close logo

ಕನ್ನಡದಲ್ಲಿ ತಿರುಪ್ಪಾವೈ ಲೇಖನಮಾಲೆ – ಪಾಶುರಂ 10

ಚಿತ್ರಕೃಪೆ : ಕೇಶವ್ ವೆಂಕಟರಾಘವನ್ (ಪಾಶುರಂ – 10)

ಶ್ರೀ ನೀಳಾ  ದೇವೈ ನಮಃ

 ತಿರುಪ್ಪಾವೈ ಲೇಖನಮಾಲೆಯ ಹಿಂದಿನ ಲೇಖನಗಳನ್ನು ಈ ಕೆಳಗೆ  ಓದಬಹುದು :

೧೦. ಪಾಶುರಂ 

ನೋಟ್ರುಚ್ಚುವರ್ಕಂ ಪುಹಿಗಿನ್ರವಮ್ಮನಾಯ್

ಮಾಟ್ರಮುಂ ತಾರಾರೋ ವಾಶಲ್ ತಿರವಾದಾರ್

ನಾಟ್ರತ್ತುಳಾಯ್ ಮುಡಿ ನಾರಾಯಣನ್ ನಮ್ಮಾಲ್

ಪೋಟ್ರಪ್ಪರೈತ್ತರುಂ ಪುಣ್ಣಿಯನಾಲ್,ಪಣ್ಣೊರುನಾಳ್,

ಕೂಟ್ರತ್ತಿನ್ ವಾಯ್ ವಿಳಂದ ಕುಂಬಕರುಣನುಂ

ತೋಟ್ರು ಮುನಕ್ಕೇ ಪೆರುಂದುಯಿಲ್ ತಾನ್ ತಂದಾನೋ ?

ಆಟ್ರವನಂದಲುಡೈ ಯಾ ಯರುಂಗಲಮೇ

ತೇಟ್ರಮಾಯ್ ವಂದು ತಿರವೇಲೋ ರೆಂಬಾವಾಯ್ ॥

ಶ್ರೀಯುತ ಕೌಶಿಕರ ಕನ್ನಡ ಭಾಷಾಂತರ ಹೀಗಿದೆ:

ಮುಗಿಸಿನೋಂಪಿಯ ಸಗ್ಗ ಕೈದಲಿಹ ಸ್ವಾಮಿನಿಯೆ ।

ತೆಗೆಯಲಾರಿರೆ ಕದವ, ಮಾರುನುಡಿಯಾಡಿರೇ 

ಮಗಮಗಿಪ ತುಲಸೀಮಾಲೆಯ ಮುಡಿದುಕೊಟ್ಟುದನು ಧರಿಸಿದಾ ರಂಗನಾಥo ।

ಮಿಗೆ ನಮ್ಮನುತಿಗೇಳಿ, ಪುರುಷಾರ್ಥವೀವವಗೆ,

ಯುಗವು ತ್ರೇತೆಯೊಳಸುವ ಕುಂಭಕರ್ಣನು ನೀಗಿ 

ಬಿಗುಹಿನಿಂ ದೀರ್ಘನಿದ್ರೆಯ ಗೈದನಂತಿಹಳೆ, ಕಾದಿಹೆವು ತೆಗೆ ಕದವನು || ೧೦।।

ಭಗವಂತನಲ್ಲಿ ಭರಸಮರ್ಪಣವನ್ನು ಮಾಡಿ, ಶ್ರೀಕೃಷ್ಣ ತನ್ನಲ್ಲಿಗೆ ತಾನೇ ಬರುವನೆಂದು ಸದೃಢ ವಿಶ್ವಾಸದಿಂದ ಅದಕ್ಕಾಗಿ ತನ್ನ ಪ್ರಯತ್ನವನ್ನು ಬಿಟ್ಟು ನಿರ್ಭಯಳಾಗಿ ಸುಖದಿಂದ ನಿದ್ರಿಸುವ ಏಕಾಂತಪ್ರಿಯಳನ್ನು ಇಲ್ಲಿ ಗೋದಾದೇವಿಯು ಎಬ್ಬಿಸುವಳು. ಇವರ ಗೋಷ್ಠಿಗೆ ಅಲಂಕಾರಪ್ರಾಯಳಾದವಳಿವಳು. ಹಿಂದಿನ ಪದ್ಯದಲ್ಲಿ ಕೃಷ್ಣಾಭಿಮಾನ ಸಂಪತ್ತಿನಿಂದ ಗರ್ವಿತೆಯಾದವಳನ್ನು ಎಬ್ಬಿಸಿದರು. ಇಲ್ಲಿ, ಬಾಲೆಯರೆಲ್ಲರೂ ‘ಕೃಷ್ಣನೂ’ ಕಷ್ಟವನ್ನು ಪಡಲಿ ಎನ್ನುವ ಮಾನಿನಿಯನ್ನು ಎಬ್ಬಿಸುತ್ತಾರೆ. 

ಒಟ್ಟಾಗಿ ನಾವೆಲ್ಲರೂ ಸೇರಿ ವ್ರತ ಮಾಡೋಣ. ಮೀಯೋಣ. ಶ್ರೀ ಕೃಷ್ಣಾನುಭವ ಮಾಡೋಣ, ವ್ರತದ ಫಲವನ್ನು ನಾವೆಲ್ಲ ಅನುಭವಿಸೋಣ ಎಂದು ಹೇಳುತ್ತಾ ಮಲಗಿ ನಿದ್ರಿಸುತ್ತಿರುವ ಗೋಪಿಯನ್ನು ಎಬ್ಬಿಸುತ್ತಿದ್ದಾಳೆ ಗೋದಾ. ಒಂದು ನೊನ್ಬು(ವ್ರತ) ಮಾಡಿ – ಅತಿಶಯಿತ ಸುಕೃತ ವಿಶೇಷವನ್ನು ಮಾಡಿ, ಆ ಭಾಗ್ಯದಿಂದ ಸ್ವರ್ಗಾನಂದಾನುಭವವನ್ನು ಪಡುತ್ತಿರುವ ನೀನು ನಮ್ಮೆಲ್ಲರಿಗೂ ರಕ್ಷಕಳಾಗಿದ್ದೀಯ! ಪೂರ್ವಜನ್ಮ ಸುಕೃತ ಪರಿಪಾಕದಿಂದ, ಸ್ವಾತ್ಮ ಸಂರಕ್ಷಣ ಮಾಡಿಕೊಳ್ಳುತ್ತೀದ್ದೀಯ, ನೀನು ಮಾತ್ರ ಆ ಆನಂದವನ್ನು ಅನುಭವಿಸಿದರೆ ಸಾಲದು. ಎದ್ದು ಬಾ, ಎಲ್ಲರೂ ಒಟ್ಟಾಗಿ ಆನಂದಿಸೋಣ ಎಂದು  ಕರೆಯುತ್ತಿದ್ದಾಳೆ. 

“ಪ್ರಿಯವಾಕ್ಯ ಪ್ರದಾನೇನ ಸರ್ವೇ ತುಷ್ಯಂತಿ ಜಂತವಃ| ತಸ್ಮಾತ್ತದೇವ ವಕ್ತವ್ಯಮ್ ವಚನೇ ಕ ದರಿದ್ರತಾ?” -ಎಂಬಂತೆ ನಾವು ನಿನ್ನ ಮಾತಿಗೇ ಕಾದಿದ್ದರೆ, ನಿನ್ನಲ್ಲಿ ಆ ಮಾತಿಗೂ ದರಿದ್ರವೇ? ನಿನ್ನ ಪ್ರಿಯವಾದ ಮಾತುಗಳನ್ನು ಕೇಳಿ ನಾವು ಆನಂದಿಸಬೇಡವೇ? ‘ಒಳಕ್ಕೆ ಬನ್ನಿ’ ಎಂದೋ ‘ಹೋಗಿ’ ಎಂದೋ ಒಂದು ಮಾತೂ ಆಡಬೇಡವೇ? ಎಂದರು. 

ಆಗ ಸಖಿ, “ಹೀಗೆಲ್ಲ ನೀವು ನನ್ನ ಮೇಲೆ ದೋಷಾರೋಪಣೆ ಮಾಡುವುದಕ್ಕೆ ಇಲ್ಲಿ ಈಗ ಅವನುಂಟೋ? “ ಅಂದಳು. ಸಖಿಯ ಮಾತು ಕೇಳಿ, ಗೋದಾ ಹೇಳುತ್ತಾಳೆ, ತುಳಸಿ ಪರಿಮಳಯುಕ್ತ ಶಿರಸ್ಸುಳ್ಳವನೂ, ಸರ್ವಾಂತರ್ಯಾಮಿಯೂ, ಸರ್ವವ್ಯಾಪಿಯೂ ಆದ ನಾರಾಯಣನು “ಸರ್ವಗಂಧನೂ” ಎಂಬಂತೆ ನಿರತಿಶಯ ಸುಗಂದನಾದ್ದರಿಂದ, “ಅಂತರ್ಬಹಿಶ್ವ ತತ್ಸರ್ವಂ ವ್ಯಾಪ್ಯ ನಾರಾಯಣಃ ಸ್ಥಿತಃ”. ಸಖಿಯು ಬಾಗಿಲು ತೆರೆಯದ್ದರಿಂದ ಅವನ ಇರುವಿಕೆಯ ಪರಿಮಳವನ್ನು ಮುಚ್ಚಿಡಲು ಸಾಧ್ಯವೇ? ಅವನು ಇಲ್ಲಿರುವುದರಿಂದಲೇ ತಾನೇ ನೀನು ಬಾಗಿಲು ತೆರೆಯದೆ, ಒಂದು ಮಾತೂ ಆಡದೆ ಬಾಯಿಗೆ, ಮನಸ್ಸಿಗೆ ಬೀಗಮುದ್ರೆ ಮಾಡಿದ್ದೀಯಾ, ಎನ್ನುತ್ತಾಳೆ. 

ಸಖಿ: ಇದೆಂತಹ ಆರೋಪಣೆ? ನೀವು ಆಗಲೇ ಬಾಗಿಲನ್ನು ಹಿಡಿದು ನಿಂತಿದ್ದೀರಿ. ಶಿಸ್ತಾಗಿ ಕಾಯುತ್ತಿದ್ದೀರಿ. ಅವನು ಹೀಗೆಲ್ಲಿ ಒಳಗೆ ಬರಲು ಸಾಧ್ಯ?

ಗೋದಾದೇವಿ: ಹಾಂ ಏನಂದೆ? ಅವನು ನಾರಾಯಣನು. ನೀನು ಬಾಗಿಲು ತೆಗೆದು ಒಳಗೆ ಬಿಡುವವರೆಗೂ ಅವನು ಕಾಯಬೇಕೋ? ಅವನು ಒಮ್ಮೆ ನಿನ್ನ ಬಳಿಗೆ ಬಂದನಾದರೆ, ಹೊರಗೆಲ್ಲಿ ಬರಲು ಅರಿತಾನು! ಅವನು ನಮ್ಮ ಕಣ್ಣಿಗೆ ಕಾಣದಿದ್ದರೂ  ಅವನ ತುಳಸೀಮಾಲೆಯ ಸುಗಂಧ ಅವನ ಇರುವಿಕೆಯನ್ನು ನಮಗೆ ತೋರಿಸಿಕೊಟ್ಟಿದೆ.  

ಸಖಿ: ನೋಡಿ, ಮಾತಾಡದೆ ಮಲಗಿದ್ದಲ್ಲಿ “ಬಾಯಿ ತೆರೆ, ಬಾಗಿಲು ತೆರೆ” ಎನ್ನುವಿರಿ. ತೆರೆದಲ್ಲಿ, ‘ಹಾ ನಮಗೆ ಉತ್ತರ ಕೊಡುವುದೇ’ ಎನ್ನುವಿರಿ. ಆ ಭಗವಂತನು ನನಗೆ ಅಷ್ಟು ವಾಚೋ ವಿಧೇಯನೋ?

ಗೋದಾದೇವಿ: ಅಲ್ಲಮ್ಮ. ನಮ್ಮಿಂದ ಮಂಗಳಾಶಾಸನ (ಪೊತ್ತುಕೈ-ಸಕಲ ಸಾದ್ಯೋಪಾಯಗಳಿಗೆ ಪ್ರದರ್ಶಕ/ಶರಣಾಗತಿ ಎನ್ನುವ ಅರ್ಥ) ಮಾಡಿ ಸ್ತುತಿಸಲ್ಪಟ್ಟರೆ ಮಾತ್ರ ಅಭಿಮತ ಪುರುಷಾರ್ಥಗಳನ್ನು, ಕೈಂಕರ್ಯ ಉಪಕರಣಗಳನ್ನೂ ಕೊಡುವ ಧಾರ್ಮಿಕನವನು. ಎಷ್ಟೇ ಪುಣ್ಯನಾದರೂ, ಮಂಗಳಾಶಾಸನ ಮಾಡದಿದ್ದರೆ, ಆಸೆಪಡುವ ನಮಗೆ ಪುರುಷಾರ್ಥವನ್ನು ಕೊಡನು. ನಾವು ಅಪೇಕ್ಷಿಸಿ ಅವನು ಕೊಟ್ಟರೇನೇ ಅದು ಕೊಟ್ಟಂತಾದೀತು. ನಾವು ಬಯಸದೆಯೇ ಮೋಕ್ಷ ಕೊಟ್ಟಲ್ಲಿ ಅದಕ್ಕೇನು ಮಹತ್ವ ಇದ್ದೀತು? ಶರಣಾಗತಿ ಮಾಡದೆ ಫಲ ಕೊಡಲಾರ. ತುಂಬು ಮನಸ್ಸಿನ ಶರಣಾಗತಿಗೆ ಫಲವನ್ನು ಕೊಟ್ಟೇ ಕೊಡುವನು.

ಮತ್ತೆ ಆ ಗೋಪಿ ಮಲಗಿರಲು, ಪರಿಹಾಸ ಮಾಡುತ್ತಾ “ನಿನ್ನ ನಿದ್ರೆಯನ್ನು ನೋಡಿ್ದರೆ, ಕುಂಭಕರ್ಣನಿಗೂ ನಿನಗೂ ದೀರ್ಘ ನಿದ್ರೆಯ ವಿಷಯದಲ್ಲಿ ಪಣಬಂಧವಾಯಿತು ಅನ್ನಿಸುತ್ತದೆ. ನೀವಿಬ್ಬರೂ ಗಾಢ ನಿದ್ರೆಯನ್ನು ಮಾಡಬೇಕು. ಯಾರು ಬೇಗ ಏಳುತ್ತಾರೋ ಅವರು ಸೋತಹಾಗೆ. ಅನಂತರ ಅವರು ನಿದ್ರೆ ಮಾಡಬಾರದು. ಅಲ್ಲದೆ ತನ್ನ ನಿದ್ರೆಯೆನ್ನೆಲ್ಲಾ ಸೋತವರು ಈ ಪಂದ್ಯದಲ್ಲಿ ಗೆದ್ದ ಮತ್ತೊಬ್ಬರಿಗೆ ಕೊಟ್ಟುಬಿಡತಕ್ಕದ್ದು. ನೋಡಿದರೆ ಇಲ್ಲಿ ಕುಂಭಕರ್ಣನೇ ಮೊದಲು ಎಚ್ಚೆತ್ತು ಪಂದ್ಯದಲ್ಲಿ ಸೋತಹಾಗಿದೆ. ಪಣದ ಕರಾರಿನಂತೆ, ಅವನ ನಿದ್ದೆಯೆನ್ನು ನಿನಗೆ ಕೊಟ್ಟು, ಅವನಿಗೆ ಉಂಟಾದ ಸೋಲಿನ ಅಪಮಾನ ತಡೆಯಲಾರದೆ ತಾನಾಗಿ ಹೋಗಿ ಯಮನ ಬಾಯಲ್ಲಿ ಬಿದ್ದು ಸತ್ತಹಾಗಿದೆ”  ಎಂದು ಹೇಳುತ್ತಾರೆ. ಮುಂದೆ ಆ ತನ್ನ ಸಖಿಗೆ ಸಾವಧಾನವಾಗಿ ಒಳ್ಳೆ ತಿಳಿವು ಹೇಳಿ, ಸುಪ್ರಸನ್ನೆಯಾಗಿ ಬಂದು ಬಾಗಿಲು ತೆರೆ ಎನ್ನುತ್ತಾರೆ. ಗೋದಾದೇವಿಯ ಆರ್ತಿಯನ್ನು ಕೇಳಿ ಥಟ್ಟನೆ ಹೊರಬಂದು ತನ್ನೆಲ್ಲ ಸಖಿಯರಿಗೂ ಬಾಗಿಲನ್ನು ತೆರೆಯುತ್ತಾಳೆ ಆ ಗೋಪಿ. 

ಪರಮಭಾಗವತರಿಗೆ ನಿದ್ದೆಎಂಬುದು ತಮೋಗುಣ ಕಾರ್ಯವಾದ ಲೌಕಿಕ ನಿದ್ರೆಯಲ್ಲ. ದಿವ್ಯವಾದ ಲೋಕ ವಿಲಕ್ಷಣವಾದ ಆನಂದಾನುಭವವೇ ಅದು. ಅದೇ ಯೋಗ, ಸಮಾಧಿ. ಯಮನ ಬಾಯಲ್ಲಿ ಬಿದ್ದವರೆಂದರೆ, ದಕ್ಷಿಣ ದಿಕ್ಕಿಗೆ ಬಂದ ಮುನಿ ಅಗಸ್ತ್ಯರೆಂದೂ ಭಾವ. ಇಲ್ಲಿ ಅಗಸ್ತ್ಯರಿಗೆ ಮೂರು ಪ್ರಭಾವಗಳು ಹೇಳಲ್ಪಟ್ಟಿವೆ. 

  • ೧. ವಿಂಧ್ಯಾಚಲಸ್ತಂಬನ ಮಾಡಿದ್ದು 
  • ೨. ಸಮುದ್ರ ಪ್ರಾಶನ ಮಾಡಿದ್ದು 
  • ೩. ಇಲ್ವಲವಾತಾಪಿಗಳೆಂಬ ಅಸುರರನ್ನು ಕಬಳಿಸಿದ್ದು. 

ಅಗಸ್ತ್ಯರು ತಮಿಳು ಮತ್ತು ಸಂಸ್ಕೃತ ವೇದಾಂತದಲ್ಲಿಯೂ ಪ್ರವೀಣರು. ಅವರಿಗೆ ವಿಶ್ವಕರ್ಮನ ಶಾಪದಿಂದ ದಕ್ಷಿಣ ದಿಕ್ಕಿಗೆ ಹೊರಟುಬರುವಂತಾಯಿತು. ಇದರ ಕಥೆಯು ಶ್ರೀ ವರಾಹ ಪುರಾಣದಲ್ಲಿ ಹೀಗಿದೆ: ಪೂರ್ವದಲ್ಲಿ ಕೈಲಾಸ ಪರ್ವತದಲ್ಲಿ ಶ್ರೀಪಾರ್ವತಿ-ಪರಮೇಶ್ವರರ ಪರಿಣಯ ಸಮಯದಲ್ಲಿ, ಬ್ರಹ್ಮಾದಿ ಸಕಲದೇವತೆಗಳೂ, ಸನಕಾದಿ ಮುನಿಗಳೂ, ನಾರದಾದಿ ದೇವರ್ಷಿಗಳೂ, ಬ್ರಹ್ಮರ್ಷಿಗಳೂ, ರಾಜರ್ಷಿಗಳೂ, ೧೪ ಮನುಗಳೂ, ಸಕಲ ಮಾನವರೂ, ದೈತ್ಯದಾನವಾದಿಗಳ ಸಮೂಹವು ಅಲ್ಲಿ ಸೇರಿತು. ಇವರ ಭಾರದಿಂದ ಭೂಮಿಯ ಉತ್ತರ ಭಾಗವು ಹಡಗಿನಂತೆ ಕೆಳಗಿಳಿದುಹೋಗಿ ದಕ್ಷಿಣ ಭಾಗವು ಮೇಲಕ್ಕೆ ಎದ್ದು ಬಿಟ್ಟಿತು. ಆಗ, ವಿಶ್ವಕರ್ಮನು ಮಹಾತ್ಮರಾದ ಅಗಸ್ತ್ಯ ಮಹರ್ಷಿಗಳು ಮೂರು ಲೋಕಗಳ ಭಾರಕ್ಕೆ ಸಮವೆಂದೂ ಅವರು ಭೂಮಿಯ ದಕ್ಷಿಣ ಭಾಗಕ್ಕೆ ಹೋದರೆ, ಉಭಯ ಪಾರ್ಶ್ವಗಳಲ್ಲಿಯೂ ಸಮ ಭಾರವನ್ನು ಪಡೆಯುತ್ತದೆಯೆಂದು ಹೇಳಿ, ಅವರನ್ನು ಅಲ್ಲಿಗೆ ಕಳಿಸಲು ಇಂದ್ರಾದಿಗಳಿಗೆ ತಿಳಿಸುತ್ತಾನೆ. ಇದರಂತೆ ಸಕಲರೂ ಅಗಸ್ತ್ಯರನ್ನು ದಕ್ಷಿಣ ದೇಶಕ್ಕೆ ಹೋಗಲು ಪ್ರಾರ್ಥಿಸಿದರು. ಈ ವಿಶ್ವಕರ್ಮನಿಂದ ತಮಗೆ ಪಾರ್ವತಿ-ಪರಮೇಶ್ವರರ ವಿವಾಹ ಮಹೋತ್ಸವವನ್ನು ನೋಡಿ ಅನುಭವಿಸುವ ಭಾಗ್ಯ ತಪ್ಪಿಹೋದದಕ್ಕಾಗಿ ಆತನ ಮೇಲೆ ಅತ್ತ್ಯಾಗ್ರಹಗೊಂಡು, “ದೇವತೆಗಳಲ್ಲೇ ನೀನು ಅಧಮನಾಗಿ ಹೋಗು, ನಿನ್ನ ಕಸುಬನ್ನು ಮಾಡುವವರೂ ಸಹ ನಿಕೃಷ್ಟರಾಗಿ ಹೋಗಲಿ ” ಎಂದು ಶಪಿಸುತ್ತಾರೆ.  ಇದನ್ನು ಕೇಳಿದ ವಿಶ್ವಕರ್ಮನು “ಎಲೈ ಅಗಸ್ತ್ಯರೇ! ನಾನು ಸ್ವಾರ್ಥಕ್ಕಾಗಿ ಹೇಳಲಿಲ್ಲ. ಹೀಗಿದ್ದರೂ ನೀವು ನನಗೆ ಶಪಿಸಿದ್ದೀರಾ! ಇದಕ್ಕೆ ಪ್ರತಿಯಾಗಿ ನಿಮ್ಮ ದ್ರಾವಿಡ (ತಮಿಳು) ಭಾಷೆಯು ಪಿಶಾಚ ಭಾಷೆಗೆ ಸಮನಾಗಿ ಹೋಗಲಿ. ಅದರ ವ್ಯಾಕರಣವು ದೂಷ್ಯವಾಗಿ ಹೋಗಲಿ” ಎಂದು ಪ್ರತಿ ಶಪಿಸುತ್ತಾನೆ. 

ಅಗಸ್ತ್ಯರು ದಕ್ಷಿಣಕ್ಕೆ ಬಂದು ಶೇಷಾದ್ರಿಯ ವೇದ ಪುಷ್ಕರಿಣೀ ತೀರದಲ್ಲಿ ಶ್ರೀನಿವಾಸನನ್ನು ಕುರಿತು ತಪಸ್ಸು ಮಾಡಿ ಅವನಿಂದ ಈ ರೀತಿಯಲ್ಲಿ ವರವನ್ನು ಪಡೆಯುತ್ತಾರೆ: “ ನಿನ್ನ ದ್ರಾವಿಡ ಭಾಷೆ ಸಂಸ್ಕೃತ ಭಾಷೆಯಂತೆ ಪರಮಪೂಜ್ಯ – ಪವಿತ್ರವಾಗಲಿ. ತಾಮ್ರಪರ್ಣಿ ತೀರದ ಕುರಿಕಾ ನಗರದಲ್ಲಿ ನೀನು  ಶಟಗೋಪ “ನಮ್ಮಾಳ್ವಾರ್” ಆಗಿ ಅವತಾರ ಮಾಡುವೆ. ವೇದಾಂತ ಸಾರತತ್ವಾರ್ಥಗಳನ್ನು ಸಹಸ್ರಗಾಥಾ ರೂಪದಲ್ಲಿ ರಚಿಸು. ಅದು ವೇದಕ್ಕೆ ಸಮಾನವಾದುದಾಗುವುದು. ನಿತ್ಯಸೂರಿಗಳು, ಲಕ್ಷ್ಮಿ, ಆದಿಶೇಷ, ವಿಶ್ವಕ್ಷೇನ, ದಿವ್ಯಾಯುಧಗಳು, ಶ್ರೀವತ್ಸ, ಕೌಸ್ತುಭ, ವನಮಾಲೆ- ಇವೆಲ್ಲವೂ ನಾನಾ ಜಾತಿಗಳಲ್ಲಿ ಅವತರಿಸಿ ಸಕಲ ತತ್ವಾರ್ಥಗಳನ್ನು ದ್ರಾವಿಡ ಭಾಷಾ ಪ್ರಬಂಧಗಳಾಗಿ ರಚಿಸುವರು. ನನ್ನ ಭಕ್ತರಾದ ವೈಷ್ಣವರೆಲ್ಲರೂ ವೇದ ಪಾರಂಗತರಾಗುವರು. ದ್ರಾವಿಡವೇದ ಪಾಠದಿಂದಲೂ ವೈಷ್ಣವತ್ವ ಸಿದ್ಧಿಸುವುದು. ನನ್ನ ಉತ್ಸವ ಕಾಲದಲ್ಲಿ ದ್ರಾವಿಡವೇದವನ್ನು ಪಾರಾಯಣ ಮಾಡಲೇಬೇಕು.ಈ ನಿನ್ನ ಕೃತ್ಯದಿಂದ ಸರ್ವ ಭಕ್ಷಕನಾದ ಯಜ್ಞೇಶ್ವರನಿಗೆ ಹೇಗೋ ಹಾಗೆ ನಿನಗೂ ಯಾವ ದೋಷವೂ ತಟ್ಟುವುದಿಲ್ಲ” ಎಂದು ಹೇಳಿ ಶ್ರೀ ಶ್ರೀನಿವಾಸನು ಅಲ್ಲಿಯೇ ಅಂತರ್ಧಾನ ಹೊಂದಿದನು. 

 ಮದಾರಾಧನಾ ಕಾಲೇತು ಮದ್ಯಾತ್ರಾಯಾಂ ಮಹೋತ್ಸವೇ । 

ದ್ರಾವಿಡಾಧ್ಯಯನಂ ಕಾರ್ಯಂ ತೃಪ್ತಿರ್ಮೇ ಸ್ಯಾನ್ನ ಚಾನ್ಯಥಾ ।।

ಉತ್ಸವದ ಮುಂಭಾಗದಲ್ಲಿ ದ್ರಾವಿಡವೇದ ಹಾಗು ಉತ್ಸವದ ಹಿಂಭಾಗದಲ್ಲಿ ಸಂಸ್ಕೃತ ವೇದ ಪಾರಾಯಣವು ನಡೆಯುತ್ತದೆ. ಇಲ್ಲಿ ದೇವರನ್ನು ಬಿಜಯ ಮಾಡಿಸುವಾಗ ಆತನ ಹಿಂಭಾಗದಲ್ಲಿ ನಡೆಯುವ ಸಂಸ್ಕೃತ ವೇದ ಪಾರಾಯಣದವರು ದೇವರನ್ನು ಅನುಸರಿಸಿಕೊಂಡು ಬರುವಂತೆಯೂ, ಆತನ ಮುಂಭಾಗದಲ್ಲಿ ನಡೆಯುವ ದ್ರಾವಿಡ ವೇದ ಪಾರಾಯಣದವರನ್ನು ದೇವರೇ ಅನುಸರಿಸಿಕೊಂಡು ಬರುವಂತೆಯೂ ಇರುವ ಅಭಿನಯವುಳ್ಳ ಶಿಷ್ಟಾಚಾರ ಸಂಪ್ರದಾಯದಿಂದ ವ್ಯಕ್ತವಾಗುವುದು. ಇದರಿಂದ ಇಲ್ಲಿ ಎಬ್ಬಿಸಲ್ಪಟ್ಟ ಅಧಿಕಾರಿಣಿಯು ಶ್ರೀಮದ್ವೇದ ಮಾರ್ಗವನ್ನು ಅನುಸರಿಸಿ, ವೇದಾಂತ ಪ್ರವರ್ತಕರಲ್ಲಿ ಅಗ್ರಗಣ್ಯಳಾಗಿದ್ದಾಳೆ ಎಂಬುದು ಈ ಪಾಶುರದಲ್ಲಿಯ ಶ್ರೀ ಸೂಕ್ತಿಯಿಂದ ವ್ಯಂಜಿತವಾಗುತ್ತದೆ.  

ತತ್ವಾರ್ಥ: ಭಗವಂತನೇ ನಮ್ಮ ಉದ್ದಾರಕ್ಕೆ ಉಪಾಯವೆಂದು ನಂಬಿ ಇತರ ಯಾವುದೇ ವಿಷಯಗಳೆಡೆಗೆ ಗಮನ ಹರಿಸದೆ ಭಗವಧ್ಯಾನದ ಆನಂದದಲ್ಲೇ ತಲ್ಲೀನರಾಗಿರುವ ಭಕ್ತರನ್ನು ಕುರಿತು “ನಮ್ಮ ಅಹಂಕಾರ – ಮಮಕಾರಗಳನ್ನು ತೊಡೆದು ಹಾಕಿ, ನಾವು ಉದ್ಧಾರವಾಗಲು ಉಪದೇಶವನ್ನು ದಯಪಾಲಿಸು” ಎಂದು ಕೇಳುವ ಭಾವವು ಇಲ್ಲಿ ಧ್ವನಿತವಾಗಿದೆ. 

ಕಾನ್ತo  ಪ್ರಾಪ್ಯ ವಿಚಿತ್ರ ಕರ್ಮರಚಿತಂ ಪರ್ಯಾಯತೋ ಭೂಮಿಕಾo ಕೇನಾ ಪ್ಯೂದ್ಭುತ ನಾಟಕೇನ ಕಮಪಿ ಶ್ರೀ ಮನ್ತಮಾ ನಂದಯನ್। 

ಕೃತ್ವಾ ಶಾಸ್ತ್ರಮುಖೇ ಮನಃ ಪ್ರತಿಮುಖಂ ಗರ್ಭಾ ವಾಮಶ್ರಾತ್ಪರಂ ವಿದ್ಯಾ ನಿರ್ವಹಣೇನ ನಿರ್ಭರರಸೋ ಹೃದ್ಯೇಷ ವಿದ್ಯೋತತೇ ।।

ಶ್ರೀಮದಾಚಾರ್ಯರ ನ್ಯಾಯ ಸಿದ್ಧಾಂಜನದಲ್ಲಿ ತಿಳಿಸಿರುವಂತೆ, ನಟನ ಹಾಗೆ ವಿವಿಧ ವೇಷ ಪರಿಗ್ರಹ ಮಾಡುವ ಭಗವಂತನನ್ನು ವಿವಿಧ ಭೂಮಿಕೆಯಲ್ಲಿ ಪರಿಗ್ರಹಿಸಿ ಅವನಿಗೆ ಲೀಲಾರಸವನ್ನುಂಟುಮಾಡಿ ಸಂತೋಷಪಡಿಸುತ್ತೇವೆ. ಎಂದಾದರೂ ಅಹೃದಯವಾಗಿಯಾದರೂ ಪ್ರಪನ್ನನೆಂಬ ವೇಷವನ್ನು ಹಾಕಿಕೊಂಡೆವಾದರೆ, ಅಷ್ಟು ಮಾತ್ರಕ್ಕೆ ಸಂತೋಷಗೊಂಡ ಶ್ರೀಪತಿಯು ನಮ್ಮನ್ನು ತನ್ನ ಹೃದಯದಲ್ಲಿ ಆಭರಣವನ್ನಾಗಿ ಮಾಡಿಕೊಂಡು ಬೆಳಗುತ್ತಾನೆ. ಪ್ರಣತವೆಂಬ ವೇಷ ಚೇತನನಿಗೆ ನೂತನ.  ಭಗವಂತನಿಗೆ ಅದ್ಭುತ, ನೂತನ ಎರಡೂ ಆಗಿದೆ. ಅಪೂರ್ವವೂ, ಅದ್ಭುತವೂ ಆದ ಈ ವೇಷವನ್ನು ಪರಿಗ್ರಹಿಸಿದ ಕ್ಷಣವೇ ಶ್ರೀದೇವಿಯೊಡನೆ ಕೂಡಿ ಭಗವಂತ ಸಂತೋಷ ಮತ್ತು ಆಶ್ಚರ್ಯ ಪಡುತ್ತಾನೆ. ತುಳಸಿಯ ಸಂಬಂಧದಿಂದ ಶ್ರೀ ಕೃಷ್ಣನು ನಮ್ಮಳ್ವಾರರಿಗೆ ಪರಮಭೋಗ್ಯನಾಗಿ ಕಂಡುಬಂದ ಹಾಗೆ, ಈ ಅಧಿಕಾರಿಣಿಗೂ ಕೂಡ ಕಾಣಿಸುತ್ತಾನೆ ಎಂದು ಸೂಚಿಸುವುದಕ್ಕಾಗಿ, ಇಲ್ಲಿಯೂ ಗೋಪಿಯರು ಶ್ರೀತುಳಸಿ ಮಾಲೆಯ ಪರಿಮಳವನ್ನೇ ಸ್ಮರಿಸುತ್ತಾರೆಂದು ಭಾಸವಾಗುತ್ತದೆ.   

ನಾವು ಎಲ್ಲಾ ವಿಧಗಳಲ್ಲಿಯೂ ಪರಮಾತ್ಮನಿಗೆ ಪರತಂತ್ರರೆಂಬ ಭಾವಕ್ಕೆ ಮೇಲ್ಪಟ್ಟ ಆನಂದಮಯ ಭಾವ ಮತ್ತೊಂದಿಲ್ಲವೆಂದು ವ್ಯಂಜಿತವಾಗುತ್ತದೆ. 

(ವಿಷಯ ಸಂಗ್ರಹ : “ತಿರುಪ್ಪಾವೈ ರಸಸ್ವಾಧಿನಿ” – ಬರೆದವರು ವಿದ್ವಾನ್ ವೇದಾನ್ತ ಸಾರಜ್ಞ

   ಶ್ರೀ ಎಸ್. ಕೃಷ್ಣಾತಾತಾಚಾರ್ಯ )

(1) ಗಮಕ ಕವಿತಾ ವನಜ ಭಾಸ್ಕರ , ಗಮಕ ರತ್ನಾಕರ ಶ್ರೀಯುತ ಬಿ.ಎಸ್ .ಎಸ್ ಕೌಶಿಕ್  ರವರ  ಶ್ರೀಮದಾಂಡಾಳ್ ಮಹಾ ವೈಭವಂ -ತಿರುಪ್ಪಾವೈ – ಮೂಲ, ಕನ್ನಡ ತಾತ್ಪರ್ಯ , ಷಟ್ಪದಿ, ಭಾವಾರ್ಥ , ಚೌಪದಿ )

Tiruppavai series

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply