close logo

ಕನ್ನಡದಲ್ಲಿ ತಿರುಪ್ಪಾವೈ ಲೇಖನಮಾಲೆ – ಪಾಶುರಂ 13

ಚಿತ್ರಕೃಪೆ : ಕೇಶವ್ ವೆಂಕಟರಾಘವನ್ (ಪಾಶುರಂ – 13)

ಶ್ರೀ ನೀಳಾ  ದೇವೈ ನಮಃ

 ತಿರುಪ್ಪಾವೈ ಲೇಖನಮಾಲೆಯ ಹಿಂದಿನ ಲೇಖನಗಳನ್ನು ಈ ಕೆಳಗೆ  ಓದಬಹುದು :

  1. ಪಾಶುರಂ 

ಪುಳ್ಳಿನ್ ವಾಯ್ ಕೀಂಡಾನೈ ಪೊಲ್ಲಾವರಕ್ಕನೈ

ಕ್ಕಿಳ್ಳಿ ಕ್ಕಳೈಂದಾನೈ ಕ್ಕೀರ್ತಿಮೈ ಪಾಡಿಪ್ಪೋಯ್

ಪ್ಪಿಳ್ಳೈಗಳೆಲ್ಲಾರುಂ ಪಾವೈಕ್ಕಳಂ ಬುಕ್ಕಾರ್

ವೆಳ್ಳಿ ಯೆಳುಂದು ವಿಯಾಳ ಮುಱಜ್ಞ್ಗಿತ್ತು

ಪ್ಪುಳ್ಳುಂ ಶಿಲುಂಬಿನಕಾಣ್ , ಪೋದರಿಕ್ಕಣ್ಣಿನಾಯ್

ಕುಳ್ಳಕ್ಕುಳಿರಕ್ಕುಡೈಂದು ನೀರಾಡಾದೇ

ಪಳ್ಳಿಕ್ಕಿ ಡತ್ತಿಯೋಪಾವಾಯ್ ! ನೀ ನನ್ನಾಳಾಲ್

ಕಳ್ಳಂ ತವಿರ್ ನ್ದು  ಕಲಂದೇಲೋ ರೆಂಬಾವಾಯ್ ॥13 ॥

ಶ್ರೀಯುತ ಕೌಶಿಕರ ಕನ್ನಡ ಭಾಷಾಂತರ ಹೀಗಿದೆ:

ಸೀಳಿ ಬಕನನು, ರಾವಣಾಸುರನ ತೃಣದವೊಲು 

ಲೀಲೆಯಿಂ ತೆಗೆದೊಗೆದ, ಚಕ್ರವರ್ತಿಯ ಬಾಲಲೀಲೆಗಳ 

ಪೊಗಳುತ್ತ, ಬಾಲೆಯರು ತಾವೆಲ್ಲ, ಸಂಕೇತದೆಡೆಯೊಳಿಹರು ।

ಓಲಗಿಸಿ ಶುಕ್ರಪುಟ್ಟಹ, ಬೃಹಸ್ಪತಿಯು ತಾ ಬೀಳುಗೊಂಡನು, 

ಪಕ್ಷಿಗಳು ಕೂಗಿ ಕರೆಯುತಿಹವೇಳುತ್ತ ಭೃಂಗಾರಿನೇತ್ರೆ 

ನಿದ್ದೆಯನುಳಿದು, ನಮ್ಮನೀ ಸೇರಬೇಕೌ ॥13 ॥

ಈ ಪಾಶುರದಲ್ಲಿ ಗೋದೆಯು ಸುಂದರವಾದ, ಕಮಲದಂತಹ ಕಣ್ಣುಳ್ಳ ಮತ್ತು ತನ್ನ ಆ ಸೊಬಗಿನ ಬಗ್ಗೆ ಅತ್ಯಂತ ಅಭಿಮಾನವುಳ್ಳ ಗೋಪಿಯನ್ನು ಎಬ್ಬಿಸುತ್ತಾಳೆ. ಈ ಗೋಪಿಯು ಆ ಸುಂದರ ನೇತ್ರಗಳಿಗಾಗಿ ಮೆಚ್ಚಿ  ಕೃಷ್ಣನು ತಾನೇ ತನ್ನಲ್ಲಿ ಬರುವನು ಎಂದು ಮಲಗಿದ್ದಾಳೆ. 

ನಮಗೆ ಸ್ವರೂಪಜ್ಞಾನ ಉಂಟಾದಲ್ಲಿ ‘ಶ್ರೀಕೃಷ್ಣ ತಾನೇ ಬರುವನು ಎಂದಿರುವವರನ್ನು’ ಎಬ್ಬಿಸುತ್ತಾರೆ. ಗೋಕುಲದಲ್ಲಿ ಎಲ್ಲೆಲ್ಲೂ ಶ್ರೀಕೃಷ್ಣನನ್ನು ಕೊಂಡಾಡುವರು. ಹಾಗೆಯೇ ಅಯೋಧ್ಯಾ ನಗರಿಯಲ್ಲಿ ಶ್ರೀ ರಾಮನನ್ನು ಕೊಂಡಾಡುವರು. 

“ಯೇಯಥಾ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಂ” – ಯದ್ರೂಪನನ್ನಾಗಿಯೂ ಯದ್ಗುಣಕನನ್ನಾಗಿಯೂ ಭಕ್ತರು ಅವನನ್ನು ಪ್ರೀತಿ ಪೂರ್ವಕವಾಗಿ ಸ್ವೀಕರಿಸುತ್ತಾರೆ. ಆಯಾ ಕ್ಷೇತ್ರದಲ್ಲಿ ಅವತರಿಸುವ ಪರಬ್ರಹ್ಮಮೂರ್ತಿಯನ್ನು ಆಯಾ ನಾಮ, ರೂಪ, ಗುಣ ವಿಶಿಷ್ಟವನ್ನಾಗಿ ಭಾವಿಸಿ ಸೇವಿಸತಕ್ಕದ್ದು. ಶ್ರೀರಂಗದಲ್ಲಿ ಶ್ರೀರಂಗನಾಗಿ, ತಿರುಪತಿಯಲ್ಲಿ ಶ್ರೀನಿವಾಸನಾಗಿ, ಕಂಚಿಯಲ್ಲಿ ವರದರಾಜನಾಗಿ, ತಿರುನಾರಾಯಣಪುರದಲ್ಲಿ ನಾರಾಯಣನಾಗಿ – ಹೀಗೆ ಅನೇಕ ಕ್ಷೇತ್ರಗಳಲ್ಲಿ ನಮಗೆ ದರ್ಶನ ಭಾಗ್ಯ ಕೊಟ್ಟು ಸೇವೆ ಮಾಡಿಸಿಕೊಳ್ಳುತ್ತಿದ್ದಾನೆ. ಇವೆಲ್ಲವೂ ಒಬ್ಬನೇ ಆದಾಗ್ಯೂ ಆಯಾ ಕ್ಷೇತ್ರದಲ್ಲಿ ಆಯಾ ದಿವ್ಯಸ್ವರೂಪ, ನಾಮಗಳಿಂದ ಅವನನ್ನು ನಾವೆಲ್ಲರೂ ಪೂಜಿಸಿ, ಸ್ತುತಿಸಬೇಕು ಎಂಬುದು ಇಲ್ಲಿ ಪ್ರಸ್ತುತವಾಗಿದೆ.    

ಇಲ್ಲಿ ಬರುವ ಗೋಪಿಯು, ಶ್ರೀಕೃಷ್ಣನು ತನ್ನ ಕಣ್ಣಿನ ಸೌಂದರ್ಯಕ್ಕೆ ಮರುಳಾಗಿ ತನ್ನಲ್ಲಿಗೆ ತಾನೇ ಬರುವನೆಂಬ ವಿಶ್ವಾಸದಿಂದ ಮಲಗಿದ್ದಾಳೆ. ಇವಳ ಆತ್ಮಾಭಿಮಾನ ಅಷ್ಟಿಷ್ಟಲ್ಲ. ಆದರೆ ಈ ಗೋಪಿ ಆತ್ಮಗುಣದಲ್ಲಿಯೂ ಮಿಗಿಲಾದವಳು. ರಾಮನೂ, ಕೃಷ್ಣನೂ ಒಂದೇ ದೈವದ ಮನುಷ್ಯಾವತಾರ. ಶ್ರೀಕೃಷ್ಣನು “ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ” ಎಂದು ಹೇಳಿ ಅದರಂತೆ ನಡೆದವನು. ಶ್ರೀರಾಮನಾದರೋ “ ರಾಮೋ ವಿಗ್ರಹವಾನ್ ಧರ್ಮ: “ ಎಂದು ತನ್ನನ್ನು ಧರ್ಮಸ್ವರೂಪವಾಗಿಯೇ, ನಡೆ ಮತ್ತು ನುಡಿಯಲ್ಲಿ ಲೋಕಕ್ಕೆ ತೋರಿಸಿದವನು. ಇಷ್ಟಾದರೂ ನಿಷ್ಕಲ್ಮಷ ಚಿತ್ತಳಾದ ಸೀತಾದೇವಿಯನ್ನು ತ್ಯಾಗಮಾಡಿದ ರಾಮ ತನ್ನ ಪ್ರೀತಿಯ ಕೃಷ್ಣ ಹೇಗಾದಾನು? ಎಂಬ ಅಸಮಾಧಾನವುಳ್ಳ ಗೋಪಿ ಇವಳು. ಮುಂದೆ ಗೋದಾದೇವಿಯು ಇವಳನ್ನು ಈ ರೀತಿಯಾಗಿ ಎಬ್ಬಿಸುತ್ತಾಳೆ. 

ಗೋದಾ: “ಎಲೈ ಗೋಪಿ! ಏಳು, ನಿನ್ನ ಕೃಷ್ಣನನ್ನೇ ಹಾಡುತ್ತಾ ಹೊರಟಿರುವೆವು. ನೀನು ತಿಳಿದಂತೆ ಅವನು ತಾನೇ  ದೈವವೆಂದು ಹೇಳಿಕೊಂಡು ಬಂದವನಲ್ಲ. ಆದರೆ ಅಡಿಗಡಿಗೂ ತನ್ನ ದೈವತ್ವವನ್ನು ತೋರಿದವನು. ಒಂದೇ ಕಾಲದಲ್ಲಿ , ಒಂದೇ ಕೃತ್ಯದಿಂದ ಆಶ್ರಿತ ಸಂರಕ್ಷಣ ಮತ್ತು ದುಷ್ಟ ಶಿಕ್ಷಣ ಮಾಡಿದವನು. ಇವನ ಮಹಿಮೆ ಅಪಾರ”. 

(ಈ ಮಾತನ್ನು ಕೇಳಿ ಮಲಗಿದ್ದ ಗೋಪಿಗೆ ಸಂತೋಷವಾಯಿತು. ಅವನಲ್ಲೇ ಮನಸ್ಸಿಟ್ಟು ಕಣ್ಮುಚ್ಚಿ ಇನ್ನೂ ಚೆನ್ನಾಗಿ ಮಲಗಿದಳು)

ಗೋದಾ: “ನಿನ್ನ ಕೃಷ್ಣ ಎಂಥಾ ಮಹಿಮನೆ! ಲೀಲಾಜಾಲವಾಗಿ ಬಕಾಸುರನ ಬಾಯನ್ನು ಸೀಳಿದನಲ್ಲಾ! ಏನು ವೀರ್ಯ ಮತ್ತು ಸಾಹಸ ಅವನದು ಅಬ್ಬಾ! “ ಎಂದಳು. 

(ಹಿಂದಿನ ಪಾಶುರದ ರಾಮಭಕ್ತೆಯಾದ ಗೋಪಿಗೆ ಇದನ್ನು ಕೇಳಿ ಅಸಮಾಧಾನವಾಯಿತು. ಆಗ ಆ ಗೋಪಿಯು )

ಗೋಪಿ: “ಏನೇ ಗೋದಾ?!  ನನ್ನ ರಾಮ ಅಷ್ಟು ಕೀಳೇ? ನೀನು ಹೇಳುವುದು ಅಷ್ಟು ಚೆನ್ನಾಗಿಲ್ಲಮ್ಮ” ಎಂದಳು. 

(ಗೋದೆ ಅವಳಿಗೆ ಕಣ್ಣು ಸನ್ನೆ ಮಾಡಿ, ಸಮಾಧಾನಿಸಿ ಮಲಗಿರುವ ಗೋಪಿಗೆ)

ಗೋದಾ: “ಗೋಪಿ, ದುಷ್ಟನಾದ ರಾಕ್ಷಸ ರಾವಣನನ್ನು ಲೀಲಾಜಾಲವಾಗಿ ಕೊಂದವ ರಾಮ ಕಣೆ” 

(ಎಂದಾಗ, ಮಲಗಿದ್ದ ಗೋಪಿಯು) 

ಗೋಪಿ: “ನಮ್ಮ ಕೃಷ್ಣನೇ ಏನು ಇದನ್ನು ಮಾಡಿದ್ದು?” ಎಂದಳು. 

(ಈಗ ಕೃಷ್ಣನೇ ರಾಮನೆಂದಿದ್ದು ಮಲಗಿದ್ದ ಗೋಪಿಗೆ ಹಿತವಾಯಿತು. ಮುನಿಸಿಕೊಂಡಿದ್ದ ರಾಮಭಕ್ತೆಗೂ ಪ್ರಿಯವಾಯಿತು. ಕೃಷ್ಣಭಕ್ತೆಗೆ ಭಾವೋನ್ಮಾದವಾಗಿ ಕೃಷ್ಣನು ತನ್ನಲ್ಲಿಗೇ ಬರುವನೆಂಬ ನಂಬಿಕೆಯಿಂದ ಹೊದಿಕೆಯನ್ನು ಮತ್ತೂ ಎಳೆದುಕೊಂಡು ಕಣ್ಣು ಮುಚ್ಚಿದಳು, ಆ ಅನುಭವದಲ್ಲಿ ಏಕಾಂತವನ್ನು ಅಪೇಕ್ಷಿಸಿದಳು.)

ಗೋದಾ: “ಕೃಷ್ಣನ ವೀರ್ಯವೇ ವೀರ್ಯ! ಬರಿಗೈನಿಂದಲೇ ಬಕನನ್ನು ಸೀಳಿದ ಪರಾಕ್ರಮಿ. ಅಂತಹವನು ಈಗ ನಮಗಾಗಿ ಕಾದಿರುವನು. ಅವನ ಕೀರ್ತಿಯನ್ನು ಹಾಡುವುದಕ್ಕಾಗಿ ಹೆಣ್ಣು ಮಕ್ಕಳೆಲ್ಲರೂ ವ್ರತಸ್ಥಳದಲ್ಲಿ ಕೂಡಿರುವರು. ನೀನೂ ಎದ್ದು ಬಾ” ಎಂದಳು. 

(ಒಳಗಿದ್ದ ಗೋಪಿಗೆ ಗೋದೆಯ ಮಾತಿನಿಂದ ಬಹು ಸಂತೋಷವಾಯಿತು. ಆದರೆ ಏಳಲು ಬೆಳಗಾಗಬೇಡವೇ?)

ಗೋಪಿ: “ನನ್ನ ಕೃಷ್ಣ ಪುಂಡರೀಕಾಕ್ಷ. ಅವನ ಸುಂದರ, ಕೆಂದಾವರೆಯಂತ ಕಣ್ಣುಗಳನ್ನು ನೋಡುವ ಆಸೆಯೇನೋ ಸರಿ. ಆದರೆ ಅವು ಅರಳಲು ಬೆಳಗಾಗಬೇಡವೇ? ಅವನ ನಾಮ ಸಂಕೀರ್ತನೆ ಪರಲೋಕಕ್ಕೆ ಬುತ್ತಿ. ಆದರೆ ಮುಕ್ತಿಯಲ್ಲ. ಇರಲಿ ನನ್ನಷ್ಟಕ್ಕೆ ನಾನು ಮಲಗಿರುವೆನು”.   ಎಂದು ಹೊದಿಕೆಯನ್ನು ಮತ್ತೂ ಎಳೆದುಕೊಂಡಳು. 

(ಹೊರಗಿದ್ದ ಗೋದೆಗೆ ಇದರ ಅರಿವಾಗಿ)

ಗೋದಾ: “ನಾವು ಅಕಾಲದಲ್ಲಿ ಬಂದಿಲ್ಲ. ಹಿಂದೆ ಅಕಾಲದಲ್ಲಿ ನದೀ ಸ್ನಾನಕ್ಕೆ ಹೋದ ನಂದಗೋಪನನ್ನು ಜಲಾಧಿದೇವತೆಗಳು ವರುಣಲೋಕಕ್ಕೆ ಒಯ್ದು, ಅನಂತರ ಸ್ವಾಮಿಯಾದ ಶ್ರೀಕೃಷ್ಣನೇ ಹೋಗಿ ಅವನನ್ನು ಹಿಂದಕ್ಕೆ ತರಬೇಕಾಯ್ತು. ನೋಡು ಚೆನ್ನಾಗಿ ಶುಕ್ರೋದಯವಾಗಿದೆ. ಗುರುವು ಅಸ್ತಮಿಸಿದ್ದಾನೆ. ಬೇಗ ಎದ್ದು ಬಾ.” ಎಂದಳು. 

ಗೋಪಿ:   ಗುರುವು ಮೋಡಗಳ ಮರೆಯಲ್ಲಿರಬಹುದು. 

ಗೋದಾ: “ ಎಲಾ ಹುಡುಗಿ! ನಿನಗೆ ಬೆಳಗಾಗಿರುವುದು ತಿಳಿದು, ಸುಮ್ಮನೆ ಕೃಷ್ಣ ಪ್ರೇಮದ ಭಾವನಾ ಪ್ರಪಂಚದಲ್ಲಿ  ತನ್ಮಯಳಾಗಿದ್ದೀಯಾ. ಹೂವಿನಂತ ಸುಂದರವೂ, ದುಂಬಿಯಂತೆ ಚಂಚಲವೂ ಆದ ನಿನ್ನ ಕಣ್ಣುಗಳನ್ನು ನೋಡುತ್ತಿರುವೆವು. ಇದೆಲ್ಲಾ ನಿನ್ನ ವೇಷ, ಎದ್ದು ಬಾ. ಇನ್ನು ಎಷ್ಟುಹೊತ್ತು ಹೀಗೆ ಮಲಗಿರುತ್ತೀಯಾ ? ಇಂದು ಶುಭದಿನ. ಕಪಟತನವನ್ನು ಬಿಟ್ಟು ನಮ್ಮೊಡನೆ ಸೇರಿ ಕೃಷ್ಣಸ್ತುತಿ ಮಾಡಿದೆಯಾದರೆ ನಿನ್ನ ವ್ರತ ಸಿದ್ಧಿಸುವುದು. ನಾನು ಸ್ವತಂತ್ರ, ಎಲ್ಲವೂ ನನ್ನದೇ ಎಂಬ ಭಾವವನ್ನು ತೊರೆದು, ಹರಿಕೀರ್ತನೆ ಮಾಡಲು ಎದ್ದು ಬಾ.”  ಎಂದು ಮಲಗಿದ್ದ ಗೋಪಿಯನ್ನು ಎಬ್ಬಿಸುತ್ತಾಳೆ. 

ಇಲ್ಲಿ, ತನ್ನ ಆಶ್ರಿತರಿಗೆ ಸ್ವಾನುಭವ ವಿರೋಧಿಯಾದ ಕಾಮಾದಿಗಳನ್ನು ನಿವರ್ತಿಸುವವನಾಗಿ ಬಕಪಕ್ಷಿಯಂತಿರುವ ನಾಸ್ತಿಕರ ಬಾಯನ್ನು ಅಡಗಿಸಲು ಸಮರ್ಥನಾದ, ಅಪ್ರಾಪ್ತ ವಿಷಯ ಭೂತವಾದ, ಅಹಂಕಾರವನ್ನು ನಿರಸನ ಮಾಡಿದವನು ಎನ್ನುವ ಅರ್ಥ. ಮನಸ್ಸು ರಾವಣ, ಹತ್ತು ಇಂದ್ರಿಯಗಳೇ ಅವನ ಹತ್ತು ಶಿರಗಳು. ಇಂತಹ ಮನಸ್ಸೆಂಬ ರಾವಣನನ್ನು ವಿವೇಕವೆಂಬ ಬಾಣಗಳ ಸಮೂಹದಿಂದ ಅಡಗಿಸಿದವನು ಆಚಾರ್ಯ. ಇಂತಹ ಆಚಾರ್ಯನ ಕೀರ್ತಿಯನ್ನು ಹಾಡುತ್ತಾ, ಅವನ ಕಲ್ಯಾಣಗುಣಗಳನ್ನು ಪ್ರೀತಿಯಿಂದ ಹಾಡುವುದನ್ನೇ ಧಾರಕವಾಗಿ ಹೊಂದಿ ಎನ್ನುವ ಭಾವವು ವ್ಯಕ್ತವಾಗಿದೆ. 

ತತ್ವಾರ್ಥ: ನಮ್ಮ ಕಾಮಕ್ರೋಧಾದಿ ದೋಷಗಳನ್ನು, ಅಹಂಕಾರ-ಮಮಕಾರಗಳನ್ನೂ ಹೋಗಲಾಡಿಸುವ ಭಗವಂತನನ್ನು ಧ್ಯಾನಿಸುತ್ತಾ ಆನಂದಾನುಭವದಲ್ಲಿ ಇರುವ ಭಾಗವತರನ್ನು ಕುರಿತು, ತಮ್ಮೊಡನೆ ಬಂದು ಸೇರಿ, ಅವರ ಸುಖಾನುಭವವನ್ನು ತಮಗೂ ಉಂಟಾಗುವಂತೆ ಮಾಡಬೇಕೆಂದು ಪ್ರಾರ್ಥಿಸುವಿಕೆ. ಮರೆತು ಮಲಗಿರುವವರನ್ನು ಎಚ್ಚರಿಸಿ ಭಗವತ್ ಕೈಂಕರ್ಯಕ್ಕೆ ತೊಡಗಿಸುವುದು ಎಚ್ಚರವಿರುವವರು / ಜ್ಞಾನಿಗಳು ಮಾಡಲೇ ಬೇಕಾದ ಕಾರ್ಯ. ಭಗವದನುಭವ ಪಡೆದವರನ್ನು ಪ್ರಪನ್ನರು ಆಶ್ರಯಿಸಬೇಕಾದುದು ಅವರ ಧರ್ಮ. ಕೆಳಕೊಕ್ಕನ್ನು ಕಾಲಿನಿಂದ ಮೆಟ್ಟಿ ಮೇಲಿನ ಕೊಕ್ಕನ್ನು ಕೈಯಿಂದ ಹಿಡಿದೇ ಬಕಾಸುರನನ್ನು ಶ್ರೀಕೃಷ್ಣ ಸಂಹರಿಸಿದ. ಅದೇ ರೀತಿ ಶಿಷ್ಯನ ಪಾಪವನ್ನು ಹೋಗಲಾಡಿಸುವ ಸಾಮರ್ಥ್ಯವುಳ್ಳ ಆಚಾರ್ಯರು ಅಧೋಗತಿಗೆ ಬಿದ್ದ ಚೇತನನ ಮನಸ್ಸನ್ನು ತಿದ್ದಿ ಅವನ ಅಹಂಕಾರವನ್ನು ಜಿಗುಟಿ ಹಾಕಿ, ಹತ್ತು ಇಂದ್ರಿಯಗಳನ್ನು ನಿಗ್ರಹಮಾಡಿಸುವರು. ಅವನಲ್ಲಿ ವಿವೇಕವನ್ನು ಹುಟ್ಟಿಸುವರು. ಮನಸ್ಸಿನ ಕೊಳೆಯನ್ನು ತೊಳೆದು, ಪರಮಾತ್ಮನ ಭಕ್ತಿಯನ್ನು ವೃದ್ಧಿಪಡಿಸುವರು ಎನ್ನುವ ಭಾವ. 

ಅನುದಿನ ನಿನ್ನ ನೆನೆದು

ಮನವು ನಿನ್ನಲಿ ನಿಲ್ಲಲಿ

ದುಃಖ ಸುಖ ಲೆಕ್ಕಿಸದೆ ಮುಖ್ಯ ಫಲ ಮುಂದರಿಸೆ

ಮಿಕ್ಕುತ್ತ ಸೊಕ್ಕಿ ಮೋಹಕ್ಕೆ ಸಿಕ್ಕದೆ ।।

ನಿನ್ನ ಗುಣ ವರ್ಣಿಸುತ ನಿನ್ನವರ ಮನ್ನಿಸುತ

ನಿನ್ನ ಪಾವನ್ನ ಲಾವಣ್ಯ ಧ್ಯಾನಿಸೆ 

ಸಂತೋಷ ನಿರಂತರವು ಸಂತ ಜನ ಸಹವಾಸವು

ಶಾಂತತ್ವವಾಂತು ಮಹಾಂತಧೈರ್ಯದಿ।।

ಭಕ್ತಿ ಸುವಿರಕ್ತಿ ಜ್ಞಾನ  ಮುಕ್ತಿಗೆ ಮುಖ್ಯ ಕಾರಣ

ಚಿತ್ತದೊಳಿತ್ತೆಲ್ಲ ಹೊತ್ತು ಹೊತ್ತಿಗೆ

ಪ್ರಿಯ ಶ್ರೀಲಕ್ಷುಮಿನಾರಾಯಣ ಪರಾಯಣನ

ಧೈರ್ಯದಂತರ್ಯ ಗಾಂಭೀರ್ಯ ಭಾವದಿ ।।  – ಪಾವಂಜೆ ಶ್ರೀ ಲಕ್ಷ್ಮೀ ನಾರಾಯಣ ಆಚಾರ್ಯರು

(ವಿಷಯ ಸಂಗ್ರಹ : “ತಿರುಪ್ಪಾವೈ ರಸಸ್ವಾಧಿನಿ” – ಬರೆದವರು ವಿದ್ವಾನ್ ವೇದಾನ್ತ ಸಾರಜ್ಞ

   ಶ್ರೀ ಎಸ್. ಕೃಷ್ಣಾತಾತಾಚಾರ್ಯ )

(1) ಗಮಕ ಕವಿತಾ ವನಜ ಭಾಸ್ಕರ , ಗಮಕ ರತ್ನಾಕರ ಶ್ರೀಯುತ ಬಿ.ಎಸ್ .ಎಸ್ ಕೌಶಿಕ್  ರವರ  ಶ್ರೀಮದಾಂಡಾಳ್ ಮಹಾ ವೈಭವಂ -ತಿರುಪ್ಪಾವೈ – ಮೂಲ, ಕನ್ನಡ ತಾತ್ಪರ್ಯ , ಷಟ್ಪದಿ, ಭಾವಾರ್ಥ , ಚೌಪದಿ )

Tiruppavai series

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply