close logo

ಅಪ್ಸರೆಯರು ಭಾಗ 8 : ಅಪ್ಸರೆ ಪುಂಜಿಕಸ್ಥಳ ಮತ್ತು ದೂರ್ವಾಸರ ಶಾಪ

ನಮ್ಮ ಪುರಾಣ ಪುಣ್ಯ ಕಥೆಗಳಲ್ಲಿ ಅಪ್ಸರೆಯರು ವಿವಿಧ ಪಾತ್ರಗಳನ್ನು ವಹಿಸಿಕೊಳ್ಳುತ್ತಿದ್ದರು. ಇಂದ್ರಸಭೆಯ ನೃತ್ಯಾಂಗನೆಯರಾದ ಅಪ್ಸರೆಯರು ಅದೇ ಇಂದ್ರನ ಆದೇಶವನ್ನು ಅನುಸರಿಸುತ್ತ ಋಷಿಗಳ ತಪೋಭಂಗ ಮಾಡುವ ಮಾಯಾ-ಮೋಹಿನಿಯರಾಗಿಯೂ ನೇಮಕಗೊಳ್ಳುತ್ತಿದ್ದರು. ದೇವೆತೆಗಳ ಸೇವೆಗೆಂದೇ ತಮ್ಮನ್ನು ಮುಡುಪಾಗಿರಿಸಿಕೊಳ್ಳುವ ಈ ಶಾಶ್ವತ ಕನ್ಯೆಯರು ಮನುಕುಲದ ಮಿತಿ ಮತ್ತು ಆಕಾಂಕ್ಷೆಗಳಿಂದ ಮುಕ್ತರು. ಕೆಲವೊಮ್ಮೆ ದೇವತೆಗಳ ಅಥವಾ ಋಷಿಗಳ ಕೋಪಕ್ಕೀಡಾದ ಆಕಾಶಾಸುಂದರಿಯರು ಶಾಪವಿಮೋಚನೆಗಾಗಿ ಭೂಮಿಗೆ ಬರಬೇಕಾಗುತ್ತದೆ. ಅಪ್ಸರೆ ಪುಂಜಿಕಸ್ಥಳೆಯ ಕಥೆಯೂ ಹೀಗೆಯೇ. 

ಇಂದ್ರಪುರ ನಿವಾಸಿನಿಯಾದ ಪುಂಜಿಕಸ್ಥಳೆ, ಅತಿಲೋಕ ಸುಂದರಿ ಮತ್ತು ಸರಿಸಮವಿಲ್ಲದ ಪ್ರತಿಭಾವಂತೆ, ಆದ್ದರಿಂದ ಅವಳಲ್ಲಿ ಸ್ವಲ್ಪ ಅಹಂಭಾವವೂ ಸಹ ಮೈದಾಳಿತ್ತು. ಕೆಲವು ದಂತಕಥೆಗಳ ಪ್ರಕಾರ, ಒಮ್ಮೆ ಋಷಿ ದೂರ್ವಾಸರು ಇಂದ್ರನನ್ನು ಭೇಟಿ ಮಾಡಲು ಇಂದ್ರಪುರಿಗೆ ಆಗಮಿಸಿ ಇಂದ್ರ ಮತ್ತು ಅವನ ಸಹಚರರೊಡನೆ ಗಂಭೀರವಾದ ಚರ್ಚೆಯಲ್ಲಿ ನಿರತರಾಗಿರುವಾಗ ಪುಂಜಿಕಸ್ಥಳೆ ಅತ್ತಿಂದಿತ್ತ ಓಡಾಡುತ್ತಿರುತ್ತಾಳೆ. ಇದರಿಂದಾಗಿ ದೂರ್ವಾಸರಿಗೆ ಕಸಿವಿಸಿಯಾಗುತ್ತದೆ. ಇನ್ನು ಕೆಲವೆಡೆ ಇದೇ ಸಂದರ್ಭದಲ್ಲಿ ಪುಂಜಿಕಸ್ಥಳೆ 

ದೂರ್ವಾಸರನ್ನು ನೋಡಿ ನಿರಂಕುಶವಾಗಿ ನಗುತ್ತಿರುತ್ತಾಳೆ ಎಂದು ಸಹ ಹೇಳಲಾಗಿದೆ.  ಅವಳನ್ನು ಗಮನಿಸುತ್ತಿದ್ದ ದೂರ್ವಾಸರ ಕ್ರೋಧ ಕೆರಳಿ ತಟ್ಟನೆ ಪುಂಜಿಕಸ್ಥಳೆಯು ಭೂಮಿಯ ಮೇಲೆ ವಾನರ ಜನ್ಮ ಪಡೆಯುವುದಾಗಿ ಶಪಿಸಿಬಿಡುತ್ತಾರೆ. ಕೂಡಲೆ ಪುಂಜಿಕಸ್ಥಳೆಗೆ ತನ್ನ ಅಚಾತುರ್ಯದ ಅರಿವಾಗಿ ನಾಚಿಕೆಯಾಗುತ್ತದೆ. ತಕ್ಷಣ ಅವಳು ದೂರ್ವಾಸರಲ್ಲಿ ಕ್ಷಮೆಯಾಚಿಸುತ್ತಾಳೆ, ಅವರಲ್ಲಿ  ತನ್ನ ಶಾಪವಿಮೋಚನೆಯ ಉಪಾಯವನ್ನು ಬೇಡುತ್ತ  ಆಕ್ರಂದಿಸುತ್ತಾಳೆ. ಅವಳ ರೋಧನವನ್ನು ಕಂಡು ಮರುಕಗೊಂಡ ದೂರ್ವಾಸರು ಅವಳಲ್ಲಿ ಕರುಣೆ ತೋರಿ, ಪುಂಜಿಕಸ್ಥಳೆಯು ಭೂಮಿಯ ಮೇಲೆ ಅತೀವ ಬಲಶಾಲಿಯಾದ ವಾನರರಾಜನನ್ನು ವರಿಸಿ, ಶ್ರೀ ರಾಮನ ಪರಮಭಕ್ತನಾಗುವ ಮಹಾಬಲಶಾಲಿಯಾದ ಮಗನನ್ನು ಪಡೆಯುವುದಾಗಿ ಹೇಳಿ ಅವಳನ್ನು ಸಮಾಧಾನ ಪಡಿಸುತ್ತಾರೆ. 

ವಾಲ್ಮೀಕಿ ಮಹರ್ಷಿಗಳು ರಾಮಾಯಣದ ಕಿಷ್ಕಿಂಧಾ ಕಾಂಡದಲ್ಲಿ ಜಾಂಬವಂತನ ಮೂಲಕ ಪುಂಜಿಕಸ್ಥಳೆಯನ್ನು  ಸವಿಸ್ತಾರವಾಗಿ ಪರಿಚಯಿಸುತ್ತಾರೆ.

विख्याता त्रिषु लोकेषु रूपेणा अप्रतिमा भुवि ।

अभिशापात् अभूत् तात कपित्वे काम रूपिणी ॥ ४-६६-९

ವಿಖ್ಯಾತಾ ತ್ರಿಷು ಲೋಕೇಷು ರೂಪೇಣ ಅಪ್ರತಿಮಾ ಭುವಿ |

ಅಭಿಶಾಪಾತ್ ಅಭೂತ್ ತಾತ ಕಪಿತ್ವೇ ಕಾಮ ರೂಪಿಣಿ || 4-66-9

ಅರ್ಥ  :  ಪ್ರಿಯ ಹನುಮಂತನೇ (ಕೇಳು), ಯಾರು ಮೂರು ಲೋಕಗಳಲ್ಲಿಯೂ ಅಪ್ರತಿಮ ಸುಂದರಿಯೆಂದು ಗುರುತಿಸಲ್ಪಡುತ್ತಿದ್ದಳೋ ಅವಳು ಭೂಮಿಯ ಮೇಲೆ ತನ್ನ ಇಚ್ಛೆಯಂತೆ ರೂಪವನ್ನು ಬದಲಾಯಿಸಬಲ್ಲ ವಾನರಳಾಗಿ ಜನ್ಮ ಪಡೆಯುವ ಶಾಪಕ್ಕೀಡಾಗುತ್ತಾಳೆ. 

दुहिता वानर इन्द्रस्य कुंजरस्य महात्मनः ।

मानुषम् विग्रहम् कृत्वा रूप यौवन शालिनी ॥ ४-६६-१०

विचित्र माल्य आभरणा कदाचित् क्षौम धारिणी ।

अचरत् पर्वतस्य अग्रे प्रावृड् अंबुद सन्निभे ॥ ४-६६-११

ದುಹಿತಾ ವಾನರ ಇಂದ್ರಸ್ಯ ಕುಂಜರಸ್ಯ ಮಹಾತ್ಮನಃ |

ಮಾನುಷಂ ವಿಗ್ರಹಂ ಕೃತ್ವಾ ರೂಪ ಯೌವನ ಶಾಲಿನೀ || 4-66-10

ವಿಚಿತ್ರ ಮಾಲ್ಯ ಆಭರಣ ಕದಾಚಿತ್ ಕ್ಷೌಮ ಧಾರಿಣೀ |

ಅಚರತ್ ಪರ್ವತಸ್ಯ ಅಗ್ರೇ ಪ್ರಾವೃಡ್ ಅಂಬುದ ಸನ್ನಿಭೇ || 4-66-11

ಅರ್ಥ : ಅವಳು ಕುಂಜರ ಎಂಬ ವಾನರನ ಮಗಳಾಗಿ ಜನ್ಮ ತಾಳಿ, ಮಾನವ ದೇಹವನ್ನು ಧರಿಸಿ ಹೂಮಾಲೆಗಳಿಂದಲೂ ಮತ್ತು ಅಮೋಘವಾದ ವಸ್ತ್ರಾಭರಣಗಳಿಂದಲೂ ಅಲಂಕೃತಳಾಗಿದ್ದಳು . ಅವಳಲ್ಲಿ ಸೌಂದರ್ಯ ಮತ್ತು ಉದಾತ್ತತೆಯ ಅಮೋಘ ಸಮಾಗಮವಿತ್ತು. ಅವಳು, ಮಳೆಗಾಲದಲ್ಲಿ ಬೆಟ್ಟದ ಅಂಚಿನಲ್ಲಿ  ಕಾಣುವ ಕರಿಮೋಡ ಮತ್ತು ಮಿಂಚಿನ ಜೋಡಿಯಂತೆ ಕಂಡುಬರುತ್ತಿದ್ದಳು. 

ಹೀಗೇ ಮುಂದುವರೆಯುತ್ತ, ಜಾಂಬವಂತನು  ಪುಂಜಿಕಸ್ಥಳೆ  ಮತ್ತು ಸುಮೇರು ರಾಜ್ಯವನ್ನು ಆಳುತ್ತಿದ್ದ ವಾನರ ವೀರ, ಕೇಸರಿ ಮಹಾರಾಜನ ವಿವಾಹವನ್ನು ವರ್ಣಿಸುತ್ತಾನೆ.  

अप्सर अप्सरसाम् श्रेष्ठा विख्याता पुंजिकस्थला ।

अंजना इति परिख्याता पत्नी केसरिणो हरेः ॥ ४-६६-८

ಅಪ್ಸರ ಅಪ್ಸರಸಾಂ ಶ್ರೇಷ್ಟಾ ವಿಖ್ಯಾತಾ ಪುಂಜಿಕಸ್ಥಳಾ  |

ಅಂಜನಾ ಇತಿ ಪರಿಖ್ಯಾತಾ ಪತ್ನೀ ಕೇಸರಿಣೋ ಹರೇಃ || 4-66-8

ಅರ್ಥ :  ಅಪ್ಸರೆಯರ ಪೈಕಿ ಬಹಳ ಶ್ರೇಷ್ಠವಾದ ಅಪ್ಸರೆ, ಪುಂಜಿಕಸ್ಥಳೆ. (ಭೂಮಿಯ ಮೇಲೆ) ಅವಳು ಅಂಜನಾ ಎಂಬ ಹೆಸರಿನಿಂದ ಪ್ರಖ್ಯಾತಳಾಗಿ ವಾನರ ವೀರ, ಕೇಸರಿಯನ್ನು ವರಿಸುತ್ತಾಳೆ. 

ಇತ್ತ ಅಯೋಧ್ಯೆಯಲ್ಲಿ ದಶರಥಮಹಾರಾಜನು ಪುತ್ರಪ್ರಾಪ್ತಿಗಾಗಿ ಯಜ್ಞವನ್ನು ಕೈಗೊಳ್ಳುತ್ತಾನೆ. ಸಂತೃಪ್ತನಾದ ಅಗ್ನಿದೇವನು ದಶರಥ ಮಹಾರಾಜನಿಗೆ ಒಂದು ಬಟ್ಟಲು ಪಾಯಸಾನ್ನವನ್ನು ಕೊಟ್ಟು ತನ್ನ ರಾಣಿಯರು ಅದನ್ನು ಸ್ವೀಕರಿಸಿದ್ದಲ್ಲಿ ಅವರಲ್ಲಿ ತನ್ನ ವಂಶೋದ್ಧಾರಕರ ಜನನವಾಗುವುದಾಗಿ  ಆಶೀರ್ವದಿಸುತ್ತಾನೆ. ರಾಜನು ತನ್ನ ಮೂವರು ಮಡದಿಯರ ಪೈಕಿ ಕೌಸಲ್ಯೆ ಮತ್ತು ಕೈಕೇಯಿಗೆ ಪಾಯಸವನ್ನು ಹಂಚಿ ಇನ್ನೇನು ಸುಮಿತ್ರೆಗೆ ಪಾಯಸವನ್ನು ನೀಡಬೇಕು ಒಂದು ಪಕ್ಷಿಯು ಬಂದು ಪಾಯಸದ ಬಟ್ಟಲನ್ನು ಅವನ ಕೈಯಿಂದ ಕೆಳಚಿಕೊಂಡು ಹಾರಿಹೋಗುತ್ತದೆ. ಇದನ್ನು ಕಂಡ ಹಿರಿಯ ರಾಣಿಯರು ಸುಮಿತ್ರೆಯೊಡನೆ ತಮ್ಮ ಪಾಯಸವನ್ನು ಹಂಚಿಕೊಳ್ಳುತ್ತಾರೆ. ಆದ್ದರಿಂದಲೇ ಸುಮಿತ್ರೆ ಅವಳಿ ಮಕ್ಕಳನ್ನು ಪಡೆಯುತ್ತಾಳೆ. ಪಾಯಸದ ಬಟ್ಟಲನ್ನು ತನ್ನ ಕೊಕ್ಕಿನಲ್ಲಿ ಹಿಡಿದು ಹಾರಿದ ಪಕ್ಷಿ ಬೇರಾರು ಅಲ್ಲ, ಒಬ್ಬ ಶಾಪಗ್ರಸ್ತ ಅಪ್ಸರೆ, ಸುವರ್ಚಲೆ.     

ಸುವರ್ಚಲೆ ಕೊಂಚ ಚಂಚಲ ಸ್ವಭಾವದವಳು. ಅವಳ ಹಠಾತ್ ಪ್ರವೃತ್ತಿಯು ಒಮ್ಮೆ ಬ್ರಹ್ಮ ದೇವನ ಕೋಪ ಕೆರಳಿಸಿ, ಆಕೆ ಭೂಮಿಯ ಮೇಲೆ ಪಕ್ಷಿಯ ಜನ್ಮ ಪಡೆಯಲೆಂದು ಶಪಿಸಿಬಿಡುತ್ತಾನೆ. ಸುವರ್ಚಲೆಗೆ ತನ್ನ ತಪ್ಪಿನ ಅರಿವಾಗಿ, ಬ್ರಹ್ಮ ದೇವನಲ್ಲಿ ಕ್ಷಮೆ ಯಾಚಿಸಿ ಪರಿಹಾರ ಕೇಳಿಕೊಳ್ಳುತ್ತಾಳೆ. ಆಗ ಬ್ರಹ್ಮ ದೇವನು ಅವಳ ಶಾಪ ವಿಮೋಚನೆಯ ಉಪಾಯವನ್ನು ಸೂಚಿಸುತ್ತ, ದಶರಥನಿಗೆ ಅಗ್ನಿದೇವನು ಪ್ರಸಾದಿಸಿದ ಪಾಯಸವನ್ನು ಸ್ಪರ್ಶಿಸಿದ್ದಲ್ಲಿ ಅವಳ ಶಾಪ ವಿಮೋಚನೆಯಾಗುವುದಾಗಿ ಹೇಳುತ್ತಾರೆ. ಪಕ್ಷಿ ರೂಪದಲ್ಲಿದ್ದ  ಸುವರ್ಚಲೆ ಪಾಯಾಸನ್ನಾವನ್ನು ಸ್ಪರ್ಶಿಸಿದ ತಕ್ಷಣವೇ ಅಪ್ಸರೆಯಾಗಿ ಪರಿವರ್ತಿಸುತ್ತಾಳೆ. ಆ ಸಂದರ್ಭದಲ್ಲಿ ಸ್ವಲ್ಪ ಪಾಯಸವು ಅವಳ ಕೈಯಿಂದ ಜಾರಿಬಿಡುತ್ತದೆ. ಆಗ ಮಹಾಶಿವನ ಆಜ್ಞೆಯನ್ನು ಪಾಲಿಸುತ್ತ, ವಾಯುದೇವನು ಆ ಪಾಯಸವನ್ನು ಅಂಜನಾ ಮತ್ತು ಕೇಸರಿ ದಂಪತಿಗಳ ಬಳಿ ತೇಲಿಸಿಕೊಂಡು ಬರುತ್ತಾನೆ. 

ವಾಯುದೇವನ ಭಕ್ತೆಯಾದ ಅಂಜನೆ ತನ್ನಲ್ಲಿ ಒಬ್ಬ ಪುತ್ರರತ್ನನ ಜನನವಾಗಲೆಂದು ಬೇಡಿಕೊಳ್ಳುತ್ತಿರುತ್ತಾಳೆ. ಪಾಯಸವನ್ನು  ಗಾಳಿಯಲ್ಲಿ ತೇಲಿಸಿಕೊಂಡು ಬಂದ ವಾಯುದೇವನು ಅಂಜನಾಳನ್ನು ಕುರಿತು, ತಾನು ತಂದಂತಹ ಪಾಯಸದಲ್ಲಿ ತನ್ನ ದೈವೀ ಗುಣಗಳಿರುವುದಾಗಿ ಅವಳು ಅದನ್ನು ಸ್ವೀಕರಿಸಬೇಕಾಗಿ ನಿರ್ದೇಶಿಸುತ್ತ ಅಶರೀರ ವಾಣಿಯನ್ನು ನುಡಿಯುತ್ತಾನೆ. 

मनसा अस्मि गतो यत् त्वाम् परिष्वज्य यशस्विनि ।

वीर्यवान् बुद्धि संपन्नः पुत्रः तव भविष्यति ॥ ४-६६-१८

ಮನಸಾ ಅಸ್ಮಿ ಗತೋ ಯತ್ ತ್ವಾಂ ಪರಿಷ್ವಜ್ಯ ಯಶಸ್ವಿನಿ |

ವೀರ್ಯವಾನ್ ಬುದ್ಧಿ ಸಂಪನ್ನಃ ಪುತ್ರಃ ತವ ಭವಿಷ್ಯತಿ || 4-66-18

ಅರ್ಥ :  ಯಾವ ಉದ್ದೇಶಪೂರ್ವಕವಾಗಿ ನಾನು ನಿನ್ನಲ್ಲಿ ಅತಿಸೂಕ್ಷ್ಮವಾಗಿ ಸಮ್ಮಿಲಿತನಾದೆನೋ ಆ ಉದ್ದೇಶ ಸಾಧಕವಾಗಿ ನಿನ್ನಲ್ಲಿ ಬಹಳ ವೀರನಾದ ಮತ್ತು ಬುದ್ಧಿವಂತನಾದ ಪುತ್ರನು ಜನಿಸುತ್ತಾನೆ. 

ವಾಯುದೇವನ ಆಶೀರ್ವಾದದೊಂದಿಗೆ ಆಂಜನಾ ಒಬ್ಬ ಗಂಡು ಮಗುವಿನ ತಾಯಿಯಾಗುತ್ತಾಳೆ. ಅವನೇ ಆಂಜನೇಯ, ವಾಯುಪುತ್ರ ಮತ್ತು ಕೇಸರಿ ನಂದನ ಎಂದು ಕರೆಯಲ್ಪಡುವ ಹನುಮಂತನು. 

महासात्त्वो महातेज महाबल पराक्रमः ।

लंघने प्लवने चैव भविष्यति मया समः ॥ ४-६६-१९

ಮಹಾಸತ್ತ್ವೋ ಮಹಾತೇಜ ಮಹಾಬಲ ಪರಾಕ್ರಮಃ |

ಲಕ್ಷನೇ ಪ್ಲವನೇ ಚೈವ ಭವಿಷ್ಯತಿ ಮಯಾ ಸಮಃ || 4-66-19

ಅರ್ಥ :  ‘ನಿನ್ನ ಮಗನು ಎಲ್ಲರನ್ನು ಬೆರಗುಗೊಳಿಸುವ ಮಾಹಾ ತೇಜಸ್ವಿ, ಮಹಾ ಬಲಶಾಲಿ ಮತ್ತು ಪರಾಕ್ರಮಿಯಾಗುತ್ತಾನೆ. ಹಾರುವುದರಲ್ಲೂ ಮತ್ತು ಎಗರುವುದರಲ್ಲೂ ನನ್ನ  ಸಮಾನಾಗಿರುತ್ತಾನೆ .’ ಎಂದು ವಾಯುದೇವನು ಅಂಜನೆಗೆ ತಿಳಿಸುತ್ತಾನೆ.

ಋಷಿ ದೂರ್ವಾಸರ ಶಾಪವು ವರವಾಗಿ ಪರಿವರ್ತಿಸಿದ್ದು ಹೀಗೆ. ಆಂಜನೇಯನ ಬುದ್ಧಿಬಲ, ಬಾಹುಬಲ ಮತ್ತು ರಾಮಭಕ್ತಿ  ರಾಮಾಯಣದ ಅತಿಮುಖ್ಯವಾದ ಅಂಶ. 

ಹನುಮಂತನ ಜನನವಾದ ಬಳಿಕ ವಾನರ ರಾಣಿ ಅಂಜನೆ, ಅಪ್ಸರೆ ಪುಂಜಿಕಸ್ಥಳೆ ಆಗಿ ಮಾರ್ಪಾಡಾಗಿ, ಇಂದ್ರಪುರಿಗೆ ತೆರಳಿದಳು. ಆದರೆ, ಇಂದಿಗೂ ಭೂಲೋಕದಲ್ಲಿ ಆಂಜನೇಯನ ತಾಯಿ ಅಂಜನೆ ಎಂದು ಪೂಜಾರ್ಹಳಾಗಿದ್ದಾಳೆ.

(This is a translation of  an article written in English by Shalini Mahapatra.)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply