close logo

ಕಥಾಮಾಲಿಕೆ: ಗಾಲವನ ಗುರುದಕ್ಷಿಣೆ – ಭಾಗ ೨

ಗಾಲವನ ಗುರುದಕ್ಷಿಣೆಯ  ಕಥೆ, ಗುರು ದಕ್ಷಿಣೆ ಮತ್ತು ಗುರು ಭಕ್ತಿಯಲ್ಲಿರುವ ಅಂತರವನ್ನು ತೋರಿಸುತ್ತದೆ. ಈ ಕಥೆಯ ಮೊದಲ ಭಾಗದ ಕೊಂಡಿ ಇಲ್ಲಿದೆ. 

https://www.indica.today/bharatiya-languages/kannada/galav-guru-dakshina-i/ 

 ಮುಂದುವರಿಯುತ್ತಾ….. 

“ಸಕಲ ಲೋಕಗಳಲ್ಲಿಯೂ ಸ್ವತಂತ್ರವಾಗಿ ಸಂಚರಿಸುವ ನಾರಾಯಣನ ವಾಹನನಾದ ಗರುಡನನ್ನು ಬಿಟ್ಟರೆ ಇನ್ನಾರು ತಾನೇ ದಿಕ್ಕುಗಳ ಬಗ್ಗೆ ವಿಸ್ತಾರವಾಗಿ ಬೋಧಿಸಬಲ್ಲರು” ಎಂದು ಗಾಲವ, ಸ್ಮಿತವದನನಾಗಿ  ಕೈಜೋಡಿಸಿ ಗರುಡನಿಗೆ ಆಪ್ತಭಾವದಿಂದ ನಮಸ್ಕರಿಸಿದನು. “ಅದು ಹಾಗಿರಲಿ, ಇನ್ನು ಯಾವ ದಿಕ್ಕಿನಿಂದ ಪ್ರಯಾಣವನ್ನು ಪ್ರಾರಂಭಿಸಬೇಕೆಂದು ನಿರ್ಧರಿಸು.” ಎಂದು ಗರುಡ ಮಾಡಬೇಕಾದ್ದ ಕೆಲಸದ ಕಡೆಗೆ  ಗಮನ ಹಾಯಿಸಿದನು. ಆಗ ಗಾಲವ,

“ಬ್ರಹ್ಮರ್ಷಿಗಳಾದ ಆಚಾರ್ಯ ವಿಶ್ವಾಮಿತ್ರರು, ಸದಾ, ನಾನು ಲೋಕ ಕಲ್ಯಾಣದ ಕೆಲಸಗಳಲ್ಲಿ ತೊಡಗಬೇಕೆಂದು ನಿರ್ದೇಶಿಸುತ್ತಲೇ ಇದ್ದರು. ಅವರು ಎಂಟು ನೂರು ವಿಶೇಷ ತಳಿಯ ಕುದುರೆಗಳನ್ನು ಗುರುದಕ್ಷಿಣೆಯಾಗಿ ಒಪ್ಪಿಸಬೇಕೆಂದು ಹೇಳಿದಾಗ ನಾನು ಭಯಭೀತನಾಗಿದ್ದೆ. ಗುರುಗಳ ಆದೇಶಕ್ಕೆ ಶ್ರೀಮನ್ ನಾರಾಯಣನ ಅನುಗ್ರಹವಿದೆಯೆಂದು ತಿಳಿದಾಗ ಗುರುಗಳು ಧರ್ಮಬದ್ಧ ವಾದ ಆಜ್ಞೆಯನ್ನೇ ನೀಡಿರಬೇಕೆಂದು ಸ್ಪಷ್ಟವಾಯಿತು. ವೈನತೇಯ, ನಾನು ಸಂಕಷ್ಟದ ಕಗ್ಗತ್ತಲಲ್ಲಿರುವಾಗ ಬೆಳಕಿನ ಚಿಲುಮೆಯಂತೆ ಸಹಾಯಕ್ಕೆ ಬಂದು ನಿನ್ನ ಮಿತ್ರ ಧರ್ಮವನ್ನು ನೆರೆವೇರಿಸಿದ್ದೀಯೆ. ನನಗೆ, ನಾನು ಮಾಡಬೇಕಾದ ಕೆಲಸದ ಮಹತ್ವವು ತಿಳಿಯಾಗಿ ಕಾಣ ತೊಡಗಿದೆ. ಮಿತ್ರ, ನೀನು ದಿಕ್ಕುಗಳ ಮಹಾತ್ಮೆಯನ್ನು ವಿವರಿಸುತ್ತಾ,  ಮೊದಲಿಗೆ ಪೂರ್ವದ ಬಗ್ಗೆ ತಿಳಿಸಿದೆ. ಪೂರ್ವದಲ್ಲಿ ಧರ್ಮವು ಕಣ್ತೆರೆಯುತ್ತದೆ. ಅಂತೆಯೇ, ಸತ್ಯ, ಧರ್ಮ ಮತ್ತು ದೇವಾನುದೇವತೆಗಳ ವಾಸಸ್ಥಾನ ಪೂರ್ವವೇ ಎಂದು ತಿಳಿಸಿದೆ. ಆದ್ದರಿಂದ ಪೂರ್ವದಿಂದಲೇ ನಮ್ಮ ಕಾರ್ಯಸಾಧನೆಯ ಶುಭಾರಂಭವಾಗಲಿ.”  ಎಂದು ಹೇಳಿ, ಹೊರಡಲು ಸಿದ್ದನಾಗಿದ್ದ ಗರುಡನ ಬೆನ್ನ ಮೇಲೆ ಹತ್ತು ಕುಳಿತನು. 

ಅವನ ಚೈತನ್ಯವನ್ನು ಕಂಡು ಗರುಡನಿಗೆ ಸಮಾಧಾನವಾಯಿತು. “ಗೆಳೆಯ, ನಿನ್ನ ಇಚ್ಛೆಯಂತೆಯೇ ಆಗಲಿ. ಪೂರ್ವ ದಿಕ್ಕಿನಲ್ಲಿ ಯಯಾತಿ ಎಂಬ ರಾಜನಿದ್ದಾನೆ. ಅವನು, ಇಂದ್ರ-ಪದವಿಯಲ್ಲಿದ್ದ ನಹುಷನ ಮಗ. ಮೊದಲಿಗೆ ಅವನ ಬಳಿಯೇ ಹೋಗೋಣ. ಯಯಾತಿಯ ಶ್ರೀಮಂತಿಕೆ ಮತ್ತು ಉದಾರತೆಯ ಬಗ್ಗೆ ಬಹಳ ಕೇಲ್ಪಟ್ಟಿದ್ದೇನೆ. ಅವನಿಂದ ನಮಗೆ ಖಂಡಿತವಾಗಿಯೂ ಸಹಾಯವಾಗುತ್ತದೆ.” ಎಂದು ಹೇಳಿ ಪೂರ್ವದ ಕಡೆಗೆ ಹಾರಿದನು. 

ದಾರಿಯಲ್ಲಿ ಅವರಿಗೆ ವಿಶ್ವಾಮಿತ್ರರ  ಭೇಟಿಯಾಗುತ್ತದೆ. ಗರುಡನನ್ನು ಏರಿ, ಕಾರ್ಯಸಾಧನೆಯ ಹಾದಿಯಲ್ಲಿರುವ ಗಾಲವನನ್ನು ಕಂಡು ಮನಸ್ಸಿನಲ್ಲೇ  ಅವರು ಹೆಮ್ಮೆ ಪಟ್ಟರು. ಅವರನ್ನು ಕಂಡೊಡನೆ ಗರುಡ ಮತ್ತು ಗಾಲವ ಭಕ್ತಿಯಿಂದ ವಂದಿಸಿದರು. ವಿಶ್ವಾಮಿತ್ರರು “ಶುಭಮಸ್ತು” ಎಂದು ಆಶೀರ್ವದಿಸಿ, ಗಾಲವನ ಕಡೆಗೆ ತಿರುಗಿ “ಗಾಲವ, ಕುದುರೆಗಳನ್ನು ತಂದೊಪ್ಪಿಸುವೆ ಎಂದು ನಾನು ಕಾಯುತ್ತಿದ್ದರೆ, ನೀನು ಗರುಡನನ್ನು ಏರಿ ವಿಹಾರಿಸುತ್ತಿದೆಯೋ” ಎಂದು ಕೊಂಕು ನುಡಿದರು. ಗರುಡನು, ವಿಶ್ವಾಮಿತ್ರರಿಗೆ ನಡೆದದ್ದೆಲ್ಲ ತಿಳಿಸಿದ ನಂತರ, ವಿಶ್ವಾಮಿತ್ರರು “ಯಶಸ್ವೀ ಭವ” ಎಂದು ಆಶೀರ್ವದಿಸಿ ಅವರನ್ನು ಬೀಳ್ಕೊಟ್ಟರು.  

**********************************************************************

ಗರುಡ ಮತ್ತು ಗಾಲವನನ್ನು ಯಯಾತಿ ಬಹಳ ಆಧರದಿಂದ ಸ್ವಾಗತಿಸಿದನು. ಗರುಡ, ಪಕ್ಷಿರಾಜ, ಅವನ ಜೊತೆಗೆ ಬಂದಿರುವ ಬ್ರಾಹ್ಮಣ ಶ್ರೇಷ್ಠ, ಬ್ರಹ್ಮರ್ಷಿಗಳಾದ ವಿಶ್ವಾಮಿತ್ರರ ಶಿಷ್ಯ, ಇಬ್ಬರೂ ಶ್ರೇಷ್ಠರೇ ಎಂದು ತಿಳಿದು, ವಿಶೇಷವಾದ ಅತಿಥಿ ಸತ್ಕಾರಗಳನ್ನು ಮಾಡಿದನು. ಗಾಲವನಾದರೋ ಆಶ್ರಮದಲ್ಲೇ ಬೆಳೆದವನು, ಲೋಕವ್ಯವಹಾರದ ಬಗ್ಗೆ ಹೆಚ್ಚಾಗಿ ತಿಳಿಯದವನು, ಮಿತಭಾಷಿ. ಆದ್ದರಿಂದ ಗರುಡನೇ ಯಯಾತಿಯಲ್ಲಿ ಗಾಲವನ ಪರವಾಗಿ ಸಹಾಯ ಯಾಚಿಸಿದನು. “ರಾಜನ್, ವಿಶ್ವಾಮಿತ್ರರು ಗಾಲವನಲ್ಲಿ ಎಂಟು ನೂರು ವಿಶೇಷ ತಳಿಯ ಕುದುರೆಗಳನ್ನು ಗುರು ದಕ್ಷಿಣೆಯಾಗಿ ಕೇಳಿದ್ದಾರೆ. ಈ ಕುದುರೆಗಳ ಮೈಬಣ್ಣ ಚಂದ್ರಬಿಂಬದಂತಿರಬೇಕು ಆದರೆ, ಒಂದು ಕರ್ಣ ಮಾತ್ರ ಕೃಷ್ಣವರ್ಣದಲ್ಲಿರಬೇಕು ಎಂದು ಅದರ ವಿಶೇಷ ಲಕ್ಷಣಗಳನ್ನೂ ಸೂಚಿಸಿದ್ದಾರೆ. ವಿಶ್ವಾಮಿತ್ರರನ್ನು, ‘ಗುರುದಕ್ಷಿಣೆಯಂತೆ ಏನನ್ನಾದರು ಕೇಳಲೇಬೇಕೆಂದು’ ಗಾಲವನೇ ಒತ್ತಾಯಿಸಿದವನು. ಹೀಗಿರುವಾಗ, ಅವನು ಗುರುಗಳ ಆಜ್ಞೆಯನ್ನು ಮೀರುವಂತಿಲ್ಲ, ನಿನ್ನಲ್ಲಿ ಅಪಾರವಾದ ಸಂಪತ್ತಿರುವುದಾಗಿ ಕೇಲ್ಪಟ್ಟಿರುವೆ. ನಿನ್ನ ಬಳಿ ಈ ಕುದುರೆಗಳೇ ಇದ್ದಲ್ಲಿ ದಯವಿಟ್ಟು ಅವುಗಳನ್ನು ಗಾಲವನಿಗೆ ಧಾನ ಮಾಡಿ ಸಹಾಯ ಮಾಡಬೇಕು, ಕುದುರೆಗಳು ಇಲ್ಲದಿದ್ದಲ್ಲಿ ಸಂಪತ್ತನ್ನಾದರೋ ಧಾನ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ.” ಎಂದು ವಿನಮ್ರವಾಗಿ ನುಡಿದನು. 

ಇದನ್ನು ಕೇಳಿದ ಯಯಾತಿಗೆ ಗಾಲವನ  ಮೇಲೆ ಮರುಕವುಂಟಾಯಿತು. ‘ವಿಶ್ವಾಮಿತ್ರರು ಬ್ರಹ್ಮ ಜ್ಞಾನಿಗಳು.  ಆದರೆ, ಸ್ವಲ್ಪ ಮುಂಗೋಪಿಗಳು ಎಂಬ ಮಾತ್ರಕ್ಕೆ ಕುಪಿತರಾಗಿ ಗಾಲವನನ್ನು ದಂಡಿಸಲು ಹೀಗೆ ಕೇಳಿದ್ದಾರೆ ಎನ್ನುವುದು ಸತ್ಯವಲ್ಲ. ವಿಶ್ವಾಮಿತ್ರರ ಇಂಗಿತವನ್ನು ತಿಳಿಯುವುದು ಸುಲಭವೇ? ಇರಲಿ. ಗಾಲವನ ತೇಜಸ್ಸು, ಜ್ಞಾನ, ಮುಗ್ಧತೆ ಮತ್ತು ಗುರು ಭಕ್ತಿಯನ್ನು ನೋಡಿದರೆ ಅವನ ಬೇಡಿಕೆಯನ್ನು ನಿರಾಕರಿಸುವುದಕ್ಕೂ ಮನಸ್ಸು ಒಪ್ಪುತ್ತಿಲ್ಲ. ಸಾಕ್ಷಾತ್ ಶ್ರೀ ಹರಿಯ ವಾಹನ, ಗರುಡನೇ ಇವನ ಸಹಾಯಕ್ಕೆ ಮುಂದಾಗಿದ್ದಾನೆ ಎಂದ ಮೇಲೆ ಈ ಕೆಲಸಕ್ಕೆ ನನ್ನ ಪಾತ್ರವನ್ನೂ ಶ್ರೀ ಹರಿಯೇ ನಿರ್ಧಾರಿಸಿರಬೇಕು. ನನ್ನಲ್ಲಿ ಗರುಡನೆಂದುಕೊಂಡಂತೆ, ಕುದುರೆಗಳಂತೂ ಮೊದಲೇ ಇಲ್ಲ, ಇನ್ನು ನನ್ನ ಸಕಲ ಸಂಪತ್ತೂ ಕ್ಷೀಣಿಸಿಬಿಟ್ಟಿದೆ. ಅವರಿಗೆ ಸಹಾಯ ಮಾಡುವುದಾದರೋ ಹೇಗೆ?’ ಎಂದು ಬಹಳ ಯೋಚಿಸಿದನು. ಸ್ವಲ್ಪ ಸಮಯದ ನಂತರ, ರಾಜ ಸಭೆಯಲ್ಲಿ ತನ್ನ ನಿರ್ಧಾರವನ್ನು ತಿಳಿಸುವುದಾಗಿ ತೀರ್ಮಾನಿಸಿ, ಗಾಲವ, ಗರುಡ ಮತ್ತು ಮಾಧವಿಯನ್ನು ರಾಜ ಸಭೆಗೆ ಆಗಮಿಸುವಂತೆ ಹೇಳಿಕಳುಹಿಸಿದನು.  

ಯಯಾತಿ ತನ್ನ ರಾಜ ಸಭೆಯಲ್ಲಿ ಗಾಲವನನ್ನು ಉದ್ದೇಶಿಸಿ ಮಾತನಾಡಿದನು , “ಗಾಲವ, ಸಹಾಯಕ್ಕಾಗಿ ಯಾಚಿಸಿದವರಿಗೆ ಕೈಲಾದಷ್ಟು ಸಹಾಯ ಮಾಡಬೇಕಾದ್ದು ರಾಜ ಧರ್ಮ. ನೀನು ವಿಶ್ವಾಮಿತ್ರರ ಶಿಷ್ಯನೆಂದಮೇಲೆ ಸಾಮಾನ್ಯನಲ್ಲ, ಬಹಳ ವಿಶೇಷನಾದ ಅತಿಥಿ. ಪರಮ ಜ್ಞಾನಿ. ನಿನಗೆ ಸಹಾಯ ಮಾಡದೆ ಇರಲು ನನ್ನ ಮನಸ್ಸು ಒಪ್ಪುತ್ತಿಲ್ಲ.  ಗರುಡನು ತಿಳಿದಿರುವಂತೆ, ನನ್ನ ಬಳಿ ಆ ವಿಶೇಷ ತಳಿಯ ಕುದುರೆಗಳಾಗಲಿ ಅಥವಾ ಸಿರಿ ಸಂಪತ್ತಾಗಲಿ ಇಲ್ಲವಪ್ಪ. ಬದಲಿಗೆ, ಒಂದು ಉಪಾಯವಿದೆ. ನನಗೆ, ಮಾಧವಿ ಎಂಬ ಮಗಳಿದ್ದಾಳೆ. ಅವಳು ವಿದ್ಯಾಸಂಪನ್ನೆ ಮತ್ತು ಸದ್ಗುಣಿ. ಆದರೆ, ಅವಳ ವಿಧಿ ನನ್ನನ್ನು ವಿಷಾಧಕ್ಕೊಳಪಡಿಸಿದೆ. ಅವಳಿಗೊಂದು ಅಮೂಲ್ಯವಾದ ವರವಿದೆ. ಅವಳು ನಾಲ್ಕು ಜನ ಲೋಕವೀರರ ತಾಯಿಯಾಗುತ್ತಾಳೆ. ಆ ಮಕ್ಕಳು ಯಶಸ್ವಿಗಳಾಗಿ ಭೂ ಮಂಡಲವನ್ನೇ ಆಳುವಂತಹ ಯೋದ್ಧರಾಗುತ್ತಾರೆ. ವಿದ್ಯೆ, ಬುದ್ದಿ ಮತ್ತು ಗುಣಗಳಲ್ಲಿ ಅವರೆಲ್ಲರು ತಮ್ಮ ತಾಯಿಯನ್ನು ಹೋಲುತ್ತಾರೆ.  ಚಿಂತಿಸುವ ಮಾತೆಂದರೆ, ಆ ನಾಲ್ಕು ಮಕ್ಕಳ ತಂದೆಯು ಬೇರೆ ಬೇರೆ ವಂಶಕ್ಕೆ ಸೇರಿರುತ್ತಾನೆ. ಪ್ರತೀ ಪ್ರಸವದ ನಂತರವು, ಮಾಧವಿ, ಕನ್ಯಾವಸ್ಥೆಗೆ ಹಿಂದಿರುಗುತ್ತಾಳೆ. ಅವಳ ಈ ವರದ ಬಗ್ಗೆ ತಿಳಿದಿರುವ ಸುತ್ತಮುತ್ತಲಿನ ರಾಜ ಪುತ್ರರು ನಾ ಮುಂದು ತಾ ಮುಂದು ಎಂದು ಅವಳನ್ನು ವರಿಸಲು ಮುಂದಾಗುತ್ತಿದ್ದಾರೆ. ವಾಸ್ತವವಾಗಿ ಯಾರಿಗೂ ಅವಳಲ್ಲಿ ಅನುಕಂಪವಾಗಲಿ ಅಥವಾ ಅನುರಾಗವಾಗಲಿ ಇಲ್ಲವೆಂಬುದು ನಾನು ಚೆನ್ನಾಗಿ ಬಲ್ಲೆ. ಆದ್ದರಿಂದ ಮಾಧವಿಯನ್ನು ನಿನಗೆ ದಾನವಾಗಿ ಕೊಡುವೆನು. ನೀನು  ಅವಳನ್ನು  ಲೋಕವೀರರಾದ, ಸಚ್ಚಾರಿತ್ರ್ಯವಿರುವ, ಪುತ್ರಹೀನರಾದ ರಾಜರ ಬಳಿ ಸಂತಾನೋತ್ಪತ್ತಿಗಾಗಿ ಕರೆದುಕೊಂಡು ಹೋಗು. ಅವರು ನಿನಗೆ ಪ್ರತ್ಯುಪಕಾರವಾಗಿ ಸೂಕ್ತವಾದ ಸಹಾಯ ಮಾಡುವುದು ಖಂಡಿತ.  ನಾಲ್ಕು ಮಕ್ಕಳ ಜನನವಾದ ನಂತರ ಪುನಃ ಕನ್ಯಾವಸ್ಥೆಯಲ್ಲಿರುವ ಮಾಧವಿಯನ್ನು ನನ್ನ ಬಳಿಯೇ ಕಳುಹಿಸಿಕೊಡು. ಆಗ ಅವಳಿಗೊಬ್ಬ ಸೂಕ್ತನಾದ ವರನನ್ನು ಹುಡುಕಿ ಮದುವೆ ಮಾಡಿ ಕೊಡುವೆ. ಮಾಧವಿ, ಯಾರೋ ಅಧಮರ ಕೈಯಲ್ಲಿ ಸಿಕ್ಕಿ ಒದ್ದಾಡಬೇಕಾಗುತ್ತದೆ ಎಂದು ನಾನು ಸಹ ಚಿಂತಾಕ್ರಾಂತನಾಗಿದ್ದೆ. ಆದರೆ, ದೈವ ಕೃಪೆ, ನಿನ್ನಂತಹ ಜ್ಞಾನಿಯ ನೆರವಿರುವಾಗ ಅವಳ ಕ್ಷೇಮದ ಬಗ್ಗೆ ನನಗಿದ್ದ ಚಿಂತೆ ಕಡಿಮೆಯಾದಂತೆಯೇ. ಹಾಗೆಯೇ ಇನ್ನೊಂದು ಮಾತು. ನೀನು ಕೇಳುತ್ತಿರುವ ಕುದುರೆಗಳು ಸಾಮಾನ್ಯರಾದ  ರಾಜರಲ್ಲಿ ಇರಲಾರವು. ಇಂತಹ ಚಂದ್ರವರ್ಣದ ವಿಶೇಷ ತಳಿಯ ಅಶ್ವಬಲವಿರಬೇಕಾದರೆ, ಆತ ಲೋಕ ವೀರನಾಗಿರಬೇಕು ಅಥವಾ ಆ ರಾಜನಿಗೆ ದೈವ ಕೃಪೆ ಇರಬೇಕು. ಅಂತೂ ಇವುಗಳನ್ನು ಸಂಪಾದಿಸುವುದು ಕಷ್ಟಸಾಧ್ಯ. ನನ್ನ ಅನಿಸಿಕೆಯ ಪ್ರಕಾರ, ಸಮಸ್ತ ಭೂ ಮಂಡಳದಲ್ಲಿ ಇಬ್ಬರು ಇಲ್ಲವೇ ಮೂರು ರಾಜರ ಬಳಿ ಮಾತ್ರ ಇಂತಹ ಕುದುರೆಗಳು ಇದ್ದೀತು. ಹೀಗಿರುವಾಗ ನೀನು ಅವರಲ್ಲಿ ಇವುಗಳನ್ನು ಕೇಳಿದರೆ, ಅವರು ಯಾವ ಬಲದ ಮೇಲೆ  ಇಂತಹ ಅಮೋಘವಾದ ಎಂಟು ನೂರು ಕುದುರೆಗಳನ್ನು ನಿನಗೆ ಕೊಟ್ಟಿಯಾರು? ಒಂದು, ನೀನವರಲ್ಲಿ ಆ ಕುದುರೆಗಳನ್ನು ಗೆಲ್ಲುವುದಕ್ಕಾಗಿ ಯುದ್ಧ ಮಾಡಬೇಕು. ನಿನ್ನನ್ನು ನೋಡಿದರೆ, ನೀನೊಬ್ಬ ಯೋದ್ಧನಲ್ಲವೆಂದು ಸ್ಪಷ್ಟವಾಗಿ ತಿಳಿಯುತ್ತದೆ. ಮತ್ತೊಂದು ಮಾರ್ಗವೆಂದರೆ, ನಿನ್ನಲ್ಲಿರುವ  ಜ್ಞಾನವನ್ನು ಅವರಿಗೆ ಧಾರೆ ಎರೆಯುವುದು. ನೀನೇನೋ ತಯಾರಿದ್ದೀಯ ಆದರೆ ಅದನ್ನು ಪಡೆಯಲು ಅವರೂ ಸಜ್ಜಾಗಿರಬೇಕಲ್ಲವೇ? ಆದ್ದರಿಂದ, ಮಾಧವಿಯನ್ನು ನನ್ನಿಂದ ಧಾನ ಪಡೆದು, ಆ ರಾಜರಿಗೆ ಸಂತಾನೋತ್ಪತ್ತಿಗಾಗಿ ಧಾನ ಮಾಡು. ಹೀಗೆ ಮಾಡಿದರೆ, ನನಗೆ ಕನ್ಯಾ ಧಾನದ ಪುಣ್ಯ, ನಿನಗೆ ನೀನು ಅರ್ಪಿಸಬೇಕಾದ ಗುರು ದಕ್ಷಿಣೆ, ಅವಳನ್ನು ಪಡೆದವರಿಗೆ ಸಂತಾನ ಮತ್ತು ಮಾಧವಿಗೆ ಸೌಖ್ಯ ಮತ್ತು ರಾಜಮಾತೆ ಎನ್ನುವ ಗೌರವ ಎಲ್ಲವೂ ದೊರೆತಂತಾಗುತ್ತದೆ.” ಎಂದು ತನ್ನ ಮನಸ್ಸಿನ ಲೆಕ್ಕಾಚಾರಗಳೆಲ್ಲವನ್ನು ಬಿಡಿಸಿ ಹೇಳಿದನು.  

ಯಯಾತಿ ಇದನ್ನು ಹೇಳಿತ್ತಿದ್ದಂತೆಯೇ ರಾಜ ಸಭೆಯಲ್ಲಿ ಮಾಧವಿಯ ಆಗಮನವಾಗುತ್ತದೆ. ಯಯಯಾತಿಯ ಮಾತುಗಳನ್ನು ಕೇಳಿದ ಗಾಲವ ಮುಖದಲ್ಲಿ ಮತ್ತೆ ದ್ವಂದ್ವದ ಗೆರೆಗಳು ಮೂಡುತ್ತವೆ. ‘ಇದೇನಿದು, ಕುದುರೆಗಳನ್ನು ಬೇಡುತ್ತಾ ಬಂದವರಿಗೆ ಕನ್ಯೆಯನ್ನು ಕೊಡುವೆ ಎನ್ನುವನಲ್ಲ ಮಹಾರಾಜ? ವಿಶ್ವಾಮಿತ್ರರು ಕೋಪಿಷ್ಠರು, ಶಾಪವಿತ್ತರೆ ದುರಂತವೇ ಆಗಬಹುದೆಂಬ ಭಯವೋ? ಆಕಾಶದಲ್ಲಿ ಸೂರ್ಯನ ಒಂದು ಮುಖ ಮಾತ್ರ ಕಾಣ ತಕ್ಕದ್ದು, ಅಂತೆಯೇ ವಿಶ್ವಾಮಿತ್ರರ ಕೋಪವೊಂದೇ ಜನರಿಗೆ ಸಾಮಾನ್ಯವಾಗಿ ತಿಳಿದಿರುವ ಗುಣ, ಅವರ ಸಮರ್ಥ ವ್ಯಕ್ತಿತ್ವದ ಪರಿಚಯವಾಗಬೇಕಾದರೆ ಅವರನ್ನು ಆಳವಾಗಿ ಅರಿಯುವ ಪ್ರಯತ್ನ ಅಗತ್ಯ. ಇರಲಿ. ಯಯಾತಿ ಮಹಾರಾಜನು ಸಂಪತ್ತಿನ ಜೊತೆ ಜೊತೆಗೆ ಬುದ್ದಿ ಸಂತುಲನವನ್ನೂ ಕಳೆದುಕೊಂಡಿರುವನೋ, ಹೇಗೆ? ಮಗಳನ್ನು ಇಂತಹ ಕೆಲಸಕ್ಕೆ ಮುಂದೊಡ್ಡುತ್ತಿದ್ದಾನಲ್ಲ?’ ಎಂದು ಚಿಂತಿಸುತ್ತಾ ಗರುಡನ ಮುಖವನ್ನು ನೋಡಿದನು. ಗರುಡ, ಕರ್ಮ-ಕಾರಣ ಭಾವವನ್ನು ಚೆನ್ನಾಗಿ ಅರಿತವ. ಅವನ ಮುಖದಲ್ಲೊಂದು ಮುಗುಳ್ನಗೆಯಿತ್ತು. ಅದು ಯಶಸ್ವೀ ಭಾವವನ್ನು ಪ್ರತಿಬಿಂಸುತ್ತಿತ್ತು. ಮಾಧವಿ ಎಲ್ಲವನ್ನು ತಿಳಿದವಳಂತೆ ಶಾಂತರೂಪಿಣಿಯಾಗಿ ತಂದೆಯ ಪಕ್ಕ ಬಂದು ನಿಂತಿದ್ದಳು. ‘ಇದೇನು ಮಾಯೆಯೋ? ಮರ್ಮವೋ? ಒಬ್ಬ ಹೆಣ್ಣು ಮಗಳನ್ನು ಊರೂರು ತಿರುಗಿಸಿ ನನಗೆ ಬೇಕಾದ್ದನ್ನು ಸಂಪಾದಿಸುವ ಕ್ರಮಕ್ಕೆ ಸಮಾಜದಲ್ಲಿ ಬೇರೆಯೇ ಹೆಸರಿದೆ. ಇದು ಬಹಳ ನಿಂದನೀಯವಾದ ಕೆಲಸ. ನಮ್ಮ  ಸ್ವಾರ್ಥಕ್ಕೆ ಪ್ರಾಮುಖ್ಯತೆಯನ್ನು ಕೊಟ್ಟುಕೊಂಡು ಬೇರೆಯವರ ಜೀವನವನ್ನು ಪಣಕ್ಕೆ ಇಡುವುದು ನ್ಯಾಯಬದ್ಧವಲ್ಲ. ಇವಳನ್ನು ಕಷ್ಟಕ್ಕೆ ಮುಂದೊಡ್ಡಿ ನನ್ನ ಕಾರ್ಯ ಸಾಧಿಸುವುದು ಲೋಕ ನಿಂದಿತ, ಧರ್ಮ ಬದ್ಧವಲ್ಲ. ಹಾಗೆ ಮಾಡಿದರೆ, ನನಗೆ ಪಾಠ ಹೇಳಿ, ನನ್ನಿಂದ ಲೋಕ ಕಲ್ಯಾಣದ ಕೆಲಸಗಳನ್ನು ಮಾಡಿಸಬೇಕೆಂದಿರುವ ಬ್ರಹ್ಮರ್ಷಿಗಳಾದ ವಿಶ್ವಾಮಿತ್ರರು ಒಪ್ಪುತ್ತಾರೆಯೇ?’ ಎಂದು ಯೋಚಿಸಿದನು. ಸಭೆಯಲ್ಲಿ ಮೌನ ಎಪ್ಪುಗಟ್ಟಿತು. ಸ್ವಲ್ಪ ಸಮಯದ ನಂತರ, ‘ಆಗದು’ ಎಂದು ಅದೇ ಸಭೆಯಲ್ಲಿ  ವಿನಮ್ರ ಧನಿಯಲ್ಲಿಯೇ ಉತ್ತರಿಸಿದನು. 

ಗಾಲವ ಮುಂದೇನು ಮಾಡುವನೆಂದು ಮುಂದಿನ ಸಂಚಿಕೆಯಲ್ಲಿ ನೋಡೋಣ ……..

Image credit: Snehit photo

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply