close logo

ಕನ್ನಡದಲ್ಲಿ ತಿರುಪ್ಪಾವೈ ಲೇಖನಮಾಲೆ – ಪಾಶುರಂ 5

ಚಿತ್ರಕೃಪೆ : ಕೇಶವ್ ವೆಂಕಟರಾಘವನ್ (ಪಾಶುರಂ – 5)

ಶ್ರೀ ನೀಳಾ  ದೇವೈ ನಮಃ

 ತಿರುಪ್ಪಾವೈ ಲೇಖನಮಾಲೆಯ ಹಿಂದಿನ ನಾಲ್ಕು ಲೇಖನಗಳನ್ನು ಈ ಕೆಳಗೆ  ಓದಬಹುದು :

ತಿರುಪ್ಪಾವೈ ಲೇಖನಮಾಲೆ ಪೀಠಿಕೆ  ಪಾಶುರಂ – 1 ಪಾಶುರಂ – 2 ಪಾಶುರಂ – 3  ಪಾಶುರಂ – 4

೫. ಪಾಶುರಂ  

ಮಾಯನೈ ಮನ್ನು, ವಡಮದುರೈ ಮೈಂದನೈ

ತ್ತೂಯ ಪೆರುನೀರ್ ಯಮುನೈ ತ್ತುರೈವನೈ

ಆಯರ್ ಕುಲತ್ತಿನಿಲ್ ತೋನ್ರುಂ ಮಣಿ ವಿಳಕ್ಕೈ

ತ್ತಾಯೈಕ್ಕುಡಲ್ ವಿಳಕ್ಕಂ ಶೇಯ್ದ ದಾಮೋದರನೈ

ತೂಯೋಮಾಯ್ ವಂದುನಾಂ ತೂಮಲರ್ ತೂವಿತ್ತೊಳುದು

ವಾಯಿನಾಲ್ ಪಾಡಿ, ಮನತ್ತಿನಲ್ ಶಿಂದಿಕ್ಕ

ಪೋಯಪಿಳ್ಳೈಯುಂ ಪ್ಪುಗುದರುವಾ ನಿನ್ರನವುಂ

ತೀಯಿನಿಲ್ ತೂಶಾಗುಂ ಶೇಪ್ಪೇಲೋ ರೆಂಬಾವಾಯ್ ॥5॥

ಶ್ರೀಯುತ ಕೌಶಿಕರ ಕನ್ನಡ ಭಾಷಾಂತರ ಹೀಗಿದೆ:

ಬೆರಗೀವ ಚೇಷ್ಠಿತನುಮಾಗಿ, ದೈವಾಂಶದಲಿ 

ಮೆರೆಯುತತ್ತರ ಮಧುರಯಸುವಾಗಿ, ಪರಿಶುದ್ಧ 

ವರಜಲದಿ ತೀವಿದಾ, ಯಮುನಾನದೀ ತೀರವಾಸಿಯಾ ಯದುಕುಲಜನು| 

ಪರಮ ಸಾಧ್ವಿ ಯಶೋದೆ ಗರ್ಭಸಂಭವ ಕೃಷ್ಣ ಗೆ 

ಗುರುತರದ ಪುಷ್ಪಗಳನಿತ್ತು ಸೇವಿಸಿ ನುತಿಸೆ,

ಪಿರಿವೆನಿಪ ಪಾಪಗಳು ಹತ್ತಿಯುರಿದಂತಾಗಿ, ಮುಗಿವುದೌ ನಮ್ಮ ವ್ರತವು ।।೫।।

ಭಗವಂತನ ಸೇವೆ ಮಾಡುವುದು ಅಥವಾ ಅವನಲ್ಲಿ ಶರಣು ಹೋಗುವುದು, ಪಾಪಗಳನ್ನು ಕಳೆದುಕೊಂಡ ನಂತರವೇ ಸಾಧ್ಯವೆಂದರೆ ಅದು ಅಸಂಭವವಾಗುವುದು. ಪಾಪಗಳು ಕಳೆಯುವುದಕ್ಕಾಗಿಯೇ ಭಗವಂತನ ಧ್ಯಾನ. ಭಗವತ್ಪ್ರಾಪ್ತಿಗಾಗಿ ನಾವು ಮಾಡುವ ಯತ್ನಗಳೇ ನಮ್ಮನ್ನು ಪರಿಶುದ್ಧರನ್ನಾಗಿ ಮಾಡುವವು. ಅವರವರು ಯಾವ ಸ್ಥಿತಿಯಲ್ಲಿ ಇರುವರೋ ಹಾಗೆಯೇ ಭಗವಂತನನ್ನು ಮರೆಹೋಗಬಹುದು. ಭಗವದಾಶ್ರಿತರಿಗೆ ಪೂರ್ವೋತ್ತರಾಘಗಳು ನಾಶವಾಗುವ ಕ್ರಮವನ್ನು ಇಲ್ಲಿ ತಿಳಿಸಲಾಗಿದೆ. 

“ಶ್ರೇಯಾಂಸಿ ಬಹುವಿಘ್ನಾನಿ ಭವಂತಿ ಮಹಾತಾಮಪಿ” ಎಂಬುದು ನೀತಿಶಾಸ್ತ್ರ. ವಿಘ್ನಗಳು ನಮಗರಿವಿಲ್ಲದಂತೆ ಒದಗುವುವು. ಶ್ರೀರಾಮಚಂದ್ರನ ರಾಜ್ಯಾಭಿಷೇಕವೆಂಬ ಶುಭಕಾರ್ಯಕ್ಕೆ ಕೂಡ ವಿಘ್ನಬಂದು ಅದು ನಿಂತಿತು. ಅನಾದಿ ಕಾಲದಿಂದ ನಾವು ಮಾಡಿರುವ ಪಾಪಗಳ ರಾಶಿ ಪ್ರಬಲವಾಗಿರುವುದರಿಂದ ಪ್ರಸ್ತುತ ಈ ಶುಭಕಾರ್ಯಕ್ಕೂ ವಿಘ್ನವು ಬಂತು. ಆ ಭಗವಂತನೇ ಸರ್ವವಿಘ್ನ ಪರಿಹಾರಕನಾದರೂ, ಶ್ರೀರಾಮಚಂದ್ರನಿಗೂ ಅದನ್ನು ತಪ್ಪಿಸಲು ಆಗಲಿಲ್ಲ. ಆದ್ದರಿಂದ ಭಗವಂತನನ್ನು ಆಶ್ರಯಿಸಿ, ಅವನ ನಾಮ ಸಂಕೀರ್ತನೆಗಳನ್ನು ಹಾಡಿ, ಅವನನ್ನು ಕೀರ್ತಿಸಿದರೆ ಸಕಲ ದುರಿತಗಳೂ ಭಸ್ಮವಾಗುವುದೆಂಬುದರ ಭಾವ ಇಲ್ಲಿದೆ. 

ಭಗವಂತನನ್ನು ಆಶ್ರಯಿಸುವಾಗಲೇ ಅವರ ಪಾಪ ಕ್ಷೀಣಿಸುವುದೆಂಬ ಅತಿಶಯವನ್ನು ಇಲ್ಲಿ ವರ್ಣಿಸಲಾಗಿದೆ. ವ್ರತಾನುಷ್ಠಾನಕ್ಕಾಗಿ ಸೇರುವವರಲ್ಲಿ ಕೆಲವರು ಧರ್ಮಶಾಸ್ತ್ರಜ್ಞರು, ಕೆಲವರು ನೀತಿ ಶಾಸ್ತ್ರಜ್ಞರು, ಇನ್ನು ಕೆಲವರು ಸಾಹಿತ್ಯಜ್ಞರು ಮತ್ತೆ ಕೆಲವರು ಇತಿಹಾಸ ಪುರಾಣಗಳನ್ನು ಅರಿತವರು. ಇವರೆಲ್ಲರೂ ತಮ್ಮ- ತಮ್ಮ ಪರಿಚಿತ ಶಾಸ್ತ್ರಕ್ಕನುಗುಣವಾಗಿ ವಿಘ್ನಗಳನ್ನು ಶಂಕಿಸುವರು. 

ಈ ಪದ್ಯದ ಮೊದಲಿನ ನಾಲ್ಕು ಪಂಕ್ತಿಗಳಲ್ಲಿ ಭಗವಂತನ ಕೃಷ್ಣಾವತಾರದ ವರ್ಣನೆ ಇದೆ. ಅನಂತರದ ನಾಲ್ಕು ಪಂಕ್ತಿಗಳಲ್ಲಿ – ಹಿಂದೆ ಆದ ಕರ್ಮಗಳನ್ನು ಕಳೆದು ಕೊಳ್ಳುವುದಕ್ಕೂ ಮುಂದೆ ಆಗಬಹುದಾದ ಕರ್ಮಗಳನ್ನು ಕಳೆದು ಕೊಳ್ಳುವುದಕ್ಕೂ ನಾವು ಏನು ಮಾಡಬೇಕು ಎಂಬುದನ್ನು ತಿಳಿಸಲಾಗಿದೆ. ಪಾಪಕರ್ಮಗಳೆಂಬ ಹತ್ತಿಯ ರಾಶಿಗೆ ನಾರಾಯಣನ ನಾಮಸ್ಮರಣೆಯೇ ಬೆಂಕಿ ಇದ್ದಂತೆ.

ಶುಭಕಾರ್ಯಗಳಲ್ಲಿ ನಿರ್ವಿಘ್ನಪರಿ ಸಮಾಪ್ತಿಗಾಗಿ ಆರಂಭದಲ್ಲಿ ವಿಷ್ವಕ್ಸೆನಾರಾಧಾನವನ್ನು ಮಾಡುತ್ತಾರೆ. ಇದು ಸ್ವಪರ ನಿರ್ವಾಹಕ. ಅದರಂತೆ ಪ್ರಾಕೃತದಲ್ಲಿ ಅತ್ಯಾಶ್ಚರ್ಯ ಗುಣೈಕತಾನನೂ, ಮಧುರಾಪುರಿಯಲ್ಲಿ ಹುಟ್ಟಿದವನೂ, ಯಮುನಾನದಿಯಲ್ಲಿ ವಿಹಾರಲೋಲನೂ, ವಜ್ರದ ಮಂಡಲಕ್ಕೆ ಮಂಡನನೂ, ತಾಯಿಯ ಮನಸ್ಸನ್ನು ಅಭಿವೃದ್ಧಿಗೊಳಿಸುವಲ್ಲಿ ವಿಚಕ್ಷಣನೂ ಆದ ದಾಮೋದರನನ್ನು ನಾವು  ಮನೋವಾಕ್ಕಾಯಗಳೆಂಬ ತ್ರಿಕರಣಗಳಿಂದ ಅರ್ಚಿಸಿ ಸಂಕೀರ್ತನೆ ಮಾಡಿದರೆ ಶ್ರೇಯಸ್ಸಿಗೆ ಪ್ರತಿಬಂಧಕಗಳಾದ ಸಕಲ ದುರಿತಗಳೂ ಭಸ್ಮವಾಗಿ ಬಿಡುವುದೆಂದು ವೇದಾಂತದಲ್ಲಿ ಹೇಳಲ್ಪಟ್ಟಿದೆ. 

ತ್ರೆತಾಯುಗದಲ್ಲಿ, ದಶರಥರಾಜನು ಶ್ರೀರಾಮ ಪಟ್ಟಾಭಿಷೇಕಕ್ಕಾಗಿ ಲಗ್ನವನ್ನು ವಸಿಷ್ಠರಿಂದ ಇಡಿಸಿದ್ದನು. ದೇವತಾಪೂಜೆಯನ್ನು ಮಾಡಿದ್ದನು. ಹಾಗಿದ್ದರೂ ಪ್ರತಿಬಂಧಕ ಬಂತಲ್ಲವೇ? ಇದಕ್ಕೆ ಉತ್ತರವನ್ನು ಗೋದಾದೇವಿಯು ಈ ರೀತಿ ಕೊಡುತ್ತಾಳೆ: “ ಪ್ರತಿಬಂಧಕವು ಪಾಪದಿಂದ ಬರುತ್ತದೆ. ಪರಮಾತ್ಮನಲ್ಲಿ ನಾವು ಶರಣಾಗತಿಯನ್ನು ಆಚರಿಸಿದರೆ ಸಕಲ ಪಾಪವೂ ಹೋಗುವುದು- ಎಂದು ಶರಣ್ಯನಾದ ಭಗವಂತನ ಪೂರ್ಣ ಲಕ್ಷಣವನ್ನ ಕೊಡುವಳು. ”

“ಜಾತೋಸಿ ದೇವದೇವೇಶ ಶಂಖಚಕ್ರ ಗಧಾಧರ”: ಎಂದಿರುವಂತೆ ಆವಿರ್ಭಾವ ಕಾಲದಲ್ಲೇ  ಶಂಖಚಕ್ರಗದಾಧಾರಿಯಾಗಿ ತನ್ನನ್ನು ತೋರ್ಪಡಿಸಿ ಕೊಂಡವನು.ಇನ್ನು ಶ್ರೀಕೃಷ್ಣನೇ ಗೋಪಿಯರ ವ್ರತವನ್ನು ಏರ್ಪಡಿಸಿರುವನಾದ್ದರಿಂದ ಇವನು “ಮಾಯನ್” ಎಂದರೆ ಆಶ್ಚರ್ಯ ಚೇಷ್ಠಿತ. ಶ್ರೀಕೃಷ್ಣಾವತಾರವು ಅದ್ಭುತಗಳ, ಆಶ್ಚರ್ಯಗಳ ಸರಮಾಲೆ.  ಪರಮಾತ್ಮನ ಮಹಿಮೆಯು ಅನಂತವಾದದ್ದು. ಅದನ್ನು ಸಂಪೂರ್ಣವಾಗಿ ಅರಿಯಲು ಯಾರೂ ಸಮರ್ಥರಲ್ಲ. ಅವನೇ ಹೇಳಿರುವಂತೆ ‘ಮಮ ಮಾಯಾ ದುರತ್ಯಯಾ’, ‘  ಎಂದಿಗೇನು ಮಾಡಬೇಕೋ ಅಂದಿಗದನು ಮಾಡುವುದು ನಂದದಿವ್ಯನ ಸಂಕಲ್ಪವಿದ್ದ ಕಾರಣ’ – ಎಂದಿದ್ದಾರೆ ದಾಸ ಶ್ರೇಷ್ಠರು. ಇಂತಹ ಆಶ್ಚರ್ಯ ಚೇಷ್ಠಿತನಾದ ಪರಮಾತ್ಮನು ಈಗ ಉತ್ತರ

ಮಧುರೆಯಲ್ಲಿ (ಮನ್ನು, ವಡಮದುರೈ ಮೈಂದನೈ) ಶಿಶುರೂಪದಿಂದ ಜನಿಸಿ ಮಕುಟವಿಲ್ಲದಿದ್ದರೂ ರಾಜನಾಗಿ, ಸರ್ವಕಷ್ಟ ನಿವಾರಕನಾಗಿರುವನು. ಗೋದಾದೇವಿಯು ತನ್ನ ತಿರುಮೊಳಿಯಲ್ಲಿ “ಮಧುರೈ ಮನ್ನನ್ “ ಎಂದು ಕೃಷ್ಣನನ್ನು ಕರೆದಿರುವಳು.

“ಕಣ್ಣನಲ್ಲಾಲ್ ಇಲ್ಲೈ ಕಂಡೀರ್ ಶರಣ್ 

 ಅದು ನಿಕ್ಕವಂದು ಮಣ್ಣೀರ್ ಭಾಗಂ ನೀಕ್ಕುದರ್ಕೆ 

 ವಡ ಮಧುರೈ ಪಿರಂದಾನ್ ”

  • ಎಂದು ಶಠಗೋಪರು ಹೇಳಿದ್ದಾರೆ. ಧ್ರುವರಾಜನು ಮಧುರೈನಲ್ಲಿಯೇ ತಪಸ್ಸು ಮಾಡಿ ಭಗವದ್ದರ್ಶನ ಪಡೆದನು. ಇಲ್ಲೇ ಸಿದ್ಧಾಶ್ರಮದ ಕಪಿಲ ಋಷಿಗಳ ಆಶ್ರಮ ಇದ್ದದ್ದು. ವಾಮಾನವತಾರದಲ್ಲಿ ಇದೇ ತಾಣದಲ್ಲಿ ತಪಸ್ಸು ಮಾಡಿದ ಶ್ರೀ ವಿಷ್ಣು. ಇಂತಹ ಪುಣ್ಯ ಭೂಮಿಯನ್ನೇ ಶ್ರೀಕೃಷ್ಣನು ತನ್ನ ಜನ್ಮಸ್ಥಳಕ್ಕೆ ಆಯ್ಕೆ ಮಾಡಿದನು. 
  • “ಮಧುರಾನಾಮನಾಗರೀ ಪುಣ್ಯಪಾಪಹರೀಶುಭಾ। ಯಸ್ಯಾಂಜಾತೋ ಜಗನ್ನಾಥ: ಸಾಕ್ಷಾದ್ವಿಷ್ಣುಸನಾತನಃ।।” ಚಿರಕಾಲ ಭಗವಂತನಿಗೆ ಆಸ್ಪದವಾದುದು ಮಧುರೆ. ಎಲ್ಲರಿಗೂ ತನ್ನ ಸೇವೆ ಲಭಿಸಲೆಂದು ಅವತರಿಸಿದ ಪುಣ್ಯಭೂಮಿ.

ತ್ತೂಯ ಪೆರುನೀರ್ ಯಮುನೈ ತ್ತುರೈವನೈ: ಭಗವಂತ ವಿಭವಮೂರ್ತಿಯಾಗಿ ಅವತರಿಸುವಾಗಲೆಲ್ಲ ಸಾಮಾನ್ಯವಾಗಿ ಉತ್ಕ್ರುಷ್ಟ ಪ್ರಭಾವಶಾಲಿಗಳಾದ ನದೀತೀರದಲ್ಲಿಯೇ ಅವತರಿಸುತ್ತಾನೆ. ಶ್ರೀರಾಮನು ಸರಯೂ ತೀರದಲ್ಲೂ, ಶ್ರೀಕೃಷ್ಣನು ಯಮುನಾ ತೀರದಲ್ಲೂ ಅವತರಿಸಿದರು. ಶ್ರೀರಾಮನು ಸರಯೂ ತೀರದಲ್ಲಿ ಹೆಚ್ಚು ವಿಹರಿಸಿದಹಾಗೆ ಎಲ್ಲೂ ಕೇಳಿಲ್ಲ. ಆದರೆ ಶ್ರೀಕೃಷ್ಣನು ತನ್ನ ವಿವಿಧ ವಿಹರಣ ವಿಶೇಷಗಳಿಂದ ಯಮುನೆಯನ್ನು ಧನ್ಯಳಾಗಿ ಮಾಡಿದ. ಕೃಷ್ಣಾವತಾರದಲ್ಲಿ ಅವನು ಯಮುನಾ ತಟದಲ್ಲಿಟ್ಟ ಪ್ರೀತಿಯನ್ನು ಯಾವ ಅವತಾರದಲ್ಲೂ, ಯಾವ ನದಿಯಲ್ಲೂ ಇಟ್ಟಿರಲಿಲ್ಲ. ಶಿಶುವನ್ನು ಹೊತ್ತ ವಸುದೇವನು ನದಿಯಲ್ಲಿ ಇಳಿದೊಡನೆಯೇ ತನ್ನನ್ನು ಬತ್ತಿಸಿಕೊಂಡು ಯಮುನೆ ದಾರಿಕೊಟ್ಟಳು. ಇದು ಸಜ್ಜನಿಕೆಯ ಲಕ್ಷಣ. ಯಮುನೆ ಮಹಾತ್ಮಳು, ಪರಿಶುದ್ದಳು ಆದಳು. ಕಲಿನಿಗ್ರಹ ಮಾಡಿದ ಕಳಿಂದ  ದೇಶದಲ್ಲಿ ಹುಟ್ಟಿದ್ದರಿಂದ ಈಕೆಗೆ ಕಾಳಿಂದಿ ಎಂಬ ಹೆಸರೂ ಉಂಟು. ಶ್ರೀಕೃಷ್ಣನ ಯೌವನ ವಿಲಾಸ, ವಿಭ್ರಮೆಗಳಿಗೆ ಯಮುನೆ ಸಾಕ್ಷೀ ಭೂತಳು. ಕಾಳಿಂದಿ ರಸಿಕನೆಂದೇ ಅವನ ಖ್ಯಾತಿ ಪಸರಿಸಿತು.

ಗೀತಗೋವಿಂದದಲ್ಲಿ ಹೇಳಿರುವಂತೆ, “ಧೀರ ಸಮೀರೇ ಯಮುನಾತೀರೇ ವಸತಿ ಓ ವನಮಾಲಿ”- ಆಚಾರ್ಯರುಗಳು ಭಕ್ತಿ, ಪ್ರಪತ್ತಿಯಿಂದ ಪರಮಾತ್ಮನನ್ನು ಒಲಿಸಿಕೊಳ್ಳಲು ಇಂತಹ ಪುಣ್ಯನದೀ ತೀರಗಳಲ್ಲಿ ಅವತರಿಸುವರು.  

ಆಯರ್ ಕುಲತ್ತಿನಿಲ್ ತೋನ್ರುಂ ಮಣಿ ವಿಳಕ್ಕೈ

ತ್ತಾಯೈಕ್ಕುಡಲ್ ವಿಳಕ್ಕಂ ಶೇಯ್ದ ದಾಮೋದರನೈ।

ಗೋಪಾಲ ಕುಲದಲ್ಲಿ  “ಆವಿರ್ಭೂತಂ ಮಹಾತ್ಮನಾ” ಎಂದೆನಿಸಿ ಅವತರಿಸಿದ ರತ್ನದೀಪ ಇವನು. ಅಂಧಕಾರದಲ್ಲಿ ದೀಪ ಬೆಳಗುವಂತೆ, ದುಃಖಿಗಳಲ್ಲಿ, ದೋಷಿಗಳಲ್ಲಿ ಮತ್ತು ಪಾಪಿಗಳಲ್ಲಿ, ದಯೆ, ವಾತ್ಸಲ್ಯ, ಕರುಣೆ ಮತ್ತು ಪ್ರೀತಿ ಎಂಬ ಪ್ರಧಾನ ಗುಣಗಳಿಂದ ಪ್ರಕಾಶಿಸುವ ದೀಪ ಇವನು. ಮಾತೆಯರಾದ ದೇವಕಿ ಮತ್ತು ಯಶೋದೆಯರ ಗರ್ಭಪ್ರದೇಶಕ್ಕೆ ಪ್ರಕಾಶವನ್ನುಂಟು ಮಾಡಿದ “ದಾಮೋದರ” ಇವನು ಎಂಬರ್ಥವು ಮೇಲಿನ ಪಂಕ್ತಿಯಲ್ಲಿ ವ್ಯಕ್ತವಾಗಿದೆ.

ತತ್ವಾರ್ಥ:

ಹೀಗೆ ಅತಿಸುಲಭನೂ, ಸುಶೀಲನೂ  ಆಶ್ರಿತಪರತಂತ್ರನೂ ಆದ ಶ್ರೀಕೃಷ್ಣನನ್ನು ಆಶ್ರಯಿಸಿ ಅನನ್ಯ ಪ್ರಯೋಜನರಾಗಿದ್ದು, ತ್ರಿಕರಣಗಳಿಂದಲೂ ಶಕ್ತಿಯಿರುವಷ್ಟು ಕೈಂಕರ್ಯವನ್ನು ಮಾಡಿದರೆ ಸಕಲ ಪ್ರತಿಬಂಧಕಗಳೂ ನೀಗುವುವು ಎಂಬುದನ್ನು ಗೋದಾದೇವಿ ಇಲ್ಲಿ ತಿಳಿಸುತ್ತಾಳೆ.

ಅನನ್ಯ ಪ್ರಯೋಜನತ್ವ ಮತ್ತು ಭಾವೈಕನಿರತತ್ವ (ತೂಯಮೈ ) ಎಂಬ ಪರಿಶುದ್ದಿಯೇ ಇಲ್ಲಿ ಬೇಕಾಗಿರುವುದು. ಪರಮಾತ್ಮನಲ್ಲಿ ನಮಗಿರುವ ಸಂಬಂಧವನ್ನು  (ಶೇಷ-ಶೇಷಿ ಭಾವ) ಸ್ಮರಿಸುವುದು ಹೊರತು ಅನ್ಯ ಶುದ್ದಿ ಎಂಬುದಿಲ್ಲ.

“ಬಲ್ಲೆನೆಂಬುವರಿಲ್ಲ ವೀತನ,  ನೊಲ್ಲೆನೆಂಬುವರಿಲ್ಲ ಲೋಕದೊಳಿಲ್ಲದಿಹ ಸ್ಥಳವಿಲ್ಲವೈ ।

ಅಜ್ಞಾತ ಜನರಿಲ್ಲ, ಬೆಲ್ಲದಚ್ಚಿನ ಬೊಂಬೆಯಂದದ ಲೆಲ್ಲರೊಳಗಿರುತಿಪ್ಪ ಶ್ರೀಭೂನಲ್ಲಗಿವಗೆಣೆಯಿಲ್ಲ  ವಪ್ರತಿಮಲ್ಲ ಜಗಕೆಲ್ಲ।” 

ಈ ದಿವ್ಯ ಪ್ರಬಂಧದಲ್ಲಿ, ತಾನು ಹೇಳದೆ, ನೀನು ಹೇಳು (ಶೆಪ್ಪು) ಎಂಬುದರಿಂದ, ಸ್ವಂತ ಪ್ರತಿಜ್ಞೆಗಿಂತ ಭಕ್ತನ ಪ್ರತಿಜ್ಞೆ ಪ್ರಬಲವೆಂಬ ಶಾಸ್ತ್ರಾರ್ಥವೂ ಉಕ್ತವಾಗಿದೆ.

 (ವಿಷಯ ಸಂಗ್ರಹ : “ತಿರುಪ್ಪಾವೈ ರಸಸ್ವಾಧಿನಿ” – ಬರೆದವರು ವಿದ್ವಾನ್ ವೇದಾನ್ತ ಸಾರಜ್ಞ

   ಶ್ರೀ ಎಸ್. ಕೃಷ್ಣಾತಾತಾಚಾರ್ಯ )

(1) ಗಮಕ ಕವಿತಾ ವನಜ ಭಾಸ್ಕರ , ಗಮಕ ರತ್ನಾಕರ ಶ್ರೀಯುತ ಬಿ.ಎಸ್ .ಎಸ್ ಕೌಶಿಕ್  ರವರ  ಶ್ರೀಮದಾಂಡಾಳ್ ಮಹಾ ವೈಭವಂ -ತಿರುಪ್ಪಾವೈ – ಮೂಲ, ಕನ್ನಡ ತಾತ್ಪರ್ಯ , ಷಟ್ಪದಿ, ಭಾವಾರ್ಥ , ಚೌಪದಿ )

Tiruppavai series

Featured Image Credit: Anudinam.org

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply