ಚಿತ್ರಕೃಪೆ : ಕೇಶವ್ ವೆಂಕಟರಾಘವನ್ (ಪಾಶುರಂ – 18)
ಶ್ರೀ ನೀಳಾ ದೇವೈ ನಮಃ
ತಿರುಪ್ಪಾವೈ ಲೇಖನಮಾಲೆಯ ಹಿಂದಿನ ಲೇಖನಗಳನ್ನು ಈ ಕೆಳಗೆ ಓದಬಹುದು :
- ತಿರುಪ್ಪಾವೈ ಲೇಖನಮಾಲೆ ಪೀಠಿಕೆ
- ಪಾಶುರಂ – 1
- ಪಾಶುರಂ – 2
- ಪಾಶುರಂ – 3
- ಪಾಶುರಂ – 4
- ಪಾಶುರಂ – 5
- ಪಾಶುರಂ – 6
- ಪಾಶುರಂ – 7
- ಪಾಶುರಂ – 8
- ಪಾಶುರಂ – 9
- ಪಾಶುರಂ – 10
- ಪಾಶುರಂ – 11
- ಪಾಶುರಂ – 12
- ಪಾಶುರಂ – 13
- ಪಾಶುರಂ – 14
- ಪಾಶುರಂ – 15
- ಪಾಶುರಂ – 16
- ಪಾಶುರಂ – 17
- ಪಾಶುರಂ
ಉಂದು ಮದಕಳಿತ್ತ! ನೋಡಾದ ತೋಳ್ವಲಿಯನ್
ನಂದ ಗೋಪಾಲನ್ ಮರುಮಗಳೇ ! ನಪ್ಪಿನ್ನಾಯ್ !
ಕಂದಂ ಕಮಳುಂ ಕುಳಲೀ ! ಕಡೈ ತಿರವಾಯ್
ವಂದೆಜ್ಞ್ಗಂ ಕೋಳಿ ಅಳೈತ್ತನಕಾಣ್ ಮಾದವಿ
ಪ್ಪಂದಲ್ ಮೇಲ್ ಪಲ್ ಕಾಲ್ ಕುಯಿಲಿ ನಜ್ಞ್ಗಲ್ ಕೂವಿನಗಾಣ್
ಪಂದಾರ್ ವಿರಲಿ ! ಉನ್ ಮೈತ್ತುನನ್ ಪೇರ್ಪಾಡ
ಚೆಂದಾಮರೈಕ್ಕೈಯಾಲ್ ಶೀರಾರ್ ವಳೈ ಯೊಳಿಪ್ಪ
ವಂದು ತಿರುವಾಯ್ ಮಗಿಳಿಂದೇಲೊ ರೆಂಬಾವಾಯ್ ॥
ಶ್ರೀಯುತ ಕೌಶಿಕರ ಕನ್ನಡ ಭಾಷಾಂತರ ಹೀಗಿದೆ :
ಮದಜಾಲವ ಸೂಸುವಾನೆಯತಳ್ಳಿ ಕೊಳಬಲ್ಲ
ಕದನದೊಳು ಸೋಲದಿಹ ದಿವ್ಯ ಭುಜಬಲವುಳ್ಳ
ಪದುಮನಾಭನರಾಣಿ, ನಂದಗೋಪನ ಸೊಸೆಯೆ, ಕದವತೆಗೆಯೇಳು ತಾಯೆ|
ಪದುಮೆ ನೀಳಾದೇವಿ, ಕೋಳಿಗಳು ಕೂಗುತಿಹ-
ಉದಯದಾ ಕುರುಹೆನಿಸಿ, ನಿನ್ನ ದಿವ್ಯಾಲಕದ
ಹೃದಯವರಳಿಪ ಗಂಧ ಬೀಸಿ, ಪಾಡಿವೆಕೋಕಿ, ತೆಗೆ ಕದವ ಮರೆಯಬೇಡೌ ।।೧೮।।
ಹಿಂದಿನ ಪದ್ಯವು ಪ್ರಣವದ ‘ಅ’ ಕಾರದಿಂದ ಶುರುವಾದಂತೆ, ಈ ಪದ್ಯವು ಪ್ರಣವದ ‘ಉ’ ಕಾರದಿಂದ ಆರಂಭವಾಗಿರುವುದು ಇಲ್ಲಿಯ ವಿಶೇಷ. ನೀಳಾದೇವಿಯನ್ನು ಎಚ್ಚರಗೊಳಿಸುವ ಪದ್ಯ ಇದು. ಹಿಂದಿನ ಪದ್ಯದಲ್ಲಿ ಗೋದಾದೇವಿ ಮತ್ತು ಅವಳ ಸಖಿಯರು ನಂದಗೋಪನನ್ನು, ಯಶೋದಾದೇವಿಯನ್ನು ಮತ್ತು ಬಲರಾಮನನ್ನು ಎಬ್ಬಿಸಿ ಶ್ರೀ ಕೃಷ್ಣನನ್ನು ನೋಡಲು ಅಪೇಕ್ಷಿಸುತ್ತಾರೆ. ಆದರೆ, ಪರಮಾತ್ಮನನ್ನು ಕಾಣುವುದಕ್ಕೆ ಮೊದಲು ಆಚಾರ್ಯನನ್ನು ಆಶ್ರಯಿಸಬೇಕು. ಇಲ್ಲಿ ನಪ್ಪಿನ್ನೈ ಅಥವಾ ನೀಳಾದೇವಿಯು ಪರಮಾಚಾರ್ಯಳು. ಅವಳನ್ನು ಸೇವಿಸಬೇಕಾದುದು ಅಗತ್ಯ. ಪುರುಷಾಕಾರ ಪ್ರಪತ್ತಿ ಇಲ್ಲಿ ಅನುಷ್ಠಿಸಲ್ಪಟ್ಟಿದೆ. ಶ್ರೀಕೃಷ್ಣನಿಗೆ ಅತ್ಯಂತ ಅಂತರಂಗ ಪ್ರಿಯಳಾದ, ಲಕ್ಷ್ಮಿ ಸ್ವರೂಪಳಾದ ನೀಳಾದೇವಿಯನ್ನು ನಪ್ಪಿನ್ನೈ ಎಂದು ಸಂಬೋಧಿಸುತ್ತಾರೆ. ಕ್ರಮ ತಪ್ಪಿ ಮೊದಲು ಶ್ರೀಕೃಷ್ಣನನ್ನು ಎಬ್ಬಿಸಲು ಹೋಗಿ, ತಮ್ಮ ತಪ್ಪಿನ ಅರಿವಾಗಿ, ಮೊದಲು ಶ್ರೀಕೃಷ್ಣನ ದಿವ್ಯ ಮಹಿಷಿಯ ಪುರುಷಾಕಾರ ಅಗತ್ಯವೆಂಬ ತತ್ವವನ್ನು ಮನಗಂಡು, ಈ ಪಾಶುರದಲ್ಲಿ ನಪ್ಪಿನ್ನೈಯನ್ನು ಪ್ರಾರ್ಥಿಸಲು ಹಾಗು ಎಬ್ಬಿಸಲು ಹೊರಟಿರುವರು. ಇಲ್ಲಿ ಭಗವಂತನಲ್ಲಿ ನಮ್ಮ ಶರಣಾಗತಿ ಸಿದ್ದಿಸಲು ಇವಳನ್ನು ಮೊದಲು ಘಟಕಗಳನ್ನಾಗಿ ವರಿಸಬೇಕು ಎಂಬುದು ಸಿದ್ಧವಾಗುತ್ತದೆ.
ಗಜರಾಜನಂತೆ ಬಲಿಷ್ಠವಾದ ತೋಳುಗಳುಳ್ಳ ನಂದಗೋಪನ ಮರುಮಹಳೇ (ಸೊಸೆಯೇ) ಎಂದು ಮೊದಲು ಗೋದಾದೇವಿಯು ಕರೆಯುತ್ತಾಳೆ. ನಂದಗೋಪಾಲನ ಸೊಸೆಯರು ಅನೇಕರು ಇರುವದರಿಂದ, ಅವರು ಕರೆದದ್ದು ತನ್ನನ್ನೇ ಎಂದರಿಯದೆ, ನಪ್ಪಿನ್ನೈ ಸುಮ್ಮನಾಗುತ್ತಾಳೆ. ಆಗ ಮತ್ತೆ, ನಪ್ಪಿನ್ನೈ! ಎಂದು ಅವಳನ್ನು ಸಂಬೋಧಿಸುತ್ತಾರೆ. ಶ್ರೀಕೃಷ್ಣನನ್ನು “ನಂದಗೋಪನ ಕುಮಾರನೇ” ಎಂದು ಆದರಿಸಿದಂತೆ, ನಪ್ಪಿನ್ನೈಯನ್ನು ಮಾವನಾದ “ನಂದಗೋಪನ ಸೊಸೆಯೇ” ಎಂಬ ಸಂಬಂಧದಿಂದ ಆದರಿಸಿ ಕೂಗುತ್ತಾರೆ. ಈಕೆ ತಂದೆಯಲ್ಲಿಗಿಂತಲೂ ನಂದಗೋಪನ ಮನೆಯಲ್ಲೇ ಬೆಳೆದವಳು. ಬಾಲ್ಯದಿಂದ ಬೆಳೆದ ನಂದಗೋಕುಲವೇ ಸರ್ವಸ್ವವಾಗಿ, ಶ್ರೀ ಕೃಷ್ಣನ ವಿಷಯದಲ್ಲಿ ನಮಗೆ ಘಟಕಳಾಗಿರುವುದಕ್ಕೆ ತಕ್ಕ ಪತಿವಲ್ಲಭ್ಯಾದಿಗಳನ್ನುಳ್ಳವಳೇ – ಎಂದು ಸಂಬೋಧಿಸುತ್ತಾರೆ. ಮಧ್ಯರಾತ್ರಿಯಲ್ಲಿ ಬಂದು ಹೀಗೆ ಕೂಗುವುದು ಯುಕ್ತವೋ? ಎಂದು ಮರುಪ್ರಶ್ನೆಯು ಒಳಗಿನಿಂದ ಬಂದಾಗ, ಕೋಳಿಗಳು ಕೂಗುತ್ತಿವೆ (ಕೋಳಿ ಅಳೈತ್ತನಕಾಣ್), ಬೇರೆ ಗುರುತಾಗಿ ಕೋಗಿಲೆಗಳೂ ಹಾಡುತ್ತಿವೆ (ಕುಯಿಲ್). ನಪ್ಪಿನ್ನೈ ಮಾತು ಮತ್ತು ನೋಟವನ್ನೇ ಧಾರಕವಾಗಿ ಹೊಂದಿ ಬೆಳೆಯುತ್ತಿರುವ ಅವುಗಳು, ನೀಳಾದೇವಿಯನ್ನು ಕಾಣದೆ ಕೂಗಿ ಕರೆಯುತ್ತಿವೆ. ನಮಗಲ್ಲದಿದ್ದರೂ ಇವುಗಳನ್ನು ಬದುಕಿಸಲು, ಸಂತೈಸಲು ನೀನೆದ್ದು ಬರಬೇಡವೇ? ಎಂದು ಮರು ಪ್ರಶ್ನೆಗೆ ಉತ್ತರಿಸುತ್ತಾರೆ.
ಆಗ ನೀಳಾದೇವಿಯು, ಒಳಗಿನಿಂದಲೇ ‘ ನಿಮಗೆ ಇಷ್ಟು ಅರ್ತಿಯಿರುವುದು ನನಗೆ ತಿಳಿಯಲಿಲ್ಲ. ತಾಪಾಳನ್ನು ತೆಗೆದು ಒಳಗೆ ಬನ್ನಿ , ಯಾವ ಕಾರ್ಯಕ್ಕಾಗಿ ಕೂಗುವಿರಿ?ಎಂದಳು. ಒಳಗೆ ಬಂದ ಗೋಪಿಯರು, ನೀಳಾದೇವಿಯನ್ನು ನೋಡಿ, ಆಕೆಯ ಕೈಯಲ್ಲಿ ಒಂದೇ ಚೆಂಡಿದ್ದಾಗ್ಯೂ ಅವಳ ಸ್ಪರ್ಶದಿಂದ ಮೂರು ಚೆಂಡುಗಳಂತೆ ಕಾಣುವ, ಅತ್ಯಂತ ಸೊಬಗುಳ್ಳವಳಾಗಿದ್ದಾಳೆ. ಗೋಪಿಯರಿಗೆ ಈ ಸೊಬಗು ಆನಂದದಾಯಕ. ಲೀಲಾ ಕಂದುಕದಿಂದ ತುಂಬಿದ ಬೆರಳುಗಳುಳ್ಳವಳೇ! ಪರಮಾತ್ಮನಿಗೆ ಚೆಂಡಿನಂತಿರುವ ಈ ಲೋಕವನ್ನು ಅವನ ನಿಷ್ಠುರ ಆಳ್ವಿಕೆಯಿಂದ ತಪ್ಪಿಸಿ ತನ್ನ ಕೈಗೆ ತೆಗೆದುಕೊಂಡಿದ್ದಾಳೆಂದು ತಿಳಿದು ‘ ಶ್ರೀಕೃಷ್ಣನನ್ನು ಹಾಡಿ ಕೃತಾರ್ಥರಾಗಲು ನಿನ್ನನ್ನು ಘಟಕಳನ್ನಾಗಿ ಪ್ರಾರ್ಥಿಸುವೆವು’ ಎನ್ನುತ್ತಾರೆ.
ನಂದಗೋಪ, ಯಶೋದಾ ಮತ್ತು ಬಲರಾಮರು ಕೃಷ್ಣನಿಗೆ ಅನುಬಂಧಿಗಳು ಮತ್ತು ಪ್ರಿಯರಾದರೆ. ಶ್ರೀಕೃಷ್ಣನಲ್ಲಿಗೆ ನಮ್ಮನು ಒಯ್ಯುವರು, ಅವನು ನಮ್ಮನ್ನು ಒಪ್ಪುವಂತೆ ಮಾಡುವವರು ಮೂರು ಮಂದಿ ದೇವಿಯರು. “ಶ್ರೀದೇವಿ, ಭೂದೇವಿ ಮತ್ತು ನೀಳಾದೇವಿ”. ಇವರು ಪುರುಷಕಾರರು. ಇವರಲ್ಲಿ ನೀಳಾದೇವಿ ಪ್ರಧಾನ ಪುರುಷಕಾರಳು.
ಅರ್ಥ ಸ್ವಭಾವಾನುಷ್ಠಾನ ಲೋಕದೃಷ್ಟಿ ಗುರೋಕ್ತಿಭಿಃ ।
ಶ್ರುತ್ಯಾಸ್ಮೃತ್ಯಾ ಚ ಸಂಸಿದ್ದಂ ಘಟಕಾರ್ಥವಲಂಬನಮ್ ॥
ಮೇಲಿನ ನಿಕ್ಷೇಪರಕ್ಷೆಯ ಶ್ರೀಸೂಕ್ತಿ ಈ ಪುರುಷಕಾರಕ್ಕೆ ಪ್ರಮಾಣ. ಇಲ್ಲಿ ಶ್ರೀಕೃಷ್ಣನು ಅಭಿಗಮ್ಯನಾಗುವುದಕ್ಕೆ ಪುರುಷಕಾರಭೂತೆಯಾದ ನಪ್ಪಿನ್ನೈ ಕಾರಣ. ಇವಳ ಪುರುಷಕಾರವನ್ನು ಸರ್ವೇಶ್ವರನು ಹೇಗೂ ನಿರಾಕರಿಸಲಾರದಷ್ಟು ಅವನಿಗೆ ಇವಳು ವಲ್ಲಭೆಯಾಗಿರುವುದೇ ಮೇಲೆ ಹೇಳಿರುವ ಅರ್ಥಸ್ವಭಾವವೆಂಬುದು. ಇವಳು ಪುರುಷಕಾರವೆಂಬುದು ಸ್ವಪರನಿರ್ವಾಹಕ. ಇವಳನ್ನು ಆಶ್ರಯಿಸುವವರಿಗೆ ಇವಳ ನಿರ್ಹೇತುಕ ಕೃಪೆಯೊಂದೇ ಸಾಕು.
ಶ್ರೀನೃಸಿಂಹನ ಅವತಾರದಲ್ಲಿ, ಅವನ ಕೋಪಾತಿಶಯವನ್ನು ಕಂಡು ಹತ್ತಿರ ಹೋಗಲು ಹೆದರಿದ ದೇವತೆಗಳು ಅವನ ಪ್ರಿಯ ವಲ್ಲಭೆಯಾದ ಶ್ರೀದೇವಿಯನ್ನು ಮುಂದಿಟ್ಟುಕೊಂಡು ಹೋಗಿಯೇ ಶರಣು ಹೊಂದಿದರು. ಈ ಬಹು ಪ್ರಮಾಣಗಳಿಂದ ಭಗವಂತನಲ್ಲಿ ನಮ್ಮ ಶರಣಾಗತಿಯನ್ನು ಸಿದ್ದಿಸಲು ಇವಳನ್ನು ಮೊದಲು ಘಟಕಳನ್ನಾಗಿ ಆಶ್ರಯಿಸಬೇಕು.
ಹಿಂದೊಮ್ಮೆ, ಶ್ರೀರಾಮಾನುಜಾಚಾರ್ಯರು ಮಧುಕರವೃತ್ತಿಯನ್ನು ಮಾಡುತ್ತ, ಈ ಪಾಶುರವನ್ನು ಹಾಡುತ್ತ ತಮ್ಮ ಗುರುಗಳಾದ ಶ್ರೀ ತಿರುಕೊಟ್ಟಿಯೂರ್ ನಂಬಿ ಅವರನ್ನು ಕಾಣಲು ಹೋಗುತ್ತಿದ್ದರು. ಈ ಪಾಶುರದ ಕೊನೆಯ ಸಾಲುಗಳನ್ನು ಹೇಳುತ್ತ, ಅವರು ಆಚಾರ್ಯರ ಮನೆಯ ಮುಂದೆ ಬರುವುದಕ್ಕೂ, ಅವರ ಪುಟ್ಟ ಮಗಳಾದ ತುಳಸಿ ಬಾಗಿಲು ತೆರೆಯುವುದಕ್ಕೂ ಸರಿಯಾಯಿತು. ಅವಳನ್ನು ನೋಡಿದ ಶ್ರೀರಾಮಾನುಜರು ಒಂದರೆಕ್ಷಣ ಹಾಗೆಯೇ ನಿಂತುಬಿಟ್ಟರಂತೆ. ಆ ಪುಟ್ಟ ಬಾಲಕಿ ಬಾಗಿಲು ತೆರೆಯುವಾಗ ಶ್ರೀರಾಮಾನುಜರು ಪಾಶುರದಲ್ಲಿ ಬರುವ ‘ಕೆಂದಾವರೆಯಂತ ಮನೋಹರವಾದ ಕರಗಳಿಂದ, ಸುಂದರವಾದ ಘಲ್ ಘಲ್ ಎನ್ನುವ ಬಳೆಗಳಿಂದ ಶಬ್ದಮಾಡುತ್ತ, ಶ್ರೀಕೃಷ್ಣನ ದಿವ್ಯ ನಾಮಗಳನ್ನು ಪಾಡುತ್ತ ಬಾಗಿಲನ್ನು ತೆರೆ’ ಎನ್ನುವ ಮನೋಹರವಾದ ಸಾಲುಗಳನ್ನು ಹಾಡುತ್ತಿದ್ದರಂತೆ. ಭಾವೋದ್ವೇಗದಲ್ಲಿ ಮುಳುಗಿದ್ದ ಶ್ರೀರಾಮನುಜರು, ಪುಟ್ಟ ತುಳಸಿಯನ್ನು ಕಂಡು ಸಾಕ್ಷಾತ್ ನಪ್ಪಿನ್ನೈ ರೂಪವನ್ನು ಅವಳಲ್ಲಿ ಕಂಡು ಮೂರ್ಛಿತರಾಗಿ ಬಿದ್ದುಬಿಟ್ಟರಂತೆ. ಈ ವಿಷಯ ಒಳಗಿದ್ದ ತಿರುಕೊಟ್ಟಿಯೂರ್ ನಂಬಿ ಅವರಿಗೆ ತಿಳಿಯಲು, ಅವರು ಕೂತಲ್ಲೇ ಶ್ರೀರಾಮಾನುಜರು 18ನೇ ಪಾಶುರವನ್ನು ಹೇಳುತ್ತಿದ್ದರೇನೋ ಎಂದರಂತೆ. ಇಲ್ಲಿ ಇಬ್ಬರೂ ಪೂಜ್ಯರೂ, ಮಹಾಮಹಿಮರೂ ಆದ ಆಚಾರ್ಯರರ ಚಿಂತನೆ, ಭಕ್ತಿಯ ಪರಾಕಾಷ್ಠೆ, ಮತ್ತು ಶ್ರದ್ದೆ ಎಷ್ಟು ಎಂಬುದನ್ನು ಹೇಳಲು ಅಸಾದ್ಯ. ಅಂದರೆ, ಗೋದಾದೇವಿಯ ಈ ಪಾಶುರಗಳು ಭಗವದ್ಭಕ್ತಿಯ ಭಾವೋದ್ವೇಗವನ್ನು ಮತ್ತು ಅದರ ಅನುಸಂಧಾನವನ್ನು ಎಷ್ಟು ವಿಧದಲ್ಲಿ ನಮ್ಮಂತ ಪಾಮರರಿಗೆ ತಿಳಿಸಿಕೊಟ್ಟಿದೆ ಎಂಬುದು ವಿಶೇಷವಾಗಿ ತಿಳಿಯಬಹುದು.
ಭಾವಾರ್ಥ: ಪಾಶುರದಲ್ಲಿ ವ್ಯಕ್ತವಾಗುವ ಗಜವನ್ನು ನಾನಾ ರೀತಿಯಲ್ಲಿ ಇಲ್ಲಿ ಸ್ಮರಿಸಬಹುದು.
- ಗಜವು ಸರಪಣಿಯನ್ನು ಮಾವಟಿಗನಿಗೆ ತಾನೇ ಕೊಟ್ಟು ಅದರಿಂದ ಸಂಕೋಲೆಯನ್ನು ಕಟ್ಟಿಸಿಕೊಂಡ ಹಾಗೆ, ಭಗವಂತನೂ ಭಕ್ತಿಯೆಂಬ ಪಾಶವನ್ನು ಭಕ್ತನಿಗೆ ತಾನೇ ಕೊಟ್ಟು ಅದರಿಂದ ಕಟ್ಟಿಸಿಕೊಳ್ಳುತ್ತಾನೆ.
- ಗಜವು ತನ್ನ ಮೇಲೆ ಏರುವವರಿಗೆ ತನ್ನ ಕಾಲನ್ನೇ ಸಾಧನವಾಗಿ ತೋರಿಸುವಂತೆ ಭಗವಂತನೂ ತನ್ನನ್ನು ಹೊಂದಲಿಚ್ಚಿಸುವವರಿಗೆ ತನ್ನ ಪಾದಾರವಿಂದವನ್ನೇ ತೋರುತ್ತಾನೆ.
- ಗಜವು ಮಾವಟಿಗನ ಅನುಜ್ಞೆಯಿಲ್ಲದೆ ಹತ್ತಿರ ಬಂದವರನ್ನು ಧಿಕ್ಕರಿಸುವಂತೆ, ಪರಮಾತ್ಮನೂ ಆಚಾರ್ಯನ ಅನುಜ್ಞೆಯನ್ನು ಪಡೆಯದೇ ಬಂದವರನ್ನು ಉಪೇಕ್ಷಿಸುತ್ತಾನೆ.
- ಆನೆಯು ಮಾವಟಿಗನಿಗೆ ಅಧೀನ, ಪರಮಾತ್ಮ ಭಕ್ತಾಪರಾಧೀನ.
- ಆನೆಗೆ ಪರ್ವತ, ಕಾಡು ವಾಸಸ್ಥಾನ. ಪರಮಾತ್ಮ ಶ್ರೀವೆಂಕಟಾದ್ರಿ, ಕನಕಾದ್ರಿ, ಶ್ವೇತಾದ್ರಿಗಳ ವಾಸಸ್ಥನಾಗಿದ್ದಾನೆ.
ಹೀಗೆ ಭಗವಂತನನ್ನು ಮತ್ತಗಜಕ್ಕೆ ಹೋಲಿಸುತ್ತಾ, ಆ ತಾಯಿ ನೀಳಾದೇವಿಯನ್ನು ನೆನೆಯುತ್ತಾ,
ಜಗಪತಿಯ ತೋರಮ್ಮ ಎನಗೆ ಕರುಣವ ಮಾಡಮ್ಮ ॥ ಪ ॥
ಅಘಗಳ ಕಳೆವ ಅಮೋಘದೇವನ
ಎನ್ನಯ ಜೀವನ ಭಕುತರ ಕಾವನ ॥ ಅ ಪ ॥
ಮೃಗಲಾಂಛನ ವದನೆ ಮೃದು ಸರಸಿಜ ಸದನೆ ।
ಹಗಲು ಇರುಳು ನಿನ್ನ ಸಂಯೋಗನ್ನ ಅನಂತಭೋಗನ್ನ
ಕಿರೀಟಿಯ ಬೀಗನ್ನ ॥ 1 ॥
ಭ್ರಮರ ಕುಂತಳೆ ಜಾಣೆ ಸುಮನೆ ಕೋಕಿಲಗಾನೆ ।
ಕಮಲ ತುಲಸಿಮಣಿ ಹಾರನ್ನ ಜಗದಾಧಾರನ್ನ
ದಶಾವತಾರನ್ನ ॥ 2 ॥
ಅಜರಾಮರಣ ಸಿದ್ಧೆ ತ್ರಿಜಗದೊಳು ಪ್ರಸಿದ್ಧೆ ।
ವಿಜಯವಿಟ್ಠಲ ಶ್ರೀನಿವಾಸನ
ತಿರುವೆಂಗಳೇಶನ ವೈಕುಂಠವಾಸನಾ ॥ 3 ॥ – ಶ್ರೀ ವಿಜಯದಾಸರ ಕೃತಿ
(ವಿಷಯ ಸಂಗ್ರಹ : “ತಿರುಪ್ಪಾವೈ ರಸಸ್ವಾಧಿನಿ” – ಬರೆದವರು ವಿದ್ವಾನ್ ವೇದಾನ್ತ ಸಾರಜ್ಞ
ಶ್ರೀ ಎಸ್. ಕೃಷ್ಣಾತಾತಾಚಾರ್ಯ )
(1) ಗಮಕ ಕವಿತಾ ವನಜ ಭಾಸ್ಕರ , ಗಮಕ ರತ್ನಾಕರ ಶ್ರೀಯುತ ಬಿ.ಎಸ್ .ಎಸ್ ಕೌಶಿಕ್ ರವರ ಶ್ರೀಮದಾಂಡಾಳ್ ಮಹಾ ವೈಭವಂ -ತಿರುಪ್ಪಾವೈ – ಮೂಲ, ಕನ್ನಡ ತಾತ್ಪರ್ಯ , ಷಟ್ಪದಿ, ಭಾವಾರ್ಥ , ಚೌಪದಿ )
Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.