close logo

ಕನ್ನಡದಲ್ಲಿ ತಿರುಪ್ಪಾವೈ ಲೇಖನಮಾಲೆ – ಪಾಶುರಂ 12

ಚಿತ್ರಕೃಪೆ : ಕೇಶವ್ ವೆಂಕಟರಾಘವನ್ (ಪಾಶುರಂ – 12)

ಶ್ರೀ ನೀಳಾ  ದೇವೈ ನಮಃ

 ತಿರುಪ್ಪಾವೈ ಲೇಖನಮಾಲೆಯ ಹಿಂದಿನ ಲೇಖನಗಳನ್ನು ಈ ಕೆಳಗೆ  ಓದಬಹುದು :

12. ಪಾಶುರಂ 

ಕನೈತ್ತಿಳಂ ಕಟ್ರೆರುಮೈ ಕನ್ರುಕ್ಕಿರಂಗಿ

ನಿನೈತ್ತುಮುಲೈ ವಳಿಯೇ ನಿನ್ರುಪಾಲ್ ಶೋರ,

ನನೈತ್ತಿಲಂ ಶೇರಾಕ್ಕುಂ ನರ್ ಚೆಲ್ವನ್ ತಂಗಾಯ್

ಪನಿತ್ತೆಲೈ ವೀಳ ನಿನ್ ವಾಶಲ್ ಕಡೈಪಟ್ರಿ

ಶಿನತ್ತಿನಾಲ್ ತೆನ್ನಿಲಜ್ಞ್ಗೈಕ್ಕೋಮಾನೈಚೆಟ್ರ

ಮನತ್ತುಕ್ಕಿನಿಯಾನೈ ಪ್ಪಾಡವುಂ ನೀವಾಯ್ ತಿರುವಾಯ್

ಇನಿತ್ತ ನೆಳುಂದಿರಾಯ್ ಈದೆನ್ನ ಪೇರುಱಕ್ಕಂ

ಅನೈತ್ತಿಲ್ಲತ್ತಾರು ಮಱಿಂದೇಲೋ ರೆಂಬಾವಾಯ್ ॥

ಶ್ರೀಯುತ ಕೌಶಿಕರ ಕನ್ನಡ ಭಾಷಾಂತರ ಹೀಗಿದೆ:

ಯೆಳಗಂದಿ ಯೆಮ್ಮೆಗಳು, ಕರುಗಳನು ನೆನೆನೆನೆದು 

ಘಳಿನೊಯುಗುಟ್ಟುತ್ತ ಪೊರಡೆ, ಕೆಚ್ಚಲಿನಲ್ಲಿ 

ಮಳೆಯಂತೆ ರಂಧ್ರದಿಂ ಪಾಲ್ಸುರಿದು, ಮನೆಯೆಲ್ಲ ಕೆಸರೆನಿಸುವಷ್ಟ ಸಿರಿಯ| 

ನಿಳಯ ಹರಿ ಸೋದರಿಯೆ, ಪಾಲ್ಪನಿಯ ಶಿರವಾನೆ 

ಭಳಿರೆ ನಿನ್ನಯ ಕದದ ಮೆಟ್ಟಿಲಂ ಪಿಡಿದು,ಬಹು 

ಮುಳಿಸಿಂದ ವರಲಂಕೆಯಧಿಪತಿಯ  ಕೊಂದವನ ನುತಿಸಿ ಕಾದಿಹರು ಯೇಳೌ ।।12।।

ತಿರುಪ್ಪಾವೈನ 11ನೇ ಪದ್ಯದಲ್ಲಿ ಸಂಸಾರಿಯಾದವಳನ್ನು, ಬಹುಶ್ರುತ ಎಂದು ಕರೆಯಲ್ಪಟ್ಟವಳನ್ನು ಎಬ್ಬಿಸಿದ ಗೋದೆ, ಈ (12ನೇ) ಪಾಶುರದಲ್ಲಿ ಸನ್ಯಸ್ತನ (ಜ್ಞಾನಕ್ಕಾಗಿ ಸನ್ಯಸ್ತ) ತಂಗಿಯನ್ನು ಎಬ್ಬಿಸುತ್ತಾರೆ. ಶ್ರೀರಾಮನನ್ನು ಬಿಟ್ಟಿರದೆ ಅವನ ಹಿಂದೆಯೇ ಇರುತ್ತಿದ್ದ ಲಕ್ಷ್ಮಣನಂತೆ, ಶ್ರೀಕೃಷ್ಣನಲ್ಲದೆ ಬೇರೆ ಯಾರನ್ನೂ ಅರಿಯದೆ, ಸದಾ ಅವನ ಹಿಂದೆಯೇ ಇದ್ದುಕೊಂಡು ಶ್ರೀಕೃಷ್ಣನ ವಿಷಯದಲ್ಲಿ ಅತಿಯಾದ ಪ್ರೀತಿ, ಭಕ್ತಿಯುಳ್ಳಂತ ‘ಶ್ರೀದಾಮ‘ – ಎಂಬುವನ ತಂಗಿ ಇವಳು. ಆದ್ದರಿಂದ ವಿಶೇಷವಾದವಳು ಮತ್ತು ಶ್ಲಾಘನೀಯಳಾದವಳು. 

ಈ ಪಾಶುರದಲ್ಲಿ, ತಂದೆಯಾದ ಗೃಹಸ್ವಾಮಿಯನ್ನು ಹೇಳದೆ, ಅವನ ಪುತ್ರನಾದ ಶ್ರೀದಾಮನನ್ನು ಈಕೆಗೆ ಅಣ್ಣನಾಗಿ ನಿರ್ದೇಶಿಸಿ, ಅವನ ತಂಗಿಯೇ ಎಂದು ಸಂಬೋಧಿಸುತ್ತಿರುವುದು ಒಂದು ವಿಶೇಷ. ಶ್ರೀಕೃಷ್ಣನ ಸಮವಯಸ್ಕನೆಂದು, ಅವನ ಜೊತೆಗೇ ಅವಿಚ್ಚಿನ್ನವಾಗಿ ಸಹವಾಸ ಮಾಡುವವನು, ಅವನಿಗೆ ಬೇಕಾದಾಗ ಬಿಲ್ಲನ್ನೂ, ಉತ್ತರೀಯವನ್ನೂ ಎತ್ತಿಕೊಂಡು ಅವನ ಹಿಂದೆ, ಮುಂದೆ ಗೋವುಗಳನ್ನು ಹೊಡೆದುಕೊಂಡು, ಇತರ ಬಾಲ  ಸ್ನೇಹಿತರ ಜೊತೆಯಾಗಿ, ಭುಜದ ಮೇಲೆ ಕೈ ಹಾಕಿ, ಕೃಷ್ಣನ ಕೊಳಲು ನಾದ ಕೇಳುತ್ತ ಮೈ ಮರೆಯುವ ಗೋಪಾಲಕನಾಗಿ ಅವಳ ಅಣ್ಣನನ್ನು ಹೇಳದೆ ಅವಳ ತಂದೆಯನ್ನು ನಿರ್ದೇಶಿಸಿದ್ದರೆ, ಈ ಸ್ವಾರಸ್ಯ ಲೇಶವೂ ಇರುತ್ತಿರಲಿಲ್ಲ. ಅದ್ಕಕ್ಕಾಗಿ,  ಅಗ್ರಜನನ್ನೇ ಗೃಹಸ್ವಾಮಿಯಾಗಿ ನಿರ್ದೇಶಿಸಿದೆ.      

ಶ್ರೀದಾಮ ಎಂಬ ಗೋಪಾಲಕ ಶ್ರೀಕೃಷ್ಣನ ಅತ್ಯಂತ ಅಂತರಂಗ ಸಖ. ಇವನು ವೈಶ್ಯ. ವೃತ್ತಿಯಲ್ಲಿ ಕೃಷಿಕ, ಗೋರಕ್ಷಣೆ, ಹಾಲ್ಕರೆಯುವುದು ಮುಂತಾದ ಮನೆಗೆಲಸ ಜನ್ಮತಃ ಬಂದುದು. ಆದರೆ ಲಕ್ಷ್ಮಣನಂತೆ ಇವನೂ ನಿರಂತರ ಭಗವದ್ ಕೈಂಕರ್ಯವೊಂದರಲ್ಲಿಯೇ ಅತ್ಯಾಸಕ್ತನಾಗಿ “ಅಹಂಸರ್ವಂಕರಿಷ್ಯಾಮಿ” ಎನ್ನುವುದಕ್ಕಾಗಿಯೇ ಹುಟ್ಟಿ ಹಾಗೆಯೇ ನಡೆಯುತ್ತಾ ಮನೆಗೆಲಸ, ಕೃಷಿ ಕಾರ್ಯಗಳೆಲ್ಲವನ್ನೂ ಉಪೇಕ್ಷಿಸಿ ಸದಾ ಶ್ರೀಕೃಷ್ಣನ ಹಿಂದೆಯೇ ತಿರುಗುತ್ತಿದ್ದ. ಆದ್ದರಿಂದ “ಲಕ್ಷ್ಮಣೋ ಲಕ್ಷ್ಮಿ ವರ್ಧನಃ” ಎಂಬಂತೆ, ಇವನನ್ನೂ “ನಲ್ ಶೆಲ್ವನ್” ಎಂದಿದ್ದಾರೆ. ಕೋಟೀಶ್ವರನಿಗೆ ಒಂದು ಕಾಕಿಣಿ ಹೇಗೋ ಹಾಗೆ ಈ ಕೈಂಕರ್ಯಸಂಪನ್ನನಿಗೆ ಪ್ರಕೃತ ಮಹಿಷಿಯ ಕ್ಷೀರ ಅಲಕ್ಷ್ಯ. ಶ್ರೀದಾಮನ ಉಪೇಕ್ಷೆಯಿಂದ ಎಮ್ಮೆಗಳನ್ನು ಸಕಾಲದಲ್ಲಿ ಕರೆಯುವವರಿಲ್ಲದೆ ಅವುಗಳ ಕೆಚ್ಚಲು ಬಿಗಿಯುತ್ತಾ ಬಲು ಪಾಡುಪಡುತ್ತಿವೆ. 

ಇಷ್ಟು ಹಾಲು ತುಂಬಿದ್ದೂ, ಇನ್ನೂ ಹಾಲು ಕುಡಿಯದೆ  ಹಸಿದಿರುವ ತಮ್ಮ ಎಳೆ ಕರುಗಳನ್ನು ನೆನೆಸಿಕೊಂಡು ಭಾವನಾವಶದಿಂದ ತಮ್ಮ ಕೆಚ್ಚಲುಗಳಿಂದ ಅವಿಚ್ಚಿನ್ನಧಾರೆಯಾಗಿ ಹಾಲನ್ನು ಸುರಿಸುತ್ತಿವೆ. ಅತಿ ಉದಾರವಂತರು ತಮ್ಮಿಂದ ದಾನವನ್ನು ಸ್ವೀಕರಿಸದಿದ್ದಲ್ಲಿ ಪಡುವ ಪಾಡನ್ನೇ ಈ ಎಮ್ಮೆಗಳು ಪಡುತ್ತಿವೆ. ಈ ಹಾಲುಗಳು ಪ್ರವಹಿಸಿ, ನಿಂತು ಆವಿರುವ ಜಾಗವೆಲ್ಲವು ಕೆಸರಾಗಿ ಹೋಗಿವೆ. ಇಲ್ಲಿ ಇಷ್ಟೊಂದು ಹಾಲು ಹರಿಯುತ್ತಿರಲು, ಆ ಮಹಿಷಿಗಳು ಕರುಗಳನ್ನು ನೆನೆಸಿಕೊಂಡು ತಲ್ಲಣಿಸಿ ಹೋಗಿವೆ. ತಮ್ಮ ಕರುಗಳ ಮೇಲಣ ಮಮತೆಯಿಂದಲೂ, ಕ್ಷೀರದ ಅಧಿಕತೆಯಿಂದ ಉಂಟಾದ ವ್ಯಥೆಯಿಂದಲೂ, ಹೊರಗೆ ಮೇಯಲೂ ಹೋಗುವಂತ ಉತ್ಕಂಠೆಯಿಂದಲೂ ಅವುಗಳು ಆರ್ತಧ್ವನಿಯಿಂದ ಕೂಗುತ್ತಿವೆ. ಈ ಮಹಿಷಿಗಳ ಅಸ್ವಸ್ಥತೆಯನ್ನು ಶ್ರೀಕೃಷ್ಣನ ಮನಸ್ಸಿನ ಅಸ್ವಸ್ಥತೆಗೆ ಹೋಲಿಸಲಾಗಿದೆ. 

ದುರ್ಯೋಧನನ ಸಭೆಯಲ್ಲಿ ಪರಿಭವವಾಗುತ್ತಿದ್ದ ಸಮಯದಲ್ಲಿ ದ್ರೌಪದಿಯು “ಹೇ ಕೃಷ್ಣ! ದ್ವಾರಕನಾಥ ! ಯಾದವ ನಂದನ ! ಇಮಾಮವಸ್ತಾಂ  ಸಂಪ್ರಾಪ್ತಾಂ” ಎಂದು ಆಕ್ರಂದಿಸಿ ‘ಶರಣಂ’ ಎಂದು ಕೂಗಲು, ಎಲ್ಲಿಯೋ  ಇದ್ದ ಶ್ರೀಕೃಷ್ಣ ಒಡನೆಯೇ ಅವಳ ಮಾನವನ್ನು ಕಾಪಾಡಿ, ಮುಂದೆ ಪಾಂಡವರಿಗೆ ಜಯವನ್ನು ಗಳಿಸಿಕೊಟ್ಟು, ಧರ್ಮಜನಿಗೆ ಪಟ್ಟಾಭಿಷೇಕ ಮಾಡಿಸಿ, ದ್ರೌಪದಿಯ ಬಿಚ್ಚಿದ್ದ ಕರುಳುಗಳನ್ನು ಭೀಮನಿಂದ ಕಟ್ಟಿಸಿಯೂ ಸಮಾಧಾನವಾಗದೆ, ಅವಳ ಭಕ್ತಿಯ ಸಾಲ ಕಡೆಗೂ ತೀರಲಿಲ್ಲವೆಂದು ಅಸ್ವಸ್ಥನಾದಂತೆ ಇಲ್ಲಿ ಈ ಎಮ್ಮೆಗಳ ಪಾಡು ಎನ್ನುವ ಭಾವ ವ್ಯಕ್ತವಾಗಿದೆ. 

ಭಗವಂತನಾದ ಶ್ರೀಕೃಷ್ಣನ ಜೊತೆಯಾಗಿ ಹೋದ ನಿನ್ನ ಅಣ್ಣನ (ಶ್ರೀದಾಮ) ತಂಗಿಯಾದ ನೀನು ಅತ್ಯಾರ್ತ ಭಾಗವತೆಯರಾದ ನಮ್ಮೆಲ್ಲರೊಡನೆ ಬರಬೇಡವೇ? ಭಗವದ್ವಿಷಯಕ್ಕಿಂತ ಭಾಗವತ ಗೋಷ್ಠಿಯಲ್ಲಿರುವುದೇ ನಿನ್ನ ಅಣ್ಣನಿಗೆ ಅತ್ಯಂತ ಅಭಿಮತವೆಂದು ನಿನಗೆ ತಿಳಿದಿಲ್ಲವೇ? ಎಂದು ಗೋದೆಯು ಮಲಗಿರುವ ತನ್ನ ಸಖಿಯನ್ನು ಪ್ರಶ್ನಿಸುತ್ತಾಳೆ.  

ಪನಿತ್ತೆಲೈ ವೀಳ ನಿನ್ ವಾಶಲ್ ಕಡೈಪಟ್ರಿ ಶಿನತ್ತಿನಾಲ್ ತೆನ್ನಿಲಜ್ಞ್ಗೈಕ್ಕೋಮಾನೈಚೆಟ್ರ ಮನತ್ತುಕ್ಕಿನಿಯಾನೈ ಪ್ಪಾಡವುಂ ನೀವಾಯ್ ತಿರುವಾಯ್ –  ಮುಂಜಾನೆಯ ಮಳೆ ಹನಿಯು ತಲೆಯ ಮೇಲೆ ಬೀಳುತ್ತಿದ್ದರೂ, ಕೆಳಗೆ ಬಿದ್ದಿರುವ ಹಾಲಿನ ಕೆಸರಲ್ಲಿ ನೆಂದು ಹೋದ ನಾವು, ನಿನ್ನ ಬಾಗಿಲಿನಲ್ಲಿ ನಿಂತು, ಈ ಛಳಿಯನ್ನು ಸಹಿಸಿಕೊಂಡು, ಕೋಪ ಮತ್ತು ಲಜ್ಜೆಯಿಂದ  ಶ್ರೀಕೃಷ್ಣನ ನಾಮ ಹಾಡುವುದನ್ನು ನಿಲ್ಲಿಸಿ, ನಿನ್ನ ಮನಸ್ಸಿಗೆ ಪ್ರಿಯವಾದ, ರಮಣೀಯವಾದ, ಲಂಕಾಧಿಪತಿ ರಾವಣನನ್ನು ಕೊಂದ  “ರಾಮೋ ರಮಯಿತಂ ವರಃ” – ಎನಿಸಿದ ಶ್ರೀರಾಮನ ನಾಮವನ್ನು ಹಾಡಿದರೂ ನೀ ಬಾಯಿ  ತೆರೆಯದೇ ಒಳಗಿರುವುದು ಸರಿಯೇ? ಎನ್ನುತ್ತಿದ್ದಾಳೆ ಗೋದಾದೇವಿ. 

ತಾಯಿ ಹಸು ಕರುವನ್ನು ನೆನೆದು ‘ಅಂಬಾ’ಎಂದು ಕೂಗಿದಾಗ, ಕರುವು ಅದಕ್ಕೆ ಉತ್ತರವಾಗಿ ಹಸಿವನ್ನು ತೋರ್ಪಡಿಸುತ್ತ ತಾಯಿ ಹಸುವನ್ನು ಕರೆಯುತ್ತದೆ. ಅಂತೆಯೇ ಭಗವಂತನು ತನ್ನ ಭಕ್ತರನ್ನು ನೆನೆದು, ವಾತ್ಸಲ್ಯದಿಂದ ಅವರ ಬಳಿಗೆ ಬಂದು, ರಕ್ಷಿಸುವುದೂ ಉಂಟು. ತುಂಬಿದ ಸಭೆಯಲ್ಲಿ ದ್ರೌಪದಿಯ ಕರೆಗೆ ಓ ಗೊಟ್ಟು ಅಕ್ಷಯ ವಸ್ತ್ರ ಪ್ರದಾನ ಮಾಡಿದ. ದೂರ್ವಾಸಾತಿಥ್ಯ ಸಂದರ್ಭದಲ್ಲಿ ದ್ರೌಪದಿಗೆ ಅನುಗ್ರಹ ಮಾಡಿ, ದೂರ್ವಾಸರ ಹಸಿವು ಮತ್ತು ಕೋಪವನ್ನು ಶಮನ ಗೊಳಿಸಿದ. ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮನ ಪ್ರಾರ್ಥನೆಗೆ ಅಭಯ ಹಸ್ತವನ್ನು ನೀಡಿದ. ಗಜೇಂದ್ರನ ಮೊರೆ ಕೇಳಿ ಓಡಿ ಬಂದು ಮೋಕ್ಷವನ್ನು ದಯಪಾಲಿಸಿದ ಆ ಪರಮಾತ್ಮ. ಆಚಾರ್ಯರು, ಶಿಷ್ಯರು ಕೇಳದೇ ಇದ್ದರೂ ಕೃಪೆ ಮಾಡುತ್ತಾರೆ. ಅಜ್ಞಾನವೆಂಬ ಅಂಧಕಾರವನ್ನು ತೊಳೆಯುತ್ತಾರೆ. ಅವರ ವರ್ಣಗಳಿಗೆ ತಕ್ಕಂತೆ ಜ್ಞಾನ ಪ್ರಸಾರ ಮಾಡುತ್ತಾರೆ. ಐದು ಅಂಗಗಳಿಂದ ಕೂಡಿದ ಶರಣಾಗತಿಯನ್ನು ಉಪದೇಶ ಮಾಡುತ್ತಾರೆ. ಈ ರೀತಿ ಚೇತನರು ಅಹಂಕಾರ-ಮಮಕಾರಗಳನ್ನು ತ್ಯಾಗ ಮಾಡುವಂತೆ, ಶಾಸ್ತ್ರ ಸಮ್ಮತ ಪ್ರವೃತ್ತಿಯನ್ನು ಭೋಧಿಸುವರು. ಪರಮಾತ್ಮನಿಗೆ ತನ್ನ ಭಕ್ತರು ಅತ್ಯಂತ ಪ್ರಿಯರು. ಇಂತಹ ಭಾಗವತೋತ್ತಮ ಕನ್ಯೆಯನ್ನು ಎಬ್ಬಿಸುವ ಪದ್ಯವಿದು. ಪರಮಾತ್ಮನನ್ನು ಒಂದು ಕ್ಷಣವೂ ಬಿಟ್ಟಿರಲಾರದ ಒಬ್ಬ ಗೋಪ. ಇವನು ಪರಮ ಭಾಗವತ. ಅವನ ತಂಗಿ, ಅವನನ್ನೇ ಅವಲಂಬಿಸಿ ಶ್ರೀಕೃಷ್ಣನಲ್ಲಿಗೆ ಹೋಗಲು ತಾಮಸ ಮಾಡಿರುವಳು. ಭಗವಂತನಿಗೆ ಇವಳಲ್ಲಿ ಹೆಚ್ಚು ಪ್ರೀತಿ ಮತ್ತು ವಾತ್ಸಲ್ಯ ಉಂಟು. ಇವಳನ್ನು ಬಿಡುವದುಂಟೇ ಎಂದು ಎಬ್ಬಿಸಲು ಬಂದಳು ಗೋದೆ. ಭಗವದ್ಭಕ್ತನಾದ ಅಣ್ಣನನ್ನು ಸೇವೆ ಮಾಡುತ್ತಿರುವುದರಿಂದಲೂ ಈ ಗೋಪಿಯು ಹಿಂದಿನ ಪಾಶುರದ ‘ಪೊರ್ಕೋಡಿ’ ಗಿಂತಲೂ ಉತ್ತಮಾಧಿಕಾರಿಣಿಯಾಗಿದ್ದಾಳೆ.  

ತತ್ವಾರ್ಥ: ಭಗವಂತನನ್ನು ಕಾಣದ ಹೊರತು ನಿಜವಾದ ಸುಖವಿಲ್ಲ. ಅದಕ್ಕಾಗಿ ಅವನ ಅರಿವು ಅಗತ್ಯ. ಹಾಗೆಯೇ ಈ ಅರಿವಿಗಾಗಿ ಅವನ ಬಗೆಗಿನ ಶಾಸ್ತ್ರದ ತಿಳುವಳಿಕೆಯೂ ಅತ್ಯಗತ್ಯ. ಅದರ ಪ್ರಕಾರ, ನಮ್ಮ ಪಾರದರ್ಶಕ ನಡೆ ಆರಂಭಿಸಿದಾಗಲೇ ಆಧ್ಯಾತ್ಮಿಕ ಜೀವನ ಆರಂಭವಾದೀತು. ಈ ನಡೆ ನುಡಿಗಳ ಜ್ಞಾನಕ್ಕಾಗಿ ನಮ್ಮ ಮನ ಮಿಡಿಯಬೇಕು. ನುಡಿಯಂತೆ ನಡೆಗಾಗಿ ನಮ್ಮ ಪ್ರಾಮಾಣಿಕ ಪ್ರಯತ್ನ ಆರಂಭವಾಗಬೇಕು. ತರುಣ ಶಿಷ್ಯರಿಗೆ  ಜ್ಞಾನವನ್ನು ಬೋಧಿಸುವುದರಲ್ಲಿ ವ್ಯಗ್ರನಾದ ಆಚಾರ್ಯ, ಶಿಷ್ಯರು ಹತ್ತಿರವಿಲ್ಲದಿದ್ದರೂ ಭಗವದ್ಗುಣಗಳನ್ನು ಕೀರ್ತಿಸದೆ ಇರಲು ತನ್ನಿಂದಾಗದ ಕಾರಣ ಕ್ಷೀರದಂತೆ ಧಾರಕ ಪೋಷಕ ಭೋಗ್ಯಗಳಾದ ದಿವ್ಯಾರ್ಥಗಳನ್ನು ಹಾಲಿನಂತೆ ಸುರಿಸುತ್ತಾನೆ ಎಂಬುವ ಭಾವ ಇಲ್ಲಿದೆ. 

ಧೇನುವಿಗೂ, ಎಮ್ಮೆಗಳಿಗೂ ಹಾಲು ಸುರಿಸುವ ಸ್ತನಗಳು ನಾಲ್ಕು, ಹಾಗೆಯೇ ಆಚಾರ್ಯನೂ ನಾಲ್ಕು ದ್ವಾರಗಳಿಂದ ಜ್ಞಾನೋಪದೇಶ ಮಾಡುತ್ತಾನೆ. 

  1. ಭಗವದಾಜ್ಞೆ : ಶಿಷ್ಯರಿಗೆ ಜ್ಞಾನೋಪದೇಶ ಮಾಡಿ ಅವರನ್ನು ಉಜ್ಜೀವನಗೊಳಿಸುವುದು. 
  2. ಶಿಷ್ಯ ಪ್ರಾರ್ಥನೆ: ತದ್ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೆನ ಸೇವಯಾ| ಉಪದೇಕ್ಷ್ಯಂತಿ ತೇ ಜ್ಞಾನಂ ಜ್ಞಾನಿನಃ      ತತ್ವದರ್ಶನಃ
  1. ಶಿಷ್ಯರ ಕಷ್ಟ, ದುರ್ಗತಿಯನ್ನು ಸಹಿಸದೆ, ಅವರು ಪ್ರಾರ್ಥಿಸದೇ  ಇದ್ದರೂ ತಾವಾಗಿಯೇ, ಸ್ವಯಂ                ಪ್ರೇರಣೆಯಿಂದ ಉಪದೇಶಿಸುವುದು. 
  2. ಉಪದೇಶವನ್ನು ಮಾಡದೆ ಇರಲಾಗದು ಆಚಾರ್ಯನಿಗೆ – ಇದೇ ಈ ಪಾಶುರದಲ್ಲಿ ಪ್ರಧಾನದ್ವಾರ. 

ಇಂತಹ ದಶೆಯೇ ಭಾಗವತ್ತೋತ್ತಮರಿಗೆ ಮಹತ್ತರ ಸಂಪತ್ತು. ಅನಾದಿ ಮಾಯೆಯಿಂದ ಸುಪ್ತರಾದ ನಮ್ಮ ಬೋಧನೆಗಾಗಿ ಇಂತಹ ಆಚಾರ್ಯರು ಬಂದಿರುವುದು ನಮ್ಮಗಳ ಭಾಗ್ಯ. ಅದರ ಫಲವನ್ನು ಉಣಬೇಕಾದವರು ನಮ್ಮಂಥ ಪಾಮರರು.  

ಕಾಪಾಡುವರ ಕಾಣೆ ಕೈಪಿಡಿ (ದು)

ಆಪತ್ತು ಬಂದ ಕಾಲಕ್ಕೆ ಆರಯ್ವರೊಬ್ಬರಿಲ್ಲ

ಶ್ರೀಪತಿಯೆ ಕಡೆಹಾಯಿಸೊ

ತಂದೆ ತಾಯೆಂಬುದನು ನಾನೊಂದು ಗುರತನರಿಯೆ 

ನಿಮ್ಮ ಕಂದಳೆಂದೆನಿಸಿ ಕಡೆಹಾಯಿಸೊ ಹೆಳವನಕಟ್ಟೆರಂಗ – ಹೆಳವನಕಟ್ಟೆ ಗಿರಿಯಮ್ಮ 

(ವಿಷಯ ಸಂಗ್ರಹ : “ತಿರುಪ್ಪಾವೈ ರಸಸ್ವಾಧಿನಿ” – ಬರೆದವರು ವಿದ್ವಾನ್ ವೇದಾನ್ತ ಸಾರಜ್ಞ

   ಶ್ರೀ ಎಸ್. ಕೃಷ್ಣಾತಾತಾಚಾರ್ಯ )

(1) ಗಮಕ ಕವಿತಾ ವನಜ ಭಾಸ್ಕರ , ಗಮಕ ರತ್ನಾಕರ ಶ್ರೀಯುತ ಬಿ.ಎಸ್ .ಎಸ್ ಕೌಶಿಕ್  ರವರ  ಶ್ರೀಮದಾಂಡಾಳ್ ಮಹಾ ವೈಭವಂ -ತಿರುಪ್ಪಾವೈ – ಮೂಲ, ಕನ್ನಡ ತಾತ್ಪರ್ಯ , ಷಟ್ಪದಿ, ಭಾವಾರ್ಥ , ಚೌಪದಿ )

Tiruppavai series

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply