close logo

ಕನ್ನಡದಲ್ಲಿ ತಿರುಪ್ಪಾವೈ ಲೇಖನಮಾಲೆ – ಪಾಶುರಂ 8

ಚಿತ್ರಕೃಪೆ : ಕೇಶವ್ ವೆಂಕಟರಾಘವನ್ (ಪಾಶುರಂ – 8)

ಶ್ರೀ ನೀಳಾ  ದೇವೈ ನಮಃ

 ತಿರುಪ್ಪಾವೈ ಲೇಖನಮಾಲೆಯ ಹಿಂದಿನ ಲೇಖನಗಳನ್ನು ಈ ಕೆಳಗೆ  ಓದಬಹುದು :

8. ಪಾಶುರಂ 

ಕೀಳ್ ವಾನಂ ವೆಳ್ಳೆನ್ರು ಎರುಮೈ ಶಿರುವೀಡು

ಮೇಯ್ ವಾನ್ ಪರಂದನಕಾಣ್ ಮಿಕ್ಕುಳ್ಳ ಪಿಳ್ಳೈಗಳುಂ

ಪೋವಾನ್ ಪೋಗಿನ್ರಾರೈ ಪೋಗಾಮಲ್ ಕಾತ್ತುನ್ನೈ

ಕೂವುವಾನ್ ವಂದು ನಿನ್ರೋಂ ಕೋದುಕಲಮುಡೈಯ

ಪಾವಾಯ್ ! ಎಳುಂದಿರಾಯ್ ಪಾಡಿಪ್ಪರೈಕೊಂಡು

ಮಾವಾಯ್ ! ಪಿಳಂದಾನೈ ಮಲ್ಲರೈ ಮಾಟ್ಟಿಯ

ದೇವಾದಿದೇವನೈ ಚ್ಚೆನ್ರುನಾಂ ಶೇವಿತ್ತಾಲ್

ಆವಾವೆನ್ರಾ ರಾಯ್ ಂದರುಳೇಲೋ ರೆಂಬಾವಾಯ್ ॥

ಶ್ರೀಯುತ ಕೌಶಿಕರ ಕನ್ನಡ ಭಾಷಾಂತರ ಹೀಗಿದೆ:

ಮೂಡಣಾಗಸ ಬಿಳುಪುದೋರಲೆಮ್ಮೆಗಳೆಲ್ಲ-

ವೋಡಿದವು ಯಿಬ್ಬನಿಯ ಪುಲ್ಲುಮೇಯಲು ಬನಕೆ 

ಗಾಡಿಕಾತಿಯರೆಲ್ಲ ಪೊರಟಿರಲು, ಬಾಗಿಲಲಿ ನಿಂದಿಹೆವು ಏಳು ಹೆಣ್ಣೇ ।

ಜೋಡಿಸುತ ವಾದ್ಯಗಳ ಹರಿಯ ಸದ್ಗುಣಗಳನು 

ಪಾಡಿ, ಹಯಮುಖದಸುರ, ಕೇಶಿಯನು ಕಾಲ್ವಿಡಿಯು-

ತೀಡಾಡಿ ಸೀಳುತ್ತ, ಮಲ್ಲರನ್ನಳಿಸಿದನ, ಭಜಿಸೆ ಕೃಪೆಗೈವ ನಮಗೆ ।।8।।

ಗೋದಾದೇವಿಯು ಮುಂದೆ ಸಾಗುತ್ತ ತನ್ನ ಇನ್ನೊಬ್ಬ ಸಖಿಯನ್ನು ಎಬ್ಬಿಸುವ ಬಗೆಯನ್ನು ಈ ಎಂಟನೇ  ಪಾಶುರದಲ್ಲಿ  ತಿಳಿಯುತ್ತೇವೆ. ಪೂರ್ವ ದಿಕ್ಕಿನ ಆಕಾಶವು ಬೆಳಕಿನಿಂದ ತುಂಬಿ ಶುಕ್ರೋದಯವಾಗಲಿದೆ. ಇದನ್ನು ಗಮನಿಸಿದ ಎಮ್ಮೆಗಳು ಮತ್ತು ಇನ್ನಿತರ ಪಶುಗಳು ಇಬ್ಬನಿಯನ್ನು ಹೊತ್ತ ಹುಲ್ಲನ್ನು ಮೇಯಲು ಎಲ್ಲಾ ಕಡೆಯಲ್ಲೂ ಹೊರಟಿವೆ. ಇತರೇ ಕನ್ಯೆಯರಾದ ನಾವೆಲ್ಲಾ ನೀರಾಡಲು, ವ್ರತ ಸ್ನಾನಕ್ಕೆ ಹೋಗಲು ಸಿದ್ಧರಾಗಿದ್ದಾಗ್ಯೂ, ಮುಂದೆ ಹೋಗದಂತೆ ತಡೆದು ನಿಲ್ಲಿಸಿ, ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯಳಾದ ನಿನ್ನನ್ನು ಎಬ್ಬಿಸಲು ಬಂದಿದ್ದೇವೆ, ಎಂದು ಗೋದಾದೇವಿ ತಿಳಿಸುತ್ತಾಳೆ. ಎದ್ದೇಳು, ನಮ್ಮೊಡನೆ ಬಾ. ಶ್ರೀಕೃಷ್ಣನನ್ನು ಸ್ತೋತ್ರಮಾಡಿ ಪುರುಷಾರ್ಥವನ್ನು ಪಡೆಯೋಣ ಎನ್ನುತ್ತಾಳೆ. 

ಈ ಗೋಪಿಕೆಯನ್ನು ಪರಿಹಾಸ ಮಾಡುವ ರೀತಿ ಇಲ್ಲಿದೆ. ಪೂರ್ವ ದಿಕ್ಕೆಲ್ಲ ಬೆಳಕಾಗಿ, ಎಮ್ಮೆಗಳು ಹುಲ್ಲು ಮೇಯಲು ಹೊರಟಿರುವುದು ಪ್ರಭಾತದ ಸೂಚನೆ. ಈ ಗೋಪಿಯು ಬಂದು ತಮ್ಮ ಜತೆಗೂಡಲೆಂದು ಉಳಿದವರೂ ಕಾದು ನಿಂತಿದ್ದಾರೆ. ಈ ಸಖಿಯು ಶ್ರೀಕೃಷ್ಣನಿಗೆ ವಲ್ಲಭೆಯಾಗಲು ತಕ್ಕವಳು. ಆತನು ಒಲಿದರೆ ತನ್ನೊಂದಿಗೆ ಹೇಗೆ ನಡೆದುಕೊಂಡಾನು!! ಎಂಬ ಊಹೆಯ ಕೋಟೆಯನ್ನು ನಿರ್ಮಿಸಿಕೊಳ್ಳುತ್ತಿದ್ದಾಳೆ. ಆಶ್ರಿತವತ್ಸಲನಾದ ಆ ದೇವ ದೇವನು ವ್ರತ ನಡೆಸಲು ಬೇಕಾದ ಸಾಧನಗಳನ್ನು ನೀಡಿ ಸಿದ್ಧಿಯನ್ನು ಅನುಗ್ರಹಿಸುವನೆಂದು ಗೋದಾದೇವಿಯು ಸಖಿಗೆ ತಿಳಿಸುತ್ತಾಳೆ. ಆದ್ದರಿಂದ ತಡ ಮಾಡದೆ ಬೇಗ ಎದ್ದು ಬರಲು ಅರುಹುತ್ತಾಳೆ. 

ಈ ಪಾಶುರದಲ್ಲಿ ಬರುವ ಗೋಪಿಕೆಯು, ಮೊದಲನೇ ಗೋಪಿಕೆಯಾದ ಪಿಳ್ಳಾಯ್, ಎರಡನೇ ಗೋಪಿಕೆಯಾದ ಪೇಯ್ ಪೆಣ್, ನಾಯಕ ಪೆಣ್ ( ತೇಜಸ್ವಿನಿ) ಗಿಂತ ಭಿನ್ನಳು. ಇವಳು ಕುತೂಹಲವುಳ್ಳವಳು. ಪರಮಾತ್ಮನಲ್ಲಿ ಭಕ್ತಿಯನ್ನು ಇಟ್ಟಿರುವುದರಿಂದ

 “ಯೇ ಭಜಂತಿ ತು ಮಾಂ ಭಕ್ತ್ಯಾ ಮಯಿ ತೇ ತೇಷುಚಾಪ್ಯಹಂ “

ಎಂಬ ಗೀತಾ ವಾಕ್ಯದಂತೆ “ಪರಮಾತ್ಮನಲ್ಲಿ ನನ್ನ ಪ್ರೀತಿ ಹೆಚ್ಚೋ ಇಲ್ಲ ತನ್ನಲ್ಲಿ ಪರಮಾತ್ಮನ ಪ್ರೀತಿ ಹೆಚ್ಚೋ” ಎಂಬ ಕುತೂಹಲದಲ್ಲಿದ್ದಾಳೆ. ಅಲ್ಲದೆ ಈ ವ್ರತ ಅತಿ ಅಗತ್ಯವೇ? ಈ ವ್ರತ ಮಾಡದಿದ್ದಲ್ಲಿ ಕೃಷ್ಣ ಪ್ರೇಮ ಸಿಗುವುದಿಲ್ಲವೇ? ಎಂಬ ಅನೇಕ ಸಂಶಯಗಳಿವೆ. ಇಷ್ಟು ಹೊತ್ತಾದರೂ ಕೃಷ್ಣ ತನ್ನನ್ನು ಅರಸಿ ಬಂದಿಲ್ಲವೇಕೆ? ಒಂದು ವೇಳೆ ತನ್ನನ್ನು ಕಂಡರೆ ಉಪೇಕ್ಷೆಯೇ? ಈ ರೀತಿಯ ಜಿಜ್ಞಾಸೆಗಳನ್ನು ಗೋದಾದೇವಿಯ ಹತ್ತಿರ ತಿಳಿಸುತ್ತಾ, ತನ್ನ ಸಂಶಯಗಳಿಗೆ ಉತ್ತರವನ್ನು ಪಡೆಯುತ್ತಾಳೆ . 

ಗೋದಾದೇವಿ:- ನಾವುಗಳು ನಿನ್ನನ್ನು ಉಪೇಕ್ಷಿಸಿಲ್ಲ. ಬೆಳಗಾಗಿದ್ದರೂ ಜಡತ್ವದಿಂದ ಮಲಗಿರುವ ನೀನು ಅವಿವೇಕಿಯೇ  ಸರಿ. 

ಸಖಿ:- ಬೆಳಗು ಇನ್ನು ಆಗಿಲ್ಲ. ಕೃಷ್ಣಪ್ರೇಮಾಧಿಕ್ಯದಿಂದ ಉಂಟಾದ ಅನ್ಯಥಾಜ್ಞಾನವಾಷ್ಟೆ  ನಿಮಗೆ. 

ಗೋದಾದೇವಿ:- ನಿನ್ನ ಬುದ್ಧಿಯೂ ಎಮ್ಮೆಯಂತೆ ಮಂದವಾಗಿದೆ. ಸಮಾಧಿಯಲ್ಲಿದ್ದು ಕೈವಲ್ಯದಲ್ಲಿ ಮಾತ್ರವೇ ತೃಪ್ತಿ ಹೊಂದಿದೆ. ಶಿರುವೀಡು(ಚಿಕ್ಕ ಮನೆ), ಪೆರುವೀಡು(ದೊಡ್ಡ ಮನೆ) – ಎಂಬೆರಡು ಮನೆಗಳುoಟು. ಒಂದು ಸಂಕುಚಿತವಾದ ಚಿಕ್ಕ ಮನೆ. ಅಂದರೆ ಕೈವಲ್ಯ ಮಾತ್ರ. ಏಕೆಂದರೆ ಇಲ್ಲಿ ಲಭಿಸುವುದು ಕೇವಲ ಸ್ವಾತ್ಮಾನಂದವೊಂದೇ. ದೊಡ್ಡಮನೆ, ಅಂದರೆ ಉದಾರಬುದ್ದಿ, ಪರಿಪೂರ್ಣ ಬ್ರಹ್ಮಾನಂದರೂಪವಾದ ಮೋಕ್ಷ. ಅಮಲನೂ ಸಕಲ ಕಲ್ಯಾಣ ಗುಣಪೂರ್ಣನೂ ಆದ ಈಶ್ವರನನ್ನು ಆಶ್ರಯಿಸು. ಎದ್ದು ಬಾ ಎನ್ನುತ್ತಾಳೆ. 

(ಇಷ್ಟಾದರೂ ಸಖಿ ಗೋದಾ ಮಾತನ್ನು ಒಪ್ಪಲಿಲ್ಲ)

ಗೋದಾದೇವಿ:- ಬೆಳಗಾಗಿಲ್ಲ ಎಂಬುದಕ್ಕೆ ನಿನ್ನ ಕಾರಣವೇನು ಸಖಿ?

ಸಖಿ:- ನಾವಿರುವುದು ಒಟ್ಟು ೫ ಲಕ್ಷ. ಆದರೆ ಬಂದಿರುವುದು ಕೇವಲ ಕೆಲವರು ಮಾತ್ರ. ಎಲ್ಲರೂ ಬಂದಿಲ್ಲವಾಗಿ, ಇನ್ನು ಬೆಳಗಾಗಿಲ್ಲ. 

ಗೋದಾದೇವಿ:- ಎಲ್ಲ ಗೋಪಿಯರೂ ನಿನ್ನಂತೆ ಏಕಾಂತದಲ್ಲಿ ಕೃಷ್ಣನನ್ನು ಚಿಂತಿಸುತ್ತಿಲ್ಲ. ಪ್ರತ್ಯಕ್ಷವಾಗಿ ಕೃಷ್ಣನೇ ನಮಗಾಗಿ ಕಾದಿರುವಲ್ಲಿ, ನಾವು ಅಂತರಂಗದಲ್ಲಿ ಮಾತ್ರ ಅವನನ್ನು ಚಿಂತಿಸಿ  ತೃಪ್ತಿ ಹೊಂದುವುದೇ? ಅದು ಸಂಕುಚಿತ ಬುದ್ದಿ. ಮಿಕ್ಕವರು ಮುಂದೆ ಸಾಗುತ್ತಿದ್ದಾರೆ. ಭಾಗವತೆಯಾದ ನಿನ್ನನ್ನು ಬಿಟ್ಟು ಹೋಗಬಾರದೆಂದು ಕೆಲವರನ್ನು ತಡೆದು ಇಲ್ಲಿಯೇ ನಿಲ್ಲಿಸಿದ್ದೇನೆ. ಕೃಷ್ಣನೇ ಬರಲೆಂದು ಕಾದಿರುವೆಯೋ? ನಿನ್ನ ಹಠಕ್ಕೆ ಅವನು ಬರನು. ಏಳು, ಎದ್ದು ಬಾ. ಕೇಶಿಯನ್ನು, ಚಾಣೂರ-ಮುಷ್ಟಿಕರನ್ನು ಕೊಂದಂತಹ, ಬ್ರಹ್ಮ-ರುದ್ರಾದಿ ಸಕಲ ದೇವತೆಗಳಿಗೂ ದೇವನಾದ ಶ್ರೀಕೃಷ್ಣನೇ ನಮಗಾಗಿ ಈ ವ್ರತವನ್ನು ಏರ್ಪಡಿಸಿರುವನು. ನಾವೇ ಅವನಲ್ಲಿಗೆ ಹೋದರೆ ನಮ್ಮ ಮೇಲೆ ಕೃಪೆ ಮಾಡುವನು. ಎದ್ದು ಬಾ. 

ಸಖಿ:- ಹಾಗಾದರೆ, ಸ್ವಲ್ಪ ಕಾಯಿರಿ ಹೊರಟು ಬರುತ್ತೇನೆ. 

ಹೀಗೆ ಗೋದಾದೇವಿ ಸಖಿಯನ್ನು ಎಬ್ಬಿಸಿ ಪರಮಾತ್ಮನ ಸೇವೆ ಮಾಡಲು ಹೊರಡುತ್ತಾಳೆ. 

ತತ್ವಾರ್ಥ: 

ಇಲ್ಲಿ ಪರಮಾತ್ಮನನ್ನು ಪಡೆಯಲು ಕಾರಣಭೂತರಾದ ಆಚಾರ್ಯರು ದೈವಾಂಶ ಸಂಬೂತರು. 

(ಮಲ್ಲರೈ ಮಾಟ್ಟಿಯ) ಪ್ರಬಲ ಮಲ್ಲರನ್ನು ಗೆದ್ದವನು ಆ ಶ್ರೀಕೃಷ್ಣ. ಆ ಮಲ್ಲರಿಗಿಂತ ಅಧಿಕ ಬಲವುಳ್ಳ ಅಹಂಕಾರ-ಮಮಕಾರಗಳು, ಸುಖ-ದುಃಖಗಳು, ಪುಣ್ಯ-ಪಾಪಗಳು, ಇವುಗಳ ವಿದ್ವoಸಕನೇ  ಆಚಾರ್ಯ.    

ಅವರು ಕಾಮಕ್ರೋಧಾದಿ ಮಲ್ಲರನ್ನು ನಾಶಮಾಡಿ ಭಗವತ್ ಸ್ವರೂಪವನ್ನು ತೋರಿಸಿಕೊಡುವರು. ಆದುದರಿಂದ ಅವರ ಸೇವೆಯಿಂದ ಮೋಕ್ಷಪ್ರಾಪ್ತಿ ಖಂಡಿತ ದೊರಕುತ್ತದೆ ಎನ್ನುವ ಭಾವ. ಪ್ರಪನ್ನ ಜನ ಕೂಟಸ್ಥರಾದ ನಮ್ಮಾಳ್ವಾರರನ್ನು ಎಬ್ಬಿಸುವ ಪದ್ಯವಿದು. ಇಲ್ಲಿಯ ಚೇತನರನ್ನು ಉದ್ಧರಿಸಲು ಭಗವಂತನ ಸಂಕಲ್ಪರೂಪನಾದ ಆಚಾರ್ಯನೆಂಬ ಸೂರ್ಯ ಉದಿಸಿದನೆಂದರ್ಥ. ತಮ್ಮ ಜೀವನವನ್ನೇ ಭಗವದ್ಯಾನದಲ್ಲಿ ಕಳೆದರೂ ಮಧುರ ಕವಿಗಳ ಪ್ರಶ್ನೆಗೆ ಉತ್ತರಿಸುವ ನೆಪದಲ್ಲಿ ಬಹಿರ್ಮುಖರಾದರು. ಇವರ ಜೀವಿತ ಕಾಲವು ಸತ್ವೋದಯದ ಕಾಲ. ತಮ್ಮ ಮೋಕ್ಷಕ್ಕೆ ಎಂದೋ ಹೋಗಬೇಕಾಗಿದ್ದರೂ ಈ ಲೋಕದ ಜನರ ಉಜ್ಜೀವನಕ್ಕಾಗಿ ಜೀವಿಸಿದ್ದವರು. ಇಂತಹವರನ್ನು ನಾವು ಸೇವಿಸೋಣ ಎನ್ನುವ ಭಾವವನ್ನು ಈ ಪದ್ಯದಲ್ಲಿ ಗೋದಾದೇವಿ ವ್ಯಕ್ತಪಡಿಸುತ್ತಾಳೆ. ಇಂತಹವರು ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಲು ವೇದದಷ್ಟೇ ಪ್ರಧಾನವಾದ ದಿವ್ಯ ಪ್ರಬಂಧಗಳನ್ನು ಪಾಡಿ ಇತರರ ಚೇತನೋದ್ಧಾರ ಮಾಡಿದ್ದಾರೆ.  ಪರಮಾತ್ಮನ ಕೃಪೆಯಿಂದ ಸತ್ವಗುಣ ತಲೆಯೆತ್ತಿ ದೇಹಾವಸಾನದಲ್ಲಿ ಅವನ ಸಾನ್ನಿಧ್ಯ ದೊರಕುವುದು ಎಂಬ ಪರಮಾರ್ಥ ಇಲ್ಲಿ ಒಟ್ಟಿನಲ್ಲಿ ಸೂಚಿತವಾಗುತ್ತದೆ. 

ತನುವ ನೀರೊಳಗದ್ದಿ ಫಲವೇನು, ತನ್ನ 

ಮನದಲ್ಲಿ ದೃಢಭಕ್ತಿಯಿಲ್ಲದ ಮನುಜಗೆ  

ದಾನಧರ್ಮಗಳನ್ನು ಮಾಡುವುದೇ ಸ್ನಾನ 

ಜ್ಞಾನತತ್ವಂಗಳನು ತಿಳಿಯುವುದೇ ಸ್ನಾನ 

ಹೀನಪಾಶಂಗಳ  ಹರಿಯುವುದೇ ಸ್ನಾನ 

ಧ್ಯಾನದಿ ಮಾಧವನ ನೋಡುವುದೇ ಸ್ನಾನ 

ಗುರುಗಳ ಶ್ರೀಪಾದತೀರ್ಥವೇ ಸ್ನಾನ 

ಹಿರಿಯರ ದರ್ಶನ ಮಾಡುವುದೇ ಸ್ನಾನ 

ಕರೆದು ಅತಿಥಿಗೆ ಅನ್ನ ಇಡುವುದೇ ಸ್ನಾನ…             

– ಕನಕದಾಸರು 

(ವಿಷಯ ಸಂಗ್ರಹ : “ತಿರುಪ್ಪಾವೈ ರಸಸ್ವಾಧಿನಿ” – ಬರೆದವರು ವಿದ್ವಾನ್ ವೇದಾನ್ತ ಸಾರಜ್ಞ

   ಶ್ರೀ ಎಸ್. ಕೃಷ್ಣಾತಾತಾಚಾರ್ಯ )

(1) ಗಮಕ ಕವಿತಾ ವನಜ ಭಾಸ್ಕರ , ಗಮಕ ರತ್ನಾಕರ ಶ್ರೀಯುತ ಬಿ.ಎಸ್ .ಎಸ್ ಕೌಶಿಕ್  ರವರ  ಶ್ರೀಮದಾಂಡಾಳ್ ಮಹಾ ವೈಭವಂ -ತಿರುಪ್ಪಾವೈ – ಮೂಲ, ಕನ್ನಡ ತಾತ್ಪರ್ಯ , ಷಟ್ಪದಿ, ಭಾವಾರ್ಥ , ಚೌಪದಿ )

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply