close logo

ಕನ್ನಡದಲ್ಲಿ ತಿರುಪ್ಪಾವೈ ಲೇಖನಮಾಲೆ – ಪಾಶುರಂ 15

ಚಿತ್ರಕೃಪೆ : ಕೇಶವ್ ವೆಂಕಟರಾಘವನ್ (ಪಾಶುರಂ – 15)

ಶ್ರೀ ನೀಳಾ  ದೇವೈ ನಮಃ

ತಿರುಪ್ಪಾವೈ ಲೇಖನಮಾಲೆಯ ಹಿಂದಿನ ಲೇಖನಗಳನ್ನು ಈ ಕೆಳಗೆ  ಓದಬಹುದು :

15. ಪಾಶುರಂ 

ಎಲ್ಲೇ ಯಿಲಂಗಿಳಿಯೇ ! ಯಿನ್ನಮುರಂಗುಡಿಯೋ?

ಶಿಲ್ಲೆನ್ರಳೈ ಯೇನ್ಮಿನ್? ನಜ್ಞ್ಗೈಮೀರ್, ಪೋದರುಗಿನ್ರೇನ್

ವಲ್ಲೈ ಉನ್ ಕಟ್ಟುರೈಗಳ್ ಪಂಡೇಯುನ್ ವಾಯಱಿದುಂ

ವಲ್ಲೀರ್ಗಳ್ ನೀಜ್ಞ್ಗಳೇ, ನಾನೇದಾ ನಾಯುಡುಗ

ಒಲ್ಲೈನೀ ಪೋದಾಯ್, ಉನಕ್ಕೆನ್ನ ವೇಋಡೈಯೈ ?

ಎಲ್ಲಾರುಂ ಫೋಂದಾರೋ? ಫೋಂದಾರ್, ಫೋಂದೆಣ್ಣಿಕ್ಕೊಳ್

ವಲ್ಲಾನೈ ಕೊನ್ರಾನೈ ಮಾತ್ತಾರೈ ಮಾತ್ತಳಿಕ್ಕ

ವಲ್ಲಾನೈ ಮಾಯನೈ ಪ್ಪಾಡೇಲೋ ರೆಂಬಾವಾಯ್ ॥

ಶ್ರೀಯುತ ಕೌಶಿಕರ ಕನ್ನಡ ಭಾಷಾಂತರ ಹೀಗಿದೆ:

ಬಾಲಗಿಳಿಯೊಲುನುಡಿವ, ನಿನಗಿನಿತು ನಿದ್ದೆಯೇ| 

ಗೀಳಿಡುತಲಾರ್ಭಟಿಸಿ, ಸಿಳ್ಳಿಕ್ಕಿ ಕರೆಯದಿರಿ,

ಲೇಲೆಯಿಂ ನಾನಾಗಿ ಬರುವೆ ನಿಮ್ಮೆಡೆಗೆಂದು, ಮಾತಿತ್ತ ಸಾಮರ್ಥ್ಯಳೇ ।

ಮೇಲುಗೈ ನೀನಹೆಯೋ ಅಲ್ಲದಾವದಪೆವೊ 

ಬಳಗೆಳತಿಯರೆಲ್ಲ ಬಂದಿರ್ಪರೆಣಿಸಿಕೋ ।

ನೀಲಮೇಘನಿಭಾಂಗ, ಮದಗಜವನೊರಸಿದನ , ನುತಿಕೆ ಬಾರೌ ಈಶನಂ ।।೧೫।।

ಗೋದಾದೇವಿ ಮತ್ತು ಅವಳ ಸಖಿಯರು ಬಂದು ಗೋಪಿಯರನ್ನು ಎಬ್ಬಿಸುವ  ಕೊನೆಯ ಪಾಶುರವು ಇದಾಗಿದೆ. ಮುಂದೆ ಬರುವ ಪಾಶುರಗಳು ಭಗವಂತನ ಅನುಬಂಧಿಗಳನ್ನು ಪ್ರಾರ್ಥಿಸುತ್ತ ಅವರನ್ನು ಎಬ್ಬಿಸುವಂತಾಗಿವೆ.    

ಈ ಪಾಶುರದಲ್ಲಿ ಎಲ್ಲರೂ ಕೂಡಿ ಬಂದ  ಮೇಲೆ ಏಳೋಣ – ಎಂದಿರುವ ಗೋಪಿಯನ್ನು ಎಬ್ಬಿಸುತ್ತಾರೆ. ಹಿಂದಿನ 9 ಪಾಶುರಗಳಿಗಿಂತ ಉಕ್ತಿ-ಪ್ರತ್ಯುಕ್ತಿಗಳುಳ್ಳ ವಿಧವನ್ನು ಈ ಪಾಶುರವು ಪ್ರಕಾಶಪಡಿಸುತ್ತದೆ. ಹೀಗೆ ಸಂವಾದ ರೂಪದಿಂದ ಪದ್ಯವಿನ್ಯಾಸ ಮಾಡಿರುವುದರ ಉದ್ದೇಶ  ಅಪೂರ್ವ ಶಾಸ್ತ್ರಾರ್ಥವನ್ನು ವ್ಯಕ್ತಪಡಿಸುವುದು. ತಮ್ಮಲ್ಲಿ ದೋಷವಿರಲಿ, ಇಲ್ಲದಿರಲಿ, ‘ದೋಷಿ’ – ಎಂದು ಇತರರು ಹೇಳಿದಲ್ಲಿ, ಇದು ಬರೀ ಆರೋಪಣೆ ಮಾತ್ರವೆಂಬುದು ಗೊತ್ತಿದ್ದೂ, ನಾನು ದೋಷಿಯೇ ಸರಿ. ನಿರ್ಗುಣನಾಗಿದ್ದೇನೆ ಎಂದು ಹಾರ್ದವಾಗಿ ಅಂಗೀಕರಿಸುವಿಕೆಯು  ಶ್ರೀವೈಷ್ಣವ ತತ್ವದ ಪರಾಕಾಷ್ಠೆ. ತಪ್ಪನ್ನು ಮಾಡದಿದ್ದರೂ ಭಾಗವತರ ಮನಸ್ಸನ್ನು ನೋಯಿಸಕೂಡದೆಂಬ ನಿಷ್ಠೆಯಿಂದ ಪ್ರಣಾಮ ಪೂರ್ವಕವಾಗಿ ಶಾಂತಿಯಿಂದ ಮಾತಾಡಿಸುವ ಬಗೆಯು ಉತ್ತಮವಾದ ಶ್ರೀವೈಷ್ಣವ ಲಕ್ಷಣ. 

ಇಲ್ಲಿ ಎಬ್ಬಿಸಲ್ಪಡುವ ಗೋಪಿಯು ಪರಮಾತ್ಮನ ನಾಮಗಳನ್ನು ಅರ್ಥ ಸಹಿತವಾಗಿ ಸವಿಯುತ್ತಾ ಗಿಣಿಯಂತೆ (ಇಳಂಕಿಳಿಯೇ ) ಇಂಪಾದ ಸ್ವರದಲ್ಲಿ ಹಿಮ್ಮೇಳ ಹಾಡುತ್ತ ತನ್ನನ್ನೇ ತಾನು ಮರೆತು ಧ್ಯಾನದಲ್ಲಿರುವವಳು. ಇವಳೂ ಶ್ರೀಕೃಷ್ಣನೇ ತನ್ನ ಆರಾಧ್ಯ ದೈವ ಎನ್ನುವ ವಿಶ್ವಾಸವುಳ್ಳವಳು. ಯಾರ ಮನಸ್ಸನ್ನು ನೋಯಿಸಲು ಇಷ್ಟಪಡದ ವೈಷ್ಣವ ಸರ್ವೋತ್ತಮೆ. ಇಂತಹ ಆತ್ಮಗುಣಪೂರ್ತಿಯುಳ್ಳ ಗೋಪಿಕೆ ಇಲ್ಲಿ ಎಬ್ಬಿಸಲ್ಪಡುವವಳು. 

‘ಎಲ್ಲೇ ಇಳಂಕಿಳಿಯೇ’  ಎಂದು ಗೋದಾದೇವಿ ಮೊದಲು ಸಂಬೋದಿಸುತ್ತಾಳೆ. ಲೀಲಾಶುಕದಂತೆ ಪರಮಾತ್ಮನಿಗೆ ಅತ್ಯಂತ ಪ್ರಿಯಳಾಗಿ, ಎಲ್ಲರಿಗೂ ಮುಂದಾಗಿ ಇವಳಿಂದ ಅವನ ನಾಮಗಳನ್ನು ಹೇಳಿಸುತ್ತಾ ಹೋದರೆ, ಆ ಪರಮಾತ್ಮನು ಸುಖವಾಗಿ ಇವರಿಗೆ ಪ್ರಸನ್ನನಾಗುವನು ಎಂದು ಗೋದೆಯ ಅಭಿಮತ. ಇಲ್ಲಿಯ ಗೋಪಿಕೆ ಪರಮ ಭಾಗವತೆ. ಇವಳಾದ ಮೇಲೆ ಮತ್ತಾವ ಗೋಪಿಯನ್ನು ಗೋದೆಯು ಎಬ್ಬಿಸಲಿಲ್ಲ. ಗೋದೆಯು ಇವಳನ್ನೇ ಸಂಪೂರ್ಣವಾಗಿ ಅವಲಂಬಿಸಿರುವಳು. ಈ ಪದ್ಯವು ಸಂವಾದ ರೂಪದಲ್ಲಿದೆ. 

ಗೋದ: ಎಲೌ, ಗಿಳಿಮರಿಯಂತೆ ಮಾತಾಡುವವಳೇ, ಇನ್ನು ನಿದ್ದೆ ಮಾಡುತ್ತಿರುವೆಯಾ ?

ಗೋಪಿ: ಒಳ್ಳೆಯ ಗುಣವುಳ್ಳವಳೇ, ಶಿಲ್ ಶಿಲ್ ಎಂದು ಸಿಡುಕಿನಿಂದ ಕರೆದೆಬ್ಬಿಸಬೇಡಿ. ಇದೋ ಬಂದೆ. 

ಗೋದಾ: ಸಖಿ, ನೀನು ಬಹಳೇ ಸಾಮರ್ಥ್ಯಶಾಲಿ. ನಿನ್ನ ಚಮತ್ಕಾರದ ಮಾತುಗಳಿಂದ, ನಿನ್ನ ವಾಕ್ಚಾತುರ್ಯದ ಬಲವನ್ನು ಬಹಳ ಹಿಂದಿನಿಂದಲೂ ತಿಳಿದಿದ್ದೇವೆ. 

ಗೋಪಿ: ಸಮರ್ಥಳು ನಾನಾಗಲಿ,  ನೀನಾಗಲಿ ಅಥವಾ ಇನ್ಯಾರಾದರೂ ಆಗಲಿ. ಅದರಿಂದೇನು ?

ಗೋದಾ: ಸರಿ, ಸರಿ. ನೀನು ಬೇಗ ಹೊರಡು. ನಿನಗೆ ಅದಕ್ಕಿಂತ ಬೇರೇನೂ ಕೆಲಸ?

ಗೋಪಿ: ಹಾಗಾದರೆ ಎಲ್ಲರೂ ಬಂದಿದ್ದಾರೆಯೇ?

ಗೋದಾ: ಬಂದಿದ್ದಾರೆ. ಹೊರಗೆ ಬಂದು ಬೇಕಾದರೆ ಎಣಿಸಿಕೋ. ಬಲವುಳ್ಳ ಕುವಲಯಾ ಪೀಡಾ ಎನ್ನುವ ಗಜವನ್ನು ಕೊಂದವನೂ, ಶತ್ರುಗಳ ಬಲವನ್ನು ನಾಶಪಡಿಸುವವನೂ, ಆಶ್ಚರ್ಯ ಗುಣ ಚೇಷ್ಟಿತನೂ ಆದ ಸರ್ವೇಶ್ವರನನ್ನು ಕುರಿತು ಸಂಕೀರ್ತನೆ ಮಾಡಲು ತಡ ಮಾಡದೆ ನೀನೂ ಬೇಗ ಬಾ. ನಮ್ಮ ವ್ರತವು ಸಿದ್ಧಿಸುವುದು. 

ಪರಮೈಕಾಂತಿಯಾಗಿ, ನೈಚ್ಯಾನುಸಂಧಾನದಿಂದ ಭಾಗವತ ಶೇಷತ್ವವನ್ನು ಮೈಗೂಡಿಸಿಕೊಂಡಿರುವ ಈಕೆ ಎಳೆವಯಸ್ಸಿನ ಭಗವದ್ಭಕ್ತೆಯಾದ  ಗೋಪಿಕೆ. ತಪ್ಪು ಮಾಡದಿದ್ದರೂ ಹೊರಿಸಿದ ತಪ್ಪನ್ನು ವಾದ ಬೇಡವೆಂದು ಒಪ್ಪಿಕೊಂಡಿರುವ ಸತ್ಪುರುಷೆ. ಭಾಗವತರೇ ತನಗಿಂತ ಮೇಲು ಎಂಬ ಅಭಿಪ್ರಾಯವನ್ನು ಮನಸ್ಸಿನಲ್ಲಿ ಹೊಂದಿರುವ ನಿಜವಾದ ಶ್ರೀವೈಷ್ಣವನ ಸ್ವರೂಪ. ಗೋದಾ ಮತ್ತು ಅವಳ ಇತರ ಸಖಿಯರು ಈ ಬಾಲಗೋಪಿಯ ಮಾತನ್ನು ಒಪ್ಪಿ ಅವಳನ್ನು ಆಚಾರ್ಯ ಸ್ಥಾನೀಯಳೆಂದು ಭಾವಿಸಿ, ಅವಳನ್ನು ಮುಂದಿಟ್ಟುಕೊಂಡು ಹೋಗಿ ಶ್ರೀಕೃಷ್ಣನ ದರ್ಶನ ಮಾಡಲು ನಿರ್ಧರಿಸಿದರು. 

ತತ್ವಾರ್ಥ : ದೊಡ್ಡ ಸಭೆಗಳಲ್ಲಿ ಪಂಡಿತ ಪ್ರವರರಾದ ಉಪನ್ಯಾಸಕರು, ಉಪನ್ಯಾಸವನ್ನು ಉಪಕ್ರಮಿಸುವಾಗ, ನಾನು ಅಜ್ಞ, ಶಾಸ್ತ್ರಜ್ಞಾನವಿಲ್ಲದವನು, ಗುರುಕುಲವನ್ನು ಸೇವಿಸಲಿಲ್ಲ, ಆದರೂ ದೊಡ್ಡವರ ಆಜ್ಞೆಯನ್ನು ಮೀರಲಾರದೆ ಸಾಹಸದಿಂದ ಅಲ್ಪ ಸ್ವಲ್ಪ, ತಿಳಿದಷ್ಟನ್ನು ಹೇಳುತ್ತೇನೆ. ಮಹಾತ್ಮರಾದ ತಾವುಗಳು ತಪ್ಪಿದ್ದಲ್ಲಿ ಕ್ಷಮಿಸಿ ತಿದ್ದಬೇಕು ಎನ್ನುವಂತೆ, ‘ವಿದ್ಯಾ ದದಾತಿ ವಿನಯಂ’ ಎಂದು  ನಡೆಯುತ್ತಾರೆ. ಇದು ಶ್ರೀವೈಷ್ಣವನ ಉತ್ತಮ ಲಕ್ಷಣ.  

ಶುಕಶಾಬಕವು ಹೇಳಿಕೊಟ್ಟ ಮಾತುಗಳನ್ನು ಹೆಚ್ಚು ಕಮ್ಮಿಯಿಲ್ಲದೆ ಹೇಳುವಹಾಗೆ, ಪೂರ್ವಾಚಾರ್ಯರಿಂದ ಶಿಕ್ಷಿತವಾದ ಸೂಕ್ತಿಗಳನ್ನು ಹೆಚ್ಚು ಕಮ್ಮಿಯಿಲ್ಲದಂತೆ ಹೇಳುವುದು ಸಚ್ಚಿಷ್ಯನ ಲಕ್ಷಣ. 

ಗಿಳಿಯ ಮರಿಯನು ತಂದು ಪಂಜರದೊಳಗೆ ಪೋಷಿಸಿ 

ಕಲಿಸಿ ಮೃದು ನುಡಿಗಳನು, ಲಾಲಿಸಿ ಕೇಳ್ವ ಪರಿಣತರಂತೆ 

ಎನ್ನ ಜಿಹ್ವೆಗೆ ತಿಳುಹಿ ಮತಿಯನು ನಿನ್ನ ನಾಮಾವಳಿಯ 

ಪೊಗಳಿಕೆ ಇತ್ತು ರಕ್ಷಿಸು ನಮ್ಮ ಅನವರತ

ಶ್ರೀಕೃಷ್ಣನು ದುಷ್ಟಗಜವನ್ನು ಸಂಹರಿಸಿದಹಾಗೆ ಆಚಾರ್ಯನೂ ಪಂಚೇಂದ್ರಿಯರೂಪ ಮತ್ತು ಗಜ ಮದವನ್ನು ವಿನಾಶಗೊಳಿಸುವುದರಲ್ಲಿ ವಿಶಾರದನೆಂದು ಬೋಧ್ಯ. ಕಾಮ, ಕ್ರೋಧ, ಲೋಭ, ಮದ  ಮಾತ್ಸರ್ಯಾದಿ ದುರ್ಗುಣಗಳನ್ನು ದೂರೀಕರಿಸಬಲ್ಲವರು. ಸಕಲಪುರುಷಾರ್ಥಗಳಿಗೂ ಅಡ್ಡಿ ತರುವ ಕೋಪವನ್ನು ಶಮನಗೊಳಿಸಿ, ಸಾರ್ಥಕತೆಯ ಕಡೆಗೆ ಕರೆದೊಯ್ಯುವವರು. ಆಚಾರ್ಯ- ಅಂದರೆ, ನಿತ್ಯ ಸಂಸಾರಿಗಳನ್ನೂ ಕೂಡ ನಿತ್ಯಸೂರಿಗಳ ಪರಿಷತ್ತಿನಲ್ಲಿ ಒಯ್ದು ಸೇರಿಸತಕ್ಕವರು. 

(ವಿಷಯ ಸಂಗ್ರಹ : “ತಿರುಪ್ಪಾವೈ ರಸಸ್ವಾಧಿನಿ” – ಬರೆದವರು ವಿದ್ವಾನ್ ವೇದಾನ್ತ ಸಾರಜ್ಞ

   ಶ್ರೀ ಎಸ್. ಕೃಷ್ಣಾತಾತಾಚಾರ್ಯ )

(1) ಗಮಕ ಕವಿತಾ ವನಜ ಭಾಸ್ಕರ , ಗಮಕ ರತ್ನಾಕರ ಶ್ರೀಯುತ ಬಿ.ಎಸ್ .ಎಸ್ ಕೌಶಿಕ್  ರವರ  ಶ್ರೀಮದಾಂಡಾಳ್ ಮಹಾ ವೈಭವಂ -ತಿರುಪ್ಪಾವೈ – ಮೂಲ, ಕನ್ನಡ ತಾತ್ಪರ್ಯ , ಷಟ್ಪದಿ, ಭಾವಾರ್ಥ , ಚೌಪದಿ )

Tiruppavai series

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply