ಇಲ್ಲ ಈ ಪ್ರಶ್ನೆ ವೈಜ್ಞಾನಿಕ ಪ್ರಶ್ನೆಯಲ್ಲ, ಸೈದ್ಧಾಂತಿಕವಾದುದ್ದು. ಹಾಗಂತ ಶಾಸ್ತ್ರ ಸಿದ್ಧಾಂತವೆಲ್ಲ ಅವೈಜ್ಞಾನಿಕ ಅಂತಲ್ಲ. ಆದರೆ ಭಾರತೀಯ ವೈದಿಕ ದರ್ಶನದಲ್ಲಿ ಈ ವಿಷಯವು ಬಹಳ ಮೂಲಭೂತವಾದದ್ದು. ಮೀಮಾಂಸ ಶಾಸ್ತ್ರದಲ್ಲಿ ಪ್ರಸ್ತಾಪಿಸದ ವಿಚಾರ, ಮಾಡದ ವಿಷಯವೇ ಇಲ್ಲ. ಇದು ಶಾಸ್ತ್ರಗಳಲ್ಲಿ ಪ್ರಸ್ತಾಪಿಸಿರುವ ಮೂಲಭೂತ ವಿಷಯಗಳಲ್ಲಿ ಒಂದಾದ್ದರಿಂದ ಈ ವಿಷಯವು ಬಹಳ ಉತ್ಸಾಹ ಉದ್ರೇಕಗಳನ್ನುಂಟುಮಾಡುವ ಸಂಗತಿ . ಆದರೆ ಇಲ್ಲಿ ನಾವು ಭಾವೋದ್ರೇಕಕ್ಕೊಳಗಾಗದೆ ವಸ್ತುನಿಷ್ಠವಾಗಿ ಚರ್ಚಿಸೋಣ.
ಸರಿ, ನಿತ್ಯಾನಿತ್ಯತೆಗಳ ಅರ್ಥ ತಿಳಿದುಕೊಂಡು ಕಡೆಗೆ ಮಿಥ್ಯೆಯ ಅಸ್ತಿತ್ವಕ್ಕೆ ಬರೋಣ. ನಿತ್ಯವಾದ ವಸ್ತು ಎಂದಿಗೂ ಜನ್ಮ ಹಾಗು ಮರಣಗಳಿಂದ ಭಾಧಿತವಾಗಿರುವುದಿಲ್ಲ. ಒಂದು ವಸ್ತು ಯಾವುದೊ ಒಂದು ಸಮಯದಲ್ಲಿ ಹುಟ್ಟಿಕೊಂಡಿತು ಎಂದರೆ ಅದು ಹುಟ್ಟುವ ಮೊದಲು ಅಸ್ತಿತ್ವದಲ್ಲಿರಲಿಲ್ಲ. ಜನ್ಮತಾಳಿದಂತ ಯಾವುದೇ ವಸ್ತುವು ಕಾಲಾಂತರದಲ್ಲಿ ಮರಣ ಹೊಂದುವುದು.
ನಿತ್ಯವಾದ ವಸ್ತುವು ಎಂದಿಗೂ ತನ್ನ ಸ್ವರೂಪವನ್ನು ಬದಲಿಸುವುದಿಲ್ಲ. ಒಂದು ಗಿಡ ಮರವಾಗಿ ಹೆಮ್ಮರವಾಗಿ ಬೆಳೆಯಿತೆಂದರೆ ಅದು ತನ್ನ ಸ್ವರೂಪದಲ್ಲಿ ಸದಾ ಬದಲಾವಣೆಯನ್ನು ಹೊಂದುವುದರಿಂದ ಅದನ್ನು ನಿತ್ಯ ವಸ್ತುವೆಂದು ಪರಿಗಣಿಸಲಾಗುವುದಿಲ್ಲ.
ಇದ್ಯಾವ ವಿಕಾರಗಳನ್ನು ಹೊಂದಿರದ ಅವಿಕಾರಿ, ಅವಿನಾಶಿ, ಅನಂತ, ಚ್ಯುತಿ ಹೊಂದದ ಅವ್ಯಯವಾದಂತಹ ವಸ್ತು ಯಾವುದಾದರೋ ಇದೆಯೇ ಎಂದರೆ ಅದಕ್ಕೆ ಶಾಸ್ತ್ರವು ಅಸ್ತಿ ಎನ್ನುತ್ತದೆ. ಅದೆ ಬ್ರಹ್ಮವು. ಬ್ರಹ್ಮವು ದೃಷ್ಟಿ ಅಥವಾ ಅನ್ಯ ಇಂದ್ರಿಯಗಳಿಗೆ ಗೋಚರವಾಗುವಂಥದ್ದಲ್ಲ . ಹಾಗಾದರೆ ಈ ಬ್ರಹ್ಮವಸ್ತುವನ್ನು ಕಂಡಿರುವುದಾದರೂ ಯಾರು ? ಇದಕ್ಕೇನು ಪ್ರಮಾಣವೆಂದರೆ – ಇದಕ್ಕೆ ಅನಾದಿಯಿಂದ ಗುರು ಶಿಷ್ಯ ಶಿಷ್ಟ ಪರಂಪರಾಗತವಾಗಿ ಸಂಪ್ರದವಾದ ವೇದಗಳೇ ಇದಕ್ಕೆ ಪ್ರಮಾಣ.
ಹಾಗಾದರೆ ಇಂತಹ ವೇದಗಳಿಗೇನು ಪ್ರಮಾಣವೆಂದರೆ ಅದು ಸ್ವತಃ ಪ್ರಾಮಾಣ್ಯವು. ಇದು ಹಾಸ್ಯಾಸ್ಪದವೆನಿಸಬಹುದು ಆದರೆ ಸ್ವತಃ ಪ್ರಾಮಾಣ್ಯವೆಂದರೆ self-certification ಅಲ್ಲ. ವೇದ ನಿಂದನೆಯನ್ನು ಶುರು ಮಾಡುವ ಮೊದಲು ನಮಗೆ ಇದರ ಮಹತ್ವವನ್ನು ತಿಳಿದುಕೊಳ್ಳುವ ವ್ಯವಧಾನವಿರಬೇಕಷ್ಟೆ.
ಪ್ರತ್ಯಕ್ಷ, ಅನುಮಾನ, ಉಪಮಾನ ಇತ್ಯಾದಿಗಳು ಇಂದ್ರಿಯಗೋಚರವಾದ ಪ್ರಮಾಣಗಳು. ಇಂದ್ರಿಯಗಳಿಗೆ ಗೋಚರಿಸುವ, ಉದಾಹರಣೆಗೆ ಪರ್ವತದ ಮೇಲೆ ಉರಿಯುತ್ತಿರುವ ಬೆಂಕಿ. ಇದಕ್ಕೆ ನಮ್ಮ ದೃಷ್ಟಿಯೇ ಪ್ರಮಾಣ. ಇಂದ್ರಿಯ ಜನಿತ ಜ್ಞಾನವು ಸುಸ್ಪಷ್ಟವಾಗಿ ನಮಗೆ ತಿಳಿಯುವುದು. ನಮಗೆ ಪರ್ವತದ ಮೇಲೆ ಹೊಗೆಯಾಡಿದ್ದು ಕಂಡರೆ, ಎಲ್ಲಿ ಹೊಗೆಯಾಡುತ್ತಿದೆಯೋ ಅಲ್ಲಿ ಬೆಂಕಿ ಇರಬೇಕೆಂದು ನಿರ್ಧರಿಸಬಹುದು.
ಆದರೆ ವೇದಗಳ ಪ್ರಾಮಾಣ್ಯವು ಅತೀಂದ್ರಿಯವಾದ ವಿಷಯಗಳ ಬಗ್ಗೆ. ಏಕೆಂದರೆ ಇದು ಶಬ್ದದ ಉಪಕರಣವನ್ನು ಅನುಸರಿಸುತ್ತದೆ. ವೇದ ವಾಕ್ಯಗಳು ಪರಮೇಶ್ವರನ ಶ್ವಾಸದಂತೆ ನಮಗೆ ದೊರೆತಿದೆ ಎಂದು ಶಾಸ್ತ್ರಗಳೇ ಹೇಳುತ್ತದೆ. ಶಬ್ದದ ವೈಶಿಷ್ಟ್ಯವೇನು? ಇದರ ಪ್ರಾಮಾಣ್ಯವು ಅವಿರೋಧವು ಹೇಗೆ? ಎಂಬ ಪ್ರಶ್ನೆ ಉದ್ಭವವಾಗಬಹುದು.
ಪ್ರತ್ಯಕ್ಷವಾಗಿ ಕಂಡಿದ್ದರಲ್ಲಿ ಏನಾದರೂ ಅಸ್ಪಷ್ಟತೆಯಿದ್ದರೆ ಅದನ್ನು ಸ್ಪಷ್ಟವಾಗಿ ನೋಡಿದಲ್ಲಿ ದೋಷರಹಿತವಾಗಿ, ದೃಷ್ಟಿ ಗೋಚರ ಜ್ಞಾನವನ್ನು ನಾವು ಪಡೆಯಬಹುದು. ಹಾಗೆಯೇ ಅನ್ಯ ಇಂದ್ರಿಯಗಳ, ಅನುಮಾನ ಇತ್ಯಾದಿ ಇಂದ್ರಿಯಜನಿತ ಜ್ಞಾನವು ನಿಜವೋ ಸುಳ್ಳೋ ಎಂದು ನಾವು ಪರಿಶೀಲಿಸಬಹುದು.
ಆದರೆ ವೇದ ವಾಕ್ಯಗಳಿಂದ ದೊರೆತ ಜ್ಞಾನವನ್ನು, ಅದು ಇಂದ್ರಿಯ-ಅಗೋಚರ ಜ್ಞಾನವಾದರೆ ಅದನ್ನು ಹೇಗೆ ಪರಿಶೀಲಿಸುವುದು? ಇಂತಹ ಜ್ಞಾನವನ್ನು ಎಂದಿಗೂ ಇಂದ್ರಿಯಗಳಿಂದ ಪರಿಶೀಲಿಸಲಾಗುವುದಿಲ್ಲ. ಶಾಸ್ತ್ರವು ಸಮಿತ್ತಿನಲ್ಲಿ ಅಗ್ನಿಯು ಅಡಗಿದೆ ಎಂದು ಹೇಳಿದರೆ ಅದನ್ನು ಪರಿಶೀಲಿಸಬಹುದು. ಅದೇ ವೇದಗಳು ಯಜ್ಞವನ್ನಾಚರಿಸಿದರೆ ಸ್ವರ್ಗಾರೋಹಣ ಸಾಧ್ಯ ಎಂದು ಹೇಳಿದರೆ ಅದನ್ನು ಹೇಗೆ ಪರಿಶೀಲಿಸುವುದು ? ಸಾಧ್ಯವಿಲ್ಲ. ಒಂದು ಸ್ವರ್ಗವಿದೆ ಎಂದು ಗೊತ್ತಾಗುವುದಾದರೋ ಹೇಗೆ ?
ಯದ್ಯಪಿ ಯಾರಾದರೋ ವೇದಗಳಲ್ಲಿ ಸೂಚಿಸಿರುವ ಯಜ್ಞಾಚರಣೆಗಳಿಂದ ಸ್ವರ್ಗಾರೋಹಣ ಅಸಾಧ್ಯವೆಂದು ತೋರಿಸಿದಲ್ಲಿ ಆಗ ವೇದಗಳು ಪ್ರಮಾಣವಲ್ಲ ಎಂದು ಒಪ್ಪಬಹುದು. ಆದರೆ ಹಾಗೆ ತೋರಿಸಲು ಸಾಧ್ಯವಿಲ್ಲದ್ದರಿಂದ ಇಂದ್ರಿಯ ಗೋಚರವಲ್ಲದ ವಿಷಯಗಳಲ್ಲಿ ಶಾಸ್ತ್ರವು ಸ್ವತಃ ಪ್ರಾಮಾಣ್ಯವು!
ಹಾಗಾದರೆ ಯಾವುದೊ ಕಾಗೆ ಗೂಬೆ ಕಥೆಗೂ ವೇದ ವಾಕ್ಯಗಳಿಗೂ ವ್ಯತ್ಯಾಸವಿಲ್ಲವೇ? ಎಲ್ಲಾರೊ ಉಂಟೆ? ಶಬ್ದ ಪ್ರಮಾಣವು ಸ್ವತಃ ಪ್ರಾಮಾಣ್ಯವಾಗುವುದು ಕೇವಲ ಅವು ಶಬ್ದಗಳೆಂದ ಮಾತ್ರಕ್ಕಲ್ಲ. ಹಾಗಾದರೆ ಕತ್ತೆಗಳ ಕಾಗೆಗಳ ಶಬ್ದವೂ ಪ್ರಮಾಣವಾಗಿಬಿಡುವುದು! ವೇದ ವಾಕ್ಯಗಳ ಪ್ರಾಮಾಣ್ಯವಿರುವುದು ಅದರ ಅವಿರೋಧವಾದ ಸತ್ಯತೆಯಲ್ಲಿ. ಏನಪ್ಪಾ ಅಂತಹ ಅವಿರೋಧವಾದ ಸತ್ಯತೆಯ ಪ್ರತೀಕವೆಂದರೆ ಅದೇ ಅಪೌರುಷೇಯತ್ವ .
ಅಪೌರುಷೇಯತ್ವದ ಬಗ್ಗೆ ಸಾಕಷ್ಟು ವಾದ ಪ್ರತಿವಾದ ಇದು ಹೀಗಲ್ಲ ಹೀಗೆ ಎಂಬಿತ್ಯಾದಿ ಬಹಳಷ್ಟು ಚರ್ಚೆಗಳು ನಡೀತಲೇ ಬಂದಿವೆ. ಅವೆಲ್ಲವನ್ನೂ ಇಲ್ಲಿ ಚರ್ಚಿಸಲು ಕಷ್ಟ. ಆದರೆ ಚಿಕ್ಕದಾಗಿ ಹೇಳಬೇಕೆಂದರೆ ಅಪೌರುಷೇಯವು ಇಂದ್ರಿಯಾತೀತ ನಿತ್ಯ ಸತ್ಯತೆಯ ಪ್ರತೀಕ. ಕೇವಲ ಕಿವಿಗೆ ಕೇಳಲ್ಪಡುವ ಶಬ್ದವು ಶಬ್ದವಲ್ಲ. ನಾವು ಉಚ್ಚರಿಸುವಂತಹ ವಾಕ್ಯವು ವೈಖರಿ. ಆದರೆ ಮಧ್ಯಮ ಪಶ್ಯಂತಿ ಪರಾ ಹೀಗೆ ಇನ್ನು ೩ ಬಗೆಯ ವಾಕ್ ಇದೆ. ವಾಕ್ಯಗಳ ಸಂಧಿ ಛಂದಸ್ಸು ಇತ್ಯಾದಿ ಶಬ್ದಗಳ ವಿಕಾರವನ್ನು ತೊರೆದು ಕೇವಲ ವಾಕ್ಯದ ಅರ್ಥ ಮಾತ್ರ ಭಾಸವಾಗಿ ಪರ ವಾಕ್ ಬ್ರಹ್ಮ ಸ್ವರೂಪದಲ್ಲಿ ಲೀನವಾಗುತ್ತದೆ.
ಮೀಮಾಂಸಕರು ಯಾವ ಆಸ್ಪದಕ್ಕೂ ಎಡೆ ಮಾಡದೇ ವ್ಯಾಸರ ಅನುಯಾಯಿ ಜೈಮಿನಿಯ ಸೂತ್ರಗಳಲ್ಲಿ ವೇದ ವಾಕ್ಯಗಳಲ್ಲಿ ಏನಾದರೂ ದೋಷವಿದೆಯೇ ಎಂದು ಕೂಲಂಕುಷವಾಗಿ ಚರ್ಚಿಸಿದ್ದಾರೆ. ಇದು ವೇದ ನಿಂದಕರು ಹಾಗು ವೇದಗಳು ಬರಿ ಸುಳ್ಳಿನ ಕಂತೆಯೆಂದು ತಮ್ಮ ತಾರ್ಕಿಕ ಶಕ್ತಿಯ ಮುಂದೆ ವೇದಗಳ ತೇಜೋವಧೆ ಯಾಗುವುದೆಂದು ಕಲ್ಪಿಸಿ ಪದೇ ಪದೇ ಒಬ್ಬನಾದ ಮೇಲೊಬ್ಬ ಜೀವನಪರ್ಯಂತ ಸಹಸ್ರಾರು ವರ್ಷಗಳು ಸತತವಾಗಿ ಪ್ರಯತ್ನಿಸಿದರೂ ವೇದಗಳನ್ನು ಅಸತ್ಯವೆಂದಾಗಲಿ ಅನಿತ್ಯವೆಂದಾಗಲಿ ಸಿದ್ಧಿಸಲಾಗಲಿಲ್ಲ.
ಅತ್ಯುನ್ನತ ಶಿಷ್ಟ ಸಂಪ್ರದಾಯವಿತ್ ಆಗಿದ್ದ ಗೌಡಪಾದ, ಶಂಕರ, ಕುಮಾರಿಲರಂತಹ ಅತಿಂದ್ರೀಯ ಶಕ್ತಿಯುಳ್ಳವರಾಗಿದ್ದ ಮಹನೀಯರು – ತಮ್ಮ ವಿದ್ವತ್ ಹಾಗು ಮೇಧಾ ಶಕ್ತಿಯಿಂದ ವೇದಗಳ ಪ್ರಾಮಾಣ್ಯವನ್ನು ಆಚಂದ್ರಾರ್ಕವಿರುವರೆಗೂ ಪ್ರತಿಷ್ಠಾಪಿಸಿಬಿಟ್ಟರು .
ಮೊದಲೇ ಹೇಳಿದಂತೆ ಶಾಸ್ತ್ರ ಪ್ರಾಮಾಣ್ಯವನ್ನು (ಅತಿಂದ್ರೀಯ ವಿಷಯದಲ್ಲಿ) ಪ್ರತ್ಯಕ್ಷಿಸಿ ಪರಿಶೀಲಿಸಲಾಗುವುದಿಲ್ಲ. ಆದ್ದರಿಂದಲೇ ಶಾಸ್ತ್ರಗಲ್ಲಿ ಶ್ರದ್ಧೆ ಇರಬೇಕು! ಶ್ರದ್ಧಾವಾನ್ ಲಭತೇ ಜ್ಞಾನಂ ಎಂಬಂತೆ ವೇದಗಳಲ್ಲಿ ಯಾರಿಗೆ ಶ್ರದ್ಧೆಯಿರುವುದು ಅಂತಹವನಿಗೆ ದುರ್ಲಭವಾದ ಅತಿಂದ್ರೀಯ ಜ್ಞಾನವು ಲಭಿಸುತ್ತದೆ. ಕಶ್ಚಿತ್ ಧೀರನಿಗೆ ಇದು ಲಭ್ಯ ಎಂದು ಮಹರ್ಷಿಗಳು ಉದ್ಗರಿಸಿದ್ದಾರೆ.
ಇಂತಹ ಸತ್ಯವ್ರತನಿರತ ಋಷಿ ಪರಂಪರಾಗತ ವಿದ್ಯೆಯು ಬ್ರಹ್ಮ ವಸ್ತುವು ನಿತ್ಯ ಹಾಗು ಸತ್ಯವೆಂದು ಘೋಷಿಸಿದೆ. ಈ ಬ್ರಹ್ಮ ವಸ್ತುವು ನಿತ್ಯ ಅವಿಕಾರ ಇತ್ಯಾದಿಯೆಂದು ಹೇಳಲಾಗಿದೆ. ಹಾಗಾದರೆ ಜಗತ್ತು ಏನಿರಬಹುದು? ನಿತ್ಯ ಸತ್ಯವೋ ಅಥವಾ ಅನಿತ್ಯವೋ? ಅಸತ್ಯವೆಂದರೆ ಮೊಲದ ಕೊಂಬಂತೆ – ಭೂತ ಭವಿಷ್ಯತ್ ವರ್ತಮಾನಗಳಲ್ಲಿ ಇದು ಸಾಧ್ಯವಲ್ಲದ್ದು. ಹಾಗಾದರೆ ಜಗತ್ತು ಅಸತ್ಯವು ಖಂಡಿತ ಅಲ್ಲ.
ಜಗತ್ತು ಪ್ರತಿ ಕ್ಷಣವೂ ಬದಲುತ್ತಿದರೂ ಹಿಂದೆ ನಾನೆ ಹೇಳಿದಂತೆ ಆಚಂದ್ರಾರ್ಕವೇ? ಅಂದರೆ ನಿತ್ಯವೇ? ಕಲ್ಪದ ಅಂತ್ಯದಲ್ಲಿ ಜಗತ್ತೆಲ್ಲ ನೀರಲ್ಲಿ ಮುಳುಗಿದರೂ ಇನ್ನೊಂದು ಕಲ್ಪದಲ್ಲಿ ರಾತ್ರಿ ಮುಗಿದು ದಿನ ಬೆಳಗಾದಂತೆ ಪುನಃ ರಚನೆಯಾಗುವುದಲ್ಲವೇ? ಹೌದು, ಶಾಸ್ತ್ರ ಪುರಾಣಗಳಲ್ಲಿ ಹೀಗೆ ಹೇಳಲಾಗಿದೆ. ಆದರೆ ಒಂದು ನಿರ್ಧಾರಕ್ಕೆ ಬರಬಹುದು – ಬ್ರಹ್ಮವು ಅವಿಕಾರಿ ನಿತ್ಯ ಹಾಗು ಜಗತ್ತು ವಿಕಾರ ಸಹಿತ ನಿತ್ಯ. ಆದರೆ ವಿಕಾರ ಹಾಗು ನಿತ್ಯ ಇವೆರಡು ತದ್ವಿರುದ್ಧ. ಹಾಗಿದ್ದಲ್ಲಿ ಜಗತ್ತು ನಿತ್ಯವಾಗುವುದು ಸಾಧ್ಯವೇ? ಮತ್ತೊಂದು ಪ್ರಶ್ನೆ – ನಮ್ಮ definition ಪ್ರಕಾರ ನಿತ್ಯವಲ್ಲದಿದ್ದರೂ ಕಡೆ ಪಕ್ಷ ಜಗತ್ತು ಮೊಲದ ಕೊಂಬಿನಂತೆ ಅಸ್ತ್ಯವಲ್ಲ, ಸತ್ಯವೇ ಆಗಿರುವುದು ಎಂದು ಹೇಳಬಹುದು.
ಅದು ಹಾಗಿರಲಿ, ಮಿಥ್ಯೆ ಎಂದರೇನು ? ಯಾವುದು ಮಿಥ್ಯೆ? ಎಂದು ನಾವಿನ್ನೂ ವಿಚಾರ ಮಾಡಿಲ್ಲ. ಮಿಥ್ಯೆಗೆ ಭಗವತ್ಪಾದರು ಹೇಳುವುದು – ಅನಿರ್ವಚನೀಯ – ಎಂದರೆ ಸತ್ಯವೆಂದು ಅಥವಾ ಸುಳ್ಳೆಂದು ಹೇಳಲಾಗದ ಸದಸದ್ (ಸತ್ – ಅಸತ್ ) ವಿಲಕ್ಷಣ ಎಂದಿದ್ದಾರೆ. ಉದಾಹರಣೆಯಾಗಿ ಮರೀಚಿಕೆಯನ್ನು ಕೊಟ್ಟಿದ್ದಾರೆ.
ಇನ್ನೊಂದು ಉದಾಹರಣೆ ಹಗ್ಗವನ್ನು ಹಾವೆಂದು ಕಲ್ಪಿಸುವುದು. ಹಗ್ಗವಿದ್ದಲ್ಲಿ ನಾವು ಹಾವನ್ನು ಕಂಡರೂ ಸಹ ಅಲ್ಲಿ ಯಾವುದೇ ಸಮಯದಲ್ಲೂ ಹಾವು ಇರಲೇ ಇಲ್ಲ. ಉದಾಹರಣಾರ್ಥವಾಗಿ ಹೀಗೆ ಮಿಥ್ಯೆಯನ್ನು ಅವಿದ್ಯೆಯಿಂದ ಜನಿತವಾದ ಮಿಥ್ಯಾಜ್ಞಾನವೆಂದು ವಿವರಿಸಿದ್ದಾರೆ.
ಹಾಗಾದರೆ ಜಗತ್ತು ಮಿಥ್ಯೆಯೇ ಎಂದು ಕೇಳಿದರೆ, ಹೌದಪ್ಪ ಜಗತ್ತು ಮಿಥ್ಯೆಯೇ ಎಂದು ಭಗವತ್ಪಾದರು ಹೇಳಿದ್ದಾರೆ. ಅದು ಹೇಗೆ? ಮರೀಚಿಕೆ ಹಾಗು ರಜ್ಜು-ಸರ್ಪ ದೃಷ್ಟಾಂತದಲ್ಲಿ ಮಿಥ್ಯಾಜ್ಞಾನವು ಹೋಗಿ ಸ್ವರೂಪಜ್ಞಾನವು ಜನಿಸುವುದು. ಆದರೆ ಜ್ಞಾನಿಗಳಿಗೂ ಸಹ ಜಗತ್ತು ಸರ್ಪವು ಹೋಗಿ ಹಗ್ಗವು ಕಾಣುವಂತೆ ಜಗತ್ತು ಮಾಯವಾಗುವುದಿಲ್ಲವಲ್ಲ?
ಇಲ್ಲ ಈ ಜಗತ್ತು ಸಮುದ್ರದ ಗುಳ್ಳೆಯಂತೆ ಮಾಯವಾಗುವುದಿಲ್ಲ. ಇದನ್ನು ನಾವು ಪರಿಶೀಲಿಸಲೂ ಸಾಧ್ಯವಿಲ್ಲ. ಹಾಗಾದರೆ ಜಗತ್ತು ಮಿಥ್ಯೆ ಎನ್ನುವುದಕ್ಕೆ ಪ್ರಮಾಣವೇನು ? ಇದಕ್ಕೆ ವೇದ ವಾಕ್ಯಗಳೇ ಪ್ರಮಾಣ! ಭಗವತ್ಪಾದ ಶಂಕರರು ಯಾವುದೇ ತರ್ಕದಿಂದ ಜಗತ್ತನ್ನು ಮಿಥ್ಯೆಯೆಂದು ಹೇಳಿಲ್ಲ ಆದರೆ ವೇದ ಪ್ರಾಮಾಣ್ಯವನ್ನು ಆಧರಿಸಿಯೇ ಬ್ರಹ್ಮ ಸತ್ಯ – ಜಗನ್ಮಿಥ್ಯ ಎಂದಿದ್ದಾರೆ! ಇದರ ಇನ್ನೊಂದರ್ಥ – ಬ್ರಹ್ಮವಲ್ಲದ ಇನ್ನ್ಯಾವುದೇ ವಸ್ತುವು ನಿತ್ಯ ಹಾಗು ಸತ್ಯವಾಗಲು ಸಾಧ್ಯವಿಲ್ಲ. ಅದು ಹೇಗೆ?
ಬ್ರಹ್ಮನ/ಆತ್ಮನ ಸ್ವರೂಪಜ್ಞಾನೋದಯಿಸಿದ ನಂತರ ಶರೀರವನ್ನೇ ಆತ್ಮವೆಂದು ನಂಬಿದ್ದ ಮಿಥ್ಯಾಜ್ಞಾನವು ಸಂಪೂರ್ಣ ವರ್ಜಿತವಾಗಿ ನಿತ್ಯ ಸತ್ಯ ಸನಾತನವಾದ ಬ್ರಹ್ಮ ಸ್ವರೂಪದಲ್ಲಿ ದೇಹಾದಿ ಉಪಾಧಿಗಳನ್ನು ಆತ್ಮವು ತ್ಯಜಿಸಿ ತನ್ನ ನಿತ್ಯ ಸತ್ಯ ಸ್ವರೂಪದಲ್ಲಿ ಇರುವುದು. ಆತ್ಮನಿಗೆ ತನ್ನ ನಿಜ ಸ್ವರೂಪದ ಜ್ಞಾನೋದಯಿಸದ ನಂತರ ಪುನಃ ಯಾವುದೇ ಉಪಾಧಿಯ ಕಲ್ಪನೆಗಳಿರುವುದಿಲ್ಲ. ಪುನರ್ಜನ್ಮವಿರುವುದಿಲ್ಲ. ಏಕೆಂದರೆ ಜಗತ್ತನ್ನು ನೋಡಬೇಕೆಂದರೆ ದೇಹಾದಿ ಉಪಾಧಿಯು ಇರಲೇಬೇಕು ! ದೇಹಾದಿ ಉಪಾಧಿಗಳು ಅವಿದ್ಯಾಜನಿತ. ಬ್ರಹ್ಮ ಸಾಕ್ಷಾತ್ಕಾರದ ನಂತರ ಅವಿದ್ಯೆಯ ಲೇಶವೂ ಇರುವುದಿಲ್ಲವಾದ್ದರಿಂದ ಉಪಾಧಿಯೂ ಇಲ್ಲ ಜಗತ್ತೂ ಇರುವುದಿಲ್ಲ.
ಸುಷುಪ್ತಿಯಲ್ಲಿ ಹೇಗೆ ಆತ್ಮ – ಅನಾತ್ಮ , ದೇಹ – ಜಗತ್ತು, subject-object, ಹೀಗೆ ಯಾವುದೇ ದ್ವಂದ್ವಗಳಿಲ್ಲದೆ ಇರುವುದೋ, ಹಾಗೆ ಬ್ರಹ್ಮ/ಆತ್ಮ ಸ್ವರೂಪದ ಜ್ಞಾನ ಹೊಂದಿದ ನಂತರ ಅಪರೋಕ್ಷ ಜ್ಞಾನಿಯು ಪ್ರಾರಬ್ಧ ಕಳೆಯುವವರೆಗೂ ದೇಹಾದಿ ಉಪಾಧಿಯನ್ನು ಧರಿಸಿ, ಪ್ರಾರಬ್ಧಾನಂತರ ಆತ್ಮ ಸ್ವರೂಪದಲ್ಲೇ ವಿರಾಜಿಸುವನು. ಗೀತೆಯಲ್ಲಿ ಹೇಳುವಂತೆ ಅಲ್ಲಿ ಸೂರ್ಯನಾಗಲಿ ಚಂದ್ರನಾಗಲಿ ಪ್ರಕಾಶಿಸುವುದಿಲ್ಲ ಏಕೆಂದರೆ ಆತ್ಮವು ಸ್ವಯಂಪ್ರಕಾಶಿತ.
ಕಡೆಗೆ conclusion ಏನಪ್ಪಾ ಅಂದರೆ ನಾವು ಜಗತ್ತನ್ನು ಮಿಥ್ಯೆಯೋ ಇಲ್ಲವೋ ಎಂದು ಚರ್ಚಿಸುವ ಮೊದಲು ಒಂದು ವಿಚಾರವನ್ನು ಮರೆಯಬಾರದು. ಅದೇನೆಂದರೆ ಜಗತ್ತು ಮತ್ತು ಪ್ರತ್ಯಗಾತ್ಮಾನ್ ಇವೆರಡು ಒಂದನ್ನೊಂದು ಅವಲಂಬಿಸಿರುವಂಥದ್ದು. ಜಗತ್ತನ್ನಾಗಲಿ ಜೀವನನ್ನಾಗಲಿ ಒಂಟಿಯಾಗಿ ಪರಿಗಣಿಸಲಾಗುವುದಿಲ್ಲ, ಇವೆರಡು ಸದಾ ಅಂಟಿಕೊಂಡಿರುತ್ತದೆ. ಆದ್ದರಿಂದ ನಾವು ಜಗತ್ತನ್ನು ನಿತ್ಯವೆಂದರೆ ಪಶು ಪಕ್ಷಿಗಳನ್ನೂ ಜೀವಾತ್ಮರನ್ನ್ನೂ ನಿತ್ಯವೆನ್ನಬೇಕಾಗುವುದು. ಆದರೆ ಇದನ್ನೇ ಅಲ್ಲವೆ ಸಂಸಾರವೆನ್ನುವುದು ?
Post Script: ನಾನು ಇದೀಗಲೇ ಹೇಳಿದೆ ಶಂಕರರು ಜಗತ್ತನ್ನು ಮಿಥ್ಯೆ ಎಂದಿದ್ದು ತರ್ಕದಿಂದಲ್ಲ ಶಾಸ್ತ್ರ ಪ್ರಾಮಾಣ್ಯವನ್ನನುಸರಿಸಿ ಎಂದು. ಆದರೆ ಭಗವತ್ಪಾದರ ನಂತರ ಬಂದವರು ಜಗತ್ತಿನ ಮಿಥ್ಯತ್ವವನ್ನು ತರ್ಕದಿಂದ ಸಿದ್ಧಿಸಲು ಪ್ರಯತ್ನಿಸಿದ್ದಾರೆ. ಹಾಗಾದರೆ ಜಗತ್ತಿನ ಮಿಥ್ಯತ್ವವನ್ನು ಕೇವಲ ತರ್ಕ ನ್ಯಾಯಗಳಿಂದ ಸಿದ್ಧಿಸಲು ಸಾಧ್ಯವೇ ? ನನ್ನ ವಯಕ್ತಿಕ ಅಭಿಪ್ರಾಯದಲ್ಲಿ, ಇಲ್ಲ ಖಂಡಿತ ಸಾಧ್ಯವಿಲ್ಲ. ಯಾಕೆ ಏನು ಹೇಗೆ ಎಂಬುದು ಮೊದಲೇ ವಿವರಿಸಿದ್ದಾಗಿದೆ. ವೇದ ಪ್ರಾಮಾಣ್ಯವಿಲ್ಲದೆ ಅನ್ಯ ಪ್ರಮಾಣಗಳಿಂದ ಜಗತ್ತಿನ ಮಿಥ್ಯತ್ವವನ್ನು ಸಾಧಿಸಲು ಶಕ್ಯವೇ ಆಗಿದ್ದರೆ ಇದು ವಿವಾದಾಸ್ಪದವೇ ಆಗುತ್ತಿರಲಿಲ್ಲ.
ನಿಮ್ಮ ಅಭಿಪ್ರಾಯವೇನು? ತಿಳಿಸಿ
Image Credit: pixabay.com
Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.