close logo

ನಿಶ್ಚಲ ಪ್ರವಾಹ

ವೇದ,  ವೇದಾಂಗ ಸಹಿತ ಸಾಂಖ್ಯ (ವೇದಾಂತ), ಪುರಾಣ ಅಥವಾ  ಶ್ರೇಷ್ಠ ಕುಲದಲ್ಲಿ ಜನ್ಮ – ನಡತೆಗೆಟ್ಟರೆ, ಇವ್ಯಾವುದೂ –  ಒಬ್ಬ ವ್ಯಕ್ತಿಯು ನರೋತ್ತಮನಾದರೂ ಕೂಡ , ಆತನನ್ನು ಅಧೋಗತಿಯಿಂದ ಪಾರು ಮಾಡಲಾಗದು ಎಂದು  ಕಶ್ಯಪರು ಹೇಳಿದ ಉಲ್ಲೇಖ ಮಹಾಭಾರತದಲ್ಲಿ ಕಂಡುಬರುತ್ತದೆ. 

ಬಹುಶಃ ನನ್ನ ಪತ್ರಿಯೊಂದು ಪ್ರಬಂಧದಲ್ಲಿ ಮಹಾಭಾರತದ ಉಲ್ಲೇಖ ಇದ್ದೇಯಿದೆ. ಏನಿಲ್ಲವಾದರೂ, ಈ ವ್ಯಾಸಸೃಷ್ಟಿಯ ಆಲೋಚನೆ ಕಡೆಯ ಪಕ್ಷ ಒಂದು ಸಾಲಿನಲ್ಲಾದರೂ ಮೂಡಿಯೇಯಿರುತ್ತದೆ.   ಒಮ್ಮೊಮ್ಮೆ ತೀರ ಅತಿರೇಕವೆನಿಸುವಷ್ಟು. ಏನು ಇದೊಂದು ಬಿಟ್ಟರೆ ಬೇರೇನು ವಿಷಯವೇ ಇಲ್ಲವೇ ಇವನಿಗೆ ? ಏನೋ ತಾನೇ ಬರೆದಿರುವ ಹಾಗೆ ಅದೇ ರಾಗವನ್ನು ಎತ್ತುತ್ತಾನಲ್ಲ ಎಂದು ಕೆಲವರಿಗೆ ಅನಿಸಬಹುದು.  ಇಷ್ಟಕ್ಕೂ ಮಹಾಭಾರತವನ್ನು ಸ್ಮರಣೆಯಲ್ಲಿ ಧರಿಸಿ ಚಕ್ರವರ್ತಿಯಂತೆ ಏನು ಕೇಳಿದರೂ ಉತ್ತರಿಸಬಹುದಾದಂಥ ಮೇಧಾವಿಯೇ ನಾನು ? ಖಂಡಿತ ಅಲ್ಲ ! 

ಆದರೂ ವ್ಯಾಸರ ಕೃತಿಯ ಬಗ್ಗೆ  ಒಂದು ಬಗೆಯ ಗೀಳು ನನಗೆ. ಹೇಗೆ ಕೆಲವರು ಮಾತೆತ್ತಿದರೆ ಸಿನಿಮಾ ಅಥವಾ pop culture ವಿಚಾರಗಳಿಗೆ ಶುರು ಹಚ್ಚಿಬಿಡುತ್ತಾರೋ ಹಾಗೆಯೇ ಇದು. ಅವರಿಗಿಂತ ನಾನು ಹೆಚ್ಚೇನು ವಿಭಿನ್ನನಲ್ಲ. ಆದರೆ ಮಹಾಭಾರತದ ವೈಶಿಷ್ಟ್ಯಯವೇ ಅಂಥದ್ದು. ಅತಿಶಯವೆಂದರೆ, ಎಂತಹ  ಭೂಪನೂ  ಒಮ್ಮೆ ಮಹಾಭಾರತವನ್ನು  ಓದಿ, ಅಲ್ಪ-ಸ್ವಲ್ಪ ತಿಳಿದುಕೊಂಡು ಅದರ ವ್ಯಾಖ್ಯಾನ ಮಾಡಿದರೆ ಸಾಕು. ಕೇಳುಗರಲ್ಲಿ ಈತ ಯಾವ  ಮಹಾನುಭಾವನೊ ಅಥವಾ ಘನ ವಿದ್ವಾಂಸನೋ ಎಂಬ ಸಂಶಯ ಮೂಡಬೇಕು. ಅಷ್ಟು ಪ್ರಬಲ ಮತ್ತು ಪವಿತ್ರ ಶಕ್ತಿ ಮಹಾಭಾರತ ಗ್ರಂಥಕ್ಕಿದೆ. 

ನಾನಿದನ್ನು ನಿಮಗೆ ಹೊಸದಾಗಿ ಹೇಳಬೇಕಾಗಿಲ್ಲ. ಆದರೆ, ಪ್ರಸ್ತುತ ವಿಷಯವು ಇದಕ್ಕೆ ಸಂಬಂಧಿಸಿದ್ದು. ಯಾವುದೊ ಒಂದು ಪುಸ್ತಕ ಅಥವ ವಿಚಾರವನ್ನು ಅಕಾಸ್ಮಾತ್ತಾಗಿಯೋ ಅಥವಾ ವ್ಯವಸ್ಥಿತವಾಗಿಯೋ ಓದಿಕೊಂಡು,  ತಿಳಿದುಕೊಂಡು ಮತ್ತು ರೂಢಿಸಿಕೊಂಡಾಗ, ನಾವು ಜೀವನದಲ್ಲಿ ಏನೋ ಮಹತ್ಸಾಧನೆ ಮಾಡಿರುವಂತೆ ನಮಗನ್ನಿಸಬಹುದು. 

ಎಷ್ಟಾದರೂ ಶ್ರವಣ,  ಮನನ ಹಾಗು ನಿಧಿಧ್ಯಾಸನಗಳೇ  ಕಲಿಕೆಯ ಮಾರ್ಗಗಳಲ್ಲವೇ ? ಹಾಗಾದರೆ, ಕೇವಲ ಶ್ರವಣ ಮತ್ತು  ಕೊಂಚ ಮನನದಿಂದ  ಇಷ್ಟಾರ್ಥ ಸಿದ್ದಿ ಸಾಧ್ಯವೇ?  ಯಥಾ ಶಕ್ತಿ ಓದಿಕೊಂಡು ಅಲ್ಪಶ್ರುತ ಅಲ್ಪಜ್ಞನಿಗೆ,   ಏನೋ ಒಂದು ಮೆಟ್ಟಿಲಾದರೂ  ಸರಿ, ಏರಿಬಿಟ್ಟೆ  ಎಂಬ ಭಾವನೆ ಉಂಟಾಗಬಹುದು. ಈ ಬಗೆಯ ಸ್ವಭಾವಕ್ಕೆ ವಯಸ್ಸಾದರೂ,  ತೀರ ಏನೂ ತಿಳಿಯದ  ಮಕ್ಕಳ ಹಾಗೆ ವರ್ತಿಸುವರಿಗಿಂತ ಮಿಗಿಲು ಎಂದುಕೊಳ್ಳಬೇಕಷ್ಟೆ. 

ಆದರೆ ಕರ್ಮಗಳ ಫಲ ಎಂದಿಗೂ ಶಾಶ್ವತವಲ್ಲ. ಕುರುಕ್ಷೇತ್ರದಲ್ಲಿ, ಭೀಷ್ಮಾಚಾರ್ಯರು ತಮ್ಮ ರಥದಿಂದ, ಒಂದು ಮರವೊ ಪರ್ವತ ಶಿಖರವೋ ಪತನಗೊಂಡಂತೆ ಧರೆಗುರುಳಿದ್ದಾರೆ ಎಂಬ ಸುದ್ದಿ ತಿಳಿದ ಕರ್ಣ ದುಃಖದಿಂದ  ಓಡೋಡಿ ಬರುವಾಗ ಹೀಗೆ ಹೇಳುತ್ತಾನೆ, “ಛೆ ಛೆ ಕರ್ಮಗಳ ಫಲವು ಶಾಶ್ವತವಲ್ಲ ಎಂಬುವುದು ಖಂಡಿತ ! ದೇವತೆಗಳಿಗೂ ಸಾಧ್ಯವಾಗದ  ಭೀಷ್ಮವ್ರತವನ್ನು ಆಚರಿಸಿಕೊಂಡು ಬಂದ ಪಿತಾಮಹರು ಇಂದು  ನೆಲದ ಮೇಲೆ ಅನ್ಯಪಶುಗಳ ಮಧ್ಯೆ  ಮಲಗಿದ್ದಾರಲ್ಲಾ !”.

ಭೀಷ್ಮರ ಕಥೆಯೇ ಹಾಗಿರಬೇಕಾದರೆ ಇನ್ನು ನಮ್ಮಂತವರ  ಕಥೆಯೇನು? ನಮ್ಮ ಅಧ್ಯಯನಾದಿ ಪ್ರವೃತ್ತಿಯು ಉತ್ತಮವಾದರೂ ಬಹು  ಕ್ಷೀಣವಾದದ್ದು. ಜೊತೆಗೆ  ನಮ್ಮ ದುಷ್ಕರ್ಮ, ದುರಾಸೆ, ದುರಾಲೋಚನೆ ಮತ್ತು  ದುಶ್ಚಟಗಳೋ , ಬೆಟ್ಟದಷ್ಟು. ಇಂದಿನ ಇ-ವಾಣಿಜ್ಯದ ಭಾಷೆಯಲ್ಲಿ ಹೇಳುವುದಾದರೆ – ನಮ್ಮ ದುಷ್ಪ್ರವೃತ್ತಿಗಳು tax, packing charge , delivery fee, surge fee ಇತ್ಯಾದಿಗಳಂತೆ. ಇನ್ನು ನಮ್ಮ ಒಳ್ಳೆಯ ಪ್ರವೃತ್ತಿ ಕೂಪನ್  ತರಹ. ಅಲ್ಪಪ್ರಮಾಣದ ಕೂಪನ್  ತನ್ನ ಫಲ ನೀಡುವ ಮುಂಚಿತವಾಗಿಯೇ ದುಷ್ಪ್ರವೃತ್ತಿಗಳು ಅದರ ಮೌಲ್ಯವನ್ನು ನುಂಗಿಬಿಟ್ಟಿರುತ್ತಾವೆ. ಕೊನೆಯಲ್ಲಿ , ‘ಅರೆ! ನನಗೇಕೆ ಹೀಗಾಯ್ತು’ ಎಂದು ಬೇಸ್ತು ಬೀಳುವಾಗ , ಕೂಪನ್ನಿನ ಮೌಲ್ಯವನ್ನು ಅಳೆದು ಸುರಿಯುತ್ತೇವೆಯೇ ಹೊರತು, ನಾವು ಮಾಡಿರುವ ದುಷ್ಕರ್ಮಗಳನ್ನು ಲೆಕ್ಕಕ್ಕೆ ಪರಿಗಣಿಸಲು ತಯಾರಾಗಿರುವುದಿಲ್ಲ. 

‘ಅಯ್ಯ, ಸ್ವಲ ಕಾಲ ಯುದ್ಧವನ್ನು ನಿಲ್ಲಿಸು’ ಎಂದು ಕರ್ಣನು ಯುದ್ಧಭೂಮಿಯಲ್ಲಿ ಅರ್ಜುನನಿಗೆ ಅಂಗಲಾಚಿದಾಗ ಶ್ರೀಕೃಷ್ಣ ಹೀಗೆ ಹೇಳುತ್ತಾನೆ, ‘ ಇದೀಗ ನಿನಗೆ ಧರ್ಮಾಧರ್ಮದ ಸೂಕ್ಷ್ಮವು ಅರಿವಾಯಿತೇ ? ದ್ರೌಪದಿಯ ಗಾಂಭೀರ್ಯವನ್ನು ಬಲವಂತವಾಗಿ ಹರಣ ಮಾಡುವಲ್ಲಿ ಸನ್ನದ್ಧವಾಗಿದ್ದಾಗ ಎಲ್ಲಿ ಹೋಗಿತ್ತು ನಿನ್ನ ವಿವೇಚನೆ ?’. ಇದು ಎಷ್ಟು ಸರಿಯಲ್ಲವೇ? ದುಷ್ಕರ್ಮದಲ್ಲಿ ತಲ್ಲೀನರಾಗಿದ್ದಾಗ ನಮಗೆ ಅದರ ಅರಿವೇ ಇರುವುದಿಲ್ಲ. 

ಶಾಸ್ತ್ರಗಳನ್ನು ಯಥಾ ಶಕ್ತಿ ಓದಿದ್ದಾಯಿತು.  ನಮ್ಮ ಬುದ್ಧ್ಯಾನುಸಾರ ತಿಳಿದುಕೊಂಡಿದ್ದೂ ಆಯಿತು. ಆದರೆ,  ನಮ್ಮ ಪ್ರವೃತ್ತಿಯಲ್ಲೇನೂ ಹೆಚ್ಚು ಬದಲಾವಣೆಗಳಿಲ್ಲ. ಅದು ದಿನೇದಿನೇ ಹದಗೆಡುತ್ತಿದೆಯೇ ಹೊರತು,  ಶುಭವಾಗುತ್ತಿಲ್ಲ. ಹೀಗೆ ಒಂದು ದಿನ ಇನ್ನೇನು ಯಮನ ಸಾನ್ನಿಧ್ಯಕ್ಕೆ ಹೋಗಬೇಕಿತ್ತು – ಆಗ ನನಗೆ ಹೀಗೆ ಅನ್ನಿಸಿತು. ‘ಈಗ ನನಗೆ ರೋಗ ಬಂದು ನಾನು ಸತ್ತರೆ ನನಗೇನು ಸದ್ಗತಿ ದೊರಕುವುದಿಲ್ಲ, ನನ್ನ ಅಧೋಗತಿ ನಿಶ್ಚಿತ’. ತಕ್ಷಣವೇ, ‘ಮರಣ ಕಾಲದಲ್ಲಿ ನನ್ನ ಸ್ಮರಣೆ ಮಾಡಿದರೆ ಅದೇ ಸ್ಥಾನ ದೊರಕುವುದು’ ಎಂದು ಭಗವದ್ಗೀತೆಯಲ್ಲಿ ಓದಿದ್ದು ನೆನಪಾಯಿತು. ಆದರೆ ಮಾರಣಾಂತಿಕ ರೋಗ ಬಡಿದಾಗ ಸ್ಮರಣೆ, ಧಾರಣೆ ಇದ್ಯಾವುದಕ್ಕೂ ಚೈತನ್ಯವಿರುವುದಿಲ್ಲ. ಇದರ  ನೇರ ಅನುಭವ ನನಗಾಯಿತು. ಹಿಂದೆ ಎಷ್ಟು ಸಾಧಾರಣವೆನಿಸಿದ್ದು ಈಗ  ಅಸಾಧ್ಯವೆನ್ನಿಸತೊಡಗಿತು. ಕೊನೆಗೂ  ಯಮರಾಯನ  ಆತಿಥ್ಯವನ್ನು ಸ್ವೀಕರಿಸಲು ಸಿಧ್ಧನಾಗಿ ಸುಮ್ಮನಾಗಿಬಿಟ್ಟೆ.  

ಆದರೆ , ನನ್ನ ಸುದೈವ. ದೈವಾನುಗ್ರಹ ಮತ್ತು ಹಿತೈಷಿಗಳ ಹಾರೈಕೆಯಿಂದ ಮೃತ್ಯುವಿನಿಂದ ಅಂದು ಪಾರಾದೆ. ದ್ವಿಜನಿಂದ ತ್ರಿಜನಾಗಿ ಹೊರಬಂದ ಭಾವ. ಸ್ವಲ್ಪ ಸುಧಾರಿಸಿಕೊಂಡ ನಂತರ,  ಮೊಟ್ಟ ಮೊದಲು ನನ್ನ ಆತ್ಮವನ್ನು ನಿಷ್ಕಲ್ಮಶವನ್ನಾಗಿಸಬೇಕೆಂದು ಎನ್ನಿಸಿತು. ಅನ್ನಿಸಿದಷ್ಟೇ ಸುಲಭವಾಗಿ ನಡೆಯುವ ಕಾರ್ಯವಾಗಿದ್ದರೆ, ಎಲ್ಲರೂ ಅದನ್ನೇ ಮಾಡುತ್ತಿದ್ದರೂ ಎಂಬ ಅರಿವಾಯಿತು. ಪ್ರಾಯಶಃ ಕಲಿಯುಗದಲ್ಲಿ ಇದು ನಡೆಯದ ಮಾತು. ಮುಂದಿನ ಜನ್ಮದಲ್ಲಿ ಸ್ಥಿತಿಗತಿಗಳು ಅನುಕೂಲವಾಗಿದ್ದಾಳೆ, ಸಹಜವಾಗಿಯೇ ಒಳ್ಳೆಯ ಸಾಂಗತ್ಯ , ಉತ್ತಮ ಗುರುಗಳು ಮತ್ತು ಸದ್ವಾತಾವರಣಗಳು ಲಭ್ಯವಾದಾಗ ಆತ್ಮವು ನಿಷ್ಕಲ್ಮಶವಾಗಿರುವುದು ಸಾಧ್ಯವಾದೀತು ಎಂದು ನನಗೆ ನಾನೇ ಸಮಾಧಾನ ತಂದುಕೊಂಡೆ. 

ಆದರೆ ಯಮಪ್ರಚೋದನೆಯೋ ಎಂಬಂತೆ , ನನ್ನ ಆಲೋಚನಗೆಗಳಿಗೆ ಯಾರೋ ವಾಚಾಮಗೋಚರವಾಗಿ  ಬೈದಂತಾಯಿತು, “ನೀನು ಬಯಸುತ್ತಿರುವ ಭಾವಸಂಶುದ್ಧಿ, ಆತ್ಮಶುದ್ಧಿ ಇತ್ಯಾದಿಗಳು ಮುಂದಿನ ಶತ ಸಹಸ್ರ ಸಂವತ್ಸರಗಳನ್ನು ಧರ್ಮಾಚರಣೆಯಲ್ಲಿ ಕಳೆದರೂ ಸಾಧ್ಯವಾಗದ ಮಾತು.  ಈ ಜನ್ಮಕ್ಕೆ ಮೊದಲು ಇನ್ನೆಷ್ಟು ಜನ್ಮಗಳು ನಾವು ಎತ್ತಿರಬಹುದು? ಅಷ್ಟು ಜನ್ಮಗಳಲ್ಲೇ ಆಗದಿದ್ದದ್ದು ಇನ್ನು ಮುಂದಿನ ಕೆಲವು ಜನ್ಮಗಳಲ್ಲಿ  ಸಾಧ್ಯವೆ ? ಅದು ಖಂಡಿತಾ ಸಂದೇಹಾರ್ಹ”. 

ಯಮಧರ್ಮನ ಸಾಮೀಪ್ಯ ಭಾಗ್ಯದಿಂದಲೋ ಏನೋ,  ನಿಜವಾದ ಯೋಗಾರೂಢ ಸ್ಥಿತಿ  ವೃತ್ತಿಯಲ್ಲಿಲ್ಲ – ಅದೇನಿದ್ದರೂ  ಸ್ಥೈರ್ಯದಲ್ಲಿ ಎಂಬ ಆಲೋಚನೆ ಮೂಡಿತು.  ಜೊತೆಗೆ,  ಇದು ಒಂದು ದೃಷ್ಟಿಕೋನದ ಸಂಗತಿಯೆಂದೂ ನನಗನಿಸಿತು.ಯಾವತ್ತೂ , ವೃತ್ತಿಯಲ್ಲಿ ನಮ್ಮ ವರ್ತನೆ ಪ್ರಕೃತಿಸಹಜವಾಗಿರುತ್ತದೆ. ವೃತ್ತಿಬದ್ಧರಾದಾಗ,   ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವುದು, ಏನೋ ಒಂದು ಅಂದುಕೊಂಡದ್ದು ಸಾಧಿಸುವುದು ಇತ್ಯಾದಿ ಕಾರ್ಪಣ್ಯಗಳಲ್ಲಿ ಸದಾ ನಿರತರಾಗಿರುತ್ತೇವೆ. ಎಷ್ಟೇ ಒಳ್ಳೆಯ ವ್ಯಕ್ತಿಯಾದರೂ, ಆತ  ಒಂದಲ್ಲ ಒಂದು ರೀತಿಯ ಬಂಧನಕ್ಕೊಳಗಾಗಿರುತ್ತಾನೆ. ಕಾಲಕ್ರಮೇಣ ಈ ಒಳ್ಳೆತನ ಕ್ಷೀಣಿಸುವುದು ಖಂಡಿತ. ಹೇಗೆ ಮಕ್ಕಳಲ್ಲಿ ಇರದಿದ್ದ ದುಷ್ಟಬುದ್ಧಿ  ವೃದ್ಧರಾದ ಮೇಲೆ ನಮಗೆ ಬೇಡವಾದರೂ ಪ್ರಜ್ಞೆಯಿದ್ದರೂ ಬರುವುದೋ ಮತ್ತೆ ಅದೇ ದುಷ್ಟತನವನ್ನು ಶಮನ ಮಾಡುವಲ್ಲಿ ನಮ್ಮ ಯತ್ನವಿರುತ್ತದೆಯೋ ಹಾಗೆ ಒಂದರ ನಂತರ ಬರುವ ಮತ್ತೊಂದು ಜನ್ಮ,  ಜರಾ-ಮೃತ್ಯುಗಾಲ  ಬಂಧನಕ್ಕೆ ಸಿಲುಕಿ  ಅಂತ್ಯವನ್ನೇ ಕಾಣದಂತಾಗುತ್ತದೆ. 

ನಾವು ಯೋಚಿಸುವ ದೃಷ್ಟಿಕೋನವನ್ನು ಸ್ವಲ್ಪ ಬದಲಿಸಿದಾಗ, ಲೌಕಿಕವಾಗಲಿ ಅಲೌಕಿಕವಾಗಲೀ , ಶಾಶ್ವತ ಪರಿಹಾರವು ವೃತ್ತಿ ಪ್ರವೃತ್ತಿಗಳಲ್ಲಿಲ್ಲ, ಅದೇನಿದ್ದರೂ  ಧೈರ್ಯ ಸ್ಥೈರ್ಯ ಗಳಲ್ಲಿ ಎಂದು ನಮಗೆ ಅರಿವಾಗುತ್ತದೆ. ವೇದಾಂತ ಶಾಸ್ತ್ರದಲ್ಲಿ ಶಂಕರ ಭಾಗವದ್ಪಾದರು ಹೇಳಿರುವಂತೆ, ಎಲ್ಲದಕ್ಕೂ ಪರಿಹಾರವೆಂದರೆ ಜ್ಞಾನ ನಿಷ್ಠೆ . ವೃತ್ತಿಗಾದರೆ ಸಮಯ ಸಂದರ್ಭ ಅನುಕೂಲತೆಗಳು ಬೇಕು.ಆದರೆ, ನಿಷ್ಠೆಗೆ ಭಗವದ್ಗೀತೆಯಲ್ಲಿ ಹೇಳಿರುವಂತೆ ಕರ್ಮಫಲದ  ತ್ಯಾಗ ಅತ್ಯಗತ್ಯ. ಪತ್ರಂ  ಪುಷ್ಪಮ್ ಫಲಂ ತೋಯಂ ಎಂಬ ಗೀತೋಕ್ತಿಯಂತೆ, ಈ ತ್ಯಾಗದ ಪರಿಕಲ್ಪನೆಗೆ  ಇಂಥದ್ದೇ ಜನ್ಮದಲ್ಲಿ ಹೀಗಿರಬೇಕು, ಮೊದಲು ಸರ್ವ ಶ್ರೇಷ್ಠನಾಗಬೇಕು ಇತ್ಯಾದಿ ನಿಬಂಧನೆಗಳಿರುವುದಿಲ್ಲ. 

ಅನಾಸಕ್ತತೆಯಿಂದ ಕೇವಲ ಆತ್ಮಜ್ಞಾನದಲ್ಲೇ ಸಂತುಷ್ಟನಾಗಿ, ಆತ್ಮಸ್ಥೈರ್ಯವನ್ನು  ರೂಢಿಸಿಕೊಂಡವನಿಗೆ ಯುಗಾಂತರಗಳ  ಬಾಧೆಯಾಗಲಿ ಅಥವಾ ಇನ್ನಾವುದೇ ಲೌಕಿಕ ತಾಪತ್ರಗಳ ಅಡ್ಡಿ ಇರುವುದಿಲ್ಲ. ಈ ಜನ್ಮದಲ್ಲಿಯೇ ಯಥಾಸ್ಥಿತಿಯಲ್ಲಿಯೇ ನಾವು  ಜ್ಞಾನನಿಷ್ಠೆ ರೂಢಿಸಿಕೊಂಡರೆ, ಅದೇ  ನಿವೃತ್ತಿ. ಅದೊಂದೇ ಮಾರ್ಗ. ಕೃತಯುಗದಲ್ಲಿ ಬಹು ಶ್ರೇಷ್ಠರೆನಿಸಿಕೊಂಡವರು ಈಗೆಲ್ಲಿದ್ದಾರೆ? ರಾಜಾಧಿರಾಜ ಚಕ್ರವರ್ತಿಗಳು ಈಗ ಕೇವಲ ಸಜ್ಜನರ ಸ್ಮರಣೆಯಲ್ಲಿ ಮಾತ್ರ ಉಳಿದುಕೊಂಡಿದ್ದಾರೆ. ನಿಜವಾದ ಸಾಧನೆ ಪ್ರವೃತ್ತಿಯಲ್ಲಿಲ್ಲ. ಅದೇನಿದ್ದರೂ ವೃತ್ತಿಯ ನಿರೋಧದಲ್ಲಿ. ಸನಾತನ ಪರಂಪರೆಯ ಮಹಾವಾಕ್ಯಗಳ  ಗೂಡಾರ್ಥದಲ್ಲಿ ಅಡಗಿರುವ ಆತ್ಮದ  ಸ್ವರೂಪವು ನಿಶ್ಚಲವಾದದ್ದು. ಈ ದೃಷ್ಟಿಕೋನದಿಂದ ನೋಡಿದಾಗ, ನಾವು ಪಂಡಿತರೋ ಅಥವಾ ಪಾಮರರೋ , ಸುಸಂಸ್ಕೃತ ಕುಲೀನರೋ ಅಥವಾ ಕುಲಾಘಾತಕರೋ , ಇದು ಎಲ್ಲರೂ ಸಹ ಪ್ರಯತ್ನಿಸಬಹುದಾದಂತಹ ಮಾರ್ಗ .

Feature Image Credit: wikimedia.org

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply