close logo

ಅಪ್ಸರಾ ಭಾಗ ೧೦ : ಅಪ್ಸರೆ ಘೃತಾಚಿಯ ವರಿಷ್ಠ ಪುತ್ರರು

ವಿಷ್ಣು ಪುರಾಣದಲ್ಲಿ ಸಮುದ್ರ ಮಂಥನದ ಸವಿಸ್ತಾರ ವಿವರಣೆಗಳನ್ನು ಕಾಣಬಹುದು. ಅಂತೆಯೇ ಸಮುದ್ರ ಮಂಥನದ ಸಮಯದಲ್ಲಿ ಹೊರಬಂದ ಅದೆಷ್ಟೋ ಅಮೋಘವಾದ ವಿಷಯಗಳ ವಿವರಣೆ ಮತ್ತು ವರ್ಣನೆಗಳು ಸಹ ಇದರಲ್ಲಿ ಸಿಗುತ್ತವೆ. ಹೀಗೆ ಹೊರಬಂದ ಶ್ರೇಷ್ಠ ವ್ಯಕ್ತಿಗಳಲ್ಲಿ ಶ್ರೀಮನ್ನಾರಾಯಣನ ಶ್ರೀಮತಿ, ಮಹಾಲಕ್ಷ್ಮಿಯೂ ಒಬ್ಬಳು. ಕ್ಷೀರಸಾಗರವನ್ನು ಕಡಿಯುತ್ತಿದ್ದಾಗ ಅಲೌಕಿಕ ಸುಂದರಿಯರಾದ ಕೆಲವು ಅಪ್ಸರೆಯರೂ ಹೊರಬಂದರು ಎಂದು ಹೇಳಲಾಗಿದೆ. ಘೃತಾಚಿ ಎಂಬ ಅಪ್ಸರೆಯ ನೇತೃತ್ವದಲ್ಲಿ ಸಮಸ್ತ ಅಪ್ಸರ ಬಳಗವು ಶ್ರೀ ಸೂಕ್ತವನ್ನು ಸ್ತುತಿಸುತ್ತ, ಸಂಗೀತ-ನೃತ್ಯಗಳಿಂದ ಲಕ್ಷ್ಮೀದೇವಿಯನ್ನು  ಸ್ವಾಗತಿಸಿದರು ಎಂದು ಹೇಳಲಾಗಿದೆ. 

ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದಲ್ಲಿಯೂ ಅದೆಷ್ಟೋ ಶ್ರೇಷ್ಠರಾದ ಪುರಾಣ ಪುರುಷರಿಗೆ ಜನ್ಮವಿತ್ತ ಅಪ್ಸರೆ ಘೃತಾಚಿಯ ಕಥೆಗಳು ಆಗಾಗ್ಗೆ  ಕಾಣಸಿಗುತ್ತವೆ. 

ಪುರು ವಂಶದ ಅಭಿವೃದ್ದಿಯಲ್ಲಿ ಅಪ್ಸರೆ ಘೃತಾಚಿಯ ಪಾತ್ರ 

ಪುರು ವಂಶದಲ್ಲಿ  ಪುರು, ಪುರುವಿನ ಮಗ ಜನಮೇಜಯ, ಮತ್ತವನ ಮಗ ಪ್ರಾಚಿನ್ವಾನ್ ಹೆಸರಾಂತ ರಾಜರು. ಪ್ರಾಚಿನ್ವಾನನ ಮಕ್ಕಳು ಮೊಮ್ಮಕ್ಕಳ ಪೈಕಿ ಪ್ರವೀರ, ಮನುಸ್ಯು, ಚಾರುಪದ, ಸುದ್ಯು, ಬಹುಗವ, ಸನ್ಯಾತಿ, ಅಹಂಯಾತಿ ಮತ್ತು ರೌದ್ರಾಶ್ವರು ಕೆಲವರು. ಅಪ್ಸರೆ ಘೃತಾಚಿಯು ರೌದ್ರಾಶ್ವನ ಹತ್ತು ಪುತ್ರರ ತಾಯಿಯಾಗಿ ಪುರು ವಂಶವನ್ನು ಮುನ್ನಡೆಸಿದವಳು. 

ऋतेयुस् तस्य कक्षेयुः

स्थण्डिलेयुः कृतेयुकः

जलेयुः सन्नतेयुश् च​

धर्म​-सत्य​-व्रतेयवः

दशैते ऽप्सरसः पुत्रा

वनेयुश् चावमः स्मृतः

घृताच्याम् इन्द्रियाणीव​

मुख्यस्य जगद्-आत्मनः ।।

ಋತೇಯುಸ್ ತಸ್ಯ ಕಕ್ಷೆಯುಃ

ಸ್ಥಂಡಿಲೇಯುಃ ಕೃತೇಯುಕಃ ॥

ಜಲೇಯುಃ ಸನ್ನತೇಯುಶ್ ಚ ॥

ಧರ್ಮ-ಸತ್ಯ-ವ್ರತೇಯವಃ

ದಶೈತೇಪ್ಸರಸಃ ಪುತ್ರಾ

ವನೇಯುಷ್ ಚಾವಮಃ ಸ್ಮೃತಃ

ಘೃತಾಚ್ಯಾಮ್ ಇಂದ್ರಿಯಾಣೀವ

ಮುಖ್ಯಸ್ಯ ಜಗದ್-ಆತ್ಮನಃ ।।

————–ಶ್ರೀಮದ್ಭಾಗವತ : 9.20.4-5

ಅರ್ಥ : ರೌದ್ರಾಶ್ವನಿಗೆ ಋತ್ಯೇಯು, ಕಕ್ಷೇಯು, ಸ್ಥಂಡಿಲೇಯು, ಕೃತೇಯುಕ, ಜಲೇಯು, ಸನ್ನತೇಯು, ಧರ್ಮೇಯು, ಸತ್ಯೇಯು, ವ್ರತೇಯು ಮತ್ತು ವನೇಯು ಎಂಬ ಹೆಸರಿನ ಹತ್ತು ಪುತ್ರರಿದ್ದರು. ಜೀವಿಗಳಲ್ಲಿ  ಚೇತನವು ‘ಪ್ರಾಣ’ದ ನಿಯಂತ್ರಣದಲ್ಲಿರುವ ಹತ್ತು ಇಂದ್ರಿಯಗಳಂತೆ  ರೌದ್ರಾಶ್ವವನ ದಶ ಪುತ್ರರೂ ತಮ್ಮ ತಂದೆ ರೌದ್ರಾಶ್ವನ ಹಿಡಿತದಲ್ಲಿದ್ದರು. ಇವರೆಲ್ಲರೂ ಅಪ್ಸರೆ ಘೃತಾಚಿಯ ಮಕ್ಕಳು. 

ರೌದ್ರಾಶ್ವ ಮತ್ತು ಘೃತಾಚಿಯ ಮಗ ಋತ್ಯೇಯು. ಋತ್ಯೇಯುವಿನ ಮಗ ರೇಭಿ. ಈ ರೇಭಿಯ ಮಗನೇ ದುಶ್ಯಂತ (ದುಶ್ಮಂತ). 

ಭೃಗು ವಂಶದ ಅಭ್ಯುದಯದಲ್ಲಿ  ಅಪ್ಸರೆ ಘೃತಾಚಿಯ ಪಾತ್ರ 

ಭೃಗು ವಂಶದ ಬೆಳವಣಿಗೆಯಲ್ಲಿ  ಅಪ್ಸರೆ ಘೃತಾಚಿಯ ಪಾತ್ರ ಪ್ರಮುಖವಾದದ್ದು. 

भृगोः सुदयितः पुत्रश्च्यवनो नाम भार्गवः॥ 

च्यवनस्य च दायादः प्रमतिर्नाम धार्मिकः।

प्रमतेरप्यभूत्पुत्रो घृताच्यां रुरुरित्युत॥

रुरोरपि सुतो जज्ञे शुनको वेदपारगः।

प्रमद्वरायां धर्मात्मा तव पूर्वपितामहः॥१ – ५ : ८,९,१०

ಭೃಗೋಃ ಸುದಯಿತಃ ಪುತ್ರಃ ಚ್ಯವನೋ ನಾಮ ಭಾರ್ಗವಃ ।।

ಚ್ಯವನಸ್ಯಾಪಿ ದಾಯಾದಃ ಪ್ರಮತಿರ್ ನಾಮ ಧಾರ್ಮಿಕಃ ।

ಪ್ರಮತೇರಪ್ಯಯ ಅಭೂತ ಪುತ್ರೋ ಘೃತಾಚ್ಯಾಂ ರುರು ಇತ್ಯ ಉತ ।।

ರುರೋರಪಿ ಸುತೋ ಜಜ್ಞೆ  ಶುನಕೋ ವೇದಪಾರಗಃ ।

ಪ್ರಮದ್ವರಾಯಾಮ್ ಧರ್ಮಾತ್ಮಾ ತವ ಪೂರ್ವಪಿತಾಮಹಃ ।। 1-5 : 8,9,10 

———————————–ಮಹಾಭಾರತ , ಆದಿ ಪರ್ವ

ಭೃಗು ಮುನಿಗಳಿಗೆ ಚ್ಯವನ ಎಂಬ ಮಗನಿದ್ದನು, ಚ್ಯವನನ ಮಗ ಪ್ರಮತಿ. ಧಾರ್ಮಿಕನಾದ ಪ್ರಮತಿ ಮತ್ತು ಅಪ್ಸರೆ ಘೃತಾಚಿಗೆ ಜನಿಸಿದ ಮಗನೇ ರುರು. ರುರು ಮುನಿಗಳ ಪತ್ನಿ ಪ್ರಮದ್ವರ, ಆ ದಂಪತಿಗಳಿಗೆ ಧರ್ಮಾತ್ಮನಾದ ಮಗ, ಶುನಕನು ಜನಿಸಿದನು. ವೇದಜ್ಞನೂ ಮತ್ತು ಧೀಮಂತನಾದ ಶುನಕನು ಸನ್ಯಾಸವನ್ನು ಸ್ವೀಕರಿಸಿ ತನ್ನ ಪೂರ್ವಜರಂತೆಯೇ ವಿಖ್ಯಾತನಾದನು. 

ಅಮಾವಸು ವಂಶದಲ್ಲಿ ಅಪ್ಸರೆ ಘೃತಾಚಿಯ ಪಾತ್ರ 

ರಾಮಾಯಣದಲ್ಲಿ ಕುಶ ವಂಶಕ್ಕೆ ಸೇರಿದ ಕುಶನಾಭನ ಕಥೆಯಿದೆ. ಇವನು ಅಮಾವಸು ಸಾಮ್ರಾಜ್ಯವನ್ನು ಸ್ಥಾಪಿಸಿದ ಮಹಾವೀರ. ಘೃತಾಚಿಯ ರೂಪ ಲಾವಣ್ಯಗಳಿಗೆ ಮನಸೋತ ಕುಶನಾಭನು ಕಾಲಾಂತರದಲ್ಲಿ ಅವಳನ್ನೇ ವರಿಸಿ ಶತ ಪುತ್ರಿಯರನ್ನು ಪಡೆದನು. 

कुशनाभस्तु राजर्षि: कन्याशतमनुत्तमम्।

जनयामास धर्मात्मा घृताच्यां रघुनन्दन।। १-३२-११।।

ಕುಶನಾಭಸ್ತು ರಾಜರ್ಷಿ: ಕನ್ಯಾಶತಮನುತ್ತಮಮ್ ।

ಜನಯಾಮಾಸ ಧರ್ಮಾತ್ಮಾ ಘೃತಾಚ್ಯಾಂ ರಘುನಂದನ ।। 1-32-11

——————————ವಾಲ್ಮೀಕಿ ರಾಮಾಯಣ, ಬಾಲ ಕಾಂಡ 

ಕುಶನಾಭ ತನ್ನ ಶತ ಪುತ್ರಿಯರ ವಿವಾಹ ನೆರವೇರಿದ ಬಳಿಕ ಒಬ್ಬ ಮಗನನ್ನು ಇಚ್ಛಿಸುತ್ತಾನೆ. ಘೃತಾಚಿ ಮತ್ತು ಕುಶನಾಭ ದಂಪತಿಗಳು ಪುತ್ರಕಾಮೇಷ್ಟಿಯಾಗವನ್ನು ಕೈಗೊಳ್ಳುತ್ತಾರೆ. ಯಾಗವನ್ನು ಆಚರಿಸುವಾಗ , ಬ್ರಹ್ಮನ ಮಾನಸಪುತ್ರನಾದ ಕುಶ ಎಂದರೆ ಕುಶನಾಭನ ತಂದೆಯು ಆವಿರ್ಭವಿಸಿ ಅವರನ್ನು ಆಶೀರ್ವದಿಸುತ್ತಾನೆ. 

पुत्रस्ते सदृश: पुत्र भविष्यति सुधार्मिक:।

गाधिं प्राप्स्यसि तेन त्वं कीर्तिं लोके च शाश्वतीम्।।१.३४.३।।

ಪುತ್ರಸ್ತೇ ಸದೃಶ: ಪುತ್ರ ಭವಿಷ್ಯತಿ ಸುಧಾರ್ಮಿಕ: ।

ಗಾಧಿಂ ಪ್ರಾಪ್ಯಸಿ ತೇನ ತ್ವಂ ಕೀರ್ತಿಂ ಲೋಕೇ ಚ ಶಾಶ್ವತೀಮ್ ॥1.34.3।।

ಹೇ ಪುತ್ರ! ನಿನಗೆ ನಿನ್ನಂತೆಯೇ ಕೀರ್ತಿವಂತನಾದ ಮತ್ತು ಧಾರ್ಮಿಕನಾದ ಗಾಧಿ ಎಂಬ ಮಗನ ಅನುಗ್ರಹವಾಗುತ್ತದೆ. ಅವನಿಂದಾಗಿ ಲೋಕದಲ್ಲಿ ನಿನ್ನ ಕೀರ್ತಿಯೂ ಶಾಶ್ವತವಾಗಿ ಮೆರೆಯುವಂತಾಗುತ್ತದೆ. 

ಕುಶನ ಆಶಿರ್ವಾದ ಫಲಿಸಿ ಅಪ್ಸರೆ ಘೃತಾಚಿಯಲ್ಲಿ ಗಾಧಿ ಎಂಬ ಕುಶನಾಭನ ಪುತ್ರರತ್ನನ ಜನನವಾಗುತ್ತದೆ. ಈ ಗಾಧಿಯ ಮಗನೇ ಮಹರ್ಷಿ ವಿಶ್ವಾಮಿತ್ರ. 

ಅಪ್ಸರೆ ಘೃತಾಚಿ ಮತ್ತು ವಿಶ್ವಕರ್ಮ 

ಪುರಾಣಗಳಲ್ಲಿ ವಿಶ್ವಕರ್ಮನ ಕಥೆಯೊಂದಿದೆ. ವಿಶ್ವಕರ್ಮನು ತನ್ನ ಮಗಳಾದ ಚಿತ್ರಾಂಗದೆಯ ಮೇಲೆ ವಾತ್ಸಲ್ಯವಿಲ್ಲದೆ ಸಂಬಂಧವನ್ನೇ ತೊರೆದುಕೊಂಡಿದ್ದನು. ಆದ್ದರಿಂದ ಚಿತ್ರಾಂಗದೆಯು  ವೈವಾಹಿಕ ಸುಖದಿಂದ ವಂಚಿತಳಾಗುವಂತಾಯಿತು. ಇದನ್ನು ತಿಳಿದ  ಋತಧ್ವಜ ಎಂಬ ಋಷಿಯು ವಿಶ್ವಕರ್ಮನು ವಾನರನಾಗಲೆಂದು ಶಪಿಸಿದನು. ವಿಶ್ವಕರ್ಮ ವಾನರನಾಗಿ ಕಾಡು ಮೇಡುಗಳಲ್ಲಿ ವಾಸಿಸ ತೊಡಾಗಿದೆ. ಹೀಗೆ ಒಮ್ಮೆ, ಹಲವಾರು ವರ್ಷಗಳ ಕಾಲ ಆಲದ ಮರದಲ್ಲಿ ಕಟ್ಟುಹಾಕಲ್ಪಟ್ಟಿದ್ದ  ಜಾಬಾಲಿ ಎಂಬ ಋಷಿಯನ್ನು ವಾನರನಾಗಿದ್ದ ವಿಶ್ವಕರ್ಮನು ಬಂಧನದಿಂದ ಬಿಡಿಸಿದ. ಇದನ್ನು ಕಂಡು ಪ್ರಸನ್ನಚಿತ್ತರಾದ ಋತಧ್ವಜರು ಬೇಕಾದ ವರವನ್ನು ಕೇಳುವಂತೆ ಆ ಕಪಿಯನ್ನು ಅನುಗ್ರಹಿಸಿದರು. ಆಗ ಆ ಮಂಗವು “ಮುನಿವರ್ಯ! ನಾನು ಚಿತ್ರಾಂಗದೆಯ ತಂದೆ ವಿಶ್ವಕರ್ಮನು. ನಾನು ತಮ್ಮ ಶಾಪಕ್ಕೊಳಗಾಗಿ ಕಪಿಯಾಗಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಬೇಕಾಗಿ ಬೇಡಿಕೊಳ್ಳುವೆ.  ನನ್ನನ್ನು ಈ ಶಾಪದಿಂದ ಮುಕ್ತನನ್ನಾಗಿಸಿ ಪುನಃ ನನಗೆ ಮಾನವ ದೇಹವನ್ನು ಅನುಗ್ರಹಿಸಬೇಕೆಂದು ಕೋರಿಕೊಳ್ಳುತ್ತೇನೆ.” ಎಂದು ವಿನಮ್ರವಾಗಿ ಕೇಳಿಕೊಂಡಿತು. ಆಗ ಋತಧ್ವಜರು, ಆ ಮಂಗವು ಅಪ್ಸರೆ ಘೃತಾಚಿಯನ್ನು ಸೇರಿದಾಗ ಅವರೀರ್ವರಿಗಾಗುವ  ಮಗುವಿನ  ಜನನದ ಸಂದರ್ಭದಲ್ಲಿ  ವಿಶ್ವಕರ್ಮನ  ಶಾಪವಿಮೋಚನೆಯೂ ಆಗುತ್ತದೆ ಎಂದು ಆಶೀರ್ವದಿಸಿದರು. 

ಅಪ್ಸರೆ ಘೃತಾಚಿಗೆ ಆ ಕಪಿಯ ನಿಜ ಸಂಗತಿಯು ತಿಳಿದು ಬಂದು ತಾನೂ ಕಪಿಯಾಗಿ ಮಾರ್ಪಟ್ಟಳು. ಅವರಿಬ್ಬರು ಸೇರಿದರು. ಹತ್ತು ತಿಂಗಳ ನಂತರ ಅವರಿಗೆ ‘ನಳ’ ಎಂಬ ಮಗನುಟ್ಟಿದನು, ಅಂದೇ ವಿಶ್ವಕರ್ಮನ ಶಾಪವಿಮೋಚನೆಯೂ ಆಯಿತು. ಈ ಮೇಧಾವಿ ನಳನೇ ರಾಮಾಯಣದಲ್ಲಿ ನೀರಿನ ಮೇಲೆ ತೇಲುವ ಕಲ್ಲುಗಳ ರಾಮ ಸೇತುವೆಯ ನಿರ್ಮಾಣದ  ಶಾಸ್ತ್ರಜ್ಞನು.  ಈ ಸೇತುವೆಯ ಸಹಾಯದಿಂದ ಸಮಸ್ತ ವಾನರ ಸೇನೆಯು ಸಮುದ್ರವನ್ನು ದಾಟಿ ಲಂಕೆಯನ್ನು ಸೇರಿದರು. 

धनदस्य सुतश्श्रीमान् वानरो गन्धमादन:।

विश्वकर्मात्वजनयन्नलं नाम महाहरिम्।।1.17.11।।

ಧನದಸ್ಯ ಸುತಶ್ರೀಮಾನ್ ವಾನರೋ ಗನ್ಧಮಾದನ: ।

ವಿಶ್ವಕರ್ಮಾತ್ವಜನಯನ್ನಲಂ ನಾಮ ಮಹಾಹರಿಮ್৷৷1.17.11৷৷

—————————–ವಲ್ಮೀಕಿ ರಾಮಾಯಣ, ಬಾಲ ಕಾಂಡ 

ಅರ್ಥ : ಕುಬೇರನಿಗೆ ಗಂಧಮಾದನ ಎಂಬ ಮಗನ ಅನುಗ್ರಹವಾಯಿತು ಮತ್ತು ವಿಶ್ವಕರ್ಮನಿಗೆ ನಳ ಎಂಬ ಮಗನು ಜನಿಸಿದನು. 

ಪುರಾಣಗಳಲ್ಲಿ ಅಪ್ಸರೆ ಘೃತಾಚಿ ಮತ್ತು ವಿಶ್ವಕರ್ಮನ ಉಲ್ಲೇಖವಿರುವ ಮತ್ತೊಂದು ಕಥೆ ಸಿಗುತ್ತದೆ. ಈ ಕಥೆಯ ಪ್ರಕಾರ ಅವರಿಬ್ಬರೂ ಶಾಪಗ್ರಸ್ತರಾಗಿ ಭೂಮಿಯ ಮೇಲೆ ನರಮಾನವರಾಗಿ ಜನ್ಮ ಪಡೆಯುತ್ತಾರೆ. ವಿಶ್ವಕರ್ಮನು ಒಬ್ಬ ಬ್ರಾಹ್ಮಣನಾಗಿ ಜನ್ಮ ತಾಳಿದರೆ, ಘೃತಾಚಿಯು  ಗೋಪಾಲಕರ ಮನೆಯಲ್ಲಿ ಜನ್ಮ ಪಡೆಯುತ್ತಾಳೆ. ಕಾಲಾಂತರದಲ್ಲಿ ಅವರು ದಾಂಪತ್ಯವನ್ನು ಸ್ವೀಕರಿಸಿ ಐವರು ಪುತ್ರರಿಗೆ ತಂದೆ-ತಾಯಿಗಳಾಗುತ್ತಾರೆ. ಆ ಐವರು – ಮನು, ಮಯ, ತ್ವೇಷ್ಟ , ಶಿಲ್ಪಿ ಮತ್ತು ದೇವಾಗ್ಯ. ಈ ಐವರಿಂದಲೇ ಭೂಮಿಯ ಮೇಲೆ ಅಕ್ಕಸಾಲಿಗರು, ಬಡಗಿಯರು, ಕಂಬಾರರು, ಕುಲುಮೆ ಕೆಲಸ ಮಾಡುವವರು ಮತ್ತು ಶಿಲ್ಪಿಗಳ ಕುಲಗಳು ವೃದ್ದಿಸಿದವು ಎಂದು ಹೇಳಲಾಗಿದೆ. 

ಅಪ್ಸರೆ ಘೃತಾಚಿ ಮತ್ತು ಶುಕ ಮಹರ್ಷಿಯ ಜನನ 

ಒಮ್ಮೆ ವ್ಯಾಸ ಮಹರ್ಷಿಗೆ ಒಬ್ಬ ಪುತ್ರನನ್ನು ಪಡೆಯಬೇಕೆಂಬ ಇಚ್ಛೆಯಾಗುತ್ತದೆ, ಆದರೆ ಅವರಿಗೆ ವಿವಾಹವಾಗಲು ಮನಸ್ಸಿರಲಿಲ್ಲ. ಈ ದ್ವಂದ್ವವನ್ನು ಅವರು ದೇವರ್ಷಿ ನಾರದರಲ್ಲಿ ತೋಡಿಕೊಂಡಾಗ ನಾರದರು ಅವರಿಗೆ ಸಮಸ್ತ ಸೃಷ್ಠಿಗೂ ಕಾರಣಳಾದ ಜಗನ್ಮಾತೆ, ಆದಿಶಕ್ತಿಯಾದ ದೇವಿಯನ್ನು ಆರಾಧಿಸುವಂತೆ ನಿರ್ದೇಶಿಸಿದರು. 

ನಾರದರ ಸೂಚನೆಯಂತೆ ಒಬ್ಬ ಯೋಗ್ಯ ಪುತ್ರನನ್ನು ಪಡೆಯುವ ಉದ್ದೇಶದಿಂದ ವ್ಯಾಸ ಮಹರ್ಷಿಯು  ಮೇರು ಪರ್ವತವನ್ನು ತಲುಪಿ ಭಗವತಿಯನ್ನು ಉದ್ದೇಶಿಸಿ ಧ್ಯಾನ ಮಾಡಲಾರಂಭಿಸಿದರು. ಹಲವು ವರ್ಷಗಳು ಕಳೆದವು. ಒಂದು ದಿನ ಮಹಾದೇವ ಮತ್ತು ಜಗನ್ಮಾತೆಯು  ಪ್ರತ್ಯಕ್ಷವಾಗಿ ವ್ಯಾಸ ಮಹರ್ಷಿಗೆ ತಮ್ಮ ಮನೋಭಿಲಾಷೆ ಪೂರೈಸುವಂತೆ ಅನುಗ್ರಹಿಸಿದರು. ಅವಿವಾಹಿತನಾಗಿಯೇ ಸಂತಾನವನ್ನು ಪಡೆಯುವುದಾದರೂ ಹೇಗೆಂದು ವ್ಯಾಸರು ಬಹಳ ಗೊಂದಲದಲ್ಲಿ ಸಿಕ್ಕಿಕೊಂಡಿದ್ದರು. ಆಗ ಅವರಿಗೆ ಅಪ್ಸರೆ ಘೃತಾಚಿಯು ಕಾಣಿಸಿಕೊಂಡಳು. ಯಜ್ಞವನ್ನು ಮಾಡಲು ಸಜ್ಜಾಗಿದ್ದ ವ್ಯಾಸರು ಅವಳ ರೂಪ-ಲಾವಣ್ಯವನ್ನು ಕಂಡು ಅವಳಲ್ಲಿ ತೀವ್ರವಾಗಿ ಆಕರ್ಷಿತರಾದರು. ಆಗ ಅವರ ರೇತಸ್ಸು ಯಜ್ಞ ಕುಂಡಕ್ಕೆ ಹಾಕಲು ಸಿದ್ಧಮಾಡಿಟ್ಟಿದ್ದ  ಸಮಿತ್ತಿನ ಮೇಲೆ ಸಂಗ್ರಹಿಸಿಕೊಂಡಿತು. ಈ ಪರಿಸ್ಥಿತಿಯಲ್ಲಿ ವ್ಯಾಸರ ಕಣ್ಣಿಗೆ ಬಿದ್ದರೆ ತಾನು ಶಾಪಗ್ರಸ್ತಳಾಗಿಬಿಡುವ ಭಯದಿಂದ ಘೃತಾಚಿಯು ತನ್ನ ಮಾಯಾ ಶಕ್ತಿಗಳಿಂದ ಶುಕ ಎಂದರೆ ಗಿಳಿಯ ರೂಪದಾಳಿ ಹಾರಿ ಹೋದಳು. ವ್ಯಾಸರ ವೀರ್ಯದಿಂದ ಜನಿಸಿದ ಮಗನೇ  ಶುಕ ಮಹರ್ಷಿ. ಹೀಗೆ ಅಪ್ಸರೆ ಘೃತಾಚಿಯು ಶುಕ ಮಹರ್ಷಿಯ ಜನನಕ್ಕೆ ಕಾರಣಳಾದಳು. 

ಅಪ್ಸರೆ ಘೃತಾಚಿ ಮತ್ತು ದ್ರೋಣಾಚಾರ್ಯರ ಜನನ 

ದ್ರೋಣಾಚಾರ್ಯರ ಜನನ ಪ್ರಸಂಗವೂ ಸಹ ಈ ಮೇಲೆ ಕಂಡ ಕಥೆಯನ್ನೇ ಹೋಲುವಂತದ್ದು. ಮಹಾಭಾರತದ ಆದಿಪರ್ವದಲ್ಲಿ ಕಂಡುಬರುವ ಈ ಕಥೆಯಲ್ಲಿ, ಭಾರದ್ವಾಜ ಮುನಿಯು ಒಮ್ಮೆ ಗಂಗಾ ನದಿ ತಟದಲ್ಲಿ ನಿಷ್ಕೃಷ್ಟವಾದ  ತಪಸ್ಸಿನಲ್ಲಿ ತೊಡಗಿದ್ದರು. ಸೂರ್ಯೋದಯ-ಸೂರ್ಯಾಸ್ತದ ಸಮಯದಲ್ಲಿ ಸ್ನಾನಾದಿಕೆಲಸಗಳಿಗಾಗಿ ನಿತ್ಯ ನದಿಗೆ ಹೋಗುತ್ತಿದ್ದರು. ಒಮ್ಮೆ ನದಿಯಲ್ಲಿ ಅರ್ಘ್ಯ ಬಿಡುತ್ತಿರುವಾಗ ಅಲ್ಲೇ ಮೀಯುತ್ತಿದ್ದ ಅಪ್ಸರೆ  ಘೃತಾಚಿಯನ್ನು ಕಂಡರು. ಅವಳನ್ನು ಕಂಡು ಪ್ರಚೋದನೆಗೆ ಒಳಗಾದ ಭಾರದ್ವಾಜ ಮುನಿಯು ತಮ್ಮ ರೇತಸ್ಸನ್ನು ಒಂದು ಗಡಿಗೆಯಲ್ಲಿ ಸಂಗ್ರಹಿಸಿಟ್ಟರು. ಸಂಸ್ಕೃತದಲ್ಲಿ ಇಂತಹ ಒಂದು ಗಡಿಗೆಗೆ ದ್ರೋಣ ಎನ್ನುತ್ತಾರೆ. ಕೆಲವು ತಿಂಗಳುಗಳ ನಂತರ ಆ ದ್ರೋಣದಿಂದ ಒಂದು ಮಗುವು ಹೊರಬಂದು, ಭಾರದ್ವಾಜರು ಆ ಮಗುವಿಗೆ  ದ್ರೋಣಾ  ಎಂದೇ ಹೆಸರಿಟ್ಟರು. ಹೀಗೆ ಆಚಾರ್ಯ ದ್ರೋಣರ ಜನನಕ್ಕೂ ಅಪ್ಸರೆ ಘೃತಾಚಿಯೇ ಕಾರಣಳಾದಂತಾಯಿತು. 

ದಿವ್ಯ ಕನ್ನಿಕೆಯರಾದ ಅಪ್ಸರೆಯರು ನೋಡುಗರನ್ನು ಒಮ್ಮೆಲೇ ಸೆಳೆಯುವ ಮೋಹಕ ಸುಂದರಿಯರಷ್ಟೇ ಅಲ್ಲ. ಹಲವರು  ವಾತ್ಸಲ್ಯಮೂರ್ತಿಗಳಾಗಿ ಮಾತೃತ್ವವನ್ನು ನಿಬಾಯಿಸುತ್ತಾ ಅದೆಷ್ಟೋ ಮಹಾನ್ ವ್ಯಕ್ತಿಗಳಿಗೆ ಜನ್ಮವಿತ್ತಿರುವುದನ್ನು ನಾವು ನಮ್ಮ ಪುರಾಣ ಪುಣ್ಯ ಕಥೆಗಳಲ್ಲಿ ಹೇರಳವಾಗಿ ನೋಡಬಹುದು.

(This is a translation of  an article written in English by Shalini Mahapatra.)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.