close logo

ಕನ್ನಡದಲ್ಲಿ ತಿರುಪ್ಪಾವೈ ಲೇಖನಮಾಲೆ – ಪಾಶುರಂ 7

 ತಿರುಪ್ಪಾವೈ ಲೇಖನಮಾಲೆಯ ಹಿಂದಿನ ಮೂರು ಲೇಖನಗಳನ್ನು ಈ ಕೆಳಗೆ  ಓದಬಹುದು :

7. ಪಾಶುರಂ:

ಕೀಶು ಕೀಶೇನ್ರೆಜ್ಞ್ಗುಮಾನೈ ಚಾತ್ತಕಲಂದು !

ಪೇಶಿನ ಪೇಚ್ಚರವಂ ಕೇಟ್ಟಿಲೈಯೋ ! ಪೇಯ್ ಪ್ಪೆಣ್ಣೇ !

ಕಾಶುಂ ಪಿರಪ್ಪುಂ ಕಲಗಲಪ್ಪಕ್ಕೈ ಪೇರ್ತು

ವಾಶ ನರುಜ್ಞ್ಗುಳ ಲಾಯಿಚ್ಚಿಯರ್ ಮತ್ತಿನಾಲ್

ಓಶೈ ಪಡುತ್ತ ತಯಿರ ರವಂ ಕೇಟ್ಟಿಲೈಯೋ

ನಾಯಕಪ್ಪೆಣ್ಣಿಳ್ಳಾಯ್ ! ನಾರಾಯಣನ್ ಮೂರ್ತಿ

ಕೇಶವನೈ ಪ್ಪಾಡವುಂ ನೀಕೇಟ್ಟೇ ಕಿಡತ್ತಿಯೋ

ತೇಶ ಮುಡೈಯಾಯ್ ! ತಿರ ವೇಲೋ ರೆಂಬಾವಾಯ್ ॥

ಶ್ರೀಯುತ ಕೌಶಿಕರ ಕನ್ನಡ ಭಾಷಾಂತರ ಹೀಗಿದೆ:

ಎಲ್ಲ ದೆಸೆಯೊಳು ಭಾರದ್ವಾಜ ಪಕ್ಷಿಗಳು ನೆರೆ-

ದುಲ್ಲಸದಿ ಕೀಚು ಕೀಚೆನ್ನುತಿಹವಾನುಡಿಯ 

ಸಲ್ಲಲಿತದರ್ಥ ಕಿವಿಗಿಡಿಯವೇ ಎಲೆ ಹುಚ್ಚು ಹೆಣ್ಣೆ, ಗೆಜ್ಜೆಯ ಶಬ್ದವು।

ಘಲ್ಲು ಘಲ್ಲೆನೆ ಮೊಸರ ಕೈಯೆತ್ತಿ ಕಡೆಯುತಿಹ 

ನಲ್ಲೆಯರು, ಕೇಶವನ ಪಾಡುತಿಹುದನು ಕೇಳು-

ತಿಲ್ಲಿನೀ ನಿದ್ರಿಪುದೆ, ಯೆಚ್ಚತ್ತು ಹರಿನಾಮಗೈದು ಕೃತಕೃತ್ಯಳಾಗು ||೭|| 

ಹಿಂದಿನ ಪಾಶುರದಲ್ಲಿ ತಿಳಿಸಿದಂತೆ, ಗೋದಾದೇವಿಯು ತನ್ನ ಸಖಿ ಗೋಪಿಯರನ್ನು ಒಬ್ಬೊಬ್ಬರನ್ನಾಗಿ ಎಬ್ಬಿಸುತ್ತಾ ಬರುತ್ತಿದ್ದಾಳೆ. ಇಲ್ಲಿ ಅವಳು ಶ್ರೀಕೃಷ್ಣನ ಧ್ಯಾನದಲ್ಲೇ ತಲ್ಲೀನಳಾಗಿ ಮಲಗಿರುವ ಸಖಿಯನ್ನು ಎಚ್ಚರಿಸಿ ಕರೆಯುವ ಭಾವವು ವ್ಯಕ್ತವಾಗಿದೆ. ಈ ಪಾಶುರದಲ್ಲಿ ಗೋದಾದೇವಿ ಮತ್ತು ಅವಳ ಸಖಿಯ ನಡುವೆ ನಡೆಯುವ ಮಾತುಕತೆ, ಭಗವಂತನ ಧ್ಯಾನದ ಫಲ, ಅದರಿಂದ ಲಭಿಸುವ ಜ್ಞಾನ ಸಂಪತ್ತು ಹಾಗು  ಅದನ್ನ ಇತರರಿಗೆ ತಿಳಿಸಿ ಅವರನ್ನೂ ಉದ್ಧರಿಸಬೇಕೆಂಬ ಭಾವ ಎಲ್ಲವೂ ಸೂಚಿತವಾಗಿದೆ. 

ಇಲ್ಲಿ ಎಬ್ಬಿಸಲ್ಪಡುವವಳು ಭಾಗವತ ಯೂಥಕ್ಕೆ ನಾಯಕಿ ಪ್ರಾಯಳಾದ ಗೋಪಿಕೆ. ಭಾಗವತರಿಂದಲೇ ಪರಮಾತ್ಮನ ಮಹಿಮೆಯು ಗೋಚರವಾಗುವುದು. ಗೋದಾದೇವಿಯು ಭಾಗವತರೊಡನೆ ಕೂಡಿದ್ದು ಪರಮಾತ್ಮನನ್ನು ಸ್ತುತಿಸುವುದೇ ಪರಮ ಪುರುಷಾರ್ಥವೆಂದು ತಿಳಿಸಿ ಅವನಲ್ಲಿ ತಲ್ಲೀನಳಾದ ನಾಯಕಿ ಗೋಪಬಾಲಿಕೆಯನ್ನು ಎಬ್ಬಿಸುವಳು. ಹೊರಗಿನಿಂದ ಗೋದಾದೇವಿ ಮತ್ತು ಒಳಗೆ ಮಲಗಿರುವ ಗೋಪಿಕೆಯ ನಡುವೆ ನಡೆಯುವ ಉಕ್ತಿ ಮತ್ತು ಪ್ರತ್ಯುಕ್ತಿಗಳು ಬಹಳ ಮನೋಹರವಾಗಿ ಹೀಗಿದೆ:

ಗೋದಾದೇವಿ:- ಬೆಳಗಾಯಿತು ಏಳು 

ಗೋಪಿ:- ಬೆಳಗಾದುದಕ್ಕೆ ಗುರುತೇನು?

ಗೋದಾದೇವಿ:-ಭಾರದ್ವಾಜ ಪಕ್ಷಿಗಳ ಕೀಚ್ – ಕೀಚ್ ಶಬ್ದದಿಂದ ಕೂಗುತ್ತಿರುವುದು ಕೇಳುತ್ತಿಲ್ಲವೇ?

ಗೋಪಿ:- ಹಕ್ಕಿಯ ಶಬ್ದದಿಂದ ಏಳುವುದೇ? ಇಲ್ಲ… ಅವು ಯಾವಾಗಲೂ, ಎಲ್ಲೆಲ್ಲಿಯೂ ಕೂಗುತ್ತಿರುತ್ತವೆ. 

ಗೋದಾದೇವಿ:- ಹುಚ್ಚಿ, ಇದೇನು ದೊಡ್ಡಸ್ತಿಕೆ. ಪರಮಾತ್ಮನಲ್ಲಿ ಪ್ರೇಮ ತಾಳಿದ ಮೇಲೂ ಇಷ್ಟು ಅಹಂಕಾರವೇ? 

ಗೋಪಿ:- ನಾನು ಹುಚ್ಚಿಯಾದರೆ, ನಿಮಗೇನು ಕೊರತೆಯಿಲ್ಲವಷ್ಟೆ! ಪ್ರಾಥ:ಕಾಲವಾದುದಕ್ಕೆ ಬೇರೆ ಗುರುತಿದ್ದಲ್ಲಿ ತಿಳಿಸಿ.. 

(ಒಳಗಿದ್ದ ಗೋಪಿಯು ಇವರ ಕೂಗನ್ನು ನಿರ್ಲಕ್ಷಿಸಿ ಮಲಗುತ್ತಾಳೆ)

ಗೋದಾದೇವಿ:- ಅನೇಕ ಗೋಪಿಸ್ತ್ರೀಯರು ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಮೊಸರು ಕಡೆಯುತ್ತ, ಅವರ ಕಂಠಾಭರಣವಾದ ಕಾಸಿನ ತಾಳಿಯೂ, ಬಳೆಗಳ ಶಬ್ದವೂ ಮತ್ತು ಶ್ರೀಕೃಷ್ಣನನ್ನು ಸ್ತುತಿ ಮಾಡುತ್ತಾ ತಾಳಬದ್ಧವಾಗಿ ಹಾಡುತ್ತಿರುವ ಸಂಕೀರ್ತನೆಯು ನಿನಗೆ ಕೇಳುತ್ತಿಲ್ಲವೇ? ಕೃಷ್ಣ ಪ್ರೇಮಿಯಾದ ನಿನಗೆ ಸಂಕೀರ್ತನದ ಸವಿಯಾದ ಶಬ್ದವು ಕಿವಿಯ ಮೇಲೆ ಬೀಳಲಿಲ್ಲವೇ? ಇಂತ ಮಂಗಳವಾದ ನಾದವು ಕೇಳಿ ಬರುತ್ತಿದ್ದರು ನೀನು ಮಲಗಿದ್ದೀಯಾ? ಏಳು ಸಖಿ.

 (ಎನ್ನುತ್ತಾ ಬಾಗಿಲ ಸಂಧಿಯಲ್ಲಿ ಇಣುಕಿ ನೋಡುತ್ತಾಳೆ. ಒಳಗೆ ಮಲಗಿದ್ದ ಗೋಪಿಯು ಇವರ ಮಾತಿಗೆ ಉತ್ತರವನ್ನು ಕೊಡದೆ, ಹಾಗೆ ಸುಮ್ಮನಾಗುತ್ತಾಳೆ.)

ಗೋದಾದೇವಿ:- ನಾರಾಯಣನ ಅವತಾರವಾಗಿ ನಮ್ಮೆಲ್ಲರ ಸ್ವಾಮಿಯಾದ ಶ್ರೀಕೃಷ್ಣನು “ಕೇಶಿ” ಎಂಬ ಅಸುರನನ್ನು ಕೊಂದು ಕೇಶವನಾದನು. ಈ ಮಾರ್ಗಶಿರ ಮಾಸಾಧಿ ದೇವತೆಯಾಗಿ ಸರ್ವಕಾರಣ ಕರ್ತನಾದ ಕೇಶವ ನಾಮಕನನ್ನು, ನಾವು ಸ್ತುತಿ ಮಾಡಿಕೊಂಡು ಬಂದಿರುವಾಗಲೂ ನೀನು ಎದ್ದು ಬರದೆ ಮಲಗಿದ್ದೀಯೊ ? ನೀನು ನಮ್ಮೆಲ್ಲರ ನಾಯಕಿ (ನಾಯಕಪ್ಪೆಣ್ಣಿಳ್ಳಾಯ್). ಮುಂದೆ ಬಂದು ನಮ್ಮೆಲ್ಲರ ನಾಯಕತ್ವ ವಹಿಸಿ ಕೇಶವನನ್ನು ಸ್ತುತಿಸಿ ಭಗವದ್ ಕೈಂಕರ್ಯವನ್ನು ನಡೆಸು. 

(ಆಗ ಸಖಿಯು ಜಗ್ಗನೆದ್ದು ಹೊರಗೆ ಬರಲು ಸಿದ್ಧಳಾಗುತ್ತಳೆ. ಅವಳ ತೇಜೋಪುಂಜವಾದ ಮುಖ ಮುದ್ರೆಯನ್ನು ನೋಡಿ,ಅವಳನ್ನು)

ಗೋದಾದೇವಿ:- ತೇಜಸ್ವಿನಿಯೇ ಬಾಗಿಲು ತೆಗಿ. ಹೊರಗೆ ಬಾ (ಎಂದು ಕರೆಯುತ್ತಾಳೆ )

ಹಿಂದಿನ ಪಾಶುರಾಂ (೬) ನಲ್ಲಿ ಹರಿ: ಹರಿ: ಶಬ್ದದಿಂದ ಗೋಪಿಕೆ ಓಡಿಬಂದು ಭಜನಾ ಕೂಟವನ್ನು ಕೂಡಿಕೊಂಡಳು. ಆದರೆ, ಇಲ್ಲಿ ಈ ಗೋಪಿ “ನಾಯಕ ಪೆಣ್ಣೆ”   ಎನ್ನುತ್ತಿದ್ದಂತೆ ಇವರನ್ನು ಸೇರಿ ಮುಂದೆ ಸಾಗುತ್ತಾಳೆ. 

  “ಪ್ರಾತಃಸ್ಮರಾಮಿ ದಧಿಘೋಷವಿನೀತ ನಿದ್ರಂ 

                         ನಿದ್ರಾವಸಾನ ರಮಣೀಯ ಮುಖಾರವಿಂದಂ ।

                         ಹೃದ್ಯಾನವದ್ಯವಪುಷo ನಯನಾಭಿರಾಮಂ 

                         ಉನ್ನಿದ್ರಪದ್ಮ ನಯನಂ ನವನೀತಚೋರo ।।” – ಕೃಷ್ಣಕರ್ಣಾಮೃತ 

ಇಲ್ಲಿ ಬೆಳಗಾಗುವ ಸೂಚನೆಗಳನ್ನು ತಿಳಿಸಲಾಗಿದೆ. ಮೊಸರನ್ನು ಕಡೆಯುವ ಶಬ್ದಗಳು ದಿಕ್ಕುಗಳಲ್ಲೆಲ್ಲಾ ಪ್ರತಿಧ್ವನಿತವಾದಂತಿದೆ. ನಮ್ಮ ಪ್ರಾಪ್ಯವಸ್ತುವಾದ ಶ್ರೀಕೃಷ್ಣ ಆ ಗೋಪಿಯರ ಮುಂದೆ ಹಾಜರಾಗಿ ನವನೀತಕ್ಕಾಗಿ ನಾಟ್ಯವಾಡುತ್ತ ಸಮಯ ನೋಡಿ ದೀಪವನ್ನು ಬಾಯಿಂದ ಊದಿ ಆರಿಸಿ, ನವನೀತವನ್ನು ಕದ್ದು ಹೋಗುವಾಗ ನೀನು ಏಳದಿರುವುದು ಹೇಗೆ ?

ನವನೀತಕ್ಕಾಗಿ ನಾಟ್ಯವೆಂದರೆ, ಅದು ಅತಿ ಮೃದುವೂ ಮಸೃಣವೂ ಆದುದು. ಇದು ದ್ರುತವಾದ (ಕರಗಿದ) ಮುಮುಕ್ಷು ಚಿತ್ತಕ್ಕೆ ನಿದರ್ಶನ. ಅಂದರೆ, ಮುಮುಕ್ಷುಗಳಾದ ಗೋಪಿಯರ ನವನೀತದಶಾಪನ್ನವಾದ ಹೃದಯವನ್ನು ಆ ಕ್ಷಣವೇ ಸ್ವೀಕರಿಸಿ ತನ್ನದನ್ನಾಗಿ ಮಾಡಿಕೊಳ್ಳುತ್ತಾನೆ-ಶ್ರೀಕೃಷ್ಣ. ಮನಸ್ಸು ಅವನಲ್ಲಿ ಲೀನವಾಗುವುದೇ ಈ ಮೋಕ್ಷವೆಂಬುದು. ನಮ್ಮ ಮನಸ್ಸು ಈಶ್ವರನಿಗೆ ಸಮರ್ಪಣವಾಗುವುದರಲ್ಲಿ ಪ್ರಥಮ ಪ್ರವೃತ್ತಿ ಸರ್ವೇಶ್ವರನಾದ ಅವನದೇ. ಜಗತ್ತಿನ ಸೃಷ್ಟಿ-ಸ್ಥಿತಿ-ಲಯಕ್ಕೆ ಕಾರಣನಾದ ನಾರಾಯಣನು ದಿವ್ಯಮಂಗಳ ವಿಗ್ರಹ ವಿಶಿಷ್ಟನು. ಇವನೇ ಪರದೈವ. ಇವನೇ ನಮ್ಮ ಶ್ರೀಕೃಷ್ಣ- ಎನ್ನುತ್ತಾಳೆ ಗೋದಾದೇವಿ. 

ತತ್ವಾರ್ಥ:

ಈ ಪದ್ಯದಲ್ಲಿ ನಮ್ಮ ಮನಸ್ಸಿಗೆ/ಆತ್ಮನಿಗೆ ಬೆಳಕಿನ ಅನೇಕ ಸೂಚನೆಗಳನ್ನು ವಿವರಿಸಲಾಗಿದೆ. ಶಾಸ್ತ್ರವೆಂಬ ಹಾಲಿಗೆ ಪ್ರೇಮವೆಂಬ ಹೆಪ್ಪು ಹಾಕಿ, ಮೊಸರಾದಾಗ ಅದನ್ನು “ಪ್ರಜ್ಞೆ” ಎಂಬ ಕಡಗೋಲಿನಿಂದ ಕಡೆದು ಪ್ರಣವದಿಂದ ಮಥನ ಮಾಡಿದರೆ “ಜ್ಞಾನ” ಎಂಬ ಬೆಣ್ಣೆ ಹೊರಬರುತ್ತದೆ.  ಇದರಂತೆಯೇ ಈಶ್ವರನೂ ಸುಖ ದುಃಖಗಳ ಪ್ರವಾಹದಲ್ಲಿ ಬಿದ್ದಿರುವ ಚೇತನರನ್ನು ಯಾದೃಚ್ಚಿಕ ಪ್ರಾಸಂಗಿಕಾದಿ ಮೂಲವಾದ ವ್ಯಾಜದಿಂದ ಮೇಲಕ್ಕೆತ್ತಿ ಇದರಿಂದಲೇ ಸ್ವಪ್ರಯೋಜನ ಸಿದ್ದಿಸುವುದರಿಂದ ಸಂತೋಷಿಸುತ್ತಾನೆ. ನಮ್ಮ ಭಕ್ತಿ ಭಾವವು ಅವನಿಂದ ಅಂಗೀಕರಿಸಲ್ಪಡುತ್ತದೆ. 

ಈ ಪಾಶುರದಲ್ಲಿಯ, ‘ಪೇಯ್ ಪೆಣ್ಣೆ’ -ಎಂಬಲ್ಲಿ ಗೋದಾದೇವಿಯು ಈ ಭೂಮಿಯಲ್ಲಿರುವ ಮಂದ ಜನರೆಲ್ಲರನ್ನೂ “ಉತ್ತಿಷ್ಠತ| ಜಾಗ್ರತ| ಪ್ರಾಪ್ಯವರಾನ್ನಿ ಬೋಧತ ।” ಎಂಬ ರೀತಿಯಿಂದ ಸಂಬೋಧಿಸುತ್ತಾಳೆ. 

ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು

ಪದುಮನಾಭನ ಪಾದದೊಲುಮೆ ಎನಗಾಯಿತು

ಹರಿತೀರ್ಥ ಪ್ರಸಾದ ಎನ್ನ ಜಿಹ್ವೆಗೊದಗಿತುಹರಿಯ ನಾಮಾಮೃತ ಕಿವಿಗೊದಗಿತು

ಹರಿಯ ದಾಸರು ಎನ್ನ ಬಂಧು ಬಳಗವಾದರುಹರಿಯ ಶ್ರೀಮುದ್ರೆ ಆಭರಣವಾಯ್ತು ||1||

ಮುಕುತರಾದರು ಎನ್ನ ನೂರೊಂದು ಕುಲದವರುಮುಕುತಿ ಮಾರ್ಗಕೆ ಯೋಗ್ಯ ನಾನಾದೆನೊ

ಅಕಳಂಕ ಶ್ರೀಹರಿ ಭಕುತಿಗೆನ್ನ ಮನ ಬೆಳೆದುರುಕುಮಿಣಿಯರಸ ಕೈವಶನಾದನೆನಗೆ ||2||

ಇಂದೆನ್ನ ಜೀವಕ್ಕು ಸಕಲ ಸಂಪದವಾಯ್ತುಮುಂದೆನ್ನ ಜನ್ಮ ಸಫಲವಾಯಿತು

ತಂದೆ ಶ್ರೀ ಕಾಗಿನೆಲೆಯಾದಿಕೇಶವರಾಯಬಂದೆನ್ನ ಹೃದಯದಲಿ ನೆಲೆಯಾಗಿ ನಿಂತ ||3||

ಶ್ರೀಮನ್ನಾರಾಯಣನ ಗುಣಗಣ ಶ್ರವಣವೇ ಕಿವಿಗೆ ಪರಮಾನಂದಕರವೆಂದರ್ಥ. ಇಂತಹ ಪರಮಾನಂದಾನುಭವವನ್ನು ಎಲ್ಲರೊಡನೆ ಕೂಡಿ ಅನುಭವಿಸುವುದೇ ಜೀವನ ಸಾರ್ಥಕ್ಯ. 

(ವಿಷಯ ಸಂಗ್ರಹ : “ತಿರುಪ್ಪಾವೈ ರಸಸ್ವಾಧಿನಿ” – ಬರೆದವರು ವಿದ್ವಾನ್ ವೇದಾನ್ತ ಸಾರಜ್ಞ

   ಶ್ರೀ ಎಸ್. ಕೃಷ್ಣಾತಾತಾಚಾರ್ಯ )

(1) ಗಮಕ ಕವಿತಾ ವನಜ ಭಾಸ್ಕರ , ಗಮಕ ರತ್ನಾಕರ ಶ್ರೀಯುತ ಬಿ.ಎಸ್ .ಎಸ್ ಕೌಶಿಕ್  ರವರ  ಶ್ರೀಮದಾಂಡಾಳ್ ಮಹಾ ವೈಭವಂ -ತಿರುಪ್ಪಾವೈ – ಮೂಲ, ಕನ್ನಡ ತಾತ್ಪರ್ಯ , ಷಟ್ಪದಿ, ಭಾವಾರ್ಥ , ಚೌಪದಿ )

ಚಿತ್ರಕೃಪೆ : ಕೇಶವ್ ವೆಂಕಟರಾಘವನ್ (ಪಾಶುರಂ – 6)

ಶ್ರೀ ನೀಳಾ  ದೇವೈ ನಮಃ

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply