close logo

ಕನ್ನಡದಲ್ಲಿ ತಿರುಪ್ಪಾವೈ ಲೇಖನಮಾಲೆ – ಪಾಶುರಂ 21

ಚಿತ್ರಕೃಪೆ : ಕೇಶವ್ ವೆಂಕಟರಾಘವನ್ (ಪಾಶುರಂ – 21)

ಶ್ರೀ ನೀಳಾ  ದೇವೈ ನಮಃ

ತಿರುಪ್ಪಾವೈ ಲೇಖನಮಾಲೆಯ ಹಿಂದಿನ ಲೇಖನಗಳನ್ನು ಈ ಕೆಳಗೆ  ಓದಬಹುದು :

21. ಪಾಶುರಂ

ಏಟ್ರಕಲಂಗ ಳೆದಿರಿಪೊಂಗಿ ಮೀದಳಿಪ್ಪ

ಮಾಟ್ರಾದೇ ಪಾಲ್ ಶೊರಿಯುಂ ವಳ್ಲಲ್ ಪೆರುಂ ಪಶುಕ್ಕಲ್

ಆಟ್ರ ಪ್ಪಡೈತ್ತಾನ್ ಮಗನೇ ! ಯರಿವುರಾಯ್

ಊಟ್ರಮುಡೈ ಯಾಯ್ ! ಪೆರಿಯಾಯ್ ! ಉಲಗಿನಿಲ್

ತೋಟ್ರಮಾಯ್ ನಿನ್ರ ಶುಡರೇ ! ತುಯಿಲೆಳಾಯ್

ಮಾಟ್ರಾರುನಕ್ಕು ವಲಿತುಲೈಂದು ಉನ್ ವಾ ಶರ್ಕಣ್

ಆಟ್ರಾದು ವಂದು ಉನ್ನಡಿ ಪಣಿಯು ಮಾಪ್ಪೋಲೇ

ಪೋಟ್ರಿಯಾಂ ವಂದೋಂ ಪುಗಳ್ಂದು ಏಲೋರೆಂಬಾವಾಯ್ ॥

ಶ್ರೀಯುತ ಕೌಶಿಕರ ಕನ್ನಡ ಭಾಷಾಂತರ ಹೀಗಿದೆ :

ಹಿಡಿದ ಕೊಡವಿಡಿರಿನೊಳಗುಕ್ಕುವಂದದಿ ಪಾಲ 

ಕೊಡುವ, ವರಗೋವುಗಳ ಗಳಿಸಿರುವ ಸತ್ಪುತ್ರ 

ಒಡನೇಳು ನಂಬಿದರ ದಾತಾರ, ಜಗದೊಡೆಯ, ಧರೆಯೊಳವತರಿಸಿರುವ ಪ್ರಭೆಯೇ 

ಬಡಿಸಿಕೊಂಡಿಹ ನಿನ್ನ ಶತ್ರುಗಳು ತಾವೆಲ್ಲ-

ರಡಿಗೆರಗಿ, ಮೊರೆಯಿಡುತಲರಮನೆಯ ಬಾಗಿಲಲಿ 

ಕಾಡುಪಾರಿ ನಿಂದಿಹರು, ಯೋಗನಿದ್ರೆಯನುಳಿದು, ಮೈದೋರಿ ಭಾಗ್ಯವೀಯೈ ।।

ಗೋಪಿಯರು ಪುರುಷಕಾರಭೂತಳಾದ ನಪ್ಪಿನ್ನೈಯನ್ನು ಹಿಂದಿನ ಪದ್ಯದಲ್ಲಿ ಎಬ್ಬಿಸಿದ್ದನ್ನು ಕಂಡೆವು. ನಪ್ಪಿನ್ನೈ ಎದ್ದು ಬಂದು , “ನಾನೂ ನಿಮ್ಮೊಡನೆ ಒಬ್ಬಳಲ್ಲವೇ? ನಿಮ್ಮ ಕಾರ್ಯಗಳೆಲ್ಲವನ್ನೂ ಚೆನ್ನಾಗಿ ಮಾಡಿ ಕೊಡುವೆ. ನಮ್ಮನ್ನು ಆಶ್ರಯಿಸಿದವರಿಗೆ ಕೊರತೆಯುಂಟೆ? ನಾವೆಲ್ಲರೂ ಕೂಡಿ ಶ್ರೀಕೃಷ್ಣನನ್ನು ಎಬ್ಬಿಸಿ ಪ್ರಾರ್ಥಿಸೋಣ, ಬನ್ನಿ” ಎಂದು ಹೇಳುತ್ತಾಳೆ. ಆಗ ಸಂತಸದಿಂದ ಗೋದಾ ಮತ್ತು ಇತರ ಗೋಪಿಯರು ಅವಳೊಡಗೂಡಿ ಶ್ರೀಕೃಷ್ಣನನ್ನು “ನಿನ್ನ ಭಕ್ತರು ನಿನ್ನ ಗುಣಗಳಿಗೆ ಸೋತು ನಿನಗೆ ಶರಣಾಗುತ್ತಾರೆ. ನಿನ್ನ ವಿರೋಧಿಗಳು ನಿನ್ನ ಅಂಬಿಗೆ ಸೋತು ಬಂದು ಬೀಳುವ ಹಾಗೆ, ನಿನ್ನ ವೀರ – ಶೌರ್ಯಕ್ಕೆ ಸೋಲುತ್ತಾರೆ. ನಿನ್ನವರಾದ ನಾವು ನಿನ್ನ ಶೀಲ-ಸೌಂದರ್ಯಾದಿಗಳಿಗೆ ಸೋತು ಬಂದೆವು “ ಎಂದು ಶ್ರೀಕೃಷ್ಣನನ್ನು ಎಬ್ಬಿಸುತ್ತಾರೆ.

ನಂದಗೋಪನ ಹಸುಗಳು ಬಹಳ ಉದಾರಿಗಳು. ಹಾಲು ನೀಡುವ ದೊಡ್ಡ ರಾಸುಗಳು. ಕೊಡಗಳು ತುಂಬಿ ಹರಿಯುವಂತೆ ಎಡೆಬಿಡದೆ ಹಾಲನ್ನು ಧಾರೆ-ಧಾರೆಯಾಗಿ ಕೊಡುತ್ತಿದ್ದ ಗೋಮಾತೆಯರು. ಅಂತಹ ಹಸುಗಳ ಒಡೆಯನಾದ ಶ್ರೀಮಂತ ಗೋಪನ ಮಗನಾದ ಶ್ರೀಕೃಷ್ಣನೇ ಎದ್ದೇಳು. ನಿನಗೆ ಸುಪ್ರಭಾತ. ಆಶ್ರಿತ ರಕ್ಷಣೆಯಲ್ಲಿ ಬದ್ಧ ಕಂಕಣನೇ, ಪರಬ್ರಹ್ಮನೇ, ಪರಾತ್ಪರನೇ, ವೇದ ಪ್ರತಿಪಾದ್ಯನೇ ಎಂದೆಲ್ಲ ಕೂಗಿ ಕರೆಯುತ್ತಾರೆ. ಭೂಮಿಯಲ್ಲಿ ಸಕಲರೂ ನೋಡಿ ಧನ್ಯರಾಗುವಂತೆ ಅವತರಿಸಿರುವ ತೇಜೋಮೂರ್ತಿಯೇ, ನಿನ್ನ ಶತ್ರುಗಳು ನಿನಗೆ ಸೋತು, ಶರಣಾಗಿ ನಿನ್ನ ಮನೆಯ ಬಾಗಿಲ ಬಳಿ ಬಂದು ನಿನ್ನ ಪಾದಗಳೇ ಗತಿ ಎಂದು ಆಶ್ರಯಿಸುವರು. ಅದೇ ರೀತಿಯಲ್ಲಿ ನಾವುಗಳೂ ನಿನ್ನ ಅನಂತ ಕಲ್ಯಾಣ ಗುಣಗಳನ್ನು ಹಾಡುತ್ತ, ನಿನಗೆ ಮಂಗಳಾಶಾಸನ ಮಾಡಲು ಬಂದಿದ್ದೇವೆ. ಇದರಿಂದ ನಮ್ಮ ವ್ರತವು ಸಿದ್ದಿಸುವುದು. 

ಆಂಡಾಳ್ ದೇವಿಯು ನೀಳಾದೇವಿಯನ್ನೂ ಕೂಡ ತಮ್ಮ ಗೋಷ್ಠಿಯಲ್ಲಿ ಸೇರಿಸಿಕೊಂಡು ಶ್ರೀಕೃಷ್ಣನ ಸನ್ನಿಧಿಗೆ ಹೋಗಿ ಆತನನ್ನು ನಿದ್ದೆಯಿಂದ ಎಬ್ಬಿಸುವ ಸುಪ್ರಭಾತವಿದು. 

ಶತ್ರುಗಳು, ಭಕ್ಷಕರು-ಎಲ್ಲರೂ ಭಗವಂತನಿಗೆ ಶೇಷಭೂತರೇ. ಶತ್ರುವು ಸರ್ವವನ್ನೂ ಕಳೆದುಕೊಂಡು ಸೋತು, ಕೊನೆಯಲ್ಲಿ ಬೇರೆ ದಾರಿ ಕಾಣದೆ ಭಗವಂತನ ಕಾಲು ಹಿಡಿಯುತ್ತಾನೆ. ಭಕ್ತನಾದರೋ ಪ್ರಪತ್ತಿಯಿಂದ ಭಗವದಾಶ್ರಯವನ್ನು ಪಡೆಯಲು ಪ್ರಯತ್ನಿಸುತ್ತಾನೆ. ಪ್ರಪನ್ನರ ಅನನ್ಯ ದಾಸ್ಯ ಇಲ್ಲಿ ಸ್ಪಷ್ಟವಾಗಿದೆ. 

ನಮ್ಮ ನಂದಗೋಪನ ಕುಮಾರನಾದ ನೀನು, ನಮ್ಮನ್ನು ಕಣ್ಣು ತೆರೆದು ನೋಡದಿರುವುದು ಸರಿಯೇ? ಪರಮ ಪದದಲ್ಲಿಯೂ ನಿನ್ನನ್ನು ತರುವ ಬಗೆಗಳನ್ನೆಲ್ಲಾ ಈ ಲೋಕದಲ್ಲಿ ತೋರುವಂತೆ ಮಾಡುವವನಾಗಿ “ಅಥಯದತಃ ಪರೋದಿವೋ ಜ್ಯೋತಿರ್ದೀಪ್ಯತೇ ..” ತಂ ದೇವಾ ಜ್ಯೋತಿಷಾಂ ಜ್ಯೋತಿಃ ..” ಎಂಬಂತೆ   ಸೂರ್ಯ, ಅಗ್ನಿ ಮುಂತಾದ ಜ್ಯೋತಿಸ್ಸುಗಳಿಗೂ ಜ್ಯೋತಿಸ್ಸಾದವನೇ!   ನಿನ್ನ ಇಂತಹ ಗುಣಗಳನ್ನು ಸಂತೋಷದಿಂದ ಹೊಗಳಿ ಅದಕ್ಕೆ ಮಂಗಳವನ್ನು ಹಾಡಲು ಬಂದೆವು ಎನ್ನುವ ಭಾವ ವ್ಯಕ್ತಪಡಿಸುತ್ತಾರೆ. ನಿನ್ನ ಇಂತಹ ಗುಣಗಳಿಂದ ನಮ್ಮನ್ನು ಸೋಲಿಸಿದ ನೀನು, ನಮ್ಮನ್ನು ರಕ್ಷಿಸದೇ ಬಿಡಬಾರದು ಎನ್ನುತ್ತಾರೆ. 

ನಿನ್ನ ಗುಣಗಳಿಗೆ ಸೋತು, ನೀನು ಬರುವುದಕ್ಕೆ ಸ್ವಲ್ಪ ವಿಳಂಬವಾಗಲು, ಅಗಲಿಕೆಯನ್ನು ಸಹಿಸದೆ, ಬಿಂಕ ಬಿಗುಮಾನಗಳಿಂದಿದ್ದ ಸ್ತ್ರೀತ್ವಭಿಮಾನವನ್ನು ತೊರೆದು ನಿನ್ನನ್ನೇ ಸ್ತುತಿಸಿಕೊಂಡು ಬಂದೆವು ಎನ್ನುತ್ತಾರೆ. ಮುಂದೆ, “ಅಭಯಂ ಸರ್ವಭೂತೇಭ್ಯೋ ದದಾಮೈತರ್ಧ್ವತಂ ಮಮ”  “ಯದಿವಾ ರಾವಣ ಸ್ಸ್ವಯಂ “ – ರಾಮೋದ್ವಿರ್ಣಾಭಿಭಾಷತೇ “ – ಅತ್ಯಂತ ಮಹಾಪರಾಧಿಗಳಾದ ರಾವಣನಂತಹ ಶತ್ರುಗಳೇ ಮುಂತಾದವರ ವಿಷಯದಲ್ಲಿಯೂ ಪರಮಕಾರುಣಿಕನಾಗಿ ಸತ್ಯಪ್ರತಿಜ್ಞನಾದ ನೀನು, ಅನನ್ಯಗತಿಕರಾಗಿ ತ್ವದೇಕ ಶರಣಾಗಿರುವ ನಮ್ಮ ವಿಷಯದಲ್ಲಿಯೂ ಕೃಪೆಮಾಡು ಎಂದು ಬೇಡುತ್ತಾರೆ. 

“ನ ಧರ್ಮ ನಿಷ್ಟೋಸ್ಮಿ ನ ಚಾತ್ಮವೇದೀ ನ ಭಕ್ತಿಮಾನ್ ತ್ವಚ್ಚರಣಾರವಿಂದೇ ! ಅಕಿಂಚನೋ ನನ್ಯಗತಿ ಶರಣ್ಯ! ತ್ವತ್ಪಾದ ಮೂಲಂ ಶರಣಂ  ಪ್ರಪದ್ಯೇ।” – ಭಕ್ತಿ, ಜ್ಞಾನದ ಅರಿವಿಲ್ಲದ ನಮ್ಮನ್ನು, ನಿನ್ನ ಕಮಲದ ಪಾದಗಳಲ್ಲಿ ಶರಣಾಗತಿಯನ್ನು ನೀಡಿ, ನಮ್ಮನ್ನು ನೀನು ರಕ್ಷಿಸದೆ ಬಿಡಬಾರದೆಂದು ಪ್ರಾರ್ಥಿಸುತ್ತಾರೆ.  

ಇಲ್ಲಿ, ಅಂದರೆ 21 ರಿಂದ 25 ಪದ್ಯಗಳಲ್ಲಿ ಮೂಲಮಂತ್ರದ “ನಮಃ” ಶಬ್ದಾರ್ಥವು ಹೇಳಲ್ಪಟ್ಟು ಪ್ರಪನ್ನನಾದವನು ದಿನವೂ ಮೂಲಮಂತ್ರವಾದ ಅಷ್ಟಾಕ್ಷರಿಯನ್ನು ಜಪಿಸಿ ಅದರ ಅರ್ಥಾನುಸಂಧಾನ ಮಾಡಬೇಕೆನ್ನುವ ನಿಯಮವಿದೆ. ಹಿಂದಿನ ೨೦ ಪದ್ಯಗಳಲ್ಲಿ ಜ್ಞಾನದೃಷ್ಟಿಯಿಂದ ವೇದಾಂತವನ್ನು ಹೇಳಿ ಅದರ ರಸಾಸ್ವಾದವನ್ನು ಈ ಮುಂದಿನ ೫ ಪದ್ಯಗಳಲ್ಲಿ ಗೋದಾದೇವಿಯು ತಿಳಿಸುತ್ತಾಳೆ. 

ಭಾವಾರ್ಥ: ಈ ಪಾಶುರದಲ್ಲಿ ನಂದಗೋಪನ ಮಗನೇ ! ಎಂಬಲ್ಲಿ ನಂದಗೋಪನ ಸ್ಥಾನದಲ್ಲಿ ಮಹಾತ್ಮನಾದ ಆಚಾರ್ಯ-ಗ್ರಾಹ್ಯ. ಆತನ ಮಗನ ಸ್ಥಾನದಲ್ಲಿ – ಆ ಆಚಾರ್ಯನ ಶಿಷ್ಯ ಗ್ರಾಹ್ಯ. ಕೆಲವು ಸಮಯದಲ್ಲಿ ಆಚಾರ್ಯರ ಸೇವನ. ಕೆಲವು ಸಮಯದಲ್ಲಿ ಆಚಾರ್ಯರ ಶಿಷ್ಯ ಅಥವಾ ಪುತ್ರನನ್ನು ಸೇವಿಸುವುದು- ಪ್ರತ್ಯಕ್ಪದೃಷ್ಟವಾಗಿದೆ. 

ಹಾಲು ಕರೆಯುವಾಗ ಹಾಲಿನ ಭಾಂಡಗಳು ತುಂಬಿ ಉಬ್ಬಿ ಹೊರಕ್ಕೆ ಚೆಲ್ಲುವಷ್ಟು, ಭಾಂಡಗಳ ಸ್ಥಾನದಲ್ಲಿ ಆಚಾರ್ಯನಿಂದ ಉಪದೇಶ ಹೊಂದುವ ವಿದ್ಯಾಗ್ರಾಹಕರಾದ ಶಿಷ್ಯರು ವಿವಕ್ಷಿತ. ಆಚಾರ್ಯರ ಜ್ಞಾನಕ್ಕಿಂತ ಅಧಿಕವಾದದ್ದು ಶಿಷ್ಯರಲ್ಲಿರುವ ಜ್ಞಾನಸಾಮ್ರಾಜ್ಯವೆಂದು ತಿಳಿಯುವುದು. 

ನಿರಂತರ ಪಯಃ ಪ್ರವಾಹ ಸ್ರವಿಸುವ ಉದಾರ, ಉತ್ತಮ ಜಾತಿಯ ಹಸುಗಳು – ಎಂಬಲ್ಲಿ ಶಿಷ್ಯರು ‘ಸಾಕು ಸಾಕು’ ಎಂದರೂ ಬಿಡದೆ, ಪುನಃ ಪುನಃ ಉಪದೇಶಿಸುವವರೇ ಶ್ರದ್ಧೆಯುಳ್ಳ ಗುರು ಎಂಬರ್ಥ ಭಾಸವಾಗುವುದು.  

ಹಾಲಿನಲ್ಲಿ, ಕರು ಕುಡಿದ ಹಾಲಿಗಿಂತ ಭಾಂಡದಲ್ಲಿಯ ಹಾಲು ಹೇಗೆ ಎಲ್ಲರಿಗೂ ಉಪಜೀವ್ಯವೋ ಹಾಗೆಯೇ, 

ಪ್ರಬಂಧ ರೂಪದಲ್ಲಿರುವ ಅರ್ಥಗಳು ಸುಚಿರ ಪ್ರಯೋಗಾರ್ಹವೆಂದು ಶಬ್ದ ಸನ್ನಿವೇಶದಿಂದ ಗಮ್ಯವಾಗುತ್ತದೆ. ಸ್ವಾತ್ಮಾನುಭವವನ್ನು ಬಿಟ್ಟು ಪರೋಪದೇಶಪರನಾಗು -ಎಂದು ಆಚಾರ್ಯನಲ್ಲಿ  ಪ್ರಾರ್ಥನೆ ಮಾಡುತ್ತ,  ಸ್ವಾಮಿ-ಎನ್ನುವುದರಿಂದ, ಅನೇಕ ಆಚಾರ್ಯರೊಳಗೆ ಇವನು ಅತ್ಯಂತ 

ಶ್ಲಾಘನೀಯನಾದ ಗುರು ಎಂಬ ಭಾವ ವ್ಯಕ್ತವಾಗಿದೆ. 

ಚಿತ್ತ ಸಖಿ ಬಾಗ | ಗುರುವಿಗೇ ಬಾಗ |

ಉತ್ತಮ ಪರುಷ ನಾರಿಯಲಿಕ್ಕೆ ವಿಷಯದಿಂ ಬಾಗ 

ಸಧ್ಯರೂಪ ಯೌವ್ವನದ ಕುಲಮದಕ ಬಾಗ 

ನಿಗಟದಿಂದ ಭಜಿಸಲಿಕ್ಕೆ ವಲುವದನು ಜಾರಿ 

ಪಡೆದು ಗುರು ಜ್ಞಾನದಿಂದ ನೋಡೇ ಮುಕ್ತಿ ಕಳಸಾ । 

ಧನ್ಯಳಾಗ ತಂದೆ ಮಹಿಪತಿ ಪ್ರಭು ಸ್ಮರಿಸೀ ।।    

-ಮಹಿಪತಿ ದಾಸರು 

(ವಿಷಯ ಸಂಗ್ರಹ : “ತಿರುಪ್ಪಾವೈ ರಸಸ್ವಾಧಿನಿ” – ಬರೆದವರು ವಿದ್ವಾನ್ ವೇದಾನ್ತ ಸಾರಜ್ಞ

   ಶ್ರೀ ಎಸ್. ಕೃಷ್ಣಾತಾತಾಚಾರ್ಯ )

(1) ಗಮಕ ಕವಿತಾ ವನಜ ಭಾಸ್ಕರ , ಗಮಕ ರತ್ನಾಕರ ಶ್ರೀಯುತ ಬಿ.ಎಸ್ .ಎಸ್ ಕೌಶಿಕ್  ರವರ  ಶ್ರೀಮದಾಂಡಾಳ್ ಮಹಾ ವೈಭವಂ -ತಿರುಪ್ಪಾವೈ – ಮೂಲ, ಕನ್ನಡ ತಾತ್ಪರ್ಯ , ಷಟ್ಪದಿ, ಭಾವಾರ್ಥ , ಚೌಪದಿ )

Tiruppavai series

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.