close logo

ಕನ್ನಡದಲ್ಲಿ ತಿರುಪ್ಪಾವೈ ಲೇಖನಮಾಲೆ – ಪಾಶುರಂ 23

ಚಿತ್ರಕೃಪೆ : ಕೇಶವ್ ವೆಂಕಟರಾಘವನ್ (ಪಾಶುರಂ – 23)

ಶ್ರೀ ನೀಳಾ  ದೇವೈ ನಮಃ

ತಿರುಪ್ಪಾವೈ ಲೇಖನಮಾಲೆಯ ಹಿಂದಿನ ಲೇಖನಗಳನ್ನು ಈ ಕೆಳಗೆ  ಓದಬಹುದು :

23 ಪಾಶುರಂ 

ಮಾರಿಮಲೈ ಮುಳಂಜಿಲ್ ಮನ್ನಿಕ್ಕಿಡಂದುಱಂಗಂ

ಶೀರಿಯ ಶಿಂಗರಿವಿತ್ತುತ್ತೀ ವಿಳಿತ್ತು

ವೇರಿಮಯಿರ್ ಪೊಂಗ ವೆಪ್ಪಾಡುಂ ಪೇರ್ ಂದುದರಿ

ಮೂರಿ ನಿಮಿರ್ ಂದು ಮುಳಂಗಿಪ್ಪುರಪ್ಪಟ್ಟು

ಪೋದರುಮಾಪೋಲೇ, ನೀ ಪೂವೈಪ್ಪೂವಣ್ಣಾ ! ಉನ್

ಕೋಯಿಲ್ ನಿನ್ರಿಂಗನೇ ಫೋಂದರುಳಿ ಕೋಪ್ಪುಡೈಯ

ಶೀರಿಯ ಶಿಂಗಾಪನತ್ತಿರುಂದು ಯಾಂ ವಂದ

ಕಾರಿಯಮಾರಾಯ್ ದರುಳೇಲೋ ರೆಂಬಾವಾಯ್ ॥

ಶ್ರೀಯುತ ಕೌಶಿಕರ ಕನ್ನಡ ಭಾಷಾಂತರ ಹೀಗಿದೆ :

ಮಳೆಗಾಲದೊಳು ಗಿರಿಯ ಗುಹೆಯೊಳಗೆ ನಿದ್ರಿಸುವ ಕಲಿಸಿಂಹ 

ಮೃಗರಾಜನೆಚ್ಚತ್ತು, ಕಣ್ಬಿಟ್ಟು 

ಘಳಿಲನೆದ್ದ ವಯವವಕೊಡಹುತ್ತು, ನಾಲ್ದೆಸೆಯನಾಗ್ನಿ ಸುರಿವಂತೆ ನೋಡಿ ,

ಇಳೆಬಿರಿವೊಲಾರ್ಭಟಿಸಿ, ಹೊರಬಹವೊಲೈತಂದು

ನಳಿನಾಕ್ಷ, ಪೂವೈಪ್ಪೋ ಕುಸುಮವರ್ಣನೆ, ನಿನ್ನ ಬೆಳಗುವರಮನೆಯಲಿಹ 

ವಿಜಯ ಸಿಂಹಾಸನದಿ ಕುಳಿತು ಹದಗೇಳಿ  ಹರಸೈ ॥

ಹಿಂದಿನ ಪಾಶುರದಲ್ಲಿ ಗೋಪಿಯರು ‘ಅನನ್ಯ ಗತಿಕರಾಗಿ ಬಂದೆವು’ ಎಂದರು. ಇದನ್ನು ಕೇಳಿ ಶ್ರೀಕೃಷ್ಣನು ನೀವು ನೀಳಾದೇವಿಯ ಕಡೆಯವರಾಗಿ ‘ಅನನ್ಯಗತಿಕರು’ ಎಂದು ಹೇಳಬಹುದೇ? ಎಂದು ಆಕ್ಷೇಪಿಸಿದನು. ತಕ್ಷಣವೇ ರಭಸದಿಂದ ಎದ್ದು, ‘ಎಲೈ ಗೋಪಾಂಗನೆಯರೇ , ಮಧ್ಯರಾತ್ರಿಯಲ್ಲಿ ಎಚ್ಚರಗೊಂಡು ಮಹತ್ತರ ಶ್ರಮವನ್ನು ಹೊಂದಿ ಬಂದಿರುವಿರಿ. ನೀವಿರುವಲ್ಲಿಗೆ ನಾನೇ ಬಂದು ಅನುಗ್ರಹಹಿಸಬೇಕಿತ್ತು. ಆದರೆ ನೀವೇ ನನ್ನ ಬಳಿಗೆ ಬಂದು ಪ್ರೀತಿ ಮತ್ತು ಭಕ್ತಿ ತೋರಿರುವಿರಿ. ಹಿಂದೆ ರಾಮಾವತಾರದಲ್ಲಿ ವನವಾಸಿ ಋಷಿಗಳಿಗೆ ಇದೇ ಮಾತನ್ನು ಹೇಳಿದ್ದೆ. ನೀವಾದರೋ ಅವರಿಗಿಂತ ಅತಿಶಯವಾದ ಭಕ್ತಿ ಮತ್ತು ಪ್ರೀತಿಯುಳ್ಳವರು. ಇನ್ನು ಹೇಳುವುದೇನು? ನನ್ನನ್ನು ಕ್ಷಮಿಸಿರಿ, ನೀವು ಬಂದ ಉದ್ದೇಶವೇನು? ‘ ಎಂಬಂತೆ ಅವರನ್ನು ವೀಕ್ಷಿಸಿದನು. 

ಆಗ ಗೋಪಿಯರು “ ಸ್ವಾಮಿ! ಗೋಪಾಲಕೃಷ್ಣ! ನಾವು ಬಂದ ಕಾರ್ಯವನ್ನು ರಹಸ್ಯವಾಗಿ ಹೇಳಲಾಗದು. ನಾವು ನಿನ್ನ ಸಿಂಹ ನಡಿಗೆ ಮತ್ತು ಸಿಂಹಾಸನದಲ್ಲಿ ಮಂಡಿಸುವ ಅಧ್ಭುತ ಸೌಂದರ್ಯವನ್ನು ನೋಡಲು ಆಸೆ ಪಟ್ಟವರು. ದೊಡ್ಡ ಗೋಷ್ಠಿಯಲ್ಲಿ ನೀನು ಸಿಂಹಾಸನವೇರಿ ಕುಳಿತು ಕೇಳಿದಲ್ಲಿ ನಮ್ಮ ಕೋರಿಕೆಯನ್ನು ಹೇಳುವೆವು. ದಯಾನಿಧಿಯಾದ ನೀನು ನಮ್ಮ ಅಭೀಷ್ಟವನ್ನು ನೆರವೇರಿಸಿ ಕೊಡಬೇಕು. ಆದ್ದರಿಂದ ಮೊದಲು ನೀನು ಹಾಸಿಗೆಯಿಂದೆದ್ದು, ಸಿಂಹಾಸನದವರೆಗೆ ಧೀರ ಗಂಭೀರನಾಗಿ ನಡೆದು ಬಾ. ನಿನ್ನ ಶಯನ ಸೌಂದರ್ಯವನ್ನು ನೋಡಿದೆವು. ಈಗ ನಿನ್ನ ನಡೆಯ ಸೌಂದರ್ಯವನ್ನು ನೋಡುವ ಭಾಗ್ಯ ಕರುಣಿಸು. ಅನಂತರ ನಮ್ಮೆಲ್ಲರ ಅಭೀಷ್ಟವನ್ನು ನೆರವೇರಿಸಿಕೊಡು” ಎನ್ನುತ್ತಾರೆ. ಈ ರೀತಿಯ ಭಾವನೆಗಳು ಪಾಶುರದಲ್ಲಿ ವ್ಯಕ್ತವಾಗಿದೆ. 

ಸಾಕ್ಷಾತ್ ಮನ್ಮಥ ಜನಕನಾದ ಸ್ವಾಮಿಯ ವಿವಿಧ ರೀತಿಯ ಸೌಂದರ್ಯವನ್ನು ಅನುಭವಿಸಲು ಇಚ್ಚಿಸುವುದು ಸಹಜ. ಇಲ್ಲಿ ವಿಶೇಷವಾಗಿ ಅಹೋಬಲ ಗುಹೆಯಿಂದ ಹೊರ ಬರುವ ದಿವ್ಯ ನಾರಸಿಂಹನ ಪರಮಾದ್ಭುತ ಸೌಂದರ್ಯದ  ನಿರೀಕ್ಷೆಯಿದೆ. ಗೋದಾದೇವಿಯು ಸ್ವತಃ ವಟಪತ್ರಶಾಯಿಯ ಆರಾಧಕಳಾದ ಕಾರಣ “ಅತಿ ಸ್ನೇಹಃ ಪಾಪಶಂಕೀ “ ಎಂಬುವಂತೆ ಆಕೆಯ ಪ್ರೇಮದಶಾ ಪರಿಪಾಕದಿಂದ ‘ಅವನು ದೇವಾಲಯದಲ್ಲಿ ಒಂಟಿಯಾಗಿರುವುದರಿಂದ ಏನು ತೊಂದರೆಯೋ ‘ ಎಂದು ಆತಂಕಗೊಳ್ಳುವಳು. ಆಂಡಾಳ್ ಬಿಕ್ಕಿ ಬಿಕ್ಕಿ ಅತ್ತಳು. ಕಣ್ಣಾ ! ಒಂಟಿಯಾಗಿ ಇರುವೆಯಲ್ಲಾ ! ಎಂದು ಜೋರಾಗಿ ಕೂಗಿದಳು. ಉತ್ತರ ಬರಲಿಲ್ಲ. ಅಷ್ಟರಲ್ಲಿ ಸಿಂಹ ಘರ್ಜನೆ ಕೇಳಿಸಿತು. ಸಿಂಹವನ್ನು ನಾನೇ ಸಾಯಿಸುತ್ತೇನೆ , ಎಂದು ಬಾಗಿಲ ಬಳಿ ಹೋಗಿ ಮೂರ್ಛಿತಳಾಗಿ ಬಿದ್ದಳು. ಬೆಳಗಾದ ನಂತರ ವಿಷ್ಣುಚಿತ್ತರು ಹುಡುಕಿ ಮನೆಗೆ ಕರೆತಂದರು.  ಇಂತಹ ಮುಗ್ದವೂ, ಅದ್ಭುತವೂ ಆದ ಪವಿತ್ರ ಭಕ್ತಿ ಗೋದಾದೇವಿಯದು. 

ಈ ಪದ್ಯವು ಅದ್ಬುತ ವ್ಯಂಗ್ಯಾರ್ಥಗಳಿಂದ ಕೂಡಿದೆ. ಗೋದಾದೇವಿಯು ಇಲ್ಲಿ ಶ್ರೀಕೃಷ್ಣನನ್ನು ನರಸಿಂಹಾವತಾರಿಯಾಗಿ ಕಾಣುವಳು. ಆ ಅವತಾರದ ವೈಭವವನ್ನು ಹೃದಯಂಗಮವಾಗಿ ನಿರೂಪಿಸಿದ್ದಾಳೆ. ಗುಹೆಯೊಳಗೆ ಮಲಗಿರುವ ಸಿಂಹವು ಎಚ್ಚೆತ್ತು  ಹೇಗೆ ಹೊರಕ್ಕೆ ಬರುತ್ತದೆ ಎಂಬುದನ್ನು ವರ್ಣಿಸುತ್ತಾ, ಮಳೆಗಾಲದಲ್ಲಿ ಪರ್ವತದ ಗುಹೆಯಲ್ಲಿ ಹೆಣ್ಣು ಸಿಂಹದೊಂದಿಗೆ ಶಯನದಲ್ಲಿದ್ದ ವೀರ ಸಿಂಹವು ಎಚ್ಚರಗೊಂಡು, ಬೆಂಕಿ ಕಿಡಿ ಹಾರುವಂತೆ ಕಣ್ಣುಗಳನ್ನು ತೆರೆದು, ಪರಿಮಳಯುಕ್ತವಾದ ತನ್ನ ಕೇಸರಗಳು ನಿಮಿರಿ ನಿಲ್ಲಲು, ಎಲ್ಲಾ ಕಡೆಯಲ್ಲೂ ಮೈಯನ್ನು ಒದರಿ, ಉದ್ದವಾಗಿ ಮೈಚಾಚಿ, ಮೈ ಮುರಿದು ಗರ್ಜಿಸಿ, ಗುಹಾದ್ವಾರದಿಂದ ಹೊರಬರುವ ಹಾಗೆ, ಅಗಸೆ  ಪುಷ್ಪದ ನೀಲ ಕಾಂತಿಯುಳ್ಳ ಶ್ರೀಕೃಷ್ಣನು ತಿರುಮಾಳಿಗೆಯಿಂದ ಹೊರ ಹೊರಟು, ಗೋಪಿಯರು ಇರುವ ಮಣಿ ಮಂಟಪಕ್ಕೆ ಬರುತ್ತಿದ್ದಾನೆಯೊ ಎಂಬಂತೆ ವರ್ಣಿಸಿದ್ದಾಳೆ.  ಅಹೋಬಿಲ ಕ್ಷೇತ್ರದಲ್ಲಿ ಗುಹೆಯೊಳಗಿಂದ ನರಸಿಂಹಸ್ವಾಮಿಯು  ಹೇಗೆ ವೈಭವದಿಂದ ಹೊರಗೆ ದಯಮಾಡಿಸಿ ಎತ್ತರದ ಮಂಟಪದಲ್ಲಿ ಆಸೀನನಾಗಿ ಭಕ್ತಾದಿಗಳಿಗೆ ದರ್ಶನ ನೀಡಿ ಅವರನ್ನೆಲ್ಲಾ ಕಟಾಕ್ಷಿಸುವನು- ಎಂಬುದನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾಳೆ. ಅಂತೆಯೇ ಕೊನೆಯ ಮೂರು ಸಾಲುಗಳಲ್ಲಿ ಶ್ರೀರಂಗದಲ್ಲಿ ವೈಕುಂಠ ಏಕಾದಶಿಯ ದಿನ ಶ್ರೀರಂಗನಾಥನು ಸಾವಿರ ಕಾಲು ಮಂಟಪಕ್ಕೆ ದಯಮಾಡಿಸುವಾಗ ನೀಡುವ ಖ್ಯಾತಿವೆತ್ತ ನಡೆಯು ಸಾವಿರಾರು ಭಕ್ತರಿಗೆ ನೇತ್ರಾನಂದವನ್ನು ಉಂಟುಮಾಡುವ ಸನ್ನಿವೇಶವನ್ನು ವಿವರಿಸಲಾಗಿದೆ. 

“ಹರಿ ಸರ್ವತ್ರ  ಇದ್ದಾನೆ” – ಎಂದು ಪಿತೃವಿನ ಬಳಿ ಪ್ರಹ್ಲಾದ ಪ್ರತಿಜ್ಞೆ ಮಾಡಿದ. ಯಾವಕಡೆಯಾದರೂ ಹರಿಯನ್ನು ತೋರಿಸುವ ಇಚ್ಛೆ ಸಂಭವವಾದ್ದರಿಂದ, ಸ್ತಂಭದಲ್ಲಿ ಮಾತ್ರವೇ ಅಲ್ಲದೆ ಸರ್ವ ವಸ್ತುಗಳಲ್ಲೂ ನೃಸಿಂಹ ರೂಪದಿಂದ ಅಣೋರಣೀಯನಾಗಿಯೂ  ಮಹತೋಮಹೀಮನಾಗಬಲ್ಲವನನ್ನು ಪುಟ್ಟ ಬಾಲಕನಾದ ಪ್ರಹ್ಲಾದ ಮೊದಲು ಕಂಡಂತೆ,  ಪ್ರಕೃತದಲ್ಲಿ ಹಿಂದಿನ ಪದ್ಯದಲ್ಲಿ ‘ಕೆಂಗಣ್’, ‘ಅಂಗಣ್’ ಎಂಬಲ್ಲಿ ಆ ಪುಟ್ಟ ಆಂಡಾಳ್ ಮನಸ್ಸಿನಲ್ಲಿಯೂ  ಸ್ವಾಮಿ ನೃಸಿಂಹನಾಗಿ ಕಾಣಿಸಿದ್ದು. ಆ ವಿಗ್ರಹ ಅವಳ ಕಣ್ಣ ಮುಂದೆ ನಿಂತಿತ್ತು. ಅವನ ನಡೆಯೇ ನಡೆ!  ಸಿಂಹ ಗಾಂಭಿರ್ಯ! ಆ ನಡೆಯ ಸೊಬಗನ್ನು ನೋಡುವ ಬಯಕೆ ಉತ್ಕೂಲವಾಗಿ ಆ  ಸೌಂದರ್ಯ ಪ್ರಪಂಚದಲ್ಲಿ ಮುಳುಗಿ, ಹೃದಯ ತುಂಬಿ ಬಂದು, ಹಾಗೆ ನಡೆದು ಬರಬೇಕೆಂದು ಇಲ್ಲಿ ಪ್ರಾರ್ಥಿಸಿದ್ದಾಳೆ. 

ಭಾವಾರ್ಥ: ಈ ಪಾಶುರವು ಶ್ರೀರಾಮಾನುಜಾಚಾರ್ಯರಿಗೂ ಅನ್ವಯವಾಗುತ್ತದೆ. ಇಂತಹ ಆನ್ವಯಿಕ ಪಾಶುರಗಳು ನಾಲಾಯಿರದಲ್ಲಿ ಅನೇಕಕಡೆ ಬಂದಿವೆ. ಸಿಂಹ ಸದೃಶಾದಿ ಆಚಾರ್ಯರು ವೇದಾಂತವೆಂಬ ಬೆಟ್ಟದ ಗುಹೆಯಲ್ಲಿ ವಿಹರಿಸುತ್ತ ತಮ್ಮ ಯೋಗನಿದ್ರೆಯಿಂದ ಎದ್ದು ಆಚಾರ್ಯ ಪೀಠವಿರುವ ಕಾಲಕ್ಷೇಪ ಮಂಟಪಕ್ಕೆ ದಯಮಾಡಿ ಎಂಟು ಕಾಲುಗಳುಳ್ಳ ಸಿಂಹಾಸನವನ್ನು ಅಲಂಕರಿಸಿ ವಾದಿಗಳನ್ನು ಗೆದ್ದು, ನಾಸ್ತಿಕತೆಯನ್ನು ಹೋಗಲಾಡಿಸಿ, ಶಿಷ್ಯರಿಗೆ ಜ್ಞಾನೋಪದೇಶ ಮಾಡಿ ಎಲ್ಲೆಲ್ಲೂ ಭಗವಂತನಲ್ಲಿ ಭಕ್ತಿ, ಪ್ರೀತಿ ಮತ್ತು ಶ್ರದ್ದೆಯನ್ನು ಹರಡುವಂತೆ ಉಪದೇಶಿಸುತ್ತಾರೆ.

ಪೂವೈ ಪ್ಪೊವಣ್ಣಾ – ಎಂಬಲ್ಲಿ ಆಚಾರ್ಯನಿಗೆ ಪುಷ್ಪ ಸಾವರ್ಣ್ಯ ಹೇಳಲ್ಪಟ್ಟಿದೆ. ಪುಷ್ಪಗಳ ಸುತ್ತ ಮುತ್ತ ದುಂಬಿಗಳು ಮಧುವನ್ನು ಹೀರಲು ಇರುವಂತೆ, ಆಚಾರ್ಯನ ಸುತ್ತಲೂ ಜ್ಞಾನವೆಂಬ ಮಧುವನ್ನು ಸವಿಯಲು ಶಿಷ್ಯಪ್ರವವರು ಪ್ರಕಾಶಿಸುತ್ತಾರೆ. 

ಮಲೈ ಮುಳಿಂಜಿಲ್ – ಮುಳುಗಿ ಹೋಗದ ಬೆಟ್ಟದಂತೆ ಸ್ಥಿರವಾಗಿ  ನಿಲ್ಲುವ ಗುಹೆಯನ್ನು, ವೇದಕ್ಕೆ ಹೋಲಿಸಿ ಭಾರದ್ವಾಜರಿಗೆ  ದೇವೇಂದ್ರನು ತಿಳಿಸಿದಂತೆ, ವೇದಕ್ಕೆ ಪ್ರಳಯ ಕಾಲದಲ್ಲಿಯೂ ನಾಶವಿಲ್ಲವೆಂಬ ಅರಿವನ್ನು ಇಲ್ಲಿ ತಿಳಿಸುತ್ತದೆ. ನಿತ್ಯ ಕರ್ಮಗಳಲ್ಲಿ ಆಲಸ್ಯವಿಲ್ಲದೆ ಇರುವುದು. ಪರಮಾತ್ಮ ಪರವಾದಲ್ಲಿ ಕಾರಣ ದೆಶೆಯಲ್ಲಿ ಸೂಕ್ಷ್ಮವಾಗಿದ್ದು, ಕಾರ್ಯದೆಶೆಯಲ್ಲಿ ಸ್ಥೂಲವಾಗಿರುವುದು, ಇತ್ಯಾದಿಯಾಗಿ ಆಚಾರ್ಯರಿಗೆ ಹೋಲಿಸಿ ತಿಳಿಸುತ್ತಾರೆ.  

ನರಸಿಂಹ ಮಂತ್ರವೊಂದಿರಲು ಸಾಕು

ದುರಿತ ಕೋಟಿಯ ತರಿದು ಭಾಗ್ಯವನು ಕೊಡುವ

ಶಿಶುವಾದ ಪ್ರಹ್ಲಾದನ ಬಾಧೆ ಬಿಡಿಸಿದ ಮಂತ್ರ

ಅಸುರ ಕುಲದವರಿಗೆ ಶತ್ರು ಮಂತ್ರ

ವಸುಧೆಯೊಳು ಪಾದಕಿಗಳಘವ ಹೀರುವ ಮಂತ್ರ

ಪಶುಪತಿಗೆ ಪ್ರಿಯವಾದ ದಿವ್ಯ ಮಂತ್ರ

ದಿಟ್ಟ ಧ್ರುವರಾಯನಿಗೆ ಪಟ್ಟಗಟ್ಟಿದ ಮಂತ್ರ

ಶಿಷ್ಟ ವಿಭೀಷಣನ ಪೊರೆದ ಮಂತ್ರ

ಕಟ್ಟ ಕಡೆಯಲಿ ಅಜಾಮಿಳನ ಸಲಹಿದ ಮಂತ್ರ

ಮುಟ್ಟಿ ಭಜಿಸಿದವರಿಗೆ ಮೋಕ್ಷ ಮಂತ್ರ

ಹಿಂಡು ಭೂತವ ಕಡಿದು ತುಂಡು ಮಾಡುವ ಮಂತ್ರ

ಕೊಂಡಾಡೊ ಲೋಕಕೆ ಪ್ರಚಂಡ ಮಂತ್ರ

ಗಂಡುಗಲಿ ಕದನ ಉದ್ದಂಡ ವಿಕ್ರಮ ಮಂತ್ರ

ಪುಂಡರೀಕಾಕ್ಷ ಪುರಂದರವಿಠಲ ಮಂತ್ರ                        –  ಪುರಂದರದಾಸರು ವಿರಚಿತ 

(ವಿಷಯ ಸಂಗ್ರಹ : “ತಿರುಪ್ಪಾವೈ ರಸಸ್ವಾಧಿನಿ” – ಬರೆದವರು ವಿದ್ವಾನ್ ವೇದಾನ್ತ ಸಾರಜ್ಞ

   ಶ್ರೀ ಎಸ್. ಕೃಷ್ಣಾತಾತಾಚಾರ್ಯ )

(1) ಗಮಕ ಕವಿತಾ ವನಜ ಭಾಸ್ಕರ , ಗಮಕ ರತ್ನಾಕರ ಶ್ರೀಯುತ ಬಿ.ಎಸ್ .ಎಸ್ ಕೌಶಿಕ್  ರವರ  ಶ್ರೀಮದಾಂಡಾಳ್ ಮಹಾ ವೈಭವಂ -ತಿರುಪ್ಪಾವೈ – ಮೂಲ, ಕನ್ನಡ ತಾತ್ಪರ್ಯ , ಷಟ್ಪದಿ, ಭಾವಾರ್ಥ , ಚೌಪದಿ )

Tiruppavai series

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.