ವಿಷ್ಣುಪುರಾಣವೂ ಸೇರಿದಂತೆ ರಾಮಾಯಣ ಮತ್ತು ಮಹಾಭಾರತಗಳಲ್ಲಿ ಉಲ್ಲೇಖವಿರುವ ಇಕ್ಷ್ವಾಕು ವಂಶದ ಸ್ಥಾಪಕ, ರಾಜ ರಿಷಭನು. ಇವನು ಇಕ್ಷ್ವಾಕು ಎಂಬ ಹೆಸರಿನಿಂದ ಪ್ರಖ್ಯಾತನಾದ ಕಾರಣ ಇವನ ವಂಶವು ಸಹ ‘ಇಕ್ಷ್ವಾಕು ವಂಶ’ ಎಂದೇ ಪ್ರಸಿದ್ದಿ ಪಡೆಯಿತು. ಮೂಲತಃ ಸೂರ್ಯವಂಶದ ರಾಜರು ಕೋಸಲ ರಾಜ್ಯವನ್ನು ಆಳುತ್ತಿದ್ದರು. ಇಕ್ಷ್ವಾಕು ಈ ಸೂರ್ಯವಂಶಕ್ಕೇ ಸೇರಿದವನು. ಆದ್ದರಿಂದ ಸೂರ್ಯವಂಶದ ಎಲ್ಲ ರಾಜರುಗಳ ಪೈಕಿ ರಾಜ ಇಕ್ಷ್ವಾಕುವನ್ನು ಅಗ್ರಗಣ್ಯನೆಂದು ಪರಿಗಣಿಸಲಾಗಿದೆ.
ಕಾಲಾಂತರದಲ್ಲಿ, ಇಕ್ಷ್ವಾಕು ವಂಶದ ರಘುಮಹಾರಾಜನು ಹೆಸರಾಂತನಾದ ಕಾರಣ ಈ ವಂಶಕ್ಕೆ ರಘುವಂಶ ಎಂಬ ಹೆಸರು ಚಾಲ್ತಿಗೆ ಬಂತು. ರಘುವಿನ ಮಗ ಶ್ರೇಷ್ಠನಾದ ಅಜಮಹಾರಾಜ, ಮತ್ತು ಅಜನ ಮಗ ಧೀಮಂತನಾದ ದಶರಥ ಮಹಾರಾಜ. ದಶರಥನ ಮಗ ಶ್ರೀ ರಾಮನಿಂದಾಗಿ ಇಕ್ಷ್ವಾಕು ವಂಶ ಅರ್ಥಾತ್ ಸೂರ್ಯವಂಶವು ಅಜರಾಮರವಾಯಿತು. ಸಂಸ್ಕೃತದ ಕವಿ ಕಾಳಿದಾಸನು, ತನ್ನ ಕೃತಿ ರಘುವಂಶದಲ್ಲಿ ಸವಿಸ್ತಾರವಾಗಿ ಇಕ್ಷ್ವಾಕು ವಂಶದ ರಾಜರುಗಳ ಗುಣಗಾನವನ್ನು ಮಾಡಿದ್ದಾನೆ.
ಇಕ್ಷ್ವಾಕು ವಂಶಕ್ಕೆ ಸೇರಿರುವ ಅಜಮಹಾರಾಜನ ಪತ್ನಿ ಇಂದುಮತಿಯು ತನ್ನ ಹಿಂದಿನ ಜನ್ಮದಲ್ಲಿ ಅಪ್ಸರೆಯಾಗಿದ್ದಳು ಎಂದು ಕೆಲವು ಪುರಾಣ-ಪುಣ್ಯ ಕಥೆಗಳಲ್ಲಿ ಹೇಳಲಾಗಿದೆ. ಇವುಗಳ ಪ್ರಕಾರ ಹರಿಣಿ ಎಂಬ ಅಪ್ಸರೆಯು ಶಾಪಕ್ಕೀಡಾಗಿ ಭೂಲೋಕದಲ್ಲಿ ಇಂದುಮತಿಯಾಗಿ ಜನಿಸುತ್ತಾಳೆ.
ಅಪ್ಸರೆ ಹರಿಣಿ ಮತ್ತು ಮಹರ್ಷಿ ತೃಣಬಿಂದುವಿನ ಶಾಪ
ಇಂದ್ರಪುರಿಯಲ್ಲಿ ಇಂದ್ರನ ಆದೇಶಗಳನ್ನು ಪಾಲಿಸುತ್ತಿದ್ದ ಎಲ್ಲ ಅಪ್ಸರೆಯರಂತೆ ಅಪ್ಸರೆ ಹರಿಣಿಯೂ ಸಹ ಒಬ್ಬ ಮೋಹಕ ಸುಂದರಿ ಮತ್ತು ಸಕಲಕಲಾವಲ್ಲಭಳೂ ಆಗಿದ್ದಳು. ಒಮ್ಮೆ ತೃಣಬಿಂದು ಎಂಬ ಋಷಿಯು ತಪಸ್ಸಿನಲ್ಲಿ ನಿರತರಾಗಿದ್ದಾಗ ಅದನ್ನು ಕಂಡ ಇಂದ್ರನಿಗೆ ಆತಂಕವುಂಟಾಯಿತು. ಅವರ ತಪಸ್ಸಿನ ವರವು ತನಗೂ ಮತ್ತು ದೇವವೃಂದಕ್ಕೂ ತೊಂದರೆಗಳನ್ನು ಉಂಟುಮಾಡಬಹುದು ಎಂದೆನಿಸಿ ಅವರ ತಪೋಭಂಗ ಮಾಡಲೆಂದು ಅಪ್ಸರೆ ಹರಿಣಿಗೆ ಆದೇಶವಿತ್ತನು.
ಈ ಕೆಳಗಿನ ಸಾಲುಗಳು ಕಾಳಿದಾಸನ ಕೃತಿ ರಘುವಂಶವದಲ್ಲಿ ಅಪ್ಸರೆ ಹರಿಣಿ ಮತ್ತು ತೃಣಬಿಂದು ಮಹರ್ಷಿಯನ್ನು ಹೀಗೆ ಪರಿಚಯಿಸಲಾಗಿದೆ :
चरतः किल दुश्चरम् तपस्तृणबिन्दोः परिशङ्कितः पुरा|
प्रजिघाय समाधिभेदिनीम् हरिरस्मै हरिणीम् सुराङ्गनाम्॥
ಚರತಃ ಕಿಲ ದುಶ್ಚರಂ ತಪಸ್ತೃಣಬಿನ್ದೋಃ ಪರಿಶಂಕಿತಃ ಪುರಾ|
ಪ್ರಾಜಿಘಾಯ ಸಮಾಧಿಬೇದಿನೀಂ ಹರಿರಸ್ಮೈ ಹರಿಣೀಂ ಸುರಾಂಗನಾಮ್॥
– ರಘುವಂಶ, ಸರ್ಗ 8- 79
ಅರ್ಥ : ದೇವರಾಜ ಇಂದ್ರನು, ಋಷಿ ತೃಣಬಿಂದುವು ಆಚರಿಸುತ್ತಿದ್ದ ಕಠಿಣವಾದ ತಪಸ್ಸನ್ನು ಕಂಡು ಹೆದರಿದನು. ಮಹರ್ಷಿಯ ಚಿತ್ತವಿಕ್ಷೇಪ ಮಾಡಲೆಂದು ಇಂದ್ರನು ಹರಿಣಿ ಎಂಬ ಸುರಸುಂದರಿಯನ್ನು ಕಳುಹಿಸಿದನು.
ತನ್ನ ಪ್ರಭುವಿನ ಆದೇಶವನ್ನು ಪರಿಪಾಲಿಸುತ್ತ ಅಪ್ಸರೆ ಹರಿಣಿಯು ತೃಣಬಿಂದುವಿನ ತಪೋಭಂಗ ಮಾಡಿ ಅವರ ಪರಿಶ್ರಮವನ್ನೆಲ್ಲಾ ವ್ಯರ್ಥವಾಗಿಸಿದಳು. ತನ್ನ ಚಿತ್ತಚಾಂಚಲ್ಯಕ್ಕೆ ಕಾರಣಳಾದ ಹರಿಣಿಯನ್ನು ಕಂಡ ಋಷಿ ತೃಣಬಿಂದುವು ಅವಳಿಗೆ ನರಮಾನವಳಾಗಿ ಭೂಲೋಕದಲ್ಲಿ ಜನಿಸಲೆಂದು ಶಾಪವೆಸಗಿದರು.
स तपःप्रतिबन्धमन्युना प्रमुखाविष्कृतचारुविभ्रमम्|
अशपद्भव मानुषीति ताम् शमवेलाप्रलयोर्मिणा भुवि॥
ಸ ತಪಃಪ್ರತಿಬಂಧಮನ್ಯುನಾ ಪ್ರಮುಖಾವಿಷ್ಕೃತಚಾರುವಿಭ್ರಮಮ್|
ಅಶಪದ್ಭವ ಮಾನುಷೀತಿ ತಾಮ್ ಶಮವೇಲಾಪ್ರಲಯೋರ್ಮಿಣಾ ಭುವಿ॥
– ರಘುವಂಶ, ಸರ್ಗ 8-80
ಅರ್ಥ: ಏಕಚಿತ್ತರಾಗಿ ತಪೋನಿರತನಾಗಿದ್ದ ತನ್ನನ್ನು, ರೂಪ ಸೌಂದರ್ಯಗಳಿಂದ ಭ್ರಮಿಸಿ ಚಿತ್ತವಿಕಾರ ಮಾಡುವುದರ ಮೂಲಕ ಶಾಂತವಾದ ತನ್ನ ಮನಸಿನಲ್ಲಿ ಚಾಂಚಲ್ಯದ ಅಲೆ ಎಬ್ಬಿಸಿದ ಆ ಅಪ್ಸರೆಯನ್ನು ಕಂಡ ಋಷಿ ತೃಣಬಿಂದುವು, ಅವಳು ನರಮಾನವಳಾಗಿ ಭೂಲೋಕದಲ್ಲಿ ಜನಿಸಲೆಂದು ಶಾಪವೆಸಗಿದರು.
ತಕ್ಷಣ ಅಪ್ಸರೆ ಹರಿಣಿಯು ಮಹರ್ಷಿಯಲ್ಲಿ ಕ್ಷಮೆ ಯಾಚಿಸಿದಳು. ಅವರ ತಪೋಭಂಗ ಮಾಡುವುದರಲ್ಲಿ ಸ್ವೇಚ್ಛೆಯಾಗಲಿ ಅಥವಾ ಯಾವುದೇ ರೀತಿಯ ವೈಯಕ್ತಿಕ ಆಸಕ್ತಿಯಾಗಲಿ ತನಗೆ ಇರಲಿಲ್ಲವೆಂದು ಸ್ಪಷ್ಟವಾಗಿ ತಿಳಿಸಿದಳು. ತಾನು ಕೇವಲ ತನ್ನ ಪ್ರಭು ದೇವರಾಜ ಇಂದ್ರನ ಆಜ್ಞೆಯನ್ನು ಪಾಲಿಸುತ್ತಿದ್ದಳಷ್ಟೇ ಎಂದು ಮರುಗಿದಳು. ಶಾಪ ವಿಮೋಚನೆಯ ದಾರಿ ಸೂಚಿಸಬೇಕಾಗಿ ಅವರಲ್ಲಿ ವಿನಯದಿಂದ ಬೇಡಿಕೊಂಡಳು. ಇದನ್ನು ಕೇಳಿದ ತೃಣಬಿಂದುವಿನ ಮನಸು ಶಾಂತವಾಗಿ, ಆಕಾಶದಿಂದ ಬಿದ್ದ ಹೂವೊಂದು ಅವಳ ಶಾಪವಿಮೋಚನೆಗೆ ಕಾರಣವಾಗುತ್ತದೆ ನಂತರ ಅವಳು ಪುನಃ ಅಪ್ಸರೆಯಾಗಿ ಸ್ವರ್ಗಕ್ಕೆ ತೆರಳಬಹುದು ಎಂದು ಅವಳ ಶಾಪವನ್ನು ಕೆಲವು ವರ್ಷಗಳಿಗೆ ಮಾತ್ರ ಸೀಮಿತಗೊಳಿಸಿದರು.
ಈ ಶಾಪದ ಫಲವಾಗಿ ಅಪ್ಸರೆ ಹರಿಣಿಯು ಇಂದುಮತಿಯಾಗಿ ವಿದರ್ಭದ ಅರಸನಾಗಿದ್ದ ಭೋಜನ ಸುಪುತ್ರಿಯಾಗಿ ಜನಿಸಿದಳು.
ದಶರಥನ ಜನನ
ರಾಜಕುಮಾರಿ ಇಂದುಮತಿ ಎಷ್ಟಾದರು ಅಪ್ಸರೆ ಹರಿಣಿಯ ಪುನರ್ಜನ್ಮ, ಆದ್ದರಿಂದಲೇ ನೋಡುಗರ ಕಣ್ಮನಗಳನ್ನು ಸೆಳೆಯುವ ಅಪೂರ್ವವಾದ ಸೌಂದರ್ಯ ಮತ್ತು ಲಾವಣ್ಯದಿಂದ ಕೂಡಿದವಳಾಗಿದ್ದಳು. ಸುಕೋಮಲೆ, ಸುಗುಣೆ ಮತ್ತು ಅತೀವ ಸುಂದರಿಯಾದ ತನ್ನ ಮಗಳ ವಿವಾಹವನ್ನು ನೆರವೇರಿಸಲು ರಾಜ ಭೋಜನು ಸ್ವಯಂವರವನ್ನು ಆಯೋಜಿಸಿದನು. ಹತ್ತು ಹಲವು ರಾಜ್ಯದ ರಾಜಕುಮಾರರು ಈ ಸ್ವಯಂವರದಲ್ಲಿ ಪಾಲ್ಗೊಂಡಿದ್ದರು.
ಸ್ವಯಂವರದಲ್ಲಿ ಇಕ್ಷ್ವಾಕು ವಂಶದ ಅಜಮಹಾರಾಜನು ಇಂದುಮತಿಯ ಮನಗೆದ್ದ ಅಯೋಧ್ಯಾ ನಗರದ ರಾಜಕುಮಾರ, ಇಂದುಮತಿಯ ಮನಗೆದ್ದನು. ಅವರೀರ್ವರ ವಿವಾಹ ಸಂಪನ್ನವಾಯಿತು. ನಂತರ ಅಜನ ತಂದೆ ರಘುಮಹಾರಾಜನು ಅಜನಿಗೆ ಪಟ್ಟಾಭಿಷೇಕ ಮಾಡಿ ವಾನಪ್ರಸ್ಥಕ್ಕೆ ಹೊರಟನು. ಅಜನಿಗೆ ಇಂದುಮತಿಯ ಮೇಲೆ ವಿಪರೀತವಾದ ಪ್ರೀತಿ.
क्षितिरिन्दुमती च भामिनी पतिमासाद्य तमग्र्यपौरुषम्|
प्रथमा बहुरत्नसूरभूदपरा वीरमजीजनत्सुतम्॥
ಕ್ಷಿತಿರಿಂದುಮತೀ ಚ ಭಾಮಿನೀ ಪತಿಮಾಸಾಧ್ಯ ತಮಗ್ರ್ಯಪೌರುಷಮ್|
ಪ್ರಥಮಾ ಬಹುರತ್ನಸೂರಭೂದಪರಾ ವೀರಮಜೀಜನತ್ಸುತಮ್ ||
– ರಘುವಂಶ, ಸರ್ಗ 8-28
ಅರ್ಥ: ಈ ಮೇಲ್ಕಂಡ ಶ್ಲೋಕದಲ್ಲಿ ಅಯೋಧ್ಯೆಯನ್ನು ಸಹ ಇಂದುಮತಿಗೆ ಸರಿಸಮಾನಳಾದ ಪಟ್ಟಮಹಿಷಿಗೆ ಹೋಲಿಸಲಾಗಿದೆ, ಆದರೆ ಆಧ್ಯತೆಯಲ್ಲಿ ಅಯೋಧ್ಯೆನಗರಿ ಮಹೀಪತಿಯ ಮೊದಲ ಮಡದಿ. ಅಜ ಮಹಾರಾಜನಂತಹ ಅರಸನನ್ನು ಪಡೆದ ಅಯೋಧ್ಯೆಯ ರಾಜಭಂಡಾರದ ರತ್ನಕೋಶವು ಎಲ್ಲೆಯಿಲ್ಲದೆ ಬೆಳೆದರೆ ಅಜನ ಪತ್ನಿ ಇಂದುಮತಿಯೂ ಸಹ ಅಪೂರ್ವನಾದ ಪುತ್ರರತ್ನನನ್ನು ಪಡೆದಳು ಎಂದು ಈ ಶ್ಲೋಕದ ಭಾವಾರ್ಥ.
ಅಜ ಮತ್ತು ಇಂದುಮತಿ ತಮ್ಮ ಮಗನಿಗೆ ದಶರಥನೆಂದು ನಾಮಕರಣ ಮಾಡಿದರು. ತನ್ನ ವಂಶಸ್ಥರಂತೆಯೇ ದಶರಥನು ವೀರ ಪೌರುಷಗಳಿಂದ ಕೂಡಿದ್ದು ಮುಂದೆ ಶ್ರೀ ರಾಮಚಂದ್ರನಿಗೆ ತಂದೆಯಾದನು.
दशरश्मिशतोपमद्युतिम् यशसा दिक्षु दशस्वपि श्रुतम्|
दशपूर्वरथम् यमाख्यया दशकण्ठारिगुरुम् विदुर्बुधाः॥
ದಶರಶ್ಮಿಶತೋಪಮಧ್ಯುತಿಂ ಯಶಸಾ ದಿಕ್ಷು ದಶಸ್ವಪಿ ಶ್ರುತಮ್|
ದಶಪೂರ್ವರಥಮ್ ಯಮಾಖ್ಯಯಾ ದಶಕಂಠಾರಿಗುರುಂ ವಿದುರ್ಬುಧಾಃ॥
– ರಘುವಂಶ, ಸರ್ಗ 8-29
ಅರ್ಥ : ಈ ಶ್ಲೋಕದಲ್ಲಿ ಕವಿಯು ದಶರಥನ ಮೇಲ್ಮೆಯನ್ನು ವರ್ಣಿಸುತ್ತಾನೆ. ಯಾರ ರಥ ಎಂಬ ಹೆಸರಿನ ಹಿಂದೆ ದಶ ಎಂದರೆ ಹತ್ತು ಎಂದು ಸೇರಿಕೊಂಡಿದೆಯೋ , ಅಂತಹ ದಶರಥ ಮಹಾರಾಜನು ಜ್ಞಾನಿಗಳ ಗೌರವಕ್ಕೆ ಪಾತ್ರದಾರಿ. ಇವನು ಹತ್ತು ದಿಕ್ಕುಗಳಲ್ಲಿಯೂ ಖ್ಯಾತಿಯನ್ನು ಪಡೆಯುವಂತಹ ಧೀರನೇ ಸರಿ. ಇವನ ತೇಜಸ್ಸು ಸೂರ್ಯನ ಹತ್ತು ಕಿರಣಗಳ ಪ್ರಕಾಶಕ್ಕೆ ಸರಿಸಮಾನವಾದುದು ಮತ್ತು ಇವನು ಹತ್ತು ತಲೆಗಳಿರುವ ರಾವಣನ ವೈರಿ ಶ್ರೀ ರಾಮನಿಗೆ ಜನ್ಮದಾತನು ಸಹ. ಇಂದುಮತಿಯು ಇಂತಹ ಧೀಮಂತ ಪುತ್ರನಿಗೆ ಜನ್ಮ ನೀಡುತ್ತಾಳೆ.
ಅಪ್ಸರೆ ಹರಿಣಿಯ ಶಾಪ ವಿಮೋಚನೆ
ದಶರಥನ ಜನನದ ನಂತರ ಅಜಮಹಾರಾಜ ಮತ್ತು ಇಂದುಮತಿ ದಂಪತಿಗಳು ದಾಂಪತ್ಯದ ಸುಖವನ್ನು ಸವಿಯುತ್ತ ಸಾಕಷ್ಟು ಸಮಯ ಕಳಿಯುತ್ತಿರುತ್ತಾರೇ. ಅಂತೆಯೇ ಒಮ್ಮೆ, ತನ್ನ ರಾಜ್ಯಕಾರ್ಯಗಳನ್ನು ಮುಗಿಸಿ ರಾಜಧಾನಿಯಿಂದ ದೂರವಿರುವ ಉದ್ಯಾನವನಕ್ಕೆ ರಾಣಿ ಇಂದುಮತಿ ಮತ್ತು ಅಜಮಹಾರಾಜನು ವಿಹಾರಿಸಲು ಹೋಗುತ್ತಾರೆ. ಅಲ್ಲಿ ಅವರು ಪರಸ್ಪರ ಸಾಂಗತ್ಯವನ್ನು ಆಸ್ವಾದಿಸುತ್ತ ವಿರಮಿಸತ್ತ ಪ್ರಪಂಚವನ್ನೇ ಮರೆತಿರುತ್ತಾರೆ. ಆ ಸಮಯಕ್ಕೆ ದಕ್ಷಿಣ ಸಮುದ್ರತೀರದ ಗೋಕರ್ಣದಲ್ಲಿ ನೆಲೆಸಿದ್ದಂತಹ ಶಂಕರನನ್ನು ಕಾಣಲು ನಾರದ ಮಹಾಮುನಿಗಳು ಆಕಾಶ ಮಾರ್ಗವಾಗಿ ದಾವಿಸುತ್ತಿರುವಾಗ ಅವರು ಧರಿಸಿದ್ದ ಹೂವಿನ ಮಾಲೆ ಇಂದುಮತಿಯ ಮೇಲೆ ಬಿದ್ದುಹೋಗುತ್ತದೆ. ತಕ್ಷಣ ಇಂದುಮತಿಯ ಉಸಿರು ನಿಂತುಹೋಗುತ್ತದೆ.
अभिभूय विभूतिमार्तवीम् मधुगन्धातिशयेन वीरुधाम्|
नृपतेरमरस्रगाप सा दयितोरुस्तनकोटिसुस्थितीम्॥
ಅಭಿಭೂಯ ವಿಭೂತಿಮಾರ್ತವೀಂ ಮಧುಗಂಧಾತಿಶಯೇನ ವೀರುಧಾಮ್|
ನೃಪತೇರಮರಸ್ರಗಾಪ ಸಾ ದಯಿತೋರುಸ್ತಾನಕೋಟಿಸುಸ್ಥಿತಿಮ್॥
– ರಘುವಂಶ, ಸರ್ಗ 8-36
ಅರ್ಥ: ಅತಿಯಾದ ಮಕರಂದ ಮತ್ತು ಸುಗಂಧದಿಂದ ಕೂಡಿದ ದೇವಲೋಕದ ಆ ಹೂಮಾಲೆಯು ಐಹಿಕ ಬಳ್ಳಿಗಳ ಋತುಮಾನದ ಸೊಗಸನ್ನು ಮೀರಿಸಿದ್ದು ಗಾಳಿಯಲ್ಲಿ ತೇಲಿ ಬಂದು ರಾಜನಿಗೆ ಅತ್ಯಂತ ಪ್ರಿಯಕರಳಾದ ಇಂದುಮತಿಯ ಎದೆಯನ್ನು ಆಶ್ರಯಿಸಿದೆ.
ಋಷಿ ತೃಣಬಿಂದುವಿನ ಮಾತುಗಳಂತೆಯೇ ಇಂದುಮತಿಯಾಗಿ ಜನ್ಮ ತಾಳಿದ್ದ ಅಪ್ಸರೆ ಹರಿಣಿಯ ಶಾಪವಿಮೋಚನೆಯಾಯಿತು. ದೈವಿಕ ಪುಷ್ಪವೊಂದು ತನ್ನನ್ನು ಸ್ಪರ್ಶಿಸಿದ ತಕ್ಷಣ ಇಂದುಮತಿ ಮಾಡಿದಳು. ಅಪ್ಸರೆ ಹರಿಣಿ ಇಹಲೋಕದ ನರ ಶರೀರವನ್ನು ತ್ಯಜಿಸಿ ಪುನಃ ಸ್ವರ್ಗಕ್ಕೆ ತೆರಳಿದಳು. ಇಂದುಮತಿಯನ್ನು ಕಳೆದುಕೊಂಡ ಅಜ ದುಃಖತಪ್ತನಾದನು.
ಕೆಳಗಿನ ಸಾಲುಗಳು ಅಪ್ಸರೆ ಹರಿಣಿಯ ಶಾಪದ ಅಂತ್ಯವನ್ನು ಉಲ್ಲೇಖಿಸುತ್ತವೆ.
रथकैशिकवंशसंभवा तव भूत्वा महिषी चिराय सा|
उपलब्धवती दिवश्च्युतम् विवशा शापनिवृत्तिकारणम्॥
ಕೃತಕೈಶಿಕವಂಶಸಂಭವಾ ತವ ಭೂತ್ವಾ ಮಹಿಷಿ ಚಿರಾಯ ಸಾ|
ಉಪಲಬ್ಧವತೀ ದಿವಶ್ಚ್ಯುತಂ ವಿವಶಾ ಶಾಪನಿವೃತ್ತಿಕಾರಣಮ್ ||
– ರಘುವಂಶ, ಸರ್ಗ 8- 82
ಅರ್ಥ : ಕೃತ ಕೈಶಿಕರ ವಂಶದಲ್ಲಿ ಜನಿಸಿದ ಅವಳು ನಿನ್ನ (ಅಜನ ) ರಾಣಿಯಾದಳು. ಬಹಳ ಕಾಲಾನಂತರ ಆಕಾಶದಿಂದ ಕೆಳಗೆ ಬಿದ್ದ ಹೂವಿನ ಮಾಲೆಯ ಮೂಲಕ ಅವಳ ಐಹಿಕ ಅಸ್ತಿತ್ವ ಅಂತ್ಯಗೊಂಡಿತು ಜೊತೆಗೆ ಅವಳ (ಹರಿಣಿಯ) ಶಾಪ ವಿಮೋಚನೆಯೂ ಆಯಿತು.
ಇಂದುಮತಿಯನ್ನು ಕಳೆದುಕೊಂಡ ಅಜನು ತನ್ನ ಅರಸಿಯಿಲ್ಲದೆ ತಾನೂ ಉಳಿಯೆನು ಎಂಬ ನೀರಸ ಭಾವ, ನಿರಾಸಕ್ತಿ ಮತ್ತು ನಿರಾಕರಣೆಯಿಂದಲೇ ಜೀವನ ಸಾಗಿಸುತ್ತಿದ್ದನು. ಅವನಿಗೆ ಪತ್ನಿಯನ್ನು ಕಳೆದುಕೊಂಡ ಶೋಕದಿಂದ ಹೊರಬರಲು ಸಾಧ್ಯವಾಗಲಿಲ್ಲ, ಆದ್ದರಿಂದ ಅಜನು ಸಹ ಗಂಗಾ-ಸರಯುವಿನ ಸಂಗಮದಲ್ಲಿ ದೇಹತ್ಯಾಗ ಮಾಡಿಬಿಟ್ಟನು. ಸ್ವರ್ಗದಲ್ಲಿ ಅಜಮಹಾರಾಜ ಮತ್ತು ಇಂದುಮತಿ ಅರ್ಥಾತ್ ಅಪ್ಸರೆ ಹರಿಣಿಯ ಮಿಲನವಾಗುತ್ತದೆ. ಆದರೆ ಭೂಮಿಯ ಮೇಲೆ ಅವರ ಮಗ ದಶರಥನು ಅನಾಥನಾದನು.
(This is a translation of an article written in English by Shalini Mahapatra.)
Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.