ತಮಿಳುನಾಡಿನ ಸುಪ್ರಸಿದ್ಧ ನಾಲಾಯಿರ (ನಾಲ್ಕು ಸಾವಿರ) ದಿವ್ಯ ಪ್ರಬಂಧಗಳಲ್ಲಿ ತಿರುಪ್ಪಾವೈ ಅತ್ಯಂತ ವೈಶಿಷ್ಟ್ಯಪೂರ್ಣವಾದದ್ದು ಎಂದು ಹೇಳಬಹುದು. ಇಂದಿಗೂ ಮನೆಮನೆಗಳಲ್ಲಿ ಪಾರಾಯಣ ಮಾಡುವ ಈ ‘ನಾಲಾಯಿರ’ದ ರಚನಾಕಾರರು ವೈಷ್ಣವ ಸಂಪ್ರದಾಯದ ಹನ್ನೆರಡು ಆಳ್ವಾರರು. ಕರ್ನಾಟಕದ ಹರಿದಾಸ ಪರಂಪರೆಯ ಮಹನೀಯರಂತೆಯೇ ದ್ರಾವಿಡ ದೇಶದ (ತಮಿಳುನಾಡಿನ ) ಆಳ್ವಾರರು ಸಂಪೂರ್ಣವಾಗಿ ಪರಮಾತ್ಮನಲ್ಲಿ ತಲ್ಲೀನರಾದವರು. ಪುರುಷಾರ್ಥವೆಂದು ಅನುಭವದಿಂದಲೂ, ಅನುಷ್ಠಾನದಿಂದಲೂ, ಭಕ್ತಿ ಗೀತೆಗಳಿಂದಲೂ ಲೋಕಕ್ಕೆ ಸನ್ಮಾರ್ಗವನ್ನು ತೋರಿದ ಅನೇಕ ಮಹಾತ್ಮರು ನಮ್ಮ ದೇಶದಲ್ಲಿ ಬಾಳಿ ಬೆಳಗಿದ್ದಾರೆ. ಇವರಲ್ಲಿ ದ್ರಾವಿಡ ದೇಶದಲ್ಲಿ ಶ್ರೀ ವೈಷ್ಣವ ಧರ್ಮಕ್ಕೆ ಕೂಟಸ್ಥರಾಗಿ ವಿರಾಜಿಸಿದವರು ‘ಆಳ್ವಾರುಗಳು ‘.
ಈ ಆಳ್ವಾರ್ ಪರಂಪರೆಯ ಏಕೈಕ ಹೆಣ್ಣುಮಗಳೇ ಆಂಡಾಳ್. ಭಕ್ತಿ ಮತ್ತು ಪ್ರಪತ್ತಿಯ ಮಾರ್ಗವನ್ನು ಲೋಕಕ್ಕೆ ತೋರಿಸಿಕೊಟ್ಟ ತಿರುಪ್ಪಾವೈ ಕೃತಿಯನ್ನು ರಚಿಸಿದ ಆಕೆಯು ಭೂದೇವಿಯ ಅವತಾರವಾಗಿ ಗೋದಾದೇವಿ ಎಂಬ ಹೆಸರನ್ನು ಹೊಂದಿದ್ದಳು. ವೇದಾಂತಸಾರ, ಭಗವದ್ಗೀತೆಯ ಮತ್ತು ಭಾಗವತದ ಅರ್ಥವನ್ನು ಮೈಗೂಡಿಸಿಕೊಂಡ ತಿರುಪ್ಪಾವೈ ಅಪರೂಪದ ಅಸಮಾನ್ಯ ಕೃತಿ. ತಿರುಪ್ಪಾವೈ ನಲ್ಲಿ ಒಟ್ಟು ಮೂವತ್ತು ಪದ್ಯಗಳಿವೆ. ಇವುಗಳಿಗೆ ಪಾಸುರಂ/ಪಾಶುರಮ್/ಪ್ರಬಂಧ ಎಂದೂ ಕರೆಯಲಾಗುತ್ತದೆ. ಮಾರ್ಗಳಿ (ಧನುರ್ಮಾಸ/ಮಾರ್ಗಶಿರ) ತಿಂಗಳಿನಲ್ಲಿ ವಿಶೇಷ ಪೂಜೆ ನಡೆಯುವ ಶ್ರೀ ವೈಷ್ಣವ ದೇವಾಲಯಗಳಲ್ಲಿ ನಾಲಾಯಿರಂ ಪಾರಾಯಣ ಮಾಡುವ ಸಂಪ್ರದಾಯ ಹಿಂದಿನಿಂದ ಇಂದಿನವರೆಗೆ ನಡೆದು ಬಂದಿದೆ.ವಿಶೇಷವಾಗಿ ಮಾಸದ ಮೂವತ್ತು ದಿನ ದಿನಕ್ಕೊಂದರಂತೆ ತಿರುಪ್ಪಾವೈ ಪಾಸುರವನ್ನು ಅನುಸಂಧಾನಮಾಡಿ ಭಗವಂತನಿಗೆ ಸಮರ್ಪಿಸುವ ಪದ್ದತಿಯಿದೆ. ಎಂಬಾವಾಯ್ ಎಂದು ಕೊನೆಗೊಳ್ಳುವ ಎಂಟು ಸಾಲಿನ ಈ ಪಾಶುರಗಳನ್ನು ಶ್ರೀಯುತ ಕೌಶಿಕರು ಷಟ್ಪದಿಗಳಾಗಿ ಕನ್ನಡಕ್ಕೆ ಭಾಷಾಂತರಿಸಿದ್ದಾರೆ.(1) ಈ ಲೇಖನ ಸರಣಿಯಲ್ಲಿ ತಿರುಪ್ಪಾವೈ ಪಾಶುರಗಳ ಅನುಸಂಧಾನ ನಡೆಸೋಣ ಬನ್ನಿ.
ಶ್ರೀ ಪರಾಶರಭಟ್ಟರು ರಚಿಸಿದ ಆಂಡಾಳ್ ಅಥವಾ ಗೋದಾದೇವಿಯ ಧ್ಯಾನ ಪದ್ಯ ಹೀಗಿದೆ.
ನೀಳಾ ತುಂಗಸ್ತನ ಗಿರಿತಟೀ ಸುಪ್ತ ಮುದ್ಬೋಧ್ಯ ಕೃಷ್ಣo
ಪಾರಾರ್ಥ್ಯಮ್ ಸ್ವo ಶ್ರುತಿಶತ ಶಿರಸ್ಸಿಧ್ಧ ಮಧ್ಯಾಪಯಂತೀ ।
ಸ್ವೋಚ್ಚಿಷ್ಟಾಯಾಂ ಸ್ರಜಿನಿಗಳಿತಂ ಯಾ ಬಲಾತ್ಕೃತ್ಯ ಭುಂಕ್ತೇ
ಗೋದಾ ತಸ್ಮೈ ನಮಃ ಇದಮಿದಂ ಭೂಯ ಏವಾಸ್ತುಭೂಯಃ ।।
ಶ್ರೀಯುತ ಕೌಶಿಕರ ಕನ್ನಡ ಭಾಷಾಂತರ
ವರದೆ ನೀಳಾದೇವಿಯುನ್ನತದ ಕುಚಗಿರಿಯ
ಮೆರೆವ ತಪ್ಪಲಿನಲ್ಲಿ , ಮಲಗಿರುವ ಶ್ರೀ ಹರಿಯ
ಹರುಷದಿಂದೆಚ್ಚರಿಸಿ , ಶತಸಂಖ್ಯೆಯುಪನಿಷತ್ತುಗಳಿಂದ ನಿರ್ಣಯಿಸಿಹ ।
ವರಪಾರತಂತ್ರ್ಯವನು , ತನ್ನ ನಡವಳಿಕೆಯಿಂ–
ದುರೆಕಲಿಸುವವಳಾಗಿ, ತಾಂ ಧರಿಸಿ ತೆಗೆದಿರ್ದ
ಕೊರಳಪೂಸಾರಬಂಧಿ ಕೃಷ್ಣನೊಳು , ರಮಿಸಿದಳಿಗಕ್ಕೆ ವಂದನಾಮಾಗಂ ।।
[ತಾತ್ಪರ್ಯ – ಶ್ರೀ ನೀಳಾದೇವಿಯ ತುಂಗಾಸ್ತನವೆಂಬ ಪರ್ವತಗಳ ತಪ್ಪಲಲ್ಲಿ ಸುಖವಾಗಿ ಮಲಗಿರುವ ಶ್ರೀ ಕೃಷ್ಣನನ್ನು ಯಾವ ಗೋದಾದೇವಿಯು ಎಬ್ಬಿಸಿ ಅನಂತ ವೇದಗಳಿಗೆಲ್ಲಾ ಶಿರೋಭೂಷಣಪ್ರಾಯವಾದ ಉಪನಿಷತ್ತುಗಳಲ್ಲಿ ನಿರ್ಣಯಿಸಲ್ಪಟ್ಟ ತನ್ನ ಶೇಷತ್ವವನ್ನು ಆಪರಾತ್ಪರವಸ್ತುವಿಗೆ ಅರಿಕೆ ಮಾಡುವವಳಾಗಿ, ತನ್ನ ತಂದೆಯವರು ಮೀಸಲಾಗಿಟ್ಟ ಹೂಮಾಲೆಯನ್ನು ತಾನು ಮೊದಲು ಮುಡಿದು ಅನಂತರ ತೆಗೆದಿಟ್ಟ ಪುಷ್ಪ ಮಾಲಿಕೆಯನ್ನು ಬದ್ಧಾದರನಾಗಿ ಸ್ವೀಕರಿಸಿದ ಶ್ರೀರಂಗನಾಥ ಸ್ವಾಮಿಯನ್ನು ಬಲಾತ್ಕರಿಸಿ ಅನುಭವಿಸುವಳೋ ಅಂತಹ ಶ್ರೀ ಗೋದಾದೇವಿಗೆ ನಮಸ್ಕರಿಸುತ್ತೇನೆ. ಇಂತಹ ನಮಸ್ಕಾರವು ಮತ್ತೆ ಮತ್ತೆ ಕಾಲತತ್ವವಿರುವವರಿಗೂ ನಡೆದು ಬರಲಿ.]
ಗೋದಾದೇವಿಯ ಜನನ
ಗೋದಾದೇವಿಯು ಭೂದೇವಿಯ ಅವತಾರವಾಗಿ ಭೂಮಿಯಲ್ಲಿ ಪೆರಿಯಾಳ್ವಾರ್ ಅವರ ಅಯೋನಿಜ ಪುತ್ರಿಯಾಗಿ ಅವತರಿಸಿ, ತಿರುಪ್ಪಾವೈ ಎಂಬ ಸೊಗಸಾದ, ಪರಮ ಭಗವದ್ ಭಕ್ತಿಯಿಂದ ಭಗವಂತನ/ರಂಗನಾಥನ ಮೇಲೆ ಪಾಶುರ೦ ಗಳನ್ನು ರಚಿಸಿದ್ದಾಳೆ. ಮುಂದೆ ಆಂಡಾಳ್ ಹೆಸರಿಂದ ಸ್ತ್ರೀ ರೂಪದ ಪೆರಿ ಆಳ್ವಾರ್ ಸ್ಥಾನಕ್ಕೆ ಸೇರುತ್ತಾಳೆ. ಶ್ರೀರಂಗಂನ ರಂಗನಾಥನ ಮಡದಿಯಾಗಿ, ಪಾರಮಾರ್ಥ್ಯದ ಜಯ ಕೋಡಿಯನ್ನು ಸಾತ್ವಿಕ ಲೋಕಕ್ಕೆ ತೋರಿಸಿ, ಮೋಕ್ಷವನ್ನು ಪಡೆಯುತ್ತಾಳೆ.
ಗೋದಾದೇವಿ ಹುಟ್ಟಿದ ಊರು ಈಗಿನ ‘ವಿಲ್ಲಿಪುತ್ತೂರು’. ಒಂದಾನೊಂದು ಕಾಲದಲ್ಲಿ ದೊಡ್ಡ ಕಾಡಾಗಿತ್ತು. ಅಲ್ಲಿನ ದೇವರಾದ ವಟಪತ್ರಶಾಯಿಯು ಜನಗಳ ಕಣ್ಣಿಗೆ ಕಾಣದ ಹಾಗೆ ಭೂಮಿಯಲ್ಲಿ ಅಂತರ್ಗತನಾಗಿದ್ದನು.
ಮುಂದೆ ‘ವಿಲ್ಲಿ’ ಎಂಬಾತನು ಆ ಕಾಡನ್ನು ಸವರಿ ಅಲ್ಲಿ ಒಂದು ಪಟ್ಟಣವನ್ನು ಸ್ಥಾಪಿಸಿದನು. ಅಲ್ಲಿದ್ದ ವಟಪತ್ರಶಾಯಿಯ ವಿಗ್ರಹವನ್ನು ಹೊಸದಾಗಿ ಪ್ರತಿಷ್ಠೆ ಮಾಡಿಸಿದನು. ನವನವೀನವಾಗಿ ಆದ ಊರು ಮುಂದೆ ‘ಪುತ್ತೂರು ‘ ಅಥವಾ ‘ಪುದುವೈ’ ಎಂದು ಹೆಸರಾಯಿತು. ‘ವಿಲ್ಲಿ’ ಮಾಡಿಸಿದ ಕಾರಣದಿಂದ ಅದು ‘ವಿಲ್ಲಿ ಪುತ್ತೂರ್’ ಆಯಿತು. ಭಗವತ್ ಸಂಬಂಧದಿಂದ ಶ್ರೀಮಂತವಾದ ಕಾರಣ ‘ಸಿರಿ ವಿಲ್ಲಿ ಪುತ್ತೂರ್’ ಎಂದು ಪ್ರಸಿದ್ಧವಾಯಿತು. ಈ ಪುಣ್ಯ ಕ್ಷೇತ್ರದಲ್ಲಿ ವಾಸಮಾಡುತ್ತಿದ್ದ ಶ್ರೀ ವಿಷ್ಣುಚಿತ್ತರು ಮಹಾ ವಿಷ್ಣುಭಕ್ತರೂ , ಹನ್ನೆರಡು ಪೆರಿಯಾಳ್ವಾರರಲ್ಲಿ ಒಬ್ಬರಾಗಿದ್ದವರು .
ಗೋದಾದೇವಿ, ಸುಮಾರು 7ನೇ ಅಥವಾ 8ನೇ ಶತಮಾನದಲ್ಲಿ, ನಳವರ್ಷ ಕರ್ಕಾಟಕ ಶುಕ್ಲ ಚತುರ್ದಶಿ, ಮಂಗಳವಾರ-ಪೂರ್ವ ಫಲ್ಗುಣೀ ನಕ್ಷತ್ರ ಕೂಡಿದ ಶುಭದಿವಸ, ವಿಲ್ಲಿಪುತ್ತೂರ್ ನಲ್ಲಿ ವಾಸವಿದ್ದ ಶ್ರೀ ವಿಷ್ಣುಚಿತ್ತರ್ ಅವರಿಗೆ ಪೂಜೆಗಾಗಿ ತುಳಸಿ ತರಲು ಉದ್ಯಾನಕ್ಕೆ ಬಂದಾಗ, ಆ ಉದ್ಯಾನದಲ್ಲಿ ಸಿಕ್ಕಂತ ಒಂದು ಪೆಟ್ಟಿಗೆಯಲ್ಲಿ, ಆಭರಣದಿಂದ ಅಲಂಕೃತವಾದ, ಮುಗುಳು ನಗೆಯನ್ನು ಬೀರುತ್ತಿದ್ದ ಹೆಣ್ಣು ಮಗುವು ಕಂಡಿತು. ಅವರು ಆ ಮಗುವನ್ನು ವಟಪತ್ರಶಾಯಿಯ ದೇಗುಲಕ್ಕೆ ವೊಯ್ದು, ಆ ಪರಮಾತ್ಮನ ಪಾದ ಕಮಲದಲ್ಲಿಟ್ಟು ‘ಗೋದಾ’ ಎಂದು ನಾಮಕರಣ ಮಾಡಿದರು. ತಮ್ಮ ಮಗಳಂತೆ ಸಾಕಿ, ವಾತ್ಸಲ್ಯದಿಂದ ಸಲಹಿದರು.
ವೈಷ್ಣವ ಸಂಪ್ರದಾಯವನ್ನು ಪಾಲಿಸುತ್ತ, ಮಹಾ ವಿಷ್ಣುವಿನ ಭಜನೆ, ಸೇವೆಯಲ್ಲೇ ತೊಡಗಿದ್ದವರು. ಈ ವಾತಾವರಣದಲ್ಲಿ ಬೆಳೆದ ಮಗು ಗೋದಾದೇವಿ. ಶ್ರೀ ರಂಗನಾಥನ ಪರಮ ಭಕ್ತೆಯಾಗಿ, ಚಿಕ್ಕ ವಯಸ್ಸಿನಲ್ಲೇ ಇಹದ ಮೋಹವನ್ನು ತೊರೆದಳು. ಬಾಲ್ಯದಿಂದಲೇ ಭಾಗವತದಲ್ಲಿರುವ ಭಗವಂತನ ಬಾಲಲೀಲೆಗಳ ಕಥೆಗಳನ್ನು ತನ್ನ ತಂದೆಯಿಂದ ತಿಳಿದುಕೊಂಡಿದ್ದಳು. ಆತನ ಸೌಂದರ್ಯ, ಲಾವಣ್ಯ, ಗಾಂಭೀರ್ಯಾದಿ ಕಲ್ಯಾಣ ಗುಣಗಳ ವಿವರಣೆ ತಿಳಿದು ಪ್ರೇಮವು ವೃದ್ಧಿಯಾಯಿತು. ಭಕ್ತಿಯು ಪರಮಾತ್ಮನಲ್ಲಿರುವ ಪರಮ ಪ್ರೇಮ ರೂಪ. ಇದು ಅಮೃತ ಸ್ವರೂಪವು ಹೌದು. ಅವನು ಇನ್ನೇನು ಬಯಸನು. ಗೋಪಿಯರಿಗೆ ಶ್ರೀ ಕೃಷ್ಣನಲ್ಲಿ ಹುಟ್ಟಿದ ಅನುರಕ್ತಿಯಂತೆ, ಗೋದಾದೇವಿ ತಾನು ಆ ಗೋಪಿಯರಂತೆ ಭಾವಿಸಿಕೊಂಡು ಪರಮಾತ್ಮನೇ ತನ್ನ ಪತಿಯಾಗಬೇಕೆಂದು ಆಸೆ ಪಟ್ಟಳು. ತಾನು ಇರುವುದೇ ಆ ರಂಗನಾಥನಿಗೆ ಎಂದು ಹಾಗು ಮುಂದೆ ಮದುವೆ ಆಗುವುದಾದರೆ ಆ ರಂಗನಾಥನೇ ತನ್ನ ಪತಿ ಎಂದು ತನ್ನ ಮನೋ ಇಚ್ಛೆಯನ್ನು ತಂದೆಗೆ ತಿಳಿಸಿದಳು.
‘ತಿರುಪ್ಪಾವೈ‘
ಗೋದಾದೇವಿಯು, ‘ತಿರುಪ್ಪಾವೈ’ ಎಂಬ 30 ಪಾಶುರo ಹಾಗು ‘ನಾಚ್ಚಿಯರ್ ತಿರುಮೊಳಿ ‘ ಎಂಬ 143 ಪಾಶುರಂಗಳ ಎರಡು ಪ್ರಬಂಧಗಳನ್ನು ತಮಿಳಿನಲ್ಲಿ ರಚಿಸಿದ್ದಾಳೆ. ಅವಳ ಈ ರಚನೆಗಳಲ್ಲಿ ಮುಖ್ಯವಾಗಿ ಕಾಣುವುದು ಶ್ರೀಕೃಷ್ಣ ಪ್ರೇಮ, ಭಗವಂತನ ಲೀಲೆ, ಮತ್ತು ಮಮತೆ.
ಇಲ್ಲಿ, ನಾವು ತಿರುಪ್ಪಾವೈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಳನ್ನು ತಿಳಿಯೋಣ. ಈ ಪ್ರಬಂಧದಲ್ಲಿ ಮೊದಲಿನಿಂದ ಕೊನೆಯವರೆಗೂ ಶ್ರೀಕೃಷ್ಣನ ವಿಷಯವನ್ನೇ ವರ್ಣಿಸುತ್ತಾಳೆ. ತಿರುಪ್ಪಾವೈನ ಮೊದಲ ಐದು ಪದ್ಯಗಳಲ್ಲಿ ಪರಮಾತ್ಮನ ಸಾನ್ನಿಧ್ಯವನ್ನು ಪಡೆಯುವ ಅನುಕೂಲಗಳ ಪರಿಸ್ಥಿತಿಯನ್ನು ಸೂಚಿಸಲಾಗಿದೆ. ಪರಿಶುದ್ಧ ದೇಹ ಮತ್ತು ಮನಸ್ಸುಗಳಿಂದ ಯಾರು ಪರಮಾತ್ಮನನ್ನು ಉಪಾಸನೆ ಮಾಡುವರೋ ಅವರಿಗೆ ಸ್ವಾಮಿಯ ಸಾನ್ನಿಧ್ಯ ದೊರೆಯುವುದು.
ಮುಂದಿನ ಐದು ಪದ್ಯಗಳಲ್ಲಿ ಶರಣಾಗತಿ ಮಾಡುವ ಕ್ರಮ ಮತ್ತು ಅದರ ಅವಶ್ಯಕತೆಯನ್ನು ಕುರಿತು ತಿಳಿಸಲಾಗಿದೆ. ಅನಂತರ ಭಗವಂತನನ್ನು ಅನ್ವೇಷಣೆ ಮಾಡುವ ವಿವಿಧ ಜನರು ಗೋದಾದೇವಿಯ ಸ್ನೇಹಿತರೇ. ಇವರೆಲ್ಲರನ್ನೂ ತನ್ನ ಜೊತೆಯಲ್ಲಿ ದೇವಾಲಯಕ್ಕೆ ಬರುವಂತೆ ಆಹ್ವಾನಿಸುತ್ತಾಳೆ. ನೀಳಾದೇವಿಯೊಡನಿರುವ ಶ್ರೀ ಕೃಷ್ಣನನ್ನು ಪಡೆಯ ಬೇಕೆಂದು ಆಕೆಯ ಪ್ರಯತ್ನ. ಪರಮಾತ್ಮನು ತನ್ನ ಸೌಂದರ್ಯಾತಿಶಯಗಳಿಂದ ಪ್ರಸನ್ನನಾಗಿ ಭಕ್ತರಿಗೆ ಅನುಗ್ರಹ ಮಾಡುವಂತೆ ಗೋದಾದೇವಿ ಬೇಡಿಕೊಳ್ಳುತ್ತಾಳೆ. ಶ್ರೀ ಮಧ್ಬಾಗವತದಲ್ಲಿ ಗೋಕುಲದ ಗೋಪ ಕನ್ಯೆಯರು ಉತ್ತಮ ಪತಿಯನ್ನು ಪಡೆಯುವ ಉದ್ದೇಶ್ಯದಿಂದ ಕಾತ್ಯಾಯಿನಿ ವ್ರತವನ್ನಾಚರಿಸಿದರು.
ಇಲ್ಲಿ ಗೋದಾದೇವಿಯ ಸ್ವಭಾವ ಮಾನವ ಪ್ರೇಮಕ್ಕೆ ಬದಲಾಗಿ ದಿವ್ಯ ಪ್ರೇಮಿಯಾದ ಭಗವಂತನನ್ನು ಪಡೆಯುವುದು. ಪರಮಾತ್ಮನು ನಿಜವಾದ ಮತ್ತು ಸಹಜವಾದ ಪ್ರೇಮ ಮತ್ತು ಭಕ್ತಿ ಉಳ್ಳವನು. ಸರ್ವರೂ ಕೊನೆಗೆ ಅವನನ್ನೇ ಪ್ರೇಮಿಸಿ ಅವನ ಸಮೀಪವನ್ನು ಸೇರಬೇಕೆಂಬ ಹಂಬಲವುಳ್ಳವರು. ಇಲ್ಲಿ ಗೋದಾದೇವಿಯು ಆ ಪರಮಾತ್ಮನನ್ನೇ ಪತಿಯನ್ನಾಗಿ ಹೊಂದಬೇಕೆಂಬ ಬಯಕೆಯಿಂದಿದ್ದಾಳೆ. ಸರ್ವೇಶ್ವರನು ಎಲ್ಲರಿಗೂ ಪತಿ, ವಿಶ್ವಕ್ಕೆ ಪತಿ. ಸಮಸ್ತ ಚೇತನರಿಗೂ ಪತಿ ಮತ್ತು ಸರ್ವತಂತ್ರ ಸ್ವತಂತ್ರ. ನಾವೆಲ್ಲರೂ ಪರತಂತ್ರರು.
ತಿರುಪ್ಪಾವೈ ಪಾಶುರಗಳಲ್ಲಿ, ಮಾರ್ಗಶಿರ ಮಾಸದ ಮಹಿಮೆ, ವ್ರತ, ವ್ರತಧಾರಿಯ ಸ್ವಭಾವ, ವ್ರತಾನುಷ್ಠಾನ, ಫಲ, ಪರ್ಜನ್ಯ ದೇವತೆಯ ಉಪಕಾರ, ದಾಮೋದರ ಭಜನೆಯ ಫಲ ಮುಂತಾದ ಕೃಷ್ಣಾನುಭವಕ್ಕೆ ಬೇಕಾದ ಉಪಕರಣಗಳು ತಿಳಿಸಲಾಗಿದೆ. ಮುಂದಿನ ಪದ್ಯಗಳಲ್ಲಿ ಅನುಭವಕ್ಕೆ ಜೊತೆಯಲ್ಲಿ ಬರಬೇಕಾದ ಗೋಪ ಕನ್ಯೆಯರನ್ನು ನಿದ್ದೆಯಿಂದ ಎಚ್ಚರಿಸಿ ಒಬ್ಬೊಬ್ಬರನ್ನಾಗಿ ಕರೆಯುತ್ತಾಳೆ. ಈ ಗೋಪಕನ್ಯೆಯರಲ್ಲಿ ಒಬ್ಬಳು ಭಗವದುನುಭವರಸವನು ತಿಳಿದವಳು, ಭಾಗವದ್ವಿಷಯವನ್ನು ತಿಳಿದು ನಿದ್ರಿಸುವಳೊಬ್ಬಳು, ಶ್ರೀ ಕೃಷ್ಣನಿಗೆ ಪ್ರಿಯತಮೆಯಾದವಳೊಬ್ಬಳು, ಕೃಷ್ಣನೇ ಬರಲಿ ಎಂದು ನಿರೀಕ್ಷಿಸುತ್ತಾ ಅರೆನಿದ್ರೆಯಲ್ಲಿರುವವಳು ಮತ್ತೊಬ್ಬಳು. ಶ್ರೀ ಕೃಷ್ಣನಿಗೆ ವಿರಹ ಸಂತಾಪವನ್ನು ಉಂಟುಮಾಡಿರುವೆಂದು ತಿಳಿದವಳು ಮಗದೊಬ್ಬಳು. ಶ್ರೀ ಕೃಷ್ಣನಿಗೆ ಸಮನಾದ ಸತ್ಕುಲಪ್ರನೂತೆ ತಾನು ಎಂಬ ಅಹಂಕಾರ ಇರುವವಳು ಒಬ್ಬಳು. ಶ್ರೀ ಕೃಷ್ಣನ ಆಪ್ತ ಮಿತ್ರಳಾಗಿ ನೇತ್ರಸೌಂದರ್ಯವುಳ್ಳವಳು ಒಬ್ಬಳು. ಎಲ್ಲರನ್ನೂ ಎಬ್ಬಿಸುವುದಾಗಿ ವಾಗ್ದಾನ ಮಾಡಿರುವಳು ಒಬ್ಬಳು. ವಾಕ್ಚಾತುರ್ಯವುಳ್ಳವಳು ಮತ್ತೊಬ್ಬಳು. ಹೀಗೆ ಒಬ್ಬೊಬ್ಬರನ್ನು ಗೋದಾ ಎಬ್ಬಿಸುತ್ತಾ ಬರುತ್ತಾಳೆ. ಮುಂದೆ ಸಾಗುತ್ತಾ, ದ್ವಾರಪಾಲಕರು, ನಂದಗೋಪ, ಯಶೋದೆಯರು ಶ್ರೀ ಕೃಷ್ಣ ಬಲರಾಮರು ಎಲ್ಲರನ್ನೂ ನಿದ್ದೆಯಿಂದ ಏಳುವಂತೆ ಪ್ರಾರ್ಥಿಸುತ್ತಾಳೆ.
ನೀಳಾದೇವಿಯ ಮೂಲಕ ಶ್ರೀ ಕೃಷ್ಣನನ್ನ ಎಬ್ಬಿಸಲು ಪ್ರಯತ್ನಿಸುತ್ತಾಳೆ. ಶ್ರೀ ಕೃಷ್ಣನ ಗುಣ ಸಂಕೀರ್ತನ ಮಾಡಿ, ತಾವು ಬಂದಿರುವ ಕಾರ್ಯವನ್ನು ವಿಚಾರಿಸ ಬೇಕೆಂದು ಬೇಡುತ್ತಾಳೆ. ಪರಮಾತ್ಮನ ಸೌಂದರ್ಯ, ಗಾಂಭೀರ್ಯ, ವಾತ್ಸಲ್ಯಾದಿಗಳಿಗೆ ಮಂಗಳಾಶಾಸನ ಮಾಡುತ್ತಾಳೆ.
ಕೊನೆಯ ಮೂರು ಪಾಶುರಗಳಲ್ಲಿ ನಿತ್ಯ ಕೈಂಕರ್ಯ ಪ್ರಾರ್ಥನೆ, ಪ್ರಾಪ್ಯ ನಿಷ್ಕರ್ಷೆ ಮತ್ತು ಫಲಪ್ರಾಪ್ತಿ ತಿಳಿಸಲಾಗಿದೆ. ಹೀಗೆ ತಿರುಪ್ಪಾವೈ ಉಪನಿಷತ್ತಿನ ಸಾರವಾಗಿದೆ. ಇಲ್ಲಿ ಭಕ್ತಿಯು ಅತಿಶಯವು ಅನನ್ಯವು ಆಗಿದೆ.
ಪರಮಾತ್ಮನು ನಡೆಸಿದ ಶತೃವಧೆಗಳಲ್ಲಿ ಮೂರು ಭಾರಿ ಈ ವೃತ್ತಾಂತವನ್ನು ತಿರುಪ್ಪಾವೈಯಲ್ಲಿ ಕಾಣುತ್ತೇವೆ. ಒಂದು ೧೦ನೇ ಪಾಶುರದಲ್ಲಿ ಕುಂಭಕರ್ಣನ ವಧೆ, ಮತ್ತೊಂದು ೧೨ನೇ ಪಾಶುರದಲ್ಲಿ ರಾವಣ ವಧೆ, ಇನ್ನೊಂದು ೨೫ನೇ ಪಾಶುರದಲ್ಲಿ ಕಂಸವಧೆ. ಇವುಗಳಲ್ಲಿ ಒಂದುಕಡೆಯಲ್ಲಿಯೂ, ಭಗವಂತ ಶತೃಗಳನ್ನು ಸಾಯಿಸುವುದಾಗಿ ಹೇಳಲು ಅವಳಿಗೆ ತಾತ್ಪರ್ಯವಿಲ್ಲ. ಕುಂಭಕರ್ಣನು ತಾನಾಗಿ ಮೃತ್ಯವಿನ ಬಾಯಲ್ಲಿ ಬಿದ್ದು ಸತ್ತನೇ ಹೊರತು ಶ್ರೀರಾಮ ಸಂಹರಿಸಲಿಲ್ಲವೆಂದು ಅಭಿಪ್ರಾಯವಾಗುತ್ತೆ-“ಕೂತ್ತರ್ತಿವಾಯ್ವಿಳನ್ ನ್ದ ಕುಂಭಕರ್ಣನುಂ ‘-ಎಂಬುದರಿಂದ. ಇದೆ ರೀತಿ, ರಾವಣನು ಶ್ರೀ ರಾಮನ ಬಾಣದಿಂದಲ್ಲ- ಸ್ವಂತ ಕೋಪದಿಂದ, ಎಂದು ಹೇಳುತ್ತಾಳೆ. ಗೋದಾದೇವಿಯ ಪದಪ್ರಯೋಗ ಚಾತುರ್ಯದಿಂದ ಕೂಡಿದೆ. ನಿಗ್ರಹವನ್ನು ಅನುಗ್ರಹವಾಗಿ ಹೇಳುವುದರಲ್ಲಿ ಅತಿಯಾದ ಜಾಣ್ಮೆಯನ್ನು ತೋರಿದ್ದಾಳೆ. ಇಲ್ಲಿ ದಂಡನೆಯೂ ಒಂದು ಕ್ಷೇಮ ಕಾರ್ಯವೆಂದು ತೋರಿಸುತ್ತಾಳೆ. ಅವಳು ತನ್ನ ರಂಗನಾಥನ ಮೇಲೆ ಇಟ್ಟಿದ್ದ ಅದಮ್ಯ ಭಕ್ತಿ ಮತ್ತು ಪ್ರೀತಿ ಎದ್ದು ತೋರುತ್ತದೆ.
ಇನ್ನೊಂದು ಕೋನದಿಂದ ನೋಡಿದಾಗ, ಆಂಡಾಳ್ ಅಥವ ಗೋದಾದೇವಿಯನ್ನು ಸೀತೆಗೂ, ಶ್ರೀ ವಿಷ್ಣುಚಿತ್ತರನ್ನು ಜನಕ ಮಹಾರಾಜನಿಗೂ ಹೋಲಿಸಲಾಗಿದೆ. ಜನಕರಾಜನ ಮಗಳು ಸೀತೆ. ಆಂಡಾಳ್ ಶ್ರೀ ವಿಷ್ಣುಚಿತ್ತರ ಮಗಳು. ಇವರಿಬ್ಬರೂ ಅಯೋನಿಜರು. ಆದರೂ ಪೋಷಕ ತಂದೆಯವರ ಸ್ವರೂಪ ಸ್ವಭಾವಾದಿಗಳಿಂದ ಇವರಿಬ್ಬರ ನಡುವೆ ಮಹದಂತರವಿದೆ. ಪಿತೃಶಬ್ದ ಪರ್ಯಾಯವಾದ ಜನಕ ಮಹಾರಾಜಾ ಕುಲವನ್ನು, ರಾಜ್ಯ ಪರಿಪಾಲನೆಯನ್ನು ಪ್ರಜೆಗಳ ಕ್ಷೇಮಕ್ಕಾಗಿ ಯುಧ್ಧಾದಿ ಕ್ರೂರವ್ಯಾಪಾರವನ್ನು ನಡೆಸಬೇಕಾದ ನಿರ್ಬಂಧದಲ್ಲಿದ್ದವನು. ಶ್ರೀ ವಿಷ್ಣುಚಿತ್ತರು ಪರಮೈಕಾಂತಿಕುಲ. ತಮ್ಮ ರಕ್ಷಣೆಯ ಭಾರವನ್ನೆಲ್ಲ ಭಗವಂತನ ಪಾದ ಪದ್ಮಗಳಲ್ಲಿ ಸಮರ್ಪಿಸಿ ಮುಕ್ತಾತ್ಮರಂತೆ ವರ್ತಿಸುತ್ತಿದ್ದವರು. ಈ ರೀತಿ ಹಲವು ಕಾರಣಗಳಿಂದ ಕೆಲವು ಸಂದರ್ಭಗಳಲ್ಲಿ ಶ್ರೀ ರಾಮನನ್ನು ಬಿಟ್ಟು ದುಃಖಿಸುತ್ತಿದ್ದ ಸೀತಾದೇವಿಗಿಂತ ಆಂಡಾಳಿನ ಸೌಭಾಗ್ಯತಿಶಯ ಎಂತಹುದೆಂದು ಸ್ಪಷ್ಟವಾಗುತ್ತದೆ. ಸೀತೆಗೆ ಭಗವಂತನನ್ನು ಮದುವೆಯಾಗಲು ರುದ್ರಧನಸ್ಸು ಸಾಧನವಾಯಿತು. ಆಂಡಾಳಿಗೆ ಗೋಪಿಕಾ ಭಾವನೆ ಸಾಧನ. ಗೋದಾದೇವಿ ಈ ಸುಲಭೋಪಾಯವನ್ನೇ ಕೊಂಡಾಡಿ ಸ್ವೀಕರಿಸಿ, ಸ್ವಾಮಿಯ ಸಾಮಿಪ್ಯಕ್ಕೆ ಸೇರಿದಳು.
‘ತಿರು’ ಎಂದರೆ ಶ್ರೇಷ್ಟವಾದುದು. ‘ಪಾವೈ’ ಎಂದರೆ ವ್ರತ. ಶ್ರೇಷ್ಠವಾದ ಫಲವನ್ನುಂಟುಮಾಡುವ ವ್ರತವೆಂದರ್ಥ. ‘ಆಂಡಾಳ್’ ಎಂದರೆ ಆನ್-ಪುರುಷನ್ ಅರ್ಥಾತ್ ಪರಮ ಪುರುಷನ ತಾಳ್, ಪಾದಗಳನ್ನು ನಮಗೆ ತೋರಿಸಿಕೊಟ್ಟವಳು. ಗೋದೆಯು ತಾನು ಮುಡಿದ ಹೂವಿನ ಮಾಲೆಯಿಂದ ಪರಮಾತ್ಮನನ್ನು ಸ್ವಾಧೀನಪಡಿಸಿಕೊಂಡು, ನಾವು ಆತನನ್ನು ಸಂಕೀರ್ತನ ಮಾಡಿ ಸಾಧನಗೈಯಲು ಪಾಮಾಲೈ – ಪದ್ಯಗಳ ಮಾಲೆಯನ್ನು ನಮಗೆ ಅನುಗ್ರಹಿಸಿದ್ದಾಳೆ. ಈ ಕೃತಿಯು ಭಾಗವತ ಧರ್ಮದ ಕೈಪಿಡಿಯ ರೂಪದಲ್ಲಿದ್ದು, ಅಂತೆಯೇ ರಸಧ್ವನಿ, ರೀತಿಗುಣಾ – ಲಂಕಾರ ಮುಂತಾದ ಕಾವ್ಯ ಧರ್ಮಗಳಿಂದಲೂ ಸುಶೋಭಿತವಾದುದು. ಇಂತಹ ಅಮೂಲ್ಯ ಗ್ರಂಥವನ್ನು ನಿತ್ಯವೂ ಮತ್ತು ವಿಶೇಷವಾಗಿ ಮಾರ್ಗಶಿರ ಮಾಸದಲ್ಲೂ ವಿಶೇಷಾರ್ಥಗಳ ಅನುಸಂಧಾನದೊಡನೆ ಕಾಲಕ್ಷೇಪ ಮಾಡುವ ಪಧ್ಧತಿ ಭಾಗವತರ ಸಂಪ್ರದಾಯದಲ್ಲಿ ನಡೆದು ಬಂದಿದೆ. ಸಕಲರೂ ಈ ಕೃತಿಯನ್ನು ಪಠಿಸಿ ಪರಮ ಸಾರ್ಥಕತೆಯನ್ನು ಪಡೆಯಬಹುದು.
ಈ ಗ್ರಂಥದ ವಿಷಯ ‘ಪವಿತ್ರಾಣಂ ಪವಿತ್ರಂ ಯೋ ಮಂಗಲಾನಾo ಚ ಮಂಗಳಂ’ (ಪವಿತ್ರರಿಗೂ ಪವಿತ್ರ, ಮಂಗಲಗಳಿಗೂ ಮಂಗಳ, ದೇವತೆಗಳಿಗೂ ಪರದೇವತೆ, ಪರಬ್ರಹ್ಮ, ಪುರುಷೋತ್ತಮ ಕಮನೀಯತಮ ಕಲ್ಯಾನೈಕತಾನ )
ಬನ್ನಿ ತಿರುಪ್ಪಾವೈ ಓದೋಣ.
(ವಿಷಯ ಸಂಗ್ರಹ : “ತಿರುಪ್ಪಾವೈ ರಸಸ್ವಾಧಿನಿ” – ಬರೆದವರು ವಿದ್ವಾನ್ ವೇದಾನ್ತ ಸಾರಜ್ಞ ಶ್ರೀ ಎಸ್. ಕೃಷ್ಣಾತಾತಾಚಾರ್ಯ )
(1) ಗಮಕ ಕವಿತಾ ವನಜ ಭಾಸ್ಕರ , ಗಮಕ ರತ್ನಾಕರ ಶ್ರೀಯುತ ಬಿ.ಎಸ್ .ಎಸ್ ಕೌಶಿಕ್ ರವರ ಶ್ರೀಮದಾಂಡಾಳ್ ಮಹಾ ವೈಭವಂ -ತಿರುಪ್ಪಾವೈ – ಮೂಲ, ಕನ್ನಡ ತಾತ್ಪರ್ಯ , ಷಟ್ಪದಿ, ಭಾವಾರ್ಥ , ಚೌಪದಿ )
(ಚಿತ್ರಕೃಪೆ : ಶ್ರೀ ಕೇಶವ ವೆಂಕಟರಾಘವನ್ http://krishnafortoday.com)
Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.