close logo

ಕಾಶ್ಮೀರದ ಮಾತೃಗುಪ್ತನ ರೋಮಾಂಚಕ ಚರಿತ್ರೆ

ಪ್ರಪಂಚದ ಯಾವುದೋ ಮೂಲೆಯಲ್ಲಿರುವ, ಪರದೇಶದ ವಿವಾದಾಸ್ಪದ ವ್ಯಕ್ತಿಗಳು, ಭಾರತೀಯ ಜೀವನಕ್ಕೆ ಯಾವುದೇ ರೀತಿಯಲ್ಲಿ ಪ್ರಸ್ತುತರಲ್ಲದವರು ಮುಂತಾದವರ ಬಗ್ಗೆ ಆಧುನಿಕತೆ ಅತಿಯಾಗಿ ತಿಳಿಸುತ್ತದೆ. ಆದರೆ ಪ್ರಸನ್ನವೂ ಗಂಭೀರವೂ ಆದ ವ್ಯಾಸವಿರಚಿತ ಬ್ರಹ್ಮಸೂತ್ರಗಳಿಗೆ ಭಾಷ್ಯವನ್ನು ಬರೆದು, ಶ್ರುತ ಹಾನಿ ಮತ್ತು ಅಶ್ರುತ ಕಲ್ಪನೆಗಳನ್ನು ಹೋಗಲಾಡಿಸಿ, ಶ್ರುತಿ ಮತವನ್ನು ಎತ್ತಿ ಹಿಡಿದ, ಭೂತದಲ್ಲೂ ಭವಿಷ್ಯದಲ್ಲೂ ಮತ್ಯಾರು ಸಮರಿಲ್ಲದ ಶಂಕರಭಗವತ್ಪಾದರ ಬಗ್ಗೆ ನಮಗೆ ಅವರು ಯಾವ ಕಾಲದವರು ಎಂಬುದೂ ಖಚಿತವಿಲ್ಲ. ಇದು ಆಧುನಿಕ ಜೀವನದ ವಿಪರ್ಯಾಸವೇ ಸರಿ. ಇತಿಹಾಸಜ್ಞರ ಅವಜ್ಞೆ, ಭರತಮಂಡಲ ಅನುಭವಿಸಿದ ಆಕ್ರಮಣ ಪರಂಪರೆ, ಬೌದ್ಧಿಕ ಭಯೋತ್ಪಾದನೆ – ಇದಕ್ಕೆ ಕಾರಣವಿರಬಹುದು. ಶಾಂಕರ ಸಿದ್ಧಾಂತದ ವಿದ್ಯಾರ್ಥಿಗಳಿಗೆ ಇವೆಲ್ಲವೂ ಕೇವಲ ನಿಮಿತ್ತ ಕಾರಣವಷ್ಟೇ. ಕಾಲದ ವೈಪರೀತ್ಯವು ನಿಜವಾದ ಕಾರಣ. ಆದರೂ ಕುತೂಹಲ, ಅದು ಬಾಯಾರಿದವನಿಗೆ ನೀರು ಕುಡಿಯುವಂತೆ, ವಿದ್ಯಾರ್ಜನೆಯಿಂದ ಮಾತ್ರವೇ ನೀಗುವುದು.

ಶ್ರೀ ಆದಿ ಶಂಕರಾಚಾರ್ಯರ ಜನ್ಮ ಹಾಗು ಅವರ ಜೀವನಚರಿತ್ರೆಯನ್ನು ಶೋಧಿಸುತ್ತ ವಿಕ್ರಮಾದಿತ್ಯನೆಂಬ ಚಕ್ರವರ್ತಿಯ ಬಗ್ಗೆ ಶೋಧಿಸಲು ಆರಂಭಿಸಿದೆ. ಹೀಗೆ ಶೋಧಿಸುತ್ತಾ ಮಾತೃಗುಪ್ತನ ಹೆಸರು ಬಂತು. ಈ ಹೆಸರನ್ನು ಇದುವರೆಗೆ ಕೇಳಿಯೇ ಇರಲಿಲ್ಲವೆಂದುಕೊಂಡೆ. ಆದರೆ ಕಾಳಿದಾಸನ ಬಗ್ಗೆ ಯಾರಿಗೆ ತಿಳಿದಿರುವುದಿಲ್ಲ? ಇವೆರಡು ಹೆಸರುಗಳು ತತ್ಸಮವಾಗಿರುವುದನ್ನು ಗಮನಿಸಿದೆ. ಕಾಳಿ- ದಾಸ; ಮಾತೃ- ಗುಪ್ತ. ಬಹಳಷ್ಟು ಇತಿಹಾಸಜ್ಞರು ವಿದ್ವಾಂಸರು ಇವರಿಬ್ಬರು ಬೇರೆ ಬೇರೆ ಯಲ್ಲ ಆದರೆ ಒಬ್ಬನೇ ಎಂಬುದನ್ನು ಹೇಳುತ್ತಾರೆ. ಆದರೆ ಪ್ರಸ್ತುತ ವಿಷಯವು ಅದಲ್ಲ. ಮಾತೃಗುಪ್ತನ ಬಗ್ಗೆ ನಮಗೆ ಕಾಶ್ಮೀರದ ಕಲ್ಹಣನು ಬರೆದಿರುವ ರಾಜತರಂಗಿಣಿಯಲ್ಲಿ ಇರುವ ವಿಚಾರ ಹಾಗು ಅದರ ವಿಶ್ಲೇಷಣೆ – ಈ ಲೇಖನದ ಉದ್ದೇಶ. ಶಂಕರಾಚಾರ್ಯರ ಬಗ್ಗೆಯೇ ನಮಗೆ ತಿಳಿದಿರುವುದು ಅತ್ಯಲ್ಪವಾಗಿರುವಾಗ ಇನ್ನು ಮಾತೃಗುಪ್ತನ ಬಗ್ಗೆ ಹೆಚ್ಚು ಅರಿವಿಲ್ಲದಿರುವುದು ಆಶ್ಚರ್ಯವೇನಲ್ಲ.

ಅವಂತೀ ಭೂಪತಿಯಾಗಿದ್ದ ಶಕಾರಿ ವಿಕ್ರಮಾದಿತ್ಯನ ಆಸ್ಥಾನ ಕವಿಯಾಗಿದ್ದವನು ಮಾತೃಗುಪ್ತ. ಮೂಲತಃ ಕಾಶ್ಮೀರ ದೇಶದವನಾಗಿದ್ದ ಈತ ಹಲವು ದೇಶಗಳಲ್ಲಿ ಸಂಚರಿಸುತ್ತ ಕಡೆಗೆ ಉಜ್ಜಯನಿಯಲ್ಲಿ ನೆಲೆಸಿದ. ವಿಕ್ರಮಾದಿತ್ಯನು ತಾನು ವಿದ್ವಾಂಸನೆಂದು ಹೇಳಿಕೊಂಡು ಬಂದವರಿಗೆಲ್ಲ ಉಪಚಾರ ಮಾಡುತ್ತಿರಲಿಲ್ಲ. ಮಿಥ್ಯಾಚಾರಿಗಳನ್ನು ಕಪಟಿಗಳನ್ನು ಅಥವಾ ಸರ್ವೇ ಸಾಧಾರಣರನ್ನು ಪರಿಗಣಿಸುತ್ತಿರಲಿಲ್ಲ. ನಿಜವಾದ ವಿದ್ವಾಂಸರನ್ನು ಧರ್ಮಪರರನ್ನು ಮಾತ್ರವೇ ಗೌರವಿಸುತ್ತಿದ್ದನು. ಇದನ್ನು ಗಮನಿಸಿದ ಮಾತೃಗುಪ್ತನು ಉಜ್ಜಯಿನಿಯಲ್ಲಿ ನೆಲೆಸಿ ವಿಕ್ರಮಾದಿತ್ಯನ ಆಸ್ಥಾನವನ್ನು ಅಲಂಕರಿಸಿದನು. ಮಾತೃಗುಪ್ತನನ್ನು ಪರೀಕ್ಷಿಸಲು  ರಾಜನು ಅವನಿಗೆ ಯಾವ ಒಲವನ್ನೂ ತೋರಿಸಲಿಲ್ಲ. ಮಾತೃಗುಪ್ತನು ಮಿಕ್ಕ ಎಲ್ಲ ಆಸ್ಥಾನ ಪಂಡಿತರೊಂದಿಗೆ ಬೆರೆಯುತ್ತಿರಲಿಲ್ಲ. ಹೆಚ್ಚು ಹೊತ್ತು ಇರದೇ ಅಥವಾ ಅಲ್ಪ ಸಮಯದಲ್ಲೇ ತನ್ನ ಪಾಂಡಿತ್ಯ ಪ್ರದರ್ಶನ ಮುಗಿಸಿ ಹೋಗದೆ, ಬೇರೆ ಯಾವವಿಷಯದಲ್ಲೂ ತಲೆ ಹಾಕದೆ, ಒಂದು ವರ್ಷದ  ಕಾಲ ಮಾತೃಗುಪ್ತನು ವಿಕ್ರಮಾದಿತ್ಯನ ಆಸ್ಥಾನದಲ್ಲಿ ಇದ್ದನು. ಇದನೆಲ್ಲ ವಿಕ್ರಮಾದಿತ್ಯನು ಸೂಕ್ಷ್ಮವಾಗಿ  ಗಮನಿಸುತ್ತಿದ್ದನು.

ಹೀಗೆ ಒಂದು ದಿನ ರಾಜನು ಮಾತೃಗುಪ್ತನನ್ನು ಹರಿದ ಬಟ್ಟೆಯಲ್ಲಿ ನೋಡಿದನು. ಸೋತು ಸೊರಗಿದ ದೇಹವನ್ನು ನೋಡಿದ ವಿಕ್ರಮಾದಿತ್ಯನು ಬಹಳ ನೊಂದನು. ಪರೀಕ್ಷಿಸಲು ಹೋಗಿ ಈ ದೈನ್ಯದ ಸ್ಥಿತಿಯಲ್ಲಿದ್ದ, ವೇದ ವೇದಾಂಗಗಳನ್ನು ಅರಿತಿದ್ದ ವಿದ್ಯಾವಂತನಿಗೆ ಈ ಗತಿ ಬಂದಿರಿವುದು ಅವನಿಗೆ ಅಸಹನೀಯವಾಯಿತು. ಯಾವ ಸಂಬಂಧಿಕರೂ, ಸ್ನೇಹಿತರೂ ಇಲ್ಲದ, ವಿದೇಶದಲ್ಲಿ ಒಂಟಿಯಾಗಿ ಇರುವ ಇವನು ಜೀವನ ಸಾಗಿಸುತ್ತಿರುವ ಬಗೆಯಾದರೂ ಹೇಗೆ ಎಂಬ ಸಂಶಯವಾಯಿತು. ಇವನಿಗೆ ತಕ್ಕ ಗೌರವ, ಸನ್ಮಾನ ಹೇಗೆ ಅಥವಾ ಏನು ಕೊಡಲಿ ಎಂದು ಯೋಚಿಸಿದನು.

ಹೀಗೆ ಒಂದು ರಾತ್ರಿ ವಿಕ್ರಮಾದಿತ್ಯನು ತನ್ನ ನಿದ್ದೆಯಿಂದ  ಎದ್ದನು. ಚಳಿಗಾಲದ ಕೊರೆಯುವ ಚಳಿಯಲ್ಲಿ ಜೋರಾಗಿ ಗಾಳಿ ಬೀಸುತ್ತಿತ್ತು. ಆ ಗಾಳಿಯಿಂದ ಅಲ್ಲಿ ಹಚ್ಚಿದ್ದ ದೀಪವು ಅಲ್ಲಾಡಲು ಶುರುವಾಯಿತು. ಅದನ್ನು ಸರಿಮಾಡಲು ತನ್ನ ಭಟರನ್ನು ಕೂಗಿದನು. ಎಲ್ಲರೂ ಚಳಿಯ ಕಾರಣ ಬೆಚ್ಚಗೆ ಮಲಗಿದ್ದರು. ಆದರೆ ಮಾತೃಗುಪ್ತನು ಆ ಆಜ್ಞೆಗೆ ಉತ್ತರಿಸುತ್ತಾ ಬಂದನು. ರಾಜನು ಯಾರೆಂದು ಕೇಳಲು “ನಾನು, ಮಾತೃಗುಪ್ತ” ಎಂದು ಉತ್ತರಿಸಿದನು. ಚಳಿಯಿಂದ ನಡುಗುತ್ತಿದ್ದ ಮಾತೃಗುಪ್ತನನ್ನು ನೋಡಿ ರಾಜನು ಕೇಳಿದನು – “ಇದು ರಾತ್ರಿಯ ಎಷ್ಟು ಹೊತ್ತು?” .

ಮಾತೃಗುಪ್ತ – “ರಾತ್ರಿಯ ಒಂದು ಪ್ರಹರವು (3 hours) ಉಳಿದಿದೆ.”

ವಿಕ್ರಮಾದಿತ್ಯ – “ರಾತ್ರಿಯ ವೇಳೆ ಹೇಗೆ ಗೊತ್ತು? ಇನ್ನೂ ಮಲಗಿಲ್ಲವೇಕೆ?”

ಮಾತೃಗುಪ್ತನವು ತತ್ಕ್ಷಣವೇ ಒಂದು ಪದ್ಯವನ್ನು ರಚಿಸಿ ಹೇಳಿದನು – “ಆತಂಕದ ಸಮುದ್ರದಲ್ಲಿ ಮುಳಗಿ ಶಿಶಿರದ ಶರಗಳಿಗೆ ತುತ್ತಾಗಿ ಹಸಿವಿನಿಂದ ನನ್ನ ಮಾತೇ ಕೇಳಿಸದಂತಾಗಿ, ಆತ್ಮತೃಪ್ತಿಯ ಬಗ್ಗೆ ಹೇಳಲು ಹೋಗಿ ನನ್ನ ತುಟಿಗಳು ಅದರುತ್ತಿವೆ. ನಿದ್ದೆ ಎಂಬುದು ಶೋಷಣೆ ಗೊಳಗಾದ ಹೆಂಡತಿಯಂತೆ ಬಹಳ ದೂರ ಹೊರಟು ಹೋಗಿದೆ, ಈ ರಾತ್ರಿಯು ಧರ್ಮಿಷ್ಠನಾದ ನೃಪನ ಆಳ್ವಿಕೆಯಂತೆ ಚಿರ ಕಾಲದ್ದಾಗಿದೆ”.

ವಿಕ್ರಮಾದಿತ್ಯನು ಈ ಮಾತುಗಳನ್ನು ಕೇಳಿ ಕಂಬದಂತೆ ಮೂಕನಾದನು. ಅವನಿಗೆ ಆಶ್ವಾಸನೆಯನ್ನು ನೀಡಿ  ಕಳಿಸಿಕೊಟ್ಟನ್ನು. ಕೊಡಬೇಕು ಎಂದುಕೊಂಡರೂ ಇದುವರೆಗೆ ಏನನ್ನೂ ಕೊಟ್ಟಿಲ್ಲವಲ್ಲ ಎಂದುಕೊಂಡು ಯೋಚಿಸ ತೊಡಗಿದನು. ಆಗ ಅವನಿಗೆ ನೆನಪಾಯಿತು. ಕಾಶ್ಮೀರ ದೇಶದಲ್ಲಿ ಹಿರಣ್ಯನೆಂಬ ದೊರೆಯ ನಂತರ ಉತ್ತರಾಧಿಕಾರಿ ಯಾರೂ ದೇಶ ಇಲ್ಲದೆ ಅರಾಜಕತೆಗೆ ಬಿದ್ದಿದೆ. ಚಕ್ರವರ್ತಿಯಾದ ವಿಕ್ರಮಾದಿತ್ಯನಲ್ಲಿ ಅಲ್ಲಿಯ ಆಸ್ಥಾನದವರು ಸಹಾಯವನ್ನು ಕೂಡಲೇ ಯಾಚಿಸಿದ್ದರು. ಅದೇ ರಾತ್ರಿಯೇ ವಿಕ್ರಮಾದಿತ್ಯನು ತನ್ನ ದೂತರನ್ನು ಗುಪ್ತವಾಗಿ ಕಾಶ್ಮೀರಕ್ಕೆ ಕಳಿಸಿದನು. ಪುನಃ ಮಲಗದೆ ಅದೇ ರಾತ್ರಿ ರಾಜಾಜ್ಞೆಯನ್ನು ಬರೆಸಿದನು.

ಇಲ್ಲಿ ಮಾತೃಗುಪ್ತನು ಪ್ರತಿ ಸಲದ ತರಹ ಪುನಃ ಅದೇ ರೀತಿ ಏನು ಆಗದು ಹೋಗದು ಎಂದು ಅಂದುಕೊಂಡು ನೊಂದನು. ಎಲ್ಲಾ ಅಪೇಕ್ಷೆಗಳು ಬರಿ ಹುಸಿ ಎಂದು ತೀರ್ಮಾನಿಸುತ್ತ ಹೀಗೆಂದುಕೊಂಡನು – “ ನನ್ನ ಕರ್ತವ್ಯವನ್ನು ಯಥಾಶಕ್ತಿ ನಿರ್ವಹಿಸಿರುವೆ. ನನ್ನ ಎಲ್ಲಾ ಅಪೇಕ್ಷೆಗಳೂ ಈಗ ಕೊನೆಗೊಂಡಿವೆ. ಇನ್ನು ಯಾವ ಅಪೇಕ್ಷೆಗಳು ಆಕಾಂಕ್ಷೆಗಳೂ ಇಲ್ಲದೆ ಶಾಂತಿಯಿಂದ ನನ್ನ ದಾರಿ ಹಿಡಿಯುವೆ. ರಾಜನೇನೋ ಬುದ್ಧಿವಂತನೇ, ತನಗೆ ಬೇಕಾದವರಿಗೆ ಸಂಪತ್ತು ಕರುಣಿಸುತ್ತಾನೆ, ಅವನನ್ನು ದೂಷಿಸುವುದು ತಪ್ಪು. ನನ್ನ ದುಷ್ಕರ್ಮದ ಫಲಗಳಿಗೆ ನಾನೆ ಹೊಣೆ! ಸಮುದ್ರದ ಇನ್ನೊಂದು ತೀರದಲ್ಲಿ ಸಂಪದ್ಭರಿತ ವಜ್ರ ವೈಡೂರ್ಯಗಳಿದ್ದು ಬಿರುಗಾಳಿಯ ಕಾರಣ ಸಮುದ್ರವನ್ನು ದಾಟಲು ಸಾಧ್ಯವಾಗದಿದ್ದರೆ ಅದು ಸಮುದ್ರದ ತಪ್ಪಲ್ಲ. ಫಲಾಪೇಕ್ಷಿಗಳಾದವರು ರಾಜನನ್ನು ಸೇವಿಸುವುದರ ಬದಲು ರಾಜನ ಅನುಯಾಯಿಗಳನ್ನು  ಸೇವಿಸುವುದು ಒಳ್ಳೆಯದು. ಶಿವನನ್ನು ಪೂಜಿಸಿದರೆ ಬರಿ ಭಸ್ಮವು ಸಿಗುವುದು ಆದರೆ ನಂದಿಯನ್ನು ಪೂಜಿಸಿದವರಿಗೆ ಅನುದಿನವೂ ಸುವರ್ಣವು ಸಿಗುವುದು. ಎಷ್ಟೇ ಉತ್ಕೃಷ್ಟವಾಗಿದ್ದರೂ ಪ್ರಜೆಗಳು ಹೊಗಳದಿದ್ದರೆ ರಾಜನ  ಗಮನಕ್ಕೆ ಬರುವುದಿಲ್ಲ. ಆದರೆ ಪ್ರಜೆಗಳ ಮನ್ನಣೆ ಪಡೆದುಬಿಟ್ಟರೆ ಒಬ್ಬ ಅಯೋಗ್ಯನನ್ನು ಸಹ ರಾಜನು ಪರಿಗಣಿಸುತ್ತಾನೆ. ಸಮುದ್ರದಲ್ಲಿನ ನೀರು ಯಾರಿಗೂ ಬೇಕಿಲ್ಲ ಆದರೆ ಅದೇ ನೀರು ಮೋಡಗಳಿಂದ ಉದುರಿದರೆ ಮುತ್ತು ಸುರಿದಂತೆ”. ಹೀಗೆ ವಿಕ್ರಮಾದಿತ್ಯನಲ್ಲಿದ್ದ ಅವನ ಆದರ ಕೊನೆಯಾಯಿತು. ವಿಧಿಯು ವಿಪರೀತವಾದರೆ ವಿದ್ವಾಂಸನ ವಿದ್ಯೆಯೂ ನಷ್ಟವಾಗುತ್ತದೆ ಎನ್ನುತ್ತಾನೆ ಕಲ್ಹಣ.

ರಾತ್ರಿ ಕಳೆದ ನಂತರ ಮುಂದಿನ ದಿನ ವಿಕ್ರಮಾದಿತ್ಯನು ತನ್ನ ರಾಜಾಜ್ಞೆಯ ಮುದ್ರೆ, ಮತ್ತೆಲ್ಲವನ್ನೂ ಸಿದ್ಧಪಡಿಸಿ  ಮಾತೃಗುಪ್ತನನ್ನು ಆಸ್ಥಾನಕ್ಕೆ ಕರೆಸಿದನು. ಭಟರು ಬರಲಿಚ್ಛಿಸದ ಮಾತೃಗುಪ್ತನನ್ನು ಬಲವಂತವಾಗಿ ಕರೆತಂದರು. “ನಿನಗೆ ಕಾಶ್ಮೀರಕ್ಕೆ ಹೋಗುವ ದಾರಿ ತಿಳಿದಿದೆಯೇ” ಎಂದು ಮಾತೃಗುಪ್ತನನ್ನು ಕೇಳಿ “ಅಲ್ಲಿಗೆ ಹೋಗು. ಈ ರಾಜಾಜ್ಞೆಯನ್ನು ರವಾನಿಸು” ಎಂದು ಹೇಳಿದನು. “ಹಾಗೆಯೆ ಆಗಲಿ” ಎಂದು ಮಾತೃಗುಪ್ತನು ಕಾಶ್ಮೀರಕ್ಕೆ ಹೊರಟನು. ಎಲ್ಲರೂ ಇದನ್ನು ಕಂಡು ಖಿನ್ನ ಮನಸ್ಕರಾದರು. ವಿದ್ಯಾವಂತನಾದ ಮಾತೃಗುಪ್ತನಿಗೆ ಕಾಗದ ಪತ್ರಗಳನ್ನು ಒಯ್ಯುವ ಕೆಲಸಕೊಟ್ಟಿರುವನಲ್ಲ ಎಂದುಕೊಂಡರು. ಮಾತೃಗುಪ್ತನು ಮಾತ್ರ  ನಿರಾತಂಕವಾಗಿದ್ದನು. ಬಹಳ ಶುಭ ಶಕುನಗಳನ್ನು ಗಮನಿಸಿದನು. ಇದರಿಂದ ಕಿಂಚಿತ್ತಾದರೂ ಒಳ್ಳೆಯದಾಗಬಹುದು ಎಂದುಕೊಂಡನು. ಬೇರೆ ದೇಶಗಳಲ್ಲಿ ಹೇರಳವಾಗಿ ಪಡೆಯುವುದಕ್ಕಿಂತಲೂ ಸ್ವದೇಶವಾದ ಕಾಶ್ಮೀರದಲ್ಲಿ ಸ್ವಲ್ಪವೇ ಗಳಿಸಿದರೂ ಉತ್ತಮ ಎಂದುಕೊಂಡನು.

ಕಾಶ್ಮೀರದ ಮಂತ್ರಿಗಳು ಅಲ್ಲಿ ಆಗಲೇ ಕಾದು ನಿಂತಿದ್ದರು. ಮಾತೃಗುಪ್ತನು ತನ್ನ ಹಳೆಯ ಬಟ್ಟೆಯನ್ನು ತ್ಯಜಿಸಿ ಶುಭ್ರವಾದ ಶ್ವೇತ ವರ್ಣದ ಬಟ್ಟೆಯನ್ನು ಧರಿಸಿ ಮಂತ್ರಿ ಸಮೂಹವನ್ನು ಸಮೀಪಿಸಿದನು. ಮಾತೃಗುಪ್ತನನ್ನು ಸ್ವಾಗತಿಸಿ ಶಾಸ್ತ್ರೋಪಚಾರಗಳೆಲ್ಲ ಮುಗಿದ ನಂತರ ಒಂದು ಭವ್ಯವಾದ ಆಸನವನ್ನು ಕೊಟ್ಟರು. ಅಲ್ಲಿ ಆಸೀನನಾಗಿ ವಿಕ್ರಮಾದಿತ್ಯನ ಸಂದೇಶವನ್ನು ಹಸ್ತಾಂತರಿಸಿದನು. ಆ ಸಂದೇಶವನ್ನು ವಿನಮ್ರತೆಯಿಂದ ಸ್ವೀಕರಿಸಿದ ಮಂತ್ರಿಗಳು ಅದನ್ನು ಓದಿ ಪುನಃ ಬಂದು “ನೀವು ಮಾತೃಗುಪ್ತರೇ?” ಎಂದು ವಿಚಾರಿಸಿದರು. ಮಾತೃಗುಪ್ತನು ಮುಗುಳು ನಗುತ್ತ ಹೌದೆಂದನು. ಮರುಕ್ಷಣವೇ ಅಲ್ಲಿದ್ದವರನ್ನು ಕರೆಸಿ ಪಟ್ಟಾಭಿಷೇಕದ ಸಿದ್ಧತೆ ನಡೆಸಲಾರಂಭಿಸಿದರು. ಅಲ್ಲಿದ್ದ ಜನರು ಕುತೂಹಲದಿಂದ ಸದ್ದು ಮಾಡುತ್ತ ವೀಕ್ಷಿಸಿದರು. ಮಾತೃಗುಪ್ತನು ಸುವರ್ಣ ಸಿಂಹಾಸನದ ಮೇಲೆ ಪೂರ್ವಾಭಿಮುಖವಾಗಿ ಕುಳಿತನು. ಅಲ್ಲಿದ್ದ ಜನರೆಲ್ಲಾ ಅವನಿಗೆ ವಂದಿಸುತ್ತಾ ನೀರಿನಿಂದ ಅಭಿಷೇಕ ಮಾಡಿದರು. ಆ ಜಲವು ವಿಂಧ್ಯ ಪರ್ವತದಿಂದ ಹರಿಯುವ ರೇವಾ ನದಿಯಂತೆ ಅವನ ಶಿಖರದಿಂದ ಹರಿಯತೊಡಗಿತು. ಸ್ನಾನಾದಿಗಳು ಮುಗಿದ ನಂತರ ರಾಜಾಲಂಕೃತವಾಗಿ ಸಿಂಹಾಸನದ ಮೇಲೆ ಕುಳಿತ ನಂತರ ಅಲ್ಲಿದ್ದ ಪ್ರಜೆಗಳು ಕಾಶ್ಮೀರದ ಸ್ಥಿತಿಯನ್ನೂ  ಹಾಗು ವಿಕ್ರಮಾದಿತ್ಯನ ಆಜ್ಞೆಯನ್ನೂ ಅವನಿಗೆ ತಿಳಿಸಿ “ನಮ್ಮ ಪಾಲನೆ ಮಾಡು” ಎಂದು ಕೇಳಿಕೊಂಡರು. ಇದನ್ನು ಕೇಳಿ ಮಾತೃಗುಪ್ತನು ಹರ್ಷ ಚಿತ್ತನಾದನು. ವಿಕ್ರಮಾದಿತ್ಯನು ಮಾಡಿದ ಮಹೋಪಕಾರವನ್ನು ಸ್ಮರಿಸಿ ಮಂದಸ್ಮಿತನಾದನು. ಆ ದಿನವು ಕಾಣಿಕೆ ಕೊಡುಗೆಗಳನ್ನು ಕೊಡುವುದರಲ್ಲಿ ಕಳೆಯಿತು. ಮರುದಿನ ವಿಕ್ರಮಾದಿತ್ಯನಿಗೆ ರಾಜಕೊಡುಗೆಗಳನ್ನು ಕಳಿಸುತ್ತ ಸ್ವಲ್ಪ ಮುಜುಗರವೂ ಆಯಿತು. ಈಗ ಮಾತೃಗುಪ್ತನಿಗೆ ಅವಂತಿ ದೇಶಕ್ಕಿಂತಲೂ ಉತ್ತಮವಾದ ಕಾಶ್ಮೀರ ದೇಶದ ರಾಜ್ಯವೇ ಸಿಕ್ಕಿಹೋಯಿತು! ಜೊತೆಗೆ ಒಂದು ಪದ್ಯವನ್ನು ರಚಿಸಿದನು – “ಯಾವ ಗುಡುಗು ಸಿಡಿಲಿನ ಸದ್ದಿಲ್ಲದೇ ಮಳೆ ಸುರಿಸುವ ಪರ್ಜನ್ಯದಂತೆ, ಪರೋಪಕಾರಿಯಾದ ನಿನ್ನ ಕಾರ್ಯಗಳು ನಿರಾಡಂಬರ! ಕಾರ್ಯವು ಫಲಿಸಿದ ನಂತರವೇ ನಿನ್ನ ಮಹತ್ವ ತಿಳಿಯುವುದು!”

ಸ್ವತಃ ಬಹಳ ಕಷ್ಟ ಪರಂಪರೆಯನ್ನು ಸಹಿಸಿದ್ದರಿಂದಲೋ ಏನೋ ಮಾತೃಗುಪ್ತನ ಔದಾರ್ಯವು ಮಹತ್ತರವಾಗಿತ್ತು. ಇದರಿಂದ ಇವನ ಆಸ್ಥಾನದಲ್ಲಿ ವಿಕ್ರಮಾದಿತ್ಯನಿಗಿಂತಲೂ ಹೆಚ್ಚು ವಿದ್ವಾಂಸರಿದ್ದರು. ಮೆಂಥ ಅಥವಾ ಮಾತೃಮೆಂಥ ಎಂಬ ನಾಮಾಂಕಿತ ಕವಿಯೊಬ್ಬ ಇವನ ಆಸ್ಥಾನದಲ್ಲಿದ್ದನು. ಮಾರ್ಕಂಡೇಯ ಪುರಾಣಾಧಾರಿತ ‘ಹಯಗ್ರೀವವಧ’ ಎಂಬ ಉತ್ಕೃಷ್ಟವಾದ ಕೃತಿಯನ್ನು ಮೆಂಥ ರಚಿಸಿದನು. ಇದನ್ನು ಸುವರ್ಣದ ಪೇಟಿಯಲ್ಲಿ ಇರಿಸಿ ಮಾತೃಗುಪ್ತನು ಇದರ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸಿದನು. ಹಯಗ್ರೀವನನ್ನು ದೇವತೆಯೆಂದು ಹಲವು ಪುರಾಣಗಳಲ್ಲಿ ವರ್ಣಿಸಲಾಗಿದೆ. ಕೆಲವು ಸಂಪ್ರದಾಯಗಳು ಹಯಗ್ರೀವನನ್ನು ದೇವತೆಯೆಂದೇ ಪೂಜಿಸುತ್ತಾರೆ. ಕೌತುಕವೆಂದರೆ ಮಾರ್ಕಂಡೇಯ ಪುರಾಣದಲ್ಲಿ ಬರುವ ಈ ಪ್ರಸಂಗದಲ್ಲಿ ಹಯಗ್ರೀವನೆಂಬ ಅಸುರನು, ದೇವತೆಗಳ ಜಯಕ್ಕೆ ವೇದಗಳು ಕಾರಣವೆಂದು ತಿಳಿದು ವೇದಗಳನ್ನು ಅಪಹರಿಸಿಟ್ಟಿರುತ್ತಾನೆ. ಈ ಅಸುರನ  ಸಂಹಾರದ ಕಥೆಯೇ ಹಯಗ್ರೀವವಧೆ. ಮೆಂಥನ ವೈಶಿಷ್ಟ್ಯವು ಎಷ್ಟಿತ್ತಂದರೆ ಇವನ ಕೃತಿಗಳಲ್ಲಿ ಮೂರು ಭಾಗವಿರುತ್ತಿತ್ತು- ಆರಂಭ, ಉಪಸಂಹಾರ, ಪುನರಾರಂಭ! ಈ ವಿಧವಾದ ಕಾವ್ಯವನ್ನು ಇವತ್ತಿಗೂ ಬಳಸುತ್ತಾರೆ. Opening, interlude, re-opening. ಇನ್ನು ಮಾತೃಗುಪ್ತ, ಮಾತೃಮೆಂಥ ಈ ಹೆಸರುಗಳ ಬಗ್ಗೆ ಹೇಳುವುದಾದರೆ, ಇವರೆಲ್ಲ ಕಾಶ್ಮೀರ ದೇಶದವರು. ಕಾಶ್ಮೀರವೆಂದರೆ ವೇದ ಪುರಾಣಗಳಿಂದಲೂ ಪ್ರಸಿದ್ಧವಾಗಿರುವುದೇನೆಂದರೆ ಇದು ಶಾರದಾ ದೇವಿಯ ಸ್ವಸ್ಥಳ. ‘ನಮಸ್ತೆ ಶಾರದಾ ದೇವೀ ಕಾಶ್ಮೀರ ಪುರ ವಾಸಿನೀ…..’ ಇದು ನಮ್ಮಲ್ಲಿ ಮಕ್ಕಳಿಗೂ ಗೊತ್ತಿರುವಂತಹ ವಿಷಯ. [ಈ ವಿಷಯವಾಗಿ ವಿಶೇಷವಾಗಿ ಒಂದು ಲೇಖನವನ್ನು ಸಹ ಬರೆದಿದ್ದರು ಸುಪ್ರೀಂ ಕೋರ್ಟ್ನ ಚೀಫ್ ಜಸ್ಟಿಸ್ ರಾಮ ಜೋಯಿಸರು]. ಹಾಗಾದರೆ ಮಾತೃಗುಪ್ತನೆಂದರೆ ಶಾರದಾ ದೇವಿಯ ಉಪಾಸಕನಾಗಿದ್ದನು ಮಾತೃಗುಪ್ತ ಎಂದು ಊಹಿಸಬಹುದು. ವಾಗ್ದೇವಿಯ ಅನುಗ್ರಹ ದಿಂದ ಅವನು ಅಷ್ಟು ವಿದ್ವತ್ತನ್ನು ಸಂಪಾದಿಸಿದ್ದಿರಬಹುದು.

ಹೀಗೆ ಮಾತೃಗುಪ್ತನು ನಾಲ್ಕು ವರ್ಷ ಒಂಬತ್ತು ತಿಂಗಳು ಹಾಗು ಒಂದು ದಿನಗಳ ಕಾಲ ರಾಜ್ಯಭಾರ ನಡೆಸುತ್ತಾನೆ. ಕೊನೆಗೆ ವಿಕ್ರಮಾದಿತ್ಯನು ಸ್ವರ್ಗವಾಸಿ ಯಾದನೆಂದು ತಿಳಿದು ರಾಜ್ಯವನ್ನು ತ್ಯಜಿಸಿ ವಾರಣಾಸಿಗೆ ಹೊರಟು ಹೋಗುತ್ತಾನೆ. ಮಾತೃಗುಪ್ತನ ಬಗ್ಗೆ ತಿಳಿಸಲು ಇನ್ನೂ ಹೆಚ್ಚು ವಿಚಾರವಿದೆ –  ಈ ಲೇಖನದ ಎರಡನೇ ಭಾಗದಲ್ಲಿ. ಕಡೆಯಲ್ಲಿ ಒಂದು ಮಾತು – ಈ ರೋಮಾಂಚಕ ಆಖ್ಯಾನದಿಂದ ನನ್ನಲ್ಲಿ ಒಂದು ಸಂಶಯ ಮೂಡಿತು. ಈ ಕಥೆಯನ್ನು ಎಲ್ಲೊ ಕೇಳಿದಹಾಗೆ ಇದೆ ಅಂದುಕೊಂಡೆ. ಮತ್ತೊಮ್ಮೆ ಈ ಕಥೆಯನ್ನು ಮೆಲಕು ಹಾಕುತ್ತಿರುವಾಗ ಹೊಳೆಯಿತು! ಇದು ಕೃಷ್ಣ-ಸುದಾಮರ ಕಥೆಯಂತೆ ಇದೆಯೆಂದು! ಪುನಃ ಮಹಾಭಾರತವನ್ನೆಲ್ಲ ಹುಡುಕಿದೆ. ಆಮೇಲೆ ಅರಿವಾಯಿತು ಕೃಷ್ಣ- ಸುದಾಮರ ಕಥೆ ಮಹಾಭಾರತದಲ್ಲಿ ಇಲ್ಲವೇ ಇಲ್ಲವೆಂದು! ಆಶ್ಚರ್ಯ! ಅದು ಬರುವುದು ಶ್ರೀಮದ್ಭಾಗವತದಲ್ಲಿ. ಇದರ ಮರ್ಮವೇನಿರಬಹುದು? ವ್ಯವಸ್ಥಿತವಾದ ಅಧ್ಯಯನವಿಲ್ಲದರಿಂದ, ನಮ್ಮಲ್ಲಿ ಇನ್ನು ಹೆಚ್ಚು ಪ್ರಶ್ನೆಗಳೇ ಉದ್ಭವಿಸುತ್ತವೆ.

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply