close logo

ಕನ್ನಡದಲ್ಲಿ ತಿರುಪ್ಪಾವೈ ಲೇಖನಮಾಲೆ – ಪಾಶುರಂ 3

ಚಿತ್ರಕೃಪೆ : ಕೇಶವ್ ವೆಂಕಟರಾಘವನ್ (ಪಾಶುರಂ – 3)

ಶ್ರೀ ನೀಳಾ  ದೇವೈ ನಮಃ

ಮೊದಲೆರಡು   ಪಾಶುರಂಗಳಲ್ಲಿ ಗೋದಾದೇವಿಯು ಮಾರ್ಗಶೀರ್ಷ ಮಾಸದ ಮಹಿಮೆಗಳನ್ನು ಹೇಳುತ್ತಾ, ತನ್ನ ಸಖಿಯರನ್ನು ಎಬ್ಬಿಸುತ್ತಾ, ಭಗವಂತನ ಕಲ್ಯಾಣಗುಣಗಳನ್ನು ವರ್ಣಿಸುತ್ತಾ, ಭಗವದಾಶ್ರಿತರಿಗೆ ತ್ಯಾಜ್ಯ ಮತ್ತು ಸಾಧನೇಗಯ್ಯಲು ವಿವಿಧ ಮಾರ್ಗಗಳನ್ನು ತಿಳಿಸುತ್ತಾಳೆ. ಅವುಗಳನ್ನು ಇಲ್ಲಿ ಓದಬಹುದು ( ಪಾಶುರಂ 1 ,  ಪಾಶುರಂ 2 )

ಓಂಗಿ ಯುಲಗಳಂದ ಉತ್ತಮನ್ ಪೇರ್ಪಾಡಿ

ನಾಂಗಳ್ ನಂಬಾವೈಕ್ಕು ಚ್ಚಾಟ್ರಿ ನೀರಾಡಿನಾಲ್

ತೀಂಗನ್ರಿ ನಾಡೆಲ್ಲಾಂ ತಿಂಗಳ್ ಮುಮ್ಮಾರಿ ಪೆಯ್ ದು

ಓಂಗು ಪೆರುಂಶೆನ್ನೆಲ್ ಊಡು ಕಯಲುಗಳ

ಪೂಂಗುವಳೈ ಪೋದಿಲ್ ಪೊರಿವಂಡು ಕಣ್ಪಡುಪ್ಪ

ತೇಂಗಾದೇ ಪುಕ್ಕಿರುಂದು ಶೀರ್ ತ್ತಮುಲೈ ಪಟ್ರಿ

ವಾಂಗಕ್ಕುಡಂ ನಿರೈಕ್ಕುಂ ವಳ್ಳಲ್ ಪೆರುಂಬಶುಕ್ಕಳ್

ನೀಂಗಾದಶೆಲ್ವಂ ನಿರೈಂದೇಲೋ ರೆಂಬಾವಾಯ್ 3

ಶ್ರೀಯುತ ಕೌಶಿಕರ ಕನ್ನಡ ಭಾಷಾಂತರ ಹೀಗಿದೆ:

ವರತ್ರಿವಿಕ್ರಮನಾಗಿ ಬೆಳೆದು, ವಿಶ್ವವನಳೆದ

ಹರಿಯ ನಾಮಸ್ಮರಣೆಗೈದು, ನೋಂಪಿಯ  ಚರಿಸೆ

ಹರುಷದಿಂದೊಂದಾಗಿ ಮಿಂದನಾವೃಷ್ಟಿಯಾ  ದೋಷವಿಲ್ಲದ ದೇಶದೊಳ್|

ಸುರಿದು ಮೂರಾವರ್ತಿ ಮಳೆಯೆಲ್ಲ ಮಾಸದೊಳಗುರೆ

ಬೆಳೆದ ಪೈರುಭತ್ತ  ದೊಳೊಲೆವ ಮೀನು, ಮೇಣ್

ಕುರಿದುಂಬಿ ನೈದಿಲೆಯೊಳೊರಗಿರಲು, ತುರುಕರೆಯೆ ಕೊಡವಾಲ, ವ್ರತಸಿದ್ಧಿಯು  ||3||

ಲೋಕದಲ್ಲಿ ಪ್ರಾಣಿ ಮತ್ತು ಪಕ್ಷಿ ಸಂಕುಲಗಳು  ಸುಖ, ಶಾಂತಿ  ಮತ್ತು ನೆಮ್ಮದಿಯಿಂದ  ಇರಬೇಕಾದರೆ, ಕಾಲ ಕಾಲಕ್ಕೆ ಮಳೆ ಬೀಳಬೇಕು. ಆ ಮಳೆಯಿಂದ ಸಮೃದ್ಧಿಯಾದ ಬೆಳೆ ತೆಗೆಯಬೇಕು. ಆ ಬೆಳೆಯಿಂದ ಬಂದಂತ ಹುಲ್ಲನ್ನು ಗೋವುಗಳು ತಿಂದು ಕೆಚ್ಚಲು ತುಂಬಾ ಹಾಲನ್ನ ಕೊಡುತ್ತವೆ. ಇದರಿಂದ ಮನೆ ಮನೆಯಲ್ಲಿ  ಹಾಲು, ಮೊಸರು, ಬೆಣ್ಣೆ, ತುಪ್ಪ ಹಾಗು ಸಮೃದ್ಧಿಯಾದ ದವಸ ಧಾನ್ಯಗಳ ಕೊರತೆ ಇಲ್ಲದೆ  ತುಂಬಿ ತುಳುಕುತ್ತವೆ .  ಇದಕ್ಕೆಲ್ಲ ಮೂಲ ಕಾರಣ  ಮಳೆ. ಭಾಗವತದಲ್ಲೂ ಶ್ರೀಕೃಷ್ಣನ ಗೋವರ್ಧನಗಿರಿಯ ಪ್ರಕರಣದಲ್ಲಿ ಇದನ್ನ ನಾವು ನೋಡುತ್ತೇವೆ. ಹಾಗೆಯೇ ಇಲ್ಲಿಯೂ ಕೂಡ ತ್ರಿವಿಕ್ರಮ ರೂಪಿಯಾದ ನಾರಾಯಣನು ತನ್ನ ಮೂರು ಪಾದಗಳಿಂದ, ಮೂರು ಲೋಕವನ್ನು ಅಳೆದಂತೆ, ಅವನ ಮಹಿಮೆಯನ್ನು ವರ್ಣಿಸುತ್ತ, ಸ್ತೋತ್ರಮಾಡುತ್ತಾ, ಅವನ ದಿವ್ಯನಾಮಗಳನ್ನು ಹಾಡುತ್ತಾ, ಮಾರ್ಗಶಿರ ಮಾಸದ ಬೆಳಗ್ಗಿನ ಸ್ನಾನ ಮಾಡಿ  ವ್ರತವನ್ನು ಆಚರಿಸಿದರೆ – ದೇಶದಲ್ಲಿ ಅನಾವೃಷ್ಟಿಯಿಲ್ಲದೆ ತಿಂಗಳಲ್ಲಿ ಮೂರು ಮಳೆಯು ಸಕಾಲದಲ್ಲಿ, ಸಮಸ್ಥಿತಿಯಲ್ಲಿ ಬರುತ್ತದೆ  ಎಂದು ಗೋದಾದೇವಿ ಅದ್ಭುತವಾಗಿ ಹೋಲಿಸುವುದನ್ನ ನಾವು ಕಾಣುತ್ತೆವೆ. ತ್ರಿವಿಕ್ರಮನಂತೆಯೇ, ಆಚಾರ್ಯನೂ ತನ್ನ ಮಹತ್ವವನ್ನು ತೋರ್ಪಡಿಸದೆ, ಸೌಮ್ಯವಾಗಿ ಮೂರು ಬಗೆಯ ಶಾಸ್ತ್ರಾರ್ಥಗಳನ್ನು ಕ್ರಮ ಕ್ರಮವಾಗಿ ತಿಳಿಸಿಕೊಡುತ್ತಾನೆ ಎಂದು ತಿಳಿಸುತ್ತಾಳೆ.

ಭಗವಂತನಿಗೆ ಪರ, ವ್ಯೂಹ ಮತ್ತು ವಿಭವ ಎಂಬ ಮೂರು ರೂಪಗಳನ್ನು ಹೇಳಲಾಗಿದೆ. ಪರರೂಪವು(೧ನೇ ಪಾಶುರಂ) ಸರ್ವವ್ಯಾಪಿಯಾದ ಸೃಷ್ಟಿಕರ್ತನ ರೂಪ. ಇವನು ಪರಮಪದದಲ್ಲಿರುವನು. ಪರಮಪದದಿಂದ ಕ್ಷೀರಾಬ್ದಿಗೆ ಬಂದು ಯೋಗನಿದ್ರೆಯಲ್ಲಿ ಮಗ್ನನಾಗಿರುವ ಕ್ಷೀರಾಬ್ಧಿಶಾಯಿ ವ್ಯೂಹರೂಪ( ನೇ ಪಾಶುರಾಂ).  ಭೂಮಿಯಲ್ಲಿ ರಾಮ-ಕೃಷ್ಣ-ತ್ರಿವಿಕ್ರಮಾದಿ ರೂಪಗಳಲ್ಲಿ ಮನುಷ್ಯ ದೇಹದೊಡನೆ ತೋರುವಾಗ ಭಗವಂತನ ವಿಭವರೂಪ.

ಶ್ರೀಮನ್ನಾರಾಯಣನು ತ್ರಿವಿಕ್ರಮರೂಪಿಯಾಗಿ, ಉದ್ದವಾಗಿ ಬೆಳೆದು, ತನ್ನ ದಿವ್ಯ ಪಾದಗಳಿಂದ ಮೂರು ಲೋಕಗಳನ್ನು ಅಳೆದನು. ಈ ತ್ರಿವಿಕ್ರಮ ಅವತಾರವು ಬರಿಯ ಜಗತ್ತನ್ನು ಅಳೆಯುವುದಕ್ಕಾಗಿಯಲ್ಲ, ಪರಿಗ್ರಹಿಸುವುದಕ್ಕಾಗಿಯೂ ಅಲ್ಲ ಅಥವಾ ದೇವೇಂದ್ರನಿಗೆ ಅದನ್ನು ಕೊಡುವದಕ್ಕಾಗಿಯೂ ಅಲ್ಲ, ಇಂತಹ ದಾತೃವಿನ ಔದಾರ್ಯರೂಪ ಯಶಸ್ಸನ್ನು ಕ್ಷಣಕಾಲದಲ್ಲಿ ದಿಗಂತ ವಿಶ್ರಾಂತವಾಗಿ ಪ್ರಸಿದ್ಧಿಪಡಿಸುವುದಕ್ಕಾಗಿಯೇ !! ಎಂದು ತೋರುತ್ತದೆ. ಬಲಿ ತಾನು ಅಪಹರಿಸಿದ್ದ ತ್ರೈಲೋಕ್ಯವನ್ನು ಇಂದ್ರನೇ ಹೋಗಿ ಯಾಚಿಸಿದ್ದಲ್ಲಿಯೂ ಕೊಟ್ಟುಬಿಡುತ್ತಿದ್ದ. ಅವನೋ ಸುರನಾಯಕ, ಯಾಚಿಸುವುದು ನಾಚಿಕೆ. ಸ್ವಾಶ್ರಿತನಾದ ಸುರನಾಯಕನಿಗೆ  ಈ ಯಾಚ್ನಾ ದೈನ್ಯವನ್ನು ತಪ್ಪಿಸಲು ಸರ್ವಲೋಕನಾಯಕ ತಾನೇ ಯಾಚಿಸುತ್ತಾನೆ.  ಲೋಕನಾಥ: ಪುರಾ ಭೂತ್ವಾ ಸುಗ್ರೀವಂ ನಾಥಮಿಚ್ಛತಿ – ಎಂಬಂತೆ, ನಾಥನೆ, ನಾಥಕಾಮನೆ ಎರಡೂ ಅವನೇ. ಲಾಘವಭಯದಿಂದ ದೇವತೆಗಳು ನೆಲಕ್ಕೆ ಕಾಲನ್ನು ಸೋಕಿಸುವುದಿಲ್ಲ.

ಆದರೆ  “ತ್ರೈಲೋಕ್ಯಮಪಿ ನಾಥೇನ ಯೇನ ಸ್ಯಾನ್ನಾಥವತ್ತರಂ” – ಎಂದಿದೆ. ಈ ದೇವದೇವ – ಮೂರು ಲೋಕಗಳನ್ನೂ ನಿಬಿಡವಾಗಿಯೂ ನಿರಂತರವಾಗಿಯೂ ಸ್ಪರ್ಶಿಸಿದ. ತ್ರಿವಿಕ್ರಮನ ಪಾದದಿಂದ ಆಕಾಶದಲ್ಲಿ ಬಿದ್ದ ಗಂಗೆಯು ಎಲ್ಲಾ  ದಿಕ್ಕುಗಳಿಗೂ ವ್ಯಾಪಿಸಿ ಶುಭ್ರವಾದ ನೊರೆಗಳೊಡನೆ ಹರಿದಳು. ಅವಳ ಜಲಪಾತ ಬಲಿಯ ಯಶಸ್ತುತಿಯಂತೆಯೂ ಶ್ವೇತಧ್ವಜಪಟದಂತೆಯೂ ಆದವು. ಭಗವದಭಿಮಾನ ಪಾತ್ರನ ಯಶಸ್ಸು ಭಗವಂತನಿಂದಲೇ ಬೃಂಹಿತವಾಯಿತು.

ಗುಣಾವಗುಣಗಳ ನಿರೂಪಣೆಯಿಲ್ಲದೆಯೇ ಸಕಲಪ್ರಾಣಿಗಳ ಮೇಲೆ ಭಗವಂತ ಪಾದವಿಟ್ಟನು. ಭಗವದ್ ಪಾದ ಸಂಯೋಗವೇ ಪರಮ ಪುರುಷಾರ್ಥ. ಆದ್ದರಿಂದಲೇ ಇವನು ಉತ್ತಮನೆಂದು

ಕೊಂಡಾಡಲ್ಪಟ್ಟಿದ್ದಾನೆ.

[ಓಂಗಿ ಯುಲಗಳಂದ ಉತ್ತಮನ್] – ಆಶ್ರಿತರ ಕೆಲಸಮಾಡಿಕೊಡಲು ಅಂಡಕಟಾಹವನ್ನು ಭೇದಿಸುವ ಹಾಗೆ ಬೆಳೆದು, ಮೂರು ಲೋಕಗಳನ್ನು ತನ್ನ ಪಾದಗಳಿಂದ ಅಳೆದು ಪುರುಷೋತ್ತಮನಾದ ತ್ರಿವಿಕ್ರಮನು. ಪರ-ವ್ಯೂಹ-ವಿಭವಗಳೊಳಗೆ ಪರವಾಸುದೇವರೂಪಕ್ಕಿಂತ ವ್ಯೂಹ, ವ್ಯೂಹಕ್ಕಿಂತ ವಿಭವರೂಪಿಯಾದ  ತ್ರಿವಿಕ್ರಮ ಉತ್ತಮನೆಂದರ್ಥ. ಹೀಗೆ ಪರ-ವ್ಯೂಹ-ವಿಭವಗಳಿಗಿರುವ ಪರಸ್ಪರ ತರ-ತಮ ಭಾವವೂ ಇಲ್ಲಿ ವ್ಯಂಜಿತವಾಗಿದೆ.

ಹರೇರ್ನಾಮೈವ ನಾಮೈವ ನಾಮೈವ ಮಮಜೀವನಂ!

ಕಲೌನಾಸ್ತ್ಯೇವ ನಾಸ್ತ್ಯೇವ ನಾಸ್ತ್ಯೇವ ಗತಿರನ್ಯಥಾ !!”

ಕಲಿಯುಗದಲ್ಲಿ, ಪರಮಾತ್ಮನ ನಾಮ ಸಂಕೀರ್ತನೆ ಬಿಟ್ಟರೆ ನಮಗೆ ಬೇರೆ ಗತಿಯಿಲ್ಲ. ಇದಕ್ಕಿರುವ ಮಹಿಮೆ ಮತ್ತೆ ಯಾವುದಕ್ಕೂ ಇಲ್ಲ. ಭಗವಂತ ಹೆಚ್ಚೋ, ಅವನ ನಾಮ ಬಲವು ಹೆಚ್ಚೋ? ಎಂದಲ್ಲಿ, ಭಗವಂತನಿಗಿಂತ ಅವನ ನಾಮವೇ ಹೆಚ್ಚು. ಹೇಗೆಂದರೆ, ರೂಪ ಹಾಗು ನಾಮ ಇವೆರಡೂ ಯಾವಾಗಲೂ ಒಟ್ಟೊಟ್ಟಿಗೆ ಇದ್ದರೂ, ನಾಮ ಸಂಕೀರ್ತನೆ ಮಾಡದಿದ್ದಲ್ಲಿ ರೂಪದ ಜ್ಞಾನ ಉಂಟಾಗದು. ರೂಪ ನಾಮಕ್ಕೆ ಅಧೀನ, ರೂಪಕ್ಕೆ ನಾಮವು ಅಧೀನವಲ್ಲ.

ರಾಮ ಏಕ ತಾಪಸತಿಯತಾರಿ ನಾಮ ಕೋಟಿ ಖಲ ಕುಮತಿ ಸುಧಾರಿ!!”

ಶ್ರೀ ತುಳಸಿದಾಸರು ಹೇಳಿದಂತೆ, ಶ್ರೀರಾಮ ಒಬ್ಬ ಋಷಿ ಪತ್ನಿಯಾದ ಅಹಲ್ಯೆಯನ್ನು ಮಾತ್ರ ಪಾರುಗಾಣಿಸಿದ. ರಾಮನಾಮವಾದರೋ – ಕೋಟಿ ಸಂಖ್ಯಾತರಾದ ದುಷ್ಟರ ಕೆಟ್ಟ ಬುದ್ದಿಯನ್ನು ಪಾರುಗಾಣಿಸುತ್ತದೆ.

ಉಲಟಾ  ನಾಮು ಜಪತ ಜಗುಜಾನ ! ವಾಲಮೀಕಿ ಭಯೇ ಬ್ರಹ್ಮ ಸಮಾನ  ಅಂದರೆ, ತಲೆಕೆಳಗಾಗಿ ರಾಮನಾಮವನ್ನು ಭಜಿಸಿ ವಾಲ್ಮೀಕಿಗಳು ಬ್ರಹ್ಮನಿಗೆ ಸಮಾನರಾಗಿ ಬಿಟ್ಟರು. ನೀನ್ಯಾಕೋ ನಿನ್ನ ಹಂಗ್ಯಾಕೋ, ನಿನ್ನ ನಾಮದ ಬಲವೊಂದಿದ್ದರೆ ಸಾಕೋ ಎಂದು  ನಾಮದ ಮಹಿಮೆಯನ್ನು ಇನ್ನೂ  ಅನೇಕ ದಾಸವರೇಣ್ಯರು ಹೇಳಿದ್ದಾರೆ.

[ಪೇರ್ಪಾಡಿ]- ಅವನ ಹೆಸರುಗಳನ್ನು ಜಪಿಸುತ್ತ, ರಸ್ಯತೆಯಿಂದ ಹಾಡುತ್ತ, ಪಾದಸಂಕೀರ್ತನೆ ಮಾಡಿ ಪರಮಪುರುಷಾರ್ಥವನ್ನು ಪಡೆಯಿರಿ ಎನ್ನುತ್ತಾ ನಾಮಜಪದ ಮಹತ್ವವನ್ನು ಇಲ್ಲಿ ತಿಳಿಸುತ್ತಾಳೆ.

ಈ ವ್ರತವನ್ನು ಆಚರಿಸಲು, ನಾಮ ಸಂಕೀರ್ತನೆ ಜೊತೆಗೆ, ಆಚಾರ್ಯರಿಂದ ನಮ್ಮ ಜ್ಞಾನದಾಹವು ಇಂಗಬೇಕು ಎನ್ನುವ ಭಾವ ವ್ಯಕ್ತವಾಗುತ್ತದೆ. ಭಗವಂತ ತನ್ನ ದಿವ್ಯಮಂಗಳ ಪಾದದಿಂದ ಆಕಾಶಾದಿಗಳನ್ನು ವ್ಯಾಪಿಸಿದಂತೆ, ಆಚಾರ್ಯನೂ ತನ್ನ ದಿವ್ಯ ಯಶಸ್ಸಿನಿಂದ ಮೂರು ಬಗೆಯಾಗಿ ಶಾಸ್ತ್ರಾರ್ಥಗಳನ್ನು ವರ್ಷಿಸುವನು. ಹೇಗೆಂದರೆ, [ತಿಂಗಳ್ ಮುಮ್ಮಾರಿ ಪೆಯ್ ದು] ಮೊದಲು ಕರ್ಣಮೂಲದಲ್ಲಿ ಮಂತ್ರೋಪದೇಶ, ಆಮೇಲೆ ಮಂತ್ರಾರ್ಥ ಪ್ರವಚನ, ಅನಂತರ ನಾನಾವಿಧ ಆಧ್ಯಾತ್ಮ ಗ್ರಂಥಗಳ ಅಧ್ಯಾಪನ. ಚೇತನ ಸಮೃದ್ಧಿ ಮತ್ತು ಚೈತನ್ಯ ಸಮೃದ್ಧಿ ಎಂಬ ಎರಡು  ಅಂಶಗಳನ್ನು ಈ ಪದ್ಯದಲ್ಲಿ ಆಚಾರ್ಯರುಗಳು ಗುರುತಿಸುವರು.

ಹೊಲಗಳಲ್ಲಿ ಹರಿಯುವ ಝರಿಯಲ್ಲಿ  ಆನಂದವಾಗಿ ಕುಪ್ಪಳಿಸುವ ಕಯಿಲ್(ಮೀನು) ಗಳಂತೆ ಜೀವಾತ್ಮರು.  ಪುಷ್ಪದ ಹೃದಯದಲ್ಲಿ ಸುಖವಾದ  ನಿದ್ರೆ ಮಾಡುತ್ತಿರುವ ದುಂಬಿಯಂತೆ ಪರಮಾತ್ಮ. ಭಗವಂತನ ಧ್ಯಾನ ಮಾಡುವುದರಿಂದ ಜೀವಾತ್ಮನಿಗೆ ತನ್ನ ಹೃದಯ ಕಮಲದಲ್ಲಿರುವ ಪರಮಾತ್ಮನ ಅನುಭವವು ಉಂಟಾಗುವುದು. ಇದು ಚೇತನ ಸಮೃದ್ಧಿ.

ಪಶುಗಳು ಹಾಲನ್ನು ನೀಡುವಂತೆ ಆಚಾರ್ಯನು ಜ್ಞಾನವನ್ನು ನಮಗೆ ಉದಾರವಾಗಿ ನೀಡುವನು. ಆಚಾರ್ಯರ ಉಪದೇಶವು ನಮಗೆ  ಭಗವಂತನ ಧ್ಯಾನ ಮಾಡಲು ದಾರಿದೀಪವಾಗುವುದು. ಇಲ್ಲಿ ಆಚಾರ್ಯರ ಸಂಪತ್ತು ಶಿಷ್ಯನ ರೂಪದಲ್ಲಿ ಸಮೃದ್ಧವಾಗುವುದು. “ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ”  – ಎಂಬಂತೆ ಆಚಾರ್ಯರ ಉಪದೇಶದಿಂದ ನಮ್ಮ ಹೃತ್ಕಮಲದಲ್ಲಿ ಅಡಗಿರುವ ಪರಮಾತ್ಮನ ಅನುಭವವು ಉಂಟಾಗಿ ಜ್ಞಾನವೆಂಬ ಐಶ್ವರ್ಯವು ತುಂಬಿ ಬರುವುದೆಂಬ ಭಾವ. ಇದೇ  ಚೈತನ್ಯ ಸಮೃದ್ಧಿ.

ಯತ್ರಾಷ್ಟಾಕ್ಷರ ಸಂಸಿದ್ದ: ಮಹಾಭಾಗೋ ಮಹೀಯತೇ|

ನತತ್ರ ಸಂಚರಿಷ್ಯಂತಿ ವ್ಯಾಧಿ ದುರ್ಭಿಕ್ಷತಸ್ಕರಾ: ।।

ಅಂದರೆ ಎಲ್ಲಿ ಅಷ್ಟಾಕ್ಷರ ಮಹಾಮಂತ್ರ ಸಿದ್ದಿ ಹೊಂದಿದವನಿರುವನೋ ಅಲ್ಲಿ ರಾಗದ್ವೇಷಾದಿಗಳೆಂಬ ವ್ಯಾಧಿಯಾಗಲಿ, ಜ್ಞಾನಸಂಕೋಚವೆಂಬ ದುರ್ಭೀಕ್ಷವಾಗಲಿ, ನಾನೂ ಪರಮಾತ್ಮನೂ ಒಂದೇ ಎಂಬ ತಸ್ಕರ ಭಾವನೆಯಾಗಲಿ ಇರುವುದಿಲ್ಲ. ಇಂತಹ ಮಹಿಮೆಯುಳ್ಳ ಅಷ್ಟಾಕ್ಷರಿಗೆ ವಾಚ್ಯನಾಗಿ, ಎತ್ತರವಾಗಿ ಬೆಳೆದು ಬ್ರಹ್ಮಾಂಡವನ್ನೇ ಅಳೆದ ವಾಮನನ ನಾಮವನ್ನು ಹಾಡಿ  ಶಿಷ್ಯರಾದ ನಾವು ನಮ್ಮ ಆಚಾರ್ಯ ನಿಷ್ಠೆಯೆನ್ನುವ ವ್ರತಕ್ಕಾಗಿ ಸಂಕಲ್ಪಿಸೋಣ. ಆರು ಕಾಲುಗಳುಳ್ಳ ಭ್ರಮರದಂತೆ ಜ್ಞಾನ, ಬಲ, ಐಶ್ವರ್ಯ, ವೀರ್ಯ,ಶಕ್ತಿ ಮತ್ತು ತೇಜಸ್ಸು ಎನ್ನುವ ಷಡ್ಗುಣಗಳುಳ್ಳ ಪರಮಾತ್ಮನು ಕಣ್ಣು ಮುಚ್ಚಿ ಆನಂದಿಸುತ್ತಿದ್ದಲ್ಲಿ ನಾವು ಆಚಾರ್ಯರ ಜ್ಞಾನವೆಂಬ ಹಾಲಿನ ಮಹಾಸಾಗರದಲ್ಲಿ ವಾತ್ಸಲ್ಯ ಸೂಚಕವಾದ ಕೆಚ್ಚಲನ್ನು ಹೊಂದಿದರೆ ನಮ್ಮ ಅಜ್ಞಾನವೆಂಬ ಹೃದಯ  ಬಿಂದಿಗೆಯನ್ನು ನಾಶವಾಗದ ಜ್ಞಾನವೆಂಬ  ಐಶ್ವರ್ಯದಿಂದ

ತುಂಬಿಸುತ್ತಾರೆ. ಇಲ್ಲಿ ಹದಿನಾಲ್ಕು ಲೋಕಗಳಿಗೆ ಆಧಾರವಾದ ಹಸುಗಳಂತೆ ಹದಿನಾಲ್ಕು ವಿದ್ಯಾ ಸಂಪನ್ನರಾದ ಆಚಾರ್ಯರು, ಹಸುಗಳ ನಾಲ್ಕು ಕೆಚ್ಚಲುಗಳಲ್ಲಿ ಹಾಲು ತುಂಬಿರುವಂತೆ,

೧) ಉಪನಿಷತ್ತು, ೨) ಬ್ರಹ್ಮಸೂತ್ರ, ೩) ಗೀತಾಪ್ರಸ್ತಾನ ಮತ್ತು ೪) ಭಗವದ್ವಿಷಯ ಇವುಗಳ ಸಾರವನ್ನು ತುಂಬಿಕೊಂಡು, ಶಿಷ್ಯನ ವಿಷಯದಲ್ಲಿ ಬಹಳ ವಾತ್ಸಲ್ಯ ಪೂರಿತರಾಗಿ ಕರುಣೆತೋರುವರು ಎಂಬ ಭಾವ ಅಡಕವಾಗಿದೆ.

ತತ್ವಾರ್ಥ:

ಓಂಗು ಪೆರುಂಶೆನ್ನೆಲ್ ಊಡು – ಸಸ್ಯಗಳ ಅಭಿವೃದ್ಧಿಯೆಂಬುದು ಜೀವಾತ್ಮರಿಗೆ

ಜ್ಞಾನಾನುಷ್ಠಾನದ ಅಭಿವೃದ್ಧಿ. ಭೂಮಿಯಲ್ಲಿ ಇರುವಾಗ ವ್ರೀಹಿಯ ಅವಸ್ಥೆ.  ವ್ರೀಹಿಯನ್ನು  (ಬತ್ತ) ಸ್ಥೂಲಶರೀರಕ್ಕೆ ಹೋಲಿಸಿದ್ದು, ಹೊಟ್ಟು  ಹೋದಾಗ್ಯೂ ಅಕ್ಕಿಯ ಮೇಲೆ ಸೂಕ್ಷ್ಮವಾದ ತವಡುಗಳಿವೆ- ಇವು ನಮ್ಮ ಸೂಕ್ಷ್ಮ ಶರೀರದಂತೆ. ವಿರಜಾಸ್ನಾನದಿಂದ ಆ ಸೂಕ್ಷ್ಮ ಶರೀರವೂ ನೀಗುವುದು.

ಧಾನ್ಯದ ತೆನೆಗಳು ಇನ್ನೂ ಹಾಲನ್ನು ಸಹ ಹೊಂದದಿರುವಾಗ ನೇರವಾಗಿ ಇರುತ್ತವೆ. ಮೇಲ್ಮುಖವಾಗಿ. ಬತ್ತದ ಭಾರ ಹೆಚ್ಚಾದಂತೆ ಬಹು ನಮ್ರವಾಗುತ್ತವೆ. ಹಾಗೆಯೇ ಚೇತನರು ವಿದ್ಯಾದಿಸಂಪತ್ತಿಗೆ ದಾರಿದ್ರ್ಯವಿರುವಾಗ ಅಲ್ಪಜ್ಞತೆಯಿಂದ ಗರ್ವದಿಂದ ಮೇಲೆಯೇ ನೋಡುತ್ತಿರುತ್ತಾರೆ. ಕ್ರಮಶ: ಆಚಾರ್ಯರ ವಾತ್ಸಲ್ಯದಿಂದ, ಭಗವದ್ಗುಣಾನುಭವದ ಔತ್ಸುಕ್ಯದಿಂದ ಸಮೃದ್ಧರಾದರೆ, ಸಂಪೂರ್ಣ ನಮ್ರರಾಗುತ್ತಾರೆ.

ಆಚಾರ್ಯರು, ಹೀಗೆಯೇ ಸತ್ಪಾತ್ರರಾದ ಶಿಷ್ಯರನ್ನು ಜ್ಞಾನಪೂರ್ಣರನ್ನಾಗಿ ಮಾಡುವರು.

ನಿನ್ನ ನಾನು ಬಿಡುವನಲ್ಲ, ಎನ್ನ ನೀನು ಬಿಡಲು ಸಲ್ಲ… ”

 (ವಿಷಯ ಸಂಗ್ರಹ : “ತಿರುಪ್ಪಾವೈ ರಸಸ್ವಾಧಿನಿ” – ಬರೆದವರು ವಿದ್ವಾನ್ ವೇದಾನ್ತ ಸಾರಜ್ಞ

ಶ್ರೀ ಎಸ್. ಕೃಷ್ಣಾತಾತಾಚಾರ್ಯ )

(1) ಗಮಕ ಕವಿತಾ ವನಜ ಭಾಸ್ಕರ , ಗಮಕ ರತ್ನಾಕರ ಶ್ರೀಯುತ ಬಿ.ಎಸ್ .ಎಸ್ ಕೌಶಿಕ್  ರವರ                                                                  ಶ್ರೀಮದಾಂಡಾಳ್ ಮಹಾ ವೈಭವಂ -ತಿರುಪ್ಪಾವೈ – ಮೂಲ, ಕನ್ನಡ ತಾತ್ಪರ್ಯ , ಷಟ್ಪದಿ, ಭಾವಾರ್ಥ , ಚೌಪದಿ )

Tiruppavai series

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply

IndicA Today - Website Survey

Namaste,

We are on a mission to enhance the reader experience on IndicA Today, and your insights are invaluable. Participating in this short survey is your chance to shape the next version of this platform for Shastraas, Indic Knowledge Systems & Indology. Your thoughts will guide us in creating a more enriching and culturally resonant experience. Thank you for being part of this exciting journey!


Please enable JavaScript in your browser to complete this form.
1. How often do you visit IndicA Today ?
2. Are you an author or have you ever been part of any IndicA Workshop or IndicA Community in general, at present or in the past?
3. Do you find our website visually appealing and comfortable to read?
4. Pick Top 3 words that come to your mind when you think of IndicA Today.
5. Please mention topics that you would like to see featured on IndicA Today.
6. Is it easy for you to find information on our website?
7. How would you rate the overall quality of the content on our website, considering factors such as relevance, clarity, and depth of information?
Name

This will close in 10000 seconds