ಚಿತ್ರಕೃಪೆ : ಕೇಶವ್ ವೆಂಕಟರಾಘವನ್ (ಪಾಶುರಂ – 20)
ಶ್ರೀ ನೀಳಾ ದೇವೈ ನಮಃ
ತಿರುಪ್ಪಾವೈ ಲೇಖನಮಾಲೆಯ ಹಿಂದಿನ ಲೇಖನಗಳನ್ನು ಈ ಕೆಳಗೆ ಓದಬಹುದು :
- ತಿರುಪ್ಪಾವೈ ಲೇಖನಮಾಲೆ ಪೀಠಿಕೆ
- ಪಾಶುರಂ – 1
- ಪಾಶುರಂ – 2
- ಪಾಶುರಂ – 3
- ಪಾಶುರಂ – 4
- ಪಾಶುರಂ – 5
- ಪಾಶುರಂ – 6
- ಪಾಶುರಂ – 7
- ಪಾಶುರಂ – 8
- ಪಾಶುರಂ – 9
- ಪಾಶುರಂ – 10
- ಪಾಶುರಂ – 11
- ಪಾಶುರಂ – 12
- ಪಾಶುರಂ – 13
- ಪಾಶುರಂ – 14
- ಪಾಶುರಂ – 15
- ಪಾಶುರಂ – 16
- ಪಾಶುರಂ – 17
- ಪಾಶುರಂ – 18
- ಪಾಶುರಂ – 19
- ಪಾಶುರಂ
ಮುಪ್ಪತ್ತು ಮೂವರ್ ಅಮರರ್ಕು ಮುನ್ ಶೇನ್ರು
ಕಪ್ಪಂ ತವಿರ್ಕುಂ ಕಲಿಯೇ ತುಯಿಲೆಳಾಯ್
ಶೇಪ್ಪಮುಡೈಯಾಯ್ ತಿಱಲುಡೈಯಾಯ್ ! ಶೇಟ್ರಾರ್ಕು
ವೆಪ್ಪಂ ಕೊಡುಕ್ಕುಂ ವಿಮಲಾ ತುಯಿಲೆಳಾಯ್
ಶೇಪ್ಪನ್ನ ಮೆನ್ಮುಲೈಚ್ಚೆವ್ವಾಯ್ ಚ್ಚಿರು ಮರುಂಗುಲ್
ನಪ್ಪಿನ್ನೈ ನಂಗಾಯ್ ! ತಿರುವೇ ! ತುಯಿಲೆಲಾಯ್
ಉಕ್ಕಮುಂ ತಟ್ಟೊಳಿಯುಂ ತಂದುನ್ ಮಣಾಳನೈ
ಇಪ್ಪೋದೇ ಯೆಮ್ಮೈ ನೀರಾಟ್ಟೇಲೇ ರೆಂಬಾವಾಯ್ ॥
ಶ್ರೀಯುತ ಕೌಶಿಕರ ಕನ್ನಡ ಭಾಷಾಂತರ ಹೀಗಿದೆ :
ದಂಡೆತ್ತಿ ಮುಂದಾಗಿ ಪೋಗಿ, ದಿವಿಜರು ತೆರುವ
ದಂಡಕಪ್ಪವ ನಿಲಿಸಿ, ಮೆರೆದ ಬಲಶಾಲಿಯೇ
ಹಿಂಡು ಶಿಷ್ಯರ ಶತೃಬಳಗವನು ನಿಗ್ರಹಿಸೆ, ಕಂಕಣವ ತೊಟ್ಟಿರ್ಪನೇ
ಪುಂಡರಿಗೆ ಯಮ ಸಮನೆ, ನಿದ್ದೆಯಿಂದೇಳಯ್ಯ
ಅಂಡಕಟಿವರಮಧ್ಯೆ, ನಪ್ಪಿನ್ನ್ಯೆ ಸನ್ನಾಮೆ
ಗಂಡನಿಗು ನಮಗಳಿಗು ರನ್ನಗನ್ನಡಿ ಹೊನ್ನ ವ್ಯಜನವೀಯುತ ಮೀಯಿಸೌ ||
ಹಿಂದಿನ ಪಾಶುರದಲ್ಲಿ ಶ್ರೀಕೃಷ್ಣನೊಡನೆ ನೀಳಾದೇವಿಯನ್ನು ಎದ್ದು ಬರುವಂತೆ ಗೋಪಿಕೆಯರು ಗೋಗರೆದರೂ ಅವನು ಬರಲಿಲ್ಲ. ಅವಳೂ ಬರಲಿಲ್ಲ. ನಾವೇನಾದರೂ ತಪ್ಪು ಮಾಡಿರುವೆವೋ ಎಂದು ಗೋಪಿಯರು ಯೋಚಿಸಿದರು. ಹೌದು, ನೀಳಾದೇವಿಯು ಸಂತಸದಿಂದ ಬಂದು ಬಾಗಿಲು ತೆರೆಯದಂತೆ ಶ್ರೀಕೃಷ್ಣನೇ ತಡೆದಿರಬೇಕೆಂದು, ಅವನನ್ನೇ ದೂಷಿಸಿದೆವು. ಅವನು ಮಲಗಿದ್ದರೂ, ತಾಯಿಯಾದ ಇವಳು ಬಂದು ಬಾಗಿಲು ತೆರೆಯದೆ ಇದ್ದದ್ದು ತಪ್ಪು ಎಂದು ನೀಳಾದೇವಿಯನ್ನೂ ದೂಷಿಸಿದೆವು.
ಪ್ರಪನ್ನರಾಗಿ, ಶಾಂತಚಿತ್ತರಾಗಿರಬೇಕಾದವರು, ಇಬ್ಬರನ್ನು ದೂಷಿಸಿ ಅಲ್ಲಗೆಳೆದಿದ್ದು ಎಂದಿಗೂ ಸರಿಯಲ್ಲ. ನಮ್ಮ ಬುದ್ದಿಯು ಇನ್ನು ಪಕ್ವವಾಗಿಲ್ಲವೆಂದೇ ಕೃಷ್ಣನು ನೀಳಾದೇವಿಯನ್ನು ಬಿಟ್ಟುಕೊಡಲಿಲ್ಲ. ಅವನ ಇಚ್ಛೆಯಿಲ್ಲದೆ ಅವಳು ಹೇಗೆ ತಾನೇ ಬಂದಾಳು? “ಸ್ವಾಮಿ, ನಿನ್ನನ್ನು ಅನುಭವಿಸಲು ಉಪಾಯವನ್ನು ನೀನೇ ತೋರಬೇಕು. ನಾವು ಅನನ್ಯ ಗತಿಕರು” ಎಂದು ಈಗ ಪ್ರಾರ್ಥಿಸುತ್ತಾರೆ ಗೋಪಿಯರು.
ಮುಪ್ಪತ್ತು ಮೂವರ್ ಅಮರರ್ಕು- ( 12-ದ್ವಾದಶಾದಿತ್ಯರು, ಏಕಾದಶ ರುದ್ರರು-11, ಅಷ್ಟವಸುಗಳು-8, ಅಶ್ವಿನಿ ದೇವತೆಗಳು-2, ಒಟ್ಟು 33)
ಮೂವತ್ತು ಮೂರು ಕೋಟಿ ದೇವತೆಗಳಿಗೆ ಉಂಟಾಗುವ ವಿಪತ್ತುಗಳನ್ನು ಹೋಗಲಾಡಿಸಲು ಅವರುಗಳು ಕರೆಯುವುದಕ್ಕೆ ಮೊದಲೇ ಹೋಗಿ ಅವರ ಭಯ-ಕಂಪನಗಳನ್ನು ನಿವಾರಣೆ ಮಾಡುವ ಪರಾಕ್ರಮಶಾಲಿಯೇ, ನಿದ್ದೆಯನ್ನು ಬಿಟ್ಟು ಎದ್ದೇಳು. ಅಮರರಾದ ದೇವತೆಗಳನ್ನು ರಕ್ಷಿಸಲು ಹೋಗುವ ನೀನು, ನಿನ್ನನ್ನು ಬಿಟ್ಟು ಬದುಕಲಾರದ ನಮ್ಮನ್ನು ಕಾಣಲು ಬರಬಾರದೇ? ಋಜು ಸ್ವಭಾವವುಳ್ಳವನೇ, ಮಹಾವೀರನೇ, ನಿನ್ನ ಆಶ್ರಿತರ ಶತ್ರುಗಳಿಗೆ ಭಯ-ತಾಪಗಳನ್ನು ಉಂಟುಮಾಡುವ ನಿರ್ಮಲನೇ, ನಿದ್ದೆ ಬಿಟ್ಟು ಏಳು. ಅಮೃತ ಕಳಶದಂತೆ ಮೃದುವೂ , ಸುಕುಮಾರವೂ ಆದ ವಿರಹವನ್ನು ಸಹಿಸಲಾರದ ವಕ್ಷೋಜವುಳ್ಳ, ಕೆಂದುಟಿಗಳುಳ್ಳ, ಕೃಶವಾದ ಕಟಿಯುಳ್ಳ, ಪರಿಪೂರ್ಣೆಯಾದ ಶ್ರೀದೇವಿಯ ಅಂಶಭೂತೆಯಾದ ನೀಳಾದೇವಿಯೇ, ಗುಣಪೂರ್ಣಳೇ, ನಿದ್ದೆ ಬಿಟ್ಟೆಳು. ಬೀಸಣಿಕೆಯನ್ನು, ಕನ್ನಡಿಯನ್ನು ನಮಗೆ ಕೊಟ್ಟು ನಿನ್ನ ಮನೋವಲ್ಲಭನಾದ ಶ್ರೀಕೃಷ್ಣನನ್ನು ಈಗಲೇ ಎಬ್ಬಿಸು. ಆತನೇ ನಮಗೆ ವ್ರತಸ್ನಾನ ಮಾಡಿ ಬರುವಹಾಗೆ ತಿಳಿಸುವಂತೆ ಉಪಕರಿಸು. ಆಗಲೇ ನಮ್ಮ ವ್ರತ ಸಿದ್ಧಿಸುವುದು.
ಆಶ್ರಿತರು ನಿರ್ಮಮರಾಗಿ ಭಗವಂತನ ಗುಣಕೀರ್ತನೆ ಮಾಡಲು ಭಗವಂತನು ಪ್ರಬುದ್ಧನಾಗಿ ತನ್ನ ಕಾರ್ಯವನ್ನು ನೆರವೇರಿಸುವನು. ಇಂತಹ ಭಗವಂತನನ್ನು ಮೊದಲು ಎಬ್ಬಿಸಲು ಗೋಪಿಯರು ಪ್ರಯತ್ನಿಸುವರು. ಆದರೆ ಅವರೂ ಈ ಕಾರ್ಯದಲ್ಲಿ ಸಫಲರಾಗುವುದಿಲ್ಲ. ಅದರಿಂದ ನೀಳಾದೇವಿಯನ್ನು ಎಬ್ಬಿಸಿ, ಅವಳನ್ನು ಪ್ರಾರ್ಥಿಸಿ, ತಾವು ಬಂದ ಕಾರ್ಯವನ್ನು ಅರಿಕೆ ಮಾಡಿಕೊಂಡು, ಆಕೆಯ ನೆರವನ್ನು ಬೇಡುವರು.
ಕಷ್ಟದಲ್ಲಿದ್ದ ಗಜೇಂದ್ರನನ್ನು ಮೂವತ್ತು ಮೂರು ಕೋಟಿ ದೇವತೆಗಳೂ ಕೈ ಬಿಟ್ಟರು. ಆಗ ಕರುಣಾಮಯಿಯಾದ ದೇವನು ಅವನನ್ನು ರಕ್ಷಿಸಿದನು. ಅಂತೆಯೇ ಪಂಚೇಂದ್ರಿಯಗಳಿಂದ ಹಿಡಿಯಲ್ಪಟ್ಟ, ಆಶ್ರಿತ ಚೇತರನ್ನು ಅವರ ಸಂಸಾರ ಬಂಧನದಿಂದ ಪ್ರಪತ್ತಿಯ ಮೂಲಕ ಆಚಾರ್ಯರು ಬಿಡಿಸುವರು. ಅಹಂಕಾರ ಮೂಲದ ಭ್ರಮೆಗಳಿಂದ ಚೇತನರನ್ನು ರಕ್ಷಿಸಲು ಭಗವದ್ಭಕ್ತಿಯ ಪರಾಕ್ರಮಬೇಕು. ಇವರು ನಮ್ಮಲ್ಲಿರುವ ಅಜ್ಞಾನವನ್ನು ತೊಲಗಿಸಿ ಕನ್ನಡಿ ಎನ್ನುವ ಸ್ವರೂಪ ಜ್ಞಾನವನ್ನು, ಬೀಸಣಿಕೆ ಎನ್ನುವ ಅಹಂಕಾರ ವಿಮೋಚನೆಗಳನ್ನು ನೀಡುವರು.
ಇಂತಹ ಆಚಾರ್ಯರು ಸರ್ವಶಕ್ತರು. ಆರ್ಜವ ಗುಣವುಳ್ಳವರು. ಪರಿಶುದ್ಧಾತ್ಮರು. ವೇದ ಪ್ರಮಾಣಗಳಿಂದ ನಾಸ್ತಿಕರನ್ನು ಜಯಿಸುವಂತವರು. ದಂಭದರ್ಪ ವಿನಾಶಕರು. ಆರು ವಿಧದ ರಕ್ಷಣಾ ಗುಣವುಳ್ಳ ಇವರು ಜ್ಞಾನ-ಭಕ್ತಿ-ವೈರಾಗ್ಯಗಳಿಂದ ಕೂಡಿ ದಯಾರ್ಥ ತಿರುಮಂತ್ರಗಳ ಅರ್ಥವನ್ನು ತಮ್ಮ ಅಂತರಂಗ ಶಿಷ್ಯನಿಗೆ ಕರುಣಿಸುವ ಪುರುಷಾಕಾರ ಭೂತರಿವರು. ಗೋಪಿಯರು ಶ್ರೀಕೃಷ್ಣನೆಂಬ ತೀರ್ಥದಲ್ಲಿ ಸ್ನಾನ ಮಾಡಬೇಕೆನ್ನುವರು. ಇದಕ್ಕೆ ಬೇಕಾಗುವ ಕೈಂಕರ್ಯ ಉಪಕಣಗಳನ್ನು ನೀಳಾದೇವಿಯೇ ಅನುಗ್ರಹಿಸಬೇಕೆನ್ನುವರು. ಹೀಗೆ ಅಕಿಂಚನ ಪೂರ್ವಕವಾಗಿ ಉಪಾಯೀ, ಉಪೇಯಗಳೆರಡನ್ನು ಅನುಗ್ರಹಿಸಬೇಕೆಂದು ಬೇಡುವರು.
ಭಾವಾರ್ಥ: ಮೂವತ್ತಮೂರು ಕೋಟಿ ದೇವತೆಗಳಿಂದ ಕೈಲಾಗದೆ ಬಿಟ್ಟ ಗಜೇಂದ್ರನ ಕಷ್ಟವನ್ನು, ಪಾಹಿ ಪಾಹಿ ಅನ್ನುತ್ತಿದ್ದಂತೆ, ಭಗವಂತನು ಮುಂದೆ ಬಂದು ಬಿಡಿಸಿದಹಾಗೆ, ಆಚಾರ್ಯನೂ ಕೂಡ ದೇವತೆಗಳಿಂದಲೂ ಬಿಡಿಸಲಾಗದ, ಅನಾದಿ ಕಾಲದಿಂದ ಅಪಾರ ಸಂಸಾರ ಸಮುದ್ರದಲ್ಲಿ ಕಾಲಿಟ್ಟು ರೂಪ, ಶಬ್ದ, ಗಂಧ , ರಸ, ಸ್ಪರ್ಶಗಳೆಂಬ ಐದು ಮೊಸಳೆಗಳಂತೆ ಹಿಡಿಯಲ್ಪಟ್ಟು, ಹಿಂಸೆ ಪಡುವ ಆಶ್ರಿತ ಚೇತನರನ್ನು ಅವುಗಳಿಂದ ಬಿಡಿಸಿ, ಭಗವದ್ಕೈಂಕರ್ಯದಲ್ಲಿ ಆಸ್ಥೆಯುಳ್ಳವರನ್ನಾಗಿ ಮಾಡುವಷ್ಟು ಸಮರ್ಥನಾಗಿದ್ದಾನೆ. ಅಂತಹ ಆಚಾರ್ಯನ ಸಂಭೋದನೆ ಇಲ್ಲಿ ಧ್ವನಿಸುತ್ತದೆ.
ಆರಿದ್ದರೇನಯ್ಯ ನೀನಿಲ್ಲದೆ ||ಪ||
ಕಾರುಣ್ಯನಿಧಿ ಹರಿಯೆ ಕೈಯ ಬಿಡಬೇಡ ||ಅ||
ದುರುಳ ಕೌರವನಂದು ದ್ರುಪದಜೆಯ ಸೀರೆಯನು
ಕರಗಳಿಂ ಸೆಳೆಯುತಿರೆ ಪತಿಗಳೆಲ್ಲ
ಗರ ಹೊಡೆದಂತಿರ್ದರಲ್ಲದೆ ನರಹರಿಯೆ
ಕರುಣಿ ನೀನಲ್ಲದಿನ್ನಾರು ಕಾಯ್ದವರು ||೧||
ಅಂದು ನೆಗಳಿನ ಬಾಧೆಯಿಂದ ಗಜ ಕೂಗಲು
ತಂದೆ ನೀ ವೈಕುಂಠದಿಂದ ಬಂದು
ಇಂದಿರೇಶನೆ ಚಕ್ರದಿಂದ ನಕ್ರನ ಬಾಯ
ಸಂಧಿಯನು ಸೀಳಿ ಕೃಪೆಯಿಂದ ಸಲಹಿದೆಯೊ ||೨||
ಅಜಮಿಳನು ಕುಲಗೆಡಲು ಕಾಲದೂತರು ಬರಲು
ನಿಜಸುತನ ಕರೆಯೆ ನೀನತಿವೇಗದಿ
ತ್ರಿಜಗದೊಡೆಯನೆ ಸಿರಿ ಪುರಂದರವಿಠಲ
ನಿಜದೂತರನು ಕಳುಹಿ ಕಾಯ್ದೆ ಶ್ರೀಹರಿಯೆ || – ಪುರಂದರ ದಾಸರು
(ವಿಷಯ ಸಂಗ್ರಹ : “ತಿರುಪ್ಪಾವೈ ರಸಸ್ವಾಧಿನಿ” – ಬರೆದವರು ವಿದ್ವಾನ್ ವೇದಾನ್ತ ಸಾರಜ್ಞ
ಶ್ರೀ ಎಸ್. ಕೃಷ್ಣಾತಾತಾಚಾರ್ಯ )
(1) ಗಮಕ ಕವಿತಾ ವನಜ ಭಾಸ್ಕರ , ಗಮಕ ರತ್ನಾಕರ ಶ್ರೀಯುತ ಬಿ.ಎಸ್ .ಎಸ್ ಕೌಶಿಕ್ ರವರ ಶ್ರೀಮದಾಂಡಾಳ್ ಮಹಾ ವೈಭವಂ -ತಿರುಪ್ಪಾವೈ – ಮೂಲ, ಕನ್ನಡ ತಾತ್ಪರ್ಯ , ಷಟ್ಪದಿ, ಭಾವಾರ್ಥ , ಚೌಪದಿ )
Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.