close logo

ಕನ್ನಡದಲ್ಲಿ ತಿರುಪ್ಪಾವೈ ಲೇಖನಮಾಲೆ – ಪಾಶುರಂ 9

ಚಿತ್ರಕೃಪೆ : ಕೇಶವ್ ವೆಂಕಟರಾಘವನ್ (ಪಾಶುರಂ – 9)

ಶ್ರೀ ನೀಳಾ  ದೇವೈ ನಮಃ

 ತಿರುಪ್ಪಾವೈ ಲೇಖನಮಾಲೆಯ ಹಿಂದಿನ ಲೇಖನಗಳನ್ನು ಈ ಕೆಳಗೆ  ಓದಬಹುದು :

9. ಪಾಶುರಂ 

ತೂಮಣಿ ಮಾಡತ್ತುಚ್ಚುಟ್ರುಂ ವಿಳಕ್ಕೆರಿಯ

ಧೂಪಂ ಕಮಳ ತ್ತುಯಿಲಣೈ ಮೇಲ್ ಕಣ್ ವಳರುಂ

ಮಾಮಾನ್ ಮಗಳೇ ! ಮಣಿಕ್ಕದವಂ ತಾಳ್ ತಿರವಾಯ್

ಮಾಮೀರ್! ಅವಳೈ ಯೆಳುಪ್ಪೀರೋ ಉನ್ ಮಗಳ್ ದಾನ್

ಊಮೈಯೋ ? ಅನ್ರಿಚ್ಚೆವಿಡೋ ? ಅನಂದಲೋ

ಏ ಮಪ್ಪೆರುಂದುಯಿಲ್ ಮಂದಿರಪ್ಪಟ್ಟಾಳೋ ?

ಮಾಮಾಯನ್ ಮಾಧವನ್ ವೈಕುಂದನ್ ಎನ್ರೆನ್ರು

ನಾಮಂ ಪಲವುಂ ನವಿನ್ರೇಲೋ ರೆಂಬಾವಾಯ್ ॥

ಶ್ರೀಯುತ ಕೌಶಿಕರ ಕನ್ನಡ ಭಾಷಾಂತರ ಹೀಗಿದೆ:

ವರಮಣಿಗಳಿಂದೆಸೆವ ಭವ್ಯತರ ಮಾಳಿಗೆಯೊ-

ಳುರೆ ಬೆಳಗಿ ಪ್ರಜ್ವಲಿಪ ದಿವ್ಯಸೊಡರುಗಳೆಸೆಯೆ 

ಪರಮಸೌಗಂಧದಿo, ಮಘಮಘಿಪ ಸಾಮ್ರಾಣಿ ಧೂಮ ತುಂಬಿರೆ ಸುತ್ತಲು| 

ವರಲಕ್ಷ್ಮಿ ಶೇಷತಲ್ಪ ದೊಳಿಹಳು ಮೇಲೆದ್ದು 

ತೆರೆಯಲೀ ಮಾಣಿಕ್ಯ ಕದದ ಬೀಗವನಾಕೆ-

ಗೊರೆವೆವೇಳಿಸಿರತ್ತೆ, ಮಾಧವನ ಗುಣಗಣವ, ಸಾಹಸ್ರನಾಮಂಗಳ ।।೯।।

ಶ್ರೀಕೃಷ್ಣನ ವಿಶೇಷಾಭಿಮಾನವನ್ನು ಪಡೆದು, ‘ನಾವಿರುವಲ್ಲಿಗೆ ಅವನು ತಾನೇ ಬರುವನು’ ಎಂಬ ನಂಬಿಕೆಯಿಂದ, ಅತಿಯಾದ ಗರ್ವದಿಂದ, ಕೃಷ್ಣನ ಬರುವಿಕೆಯನ್ನೇ ಎದಿರು ನೋಡುತ್ತಾ ಮಲಗಿರುವ ಪ್ರಗಲ್ಬೆಯಾದ ಸಖಿಯೊಬ್ಬಳನ್ನು, ಪರಿಹಾಸವಾಗಿ ಒಂದು ಬಾಂಧವ್ಯವನ್ನು ಪುರಸ್ಕರಿಸಿ, ಶ್ರೀಕೃಷ್ಣನ ನಾಮಗಳನ್ನು ಹೇಳಿ ಸಾಕೂತವಾಗಿ ಇಲ್ಲಿ ಎಬ್ಬಿಸುವರು. 

ಸ್ವಚ್ಛ, ನಿರ್ಮಲವಾದ ನವರತ್ನ ಖಚಿತವಾದ ಸೌಧದಲ್ಲಿ ಎಲ್ಲ ಕಡೆಗಳಲ್ಲಿಯೂ ದೀಪಗಳು ಜ್ವಲಿಸುತ್ತಿರಲು, ಚಂದನಾಗರು ಧೂಪಗಳೆಲ್ಲೆಲ್ಲಿಯೂ ಸುವಾಸನೆಯನ್ನು ಬೀರುತ್ತಿರಲು, ಸುಖೋಚಿತವಾದ ಪುಷ್ಪಮಯ ಹಂಸ ತೂಲಿಕಾತಲ್ಪದಲ್ಲಿ, ಕೃಷ್ಣನ ಬರುವಿಕೆಯನ್ನೇ ಕಾಯುತ್ತಾ, ಸುಖವಾಗಿ ನಿದ್ರಿಸುತ್ತಿರುವ ಮಾತುಲಪುತ್ರಿಯೇ! ಎಂದು ಗೋದಾ ತನ್ನ ಇನ್ನಿತರ ಸಖಿಯರೊಡನೆ ಸೇರಿ ಸೋದರ ಮಾವನ ಮಗಳನ್ನು ಎಬ್ಬಿಸುತ್ತಿದ್ದಾಳೆ.  

ದೀಪಃ ಪಾಪಹರೋನೃಣಾಮ್, ದೀಪಃ ಆಪನ್ನಿವಾರಕಃ| ದೀಪೋವಿಧತ್ತೇ ಸುಕೃತಂ ದೀಪಃ ಸಂಪ್ರಾದಯಕಃ| ದೇವಾನಾo  ತುಷ್ಠಿದೋ ದೀಪಃ ಪಿತೃಣಾo ಪ್ರೀತಿಧಾಯಕಃ| ತಸ್ಮಾದ್ದೀಪೋಗೃಹೇ ಪೂಜ್ಯ: ಗೃಹಸ್ಥೈ: ಶುಭಮಿಪ್ಸುಭಿ: । ದೀಪಾನಾರೋಪಯೇದ್ವಿಷೋ: ಮಂದಿರೇಭ್ಯಂತರೇ ಬಹಿ:। ಸರ್ವ ಪಾಪ ವಿಶುದ್ಧಾತ್ಮ ವಿಷ್ಣುಲೋಕೇ ಮಹೀಯತೇ” ಎಂಬಂತೆ ಒಳಗೆ ದೀಪ ಉರಿಯುತ್ತಿರುವುದು ಸುಮ್ಮನೆ ಅಲ್ಲ, ಶ್ರೀಕೃಷ್ಣ ಸನ್ನಿಹಿತನಾಗಲೆಂದು. ಎಲ್ಲೆಲ್ಲಿಯೂ ದೀಪಗಳು, ಚಂದನ ಅಗರು, ಧೂಪ, ಹೊಗೆ ಕಾಣಿಸದ ಹಾಗೆ ಪರಿಮಳ ಪ್ರವಹಿಸುತ್ತಿದೆ. ನಮ್ಮ ಕಣ್ಣಿಗೆ ಕಾಣದಂತೆ ಸಖಿಯು ಹೊಗೆಯೆಬ್ಬಿಸಿದರೂ ಚಂದನದ ಪರಿಮಳವನ್ನು ಮುಚ್ಚಿಡಲಾದೀತೇ? “ಓ ಮಣಿವಣ್ಣಾ, ನಾರಾಯಣಾ ನಾನು ಹೀಗೆ ಸಂಕಟಪಡುತ್ತಿರಲು ನೀನು ಶೇಷಶಯ್ಯೆಯಲ್ಲಿ ಮಲಗಿರುವುದೇ?” ಎಂದು ಗಜೇಂದ್ರನು ವಿಷ್ಣುವನ್ನು ಕರೆದಂತೆ, ಗೋದಾದೇವಿಯು ಇಲ್ಲಿ ಧ್ವನಿ ಮಾಡುತ್ತಾಳೆ. ಸಖಿಯನ್ನು ಉದ್ದೇಶಿಸಿ, “ನೀನು ನಮಗೆ ಸ್ವಾಮಿನಿ. ಅದಕ್ಕಾಗೇ ಇಷ್ಟು ಸಹಿಸಿದೆವು. ಇನ್ನು ನಿನ್ನ ನೆಂಟತನವನ್ನು ಕಂಡವರಾದ ನಾವು ನಿನ್ನನ್ನು ಬಿಡುವೆವೋ?  ಹೇಳು (ಮಾಮಾನ್ ಮಕಳೇ) ಮಾವನ ಮಗಳೇ! “ ಎನ್ನುತ್ತಾಳೆ. ಆದರೂ ಅವಳು ಮಲಗಿಯೇ ಇರಲು, ಅವಳ ತಾಯಿಯನ್ನು ಸಂಬೋಧಿಸಿ- “ಮಾಮಿ, ನೀವಾದರೂ ಅವಳನ್ನು ಎಬ್ಬಿಸಬಾರದೇ? ನಿಮ್ಮ ಮಗಳು ಮೂಗಿಯೇ, ಇಷ್ಟು ಕೂಗಿದರೂ ಏಳಲೊಳ್ಳಲು. ಕಿವುಡಿ ಏನು? ಇಲ್ಲ ಆಲಸ್ಯಳೋ? ಯಾರಾದರು ಮಂಕು ಬೂದಿಯನ್ನು ಎರಚಿದ್ದಾರಾ? ಎಲೆ ಗೋಪಿ ಇಷ್ಟು ಅಹಂಕಾರ ಬೇಡಮ್ಮ. ಏಳು. ಅವನು ಮಾಯಾವಿ. ಮಾಯಾದೇವಿಯಾದ ಲಕ್ಷ್ಮಿ ಅವನ ಹೆಂಡತಿ ಬೇರೆ. ನೀನು ಹೀಗೆ ಹಠ ಹಿಡಿದೆಯಾದರೆ ಅವನು ವೈಕುಂಠಕ್ಕೆ ಹೊರಟು ಹೋಗುವನು. ತಿಳಿಯಿತೇ? ಜೋಕೆ!!” ಎನ್ನುತ್ತಾಳೆ. 

ಆಗ ಮಲಗಿದ್ದ ಗೋಪಿಯು ಎದ್ದು ಓಡಿ ಬರುತ್ತಾಳೆ. ಗೋದೆಯು ನಗುತ್ತ ಹೀಗೆನ್ನುತ್ತಾಳೆ- ಶ್ರೀಕೃಷ್ಣನೇ ಪರತತ್ವ. ಲಕ್ಷ್ಮೀದೇವಿಯು ಸವತಿಯಲ್ಲ. ನಮ್ಮ ರಕ್ಷಕ ದೈವ. ಅವಳಿರುವುದರಿಂದಲೇ ನಾವು ಅವನೆಡೆಗೆ ಧೈರ್ಯವಾಗಿ ಹೋಗಬಹುದು. ಅವನೇ ರಸರೂಪನಾದ ವೈಕುಂಠ. ಇಂತಹ ಪರಮ ಪುರುಷನ ನಾಮ ಸಂಕೀರ್ತನೆ ಸಕಲ ಕಷ್ಟ ನಿವಾರಣೆಗೆ ದಿವ್ಯಔಷಧ.  

ಯುಧಿಷ್ಠಿರನು ಭೀಷ್ಮನನ್ನು ಹೀಗೆ ಕೇಳುತ್ತಾನೆ, 

“ಕೋಧರ್ಮ: ಸರ್ವ ಧರ್ಮಾಣಂ ಭವತಃ ಪರಮೋ ಮತಃ| ಕಿಂ ಜಪಾನ್ ಮುಚ್ಯತೇ ಜಂತು: ಜನ್ಮ   ಸಂಸಾರ ಬಂಧನಾಥ್?”

(ಯಾವುದು ಎಲ್ಲಾ  ಧರ್ಮಗಳಿಗೂ ಮಿಗಿಲಾದ ಧರ್ಮ ಎಂದು ನಿಮ್ಮ ಅಭಿಮತ? ಯಾವುದನ್ನ ಜಪಿಸುವುದರಿಂದ ಮಾನವ ಹುಟ್ಟಿನಿಂದ ಹಾಗೂ ಸಂಸಾರ ಬಂಧನದಿಂದ ಮುಕ್ತಿ ಪಡೆಯುತ್ತಾನೆ?)

ಆಗ ಭೀಷ್ಮರು- 

ಜಗತ್ಪ್ರಭುo ದೇವದೇವಮನಂತಂ ಪುರುಷೋತ್ತಮಮ್ । ಸ್ತುವನ್ನಾಮಸಹಸ್ರೇಣ ಪುರುಷಃ ಸತತೋತ್ತಿತಃ ।।”

(ಅಳಿವಿರದ, ಹಿರಿಯನಾದ ಹಿರಿದೈವವನ್ನು ಆತನ ಸಾವಿರನಾಮಗಳಿಂದ ಸ್ತುತಿಸುತ್ತಾ , ತಲೆಬಾಗಿ ಆರಾಧಿಸಬೇಕು. ಎಲ್ಲಾ ಧರ್ಮಗಳನ್ನು ಬಲ್ಲವನನ್ನು, ಜೀವಗಳಿಗೆ ಜಸದ ಏರು ತೋರುವನನ್ನು, ಎಲ್ಲಾ  ಜೀವಗಳಿಗೂ ಬಾಳನಿತ್ತವನನ್ನು, ಹಿರಿಯ ತತ್ವವಾದ ಆ ನಾರಾಯಣನನ್ನು ಆರಾಧಿಸಬೇಕು ಎನ್ನುತ್ತಾರೆ. )

ಇಲ್ಲಿ ಗೋದೆಯು ತನ್ನ ಸೋದರಮಾವನ ಮಗಳನ್ನು ಎಬ್ಬಿಸುತ್ತಾ, ಶ್ರೀಕೃಷ್ಣನನ್ನು ನೆನೆಯುತ್ತಾಳೆ. ಇದು ಪರಮಾತ್ಮಾನುಭವ. ಈ ಅನುಭವ ತಿರುಮಳಿಶೈ ಆಳ್ವಾರರ ಅನುಭವಕ್ಕೆ ಹೊಂದುತ್ತದೆ. ಅವರನ್ನು ಧ್ಯಾನಯೋಗದಿಂದ ಎಬ್ಬಿಸುವ ಪದ್ಯವೂ ಹೌದು. ಇವರಿಗೆ ‘ಭಾರ್ಗವ’ ಎನ್ನುವ ಇನ್ನೊಂದು ಹೆಸರೂ ಉಂಟು. ಇವರು ಬಹಳ ವರ್ಷ ಕಿವುಡರೂ-ಮೂಗರಂತೆ ಇದ್ದರು. ಪರಮಾತ್ಮನನ್ನು ‘ಮಾಮ’ ಎಂದು ಕರೆದವರು. ಪರತಂತ್ರ ನಿಷ್ಕರ್ಷೆ ಮಾಡಿದವರು. ಮೋಕ್ಷಕೊಡದ, ಶಕ್ತಿಯಿಲ್ಲದ ದೇವರ ವರ ಬೇಡವೆಂದರು. ಭಗವಂತನ ನಿಂತ, ಕುಳಿತ, ಮಲಗಿದ ಭಾವ ಭಂಗಿಗಳನ್ನು “ತಿರುಚ್ಚಂದಾವ್ರಿತಂ”  ಎಂಬ ೪೦೦ಕ್ಕೂ ಹೆಚ್ಚು ಪಾಶುರಗಳಲ್ಲಿ ಬಹು ಚೆನ್ನಾಗಿ ಸ್ತುತಿಸಿದ್ದಾರೆ. ರತ್ನ ಖಚಿತ ತಿರುಮಾಳಿಗೆ ವೇದಮಂದಿರವೆಂದೂ, ಉರಿಯುವ ದೀಪಗಳು ಲಕ್ಷ್ಮಿ-ನಾರಾಯಣರ ಇರುವಿಕೆಯನ್ನು ಸದಾ ತೋರಿಸುವುದೆಂದೂ, ಧೂಪದ ಪರಿಮಳವೇ ಭಗವಂತನ ಆನಂದಾನುಭವವೆಂದೂ, ಅನುಷ್ಠಾನದಿಂದ ಎಲ್ಲೆಲ್ಲೂ ಕೃಷ್ಣಾನುಭವ  ಉಕ್ಕುತ್ತಿರಲು, ಬಾಹ್ಯ ಪ್ರಪಂಚದ ಜ್ಞಾನವೇ ಇಲ್ಲದಂತೆ ಮೈ ಮರೆತು ಜ್ಞಾನಾನುಷ್ಠಾನ ಪಡೆದ ಆಚಾರ್ಯರನ್ನು ಸೇವಿಸಬೇಕೆಂದೂ ಈ ಪದ್ಯವು ಸೂಚಿಸುತ್ತದೆ. ಏಕಾಗ್ರತೆಯಿಂದ ಭಗವಂತನ ಸಹಸ್ರನಾಮಗಳ ಕೀರ್ತನೆ ಮಾಡುವುದು ಅವಶ್ಯಕ. ಆಚಾರ್ಯರಿಗೆ ವಿಧೇಯನೂ, ಪ್ರಿಯನೂ ಆಗಿರುವವನೇ ಉತ್ತಮ ಭಾಗವತ. ಇವನು ವೈರಾಗ್ಯ ನಿಧಿಯಾಗಿ, ಲೌಕಿಕ ವಿಷಯಗಳಲ್ಲಿ ನಿದ್ದೆ ಮಾಡುವನು. ಅಂತರಂಗದಲ್ಲಿ ಪರಮಾತ್ಮನನ್ನು ಸೇವಿಸುತ್ತ ಬಾಹ್ಯ ವಿಷಯಗಳಿಗೆ ಕಿವುಡನೂ, ಮೂಗನೂ ಆಗಿರುವನು. ಇವನಿಗೆ ಪರಮಾತ್ಮನೇ ಸರ್ವಸ್ವ. ಇಂತಹವರಿಗೆ ಪ್ರಪತ್ತಿಯನ್ನು ಅನುಷ್ಠಾನ ಮಾಡುವಂತೆ ಆಚಾರ್ಯರು ಪ್ರೇರೇಪಿಸುವರು. ಇದು ಈ ಪಾಶುರದಲ್ಲಿ ತೋರುವ ಇನ್ನೊಂದು ಭಾವ. 

ತತ್ವಾರ್ಥ: ಭಗವದನುಭವ ನಿಷ್ಟರಲ್ಲಿ ಎರಡು ವಿಧ:

೧. “ವಿವಕ್ತ ದೇಶೇ ಚ ಸುಖಾಸನಸ್ತತಃ” – ಏಕಾಂತದಲ್ಲಿದ್ದು ಬಾಗಿಲು ಹಾಕಿಕೊಂಡು ತಮ್ಮೊಳಗೇ ಭಗವದನುಭವ ಮಾಡುವವರು. 

೨.   “ನಿರತೈ: ಭವದೇಕಭೋಗೈ:ನಿತೈರನುಕ್ಷಣ ನವೀನ್ರಸಾದ್ರ೯ಭಾವೈ; ” –  ರಹಸ್ಯಾನುಭವದಲ್ಲಿ ಲೇಶವೂ ತೃಪ್ತಿಯಿಲ್ಲದವರಾಗಿ, ಅನುಭವ ರಸಿಕರಾದ ಭಾಗವತರೊಡನೆ ಕೂಡಿಯೇ ಮುಕ್ತಕಂಠದಿಂದ ಭಗವದನುಭವ ಮಾಡಿಕೊಂಡು ಸಂತುಷ್ಟರಾಗಿರುತ್ತಾರೆ. ಈ ವಿಧವಾದ ಎರಡನೆಯ ಅನುಭವ ಪ್ರಕಾರವನ್ನು ಇಲ್ಲಿ ಪ್ರಾರ್ಥಿಸುತ್ತಾರೆ. ಬಾಗಿಲನ್ನು ತೆರೆ ಎನ್ನುವ ಮೂಲಕ , ಒಟ್ಟಾಗಿ ಸೇರಿ ಆ ಪರಮಾರ್ಥದ ಅನುಭವವನ್ನು ಪಡೆಯೋಣ, ನಾಮಸಂಕೀರ್ತನೆ ಮಾಡೋಣವೆಂಬುದು ಇದರ ಹೃದಯ ಭಾವ. 

ಅಜ್ಞಾನವೇ ಇಲ್ಲಿ ಮಣಿಮಾಡ (ತೂಮಣಿ ಮಾಡತ್ತು) ಅಥವಾ ರತ್ನ ಸೌಧವೆಂಬುದು. ವೇದಾಂತಿಗಳಿಗೆ ಪ್ರಜ್ಞೆ ಎಂಬುದೇ ಅಂತಹ ಸೌಧ ಅಥವಾ ಮಹಲು. ಅಂತಹ ಪ್ರಾಸದ ನಿರ ವದ್ಯ ರತ್ನ ಖಚಿತ (ಮಣಿಮಾಡ)

ಎಂದರೆ, ನವರತ್ನಗಳು ಎಂದು ಪ್ರಸಿದ್ದವಾದ ಸಂಬಂಧಜ್ಞಾನದಿಂದ  ಉಂಟಾದ ಶೋಭೆ. ಪಿತ , ರಕ್ಷಕ, ಶ್ಯೆಷಿ, ಭರ್ತ, ಪತ್ನಿ, ಜ್ಞೇಯ, ಜ್ಞಾನ, ಭೋಕ್ತ, ಹಾಗು ಭೋಗ್ಯ. ಈ ವಿಧವಾದ ಸಂಬಂಧ ಜ್ಞಾನವೇ ಪ್ರಜ್ಞೆಗೆ ಪರಮ ಪ್ರಯೋಜನ.  ಯಾರು ಈ ಒಂಭತ್ತು ಪರಮ ವಿಲಕ್ಷಣವಾದ ಸಂಬಂಧ ಜ್ಞಾನದಿಂದ ಹರ್ಷ ಪ್ರಕರ್ಷವನ್ನು ಅನುಭವಿಸಿ ಪರಮಾತ್ಮನೊಡನೆ ಹೊಂದುವಂತೆ ಮಾಡುವರೋ ಅವರೇ ಚೇತನೋದ್ಧಾರ ಮಾಡುವ ಆಚಾರ್ಯರು. ಬಾಹ್ಯ ವಿಷಯದಲ್ಲಿ ಕುರುಡನೂ ಮೂಕನೂ ಆದವನು ಪರಮಾತ್ಮನಿಗೆ ಅತ್ಯಂತ ಪ್ರಿಯನು. ಸಮಾಧ್ಯವಸ್ಥೆಯಲ್ಲಿ ಭಗವದುನುಭವದಲ್ಲಿಯೇ ಐಕಾಗ್ರ್ಯವುಳ್ಳ ಆಚಾರ್ಯನೇ ನಮಗೆ ಆದರ್ಶ. 

ಆಚಾರ್ಯನಿಂದ ಭಗವನ್ನಾಮ ಸಂಕೀರ್ತನೆಯನ್ನು ಕೇಳುವುದರಿಂದ ಜ್ಞಾನ-ಕರ್ಮಗಳ ಪರಸ್ಪರ ಸಂಯೋಗವು ಹೊಂದಿ ಪರಮಗತಿ ಸಿಗುವಂತೆ ಮಾಡುತ್ತದೆ ಎಂಬ ಸೂಚನೆಯು ಇಲ್ಲಿ ವ್ಯಕ್ತವಾಗಿದೆ.

(ವಿಷಯ ಸಂಗ್ರಹ : “ತಿರುಪ್ಪಾವೈ ರಸಸ್ವಾಧಿನಿ” – ಬರೆದವರು ವಿದ್ವಾನ್ ವೇದಾನ್ತ ಸಾರಜ್ಞ

   ಶ್ರೀ ಎಸ್. ಕೃಷ್ಣಾತಾತಾಚಾರ್ಯ )

(1) ಗಮಕ ಕವಿತಾ ವನಜ ಭಾಸ್ಕರ , ಗಮಕ ರತ್ನಾಕರ ಶ್ರೀಯುತ ಬಿ.ಎಸ್ .ಎಸ್ ಕೌಶಿಕ್  ರವರ  ಶ್ರೀಮದಾಂಡಾಳ್ ಮಹಾ ವೈಭವಂ -ತಿರುಪ್ಪಾವೈ – ಮೂಲ, ಕನ್ನಡ ತಾತ್ಪರ್ಯ , ಷಟ್ಪದಿ, ಭಾವಾರ್ಥ , ಚೌಪದಿ )

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply