close logo

ಕನ್ನಡದಲ್ಲಿ ತಿರುಪ್ಪಾವೈ ಲೇಖನಮಾಲೆ – ಪಾಶುರಂ 19

ಚಿತ್ರಕೃಪೆ : ಕೇಶವ್ ವೆಂಕಟರಾಘವನ್ (ಪಾಶುರಂ – 19)

ಶ್ರೀ ನೀಳಾ  ದೇವೈ ನಮಃ

ತಿರುಪ್ಪಾವೈ ಲೇಖನಮಾಲೆಯ ಹಿಂದಿನ ಲೇಖನಗಳನ್ನು ಈ ಕೆಳಗೆ  ಓದಬಹುದು :

  1. ಪಾಶುರಂ

ಕುತ್ತು ವಿಳಕ್ಕೆರಿಯ ಕ್ಕೋಟ್ಟುಕ್ಕಾಲ್ ಕಟ್ಟಿಲ್ ಮೇಲ್

ಮೆತ್ತೆನ್ರ ಪಂಚಶಯನತ್ತಿನ್ ಮೇಲೇರಿ

ಕೊತ್ತಲರ್ ಪೂಜ್ಞ್ಗಳಲ್ ನಪ್ಪಿನ್ನೈ ಕೊಂಗೈಮೇಲ್

ವೈತ್ತುಕ್ಕಿಡಂದ ಮಲರ್ ಮಾರ್ಪಾ ! ವಾಯ್ ತಿರವಾಯ್

ಮೆತ್ತಡಜ್ಞ್ಕಣ್ಣಿನಾಯ್ ನೀ ಯುನ್ಮಣಾಲನೈ

ಎತ್ತನೈಪೋದುಂ ತುಯಿಲೆಳ ಒಟ್ಟಾಯ್ ಕಾಣ್

ಯೆತ್ತನೈ ಯೇಲುಂ ಪಿರಿವಾಟ್ರ ಗಿಲ್ಲಾಯಾಲ್

ತತ್ತುವ ಮನ್ರುತ್ತಗವೇಲೋ ರೆಂಬಾವಾಯ್ ॥

ಶ್ರೀಯುತ ಕೌಶಿಕರ ಕನ್ನಡ ಭಾಷಾಂತರ ಹೀಗಿದೆ :

ಮಂಗಳದ ದೀಪಗಳು ಪ್ರಜ್ವಲಿಸಿ ಬೆಳಗಿರೆ, 

ಮತಂಗದಂತದ ಕಾಲಮಂಚದಲಿ ಪೇರಿಸಿಹ,

ತುಂಗಾಮೆಲ್ವಾಸಿನೊಳು, ಸೌಂದರ್ಯ ಮೈಯಾನುತೈದು ಗುಣಗಳ ಮೇಳದಿ 

ಸಿಂಗರಿಸಿದರಳುತಿಹ, ಪೂಗೊಂಚಲಂತೆಸೆವ 

ಮಂಗಳೆಯೆ, ನಿನ್ನ ಕುಚವಪ್ಪಿರ್ಪ ವರವೃಕ್ಷ-

ನಂಗಸಂಗದ ಸ್ವಾರ್ಥವಿದು ಧರ್ಮವೇನವನ ಬಿಡುತಾಯೆ ತಡೆಯಬೇಡೌ ॥

ಪುರುಷಾಕಾರದಲ್ಲಿ ಹಿಂದಿನ ಪಾಶುರ ಪ್ರಪತ್ತಿಯಾಯಿತು. ಇಲ್ಲಿ ಮತ್ತು ಮುಂದಿನ ಪಾಶುರದಲ್ಲಿ ಉಪಾಯಾನುಷ್ಠಾನ ನಡೆಯುತ್ತೆ, ಅಂದರೆ ಹಿಂದೆ ನಪ್ಪಿನ್ನೈಯನ್ನು ಪುರುಷಾಕಾರವಾಗಿ ವರಿಸಿ ತಮ್ಮ ಅಪೇಕ್ಷಿತಗಳನ್ನು ಪ್ರಾರ್ಥಿಸಿದರು. ಹಿಂದಿನ ಪದ್ಯದಲ್ಲಿ ನೀಳಾದೇವಿಯ ಸ್ವರೂಪವು ೪ ಪದಗಳಿಂದ ಹೇಳಲ್ಪಟ್ಟಿತ್ತು. ಪರಮಾತ್ಮನಿಗೆ ಆಟದ ಚೆಂಡಿನಂತಿರುವ ಈ ಪ್ರಪಂಚವನ್ನು ತನ್ನ ಕೈಗೆ ತೆಗೆದುಕೊಂಡು ತನ್ನ ಸೌಂದರ್ಯ, ಹಾವ -ಭಾವಗಳಿಗೆ ಅವನು ಬೆರಗಾಗುವಂತೆ ಮಾಡಿ, ತನ್ನನ್ನು ಆಶ್ರಯಿಸುವ ಚೇತನರಿಗೆ ಅಭಯ ಹಸ್ತ ಕೊಡುವ ತತ್ವವೇ ‘ನೀಳಾ, ಕರುಣಾಮಯಿ’ ಎಂದು ಗೋದೆಯು ಸ್ತುತಿಸುತ್ತಾಳೆ . ಆಚಾರ್ಯ ಸಂತತಿಯಲ್ಲಿ ನಾವು ಕ್ರಮವಾಗಿ ಶ್ರೀದೇವಿಯನ್ನು ನೆನೆದ ಮೇಲೆ ಶ್ರೀಯಃ ಪತಿಯನ್ನು ನೆನೆಯುವೆವು. 

ಹಿಂದೆ, ಶ್ರೀಕೃಷ್ಣನನ್ನು, ನೀಳಾದೇವಿಯನ್ನೂ ಪ್ರಾರ್ಥಿಸಿದ್ದರಿಂದ, ಯಾರು ಎದ್ದು ಬಾಗಿಲು ತೆಗೆಯಬೇಕೆಂಬ ಸ್ಪರ್ಧೆಯುಂಟಾಗಿ ಇಬ್ಬರೂ ಏಳದಿರಲು, ಗೋದೆಯು ಅವರಿಬ್ಬರಿಗೂ ಮಂಗಳಾಶಾಸನ ಮಾಡುತ್ತಾಳೆ. ಈ ಪಾಶುರದಲ್ಲಿ ಪರಮಾತ್ಮನ ಪ್ರಸಾದ-ಆಭಿಮುಖ್ಯಗಳ ಪ್ರಭೋಧನಕ್ಕಾಗಿ ಮತ್ತೆ ನಪ್ಪಿನ್ನೈ ತಾಯಿಯನ್ನೇ ಪ್ರಾರ್ಥಿಸುತ್ತಾರೆ. 

ಶ್ರೀಕೃಷ್ಣನ ಮಹಡಿಯ ಮೇಲೆ ಶಯನಗೃಹದ (ವೈಕುಂಠ) ಭವ್ಯ ಚಿತ್ರಣವಿದೆ. ಕಾಂಚನ ರತ್ನಗಳಿಂದ ನಿರ್ಮಿತವಾದ ದೀಪಸ್ತ೦ಬಗಳಲ್ಲಿ ಮಂಗಳದೀಪಗಳು ಉರಿಯುತ್ತಿವೆ. ಇವು ಅಲ್ಲಿನ ಐದು ಮೂಲೆಗಳನ್ನೂ ಬೆಳಗುತ್ತಿವೆ. ಹಿಂದೆ ಶ್ರೀಕೃಷ್ಣನು ಕುವಲಯಾಪೀಡವೆಂಬ (ಕ್ಕೋಟ್ಟುಕ್ಕಾಲ್ ಕಟ್ಟಿಲ್ ಮೇಲ್) ಆನೆಯನ್ನು ಕೊಂದು, ಕಿತ್ತು ತಂದ ಅದರ ದಂತದಿಂದ ಮಾಡಿದ ಕಾಲುಗಳುಳ್ಳ ಮಂಚದ ಮೇಲೆ, ಮೃದುವಾಗಿರುವ ಸೌಂದರ್ಯ, ತಂಪು, ಮಾರ್ದವ, ಸುವಾಸಿತ ಭರಿತ, ಹಾಗೂ ಬೆಳ್ಳಗೆ ಶುಭ್ರವಾಗಿರುವ ಪಂಚ ಶಯನವನ್ನೇರಿ ಮಲಗಿರುವ ಶ್ರೀಕೃಷ್ಣನನ್ನು ಮತ್ತು ಗೊಂಚಲು ಗೊಂಚಲಾಗಿ ಅರಳಿದ, ಪರಿಮಳಯುಕ್ತ ಹೂಗಳನ್ನು ತನ್ನ ಕೇಶರಾಶಿಗೆ ಮುಡಿದಿರುವ ನೀಳಾದೇವಿಯ ವಕ್ಷೋಜಗಳನ್ನು ತನ್ನ ಬಾಹುಗಳಿಂದ ಆಲಂಗಿಸಿ ಮಲಗಿರುವ ವಿಶಾಲವಾದ, ಸುಕುಮಾರವಾದ ಎದೆಯುಳ್ಳ ಪರಮಾತ್ಮನೇ, ನೀನು ಬಾಯ್ತೆರೆದು ಮಾತನಾಡು ಎನ್ನುತ್ತಾಳೆ ಗೋದಾದೇವಿ.  ಮುಂದೆ, ನೀಳಾದೇವಿಯನ್ನು ಸ್ಮರಿಸುತ್ತಾ , ಕಾಡಿಗೆಯಿಂದ ಅಲಂಕೃತಳಾದ, ವಿಶಾಲಾಕ್ಷಿಯೇ, ನಿನ್ನ ಮನೋವಲ್ಲಭನನ್ನು ಒಂದು ಕ್ಷಣವಾದರೂ ಎಚ್ಛೆತ್ತು ನಮಗೆ ದರ್ಶನ ಕೊಡಲು ನೀನು ಬಿಡುವುದಿಲ್ಲವಲ್ಲ. ಇದು ಸರಿಯೇ? ಕ್ಷಣವಾದರೂ ಅವನ ಅಗಲಿಕೆಯನ್ನು ಸಹಿಸಲಾರೆಯ? ವಿರಹ ವೇದನೆಯನ್ನು ತಾಳಲಾರೆಯಲ್ಲ!! ಇದು ನಿನಗೆ ತಕ್ಕುದಲ್ಲ ತಾಯಿ. ನಿನ್ನ ಸ್ವರೂಪಕ್ಕೂ-ಸ್ವಭಾವಕ್ಕೂ ಹೀಗೆ ಮಾಡುವುದು ಸರಿಯೇ? ನೀನೂ ಎದ್ದು ನಿನ್ನ ಸ್ವಾಮಿಯನ್ನು ಎಬ್ಬಿಸಿ ನಮಗೆ ದರ್ಶನ ನೀಡು. ನಮ್ಮ ವ್ರತವು ಸಿದ್ಧಿಸುವುದು ಎನ್ನುತ್ತಾಳೆ. 

ಗೋಪಿಯರ ಪ್ರಾರ್ಥನೆಗೆ ಶ್ರೀಕೃಷ್ಣ ಮನಸೋತರೂ ಇನ್ನೂ ಅವರ ಪ್ರಾರ್ಥನೆಯನ್ನು ಕೇಳಬೇಕೆಂದು ಮಲಗಿಯೇ ಇದ್ದಾನೆ. ಅದರಿಂದ ಗೋಪಿಯರು ಮತ್ತೆ ಕೃಷ್ಣನಿಗೆ ಸುಪ್ರಭಾತ ಹೇಳಿ ತಮಗೆ ಈ ಕಾರ್ಯದಲ್ಲಿ ಅಭಿಮುಖಳಾಗುವಂತೆ ನೀಳಾದೇವಿಯನ್ನು ಪ್ರಾರ್ಥಿಸುತ್ತಾರೆ. ಭಗವಂತನು ಲಕ್ಷ್ಮೀದೇವಿಯ ಭಕ್ತಿಗೆ ಪರವಶನಾದವನು. ಶ್ರೀ ಅಥವಾ ಲಕ್ಷ್ಮೀದೇವಿಯು ಜ್ಞಾನ ಸ್ವರೂಪಳು. ಪರಮಾತ್ಮನನ್ನು ಎಡೆಬಿಡದವಳು. ನಿತ್ಯ ಅವಿಯೋಗಿನಿ. ಇಂತಹ ತಾಯಿಯೊಡನೆ ಒಡಗೂಡಿದ ಸ್ವಾಮಿಯು ನಮಗೆ ಖಂಡಿತ ಕರುಣೆ ತೋರುವನು ಎಂಬ ಭಾವವು ವ್ಯಕ್ತವಾಗಿದೆ. 

ಭಾವಾರ್ಥ:

ಇಲ್ಲಿ ಸೊಗಸಾದ ವೈಕುಂಠ ವರ್ಣನೆಯೂ ಇದೆ. ಲೋಕಕ್ಕೆ ಮಾರ್ಗದರ್ಶನ ಮಾಡುವ ಜ್ಞಾನ ದೀಪದ ೫ ಮುಖಗಳು ಇವೆ-

೧. ಶೃತಿ , ೨. ಸ್ಮೃತಿ, ೩. ಪುರಾಣ ಇತಿಹಾಸಗಳು, ೪. ಪಂಚರಾತ್ರ ಹಾಗೂ ೫. ವೈಖಾನಸಾಗಮಗಳು. 

ಕುವಲಯಾಪೀಡ ಎನ್ನುವ ಆನೆಯ ದಂತದ ನಾಲ್ಕು ಕಾಲುಗಳ ಮಂಚವನ್ನು ಸರ್ವ ಆಯಾಸ ನಿವೃತ್ತಿ  ಪೂರ್ವಕ ನಿರತಿಶಯ ಸುಖಾನುಭವಕ್ಕೆ ಆಶ್ರಯ ಸ್ಥಾನಕ್ಕೂ ಮತ್ತು ಜ್ಞಾನಿಗಳಿಗೆ ಸಾಂಸಾರಿಕ ಕ್ಲೇಶ ವಿಸ್ಮರಣ ಪೂರ್ವಕ ಬ್ರಹ್ಮಾನಂದಾನುಭವ ಕೊಡುವುದಕ್ಕೂ ಹೋಲಿಸಿದ್ದಾರೆ.

ಶಾಸ್ತ್ರವೇ ಮಂಚ. ಇನ್ನು ಇದನ್ನು ಹೊತ್ತಿರುವ ೪ ಕಾಲುಗಳು:

೧. ನಾಲ್ಕು ವಿಧ ದೇಹ- ದೇವ, ಮನುಷ್ಯ, ತಿರ್ಯಕ್, ಸ್ಥಾವರ 

೨. ನಾಲ್ಕು ವರ್ಣಗಳು- ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ 

೩. ನಾಲ್ಕು ಆಶ್ರಮಗಳು-  ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸ 

೪. ನಾಲ್ಕು  ಅಧಿಕಾರಿಗಳು- ಆರ್ತ, ಜಿಜ್ಞಾಸು, ಅರ್ಥಾರ್ಥಿ, ಜ್ಞಾನಿ 

೫. ನಾಲ್ಕು  ಫಲಗಳು- ಧರ್ಮ, ಅರ್ಥ, ಕಾಮ, ಮೋಕ್ಷ 

೬. ನಾಲ್ಕು  ಮೋಕ್ಷಗಳು- ಸಾಲೋಕ್ಯ, ಸಾಮಿಪ್ಯ, ಸಾರೂಪ್ಯ, ಸಾಯೂಜ್ಯ 

೭. ನಾಲ್ಕು ಸಾಧನಗಳು- ಕರ್ಮ, ಜ್ಞಾನ, ಭಕ್ತಿ, ಪ್ರಪತ್ತಿ 

೮. ನಾಲ್ಕು  ಗತಿಗಳು- ಗರ್ಭಗತಿ, ಯಾಮ್ಯಗತಿ, ಧೂಮಾದಿಗತಿ, ಅರ್ಚಿರಾದಿಗತಿ 

೯. ನಾಲ್ಕು  ಯುಗಧರ್ಮ- ಧ್ಯಾನ, ಯಜನ, ಅರ್ಚನ , ನಾಮ ಸಂಕೀರ್ತನ  

೧೦. ನಾಲ್ಕು ವ್ಯೂಹಗಳು – ವಾಸುದೇವ, ಸಂಕರ್ಷಣ ಪ್ರದ್ಯುಮ್ನ, ಅನಿರುದ್ಧ 

೧೧. ನಾಲ್ಕು ರೂಪಗಳು- ಸಿತ, ಪೀತ, ಶ್ಯಾಮ, ನೀಲ 

೧೨. ನಾಲ್ಕು ಕ್ರಿಯೆಗಳು- ಸೃಷ್ಟಿ, ಸ್ಥಿತಿ, ಸಂಹಾರ, ಮೋಕ್ಷ ಪ್ರದತ್ವ 

ಇತ್ಯಾದಿ ನಾನಾರ್ಥಭರಿತ ತತ್ವವೇ   ನಾಲ್ಕು ಕಾಲುಗಳ ಮೇಲೆ ನಿಂತಿರುವುದೆಂಬುದರ ಧ್ವನ್ಯಾರ್ಥ. 

ಇಲ್ಲಿ ಮೇಲೆ ತಿಳಿಸಿದ ಜ್ಞಾನದೀಪದ ಬೆಳಕಲ್ಲಿ ಪರಬ್ರಹ್ಮಾನ್ವೇಷಣೆ, ಪಂಚ ಶಯನ ಎನ್ನುವುದು ಅರ್ಥ ಪಂಚಕ.  ನೀಳಾದೇವಿಯ ಅಲಂಕಾರಗಳು ಎನ್ನುವುದು ಅಂತರಂಗ ಶಿಷ್ಯನ ವಿನಯ, ಗುರುಭಕ್ತಿ ಎನ್ನುವ ಗುಣಾಲಂಕಾರಗಳು. ಆಚಾರ್ಯ ಕೃಪೆಯಿಂದ ಪರಮಾತ್ಮಾನುಭವ ದೊರೆಯುವುದು. ಅವರೇ ಜ್ಞಾನ ಹಾಗು ಮೋಕ್ಷಗಳಿಗೆ ಕಾರಣರು. 

ಜ್ಞಾನದ ನಡಿಬ್ಯಾರೆ ತತ್ವಜ್ಞಾನದ ನಡಿ ಬ್ಯಾರೆ  

ದೇಹದಂಡನೆ ಮಾಡಿದರೇನು ಬಾಹ್ಯರಂಜನೆ ದೋರಿದರೇನು  

ಶಬ್ದ ಜ್ಞಾನ ಸೂರಾಡಿದರೇನು ಲಭ್ದಾ ಲಬ್ಧೇಲಾಡಿದರೇನು 

ರಿದ್ದಿ ಸಿದ್ದಿಯ ದೋರಿದರೇನು ಗೆದ್ದು ಮಂತ್ರಾಂತ್ರಸೋಲಿಪರೇನು 

ಗೀರ್ವಾಣ ಆಡಿದರೇನು ಭೂತ ಭವಿಷ್ಯ ಹೇಳಾಡಿದರೇನು 

ವ್ರತ ತಪ ತೀರ್ಥಾಶ್ರೈಸಿದರೇನು ಕೃತ ಕೋಟ್ಯಜ್ಞಾವ ಮಾಡಿದರೇನು 

ಯೋಗಾಯೋಗಾಚರಿಸಿದರೇನು ಭೋಗ ತ್ಯಾಗ ಮಾಡಿದರೇನು

ಏನು ಸಾಧನೆ ಮಾಡಿದಫಲವೇನು ಖೂನ ದೋರದೆ ಮಹಿಪತಿಗುರುತಾನು   ಮಹಿಪತಿ ದಾಸರು 

(ವಿಷಯ ಸಂಗ್ರಹ : “ತಿರುಪ್ಪಾವೈ ರಸಸ್ವಾಧಿನಿ” – ಬರೆದವರು ವಿದ್ವಾನ್ ವೇದಾಂತ ಸಾರಜ್ಞ

   ಶ್ರೀ ಎಸ್. ಕೃಷ್ಣಾತಾತಾಚಾರ್ಯ )

(1) ಗಮಕ ಕವಿತಾ ವನಜ ಭಾಸ್ಕರ , ಗಮಕ ರತ್ನಾಕರ ಶ್ರೀಯುತ ಬಿ.ಎಸ್ .ಎಸ್ ಕೌಶಿಕ್  ರವರ  ಶ್ರೀಮದಾಂಡಾಳ್ ಮಹಾ ವೈಭವಂ -ತಿರುಪ್ಪಾವೈ – ಮೂಲ, ಕನ್ನಡ ತಾತ್ಪರ್ಯ , ಷಟ್ಪದಿ, ಭಾವಾರ್ಥ , ಚೌಪದಿ )

Tiruppavai series

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.