ವಾಸ್ತುಶಾಸ್ತ್ರದ ನಿಯಮಗಳನ್ನು ಅಕ್ಷರಶಃ ಅನುಸರಿಸಿಯೇ ಹಿಂದೂ ದೇವಾಲಯಗಳ ನಿರ್ಮಾಣವಾಗುತ್ತದೆ. ಅಂತೆಯೇ ದೇವಾಲಯಗಳಲ್ಲಿ ಅಲ್ಲಿನ ಅದಿದೇವತೆ, ಯಕ್ಷ, ಗಂಧರ್ವ, ನಾಗ ಮತ್ತು ಅಪ್ಸರೆಯರಿಗೆ ಪ್ರತ್ಯೇಕವಾದ ಜಾಗವನ್ನು ಮೀಸಲಿಡಲಾಗಿದೆ. ಶಿಲ್ಪಶಾಸ್ತ್ರವನ್ನು ಅನುಸರಿಸುತ್ತ ಕಲ್ಲಿನಲ್ಲಿ ಜೀವತಾಳುವ ಈ ಅಪ್ಸರೆಯರನ್ನು, ದೇವಾಂಗನೆಯರು ಮತ್ತು ಆಲಸ ಕನ್ಯೆಯರೆಂಬ ಹೆಸರಿನಿಂದಲೂ ಗುರುತಿಸಲಾಗಿದೆ. ಪುರಾತನ ದೇಗುಲಗಳಲ್ಲಂತೂ ಲೆಕ್ಕವಿಲ್ಲದಷ್ಟು ಅಪ್ಸರೆಯರ ಶಿಲ್ಪಗಳು ಕಾಣ ಸಿಗುತ್ತವೆ.
ದೇಗುಲಗಳ ಭಿತ್ತಿಗಳಲ್ಲಿ ಕಂಡುಬರುವ ಅಪ್ಸರೆಯರು
ಕಾಶ್ಯಪ ಶಿಲ್ಪ ಪಾಠಲ ಎಂಬ ಗ್ರಂಥವು ಅಪ್ಸರೆಯರ ಶಿಲ್ಪಶಾಸ್ತ್ರದ ವಿವರಗಳನ್ನು ನೀಡುತ್ತದೆ. ಈ ಗ್ರಂಥದ ಪ್ರಕಾರ, ದೇವಾಲಯಗಳ ಅಲಂಕಾರಕ್ಕೆ ನಿಂತ ಈ ಕಲ್ಲಿನ ಶಿಲ್ಪಸುಂದರಿಯರಿಗೆ ನೀಲವಾದ ಮತ್ತು ದಟ್ಟವಾದ ಕೇಶವಿರಬೇಕು ಮತ್ತು ಅದನ್ನು ಹೂವಿನಿಂದ ಅಲಂಕರಿಸಬೇಕು. ಅವರು ವಸ್ತ್ರಧಾರಿಗಳಾಗಿರಬೇಕು. ದುಂಡಾಗಿ ಕೆತ್ತಲ್ಪಟ್ಟ ಅವರ ತೊಡೆಗಳು ಒಂದಕ್ಕೊಂದು ತಾಕುತ್ತಿರಬೇಕು. ಅವರ ನಡು ಸಣ್ಣಕಿರಬೇಕು ಮತ್ತು ಅವರ ಮುಖಭಾವ ಪ್ರಶಾಂತತೆ, ತೃಪ್ತಿ ಮತ್ತು ಹರ್ಷೋನ್ಮಾದವನ್ನು ಸೂಚಿಸಬೇಕು.
ಶಿಲ್ಪ ಪ್ರಕಾಶ ಎಂಬ ಶಾಸ್ತ್ರ ಗ್ರಂಥವು ಕಾಳಿಂಗ ಶೈಲಿಯ ದೇವಾಲಯ ನಿರ್ಮಾಣದ ಸಿದ್ಧಾಂತಗಳನ್ನು ಹೊಂದಿದ್ದು, ಈ ಆಕಾಶ ಸುಂದರಿಯರನ್ನು ‘ಆಲಸಾ’ ಎಂದು ವರ್ಣಿಸುತ್ತದೆ. ಇದರಲ್ಲಿ ಆಲಸೆಯರನ್ನು ಸ್ಥಾಪಿಸಲು, ಚಂದ್ರಶಾಲಾ/ಗವಾಕ್ಷ, ಶಿಖರ/ವಿಮಾನ, ಮುಖಸಾಲ ಇಲ್ಲವೇ ಸಭಾಂಗಣಗಳು ಮತ್ತು ಭಿತ್ತಿಗಳು ಸೂಕ್ತ ಎಂದು ನಿರ್ದೇಶಿಸಲಾಗಿದೆ. ದೇಗುಲಗಳ ಅಂಗಳದಲ್ಲಿ ಶೃಂಗಾರಕ್ಕೆ ನಿಂತ ಈ ಆಲಸೆಯರನ್ನು ಅವರ ಗುಣಲಕ್ಷಣಗಳ ಮೇರೆಗೆ ನಿರ್ದಿಷ್ಟವಾದ ಹೆಸರಿನಿಂದಲೇ ಗುರುತಿಸಲಾಗುತ್ತದೆ.
- ಆಲಸಾ – ಆಲಸದಿಂದಿರುತ್ತಾಳೆ
- ತೋರಣ – ಬಾಗಿಲಿಗೆ ಒರಗಿ ನಿಂತಿರುತ್ತಾಳೆ
- ಮುಗ್ಧ – ಅಮಾಯಕಳಂತೆ ಕಾಣುತ್ತಾಳೆ
- ಮಾನಿನಿ – ನೋವನ್ನು ಅನುಭವಿಸುತ್ತಿರುವವಳಂತೆ ಕಂಡುಬರುತ್ತಾಳೆ
- ದಳಮಾಲಿಕಾ – ಬಳ್ಳಿಯನ್ನು ಹಾರದಂತೆ ಹಾಕಿಕೊಳ್ಳುವವಳಂತೆ ನಿಂತಿರುತ್ತಾಳೆ
- ಪದ್ಮಗಂಧಾ – ಕಮಲವನ್ನು ಹಿಡಿದು ಅದರ ಸುಗಂಧವನ್ನು ಆಸ್ವಾದಿಸುತ್ತಿರುತ್ತಾಳೆ
- ದರ್ಪಣಾ – ಕೈಯಲ್ಲಿ ಕನ್ನಡಿಯನ್ನು ಹಿಡಿದಿರುವ ಪರಮಸುಂದರಿ
- ವಿನ್ಯಾಸಾ – ಧ್ಯಾನದಲ್ಲಿ ನಿರತಳಾಗಿರುತ್ತಾಳೆ
- ಕೇತಕೀಭರಣ – ಹೂವುಗಳಿಂದ ಅಲಂಕೃತಳಾಗಿರುತ್ತಾಳೆ
- ಮಾತೃಮೂರ್ತಿ – ಇವಳು ಮಾತೃ ಸ್ವರೂಪಳು
- ಚಾಮರಾ – ಚಾಮರವನ್ನು ಗಾಳಿಯಲ್ಲಿ ಹಾರಿಸುತ್ತಿರುತ್ತಾಳೆ
- ಗುಂಥನಾ – ತನ್ನ ಬೆನ್ನನ್ನು ತೋರಿಸುತ್ತ, ಪರದೆ, ಚಾಮರ ಇಲ್ಲವೇ ಹೂಗಳ ಹಿಂದೆ ಅಡಗಿ ಕೊಂಡಿರುತ್ತಾಳೆ.
- ನರ್ತಕೀ – ನರ್ತನ ಮಾಡುತ್ತಿರುತ್ತಾಳೆ
- ಶುಕಶಂಕಾ – ಗಿಳಿಗಳ ಬಳಿ ಹರಟುತ್ತಿರುತ್ತಾಳೆ
- ನೂಪುರ ಪಾದಿಕಾ – ಅಂದವಾದ ಗೆಜ್ಜೆಗಳನ್ನು ತೊಟ್ಟಿರುತ್ತಾಳೆ
- ಮರ್ದಳಾ – ಚೆಂಡವಾದ್ಯವನ್ನು ನುಡಿಸುತ್ತಿರುತ್ತಾಳೆ
ಆಲಸ ಕನ್ಯಾ
15ನೇ ಶತಮಾನದ ವಾಸ್ತು ಶಾಸ್ತ್ರದ ಗ್ರಂಥವಾದ ಕ್ಷೀರಾರ್ಣವವು, ಕಲಾತ್ಮಕವಾಗಿ ಕೆತ್ತಲ್ಪಟ್ಟ ಅಪ್ಸರೆಯರ ಶಿಲ್ಪಗಳಿಂದ ದೇವಸ್ಥಾನಗಳನ್ನು ಅಲಂಕರಿಸಬೇಕೆಂದು ವಿವರಿಸುತ್ತದೆ. ಪ್ರತಿಯೊಬ್ಬ ಅಪ್ಸರೆಗೂ ತನ್ನದೇ ಆದ ವೈಶಿಷ್ಟ್ಯವಿರುತ್ತದೆ. ಈ ಶಿಲ್ಪಗಳಲ್ಲಿ ಅವರ ವೈಶಿಷ್ಟಗಳೇ ಅವರ ಅನನ್ಯತೆಯ ಗುರುತು. ಈ ಬಗ್ಗೆ ಕೆಲವು ಉದಾಹರಣೆಗಳು ಹೀಗಿವೆ :
ಮೇನಕಾ, ಬಿಲ್ಲುಬಾಣವನ್ನು ಹಿಡಿದು ತನ್ನ ಎಡಗಾಲನ್ನು ಕೊಂಚ ಮೇಲಕ್ಕೆ ಎತ್ತಿ ನಿಂತಿರುತ್ತಾಳೆ. ಲೀಲಾವತಿ, ಪ್ರಣಯ ಲೀಲೆಗಳಿಗೆ ಒಡ್ಡಿಕೊಂಡಿರುವವಳಂತೆ ಅಥವಾ ಅಲಾಸ್ಯವನ್ನು ತೊರೆದು ಉತ್ಸಾಹದಿಂದಿರುವವಳಂತೆ ಕಾಣುತ್ತಾಳೆ. ವಿಧಿಚಿತ್ರ ಎಂಬ ಅಪ್ಸರೆಯನ್ನು, ಒಂದು ಕೈಯಲ್ಲಿ ಕನ್ನಡಿ ಹಿಡಿದು, ಮತ್ತೊಂದು ಕೈಯಲ್ಲಿ ಹಣೆಬೊಟ್ಟು ಇಟ್ಟುಕೊಳ್ಳುತ್ತಿರುವವಳಂತೆ ಕೆತ್ತಲ್ಪಡುತ್ತದೆ. ಸುಂದರಿ, ಸುಂದರವಾಗಿ ನರ್ತಿಸುತ್ತಿರುತ್ತಾಳೆ. ಶುಭಾ, ತನ್ನ ಪಾದದಿಂದ ಮುಳ್ಳನ್ನು ಹೊರತೆಗೆಯುತ್ತಿರುತ್ತಾಳೆ. ಕಮಲದ ದಳಗಳಂತೆ ಕಣ್ಣುಗಳುಳ್ಳ ಹಂಸಾವಳಿಯು, ನಡುವನ್ನು ಕೊಂಚ ಬಗ್ಗಿಸಿ, ಕಾಲ್ಗೆಜ್ಜೆಗಳನ್ನು ಹಾಕಿಕೊಳ್ಳುತ್ತಿರುವಳೋ ಎನ್ನುವಂತೆ ಕಾಣುತ್ತಾಳೆ. ಸರ್ವಕಲಾ, ಚಿನ್ಮುದ್ರೆಯಲ್ಲಿರುವ ವರದಹಸ್ತವನ್ನು ತೋರಿಸುತ್ತ ನಾಟ್ಯ ಭಂಗಿಯಲ್ಲಿ ನಿಂತಿರುತ್ತಾಳೆ. ಕರ್ಪೂರಮಂಜರಿ, ಸ್ನಾನಮಾಡುವಾಗ ನರ್ತಿಸುತ್ತಿರುತ್ತಾಳೆ. ಪದ್ಮನೇತ್ರ, ಕಮಲದ ಕಣ್ಣುಗಳಿರುವವಳು. ಚಿತ್ರಿಣಿ, ತನ್ನ ಎಡಗೈಯನ್ನು ತಲೆಯ ಮೇಲೆ ಇಟ್ಟುಕೊಂಡು ನಾಟ್ಯವಾಡುತ್ತಿರುತ್ತಾಳೆ. ಗಾಂಧಾರಿ, ತನ್ನ ಬಲಗೈಯನ್ನು ಮೇಲಕ್ಕೆ ಎತ್ತಿ ನರ್ತಿಸುತ್ತಿರುವ ವಿಶೇಷವಾದ ಸುಂದರಿ. ದೇವಸಖಾ, ಗಿರ ಗಿರನೆ ತಿರುಗುತ್ತಾ ನಾಟ್ಯವಾಡುತ್ತಿರುತ್ತಾಳೆ. ಗೂಢಶಬ್ದ , ಅಭಯಹಸ್ತವನ್ನು ಪ್ರದರ್ಶಿಸುತ್ತಿದ್ದರೆ, ಅವಳ ಪಕ್ಕದಲ್ಲಿ ಮಗುವೊಂದು ನಿಂತಿರುತ್ತದೆ. ಪುತ್ರವಲ್ಲಭಾಳ ಪಕ್ಕದಲ್ಲೂ ಒಂದು ಪುಟ್ಟ ಮಗುವಿರುತ್ತದೆ. ಗೌರಿ, ಒಂದು ಸಿಂಹವನ್ನು ಕೊಲ್ಲುತ್ತಿರುವವಳಂತೆ ಕಂಡುಬರುತ್ತಾಳೆ. ಮರೀಚಿಕಾ, ಬಿಲ್ಲಿನಲ್ಲಿ ಬಾಣವನ್ನು ಹೂಡಿ ಎಡಗಡೆಗೆ ಗುರಿಯಿಟ್ಟು ನಿಂತಿರತ್ತಾಳೆ. ಚಂದ್ರಾವಳಿ, ಅಂಜಲಿಹಸ್ತವನ್ನು ತೋರಿಸುತ್ತ, ತನ್ನ ಸುಂದರವಾದ ಕಣ್ಣುಗಳಿಂದ ನೇರವಾಗಿ ನೋಡುತ್ತಿರುತ್ತಾಳೆ. ಚಂದ್ರಲೇಖಾಳ ಹಣೆ ಅರ್ಧ ಚಂದ್ರಾಕಾರದಲ್ಲಿರುತ್ತದೆ ಮತ್ತು ಅವಳು ಪತ್ರ ಬರೆಯುತ್ತಿರುತ್ತಾಳೆ. ಸುಗಂಧಾ, ಕೈಯನ್ನು ಚಾಚಿ ಚಂದ್ರನನ್ನು ಹಿಡಿದು ಸುತ್ತು ತಿರುಗುತ್ತಾ ನರ್ತಿಸುತ್ತಿರುತ್ತಾಳೆ. ಮಾನವಿ, ಹೂಮಾಲೆಗಳನ್ನು ಹಿಡಿದು ನರ್ತಿಸುತ್ತಿದ್ದರೆ, ಮನಹಂಸ, ಪ್ರೇಕ್ಷಕರಿಗೆ ತನ್ನ ಬೆನ್ನನ್ನು ತೋರಿಸುತ್ತಾ ನರ್ತಿಸುತ್ತಿರುತ್ತಾಳೆ. ಶತ್ರುಮರ್ಧಿನಿ ಕೈಯಲ್ಲಿ ಚೂರಿಗಳನ್ನು ಹಿಡಿದು ಕುಣಿಯುತ್ತಿರುತ್ತಾಳೆ. ಸ್ವಭಾವ, ಚತುರ್ಭಂಗಿಯಲ್ಲಿ ಒಂದು ಕಾಲನ್ನು ಎತ್ತಿ ನಿಂತು, ಎರಡೂ ಕೈಗಳನ್ನು ಮೇಲಕ್ಕೆ ಎತ್ತಿರುತ್ತಾಳೆ. ಭಾವಚಂದ್ರ, ಯೋಗಮುದ್ರಗಳನ್ನು ಬಳಸುತ್ತ ನರ್ತಿಸುತ್ತಿರುತ್ತಾಳೆ. ಮೃಗಾಕ್ಷಿ ತನ್ನ ಮೈಮಾಟ ಮತ್ತು ಸೌಂದರ್ಯಗಳನ್ನು ಪ್ರದರ್ಶಿಸುತ್ತಾ ನರ್ತಿಸುತ್ತಿರುತ್ತಾಳೆ. ಊರ್ವಶಿ, ಅಸುರನನ್ನು ಕೊಂದು, ಅವನ ಶಿಕೆಯನ್ನು ಹಿಡಿದು ಎಳೆದು ತರುತ್ತಿರುವವಳಂತೆ ಕಾಣುತ್ತಾಳೆ. ರಂಭಾ, ತನ್ನ ಬಲಗಾಲನ್ನು ಎತ್ತಿ ನಾಟ್ಯವಾಡುತ್ತ ಎರಡು ಕೈಗಳಲ್ಲೂ ಚೂರಿಗಳನ್ನು ಹಿಡಿದಿರುತ್ತಾಳೆ. ಮಂಜುಘೋಷ, ಎರಡು ಕೈಗಳಲ್ಲೂ ಖಡ್ಗವನ್ನು ಹಿಡಿದು ಸುತ್ತುತ್ತಾ ನರ್ತಿಸುತ್ತಿರುತ್ತಾಳೆ. ಜಯ, ತನ್ನ ಶಿರದ ಮೇಲೆ ನೀರಿನ ಮಡಿಕೆಯನ್ನು ಹೊತ್ತು ನರ್ತಿಸಿದರೆ, ಮೋಹಿನಿ, ತನ್ನ ಪ್ರಿಯಕರನನ್ನು ಅಪ್ಪಿಕೊಂಡು ನರ್ತಿಸುತ್ತಿರುತ್ತಾಳೆ. ಚಂದ್ರವಕ್ತ್ರ ಒಂದು ಕಾಲನ್ನು ಎತ್ತಿ ಮೋಹಕವಾಗಿ ನರ್ತಿಸಿದರೆ, ತಿಲೋತ್ತಮಾ, ಮಂಜೀರಾ ಅಥವ ಪುಷ್ಪಬಾಣವನ್ನು ಹಿಡಿದು ನರ್ತಿಸುವವಳಂತೆ ಕಾಣುತ್ತಾಳೆ.
ಸಮರಾಂಗಣ ಸೂತ್ರದಾರ (ಸಾ.ಶ 1000-1055) ಎಂಬ ಗ್ರಂಥವು ಉತ್ತರ ಭಾರತದ ನಗರ ಶೈಲಿಯ ದೇವಸ್ಥಾನ ನಿರ್ಮಾಣದ ವಾಸ್ತು ಶಾಸ್ತ್ರದ ಬಗ್ಗೆ ಮಾಹಿತಿ ಒದಗಿಸುವುದಲ್ಲದೆ, ಮಾಳವ ಪ್ರದೇಶದ ದೇವಸ್ಥಾನಗಳಿಗೆ ಒತ್ತುಕೊಡುತ್ತ ವಿಶೇಷವಾದ ಮಾಹಿತಿ ನೀಡುತ್ತದೆ. ಈ ಗ್ರಂಥದ ಕರ್ತ, ಧಾರ್ ನ ಪರಮಾರ ವಂಶದ ರಾಜ, ಭೋಜನು. ಇವನು ಈ ಗ್ರಂಥದಲ್ಲಿ ಹಲವಾರು ವಿಷಯಗಳ ಬಗ್ಗೆ ಮಾಹಿತಿಯನ್ನು ಸೂಚಿಸಿದ್ದಾನೆ. ಉದಾಹರಣೆಗೆ, ತೋರಣ ವನ್ನು ಮಕರಗಳಿಂದಲೂ, ಗಜಮುಖಗಳಿಂದಲೂ (ಆನೆಯ ಶಿರಗಳನ್ನು), ಎಲೆಗಳಿಂದಲೂ ಮತ್ತು ಅಪ್ಸರೆಯರಿಂದಲೂ ಅಲಂಕರಿಸಬೇಕು ಎನ್ನುವುದಾಗಿ ಹೇಳಿದ್ದಾನೆ. ವಿಮಾನ, ಸ್ತಂಭ ಮತ್ತು ಜಂಘಾ ಭಾಗದ ಭೂಮಿಯನ್ನು, ಹರ್ಷೋಲ್ಲಾಸದಿಂದ ನಾಟ್ಯವಾಡುತ್ತಿರುವ ಅಪ್ಸರೆಯರಿಂದಲೂ ಮತ್ತು ಸಿದ್ಧ, ಗಂಧರ್ವ, ಯಕ್ಷ, ದೇವ ಮತ್ತು ಕಿನ್ನರರಂತಹ ಚೈತನ್ಯ ಭರಿತ ಮತ್ತು ಸಂತೋಷವನ್ನುಂಟು ಮಾಡುವ ಪ್ರತಿಮೆಗಳಿಂದಲೂ ಅಲಂಕರಿಸಬೇಕು ಎಂದು ಸೂಚಿಸುತ್ತಾನೆ.
ಅಪ್ಸರೆಯರು ಆಕಾಶ ಸುಂದರಿಯರು. ದೇವಾನುದೇವತೆಗಳಿಂದ ಅನುಗ್ರಹಿಸಲ್ಪಟ್ಟವರು, ಅವರ ಪ್ರೀತಿಪಾತ್ರರು. ಸೃಷ್ಟಿಯ ಸಕಲ ಹರಿವುಗಳಲ್ಲೂ ಸ್ವತಂತ್ರವಾಗಿ ಹರಿದಾಡುವ ಚೈತನ್ಯ ಚಿಲುಮೆಗಳು. ಅರವತ್ನಾಲ್ಕು ವಿದ್ಯೆಗಳಲ್ಲಿಯೂ ಪಾರಂಗತರು ಮತ್ತು ಆ ವಿದ್ಯೆಗಳನ್ನು ಬಳಸುತ್ತ ಎಲ್ಲರ ಮನ ತಲ್ಲಣಿಸುವ ಸೃಜನಶೀಲ ಸುಂದರಿಯರು. ಇವರ ಸುತ್ತಲು ಹೆಣೆದುಕೊಂಡಿರುವ ನಿಗೂಢತೆ, ಮೋಹಕತೆ ಮತ್ತು ಮಾಯಾಜಾಲಗಳು ಇವರನ್ನು ಲಾವಣ್ಯವತಿಯರನ್ನಾಗಿ, ರಂಜಕವಾಗಿ, ಮನದುಂಬುವ ವಿನೋದಿನಿಯರನ್ನಾಗಿ ಚಿತ್ರಿಸುತ್ತದೆ.
(This is a translation of an article written in English by Shalini Mahapatra.)
Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.