close logo

ಕನ್ನಡದಲ್ಲಿ ತಿರುಪ್ಪಾವೈ ಲೇಖನಮಾಲೆ – ಪಾಶುರಂ 16

ಚಿತ್ರಕೃಪೆ : ಕೇಶವ್ ವೆಂಕಟರಾಘವನ್ (ಪಾಶುರಂ – 16)

ಶ್ರೀ ನೀಳಾ  ದೇವೈ ನಮಃ

ತಿರುಪ್ಪಾವೈ ಲೇಖನಮಾಲೆಯ ಹಿಂದಿನ ಲೇಖನಗಳನ್ನು ಈ ಕೆಳಗೆ  ಓದಬಹುದು :

  1. ಪಾಶುರಂ

ನಾಯಗನಾಯ್ ನಿನ್ರ ನಂದಗೋಪನುಡೈಯ

ಕೋಯಿಲ್ ಕಾಪ್ಪಾನೇ ! ಕೊಡಿತ್ತೋನ್ರುಂ ತೋರಣ

ವಾಶಲ್ ಕಾಪ್ಪಾನೇ ! ಮಣಿಕ್ಕದವಂ ತಾಳ್ ತಿರವಾಯ್

ಆಯರ್ ಶಿರುಮಿಯರೋಮುಕ್ಕು ಅರೈ ಪರೈ

ಮಾಯನ್ ಮಣಿವಣ್ಣನ್ ನೆನ್ನೆಲೇವಾಯ್ ನೇರ್ ಂದಾನ್

ತೋಯೋಮಾಯ್ ವಂದೋಂ ತುಯಿಲೆಳಪ್ಪಾಡುವಾನ್

ವಾಯಾಲ್ ಮುನ್ನಮುನ್ನಂ ಮಾತ್ತಾದೇ ಅಮ್ಮಾ! ನೀ

ನೇಶ ನಿಲೈಕ್ಕದವಂ ನೀಕ್ಕೇಲೋ ರೆಂಬಾವಾಯ್ ॥

ಶ್ರೀಯುತ ಕೌಶಿಕರ ಕನ್ನಡ ಭಾಷಾಂತರ ಹೀಗಿದೆ :

ಸ್ವಾಮಿಯಹ ನಂದಗೋಪನ, ಬೆಳಗುವರಮನೆಯ 

ನೇಮದಿಂ ಕಾವವನೆ, ಧ್ವಜತಳಿರು   ತೋರಣದಿ 

ರಾಮಣೀಯಕಮೆನಿಪ ದೇಗುಲದ, ಮಾಣಿಕ್ಯ ಕದದ ಬೀಗವ ತೆಗೆಯೆಲೈ।

ಶ್ರೀಮನೋಹರಕೃಷ್ಣ, ಕಿರಿಯ ಗೊಲ್ಲರು ಯೆಮಗೆ ಪ್ರೇವದಿಂ ನಿನ್ನೆಯೇ 

ಕರುಣಿಸಿಹ, ನಾವೆಲ್ಲ ಶಾಮಲಾಂಗನೆ , ನಿನ್ನ ನೇಳಿಸಲು ಬಂದಿಹೆವು,

ಕದದೆರೆದು ಸೇವೆಯೀಯೈ ।।೧೬।।

ಇದೀಗ ನಾವು ತಿರುಪ್ಪಾವೈ ಪಾಶುರಗಳ ಮೂರನೆಯ ಭಾಗಕ್ಕೆ ಬಂದಿದ್ದೇವೆ. ಮುಂದಿನ 7 ಪದ್ಯಗಳಲ್ಲಿ  (16 – 22)  ಶ್ರೀಕೃಷ್ಣನಿಗೆ ಪ್ರಿಯವಾಗಿಯೂ, ಅನುಬಂಧಿಗಳಾಗಿಯೂ ಇರುವವರ ಮೂಲಕ ಪ್ರಾರ್ಥನೆಯನ್ನು ಸಲ್ಲಿಸಿ ಆ ಪರಮಾತ್ಮನ ಸಾನಿಧ್ಯವನ್ನು ಪಡೆಯುವ ಬಗೆಯಾಗಿದೆ.  ಮೊದಲ 5 ಪದ್ಯಗಳಲ್ಲಿ ಮಹಾವಿಶ್ವಾಸಕ್ಕೆ ಬೇಕಾದ ಪರಮಾತ್ಮ ನಿಷ್ಕರ್ಷೆ ತಿಳಿಸಿದೆ. ಎರಡೆನೆಯ ಗುಂಪಿನಲ್ಲಿ(6 ರಿಂದ 10) ಭಕ್ತಿ ಹುಟ್ಟುವ ಬಗೆ ಮತ್ತು ಅನುಸಂಧಾನದ ಬಗೆ, ಇನ್ನು ಉಳಿದ  ಐದರಲ್ಲಿ(11 ರಿಂದ 15) ಆ ಭಕ್ತಿಯನ್ನು ಬೆಳೆಸುವ ಗುಣಗಾನವು ಹೇಳಲ್ಪಟ್ಟಿದೆ. 

ಇನ್ನು ಪರಮಾತ್ಮನಲ್ಲಿಗೆ ಹೋಗಿ ಪ್ರಾರ್ಥಿಸುವುದೊಂದೇ ಬಾಕಿ, ಆದರೆ ಅದು ಅಷ್ಟು ಸುಲಭವಲ್ಲ. ಅವನಲ್ಲಿಗೆ ಹೋಗುವುದೆಂತು ಎಂದು ಆಲೋಚಿಸಿ, ಅನುಬಂಧಿಗಳ ಮೂಲಕವೇ ಹೋಗಬೇಕೆನ್ನುವ ಶಾಸ್ತ್ರ ಮರ್ಯಾದೆಯಂತೆ, ಅವರನ್ನು ಎಬ್ಬಿಸಿ ಪ್ರಾರ್ಥಿಸುವ ಪದ್ಯಗಳೇ ಇವು. 

ಗೋದಾದೇವಿಗೆ ಗೋಪಬಾಲೆಯರ ಭಾವನೆಗಳು ಬಂದು ನಂದಗೋಕುಲದಲ್ಲಿ ಶ್ರೀಕೃಷ್ಣನನ್ನು ಎಬ್ಬಿಸುವಂತೆ ಆದರೂ, ತಾನು ಪ್ರತಿದಿನವೂ ವಟಪತ್ರಶಾಯಿ ಸನ್ನಿಧಿಗೆ ಹೋಗುವುದನ್ನು ಮರೆತಿರಲಿಲ್ಲ. ಶ್ರೀಕೃಷ್ಣನನ್ನು ಎಬ್ಬಿಸುವ ಮೊದಲು ಅವನ ದ್ವಾರಪಾಲಕನನ್ನು ಎಬ್ಬಿಸುವಳು ಮತ್ತು ಪ್ರಾರ್ಥಿಸುವಳು. ದಿವ್ಯಕ್ಷೇತ್ರಗಳೊಳಗೆ ಪ್ರವೇಶಿಸುವಾಗ, ಕ್ಷೇತ್ರಾಧಿಪತಿಗಳನ್ನೂ, ದ್ವಾರಾಧ್ಯಕ್ಷನನ್ನೂ ಪ್ರಾರ್ಥಿಸಿ ಅವರ ಅನುಮತಿ ಪಡೆದು ಪ್ರವೇಶಿಸಬೇಕೆಂಬುದು ಶಾಸ್ತ್ರಗಳಲ್ಲಿ ಹೇಳಿದೆ. ಸನಕ -ಸನಂದಾದಿಗಳು ಕೂಡ ಅಷ್ಟ ದಿಕ್ಪಾಲಕರ ಅನುಮತಿ ಪಡೆದೇ ಭಗವಂತನ ದರ್ಶನ ಪಡೆಯಬೇಕು. 

ಚಂಡ – ಪ್ರಚಂಡರು ಪೂರ್ವ ಬಾಗಿಲಿನ ದಿಕ್ಪಾಲಕರಾದರೆ ,  ಭದ್ರ-ಸುಭದ್ರರು ದಕ್ಷಿಣ ಬಾಗಿಲು ,  ಜಯ-ವಿಜಯರು ಪಶ್ಚಿಮ ಬಾಗಿಲು ಮತ್ತು ದಾತೃ-ವಿಧಾತೃ ಉತ್ತರ ಬಾಗಿಳುಗಳನ್ನು ರಕ್ಷಿಸುತ್ತಾರೆ. ಈ ಎಂಟು ಮಂದಿ ದಿಕ್ಪಾಲಕರಿಗೂ ವಂದಿಸಿ,ಅವರುಗಳ ಅನುಮತಿ ಪಡೆದು ದರ್ಶನ ಭಾಗ್ಯವನ್ನು ಪಡೆಯಬೇಕು. 

ಇಲ್ಲಿಯೂ ಕೂಡ, ಗೋದಾದೇವಿಯು ಆಚಾರ್ಯ ಮೂರ್ತಿಯನ್ನು ಸಮೀಪಿಸಬೇಕೆನ್ನುವ ವಿಷಯದಲ್ಲಿ ಆಗಮ ಶಾಸ್ತ್ರಕ್ಕೆ ಅನುಗುಣವಾಗಿ ಗೋಪಕನ್ನೆಯರೊಂದಿಗೆ ಕೃಷ್ಣನಿರುವ ಗೋಕುಲದ ನಂದಗೋಪನ ಮನೆಗೆ ಬಂದಿದ್ದಾಳೆ. ಅಲ್ಲಿಯ ದ್ವಾರಪಾಲಕನಲ್ಲಿ ಅರಿಕೆ ಮಾಡಿಕೊಳ್ಳುತ್ತಾಳೆ. ನಮಗೆಲ್ಲ ನಾಯಕನಾಗಿರುವ ನಂದಗೋಪನ ದಿವ್ಯಮಂದಿರವನ್ನು ಕಾಪಾಡುವವನೇ, ಧ್ವಜ-ಪಟಗಳಿಂದ ಅಲಂಕೃತವಾದ ತೋರಣಗಳಿಂದ ಶೋಭಿಸುವ ಬಾಗಿಲನ್ನು ಕಾಯುವವನೇ, ಸುಂದರವಾದ ರತ್ನಖಚಿತ ಅಗುಳಿಯನ್ನು ತೆಗೆಯಪ್ಪ ಎಂದು ಬೇಡುತ್ತಾಳೆ.  ಗೋಪಕನ್ಯೆಯರಾದ ನಮಗೆ ಇಷ್ಟಾರ್ಥ ಸಿದ್ಧಿಯಾಗುವ ವಾದ್ಯ ವಿಶೇಷವನ್ನು ಕೊಡುವುದಾಗಿ ಆ ಶ್ರೀಕೃಷ್ಣನು ಹಿಂದಿನ ದಿನವಷ್ಟೇ  ವಾಗ್ದಾನ ಮಾಡಿದ್ದಾನೆ. ಆತನನ್ನು ನಿದ್ರೆಯಿಂದ ಎಬ್ಬಿಸುವ ಸುಪ್ರಭಾತವನ್ನು ಹಾಡಲು ನಾವೆಲ್ಲರೂ ಪರಿಶುದ್ಧರಾಗಿ ಬಂದಿದ್ದೇವೆ, ದಯವಿಟ್ಟು ಕದವನ್ನು ತೆಗಿ ಎಂದು ಪ್ರಾರ್ಥಿಸುತ್ತಾಳೆ. 

ಭಗವಂತನ ದರ್ಶನಲಾಭ ಸುಲಭವೇ ಆದರೂ ಅದರಲ್ಲಿ ಬರುವ ಅಡೆ -ತಡೆಗಳನ್ನು ಸ್ವಂತ ಪ್ರಯತ್ನದಿಂದ ಪರಿಹರಿಸಿಕೊಳ್ಳಬೇಕು. ಇಲ್ಲಿ ಹೇಳಿರುವ ಕೋಯಿಲ್ ನಂದಗೋಪನದೇ. ಶ್ರೀಕೃಷ್ಣನದಲ್ಲ. ಇಲ್ಲಿ ನಂದನು ಆಚಾರ್ಯಸ್ಥಾನದಲ್ಲಿದ್ದಾನೆ. ಈತನ ಮೂಲಕವೇ  ಭಗವಂತನನ್ನು ಹೊಂದಬೇಕು. 

ಆಗ ಆ ದ್ವಾರಪಾಲಕನು, ಮಧ್ಯರಾತ್ರಿಯಲ್ಲಿ ಭೀತಿಗೆ ಆಸ್ಪದವಾಗಿರುವಾಗ ನಿಶ್ಯಂಕರಾಗಿ ಬಂದು ಕೂಗುವ ನೀವು ಯಾರು? ಎಂದು ಕೇಳುತ್ತಾನೆ. ನಾವೆಲ್ಲಾ ಗೋಪಿಯರು, ಬೇರೆಯಾರೂ ಅಲ್ಲ. ಆ ಸರ್ವಲೋಕಗಳಿಗೂ ನಾಯಕನಾದ ಆ ಸ್ವಾಮಿಯೇ ನಮಗೆ ನಾಯಕ. ನಮ್ಮ ತ್ರಾಣದಲ್ಲಿ ಅವನೇ ಬದ್ದ ಧ್ವಜನಾಗಿರಲು, ನೀನು ಅಂಜುವುದೇ? ನಿರ್ಭಯವಾಗಿ ಕದವನ್ನು ತೆಗಿ ಎನ್ನುತ್ತಾರೆ. ಶ್ರೀಕೃಷ್ಣನ ಅನುಮತಿಯನ್ನು ಪಡೆದು ಸುಭದ್ರೆಯನ್ನು ಅರ್ಜುನ ಹಾರಿಸಿಕೊಂಡು ಹೋದಹಾಗೆ, ಶ್ರೀಕೃಷ್ಣನನ್ನು ಹಾರಿಸಿಕೊಂಡು ಹೋಗಲು, ನಮಗೂ ನೀನು ಒದಗಬೇಕು ಎನ್ನುತ್ತಾರೆ. ನಮ್ಮಿಂದೇನು ಭಯ? ನಾವೆಲ್ಲ ವನಿತೆಯರು, ಅಬಲೆಯರು ಎನ್ನುತ್ತಾರೆ ಆ ಗೋಪಿಯರು. 

ಸತ್ಯ. ಶೂರ್ಪಣಕಿ ಅಬಲೆಯೇ ಅಲ್ಲವೇ? ಪಂಚವಟಿಯಲ್ಲಿ ಒಳಹೂಕ್ಕು ವಾಚಾಮಗೋಚರವಾದ ಅನರ್ಥವನ್ನು ಮಾಡಲಿಲ್ಲವೇ? ಎಂದು ದ್ವಾರರಕ್ಷಕ ಮರುಪ್ರಶ್ನಿಸುತ್ತಾನೆ. 

ಅವಳು ನಿಶಾಚರಿ-ನಾವಾದರೋ ಗೋಪಿಯರು. ಮಹಾನುಭಾವ! ಆ ರಾಕ್ಷಸಿಗೆ ನಮ್ಮನ್ನು ಹೋಲಿಸುವುದು ಸರಿಯೇ? ನಾವು ಬಾಲೆಯರು ಎನ್ನುತ್ತಾರೆ. 

ದ್ವಾರಪಾಲಕನು,  ರಾಕ್ಷಸಿಯಾದರೇನು? ಗೋಪಿಯಾದರೇನು? ಬಾಲೆಯರಾದರೇನು? ಪೂತನಿಯೂ ಕೂಡ ಗೋಪಿಯ ವೇಷ ಧರಿಸಿ ಬಂದಳೆಂಬುದನ್ನು ಅರಿಯರಾ? ವತ್ಸಾಸುರನ ಕಥೆಯನ್ನು ಕೇಳಿಲ್ಲವೇ? ಅವನು ಕರುವಾಗಿಯೇ ಬಂದು ಮಾಡಿದ ಬಾಲಕೃತ್ಯಗಳನ್ನರಿಯರಾ? ಎನ್ನುತ್ತಾನೆ. 

ಮಹಾತ್ಮನೇ! ನಾವುಗಳು ಗುಂಪುಗುಂಪಾಗಿ ಬಂದಿದ್ದೇವೆ. ಸೂರ್ಯೋದಯವೂ ಆಗಿದೆ. ಅವರೋ ನೃಶಂಸರು. ಕೊಲ್ಲುವದಕ್ಕಾಗಿಯೇ ಬಂದವರು. ನಮ್ಮನ್ನು ಹೊಸದಾಗಿ ಪರೀಕ್ಷಿಸಬೇಕಿಲ್ಲ. ನಾವುಗಳು, “ಭೋ, ಕೃಷ್ಣ! ಭೋ, ಮಾಧವ! ಭೋ, ಮುಕುಂದ! ಹರೇ, ಮುರಾರೇ!” ಎಂದು ಸುಪ್ರಭಾತವನ್ನು ಹಾಡುತ್ತೇವೆ. ಬೆಳಗಿನ ವೇಳೆಯಾಗಿದೆ. ಇನ್ನು ವಿರೋಧಿಸಬೇಡ. ಇಷ್ಟು ಮಾಡಲು ಅನುಮತಿ ಕೊಟ್ಟು, ಕದವನ್ನು ತೆರೆ. ಇಷ್ಟು ಮಾಡಿ ಧರ್ಮವನ್ನು ಕಟ್ಟಿಕೊ ಎನ್ನುತ್ತಾರೆ. 

ದ್ವಾರರಕ್ಷಕನು ದಯೆಯಿಂದ- ಗೋಪಿಯರೆ! ಬೇಕಾದ ಹಾಗೆ ಒಳಗೆ ಹೋಗಿ, ತಡೆಯುವುದಿಲ್ಲ. ನಿಮ್ಮ ಕೈಯಿಂದಲೇ ಕದವನ್ನು ತೆರೆದುಕೊಂಡು ಒಳಕ್ಕೆ ಹೋಗಿ ಎಂದು ಹೇಳುತ್ತಾನೆ. 

ಗೋಪಿಯರು ಅದಕ್ಕೆ, ನಾವು ಕದವನ್ನು ತೆಗೆದು ಒಳ ಹೋಗೆವು. ಪ್ರೀತಿಯಿಂದ ದ್ವಾರಪಾಲಕನೇ ತೆರೆಯಬೇಕು. ಪ್ರತಿಷೇದಿಸಿದವರ ಕೈಯಿಂದಲೇ ಒಳಕ್ಕೆ ಬಿಡಿಸಿಕೊಂಡು ಹೋಗುವುದು ಸ್ವಾದುತರ ಎಂದು ಹೇಳಿ, ಆ ಭಗವಂತನ ಸುಪ್ರಭಾತವನ್ನು ಹಾಡುತ್ತಾರೆ. 

ತತ್ವಾರ್ಥ: ಇಲ್ಲಿ ನಂದನು ಆಚಾರ್ಯ ಸ್ಥಾನದಲ್ಲಿದ್ದಾನೆ. ಇಲ್ಲಿ ಹೇಳಿರುವ ಕೋಯಿಲ್ ನಂದಗೋಪನದೇ. ಈತನ ಮೂಲಕ ಭಗವಂತನಾದ ಶ್ರೀಕೃಷ್ಣನನ್ನು ಹೊಂದಬೇಕು. ಆಚಾರ್ಯರು ಲೋಕನಾಯಕರಾಗಿ ಶ್ರೀಮನ್ನಾರಾಯಣನ ಆವಾಸಸ್ಥಾನವಾಗಿ ಮೂಲ ಮಂತ್ರವನ್ನು ರಕ್ಷಿಸುತ್ತಿರುವರು. ಇವರು ಮಣಿಯಂತಿರುವ ಹೃದಯದ ಬಾಗಿಲನ್ನು ತೆರೆದು ಆತ್ಮದರ್ಶನವನ್ನು ದಯಪಾಲಿಸುತ್ತಾರೆ. ಮುಗ್ಧ ಬಾಲಕರು, ಪರತಂತ್ರರೂ ಆಗಿರುವ ನಮಗೆ ಸಕಲ ಸೌಭಾಗ್ಯವನ್ನೂ , ಪರಮಪುರುಷಾರ್ಥವನ್ನೂ ಕೊಡಿಸುವುದಕ್ಕಾಗಿ ಗೀತೋಪದೇಶದ ಮೂಲಕ ವಾಗ್ದಾನ ಮಾಡಿದ್ದಾರೆ. ಅನಾದಿ ಕಾಲದಿಂದ ಬಂದಿರುವ ಅಜ್ಞಾನವನ್ನು ಅಳಿಸಿ, ಅಹಂಕಾರ-ಮಮಕಾರಗಳನ್ನು ತೊಲಗಿಸಿ, ನಮಗೆಲ್ಲ ಭಗವಂತನ ಅನುಗ್ರಹಕ್ಕೆ ಪಾತ್ರರಾಗುವಂತೆ ಮಾಡುತ್ತಾರೆ. ಆತ್ಮ ದರ್ಶನಕ್ಕೆ ಅಡ್ಡಿಯಾಗಿರುವ ನಮ್ಮ ಅಜ್ಞಾನವೆಂಬ ಬಾಗಿಲನ್ನು ತೆರೆಯುತ್ತಾರೆ. 

ಭಕ್ತಶ್ರೇಷ್ಠರಾದ ಕನಕದಾಸರ ವಾಣಿಯಲ್ಲೇ ಹೇಳುವಂತೆ 

ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ

ಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೇ                 ||ಪ||

ಪರಮಪದದೊಳಗೆ ವಿಷಧರನ ತಲ್ಪದಲಿ ನೀ

ಸಿರಿಸಹಿತ ಕ್ಷೀವಾರಿಧಿಯೊಳಿರಲು

ಕರಿರಾಜ ಕಷ್ಟದಲಿ ಆದಿಮೂಲಾ ಎಂದು

ಕರೆಯಲಾಕ್ಷಣ ಬಂದು ಒದಗಿದೆಯೋ ನರಹರಿಯೇ        ||೧||

ಕಡುಕೋಪದಿಂ ಖಳನು ಖಡುಗವನು ಹಿಡಿದು ನಿ

ನ್ನೊಡೆಯನೆಲ್ಲಿಹನು ಎಂದು ನುಡಿಯೆ

ದೃಢಭಕುತಿಯಲಿ ಶಿಶುವು ಬಿಡದೆ ನಿನ್ನನು ಭಜಿಸೆ

ಸಡಗರದಿ ಕಂಭದಿಂದೊಡೆದೆ ನರಹರಿಯೆ                    ||೨||

ಯಮಸುತನ ರಾಣಿಗೆ ಅಕ್ಷಯವಸನವಿತ್ತೆ

ಸಮಯದಲಿ ಅಜಮಿಳನ ಪೊರೆದೆ

ಸಮಯಾಸಮಯವುಂಟೆ ಭಕ್ತವತ್ಸಲ ನಿನಗೆ

ಕಮಲಾಕ್ಷ ಕಾಗಿನೆಲೆಯಾದಿ ಕೇಶವನೆ                        ||೩||

(ವಿಷಯ ಸಂಗ್ರಹ : “ತಿರುಪ್ಪಾವೈ ರಸಸ್ವಾಧಿನಿ” – ಬರೆದವರು ವಿದ್ವಾನ್ ವೇದಾನ್ತ ಸಾರಜ್ಞ

   ಶ್ರೀ ಎಸ್. ಕೃಷ್ಣಾತಾತಾಚಾರ್ಯ )

(1) ಗಮಕ ಕವಿತಾ ವನಜ ಭಾಸ್ಕರ , ಗಮಕ ರತ್ನಾಕರ ಶ್ರೀಯುತ ಬಿ.ಎಸ್ .ಎಸ್ ಕೌಶಿಕ್  ರವರ  ಶ್ರೀಮದಾಂಡಾಳ್ ಮಹಾ ವೈಭವಂ -ತಿರುಪ್ಪಾವೈ – ಮೂಲ, ಕನ್ನಡ ತಾತ್ಪರ್ಯ , ಷಟ್ಪದಿ, ಭಾವಾರ್ಥ , ಚೌಪದಿ )

Tiruppavai series

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.