close logo

ಕನ್ನಡದಲ್ಲಿ ತಿರುಪ್ಪಾವೈ ಲೇಖನಮಾಲೆ – ಪಾಶುರಂ 17

ಚಿತ್ರಕೃಪೆ : ಕೇಶವ್ ವೆಂಕಟರಾಘವನ್ (ಪಾಶುರಂ – 17)

ಶ್ರೀ ನೀಳಾ  ದೇವೈ ನಮಃ

ತಿರುಪ್ಪಾವೈ ಲೇಖನಮಾಲೆಯ ಹಿಂದಿನ ಲೇಖನಗಳನ್ನು ಈ ಕೆಳಗೆ  ಓದಬಹುದು :

  1. ಪಾಶುರಂ

ಅಂಬರಮೇ, ತಣ್ಣೀರೇ ಶೋಱೇ ಅಱಂ ಎಯ್ಯುಂ

ಎಂಬೆರುಮಾನ್ ! ನಂದಗೋಪಾಲಾ! ಎಳುಂದಿರಾಯ್,

ಕೊಂಬನಾರ್ಕೆಲ್ಲಾಂ ಕೊಳುಂದೇ ! ಕುಲವಿಳಕ್ಕೇ

ಎಂಬೆರುಮಾಟ್ಟಿ! ಯಶೋದಾಯ್! ಅಱಿವುರಾಯ್!

ಅಂಬರ ಮೂಡಋತೋಜ್ಞ್ಗಿ ಯುಲಗಲಂದ

ಉಂಬರ್ ಕೋಮಾನೇ ! ಉಱಜ್ಞ್ಗಾದೆಳುಂದಿರಾಯ್

ಶೆಂಪೊರ್ಕಳ ಲಡಿಚ್ಚೆಲ್ವಾ ! ಬಲದೇವಾ !

ಉಂಬಿಯುಂ ನೀಯು ಮುಱಜ್ಞ್ಗೇಲೋ ರೆಂಬಾವಾಯ್ ॥

ಶ್ರೀಯುತ ಕೌಶಿಕರ ಕನ್ನಡ ಭಾಷಾಂತರ ಹೀಗಿದೆ :

ಘನಮಾದ ಪಟ್ಟೆವಸ್ತ್ರಾದಿಗಳ ಹಿಮಜಲವ-

ನಿನಿದೆನಿಪ ಷಡ್ರಸೋಪೇತ ಭೋಜನಗಳನು 

ಘನಕೃಪೆಯೊಳೆ ಮಗೀವ, ನಂದಗೋಪನಸುತನೆ, ಏಳಯ್ಯ ಸ್ವಾಮಿ, 

ನಮ್ಮ ವನಿತೆಯರ ಕುಲಕೆಲ್ಲ ದೀಪದೊಳು ರಾಜಿಪಳೆ,

ವಿನುತೆಯಪ್ಪ ಯಶೋದೆಯನ್ನರಿತ ಆಕಾಶವನು ಹರಿದು 

ಲೋಕವನ್ನಳೆದವನೆ, ಬಲರಾಮಗೂಡಿ ಮೈದೋರಿ ಕಾಯೈ ।।೧೭।।

ಹಿಂದಿನ ಪಾಶುರದಲ್ಲಿ ಗೋಪಿಕೆಯರು ಕಾವಲುಗಾರರ ಅನುಮತಿ ಪಡೆದು ಅರಮನೆಯ ಕದವನ್ನು ತೆರೆಸಿ, ಅಂತಃಪುರಕ್ಕೆ ಪ್ರವೇಶಿಸುತ್ತಾರೆ. ಗೋದೆಯ ಭಾವಬಂಧದಲ್ಲಿ ಮೊದಲು ನಂದಗೋಪ, ನಂತರ ಯಶೋಧಾದೇವಿ, ಆನಂತರ ಶ್ರೀಕೃಷ್ಣ ಬಲರಾಮರು ಮಲಗಿರುವಂತೆ ತೋರುತ್ತದೆ. ಇಲ್ಲಿ ಆ ನಾಲ್ವರು ಎಬ್ಬಿಸಲ್ಪಟ್ಟಿದ್ದಾರೆ. ಮೊದಲು ನಂದಗೋಪನನ್ನು ಸುಪ್ರಭಾತದಿಂದ ಎಬ್ಬಿಸುವಳು. ನಂದಗೋಪರ ಮಹತ್ತರವಾದ ಔದಾರ್ಯವನ್ನು ಅದಕ್ಕೆ ತಕ್ಕ ವಿಶೇಷಣಗಳಿಂದ ಪ್ರಶಂಸಿಸಿದ್ದಾರೆ. 

ಆಹಾ! ನಂದಗೋಪನಿಗೆ ಪರಮಾತ್ಮನಲ್ಲಿ ಎಷ್ಟು ಮೋಹ! ಅವನೇ ಪರಮಾತ್ಮನೆಂದು ತಿಳಿದೂ ಅವನನ್ನು ರಕ್ಷಿಸುವ ಸಲುವಾಗಿ ಪಕ್ಕದಲ್ಲಿ ವೇಲಾಯುಧವನ್ನು ಇಟ್ಟು ಕೊಂಡಿದ್ದಾನೆ. ತನ್ನ ಕೃಷ್ಣನನ್ನು ಯಾರೂ ಕದ್ದೊಯ್ಯದೆ ಇರಬೇಕಾದರೆ, ತಾನು ವಸ್ತ್ರಾದಿಗಳ ದಾನದಿಂದ ಎಲ್ಲರ ಮನಸ್ಸನ್ನು ತೃಪ್ತಿಗೊಳಿಸಬೇಕೆಂದು ಯೋಚಿಸಿದ್ದಾನೆ. ಶ್ರೀಕೃಷ್ಣನಿಗೆ ತಕ್ಕನಾದ ತಂದೆಯೆಂದು ಗೋದೆಯು – “ವಸ್ತ್ರವನ್ನೂ, ಶೀತೋದಕವನ್ನು, ಅನ್ನವನ್ನೂ ದಾನಮಾಡುವ ನಮ್ಮ ಸ್ವಾಮಿಯಾದ ನಂದಗೋಪನೇ, ನಿನಗೆ ಸುಪ್ರಭಾತ. ನಂದಗೋಪನು ಬಹು ಉದಾರಿ. ಪ್ರಪಂಚದಲ್ಲಿ ಮುಖ್ಯವಾಗಿ ಎಲ್ಲರಿಗೂ ಬೇಕಾದದ್ದು ಅನ್ನ, ನೀರು ಮತ್ತು ವಸ್ತ್ರ. ಇವುಗಳನ್ನು ಯಥೇಚ್ಛವಾಗಿ ದಾನಮಾಡಿದವನು ನಂದಗೋಪ. ಅನ್ನದಾತೃತ್ವರೂಪ ಔದಾರ್ಯ-ಹಿಂದೆ ಜತೆಗಾರರಾದ ಗೊಲ್ಲ ಬಾಲಕರು ಬಹು ಹಸಿದಿದ್ದಾಗ, ಬೃಂದಾವನದಲ್ಲಿ ‘ಅಂಗಿರಸ’ ಎಂಬ ಯಜ್ಞ ನಡೆಯುತ್ತಿದ್ದ ಕಡೆಯಿಂದ, ಪೂರ್ಣಾಹುತಿಗೂ ಮುನ್ನವೇ, ಮಹರ್ಷಿ ಪತ್ನಿಯರಿಂದ ಆಹಾರವನ್ನು ತರಿಸಿ ಶ್ರೀಕೃಷ್ಣ ಸ್ನೇಹಿತರ ಹಸಿವನ್ನು ಶಮನ ಮಾಡಿ ತೃಪ್ತಿ ಗೊಳಿಸಿದನು. ಕಾರಣ “ಗುಣಾಃ ಕಾರ್ಯೇ ಸಂಭವಂತಿ”  – ಎಂಬ ನ್ಯಾಯದಂತೆ ಕಾರಣಭೂತನಾದ ನಂದನಲ್ಲಿ ಈ ಔದಾರ್ಯಗಳು ಆರೋಪಿತವಾಗಿವೆ ಎನ್ನಬಹುದು. 

ಇಷ್ಟರಲ್ಲಿ, ಶ್ರೀ ನಂದಗೋಪರೆದ್ದು, “ಬಾಲೆಯರೆ! ಏಕೆ ಕರೆದಿರಿ?’ ಎನ್ನಲು, ಗೋಪಿಯರು, “ನಮಗೆ ಬೇಕಾದ ಉಪಕರಣಗಳನ್ನು ತರುವುದಕ್ಕಾಗಿ” ಎನ್ನಲು, ಇವರುಗಳ ಇಂಗಿತವನ್ನು ತಿಳಿದು, “ನೀವೇ ಒಳಹೋಗಿ ಶ್ರೀಕೃಷ್ಣನನ್ನು ಎಬ್ಬಸಿ ಕರೆದೊಯ್ಯಿರಿ” ಎನ್ನುವರು. ಗೋಪಿಯರು ಸಂತೋಷದಿಂದ ಇನ್ನು ಒಳಗೆ ಹೋಗಲು, ಸ್ತ್ರೀಕುಲ ತಿಲಕಳೂ, ಆದರಣೀಯಳೂ, ಗೋಪಕುಲಕ್ಕೆ ಮಂಗಳ ದೀಪದಂತಿರುವ ಯಶೋದಾದೇವಿಯನ್ನು ಕಾಣುತ್ತಾರೆ. ಅವಳನ್ನು ಕಂಡು “ಕೊಂಬುನಾರ್ಕೆಲ್ಲಾ೦ ಕೊಳುನ್ದ ” (ಮಂಜುಳಶಾಖೆಗೆ ಸದೃಶರಾದ ಸ್ತ್ರೀಯರಿಗೆಲ್ಲಾ ಉತ್ಕ್ರುಷ್ಟಳಾದವಳೇ) ಇತ್ಯಾದಿಯಾಗಿ ಕೂಗಿ ಎಬ್ಬಿಸುತ್ತಾರೆ. ಇದನ್ನು ಕೇಳಿ ಪ್ರಬುದ್ಧಳಾದ ಯಶೋಧೆಯು, ಇವರ ಭಾವವನ್ನು ಅರಿತು, “ಒಳಕ್ಕೆ ಹೋಗಿ, ಸುಖವಾಗಿ ಶಯನದಲ್ಲಿರುವ ಶ್ರೀಕೃಷ್ಣನನ್ನು ಕರೆದೊಯ್ಯಿರಿ” – ಎನ್ನಲು, ಗೋಪಿಯರೆಲ್ಲಾ ನಿಶ್ಯಂಕರಾಗಿ ಒಳಹೊಕ್ಕು ಶ್ರೀಕೃಷ್ಣನನ್ನು ಸ್ತುತಿಸಿ ಎಬ್ಬಿಸುವರು.

ಮುಂದೆ, “ಅಂಬರಮೇ…” ಇತ್ಯಾದಿಯಾಗಿ ತಮ್ಮ ಉದ್ದೇಶ್ಯ ದೈವವಾದ ಶ್ರೀಕೃಷ್ಣನನ್ನು , “ಉತ್ಕೃಷ್ಟನಾದ ಪರಮ ಪುರುಷನೇ! ಆಕಾಶದಂತೆ, ಸೂಕ್ಷ್ಮ, ಸ್ವಚ್ಛ ಸ್ವರೂಪನೂ, ಸರ್ವತ್ರ  ವ್ಯಾಪ್ತನೂ, ಸರ್ವ ಕಾರಣನೂ ಆದವನೇ! ಆಕಾಶದ ನೆತ್ತಿಯನ್ನು ಭೇದಿಸಿಕೊಂಡು ಎತ್ತರವಾಗಿ ಬೆಳೆದು ತನ್ನ ಪಾದಗಳಿಂದ ಲೋಕಗಳನ್ನು ಅಳೆದ, ನಿತ್ಯ ಸೂರಿಗಳಿಗೂ ಸ್ವಾಮಿಯಾದವನೇ, ನಿದ್ರೆ ಕಳೆದು ಏಳುಸ್ವಾಮೀ ”  ಎಂಬ ಭಾವವೂ ವ್ಯಕ್ತವಾಗಿದೆ. 

ಇದಕ್ಕೆ ಏನೂ ಉತ್ತರ ಕೊಡದೆ, ಶ್ರೀಕೃಷ್ಣನು ನಿದ್ರೆಯನ್ನು ಅಭಿನಯಿಸುತ್ತಿರಲು, ಅವನನ್ನು ಎಚ್ಚರಗೊಳಿಸಲು ಗೋಪಿಯರು ಮುಂದೆ ಮಲಗಿರುವ ಬಲರಾಮನನ್ನು ಎಬ್ಬಿಸುವರು. ಭಾವಗರ್ಭವಾಗಿ, “ಆರ್ತೆಯರಾದ ನಮ್ಮನ್ನು ವಿಚಾರಿಸದ ನಿನ್ನ ತಮ್ಮನು ನಿದ್ರಿಸಬಹುದು. ನೀನು ಹೀಗೆ ಮಲಗಿರಬಹುದೇ? ಅವನು ಸರ್ವದಾ ಲೀಲಾವಿನೋದಿ. ನೀನಾದರೋ ವೀರ ಶ್ರೀ ಸಂಪನ್ನ, ನಿನ್ನ ವೀರ ಕಾಲಂದುಗೆಯ ಧ್ವನಿಯಿಂದಲೂ, ನಿನ್ನ ಪೌರುಷ ಧ್ವನಿಯಿಂದಲೋ ಅವನನ್ನು ಎಬ್ಬಿಸಿ ಸಹಕರಿಸಬೇಕು” – ಎನ್ನುವರು. 

ಆಕಾಶದಲ್ಲಿ ಅಂಡಕಟಾಹವನ್ನು ತೂತುಮಾಡಿ ಎತ್ತರವಾಗಿ ಬೆಳೆದು, ಲೋಕಗಳನ್ನೆಲ್ಲಾ ಅಳೆದುಕೊಂಡ ನಿತ್ಯ ಸೂರೀಶ್ವರನೇ, ನಿದ್ದೆ ಮಾಡದೆ ಏಳು. ಇಲ್ಲಿ ತ್ರಿವಿಕ್ರಮವತಾರದ ಸ್ಮರಣೆಯನ್ನು ಮಾಡಿಕೊಡುತ್ತಾಳೆ. ವೇದಗಳಲ್ಲಿ ಅನೇಕ ದೇವತೆಗಳ ವರ್ಣನೆಯಿದೆ. ಒಬ್ಬರ ಮಹಿಮೆ ಮತ್ತೊಬ್ಬರಲ್ಲೂ ಇರುವಂತಿದೆ. ಆದರೆ ವಿಶ್ವವನ್ನು ತನ್ನ ೩ ಪಾದಗಳಿಂದ ಅಳೆದ ಕೀರ್ತಿ ಒಬ್ಬನಿಗೆ ಮಾತ್ರ ಮೀಸಲು. ಅವನು ಪರಿಪೂರ್ಣನಾದ್ದರಿಂದ ‘ವಿಶ್ವ’ ನಾಮಕನಾಗಿದ್ದಾನೆ. ಈ ಅರ್ಥವನ್ನು ಗೋದೆಯು, ೧. ಅಂಬರಮೂಡತ್ತು, ೨. ಉಂಬರ್ ಗೋಮಾನ್  – ಎಂಬ ಎರಡು ವಿಶೇಷಣಗಳಿಂದ ತಿಳಿಸಿರುವಳು. 

ವಾಮನನು ಪರಮಾತ್ಮ. ವಿಶ್ವವು ಅವನ ಉದರದಲ್ಲಿದೆ. ಇವನೇ ಪ್ರಣವ ಸ್ವರೂಪ. ಅದರಲ್ಲಿ ಸಕಲಾರ್ಥವೂ ಅಡಗಿದೆ. ಆ ಪ್ರಣವ ವಾಚ್ಯನೇ ನಾರಾಯಣ. ಉಪನಿಷತ್ ವಾಕ್ಯದಂತೆ ವಾಮನನೇ ತ್ರಿವಿಕ್ರಮನಾಗಿ ವಿಶ್ವವನ್ನು ಅಳೆದನು. ಬಲಿಯನ್ನು ಅಡಗಿಸಿದನು.  ಆ ಭಗವಂತನ ಕೈಂಕರ್ಯ ಮಾಡುವುದೇ ಮೂಲ ಮಂತ್ರಾರ್ಥ. ವಸ್ತ್ರದಾನ, ಜಲದಾನ, ಅನ್ನದಾನ ಮಾಡುವುದರಲ್ಲಿ ಉದಾರಿಯಾದ ನಂದಗೋಪನಿಗೆ ಇದು ವಿಹಿತವೇ. ಗೋಪಿಯರಿಗೆ ಧಾರಕ, ಪೋಷಕ, ಭೋಗ್ಯನಾಗಿದ್ದ ಶ್ರೀಕೃಷ್ಣನನ್ನೆ ಆತ ಗೋಪಿಯರಿಗೆ ದಾನ ಮಾಡಿದ್ದ. ಇಂತಹ ನಂದಗೋಪನು ಶ್ರೀಸೂಕ್ತಿಗಳನ್ನು ರಕ್ಷಿಸುತ್ತಿರುವ ಆಚಾರ್ಯರು. ತ್ರಿವಿಕ್ರಮನಾದ ವಾಮನನು ಪ್ರಣವ ಸ್ವರೂಪ. ಈತನ ಮೊದಲ ಪದ ”ಓಂ” ಎನ್ನುವ ಊರ್ಧ್ವಲೋಕವನ್ನು, “ನಮೋ” ಎನ್ನುವ ಪದವು ಮಧ್ಯಲೋಕವನ್ನು(ಭೂಮಿ), “ನಾರಾಯಣ” ಎನ್ನುವ ಪದವು ಪಾತಾಳ ಲೋಕವನ್ನು ತೋರುವ ಪಾರತಂತ್ರಜ್ಞಾನ ಸೂಚಿಸುವ ಪುರುಷಾರ್ಥದ ಪ್ರತೀಕ. 

ಪ್ರಣವದ ಅ,ಉ,ಮ ಎಂಬ ಮೂರು ಅಕ್ಷರಗಳಲ್ಲಿ ಮೊದಲನೆಯದಾದ ‘ಅ’ ಎಂಬುದರ ಅರ್ಥಕ್ಕೆ ಪ್ರಧಾನತಃದ್ಯೋತಕ ಈ ಪಾಶುರವೆಂದೂ, ಈ ಪದ್ಯವು ‘ಅ’  ಕಾರದಿಂದ ಉಪಕ್ರಮವಾಗಿರುವುದರಿಂದ ಹೇಳಬಹುದಾಗಿದೆ. ಹೀಗೆಯೇ ಮುಂದಿನ ಎರಡು ಪದ್ಯಗಳೂ ಕೂಡ ‘ಉ’ ಮತ್ತು ‘ಮ’ ಕರಾದ ಅರ್ಥಕ್ಕೆ ಪ್ರತಿಪಾದಕವೆನ್ನಬಹುದು. ಅದನ್ನು ಮುಂದಿನ ಪಾಶುರಗಳಲ್ಲಿ ತಿಳಿಯೋಣ. 

ತತ್ವಾರ್ಥ: ಈ ಪದ್ಯ ‘ಅ ‘ಕಾರದಿಂದ ಪ್ರಾರಂಭವಾಗಿದ್ದು ಮಂತ್ರ ತ್ರಯಗಳಲ್ಲಿ ಮೊದಲನೆಯದಾದ ‘ಪ್ರಣವ ಮಂತ್ರ’ ದ ಪ್ರಾಮುಖ್ಯತೆಯನ್ನು ತೋರಿಸುತ್ತದೆ. “ಮಂತ್ರೋ ಮಾತಾ ಗುರು: ಪಿತಾ” – ಎಂಬಂತೆ ಯಶೋದೆಯು ಇಲ್ಲಿ ಮೂಲ ಮಂತ್ರ ಹಾಗೂ ನಂದಗೋಪನೆ ಆಚಾರ್ಯ. ಹಿಂದಿನ ಪದ್ಯದಲ್ಲಿ ಬ್ರಹ್ಮಾನುಭವಕ್ಕೆ ಬರುವ ತೊಂದರೆಯನ್ನು ನಿವಾರಿಸಿದ ಈ ಆಚಾರ್ಯರು ಇಲ್ಲಿ ಮೂಲ ಮಂತ್ರವನ್ನು ಉಪದೇಶಿಸಿದರು. ಗಾಯತ್ರಿ ಮಂತ್ರವು ಬ್ರಾಹ್ಮಣ್ಯದ ಪೂರ್ತಿಗಾಗಿ. ಬ್ರಾಹ್ಮಣ್ಯ ಶರೀರಾನುಬಂಧಿ. ಅಷ್ಟಾಕ್ಷರಿ ಮಂತ್ರವು ಶ್ರೀವೈಷ್ಣವತ್ವದ ಪೂರ್ತಿಗಾಗಿ. ಶ್ರೀವೈಷ್ಣವತ್ವ ಆತ್ಮಾನುಬಂಧಿ. ಮೂಲಮಂತ್ರದ ಸಿದ್ದಿ ಆದಮೇಲೆ, ಪರಮಾತ್ಮನು ಪ್ರಸನ್ನನಾಗುವನು. ಅವನೇ ಮೋಕ್ಷಕ್ಕೆ ಕಾರಣನು. ಅವನನ್ನು ಪಡೆಯುವುದೇ ಪುರುಷಾರ್ಥ. 

ಗೋದೆಯ ಅಂತರಂಗಕ್ಕೆ ಇಳಿದರೆ ಇಲ್ಲಿ ವೇದಾಂತಸಾರವನ್ನು ‘ಅಂಬರಮೇ(ಪರಮಾಕಾಶವೆನಿಸಿದ ವೈಕುಂಠ), ತಣ್ಣೀರೇ(ವಿರಜಾನದಿ/ಸೀಮಾಂತ ಸಿಂಧು), ಮತ್ತು ಶೋರೇ(ಅನ್ನ/ ಅಹಮನ್ನಾದೋಹ ಮನ್ನಾದಃ)’ ಎನ್ನುವ ಮೂರು ಪದಗಳಿಂದ ಹೇಳಿರುವಳು. ಪರಮಾತ್ಮನು ಮೊದಲು ತೇಜಸ್ಸು, ನೀರು ಮತ್ತು ಅನ್ನವನ್ನು ಸೃಷ್ಟಿಸಿ, ತಾನೇ ಅವಾಗಿ ನಿಂತಿದ್ದಾನೆ ಎಂಬ ಪರಮಾರ್ಥ ಇಲ್ಲಿ ದ್ಯೋತಿತವಾಗಿದೆ. 

ಜಗನ್ನಾಥದಾಸರ ದಾಸೋಕ್ತಿಯಂತೆ-: 

ಮುಕ್ತ ಬಿಂಬನು ತುರಿಯ ಜೀವನ್ಮುಕ್ತ ಬಿಂಬನು ವಿಶ್ವ

ಶ್ರುತಿ ಸಂಸಕ್ತ ಬಿಂಬನು ತೈಜಸನು ಅಸೃಜ್ಯರಿಗೆ ಪ್ರಾಜ್ಞ

ಶಕ್ತನಾದರು ಸರಿಯೆ ಸರ್ವ ಉದ್ರಕ್ತ ಮಹಿಮನು

ದುಃಖ ಸುಖಗಳ ವಕ್ತೃ ಮಾಡುತಲಿಪ್ಪ ಕಲ್ಪಾಂತದಲಿ ಬಪ್ಪರಿಗೆ||1||

ಅನ್ನ ನಾಮಕ ಪ್ರಕೃತಿಯೊಳಗೆ ಅಚ್ಚಿನ್ನನು ಆಗಿಹ ಪ್ರಾಜ್ಞನಾಮದಿ

ಸೊನ್ನ ಒಡಲ ಮೊದಲಾದ ಅವರೊಳು ಅನ್ನಾದ ತೈಜಸನು

ಅನ್ನದ ಅಂಬುದ ನಾಭ ವಿಶ್ವನು ಭಿನ್ನ ನಾಮ ಕ್ರಿಯೆಗಳಿಂದಲಿ

ತನ್ನೊಳಗೆ ತಾ ರಮಿಪ ಪೂರ್ಣಾನಂದ ಜ್ಞಾನಮಯ||2||

ಬೂದಿಯೊಳಗೆ ಅಡಗಿಪ್ಪ ಅನಳನ ಉಪಾದಿ ಚೇತನ ಪ್ರಕೃತಿಯೊಳು

ಅನ್ನಾದ ಅನ್ನಾಹ್ವಯದಿ ಕರೆಸುವ ಬ್ರಹ್ಮ ಶಿವ ರೂಪಿ

ಓದನ ಪ್ರದ ವಿಷ್ಣು ಪರಮ ಆಹ್ಲಾದವ ಈವುತ

ತೃಪ್ತಿ ಬಡಿಸುವ ಅಗಾಧ ಮಹಿಮನ ಚಿತ್ರ ಕರ್ಮವನು ಆವ ಬಣ್ಣಿಸುವ||3||

ನಾದ ಭೋಜನ ಶಬ್ದದೊಳು ಬಿಂಬ ಓದನ ಉದಕದೊಳಗೆ

ಘೋಷ ಅನುವಾದದೊಳು ಶಾಂತಾಖ್ಯ ಜಠರಾಗ್ನಿಯೊಳಗೆ ಇರುತಿಪ್ಪ

ವೈದಿಕ ಸುಶಬ್ದದೊಳು ಪುತ್ರ ಸಹೋದರ ಅನುಗರೊಳು ಅತಿ ಶಾಂತನ ಪಾದ ಕಮಲ

ಅನವರತ ಚಿಂತಿಸು ಈ ಪರಿಯಲಿಂದ||4||

(ವಿಷಯ ಸಂಗ್ರಹ : “ತಿರುಪ್ಪಾವೈ ರಸಸ್ವಾಧಿನಿ” – ಬರೆದವರು ವಿದ್ವಾನ್ ವೇದಾನ್ತ ಸಾರಜ್ಞ

   ಶ್ರೀ ಎಸ್. ಕೃಷ್ಣಾತಾತಾಚಾರ್ಯ )

(1) ಗಮಕ ಕವಿತಾ ವನಜ ಭಾಸ್ಕರ , ಗಮಕ ರತ್ನಾಕರ ಶ್ರೀಯುತ ಬಿ.ಎಸ್ .ಎಸ್ ಕೌಶಿಕ್  ರವರ  ಶ್ರೀಮದಾಂಡಾಳ್ ಮಹಾ ವೈಭವಂ -ತಿರುಪ್ಪಾವೈ – ಮೂಲ, ಕನ್ನಡ ತಾತ್ಪರ್ಯ , ಷಟ್ಪದಿ, ಭಾವಾರ್ಥ , ಚೌಪದಿ )

Tiruppavai series

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.