ಭಗವದ್ಗೀತೆಯನ್ನು ಏಕೆ ಓದಬೇಕು? ಈ ಪ್ರಶ್ನೆ ಸಾಧಾರಣವಾಗಿ ಏಳುವುದುಂಟು. ಭಗವದ್ಗೀತೆಯನ್ನು ಇಳಿ ವಯಸ್ಸಿನಲ್ಲಿ ಓದಬೇಕಲ್ಲವೆ? ಲೋಕವನ್ನು ತ್ಯಜಿಸಿ, ಕಾವಿಯುಟ್ಟ ಸನ್ಯಾಸಿಗಳಲ್ಲವೆ, ಗೀತೆಯನ್ನು ಓದಬೇಕಾದವರು? ಮದುವೆ ಮುಂಜಿ ಆಗಿ, ಹೆಂಡತಿ ಮಕ್ಕಳ ಜವಾಬ್ದಾರಿ ಹೊತ್ತ, ಆಫೀಸು ಕಛೇರಿಗಳಲ್ಲಿ ದುಡಿಯುವ ಗೃಹಸ್ಥರು ಗೀತೆಯನ್ನು ನಿಭಾಯಿಸುವುದಾದರೂ ಹೇಗೆ? ಈ ರೀತಿಯ ಅನೇಕ ಪ್ರಶ್ನೆಗಳು ಸರ್ವೇಸಾಮಾನ್ಯ.
ನಿಜವೆಂದರೆ, ಭಗವದ್ಗೀತೆಯನ್ನು “ಓದುವುದು” ಎನ್ನುವುದೇ ತಪ್ಪು. ನಾವು ಕಾದಂಬರಿಯನ್ನು ಓದುತ್ತೇವೆ. ವೃತ್ತಪತ್ರಿಕೆಯನ್ನು ಓದುತ್ತೇವೆ. ಆದರೆ ಭಗವದ್ಗೀತೆ ಓದುವ ವಿಷಯವಲ್ಲ. ಭಗವದ್ಗೀತೆಯ ಅಧ್ಯಯನ ಮಾಡಬೇಕು. ಓದುವುದಲ್ಲ. ಭಗವದ್ಗೀತೆಯ ಅಧ್ಯಯನಕ್ಕೂ ಕ್ರಮವಿದೆ. ಈ ಏಕೆ, ಹೇಗೆಗಳನ್ನು ಪರಿಶೀಲಿಸೋಣ.
ಡಿ.ವಿ.ಜಿ. ಹೇಳುವಂತೆ ಭಗವದ್ಗೀತೆ ಜೀವನಧರ್ಮಯೋಗ. ಮನುಷ್ಯನಾದವನು ಜೀವನವನ್ನು ಹೇಗೆ ನಡೆಸಬೇಕು ಎನ್ನುವುದರ ಕೈಪಿಡಿ ಭಗವದ್ಗೀತೆ. ಜೀವನವನ್ನು ಹೇಗೆ ನಡೆಸಬೇಕು ಎನ್ನುವುದನ್ನು ಜೀವನದ ಕೊನೆಯಲ್ಲಿ ಕಲಿಯುವುದು ಬುದ್ಧಿವಂತಿಕೆಯೆ? ಇಂಜಿನಿಯರಾದವನು ಸೇತುವೆಯನ್ನು ಕಟ್ಟಿದ ನಂತರ ಇಂಜಿನಿಯರಿಂಗ್ ಓದಿದರೆ ಆಗುತ್ತದೆಯೆ? ಹಾಗೆ ಕಟ್ಟಿದ ಸೇತುವೆಯ ಮೇಲೆ ಓಡಾಡುವುದು ಯೋಗ್ಯವೆ? ಅಲ್ಲ! ಇಂಜಿನಿಯರಿಂಗ್ ಓದಿ ನಂತರ ಕಟ್ಟಿದ ಸೇತುವೆ ಸುಭದ್ರವಾಗಿರುವಂತೆಯೇ, ಎಷ್ಟು ಬೇಗ ಭಗವದ್ಗೀತೆಯ ಅಧ್ಯಯನವನ್ನು ಪ್ರಾರಂಭಿಸುತ್ತೇವೆಯೋ, ಜೀವನವನ್ನು ಅಷ್ಟೇ ಸುಗಮವಾಗಿ ಸಾಗಿಸಬಹುದು. ಹಾಗೆಂದು, ಅಯ್ಯೋ! ನನಗಾಗಲೇ ವಯಸ್ಸಾಯಿತು, ಗೀತೆಯ ಅಧ್ಯಯನ ಮಾಡದೆಯೇ ಕಾಲ ವ್ಯಯವಾಯಿತು ಎಂದು ತಲೆಯ ಮೇಲೆ ಕೈಯಿಟ್ಟು ಕೂರಬೇಕಾಗಿಲ್ಲ. ಜಬ್ ಜಾಗೋ ತಬ್ ಸವೆರಾ ಎನ್ನುವಂತೆ ಅರಿವು ಮೂಡಿದಾಗ ಬೆಳಗಾಯಿತು ಕೃತಜ್ಞರಾಗಬೇಕು.
ಗೀತೆಯನ್ನು ಸಣ್ಣ ವಯಸ್ಕರಿಂದ ಹಿಡಿದು ಇಳಿ ವಯಸ್ಸಿನವರೂ ಅಧ್ಯಯನ ಮಾಡಬಹುದು. ಇದಕ್ಕೆ ಭಗವದ್ಗೀತೆಯಲ್ಲಿಯೇ ನಿದರ್ಶನವಿದೆ. ಗೀತೆಯನ್ನು ಶ್ರೀಕೃಷ್ಣ ಅರ್ಜುನನಿಗೆ ಬೋಧಿಸಿದ. ದಿವ್ಯದೃಷ್ಟಿಯಿಂದ ಸಂಜಯ ಅದನ್ನು ಕೇಳುವಂತಾಯಿತು. ಸಂಜಯನ ವರದಿಯಿಂದ ಧೃತರಾಷ್ಟ್ರನೂ ಗೀತೆಯನ್ನು ಕೇಳುವುದು ಸಾಧ್ಯವಾಯಿತು. ಧೃತರಾಷ್ಟ್ರ ಅರಸನಾಗಿದ್ದವನು ಇಳಿ ವಯಸ್ಸಿನವನು, ಸುಮಾರು ನಿವೃತ್ತಾವಸ್ಥೆ. ಅರ್ಜುನ ಮಧ್ಯವಯಸ್ಕ (ಮಹಾಭಾರತ ಕಾಲದ ಎಣಿಕೆಯಲ್ಲಿ), ಯೋಧ. ಸಂಜಯ ಸಾರಥಿ (ಸೂತ). ಭಗವದ್ಗೀತೆ ಇವರಲ್ಲರಿಗೂ ಅನ್ವಯಿಸಿತು. ಹಾಗಿರುವಾಗ, ವಯಸ್ಸು, ಸಾಮಾಜಿಕ ಪರಿಸ್ಥಿತಿ, ಎಲ್ಲವನ್ನೂ ಮೀರಿದುದಲ್ಲವೆ? ನಮ್ಮೆಲ್ಲರಿಗೂ ಅನ್ವಯಿಸುವುದಲ್ಲವೆ?
ವೈದ್ಯ ಮಿತ್ರರೊಬ್ಬರಿಗೆ ಭಗವದ್ಗೀತೆಯ ಅಧ್ಯಯನ ಮಾಡುವಂತೆ ಕೋರಿದೆ. ಅವರೂ ‘ಹೂಂ’ ಎಂದು ಗುರುಗಳನ್ನು ಸಂಧಿಸಿದರು. ಅವರ ಸಂಭಾಷಣೆ ಹೀಗಿತ್ತು.
‘ಭಗವದ್ಗೀತೆಯನ್ನು ಕಲಿಯಲು ಎಷ್ಟು ಸಮಯ ಬೇಕಾಗುತ್ತದೆ?’ ವೈದ್ಯ ಮಿತ್ರರು ಕೇಳಿದರು.
‘ಒಂದು ಜೀವಕಾಲ ಸಾಲದು,’ ಗುರುಗಳು ಹೇಳಿದರು.
‘ಆದರೂ… ಒಂದು ಬಾರಿ ಓದಲು ಎಷ್ಟು ಸಮಯವಾಗುತ್ತದೆ?’ ವೈದ್ಯರು ಬಿಡಲಿಲ್ಲ.
‘ಒಂದು ಅಧ್ಯಯನ ಮಾಡಲು ಎರಡು ಮೂರು ವರ್ಷಗಳಾದರೂ ಬೇಕಾಗುತ್ತದೆ,’ ಗುರುಗಳು ಉತ್ತರಿಸಿದರು.
‘ಯಾವುದೇ ಗ್ರಂಥದ ಸಾರವನ್ನು ಒಂದೆರಡು ಪುಟಗಳಲ್ಲಿ ಬರೆಯಬಹುದು. ಅದನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಹೊತ್ತು ಸಾಕು. ಹಾಗಿಲ್ಲದ ಗ್ರಂಥದ ಹಿಂದೆ ವರ್ಷಾನುಗಟ್ಟಲೆ ಕಳೆಯುವುದು ವ್ಯರ್ಥವಲ್ಲವೆ?’ ವೈದ್ಯರ ಕೈಗಳು ನಮ್ರತೆಯಿಂದ ಮುಗಿದಿದ್ದರೂ ಮಾತಿನಲ್ಲಿ ವ್ಯಂಗ್ಯವಿತ್ತು. ನನಗೋ ಕೋಪ ನೆತ್ತಿಗರಿತು. ಆದರೆ ಗುರುಗಳು ಮುನಿಯಲಿಲ್ಲ. ಸೌಮ್ಯವಾಗಿಯೇ ಉತ್ತರಿಸಿದರು.
‘ನೀವು ವೈದ್ಯರಲ್ಲವೆ?’ ಗುರುಗಳು ಕೇಳಿದರು.
‘ಹೌದು,’ ಹೆಮ್ಮೆಯಿಂದ ವೈದ್ಯರು ಹೇಳಿದರು.
‘ವೈದ್ಯ ಕಲಿಯಲು ಎಷ್ಟು ವರ್ಷ ಬೇಕಾಯಿತು?’
‘ಐದು ವರ್ಷ ಎಮ್.ಬಿ.ಬಿ.ಎಸ್. ಅದಾದಮಲೆ ಹೌಸ್ ಸರ್ಜನ್, ಎಮ್.ಡಿ., ಎಲ್ಲಾ ಸೇರಿ ಹತ್ತು ವರ್ಷವಾಯಿತು,’ ವೈದ್ಯರ ಹೆಮ್ಮೆ ಬಿಗುಮಾನಕ್ಕೆ ತಿರುಗಿತ್ತು.
‘ಹತ್ತು ವರ್ಷಗಳೆ?’ ಗುರುಗಳು ಆಶ್ಚರ್ಯದಿಂದ ಕೇಳಿದರು.
‘ಹೂಂ… ಹೌದು.’
‘ಒಂದೆರಡು ದಿನಗಳಲ್ಲಿ ಕಲಿಯಲಾಗದ ವಿಷಯದ ಹಿಂದೆ ಹತ್ತು ವರ್ಷ ವ್ಯರ್ಥ ಮಾಡಿದಿರೆ?’ ಗುರುಗಳು ನಸುನಕ್ಕರು.
‘ಅದು…’ ವೈದ್ಯರ ಬಾಯಿಗೆ ಬೀಗ ಬಿದ್ದಿತ್ತು.
ಗುರುಗಳು ನಕ್ಕರು. ‘ಅಲ್ಲ ವೈದ್ಯರೆ, ಒಬ್ಬ ಮನುಷ್ಯನನ್ನು ಒಂದೆರಡು ದಿನ ಕಾಡುವ ಕಾಯಿಲೆಯನ್ನು ಗುಣಪಡಿಸುವ ವಿದ್ಯೆ ಕಲಿಯಲು ಹತ್ತು ವರ್ಷಗಳಾಯಿತು. ಹಾಗಿರುವಾಗ ನಿಮ್ಮ ಇಡೀ ಜೀವನವನ್ನೇ ಉದ್ಧರಿಸುವ ವಿದ್ಯೆ ಕಲಿಯಲು ಒಂದೆರಡು ವರ್ಷಗಳಾದರೂ ಬೇಡವೆ?’.
ವೈದ್ಯರು ಗುರುಗಳ ಕಾಲಿಗೆ ಬಿದ್ದರು. ಅಂದಿನಿಂದಲೇ ಭಗವದ್ಗೀತೆಯ ಅಧ್ಯಯನವನ್ನು ಕ್ರಮವಾಗಿ ಪ್ರಾರಂಭಿಸಿದರು.
ಸ್ವಲ್ಪ ಯೋಚಿಸಿ. ಇದು ನಿಜವಲ್ಲವೆ? ಅರ್ಥವಿಲ್ಲದ ಟಿ.ವಿ. ಕಾರ್ಯಕ್ರಮಗಳು, ಸಿನೆಮಾಗಳು, ಸೋಶಿಯಲ್ ಮೀಡಿಯಾಗಳ ಮೇಲೆ ಘಂಟೆಗಟ್ಟಲೆ ಕಾಲಹರಣ ಮಾಡುತ್ತೇವೆ. ಆದರೆ ದಿನಕ್ಕೆ ಅರ್ಧಘಂಟೆ ಭಗವದ್ಗೀತೆಯನ್ನು ಓದೆಂದರೆ ಹತ್ತಾರು ಪ್ರಶ್ನೆಗಳನ್ನು ತೆಗೆಯುತ್ತೇವೆ, ವಾದಕ್ಕೆ ನಿಲ್ಲುತ್ತೇವೆ. ಇದು ವಿಪರ್ಯಾಸವಲ್ಲವೆ? ಅಷ್ಟಕ್ಕೂ, ಸ್ವಾಮಿ ವಿವೇಕಾನಂದ, ಮಹಾತ್ಮಾ ಗಾಂಧಿ, ಜವಾಹರಲಾಲ್ ನೆಹರೂ, ಡಿ.ವಿ.ಜಿ., ಕುವೆಂಪು, ಆಲ್ಬರ್ಟ್ ಐನ್‍ಸ್ಟೈನ್, ರಾಬರ್ಟ್ ಆಪನ್‍ಹೀಮರ್, ಟಿ.ಎಸ್.ಇಲಿಯಟ್, ಹೆನ್ರಿ ಡೇವಿಡ್ ಥೋರೋ ಮುಂತಾದವರು ಭಗವದ್ಗೀತೆಯಿಂದ ಪ್ರೇರಿತರಾಗಿದ್ದಾರೆ. ಇವರೆಲ್ಲರೂ ಸಾಧು–ಸನ್ಯಾಸಿಗಳಲ್ಲ. ಈ ಪಟ್ಟಿಯಲ್ಲಿ ಲೋಕನಾಯಕರಿದ್ದಾರೆ, ವಿಜ್ಞಾನಿಗಳಿದ್ದಾರೆ, ಕವಿಗಳಿದ್ದಾರೆ, ಬುದ್ಧಿಜೀವಿಗಳಿದ್ದಾರೆ, ಸಮಾಜ ಶಾಸ್ತ್ರಜ್ಞರೂ ಇದ್ದಾರೆ. ಇವರೆಲ್ಲರೂ ಗೀತೆಯನ್ನು ಕೊಂಡಾಡಿರುವುದಕ್ಕೆ ಕಾರಣವಿರಬೇಕಲ್ಲವೆ?
ಈ ಪ್ರಶ್ನೆಗೆ ಉತ್ತರ ಡಿ.ವಿ.ಜಿ.ಯವರ ಭಗವದ್ಗೀತೆಯ ವ್ಯಾಖ್ಯೆಯ ಶೀರ್ಷಿಕೆಯಲ್ಲಿದೆ: ಜೀವನಧರ್ಮಯೋಗ. ಭಗವದ್ಗೀತೆ ನಿಜಕ್ಕೂ ಜೀವನಧರ್ಮಯೋಗ. ಜೀವನವನ್ನು ಧರ್ಮಬದ್ಧ ರೀತಿಯಲ್ಲಿ ಹೇಗೆ ನಡೆಸಬೇಕೆಂದು ಭಗವದ್ಗೀತೆ ಬೋಧಿಸುತ್ತದೆ. ದಿನನಿತ್ಯದ ಪ್ರಶ್ನೆಗಳಿಂದ ಪಾರಮಾರ್ಥಿಕ ವಿಷಯಗಳವರೆಗೆ, ಎಲ್ಲಕ್ಕೂ ಭಗವದ್ಗೀತೆಯಲ್ಲಿ ಉತ್ತರವಿದೆ.
ಕರ್ತವ್ಯ ನಿರ್ವಹಣೆ ಹೇಗೆ ಮಾಡಬೇಕೆಂಬ ಪ್ರಶ್ನೆಯೆ? ಅದಕ್ಕೆ ಉತ್ತರ ೩.೧೯ ಶ್ಲೋಕದಲ್ಲಿದೆ: ತಸ್ಮಾದಸಕ್ತಃ ಸತತಂ ಕಾರ್ಯಂ ಕರ್ಮ ಸಮಾಚರ. ಇದರ ಅರ್ಥ, ವ್ಯಾಮೋಹವಿಲ್ಲದೆ ನಿನ್ನ ಕೆಲಸವನ್ನು ನಿರ್ವಹಿಸು ಎಂದು. ಸಮಾಚರ ಎಂದರೆ “ನಿರ್ವಹಿಸು” ಎಂದರ್ಥ ಮಾತ್ರವಲ್ಲ. ಕುಶಲತೆಯಿಂದ, ನಿನ್ನ ಸಂಪೂರ್ಣ ಸಾಮರ್ಥ್ಯವನ್ನು ಉಪಯೋಗಿಸಿ, ಶ್ರದ್ಧೆಯಿಂದ ನಿನ್ನ ಕೆಲಸವನ್ನು ಮಾಡು ಎಂದರ್ಥ. ಯಾವ ಕೆಲಸ? ನಾವು ಯಾವುದೇ ಕೆಲಸವನ್ನು ಮಾಡಬೇಕಾದರೂ, ಈ ನಿಯಮವನ್ನು ಪಾಲಿಸಬೇಕು. ಅಡುಗೆ ಮಾಡುವುದು, ಬಟ್ಟೆಗಳನ್ನು ಇಸ್ತ್ರಿ ಮಾಡುವುದು, ವಾಹನವನ್ನು ಚಲಾಯಿಸುವುದು, ಇಂತಹ ದಿನನಿತ್ಯದ ಕೆಲಸವಿರಲಿ, ಅಥವಾ ಉದ್ಯೋಗ, ವ್ಯಾಪಾರದ ಕೆಲಸವಿರಲಿ, ಇಲ್ಲವೇ ದೇವರ ಪೂಜಾರಾಧನೆ, ಹಿರಿಯರ ಸೇವೆ, ಯಾವುದೇ ಇರಲಿ, ಶ್ರದ್ಧೆಯಿಂದ, ಸಾಮರ್ಥ್ಯದಿಂದ ನಿರ್ವಹಿಸಬೇಕು.
ನಮ್ಮ ನಡವಳಿಕೆ ಯಾವ ರೀತಿಯಾಗಿರಬೇಕು? ಇದೇ ಪ್ರಶ್ನೆಯನ್ನು ಅರ್ಜುನ ಭಗವದ್ಗೀತೆಯ ೨.೫೪ ನೆಯ ಶ್ಲೋಕದಲ್ಲಿ ಕೇಳುತ್ತಾನೆ. ಇದಕ್ಕೆ ಉತ್ತರ ೨.೫೫ – ೨.೭೨ ಶ್ಲೋಕಗಳಲ್ಲಿ ಶ್ರೀಕೃಷ್ಣ ಕೊಡುತ್ತಾನೆ.
ದುಃಖಕ್ಕೆ ಕಾರಣವೇನು? ಇದರ ಉತ್ತರ ಭಗವದ್ಗೀತೆಯ ಅನೇಕ ಶ್ಲೋಕಗಳಲ್ಲಿವೆ. ವಿಷಯಾಸಕ್ತಿಯಿಂದ ದುಃಖವುಂಟಾಗುತ್ತದೆಯೆಂದು ೨.೬೨ – ೨.೬೩ ಶ್ಲೋಕಗಳಲ್ಲಿ ಶ್ರೀಕೃಷ್ಣ ಹೇಳುತ್ತಾನೆ. ವಿಷಯಾಸಕ್ತಿ, ವ್ಯಾಮೋಹಗಳಿಂದ ಮನುಷ್ಯನ ಪತನ ಹೇಗಾಗುತ್ತದೆಂದು ಭಗವಂತ ಸ್ಪಷ್ಟವಾದ ಮಾತುಗಳಲ್ಲಿ ವಿವರಿಸಿದ್ದಾನೆ.
ಮನುಷ್ಯಜೀವನದ ಉದ್ದೇಶವೇನು? ಪರಮಾತ್ಮ ತತ್ತ್ವವನ್ನು ಗೋಚರಿಸಿಕೊಳ್ಳುವುದೇ ಮಾನವ ಜನ್ಮದ ಉದ್ದೇಶ. ಗೀತೆಯ ಸಾರವನ್ನು ಒಂದು ಪಂಕ್ತಿಯಲ್ಲಿ ಹೇಳಬೇಕೆಂದರೆ, ಇದನ್ನು ಹೇಳಬಹುದು. ಆದರೆ ಆ ಪರಮಾತ್ಮ ತತ್ತ್ವವನ್ನು ಗೋಚರಿಸಿಕೊಳ್ಳುವುದು ಹೇಗೆ? ಇದಕ್ಕೆ ಮೂರು ಹಾದಿಗಳನ್ನು ಭಗವಂತ ತಿಳಿಸುತ್ತಾನೆ: ಕರ್ಮಯೋಗ, ಭಕ್ತಿಯೋಗ, ಜ್ಞಾನಯೋಗ. ಸ್ಥೂಲವಾಗಿ, ಮೊದಲ ಆರು ಅಧ್ಯಾಯಗಳಲ್ಲಿ ಕರ್ಮಯೋಗದ ವಿವರಣೆಯಿದೆ, ಮುಂದಿನ ಆರು ಅಧ್ಯಾಯಗಳಲ್ಲಿ ಭಕ್ತಿಯೋಗದ ವಿವರಣೆಯಿದೆ, ಕೊನೆಯ ಆರು ಅಧ್ಯಾಯಗಳಲ್ಲಿ ಜ್ಞಾನಯೋಗದ ವಿವರಣೆಯಿದೆ. ಹಾದಿ ಬೇರೆಬೇರೆಯಾದರೂ, ಗುರಿ ಒಂದೇ. ಯಾವ ಹಾದಿ ಯಾರಿಗೆ ಸೂಕ್ತ (ಗೃಹಸ್ಥ, ಸನ್ಯಾಸಿ ಇತ್ಯಾದಿ), ಈ ಹಾದಿಯಲ್ಲಿ ನಾವು ನಡೆಯದಿರುವಂತೆ ನಮ್ಮಲ್ಲೇ ಇರುವ ಅಡಚಣೆಗಳೇನು (ತಮ ಅಥವಾ ಅಜ್ಞಾನ), ಈ ಅಡಚಣೆಗಳನ್ನು ದಾಟುವ ವಿಧಾನವೇನು, ಇವೆಲ್ಲವೂ ಭಗವದ್ಗೀತೆಯಲ್ಲಿವೆ.
ಮನುಷ್ಯನಾದವನು ತನ್ನಲ್ಲಿ ಯಾವ ಯಾವ ಗುಣಗಳನ್ನು ಬೆಳೆಸಿಕೊಳ್ಳಬೇಕು? ೧೩.೭ – ೧೩.೧೧ ಶ್ಲೋಕಗಳಲ್ಲಿ ಭಗವಂತ ೨೦ ಗುಣಗಳನ್ನು ಉಲ್ಲೇಖಿಸಿದ್ದಾನೆ. ಇದರಲ್ಲಿ ಮೂರನೆಯ ಗುಣವಾದ ಅಹಿಂಸೆಯನ್ನು ಮಹಾತ್ಮಾ ಗಾಂಧಿ ಪಾಲಿಸಿದರಾದರೆ, ಹದಿನಾರನೆಯ ಗುಣವಾದ ಭಗವಂತನಲ್ಲಿ ಅಚಲ ಏಕಾಗ್ರ ಭಕ್ತಿಯನ್ನು ಮೀರಾಬಾಯಿಯಂತಹ ಮಹಾನ್ ಸಂತರು ಅನುಸರಿಸಿದರು. ಆದಿ ಶಂಕರಾಚಾರ್ಯರ ಶಿಷ್ಯರಾದ ತೋಟಕಾಚಾರ್ಯರಂತಹ ಮಹನೀಯರು ಆರನೆಯ ಗುಣವಾದ ಗುರುಸೇವೆಯನ್ನೇ ತಮ್ಮ ಧ್ಯೇಯವನ್ನಾಗಿಸಿಕೊಂಡರು.
ಇದರ ಸಂಬಂಧವಾದ ವಿಷಯವನ್ನು ಕುರಿತು ಭಗವಂತ ೧೬.೧ – ೧೬.೩ ಶ್ಲೋಕಗಳಲ್ಲಿ ದೈವೀ ಗುಣಗಳಾವುವೆಂದು ವಿವರಿಸುತ್ತಾನೆ. ಈ ಗುಣಗಳ ಪಟ್ಟಿ ಹಿಂದಿನ ಪಟ್ಟಿಗಿಂತಲೂ ವಿಸ್ತಾರವಾಗಿದೆ. ೧೬.೪ನೆಯ ಶ್ಲೋಕದಲ್ಲಿ ಆಸುರೀ ಗುಣಗಳು ಯಾವುವೆಂದೂ ವಿವರಿಸುತ್ತಾನೆ. ಈ ಗುಣಗಳಿಂದ ನಾವು ದೂರವಿರಬೇಕು, ಈ ಗುಣಗಳನ್ನು ತ್ಯಜಿಸಬೇಕು.
ಈ ಮೇಲಿನ ವಿಷಯಗಳು ಗೃಹಸ್ಥರಾದ ನಮ್ಮ ನಿಮ್ಮಂತಹವರಿಗೆ ಅನ್ವಯಿಸುವ ವಿಷಯಗಳು. ಈ ಹಾದಿಯನ್ನು ಅನುಸರಿಸಿ, ಜೀವನದಲ್ಲಿ ಶಾಂತಿ, ನಿತ್ಯ ಆನಂದವನ್ನು ಸಂಪಾದಿಸಬಹುದು, ಪರಮಾತ್ಮತತ್ತ್ವವನ್ನು ಗೋಚರಿಸಿಕೊಳ್ಳಬಹುದು.
ಭಗವದ್ಗೀತೆಯ ವಿಷಯವನ್ನು ಕುರಿತು ಜನರಲ್ಲಿ ತಪ್ಪು ಕಲ್ಪನೆಯಿರುವುದು ಸಹಜ. ‘ಅಯ್ಯೋ ಬಿಡಿ ಸ್ವಾಮಿ. ಭಗವದ್ಗೀತೆ ಓದ್ಕೊಂಡು ಸನ್ಯಾಸಿ ಆಗಿಬಿಟ್ರೆ ಹೆಂಡ್ರು ಮಕ್ಳ ಗತಿ ಏನು!’ ಎನ್ನುವ ಪ್ರತಿಕ್ರಿಯೆ ಹೊಸತಲ್ಲ. ತಪ್ಪು ಕಲ್ಪನೆಯೆಂದರೆ ಭಗವದ್ಗೀತೆ, ಆಧ್ಯಾತ್ಮ, ಇವು ಸನ್ಯಾಸಿಗಳಿಗೆ, ವಿರಕ್ತರಿಗೆ ಮಾತ್ರ ಎನ್ನುವುದು. ಅರ್ಜುನ ಗೃಹಸ್ಥನಲ್ಲವೆ? ಗೀತೆಯನ್ನು ಅವನಿಗಲ್ಲವೆ ಭಗವಂತ ಬೋಧಿಸಿದ್ದು! ಅಲ್ಲದೆ, ಮೊದಲನೆಯ ಅಧ್ಯಾಯದಲ್ಲಿ ಅರ್ಜುನ ವಿಷಾದದಿಂದ, ‘ನಾನಿದೆಲ್ಲವನ್ನೊ ಬಿಟ್ಟು ವಿರಕ್ತನಾಗುತ್ತೇನೆ, ಭಿಕ್ಷಾಟಣೆ ಮಾಡುತ್ತೇನೆ,’ ಎಂದಾಗ ಭಗವಂತ ಅವನಿಗೆ ಹೇಳಿದ ಪಾಠ ಏನು? ಬಿಲ್ಲನ್ನು ಹಿಡಿದು ಯುದ್ಧವನ್ನು ಮಾಡು ಎನ್ನಲಿಲ್ಲವೆ? ಹಾಗಿರುವಾಗ ಭಗವದ್ಗೀತೆ ಗೃಹಸ್ಥರಿಗೂ, ಅಲ್ಲವೆ?
ಎಲ್ಲಿ ಭಗವದ್ಗೀತೆ ಕ್ಷಮೆ, ಅಹಿಂಸೆಯನ್ನು ಬೋಧಿಸುತ್ತದೆಯೋ, ಅಲ್ಲಿಯೇ, ಕರ್ತವ್ಯಪಾಲನೆ ಮಾಡಬೇಕು, ಅನ್ಯಾಯವನ್ನು ಸಹಿಸಬಾರದು, ಎಂದೂ ಸಾರಿದೆ. ಅನ್ಯರನ್ನು ಹಿಂಸಿಸುವುದು ಎಷ್ಟು ತಪ್ಪೋ, ಆತ್ಮರಕ್ಷಣೆಯೂ ಅಷ್ಟೇ ಮುಖ್ಯ.
ಭಗವದ್ಗೀತೆಯ ಅಧ್ಯಯನ ಮಾಡಬೇಕು, ಇದೇನೋ ಅರ್ಥವಾಯಿತು. ಅದರೆ, ಈ ರೀತಿಯಾದ ತಪ್ಪು ಕಲ್ಪನೆಗಳಿಂದ ಹೇಗೆ ಪಾರಾಗುವುದು? ಗೀತೆಯ ಸರಿಯಾದ ಅರ್ಥ ಹೇಗೆ ತಿಳಿವುದು? ಅಧ್ಯಯನದ ಕ್ರಮ ಯಾವುದು?
ಭಗವದ್ಗೀತೆ ಸಾಧಾರಣ ಗ್ರಂಥವಲ್ಲ. ಗೀತೆಯ ಶ್ಲೋಕಗಳಿಗೆ ಶಬ್ದಾರ್ಥವುಂಟು, ಭಾವಾರ್ಥವುಂಟು, ಗೂಢಾರ್ಥವೂ ಉಂಟು. ಇವುಗಳ ಅರ್ಥ ಗೀತಾಸಾರವನ್ನು ಅನುಭವಿಸಿದ ಗುರುವಿನ ಮಾರ್ಗದರ್ಶನದಲ್ಲಿ, ಸತತ ಸ್ವಾಧ್ಯಾಯದಿಂದ, ಚಿಂತನೆಯಿಂದ ಸಾಧ್ಯ. ಗೀತೆಯ ಅಧ್ಯಯನದಲ್ಲಿ ಮೂರು ಅಂಶಗಳಿವೆ. ಇವಕ್ಕೆ ಶ್ರವಣ – ಮನನ – ನಿದಿಧ್ಯಾಸನ ಎನ್ನುತ್ತಾರೆ.
ಶ್ರವಣ ಎಂದರೆ, ಕೇಳುವುದು, ಅಧ್ಯಯನ ಮಾಡುವುದು. ಯೋಗ್ಯ ಗುರುವಿನಿಂದ ಗೀತೆಯ ಶ್ಲೋಕಗಳ ಅರ್ಥವನ್ನು ಕೇಳುವುದು, ತಮ್ಮದೇ ಸಮಯದಲ್ಲಿ ಗೀತೆಯ, ಗೀತೆಯ ವ್ಯಾಖ್ಯೆ–ಭಾಷ್ಯೆಗಳ ಅಧ್ಯಯನ, ಧರ್ಮಗ್ರಂಥಗಳ, ಪುರಾಣಗಳ, ಮಹಾತ್ಮರ ಜೀವನ ಚರಿತ್ರೆ ಇವುಗಳನ್ನು ಓದುವುದು, ಇವೆಲ್ಲವೂ ಶ್ರವಣ ಎನಿಸಿಕೊಳ್ಳುತ್ತವೆ.
ಮನನ ಎಂದರೆ, ಯಾವುದರ ಶ್ರವಣ (ಕೇಳುವುದು, ಓದುವುದು) ವಾಗಿದೆಯೋ, ಅದರ ಬಗ್ಗೆ ಮನಸ್ಸಿನಲ್ಲಿ ಚಿಂತಿಸುವುದು. ಇತರ ಸಹೃದಯರೊಡನೆ, ಕುಟುಂಬದವರೊಡನೆ ಚರ್ಚಿಸುವುದು.
ನಿದಿಧ್ಯಾಸನವೆಂದರೆ, ಕಲಿತ ಪಾಠವನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವುದು. ಇದು ಮುಖ್ಯ – ಹೇಳಿಕೊಟ್ಟ ಬುದ್ಧಿ ಕಟ್ಟಿಕೊಟ್ಟ ಬುತ್ತಿ ಎಲ್ಲಿಯವರೆಗೆ ಎನ್ನುವಂತೆ ಬರೀ ಓದಿ ಬಿಟ್ಟರೆ ಪ್ರಯೋಜನವಿಲ್ಲ. ಅದನ್ನು ನಿತ್ಯ ಜೀವನದಲ್ಲಿ ಪಾಲಿಸಬೇಕು.
ಈ ಕ್ರಮದಲ್ಲಿ, ಶ್ರವಣದಲ್ಲಿ ೧ ಘಂಟೆಯಾದರೆ, ೩ ಘಂಟೆ ಮನನ ಮಾಡಬೇಕು, ೯ ಘಂಟೆ ನಿದಿಧ್ಯಾಸನ ಮಾಡಬೇಕು. ಈ ಕ್ರಮವನ್ನು ಅನುಸರಿಸಿ, ಗೀತೆಯ ಕಲಿಕೆಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಶಾಂತಿ, ನೆಮ್ಮದಿ, ಆನಂದಗಳು ಖಂಡಿತ. ಜೀವನದ ಏರಿಳಿತಗಳು, ಸುಖ ದುಃಖಗಳಿಂದ ಮುಕ್ತಿಯೇ ಮೋಕ್ಷವಲ್ಲವೆ? ಅದಕ್ಕೆ ಹಾದಿ ಭಗವದ್ಗೀತೆ. ಇದಾದರೆ ಪರಮಾತ್ಮನನ್ನು ಕಂಡಂತಲ್ಲವೆ? ಭಗವದ್ಗೀತೆಯನ್ನು ಒಮ್ಮೆ ಓದುವ ಗ್ರಂಥವೆಂದು ಪರಿಗಣಿಸದೆ ದಿನನಿತ್ಯದ ಸಂಗಾತಿಯಾಗಿಸಿಕೊಂಡರೆ ಸತ್–ಚಿತ್–ಆನಂದವನ್ನು ಅನುಭವಿಸುವುದು ಅಸಾಧ್ಯವೆ?
॥ ಹರಿ ಓಂ ತತ್ ಸತ್ ಹರಿ ಓಂ ತತ್ ಸತ್ ಹರಿ ಓಂ ತತ್ ಸತ್ ॥
ಈ ಸಣ್ಣ ಲೇಖನ ನನ್ನ ಭಗವದ್ಗೀತೆಯ ಗುರುಗಳಾದ ಶ್ರೀಮತಿ ಟೀನಾ ಧವಳ ದಾಸ್ ಅವರ ಚರಣಕಮಲಗಳಿಗೆ ಅರ್ಪಣ.
ಗ್ರಂಥಋಣ:
- ದಿ ಭಗವದ್ಗೀತಾ (ಪಾಕೆಟ್), ಗೀತಾ ಪ್ರೆಸ್, ಗೋರಖಪುರ
- ಸಾಧಕ ಸಂಜೀವನಿ, ಸ್ವಾಮಿ ರಾಮಸುಖದಾಸ
- ಶ್ರೀಮದ್–ಭಗವದ್ಗೀತಾ ಫಾರ್ ಆಲ್, ಶ್ರೀ ಡಿ.ಎಮ್.ಸಿನ್ಹಾ
- ಆನಂದ ಯಾತ್ರಾ – ೧, ಶ್ರೀ ಧರ್ಮೇಂದ್ರ ಮೋಹನ ಸಿನ್ಹಾ
- ಕನ್ನಡ ಗಾದೆಗಳ ಕೋಶ, ಟಿ.ವಿ.ವೆಂಕಟರಮಣಯ್ಯ
(Image credit: www.exoticindiaart.com)
Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.