ಚಿತ್ರಕೃಪೆ : ಕೇಶವ್ ವೆಂಕಟರಾಘವನ್ (ಪಾಶುರಂ – 11)
ಶ್ರೀ ನೀಳಾ ದೇವೈ ನಮಃ
ತಿರುಪ್ಪಾವೈ ಲೇಖನಮಾಲೆಯ ಹಿಂದಿನ ಲೇಖನಗಳನ್ನು ಈ ಕೆಳಗೆ ಓದಬಹುದು :
- ತಿರುಪ್ಪಾವೈ ಲೇಖನಮಾಲೆ ಪೀಠಿಕೆ
- ಪಾಶುರಂ – 1
- ಪಾಶುರಂ – 2
- ಪಾಶುರಂ – 3
- ಪಾಶುರಂ – 4
- ಪಾಶುರಂ – 5
- ಪಾಶುರಂ – 6
- ಪಾಶುರಂ – 7
- ಪಾಶುರಂ – 8
- ಪಾಶುರಂ – 9
- ಪಾಶುರಂ – 10
11. ಪಾಶುರಂ
ಕಟ್ರುಕ್ಕ ಱ ವೈಕ್ಕಣಂಗಳ್ ಪಲಕ ಱಂದು
ಶಟ್ರಾರ್ ತಿ ಱಲಳಿಯಚ್ಚೆನ್ರು ಶೇರುಚ್ಚೆಯ್ಯುಂ
ಕುಟ್ರಮೊನ್ರಿಲ್ಲಾದ ಕೋವಲರ್ತಂ ಪೊರ್ಕೊಡಿಯೇ
ಪುಟ್ರರವಲ್ ಗುಲ್ ಪುನಮಯಿಲೇ ಪೋದರಾಯ್
ಶುಟ್ರತ್ತುತೋಳಿಮಾ ರೆಲ್ಲಾರುಂ ವಂದುನಿನ್
ಮುಟ್ರಂ ಪುಹುಂದು ಮುಗಿಲ್ವಣ್ಣನ್ ಪೇರ್ಪಾಡ
ಶಿಟ್ರಾದೇ ಪೇಶಾದೇ ಶೇಲ್ವಪ್ಪೆಣ್ಣಾಟ್ಟಿ ! ನೀ
ಎಟ್ರುಕ್ಕು ರಂಗಂ ಪೊರುಳೇಲೋ ರೆಂಬಾವಾಯ್ ॥
ಶ್ರೀಯುತ ಕೌಶಿಕರ ಕನ್ನಡ ಭಾಷಾಂತರ ಹೀಗಿದೆ:
ಕರೆಯದಿಹ ಬಹುಸಂಖ್ಯೆ ಗೋವಿನೊಳು ನೊರೆವಾಲ
ಕರೆಯುತ್ತ, ಶತೃಗಳ ದಂಡೆಯಾತ್ರೆಯ ಗೈದು,
ಕೊರಗಿಸುವ, ದುಷ್ಕೃತ್ಯಕೆರಗದಿಹ, ಗೋಪಾಲವಂಶದಾ ಹೊಂಬಳ್ಳಿಯೇ
ಉರಗ ಗಾತ್ರನನಿತಂಬ, ವನಮಯೂರಿಯ ಗರಿಯ
ಪರಿಯ ಕೇಶಿಯೆ ಬಾರೆ, ಸುತ್ತಲಿಹ ಗೆಳತಿಯರು
ಹರಿನಾಮ ಜಪಿಸಿಹರು ಹಿತ್ತಳೆಡೆ, ನೀನಿಂತು ನಿದ್ರಿಸಿಹ ಪರಿಯಪೇಳೌ ।।೧೧।।
ಹಿಂದಿನ ಪಾಶುರಗಳಲ್ಲಿ(6 ರಿಂದ 10) ಎಬ್ಬಿಸಲ್ಪಟ್ಟ ಐದು ಗೋಪಕನ್ಯೆಯರು ಒಂದಲ್ಲ ಒಂದು ವಿಧದಲ್ಲಿ ಸ್ವಾತ್ಮಾಭಿಮಾನ ಬಿಡದವರು. ಇವರೆಲ್ಲರೂ ತಮ್ಮ- ತಮ್ಮ ಅಂತಃಪುರದಲ್ಲಿ ಮಲಗಿರಲು ಗೋದೆಯು ಹೊರಗಿನಿಂದಲೇ ಎಬ್ಬಿಸಬೇಕಾಯಿತು. ಇಲ್ಲಿಂದ ಮುಂದೆ (11 ರಿಂದ 15 ಪಾಶುರಗಳಲ್ಲಿ) ಎಬ್ಬಿಸಲ್ಪಡುವ ಗೋಪಿಯರು ಮೊದಲಿನ ಆ ಐದು ಮಂದಿ ಗೋಪಿಯರಿಗಿಂತಲೂ ಶ್ರೀಕೃಷ್ಣನಿಗೆ ಪ್ರಿಯರು. ಪರಿಶುದ್ಧರು. ಇವರೆಲ್ಲರನ್ನೂ ಗೋದೆಯು ಮನೆಯ ಪ್ರಾಕಾರವನ್ನು ಹೊಕ್ಕು ಎಬ್ಬಿಸುವಳು. ಇವರು ಶಿಷ್ಯಗುಣ ಸಂಪನ್ನರೂ, ಆಚಾರ್ಯ ಪೀಠಕ್ಕೆ ಯೋಗ್ಯರೂ ಆಗಿರುವರು.
“ಶ್ರೀಕೃಷ್ಣನನ್ನು ಪಡೆಯಲು ನಾನೇಕೆ ವ್ರತ ಮಾಡಲಿ? ಅವನೇ ಬೇಕಾದರೆ ವ್ರತಮಾಡಿ ನನ್ನಲ್ಲಿಗೆ ಬರುವನು” -ಎಂದು ಮಲಗಿರುವ ಅಧಿಕಾರಿಣಿಯೊಬ್ಬಳನ್ನು ಇಲ್ಲಿ ಎಬ್ಬಿಸುತ್ತಾರೆ.
ಚೊಚ್ಚಲ ಕರುಗಳನ್ನು ಈದ ಹಸುಗಳು-ಎಂಬ ಮೊದಲ ಸಾಲಿನಲ್ಲಿ, ಶ್ರೀಕೃಷ್ಣನ ಕರಸ್ಪರ್ಶದಿಂದ ಅಲ್ಲಿದ್ದ ಎಲ್ಲಾ ವಯಸ್ಸಿನ ಗೋವುಗಳು ಹೇಗೆ ಎಳೆಯ ಹಸುಗಳಂತೆ ಕುಣಿದು, ಕುಪ್ಪಳಿಸಿ ಕರುಗಳನ್ನು ಈದು, ಅದನ್ನು ಪ್ರೀತಿಯಿಂದ ನೆಕ್ಕುತ್ತದೆಯೋ, ಹಾಗೆಯೇ ನಮ್ಮ ದೋಷಗಳ ಬಗ್ಗೆಯೂ ಈ ಶರಣಾಗತನ ವಾತ್ಸಲ್ಯದ ಸ್ವಭಾವ. ಶ್ರೀಕೃಷ್ಣನಿಗೆ ನಿತ್ಯಸೂರಿಗಳಲ್ಲಿದ್ದ ಪ್ರೀತಿಗಿಂತ ಹೆಚ್ಚು ವಾತ್ಸಲ್ಯ ಈ ಹಸುಗಳನ್ನು ಮೇಯಿಸುವುದರಲ್ಲಿತ್ತು. ಅದಕ್ಕಿಂತ ಹೇರಳವಾದ ಪ್ರೀತಿ ಆ ಕರುಗಳಲ್ಲಿತ್ತು. “ವತ್ಸ ಮಧ್ಯಗತಂ ಬಾಲಂ” ಎಂದೇ ಶ್ರೀಕೃಷ್ಣನನ್ನು ಪರಿಚಯಿಸುವುದು. ಶ್ರೀರಾಮನ ದರ್ಶನ ಮಾತ್ರದಿಂದಲೇ, ದಶರಥ ಮಹಾರಾಜನು 60,000 ವರ್ಷದವನಾಗಿದ್ದಾಗ್ಯೂ ಮತ್ತೆ ಯುವಕನಂತೆಯೇ ಆಗಿದ್ದೇನೆ -ಎಂದು ಹೇಳುವಂತೆ, ಇಲ್ಲಿಯ ಹಸುಗಳು ಮತ್ತೆ ಎಳೆಯ ಹಸುಗಳಂತೆಯೇ ಯೌವನದಿಂದ ಕುಪ್ಪಳಿಸುತ್ತಿವೆ ಎಂಬ ಭಾವ.
“ಒಂದು ಬಳ್ಳಿ ಮಿಕ್ಕ ಬಳ್ಳಿಗಳನ್ನು ಸೇರಿಸಿಕೊಂಡು ಆಶ್ರಯ ವೃಕ್ಷದಲ್ಲಿ ಹಬ್ಬುವಂತೆ, ನಮ್ಮೊಡನೆ ಸೇರಿ ನೀನು ಶ್ರೀಕೃಷ್ಣನನ್ನು ಅನುಭವಿಸಲು ಯತ್ನಿಸು. ಹೇಗೆ ಬಳ್ಳಿಯು ಆಶ್ರಯ ವೃಕ್ಷವಿಲ್ಲದೆ ಶೋಭಿಸದು, ಚಲಿಸದು, ಇದ್ದಲ್ಲಿಯೇ ಇರುವುದು ಮತ್ತು ಬಳ್ಳಿಯೇ ವೃಕ್ಷವನ್ನು ಆಲಂಗಿಸುವುದೋ ಹಾಗೆಯೇ ನೀನು ಶ್ರೀಕೃಷ್ಣ ಎಂಬ ಕಲ್ಪ ವೃಕ್ಷವಿದ್ದಲ್ಲಿಗೆ ಹೋಗಿ ಆಶ್ರಯಿಸಬೇಕು” ಎಂದು ಗೋದಾದೇವಿಯು ತಿಳಿಸುತ್ತಾಳೆ.
“ಅನಾಚಾರಾನ್ ದುರಾಚಾರಾನ್ ಅಜ್ಞಾತೃನ್ ಹೀನ ಜನ್ಮನಃ|
ಮಧ್ಭಾಕ್ತಾನ್ ಶ್ರೋತ್ರಿಯೋ ನಿಂದನ್ ಸದ್ಯಶ್ಚಂಡಾಲತಾಂ ವ್ರಜೇತ್||”
ಮುಂದೆ ಆ ಗೊಲ್ಲರ ಶೌರ್ಯಬಲ ಸಮೃದ್ಧಿ ಹೇಳಲ್ಪಟ್ಟಿದೆ (ಶಟ್ರಾರ್ ತಿ ಱಲಳಿಯಚ್ಚೆನ್ರು ಶೇರುಚ್ಚೆಯ್ಯುಂ). ಭಗವಂತನಿಗೆ ಆಶ್ರಿತ ಸಂರಕ್ಷಣೆಯೇ ಮುಖ್ಯತಮ. ಇದರ ನಿರ್ವಹಣೆಗಾಗಿ ಹಿಂಸೆಯನ್ನು ಅನಿವಾರ್ಯವಾಗಿ ಮಾಡಬೇಕಾದಲ್ಲಿ ಅದೂ ಗುಣವೇ. ಅನ್ಯಥಾ ದೋಷವಾಗದು. ಶತೃಗಳಿಂದ ರಕ್ಷಿಸಿ ಪ್ರಜೆಗಳಿಗೆ ರಕ್ಷಣೆ ಕೊಡಬೇಕಾದ ರಾಜರೇ, ಕಂಸಾದಿಗಳಂತೆ ಪರಮನೀಚ, ಪ್ರಜಾಶತೃವಾದಲ್ಲಿ, ಅಂತಹ ಶತೃಗಳನ್ನು ನಿಗ್ರಹಿಸುವುದು ಧರ್ಮವೇ ಆಗಿದೆ. ಅಲ್ಲದೆ ಧರ್ಮಕ್ಕೆ ಉಪರೋಧ ಬಂದಾಗ, ಕ್ಷತ್ರಿಯರಲ್ಲದೆ ಇತರ ವರ್ಣದವರೂ ಶಸ್ತ್ರಧಾರಣೆ ಮಾಡಬೇಕೆಂದೂ ಶಾಸ್ತ್ರವಿದೆ. ದ್ರೋಣ, ಅಶ್ವತ್ತಾಮ ಪ್ರಭೃತಿ ಬ್ರಾಹ್ಮಣರು ಶಸ್ತ್ರ ಪರಿಗ್ರಹಣಮಾಡಿ ಘೋರ ಯುದ್ಧಗಳನ್ನು ನಡೆಸಿದುದಕ್ಕೂ ಇದೇ ಆಧಾರ.
ಕುಟ್ರಮೊನ್ರಿಲ್ಲಾದ ಕೋವಲರ್ತಂ ಪೊರ್ಕೊಡಿಯೇ- ಯಾವ ದೋಷವೂ ಇಲ್ಲದ, ನಿರ್ದೋಷಿಗಳಾದ ಗೊಲ್ಲರ ವಂಶದಲ್ಲಿ ಹುಟ್ಟಿ ನೀನು ದೋಷಿಯಾಗಬಹುದೇ? ಎಂದು ಈ ರೀತಿಯಾಗಿ ಇಲ್ಲಿ ಮಲಗಿರುವ ಗೋಪಿಯನ್ನು ಸಂಬೋಧಿಸುತ್ತಾರೆ. “ನಾವಿಷ್ಟು ಮಂದಿ ಬಂದಿರುವಾಗ ನೀನು ಹೊರಕ್ಕೆ ಬಾರದಿರುವುದು ದೋಷ” ಎಂಬುದು ಅವರ ಭಾವನೆ.” ಶಿಷ್ಯಗುಣ ಪೂರ್ತಿಯುಳ್ಳವಳಾಗಿ ಪರಮಯೋಗ್ಯಳಾದ ನೀನು ಹೀಗೇಕೆ ಮಲಗಿರುವೆ? ಏಳು!” ಎಂದು ಕೂಗುತ್ತಾರೆ.
ಹೊನ್ನಿನ ಬಳ್ಳಿಯಂತೆ ಅತ್ಯಂತ ಸ್ಪೃಹಣೀಯಳೇ! ರೂಪಗುಣವುಳ್ಳವಳೇ ! ಎಂದು ಕರೆಯುತ್ತಾರೆ. ಇಲ್ಲಿ ಶೌರ್ಯಬಲೈಶ್ವರ್ಯಾದಿ ಕಲ್ಯಾಣಗುಣ ಪರಿಪೂರ್ಣ, ಪ್ರಾಕೃತಹೇಯ ಗಂಧರಹಿತನಾದ ಶ್ರೀಕೃಷ್ಣನ ಸಂಶ್ಲೇಷಕ್ಕೆ ವಯಸ್ಸು, ರೂಪ ಗುಣ ಅಭಿಜಾತ್ಯಗಳಿಂದಲೂ ಇವಳಿಗೆ ಸ್ವರೂಪಯೋಗ್ಯತೆಯುಂಟೆಂಬುದು ಇಲ್ಲಿ ಮಿಗಿಲಾಗಿ ವ್ಯಂಜಿತವಾಗಿದೆ. ಆದ್ದರಿಂದ ಇಲ್ಲಿ ಎಬ್ಬಿಸಲ್ಪಟ್ಟ ಗೋಪಿಯು ಬಹುಶ್ರುತ.
ಪುಟ್ರರವಲ್ ಗುಲ್ ಪುನಮಯಿಲೇ ಪೋದರಾಯ್- ಹುತ್ತದಿಂದ ಹೊರಟ ಸರ್ಪದಂತೆ ಅತಿವೇಗವಾಗಿ ಬರಬೇಕು. ಮೇಘವನ್ನು ಕಂಡ ವನಮಯೂರದ ಹಾಗೆ ಅಲಕಭಾರದ ಸೌಂದರ್ಯದಿಂದ ಕೂಡಿ ಸಕೌತುಕ ನರ್ತನದೊಂದಿಗೆ ಬಂದು ಎಲ್ಲರನ್ನು ಆಕರ್ಷಣೆಯಿಂದ ಸೆಳೆದು ನಿನ್ನನ್ನೇ ನಾವೆಲ್ಲಾ ಅನುಸರಿಸಿ ಬರುವಂತೆ ನಡೆದು ಬಾ. ನಮ್ಮ ಆರ್ತಧ್ವನಿಯನ್ನು ಕೇಳಿಯೂ ನೀನು ಎದ್ದು ಬರದೇ ಇರುವುದರ ಅರ್ಥವೇನು? ಮೇಘವರ್ಣನೂ, ಮಹಾಬಾಹುವೂ ಆದ ಶ್ರೀಕೃಷ್ಣನ ನಾಮಗಳನ್ನು ಗಾನಮಾಡುವುದಕ್ಕೆ ಹೊರಟು ಬಾ, ಎಂದು ಗೋದಾದೇವಿಯು ತನ್ನ ಮಿಕ್ಕೆಲ್ಲ ಸಖಿಯರೊಡನೆ ಕೂಡಿ ಕರೆಯುತ್ತಾಳೆ.
“ಸರ್ವೋಪನಿಷದೋ ಗಾವೋ ದೋಗ್ಧಾ ಗೋಪಾಲ ನಂದನಃ। ಪಾರ್ಥೋ ವತ್ಸ: ಸುಧೀರ್ಭೋಕ್ತಾ ದುಗ್ದo
ಗೀತಾಮೃತಂ ಮಹತ್” ಎಂಬುದು ಇಲ್ಲಿ ಭಾವ್ಯ. ಗೋಕುಲದ ಸಂಪತ್ ಸೌಭಾಗ್ಯವನ್ನು ಈ ಪದ್ಯವು ವಿವರಿಸುತ್ತದೆ. ಶ್ರೀಕೃಷ್ಣನು ಎಲ್ಲ ಗೋಪಿಯರಿಗೂ ಆಶ್ರಯದಾತನಾದ ಹರಿಚಂದನ ವೃಕ್ಷದಂತೆ. ಇಂಥವನ ದರ್ಶನ ಮಾತ್ರದಿಂದಲೇ ಇಲ್ಲಿಯ ಗೋಪಿಯರಿಗೆ ಮಹದಾನಂದವಾಗುತ್ತಿತ್ತು. ಗುಣಸಂಪನ್ನ ಶಿಷ್ಯನೂ ಕೂಡ ಗುರುಪೀಠಕ್ಕೆ ಅರ್ಹನು. ಅಂತಹ ಯೋಗ್ಯ ಶಿಷ್ಯನಿಗೆ ಹಸಿವು, ವ್ಯಾಧಿಗಳ ಬಾಧೆ ಇರುವುದಿಲ್ಲ. ನವಿಲನ್ನು ನೋಡಿ ಹಾವು ಓಡಿಹೋಗುವಂತೆ, ಕುಟಿಲಮತಿಗಳು ಈ ಶಿಷ್ಯನನ್ನು ಕಂಡು ಓಡಿಹೋಗುವರು. ಆಚಾರ್ಯನು ಶಿಷ್ಯನ ಆತ್ಮಯಾತ್ರೆಯಲ್ಲಿ ಅವಹಿತನಾಗಿರಬೇಕು. ಶಿಷ್ಯರು ಆಚಾರ್ಯರ ದೇಹ ಯಾತ್ರೆಯಲ್ಲಿ ಅವಹಿತರಾಗಿರಬೇಕು. ಖ್ಯಾತಿ, ಲಾಭ-ಪೂಜೆಗಾಗಿ ಆಚಾರ್ಯನು ಉಪದೇಶಿಸುವುದಿಲ್ಲ. ಶಿಷ್ಯರನ್ನು, ಹಸುಗಳು ಕರುಗಳನ್ನು ನೆನೆಯುವಂತೆ ನೆನೆದು ವಾತ್ಸಲ್ಯದಿಂದ ಉಪದೇಶಿಸುವ ಆಚಾರ್ಯ ಇಲ್ಲಿ ವಿವಿಕ್ಷಿತ.
