close logo

ಗಾಲವನ ಗುರು ದಕ್ಷಿಣೆ – ಭಾಗ ೧

ಗಾಲವ ವಿಶ್ವಾಮಿತ್ರರ ಆಶ್ರಮದಲ್ಲೇ ಬೆಳೆದ ಹುಡುಗ. ವಿಶ್ವಾಮಿತ್ರರು ಹೇಳಿಕೊಟ್ಟದ್ದೆಲ್ಲ ಶ್ರದ್ಧೆಯಿಂದ ಕಲಿಯುತ್ತಿದ್ದ ಮತ್ತು ಭಕ್ತಿಯಿಂದ ಗುರುಗಳ ಸೇವೆಯೂ ಮಾಡುತ್ತಿದ್ದ. ವಿದ್ಯೆಯಲ್ಲಿ ಶ್ರದ್ದೆ, ಅತಿಥಿಗಳಲ್ಲಿ ವಿನಮ್ರತೆ ಹಾಗು ಗುರುಗಳಲ್ಲಿ ಆತನಿಗಿದ್ದ  ಭಕ್ತಿಯನ್ನು ವಿಶ್ವಾಮಿತ್ರರು ಗಮನಿಸುತ್ತಲೇ ಇದ್ದರು. ಕಾಲ ಕಳೆದಂತೆ, ತಾರುಣ್ಯಕ್ಕೆ ಕಾಲಿಟ್ಟ ಗಾಲವ ಸದ್ಗುಣಿಯು ಮತ್ತು ವಿದ್ಯಾಸಂಪನ್ನನೂ ಆದನು. ಅವನಲ್ಲಿ ಗುರುಭಕ್ತಿ ಗಾಢವಾಗಿ ಬೇರೂರಿದ್ದ ಕಾರಣ ಸದಾ ಗುರುಗಳ ಸೇವೆಯಲ್ಲೇ ನಿರತಾನಿಗುರಿತ್ತಿದ್ದನು. ತರುಣನಾದ ಗಾಲವನಿಂದ ಸೇವೆ ಸ್ವೀಕರಿಸುವುದು ವಿಶ್ವಾಮಿತ್ರರ ಮನಸ್ಸಿಗೆ ಭಾರವೆನಿಸತೊಡಗಿತು. ಅವನನ್ನು ಉತ್ತರೋತ್ತರ ಲಕ್ಷ್ಯ ಸಾಧನೆಗಾಗಿ ಲೋಕಾಭಿಮುಖನಾಗಲು ಪ್ರೇರೇಪಿಸಬೇಕು ಎಂದು ನಿಶ್ಚಯಿಸಿದರು. ಅಂತೆಯೇ ಒಂದು ದಿನ ಗಾಲವನನ್ನು ತನ್ನ ಬಳಿಗೆ ಕರಿಸಿಕೊಂಡು, ಬಹಳ ಆಪ್ತ ಭಾವದಿಂದ ಹೇಳಿದರು,

“ಮಗು, ಇಷ್ಟು ವರ್ಷಗಳ ಕಾಲ ಶ್ರದ್ಧೆಯಿಂದ ಕಲಿತು ವಿದ್ಯಾಪಾರಂಗತನಾಗಿರುವೆ. ಜೊತೆಗೆ ನಿರಂತರವಾಗಿ ನನ್ನ ಸೇವೆಯನ್ನು ಮಾಡಿದ್ದೀಯೆ. ಯೌವ್ವನದ ಹೊಸ್ತಿಲಲ್ಲಿರುವ ನೀನು ನನ್ನ ಸೇವೆಯಲ್ಲಿಯೇ ನಿರತನಾಗಿರುವುದು ಸೂಕ್ತವಲ್ಲ.  ನೀನು ಆಶ್ರಮದಿಂದ ಹೊರಡುವ ಸಮಯ ಬಂದಿದೆ. ಉತ್ತರೋತ್ತರ ಧ್ಯೇಯ ಸಾಧನೆಯಲ್ಲಿ ನಿನ್ನನ್ನು ನೀನು ತೊಡಗಿಸಿಕೊಂಡು ಲೋಕ ಕಲ್ಯಾಣದ ಕೆಲಸಗಳಲ್ಲಿ ನಿರತನಾಗಬೇಕು.” ಎಂದು ಪ್ರೀತಿಯಿಂದ ನಿರ್ದೇಶಿಸಿದರು. 

ಗಾಲವನ ಪಾಲಿಗೆ ಇದು ಗುರುಗಳ ಆಜ್ಞೆ. ಅವರ ಇಚ್ಛೆಯಂತೆಯೇ ಆಗಲೆಂದು ಒಪ್ಪಿಕೊಂಡನು. ಆಶ್ರಮವನ್ನು ತೋರಯಬೇಕೆಂಬ ಸಂಗತಿ ಗಾಲವನಿಗೆ ಕೊಂಚ ಬೇಸರ ತಂದಿತಾದರು ಅವನ ಮನಸ್ಸು ದ್ವಂದ್ವ ಒಂದರಲ್ಲಿ ಸಿಲುಕಿ ಒದ್ದಾಡುತಿತ್ತು. 

‘ವಿಶ್ವಾಮಿತ್ರರ ಆಜ್ಞೆಯಾಗಿದೆಯೆಂದರೆ ಹೊರಡಲೇ ಬೇಕು. ಆದರೆ, ಅದೇಗೆ ಅವರು ಹೇಳಿದರೆಂದು ತಟ್ಟನೆ ಹೊರಟುಬಿಡುವುದು? ಗುರುವಿಗೆ ಏನಾದರೋ ಕಾಣಿಕೆಯನ್ನು ಒಪ್ಪಿಸದೆ ಹೊರಡಲಾಗುವುದೇ?’ ಎಂದು ಚಿಂತಿಸುತ್ತಿದ್ದ ಗಾಲವನಲ್ಲಿ ದಿನೇ ದಿನೇ ದ್ವಂದ್ವಗಳು ಹೆಚ್ಚುತ್ತಲೇ ಇದ್ದವು . 

‘ಗುರುವಿಗೆ  ಅರ್ಪಿಸಲು ನನ್ನಲ್ಲಿ ಏನಿರುವುದು? ನಾನೇ ಸ್ವಯಂ ಗುರುಗಳ  ಕೃಪಾಕಟಾಕ್ಷದಲ್ಲಿರುವೆ. ನನ್ನಲ್ಲಿರುವುದೆಲ್ಲವೂ ಗುರುಗಳ ಕಾರುಣ್ಯದ ಪ್ರಸಾದ. ನಾನು ಏನನ್ನು ಅರ್ಪಿಸಬಲ್ಲೆ?’ ಎಂದು ಸದಾ ಕಾಲ ತಾನು ಕೊಡಬೇಕೆಂದಿರುವ ಗುರುದಕ್ಷಿಣೆಯ ಬಗ್ಗೆಯೇ ಯೋಚಿಸುತ್ತಿದ್ದ ಗಾಲವ, ಕ್ರಮೇಣ ಒಂದು ನಿರ್ಧಾರವನ್ನು ತಲುಪಿದನು, 

‘ನಾನು ಆಚಾರ್ಯರನ್ನೇ ಕೇಳಿಬಿಡುವೆ. ಗುರುಗಳಾದರೋ ಬ್ರಹ್ಮರ್ಷಿಗಳು. ನನ್ನಿಂದ ಅವರಿಗೆ ಬಹಳ ದೊಡ್ಡ ಅಪೇಕ್ಷೆಗಳೇನೂ ಇರಲಾರವು. ಅವರಿಗೆ ಅಗತ್ಯವಿರುವ ಉತ್ಕೃಷ್ಟವಾದ ವಸ್ತುಗಳನ್ನು ನನ್ನಲ್ಲಿ  ಕೇಳಿಯಾರೇ? ಖಂಡಿತವಾಗಿಯೂ ಇಲ್ಲ. ನನ್ನ ಬಗ್ಗೆ ಅವರು ಚೆನ್ನಾಗಿ ಬಲ್ಲರು. ಆದ್ದರಿಂದ, ಒಂದು ವೇಳೆ ಕೇಳಿದರೂ, ಎರಡು ಆಕಳೋ ಅಥವಾ ಒಂದಷ್ಟು ದವಸ-ಧಾನ್ಯವೋ ಅಷ್ಟೇ ಕೇಳಿಯಾರು ತಾನೇ. ಅವರು ಕೇಳಿದ್ದನ್ನು ಸಂಪಾದಿಸಿಯೋ, ಸಾಲ ಪಡೆದೋ ಅಥವಾ ಊರೂರು ತಿರುಗಿ ಭಿಕ್ಷೆ ಬೇಡಿಯೋ ತಂದೊಪ್ಪಿಸಿದರಾಯಿತು.’ ಎಂದು ಸಮಾಧಾನ ಮಾಡಿಕೊಂಡನು. 

ಮರು ದಿನ, ಗಾಲವ, ಆಚಾರ್ಯ ವಿಶ್ವಾಮಿತ್ರರ ಬಳಿಗೆ ಬಂದು ವಿನಮ್ರವಾಗಿ ತನ್ನ ಮನಸಾ ಇಚ್ಛೆಯನ್ನು ಹೇಳಿಕೊಂಡನು. 

“ಗುರುವರ್ಯ, ನಾನು ನಿಮ್ಮ ಕೃಪಾಕಟಾಕ್ಷಕ್ಕೆ ಪಾತ್ರನಾಗಿರುವೆ. ಎಂದಿಗೂ ನಾನು ನಿಮ್ಮ ಆದೇಶವನ್ನು ಮೀರುವುದಿಲ್ಲ. ನೀವು ಹೇಳಿದ ಮಾತುಗಳನ್ನು ಅಕ್ಷರಶಃ ಪಾಲಿಸುವೆ, ಆದರೆ, ನನ್ನದೊಂದು ಸಣ್ಣ ಕೋರಿಕೆ ಇದೆ, ಅದನ್ನು ನೀವು ನೆರವೇರಿಸುತ್ತೀರಿ ಎಂದು ಭಾವಿಸುತ್ತೇನೆ. ನನ್ನ ಕೃತಾರ್ಥ ಭಾವದ ಪ್ರತೀಕವಾಗಿ ನಿಮಗೆ ಗುರುದಕ್ಷಿಣೆಯನ್ನು ಅರ್ಪಿಸಲು ಆಶಿಸುತ್ತೇನೆ. ಈ ಸಲುವಾಗಿ ನಾನು ನಿಮಗೆ ಏನನ್ನು ತಂದೊಪ್ಪಿಸಬೇಕೆಂದು ಆದೇಶಿಸಬೇಕು’. ಎಂದು ಕೇಳಿಕೊಂಡನು. 

ಈಗಾಗಲೇ ಗಾಲವನ ಸೇವೆಯಿಂದ ಸಂತುಷ್ಟರಾಗಿದ್ದ ವಿಶ್ವಾಮಿತ್ರರ ಮನಸ್ಸು ಅವನಿಂದ ಇನ್ನೇನನ್ನೂ  ಅಪೇಕ್ಷಿಸುತ್ತಿರಲಿಲ್ಲ. 

“ಮಗು ಗಾಲವ,  ನೀನು ಈಗಾಗಲೇ ಹಲವಾರು ವರ್ಷಗಳಿನಿಂದ, ಬಹಳ ವಿನಮ್ರ ಭಾವದಿಂದ ನನ್ನ ಸೇವೆ ಮಾಡಿದ್ದೀಯೆ. ನಿನ್ನಿಂದ ನಾನು ಇನ್ನೇನನ್ನೂ ಅಪೇಕ್ಷಿಸಲಾರೆ. ನಿನ್ನ ವಿಧೇಯ ಭಾವವನ್ನು ಮೆಚ್ಚಿದ್ದೇನೆ. ಹೋಗಿ ಬಾ. ಶುಭಮಸ್ತು”. ಎಂದು ಆಶೀರ್ವದಿಸಿದರು.

ಆದರೆ ಗಾಲವನ ಮನಸ್ಥಿತಿ ಇದಕ್ಕೆ ಒಪ್ಪುವಂತಿರಲಿಲ್ಲ. ಮತ್ತೆ ಮತ್ತೆ ವಿಶ್ವಾಮಿತ್ರರನ್ನು, ಗುರು ದಕ್ಷಿಣಿಯಾಗಿ ಏನನ್ನಾದರು  ಕೆಳಲೇಬೇಕೆಂದು ಒತ್ತಾಯಿಸಿದನು. ಒಂದೆರೆಡು ಬಾರಿ ವಿಶ್ವಾಮಿತ್ರರು ಶಾಂತವಾಗಿಯೇ ಅವನಿಗೆ ಸಮಾಧಾನ ಹೇಳಿದರು. ಆದರೆ, ಗಾಲವನ ಮನವಿ ಹಠಕ್ಕೆ ತಿರುಗಿತ್ತು. ಇದನ್ನು ಅರಿತ ವಿಶ್ವಾಮಿತ್ರರು ತಟ್ಟನೆ ತಮ್ಮ ಆಜ್ಞೆಯನ್ನು ಹೊರಳಿಸಿಯೇ ಬಿಟ್ಟರು. 

“ಗಾಲವ, ನನಗೆ ಎಂಟು ನೂರು ಕುದುರೆಗಳ ಅಗತ್ಯವಿದೆ. ಅವುಗಳನ್ನು ತಂದೊಪ್ಪಿಸು. ಒಂದು ಹೆಚ್ಚು ಒಂದು ಕಡಿಮೆಯೂ ಇರುವಂತಿಲ್ಲ. ಚಂದ್ರನ ಕಿರಣಗಳಂತಹ ಮೈಬಣ್ಣವಿರುವ, ರಜತ ವರ್ಣದ ಈ ಕುದುರೆಗಳ ಒಂದು ಕಿವಿ ಮಾತ್ರ  ಕಪ್ಪಗಿರುತ್ತವೆ.  ವಿಶೇಷವಾದ ತಳಿಯ ಕುದುರೆಗಳಾದ್ದರಿಂದ ಇವು ಬಹಳ ಶ್ರೇಷ್ಠ ಹಾಗು ವಿರಳವೂ ಸಹ ”. ಎಂದು ಹೇಳಿ ಹೊರಟೇ ಹೋದರು. 

ತನ್ನ ಗುರುಗಳ ಆದೇಶವನ್ನು ಕೇಳಿದ ಗಾಲವ ದಿಗ್ಬ್ರಾಂತನಾಗಿ ನಿಂತುಬಿಟ್ಟನು. ಕೊಂಚ ಚೇತರಿಸ್ಕೊಂಡಾಗ, ಅವನಿಗೆ ತನ್ನ ಅಹಂ ಭಾವದ ಅರಿವೂ ಆಯಿತು. ‘ಒಂದೇ, ಎರಡೇ, ಎಂಟು ನೂರು ಕುದುರೆಗಳು. ವಿಶೇಷ ತಳಿಯದ್ದು ಬೇರೆ. ಗುರುಗಳ ಆಜ್ಞೆಯನ್ನು ಹೇಗೆ ತಾನೆ ನೆರವೇರಿಸಲಿ? ಅವರು ಏನೂ ಬೇಡವೆಂದು ಹಲವಾರು ಬಾರಿ ನನ್ನನ್ನು ಸಂತೈಸಿದರು ಆದರೆ ನನ್ನ ದೃಷ್ಟಿಕೋನವು ನನನ್ನು ಅವರ ಮಾತುಗಳಿಗೆ ಕಿವುಡನನ್ನಾಗಿ ಮಾಡಿತು. ಈಗ ಏನು ಮಾಡಲಿ?’ ಎಂದು ಚಿಂತಾಕ್ರಾಂತನಾದನು. 

ದಿನಗಳು ಕಳೆದಂತೆಲ್ಲಾ ಗಾಲವನಲ್ಲಿ ಚಿಂತೆ ಹೆಚ್ಚಾಗುತ್ತಲೇ ಇತ್ತು. ಗುರುಗಳ ಆಜ್ಞೆಯನ್ನು ಸಾಧಿಸುವ ಧಾರಿಯೇ ಕಾಣಲಿಲ್ಲ. ಊಟ, ನಿದ್ರೆ ಮತ್ತು ಉತ್ಸಾಹ ತಗ್ಗುತ್ತಿದ್ದವು. ಮಾನಸಿಕ ಮತ್ತು ದೈಹಿಕ ಬಲಹೀನತೆ ಹೆಚ್ಚುತ್ತಿತ್ತು. ಪುನಃ ಪುನಃ ತನ್ನನ್ನೇ ತಾನು ನಿಂದಿಸಿಕೊಂಡು ಮಂಕಾಗಿಬಿಟ್ಟನು. ‘ಗುರುಗಳ ಆಜ್ಞೆಯನ್ನು ಪಾಲಿಸದ ನಾನು ಜೀವಂತವಾಗಿರುವುದು ಸರಿಯಲ್ಲ,  ಶ್ರೀ ಹರಿಯ ಪಾದಗಳನ್ನು ಸೇರುವುದೇ ಲೇಸು. ಅವನಲ್ಲಿಯೇ ನನ್ನ ಮೂರ್ಖತನಕ್ಕೆ ಕ್ಷಮೆಯಾಚಿಸಿತ್ತೇನೆ.’ ಎಂದು ಪ್ರಾಣತ್ಯಾಗ ಮಾಡುವ ವಿಚಾರಗಳು ಹಲವಾರು ಬಾರಿ ಅವನ ಮನಸ್ಸನ್ನು ಹಾದು ಹೋದರೂ, ತಾನು ಗುರುಗಳಿಗೆ ವಚನಬದ್ಧನಾಗಿರುವುದರಿಂದ, ಕೊಟ್ಟ ಮಾತನ್ನು ತಪ್ಪಿಸಿಕೊಂಡು ಪರ ಲೋಕ ಸೇರುವುದು ಸರಿಯಾದ ಕ್ರಮವಲ್ಲ ಎಂಬ ಆಲೋಚನೆಗಳೇ ಪ್ರಭಲವಾಗಿ ಮೂಡುತ್ತಿದ್ದವು. ಸದಾ ತಾನು ನಂಬಿದ್ದ ಶ್ರೀ ಹರಿಯನ್ನು ಪ್ರಾರ್ಥಿಸುತ್ತ ಅವನಲ್ಲಿಯೇ ಮೊರೆ ಹೋದನು. 

ಹೀಗಿರುವಾಗ ಒಂದು ದಿನ, ಅವನ ಕೂಗು ಶ್ರೀ ಹರಿಯನ್ನು ಮುಟ್ಟಿತೋ ಎನ್ನುವಂತೆ, ಗಾಲವನ  ಸ್ನೇಹಿತ, ಪಕ್ಷಿರಾಜ ಗರುಡ ಅವನನ್ನು ಬೇಟಿ ಮಾಡಲು ಆಶ್ರಮಕ್ಕೆ ಬಂದನು. ಆ ವೈನತೇಯ ಗಾಲವನ ಸ್ಥಿತಿಯನ್ನು ಕಂಡು ವಿಷಾದಿಸಿದನು. ಗಾಲವ ದುಃಖತಪ್ತನಾಗಿ ನಡೆದದ್ದೆಲ್ಲ ಹೇಳಿಕೊಂಡು ಮರುಗಿದನು. “ಗಾಲವ, ನಿನ್ನ ಮೊರೆ ಶ್ರೀ ಹರಿಯನ್ನು ತಲುಪಿದೆ. ಮುಂದೆ ನಿನಗೇ ಎಲ್ಲವೂ ಅರ್ಥವಾಗುತ್ತದೆ. ನಾನು ನಿನಗೆ  ಸಹಾಯ ಮಾಡಬೇಕೆಂದು, ದಯಾಸಾಗರ, ನಾರಾಯಣನ ಅಪ್ಪಣೆಯಾಗಿದೆ. ಧೈರ್ಯ ಕೆಡಬೇಡ. ಮುಂದೆ ಮಾಡಬೇಕಾದ ಕೆಲಸ ಸಾಕಷ್ಟಿದೆ. ನಿನ್ನ ಜೊತೆ ನಾನೂ ಬರುವೆ. ಎಂಟು ನೂರು ವಿಶೇಷ ತಳಿಯ ಕುದುರೆಗಳನ್ನು ಕಲೆ ಹಾಕಿ ನಿನ್ನ ಗುರುಗಳಾದ ವಿಶ್ವಾಮಿತ್ರರಿಗೆ ಖಂಡಿತವಾಗಿಯೂ ಒಪ್ಪಿಸುವಿಯೆ ಅಂತೆ. ಆಗುವ ಕೆಲಸ ನೋಡೋಣ. ಇನ್ನು, ತಡ ಮಾಡುವುದು ಬೇಡ”. ಎಂದು ಧೈರ್ಯ ತುಂಬಿದನು. ಗಾಲವನಲ್ಲಿ ಪುನಃ ಕಾರ್ಯಸಾಧನೆಯ ಹುರುಪು ಮೂಡಿತು. ಗರುಡನ ಸಹಾಯ ಪಡೆದು ಗುರುವಿನ ದಕ್ಷಿಣೆಯನ್ನು ಸಂಪಾದಿಸಿ ತರುವ ಛಲ ಮೈದಾಳಿತು. 

ಗರುಡ ಮತ್ತು ಗಾಲವ ಇಬ್ಬರೂ ದೇಶ ಪರ್ಯಟನೆ ಮಾಡಿ ಈ ವಿಶೇಷ ತಳಿಯ ಕುದುರೆಗಳನ್ನು ಸಂಪಾದಿಸುವ ಯೋಚನೆ ನಡೆಸಿದರು. “ಗಾಲವ, ನಾನು ನಿನ್ನನ್ನು ನನ್ನ ಬೆನ್ನಿನ ಮೇಲೆ ಕೂರಿಸಿಕೊಂಡು ನಿನಗೆ ಬೇಕಾದ ಕಡೆ ಕರೆದೊಯ್ಯುವೆ. ನೀನು ಜ್ಞಾನಿ. ನಿನ್ನ ವಿಚಾರಧಾರೆ ಉತ್ಕೃಷ್ಟವಾದದ್ದು. ಮೊದಲಿಗೆ, ನಾವು ಯಾವ ದಿಕ್ಕಿನಿಂದ  ಪ್ರಯಾಣ ಆರಂಭಿಸಬೇಕೆಂದು  ನಿರ್ಧರಿಸು.” ಎಂದು ಗರುಡ ಸಿದ್ಧನಾದನು. ಅದೇ ದಾಟಿಯಲ್ಲಿ ಮಾತು ಮುಂದುವರೆಸಿದ ಗರುಡ, ಆ ನಾಲಕ್ಕು ದಿಕ್ಕುಗಳನ್ನು ಪಾಲಿಸುವ ಅಧಿದೇವತೆ, ಆ ದಿಕ್ಕುಗಳಲ್ಲಿ ನಡೆದಿರುವಂತಹ ಪ್ರಮುಖವಾದ ಪೌರಾಣಿಕ  ಘಟನೆಗಳು ಮತ್ತು ಮಹಾತ್ಮೆಯನ್ನು ಗಾಲವನಿಗೆ ಬೋಧಿಸಿದನು. ಒಂದಷ್ಟು ದಿನಗಳಿಂದ ದಿಗ್ಬ್ರಾಂತನಾಗಿದ್ದ ಗಾಲವನಿಗೆ ಗರುಡನ ಮೂಲಕ ನಾಲ್ಕು ದಿಕ್ಕುಗಳ ಬಗ್ಗೆಯೂ ಅಪಾರವಾದ ಜ್ಞಾನ ಪ್ರಾಪ್ತಿಯಾಯಿತು. ಅದೇ ಅವನ ಕಾರ್ಯ ಸಾಧನೆಗೆ ದಾರಿ ದೀಪವಾಯಿತು. 

ಗಾಲವ ಮುಂದೇನು ಮಾಡುವನೆಂದು ಮುಂದಿನ ಸಂಚಿಕೆಯಲ್ಲಿ ನೋಡೋಣ….. 

Image Credit: EKhabri

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply