಾಂಗ. ಶರತ್ತು ರಹಿತವಾಗಿ ಪ್ರೀತಿ ತೋರುವುದು ಮಾತೃಭಾವದ ಒಂದು ರೂಪ. ಇದನ್ನು ಭಾವಿಸದ ಶಿವನ ಮಾವ ದಕ್ಷ ಮಾಡಲು ಉದ್ದೇಶಿಸಿದ ಯಜ್ಞ ಅವನ ಮಗಳು ಸತಿಯ ಆತ್ಮಾರ್ಪಣೆಯಿಂದಾಗಿ ಧ್ವಂಸಗೊಂಡಿತು. ದುಃಖದಾವೇಗದಲ್ಲಿ ಸತಿಯ ಮೃತ ದೇಹವನ್ನು ಹೊತ್ತುಕೊಂಡು ಜಗತ್ತನ್ನು ತಿರುಗಿದ ಶಿವನನ್ನು ವಿಷ್ಣು ಮೃತ ಸತಿಯ ಅಂಗಾಂಗಗಳನ್ನೆಲ್ಲ ತುಂಡರಿಸಿ ಕಡು ವ್ಯಾಮೋಹದಿಂದ ಪಾರುಮಾಡಿದ್ದರ ಫಲ ಆ ತುಣುಕುಗಳು ಬಿದ್ದ ಸ್ಥಳಗಳು ಮಾತೃತ್ವದ ಶಕ್ತಿಪೀಠಗಳಾದದ್ದು,

ದಕ್ಷಯಜ್ಞವು ಕ್ರಿಯೆ, ಜ್ಞಾನಗಳ ಸಂಯೋಗವನ್ನು ಸೂಚಿಸುವ ಕಥೆಯೂ ಹೌದು. ಕ್ರಿಯೆಯು ಜ್ಞಾನದೊಂದಿಗೆ ಸಂಯೋಗಗೊಳ್ಳಬೇಕೋ ಅಥವಾ ಜ್ಞಾನವು ಕ್ರಿಯೆಯೊಂದಿಗೆ ಸಂಯೋಗಗೊಳ್ಳಬೇಕೋ ಎಂಬುದೊಂದು ಪ್ರಶ್ನೆ. ಸತಿ ತಾನೇ ಮುಂದಾಗಿ ಶಿವನನ್ನು ಒಲಿಸಿಕೊಂಡು ಮದುವೆಯಾದ ಪ್ರಸಂಗ ಅವಳ ಆತ್ಮಾರ್ಪಣೆಯಲ್ಲಿ ಮುಕ್ತಾಯವಾಯಿತು. ಶಿವ ಮುಂದಾಗಿ ಸತಿಯನ್ನು ಪಡೆಯಲೇ ಬೇಕೆಂಬ ವ್ಯಾಮೋಹಿ ಆದದ್ದು ಅವಳ ಮೃತ ದೇಹದ ತುಣುಕುಗಳು ಬಿದ್ದ ಸ್ಥಳಗಳಲ್ಲೆಲ್ಲ ಇಡೀ ಸತಿಯನ್ನು ಕಾಣುತ್ತಾ ಶಿವನೂ ಆಯಾ ಸ್ಥಳಗಳಲ್ಲಿ ನೆಲೆಸುವುದರಲ್ಲಿ ಕೊನೆಗೊಂಡಿತು. ಶಿವ ಪರಮ ಜ್ಞಾನಕ್ಕೆ ಸತಿ ತೀವ್ರವಾದ ಕ್ರಿಯೆಗೆ ಸಂಕೇತ. 

ಶಕ್ತಿ ಪೀಠಗಳ ಪರಿಕಲ್ಪನೆಯ ಕೇಂದ್ರ ಬಿಂದುವಾದ ಶಕ್ತಿಗೆ ಎರಡು ಮುಖ: 1. ಬೌದ್ಧಿಕ, 2. ಕ್ರಿಯಾತ್ಮಕ. ಬೌದ್ಧಿಕತೆ ವಿವೇಕಿ ಆಗಿರಬೇಕು, ಕ್ರಿಯೆ ಸೃಜನಶೀಲ ಆಗಿರಬೇಕು. ಆಗ ಶಕ್ತಿಯ ಪಟುತ್ವ ವ್ಯಾಪಕವಾಗುತ್ತಾ ಹೋಗುತ್ತದೆ. ಕ್ರಿಯೆಯು ಜ್ಞಾನದೊಂದಿಗೆ ಸಂಯೋಗವಾದುದನ್ನು ಸೂಚಿಸುವ ದಕ್ಷಯಜ್ಞದ ಕಥೆಯ ಮೊದಲ ಭಾಗ ಮಾತೃತ್ವ ಭಾವ ಪ್ರಕಟವಾಗದೆ ವಿಫಲ ಆದುದನ್ನು ಹೇಳಿದರೆ ಜ್ಞಾನವು ಕ್ರಿಯೆಯೊಂದಿಗೆ ಸಂಯೋಗವಾದ ದಕ್ಷಯಜ್ಞದ ಕಥೆಯ ಎರಡನೆಯ ಭಾಗವು ಬರಿಯ ಪೌರಾಣಿಕ ಉದ್ದೇಶವಾದ ತಾರಕಾಸುರನ ಸಂಹಾರಕ್ಕೆ ಸೀಮಿತವಾಗದೆ ನಮ್ಮ ಅನುಭವಕ್ಕೆ ದಕ್ಕುವ, ಭಕ್ತರ ಆಶಯಗಳನ್ನು ಈಡೇರಿಸುವ ಮಾತೃಭಾವದ ಶಕ್ತಿಪೀಠಗಳು ಕಾಣಿಸಿಕೊಳ್ಳುವ ವ್ಯಾಪ್ತಿಯನ್ನು ಪಡೆದುದನ್ನು ಹೇಳುತ್ತದೆ.

ಶಕ್ತಿ ತನಗೆ ತಾನೇ ಒಳ್ಳೆಯದೂ ಅಲ್ಲ, ಕೆಟ್ಟದ್ದೂ ಅಲ್ಲ; ಸಹಕಾರಿಯೂ ಅಲ್ಲ, ಅಸಹಕಾರಿಯೂ ಅಲ್ಲ; ನಿರ್ದಿಷ್ಟ ದಿಕ್ಕಿನಲ್ಲಿ ಕ್ರಿಯಾಶೀಲವೂ ಅಲ್ಲ, ಜಡವೂ ಅಲ್ಲ; ಅದು ಬಹು ಮುಖಿಯಾದ, ವಿವಿಧ ಆಯಾಮಗಳುಳ್ಳ ಸಾಮರ್ಥ್ಯಗಳ ಗಣಿ. ಅದರಿಂದ ಅಮೂಲ್ಯ ರತ್ನಗಳನ್ನು ಹೆಕ್ಕಿ ತೆಗೆದು ಸಾಣೆ ಹಿಡಿದರೆ ಅವು ಉಜ್ವಲಗೊಳ್ಳುತ್ತವೆ. ಅಮೂರ್ತ ಶಕ್ತಿಯ ಒಂದು ಮೂರ್ತ ರೂಪ ಮನುಷ್ಯ. ಅವನ ತಲೆ ಬೌದ್ಧಿಕತೆಯ ಕೇಂದ್ರ, ಅವನ ಜನನಾಂಗ ಕ್ರಿಯಾತ್ಮಕತೆ(ಸೃಷ್ಟ್ಯಾತ್ಮಕತೆ)ಯ ಕೇಂದ್ರ. ಜನನಾಂಗದ ಸೃಷ್ಟಿ ಸಾಮರ್ಥ್ಯಕ್ಕೆ ಕುಂಡಲಿನಿಯೂ ತಲೆಯ ಬೌದ್ಧಿಕತೆಯ ಸಾಮರ್ಥ್ಯಕ್ಕೆ ಸಹಸ್ರಾರವೂ ಒಂದು ಸಂಕೇತ. ಕುಂಡಲಿನಿಯು ಸಹಸ್ರಾರದಲ್ಲಿ ಸಂಲಗ್ನವಾದರೆ ವ್ಯಕ್ತಿಯ ವೈಯಕ್ತಿಕತೆ ಸಾರ್ವತ್ರಿಕತೆ ಆಗಿಬಿಡುತ್ತದೆ, ತಾನು ಎನ್ನುವ ಸೀಮಿತತೆಯನ್ನು ಕಾಲಾತೀತವಾಗಿ ಮತ್ತು ದೇಶಾತೀತವಾಗಿ ವ್ಯಕ್ತಿ ಮೀರುತ್ತಾನೆ ಎಂದು ತಾಂತ್ರಿಕರು ಹೇಳುತ್ತಾರೆ. 

ತಾಂತ್ರಿಕರು ಕುಂಡಲಿನೀ ಯೋಗವು ಕ್ರಿಯಾ ಶಕ್ತಿ, ಸಾಮರ್ಥ್ಯಗಳು ವಿಕಾಸವಾಗಿ ಬೌದ್ಧಿಕತೆಯಲ್ಲಿ ವಿಲೀನ, ಸಂಲಗ್ನ ಆಗುವುದನ್ನು ಮತ್ತು ಕುಂಡಲಿನಿ ಸಹಸ್ರಾರದಲ್ಲಿ ಅಮೃತ ಆಗುತ್ತದೆ, ಅಮೃತದ ಹನಿಗಳು ಮೈ ಮನಗಳನ್ನು ವ್ಯಾಪಿಸುವ ಅನುಭವ ಆಗುತ್ತದೆ ಎನ್ನುವುದನ್ನು ಹೇಳುವುದರ ಒಂದು ಸೂಚ್ಯಾರ್ಥ ಬುದ್ಧಿ ತನಗೆ ತಾನೇ ಕ್ರಿಯಾಶೀಲ ಅಲ್ಲ, ಕ್ರಿಯಾತ್ಮಕತೆ ತನಗೆ ತಾನೇ ಅರ್ಥಪೂರ್ಣ ಅಲ್ಲ; ಪರಸ್ಪರ ಒಂದನ್ನೊಂದು ಪ್ರೇರೇಪಿಸುವ, ಒಂದಕ್ಕೊಂದು ಪೂರಕ ಆಗುವ, ಒಂದನ್ನೊಂದು ವಿಸ್ತರಿಸುವ ಕ್ರಿಯೆ ಬುದ್ಧಿಗಳ ಮತ್ತು ಬುದ್ಧಿ ಕ್ರಿಯೆಗಳ ಸಂಯೋಗ ಆದರೆ ಮಾತ್ರ ಅವು ಅರ್ಥಪೂರ್ಣ ಎಂದು. ಅಮೃತ ಆಗುವ ಈ ಸಂಯೋಗವನ್ನು ಸಮರ್ಥವಾಗಿ, ಸಮರ್ಪಕವಾಗಿ ಅರ್ಥೈಸುವ ಒಂದು ಪರಿಕಲ್ಪನೆ ಮಾತೃತ್ವ. ಮಾತೃತ್ವಕ್ಕೆ ಲಿಂಗ ಸೂಚನೆ ಇಲ್ಲ. ಅದರ ಮೂರ್ತ ರೂಪ ಸ್ತ್ರೀಯೂ ಆಗಬಹುದು, ಪುರುಷನೂ ಆಗಬಹುದು; ಈ ಅರ್ಥದಲ್ಲಿ ನಾಮರೂಪಾತೀತ, ಅದರಿಂದಾಗಿ ಕಾಲ-ದೇಶಾತೀತ, ಸರ್ವ ಮಾನ್ಯ ತತ್ತ್ವವಾಗಿ ಅಮೃತ; ಮಾತೃ‌ ತತ್ತ್ವ ಉಳಿಸುವ ಕ್ರಿಯೆಯೂ, ಬೆಳೆಸುವ ವಿವೇಕ, ಜಾಣ್ಮೆ, ಜವಾಬ್ದಾರಿಯೂ ಆಗಿದೆ ಎನ್ನುವ ಅರ್ಥದಲ್ಲಿ ಅಮೃತ.

ಹರಪ್ಪ ಮೊಹೆಂಜೊದಾರೋ ಉತ್ಖನನದಲ್ಲಿ ದೊರೆತಿರುವ ಮಾತೃದೈವ ಎಂದು ಗುರುತಿಸಿರುವ ಮುದ್ರಿಕೆಯೊಂದರಲ್ಲಿ (plate XII, John Marshall: Mohenjodaro and the Indus Civilization, Vol.1) ಸ್ತ್ರೀಯ ಯೋನಿಯಿಂದ ಮೂಡಿಬಂದ ಸಸ್ಯವೊಂದರ ಚಿತ್ರ ಇದೆ. ಇದು ಸೃಷ್ಟ್ಯಾತ್ಮಕವೂ ಲಯಕಾರಕವೂ ಆದ ಶಕ್ತಿಯು ಹೇಗೆ ಮಾತೃ ತತ್ತ್ವ, ಅಮೃತತ್ವ ಆದೀತು ಎನ್ನುವುದರ ಸಾಂಕೇತಿಕ ಚಿತ್ರ-ವಿವರಣೆ.  ಸಸ್ಯವು ಬೀಜವೊಂದರಿಂದ ಮೂಡಿಬಂದದ್ದು ಸೃಷ್ಟಿ; ಅದು ಬೀಜವನ್ನು ಇಲ್ಲವಾಗಿಸಿ ಮೂಡಿಬಂದದ್ದು ಲಯ. ಸಸ್ಯ ಬೀಜಗಳನ್ನು ಉತ್ಪಾದಿಸಿ ಸಂತಾನಾಭಿವೃದ್ಧಿ ಮಾಡುವುದು ಸೃಷ್ಟಿ. ಬೀಜಗಳನ್ನು ಉತ್ಪಾದಿಸಿದ ನಂತರ ಸಸ್ಯ ಇಲ್ಲವಾಗುವುದು ಲಯ. ಮನುಷ್ಯನ ಸಂದರ್ಭದಲ್ಲಿ ಸ್ತ್ರೀಯ ಗರ್ಭಾಶಯ ಸೃಷ್ಟಿಯ ಮಾಧ್ಯಮ. ಅಲ್ಲಿ ಮಗುವೊಂದರ ಮೂಡುವಿಕೆ ಸೃಷ್ಟಿ, ಅಲ್ಲಿಂದ ಹೊರಬಂದು ಅದರ ಸಂಪರ್ಕವನ್ನು ಕಡಿದುಕೊಳ್ಳುವುದು ಲಯ. ಆ ಮಗು ಮತ್ತೊಂದು ಮಗುವಿನ ಸೃಷ್ಟಿ ಮತ್ತು ಲಯಗಳಿಗೆ, ಆ ಇನ್ನೊಂದು ಮಗು ಮತ್ತೊಂದು ಮಗುವಿನ ಸೃಷ್ಟಿ ಮತ್ತು ಲಯಗಳಿಗೆ ಹೀಗೆ ನಿರಂತರವಾಗಿ ಮಧ್ಯವರ್ತಿ ಆಗುತ್ತಾ ಹೋಗುವುದೇ ಸೃಷ್ಟಿ ಲಯಗಳ ಅಮೃತತ್ವ, ಇಂಥ ಭಾವನಾತ್ಮಕ ತಾತ್ತ್ವಿಕ ಪರಂಪರೆಯೇ ಮಾತೃಆರಾಧನೆಯ ಮೂಲಮಾತೃಕೆ ಎನ್ನಬಹುದು.      

Feature Image Credit: istockphoto.com

ಮಾತೃಶಕ್ತಿ ಆರಾಧನಾ ಸರಣಿ

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.