ತತ್ವಾರ್ಥ: ಆಚಾರ್ಯನ ದಿವ್ಯ ಮಂಗಳ ವಿಗ್ರಹದ ಸೌಂದರ್ಯವೇ ಶಿಷ್ಯ ಸಂತತಿಗೆ ಅನುಸಂಧೇಯವೆಂಬ ಶಾಸ್ತ್ರಾರ್ಥವೂ ಇಲ್ಲಿ “ಪೊರ್ಕೋಡಿಯೇ”, “ಪುನಮಯಿಲೇ ” – ಎಂಬ ಸಂಭೋದನ ಕ್ರಿಯೆಯಿಂದ ವ್ಯಂಜಿತವಾಗುತ್ತದೆ. ಲತೆ ಆಶ್ರಯ ವೃಕ್ಷವಿಲ್ಲದೆ ಶೋಭಿಸುವುದಿಲ್ಲ, ಅಭಿವೃದ್ಧವೂ ಆಗುವುದಿಲ್ಲ. ಅದು ಸರ್ವಥಾ ಪಾರತಂತ್ರ ಸ್ಪುರಿಸುತ್ತದೆ. ಸದಾಚಾರ್ಯ ಪುರುಷ ಸಂತತಿಯಲ್ಲಿ ಹುಟ್ಟಿ “ನಾ ಬ್ರಹವಿತ್ಕುಲೇ ಭವತಿ” ಎಂಬಂತೆ ಶೋಭಿಸುವ ಮಹನೀಯ.
ವತ್ಸಗಳಿಂದ ಕೂಡಿದ ಹಸುಗಳು ಎಂಬಲ್ಲಿ, ಬಾಲ ಶಿಷ್ಯ ಸಮನ್ವಿತರೆಂದರ್ಥ. ಸದಾ 25 ವರ್ಷ ವಯಸ್ಸುಳ್ಳ ಮುಕ್ತಾತ್ಮರಂತೆ ಆ ಹಸುಗಳು ಕರುಗಳ ಹಾಗೆಯೇ ಇದ್ದವು-ಎನ್ನುವುದರಿಂದ , ಎಷ್ಟೇ ವಯಸ್ಸಾಗಿದ್ದರೂ ಜ್ಞಾನಿ ತನ್ನ ಮಹಿಮೆಯನ್ನು ಪ್ರಕಟಪಡಿಸದೆ ನಿರ್ಮಲ ಚಿತ್ತದಿಂದ, ಬಾಲಕನಂತಿರಬೇಕೆನ್ನುವ ವಿಶೇಷಣ ಭಾವವು ಇಲ್ಲಿ ವ್ಯಕ್ತವಾಗಿದೆ.
ನವಿಲು ತನ್ನ ಗರಿಯಚ್ಚಟೆಗಳು ವಿಪುಲವಾಗಿದ್ದಾಗ್ಯೂ ಒಳಗೇ ಸೇರಿಸಿ ಮುಚ್ಚಿಕೊಂಡಿದ್ದು, ಸಂತೋಷ ಕಾಲಗಳಲ್ಲಿ ಅದನ್ನು ವಿಸ್ತರಿಸಿ ತೋರಿಸುತ್ತದೆ. ಹಾಗೆಯೇ ಮಹಾತ್ಮರು ತಮ್ಮ ಸಕಲವಿದ್ಯಾಪಾರಂಗ ತತ್ವವನ್ನು, ಎಲ್ಲರಿಗೂ ತೋರ್ಪಡಿಸದೆ, ವಿಶೇಷ ಸಮಯದಲ್ಲಿ ಹರ್ಷಪ್ರಕರ್ಷದಿಂದ ಪ್ರಕಾಶಪಡಿಸುತ್ತಾರೆ. ಮಯೂರವು ನೀಲಮೇಘನನ್ನು ಕಂಡರೆ ಸಂಭ್ರಮದಿಂದ ಕುಣಿಯುವಂತೆ, ಮಹತ್ತರ ಭಕ್ತಿಯುಕ್ತರಾದ ಗುರುಗಳೂ ನೀಲಮೇಘಶ್ಯಾಮಲನಾದ ಭಗವಂತನನ್ನು ಅನುಭವಿಸಿ ಹರ್ಷಿಸಿ ನರ್ತಿಸುತ್ತಾರೆ, ಎಂಬಂಥ ಅರ್ಥಗಳು ಈ ಪಾಶುರದಲ್ಲಿ ವ್ಯಕ್ತವಾಗಿದೆ.
ಭಗವದಾಜ್ಞೆ, ಭಗವದಿಚ್ಛೆಯಂತೆ ನಮ್ಮ ನಮ್ಮ ಕರ್ಮಾನುಸಾರವಾಗಿ ಸಂಸಾರಕ್ಕೆ ಬಂದಂತಹ ಜೀವರೆಲ್ಲರೂ ಸಂಸಾರದಿಂದ ಮುಕ್ತಿಪಡೆಯಬೇಕಾದರೆ ಪರಮಾತ್ಮನಲ್ಲಿ ಮಾಹಾತ್ಮ್ಯಾಜ್ಞಾನ ಪೂರ್ವಕವಾಗಿ, ನಿಶ್ಚಲವಾದ ಪರಿಶುದ್ಧವಾದ ಪ್ರೀತಿಯನ್ನು ಮಾಡಬೇಕಾಗುತ್ತದೆ. ವಿಜಯದಾಸಾರ್ಯರು ಹೇಳಿದ ರೀತಿಯಲ್ಲಿ ತೈಲಧಾರೆಯಂತೆ ಅವಿಚ್ಛಿನ್ನವಾದ ಪ್ರೀತಿ.. ಆ ಪ್ರೀತಿಯೇ ಭಕ್ತಿ..
ದ್ವೇಷದಲ್ಲಿಯಾಗಲಿ ಪರಿಹಾಸ್ಯದಲ್ಲಿಯಾಗಲೀ
ಭಾಸದಲ್ಲಿ ಆಗಲಿ ಆಭಾಸದಲ್ಲಿ ಆಗಲೀ
ಕ್ಲೇಶದಲ್ಲಿ ಆಗಲೀ ಅಕ್ಲೇಶದಲ್ಲಿ ಆಗಲೀ
ಮೀಸಲಾದ ಅಜ್ಞಾನದಲ್ಲಿ ಆಗಲಿ
ಆಶೆಯನ್ನು ಬಿಟ್ಟು ವಿಶೇಷ ಭಕುತಿಯಿಂದಲಿ
ದಾಸನೆಂದು ಕೈಯ್ಯ ಮುಗಿದು ನೀ ಸಲಹು ಹರಿ ಎನಲು ಏಸೇಸು ಜನ್ಮದ ಅಘ ನಾಶವಾಗುವದು
ಈಶ ನಹುಷ ವಿಜಯವಿಟ್ಠಲ ಅಶೇಷ ದೋಷದೂರ
ವಾಸವಾಗಿ ಹೃದಯದೊಳು ವಾಸನಾಮಯ ನೆನಿಸುವ
(ವಿಷಯ ಸಂಗ್ರಹ : “ತಿರುಪ್ಪಾವೈ ರಸಸ್ವಾಧಿನಿ” – ಬರೆದವರು ವಿದ್ವಾನ್ ವೇದಾನ್ತ ಸಾರಜ್ಞ
ಶ್ರೀ ಎಸ್. ಕೃಷ್ಣಾತಾತಾಚಾರ್ಯ )
(1) ಗಮಕ ಕವಿತಾ ವನಜ ಭಾಸ್ಕರ , ಗಮಕ ರತ್ನಾಕರ ಶ್ರೀಯುತ ಬಿ.ಎಸ್ .ಎಸ್ ಕೌಶಿಕ್ ರವರ ಶ್ರೀಮದಾಂಡಾಳ್ ಮಹಾ ವೈಭವಂ -ತಿರುಪ್ಪಾವೈ – ಮೂಲ, ಕನ್ನಡ ತಾತ್ಪರ್ಯ , ಷಟ್ಪದಿ, ಭಾವಾರ್ಥ , ಚೌಪದಿ )
Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.