close logo

ಅಪ್ಸರೆಯರು -ಭಾಗ 4 : ದೇವಲೋಕದ ದಿವ್ಯ ನರ್ತಕಿಯರು

ಸನಾತನ ಧರ್ಮದ ಹಲವಾರು ಗ್ರಂಥಗಳಲ್ಲಿ ಭಾರತದ ಶಾಸ್ತ್ರೀಯ ನಾಟ್ಯ ಪ್ರಕಾರಗಳ ಬಗ್ಗೆ ಸಾಕಷ್ಟು ಮಾಹಿತಿಗಳಿವೆ. ದೇವಾಲಯಗಳಲ್ಲೂ ಈ ಬಗ್ಗೆ ಹಲವಾರು ವಿಷಯಗಳು ದೊರಕುತ್ತವೆ. ದೇಗುಲಗಳ ಬಾಗಿಲು, ತೋರಣ, ಭಿತ್ತಿ ಮತ್ತು ಓಣಿಗಳು ಅಷ್ಟೇ ಏಕೆ, ಮೂಲೆ ಮೂಲೆಗಳಲ್ಲಿಯೂ ನರ್ತನ ಭಂಗಿಯಲ್ಲಿ ನಿಂತಿರುವ ಅನೇಕಾನೇಕ ಅಪ್ಸರೆಯರ ಶಿಲ್ಪಗಳು, ವಿಭಿನ್ನವಾದ ಮುಖಭಾವವನ್ನು ಪ್ರದರ್ಶಿಸುತ್ತ ದೇಗುಲಗಳನ್ನು ಅಲಂಕರಿಸುತ್ತಿವೆ. ಕಲ್ಲಿನಲ್ಲಿ ಅರಳಿದ ಈ ಸುಂದರಿಯರ ನಿಲುವು ಆಕರ್ಷಕವಾಗಿರುತ್ತವೆ, ಸೌಂದರ್ಯವತಿಯರಾದ ಇವರ ಮೈಮಾಟದ ಸಾಮಂಜಸ್ಯ ಮೋಹಕವಾಗಿರುತ್ತದೆ. ಚಿರ ಯೌವ್ವನವಿರುವ ಇವರ ತಾರುಣ್ಯವು  ಶಿಲ್ಪಿಯ ಕೈಚಳಕದಿಂದ ಕಣ್ಮನಗಳನ್ನು ಸೆಳೆದು ಬಿಗಿಯುತ್ತದೆ. ಅವರ ಕೇಶಾಲಂಕಾರ, ಅದ್ದೂರಿಯಾದ ಒಡವೆ ವಸ್ತ್ರಗಳು, ಶೃಂಗಾರ ಮತ್ತು ಲವಲವಿಕೆಯಿಂದ ಕೂಡಿದ ಮುಖಭಾವ, ಎಲ್ಲವೂ ಇವರು ನರ್ತಿಸಲು ಸಜ್ಜಾಗಿರುವರೆನೋ ಎನ್ನುವಂತೆ ಕಂಡುಬರುತ್ತದೆ. 

ಭರತ ಮುನಿಗಳಿಂದ ರಚಿಸಲ್ಪಟ್ಟ “ನಾಟ್ಯಶಾಸ್ತ್ರ”  ಎಂಬ ಗ್ರಂಥವು ಭಾರತದ ಶಾಸ್ತ್ರೀಯ ನೃತ್ಯ ಪ್ರಕಾರಗಳ ಮೂಲಗ್ರಂಥ. ಇದು ನಾಟ್ಯ, ನಾಟಕದ ರೀತಿ-ನೀತಿಗಳು, ಭಾವ ಮತ್ತು ಅಂಗಾಭಿನಯಗಳ ಮಾಹಿತಿಗಳಿಗೇ ಮುಡಿಪಾಗಿರುವ ಸಮಗ್ರ ರಚನೆ. ಪೌರಾಣಿಕ ಕಥೆಗಳ ಪ್ರಕಾರ ಮಾಹಾದೇವನಾದ ಶಿವನು ನಂದಿಕೇಶ್ವರನಿಗೆ ನಾಟ್ಯ ಮತ್ತು ವಾಚನದ ಕಲೆಯನ್ನು ಅನುಗ್ರಹಿಸಿದನು. ನಟರಾಜನು ನಂದಿಕೇಶ್ವರನಿಗೆ “ತಾಂಡವ”  ನೃತ್ಯವನ್ನು  ಕಲಿಸಿದನು. ತಾಂಡವ – ಹುರುಪಿನಿಂದ ಕೂಡಿದ ನಾಟ್ಯ ಪ್ರಕಾರ. ಇದರಲ್ಲಿ ಮೂಡಿಬರುವ ಭಂಗಿಗಳು ತೀವ್ರವಾದ ಭಾವನೆಗಳನ್ನು ಪ್ರದರ್ಶಿಸಲು ಉಪಯುಕ್ತವಾಗಿರುತ್ತದೆ ಮತ್ತು ಅಭಿನಯಕ್ಕೆ ಸಾಕಷ್ಟು ಅವಕಾಶವಿರುತ್ತದೆ.  ನಂತರ, ನಂದಿಕೇಶ್ವರನು “ಅಭಿನಯ ದರ್ಪಣ” ಎಂಬ ಗ್ರಂಥವನ್ನು ರಚಿಸಿದನು. ಇದು ನಾಟ್ಯ ಪ್ರಪಂಚದ ಅತಿ ಮುಖ್ಯವಾದ್ದ ಪುಸ್ತಕವಾದ್ದರಿಂದ ಇಂದಿಗೂ ಉಲ್ಲೇಖಿಸಲಾಗುತ್ತದೆ.

ಈ ಕೆಳಗಿನ ಶ್ಲೋಕದಲ್ಲಿ ನಂದಿಕೇಶ್ವರನು ರಸ ಸಂಸ್ಕರಣವನ್ನು ವಿವರಿಸಿದ್ದಾನೆ. 

यतो हस्तस्ततो दॄष्टिर् यतो दॄष्टिस्ततो मनः

यतो मनस्ततो भावो यतो भावस्ततो रसः॥

ಯಥೋ ಹಸ್ತಃ ತಥೋ ದೃಷ್ಟಿಃ ಯಥೋ ದೃಷ್ಟಿಸ್ತಥೋ ಮನಃ 

ಯಥೋ ಮನಸ್ತಥೋ ಭಾವೊ ಯಥೋ ಭಾವಸ್ತಥೋ ರಸಃ ।।

– ಶ್ಲೋಕ 37, ಅಭಿನಯ ದರ್ಪಣ 

ನರ್ತಿಸುವಾಗ ದೃಷ್ಟಿ ಹಸ್ತವನ್ನು ಅನುಸರಿಸಬೇಕು, ಮನಸ್ಸಿನಲ್ಲಿ ಉತ್ಪಾತ್ತಿಯಾದ ನಿಷ್ಕಲ್ಮಷ ಭಾವನೆಯನ್ನು ಕಣ್ಣಿನಲ್ಲಿ ಯಥೋಚಿತವಾಗಿ ತೋರಿಸಬೇಕು. ಅಂಗಾಭಿನಯ ಮತ್ತು ಮುಖಭಾವ ರಸವನ್ನು ಪ್ರದರ್ಶಿಸುತ್ತ ಪ್ರೇಕ್ಷಕರನ್ನು ತಲುಪುತ್ತದೆ. ಭಾರತದ ಯಾವುದೇ ಶಾಸ್ತ್ರೀಯ ನಾಟ್ಯ ಪ್ರಕಾರದ ವಿಶ್ಲೇಷಣೆ ನಡೆಸಿದರೂ ಈ ಶ್ಲೋಕದ ಮೂರ್ತಸ್ವರೂಪವನ್ನು ನೋಡಬಹುದು. 

ನಾಟ್ಯದ ಬಗೆಗಿನ ಈ ಜ್ಞಾನವು ನಂದಿಕೇಶ್ವರನಿಂದ ಬ್ರಹ್ಮನಿಗೆ ಮತ್ತು ಬ್ರಹ್ಮನಿಂದ ಭರತ ಮುನಿಗೆ ಹಸ್ತಾಂತರವಾಯಿತು. ತದನಂತರ ಭರತ ಮುನಿಯು ತನ್ನ ನೂರು ಪುತ್ರರೊಡನೆ ಮೌಖಿಕ, ಭವ್ಯ ಮತ್ತು ಶಕ್ತಿಯುತ ಎಂಬ ಮೂರು ಶೈಲಿಗಳಿರುವ ಪ್ರದರ್ಶನವನ್ನು ಆಯೋಜಿಸಿದರು. (ಅನುವಾದಕರ ಸೂಚಿ: ಈ ಮೂರು ಶೈಲಿಗಳು ಭಾರತಿ, ಸಾತ್ವತಿ, ಆರಭಟಿ ಎಂದು). ಸೌಮ್ಯವಾದ  ಭಾವನೆಗಳನ್ನು ಪ್ರದರ್ಶಿಸಲು ಬ್ರಹ್ಮದೇವನು ಭರತ ಮುನಿಗೆ  ಲಾಸ್ಯ ಅಥವಾ ಬೆಡಗನ್ನು  ಅಳವಡಿಸಿಕೊಳ್ಳಲು ಸೂಚಿಸದರು. ಲಾಸ್ಯವನ್ನು ಅಳವಡಿಸಿಕೊಂಡಾಗ ಹರ್ಷೋನ್ಮಾದಗಳನ್ನು ಮತ್ತು ಭಾವೋದ್ರೇಕವಿರುವ ವಸ್ತುವಿಷಯಗಳನ್ನು ಸೂಕ್ತವಾಗಿ ಪ್ರದರ್ಶಿಸಲು ಸುಲಭವಾಯಿತು. ತದನಂತರ, ತನ್ನ ಪುತ್ರರಿಗೆ  ಮೃಧುವಾದ ಭಾವನೆಗಳನ್ನು ನವಿರಾಗಿ ಪ್ರದರ್ಶಿಸಲು ಮಹಿಳೆಯರ ಸಹಾಯ ಬೇಕಾಗಿ ಭರತ ಮುನಿಯು ಬ್ರಹ್ಮನಲ್ಲಿ ಕೇಳಿಕೊಂಡನು. ಭರತ ಮುನಿಯ ಅಪೇಕ್ಷೆಯನ್ನು ಪೂರೈಸಲು ಬ್ರಹ್ಮನು ಅಪ್ಸರೆಯರನ್ನು ಸೃಷ್ಟಿಸಿ, ಅವರನ್ನು ಉತ್ಕೃಷ್ಟವಾದ ನರ್ತನ ಮತ್ತು ಗಾಯನ ಕಲೆಗಳಿಂದ ಅನುಗ್ರಹಿಸಿದನು. ನೃತ್ಯಕಲೆಯಲ್ಲಿ ಭಾವ ಮತ್ತು ರಸವನ್ನು ತುಂಬುವುದರಲ್ಲಿ ಅಪ್ಸರೆಯರ ಪಾತ್ರ ಗಮನಾರ್ಹವಾದದ್ದು. ಇದಾದ ನಂತರ ಭರತ ಮುನಿಯು ನಾಟ್ಯಶಾಸ್ತ್ರವನ್ನು ರಚಿಸಿದರು. ನಾಟ್ಯಶಾಸ್ತ್ರದ ಪ್ರಕಾರ ನಾಟ್ಯ- ನರ್ತನ ಮತ್ತು ನಾಟಕ ಗಳಿಗೆ ಬ್ರಹ್ಮದೇವನೇ ಮೂಲವಾದರೆ, ವೃತ್ತಿ ಎಂದರೆ ನಾಟಕಕ್ಕೆ ಅಗತ್ಯವಿರುವ ಮೂಲತತ್ವಕ್ಕೆ ವಿಷ್ಣುವೇ ಮೂಲ ಮತ್ತು ನೃತ್ಯಕ್ಕೆ ನಟರಾಜನೇ ಮೂಲ.

ಭರತ ಮುನಿಯ ನೂರು ಪುತ್ರರ ಸಾಂಗತ್ಯಕ್ಕಾಗಿ ಬ್ರಹ್ಮನು ಅಪ್ಸರೆಯರನ್ನು ಸೃಷ್ಟಿಸಿದನಾದರೂ ಇವರು ನಾಟ್ಯ ಶಾಸ್ತ್ರದ ಅನೇಕಾನೇಕ  ವಿಷಯಗಳನ್ನು ಬೆಳೆಸುವುದರ ಮೂಲಕ ಭರತ ಮುನಿಗೂ ಸಹಾಯಕರಾಗಿದ್ದರು. ತಮಿಳು ನಾಡು ರಾಜ್ಯದ ಶಾಸ್ತ್ರೀಯ ನೃತ್ಯ ಪ್ರಕಾರವನ್ನು ಭರತ ಮುನಿಯ ಹೆಸರಿನಿಂದಲೇ ಭರತನಾಟ್ಯಮ್ ಎಂದು ಕರೆಯಲಾಗುತ್ತದೆ. ಭಾರತದ ಅನೇಕ ಶಾಸ್ತ್ರೀಯ ನೃತ್ಯ ಪ್ರಕಾರಗಳ ಪಿತಾಮಹನೆಂದು ಭರತಮುನಿಯನ್ನು ಗೌರವಿಸಲಾಗಿದೆ.     

ಪುರಾಣಗಳಲ್ಲಿ ಹೇಳಲ್ಪಟ್ಟಿರುವ ಅಪ್ಸರೆಯರು ಬ್ರಹ್ಮನ ಮಾನಸ ಪುತ್ರಿಯರು. ಆದರೆ ಅಪ್ಸರೆ ಮೋಹಿನಿ ಇವರಂತಲ್ಲ. ಅವಳು ವಿಷ್ಣುವಿನ ಅವತಾರ. ಸಮುದ್ರ ಮಂಥನದ ಸಮಯದಲ್ಲಿ ಜನ್ಮ ತಾಳಿದ ಮೋಹಿನಿಯನ್ನು ಭಾರತದ ಶಾಸ್ತ್ರೀಯ ನೃತ್ಯಗಳಲ್ಲಿ ಒಂದಾದ “ಮೋಹಿನಿ ಆಟ್ಟಂ” ನ ಕರ್ತೃ ಎನ್ನಲಾಗಿದೆ. ಬ್ರಿಟಾನ್ನಿಕಾ (Britannica) ವಿಶ್ವಕೋಶ,  “ಮೋಹಿನಿ ಆಟ್ಟಂ, (ಮಲಯಾಳಂ “ ಮಾಟಗಾತಿಯ ನರ್ತನ “), ನೈಋತ್ಯ ಭಾರತದ, ಕೇರಳ ರಾಜ್ಯದ ಅರೆ-ಶಾಸ್ತ್ರೀಯ ನೃತ್ಯ. ಹಿಂದೂ ದೇವರಾದ ವಿಷ್ಣುವಿನ ಅವತಾರ, ಮೋಹಕರೂಪದ ಸುಂದರಿ, ಮೋಹಿನಿಯನ್ನು ಗೌರವಿಸಲು ಕೇರಳದ ಹೆಣ್ಣು ಮಕ್ಕಳು ಈ ನೃತ್ಯ ಮಾಡುತ್ತಾರೆ. “ ಎಂದು ತಿಳಿಸುತ್ತದೆ. 

ಪುರಾಣಗಳ ಪ್ರಕಾರ, ವಿಷ್ಣುವು ಸಮುದ್ರಮಂಥನದ ಸಮಯದಲ್ಲಿ ಮೋಹಿನಿ ರೂಪವನ್ನು ತಾಳಿ ದೈತ್ಯರ ಕಣ್ತಪ್ಪಿಸಿ ದೇವತೆಗಳಿಗೆ ಅಮೃತವನ್ನು ದಕ್ಕಿಸಿದನು ಮತ್ತು ಸಮಸ್ತ ಸೃಷ್ಟಿಯ ವಿನಾಶವನ್ನು ತಡೆದನು. ಮಾಯಾ ಸುಂದರಿಯಾದ ಮೋಹಿನಿಯೇ ಮೋಹಿನಿ ಆಟ್ಟಂನ ಕೇಂದ್ರ ಬಿಂದು. 

ಒಂದು ಪುರಾಣ ಕಥೆಯ ಪ್ರಕಾರ, ಭಸ್ಮಾಸುರನಿಗೆ ವರವನ್ನಿತ್ತ ಶಿವನು ಸ್ವಯಂ ಆಪತ್ತಿಗೆ ಸಿಕ್ಕಿಕೊಳ್ಳುತ್ತಾನೆ. ಭಸ್ಮಾಸುರನ ಹೆಸರೇ ಸೂಚಿಸುವಂತೆ ಅವನು ತಪಸ್ಸನ್ನು ಆಚರಿಸಿ ತಾನು ಯಾರ ತಲೆಯನ್ನು ಮುಟ್ಟುವನೋ ಅವರು ತಕ್ಷಣ ಭಸ್ಮವಾಗಲೆಂದು ವರವನ್ನು ಕೇಳಿಕೊಳ್ಳುತ್ತಾನೆ. ಅವನ ತಪಸ್ಸನ್ನು ಮೆಚ್ಚಿದ ಮಹಾದೇವನು ಕ್ಷಣಮಾತ್ರದಲ್ಲಿ  ಅವನ ವರವನ್ನು ಕರುಣಿಸಿಯೇಬಿಡುತ್ತಾನೆ. ವರಪ್ರಾಪ್ತಿಯಾದ ಕೂಡಲೆ ಭಸ್ಮಾಸುರನು ಭೂಮಿಯಲ್ಲಿ ಆಹಾಕಾರವನ್ನುಂಟು ಮಾಡುತ್ತಾನೆ. ಋಷಿ-ಮುನಿಗಳು ಮತ್ತು ಮಹಾದೇವನು ಸಹ ಚಿಂತಾಕ್ರಾಂತರಾಗಿ ವಿಷ್ಣುವಿನ ಸಹಾಯ ಯಾಚಿಸುತ್ತಾರೆ. ಆಗ ವಿಷ್ಣುವು ಮೋಹಿನಿ ಎಂಬ ಅಪ್ಸರೆಯ ರೂಪದಾಳಿ ಭಸ್ಮಾಸುರನ ಬಳಿಗೆ ಬರುತ್ತಾಳೆ. ಅವಳ ಮೋಹಕ ರೂಪಕ್ಕೆ ಬೆರಗಾದ ಭಸ್ಮಾಸುರನನ್ನು ಮೋಹಿನಿಯು ತನ್ನ ಲೀಲಾಜಾಲಗಳಲ್ಲಿ ಸಿಲುಕಿಸಿ ತನ್ನಲ್ಲಿ ಅನುರಕ್ತನಾಗುವಂತೆ ಮಾಡುತ್ತಾಳೆ. ಭಸ್ಮಾಸುರ ಮೋಹಿನಿಯನ್ನು ತನ್ನನ್ನು ವರಿಸಲು ಕೇಳಿಕೊಳ್ಳುತ್ತಾನೆ. ಆಗ ಮೋಹಿನಿ, ತನಗೆ ನರ್ತನವೆಂದರೆ ಬಹಳ ಪ್ರೀತಿ, ಅವನೂ ಸಹ ತನ್ನ ಜೊತೆ ತನ್ನನ್ನೇ ನಕಲು ಮಾಡುತ್ತಾ ತದ್ವತ್ತಾಗಿ ನರ್ತಿಸಿದರೆ ಅವನನ್ನು ವರಿಸಲು ಒಪ್ಪುವುದಾಗಿ ಹೇಳುತ್ತಾಳೆ. ಭಸ್ಮಾಸುರ ಒಪ್ಪಿಕೊಳ್ಳುತ್ತಾನೆ. ಅವರು ನರ್ತಿಸಲು ಪ್ರಾರಂಭಿಸುತ್ತಾರೆ. ಅವಳ ಪ್ರತಿಯೊಂದು ಹೆಜ್ಜೆಗಳನ್ನು, ಭಂಗಿಯನ್ನು, ಚಲನ ವಲನಗಳನ್ನು ಅನುಸರಿಸಿ ಅವಳಂತೆಯೇ ನರ್ತಿಸುತ್ತಾನೆ. ನಾಟ್ಯವಾಡುವ ಗುಂಗಿನಲ್ಲಿ ಎಲ್ಲವನ್ನು ಮರೆಯುತ್ತಾನೆ. ಸೂಕ್ತಸಮಯಕ್ಕೆ ಕಾಯುತ್ತಿದ್ದ ಮೋಹಿನಿ ತನ್ನ ತಲೆಯ ಮೇಲೆ ತನ್ನ ಕೈಯನ್ನು ಇಡುತ್ತಾಳೆ. ಅವಳಂತೆಯೇ ನರ್ತಿಸುವ ಗುಂಗಿನಲ್ಲಿ ಭಸ್ಮಾಸುರನೂ ತನ್ನ ಕೈಯನ್ನು ತನ್ನ ತಲೆಯ ಮೇಲೆ ಇಟ್ಟುಕೊಂಡುಬಿಡುತ್ತಾನೆ. ಕ್ಷಣಮಾತ್ರದಲ್ಲಿ ಭಸ್ಮವಾಗಿಬಿಡುತ್ತಾನೆ. ತನ್ನ ಅರಿವಿಲ್ಲದೆಯೇ ತನ್ನ ವಿನಾಶಕರ ವರವನ್ನು ತನ್ನ ಮೇಲೆಯೇ ಪ್ರಯೋಗಿಸಿಕೊಂಡ ಭಸ್ಮಾಸುರನ ಮೈಮರೆಸಿದ ಮೋಹಿನಿಯ ಮೋಹಕ ನೃತ್ಯವೇ ಮೋಹಿನಿ ಆಟ್ಟಂ. ಆದ್ದರಿಂದ ಮಹಾವಿಷ್ಣುವನ್ನು ಮೋಹಿನಿ ಆಟ್ಟಂನ ಸೃಷ್ಟಿಕರ್ತನೆಂದು ಗುರುತಿಸಲಾಗಿದೆ. ಈ ನೃತ್ಯಪ್ರಕಾರದಲ್ಲಿ ನರ್ತಕರ ಉಡುಪಿನ ಬಣ್ಣ  ಹಾಲಿನ ಬಿಳಿ. ಅದಕ್ಕೆ ಅಗಲವಾದ ಬಂಗಾರದ ಅಂಚಿರುತ್ತದೆ. ಇದು ಅಪ್ಸರ ಮೋಹಿನಿಯ ಜನ್ಮಸ್ಥಾನವಾದ ಕ್ಷೀರ ಸಾಗರದ ಪ್ರತೀಕ. ಜೊತೆಗೆ ಬಂಗಾರದ ಅದ್ದೂರಿ ಒಡವೆಗಳನ್ನು ಧರಿಸಿ ಬಿಳಿಯ ಹೂವಿನಿಂದ ಕೇಶಾಲಂಕಾರ ಮಾಡಿಕೊಂಡಿರುತ್ತಾರೆ. 

ಭಾರತದಲ್ಲಷ್ಟೇ ಅಲ್ಲ ಬಾಲಿನೀಸ್ ಮತ್ತು ಜಾವನೀಸ್ ನೃತ್ಯಗಳಲ್ಲಿಯೂ ಅಪ್ಸರೆಯರ ಉಪಸ್ಥಿತಿಯನ್ನು ಕಾಣಬಹುದು. ಇಂಡೊನೇಷ್ಯಾದಲ್ಲಿ ಈ ಆಕಾಶ ಸುಂದರಿಯರಿಗೆ ಹಪಸರಿ ಅಥವಾ ವಿಡೋದರಿ ಎನ್ನುವ ಹೆಸರುಗಳಿವೆ. ಬಾಲಿನೀಸ್ ನಾಟ್ಯ ಪ್ರಕಾರಗಳಾದ ಸಾಂಘ್ಯಾಂಗ್ ದೇದರಿ ಮತ್ತು ಲೆಗೊಂಗ್ ಗಳು ಅಪ್ಸರೆಯರ ನರ್ತನವನ್ನು ಪ್ರತಿಬಿಂಬಿಸುತ್ತವೆ. ಕಾಂಬೋಡಿಯಾದ ನಾಟ್ಯ ಪ್ರಕಾರವಾದ ಖ್ಮೇರ್ ಕೂಡ ಅಪ್ಸರೆಯ ನರ್ತನವೆಂದು ಕರೆಯಲ್ಪಡುತ್ತದೆ.   

ಈ ನೃತ್ಯದ ಮುಖ್ಯವಿಷಯ ಮತ್ತು ಇಲ್ಲಿ ಉಪಯೋಗಿಸಲ್ಪಡುವ ಭಂಗಿಗಳು  ಹಿಂದೂ ದೇವತೆಗಳ ಸಭೆ ಮತ್ತು ಅದರಲ್ಲಿ ನರ್ತಿಸುವ ಅಪ್ಸರೆಯರಿಂದ ಪ್ರೇರೇಪಿತವಾಗಿದೆ.  ಕಾಂಬೋಡಿಯಾದ ಅಂಗ್ಕೊರ್ ನ ದೇವಾಲಯಗಳಲ್ಲಿ ಸಿಗುವ ಅಪ್ಸರೆಯರ ವಿವರಣೆಗಳು ನಾಟ್ಯವಾಡುತ್ತಿರುವ ಆಕಾಶ ಸುಂದರಿಯರದ್ದಾಗಿದೆ. ಇಲ್ಲಿ ಅಪ್ಸರೆಯರನ್ನು ಅತ್ಯದ್ಭುತವಾದ ವಸ್ತ್ರಾಲಂಕಾರಗಳಿಂದಲೂ ಮತ್ತು ನಿಷ್ಕಳಂಕವಾದ ನೃತ್ಯ ಭಂಗಿಗಳಿಂದಲು ಗುರುತಿಸಬಹುದು.  ಅಂಗ್ಕೊರ್ ನ ದೇವಾಲಯಗಳಲ್ಲಿ ಕಾಣ ಸಿಗುವ ಅಪ್ಸರೆಯರ ಶಿಲ್ಪಗಳ ವೈಭವೋಪೇತವಾದ ವಸ್ತ್ರಾಲಂಕಾರದಲ್ಲಿ ಬಂಗಾರದ ಕಸೂತಿಯನ್ನು ಗಮನಿಸಬಹುದು ಅಂತೆಯೇ ಅವರ ಮನಮೋಹಕ ನೃತ್ಯ ಭಂಗಿಯನ್ನು ಖ್ಮೇರ್ ನರ್ತಕಿಯರು ಚಾಚು ತಪ್ಪದೆ ಅಷ್ಟೇ ಅದ್ಭುತವಾಗಿ ಪ್ರದರ್ಶಿಸುತ್ತಾರೆ. 

ಕಾಂಬೋಡಿಯಾದ ಅಪ್ಸರೆಯರು 

ಕಾಂಬೋಡಿಯಾದ ಅಪ್ಸರಾ ನರ್ತಕಿಯರು  ಸಂಪೊಟ್ – ಸರಬಪ್ ಎಂಬ ಲೋಹ ಬಣ್ಣದ ರೇಷ್ಮೆ ಬಟ್ಟೆಯನ್ನು ಲಂಗದಂತೆ ಸೊಂಟಕ್ಕೆ ಸುತ್ತಿಕೊಂಡು ನಡುವೆ ನೆರಿಗೆಯನ್ನು ಹಿಡಿದು ಅದರಮೇಲೆ ಬಿಗಿಯಾಗಿ ಬಂಗಾರದ ಪಟ್ಟಿಯನ್ನು ಧರಿಸಿರುತ್ತಾರೆ. ಎಡ ಭುಜವನ್ನು  ದಾವಣಿಯಂತಿರುವ  ಒಂದು ವಸ್ತ್ರವನ್ನು ಹಾಕಿಕೊಂಡಿರುತ್ತಾರೆ. ಆ ದಾವಣಿಯನ್ನು ಆಕರ್ಷಕವಾದ ಕಸೂತಿಯಿಂದ ಅಲಂಕರಿಸಿರುತ್ತಾರೆ. ವಡವೆಗಳ ಬಗ್ಗೆ ಹೇಳುವುದಾದರೆ, ಚೆಂದವಾದ ಪಟ್ಟಿಯನ್ನು (choker) ಕತ್ತಿಗೆ ಬಿಗಿಯಾಗಿ ಹಾಕಿಕೊಳ್ಳುತ್ತಾರೆ ಜೊತೆಗೆ  ಒಂದು ದೊಡ್ಡ ಚೌಕಾಕಾರದ ಪದಕವಿರುವ ಸರವಿರುತ್ತದೆ. ಹಲವು ರೀತಿಯ ಕಾಲ್ಗೆಜ್ಜೆಗಳು, ಕೈ ಬಳೆಗಳು, ಬಲ ಭುಜಕ್ಕೆ ಒಂಕಿಗಳು ಮತ್ತು ಹಲವು ರೀತಿಯ ಸರಗಳನ್ನು ಸಹ ಹಾಕಿಕೊಳ್ಳುತ್ತಾರೆ. ಹಲವಾರು ರೀತಿಯ ಮುಕುಟಗಳನ್ನೂ ಧರಿಸುತ್ತಾರೆ, ಅದನ್ನು ಮೊಕೊಟ್ ಕ್ಸಟ್ರೆಯ್ ಎಂದು ಕರೆಯಲಾಗುತ್ತದೆ. ಅಪ್ಸರಾ ನರ್ತನದಲ್ಲಿ  ಹೂವುಗಳು ಕೂಡ ಬಹು ಮುಖ್ಯವಾದ ಪಾತ್ರ ವಹಿಸುತ್ತವೆ. ನರ್ತಕಿಯರು ಬಲ ಕಿವಿಯ ಮೇಲೆ ರೋಜಾ ಹೂವನ್ನು ಮುಡಿಯುತ್ತಾರೆ. ಹೂವಿನ ಗುಚ್ಛಗಳನ್ನು ಮತ್ತು ಮಲ್ಲಿಗೆ ಹೂವಿನ ಹಾರಗಳನ್ನೂ ಹಾಕಿಕೊಳ್ಳುವುದುಂಟು. 

ಹಿಂದೂ ಸಂಪ್ರದಾಯದ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಆಯಾಮದಲ್ಲಿ ಆಕಾಶ ಸುಂದರಿಯರಾದ ಅಪ್ಸರೆಯರಿಗೆ ಅವರದೇ ಆದ ಸ್ಥಾನ-ಮಾನಗಳಿವೆ. ದೇಗುಲಗಳ ಅಂಗಳದಲ್ಲಿ ಕಲ್ಲಿನ ಶಿಲೆಯಾದರೂ ಸಹ ಪ್ರೇಕ್ಷಕರ ಕಣ್ಮನಗಳನ್ನು ಸೆಳೆದು ಬೆರಗು ಮಾಡುವ ಮೋಡಿ ಅವರದು. ಹಲವಾರು ನಾಟ್ಯ ಪ್ರಕಾರಗಳಲ್ಲಿ ಮತ್ತು  ನಾಟ್ಯ ಪ್ರದರ್ಶನಗಳಲ್ಲಿ ಕಾಣ ಸಿಗುವ ಈ ಅಪ್ಸರೆಯರಿಗೆ ವೈದಿಕ ಹಿನ್ನೆಲೆಯಿದೆ. ಇವರನ್ನು ಅಪ್ಸರ, ದೇವಾಂಗನ, ಆಲಸಕನ್ಯ, ಸುರಸುಂದರಿ, ಯಕ್ಷಿಣಿ, ಹಪ್ಸರಿ, ವಿಡೋದರಿ ಅಥವಾ ನಾಟ್ಯರತ್ನ  ಎಂದೆಲ್ಲ ಕರೆಯಲಾಗುತ್ತದೆ. ಇವರು ಬ್ರಹ್ಮನ ನಿಗೂಢ ಸೃಷ್ಟಿ, ಶಿವನ ನಾಟ್ಯ ವಾಹಕರು, ಭರತ ಮುನಿಯು ಪೋಷಿಸಿದ ಕಲಾವಿದೆಯರು, ಇಂದ್ರಪುರಿಯ ಮುತ್ತು-ಹವಳ-ನೀಲಮಣಿಗಳು, ಮೋಹಕ ಮೋಹಿನಿಯರು. 

(This is a translation of  an article written in English by Shalini Mahapatra.)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply

IndicA Today - Website Survey

Namaste,

We are on a mission to enhance the reader experience on IndicA Today, and your insights are invaluable. Participating in this short survey is your chance to shape the next version of this platform for Shastraas, Indic Knowledge Systems & Indology. Your thoughts will guide us in creating a more enriching and culturally resonant experience. Thank you for being part of this exciting journey!


Please enable JavaScript in your browser to complete this form.
1. How often do you visit IndicA Today ?
2. Are you an author or have you ever been part of any IndicA Workshop or IndicA Community in general, at present or in the past?
3. Do you find our website visually appealing and comfortable to read?
4. Pick Top 3 words that come to your mind when you think of IndicA Today.
5. Please mention topics that you would like to see featured on IndicA Today.
6. Is it easy for you to find information on our website?
7. How would you rate the overall quality of the content on our website, considering factors such as relevance, clarity, and depth of information?
Name

This will close in 10000 seconds