ಶ್ರೀ ನೀಳಾ ದೇವೈ ನಮಃ
ತಿರುಪ್ಪಾವೈ ಕನ್ನಡದಲ್ಲಿ ಲೇಖನಮಾಲೆಯ ಪೀಠಿಕೆ ಇಲ್ಲಿದೆ (https://www.indica.today/bharatiya-languages/kannada/tiruppavai/)
ಮಾರ್ಕಳಿ ತ್ತಿಂಗಳ್ಮದಿನಿರೈಂದ ನನ್ನಾಳಾ।
ನೀರಾಡ ಪ್ಪೋದುವೀರ್,ಪೋದುಮಿನೋ ನೇರಿಲೈಯೀರ್।
ಶೀರ್ ಮಲ್ಗುಂ ಆಯ್ ಪ್ಪಾಡಿ ಶೆಲ್ವಚ್ಚಿರು ಮೀರ್ ಕಾಳ್ ।
ಕೂರ್ವೇಲ್ ಕೊಡುಂದೊಳಿಲನ್ ನಂದಗೋಪನ್ ಕುಮರನ್।
ಏರಾರಂರ್ದ ಕಣ್ಣಿಯಶೋದೈಯಿಳಂಶಿಂಗಂ
ಕಾರ್ಮೇನಿಚ್ಚಜ್ಞ್ಗಣ್ ಕದಿರ್ಮದಿಯಂ ಬೋಲ್ ಮುಗತ್ತಾನ್
ನಾರಾಯಣನೇ ನಮಕ್ಕೇ ಪರೈತರುವಾನ್ ಪಾರೋರ್
ಪುಗಳಪ್ಪಡಿಂದೇಲೋ ರೆಂಬಾವಾಯ್ ॥1॥
ಶ್ರೀಯುತ ಕೌಶಿಕರ ಕನ್ನಡ ಭಾಷಾಂತರ ಹೀಗಿದೆ:
ನಂದಗೋಪಕುಮಾರ, ನಳಿನಾಕ್ಷ, ರವಿಚಂದ್ರರಂದವಡೆದಿಹ,
ವದನ ಮಂಡಲದಿ ಶೋಭಿಸುವ ಮಂದಹಾಸ ತ್ರಿಮುಖ,
ಸರ್ವಜೀವ ಪ್ರಮುಖ, ಮೇಘವರ್ಣಾಂಗ ಹರಿಯು |
ಚಂದದೀ ಮಾರ್ಗಶಿರಮಾಸದಲಿ , ಶೋಭಿಸಿಹ
ಚಂದಿರನ ಬೆಳಕಿನೊಳು ಕ್ರೀಡೆಗೆಳಸುವ ಸೊಬಗಿನಿಂದು
ಮುಖಿಯರು ಬನ್ನಿ , ಬನ್ನಿ ನೀವ್ ಗೆಳತಿಯರೆ, ಕಾದಿರ್ಪ ವ್ರತಾಮುಕ್ತಿಗೆ ||1||
ಮಾಸಗಳೊಳಗೆ ಉತ್ತಮವಾದ ಮಾರ್ಗಶೀರ್ಷ ಮಾಸವು ಬಾರ್ಹ್ಯಸ್ಪತ್ಯ ರೀತ್ಯ ಮೊದಲ ತಿಂಗಳು. ಗೋದಾದೇವಿಗೆ ಈ ತಿಂಗಳು ‘ಯುಗಾದಿ’ ಅಂದರೆ ಮೊದಲನೆಯ ದಿನವಾಗಿ ಕಂಡು ಬಂದಿದೆ. ದ್ವಾದಶ ನಾಮಗಳಿಗೆಲ್ಲ ಮೊದಲನೆಯದಾದ ಶ್ರೀ ಕೇಶವನೆಂಬ ನಾಮವುಳ್ಳ ಮಾಸವಿದು. ಈ ತಿಂಗಳಿಗೆ ‘ಕೇಶವನೇ” ಅಧಿದೇವತೆ. ಆದ್ದರಿಂದಲೇ ಒಂದು ಕಾಲದಲ್ಲಿ ವರ್ಷಾರಂಭವಿದ್ದಿತೆಂದು ಕೆಲವೆರೆನ್ನುವರು:-
“ಆದಾಯ ಮಾರ್ಗಶೀರ್ಷಾದಿದೌದೌ ಮಾಸೌ ಋತುರ್ಮತಃ”– (ಕಾತ್ಯಾಯನ)
“ಮಾರ್ಗಾದೀನಾಂ ಯುಗೈಹಿ ಕ್ರಮಾತ್” – (ಅಮರಸಿಂಹ)
ಎಲ್ಲಕ್ಕೂ ಒಳ್ಳೆಯ ಕಾಲವೆಂಬುದು ಬಹು ಮುಖ್ಯ. ಅನಾದಿ ಕಾಲದಿಂದ ನಡೆದು ಬಂದ ವಿಪರೀತರುಚಿ ನೀಗಿ ನಿರ್ವೇದದಿಂದ ಭಗವಂತನಲ್ಲಿ ರುಚಿ ಹುಟ್ಟುವ ಕಾಲವೇ ಆತ್ಮನಿಗೆ ಒಳ್ಳೆಯ ಕಾಲ. ಬರೀ ಬಾಹ್ಯ ಮುಂಜಾನೆ ಮಾತ್ರವಲ್ಲದೆ ಆಂತರಕ್ಕೂ ಮುಂಜಾನೆಯಿದು. ಅನಾದಿ ಮಾಯೆಯಿಂದ ನಿದ್ರಿಸುತ್ತಿರುವ ಜೀವನಿಗೆ ಆಂತರ ಪ್ರಬೋಧವಿದು. ಸಂಸಾರ ಚಕ್ರದಲ್ಲಿ ಸಿಕ್ಕಿ ಸ್ವಕರ್ಮಗಳಿಂದ ಸುತ್ತುತ್ತ ದುಃಖಾಕುಲನಾದ ಜೀವನಿಗೆ ಭಗವತ್ಪ್ರಸಾದ ವಿಶೇಷ ಲಭಿಸುವಂತೆ ಮಾಡುವ ಒಂದು ವಿಶೇಷ ವ್ರತಾಚರಣೆ ಏರ್ಪಟ್ಟ ದಿವಸವಾದ್ದರಿಂದ ಇದಕ್ಕೆ ಬಹಳ ಪ್ರಾಮುಖ್ಯವಿದೆ.
ಮಾರ್ಗಳಿ ತ್ತಿಂಗಳ್: ‘ಮಾ’ ಎನ್ನುವ ಮಂಗಲವಾಚಕ ಅಕ್ಷರವು ಮೊದಲಲ್ಲಿದೆ. ಇಂತಹ ಶ್ರೇಷ್ಠವಾದ ಮಾಸದಲ್ಲಿ (ಮತಿನಿರೈನ್ದ) ಚಂದಿರನ ಪೂರ್ಣವಾದ ಬೆಳದಿಂಗಳಿಂದ ಕೂಡಿದ ಶುಭ ದಿನದಲ್ಲಿ ಸ್ನಾನ ಮಾಡ ಹೋಗಲು ಆಸಕ್ತಿವುಳ್ಳವರೇ ಬನ್ನಿರಿ. ಐಶ್ವರ್ಯದಿಂದ ತುಂಬಿ ತುಳುಕುವ ಗೋಕುಲದ ಶ್ರೀಮಂತ ಕನ್ಯೆಯರೇ, ಸುಂದರ ಬಾಲೆಯರೇ, ಶ್ಲಾಘ್ಯವಾದ ಆಭರಣವುಳ್ಳವರೇ, ಅಂದರೆ ಪರಮಾತ್ಮನನ್ನು ಸೇರಬೇಕೆಂಬ ಭಕ್ತಿ ಪರವಶತೆಯುಳ್ಳ ಶೇಷತ್ವ ಜ್ಞಾನವುಳ್ಳವರೆ ಬನ್ನಿ- ಹೀಗೆ ಗೋದಾದೇವಿ ಮಾಸದ ಮಹಿಮೆಯನ್ನು ಹಾಗು ಸಖಿಯರನ್ನು ವರ್ಣಿಸುತ್ತಾಳೆ.
ಈ ಪಾಶುರಂನಲ್ಲಿ ಗೋದಾದೇವಿ ತನ್ನ ಸಖಿಯರನ್ನು ವ್ರತದ ಸ್ನಾನಕ್ಕಾಗಿ ಕರೆಯುತ್ತಿದ್ದಾಳೆ. ವ್ರತಾಚರಣಕ್ಕೆ ಅನುಕೂಲವಾದ ಕಾಲದ ವರ್ಣನೆ, ತನ್ನ ಸಖಿಯರ ಸೌಂದರ್ಯ (ಶೆಲ್ವಚ್ಚಿರು ಮೀರ್ ಕಾಳ್) ವರ್ಣನೆ, ಕೃಷ್ಣನ ತಂದೆಯ ವಿವರಣೆ, ಆತನ ತಾಯಿಯ ಭಾಗ್ಯ, ಅಂತಹ ಮಾತಾಪಿತೃಗಳಿಗೆ ಮಗನಾಗಿ ಅವತರಿಸಿದ ನಾರಾಯಣನ ಗುಣಾನುವರ್ಣನೆ ಹೇಳಿಯಾದ ಮೇಲೆ ಭಗವಂತನ ಶರಣಾಗತ ವಾತ್ಸಲ್ಯವನ್ನು ಕೊಂಡಾಡಿ ಅವನಲ್ಲಿ ತನಗಿರುವ ಭರವಸೆಯನ್ನು ಹೇಳಿಕೊಳ್ಳುತ್ತಾಳೆ.
ಚೂಪಾದ ವೇಲಾಯುಧವನ್ನು ಧರಿಸಿ, (ಕೂರ್ವೇಲ್ ಕೊಡುಂದೊಳಿಲನ್ ) ದುಷ್ಟ ನಿಗ್ರಹಕ್ಕಾಗಿ ಉಪಯೋಗಿಸಿ, ತನ್ನ ಭಕ್ತರನ್ನು ಸಂರಕ್ಷಿಸುವವನೂ, ನಂದಗೋಪನಿಗೆ ಮಗನಾದ, (ಏರಾರಂರ್ದ ಕಣ್ಣಿಯಶೋದೈಯಿಳಂಶಿಂಗಂ) ಯಶೋದೆಯ ವಾತ್ಸಲ್ಯ ಪೂರ್ಣ ನೇತ್ರಗಳಿಗೆ ಸಿಂಹದ ಮರಿಯಂತೆ ಇರುವವನೂ, ನೀಲ ಮೇಘ ಶ್ಯಾಮನಾಗಿ, ತಾವರೆ ಹೂವಿನ ದಳದಂತೆ ಕಣ್ಣುಳ್ಳವನೂ , ಸೂರ್ಯನ ತೇಜಸ್ಸಿನಂತೆ ಮುಖವುಳ್ಳವನೂ, ಜಗತ್ಕಾರಣನೂ, ರಕ್ಷಕನೂ, ಲಯಕರ್ತನೂ- ಆದ ದೈವವೇ ಈಗ ಶ್ರೀಕೃಷ್ಣನಾಗಿ ನಿಂತಿರುವವನು. ಅವನ ಪಾದಾರವಿಂದವನ್ನೇ ಅನನ್ಯರಾಗಿ ಆಶ್ರಯಿಸಿರುವ ನಮಗೆ ವ್ರತಸಾಧನೆಗಳನ್ನು ಕೊಡುವನು. ಈ ಲೋಕದವರೆಲ್ಲ ಸ್ತೋತ್ರ ಮಾಡುವಂತೆ ಅವಧಾನದಿಂದ ಇದ್ದರೆ ನಮ್ಮ ಈ ವ್ರತವು ಅದ್ವಿತೀಯವಾಗುವುದೆನ್ನುತ್ತಾಳೆ.
ಮಾರ್ಗಶೀರ್ಷ ಮಾಸವು, ಆಂಡಾಳ್ ದೇವಿಗೆ ಬಹು ಇಷ್ಟವಾದ ಮಾಸ. ಇದು ಶ್ರೀ ತಿರುಪ್ಪಾವೈ ಅನುಭವದ ಮೇಲ್ಮೈಯಿಂದ ಬಂದುದು.
- ಇದು ಸುಪಕ್ವವಾದ ಸಸ್ಯಾದಿ ಸಂಪನ್ನವಾದುದು, ಸರ್ವ ಸಸ್ಯಗಳೂ ಫಲಿಸಿ ಪಕ್ವವಾಗಿರುವಂತೆ, ತಮ್ಮ ಸಾತ್ವಿಕ ಸಾಧನೆಗೆ ಅನುಕೂಲಕರವೆಂದೂ, ಕಾತ್ಯಾಯಿನಿ ವ್ರತ ಹಾಗು ತಿರುಪ್ಪಾವೈ ವ್ರತಗಳನ್ನು ಆಚರಿಸಿ ಸಿದ್ಧಿಪಡೆಯುವುದು.
- ಗೋ-ಕ್ಷೀರ ಸಮೃದ್ಧಿಯುಳ್ಳದ್ದು.
- ಶಿಷ್ಟರು ನಡೆಸುವ ನವಾಗ್ರಯಣ ಪೂಜೆಗಳಿಂದ ಪಿತೃ ದೇವತೆಗಳೂ ಸಂತೋಷಿಸುವ ಕಾಲ.
- ದಕ್ಷಿಣಾಯನವೆಂಬುದು ದೇವತೆಗಳಿಗೆ ರಾತ್ರಿ. ಆ ರಾತ್ರಿಗೆ ಇದು ಉಷಃಕಾಲ, ಬ್ರಾಹ್ಮೀ ಮುಹೂರ್ತದಂತೆ ಇದು ಸತ್ತ್ವೋನ್ಮೇಷಕರವಾದ ಕಾಲ.
- ‘ಮೃಗಶೀರ್ಷಾ’ ನಕ್ಷತ್ರಸಹಿತನಾಗಿ ಚಂದ್ರನು ಪೂರ್ಣವಾಗಿ ಉದಯಿಸುವುದು ಈ ಮಾಸದಲ್ಲಿ.
ಈ ನಕ್ಷತ್ರಕ್ಕೆ ಅಧಿದೇವತೆ ಚಂದ್ರ.
ಈ ಕಾಲದಲ್ಲಿ ದೇವತೆಗಳೂ, ಪಿತೃಗಳೂ ನಮಗೆ ಸನ್ನಿಹಿತರಾಗುತ್ತಾರೆ. ಆದ್ದರಿಂದ, ಮುಂಜಾನೆ ಎದ್ದು ಶುದ್ಧರಾಗಿ ಅವರನ್ನು ಪೂಜಿಸುವುದಕ್ಕೆ ಮತ್ತು ಚಿಂತಿಸುವುದಕ್ಕೆ ಅನುಕೂಲಕರ. ಧನುರ್ಮಾಸದಲ್ಲಿ ಬೆಳದಿಂಗಳಿಂದ ಕೂಡಿದ ತಂಪಾದ ಉಷಃ ಕಾಲ ವ್ರತಾನುಷ್ಠಾನಕ್ಕೆ ಸೂಕ್ತ. ಅದು ಮನುಷ್ಯನಲ್ಲಿ ಸತ್ವ ಗುಣವನ್ನು ಉದ್ರೇಕಗೊಳಿಸಿ, ಭಗವಧ್ಯಾನವೇ ಮುಂತಾದ ಮಾನಸಿಕ ಕ್ರಿಯೆಗಳಿಗೆ ಮನಸ್ಸನ್ನು ಮುದಗೊಳಿಸುತ್ತದೆ.
ಕೆಲ ಕೆಲವು ವ್ರತಗಳನ್ನು ಆಚರಿಸಲು ಬೇಕಾದ ಅರ್ಹತೆಯು ಕೆಲವರಿಗೆ ಮಾತ್ರ ಇರುವುದೆಂದು ಹೇಳುವರು. ಅದೇ ರೀತಿ, ’ತಿರುಪ್ಪಾವೈ’ ವ್ರತವನ್ನು ಆಚರಿಸಲು ಬೇಕಾದದ್ದು ‘ಮನಸ್ಸಿನ ಇಚ್ಛೆ’ .
‘ಪೋದುಮಿನೋ’ ಎಂದು ಕರೆಯುವುದು ‘ಇಚ್ಛೆಯುಳ್ಳವರೆಲ್ಲಾ’ ಬರಬಹುದೆಂಬ ಭಾವ. ಹಾಗೆ ಗೊಲ್ಲಕನ್ಯೆಯರಿಗೆ ವ್ರತಾನುಷ್ಠಾನಕ್ಕೆ ಬೇಕಾಗುವ ‘ಪರೈ’ ಎಂಬ ವಾದ್ಯ ವಿಶೇಷವನ್ನು ಶ್ರೀಕೃಷ್ಣನು ಕೊಡುತ್ತಾನೆ ಎನ್ನುವ ಭಾವ.
ಮುಂದೆ ಕೆಲವು ಸಾಲುಗಳಲ್ಲಿ, ನಂದಗೋಪನನ್ನು ಮಹಾಸಾಹಸಿ ಮತ್ತು ಪುಟ್ಟ ಶ್ರೀಕೃಷ್ಣನ ರಕ್ಷಣಾರ್ಥವಾಗಿ ಮಹಾಧೈರ್ಯಶಾಲಿಯೂ ಆದನೆಂದು ವ್ಯಾಖ್ಯಾನಿಸಲಾಗಿದೆ. ಅದೇ ರೀತಿ ಕೃಷ್ಣನನ್ನು ಸದಾ ನೋಡುತ್ತಾ, ಅವನ ತುಂಟಾಟವನ್ನು ಕಣ್ತುಂಬಿಸಿಕೊಂಡ ಯಶೋದಾದೇವಿಯು
“ಏರಾರಂದ ಕಣ್ಣೇ” ಆದಳು. ಶ್ರೀ ಕೃಷ್ಣನ ಮುಖಕಾಂತಿಯು ತೀಕ್ಷ್ಣವಾದ ಸೂರ್ಯನ ಕಾಂತಿಗೂ, ಸೌಮ್ಯವಾದ ಚಂದ್ರನ ಕಾಂತಿಗೂ ಹೋಲಿಸಲ್ಪಟ್ಟಿದೆ. ಕೃಷ್ಣನು ತನ್ನ ವಿರೋಧಿಗಳಿಗೆ ಸೂರ್ಯನ ತೀಕ್ಷ್ಣ ಕಾಂತಿಯಿಂದ ಪ್ರತಾಪಶಾಲಿಯೂ ಮತ್ತು ತನ್ನ ಹಿತೈಷಿಗಳಿಗೆ ಹಾಗು ಭಕ್ತರಿಗೆ ಚಂದ್ರನಂತೆ ಆಹ್ಲಾದಕರವಾಗಿಯೂ ಕಾಣುತ್ತಾನೆ.
ತತ್ವಾರ್ಥ:
“ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ”– ಎಂದು ದಾಸರು ಹೇಳಿದಂತೆ, ನೀರಾಡಲ್ ಅಥವಾ ಸ್ನಾನ ಮಾಡುವಿಕೆ ಎಂದರೆ, ಭಗವಂತನ ಗುಣಗಳನ್ನು ಸ್ಮರಿಸಿ, ತಲ್ಲೀನರಾಗಿ ಆನಂದಿಸುವುದು ಹಾಗು ಅವನ ಧ್ಯಾನದಲ್ಲಿ ಮಗ್ನವಾಗುವುದು. ಇದಕ್ಕೆ ಇಚ್ಚಾ ಪ್ರವೃತ್ತಿಗಳಲ್ಲದೆ ಬೇರೆ ಅಧಿಕಾರ ಮತ್ತು ಸಂಪತ್ತು ಬೇಕಿಲ್ಲ. ಸೌಂದರ್ಯಾದಿ ಪ್ರಸಾಧನಗಳು ಶರೀರಕ್ಕೆ ಮುಖ್ಯಾಲಂಕಾರ. ಶಾಂತ್ಯಾದಿ ಗುಣಗಳು ಆತ್ಮನಿಗೆ ಅಲಂಕಾರ. ಅಂತಹ ಸಾತ್ವಿಕ ಗುಣಗಳನ್ನು ವೃದ್ಧಿ ಮಾಡಿಕೊಂಡು, ವಿಷಯಾಕರ್ಷಣೆಯಿಂದ ದೂರವಾಗಿ ಪರಮಾತ್ಮನ ಸೇವೆ ಮಾಡಿದರೆ ಭಗವಂತನ ಅಪರಿಮಿತ ಪ್ರೀತಿಗೆ ಪಾತ್ರರಾಗುವುದು ಖಂಡಿತ.
ಆ ಅನಂತನನ್ನು ಧ್ಯಾನಿಸಲು “ಓಂ ನಮೋ ನಾರಾಯಣಾಯ!” ಎಂಬ ತಿರುಮಂತ್ರವೇ ಆಧಾರ. ಭಗವದ್ ಧ್ಯಾನದ ಫಲವಾಗಿ ಅವನು ನಮಗೆ ಅವನ ಸೇವೆಯ ಆನಂದವನ್ನು ಮತ್ತು ಮೋಕ್ಷವನ್ನು ಅನುಗ್ರಹಿಸುವನು.
“ಬಿಡೆನೋ ನಿನ್ನಂಘ್ರಿ ಶ್ರೀನಿವಾಸ ಎನ್ನ ದುಡಿಸಿಕೊಳ್ಳೆಲೋ ಶ್ರೀನಿವಾಸ “– ಭಗವಂತನ ದಿವ್ಯರೂಪ ಸಕಲತಾಪಗಳನ್ನು ನೀಗಿಸುವ ಅದ್ವಿತೀಯ ರತ್ನ ತಟಾಕದಂತೆ .
ವಿಷಯ ಸಂಗ್ರಹ : “ತಿರುಪ್ಪಾವೈ ರಸಸ್ವಾಧಿನಿ” – ಬರೆದವರು ವಿದ್ವಾನ್ ವೇದಾನ್ತ ಸಾರಜ್ಞ
ಶ್ರೀ ಎಸ್. ಕೃಷ್ಣಾತಾತಾಚಾರ್ಯ )
(1) ಗಮಕ ಕವಿತಾ ವನಜ ಭಾಸ್ಕರ , ಗಮಕ ರತ್ನಾಕರ ಶ್ರೀಯುತ ಬಿ.ಎಸ್ .ಎಸ್ ಕೌಶಿಕ್ ರವರ ಶ್ರೀಮದಾಂಡಾಳ್ ಮಹಾ ವೈಭವಂ –ತಿರುಪ್ಪಾವೈ – ಮೂಲ, ಕನ್ನಡ ತಾತ್ಪರ್ಯ , ಷಟ್ಪದಿ, ಭಾವಾರ್ಥ , ಚೌಪದಿ )
ಚಿತ್ರಕೃಪೆ : ಕೇಶವ್ ವೆಂಕಟರಾಘವನ್ (ಪಾಶುರಂ – 1)
Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.