close logo

ಕನ್ನಡದಲ್ಲಿ ತಿರುಪ್ಪಾವೈ ಲೇಖನಮಾಲೆ – ಪಾಶುರಂ 6

ಚಿತ್ರಕೃಪೆ : ಕೇಶವ್ ವೆಂಕಟರಾಘವನ್ (ಪಾಶುರಂ – 6)

ಶ್ರೀ ನೀಳಾ  ದೇವೈ ನಮಃ

 ತಿರುಪ್ಪಾವೈ ಲೇಖನಮಾಲೆಯ ಹಿಂದಿನ ಮೂರು ಲೇಖನಗಳನ್ನು ಈ ಕೆಳಗೆ  ಓದಬಹುದು :

6. ಪಾಶುರಂ:

ಪುಳ್ಳುಂ ಶಿಲುಂಬಿನಕಾಣ್ ಪುಳ್ಳರಯ್ಯನ್ ಕೋಯಿಲಿಲ್

ವೆಳ್ಳೈ ವಿಳಿಶಂಗಿನ್ ಪೇರರವಂ ಕೇಟ್ಟಿ ಲೈಯೋ

ಪಿಳ್ಳಾ ಯೆಳುಂದಿ ರಾಯ್ ಪೇಯ್ ಮುಲೈ ನಂಜುಂಡು

ಕಳ್ಳಚ್ಚಗಡಂ ಕಲಕ್ಕಳಿಯ ಕ್ಕಾಲೋಚ್ಚಿ

ವೆಳ್ಳತ್ತರವಿಲ್ ತುಯಿಲ ಮರ್ ಂದ ವಿತ್ತಿನೈ

ಉಳ್ಳತ್ತು ಕ್ಕೊಂಡು ಮುನಿವರ್ಗಳುಂ ಯೋಗಿಗಳುಂ

ಮೆಳ್ಳ ವೆಳುಂದು ಆರಿಯನ್ರ ಪೇರರವಂ

ಉಳ್ಳಂ ಪುಗುಂದು ಕುಳಿರ್ ದೇಲೋ ರೆಂಬಾವಾಯ್ ॥

ಶ್ರೀಯುತ ಕೌಶಿಕರ ಕನ್ನಡ ಭಾಷಾಂತರ ಹೀಗಿದೆ:

ಅಕ್ಕ ಯೇಳೇಳಮ್ಮ, ಪಕ್ಕಿಗಳು ಕೂಗಿದವು| 

ಅಕ್ಕೊ ಕೇಳೌ ಶಂಖನಾದವರಸಾಲಯದ 

ಹೆಕ್ಕಳೆಯು ಪೂತನಿಯ ಮೊಲೆಯ ನಂಜನ್ನುಂಡು 

ಶಕಟವಂಚಕನ ಕೊಂದ ।

ಉಕ್ಕುದೆರೆಯುದಧಿಯೊಳು ಶೇಷತಲ್ಪದಿ ಮಲಗಿ 

ಸೊಕ್ಕುನಿದ್ದೆಯ ನಟಿಪನನ್ನು ಮನಮಂದಿರದಿ 

ಅಕ್ಕರೊಳು  ಪೂಜಿಸುವ, ಮುನಿಗಳೆಚ್ಛೆತ್ತೊರೆವ, ಹರಿನಾಮ ಕೇಳೆ ಸಿದ್ಧಿ ।।6।।

ಲೋಕದಲ್ಲಿ ಮನುಷ್ಯರನ್ನು ಎಬ್ಬಿಸುವ ಬಗೆಗಳು ಹತ್ತು. ಅವುಗಳೊಳಗೆ ಬೆಳಗಾಯಿತೆಂದು ಹೇಳಿ ಎಬ್ಬಿಸುವ ಕ್ರಮ ಈ ಪದ್ಯದಲ್ಲಿ ಕಂಡು ಬರುತ್ತದೆ. ಇಲ್ಲಿಂದ ಮುಂದಿನ ಹತ್ತು ಪದ್ಯಗಳೂ  ವ್ರತದಿಂದ ಆಚರಿಸುವ ನೆಪದಿಂದ ಗೋಪಿಯರನ್ನು ಹಲವು ಬಗೆಯಲ್ಲಿ ಎಬ್ಬಿಸಿ ಅವರ ಮೂಲಕ ಭಗವಂತನನ್ನೂ ಎಬ್ಬಿಸಬೇಕೆಂದು ಭಾವಿಸಿ, ಈ ಪಾಶುರ೦ಗಳ ಮೂಲಕ ನಿದ್ರೆಗೆ ಪರವಶರಾದ ಭಗವದ್ದಾಸರಾದ ಚೇತನರನ್ನೂ, ಭಗವದನುಭವೈಕ ವ್ಯಾಮುಗ್ದರಾದ ನಮ್ಮಾಳ್ವಾರ್ (ಆಚಾರ್ಯರನ್ನು) ಮುಂತಾದವರನ್ನು ಭಗವಂತನ ನಾಮಸಂಕೀರ್ತನೆ ಮಾಡಿಕೊಂಡು ಎಬ್ಬಿಸುವ ಪರಿಯನ್ನು ಗೋದಾದೇವಿಯು ವ್ಯಕ್ತಪಡಿಸುತ್ತಾಳೆ. 

ಸಮೃದ್ಧವಾಗಿ ಬೆಳೆದ ಸುಪ್ರಭಾತ ಪರಂಪರೆಗೆ ಈ ಪದ್ಯವೂ ಒಂದು ಮೂಲ. ಮಲಗಿರುವವರನ್ನು ರೂಕ್ಷವಾಗಿ ಬೈದು ಎಚ್ಚರಿಸಿದರೆ ಅದರ ಪರಿಣಾಮ ಅವರ ಮೇಲೆ ತೀವ್ರವಾಗುವುದು; ಅವರು ಬೈದವನನ್ನು ಶಪಿಸಿಕೊಂಡೇ ಏಳುತ್ತಾರೆ. ಇಡೀ ದಿವಸವೆಲ್ಲವೂ ಅವರ ಚಿತ್ತಸ್ವಾಸ್ತ್ಯ ಹಾಳಾಗುತ್ತದೆ. ಉತ್ಸಾಹವೂ ಬತ್ತುತ್ತದೆ. ಹೇಗೆ ಒಂದು ಮಾತು ಎರಡು ಚಿತ್ತಗಳನ್ನು ಕಲುಷಿತಗೊಳಿಸಬಹುದೆಂಬುದಕ್ಕೆ ಇದು ನಿದರ್ಶನ. ಅದೇ ಒಳ್ಳೆಯ ಮಾತಿನಿಂದ ಎಚ್ಚರಿಸಿದರೆ ಅದರಿಂದ ಆಗುವ ಪರಿಣಾಮವೇ ಬೇರೆ. 

“ಪ್ರಿಯವಾಕ್ಯ ಪ್ರದಾನೇನ ಸರ್ವೇ ತುಷ್ಯಂತಿ ಜಂತವಃ 

 ತಸ್ಮಾತ್ ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ?”

 ಎಂಬಂತೆ ಒಳ್ಳೆಯ ಮಾತಿಗೆ ಎಂತಹ ದಾರಿದ್ರ್ಯ? ಎದ್ದ ವ್ಯಕ್ತಿಯ ಮನಸ್ಸು ಹಗುರವಾಗಿಯೂ, ಉಲ್ಲಾಸಭರಿತವಾಗಿಯೂ ಮತ್ತು ಹೊಚ್ಚ ಹೊಸದಾಗಿರುತ್ತದೆ. ಮನಸ್ಸು ಸೂಕ್ಷ್ಮಗ್ರಾಹಿ. ಆದುದರಿಂದ ಎಬ್ಬಿಸುವ ವಿಧಾನದಲ್ಲಿಯೂ ಸಂಸ್ಕೃತಿ ಇರಬೇಕು. 

ಕೌಸಲ್ಯಾ ಸುಪ್ರಜಾ ರಾಮ ಪೂರ್ವಾಸಂಧ್ಯಾ ಪ್ರವರ್ತತೇ |

ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಮ್ || 

  • ಎಂಬಲ್ಲಿ ಗುರುಗಳಾದ ವಿಶ್ವಾಮಿತ್ರರು ಶ್ರೀ ರಾಮನನ್ನು ಸಂಬೋಧಿಸಿ, ತಾಯಿಯ ನೆನಪು ಮಾಡಿ ಕೊಡುತ್ತಾರೆ. ತಾಯಿಯಂತೆ ದೈನಂದಿನ ಕಾರ್ಯಗಳಲ್ಲಿ ತೊಡಗಲು ಸೂಚನೆ ಕೊಡುತ್ತಾ , ಸೋಮಾರಿಯಾಗಿರಬಾರದೆಂದೂ ಸೂಚಿಸುತ್ತಾರೆ. 
  • “ನರಶಾರ್ದೂಲ” – ಶೂರಪ್ರವರ! ನಿನ್ನಿಂದಾಗಬೇಕಾದ ಮಹತ್ಕಾರ್ಯಗಳು ಬಹಳ ಇವೆ, ಏಳಯ್ಯ ತಂದೆ ಎಂಬ ಭಾವ. 

ಮಾರ್ಗಶಿರ ಮಾಸದ ವ್ರತಾಚರಣೆಗಾಗಿ, ಇಲ್ಲಿ ಗೋದಾದೇವಿಯು ಪ್ರೀತಿಯಿಂದ ಗೋಪಿಯರನ್ನು ಎಬ್ಬಿಸಿ ಅವರ ಮೂಲಕ, ಭಗವಂತನ ಮಾಯಾರೂಪ ನಿದ್ರೆಗೆ ಪರವಶರಾದವರನ್ನು ಹೃದಯದ ಬಾಗಿಲು ತಟ್ಟಿ ಕೂಗುವಳು. ಸತ್ಯ ಸ್ವರೂಪನಾದ ಪರಮಾತ್ಮನ ದರ್ಶನವನ್ನು ಮಾಡಲು ಸೂಚಿಸುವಳು. 

ಪುಳ್ಳುಂ ಶಿಲುಂಬಿನಕಾಣ್ ಪುಳ್ಳರಯ್ಯನ್ ಕೋಯಿಲಿಲ್ – ಬೆಳಗ್ಗಿನ ಹೊತ್ತಿನಲ್ಲಿ ಚಿಲಿಪಿಲಿ ಎನ್ನುತ್ತ ಕಲರವ ಮಾಡುವ ಪಕ್ಷಿಗಳ ನೋಡಲು ಗೋಪಿಯರಿಗೆ ತಿಳಿಸುತ್ತಾಳೆ.  ಪಕ್ಷಿರಾಜ ಗರುಡನಿಗೆ  ಸ್ವಾಮಿಯಾದ ಶ್ರೀ ವಿಷ್ಣುವಿನ ಶಂಖದ ಉಚ್ಚ ಧ್ವನಿಯು ಆ ಗೋಪಿಯರ  ಕಿವಿಗೆ ಬೀಳಲಿಲ್ಲವೇ ಎಂದು ಕೇಳುತ್ತಾಳೆ. ವ್ರತಾನುಷ್ಠಾನ ಸಂಕೇತವನ್ನು ಮರೆತು ಮಲಗಿರುವ ಮುಗ್ದೇಯೇ ಏಳಮ್ಮ ಎಂದು ಪ್ರೀತಿಯಿಂದ ಕರೆಯುತ್ತಾಳೆ . 

ಶ್ರೀಕೃಷ್ಣನನ್ನು ಕೊಲ್ಲುವುದಕ್ಕಾಗಿ ಪೂತನಿಯು ತಾಯಿಯ ವೇಷದಲ್ಲಿ ಬಂದು ತನ್ನ ವಿಷಮಯಸ್ತನ್ಯ ಪಾನವನ್ನು ಮಾಡಿಸಿದಳು. ಇದನ್ನು ಬಲ್ಲವನಾದ ಶ್ರೀಕೃಷ್ಣನು ಆ ಸ್ತನ್ಯವನ್ನು ಪ್ರಾಣಸಹಿತ ಹೀರಿಬಿಟ್ಟ. ಒಡನೆಯೆ ಆರ್ಭಟಮಾಡಿಕೊಂಡು, ಚೀತ್ಕರಿಸಿ ಅವಳು ಸತ್ತುಬಿದ್ದಳು. ಹೀಗೆ ಅವಳ ದೇಹವೇ ಅವಳ ಪಾಪದಿಂದ ನಾಶವಾಗಿ ಭಗವಂತನಿಗೆ ಅರ್ಪಿತವಾಯಿತು.  ಮುಂದೆ ವಂಚಕನಾಗಿ ಗಾಡಿಯ ರೂಪದಲ್ಲಿ ಬಂದ ಶಕಟಾಸುರನನ್ನು ಶ್ರೀಕೃಷ್ಣನು ತನ್ನ ಕಾಲಿನಿಂದ ಒದ್ದು, ಕಟ್ಟುಗಳೆಲ್ಲಾ ನಾಶವಾಗುವ ಹಾಗೆ ಮಾಡಿ ಸಂಹಾರ ಮಾಡಿದ. ಬೆಳ್ಳಗಿರುವ ಆದಿಶೇಷನ ಮೇಲೆ ಯೋಗನಿದ್ರೆಯಲ್ಲಿರುವ ಸಮಸ್ತ ಜೀವಿಗಳಿಗೂ ಬೀಜ ಸ್ವರೂಪನಾಗಿ ಮೂಲ ಕಾರಣನೆನಿಸಿರುವ ಶ್ರೀಮನ್ನಾರಾಯಣನ ನಾಮಗಳನ್ನೇ  ಮುನಿಗಳು, ಯೋಗಿಗಳೂ ಧ್ಯಾನಿಸಿ, ಸಂಕೀರ್ತನೆ ಮಾಡುತ್ತಾ “ಹರಿ: ಹರಿ:’ ಎನ್ನುವ ಘೋಷವು ಹೃದಯವನ್ನು ಪ್ರವೇಶಿಸಿ ಮನಸ್ಸಿಗೆ ಆನಂದವನ್ನುಂಟು ಮಾಡಿ ನಮ್ಮನ್ನು ಎಚ್ಚರಿಸಿತು. “ನೀನೂ ಎದ್ದು ಬಾ”  ಎನ್ನುತ್ತಾ, ಗೋದಾದೇವಿ ತನ್ನ ಸಖಿಯರನ್ನು ಈ ಪಾಶುರದಲ್ಲಿ  ಎಚ್ಚರಿಸುತ್ತಿದ್ದಾಳೆ. 

ತನ್ನ ಸಖಿಯನ್ನು ಕೂಗಿ, ‘ನೀನು ನಿದ್ರಿಸಿದರೆ ಅವನು ಬಿಟ್ಟಾನೆಯೇ ? ಮಾಯಾ ಪೂತನಿ ನಿನಗೆ ನಿದ್ರೆಯನ್ನುಂಟು ಮಾಡಿದ್ದಾಳೆ. ಆದರೇನು? ವಿಷಪೂರಿತ ಹಾಲನ್ನು ನುಂಗಿ, ಸಂಹಾರ ಮಾಡಿದವನಿಗೆ, ನಿನ್ನ ನಿದ್ದೆಯನ್ನು ಕಸಿದುಕೊಳ್ಳುವುದು ಎನಿತು ಕಷ್ಟವೇ? ಧ್ರುವನ ಕೆನ್ನೆಯನ್ನು ಸವರಿ ಅವನಿಗೆ ಜ್ಞಾನದ ಬೆಳಕನ್ನು ತೋರಿದವನ ಶಂಖನಾದ ನಿನ್ನ ಕಿವಿಯಲ್ಲಿ ಇನ್ನೂ ಬೀಳಲಿಲ್ಲವೇ? ‘ ಎಂದು ಹೇಳುತ್ತಾ ನಮ್ಮನ್ನೂ  ನಿದ್ರೆಯಿಂದ ಎಬ್ಬಿಸಿ ಅಂತರ್ಯಾಮಿಯ ಸ್ವರೂಪವನ್ನು ನಮಗೆ ಕಾಣಿಸುವಂತೆ ಮಾಡುತ್ತಾಳೆ.  ಇಲ್ಲಿ “ ಏಕಸ್ವಾದು ನ ಭುಂಜೀತ” ಎಂಬ ನ್ಯಾಯದಂತೆ – ತನ್ನನ್ನೇ ಮರೆತು ಭೂಮಿಯಲ್ಲಿ ಬಾಳುವ ಅಜ್ಞರೆಲ್ಲರನ್ನೂ ತಟ್ಟಿ ಎಬ್ಬಿಸುತ್ತಾಳೆ. ಕೂಗುತ್ತಾಳೆ. ಆ ಸತ್ಯಸ್ವರೂಪವನ್ನು ತೋರಿಸಿ ಅನುಗ್ರಹಿಸುತ್ತಾಳೆ. ಉದಾರ ಕರುಣಾಸಾಗರಳಾದ ಆಂಡಾಳಿನ ಗಟ್ಟಿಯಾದ ಕೂಗನ್ನು ಕೇಳಿ ಎಚ್ಚರಗೊಳ್ಳಬೇಕು. ಎಚ್ಛೆತ್ತರೆ ಸಾಲದು, ಮನಸ್ಸಿನ ಒಳಗೆ ಕಣ್ಣಿಟ್ಟು ನೋಡಬೇಕು ಎನ್ನುತ್ತಾಳೆ, ಮಾಯಾನಿಗೂ ಮಾಯೆಯಾದ ಈ ಉತ್ತಮಿ. 

ಇಲ್ಲಿಯ ನಿದ್ರೆ ದೈಹಿಕ ನಿದ್ರೆಯಲ್ಲ. ಆತ್ಮಜ್ಞಾನ ವಿಷಯದಲ್ಲಿಯ ನಿದ್ರೆ. ಅದರಿಂದ ಎಚ್ಚರಗೊಳಿಸುವುದು ಪರಮೋಪಕಾರ. ಎಚ್ಚರಿಸತಕ್ಕವರು ಮೊದಲು ತಾವು ಮೊದಲು ಆ ನಿದ್ರೆಯಿಂದ ಏಳಬೇಕು. ಶ್ರೀಆಂಡಾಳ್ ಅಂತಹವಳು. ತಾನು ಆ ಅಜ್ಞಾನವೆಂಬ ನಿದ್ರೆಯನ್ನು ನೀಗಿ ಮಿಕ್ಕವರಿಗೂ ಅದನ್ನು ನೀಗಿಸಿಬಲ್ಲವಳು. ಆದ್ದರಿಂದ ಅವಳು ಉತ್ತಮಿ.

ನಮ್ಮಲ್ಲಿ ಒಂದೆಡೆ ಮೃಗಸ್ವಭಾವವೂ ಮತ್ತೊಂದೆಡೆ ದೈವಸ್ವಭಾವವೂ, ಭತ್ತದಲ್ಲಿ ಹೊಟ್ಟೂ ಅಕ್ಕಿಯೂ ಕಲೆತಿರುವಂತೆ ಕಲೆತಿವೆ. ನಮ್ಮ ದೈವ ಸ್ವಭಾವವನ್ನು ನಾವು ಅರಿಯಬೇಕು. ಅರಿತು ಇತರರಿಗೂ ಅದನ್ನು ತಿಳಿಸಬೇಕು. ಕೆಲವರು ತಾವೇ ಅರಿತು ನಿದ್ರೆಯಿಂದ ಎಚ್ಚರಗೊಳ್ಳುವುದುಂಟು. ಮತ್ತೆ ಕೆಲವರು ಮತ್ತೊಬ್ಬರೆಬ್ಬಿಸಿದಲ್ಲಿ ಏಳುತ್ತಾರೆ. ತತ್ತ್ವವನ್ನು ಅರಿತವರು ತಾವು ಎದ್ದು ಇತರರನ್ನೂ ಎಬ್ಬಿಸುವರು. ಮುಖ್ಯ ಸಂದರ್ಭಗಳಲ್ಲಿ  ಮನೆಗೆ ಹೋಗಿ ತಟ್ಟಿ  ಎಬ್ಬಿಸುವರು. ಇದರ ವೇದಾಂತಾರ್ಥವು ಹೀಗಿದೆ:

“ಉತ್ತಿಷ್ಠತ ಜಾಗ್ರತ ಪ್ರಾಪ್ಯವರಾನ್ ನಿಬೋಧತ” 

– “ಎದ್ದೇಳಿರಿ, ಎಚ್ಚರಗೊಳ್ಳಿರಿ. ಜ್ಞಾನಿಗಳ ಬಳಿಗೆ ತೆರಳಿ ತತ್ವಜ್ಞಾನವನ್ನು ಪಡೆಯಿರಿ” ಎಂದು ಕಠೋಪನಿಷನಿತ್ತಿನಲ್ಲಿ ನುಡಿದಿದೆ. ಆತ್ಮವಿಷಯದಲ್ಲಿ ಅನಾದಿ ಮಾಯೆಯಿಂದ ಮಲಗಿ ನಿದ್ರಿಸುವವರನ್ನು ಇಲ್ಲಿ ತಟ್ಟಿ ಎಬ್ಬಿಸುತ್ತಾಳೆ ಈ ಗೋದಾದೇವಿ. 

ಮೊದಲು ತಾವಾಗೆಯೇ ನಿದ್ರೆಯಿಂದೆಚ್ಚೆತ್ತು ಆತ್ಮವೆಂಬ ವಸ್ತುವನ್ನು ಕಂಡವರು-ಆಳ್ವಾರುಗಳು. ಅವರು ಕರುಣಾಸಮುದ್ರರು. ಅವರು ತಮ್ಮನ್ನೂ ಮರೆತು, ಹೃದಯಕ್ಕೆ ಅಗಳಿ ಹಾಕಿ ನಿದ್ರಿಸುವ ಅಜ್ಞಾನಿಗಳ ಮನೆಯ ಬಳಿ ಬಂದು ಅಗಳಿ ಹಾಕಿರುವ ಬಾಗಿಲನ್ನು ತಾವೇ ತೆರೆದು ಒಳಹೊಕ್ಕು ತಟ್ಟಿ ಅಲ್ಲಾಡಿಸಿ ಎಬ್ಬಿಸುವರು. ದೇಹದೊಳಗೆ ನಮ್ಮಿಂದ ಅರಿಯಲ್ಪಡದೇ  ಬಾಡುತ್ತಿರುವ ಒಂದು ಶಕ್ತಿಯುಂಟು. ಅದರ ಹಿರಿಮೆಯನ್ನು ತಿಳಿದವರು ಯೋಗಿಗಳು. ಇವರು ನಿಷ್ಪನ್ನರು, ಪರಮ ಭಕ್ತರು.  ಅದನ್ನು ತಿಳಿದರೆಯೇ ಮನುಷ್ಯ ಮನುಷ್ಯನಾದಾನು: ಮೃಗಗಳಿಗಿಂತ ಬೇರೆಯೆನಿಸಿಯಾನು . ತನ್ನ ಹೃದಯದಲ್ಲಿ ಬೆಳಗುವ ಅಸದೃಶವಾದ ಪ್ರಣವವಾಚ್ಯವಾದ ಆ ಪರಮಾತ್ಮನನ್ನು ತಿಳಿದಲ್ಲಿ ಮಾತ್ರವೇ ಈ ಭೂಮಿಯಲ್ಲಿ ಹುಟ್ಟಿದ್ದಕ್ಕೆ ಸಾರ್ಥಕತೆ. ಈ ದೈವ ಸ್ವಭಾವವನ್ನು ಅರಿತು ಚಿಂತಿಸಿದಲ್ಲಿ ಅವನು ನಮ್ಮಲ್ಲಿ ಕರುಣೆ ತೋರುವನು. ಈ ಶರೀರ-ಶರೀರಿಭಾವಕ್ಕಿಂತ ಸರ್ವಮತ-ಸರ್ವಜನರ ಐಕ್ಯವನ್ನು ಸಾಧಿಸುವುದನ್ನ ತೋರಿಸಿದವರು ಈ ಆಳ್ವಾರರು. ಈ ಆಳ್ವಾರ್ ಪರಂಪರೆಯ ಏಕೈಕ ಹೆಣ್ಣುಮಗಳೇ ಆಂಡಾಳ್. ಭಕ್ತಿ ಮತ್ತು ಪ್ರಪತ್ತಿಯ ಮಾರ್ಗವನ್ನು ಲೋಕಕ್ಕೆ ತೋರಿಸಿಕೊಟ್ಟ, ಭೂದೇವಿಯ ಅವತಾರವಾಗಿ ಜನ್ಮತಳೆದ  ಗೋದಾದೇವಿ. 

ತತ್ವಾರ್ಥ:

ಪ್ರಸ್ತುತ ಪೂತನಾವಧದ ವೃತ್ತಾಂತವನ್ನು ಒಂದು ಮಾಯೆ ಎಂದೂ, ವಸ್ತುತಃ ವಿಷಮಯಿಯಾಗಿದ್ದು ಮೋಸದಿಂದ ಭೋಗ್ಯತಾ ಬುದ್ಧಿಯೇ ಇಲ್ಲಿ ಪೂತನಿ ಎಂದು ಆ ಮಾಯೆಯನ್ನು ಕೊಂದವನೇ ಆಚಾರ್ಯನು ಎಂಬ ಭಾವ. ಭಗವಂತನಲ್ಲಿ ಪ್ರಪತ್ತಿ ಮಾಡಿ ಅವನ ಮಾಯೆಯನ್ನು ದಾಟಿದವನು ಆಚಾರ್ಯನು. 

ಶಕಟ/ಗಾಡಿಯು ಸ್ಥಳದಿಂದ ಸ್ಥಳಕ್ಕೆ ವೊಯ್ಯುವ ಸಾಧನ. ಇದರ ಎರಡು ಚಕ್ರಗಳೂ ಲೋಕಾಂತರ ಗಮನಕ್ಕೆ ಸಾಧನಭೂತವಾದ ಗತಿಗಳೆರಡು. ಒಂದು ಅರ್ಚಿರಾದಿ ಮತ್ತೊಂದು ಧೂಮಾದಿಗತಿ. ಹೇಗೆ ಶ್ರೀಕೃಷ್ಣನು ಕೃತ್ರಿಮ ಶಕಟನನ್ನು ಕಾಲಿನಿಂದ ಒದ್ದು ನಾಶಗೊಳಿಸಿದನೋ, ಹಾಗೆಯೇ ಪುನರಾವೃತ್ತಿಯನ್ನು ತರುವ ನರಕ ಮತ್ತು ಸ್ವರ್ಗ ಮಾರ್ಗ ಸಂಗವನ್ನು ಅಂದರೆ ಧೂಮಾದಿ ಮಾರ್ಗ ಸಂಗವನ್ನು ತನ್ನ ಪಾದ ಸಂಬಂಧದಿಂದ ಹೋಗಲಾಡಿಸುವವನೇ ಆಚಾರ್ಯನು. 

ನಮ್ಮ ಒಡಲೆಂಬುದೇ ಒಂದು ಆಲಯ. ಹೊರಗಣ ಆಲಯದಲ್ಲಿ ಹೇಗೋ  ಹಾಗೆ ನಮ್ಮ ಹೃದಯದಲ್ಲಿಯೂ ಭಗವಂತ ಮನೆಮಾಡಿಕೊಂಡಿದ್ದಾನೆ. ಅವನನ್ನು ಹೋಗಿ ಕಾಣಬಹುದು. ನಮ್ಮ ಹೃದಯದಲ್ಲಿರುವ ಪರಮಾತ್ಮನನ್ನು ಇದ್ದಲ್ಲೇ ಕಾಣಬಹುದು. ಅವನನ್ನು ಸಂತೋಷದಿಂದ ಸ್ತುತಿಸಬೇಕು. ಇವನನ್ನು ಸಂತೋಷದಿಂದ ಅರಿಯಬೇಕು. ನಿದ್ರಿಸಿದಲ್ಲಿ ಈ ತತ್ವವನ್ನು ಕಾಣಲಾದೀತೇ? ಹತ್ತಿರದಲ್ಲಿಯೇ ಅವನ ಕರುಣೆ ಸಿದ್ಧವಾಗಿರುವಲ್ಲಿ ನಿದ್ರೆಯೆಂಬ ತೆರೆಯಿಡುವುದೇಕೆ? ಎದುರಿನಲ್ಲಿಯೇ ದೀಪ ಜ್ವಲಿಸುತ್ತಿರುವಾಗ ಅದರ ಮುಂದೆ ತೆರೆಯೆಳೆದು ಕತ್ತಲಲ್ಲಿ ತಡವರಿಸುವುದೇತಕೆ? ಅವನನ್ನು ಕಾಣುವುದು ಸ್ವರೂಪವಲ್ಲವೇ? ಅವನನ್ನು ನಮ್ಮ ಮಿತಿಗೆ ಮೀರಿ ಅರಿಯಲು ಸಾಧ್ಯವಿಲ್ಲ. ಆ ಅಂತರ್ಯಾಮಿ ಅಣುವಿಗೂ ಅಣು. ಅಣುವಿನ ಅಪಾರ ಶಕ್ತಿಯನ್ನು ಅರಿಯಲು ನಮಗೆ ಆಚಾರ್ಯನ ಕರುಣೆಯೂ ಸದಾ ಇರಬೇಕು. ನಮ್ಮ ಹೃದಯಾಕಾಶದಲ್ಲಿರುವ ಅಸದೃಶವಾದ ಪ್ರಣವದ ಪರವಸ್ತುವನ್ನು ಅರಿತ ಗುರುವನ್ನು ಪರಮಾತ್ಮನು ನಮಗೆ ಕರುಣಿಸಿದಲ್ಲಿ ನಮ್ಮ ನಿದ್ರೆಯು/ಅಂಧಕಾರವೂ ದೂರವಾಗುವದು. ಆ ಪರಮಾತ್ಮನನ್ನು ಅರಿಯಲು ಆಂಡಾಳ್ ನಮ್ಮ ನಿದ್ರೆಯನ್ನು ನೀಗಿಸುವ ಉತ್ತಮಿಯೇ ಸರಿ!!

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ |

ಪರಿಪರಿ ಶಾಸ್ತ್ರವನೋದಿದರೇನು ವ್ಯರ್ಥವಾಯಿತು ಭಕುತಿ ||

ಎಂಬ ದಾಸವಾಣಿಯಂತೆ, ಆಂಡಾಳ್ ಪುರುಷಾರ್ಥವೆಂದು ಅನುಭವದಿಂದಲೂ, ಅನುಷ್ಠಾನದಿಂದಲೂ, ತನ್ನ ಭಕ್ತಿಯಿಂದಲೂ ಲೋಕಕ್ಕೆ ಸನ್ಮಾರ್ಗವನ್ನು ತೋರಿದ ಗುರುವೇ ಆದಳು. 

 (ವಿಷಯ ಸಂಗ್ರಹ : “ತಿರುಪ್ಪಾವೈ ರಸಸ್ವಾಧಿನಿ” – ಬರೆದವರು ವಿದ್ವಾನ್ ವೇದಾನ್ತ ಸಾರಜ್ಞ

   ಶ್ರೀ ಎಸ್. ಕೃಷ್ಣಾತಾತಾಚಾರ್ಯ )

(1) ಗಮಕ ಕವಿತಾ ವನಜ ಭಾಸ್ಕರ , ಗಮಕ ರತ್ನಾಕರ ಶ್ರೀಯುತ ಬಿ.ಎಸ್ .ಎಸ್ ಕೌಶಿಕ್  ರವರ  ಶ್ರೀಮದಾಂಡಾಳ್ ಮಹಾ ವೈಭವಂ -ತಿರುಪ್ಪಾವೈ – ಮೂಲ, ಕನ್ನಡ ತಾತ್ಪರ್ಯ , ಷಟ್ಪದಿ, ಭಾವಾರ್ಥ , ಚೌಪದಿ )

Feature Image Credit: Anudinam.org

Tiruppavai series

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply