close logo

ಕನ್ನಡದಲ್ಲಿ ತಿರುಪ್ಪಾವೈ ಲೇಖನಮಾಲೆ – ಪಾಶುರಂ 4

ಚಿತ್ರಕೃಪೆ : ಕೇಶವ್ ವೆಂಕಟರಾಘವನ್ (ಪಾಶುರಂ – 4)

ಶ್ರೀ ನೀಳಾ  ದೇವೈ ನಮಃ

ತಿರುಪ್ಪಾವೈ ಲೇಖನಮಾಲೆಯ ಹಿಂದಿನ ಮೂರು ಲೇಖನಗಳನ್ನು ಈ ಕೆಳಗೆ  ಓದಬಹುದು :

ತಿರುಪ್ಪಾವೈ ಲೇಖನಮಾಲೆ ಪೀಠಿಕೆ    ಪಾಶುರಂ – 1        ಪಾಶುರಂ – 2          ಪಾಶುರಂ – 3

4.  ಪಾಶುರಂ  

ಆಳಿಮಳೈಕ್ಕಣ್ಣಾ ! ಒನ್ರು ನೀಕೈ ಕರವೇಲ್

ಆಳಿಯುಳ್ ಪುಕ್ಕು ಮುಗುಂದು ಕೊಡಾರ್ತೇರಿ

ಊಳಿಮುದಲ್ವ ನುರುವಂಪೋಲ್ ಮೆಯಿಕರುತ್ತು

ಪಾಳಿಯಂದೋಳುಡೈ ಪರ್ಪನಾಬನ್ ಕೈಯಿಲ್

ಆಳಿಪೋಳ್ ಮಿನ್ನಿ, ವಲಂಬುರಿ ಪೋಲ್ ನಿನ್ರದಿರಿಂದು

ತಾಳಾದೇ ಶಾರ್ ಜ್ಞ್ಗಮುದೈತ್ತ ಶರಮಳೈಪೋಲ್

ವಾಳವುಲಗಿನಿಲ್ ಪೆಯ್ ದಿಡಾಯ್ ನಾಂಗಳುಂ

ಮಾರ್ಗಳಿ ನೀರಾಡ ಮಗಿಳಿಂದೇಲೋ ರೆಂಬಾವಾಯ್ ॥4॥

ಶ್ರೀಯುತ ಕೌಶಿಕರ ಕನ್ನಡ ಭಾಷಾಂತರ ಹೀಗಿದೆ:

ದೇವ ವರುಣನೆ ಜೀವನಾಧಾರನಾದ ನೀ-

ನಾವಪರಿಯೌ ದಾರ್ಯಗೆಡದುದಧಿಯಂಪೊಕ್ಕು 

ಪಾವನದ ಜಲವೀಂಟುತಾಕಾಶಕೆರುತ್ತ ಲಾದಿದೆವನ ರೂಪದಿಂ 

ಆವಿಯನ್ಮ೦ಡಲದೆ, ಹರಿಯ ಕರಚಕ್ರದೊಲು 

ತೀವಿ  ಬೆಳಗುತ್ತವನ ಶಂಖದಾ ಧ್ವನಿಗೈಯು-

ತಾವು ನೀರಾಡಲ್ಕೆ, ಮಾರ್ಗಶಿರ ಮಾಸದಲ್ಲಿ, ಹರಿಶರದೊಲುಗಿಸು ಮಳೆಯ ।।4।।

ಈ ಪಾಶುರದಲ್ಲಿ ಗೋದಾದೇವಿಯು ಮಳೆಯ ದೇವರಾದ ವರುಣ ಅಥವಾ ಪರ್ಜನ್ಯನನ್ನು  ಗೋಪಕನ್ಯೆಯರ ಜೊತೆಯಲ್ಲಿ ಸೇರಿ ಪ್ರಾರ್ಥಿಸುತ್ತಾಳೆ. ನಮ್ಮ ಸಂಸ್ಕೃತಿಯಲ್ಲಿ ಹೆಣ್ಣು ಮಕ್ಕಳು ನಮ್ಮ ದೇಶ, ಇಲ್ಲಿನ ಜನರ, ಮಕ್ಕಳ ಮತ್ತು ಮನೆಯ ಹಿರಿಯರ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ವಿಶೇಷವಾಗಿ ಭಗವಂತನನ್ನು ಪ್ರಾರ್ಥಿಸುತ್ತಾರೆ. ಇದೇ ನಿಟ್ಟಿನಲ್ಲಿ, ಗೋದಾದೇವಿಯು ರಾಜ್ಯದ, ರಾಷ್ಟ್ರದ ಜನರ ಹಿತಕ್ಕಾಗಿ ಮತ್ತು  ಒಳಿತಿಗಾಗಿ ಆ ವರುಣ ದೇವರನ್ನ ಪ್ರಾರ್ಥಿಸುತ್ತಿದ್ದಾಳೆ. ನಮ್ಮ ಧರ್ಮಾಚರಣೆ ಮತ್ತು ಸದಾಚಾರದಿಂದ ದೇಶಕ್ಕೆ ಒಳಿತಾಗುತ್ತದೆ ಎಂದು ನಮ್ಮ ಧರ್ಮದಲ್ಲಿ ತಿಳಿಸಿದ್ದಾರೆ. ಇದನ್ನೇ ಗೋದಾದೇವಿ ಮತ್ತು ಅವಳ ಸಖಿಯರಾದ ಗೋಪಕನ್ಯೆಯರು ವ್ರತಾಚರಣೆ ಮೂಲಕ ತಿಳಿಸುತ್ತಾರೆ.  

ಈಗ ವಿಭವಾತಾರಗಳಿಲ್ಲ, ಅರ್ಚಾವತಾರಗಳೇ ನಮಗಿಂದು ಆಶ್ರಯ. ಇಲ್ಲಿ ತನಗೆ ಪರಮಪ್ರಿಯವಾದ ‘ಕಣ್ಣಾ’ ಎಂಬುದರಿಂದ ‘ತಿರುಕ್ಕಣ್ಣಪುರ’ವೆಂಬ ದಿವ್ಯದೇಶದ ಆಚಾರ್ಯಮೂರ್ತಿಯನ್ನೂ, ‘ಊಳಿಮುದಲ್ವನ್’ ಎಂದು ತನ್ನ ಅವತಾರ ಸ್ಥಳದ ವಟಪತ್ರಶಾಯಿಯನ್ನೂ, ‘ಪದ್ಮನಾಭನ್ ಕೈಯಿಲ್’ – ಎಂದು ಶ್ರೀ. ಅನಂತಪದ್ಮನಾಭನನ್ನೂ ಆಂಡಾಳ್ ಸ್ಮರಿಸಿದಂತಿದೆ. ಇಲ್ಲಿ ಅರ್ಚಾಮಹಿಮೆಯ ಜಯಕೋಡಿಯನ್ನು ನೆಲೆ ನಿಲ್ಲಿಸಿದ್ದಾಳೆನ್ನಬಹುದು. 

ಆಳಿಮಳೈಕ್ಕಣ್ಣಾ!! ಎಂದು ಹಾಡುತ್ತ, ಇಲ್ಲಿ ಗೋಪರಿಗೆ ವಿಶ್ವಾಸವನ್ನುಂಟು ಮಾಡುವುದಕ್ಕೆ, ಗೋದಾದೇವಿಯು ಪರ್ಜನ್ಯ ದೇವನನ್ನು ‘ಅಣ್ಣಾ’  ಎಂದು ಸಂಬೋಧಿಸಿದಂತೆಯೂ ಇದೆ. ಮಳೆ ಹಾಗು ಮೇಘದ ನೆಪದಿಂದ ವಿದ್ವಾಂಸರು- ಭಕ್ತೋಜ್ಜೀವನಲ್ಲಿಯೇ ಆಸಕ್ತರು ಎಂದು ಕೂಡ ಸಂಬೋಧಿಸಲ್ಪಟ್ಟಿದ್ದಾರೆ [ನಾಂಗಳುಂ ಮಾರ್ಗಳಿ ನೀರಾಡ ಮಗಿಳಿಂದೇಲೋ]. 

ಮೇಘವು ಉಪ್ಪುನೀರನ್ನು ಕುಡಿದು ಸಿಹಿನೀರನ್ನು ಧಾರೆಯಾಗಿ ಸುರಿಸುತ್ತದೆ. ಹಾಗೆಯೇ ಮಹಾತ್ಮರು ಶ್ರುತಿಯೆಂಬ ಸಾಗರದಲ್ಲಿ ಕಠಿಣ ಮತ್ತು ಕಹಿಯಾದ ಅರ್ಥಗಳನ್ನು ಸಿಹಿಯಾದವುಗಳನ್ನಾಗಿ ಮಾಡಿ ಸರ್ವೋಪಭೋಗ್ಯವಾಗುವಂತೆ ಪ್ರತಿಪಾದಿಸುತ್ತಾರೆ. 

ಮೇಘವು ಅಲ್ಲಲ್ಲಿ ಓಡಾಡಿಕೊಂಡು ಮಳೆ ಸುರಿಸುವಂತೆ ಆಚಾರ್ಯರು ತೀರ್ಥಯಾತ್ರೆ ನೆಪದಿಂದ ಲೋಕವನ್ನು ಸಂಚರಿಸುತ್ತಾ ಸರ್ವೋಪಜೀವ್ಯವಾದ ಅರ್ಥವಿಶೇಷಗಳನ್ನು ವರ್ಷಿಸುತ್ತಾರೆ. 

ಮೇಘವು ತಗ್ಗು ಜಾಗಗಳನ್ನೂ ನೀರಿನಿಂದ ತುಂಬುವ ಹಾಗೆ ಇವರು ಒಳ್ಳೆಯ ಉಪದೇಶಗಳ ಸುರಿಮಳೆಗಳಿಂದ ನೀಚರನ್ನೂ ಜ್ಞಾನ ಪೂರ್ಣರನ್ನಾಗಿ ಮಾಡುತ್ತಾರೆ. 

ಮೇಘ ಯಾವಾಗಲೂ ಮಳೆ ಸುರಿಸುವುದಿಲ್ಲ – ಕಾಲ ವಿಶೇಷಗಳಲ್ಲಿ ಮಾತ್ರ ಸುರಿಸುತ್ತವೆ. ಹಾಗೆಯೇ ಗುರುಗಳೂ ಕೂಡ ಸಮಯ ವಿಶೇಷಗಳಲ್ಲಿ ಸದುಪದೇಶವನ್ನು ವರ್ಷಿಸುವರು. 

ಮೇಘವು ತಕ್ಕ ಕಾಲದಲ್ಲಿ ಮಳೆ ಸುರಿಸದಿದ್ದಲ್ಲಿ ನಾನಾ ಪೀಡೆಗಳಾಗಿ, ಪ್ರಾಣಿ, ಪಕ್ಷಿ ಮತ್ತು ಮಾನವರು ಅನೇಕ ಸಂಕಷ್ಟಗಳಿಗೆ ಈಡಾಗುತ್ತಾರೆ. ಹೀಗೆಯೇ ಸದಾಚಾರ್ಯನ ಸದುಪದೇಶವು ಇಲ್ಲದಿದ್ದಲ್ಲಿ ದೇಹಾತ್ಮ ಭ್ರಮೆ-ಸ್ವತಂತ್ರಾತ್ಮ ಭ್ರಮೆ -ಅನ್ಯಶೇಷತ್ವ ಭ್ರಮೆ-ಸ್ವರಕ್ಷಣದಲ್ಲಿ ತನಗೇ ಯೋಗ್ಯತೆಯಿರುವುದೆಂಬ ಭ್ರಮೆ – ಅಬಾಂಧವರಲ್ಲಿ ಬಂಧುಗಳೆಂಬ ಭ್ರಮೆ – ಇತರ ವಿಷಯ ಪ್ರಾವಣ್ಯ ಮುಂತಾದ ಭ್ರಮೆಗಳು ಕಾಡುತ್ತವೆ. 

ಮೇಘವು ಎಷ್ಟು ತೀಕ್ಷ್ಣವಾಗಿ ಮಳೆ ಸುರಿಸಿದರೂ ತೃಪ್ತಿಯನ್ನು ಹೊಂದದು. ಪ್ರತ್ಯುಪಕಾರವನ್ನು ನಿರೀಕ್ಷಿಸದು. ಹಾಗೆಯೇ ಆಚಾರ್ಯನೂ ಅಧಿಕಾಧಿಕ ಅರ್ಥ ವಿಶೇಷಗಳನ್ನು ಉಪದೇಶಿಸುವುದರಲ್ಲಿ ನಿರತನಾದರೂ ತೃಪ್ತಿಹೊಂದನು. ಪ್ರತ್ಯುಪಕಾರವನ್ನೂ ಪ್ರತೀಕ್ಷಿಸುವುದಿಲ್ಲ. ಅನನ್ಯ ಪ್ರಯೋಜನನಾಗಿ ಮತ್ತೆ-ಮತ್ತೆ ಉಪದೇಶಕ್ಕೆ ಅನುಕೂಲವಾದ ಕಾಲವನ್ನೇ ಅತ್ಯಾಸಕ್ತಿಯಿಂದ ನೋಡುತ್ತಿರುತ್ತಾನೆ. 

ಮೇಘವು ಒಮ್ಮೊಮ್ಮೆ ಸ್ವಲ್ಪ ಮಳೆಯನ್ನು ಸುರಿಸಿ ನಿಲ್ಲುತ್ತದೆ; ಮತ್ತೆ ಕೆಲವೊಮ್ಮೆ ಸಾಕು ಸಾಕೆನ್ನುವಷ್ಟು ಧಾರಾಕಾರವಾಗಿ ಸುರಿಸಿ ಆಶ್ಚರ್ಯಗೊಳಿಸುತ್ತದೆ. ಇದರಂತೆಯೇ ಆಚಾರ್ಯರು-ಕೆಲವು ಸಲ ಕರ್ಣಮೂಲದಲ್ಲಿಯೂ ಮತ್ತೆ ಕೆಲವೊಮ್ಮೆ ಶ್ರುತಿ-ಸ್ಮೃತಿ-ಇತಿಹಾಸ-ಪುರಾಣ-ವೇದಾಂತ ರಹಸ್ಯ ಸಾರಾರ್ಥಗಳನ್ನು ಮಿತಿಮೀರಿಯೂ ಉಪದೇಶಿಸಿ ಆಶ್ರಯಗೊಳಿಸುವರು. 

ಮಳೆಯ ನೀರು ಆಯಾ ಸ್ಥಳಾದಿತಾರತಮ್ಯಗಳಿಗೆ ತಕ್ಕಂತೆ ಫಲಪ್ರದವಾಗುವ ಹಾಗೆ ಆಚಾರ್ಯೋಪದೇಶವೂ ಉತ್ತಮ-ಮಧ್ಯಮ-ಅಧಮಗಳೆಂಬ ಶಿಷ್ಯ ತಾರತಮ್ಯಕ್ಕೆ ಅನುಗುಣವಾಗಿ ಫಲ ಕೊಡುತ್ತದೆ. 

ಮೇಘ ಮಳೆ ಸುರಿಸುವುದನ್ನು ಲೋಕದ ಜನರೂ ಮತ್ತು ಅನನ್ಯಗತಿಗಳಾದ ಸಸ್ಯಗಳು ಸದಾ ಎದುರು ನೋಡುತ್ತವೆ. ಹಾಗೆಯೇ ಸದಾಚಾರ್ಯರಿಂದ ಅನುಗ್ರಹಿಸಲ್ಪಡುವ ಅರ್ಥಗಳನ್ನು, ಉಪದೇಶಗಳನ್ನು ಅನನ್ಯಗತಿಕರಾದ ಶಿಷ್ಯರು ಆದರದಿಂದಲೂ, ಕುತೂಹಲದಿಂದಲೂ ಸ್ವೀಕರಿಸಿ ಆತ್ಮೋಜ್ಜೀವನವನ್ನು ಪಡೆಯುತ್ತಾರೆ. ಹೀಗೆ ಗೋದಾದೇವಿಯು ಸದರ್ಥಗಳನ್ನು ವರ್ಷಿಸುವ ಮಹಾಪ್ರಾಜ್ಞನಾದ ಸದಾಚಾರ್ಯನೂ ಇಲ್ಲಿ ಸಂಭೋದಿತನಾಗಿರುವಂತೆ ಧ್ವನಿಪೂರ್ವಕವಾಗಿ ಸ್ಪುಟಗೊಳಿಸುತ್ತಾಳೆ.

ವಲಂಬುರಿ ಪೋಲ್ ನಿನ್ರದಿರಿಂದು: ಶ್ರೀ ಕೃಷ್ಣನ ಪಾಂಚಜನ್ಯವು ಭಾರತದ ಸಮರದಲ್ಲಿ ಶಬ್ದಿಸಿ ಗುಡುಗಿದಂತೆ, ಮೇಘವು ಮಳೆಯನ್ನು ಗುಡುಗು ಮತ್ತು ಸಿಡಿಲಿನಿಂದ ಭೋರ್ಗರೆಯಬೇಕು. ದಿಕ್ಕುಗಳೆಲ್ಲವೂ ಅದರಿ ವಿರೋಧಿಗಳಿಗೆ ಭಯಂಕರವಾಗಿಯೂ ನಮ್ಮ ಗೋಪರಿಗೆ ಆನಂದಕರವಾಗಿಯೂ ಇರುವ ಧ್ವನಿ ಮಾಡಬೇಕು  …ಎನ್ನುವ ಭಾವ.  

ತತ್ವಾರ್ಥ: ಪಾಂಚಜನ್ಯವು – ಭಗವಂತನ ಶ್ಲೇಷವನ್ನು ಸಹಿಸದೆ ಸದಾ ಅವನ ಕರಗಳಿಗೆ ಅಲಂಕಾರಭೂಷಿತವಾಗಿ, ಅವನ ಸೇವೆಯನ್ನು ಮಾಡುತ್ತದೆಯೋ , ಹಾಗೆ ಆಚಾರ್ಯರೂ ಶ್ರೀರಂಗಾದಿಗಳಿಂದ ಹೊರ ಹೊರಟು, ಅನೇಕ ಪ್ರದೇಶಗಳಲ್ಲಿ ಸುತ್ತುತ್ತಿದ್ದಾಗ್ಯೂ ಭಗವಂತನ ಸನ್ನಿಧಿಯನ್ನು ಬಿಡದೆ ಅವನ ಕೈಂಕರ್ಯದಲ್ಲಿ ನಿರತರಾಗಿರುತ್ತಾರೆ. [ತಾಳಾದೇ] – ವಿಳಂಬಿಸದೆ, ಲೋಕದಲ್ಲಿ ಸ್ವರೂಪಕ್ಕೆ ಅನುರೂಪವಾದ ಸದರ್ಥ ಶ್ರವಣದಲ್ಲಿ ರುಚಿ ಯಾವಾಗಲೋ ಒಂದು ಸಲ ಹುಟ್ಟುತ್ತದೆ. ಚಂಚಲ ಮನಸ್ಸಿನಿಂದ ಮರುಕ್ಷಣದಲ್ಲಿಯೇ ವ್ಯತ್ಯಾಸವೂ ಹೊಂದುತ್ತದೆ. ಈ ಭಾವವು/ರುಚಿಯು ವಿಪರ್ಯಯ ವಾಗುವುದಕ್ಕೆ ಮೊದಲೇ ತಾಳಾದೇ /ವಿಳಂಬಿಸದೆ ಉಪದೇಶವನ್ನು ಮಾಡಬೇಕು ಎಂಬ ಮನೋಹರ ಧ್ವನ್ಯರ್ಥಗಳು ಈ ಪಾಶುರದಲ್ಲಿ ವ್ಯಕ್ತವಾಗಿದೆ. 

ದಾಸರು ಹೇಳಿರುವಂತೆ,

ಧ್ಯಾನವು ಕೃತಯುಗದಲ್ಲಿ 

ಯಜ್ಞಯಾಗವು ತ್ರೆತಾಯುಗದಲ್ಲಿ   

ಅರ್ಚನೆ ದ್ವಾಪರದಲ್ಲಿ 

ಕೀರ್ತನೆ ಮಾತ್ರದಿ ಕಲಿಯುಗದಲ್ಲಿ 

ಮುಕುತಿಯನೀವ ಪುರಂದರವಿಠ್ಠಲ 

ಸಕಲ ಚೇತನರ ಸಂತಾಪವನ್ನೂ ಶಮನಮಾಡಬಲ್ಲ ಅರ್ಥ ವಿಶೇಷಗಳನ್ನು ಪ್ರಣವ ವ್ಯಾಖ್ಯಾನದ ಮೂಲಕ ಪ್ರಕಟಪಡಿಸುವಂತೆ,  ಜಗತ್ತಿನಲ್ಲಿ ಸಕಲರೂ ನಾಮ ಸಂಕೀರ್ತನೆಯ ಮೂಲಕ ಅರ್ಚಾಮಹಿಮೆಯನ್ನು ಸಾಧಿಸಬಹುದು ಎಂಬುದನ್ನ ಆಂಡಾಳ್ ಇಲ್ಲಿ ಸ್ಮರಿಸಿದ್ದಾಳೆ.   

 (ವಿಷಯ ಸಂಗ್ರಹ : “ತಿರುಪ್ಪಾವೈ ರಸಸ್ವಾಧಿನಿ” – ಬರೆದವರು ವಿದ್ವಾನ್ ವೇದಾಂತ  ಸಾರಜ್ಞ  ಶ್ರೀ ಎಸ್. ಕೃಷ್ಣಾತಾತಾಚಾರ್ಯ )

(1) ಗಮಕ ಕವಿತಾ ವನಜ ಭಾಸ್ಕರ , ಗಮಕ ರತ್ನಾಕರ ಶ್ರೀಯುತ ಬಿ.ಎಸ್ .ಎಸ್ ಕೌಶಿಕ್  ರವರ  ಶ್ರೀಮದಾಂಡಾಳ್ ಮಹಾ ವೈಭವಂ -ತಿರುಪ್ಪಾವೈ – ಮೂಲ, ಕನ್ನಡ ತಾತ್ಪರ್ಯ , ಷಟ್ಪದಿ, ಭಾವಾರ್ಥ , ಚೌಪದಿ) 

Tiruppavai series

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply