close logo

ಕಥಾಮಾಲಿಕೆ: ಗಾಲವನ ಗುರುದಕ್ಷಿಣೆ – ಭಾಗ ೩

ಗುರುವಿಗೆ ದಕ್ಷಿಣೆಯನ್ನು ಅರ್ಪಿಸಲೇ ಬೇಕೆಂದು ಒತ್ತಾಯ ಮಾಡಿದ ಗಾಲವನಿಗೆ, ಅವರು ಕೇಳಿದ್ದನ್ನು ತಂದೊಪ್ಪಿಸುವುದು ಸುಲಭವಾದ ಕೆಲಸವೇನಾಗಿರಲಿಲ್ಲ. ಅವನು ತನ್ನ ಮನಸ್ಸಿನ ಆಳಗಳಲ್ಲಿ ಇಳಿದು ನ್ಯಾಯ ಪರೀಕ್ಷಣೆ, ಧರ್ಮ ಸಂಧಾನ ಮತ್ತು ಸಾಮಾಜಿಕ ಕಟ್ಟುಪಾಡುಗಳ ಅವಲೋಕನ ನಡೆಸಬೇಕಾಗುತ್ತದೆ. ಕೇವಲ ಗುರುದಕ್ಷಿಣೆಯನ್ನೊಪಿಸಿ ಋಣ ಮುಕ್ತರಾಗಬಹುದೇ? ವಚನ ಪರಿಪಾಲನೆಗೆ ನ್ಯಾಯ-ಧರ್ಮಗಳ ಕೈ ಬಿಡುವುದು ಸರಿಯೆ? ಸಮಯ ಪ್ರಜ್ಞೆ ಮತ್ತು ಪರಿಸ್ಥಿತಿಯ ಸೂಕ್ಷ್ಮಗಳ ಸಂತುಲನೆ ಹೇಗೆ ಮಾಡಬೇಕೆಂದು ತೋರಿಸುವ ಗಾಲವನ ಕಥೆಯ ಮೊದಲೆರೆಡು ಅಂಕಣಗಳು ಈ ಕೆಳಗೆ ನೀಡಿರುವ ಕೊಂಡಿಯಲ್ಲಿ ಸಿಗುತ್ತವೆ. 

ಭಾಗ ೧ : ​​https://www.indica.today/bharatiya-languages/kannada/galav-guru-dakshina-i/

ಭಾಗ ೨ : https://www.indica.today/bharatiya-languages/kannada/galav-guru-dakshina-ii/

ಯಯಾತಿ ಮಹಾರಾಜನ ದಾನವನ್ನು ನಿರಾಕರಿಸುತ್ತ, ‘ಆಗದು’ ಎಂದು ಏಕಚಿತ್ತದಲ್ಲಿ ನುಡಿದು, ರಾಜನ ಸಭೆಯಿಂದ ನಿರ್ಗಮಿಸಲು ಸಿದ್ದನಾಗಿ ಎದ್ದು ನಿಂತ, ಗಾಲವ. ಅವನನ್ನು ಕಂಡ ಸಭೀಕರು ಸ್ಥಂಭೀಭೂತರಾದರು. ಒಬ್ಬೊಬ್ಬರ ಮುಖದಲ್ಲೂ ಒಂದೊಂದು ಭಾವ. ಇದನ್ನು ಗಮನಿಸಿದ ಗರುಡನು, ಗಾಲವನನ್ನು ಉದ್ದೇಶಿಸಿ ಮಾತನಾಡಿದನು. 

“ಗಾಲವ, ದುಡುಕಬೇಡ. ಸಮಾಧಾನದಿಂದ ಯೋಚಿಸು. ನಿನ್ನ ಆಲೋಚನೆಗಳ ಹರಿವನ್ನು ನಾನು ಬಲ್ಲೆ. ಮಾಧವಿಯ ಮೂಲಕ ಗುರುದಕ್ಷಿಣೆಯನ್ನು ಸಂಪಾದಿಸುವುದಕ್ಕೆ ನಿನ್ನ ಮನಸ್ಸು ಹಿಂಜರಿಯುತ್ತಿದೆಯಲ್ಲವೇ? ರಾಜ ಯಯಾತಿಯ ಮಾತುಗಳನ್ನು ನೀನು ಸೂಕ್ಷ್ಮವಾಗಿ ಆಲಿಸಲಿಲ್ಲ ಎಂದು ಭಾವಿಸುತ್ತೇನೆ. ಮಾಧವಿಯ ಪಾಲಿಗೆ ಒದಗಿ ಬಂದಿರುವಂತಹ ವಿಧಿ, ಪ್ರಪಂಚಕ್ಕೆ ವರವಾಗಿ ಕಂಡರೂ ಅವಳ ಪಾಲಿಗೆ ಅದು ಶಾಪವೇ ಸರಿ. ಹೀಗಿರುವಾಗ ತಂದೆಯಾದವನು ಬಹಳ ಯೋಚಿಸಿ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಪುತ್ರಾಪೇಕ್ಷೆಯಿರುವ ನಾಲ್ಕು ಪ್ರತ್ಯೇಕ ರಾಜರಿಗೆ ಸ್ವಯಂ ರಾಜನೇ ತನ್ನ ಮಗಳಾದ ಮಾಧವಿಯನ್ನು ನಾಲ್ಕು ಭಾರಿ ಧಾರೆ ಎರೆದು ಕೊಡಲಾರ. ಏಕೆಂದರೆ, ಅದು ಅವನ ಪ್ರಜೆಗಳಿಗೆ ತಪ್ಪು ಸಂದೇಶವನ್ನು ತಲುಪಿಸುತ್ತದೆ. ಆಗ ಆ ರಾಜ್ಯದ ಸಾಮಾಜಿಕ ವ್ಯವಸ್ಥೆ ಹದಗೆಡುತ್ತದೆ. ಯಯಾತಿಗಿರುವುದು ಎರಡೇ ದಾರಿ. ಒಂದು ಮಾಧವಿಯನ್ನು ಒಬ್ಬ ಯೋಗ್ಯ ವರನಿಗೆ ಕೊಟ್ಟು ಮದುವೆ ಮಾಡಿಕೊಡುವುದು, ಇಲ್ಲವೇ ನಿನ್ನಂತ ಧರ್ಮಾನುಯಾಯಿಯಾದ  ವ್ಯಕ್ತಿಗೆ ದಾನವಾಗಿ ಕೊಡುವುದು. ಅವಳ ವರದ ಕಾರಣದಿಂದಾಗಿ ಅವಳ ಪರಿಣಯ ಸಂಕಷ್ಟಕ್ಕೆ ಸಿಲುಕಿದೆ. ನೀನಾದರೋ ಬ್ರಾಹ್ಮಣ ವಟು. ಮಹಾತೇಜಸ್ವಿ, ಸತ್ಯನಿಷ್ಠ. ನಿನ್ನಂತವರಿಗೆ ಅವಳ ಜವಾಬ್ದಾರಿಯನ್ನು ಕೊಟ್ಟರೆ, ಮಾಧವಿಯ ಸೌಖ್ಯ ಖಚಿತ. ಸಾಧಾರಣವಾಗಿ ಜನರು ನಿನ್ನಂತ ಶ್ರೇಷ್ಠರನ್ನು ಗೌರವಿಸುವರೇ ಹೊರತು ನಿನ್ನ ಅಥವಾ ನಿನಗೆ ಸಂಬಂಧಪಟ್ಟವರೊಡನೆ ಅವ್ಯವಹಾರ ನಡೆಸುವುದಿಲ್ಲ. ಮಾಧವಿಯನ್ನು ನಿನಗೆ ದಾನವಾಗಿ ಕೊಟ್ಟರೆ, ರಾಜನ ಗೌರವಕ್ಕೂ ಧಕ್ಕೆ ಬರುವುದಿಲ್ಲ, ನಿನ್ನ ಮೂಲಕ ಆತ ತನ್ನ ಮಗಳ ಸೌಖ್ಯವನ್ನು ಭದ್ರಗೊಳಿಸುತ್ತಾನೆ. ಆಗ ರಾಜನು ತನ್ನ ಮಗಳ ಜವಾಬ್ದಾರಿಯನ್ನು ಪರಿಪೂರ್ಣವಾಗಿ ನಿಭಾಯಿಸಿದಂತಾಗುತ್ತದೆ. ಇನ್ನು ವಿಶ್ವಾಮಿತ್ರರ ಬಗ್ಗೆ ನಿನ್ನಲ್ಲಿರುವ ದ್ವಂದ್ವವನ್ನು ನಾನು ಬಲ್ಲೆ. ಗಾಲವ, ಬ್ರಹ್ಮಜ್ಞಾನವನ್ನು ಸಾಧಿಸಬಲ್ಲ ವಿಶ್ವಾಮಿತ್ರರಿಗೆ ಎಂಟು ನೂರು ಶ್ಯಾಮ ಕರ್ಣದ, ಶಶಿವರ್ಣದ ಕುದುರೆಗಳನ್ನು ಸಂಪಾದಿಸುವುದು ಕಷ್ಟವಲ್ಲ ಎಂಬುದನ್ನು ನೀನು ಸಹ ತಿಳಿದಿರುವೆ. ಆದರೆ, ನಿನ್ನನ್ನು ಈ ಕೆಲಸಕ್ಕೆ ನಿಯೋಜಿಸಿದ್ದಾರೆ ಎಂದ ಮೇಲೆ ಅದರ ಹಿಂದೊಂದು ಬಲವಾದ ಕಾರಣವಿರುತ್ತದೆ. ಸಮಯ ಕಳೆದಂತೆ ಅವರ ಇಂಗಿತವು ಪ್ರಪಂಚಕ್ಕೆ ತಂತಾನೇ ಗೋಚರವಾಗುತ್ತದೆ. ನಿಧಾನಿಸು.” ಎಂದನು. ಗರುಡನ ಮಾತುಗಳು ಸಭೀಕರನ್ನೂ ಸಮಾಧಾನ ಪಡಿಸಿತು. ಅವರೆಲ್ಲರು ಗಾಲವನ ನ್ಯಾಯ ಪರೀಕ್ಷಣೆಯನ್ನು ಕಂಡು ಅವನನ್ನು ಗೌರವ ಭಾವದಿಂದ ನೋಡಲಾರಂಭಿಸಿದರು. ಗಾಲವ ಆಸೀನನಾಗಿ ಗರುಡನು ಸೂಚಿಸಿದ ದಿಕ್ಕಿನಲ್ಲಿ ಯೋಚಿಸ ತೊಡಗಿದನು. ಯಯಾತಿಯ ಪಕ್ಕದಲ್ಲಿಯೇ ನಿಂತಿದ್ದ ಮಾಧವಿಯ ಮುಖವನ್ನೊಮ್ಮೆ ನೋಡಿದನು. ಅವಳ ಮುಖದ ಶಾಂತ ಭಾವ ಅವಳ ಮನಸ್ಸಿನ ನಿಶ್ಚಲತೆಯನ್ನು ಪ್ರತಿಬಿಂಬಿಸುತ್ತಿತ್ತು. ಆಕೆ ಎಲ್ಲವನ್ನು ಕೇಳುತಿದ್ದಳು, ಆದರೂ ಅವಳ ಮುಖದಲ್ಲಿ ಕೊಂಚವೂ ಕೋಪವಾಗಲಿ ಅಥವಾ ಇರುಸುಮುರಿಸಾಗಲಿ ಕಾಣಿಸುತ್ತಿರಲಿಲ್ಲ. ಅವಳ ಮೌನವೇ ಅವಳ ಸಮ್ಮತಿಯ ಲಕ್ಷಣವೆಂದು ಭಾವಿಸಿ ತನ್ನ ನಿರ್ಧಾರವನ್ನು ತಿಳಿಸಿದನು. “ರಾಜನ್, ಪಕ್ಷಿ ರಾಜ ಗರುಡ ನನ್ನ ಮಿತ್ರನಷ್ಟೇ ಅಲ್ಲ, ನನ್ನ ಮಾರ್ಗದರ್ಶಿಯೂ ಔದು. ಅವನ ಸಲಹೆ ಉಚಿತವಾದದ್ದು ಎಂದು ನನ್ನ ಭಾವನೆ. ಆದ್ದರಿಂದ ನಿನ್ನ ಇಚ್ಛೆಯಂತೆಯೇ ಆಗಲಿ.” ಎಂದು ಹೇಳಿ ಮಾಧವಿಯನ್ನು ನೋಡಿದನು. ಅವಳಲ್ಲಿ ವಿರೋಧವೇ ಇರಲಿಲ್ಲ. ಅದೇ ಶಾಂತಭಾವ ತುಳುಕುತ್ತಿತ್ತು. ತದನಂತರ, ಸಭೀಕರೆಲ್ಲರು ಒಬ್ಬಬ್ಬರಾಗಿ ನಿರ್ಗಮಿಸಿದರು. ಆಗ, ಮಾಧವಿ, ತನ್ನ ತಂದೆ ಯಯಾತಿ ಮಹಾರಾಜ, ಪಕ್ಷಿರಾಜ ಗರುಡ ಮತ್ತು ವಟುಶ್ರೇಷ್ಠನಾದ ಗಾಲವನನ್ನು ಉದ್ದೇಶಿಸಿ ತನ್ನ ಸಮ್ಮತಿಯನ್ನು ಸೂಚಿಸಿದಳು.

ಯಯಾತಿ ಮಹಾರಾಜ, ಗಾಲವನಿಗೆ  ಮಾಧವಿಯನ್ನು  ದಾನವಾಗಿ ಕೊಡುವ ವಿಧಿಯನ್ನು ನೆರವೇರಿಸಿದನು. ನಾಲ್ಕು ಮಕ್ಕಳಾದ ನಂತರ ಪುನಃ ಕನ್ಯಾವಸ್ಥೆಯಲ್ಲಿರುವ ಮಾಧವಿಯನ್ನು, ಅವಳ ತಂದೆ ಯಯಾತಿಗೇ ತಂದೊಪ್ಪಿಸುವಂತೆ ಗಾಲವನೂ ಸಹ ಯಯಾತಿಗೆ ವಚನವಿತ್ತನು. ಗಾಲವ ಮತ್ತು ಮಾಧವಿ ಅರಮನೆಯಿಂದ ನಿರ್ಗಮಿಸಿ ಉತ್ತರ ದಿಕ್ಕಿನಲ್ಲಿ ಪ್ರಯಾಣ ಬೆಳೆಸಿದರು. ಗರುಡ, ಅವರೆಲ್ಲರ ಅನುಜ್ಞೆ ಪಡೆದು ಸ್ವಸ್ಥಾನಕ್ಕೆ ತೆರಳಿದನು.  

ಗಾಲವನಿಗೆ ಅಯೋಧ್ಯ ನಗರದ ಅರಸ ಹರ್ಯಾಶ್ವ ನ ಬಳಿ ಈ ವಿಶೇಷ ತಳಿಯ ಕುದುರೆಗಳಿರುವ ಮಾಹಿತಿ ದೊರಕಿತು. ಹರ್ಯಾಶ್ವ ಇಕ್ಷ್ವಾಕು ವಂಶದ ರಾಜ.  ಅವನು, ಮಹಾವೀರ, ಯೋದ್ಧ, ಧರ್ಮಪರಾ ಮತ್ತು ದಾನಿ ಎಂಬ ಖ್ಯಾತಿಗೆ ಪಾತ್ರನಾಗಿದ್ದರು ವಂಶೋದ್ದಾರಕನಾದ ಪುತ್ರನಿಲ್ಲದೆ ಕೊರಗುತ್ತಿದ್ದನು. ಆದ್ದರಿಂದ, ಮೊದಲಿಗೆ ಅವರಿಬ್ಬರು ಅಯೋಧ್ಯೆಗೇ ಹೋದರು. ಮಾಧವಿ ಮತ್ತು ಗಾಲವರು ಅರಮನೆಗೆ ಬಂದಾಗ ಅವರಿಗೆ ಉತ್ತಮವಾದ ಅತಿಥಿ ಸತ್ಕಾರವನ್ನಿತ್ತನು. ಗಾಲವ, ಇರುವ ಸಂಗತಿಯನ್ನೆಲ್ಲ ವಿಸ್ತಾರವಾಗಿ ಹೇಳಿಕೊಂಡನು. ಮಾಧವಿಯ ವರವನ್ನು ಅರಿತ ಹರ್ಯಾಶ್ವನಿಗೆ ಅವಳಲ್ಲಿ ತನಗೊಬ್ಬ ಮಗನಾದರೆ, ತನ್ನ  ವಂಶವು ಧೀಮಂತವಾಗಿ ಬೆಳೆಯುತ್ತದೆ ಎಂಬ ಆಸೆಯುಟ್ಟಿತು. ಆದರೆ, ಗಾಲವನಿಗೆ ಅಗತ್ಯವಿರುವ ಎಂಟು ನೂರು ಕುದುರೆಗಳು ಅವನಲ್ಲಿ ಇರುವುದಿಲ್ಲ. ಅವನು ಗಾಲವನಲ್ಲಿ ವಿನಮ್ರವಾಗಿ ಬೇಡಿಕೊಂಡನು, “ಹೇ ಬ್ರಾಹ್ಮಣ ಶ್ರೇಷ್ಠ, ನನ್ನ ಬಳಿ, ನೀನು ಕೇಳಿರುವಂತಹ ಶ್ಯಾಮ ಕರ್ಣದ ಮತ್ತು ಶಶಿವರ್ಣದ, ವಿಶೇಷ ತಳಿಯ ಕುದುರೆಗಳು ಕೇವಲ ಇನ್ನೂರು ಮಾತ್ರ ಲಭ್ಯವಿದೆ. ಇವುಗಳನ್ನೇ ಕನ್ಯಾಶುಲ್ಕವಾಗಿ ಒಪ್ಪಿ ಮಾಧವಿಯನ್ನು ನನಗೆ ವಧುವಾಗಿ ಧಾರೆ ಎರೆದು ಕೊಡಬೇಕೆಂದು ಬೇಡಿಕೊಳ್ಳುವೆ. ನನಗೊಬ್ಬ ಮಗನಾದ ನಂತರ ಪುನಃ ಕನ್ಯಾವಸ್ಥೆಯಲ್ಲಿರುವ ಮಾಧವಿಯನ್ನು ನಿನಗೇ ಒಪ್ಪಿಸುವೆ. ಧಯವಿಟ್ಟು ನೀವು ನಿರಾಕರಿಸಬಾರದು.” ಎಂದು. ಹರ್ಯಾಶ್ವನಿಗೆ ಪತ್ನಿಯಾಗಲು ಮಾಧವಿಯೂ ತನ್ನ ಒಪ್ಪಿಗೆಯನ್ನು  ಸೂಚಿಸಿದಳು. ಅಂತೆಯೇ, ಹರ್ಯಾಶ್ವನಿಂದ ಇನ್ನೂರು ಕುದುರೆಗಳನ್ನು ಪಡೆದು, ಗಾಲವ ತನ್ನ ಗುರುಗಳಿಗೆ ಒಪ್ಪಿಸಬೇಕಾದ ಗುರುದಕ್ಷಿಣೆಯನ್ನು ಒಟ್ಟುಗೂಡಿಸಲು ಮುಂದಾದನು. ಹರ್ಯಾಶ್ವ ಮತ್ತು ಮಾಧವಿಗೆ ವಸುಮನಸ್ ಎಂಬ ಮಗನ ಜನನವಾಯಿತು. 

ವಸುಮನಸ್ ನ ಜನನವಾದ ನಂತರ, ಮಾದವಿಯನ್ನು ಮತ್ತು ಕುದುರೆಗಳನ್ನು ಬಹಳ ವಿಧೇಯ ಭಾವದಿಂದ ರಾಜ ಹರ್ಯಾಶ್ವ ಗಾಲವನಿಗೆ ಒಪ್ಪಿಸಿದನು. ಅಲ್ಲಿಂದ ಹೊರಟು, ಗಾಲವ ಮಾಧವಿಯನ್ನು ಕುರಿತು, “ಮಾಧವಿ, ನಾವೀಗ ಕಾಶಿಯನ್ನು ಆಳುತ್ತಿರುವ ರಾಜ ದಿವೋದಶ ನ ಬಳಿ ಹೋಗಬೇಕಾಗಿದೆ. ಆತನು ಸಹ ಪುತ್ರನಿಗಾಗಿ ಪರಿತಪಿಸುತ್ತಿದ್ದಾನೆಂದು ಕೇಲ್ಪಟ್ಟಿರುವೆ. ದಿವೋದಶ, ಸತ್ಯವಂತ, ವಿವೇಕಿ ಮತ್ತು ಧರ್ಮಜ್ಞನು. ಅವನು ನಿನ್ನನ್ನು ಪತ್ನಿಯಾಗಿ ಪಡೆದರೆ ಬಹಳ ಪ್ರೀತಿ-ಗೌರವಗಳಿಂದ ನೋಡಿಕೊಳ್ಳುತ್ತಾನೆ. ಅವನ ಬಳಿ ಹೋಗಲು ನಿನ್ನ ಒಪ್ಪಿಗೆಯಿದೆಯೇ?” ಎಂದು ಕೇಳಿದನು. ಮಾಧವಿ ಇದಕ್ಕೆ ತನ್ನ ಸಮ್ಮತಿಯನ್ನು ಸೂಚಿಸಿದಳು. ಆ ಸಮಯಕ್ಕಾಗಲೇ ಗಾಲವ ಮತ್ತು ಮಾಧವಿಯ ಬಗ್ಗೆ ಹಲವಾರು ರಾಜರುಗಳಿಗೆ ಸುದ್ದಿ ತಲುಪಿತ್ತು. 

ದಿವೋದಶ, ಗಾಲವ ಮತ್ತು ಮಾಧವಿಯನ್ನು ಆದರಪೂರ್ವಕವಾಗಿ ಸ್ವಾಗತಿಸಿ ಸತ್ಕರಿಸಿದನು. ಗಾಲವನ ಗುರುದಕ್ಷಿಣೆ ಮತ್ತು ಮಾಧವಿಯ ವರದ ಬಗ್ಗೆ ಅವನಿಗಾಗಲೆ ತಿಳಿದಿರುತ್ತದೆ. ದಿವೋದಶ ಗಾಲವನನ್ನು ಕುರಿತು, “ಗಾಲವ, ನಿನಗೆ ಅಗತ್ಯವಿರುವ ವಿಶೇಷ ತಳಿಯ ಕುದುರೆಗಳು ನನ್ನ ಬಳಿ ಕೇವಲ ಇನ್ನೂರು ಮಾತ್ರ ಲಭ್ಯವಿದೆ. ನೀನು ಮಾಧವಿಯನ್ನು ನನಗೆ ಮದುವೆ ಮಾಡಿಕೊಟ್ಟರೆ, ನಾನು ಕನ್ಯಾಶುಲ್ಕವಾಗಿ ಆ ಇನ್ನೂರು ಕುದುರೆಗಳನ್ನು ನಿನಗೆ ನೀಡುವೆ ಮತ್ತು ಮಾಧವಿಯಿಂದ ಮಗನನ್ನು ಪಡೆದ ನಂತರ ಅವಳನ್ನು ಪುನಃ ನಿನಗೇ ಒಪ್ಪಿಸುವೆ. ನನ್ನ ಪತ್ನಿಯಾಗಿ ಮಾಧವಿಯು ನನ್ನ ಪ್ರೀತಿ, ಔದಾರ್ಯ ಮತ್ತು ಗೌರವಕ್ಕೆ ಪಾತ್ರಳಾಗಿ ಸುಖದಿಂದಿರುತ್ತಾಳೆ ಎಂದು ಭಾಷೆ ನೀಡುತ್ತೇನೆ.” ಎಂದನು. ಇದನ್ನು ಕೇಳಿದ ಮಾಧವಿ ದಿವೋದಶನನ್ನು ವರಿಸಲು ಒಪ್ಪಿದಳು. ಅವರಿಗೆ ಪ್ರತರ್ದನ ಎಂಬ ಮಗನಾದನು. ಗಾಲವನಿಗೆ ಇನ್ನೂರು ಶ್ಯಾಮ ಕರ್ಣದ ಮತ್ತು ಶಶಿವರ್ಣದ ವಿಶೇಷ ತಳಿಯ ಕುದುರೆಗಳು ದೊರೆತವು. 

ಗಾಲವನಲ್ಲಿ, ನಾನ್ನೂರು ವಿಶೇಷ ತಳಿಯ ಕುದುರೆಗಳಿದ್ದವು. ಅತ್ತ ಮಾಧವಿ ಅರಮನೆಯಲ್ಲಿದ್ದಾಗ ಗಾಲವ, ತನ್ನ ಲೋಕಜ್ಞಾನವನ್ನು ವಿಸ್ತರಿಸಿಕೊಂಡನು. ಹಲವಾರು ಹೊಸ ಹೊಸ ವಿಷಯಗಳನ್ನು ತಿಳಿದುಕೊಂಡನು. ಅವನಲ್ಲಿ ವಿವೇಕ ಮತ್ತು ಪ್ರಾಪಂಚಿಕ ಜ್ಞಾನ ಜಾಗೃತವಾಯಿತು. ಅವನ ಲಕ್ಷ್ಯ ಕುದುರೆಗಳನ್ನು ಸಂಪಾದಿಸಿ ಗುರುಗಳಿಗೊಪ್ಪಿಸುವುದಷ್ಟೇ ಹೊರತು ಬೇರಾವ  ಆಲೋಚನೆಗಳೂ ಅವನ ಮನಸ್ಸಿನಲ್ಲಿ ಸಿಲುಕುತ್ತಿರಲಿಲ್ಲ. ಆದ್ದರಿಂದ, ಮಾಧವಿಯನ್ನು ತನ್ನ ಜವಾಬ್ದಾರಿ ಎಂದು ಭಾವಿಸಿ ಅವಳ ಸೌಖ್ಯ, ಕ್ಷೇಮ ಮತ್ತು  ಸಂತೋಷದ ಬಗ್ಗೆ ಕನ್ಯಾದಾನ ಮಾಡಿದ ಒಬ್ಬ ತಂದೆಯಂತೆಯೇ ಖಾಳಜಿವಹಿಸುತ್ತಿದ್ದನು.     

ದಿವೋದಶನಿಂದ ಅನುಜ್ಞೆ ಪಡೆದು ಪುನಃ ಮಾಧವಿ ಮತ್ತು ಗಾಲವರಿಬ್ಬರು ಭೋಜ ರಾಜ್ಯದ ಅರಸ ಉಶೀನರನ ಬಳಿ ಹೋದರು. ಉಶೀನರನು ಸಹ ಹರ್ಯಾಶ್ವ ಮತ್ತು ದಿವೋದಶರಂತೆ ಪುತ್ರ ಸಂತಾನತಪ್ತನಾಗಿದ್ದನು. ಇವರನ್ನು ಕಂಡೊಡನೆ ಅವನಿಗೆ ತನ್ನ ಭಾಗ್ಯದ ಬಾಗಿಲು ತೆರೆದಷ್ಟು ಸಂತೋಷವಾಯಿತು. ಗಾಲವ ಅವನಿಗೆ ಇರುವ ಸಂಗತಿಯನ್ನೆಲ್ಲ ಹೇಳಿದಾಗ, ಉಶೀನರ, “ಬ್ರಾಹ್ಮಣ ಶ್ರೇಷ್ಠನೇ, ನಿನ್ನ ಮತ್ತು ಮಾಧವಿಯ ಬಗ್ಗೆ ನಾನಾಗಲೇ ಕೇಲ್ಪಟ್ಟಿದ್ದೇನೆ. ನನಗೊಬ್ಬ ಮಗನ ಅಗತ್ಯವಿದ್ದು, ನೀವು ನನ್ನ ಬಳಿ ಬಂದರೆ ಅಹೋಭಾಗ್ಯ ಎಂಬ ಆಲೋಚನೆ ನನ್ನ ಮನಸ್ಸಿಗೆ ಆಗಾಗ್ಗೆ ಬರುತ್ತಲೇ ಇತ್ತು. ಜೊತೆಗೆ, ನಿನಗೆ ಅಗತ್ಯವಿರುವ ಕುದುರೆಗಳೂ ಸಹ ನನ್ನ ಬಳಿಯಿವೆ, ಆದರೆ ಅವುಗಳ ಸಂಖ್ಯೆ ಕೇವಲ ಇನ್ನೂರು ಅಷ್ಟೇ. ಅವುಗಳನ್ನು ನಿನಗೆ ಕನ್ಯಾಶುಲ್ಕವಾಗಿ ನೀಡಿ, ಮಾಧವಿಯನ್ನು ನನ್ನ ಧರ್ಮಪತ್ನಿಯಾಗಿ ಸ್ವೀಕರಿಸಿ ಔದಾರ್ಯದಿಂದ ಕಾಣುವೆ.” ಎಂದು ಹೇಳಿದನು. ಇದಕ್ಕೆ ಮಾಧಾವಿಯೂ ಸಮ್ಮತಿಸಿದಳು. ಅವರಿಗೆ ಶಿವಿ ಎಂಬ ಪುತ್ರನ ಜನನವಾಯಿತು. 

ಶಿವಿಯ ಜನನವಾದ ನಂತರ ಪುನಃ ಕನ್ಯಾವಸ್ಥೆಯಲ್ಲಿರುವ ಮಾಧವಿಯನ್ನು ಮತ್ತು ಕುದುರೆಗಳನ್ನು ಉಶೀನರ ಗಾಲವನಿಗೊಪ್ಪಿಸಿದನು. ಬೇರಾವ ರಾಜನ ಬಳಿಯೂ ಈ ರೀತಿಯ ಚಂದ್ರ ಬಿಂಬದ ಮೈಬಣ್ಣವಿರುವ, ಒಂದು ಕರ್ಣ ಮಾತ್ರ ಕಪ್ಪಗಿರುವ ಕುದುರೆಗಳು ಲಭ್ಯವಿಲ್ಲವೆಂದು ಗಾಲವನಿಗೆ ತಿಳಿದುಬಂದಿತ್ತು. ದಾರಿ ಕಾಣದೆ ಮತ್ತೆ ತನ್ನ ಗೆಳೆಯ ಮತ್ತು ಮಾರ್ಗದರ್ಶಕನಾದ ಗರುಡನನ್ನು ಭೇಟಿ ಮಾಡಿ ಮುಂದೇನು ಮಾಡಬೇಕೆಂದು ವಿಚಾರಿಸಿದನು. ಆಗ ಗರುಡ, “ಗಾಲವ, ನಿನ್ನ ಕಾರ್ಯ ದಕ್ಷತೆಯನ್ನು ಮೆಚ್ಚಿದೆ. ಇದರಲ್ಲಿ ಮಾಧವಿಯ ಪಾತ್ರವೂ ಗಮನಾರ್ಹವಾದದ್ದು. ಗಾಲವ, ಸಮಸ್ತ ಭೂಮಂಡಲದಲ್ಲಿ, ಈ ರೀತಿಯ ಕುದುರೆಗಳು ಕೇವಲ ಆರು ನೂರು ಮಾತ್ರ ಲಭ್ಯವಿದೆಯಷ್ಟೇ. ಇಲ್ಲದಿರುವುದನ್ನು ನೀನು ಹೇಗೆ ತಾನೆ ಪಡೆಯಬಲ್ಲೆ? ಆದ್ದರಿಂದ ಈ ಆರು ನೂರು ಕುದುರೆಗಳನ್ನು ಮತ್ತು ಮಾಧವಿಯನ್ನು ಮೊದಲಿಗೆ ವಿಶ್ವಾಮಿತ್ರರ ಬಳಿಯೇ ಕರೆದುಕೊಂಡು ಹೋಗೋಣ. ಅವರೇ ಮುಂದೇನು ಮಾಡಬೇಕೆಂದು ಹೇಳುತ್ತಾರೆ.” ಎಂದು ಸಲಹೆ ನೀಡಿದನು.    

ಗಾಲವ, ಮಾಧವಿ ಮತ್ತು ಗರುಡರು, ವಿಶ್ವಾಮಿತ್ರರು ಬಯಸಿದಂತೆಯೇ ಇರುವ ಒಟ್ಟು ಆರುನೂರು ಕುದುರೆಗಳ ಸಮೇತ ಅವರ ಆಶ್ರಮಕ್ಕೆ ಬಂದರು. ಗಾಲವನ ಕಾರ್ಯ ಸಾಧನೆಯನ್ನು ಕಂಡು ವಿಶ್ವಾಮಿತ್ರರು ಮನಸ್ಸಿನಲ್ಲೇ ಹೆಮ್ಮೆ ಪಟ್ಟರು. ಗಾಲವ ನಡೆದ ಸಂಗತಿಯನ್ನೆಲ್ಲ ಹೇಳಿ, ಆರು ನೂರು ಕುದುರೆಗಳನ್ನು ಶ್ರದ್ದೆಯಿಂದ ಅವರಿಗೊಪ್ಪಿಸಿ ಇನ್ನು ಉಳಿದ ಇನ್ನೂರು ಕುದುರೆಗಳ ಬದಲಿಗೆ ತಾನೇನು ಮಾಡಬೇಕೆಂದು ಆದೇಶಿಸಬೇಕಾಗಿ ಕೇಳಿಕೊಂಡನು. ಆಗ ವಿಶ್ವಾಮಿತ್ರರು, “ಗಾಲವ, ನೀನು ಮಾಧವಿಯನ್ನು ಮೊದಲಿಗೆ ನನ್ನ ಬಳಿಯೇ ಕರೆದುಕೊಂಡು ಬಂದಿದ್ದರೆ ಆ ಎಂಟು ನೂರು ಕುದುರೆಗಳ ಬದಲಿಗೆ ಈಕೆಯನ್ನು ನನಗೇ ಧಾರೆ ಎರೆದು ಕೊಡುವಂತೆ ಕೇಳುತ್ತಿದ್ದೆ. ನನಗೂ ಲೋಕಕಲ್ಯಾಣದ ಕೆಲಸಗಳಲ್ಲಿ ತೊಡಗುವ ಪುತ್ರರ ಅಪೇಕ್ಷೆ ಇದೆ, ಜೊತೆಗೆ ಇವಳನ್ನು ಊರೂರು ತಿರುಗಿಸುವ ಅಗತ್ಯವೂ ಇರುತ್ತಿರಲಿಲ್ಲ. ಇರಲಿ. ಇನ್ನು ಇನ್ನೂರು ಕುದುರೆಗಳ ಬದಲಿಗೆ ಮಾಧವಿಯನ್ನು ನಾನು ವರಿಸಿ ಪುತ್ರನನ್ನು ಪಡೆಯಬಹುದೇ? ಇದಕ್ಕೆ ನಿನ್ನ ಸಮ್ಮತವಿದೆಯೇ?” ಎಂದು ಕೇಳಿದರು. ಗಾಲವ ಯಥಾಪ್ರಕಾರ ಇದಕ್ಕೆ ಮಾಧವಿಯ ಒಪ್ಪಿಗೆಯಿದೆಯೇ ಎಂದು ಅವಳನ್ನು ನೋಡಿದನು. ಆಕೆ ಒಪ್ಪಿದಳು. ಮಾಧವಿ ಮತ್ತು ವಿಶ್ವಾಮಿತ್ರರಿಗೆ ಅಷ್ಟಕ ಎಂಬ ಮಗನ ಜನನವಾಯಿತು. 

ಮಾಧವಿಯ ಪುತ್ರರಾದ ವಸುಮನಸ್, ಪ್ರತರ್ದನ, ಶಿವಿ ಮತ್ತು ಅಷ್ಟಕರು ಕ್ರಮವಾಗಿ ಮಹಾ ಧಾನಿಯಾಗಿ, ಲೋಕವೀರನಾಗಿ, ಸತ್ಯನಿಷ್ಠನಾಗಿ ಮತ್ತು ಯಜ್ಞಯಾಗಿದಿಗಳಲ್ಲಿ ತೊಡಗಿ ಜಗತ್ಪ್ರಸಿದ್ಧರಾದರು. ವಿಶ್ವಾಮಿತ್ರರ ಮಗ ಅಷ್ಟಕನ ಜನನದ ನಂತರ ಮಾಧವಿ ಗೃಹಸ್ಥಾಶ್ರಮವನ್ನು ತ್ಯಜಿಸಿ ವಾನಪ್ರಸ್ಥವನ್ನು ಸ್ವೀಕರಿಸುವುದಾಗಿ ನಿರ್ಧರಿಸಿ, ಸಾಧನಾ ಮಾರ್ಗದಲ್ಲಿ ನಿರತಳಾದಳು. 

ಗಾಲವ ತಾನು ತನ್ನ ಗುರುವಿಗೆ ನೀಡಿದ ವಚನದಂತೆ ಅವರು ಬಯಸಿದ್ದನ್ನೇ ತಂದೊಪ್ಪಿಸಿ ನಿರಾಳ ಭಾವದಿಂದ ತನ್ನ ಗುರುಗಳ ಆದೇಶದಂತೆಯೇ ಉತ್ತರೋತ್ತರ ಧ್ಯೇಯ ಸಾಧನೆಯಲ್ಲಿ ತೊಡಗಲು ಲೋಕಾಭಿಮುಖನಾಗಿ ಆಶ್ರಮದಿಂದ ಹೊರಟನು. ಗಾಲವ, ಭರತವರ್ಷದ ಶ್ರೇಷ್ಠ ಋಷಿಗಳಲ್ಲಿ ಒಬ್ಬನಾದನು. ತನ್ನ ಗುರುವಿನ ನಿರ್ದೇಶನದಂತೆಯೇ ಅನೇಕಾನೇಕ ಜನರಿಗೆ ಉಪಕಾರಿಯಾಗಿ, ಅವರಿಗೆ ಜ್ಞಾನಾರ್ಜನೆಯ ದಾರಿ ದೀಪವಾಗಿ, ಲೋಕಕಲ್ಯಾಣದ ಕೆಲಸಗಳನ್ನು ಸಾಧಿಸಿದನು. ಇಂದಿಗೂ ಭಾರತದ ಕೆಲವು ಪ್ರದೇಶಗಳನ್ನು ಗಾಲವ ಋಷಿಗಳಿದ್ದ  ಆಶ್ರಮ ಮತ್ತು ಅವರು ತಪಸ್ಸನ್ನಾಚರಿಸಿದ ಪ್ರದೇಶಗಳೆಂದು ಗುರುತಿಸಿ, ಜನರು ಶ್ರದ್ಧಾ ಭಕ್ತಿಗಳಿಂದ ಅಲ್ಲಿಗೆ ಭೇಟಿ ನೀಡುತ್ತಾರೆ.

image credit: Jamini Roy

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply