close logo

ಕನ್ನಡದಲ್ಲಿ ತಿರುಪ್ಪಾವೈ ಲೇಖನಮಾಲೆ – ಪಾಶುರಂ 14

ಚಿತ್ರಕೃಪೆ : ಕೇಶವ್ ವೆಂಕಟರಾಘವನ್ (ಪಾಶುರಂ – 14)

ಶ್ರೀ ನೀಳಾ  ದೇವೈ ನಮಃ

 ತಿರುಪ್ಪಾವೈ ಲೇಖನಮಾಲೆಯ ಹಿಂದಿನ ಲೇಖನಗಳನ್ನು ಈ ಕೆಳಗೆ  ಓದಬಹುದು :

  1. ಪಾಶುರಂ 

ಉಜ್ಞ್ಗಲ್ ಪುಳೈಕ್ಕಡೈ ತೋಟ್ಟತ್ತು ವಾವಿಯುಲ್

ಶೇಜ್ಞ್ಗಳುನೀರ್ ವಾಯ್ ನೆಗಿಲಿ ಂದಾಂಬಲ್ ವಾಯ್ ಕೂಂಬಿನಕಾಣ್

ಶೇಜ್ಞ್ಗಲ್ಪೊಡಿಕ್ಕೂರೈ ವೆಣ್ ಪಲ್ ತವತ್ತವರ್

ತಜ್ಞ್ಗಲ್ ತಿರುಕ್ಕೋಯಿಲ್ ಶಜ್ಞ್ಗಿಡುವಾನ್ ಪೋಗಿನ್ರಾರ್

ಎಜ್ಞ್ಗಲೈ ಮುನ್ನ ಮೆಳುಪ್ಪುವಾನ್ ವಾಯ್ ಪೇಶುಂ

ನಜ್ಞ್ಗಾ ಯೆಲುಂದಿರಾಯ್ ನಾಣಾದಾಯ್ ನಾವುಡೈ ಯಾಯ್

ಶಜ್ಞ್ಗೊಡು ಶಕ್ಕರ ಮೇಂದುಂ ತಡಕ್ಕೈಯನ್

ಪಜ್ಞ್ಗಯಕ್ಕಣ್ಣಾನೈ ಪ್ಪಾಡೇಲೋ ರೆಂಬಾವಾಯ್ ॥

ಶ್ರೀಯುತ ಕೌಶಿಕರ ಕನ್ನಡ ಭಾಷಾಂತರ ಹೀಗಿದೆ:

ನಿಮ್ಮ ಹಿತ್ತಿಲ ತೋಟದೊಳಗಿರುವ ಭಾವಿಯಲಿ ।

ಘಮ್ಮೆನಿಪ ಸೌಗಂಧ ಪುಷ್ಪoಗಳರಳಿಹವು

ಬಿಮ್ಮನಾನೈದಿಲೆಯು ಮೊಗ್ಗಾಯ್ತು, ಕಾವಿಯಂಬರವುಟ್ಟ  ಯತಿಗಳೆಲ್ಲ| 

ತಮ್ಮ ತಮ್ಮಯ ಗುಡಿಯ ಪೂಜೆಗೆನೆ ಪೊರಟಿಹರು 

ನಮ್ಮ ನೇಳಿಪೆನೆಂದ ಬಾಯಾಳಿ ಪೂರ್ಣಾಂಗಿ 

ಬೊಮ್ಮಪಿತನಹ, ಶಂಖ, ಚಕ್ರ ಗದ ಕರಭೂಷಗೊಮ್ಮನದಿ ಪಾಡಲೇಳೌ ।।೧೪।।

ಈ ಪಾಶುರದಲ್ಲಿ, ಮಾರ್ಗಶಿರ ಮಾಸದ ಸ್ನಾನ ಮತ್ತು ವ್ರತಾಚರಣೆಗಾಗಿ ತಾನೇ ಎಲ್ಲರನ್ನು ಎಬ್ಬಿಸುವುದಾಗಿ ಹೇಳುತ್ತಾ, ಚೆನ್ನಾಗಿ ನಿದ್ರಿಸುತ್ತಿರುವ ಮತ್ತೊಬ್ಬ ಸಖಿಯನ್ನು ಗೋದಾದೇವಿ ಮತ್ತು ಅವಳ ಜೊತೆಯಾಗಿ ಬಂದ ಇತರ ಗೋಪಿಯರೆಲ್ಲ ಸೇರಿ ಎಬ್ಬಿಸುತ್ತಾರೆ. ಇಲ್ಲಿ ಎಬ್ಬಿಸಲ್ಪಡುವವಳು ಭಾಗವತೋತ್ತಮೆಯಾದ್ದರಿಂದ, ಹಿಂದೆ ಎಂಟು ಮಂದಿಯನ್ನು ಏಕವಚನದಿಂದ ಕರೆದರೂ,  ಇವಳನ್ನು  ಬಹುವಚನದಿಂದ  ‘ಉಂಗಳ್’  ಸಂಬೋಧಿಸುತ್ತಾರೆ. 

ಈ ಪಾಶುರದಲ್ಲಿ ಭಾಗವತ ಸಮುದಾಯಕ್ಕೆಲ್ಲ ತಾವೇ ಪ್ರಧಾನರಾಗಿ ಇವರೆಲ್ಲರಿಗೂ ಭಗವತ್ಸಂಬಂಧ ಘಟಕರು ತಾವೇ ಆಗುವಂತೆ ಜ್ಞಾನ-ಭಕ್ತಿ ವೈರಾಗ್ಯಗಳಿಂದ ಪೂರ್ಣರಾದ ಭಾಗವತರನ್ನು ಎಬ್ಬಿಸುತ್ತಾರೆ. ನಾವು ಪ್ರಾರ್ಥಿಸುವುದಕ್ಕೆ ಮುಂಚೆಯೇ ಜ್ಞಾನಿಗಳಾಗುವ ಹಾಗೆ ಶ್ರೀಸೂಕ್ತಿಗಳನ್ನು ಕೃಪೆಮಾಡುವ ಮಹಾನುಭಾವರೇ, ಏಳಿ.  ತಾವು ಎಂದೂ ಪರಮಾತ್ಮನ ಜ್ಞಾನದಲ್ಲಿ ಮುಂದೆ ಎದ್ದಿರುವವರು. ಆದ್ದರಿಂದಲೇ ಪೂರ್ಣರು. ಉತ್ತಮರು. ಮುಗ್ಧವಾದ ಮಧುರ ವಾಕ್ಕುಳ್ಳವರು, ಸುಶ್ರಾವ್ಯವಾದ ಭಗವನ್ನಾಮ ಸಂಕೀರ್ತನೆಯಲ್ಲಿಯೇ ನಿರತರಾದವರು!

ಕಮಲವು ಸೂರ್ಯನನ್ನು ಕಂಡರೆ ಅರಳುವುದು. ಕುಮುದಿನಿ (ನೈದಿಲೆ) ಪುಷ್ಪವು ರಾತ್ರಿ ಚಂದ್ರನನ್ನು ಕಂಡು ಅರಳುವುದು. ಇವುಗಳಲ್ಲಿ ಕಮಲ ಪುಷ್ಪದ ವಿಕಾಸ ಮತ್ತು ಕುಮುದಿನಿ ಪುಷ್ಪದ ಸಂಕೋಚವನ್ನು ತಿಳಿಸುತ್ತ, ರಾತ್ರಿಯು ಕರಗಿ, ಸೂರ್ಯೋದಯವು ಚೆನ್ನಾಗಿ ಆಗಿದೆಯೆಂದು ಒಳಗಿರುವ ಗೋಪಿಗೆ ತಿಳಿಸುವುದಕ್ಕಾಗಿ. ಆಗ ಒಳಗಿದ್ದ ಗೋಪಿಯು, “ಸಖಿಯರೇ! ನಿಮ್ಮ ಕಣ್ಣುಗಳಿಂದ ಹೊರಟ ಕಾಂತಿಯನ್ನು ಸೂರ್ಯನ ಬೆಳಕೆಂದು ಭ್ರಮಿಸಿ ಕಮಲ ಅರಳಿದ್ದು, ನೈದಿಲೆ ಮುಸುಟಿಕೊಂಡಿರಬೇಕು ಅಷ್ಟೇ “  ಎನ್ನುತ್ತಾಳೆ. 

ಮುಂದೆ ತಾನೇ ತನ್ನ ಕೊಠಡಿಯ ಕಿಟಕಿಯ ಮೂಲಕ ನೋಡಿ, ತನ್ನ ಮನೆಯು ಪೂರ್ವಾಭಿಮುಖವಾಗಿರುವದನ್ನು ಮರೆತು, ಇನ್ನು ಸೂರ್ಯನ ಕಾಂತಿ ಚೆನ್ನಾಗಿ ಬಿದ್ದಿರಲಿಲ್ಲವಾಗಿ, ಬೇರೆಯೇನಾದರೂ ಬೆಳಕಾಗಿರುವುದಕ್ಕೆ ಗುರುತಿದ್ದರೆ ಹೇಳಿ ಎಂದು ತನ್ನ ಸಖಿಯರಿಗೆ ಕೇಳುತ್ತಾಳೆ. 

ಆಗ, ಕಾವಿ ಬಟ್ಟೆಯುಟ್ಟು, ಶುಭ್ರ ದಂತಗಳುಳ್ಳ ತಪಸ್ವಿಗಳು ಪೂಜೆಯಾರಂಭವಾದುದನ್ನು ಸೂಚಿಸುವುದಕ್ಕಾಗಿ ಕೈಗಳಲ್ಲಿ ಶಂಖವನ್ನು ಹಿಡಿದು ಊದಲು ಗುಡಿಗಳಿಗೆ ಹೋಗುತ್ತಿದ್ದಾರೆ. ಈಗಲಾದರೂ ಸೂರ್ಯೋದಯವಾಗಿದ್ದನ್ನು ತಿಳಿದು ಎದ್ದೇಳಿ ಎನ್ನುತ್ತಾರೆ. ಇದಕ್ಕೂ ಆ ಗೋಪಿ ಪ್ರತಿಯಾಗಿ ಆಕ್ಷೇಪಿಸಿದಾಗ,

ಗೋದೆಯು, “ ನೀವೇ ಬಂದು ನಮ್ಮನ್ನೇ ಮೊದಲು ಎಬ್ಬಿಸುವುದಾಗಿ ಹೇಳಿದ್ದೀರಲ್ಲವೇ ?” ಎಂದು ಕೇಳುತ್ತಾಳೆ.  

ಯಾವಾಗಲೂ ಶಂಖ, ಚಕ್ರ, ಗದಾಧರನಾಗಿ ತನ್ನ ನಾಲ್ಕು ತೋಳುಗಳಿಂದ ಆಯುಧಗಳನ್ನು ಹಿಡಿದು ತನ್ನ ಭಕ್ತರಿಗೆ ದರ್ಶನ ಕೊಡುವ ಶ್ರೀಕೃಷ್ಣನನ್ನು ನಾವೂ ಹಾಡಬೇಡವೇ? ನಾಲಿಗೆ ಹೊಂದಿರುವುದಕ್ಕೆ ಪ್ರಯೋಜನ ಭಗವನ್ನಾಮ ಸಂಕೀರ್ತನವೇ ಅಲ್ಲವೇ?

ರಾಗಪ್ರಯುಕ್ತವಾದ ಶೇಷತ್ವಜ್ಞಾನದಿಂದ ಮಂದಸ್ಮಿತರಾದ ಪ್ರಪನ್ನಾಧಿಕಾರಿಗಳು ತಂತಮ್ಮ ಆರಾಧ್ಯಮೂರ್ತಿಯ ಸನ್ನಿಧಿಯಲ್ಲಿ ಪೂಜೆಮಾಡಲು ಹೋದರು. ಇನ್ನು ಕೆಲವರು ಕಾಲಕ್ಷೇಪಮಂದಿರದ ಬಾಗಿಲನ್ನು ತೆರೆಯಲು ಹೊರಟಿರುವರು. ಹೀಗಿರುವಾಗ ತಾವು ಮಾಡಿದ ವಾಗ್ದಾನಕ್ಕೆ ಅನುಸಾರವಾಗಿ ನಡೆಯದಿದ್ದಲ್ಲಿ ತಮ್ಮಂತಹ ದೊಡ್ಡವರಿಗೆ ಲಜ್ಜಾಸ್ಪದವಲ್ಲವೆ? ಧರ್ಮಜ್ಞರಾದ ನೀವೇ ನುಡಿದಂತೆ ನಡೆಯಬೇಡವೇ? ಎಂದು ಪ್ರಶ್ನಿಸುತ್ತಾರೆ. 

ಇದರಿಂದ ಪ್ರಚೋದಿತಳಾದ ಭಾಗವತೆಯು, “ನಾಚಿಕೆ ಇಲ್ಲದವಳೆಂದು ನನ್ನನ್ನು ಅಧಿಕ್ಷೇಪಿಸಿಕೊಂಡು, ನನ್ನಲ್ಲಿಗೇ ನೀವು ಬರುವುದೇಕೆ?” ಎನ್ನುತ್ತಾಳೆ. 

“ಮಧುರಾ ಮಧುರಾಲಾಪ” -ಎಂಬಂತಿರುವ ನಿಮ್ಮ ಮಾತಿನಲ್ಲಿರುವ ಸವಿ, ಮಾಧುರ್ಯ ಶ್ರೀಕೃಷ್ಣನಿಗೂ ನಮಗೂ ಬಹಳ ಆಪ್ಯಾಯಕವಾಗಿದೆ. ಅದರ ಪ್ರಚೋದನೆಗಾಗಿಯೇ ನಿಮ್ಮನ್ನು ಕರೆದೊಯ್ಯಲು ಬಂದಿರುವದಾಗಿ ತಿಳಿಸುತ್ತಾರೆ. ಇದರಿಂದ ಸಮಾಹಿತಳಾಗಿ ಆ ಭಾಗವತೆಯು ಇವರೊಂದಿಗೆ ಹೊರಡುತ್ತಾಳೆ. 

ತತ್ವಾರ್ಥ: ದಿವ್ಯ ಪ್ರಬಂಧಗಳಲ್ಲಿ ಮೋಕ್ಷಕ್ಕೆ ‘ವೀಡು’ (ಮನೆ) ಎಂದು ಹೆಸರು. ಈ ಮನೆಯ ಹಿತ್ತಲು (ಪುರೈಕ್ಕಡೈ ) ಎಂಬುದು ಸಂಸಾರ. ಇದರಲ್ಲಿಯ ತೋಟವೆಂಬುದು ಸುಖದುಃಖ ಫಲ ಕೊಡುವ ಶರೀರ. ಇದರಲ್ಲಿಯ ‘ವಾವಿ’(ಬಾವಿ) ಎಂಬುದು ಹೃದಯ. ಈ ಹೃದಯದಲ್ಲಿ ಭಗವತ್ಸಂಕಲ್ಪದಿಂದ ಅಷ್ಟ ಕಮಲಗಳು ಅರಳಿವೆ.  ‘ಅಹಿಂಸಾ , ಇಂದ್ರಿಯ ನಿಗ್ರಹ, ದಯಾಪುಷ್ಪ , ಕ್ಷಮಾ, ಜ್ಞಾನ, ತಪ, ಸತ್ಯ ಮತ್ತು ಧ್ಯಾನ’  ಇವೇ ಆ ಪುಷ್ಪಗಳು. 

ಲೌಕಿಕ ಸುಖಗಳ ಇತಿಮಿತಿಯನ್ನರಿಯುವುದೇ ನಿಜವಾದ ಜೀವನ. ಶಾಶ್ವತ ಸುಖ ಮತ್ತು ಆನಂದವನ್ನು ಪಡೆಯಲು ಶಾಸ್ತ್ರಜ್ಞಾನ ಅವಶ್ಯ. ‘ ಶಾಸ್ತ್ರಜ್ಞಾನ – ಲೌಕಿಕ ಜೀವನ’ ಇವುಗಳ ನಡುವೆ ಭಾರೀ ಕಂದರವಿದೆ. ಶಾಸ್ತ್ರವು, ಪಾರದರ್ಶಕ ಜೀವನದ ಒಳ ಹೊರಗನ್ನು ತಿಳಿಸುತ್ತವೆ. ಈ ಅಂತರವನ್ನು ಅರಿತು, ಅದನ್ನು ತುಂಬಿದಾಗಲೇ ನಾವು ಭಗವಂತನನ್ನು ಕಾಣಬಹುದು. ಜ್ಞಾನ ಮತ್ತು ಅನುಷ್ಠಾನ ಎರಡನ್ನೂ ಅರಿತ ಆಚಾರ್ಯರಿಂದ, ಶಂಖ-ಚಕ್ರಾಲಂಕೃತನೂ, ಆಶ್ರಿತ ವತ್ಸಲನೂ ಆದ ಆ ನಾರಾಯಣನ ದಿವ್ಯ ನಾಮಗಳನ್ನು ನಾವೆಲ್ಲರೂ ಕೂಡಿ ಸಂಕೀರ್ತನ ಮಾಡಲು, ನಮ್ಮ ಅದ್ವಿತೀಯ ಭಗವತ್ಕೈಂಕರ್ಯ ವ್ರತವು ಶುಭವೂ, ಸಾಂಗವೂ ಆಗಿ ನೆರವೇರುವುದು. 

ದಾಸರ ನುಡಿಯಂತೆ,

ಏನು ಮಾಡಿದರೆನ್ನ ಭವಹಿಂಗದು |ದಾನವಾಂತಕ ನಿನ್ನ ದಯವಾಗದನಕ।। ಪ।।

ಅರುಣೋದಯಲೆದ್ದು ಅತಿಸ್ನಾನಗಳ ಮಾಡಿ |

ಬೆರಳನೆಣಿಸುತ ಸ್ಮರಿಸಿ ನಿಜವರಿಯದೆ ||

ಶರಣು ಸಾಷ್ಟಾಂಗವನು ಹಾಕಿದೆನು ಶತಸಹಸ್ರ |

ಹರಿನಿನ್ನ ಕರುಣಾ ಕಟಾಕ್ಷವಿರದನಕ ।।೧।।

ಶೃತಿಶಾಸ್ತ್ರ ಪುರಾಣಗಳನೋದಿ ಬೆಂಡಾದೆ |

ಅತಿ ಶೀಲಗಳನೆಲ್ಲ ಮಾಡಿ ದಣಿದೆ |

ಗತಿಯ ಪಡೆಯುವೆನೆಂದು ಗಯೆ ಕಾಶಿಯ ಮಾಡಿದೆನು |

ರತಿಪತಿಯ ಪಿತ ನಿನ್ನ ದಯವಾಗದನಕ ।।೨।।

ದಾನವನು ಮಾಡಿದೆನು ಮೌನವನು ತಾಳಿದೆನು |

ಜ್ಞಾನ ಪುರುಷಾರ್ಥಕ್ಕೆ ಮನವೀಯದೆ |

ಶ್ರೀನಾಥ ದಯಪೂರ್ಣ ಪುರಂದರವಿಠಲನ |

ಧ್ಯಾನಿಸುವರೊಡನಾಡಿ ನೆಲೆಗೊಳ್ಳದನಕ ।।೩।।

(ವಿಷಯ ಸಂಗ್ರಹ : “ತಿರುಪ್ಪಾವೈ ರಸಸ್ವಾಧಿನಿ” – ಬರೆದವರು ವಿದ್ವಾನ್ ವೇದಾನ್ತ ಸಾರಜ್ಞ

   ಶ್ರೀ ಎಸ್. ಕೃಷ್ಣಾತಾತಾಚಾರ್ಯ )

(1) ಗಮಕ ಕವಿತಾ ವನಜ ಭಾಸ್ಕರ , ಗಮಕ ರತ್ನಾಕರ ಶ್ರೀಯುತ ಬಿ.ಎಸ್ .ಎಸ್ ಕೌಶಿಕ್  ರವರ  ಶ್ರೀಮದಾಂಡಾಳ್ ಮಹಾ ವೈಭವಂ -ತಿರುಪ್ಪಾವೈ – ಮೂಲ, ಕನ್ನಡ ತಾತ್ಪರ್ಯ , ಷಟ್ಪದಿ, ಭಾವಾರ್ಥ , ಚೌಪದಿ )

Tiruppavai series

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply