close logo

ಕನ್ನಡದಲ್ಲಿ ತಿರುಪ್ಪಾವೈ ಲೇಖನಮಾಲೆ – ಪಾಶುರಂ 22

ಚಿತ್ರಕೃಪೆ : ಕೇಶವ್ ವೆಂಕಟರಾಘವನ್ (ಪಾಶುರಂ – 22)

ಶ್ರೀ ನೀಳಾ  ದೇವೈ ನಮಃ

ತಿರುಪ್ಪಾವೈ ಲೇಖನಮಾಲೆಯ ಹಿಂದಿನ ಲೇಖನಗಳನ್ನು ಈ ಕೆಳಗೆ  ಓದಬಹುದು :

22. ಪಾಶುರಂ

ಅಂಗಣ್ ಮಾಜ್ಞಾಲತ್ತರಶರ್ ಅಭಿಮಾನ

ಬಜ್ಞ್ಗಮಾಯ್ ನಂದು ನಿನ್ ಪಳ್ಳಿಕ್ಕಟ್ಟಿಲ್ ಕೀಳೇ

ಶಜ್ಞ್ಗಮಿರುಪಾರ್ ಪೋಲ್ ವಂದುತಲೈ ಪ್ಪೆಯ್ ದೋಂ

ಕಿಂಗಿಣಿವಾಯ್ ಚ್ಚೆಯದ ತಾಮರಪ್ಪೂಪ್ಪೋಲ

ಶೆಂಜ್ಞ್ಗಣ್ ಶಿರಿಚ್ಚಿರಿದೇ ಯೇಮ್ಮೇಲ್ ವಿಳಿಯಾವೋ

ತಿಂಗಳು ಮಾದಿತ್ತಿಯನು ಮೆಳುಂದಾರ್ಪೋಲ್

ಅಜ್ಞ್ಗಣ್ಣಿರಂಡುಂ ಕೊಂಡು ಎಜ್ಞ್ಗಳ್ ಮೇಲ್ ನೋಕ್ಕುದಿಯೇಲ್

ಎಜ್ಞ್ಗಳ್ ಮೇಲ್ ಚಾಬ ಮಿಳಂದೇಲೋ ರೆಂಬಾವಾಯ್ ॥

ಶ್ರೀಯುತ ಕೌಶಿಕರ ಕನ್ನಡ ಭಾಷಾಂತರ ಹೀಗಿದೆ :

ಕರಣಾಬ್ದಿ ಹೇ ಕೃಷ್ಣ, ಭೂಮಂಡಲದೊಳಿರುವ 

ನರಪತಿಗಳೆಲ್ಲ ನಿನ್ನಿಂ ಪರಾಜಿತರಾದರು 

ಈರೆ, ಬಾಹುಭಂಗಮೆಣಭಿಮಾನ ಭಂಗಿತರು, ತವಮಂಚದಡಿ ನೆರೆದುಬಳಿ 

ತೊರೆಯುತೆಮ್ಮಭಿಮಾನಹಂಕಾರಗಳ, ನಿನ್ನ 

ಮೆರೆವ ಮಂಚದ ಕಾಲಕೆಳಗೆ ನೆರೆದಿಹೆವೆಮ್ಮ 

ಹರಿ ಶಶಿಗಳಂತೆಸೆವ ಕಂಗಳಿಂ ಕರುಣದಿಂದೀಕ್ಷಿಸುತ ಪಾಪಗಳೆಯೈ 

ಪರಮಾತ್ಮ ಕಣ್ಣು ಬಿಟ್ಟು ನೋಡಲಿಲ್ಲ. ಕಾರಣವೇನಿರಬಹುದೆಂದು ಗೋದೆ ಯೋಚಿಸಿದಳು. ಪ್ರಸನ್ನನಾಗದಿದ್ದರೆ ನಮಗಾಗಿ ನೀಳೆಯನ್ನು ಬಿಟ್ಟುಕೊಡುತ್ತಿರಲಿಲ್ಲ. ನಮ್ಮ ಸ್ತೋತ್ರಕ್ಕೆ ಹಿಗ್ಗಿ ಆನಂದಿತನಾಗಿರುವನೇ? ಇರಬಹುದು. ಇವನು ಪ್ರೇಮಮಯನು. ಪ್ರೇಮದ ಎಲ್ಲೆ ಮೌನ. ಆದ್ದರಿಂದ ಮೌನನಾಗಿರುವನೇ? ಇಲ್ಲ ನಮ್ಮ ದೃಢ ಮನಸ್ಸನ್ನು ಇನ್ನೂ ಪರೀಕ್ಷಿಸುವನೋ? ಅದನ್ನು ತಿಳಿಸಿದರಾದರೂ ಏಳುವನೋ ನೋಡೋಣ- ಎಂಬಿತ್ಯಾದಿ ಚಿಂತನೆಯನ್ನು ಮಾಡುತ್ತಾಳೆ. ಶಾಸ್ತ್ರರೀತ್ಯಾ ಇದನ್ನು ‘ಅನನ್ಯಾರ್ಹ ಶೇಷತ್ವ’ ವೆಂದು ಹೇಳಲಾಗಿದ್ದು, ಈ ಪದ್ಯದ ಸಾರವೇ ಇದಾಗಿದೆ. 

ಜ್ಞಾನಮಯನೂ ಪ್ರೇಮಮಯನೂ ಆದ ಶ್ರೀಕೃಷ್ಣ ಎಲ್ಲವೂ ಆಗಿ, ಎಲ್ಲಕ್ಕೂ ಆಗಿ, ಎಲ್ಲೆಯಿಲ್ಲದ ಎಮ್ಮವನಾದ ಪರಮಾತ್ಮನೆಂದು ಭಾವುಕಳಾಗಿ, ವಿರಹಿಣಿಯಾದ ಗೋದೆ ತನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡು ಅವನ ಸನ್ನಿಧಿ ಪಡೆದಳು. ಅವನನ್ನು ಪಡೆಯುವ ಸಲುವಾಗಿ ಹಾಡಲು ಹೊರಟಳು. ಅವಳ ಜೀವವೇ ಸಂಗೀತಮಯವಾಯಿತು.  “ಉತ್ತಮುಡೈಯಾಯ್ , ಪೆರಿಯಾಯ್ ಉಲಕಿನಿಲ್ ತೆತ್ತಮಾಯ್ ನಿನ್ರಶುಡರೇ” ಎಂದು ಸಾಹಿತ್ಯ ಕೂಡಿಸಿದಳು. ಅನುಪಲ್ಲವಿ ಹಾಡಿ ರಸ ಕೊಟ್ಟಳು. ಶ್ರೀಕೃಷ್ಣ ಕಣ್ತೆರೆದು ನೋಡಿ, ಮುಗುಳ್ನಗೆ ನಕ್ಕು ‘ಏನು ಬೇಕೆಂದು’ ಕೇಳಿದ. ಎದ್ದು ಕೂತ ಆತನ  ಅಂದವೇ ಅಂದ. ಗೋದ ಏನು ಬೇಕೆಂಬುದನ್ನೇ ಮರೆತುಬಿಟ್ಟಳು. ಭಾವನಾ  ಪ್ರಪಂಚದಲ್ಲಿ ಮುಳುಗಿ ಹೋದಳು. 

ಸಪ್ತ ದ್ವೀಪಗಳನ್ನೊಳಗೊಂಡ ಈ ಭೂಮಂಡಲವು ರಮಣೀಯವೂ ವಿಶಾಲವೂ ಆಗಿದೆ. ಇಲ್ಲಿನ ರಾಜ ಮಹಾರಾಜರು ಭಗವತ್ಕಟಾಕ್ಷದ ಲವಲೇಶದಿಂದಲೇ ರಾಜ ಪದವಿಯನ್ನು ಪಡೆದರೆಂಬುದಂತೂ  ನಿಸ್ಸಂಶಯ. ಆದಾಗ್ಯೂ, ಇವರು ಪರಮಾತ್ಮನ ಪಾದಾರವಿಂದವನ್ನು ಮರೆತವರಾಗಿ, ಪೌಂಡ್ರಕ ವಾಸುದೇವಾದಿಗಳಂತೆ ಗರ್ವಭರಿತರಾಗಿ, ನಾನಾ ವಿಧ ಕ್ಲೇಶಗಳನ್ನು ಅನುಭವಿಸಿ, ಕೊನೆಯಲ್ಲಿ “ಸೋಹಂ” ಎಂಬ  ಅಹಂಕಾರಿಕ ಸ್ಥಾನವನ್ನು ಬಿಟ್ಟು “ದಾಸೋಹಂ” ಎಂಬ ಸ್ವರೂಪಾನುರೂಪ ಸ್ಥಾನದಲ್ಲಿ ನಿರತರಾಗಿ, ಭಗವದಾಲಯಗಳಲ್ಲಿ ಪ್ರವಣರಾಗಿ ಪ್ರಾಕಾರ – ಗೋಪುರ-ಮಂಟಪ ಪ್ರಾಸಾದಾದಿ ನಿರ್ಮಾಣ ರೂಪ ಕೈಂಕರ್ಯಗಳನ್ನು ಮಾಡುತ್ತಾರೆ ಎಂಬುದು ಕಂಡುಬಂದಿದೆ. ಅಂತೆಯೇ, ಸ್ತ್ರೀತ್ವಾಭಿಮಾನ ಭಗ್ನರಾದ ನಾವೂ, “ಪತಿಗೃಹೇ ತವದಾಸ್ಯ ಮಪಿಕ್ಷಮಂ “ ಎಂಬಂತೆ ನಾವೂ ತಲೆಬಾಗಿ ನಿನ್ನಲ್ಲಿ ಶರಣಾಗಿದ್ದೇವೆ.  

ಭಗವಂತನಾದ ನಿನ್ನ ಕಟಾಕ್ಷವೀಕ್ಷಣಕ್ಕೆ ನಾವು ಪಾತ್ರರಾಗಬೇಕು, ಎನ್ನುತ್ತಾರೆ ಗೋಪಿಯರು! ಹಿಂದಿನ ಪದ್ಯದಲ್ಲಿ ಬಲಭಂಗದಿಂದ ಬಂದ ಕೃಪಣತೆಯನ್ನು ಮುಂದಿಟ್ಟರು. ಇಲ್ಲಿ ಉಪದೇಶ ಲಬ್ಧವಾದ ಜ್ಞಾನ ವಿರಕ್ತಿಗಳಿಂದ ‘ಅಹಂ ಮಮತಾ’ ರೂಪ ದುರಭಿಮಾನವು ನಿವೃತ್ತಿಹೊಂದಿ,  ಅನನ್ಯಾರ್ಹ ಶೇಷತ್ವವನ್ನು ಪ್ರಕಟಿಸುತ್ತಾರೆ. 

ಭಗವಂತನೇ ಉಪಾಯ-ಉಪೇಯವೆಂದು ನಂಬಿರುವವರು ಸಿದ್ದಿ ಸಾಧನ ನಿಷ್ಠರು. ತಾವು ಮಾಡಿದ ತಪ್ಪುಗಳನ್ನು ಮನ್ನಿಸುವ ದಾರಿ ತೋರಬೇಕೆಂದು ಇವರು ಭಗವಂತನನ್ನು ಬೇಡುವರು. ಇವರು ಉಪಾಯಾಂತರ ನಿಷ್ಠರಾಗಿರುವವರಿಗಿಂತಲೂ ಸ್ವಲ್ಪ ಉತ್ತಮ. ಏಕೆಂದರೆ, ಇವರು ಕರ್ಮಪರತಂತ್ರರಲ್ಲ. ಉಪಾಯ-ಉಪೇಯ ಎರಡೂ ಭಗವಂತನೇ ಎಂದು ನಂಬಿರುವವರು. ಇದು ಆಚಾರ್ಯರನ್ನು ಕೊಂಡಾಡುವ ಪರಿಯಲ್ಲಿದೆ. ಆಚಾರ್ಯರು ಭಾಗವತ ಭೂಪತಿಗಳು. ಇಂತಹವರನ್ನು ಶಿಷ್ಯರು ಪ್ರಾರ್ಥಿಸುವರು. ತಮ್ಮ ಮೇಲೆ ಕಟಾಕ್ಷ ಬೀರುವಂತೆ ಬೇಡುವರು. ಅಹಂಕಾರ – ಮಮಕಾರಗಳಿಗೆ ಇದುವರೆಗೂ ದಾಸರಾಗಿದ್ದ ಈ ಮಾನವರು ನಂತರ (ಗರ್ವಭಂಗಾನಂತರ) ಅವುಗಳಿಂದ ದೂರವಾಗಿ ಆಚಾರ್ಯರ ಸುತ್ತಲೂ ಗುಂಪಾಗಿ ನೆರೆಯುವರು, ಆ ಆಚಾರ್ಯರು ಒಮ್ಮೆಲೆ ಕರುಣಿಸಲಾರರು. ಮೊದಲು ಸಾಮಾನ್ಯ ವಿಷಯಗಳನ್ನು ತಿಳಿಸಿ, ನಂತರ ನಿಧಾನವಾಗಿ ಕಷ್ಟವಾದ ಶಾಸ್ತ್ರಾರ್ಥಗಳನ್ನು ತಿಳಿಸುವರು. ಈ ರೀತಿಯಲ್ಲಿ ಆ ಶಿಷ್ಯರ ಪಾಪಗಳು ನಶಿಸಿ ಅವರೆಲ್ಲರ ಇಷ್ಟಾರ್ಥ ಪ್ರಾಪ್ತಿಯಾಗುವುದು. ಆದ್ದರಿಂದ ಆಚಾರ್ಯರ ಅನುಗ್ರಹ ಪಡೆದು ಅವರನ್ನು ಮುಂದಿಟ್ಟುಕೊಂಡು ಭಗವದನುಗ್ರಹಕ್ಕೆ ಪ್ರಯತ್ನಿಸಬೇಕು. ಹಾಗೆ ಅನುಗ್ರಹವಾದಲ್ಲಿ ಅದು ಭಕ್ತನ ಮೇಲೆ ಹಗಲೂ-ರಾತ್ರಿಯೂ ನಿರಂತರವಾಗಿರುತ್ತದೆ. ಭಗವಂತನು ಭಕ್ತ ಧ್ರುವನ ಕೆನ್ನೆಯನ್ನು ತನ್ನ ಶಂಖದಿಂದ ಮೆಲ್ಲನೆ ಸ್ಪರ್ಶಿಸಿದ ಕೂಡಲೇ ಅವನಿಗೆ ಜ್ಞಾನೋದಯವಾಯಿತು. ಅಂತೆಯೇ ಇತರರಿಗೂ, ಈ ಪದ್ಯದಲ್ಲಿ ಗೋದೆಯು ತನ್ನ ಸಖಿಯರೊಡನೆ ಕೃಷ್ಣನಲ್ಲಿ ಅಕಿಂಚನ ಶರಣಾಗತಿ ಮಾಡಿರುವುದನ್ನು ಗುರುತಿಸಬಹುದು. 

ಗಾಯಂತಿ ದೇವಾ: ಕಿಲ ಗೀತಕಾನಿ ಧನ್ಯಾಸ್ತುಯೇ ಭಾರತ ಭೂಮಿ ಭಾಗೇ ।

ಸ್ವರ್ಗಾಪವರ್ಗಾಸ್ಪದ ಮಾರ್ಗ ಭೂತೇ ಭವಂತಿ ಭೂಯಃ ಪುರುಷಾಸುರತ್ವಾತ್ ॥ (ಶ್ರೀವಿಷ್ಣುಪುರಾಣ)

ಈ ಭಾರತ ಭೂಮಿಯಲ್ಲಿ ಹುಟ್ಟಿ ಸತ್ಸಂಗದ ಪ್ರಭಾವದಿಂದ ಕ್ರಮವಾಗಿ ಭಗವಂತನಲ್ಲಿ ನಮ್ಮ ಸರ್ವಾತ್ಮಭಾರವನ್ನೂ ಅರ್ಪಿಸಿ, ದೇಹಾವಸಾನದಲ್ಲಿ ಅವನನ್ನೇ ಸೇರಿ, ಅವನ ಕಟಾಕ್ಷದಿಂದ ಸುಖಿಸುವ ಅವಕಾಶವನ್ನು ಉಪಯೋಗಿಸಿಕೊಳ್ಳದವನ ಜನ್ಮ ವ್ಯರ್ಥವೆಂಬುದೇ ಈ ಪಾಶುರದ ಧ್ವನಿ ವಿಶೇಷ. 

ಮಹಿಪತಿದಾಸರ ಈ  ರಚನೆ ಸೂಕ್ತವೆನಿಸುತ್ತದೆ :

ಇನ್ನೇನಿನ್ನೇನು ಎನಗಿನ್ನು ಇನ್ನೇನಿನ್ನೇನು ||ಧ್ರುವ||

ಎನ್ನೊಳು ಗುರು ತನ್ನ ಮರ್ಮವ ತೋರಿದ ಇನ್ನೇನಿನ್ನೇನು ||೧||

ಮುನ್ನಿನ ಕರ್ಮವು ನಿರ್ಮೂಲವಾಯಿತು ಇನ್ನೇನಿನ್ನೇನು ||೨||

ಎನ್ನೊಳು ಘನ ಬ್ರಹ್ಮವಸ್ತು ತಾನಾಯಿತು ಇನ್ನೇನಿನ್ನೇನು ||೩||

ನಾನು ನಾನೆಂಬುದು ನೆಲೆಯು ತಾ ತಿಳಿಯಿತು ಇನ್ನೇನಿನ್ನೇನು||೪||

ಏನೆಂದು ತಿಳಿಯದ ಅನುಮಾನಗಳೆಯಿತು ಇನ್ನೇನಿನ್ನೇನು ||೫||

ಪರಮತತ್ವದ ಗತಿ ನೆಲೆನಿಭ ತೋರಿತು ಇನ್ನೇನಿನ್ನೇನು ||೬||

ಎನ್ನೊಳಾತ್ಮ ಖೂನ ಕುರುಹುವು ತಿಳಿಯಿತು ಇನ್ನೇನಿನ್ನೇನು ||೭||

ಕನಸುಮನಸು ಎಲ್ಲ ನಿನ್ನ ಸೇವ್ಯಾಯಿತು ಇನ್ನೇನಿನ್ನೇನು ||೮|

ಹಗಲಿರುಳೆಂಬುದು ಹಗರಣವಾಯಿತು ಇನ್ನೇನಿನ್ನೇನು ||೯||

ಅರಹು ಮರಹಿನ ಇರವು ಒಳಿತಾಗಿ ತಿಳಿಯಿತು ಇನ್ನೇನಿನ್ನೇನು ||೧೦||

ಭಾವದ ಬಯಲಾಟ ನಿಜವಾಗಿದೋರಿತು ಇನ್ನೇನಿನ್ನೇನು ||೧೧||

ಜೀವಶಿವದ ಗತಿ ಸೋಹ್ಯವು ತಿಳಿಯಿತು ಇನ್ನೇನಿನ್ನೇನು ||೧೨||

ಆಯವುದಾಯವು ಸಾಹ್ಯವುದೋರಿತು ಇನ್ನೇನಿನ್ನೇನು ||೧೩||

ಜೀವನ ಜಾತಿಯ ಕೀಲವು ತಿಳಿಯಿತು ಇನ್ನೇನಿನ್ನೇನು ||೧೪||

ಜನ್ಮಮರಣದಾ ಜಂತ್ರವು ಮುರಿಯಿತು ಇನ್ನೇನಿನ್ನೇನು ||೧೫||

ಸಂದೇಹಸಂಕಲ್ಪಸೂತ್ರವು ಹರಿಯಿತು ಇನ್ನೇನಿನ್ನೇನು ||೧೬||

ಮರಣದ ಗತಿಗಳ ಮಂತ್ರವು ತಿಳಿಯಿತು ಇನ್ನೇನಿನ್ನೇನು ||೧೭||

ಸುಷುಮ್ನನಾಳದ ಸೂಕ್ಷ್ಮವುದೋರಿತು ಇನ್ನೇನಿನ್ನೇನು ||೧೮||

ಇಮ್ಮನವಿದ್ದದ್ದು ಒಮ್ಮನವಾಯಿತು ಇನ್ನೇನಿನ್ನೇನು ||೧೯||

ಆಧಾರಚಕ್ರದ ಹಾದಿಯು ತಿಳಿಯಿತು ಇನ್ನೇನಿನ್ನೇನು ||೨೦||

ಸದ್ಗುರು ಕೃಪೆಯಾದ ಸಾಧನವಾಯಿತು ಇನ್ನೇನಿನ್ನೇನು ||೨೧||

ಭವಕೆ ಗುರಿಯಾಗುವ ಬಾಧೆಯು ತಿಳಿಯಿತು ಇನ್ನೇನಿನ್ನೇನು ||೨೨||

ಅಂತರಾತ್ಮದ ಸೂತ್ರಾಂತ್ರವು ತಿಳಿಯಿತು ಇನ್ನೇನಿನ್ನೇನು ||೨೩||

ಮಹಿಪತಿ ಜೀವನ ಪಾವನವಾಯಿತು ಇನ್ನೇನಿನ್ನೇನು ||೨೪||

ಎನ್ನೊಳು ಭಾಸ್ಕರ ಗುರುತಾನೆಯಾದನು ಇನ್ನೇನಿನ್ನೇನು ||೨೫||

(ವಿಷಯ ಸಂಗ್ರಹ : “ತಿರುಪ್ಪಾವೈ ರಸಸ್ವಾಧಿನಿ” – ಬರೆದವರು ವಿದ್ವಾನ್ ವೇದಾನ್ತ ಸಾರಜ್ಞ

   ಶ್ರೀ ಎಸ್. ಕೃಷ್ಣಾತಾತಾಚಾರ್ಯ )

(1) ಗಮಕ ಕವಿತಾ ವನಜ ಭಾಸ್ಕರ , ಗಮಕ ರತ್ನಾಕರ ಶ್ರೀಯುತ ಬಿ.ಎಸ್ .ಎಸ್ ಕೌಶಿಕ್  ರವರ  ಶ್ರೀಮದಾಂಡಾಳ್ ಮಹಾ ವೈಭವಂ -ತಿರುಪ್ಪಾವೈ – ಮೂಲ, ಕನ್ನಡ ತಾತ್ಪರ್ಯ , ಷಟ್ಪದಿ, ಭಾವಾರ್ಥ , ಚೌಪದಿ )

Tiruppavai series

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.