close logo

ಭೀಮ – ದುರ್ಯೋಧನರ ಕಾಳಗ: ಭಾಗ ೧

ಕರ್ಣಾರ್ಜುನರ ಯುಧ್ಧದ ಬಗ್ಗೆ ನಮ್ಮೆಲ್ಲರಿಗೂ ಅರಿವಿದೆ. ಅಷ್ಟೇ ರೋಚಕವಾದ ಮತ್ತೊಂದು ಸಮರ ಭೀಮ ಹಾಗು ದುರ್ಯೋಧನರದ್ದು. ಯಥೇಚ್ಛ ಬಲ, ಯುಧ್ಧ ಕೌಶಲ, ನಿರ್ಭಯತೆ, ರಣ ನೀತಿ, ಧರ್ಮಾಧರ್ಮಗಳ ಮೀಮಾಂಸೆ ಇವೆಲ್ಲವನ್ನೂ ಒಳಗೊಂಡ ರೋಚಕ ಕಥೆ ಇದು. ಎಷ್ಟು ಸಹಸ್ರ ವರ್ಷಗಳಾದರೂ ಈ ಕಥೆಯು ಅಸಾಧಾರಣ ರೀತಿಯಲ್ಲಿ ನಮ್ಮ ಅಂತಃಕರಣವನ್ನು ಹೊಕ್ಕು ಕಮಲವು ಅರಳುವಂತೆ ನಮ್ಮ ಬುದ್ಧಿಯನ್ನು ಪ್ರಚೋದಿಸುತ್ತದೆ. 

ಧೃತರಾಷ್ಟ್ರ ಉವಾಚ: ಪಾಂಡು ಪುತ್ರರಿಂದ ಕೌರವ ಸೇನೆಯ ನಿರ್ನಾಮದ ಪಶ್ಚಾತ್, ಬದುಕುಳಿದ ನಮ್ಮವರು – ಕೃಪ ಕೃತವರ್ಮ ಹಾಗು ಪರಾಕ್ರಮಿಯಾದ ದ್ರೋಣರ ಮಗ – ಇವರೆಲ್ಲಾ ಏನು ಮಾಡಿದರು? ದುರಾತ್ಮನಾದ ದುರ್ಯೋಧನ ಸಹ ಏನು ಮಾಡಿದನು ?

ಸಂಜಯ ಉವಾಚ: ಕೌರವರ ಪಾಳಯವು ಕಿಂಚಿತ್ತೂ ಬಿಡದೆ ಸಂಪೂರ್ಣ ಕ್ಷಯವಾದ ನಂತರ ನೀವು ಉಲ್ಲೇಖಿಸಿದ ರಥಿ ತ್ರಯರು ಖಿನ್ನ ಮನಸ್ಕರಾದರು. ಪಾಂಡವ ಪುತ್ರರ ಜಯಘೋಷಗಳನ್ನು ತಾಳಲಾರದೆ , ತಮ್ಮ ದೊರೆಯನ್ನು ರಕ್ಷಿಸುವಲ್ಲಿ ನಿರತರಾಗಿ, ಸಂಧ್ಯಾ ಕಾಲ ಸಮೀಪಿಸುತ್ತಿದ್ದಂತೆ , ದುರ್ಯೋಧನನು ಅವಿತಿದ್ದ ಸರೋವರದತ್ತ ಸಮೀಪಿಸಿದರು. 

ಯುಧಿಷ್ಠಿರ ತನ್ನ ಸಹೋದರರ ಜೊತೆ ರಿಪುಜಯೋನ್ಮತ್ತನಾಗಿ ದುರ್ಯೋಧನನನ್ನು ಸಂಹರಿಸಲು ಎಲ್ಲ ಮೂಲೆ ಮೂಲೆಗಳಲ್ಲಿಯೂ ಹುಡುಕಾಡಿದನು. ಕೂಲಂಕುಷವಾಗಿ ಎಲ್ಲೆಡೆ ಹುಡುಕಿದರೂ ಕುರು ಭರ್ತಾ ಕೈಸಿಗದೇ ಹೋದನು. ದುರ್ಯೋಧನನು ರಣ ಭೂಮಿಯಿಂದ ಅತಿಶೀಘ್ರದಲ್ಲಿ ಕಾಲ್ಕಿತ್ತು ತನ್ನ ಗದೆಯನ್ನು ಹಸ್ತದಲ್ಲಿ ಬಿಗಿಯಾಗಿ ಹಿಡಿದು ತನ್ನ ಮಾಯಾ ಕೌಶಲ್ಯದಿಂದ ಸರೋವರದ ಗರ್ಭದಲ್ಲಿ ಅಡಗಿ ಹೋದನು. 

ಕೃಪ ಅಶ್ವತ್ಥಾಮ ಹಾಗು ಸಾತ್ವತ ಕುಲ ಸಂಜಾತ ಕೃತವರ್ಮ, ನಿಧಾನವಾಗಿ ಸರೋವರವನ್ನು ಸಮೀಪಿಸುತ್ತ, ಜಲಾವೃತನಾಗಿ ಮಲಗಿದ್ದ ನೃಪನನ್ನು ಉದ್ದೇಶಿಸಿ ಹೀಗೆಂದರು: “ನರೇಶ, ಉತ್ತಿಷ್ಠ! ನಮ್ಮ ಜೊತೆಗೂಡಿ ಯುಧಿಷ್ಠಿರನೊಡನೆ ಸೆಣೆಸು. ಜಯಪ್ರಾಪ್ತಿಯಾದರೆ ವಸುಧೆಯ ಪ್ರಭುತ್ವ,  ಇಲ್ಲವಾದರೆ ದೇಹೋಪಾಧಿಯನ್ನು ತೊರೆದು ದೇವಯಾನ! ಪಾಂಡವರ ಚದುರಂಗ ಬಲವನ್ನು ನೀನೆ ಅಲ್ಲವೇ ಹೊಡೆದುರುಳಿಸಿರುವುದು? ಅದರಲ್ಲಿ ಉಳಿದವರೀಗ ತೀವ್ರವಾಗಿ ಗಾಯಗೊಂಡಿದ್ದಾರೆ. ಮಹೀಪತಿ, ಈಗ ಅವರು ನಿನ್ನ ಪ್ರಾಬಲ್ಯವನ್ನು ಎದುರಿಸಲು ಅಶಕ್ಯರು, ಅದೂ ನಾವೆಲ್ಲರೂ ನಿನ್ನ ಬೆನ್ನೆಲಬಾಗಿ ನಿಂತಿರುವಾಗ. ತಸ್ಮಾತ್ ಉತ್ತಿಷ್ಠ ಭಾರತ !”

ದುರ್ಯೋಧನ ಉವಾಚ: “ ನಾರಾರ್ಷಭರೇ! ಪಾಂಡವ-ಕೌರವರೊರ್ಮಧ್ಯ ಘಟಿತ ಈ ಘೋರ ಯುಧ್ಧದಿಂದ ಜೀವ ಸಹಿತ ಪಾರಾಗಿ ಬಂದಿರುವ ನಿಮ್ಮನ್ನೆಲ್ಲ ನೋಡುವ ಭಾಗ್ಯ ನನ್ನ ಸುಕೃತವೇ. ಅಲ್ಪ ವಿರಾಮದ ನಂತರ ಪುನಃ ರಣೋತ್ಸಾಹದಿಂದ ಶತ್ರುಗಳ ಮೇಲೆ ದಾಳಿ ಮಾಡೋಣ. ನೀವೆಲ್ಲರೂ ಸಹ ದಣಿದಿರುವಿರಿ, ನಾನೂ ಸಹ ಅತಿಯಾಗಿ ಗಾಯಗೊಂಡಿರುವೆ. ಪಾಂಡವ ಸೇನೆಯು ಸಮುದ್ರದಂತೆ ಹಿಗ್ಗುತ್ತಿದೆ. ಆದ್ದರಿಂದ ಈಗ ನಾನು ಸಮರಿಸಲಿಚ್ಚಿಸುವುದಿಲ್ಲ. ಈ ನಿಮ್ಮ ಪ್ರಚೋದನೆಗಳಲ್ಲಿ ಏನಾಶ್ಚರ್ಯವೂ ಇಲ್ಲ, ಏಕೆಂದರೇ ನೀವೆಲ್ಲರೂ ರಥಿಶ್ರೇಷ್ಠರು! ನನ್ನ ಪರ ಸದಾ ನಿಷ್ಠರಾಗಿಯೂ ಇರುವಿರಿ! ಆದರೆ ಈ ಅವಧಿಯು ಬಲ ಪ್ರಯೋಗದ್ದಲ್ಲ. ಈ ರಾತ್ರಿ ವಿಶ್ರಾಂತಿ ಪಡೆದು ಸೂರ್ಯೋದಯವಾಗುತ್ತಿದ್ದಂತೆ ಯುಧ್ಧ ಸನ್ನಧ್ಧನಾಗಿ ನಿಮ್ಮನ್ನೆಲ್ಲ ಬಂದು ಸೇರುವೆ. ಇದರಲ್ಲಿ ಕಿಂಚಿದಪಿ ಸಂಶಯ ಬೇಡ”

ಸಂಜಯ ಮುಂದುವರೆಸಿದನು: ಇದನ್ನು ಕೇಳಿ ದ್ರೋಣರ ಮಗ ದುರ್ಯೋಧನನನ್ನು ಉದ್ದೇಶಿಸಿ ಹೀಗೆ ಹೇಳಿದನು – “ಉತ್ತಿಷ್ಠ ಮಹೀ ಭರ್ತಾ! ಮಂಗಳವಾಗಲಿ ನಿನಗೆ! ನಾವು ಈ ಕ್ಷಣವೂ ಸಹ ವೈರಿಗಳನ್ನು ಪರಾಜಯಗೊಳಿಸಬಹುದು. ನನ್ನ ಎಲ್ಲ ಧರ್ಮಾಚರಣೆ, ದಾನ, ಸತ್ಯನಿಷ್ಠೆ ಹಾಗು ಮೌನ-ಮಂತ್ರ ಜಪದ ಮೇಲೆ ಪ್ರತಿಜ್ಞೆ ಮಾಡುವೆ ಪ್ರಭು, ಖಂಡಿತ ಇವತ್ತು ಒಬ್ಬನೇ ಒಬ್ಬ ಸೋಮಕನನ್ನೂ ಜೀವಂತವಾಗಿ ಉಳಿಸುವದಿಲ್ಲ. ಏನಾದರೂ ಪಾಂಡವರ ಸೈನ್ಯವನ್ನು ನಿರ್ಮೂಲಿಸದೆ ಇವತ್ತಿನ ರಾತ್ರಿ ನಾನು ಕಳೆದರೆ, ಶಾಸ್ತ್ರ ವಿಹಿತ ಯಜ್ಞ ಯಾಗಾದಿಗಳನ್ನು ಶ್ರದ್ಧೆಯಿಂದ ಮಾಡಿದ ಹೇತು ಶಿಷ್ಟರಿಗೆ ಸಂಭವಿಸುವ ಸುಖ ಸಮೃದ್ಧಿಗಳು ನನಗೆ ಫಲಿಸದಿರಲಿ! ಪಾಂಚಾಲರನ್ನು ಒಬ್ಬೊಬ್ಬನಾಗಿ ವಧಿಸುವವರೆಗೂ ನನ್ನ ಶಸ್ತ್ರಗಳನ್ನು ಕವಚವನ್ನು ಕೆಳಗಿರಿಸುವುದಿಲ್ಲ, ಪ್ರಭೋ!”

ಹೀಗೆ ಪರಸ್ಪರ ಸಂಭಾಷಿಸುತ್ತಿದ್ದ ಇವರ ಮಾತುಗಳನ್ನು ಮತ್ತಿನ್ನ್ಯಾರೋ ಕಿವಿಯಿಟ್ಟು ಕೇಳಿಸಿಕೊಳ್ಳುತ್ತಿದ್ದರು. ಕೆಲವು ಬೇಟೆಗಾರರು ತಮ್ಮ ದೈನಂದಿನ ಬೇಟೆಯನ್ನು ಮುಗಿಸಿ ಸ್ವಲ್ಪ ವಿಶ್ರಾಂತಿ ಪಡೆಯಲು ಅಲ್ಲೇ ಬಹಳ ಸಮೀಪದಲ್ಲೇ ವಿಶ್ರಮಿಸುತ್ತಿದ್ದರು. ಇವರು ಕಾಕತಾಳೀಯವೆಂಬಂತೆ ವೃಕೋದರನಿಗೆ ಪ್ರತಿ ದಿನವೂ ಒಂದು ಬುಟ್ಟಿ ಭರ್ತಿ ಮಾಂಸವನ್ನು ತಲುಪಿಸುತ್ತಿದ್ದರು. ಇಲ್ಲಿಗೆ ಬರುವ ಮೊದಲು ಯುಧಿಷ್ಠಿರನು ಇವರನ್ನು ಕಂಡು ದುರ್ಯೋಧನನ ಬಗ್ಗೆ ವಿಚಾರಿಸಿದ್ದನು. ದುರಾಶೆಯ ಪೂರಿತ ದುರ್ಯೋಧನನ್ನು ಕೊಂದುಹಾಕಲು ಪಾಂಡವರು ಇವನನ್ನು ಹುಡುಕುತ್ತಿರುವುದು ಈ ಬೇಟೆಗಾರರಿಗೆ ಅರಿವಾಗಿ, ಸರೋವರದಲ್ಲಿ ಅಡಗಿರುವುದು ದುರ್ಯೋಧನನೇ ಎಂದು ನಿಶ್ಚಯಿಸಿ ಹೀಗೆ ಮಾತಾಡಿಕೊಂಡರು – “ದುರ್ಯೋಧನನು ಇಲ್ಲಿ ಅಡಗಿರುವ ವಿಷಯ ಹಾಗು ಯುದ್ಧ ಮಾಡಲು ಅನಾಸಕ್ತನಾಗಿರುವುದು ನಾವು ಭೀಮನಿಗೆ ತಿಳಿಸಿದರೆ ಜೀವನ ಪರ್ಯಂತ ಕ್ಷಯವಾಗದಷ್ಟು ಸಂಪತ್ತು ನಮ್ಮ ಪಾಲಾಗುವುದು. ದಿನ ಬೆಳಗಾದರೆ ಬೇಟೆ, ಯಾರಿಗೆ ಬೇಕು ಈ ಕಷ್ಟ ಕಾರ್ಪಣ್ಯಗಳು?” ಹೀಗೆ ತಮ್ಮಲ್ಲೇ ನಿರ್ಧರಿಸಿ ಪಾಂಡವ ಪಾಳಯದತ್ತ ಓಟ ಕಿತ್ತರು. 

ಯಾವ ಪ್ರಯೋಜನವೂ ಇಲ್ಲದೆ ವೃಥಾ ಯತ್ನಗಳಿಂದ ಬಳಿದು ಸುಸ್ತಾಗಿ ಕುಳಿತಿದ್ದ ಪಾಂಡವರು ಈ ವಿಷಯ ಕೇಳುತ್ತಿದ್ದಂತೆಯೇ, ತಮ್ಮ ಅಶ್ವಗಳು ಬಳಿದಿದ್ದರೂ ಸಹ ಬಹು ವೇಗವಾಗಿ ಜಯಘೋಷಗೊಳೊಂದಿಗೆ ನಿರ್ಮಲವೂ ಸಾಗರದಂತೆ ಅಪಾರವಾಗಿದ್ದ ಆ ದ್ವೈಪಾಯನ ಸರೋವರದತ್ತ ಮಧುಸೂಧನನನ್ನು ಸೈನ್ಯದ ಶಿರದಂತೆ ಮುಂದಿಟ್ಟುಕೊಂಡು ಅತ್ತ ತೆರಳಿದರು. ಸೋಮಕರು ಪಾಂಚಾಲರೆಲ್ಲರೂ ಖುಷಿಯಿಂದ ಹಿಗ್ಗುತ್ತಿದ್ದರು. 

ಅಶ್ವಾರೂಢ ಸೈನಿಕರ ಧ್ವನಿಯು ಆಕಾಶದಲ್ಲಿ ಪ್ರತಿಧ್ವನಿಸುತ್ತಿದ್ದನ್ನು ಕೇಳಿ, ಕೃಪ ಅಶ್ವತ್ಥಾಮ ಹಾಗು ಕೃತವರ್ಮಾ ಅಲ್ಲಿಂದ ಹೊರಡುವರೆಂದು ದುರ್ಯೋಧನನಿಗೆ ತಿಳಿಸಿ ಅಲ್ಲಿಂದ ಆದಷ್ಟು ಬೇಗ ಆದಷ್ಟು ದೂರ ಹೊರಟು ಹೋದರು. ಒಂದು ವಿಶಾಲವಾದ ಅಶ್ವತ್ಥ ವೃಕ್ಷದ ಕೆಳಗೆ ವಿರಮಿಸಿದರು ಹಾಗು ತಮ್ಮ ಅಶ್ವಗಳನ್ನು ಸಹ ರಥಗಳಿಂದ ಬಿಡುಗಡೆ ಗೊಳಿಸಿದರು. ದುರ್ಯೋಧನನ ಗತಿ ಏನೆಂದು ಯೋಚಿಸುತ್ತಾ ಅಲ್ಲೇ ಕುಳಿತರು. ಕಥೆಯ ಈ ಭಾಗವು ಕರಾಳ ರೂಪವನ್ನು ತಾಳುತ್ತದೆ. ಆದರೆ, ಮುಂದಿನ ಭಾಗಗಳಲ್ಲಿ. 

*———–*———–*————*

ಕೆಲವೇ ಕ್ಷಣಗಳಲ್ಲಿ ಪಾಂಡವರ ದಂಡು ಅಲ್ಲಿಗೆ ಆಗಮಿಸಿತು. ದುರ್ಯೋಧನನು ಅಡಗಿದ್ದ ದ್ವೈಪಾಯನ ಸರೋವರವನ್ನು ನೋಡಿ ಯುಧಿಷ್ಠಿರನು ವಾಸುದೇವನಿಗೆ ಹೀಗೆಂದನು – “ನೋಡು ಕೇಶವ , ಧೃತರಾಷ್ಟ್ರನ ಮಗ ಯಾವುದೋ ದೈವೀ ಮಾಯೆಗೆ ಶರಣಾಗಿ ಸರೋವರದಲ್ಲಿ ಅಡಗಿ ಕುಳಿತಿದ್ದಾನೆ. ಇಂಥಹ ಮೋಸ ವಂಚನೆ ಮಾಡುವಲ್ಲಿ ನಿಪುಣನಾಗಿರುವ ಇವನು ಯಾರಿಂದಲೂ ಭಯವಿರದಂತೆ ರಮಿಸುತ್ತಿದ್ದಾನೆ. ಆದರೆ ಇವತ್ತು ಇಂದ್ರನೇ ಎದುರಾಗಿ ಬಂದರೂ ನಾನು ಇವನನ್ನು ಜೀವಂತವಾಗಿ ಉಳಿಸುವುದಿಲ್ಲ”

 ವಾಸುದೇವ ಉವಾಚ: “ಸ್ವತಃ ನಿನ್ನ ಮಾಯಾಶಕ್ತಿಯಿಂದ ಇವನ ಮಾಯಾಜಾಲವನ್ನು ಮುರಿದು ಹಾಕು, ಭಾರತ. ಮಾಯೆಯಲ್ಲಿ ಪಳಗಿದವರನ್ನು ಮಾಯೆಯಿಂದಲೇ ಕೊಂದು ಹಾಕಬೇಕು. ಇದೇ ಶಾಶ್ವತ ವ್ರತ (ಕ್ಷತ್ರಿಯರಿಗೆ) ಯುಧಿಷ್ಠಿರ! ವಂಚನೆ ಮೋಸಗಳಲ್ಲಿ ವರೇಣ್ಯರಾದ ದೈತ್ಯ ದಾನವರನ್ನು ಹಿಂದೆ ಇಂದ್ರನು ಅದೇ ರೀತಿಯನ್ನು ಅನುಸರಿಸಿ ವಧಿಸಿಧನು. ವಾಲಿ ಹಿರಣ್ಯಾಕ್ಷ ಹಿರಣ್ಯಕಶಿಪು ವೃತ್ರ ಇವರೆಲ್ಲರನ್ನು ಹೀಗೆ ಕೊಲ್ಲಲಾಯಿತು. ಹೀಗೆ ರಾವಣ ಪೌಲಸ್ತ್ಯನನ್ನು ತನ್ನ ಬಂಧುಗಳು ಹಿಂಬಾಲಕರ ಸಹಿತ ರಾಮ ಕೊಂದಿದ್ದು. ಹಳೇ ಕಾಲದಲ್ಲಿ ತಾರಕ ಮತ್ತು ವಿಪ್ರಚಿತ್ತಿ ಇವರಿಬ್ಬರನ್ನೂ ಸಹ ಹೀಗೇ ಸಂಹರಿಸಿದ್ದು. ಅದೇ ರೀತಿ ವಾತಾಪಿ, ಇಲ್ವಲ, ತ್ರಿಶಿರಸ್, ಅಸುರರಾಗಿದ್ದ ಶುಂಡ ಉಪಶುಂಡ ಇವರೆಲ್ಲರನ್ನೂ ಹೀಗೆ ಸಂಹರಿಸಲಾಗಿತ್ತು. ಚಾಣಾಕ್ಷತೆಯಿಂದಲೇ ಇಂದ್ರನು ಸ್ವರ್ಗದಲ್ಲಿ ವಿರಾಜಿಸುವುದು. ಯುಧಿಷ್ಠಿರ ! ಉಪಾಯದಿಂದಲೇ ದೈತ್ಯ, ದಾನವ, ರಾಕ್ಷಸ ಮತ್ತು ನೃಪರನ್ನು ಪ್ರಾಚೀನ ಕಾಲದಿಂದಲೂ ಸಂಹರಿಸಲಾಗಿದೆ. ಈಗಲೂ ನೀನು ಅದೇ ರೀತಿ ಉಪಾಯವನ್ನು ಹುಡುಕು. 

ಸಂಜಯ ಮುಂದುವರಿಸುತ್ತಾ ಹೇಳಿದನು: “ವಾಸುದೇವನ ಮಾತನ್ನು ಕೇಳಿ ಪಾಂಡು ಪುತ್ರನು  ಮುಗುಳುನಗುತ್ತಾ ನಿಮ್ಮ ಪುತ್ರನನ್ನು ಉದ್ದೇಶಿಸುತ್ತಾ ಹೀಗೆಂದನು – ಎಲ್ಲಾ ಕ್ಷತ್ರಿಯರನ್ನು ಸ್ವಂತ ಕುಲವನ್ನು ನರಕಕ್ಕೆ ನೂಕಿ ಈಗ ಯಾಕೆ ಸುಯೋಧನ, ನಿನ್ನ ಸ್ವಂತ ಪ್ರಾಣ ಉಳಿಸಿಕೊಳ್ಳಲು ನೀರಲ್ಲಿ ಅಡಗಿರುವೆ ? ಎದ್ದು ಬಂದು  ಸೆಣಸು ಈಗ. ಎಲ್ಲಿ ಹೋದವು ನಿನ್ನ ದರ್ಪ ದುರಭಿಮಾನಗಳೀಗ? ಎಲ್ಲಾ ಸಭೆ ಸಮಾರಂಭಗಳಲ್ಲೂ ನಿನ್ನ ಶೌರ್ಯದ ಚರ್ಚೆ. ಎದ್ದು ಬಾ ಹಾಗಾದರೆ ಕೌರವೇಯ, ನೀನು ಹುಟ್ಟಿರುವುದು ಶ್ರೇಷ್ಠ ಕುಲದಲ್ಲಿ. ಹೆದರಿ ಅವಿತು ಕುಳಿತರೆ ನಿನ್ನನ್ನು ನೀನು ಕ್ಷತ್ರಿಯ ಎಂದು ಹೇಗೆ ಕರೆದುಕೊಳ್ಳುತ್ತೀಯ? ಇದು ಕ್ಷತ್ರಿಯ ಧರ್ಮವೂ ಅಲ್ಲ, ಇದರಿಂದ ಸದ್ಗತಿಯೂ ಪ್ರಾಪ್ತಿಯಾಗುವುದಿಲ್ಲ. ಈ ಯುದ್ಧವನ್ನು ನೀನೇ ಶುರು ಮಾಡಿದ್ದು. ನಿನ್ನ ಸಹೋದರರು ಬಂಧು ಮಿತ್ರರು ಸ್ವಂತ ಮಕ್ಕಳನ್ನು ಯುದ್ಧದಲ್ಲಿ ನೂಕಿ ಅವರು ಸಾಯುವುದನ್ನು ಪ್ರತ್ಯಕ್ಷವಾಗಿ ಕಂಡು, ಈಗ ಯುದ್ಧವನ್ನು ಸಮಾಪ್ತಿ ಮಾಡದೇ ಯಾಕೆ ಓಡುತ್ತಿರುವೆ. ನಿನ್ನ ಇಷ್ಟು ದಿನದ ಸ್ವಂತ ಹೊಗಳಿಕೆ ಕೇವಲ ಮಾತಿನ ವರಸೆಯಷ್ಟೇ ಹಾಗಾದರೆ. ಧೈರ್ಯವಿಲ್ಲದ ಪುಕುಲ. ಎಳಸು ತಿಳುವಳಿಕೆ ನಿನ್ನದು. ಸಂಭಾವಿತರಾದವರು ಎಂದೂ ತಮ್ಮ ಶತ್ರುಗಳನ್ನು ಕಂಡು ದೂರ ಓಡುವುದಿಲ್ಲ. ರಣಭೂಮಿಯಿಂದ ಧಾವಿಸಿ ಬಂದು ಅವಿತಿರಿವುದು – ಇದು ಯಾವ ಪ್ರಕಾರದ ಯುದ್ಧ ಕೌಶಲತೆ ಅಂತ ನಮಗೂ ತಿಳಿಸು. ಕರ್ಣ ಶಕುನಿ ಅಂತವರನ್ನು ನಂಬಿ ನಿನ್ನನ್ನು ನೀನೇ ಅಪರಾಜಿತ ಎಂದು ಕಲ್ಪಿಸಿಕೊಂಡಿದ್ದೆ, ಈಗ ಗೊತ್ತಾಯಿತಲ್ಲ ನೀನೇನು ಅಂತ. ಇಂತಹ ಅಧರ್ಮವನ್ನು ಹಬ್ಬಿಸಿರುವ ನೀನು ಈಗ ಎದ್ದು ಬಂದು ಯುದ್ಧ ಮುಂದುವರೆಸು! ಎಲ್ಲಿ ನಿನ್ನ ಪೌರುಷ ಈಗ?ಇಷ್ಟೇನ ಹಾಗಾದರೆ ನಿನ್ನ ಶೌರ್ಯ? ಇದಕ್ಕೇನಾ ಇಷ್ಟು ಪ್ರತಿಷ್ಠೆ ! ಎಲ್ಲಿ ನಿನ್ನ ಬಾಹುಬಲ ಈಗ? ಮಹಾ ಗರ್ವ, ಮಹಾ ಕ್ರೋಧ ಇವೆಲ್ಲ ಎಲ್ಲಿ ಹೋದವು ಈಗ? ಶಸ್ತ್ರಾಸ್ತ್ರಗಳ ಅಭ್ಯಾಸದಿಂದ ಏನು ಬಂತು ಭಾಗ್ಯ? ಆ ವೈಭವೋಪೇತ ಸ್ವಯಂಭುವನಿಂದ ವಿಧಿಸಲ್ಪಟ್ಟಿರುವಂತಹ, ಶಾಸ್ತ್ರಗಳಲ್ಲಿ ಪದೇ ಪದೇ ಉಲ್ಲೇಖಿಸಿರುವಂತೆ, ಇದೇ ಕ್ಷತ್ರಿಯಸ್ಯ ಪರಮೋ ಧರ್ಮ! ಜಯಾಪಜಯಗಳನ್ನು ಪರಿಗಣಿಸದೇ ಕೇವಲ ಧರ್ಮದ ದೃಷ್ಟಿಯಿಂದ ಎದ್ದು ಬಂದು ಯಥಾಶಕ್ತಿ ಹೋರಾಡು”.

ದುರ್ಯೋಧನ ಉವಾಚ: “ಜೀವ ಜಂತುಗಳಲ್ಲಿ ಭಯೋದ್ಭವವಾಗುವುದರಲ್ಲಿ ಆಶ್ಚರ್ಯವೇನಿದೆ? ಸಹಜವೇ ತಾನೇ ? ಆದರೆ ಭಾರತ, ನಾನು ಜೀವಕ್ಕೆ ಹೆದರಿ ರಣ ಭೂಮಿಯಿಂದ ಓಡಿ ಬರಲಿಲ್ಲ. ನನ್ನ ರಥವು ಮುರಿದು ಬಿತ್ತು, ಬಾಣ ಬತ್ತಳಿಕೆಗಳು ಹೋದವು, ನನ್ನ ಪಾರ್ಶಣೀ ಸಾರಥಿಗಳು ನಿಧನರಾದರು! ನನ್ನ ಜೊತೆ ಯುದ್ಧದಲ್ಲಿ ಯಾರೂ ಇಲ್ಲದೇ ಒಬ್ಬನೇ ಆಗಿದ್ದೆ. ಈ ಕಾರಣಕ್ಕಷ್ಟೇ ಸ್ವಲ್ಪ ಸುಧಾರಿಸಿಕೊಳ್ಳೋಣ ಅಂತ ಈ ಸರೋವರದ ಒಳ ಹೊಕ್ಕಿರುವೆ. ಯಾವ ಭಯದಿಂದಲೂ ಅಲ್ಲ ಪ್ರಾಣ ಉಳಿಸಿಕೊಳ್ಳಲೂ ಅಲ್ಲ ಅಥವಾ ತಡೆಯಲಾರದ ದುಃಖ್ಖದಿಂದಲೂ ಅಲ್ಲ. ಸ್ವಲ್ಪ ಹೊತ್ತು ಎಲ್ಲರೂ ಸುಧಾರಿಸಿಕೊಳ್ಳೋಣ ಕೌಂತೇಯ, ನಂತರ ಖಂಡಿತವಾಗಿ ನಿಮ್ಮೆಲ್ಲರ ಜೊತೆ ಯುದ್ಧಕ್ಕೆ ಬರುವೆ”.

ಯುಧಿಷ್ಠಿರ ಉವಾಚ: “ಎಲ್ಲರೂ ಸಾಕಷ್ಟು ಸುಧಾರಿಸಿಕೊಂಡಿದ್ದಾಗಿದೆ ಈಗ ಎದ್ದು ಬಾ ಸಾಕು. ಎಷ್ಟು ಹೊತ್ತು ನಿನ್ನನ್ನು ಹುಡುಕಿದ್ದೇ ಆಯಿತು.”

ಮುಂದುವರೆಯುವುದು … 

Feature Image Credit: wikipedia.org

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply