close logo

ಆದಿಶಕ್ತಿಯ ಮಹಾಮಾಯಾ ಸ್ವರೂಪ

ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ, ನೀ ದೇಹದೊಳಗೋ ನಿನ್ನೊಳು ದೇಹವೋಎಂಬ ಕನಕದಾಸರ ಪದ್ಯ ಬಹಳ ಆಳವಾದ ಪ್ರಶ್ನೆಯನ್ನೇ ಎಬ್ಬಿಸುವಂತದ್ದು. “ಮಾಯೆ” ಎಂಬ ಪದಕ್ಕೆ ಭಾರತದಾದ್ಯಂತ, ಯೋಗಿಗಳು, ಆಚಾರ್ಯರು, ಜ್ಞಾನಿಗಳು ಮತ್ತು ಸಜ್ಜನರು ಹತ್ತು ಹಲವು ವಿವರಣೆಗಳನ್ನು ಒದಗಿಸಿದ್ದಾರೆ.  ಈ ಲೇಖನದಲ್ಲಿ ಮಾರ್ಕಂಡೇಯ ಪುರಾಣದ ದೇವೀಮಹಾತ್ಮ್ಯ ಹಾಗು ದುರ್ಗಾ ಸಪ್ತಶತಿಯನ್ನು ಆಧಾರವಾಗಿರಿಸಿಕೊಂಡು ಜಗನ್ಮಾತೆಯಾದ ಮಹಾಮಾಯಾಳನ್ನು ಚಿತ್ರಿಸುವ ಪ್ರಯತ್ನ ಮಾಡಿದ್ದೇನೆ.

ಸನಾತನಧರ್ಮದಲ್ಲಿ ಪ್ರಶ್ನೋತ್ತರಗಳೇ ಜ್ಞಾನ ಸಾಧನೆಗೆ ನಾಂದಿ. ಕನಕದಾಸರ ಈ ಪ್ರಶ್ನೆ ಸಾಮಾನ್ಯ ಮನುಷ್ಯರನ್ನೇ ಭಾವಪೂರ್ಣವಾಗಿ ಕಾಡಿದರೆ, ಇನ್ನು ದೇವಾಧಿದೇವತೆಗಳನ್ನು ಕಾಡದೆ ಇದ್ದೀತೆ? ಹೀಗೊಂದು ಪ್ರಶ್ನೆ ಮಾರ್ಕಂಡೇಯ ಪುರಾಣದಲ್ಲಿರುವ ದೇವೀ ಮಹಾತ್ಮ್ಯದ ಅಧ್ಯಾಯದಲ್ಲಿ ಕಾಣಸಿಗುತ್ತದೆ. ನೈಮಿಷಾರಣ್ಯದಲ್ಲಿ ಸೂತಪುರಾಣಿಕರು ಶೌನಕರೆಂಬ ಋಷಿಗಳಲ್ಲಿ ಪರಮಪಾವನವಾದ ಜಗನ್ಮಾತೆಯ ಕಥೆಯನ್ನು ಹೇಳಿರೆಂದು ಪ್ರಾರ್ಥಿಸುತ್ತಾರೆ. ಆಗ ಶೌನಕರು ಶಿವನು ನಂದೀಶ್ವರನಿಗೆ ಹೇಳಿದ ದೇವಿ ಮಹಾತ್ಮೆಯ ಕಥೆಯನ್ನು ಹೇಳುತ್ತಾರೆ. ಆ ಕಥೆಯ ಸಂಕ್ಷಿಪ್ತರೂಪ ಹೀಗಿದೆ:

ಆದಿಶಕ್ತಿಯೇ ಮಹಾಮಾಯಾ

ಆದಿಶಕ್ತಿ ಜಗಜ್ಜನನಿ. ಆಕೆ ತ್ರಿಮೂರ್ತಿಗಳಾದ ಬ್ರಹ್ಮ-ವಿಷ್ಣು-ಶಿವರನ್ನು ಸೃಷ್ಟಿಸಿ ತನ್ನ ಅನ್ಯ ಕೆಲಸಗಳಲ್ಲಿ ಮಗ್ನಳಾಗಿ ಹೊರಟುಹೋಗುತ್ತಾಳೆ. ಎಚ್ಚರಗೊಂಡ ತ್ರಿಮೂರ್ತಿಗಳಿಗೆ, ‘ನಾವು ಯಾರು, ನಾವು ಇಲ್ಲಿ ಯಾವ ಕಾರಣದಿಂದಾಗಿ ಇದ್ದೇವೆ, ನಮ್ಮ ಮಾತೆ ಎಲ್ಲಿ?’ ಎಂಬ ಪ್ರಶ್ನೆಗಳು ಕಾಡುತ್ತಿದ್ದು ದಿಕ್ಕು ತೋಚದಂತಾಗಿರುತ್ತಾರೆ. ಆಗ ಆಕಾಶವಾಣಿಯೊಂದು ಅವರನ್ನು ಜಗನ್ಮಾತೆಯಾದ ಆದಿಶಕ್ತಿಯನ್ನು ನೆನೆಯುತ್ತಾ ತಪಸ್ಸನ್ನಾಚರಿಸಲು ಹೀಗೆ ಸೂಚಿಸುತ್ತದೆ

“ಮನಸ್ಸನ್ನು ಅವಳಲ್ಲಿಯೇ ನೆಟ್ಟು ಧ್ಯಾನಮಗ್ನರಾಗಿರಿ. ದೇವಿಯೇ ಜ್ಞಾನಸ್ವರೂಪ ಎಂದರೆ ಆಕೆಯೇ ಶುದ್ಧವಾದ ಅದ್ವಿತೀಯಬ್ರಹ್ಮ. ಜಗವನ್ನೆಲ್ಲ ಸೃಷ್ಟಿಸಿದ ದೇವಿಯೇ ಎಲ್ಲರಲ್ಲೂ ಆತ್ಮರೂಪವಾಗಿ ಪ್ರವೇಶಿಸುತ್ತಾಳೆ. ಆಕೆಯನ್ನು ನೆನೆಯುತ್ತ ನಿಮ್ಮ ಆತ್ಮಸ್ವರೂಪಳಾದ ದೇವಿಯನ್ನು ಏಕಚಿತ್ತದಿಂದ ಧ್ಯಾನಿಸಿರಿ. ಬಾಹ್ಯೇಂದ್ರಿಯಗಳ ವಿಷಯದೆಲೆದಾಟವನ್ನು ತಿರಸ್ಕರಿಸಿ, ಪ್ರಾಣವಾಯುವನ್ನು ಜಗ್ಗಿ ನಿಮ್ಮ ಆತ್ಮಸ್ವರೂಪವಾದ ದೇವಿಯನ್ನು ನೆನೆಯುತ್ತ ತಾವೂ ಒಂದೇ ದೇವಿಯೂ ಒಂದೇ ಎಂದು ಧ್ಯಾನಿಸಿರಿ”

(ಛಾಂದೋಗ್ಯೋಪನಿಷತ್ ತತ್ವಮಸಿ’ : ತತ್ (ಅದು) ತ್ವಮ್ (ನೀನು) ಅಸಿ (ಆಗಿರುವೆ) ಮಹತ್ವವು ಪ್ರಸಂಗದಲ್ಲಿ ನಿರೂಪಿತವಾಗಿದೆ ಎಂಬದನ್ನು ನಾವು ಅರಿತುಕೊಳ್ಳಬಹುದು. )

ತನ್ನ ಮಕ್ಕಳ ಮೊರೆಯನ್ನು ಆಲಿಸಿದ ಆದಿಶಕ್ತಿಯು ಓಡಿ ಬಂದು ಅವರ ಕಷ್ಟಗಳನ್ನು ನೀಗಿಸುತ್ತಾಳೆ. ಈ ಮೂವರನ್ನು ಬ್ರಹ್ಮಾಂಡದ ಒಡೆಯರನ್ನಾಗಿ ಮಾಡುತ್ತಾಳೆ. ಮಕ್ಕಳಾದ ತ್ರಿಮೂರ್ತಿಗಳು ‘ನಮಗೆ ನಿನ್ನ ಆಶ್ರಯವೊಂದೇ ಸಾಕು ಈ ಸೃಷ್ಟಿಯ ಒಡೆತನ ಬೇಡ’, ಎಂದು ಬೇಡಿದಾಗ, ‘ಮಕ್ಕಳೇ! ಸಕಲ ಸೃಷ್ಟಿಯೂ ನನ್ನ ಆಶ್ರಯದಲ್ಲಿದೆ. ನಾನೇ ಈ ಸೃಷ್ಟಿಯ ಕಾರಣಕರ್ತಳು. ನಿಮ್ಮಲ್ಲಿರುವ ಸರ್ವಸಾಕ್ಷಿಯಾದ ಅರಿವೂ ನನ್ನ ಶಕ್ತಿ-ಸ್ವರೂಪ. ನಿಮ್ಮನ್ನು ಯಾರೂ ಗೆಲ್ಲಲಾರರು, ಇನ್ನು ಸೃಷ್ಟಿ-ಸ್ಥಿತಿ-ಲಯಕಾರ್ಯಗಳು ನಿಮಗೆ ಬಿಟ್ಟಿದ್ದು’ ಎಂದು ಹೇಳಿ ದೇವಿಯು ಪುನಃ ಅದೃಶ್ಯಳಾಗುತ್ತಾಳೆ.

ಈ ಮೇಲಿನ ಕಥಾಪ್ರಸಂಗದ ಮೂಲಕ ನಾವು ಕೆಲವು ವಿಷಗಳನ್ನು ಅರಿತುಕೊಳ್ಳಬಹದು, ಮೊದಲಿಗೆ ದೇವಿಯೇ ಮಾಯೆಯಾಗಿ ತನ್ನ ಮಕ್ಕಳಲ್ಲಿ ಒಂದು ರೀತಿಯ ಭ್ರಮೆಯನ್ನು ಕಲ್ಪಿಸುತ್ತಾಳೆ. ತಾವು ಸುತ್ತಲೂ ನೋಡುತ್ತಿರುವ ಮತ್ತು ಅನುಭವಿಸುತ್ತಿರುವ ಜಗತ್ತೇ ಸತ್ಯ, ತಮ್ಮ ದುಃಖವೇ ದೊಡ್ಡದು ಎಂಬ ಆತಂಕ, ಬೇಕಾದದ್ದು ಸಿಕ್ಕರೆ ಮಾತ್ರ ಸುಖ ಎಂಬ ಅಪನಂಬಿಕೆಯನ್ನು ಕಲ್ಪಿಸುತ್ತಾಳೆ. ಆತ್ಮಸ್ವರೂಪಿಣಿಯಾಗಿ ಸ್ವಯಂ ಆದಿಶಕ್ತಿಯೇ ಅವರಲ್ಲಿದ್ದರೂ ಅದರ ಅರಿವಿಲ್ಲದೆ ಅವಳನ್ನು ಬಾಹ್ಯಪ್ರಪಂಚದಲ್ಲಿ ಹುಡುಕುವ ಭ್ರಮೆಯನ್ನು ರಚಿಸಿ, ಕ್ರಮೇಣ ಆ ಮಾಯೆಯಿಂದ ಹೊರಬರುವ ಆತ್ಮಜ್ಞಾನ ಮಾರ್ಗವನ್ನೂ ತೋರುತ್ತಾಳೆ. ಜ್ಞಾನಸಾಧನೆಯಲ್ಲಿ ನಿರತರಾದ ತ್ರಿಮೂರ್ತಿಗಳಿಗೆ ಜ್ಞಾನಸ್ವರೂಪಳಾದ ದೇವಿಯ ದರ್ಶನ ಮತ್ತು ಜ್ಞಾನಪ್ರಸಾದ ದೊರಕಿದ ಮೇಲೆ ಅವರಿಗೆ ಶುದ್ಧಸ್ಪಟಿಕವಾದ ಸತ್ಯದ ಅರಿವಾಗುತ್ತದೆ, ಆನಂದದ ಅನುಭೂತಿಯಾಗುತ್ತದೆ. ಅವರು ಸತ್-ಚಿತ್-ಆನಂದರಾಗುತ್ತಾರೆ. ಇದೇ ಮಾಯಾ-ಮುಕ್ತರಾಗಿರುವ ಸ್ಥಿತಿ. ‘ಅಹಂ ಬ್ರಹ್ಮಾಸ್ಮಿ’ ಎಂಬ ಶೃತಿವಾಕ್ಯಕ್ಕೆ ಆತ್ಮಶೋಧನೆಯಲ್ಲಿ ತೊಡಗಿರುವ ಸಾಧಕರು ಒತ್ತುಕೊಡುವುದೂ ಈ ಕಾರಣದಿಂದಾಗಿಯೇ. ದಾಸರ ವಾಕ್ಯ ಈಗ ಅರ್ಥವಾಗಲು ಪ್ರಾರಂಭಿಸುತ್ತದೆ ಅಲ್ಲವೇ.

 ಮಹಾವಿಷ್ಣು ಮತ್ತು ಮಹಾಮಾಯಾ

ಈ ಆದಿಶಕ್ತಿಯೇ ಕಾಲಕಾಲಕ್ಕೂ, ಸಂದರ್ಭಗಳಿಗೆ ತಕ್ಕಂತೆ  ಮಹಾಕಾಳಿ, ಮಹಾಲಕ್ಷ್ಮೀ, ಮಹಾಸರಸ್ವತಿಯಾಗಿ ದುಷ್ಟಶಿಕ್ಷಣ-ಶಿಷ್ಟರಕ್ಷಣೆಯಲ್ಲಿ ತೊಡಗುತ್ತಾಳೆ.   ಆದ್ದರಿಂದಲೇ ದೇವಿಯರ ಸ್ತುತಿಗಳಲ್ಲಿ  ಸಾಧಾರಣವಾಗಿ “ಮಹಾಮಾಯೆ” ಎಂಬ ಪದವು ಕಾಣಸಿಗುತ್ತದೆ.

ಕಥೆಯು ಮುಂದುವರೆಯುತ್ತಾ, ತಮ್ಮ ತಾಯಿಯಾದ ಆದಿಪರಾಶಕ್ತಿಯ ಅನುಗ್ರಹ ಪಡೆದ ಬ್ರಹ್ಮ-ವಿಷ್ಣು -ಮಹೇಶ್ವರರು ತಂತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಸೃಷ್ಟಿ-ಸ್ಥಿತಿ-ಲಯ ಕಾರ್ಯಗಳನ್ನು ವಹಿಸಿಕೊಳ್ಳುತ್ತಾರೆ. ಶಿವ ಮತ್ತು ವಿಷ್ಣು, ಬ್ರಹ್ಮನನ್ನು ಪ್ರವೇಶಿಸಿ ಅವನಲ್ಲಿರುವ ಹಲವು ಲೋಕಗಳನ್ನು ಪ್ರತ್ಯಕ್ಷವಾಗಿ ನೋಡಿದ ನಂತರ, ಸೃಷ್ಟಿ ಕಾರ್ಯಕ್ಕೆ ಬ್ರಹ್ಮನೇ ಸೂಕ್ತ ಮತ್ತು ಶ್ರೇಷ್ಠನು ಎಂದು ನಿರ್ಧರಿಸುತ್ತಾರೆ. ಬ್ರಹ್ಮನಿಂದ ಹೊರಗೆ ಬಂದ ಮೇಲೆ ಶಿವನು ಧ್ಯಾನದಲ್ಲಿ ನಿರತನಾಗಿಬಿಡುತ್ತಾನೆ. ಬ್ರಹ್ಮ ವಿಷ್ಣುವಿನಲ್ಲಿರುವ ಲೋಕವನ್ನು ನೋಡಲೆಂದು ವಿಷ್ಣುವಿನ ಒಳಗೆ ಹೋಗುತ್ತಾನೆ. ಆಗ ಮಹಾವಿಷ್ಣು ಯೋಗನಿದ್ರೆಯಲ್ಲಿರುತ್ತಾನೆ. ಬ್ರಹ್ಮ, ವಿಷ್ಣುವಿನ ನಾಭಿಯಿಂದ ಹೊರಗೆ ಬರುತ್ತಾನೆ. ಆಗ ವಿಷ್ಣುವಿನ ಕಿವಿಯಿಂದ ಮಧು-ಕೈಟಭರೆಂಬ ರಾಕ್ಷಸರೂ ಹೊರಬರುತ್ತಾರೆ. ಅವರು ಬ್ರಹ್ಮನನ್ನು ಕೊಂದು ಸಮಸ್ತ ಸೃಷ್ಟಿಯ ಅಧಿಪತ್ಯವನ್ನು ಪಡೆಯಲೆಂದು ಬ್ರಹ್ಮನನ್ನು ಪೀಡಿಸತೊಡಗುತ್ತಾರೆ. ಬ್ರಹ್ಮ ಆದಿಶಕ್ತಿಯನ್ನು ಪ್ರಾರ್ಥಿಸಿ ವಿಷ್ಣುವನ್ನು ಹೆಚ್ಚರಿಸಲು ಕಳಕಳಿಯಿಂದ ಪ್ರಾರ್ಥಿಸುವ ಸ್ತುತಿಯೊಂದು ‘ದುರ್ಗಾ ಸಪ್ತಶತಿ’ ಯಲ್ಲಿ ಹೀಗಿದೆ –

तथा संह्यति रूपान्ते जगतोस्य जगन्मये |
महाविद्या महामाया महामेधा महास्मृतिः ||
महामोहा च भवती महादेवी महासुरी |
प्रकृतिस्त्वं च सर्वस्य गुणत्रयविभायिनी ||
ತಥಾ ಸಂಹೃತಿ ರೂಪಾಂತೆ ಜಗತಸ್ಯ ಜಗನ್ಮಯೇ |
ಮಹಾವಿದ್ಯಾ ಮಹಾಮಾಯಾ ಮಹಾಮೇಧಾ ಮಹಾಸ್ಮೃತಿಃ ||
ಮಹಾಮೋಹಾ ಚ ಭವತೀ ಮಹಾದೇವೀ ಮಹಾಸುರೀ ।
ಪ್ರಕೃತಿಸ್ತ್ವಮ್ ಚ ಸರ್ವಸ್ಯ ಗುಣತ್ರಯವಿಭಾಯಿಣಿ ||
ಜಗನ್ಮಾತೆಯೇ ನಿನೇ ಜಗನ್ಮಯೀ ,ನೀನೇ ಜಗದ ರೂಪವಾಗಿರುವೆ, ನೀನೇ ಮಹಾವಿದ್ಯಾ, ಮಹಾಮಾಯಾ, ಮೆಹಾಮೇಧಾ, ಮಹಾಸ್ಮೃತಿ. ನೀನೇ ಮಹಾಮೋಹಾ, ಮಹಾದೇವಿ, ನೀನೇ ಮಹಾಸುರೀ. ಮೂರು ಗುಣಗಳ ಉತ್ಪನ್ನ ರೂಪಿಣಿಯೂ ನೀನೇ (ಆದ್ದರಿಂದ) ಸರ್ವರ ಪ್ರಕೃತಿಯೂ ನೀನೇ ಆಗಿರುವೆ.

ಆಗ ದೇವಿಯು ವಿಷ್ಣುವನ್ನು ಎಚ್ಚರಿಸುತ್ತಾಳೆ. ಸಾವಿರಾರು ವರ್ಷಗಳ ಕಾಲ ವಿಷ್ಣುವಿಗೂ ಮತ್ತು ಮಧು-ಕೈಟಭರಿಗೂ ಬಹಳ ಘೋರವಾದ ಯುದ್ಧ ನಡೆಯುತ್ತದೆ. ಆಗ ವಿಷ್ಣುವು ಇವರನ್ನು ಸೋಲಿಸುವ ಪರಿಯನ್ನು ತಿಳಿಯಲಾರದೆ ಆದಿಶಕ್ತಿಯನ್ನು ಯಾಚಿಸುತ್ತಾನೆ. ಈ ಮೇಲೆ ಹೇಳಿರುವ ಹಾಗೆ ವಿಷ್ಣುವಿನಲ್ಲಿ ಅಂತರ್ಗತವಾಗಿರುವ ಮಹಾಮಾಯೆಯ ಅಂಶ  ವಿಷ್ಣುವಿನಲ್ಲಿ ಪ್ರಭಲವಾಗ ತೊಡಗುತ್ತದೆ. ಆಕೆಯ ಪ್ರಭಾವಕ್ಕೆ ಒಳಗಾದ ವಿಷ್ಣುವು ಮಧು-ಕೈಟಭರನ್ನು ಮಾತಿನಲ್ಲಿ ಮೋಡಿ ಮಾಡಿ ಅವರನ್ನು ಕೊಲ್ಲುತ್ತಾನೆ.

ಈ ಪ್ರಸಂಗದಿಂದ ನಮಗೆ ಗೋಚರವಾಗುವುದೇನೆಂದರೆ, ಯಾವುದಕ್ಕೂ ಸೋಲದ ಮಧು-ಕೈಟಭರು ವಿಷ್ಣುವಿನ ಮಾತಿನ ಮಾಯಾಜಾಲಕ್ಕೆ ಸಿಲುಕುವುದು, ಮಹಾಮಾಯಾಳು ವಿಷ್ಣುವಿನಲ್ಲಿ ಸೇರಿ ಅವನ ಮೂಲಕ ನಡೆಸಿದ ಲೀಲೆ ಎಂದು.

ಈಕೆಯೇ ವಿಷ್ಣುವಿನ ಯೋಗನಿದ್ರೆಗೆ ಕಾರಣಳು, ಈಕೆಯೇ ಮಧು-ಕೈಟಭರ ಜನನಕ್ಕೆ ಕಾರಣ.

ವಿಷ್ಣುಸಹಸ್ರನಾಮದ 18 ನೇ ಶ್ಲೋಕದಲ್ಲಿ ವಿಷ್ಣುವೇ ಮಹಾಮಾಯ (1) ಎಂದು ಕಂಡುಬಂದರೆ, ಭಗವದ್ಗೀತೆಯ 7ನೇ ಅಧ್ಯಾಯದ 14ನೇ (2) ಶ್ಲೋಕದಲ್ಲಿ ಕೃಷ್ಣನು ಹೀಗೆ ಹೇಳುತ್ತಾನೆ : ‘ನರಸಾಮಾನ್ಯರು ಪ್ರಕೃತಿಯ ಮೂರು ಗುಣಗಳಿಂದ(ಸತ್ವ,ರಾಜಸ್,ತಮಸ್) ಮಾಯೆಗೆ ಒಳಗಾಗುವುದು ಸಹಜ ಆದರೆ ಮಾಯಾ ಎನ್ನುವುದು ನನ್ನ (ಶ್ರೀಕೃಷ್ಣನ ಅಥವಾ ವಿಷ್ಣುವಿನ) ದೈವಿಕಶಕ್ತಿಗಳಲ್ಲಿ ಒಂದಾಗಿರುವ ಕಾರಣ, ನನಗೆ ಶರಣಾದರೆ ಮಾಯೆಯಿಂದ ಮುಕ್ತಿಯನ್ನು ಹೊಂದಬಹುದು’, ಎಂದು. ವಿಷ್ಣುವಿನ ದೈವಿಕ ಶಕ್ತಿಗಳಲ್ಲಿ ಒಂದಾಗಿರುವ ಮಾಯೆ ಜಗನ್ಮಾತೆಯಾದ ಮಹಾಮಾಯಾಳ ಒಂದು ಅಂಶವೇ. ದೇವೀಮಹಾತ್ಮೆಯ ಈ ಮೇಲಿನ  ಕಥೆಯಲ್ಲಿ ಇದು ಸ್ಪಷ್ಟವಾಗುತ್ತದೆ.

ಮಾಯೆ ಮತ್ತು  ಮಹಾಮಾಯಾ

ಮಾರ್ಕಂಡೇಯ ಪುರಾಣದಲ್ಲಿ ‘ಮಾಯಾ’ ಶಬ್ದಕ್ಕೆ ಹೀಗೆ ವರ್ಣನೆಯಿದೆ : ‘ಮಾತ್ಯಸ್ಯಾಮ್ ವಿಶ್ವಮಿತಿ ಮಾಯಾ’ ಎಂದರೆ ಬ್ರಹ್ಮಾಂಡವನ್ನೆಲ್ಲ ತನ್ನಲ್ಲಿ ಸಂಕುಚಿತಗೊಳಿಸಿ ಕೊಂಡಿರುವುದು ಎಂದು. ಶಂಕರಾಚಾರ್ಯರು ವಿಷ್ಣುಸಹಸ್ರನಾಮದ ತಮ್ಮ ಭಾಷ್ಯದಲ್ಲಿ ವಿಷ್ಣುಪುರಾಣವನ್ನು ಉಲ್ಲೇಖಿಸಿ ‘ವಿಷ್ಣು’ ಪದದ ಅರ್ಥವನ್ನು ವಿವರಿಸಿದ್ದಾರೆ. ‘ಯಸ್ಮಾದ್ ವಿಷ್ಟಮಿದಂ ಸರ್ವಂ…ತಸ್ಮಾತ್ ವಿಷ್ಣುರಿತಿ ಖ್ಯಾತಃ’ ಎಂದು. ‘ಯಾರು ಸಮಸ್ತ ಸೃಷ್ಟಿಯಲ್ಲೂ (ಸರ್ವಂ ) ವ್ಯಾಪಿಸಿರುವನೋ (ವಿಷ್ಟಮ್) ಅವನೇ ‘ವಿಷ್ಣು’ ಎಂದು. ವಿಷ್ಣು ಪುರಾಣದಲ್ಲಿ,  ‘ವಿಷ್ಣು’ ಎಂಬ ಪದದ ವ್ಯುತ್ಪತ್ತಿಯನ್ನು ಹೀಗೆ ವರ್ಣಿಸಲಾಗಿದೆ ‘ಚರಾಚರೇಷು ಭೂತೇಷು ವೇಷಣಾತ್ ವಿಷ್ಣುರುಚ್ಯತೇ’ ಎಂದು.  ವಿಷ್ಣುವೆಂದರೆ ಎಲ್ಲ ಚರಾಚರಗಳಲ್ಲಿಯೂ ಎಲ್ಲ ಜೀವಿಗಳಲ್ಲಿಯೂ ವ್ಯಾಪ್ತವಾಗಿರುವವನು ಎಂದು. ಹೀಗೆ ವಿಷ್ಣು ವಿಶ್ವದಲ್ಲಿ ವ್ಯಾಪ್ತವಾಗಿದ್ದರೆ, ಆ ವಿಶ್ವವೆಲ್ಲ ಮಾಯಾಳಲ್ಲಿ ಸಂಕುಚಿತವಾಗಿದೆ. ಅಲ್ಲಿಗೆ, ವಿಷ್ಣು ಬೇರೆಯಲ್ಲ, ಮಹಾಮಾಯಾ ಬೇರೆಯಲ್ಲ. ಮಣ್ಣಿನ ಮಡಿಕೆಯನ್ನು ನೋಡಿದವರು ಇದು ಮಣ್ಣು ಎಂದರೂ ತಪ್ಪಾಗದು, ಮಣ್ಣಿಗೆ ಮಡಿಕೆಯ ಆಕಾರವಿದೆ ಆದರೆ ಅದು ಮೂಲತಃ ಮಣ್ಣು.  ಹಾಗೆಯೇ ವಿಷ್ಣು ಮತ್ತು ಮಹಾಮಾಯಾಳ ಸಂಬಂಧ. ಆಕೆಯೇ ವಿಷ್ಣುವನ್ನು ಹಲವು ಜೀವಿಗಳ ಯೋನಿಯಲ್ಲಿ ಜನಿಸುವಂತೆ ಮಾಡುವ ನಿಗೂಢ ಶಕ್ತಿ. ಆಕೆಯ ಪ್ರೇರಣೆಯಿಂದಲೇ ಜಗತ್ಪಾಲಕನಾದ ವಿಷ್ಣು ದೇವಯೋನಿಯನ್ನು ಬಿಟ್ಟು ಸಾಧಾರಣವೆನಿಸುವ ಮತ್ಸ್ಯ, ಕೂರ್ಮ, ವರಾಹ, ನರಸಿಂಹ ಯೋನಿಗಳಲ್ಲಿ  ಅವತಾರ ಹೊತ್ತು ಬ್ರಹ್ಮಾಂಡವನ್ನು ರಕ್ಷಿಸುವಲ್ಲಿ ಸಮರ್ಥನಾದನು.  ಮಾನವ ಯೋನಿಯಲ್ಲಿ ಜನಿಸಿದ ವಿಷ್ಣುವಿನ ಲೀಲೆಗಳು ನಮಗೆ ಗೊತ್ತೇ ಇದೆ. ವಿಷ್ಣು ಮತ್ತು ಮಹಾಮಾಯಾಳ ಈ ಸಂಬಂಧವನ್ನು ಅರಿತವರು ವಿಷ್ಣುವನ್ನು ‘ಮಾಯಾಲೋಲ’ ಎಂದು, ಆದಿಶಕ್ತಿಯನ್ನು ‘ನಾರಾಯಣಿ’ ಎಂದು ಸಹ ಗುರುತಿಸುತ್ತಾರೆ. ಸಮುದ್ರ ಮಂಥನದ ಸಮಯದಲ್ಲಿ ವಿಷ್ಣು ಸ್ತ್ರೀರೂಪ ತಾಳಿ ರಾಕ್ಷಸರ ಮೇಲೆ ಮೋಹಪಾಶವೆಸಗಿ, ಅವರನ್ನು ಮಾಯೆಯಲ್ಲಿರಿಸಿ ದೇವತೆಗಳಿಗೆ ಅಮೃತಪಾನ ಮಾಡಿಸಿದ ಪ್ರಸಂಗದಿಂದಾಗಿ ಕೆಲವೆಡೆ ವಿಷ್ಣುವಿನ ‘ಮೊಹಿಣೀ’ ರೂಪವೇ ಮಹಾಮಾಯಾಳ ಸಾಕ್ಷಾತ್ ಸ್ವರೂಪ ಎಂದು ಉಲ್ಲೇಖಿಸಲಾಗಿದೆ.  ಮಾರ್ಕಂಡೇಯ ಪುರಾಣದ ದೇವೀ ಮಹಾತ್ಮ್ಯದಲ್ಲಿ ಮಹಾಮಾಯ ಸ್ವಯಂ ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿಯಾಗಿ ತ್ರಿಮೂರ್ತಿಗಳ ಸಹಭಾಗಿನಿಯಾಗಿ ಕಾರ್ಯ ನಿರ್ವಹಿಸುವ ಪರಮ ಶಕ್ತಿ ಎಂಬ ಉಲ್ಲೇಖವಿದೆ. ಅದರಂತೆಯೇ ಛತ್ತೀಸ್ ಘರ್ ನ ಮಹಾಮಾಯಾ ಮಂದಿರದಲ್ಲಿ  ಮೂಲತಃ ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿಯನ್ನು ಆರಾಧಿಸಲಾಗುತ್ತದೆ.

ಶಂಕರ ಭಗವತ್ಪಾದರು ಸೌಂದರ್ಯ ಲಹರಿಯಲ್ಲಿ ‘ಮಾಹಾಮಾಯಾ’ ಎಂಬ ದೇವಿಯ ಅಂಶವನ್ನು ಸಾರವತ್ತಾಗಿ ಈ ಕೆಳಗೆ ಹೇಳಿದಂತೆ ವರ್ಣಿಸಿದ್ದಾರೆ.

महामाया

गिरामाहुर्देवीं द्रुहिणगृहिणीमागमविदो
हरेः पत्नीं पद्मं हरसहचरीमद्रितनयाम्।
तुरिया कापि त्वं दुरधिगम निस्सीममहिमा
महामाया विश्वं भ्रमयसि परब्रह्ममहिषि॥ 97 ॥
ಗಿರಾಮಾಹು-ರ್ದೇವೀಂ ದ್ರುಹಿಣಗೃಹಿಣೀ-ಮಾಗಮವಿದೋ
ಹರೇಃ ಪತ್ನೀಂ ಪದ್ಮಾಂ ಹರಸಹಚರೀ-ಮದ್ರಿತನಯಾಮ್ ।
ತುರೀಯಾ ಕಾಪಿ ತ್ವಂ ದುರಧಿಗಮ-ನಿಸ್ಸೀಮ-ಮಹಿಮಾ
ಮಹಾಮಾಯಾ ವಿಶ್ವಂ ಭ್ರಮಯಸಿ ಪರಬ್ರಹ್ಮಮಹಿಷಿ ॥ 97 ॥
ಆಗಮ ಶಾಸ್ತ್ರವನ್ನು ಬಲ್ಲವರು ನಿನ್ನನ್ನು ವಾಗ್ದೇವಿ, ಸರಸ್ವತಿ, ಬ್ರಹ್ಮನ ಪತ್ನಿ ಎಂದು, ನಾರಾಯಣನ ಹೃದಯ ವಲ್ಲಭೆ, ಮಹಾಲಕ್ಷ್ಮೀ  ಎಂದು ಮತ್ತು ನೀನೇ ಹಿಮವಂತನ ಪುತ್ರಿ, ಪಾರ್ವತಿ, ಶಿವನ ಸಹಧರ್ಮಿಣಿ ಎಂದು ಹೇಳುತ್ತಾರೆ. ಆದರೆ ತಾಯೇ, ನೀನು ತುರಿಯಾ ಎಂಬ ಪ್ರಜ್ಞಾವಸ್ಥೆಯು. ನೀನು ನಿಗೂಢವಾದ, ನಿಸ್ಸೀಮ ಮಹಿಮಳಾದ ಮಹಾಮಾಯೆ. ವಿಶ್ವವನ್ನು ಭ್ರಮೆಯಲ್ಲಿ ಇರಿಸಿರುವಂತ ಅದ್ವಿತೀಯಬ್ರಹ್ಮಜ್ಞಾನದ ಒಡತಿ (ನೀನೆ ಬ್ರಹ್ಮಸ್ವರೂಪಿಣಿ).

ಮಾಯಾ, ಬ್ರಹ್ಮಾಂಡದ  ಚಲನಶಕ್ತಿ .  ಮಾಯೆಯಲ್ಲಿ ಸಿಲುಕಿ ಅದರಿಂದ ಹೊರಬಂದರೆ ಅಷ್ಟೇ  ಮಾಯಾಮುಕ್ತರಾಗಿ ಸತ್-ಚಿತ್-ಆನಂದದ ಅನುಭೂತಿಯೂ ಸಾಧ್ಯವಾಗುವುದು. ‘ಮೀಯತೆ ಅನಯಾ ಇತಿ ಮಾಯಾ’ ಎಂದರೆ ಯಾವುದು ಅಳತೆಗೆ ಸಿಗುತ್ತದೆಯೋ, ಯಾವುದನ್ನೂ ನಿರ್ದಿಷ್ಟವಾಗಿ ಇಷ್ಟೇ ಎಂದು ಹೇಳಬಹುದೋ ಅದು ಮಾಯಾ ಎಂದು. ಅದ್ವಿತೀಯಬ್ರಹ್ಮವಸ್ತುವನ್ನು (ಬ್ರಹ್ಮಜ್ಞಾನವನ್ನು) ಅಳಿಯಲು ಸಾಧ್ಯವಿಲ್ಲ. ಮನುಷ್ಯರಲ್ಲಿ  ‘ನಾನು-ನನ್ನದು’ ಎಂಬ ಪ್ರಜ್ಞೆ ಅಳತೆಗೆ ಸಿಗುವಂತದ್ದು.   ಈ ಶ್ಲೋಕದಲ್ಲಿ ಪುರುಷ-ಪ್ರಕೃತಿ ಸ್ವರೂಪರಾದ ಬ್ರಹ್ಮ-ಸರಸ್ವತೀ, ಲಕ್ಷ್ಮೀ-ನಾರಾಯಣ ಮತ್ತು ಶಿವ-ಪಾರ್ವತಿ ಯರ ಉಲ್ಲೇಖವಿದೆ. ಲೌಕಿಕವಾಗಿ (ಆಗಮ ಶಾಸ್ತ್ರದ ಉಲ್ಲೇಖ), ದೇವಿಯರಾದ ಪಾರ್ವತಿ, ಲಕ್ಷ್ಮಿ  ಮತ್ತು ಸರಸ್ವತಿ ಮಾಯೆಯ ಅಂಶವೇ ತಾವಾಗಿ ಲೋಕದಲ್ಲಿ ಸ್ವಾಭಾವಿಕವಾಗಿ ಅಂತರ್ಗತವಾಗಿದ್ದಾರೆ ಎನ್ನುವುದು ಶಂಕರಾಚಾರ್ಯರ ವಿಚಾರ. ಭ್ರಮೆಯಿಂದ ಮುಕ್ತರಾಗಿ  ‘ಸ್ವಾತ್ಮಾ ಬ್ರಹ್ಮ’ ಎಂಬ ಅರಿವು ಮೂಡುವುದು ‘ತುರಿಯಾ’ ಎಂಬ ಅವಸ್ಥೆಯಲ್ಲಿ.   “ಜಾಗೃತ ಸ್ವಪ್ನ ಸುಷುಪ್ತ್ಯಾದಿ ಪ್ರಪಂಚಂ ಯತ್ಪ್ರಕಾಶತೆ ತದ್ಬ್ರಹ್ಮಮಿತ್ಯುಚ್ಯತೇ’ ಎಂಬ ಶ್ರುತಿ ವಾಕ್ಯದಂತೆ ಎಚ್ಚರವಿದ್ದಾಗಲೂ, ಸ್ವಪ್ನಾವಸ್ಥೆಯಲ್ಲೂ, ಗಾಢವಾದ ನಿದ್ರಾವಸ್ಥೆಯಲ್ಲೂ ಪ್ರಕಾಶಿಸುವ ನಿರ್ವಿಕಲ್ಪ ಅರಿವೇ ಬ್ರಹ್ಮ, ಅದೇ ಆತ್ಮ ಸ್ವರೂಪ ಎನ್ನುವ ಅರಿವಿನ ಸ್ಥಿತಿ, ತುರಿಯಾ. ಆ ಶುದ್ಧಸ್ಪಟಿಕದಂತಿರುವ ಅರಿವು ತಾಯಿ ಮಹಾಮಾಯಾ ಎಂದು ಶಂಕರರು ಹೇಳುತ್ತಾರೆ.

ಇಲ್ಲಿಗೆ ದಾಸವಾಣಿಯಾದ ‘ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ’ ಎಂಬ ವಾಕ್ಯದ ಕಿರುಪರಿಚಯವಾಗಿದೆ ಎಂದುಕೊಂಡಿದ್ದೇನೆ. ಮಾತೆ ಮಹಾಮಾಯೆ ನಮ್ಮನ್ನು ಕಾಪಾಡಲಿ ಎಂದು ಹಾರೈಸುವೆ.

1. ವೇದ್ಯೋ ವೈದ್ಯಃ ಸದಾ ಯೋಗೀ ವೀರಹ ಮಾಧವೋ ಮಧುಃ।

ಅತೀಂದ್ರಿಯೋ ಮಹಾಮಾಯೋ ಮಹೋತ್ಸಾಹೋ ಮಹಾಬಲಃ  ।। 18

2. ದೈವೀ ಹ್ಯೇಷಾ ಗುಣಮಯೀ ಮಮ್ ಮಾಯಾ ದುರತ್ಯಯಾ |

ಮಾಮೇವ ಯೇ ಪ್ರಪದ್ಯಂತೇ ಮಾಯಾಮೇತಾಂ ತರಂತಿ ತೇ  ||7.14||

ಗ್ರಂಥ ಋಣ

  • ದುರ್ಗಾ ಸಪ್ತಶತಿ – ಗೀತಾ ಪ್ರೆಸ್ ಗೋರಖ್‌ಪುರ (ಹಿಂದಿ) : ಪಂಡಿತ್ ಶ್ರೀ ನಾಮ್ ನಾರಾಯಣ ದೇತ್ ಜಿ ಶಾಸ್ತ್ರಿ
  • ಶ್ರೀ ದುರ್ಗಾ ಸಪ್ತಶತಿ ಹಿಂದಿ ವ್ಯಾಖ್ಯಾನ ಸಂಪಾದಿಸಿದವರು ಡಾ. ಸತ್ಯ ವ್ರತ್ ಸಿಂಗ್ ಸೀತಾಪುರ್ 1983 ಇನ್ಸ್ಟಿಟ್ಯೂಟ್ ಫಾರ್ ಪೌರಾನಿಕ್ ಅಂಡ್ ವೈದಿಕ್ ಸ್ಟಡೀಸ್
  • ಶ್ರೀ ದೇವಿ ಮಹಾತ್ಮ್ಯೆ ಪುರಾಣ : ಶ್ರೀ ಪಶುಪತಯ್ಯಸ್ವಾಮಿ ಚಿನ್ನಯ್ಯಸ್ವಾಮಿ, ಶಾಬಾಧಿ ಮಠ
  • ಸೌಂದರ್ಯ ಲಹರಿ 97
  • ಶಂಕರಾಚಾರ್ಯರ ವಿಷ್ಣುಸಹಸ್ರನಾಮಭಾಷ್ಯ 

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.