close logo

ಅಪ್ಸರೆಯರು ಭಾಗ – 12 : ಅಪ್ಸರೆ ಪ್ರಮ್ಲೋಚಾ ಮತ್ತು ಋಷಿ ಕಂದುವಿನ 907 ವರ್ಷಗಳ ಶೃಂಗಾರಪ್ರಕರಣ

ದೇವರಾಜ ಇಂದ್ರನು ದೇವಕನ್ಯೆಯರಾದ ಅಪ್ಸರೆಯರ ಮೂಲಕ ರಚಿಸಿದ ಅನೇಕ ಕಾಮ ಪ್ರಚೋದಕ ಷಡ್ಯಂತ್ರಗಳು ಪುರಾಣಗಳಲ್ಲಿ ಕಂಡುಬರುವ ಹಲವಾರು ರೋಚಕ ಕಥೆಗಳಿಗೆ ಕಥಾವಸ್ತುವಾಗಿದೆ. ಈ ಕಥೆಗಳಲ್ಲಿ ಕಾಣಸಿಗುವ ವಿಭಿನ್ನವಾದ ಪಾತ್ರಗಳು ಮತ್ತು ರಸಮಯವಾದ ಸನ್ನಿವೇಶಗಳಿಗೆ ಇಂತಹ ಅದೆಷ್ಟೋ ಭಾವೋದ್ವೇಗದ ಪ್ರಸಂಗಗಳೇ ಪ್ರೇರೇಪಕ. 

907 ವರ್ಷಗಳ ಶೃಂಗಾರ ಪ್ರಸಂಗ 

ವೇದಜ್ಞನಾದ ಋಷಿ ಕಂದು, ಗೋಮತಿ ನದಿಯ ದಡದಲ್ಲಿ ತನ್ನ ಇಷ್ಟಸಿದ್ಧಿಗಾಗಿ ಕಠಿಣವಾದ ತಪಸ್ಸನ್ನು ಆಚರಿಸುತ್ತಿದ್ದನು. ಬೇಸಿಗೆಯಲ್ಲಿ ಧಗಧಗಿಸುವ ಸೂರ್ಯನ ತಾಪಕ್ಕೆ ಬೇಯುತ್ತಾ,  ಮಳೆಗಾಲದ ಭೀಕರ ಮಳೆಯಲ್ಲಿ ಮೈದಣಿಸುತ್ತ, ಶಿಶಿರದ ಚಳಿಗೂ ಎದೆಗುಂದದೆ ಬಹಳ ಕಷ್ಟಕರವಾದ ತಪಸ್ಸನ್ನೇ ಕೈಗೊಂಡಿದ್ದನು. ಕಂದುವಿನ ದೃಢಸಂಕಲ್ಪವನ್ನು ಕಂಡ ದೇವೇಂದ್ರನಿಗೆ ಅವನ ಉದ್ದೇಶದ ಅರಿವಿರಲಿಲ್ಲ. ಆದ್ದರಿಂದ ಅವನಿಗೆ ಸ್ವಲ್ಪ ಕಸಿವಿಸಿಯಾಯಿತು, ದ್ವಂದ್ವದಲ್ಲಿ ಸಿಲುಕಿ ಕಂದುವಿನ ತಪೋಭಂಗ ಮಾಡುವುದೇ ಸರಿ ಎಂದು ತೀರ್ಮಾನಿಸಿದನು. ಈ ಕಾರಣವಾಗಿ ಸೌಂದರ್ಯದ ಗಣಿ, ಅಪ್ಸರೆ ಪ್ರಮ್ಲೋಚಾಳನ್ನು ಕಂದುವಿನ ತಪೋಭಂಗಕ್ಕಾಗಿ ಭೂಲೋಕಕ್ಕೆ ಕಳುಹಿಸಿದನು. 

ಅಂತೆಯೇ ಒಂದು ಮುಂಜಾನೆ ಅಪ್ಸರೆ ಪ್ರಮ್ಲೋಚಾ ಕಂದುವಿನ ಆಶ್ರಮದ ಬಳಿ ಇದ್ದ ಗೋಮತಿ ನದಿಯ ಬಳಿ  ಧರೆಗಿಳಿದಳು. ಪ್ರಾತಃಕಾರ್ಯಗಳನ್ನು ನೆರವೇರಿಸಲು ನದಿ ದಡಕ್ಕೆ ಬಂದ ಋಷಿ ಕಂದುವನ್ನು ಪ್ರಮ್ಲೋಚಾಳ ಮನೋಜ್ಞವಾದ ರೂಪ, ಲಾವಣ್ಯ ಮತ್ತು ಮೋಹಕವಾದ ಕಣ್ಣೋಟವು ತೀವ್ರವಾಗಿ ಸೆಳೆದವು. ಆ ಕ್ಷಣವೇ ಅವಳಲ್ಲಿ ಅವನು ಮೋಹಗೊಂಡನು. ಅವಳನ್ನು ತನ್ನ ಆಶ್ರಮಕ್ಕೆ ಆಹ್ವಾನಿಸಿ ಅವಳ ಸಾಂಗತ್ಯವನ್ನು ಬೇಡಿದನು. ಅವರಿಬ್ಬರೂ ದಾಂಪತ್ಯ ಸುಖವನ್ನು ಅನುಭವಿಸುತ್ತ ಮಂದರಾಚಲ ಗಿರಿಯಲ್ಲಿ ವಾಸಿಸತೊಡಗಿದರು. 

ಕಾಮದೇವನ ಕೃಪೆ ಅವರಿಬ್ಬರ ಮೇಲೆ ಅಪಾರವಾಗಿದ್ದಿತು. ಶೃಂಗಾರವೇ ಅವರ ಜೀವನಕ್ರಮವಾಯಿತು. ಹೀಗೆ ನೂರು  ವರ್ಷಗಳು ಕಳೆದವು. ಅದೊಂದು ದಿನ ಪ್ರಮ್ಲೋಚಾ, ತಾನು ಭೂಮಿಗೆ ಬಂದು ಶತಮಾನವಾಯಿತು ದೇವಲೋಕಕ್ಕೆ ಹಿಂದಿರುಗುವ ಸಮಯವಾಗಿದೆ, ತನ್ನನ್ನು ಕಳುಹಿಸಿಕೊಡಬೇಕಾಗಿ ಕಂದುವಿನಲ್ಲಿ  ಬಿನ್ನಹ ಮಾಡಿದಳು. ಕಂದುವಾದರೋ ಪ್ರಮ್ಲೋಚಾಳ ಸಾಂಗತ್ಯ ಮತ್ತು ಶೃಂಗಾರ ಸುಖದಲ್ಲಿ ಮುಳುಗಿಬಿಟ್ಟಿದ್ದನು, ಸಮಯದ ಅರಿವಿರಲಿಲ್ಲ. ಅವಳನ್ನು ಕ್ಷಣಮಾತ್ರವೂ ಬಿಟ್ಟಿರಲು ಸಾಧ್ಯವಿಲ್ಲ, ಇನ್ನೂ ಸ್ವಲ್ಪ ಕಾಲ ಅವಳು ತನ್ನ ಬಳಿಯೇ ಇರಬೇಕೆಂದು ಒತ್ತಾಯ ಮಾಡಿದನು. ಕೆಳಗಿನ ಶ್ಲೋಕಗಳು ಅವರ ಈ ಸಂಭಾಷಣೆಯನ್ನು ತಿಳಿಸುತ್ತವೆ. 

तम् सा प्राह महाभाग गन्तुम् इच्छामि अहम् दिवम् ।

प्रसाद सुमुखो ब्रह्मन् अनुज्न्याम् दातुम् अर्हसि ॥

ತಂ ಸಾ ಪ್ರಾಹ ಮಹಾಭಾಗ ಗಂತುಂ ಇಚ್ಛಾಮಿ ಅಹಂ ದಿವಂ ।

ಪ್ರಸಾದ ಸುಮುಖೋ ಬ್ರಹ್ಮನ್ ಅನುಜ್ನ್ಯಾಮ್ ದಾತುಂ ಅರ್ಹಸಿ ।।

ವಿಷ್ಣುಪುರಾಣ, ಅಂಕ – 1, ಅಧ್ಯಾಯ 15, ಶ್ಲೋಕ 14

ಅರ್ಥ : ನೂರು ವರ್ಷಗಳ ನಂತರ ದೇವಲೋಕಕ್ಕೆ ಹಿಂದಿರುಗುವ ತನ್ನ ಇಚ್ಛೆಯನ್ನು ಅವಳು (ಪ್ರಮ್ಲೋಚಾ) ಕಂದು ಮಹರ್ಷಿಯ ಬಳಿ ಹೇಳಿಕೊಂಡು ಅವನ ಅನುಮತಿಯನ್ನು ಕೇಳುತ್ತಾಳೆ. 

ಅದಕ್ಕೆ ಕಂದು ಮಹರ್ಷಿಯು : 

तयः एवम् उक्तह् स मुनिह् तस्याम् आसक्त मानसह् ।

 दीनानि कतिछित् भद्रे स्थेएयताम् इति अभाशत ॥

ತಯಃ ಏವಂ ಉಕ್ತಃ ಸ ಮುನಿಃ ತಸ್ಯಾಮ್ ಆಸಕ್ತ ಮಾನಸಃ ।

ದೀನಾನಿ ಕತಿಛಿತ್ ಭದ್ರೇ  ಸ್ಥೆ ಏಯತಾಂ ಇತಿ ಅಮಾಶತ್ ।।

ವಿಷ್ಣುಪುರಾಣ, ಅಂಕ – 1, ಅಧ್ಯಾಯ 15, ಶ್ಲೋಕ 15

ಅರ್ಥ : ಅವಳಲ್ಲಿ ಅತೀವವಾಗಿ ಮೋಹಗೊಂಡಿದ್ದ ಋಷಿಯು, ಇನ್ನು ಸ್ವಲ್ಪ ಕಾಲ ಅವಳು ತನ್ನ ಬಳಿಯೇ ಉಳಿದುಕೊಳ್ಳಬೇಕಾಗಿ ವಿನಂತಿಸಿಕೊಳ್ಳುತ್ತಾನೆ. 

ನೂರು ವರ್ಷಗಳಿಗೊಮ್ಮೆ ಪ್ರಮ್ಲೋಚಾ ತಾನು ದೇವಲೋಕಕ್ಕೆ ಹಿಂದಿರುಗಲು ಅನುಮತಿ ನೀಡಬೇಕಾಗಿ ಕಂದು ಮಹರ್ಷಿಯನ್ನು ಕೇಳುತಿದ್ದಳು. ಪ್ರತೀ ಬಾರಿ ಕಂದು ಅವಳ ಕೋರಿಕೆಯನ್ನು ನಿರಾಕರಿಸುತ್ತ ಅವಳು ತನ್ನ ಬಳಿಯೇ ಇರಬೇಕಾಗಿ ಅವಳಲ್ಲಿ ಬಿನ್ನಹ ಮಾಡಿಕೊಳ್ಳುತ್ತಿದ್ದನು. ಅವರಿಬ್ಬರೂ ಸಮಯದ ಪಾರವೇ ಇಲ್ಲದಂತೆ ಪರಸ್ಪರ ಸಾಂಗಾತ್ಯವನ್ನು ಅನುಭವಿಸುತ್ತ ದಾಂಪತ್ಯ ಸುಖದಲ್ಲಿ ತಲ್ಲೀನರಾಗಿದ್ದರು. ಹೀಗೆ ಶತಮಾನಗಳೇ ಕಳೆದವು. 

ಅರಿವು 

ಅದೊಂದು ಸುಂದರವಾದ ಸಂಜೆ, ಆಕಾಶದಲ್ಲಿ ಸೂರ್ಯಾಸ್ತವಾಗುತ್ತಿದ್ದದ್ದನ್ನು ಕಂಡ ಕಂದು ಮಹರ್ಷಿಯು ಆತುರವಾಗಿ ಎಲ್ಲಿಗೋ ಹೋಗುವವನಂತೆ ಸಿದ್ಧನಾದನು. ಅವನನ್ನು ಗಮನಿಸಿದ ಪ್ರಮ್ಲೋಚಾ ಅವನ ಅವಸರದ ಕಾರಣವನ್ನು ವಿಚಾರಿಸಿದಳು. ಸಂಧ್ಯೋಪಾಸನೆಗೆ ಸಮಯ ಮೀರುತ್ತಿದ್ದು  ತಾನು ಶೀಘ್ರವಾಗಿ ನದಿ ದಡಕ್ಕೆ ತೆರಳಬೇಕೆಂದು ಕಂದು ಮಹರ್ಷಿಯು ಅವಸರಿಸಿದನು. ಅವನ ಆತುರತೆಯನ್ನು ಕಂಡ ಪ್ರಮ್ಲೋಚಾ ವ್ಯಂಗ್ಯವಾಗಿ ನಕ್ಕು ಅವನು ಸಂಧ್ಯೋಪಾಸನೆಯನ್ನು ಮಾಡಿ ಶತಮಾನಗಳೇ ಕಳೆದಿವೆ, ಅದೆಷ್ಟೋ ಸಂಜೆಗಳು ಉಪಾಸನೆಯಿಲ್ಲದೆಯೇ ಜಾರಿವೆಯೆಂದು ಹಾಸ್ಯ ಮಾಡಿದಳು. 

ಅವಳ ಮಾತುಗಳನ್ನು ಕೇಳಿದ ಕಂದುವಿಗೆ ಆಶ್ಚರ್ಯವಾಯಿತು. ಗೋಮತಿ ನದಿಯ ದಂಡೆಯ ಬಳಿ ಪ್ರಾತಃವಿಧಿಯನ್ನು ಮಾಡಲು ಬಂದಾಗ ಅವಳನ್ನು ಭೇಟಿಯಾದದ್ದು, ಈಗ ಸಂಜೆಯಾಗುತ್ತಿದೆ, ಎಂದರೆ ಒಂದು ದಿನವಾಗಿದೆಯಷ್ಟೆ, ನೂರಾರು ವರ್ಷಗಳು ಹೇಗೆ ಕಳೆದಿರಬಹುದು? ಎಂದು ಬೆರಗಾದನು. ತನಗೆ ಅರ್ಥವಾಗುವಂತೆ ಸ್ಪಷ್ಟವಾಗಿ ತಿಳಿಸಬೇಕೆಂದು ಪ್ರಮ್ಲೋಚಾಳನ್ನು ಕೇಳಿಕೊಂಡನು. ಕಂದು ಋಷಿಯ ಅಜ್ಞಾನವನ್ನು ತಿಳಿದ ಪ್ರಮ್ಲೋಚಾ ಅವನಿಗೆ ಈ ಕೆಳಗಿನ ಶ್ಲೋಕಗಳಲ್ಲಿ ತಿಳಿಸಿರುವಂತೆ ಉತ್ತರಿಸಿದಳು. 

प्रत्योओशस्यागता ब्रह्मन् सत्यम् एतत् न तत् म्रुशा ।

तद्वत् गतस्य कालस्य गतान्यब्ध शतानि ते ॥

ಪ್ರತ್ಯೋ  ಓಷಸ್ಯಾಗತಾ ಬ್ರಹ್ಮನ್ ಸತ್ಯಂ ಏತತ್ ನ ತತ್ ಮೃಶಾ।

ತದ್ವತ್ ಗತಸ್ಯ ಕಾಲಸ್ಯ ಗತಾನ್ಯಭ್ಧ ಶತಾನಿ ತೇ।।

ಅರ್ಥ : ನಾನು ಸೂರ್ಯೋದಯದ ಸಮಯಕ್ಕೇ ಬಂದದ್ದು, ಅದು ಸತ್ಯ. ಅಂತೆಯೇ (ನಾನು ಬಂದು) ನೂರಾರು ವರ್ಷಗಳು ಕಳೆದಿವೆ ಎನ್ನುವುದು ಸಹ ಸತ್ಯ. 

ವಿಷ್ಣುಪುರಾಣ, ಅಂಕ – 1, ಅಧ್ಯಾಯ 15, ಶ್ಲೋಕ 30

ಇದನ್ನು ಕೇಳಿ ಗೊಂದಲಕ್ಕೊಳಗಾದ ಕಂದು, ಅವರು ಭೇಟಿಯಾಗಿ ಎಷ್ಟು ಸಮಯವಾಯಿತೆಂದು ನಿಖರವಾಗಿ ತಿಳಿಸಲು ಅವಳನ್ನು ಕೇಳಿದಾಗ, ಅವಳು: 

षप्तोत्तरान्यतेएतानि नव वर्श शतानि ते ।

मासाह् च शत् तथाएव अन्यत् समतेएतम् दिन त्रयम् ॥

ಷಪ್ತೋತ್ತರಾನ್ಯತೇ ಏತಾನಿ ನವ ವರ್ಷ ಶತಾನಿ ತೇ ।

ಮಾಸಾಃ ಚ ಶತ್ ತಥಾ ಏವ ಅನ್ಯತ್ ಸಮತೆ ಏತಮ್ ದಿನ ತ್ರಯಂ ।।

ವಿಷ್ಣುಪುರಾಣ, ಅಂಕ – 1, ಅಧ್ಯಾಯ 15, ಶ್ಲೋಕ 32

ಅರ್ಥ : ನನ್ನ ಸಂಗಡ ನೀವು ಒಂಬೈನೂರ ಏಳು ವರ್ಷಗಳು, ಆರು ತಿಂಗಳುಗಳು ಮತ್ತು ಮೂರು ದಿನಗಳನ್ನು ಕಳೆದಿದ್ದೀರಿ, ಎಂದು ವಿವರಿಸಿದಳು. 

ಅರಿವಿನ ಪರಿಣಾಮ 

ತನ್ನ ಜೀವನದ 907 ವರ್ಷಗಳು  6 ತಿಂಗಳುಗಳು  ಮತ್ತು  3 ದಿನಗಳು ಅಪ್ಸರೆಯ ಸಾಂಗತ್ಯದಲ್ಲಿ ಕಳೆದಿವೆ ಎಂದು ಅರಿತ ಕಂದುವು ಕ್ರೋಧಾವಿಷ್ಟನಾದನು. ತನ್ನನ್ನು ತಾನೇ ನಿಂದಿಸಿಕೊಳ್ಳ ತೊಡಗಿದನು. ಮೋಹಪಾಶಕ್ಕೆ ವಶವಾಗಿ ತನ್ನ ವಿದ್ವತ್ತನ್ನು, ಬ್ರಾಹ್ಮಣ್ಯ ಮತ್ತು ತಪೋಬಲವನ್ನು ಕಳೆದುಕೊಂಡ ಮೂರ್ಖನಾದೆನಲ್ಲ ಎಂದು ಪರಿತಪಿಸತೊಡಗಿದನು. ಆತನ ಹತಾಶೆ ಕೋಪಗಳಿಗೆ ಅಪ್ಸರೆ ಪ್ರಮ್ಲೋಚಾ ಗುರಿಯಾದಳು. ಕಂದುವಿನ ಕ್ರೋಧಾವೇಶವನ್ನು ನೋಡಿ ಹೆದರಿದ ಅಪ್ಸರೆ, ದಿಕ್ಕು ತೋಚದೆ ಆತಂಕದಿಂದ ನಡುಗುತ್ತಿದ್ದಳು. ಭಯಭೀತಳಾದ ಅಪ್ಸರೆಯನ್ನು ಕಂಡ ಕಂದುವಿಗೆ ಅವಳು ಅಮಾಯಕಳೆಂದು ಗೋಚರವಾಯಿತು. ದೇವೇಂದ್ರನ ಷಡ್ಯಂತ್ರವೇ ಅವರ ಮಿಲನಕ್ಕೆ ಕಾರಣವೆಂದು ತಿಳಿಯಿತು. ಅವಳನ್ನು ಶಪಿಸಲಿಲ್ಲ. ಇಂದ್ರಿಯ ನಿಗ್ರಹವಿಲ್ಲದೆ ಕಾಮವಶಕ್ಕೆ ಬಲಿಯಾದನೆಂದು ತನ್ನನ್ನು  ತಾನೇ ಮತ್ತೆ ಮತ್ತೆ ನಿಂದಿಸಿಕೊಂಡನು. ತಕ್ಷಣ ಅಪ್ಸರೆ ಪ್ರಮ್ಲೋಚಾಳು ದೇವಲೋಕಕ್ಕೆ ಹಿಂದಿರುಗುವಂತೆ ಆಜ್ಞೆ ಮಾಡಿದನು. 

ಅಪ್ಸರೆ ಪ್ರಮ್ಲೋಚಾ ಹೆದರುತ್ತ, ಬೆವರುತ್ತ, ಆತಂಕದಿಂದ ದೇವಲೋಕದ ದಾರಿ ಹಿಡಿದಳು. ಆಗ ಅವಳು ಕಂದುವಿನ ಸಂತಾನಕ್ಕೆ ಗರ್ಭವತಿಯಾಗಿದ್ದಳು. ದಾರಿಯಲ್ಲಿ ನೆಲದ ಮೇಲೆ ಬಿದ್ದ ಎಲೆಗಳಿಂದ ತನ್ನ ಬೆವರನ್ನು ಒರಸಿಕೊಳ್ಳುತ್ತ ಮುಂದೆ ಸಾಗಿದಳು. ಅವಳ ಭ್ರೂಣವು ಅವಳ ಬೆವರ ಹನಿಗಳ ಮೂಲಕ ನಿದಾನವಾಗಿ ಹೊರ ಹರಿಯುತ್ತಿತ್ತು. ಆಗ ವಾಯು ಅವಳ ಬೆವರಿನ ಹನಿಗಳಿದ್ದ ಎಲೆಗಳನ್ನು  ಸಂಗ್ರಹಿಸಿ ಆ ಎಲ್ಲ ಹನಿಗಳನ್ನು ಒಂದು ಕಡೆಗೆ ಸೇರಿಸಿತು. ಚಂದ್ರನು ಆ ಭ್ರೂಣವನ್ನು ಕಾಪಾಡಿದನು. ಅದೊಂದು ಹೆಣ್ಣುಮಗುವಾಯಿತು. ಆ ಮಗುವಿಗೆ ಮರಿಶಾ ಎಂದು ನಾಮಕರಣವಾಯಿತು. ಮುಂದೆ ಅವಳು ದಶ ಪ್ರಚೇತಸರ ಪತ್ನಿಯಾದಳು. 

वृक्षाशाग्र गर्भ सम्भूता मरिशाख्या वरानना ।

ताम् प्रदास्यन्ति वो वृक्षशाह् कोप एश प्रशाम्यताम् ॥

ವೃಕ್ಷಾಶಾಗ್ರ ಗರ್ಭ ಸಂಭೂತಾ ಮರಿಶಾಖ್ಯಾ ವರಾನನಾ।

ತಾಮ್ ಪ್ರದಾಸ್ಯನ್ತಿ ವೋ ವೃಕ್ಪಶಾಃ ಕೋಪ ಏಷ ಪ್ರಶಾಮ್ಯತಾಂ।।

ವಿಷ್ಣುಪುರಾಣ, ಅಂಕ – 1, ಅಧ್ಯಾಯ 15, ಶ್ಲೋಕ 50

ಅರ್ಥ : ವೃಕ್ಷ ಸಂಭೂತಳಾದ ಆ ಸುಂದರ ಸ್ತ್ರೀಯೇ ಮರಿಶಾ. ಆ ವೃಕ್ಷಗಳು ಅವಳನ್ನು ನಿನ್ನ ಬಳಿಯೇ ಕಳಿಸುತ್ತವೇ . ನೀನು ಕೋಪವನ್ನು ತ್ಯಜಿಸುವಂತವನಾಗು. 

ಇಂದ್ರಿಯ ನಿಗ್ರಹವಿಲ್ಲದೆ ತಾನು ತಪಸ್ವಿಯಾಗಲು ಯೋಗ್ಯನಲ್ಲ, ಜೀವತ್ಯಾಗ ಮಾಡುವುದೇ ಸರಿಯೆಂದು ಮುಂದುವರೆದ ಋಷಿ ಕಂದುವಿಗೆ ಅಶರೀರವಾಣಿಯೊಂದು ಕೇಳಿಬಂತು. ಪುರುಷೋತ್ತಮಧಾಮಕ್ಕೆ ಹೋಗಿ ಮಹಾವಿಷ್ಣುವನ್ನು ಆರಾಧಿಸಿ, ಪರಮಾತ್ಮನಲ್ಲಿ ಕ್ಷಮೆಯಾಚಿಸಿಬೇಕಾಗಿ ಸೂಚಿಸಿತು. 

साछापि भगवान् कन्दुह् क्शेएने तपसि सत्तमह् ।

पुरुशोत्तम्माख्यातम् विश्नोरायतनम् ययोउ ॥

ಸಾಛಾಪಿ ಭಗವಾನ್ ಕುಂದಃ ಕ್ಷೇಏನ ತಪಸಿ ಸತ್ತಮಃ ।

ಪುರುಷೋತ್ತಮಾಖ್ಯಾತಂ  ವಿಷ್ಣೋರಾಯತನಂ ಯಯೋಉ।।

ವಿಷ್ಣುಪುರಾಣ, ಅಂಕ – 1, ಅಧ್ಯಾಯ 15, ಶ್ಲೋಕ 52

ಅರ್ಥ: ತಪೋಶಕ್ತಿಯನ್ನು ಕಳೆದುಕೊಂಡಂತ ಕಂದುವು ಮಹಾವಿಷ್ಣುವಿನ ಕೃಪಾಕಟಾಕ್ಷದ ಸಲುವಾಗಿ ಪುಣ್ಯಕ್ಷೇತ್ರವಾದ ಪುರುಷೋತ್ತಮಧಾಮಕ್ಕೆ ತೆರೆಳಿದನು. 

ಪಶ್ಚಾತ್ತಾಪ 

ಮಹಾವಿಷ್ಣುವನ್ನು ಜಗನ್ನಾಥನ ರೂಪದಲ್ಲಿ ಆರಾಧಿಸಲ್ಪಡುತ್ತಿದ್ದ ಪುಣ್ಯಕ್ಷೇತ್ರ, ಪುರುಷೋತ್ತಮಧಾಮ. ಅಲ್ಲಿಗೆ ಆಗಮಿಸಿದ ಕಂದುವಿಗೆ ಮಹರ್ಷಿ ಭೃಗು, ಅಂಗೀರ ಮತ್ತು ಮಾರ್ಕಂಡೇಯರ ಆಶ್ರಮಗಳ ದರ್ಶನಭಾಗ್ಯ ಒದಗಿತು. ಆ ಕ್ಷೇತ್ರದಲ್ಲಿ ಅವನು ಆತ್ಮಸಾಕ್ಷಾತ್ಕಾರಕ್ಕಾಗಿ ದೀರ್ಘವಾದ ತಪಸ್ಸನ್ನು ಆಚರಿಸಿದನು. ಸಾಕ್ಷಾತ್ ಬ್ರಹ್ಮದೇವನೇ ರಚಿಸಿದ   ‘ಬ್ರಹ್ಮಪರಾಸ್ತೋತ್ರ’ ವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಹಾಡಿ ಮಹಾವಿಷ್ಣುವಿನ ಪಾದಕಮಲಗಳಿಗೆ ಅರ್ಪಿಸಿದನು. ಕಂದುವಿನ ಭಕ್ತಿಗೆ ಮೆಚ್ಚಿ ಸಾಕ್ಷಾತ್ ಜಗನ್ನಾಥನೇ ಅವನಿಗೆ ದರ್ಶನ ನೀಡಿ ಅವನ ಮನೋಭಿಲಾಷೆಯನ್ನು ಪೂರೈಸುವುದಾಗಿ ಅನುಗ್ರಹಿಸಿದನು. ಕಂದು ಮಹರ್ಷಿಯು ಭವಬಂಧನಗಳಿಂದ ತನ್ನನ್ನು ಮುಕ್ತನಾಗಿಸಬೇಕಾಗಿ ಕೋರುತ್ತಾ  ಮೋಕ್ಷವನ್ನು ಬೇಡಿದನು. ಭಗವಂತ ಅಂತೆಯೇ ಕರುಣಿಸಿದನು. 

ಮಾಯೆಯೇ ಹಾಗೆ. ಜೀವನವನ್ನು ತನ್ನ ಕಪಿಮುಷ್ಠಿಯಲ್ಲಿ ಬಂಧಿಸಿಬಿಡುತ್ತದೆ. ಇದರ ಪರಿಣಾಮವಾಗಿ ಸಮಯದ ಅರಿವು ಉಪೇಕ್ಷೆಗೆ ಒಳಗಾಗುತ್ತದೆ. ಪ್ರಪಂಚವೇ ಸ್ಥಬ್ದವಾಗಿದೆ ಎಂದೆನಿಸುತ್ತದೆ. ದೇವಲೋಕದ ಅಪ್ಸರೆಯರ ಮಾಯಾಜಾಲವೂ ಅಂತೆಯೇ, ಗುಪ್ತಗಾಮಿನಿಯಂತೆ. ಸಾಮಾನ್ಯರ ಅರಿವಿಗೆ ಸಿಲುಕುವಂತದ್ದಲ್ಲ. ಸಮಯದ ಅರಿವು ಮೂಡುವಷ್ಟರಲ್ಲಿ ಅದೆಷ್ಟೋ ಹಿತಾಹಿತಕರ ಘಟನೆಗಳು ಘಟಿಸಿಬಿಟ್ಟಿರುತ್ತವೆ. 

(This is a translation of  an article written in English by Shalini Mahapatra.)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.